ಪ್ರಸ್ತುತ ತಾಲ್ಲೂಕು ಕೇಂದ್ರವಾಗಿರುವ ’ನಾಗಮಂಗಲದ’ ಈ ಹಂತವನ್ನು ತಲುಪುವಲ್ಲಿ ಸವೆಸಿದ ಪಥ ಅನನ್ಯವಾದುದು. ಕ್ರಿ.ಶ.೧೦ನೆಯ ಶತಮಾನದಲ್ಲಿ ಸಾಧಾರಣ ಗ್ರಾಮವಾಗಿ ಇದು ಇದ್ದಿರಬಹುದಾದರೂ ಅದಕ್ಕೆ ಸಾಕ್ಷಿಪುರಾವೆಗಳಿಲ್ಲ. ಅದರೆ ಕ್ರಿ.ಶ. ೧೨ನೆಯ ಪೂರ್ವಾರ್ಧ ವೇಳೆಗಾಗಲೇ ಇದೊಂದು ಅಗ್ರಹಾರವಾಗಿ ರೂಪುಗೊಂಡಿದ್ದಕ್ಕೆ ನಾಗಮಂಗಲದಲ್ಲೇ ದೊರೆತಿರುವ ಕ್ರಿ.ಶ.೧೧೩೪ ರ ಶಾಸನ ಅಧಿಕೃತ ದಾಖಲೆಯಾಗಿದೆ. ಅಲ್ಲಿಂದೀಚಿಗೆ ಕ್ರಿ.ಶ.೧೬ನೆಯ ಶತಮಾನದವರೆಗೂ ಅದೊಂದು ಅಗ್ರಹಾರವಾಗಿ ನಿರಾಂತಕವಾಗಿ ಮುಂದುವರೆದುಕೊಂಡು ಬಂದದ್ದಕ್ಕೂ ಶಾಸನಾಧಾರಗಳಿವೆ. ಹೀಗೆ ಹೊಯ್ಸಳರ ಆಳ್ವಿಕೆಯಲ್ಲಿ ಅಗ್ರಹಾರವಾಗಿ ತಲೆ ಎತ್ತಿ ವಿಜಯನಗರ ಕಾಲದಲ್ಲಿ ರಾಜ್ಯದ ಕೇಂದ್ರವಾಗಿ ರೂಪುಗೊಂಡು ನಾಗಮಂಗಲದ ರಾಜ್ಯ ಎಂದೇ ಖ್ಯಾತಿ ಹೊಂದಿದ್ದನ್ನು ಸುಮಾರು ಕ್ರಿ.ಶ.೧೬-೧೭ನೆಯ ಶತಮಾನದ ಶಾಸನಗಳು ದೃಢಪಡಿಸುತ್ತವೆ. ಏತನ್ಮಧ್ಯೆ ಕ್ರಿ.ಶ.೧೫ನೆಯ ಶತಮಾನದಲ್ಲಿ ನಾಗಮಂಗಲದ ಪ್ರಭುಗಳು ಪ್ರಾಮುಖ್ಯ ವಹಿಸಿದ್ದು, ಮೇಲುಕೋಟೆಯಲ್ಲಿ ಜೀರ್ಣೋದ್ಧಾರ ಕಾರ್ಯ ಕೈಗೊಳ್ಳುವ ಮೂಲಕ “ಯಾದವಗಿರಿ ಜೀರ್ಣೋದ್ಧಾರಕ” ಎಂಬ ಬಿರುದನ್ನು ಹೊಂದಿದ್ದ ಲೋಹಿತ ಕುಲದ ತಿಮ್ಮಣ್ಣ ದಂಡನಾಯಕ, ಮತ್ತವನ ಸೋದರ ದೇವರಾಜ ಒಡೆಯನು ಕಾವೇರಿ ನದಿಗೆ ಒಡ್ಡು ಕಟ್ಟುವ ಮೂಲಕ ಕಾಲುವೆಯನ್ನು ರಚಿಸಿ, ತಾಯಿ ಸೀತಾಂಬಿಕಾಳ ಹೆಸರಲ್ಲಿ ನಿರ್ಮಿಸಿದ ಸೀತಾಪುರ ಅಗ್ರಹಾರ ಹಾಗೂ ಹರವು ಗ್ರಾಮದಲ್ಲಿ ಶ್ರೀರಾಮದೇವಾಲಯ ಕಟ್ಟಿಸಿ, ನೀರಾವರಿ ಜಮೀನನ್ನು ದತ್ತಿ ಬಿಟ್ಟ ಅಂಶವು ಮಹತ್ವದ ಬೆಳವಣಿಗೆಯಾಗಿತ್ತು. ಇವರು ವಿಜಯನಗರದರಸರಿಗೆ ಮಹಾಪ್ರಧಾನರಾಗಿದ್ದುದನ್ನು ಶಾಸನಗಳು ದಾಖಲಿಸಿವೆ, ಅದರಲ್ಲೂ ದೇವರಾಜ ಒಡೆಯನು ಮಂಗಳೂರು ರಾಜ್ಯದ ರಾಜ್ಯಪಾಲನಿದ್ದನೆಂಬ ಅಂಶವನ್ನು ಇತಿಹಾಸದಲ್ಲಿ ಗುರುತಿಸಲಾಗುತ್ತಿದೆ.

ನಾಗಮಂಗಲದ ಪ್ರಭುಗಳಿಗೆ ಸೇರಿದ ಶಿಲಾಶಾಸನಗಳು ಮೇಲುಕೋಟೆ, ನೆಲಮನೆ ಮುಂತಾದೆಡೆ ದೊರೆತಿದ್ದು, ಅವರ ತಾಮ್ರಶಾಸನಗಳು ಶ್ರೀರಂಗಪಟ್ಟಣ, ಮೈಸೂರು ಮುಂತಾದೆಡೆ ಲಭಿಸಿವೆ. ಮುಂದೆ ನಾಗಮಂಗಲದ ಹೋಬಳಿ ಕೇಂದ್ರವಾಗಿ ಮಾರ್ಪಾಟ್ಟರೂ ಪ್ರಮುಖ ಪಟ್ಟಣವಾಗಿದ್ದ ಅಂಶ ಕ್ರಿ.ಶ.೧೭-೧೮ನೆಯ ಶತಮಾನಗಳಿಂದ ವೇದ್ಯವಾಗುತ್ತದೆ. ಟಿಪ್ಪು ಪತನಾನಂತರ ಬ್ರಿಟಿಷರಿಂದ ನೇಮಿಸಲ್ಪಟ್ಟ ಸರ‍್. ಫ್ರಾನಿಸ್ಸ್ ಬುಕಾನನ ಮದ್ರಾಸಿನಿಂದ ಮಲಬಾರಿನವರೆಗೆ ಕೈಗೊಂಡಿದ್ದ ಸರ್ವೇಕ್ಷಣ ಸಂದರ್ಭದಲ್ಲಿ ಕ್ರಿ.ಶ.೧೮೦೦ ರಲ್ಲಿ “ನಾಗಮಂಗಲ” ಒಂದು ಸಾಧಾರಣ ಗ್ರಾಮವಾಗಿ ಮಾರ್ಪಟ್ಟಿದ್ದು ಅಂಶ ವೇದ್ಯವಾಗುತ್ತದೆ. ಆನಂತರದ ಮೈಸೂರು ಅರಸರ ಆಳ್ವಿಕೆಗೊಳಪಟ್ಟ ಇದು ಕ್ರಿ.ಶ.೧೮೭೩ ರಲ್ಲಿ ತಾಲ್ಲೂಕು ಕೇಂದ್ರವಾಗಿ ರೂಪುಗೊಂಡರೂ ಹಾಸನ ಜಿಲ್ಲೆಯಲ್ಲಿ ಅಂತರ್ಗತವಾಗಿತ್ತು. ಮುಂದೆ ಕ್ರಿ.ಶ.೧೮೮೨ ರಲ್ಲಿ ಮೈಸೂರು ಜಿಲ್ಲೆಗೆ ವರ್ಗಾಯಿಸಲ್ಪಟ್ಟಿತು. ನಾಗಮಂಗಲ ಪಟ್ಟಣವು ಕ್ರಿ.ಶ.೧೯೧೮ ವೇಳೆಗೆ ಪುರಸಮಿತಿಯ ಆಡಳಿತಕ್ಕೊಳಪಟ್ಟಿತು. ಮುಂದೆ ಈ ತಾಲ್ಲೂಕು ಕ್ರಿ.ಶ.೧೯೩೯ ರಲ್ಲಿ ನೂತನವಾಗಿ ರೂಪಗೊಂಡ ಮಂಡ್ಯ ಜಿಲ್ಲೆಯ ಭಾಗವಾಗಿ ಮುಂದುವರಿದುಕೊಂಡು ಬಂದಿದೆ. ಹೀಗೆ ಚಾರಿತ್ರಿಕವಾಗಿ ಅನೇಕ ಏಳುಬೀಳುಗಳನ್ನು ಕಂಡಿರುವ “ನಾಗಮಂಗಲ” ಪಟ್ಟಣದ ಇತಿಹಾಸವನ್ನು ಈ ಮುಂದೆ ಸಮಗ್ರವಾಗಿ ಚರ್ಚಿಸಲು ಯತ್ನಿಸಲಾಗಿದೆ.

ಪುರಾಣ ಮತ್ತು ಐತಿಹ್ಯ :  “ನಾಗಮಂಗಲ” ಪಟ್ಟಣವು ಬಭ್ರುವಾಹನನ ರಾಜಧಾನಿ ಪಟ್ಟಣ “ಮಣಿಪುರ” ವಾಗಿತ್ತೆಂಬ ಐತಿಹ್ಯ ಜನಪದರಲ್ಲಿ ರೂಢಿಯಲ್ಲಿದ್ದು, ಮುಂದೆ ಅದೇ “ಫಣಿಪುರ” > ನಾಗಪುರ > ನಾಗಮಂಗಲ ಅಗಿದೆಯೆಂದು ಹೇಳುವ ಮೂಲಕ ನಾಗಮಂಗಲದ ಪ್ರಾಚೀನತೆಯನ್ನು ಮಹಾಭಾರತದಷ್ಟು ಹಿಂದಕ್ಕೆ ಗುರುತಿಸಲಾಗುತ್ತದೆ. ೧ ಮೇಲುಕೋಟೆಯ ಕ್ರಿ.ಶ.೧೫೩೫ ರ ಶಾಸನ ೨ ಮಣಿನಾಗಪುರವರಾಧೀಶ್ವರನು ಉದಯಗಿರಿಯ ಹರಿನೀಲ ಅಬ್ಬಿರಾಜಂಗಳ ಮಕ್ಕಳೂ ಅದ ತಿರುಮಲರಾಜರು ಮೇಲುಕೋಟೆಯ ಚೆಲಪಿಳೆಯಾನಿಗೆ, ನಾಗಮಂಗಲದಲ್ಲಿ ದಾನ ನೀಡಿದ್ದನ್ನು ದಾಖಲಿಸುತ್ತದೆ. ಈ ಶಾಸನದಲ್ಲಿ ಉಕ್ತವಾಗಿರುವ “ಮಣಿನಾಗಪುರವರಾಧೀಶ್ವರ” ಬಿರುದನ್ನು ವಿವೇಚಿಸಿ ನಾಗಮಂಗಲಕ್ಕೆ ಅನ್ವಯಿಸುವುದಾದರೆ, ತಿರುಮಲರಾಜನು ಅಚ್ಯುತರಾಯನ ಮಾಂಡಳಿಕನಾಗಿ ನಾಗಮಂಗಲ ರಾಜ್ಯವನ್ನು ಆಳುತ್ತಿದ್ದನೆಂದು ತರ್ಕಿಸಬೇಕೆಂದೆನಿಸುತ್ತದೆ. ಆದರೆ ಇದನ್ನು ಮತ್ತಷ್ಟು ಪರಿಶೀಲಿಸುವ ಅಗತ್ಯವಿದೆ. ಕುರುಗೋಡಿನ ಕ್ರಿ.ಶ.೧೫೦೬ರ ಶಾಸನದಲ್ಲೂ ಈ ಬಿರುದಿದ್ದು, ಮಣಿನಾಗಪುರವು ಬಾದಾಮಿ ತಾಲ್ಲೂಕಿನ ಮಣಿನಗರ ಗ್ರಾಮವೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದು, ಕ್ರಿ.ಶ.೧೬೩೮ರ ಬಸ್ತಿಹಳ್ಳಿ (ಬೇಲೂರ) ಶಾಸನ ಈ ಬಿರುದನ್ನು ಬೇಲೂರು ಕೃಷ್ಣಪ್ಪನಾಯಕನಿಗೆ ಇದ್ದ ಅಂಶವನ್ನು ತಿಳಿಸುತ್ತದೆ. ಆದರೂ ಈ ಪೌರಾಣಿಕ ಕಥೆಯಿಂದ ನಾಗಮಂಗಲ ಪರಿಸರವು ಬಹು ಹಿಂದಿನಿಂದಲೂ ನಾಗರಹಾವುಗಳಿಂದ ಕೂಡಿದ ದಟ್ಟಡವಿಯಾಗಿದ್ದು, ಅದರಿಂದಾಗಿ ನಾಗಾರಾಧನೆ ಪ್ರಧಾನ ಅಚರಣೆಯಾಗಿ ಜನಪದದಲ್ಲಿ ಒಡಮೂಡಿ, ’ನಾಗಮಂಡಲ’ ನೇಮವು ಕರಾವಳಿ ಭಾಗದಲ್ಲಿ ಇಂದಿಗೂ ರೂಢಿಯಲ್ಲಿರುವಂತೆ, ಹಿಂದೆ ಈ ಭಾಗದಲ್ಲೂ ಆಚರಣೆಯಲ್ಲಿದ್ದು, “ನಾಗಮಂಡಲ” ನೇಮಾಚರಣೆಯಿಂದಾಗಿ, ಅಚರಣೆಯಲ್ಲಿಯೇ ನಾಗಮಂಗಲದ “ಸೌಮ್ಯಕೇಶವ ದೇವಾಲಯ ನವರಂಗದ ಛತ್ತಿದಲ್ಲಿರುವ ೧೦೮ ಮಂಡಲಗಳಿರುವ ನಾಗಮಂಡಲದ ರಚನೆಗೆ ಸ್ಫೂರ್ತಿಯಾಗಿರುವಂತೆ ತೋರುತ್ತದೆ. ಇದನ್ನು ಯೋಗನರಸಿಂಹನ ದೇವಾಲಯದಲ್ಲಿ ಆದಿಶೇಷನ ಶಿಲ್ಪದ ಬಳಿಯಿರುವ ಪೊಟರೆ ಹಾಗು ಹಂಗರ ಮರದ ಕಾಂಡಗಳು ದೃಢಪಡಿಸುವ ಮೂಲಕ “ನಾಗಮಂಗಲ” ನಾಗಾರಾಧನಾ ಕೇಂದ್ರವಾಗಿ ಮಹತ್ವ ಪಡೆದಿದ್ದ ಅಂಶವನ್ನು ಸಾರುತ್ತದೆ.

ಇತಿಹಾಸ ಕಾಲ : ಇನ್ನು ಇತಿಹಾಸ ಕಾಲಕ್ಕೆ ಬಂದರೆ, ತಲಕಾಡಿನ ಗಂಗರ ಆಳ್ವಿಕೆಗೆ ದಕ್ಷಿಣ ಕರ್ನಾಟಕವು ಒಳಪಟ್ಟಿದ್ದು, ಅವರ ಸಾಮ್ರಾಜ್ಯವನ್ನು ಗಂಗವಾಡಿ ೯೬,೦೦೦ ಎಂದು ಕರೆಯಲಾಗಿದ್ದು, ಅದರ ಭಾಗವಾಗಿದ್ದ ಕಲ್ಕುಣಿನಾಡು -೩೦೦, ಬಡಗರೆನಾಡು-೩೦೦, ಕೆರೆಗೋಡು ವಿಷಯ ಮುಂತಾದ ನಾಡುಗಳು ಉಲ್ಲೇಖ ಮಂಡ್ಯ ಜಿಲ್ಲೆಯ ವಿವಿಧೆಡೆ ದೊರೆತಿರುವ ಗಂಗರ ಶಾಸನದಲ್ಲಿ ಕಂಡುಬರುತ್ತದೆ. ಇದರಿಂದ ಹಿಂದಿನ ಮಂಡ್ಯ ಜಿಲ್ಲಾ ಪ್ರದೇಶವು ಏಳು-ಎಂಟನೆಯ ಶತಮಾನಕ್ಕಾಗಲೇ ಗಂಗರ ಆಳ್ವಿಕೆಗೆ ಒಳಪಟ್ಟಿತ್ತೆಂದು ತರ್ಕಿಸಹುದಾಗಿದೆ. ಇದಕ್ಕೆ ಕಾರಬೈಲು, ಹಲ್ಲೇಗೆರೆ (ಮಂಡ್ಯ ತಾಲ್ಲೂಕು) ಯ ಶಾಸನಗಳನ್ನು ನಿದರ್ಶನವಾಗಿ ನೀಡಬಹುದಾಗಿದೆ. ನಾಗಮಂಗಲ ತಾಲ್ಲೂಕಿನ ದೇವರಹಳ್ಳಿಯಲ್ಲಿ ಲಭಿಸಿರುವ ಗಂಗರ ಶ್ರೀಪುರುಷನ ಆಳ್ವಿಕೆಗೆ ಸೇರಿದ ಕ್ರಿ.ಶ. ೨೨೬ರ ತಾಮ್ರಶಾಸನ, ಸಾಮಂತ ಪರಮಗೊಳ ಪೃಥ್ವಿನಿರ್ಗುಂದ ರಾಜನ ಮಡದಿಯಾದ ಸಗರಕುಲದ ಕುಂದಟ್ಟಿಯು ಶ್ರೀಪುರದಲ್ಲಿ ಲೋಕತಿಲಕ ಬಸದಿಯನ್ನು ನಿರ್ಮಿಸಿದಾಗ, ದೇವರ ಪೂಜಾವಿಧಿಗೆಂದು ಸಾಮಂತನ ಕೋರಿಕೆಯಂತೆ ಅರಸನು ನುರ್ಗುಂದ ವಿಷಯದಲ್ಲಿದ್ದ ಪೊನ್ನಳ್ಳಿ ಗ್ರಾಮವನ್ನು ದತ್ತಿ ಬಿಟ್ಟಿದ್ದನ್ನು ದಾಖಲಿಸುತ್ತದೆ. ಆದರೆ ಈ ಶಾಸನಕ್ಕೂ ನಾಗಮಂಗಲ ಪ್ರದೇಶಕ್ಕೂ ಏನೇನೂ ನೇರ ಸಂಬಂಧವಿಲ್ಲ. ಆದರೆ ನಾಗಮಂಗಲದ ಪಟ್ಟಣದ ನಿರೀಕ್ಷಣಾ ಮಂದಿರದ ಮುಂದೆ ಇದ್ದ ಗಂಗರ ವೀರಗಲ್ಲು ಶಾಸನದಿಂದ, ನಾಗಮಂಗಲದ ಪರಸರವನ್ನು ಗಂಗರಸರ ಕಾಲದಲ್ಲಿ ’ಇಡಗೂರು’ ಎಂದು ಕರೆಯಲಾಗುತ್ತಿತ್ತೆಂದು ತರ್ಕಿಸಲು ಅವಕಾಶವಿದೆ.

ಇಂದು ಶ್ರೀರಂಗಪಟ್ಟಣ-ಬೀದರ ರಾಜ್ಯ ಹೆದ್ದಾರಿಯಂಚಲ್ಲಿ ಸುರಕ್ಷಿತವಾಗಿ ನಿಂತಿರುವ ಈ ವೀರಗಲ್ಲು ಗಂಗದೊರೆ ಇಮ್ಮಡಿ ಮಾರಸಿಂಹನ ಆಳ್ವಿಕೆಯ ಮೊದಲನೆಯ ವರ್ಷ (ಕ್ರಿ.ಶ.೯೬೭) ಘಟಿಸಿದ ಘಟನೆಯೊಂದಕ್ಕೆ ಸಾಕ್ಷಿಭೂತವಾಗಿ ನಿಂತಿದೆ. ಇಮ್ಮಡಿ ಮಾರಸಿಂಹನಿ ಪಟ್ಟಕಟ್ಟಿದ ಮೊದಲನೆಯ ವರುಷದಲ್ಲಿ ’ಇಡಗೂರು ಗ್ರಾಮದ ಗೌಡನಾಗಿದ್ದ ಅಕ್ಕಯ್ಯನು ಆದಿಯಾಪಲ್ತಿಯ (ಹಾಲ್ತಿ?) ತುರುಗೊಳದಲ್ಲಿ ಹೋರಾಡುತ್ತಾ ಮಡಿದ ವಿಷಯವನ್ನು ಈ ಶಾಸನ ದಾಖಲಿಸಿದ್ದು ಶಾಸನದ ಪಾಠ ಇಂತಿದೆ.

“ಸ್ವಸ್ತಿ ಶ್ರೀ ಪೆರ್ಮನಡಿ ಮಾರಸಿಂಗದೇವರ ಪಟ್ಟ

ಙ್ಗಟ್ಟಿದ ಪ್ರಥಮ ವರಿಷದನ್ದು ಇಡುಗೊರ ಗವುಣ್ಡತ

ನದ ಅಕ್ಕಯ್ಯ ಅದ್ದಿಯಾಪಳ್ತಿಯೊಳ್ ತುರುಗೊಳಲ್ಸತ್ತಮ

ಙ್ಗಳಮಹ ಶ್ರೀ”

ಹೀಗೆ ತಲಕಾಡು ಗಂಗರ ಆಳ್ವಿಕೆಯ ಅಂತ್ಯಭಾಗದಲ್ಲಿ ಈ ಭಾಗದಲ್ಲಿ ಜರುಗಿದ ತುರುಗೊಳವೊಂದನ್ನು ದಾಖಲಿಸುವ ಮೂಲಕ, ಈ ಶಾಸನ ’ನಾಗಮಂಗಲ’ದ ಲಿಖಿತ ಇತಿಹಾಸದ ಮೊದಲ ಹೆಜ್ಜೆಯನ್ನು ನಮಗೆ ತೋರಿಸಿಕೊಡುತ್ತದೆ. ಅದಕ್ಕೂ ಮಿಗಿಲಾಗಿ, ಇಂದಿನ ’ನಾಗಮಂಗಲ’ವು ಈ ಶಾಸನ ಹೊರಡಿಸಿದ ಸಂದರ್ಭದಲ್ಲಿ ಇನ್ನೂ ಅಸ್ತಿತ್ವಕ್ಕೆ ಬಂದಿರಲಿಲ್ಲವೆಂಬ ಅಂಶವನ್ನೂ ಮನವರಿಕೆ ಮಾಡಿಕೊಡುತ್ತದೆ. ನಾಗಮಂಗಲದ ನಿರೀಕ್ಷಣಾ ಮಂದಿರದ ಹಿಂಭಾಗದ ಬಡಾವಣೆಯಲ್ಲಿ ಜಮೀನೊಂದರಲ್ಲಿರುವ ಪಾಳು ಮಂಟಪವು ಗಂಗರ ಕಾಲದ ವಾಸ್ತುಲಕ್ಷಣವನ್ನು ಹೊಂದಿದ್ದು, ಇನ್ನೊಂದು ದೇವಿಯ ಶಿಲ್ಪವಿರುವುದನ್ನು ಇತ್ತೀಚಿಗೆ ಗಮನಿಸಲಾಗಿದೆ. ಈ ಪಾಳುಗುಡಿಯಿರುವ ಪ್ರದೇಶವೇ ಗಂಗರ ಕಾಲದ ವೀರಗಲ್ಲು ಶಾಸನದಲ್ಲಿ ಉಕ್ತವಾಗಿರುವ ’ಇಡುಗೂರು’ ಇದ್ದ ಪ್ರದೇಶವೆಂದು ತರ್ಕಿಸಲು ಅವಕಾಶವಿದೆ.

ಗಂಗರನ್ನು ಸೋಲಿಸಿ, ಗಂಗವಾಡಿ ತೊಂಭತ್ತಾರು ಸಾವಿರವನ್ನು ವಶಪಡಿಸಿಕೊಂಡು ಸುಮಾರು ಒಂದು ಶತಮಾನ ಕಾಲ ಆಳಿದ ತಂಜಾವೂರಿನ ಜೋಳರ ಆಳ್ವಿಕೆಗೆ ಈ ಭಾಗವು ಒಳಪಟ್ಟಿದ್ದು, ತೊಣ್ಣೂರು, ದಡಗ, ಮುಂತಾದೆಡೆ ಚೋಳ ಶಾಸನಗಳು ದೊರೆತಿವೆ. ಮುಂದೆ ಹೊಯ್ಸಳ ವಿಷ್ಣುವರ್ಧನನು, ಚೋಳರನ್ನು, ಗಂಗವಾಡಿಯಿಂದ ಹೊರದಬ್ಬಿ, ತಲಕಾಡನ್ನು ವಶಪಡಿಸಿಕೊಂಡು ’ತಲಕಾಡುಗೊಂಡ’ ಮುಂತಾದ ಬಿರುದುಗಳನ್ನು ಧರಿಸಿ, ಹೊಯ್ಸಳರ ಆಳ್ವಿಕೆಯನ್ನು ವಿಸ್ತಿರಿಸಿದನಾದರೂ ಕಲ್ಯಾಣದ ಚಾಲುಕ್ಯರ ಪರಮಾಧಿಕಾರವನ್ನು ಒಪ್ಪಿದ್ದನ್ನು ಇವನ ಆಳ್ವಿಕೆಗೆ ಸೇರಿದ ನಾಗಮಂಗದ ಕ್ರಿ.ಶ. ೧೧೩೪ರ ಶಿಲಾಶಾಸನದಲಲ್ಲಿ ’ನಾಗಮಂಗಲ’ದ ಮೊದಲ ಉಲ್ಲೇಖ ದೊರೆಯುತ್ತದೆ. ನಾಗಮಂಗಲದ ಭುವನೇಶ್ವರ ದೇವಾಲಯದಲ್ಲಿರುವ ಈ ಶಾಸನ ಹೊಯ್ಸಳ ವಿಷ್ಣುವರ್ಧನನ ಪಟ್ಟದ ರಾಣಿ ಬಮ್ಮಲದೇವಿಯು ಕಲ್ಕುಣಿ ನಾಡಿನಲ್ಲಿದ್ದ ’ನಾಗಮಂಗಲ’ದಲ್ಲಿ ಶಂಕರನಾರಾಯಣ ದೇವಾಲಯವನ್ನು ಜೀರ್ಣೋದ್ಧಾರ ಮಾಡಿ ಅರಿಕನಕಟ್ಟ ಹಾಗೂ ಬಾಚಿಗಟ್ಟಗಳನ್ನು ಸರ್ವಮಾನ್ಯವಾಗಿ ಸೂರ್ಯಾಭರಣ ಪಂಡಿತರಿಗೆ ದತ್ತಿ ನೀಡಿದ್ದನ್ನು ದಾಖಲಿಸುತ್ತದೆ. ಈ ಶಾಸನದಿಂದ ಆ ವೇಳೆಗಾಗಲೇ ಅಸ್ತಿತ್ವದಲ್ಲಿದ್ದ ಇಡಗೂರು ಗ್ರಾಮದ ಒಂದು ಭಾಗದಲ್ಲಿ ರಾಣಿ ಬಮ್ಮಲದೇವಿಯು ನೂತನವಾಗಿ ರೂಪಿಸಲ್ಪಟ್ಟಿದ್ದ ’ನಾಗಮಂಗಲ’ ಅಗ್ರಹಾರದಲ್ಲಿ ತಾನೇ ನಿರ್ಮಿಸಿದ ಶಂಕರನಾರಾಯಣ ದೇವಾಲಯದ ಪೂಜಾವಿಧಿಗಳಿಗೆಂದು ಅರಿಕನಕಟ್ಟವನ್ನು ದತ್ತಿ ನೀಡಿದ ಅಂಶ ವೇದ್ಯವಾಗುತ್ತದೆ. ಅಂದರೆ ಕ್ರಿ.ಶ. ೧೧೩೪ರ ವೇಳೆಗಾಗಲೇ ’ನಾಗಮಂಗಲ’ವು ಇಡಗೂರು ಗ್ರಾಮದ ವ್ಯಾಪ್ತಿಯಲ್ಲಿ ಸ್ವತಂತ್ರ ಅಗ್ರಹಾರವಾಗಿ ಜನ್ಮತಾಳಿತ್ತೆಂದು ಇದರಿಂದ ತರ್ಕಿಸಬಹುದಾಗಿದೆ. ಈ ದೇವಾಲಯವನ್ನು ನಿರ್ಮಿಸಿದ ಬಮ್ಮಲದೇವಿಯು ಪಲ್ಲವ ಗೋವಿಂದರ ಹಾಗೂ ಚಾವುಂಡಬ್ಬೆಯರ ಕುವರಯಾಗಿದ್ದು, ಇವಳು ಈ ಭಾಗದ ಗಣ್ಯ ಕುಟುಂಬಕ್ಕೆ ಸೇರಿದವಳಾಗಿರಬಹುದೆಂದೂ ಊಹಿಸಬಹುದಾಗಿದೆ. ಮೇಲಿನ ಶಾಸನೋಕ್ತ ಅರಿಕನಕಟ್ಟ, ನಾಗಮಂಗಲಕ್ಕೆ ಸುಮಾರು ೧೨ ಕಿ.ಮೀ. ಪೂರ್ವಕ್ಕಿರುವ ಇರಕನಗಟ್ಟವೆ? ಪರಿಶೀಲಿಸುವ ಅಗತ್ಯವಿದೆ.

ಈ ಶಾಸನದ ಉತ್ತರಾರ್ಧ ಭಾಗವು ಹೊಯ್ಸಳ ವಿಷ್ಣುವರ್ಧನನ್ನು ವಿವಿಧ ವಿದ್ಯಾ ಪರೀಕ್ಷಾ ದೀಕ್ಷ. ಸಕಲ ಪುರಾಣ ಪೂಜಿತಾರ್ಥ ರತ್ನ ಕೋಶ, ಕವಿತ್ವ ತತ್ವ ನಿಶ್ಚಿತ ಬುದ್ದಿ, ತರ್ಕ ವಿದ್ಯಾವಿಶಾರದ, ಸಂಗೀತದಲ್ಲಿ ಭರತನೆಂದು ಮುಂತಾಗಿ ವಿಭಿನ್ನ ಶೈಲಿಯಲ್ಲಿ ವರ್ಣಿಸಿರುವುದು ಗಮನಾರ್ಹವಾಗಿದೆ. ಇದರಿಂದ ವಿಷ್ಣುವರ್ಧ‌ನನು ಸಕಲ ಕಲಾವಲ್ಲಭನಾಗಿದ್ದ ಅಂಶ ಗೊತ್ತಾಗುತ್ತದಾದರೂ, ಸ್ವಲ್ಪ ಉತ್ಪ್ರೇಕ್ಷೆಯಿಂದ ಕೂಡಿರುವಂತೆ ತೋರುತ್ತದೆ. ಅಲ್ಲದೆ, ಈ ಶಾಸನದ ಮೂಲಿಗ ಬಾಚಿಗೌಡನಿಗೆ ನಾಗಮಂಗಲದ ಹಿರಿಯ ಕೆರೆಯ ಕೆಳಗೆ ಎರಡು ಸಲಗೆ ಗದ್ದೆ ಹಾಗೂ ೧೦೦ ಕಮ್ಮ ಬೆದ್ದಲು ಹೊಲವನ್ನು ದತ್ತಿ ನೀಡಿದ್ದನ್ನು ದಾಖಲಿಸಿದೆ. ದೇವಾಲಯದ ಪೂಜಾವಿಧಿಗೆಂದು ದತ್ತಿಬಿಟ್ಟ ಉಂಬಳಿಯ ಗಡಿಯನ್ನು ನಿರ್ದೇಶಿಸುವ ಸಂದರ್ಭದಲ್ಲಿ ನಾಗಮಂಗಲ ಹಿರಿಯಕೆರೆ, ಹೊಸಹಳ್ಳಿಕೆರೆ, ಅದಕ್ಕೆ ಸೇರಿದ ನೀರು ಏತದ ಗದ್ದೆ, ಹುಲಗುಂಡಿ, ಎಮ್ಮೆಕೆರೆ, ಮತ್ತಿಯಕೆರೆ ಮುಂತಾದವು ಸಾಂದರ್ಭಿಕವಾಗಿ ಉಲ್ಲೇಖಿಸಲ್ಪಟ್ಟಿವೆ. ಏತ ನೀರಾವರಿ ಪದ್ಧತಿಯೂ ಬಳಕೆಯಲ್ಲಿದ್ದ ಅಂಶವನ್ನು ಇದು ಸೂಚಿಸುವುದರ ಜೊತೆಗೆ ನಾಗಮಂಗಲದ ಪಟ್ಟಣದ ಸುತ್ತ ಅದಾಗಲೇ ನಾಲ್ಕಾರು ಕೆರೆ-ಗುಂಡಿಗಳು ಇದ್ದ ಅಂಶವನ್ನು ಈ ಶಾಸನ ಬಿಂಬಿಸುತ್ತದೆ. ಇದು ಅಂದಿನ ದಿನಗಳಲ್ಲಿ ನಾಗಮಂಗಲವು ಗಳಿಸಿದ್ದ ಅರ್ಥಿಕ ಸಮೃದ್ಧಿಯನ್ನು, ನೀರಾವರಿ ಸೌಕರ್ಯವನ್ನು, ಕೃಷಿ, ಔನ್ನತಿಯನ್ನು ಸೂಚಿಸುತ್ತದೆ.

ಹೀಗೆ ಹೊಯ್ಸಳ ವಿಷ್ಣುವರ್ಧನನ ಆಳ್ವಿಕೆಯಲ್ಲಿ ’ನಾಗಮಂಗಲವು’ ಅಗ್ರಹಾರವಾಗಿ ಶೈವ-ವೈಷ್ಣವ ಪಂಥಿಯರ ಧಾರ್ಮಿಕ ಕೇಂದ್ರವಾಗಿ, ನಾಗಪೂಜೆಗೂ ಹೆಸರಾಗಿದ್ದು, ಕಲ್ಕುಣಿ ನಾಡಿನಲ್ಲಿ ಖ್ಯಾತಿ ಪಡೆಯಲು ಆರಂಭಿಸಿದ ಅಂಶ ಈ ಶಾಸನದಿಂದ ವೇದ್ಯವಾಗುತ್ತದೆ. ಆದರೂ ನಾಗಮಂಗಲಕ್ಕೆ ಯಾವುದೇ ವಿಶೇಷವಾಚಿಗೂ ಇನ್ನೂ ಸೇರ್ಪಡೆ ಆಗಿರಲಿಲ್ಲವೆಂಬ ಅಂಶ ನಾಗಮಂಗಲದ ಕ್ರಿ.ಶ.೧೧೩೪ರ ಶಾಸನವೂ ಸೇರಿದಂತೆ ನೆರೆಯ ಕಸಲಗೆರೆಯ ಕ್ರಿ.ಶ. ೧೧೪೨ರ ಶಿಲಾ ಶಾಸನದಿಂದ ವೇದ್ಯವಾಗುತ್ತದೆ. ಕಸಲಗೆರೆಯ ಶಾಸನದಲ್ಲಿ ದತ್ತಿಭಾಗದ ಗಡಿಯನ್ನು ನಿರ್ದೇಶಿಸುವಾಗ, ’ನಾಗವ(ಮ)ಂಗಲಕ್ಕೆ ನಡೆದ ದಾರಿ’ಯನ್ನು ಸಾಂದರ್ಭಿಕವಾಗಿ ಉಲ್ಲೇಖಿಸುವ ಮೂಲಕ ’ನಾಗಮಂಗಲ’ ಎಂದೇ ಈ ಊರ ಹೆಸರನ್ನು ದಾಖಲಿಸಿದೆ. ಈ ಎಲ್ಲಾ ಅಂಶಗಳು, ಅದಕ್ಕೆ ಮೊದಲಿನಿಂದಲೂ ’ನಾಗಮಂಗಲ’ ನಾಮಾಂಕಿತವೇ ಇದ್ದ ಅಂಶವನ್ನು ಖಚಿತಪಡಿಸುತ್ತದೆ. ’ಮಂಗಲ’ ಎನ್ನುವುದು ’ಅಗ್ರಹಾರ’ ಎಂಬ ಅರ್ಥದಲ್ಲೇ ಬಳಕೆಯಲ್ಲಿರುವ ಅಂಶ ತಮಿಳುನಾಡಿನ ಶಾಸನಗಳಿಂದ ಸ್ಪಷ್ಟವಾಗುತ್ತಿದ್ದು, ಇದನ್ನು ’ಚತುರ್ವೇದಿ ಮಂಗಲಮ್’ ಎಂಬ ವಿಶೇಷಣವು ಮತ್ತಷ್ಟು ಖಚಿತಪಡಿಸುತ್ತಿದ್ದು, ಆ ಹಿನ್ನೆಲೆಯಲ್ಲಿ ’ನಾಗಮಂಗಲ’ ೧೦ ನಾಮನಿಷ್ಪತ್ತಿಯನ್ನು ವಿವೇಚಿಸಬಹುದಾಗಿದೆ.

ಹೀಗೆ ಸುಮಾರು ೧೧ನೆಯ ಶತಮಾನದಲ್ಲಿ ಅಗ್ರಹಾರವಾಗಿ ಅಸ್ತಿತ್ವ್ ಪಡೆದು, ಕ್ರಿ.ಶ. ೧೧೩೪ರಲ್ಲಿ ನಿರ್ಮಾಣಗೊಂಡ ಶಂಕರನಾರಾಯಣ ದೇವಾಲಯದಿಂದಾಗಿ ಖ್ಯಾತಿ ಪಡೆದ ನಾಗಮಂಗಲದ ನಂತರದ ಬೆಳವಣಿಗೆಯನ್ನು ಗ್ರಹಿಸಲು ನಾಲ್ಕು ದಶಕಗಳ ನಂತರ ಕ್ರಿ.ಶ. ೧೧೭೩ರಲ್ಲಿ ಹೊರಡಿಸಲ್ಪಟ್ಟಿರುವ ಇಮ್ಮಡಿ ಬಲ್ಲಾಳನ ಆಳ್ವಿಕೆಗೆ ಸೇರಿದ ಶಾಸನವನ್ನು ಅವಲಂಬಿಸಬೇಕಾಗಿದೆ. ನಾಗಮಂಗಲದ ಹೃದಯ ಭಾಗದಲ್ಲಿರುವ ಸೌಮ್ಯಕೇಶವ ಗುಡಿಯ ಗರ್ಭಗುಡಿಯ ಒಳಗೋಡೆಯ ಮೇಲಿರುವ ಈ ಶಾಸನದಿಂದ ನಾಗಮಂಗಲಕ್ಕೆ “ಅನಾದಿ ಅಗ್ರಹಾರ ಶ್ರೀ ವೀರಬಲ್ಲಾಳ ಚತುರ್ವೇದಿ ಭಟ್ಟರತ್ನಾಕರ” ಎಂಬ ಅಭದಾನವಿದ್ದ ಅಂಶ ಗೊತ್ತಾಗುತ್ತದೆ.೧೧ ಅಲ್ಲದೆ ನಾಗಮಂಗಲದ ಚನ್ನಕೇಶವ ದೇವರಿಗೆ ಹಲತ್ತಿ ( ಹಾಲ್ತಿ) ಗ್ರಾಮವನ್ನು ದತ್ತಿ ಬಿಟ್ಟ ವಿವರ ಈ ಶಾಸನದಲ್ಲಿ ಪ್ರಧಾನವಾಗಿ ದಾಖಲಿಸಲ್ಪಟ್ಟಿದ್ದು, ದತ್ತಿ ಗ್ರಾಮದ ಗಡಿಯನ್ನು ನಿರ್ದೇಶಿಸುವ ಅತ್ಯಂತ ಸೂಕ್ಷ್ಮ ವಿವರಗಳನ್ನೊಳಗೊಂಡ ವರ್ಣನೆಯೂ ಅಷ್ಟೇ ಗಮನಾರ್ಹವಾಗಿದೆ. ಈ ಶಾಸನದಲ್ಲಿ ಕಂಡುಬರುವ ವಿಶೇಷಣಗಳನ್ನು ನೋಡಿದರೆ, ಅದಾಗಲೇ. “ನಾಗಮಂಗಲ”ವು  ಅಗ್ರಹಾರವಾಗಿದ್ದರೂ, ಅಗ್ರಹಾರವಾಗಿ ಜನಮನ್ನಣೆಯನ್ನು ಸಾಕಷ್ಟು ಗಳಿಸಿರಲಿಲ್ಲವೆಂದು ತೋರುತ್ತದೆ. ಆ ಕಾರಣ ಇಮ್ಮಡಿ ಬಲ್ಲಾಳನು ನಾಗಮಂಗಲವನ್ನು ಅನಾದಿ ಅಗ್ರಹಾರವೆಂದು ಕರೆಯುತ್ತಾ. ಅದಕ್ಕೆ ತನ್ನ ಹೆಸರಲ್ಲೇ “ಶ್ರೀ ವೀರಬಲ್ಲಾಳ ಚತುರ್ವೇದಿ ಭಟ್ಟ ರತ್ನಾಕರ” ಎಂಬ ಅಭಿದಾನದವನ್ನು ನೀಡುವ ಮೂಲಕ ’ನಾಗಮಂಗಲ’ದ ಅಗ್ರಹಾರ ಸ್ಥಾನಮಾನವನ್ನು ’ಚತುರ್ವೇದಿ ಭಟ್ಟ ರತ್ನಾಕರ’ ಎಂಬ ವಿಶೇಷಣದೊಂದಿಗೆ ಹೆಚ್ಚಿಸಲು ಮುಂದಾದಂತೆ ತೋರುತ್ತದೆ. ಶಾಸನೋಕ್ತ ಚನ್ನಕೇಶವ ದೇವಾಲಯವೇ ಇಂದಿನ ಸೌಮ್ಯಕೇಶವ ದೇವಾಲಯವಾಗಿದ್ದು, ಈ ದೇವಾಲಯಕ್ಕೆ ದೇವದಾನವಾಗಿ ಹಲತತಿ (ಹಾಲ್ತಿ) ಗ್ರಾಮವನ್ನು ಸರ್ವಮಾನ್ಯವಾಗಿ ನೀಡಿ, ಆ ಗ್ರಾಮದ ಗಡಿಯ ವಿವರವನ್ನು ಸಮಗ್ರವಾಗಿ ನೀಡಿರುವುದು ಗಮನಾರ್ಹವಾಗಿದ್ದು, ಇದರಿಂದ ನಾಗಮಂಗಲದಲ್ಲಿರುವ ಸೌಮ್ಯಕೇಶವ ದೇವಾಲಯವು ನಿರ್ಮಾಣಗೊಂಡ ಸಂದರ್ಭದಲ್ಲೇ ಈ ದತ್ತಿ ನೀಡಿರಬಹುದೆಂದು ತರ್ಕಿಸಬಹುದಾಗಿದೆ. ತ್ರಿಕೂಟಾಚಲವಾದ ಈ ದೇವಾಲಯವು ವಿದ್ಯಾಸ್ಥಾನವಾಗಿದ್ದು, ಚತುರ್ವೇದಗಳನ್ನು ಬಲ್ಲ, ಭಟ್ಟರತ್ನಾಕರದಿಂದ ಕೂಡಿದ ಚತುರ್ವೇದಿ ಮಂಗಲವಾಗಿ ಇಮ್ಮಡಿ ಬಲ್ಲಾಳನ ಆಳ್ವಿಕೆಯಲ್ಲಿ ನಾಗಮಂಗಲವು ಖ್ಯಾತಿ ಪಡೆಯಿತೆಂದು ಈ ಶಾಸನದಿಂದ ಗ್ರಹಿಸಬಹುದಾಗಿದೆ.

ಈ ಶಾಸನದಿಂದ ನಾಗಮಂಗಲದ ಪರಿಸರದಲ್ಲಿದ್ದ ಗ್ರಾಮಗಳು, ಕೆರೆಕಟ್ಟ, ಗುಡಿ- ಗುಂಡಾರಗಳ ಒಂದು ಪಟ್ಟಿಯನ್ನೇ ಸಿದ್ಧಪಡಿಸಬಹುದಾಗಿದೆ. ಈ ಶಾಸನದಲ್ಲಿ ಹೊನ್ನಗೊಂಡನಹಳ್ಳಿ, ಅರಸೆಟ್ಟಿಯಹಳ್ಳಿ, ಮೊದಲ (ಮೂಡಲ?) ಹಳ್ಳಿ, ತುಪ್ಪದಂಡು, ಹೂವಿನಹಳ್ಳಿ, ಅಜ್ಜೈಯನಹಳ್ಳಿ, ಚಣವಿನಹಳ್ಳಿ, ಹಾಗೂ ಹೊಸಹಳ್ಳಿ ಗ್ರಾಮಗಳು ಗಡಿಯಾಗಿ ಉಲ್ಲೇಖಿತಗೊಂಡಿದ್ದರೆ, ಹೊನ್ನಗೊಂಡನಹಳ್ಳಿಯ ಹಿಂದಣಬೆಟ್ಟ, ಮೊದಲಹಳ್ಳಿಯ ಕುಡಿನೀರುಹಳ್ಳ, ಸುಣ್ಣಹರಳಹಳ್ಳ, ರಾಜನಹಳ್ಳ, ಮಂದರಿಗೆಹಳ್ಳ ಮುಂತಾದ ಹಳ್ಳಕೊಳ್ಳ ಮತ್ತು ಕಣಿಗಿಲೆಕಟ್ಟೆ, ಚೊಕಚಾರ್ಯಕಟ್ಟೆ, ಚೆಳೆಯಕಟ್ಟೆ, ಸೇಣೆಯಕಟ್ಟೆ, ಮತ್ತಿಕೆರೆ ತಡಿಯ ಅಣೆ, ಮುಂತಾದ ಕಟ್ಟೆಗಳೂ ದಾಖಲಾಗಿವೆ. ಮಿಗಿಲಾಗಿ ಮಹಾದೇವರ ದೇವಾಲಯ, ಸುಸುಗಲಗುಡಿ, ಬಿಳಿಯ ಗುಂಡುಗಲಗುಡಿ, ಗೊರವರ ಗುಡಿ ಮತ್ತು ಪೊಮನ ಕಣಿವೆಯ ಗುಡಿ ಮುಂತಾದ ಜನಪದಿಯರ ಗುಡಿಗಳೂ ದಾಖಲಿಸಲ್ಪಟ್ಟಿವೆ. ಇದರಿಂದ ನಾಗಮಂಗಲವು ಪ್ರಮುಖ ಶ್ರೀವೈಷ್ಣವ ಅಗ್ರಹಾರವಾಗಿ ಮಹತ್ವ ಪಡೆದಿದ್ದ ಅಂಶ ಸ್ಪಷ್ಟವಾಗುವುದರ ಜೊತೆಗೆ ಆ ವೇಳೆಗಾಗಲೇ ಅಸ್ತಿತ್ವದಲ್ಲಿದ್ದ ಜನಪದೀಯ ದೇವತೆಗಳೂ ಮಹತ್ವ ಪಡೆದಿದ್ದ ಅಂಶ ವೇದ್ಯವಾಗುತ್ತದೆ. ಸೌಮ್ಯಕೇಶವ ದೇವಾಲಯದ ಹಿಂಭಾಗದಲ್ಲಿ ವಿಶಾಲವಾದ ಪ್ರಾಕಾರದೊಳಗಿರುವ ಇಲ್ಲಿಯ ಯೋಗನರಸಿಂಹನ ದೇವಾಲಯವು ಸುಮಾರು ಕ್ರಿ.ಶ.೧೨-೧೩ನೇ ಶತಮಾನದ ರಚನೆಯಾಗಿದ್ದು, ಅದರ ನಿರ್ಮಾಣ ನಿರ್ವಹಣೆಗಳ ಬಗ್ಗೆ ಶಾಸನಾಧಾರಗಳು ಈವರೆವಿಗೂ ಲಭ್ಯವಿಲ್ಲ.

ನಾಗಮಂಗಲದ ಮುಂದಿನ ಬೆಳವಣಿಗೆಯನ್ನು ಅರಿಯಲು ನಾವು ಸುಮಾರು ೧೦೦ ವರ್ಷ ಕಾಯಬೇಕಾಗುತ್ತದೆ. ಅದೂ ನೆರೆಯ ಬೆಳ್ಳೂರಿನ ಕ್ರಿ.ಶ. ೧೨೬೯ರ ಶಾಸನದಿಂದ ನಾಗಮಂಗಲದ ಪ್ರಾಮುಖ್ಯತೆ ಮನದಟ್ಟಾಗುತ್ತದೆ.೧೨ ಬೆಳ್ಳೂರಿನ ಮಾರೆಸಿಂಗೇಶ್ವರ ಗುಡಿ ಮುಂದಿರುವ ಈ ಶಾಸನ, ಹೊಯ್ಸಳ ಮುಮ್ಮಡಿ ನರಸಿಂಹನ ಆಡಳಿತಾವಧಿಯಲ್ಲಿ ಮಹಾಪ್ರದಾನ ಪೆರುಮಾಳೆದಂಡನಾಯಕನು ಸರ್ವನಮಸ್ಯದ ಗ್ರಹಾರ, ಉದ್ಭವ ನರಸಿಂಹಪುರವಾದ ಬೆಳ್ಳೂರಿನಲ್ಲಿ ಮಾಡಿದ ಧರ್ಮಕಾರ್ಯಗಳನ್ನು ದಾಖಲಿಸುತ್ತದೆ. ಭೂದಾನ ಮಾಡುವಲ್ಲಿ ೩೨ ಮೆಟ್ಟಿನದಳೆಯಲ್ಲಿ, ಬೀಜವರಿಸಲಗೆ ಒಂದಕ್ಕೆ ೪೮ ಕಂಬದ ಲೆಕ್ಕಾಚಾರದಲ್ಲಿ ೧೨ ಸಲಗೆ ಗದ್ದೆಯನ್ನು ವರ್ಷಕ್ಕೆ ೧೨ ಗದ್ಯಾಣ ಕಟ್ಟುಗುತ್ತಿಗೆ ಅಧಾರದ ಮೇಲೆ ದಾನ ಬಿಟ್ಟ ವಿಷಯವನ್ನು ತಿಳಿಸುವುದು. ಈ ದಾನಕ್ಕೆ ೧೮ ನಾಡ ಶ್ರೀವೈಷ್ಣವ ಅಗ್ರಹಾರಗಳಲ್ಲಿ ಪ್ರಮುಖವಾಗಿದ್ದ, ಮೇಲುಕೋಟೆ, ತೊಣ್ಣೂರು, ದಡಗಗಳ ಜೊತೆಗೆ ನಾಗಮಂಗಲವನ್ನೂ ಸಾಕ್ಷಿಯಾಗಿ ಉಲ್ಲೇಖಿಸಿರುವುದು ಗಮನಾರ್ಹವಾಗಿದೆ. ಆ ದಿನಗಳಲ್ಲಿ ನಾಗಮಂಗಲವು ಶ್ರೀವೈಷ್ಣವ ಅಗ್ರಹಾರವಾಗಿ ಪಡೆದಿದ್ದ ಮಹತ್ವವನ್ನು ಇದು ಸೂಚಿಸುತ್ತದೆ. ಅನಾದಿ ಅಗ್ರಹಾರವಾಗಿದ್ದ ನಾಗಮಂಗಲದ ಸುತ್ತ ಬೆಳ್ಳೂರು, ತೊಣ್ಣೂರು, ದಡಗ ಹಾಗೂ ಮೇಲುಕೋಟೆಗಳಂತಹ ಶ್ರೀವೈಷ್ಣವ ಅಗ್ರಹಾರಗಳಿದ್ದು, ತೊಣ್ಣೂರು, ಮೇಲುಕೋಟೆಗಳಲ್ಲಿ ಧರ್ಮಪ್ರಸಾರ ಕಾರ್ಯದಲ್ಲಿ ತೊಡಗಿದ್ದ ಶ್ರೀವೈಷ್ಣವ ಯತಿ ರಾಮಾನುಜಾಚಾರ್ಯರು ತಪೋನಿರತರಾಗಿದ್ದರೆಂಬ ಪ್ರತೀತಿ ಇದೆ. ಪಡುವಲಪಟ್ಟಣದ೧೩ ಗುಡ್ಡದಲ್ಲಿರುವ ಪಾಂಡವರ ಕಲ್ಲುಗಳ ಮೇಲಿರುವ ಸುಮಾರು ೧೯ನೆಯ ಶತಮಾನಕ್ಕೆ ಸೇರಿದ ಎರಡು ಶಾಸನಗಳಲ್ಲೊಂದು, ರಾಮಾನುಜಾಚಾರ್ಯರು ಇಲ್ಲಿಗೆ ಬಂದು ತಪಸ್ಸು ಮಾಡಿದ್ದು, ಅವರ ಸೇವೆ ಮಾಡಿದವರಿಗೆ ಸ್ವರ್ಗ ಲಭಿಸುವುದೆಂದು ತಿಳಿಸಿದೆ. ಇನ್ನೊಂದು ಶಾಸನ೧೪ ಕಡುಗಬಾಳ ರಾಮರಾಯರ ಮಠದ ರಾಮಾನುಜಾಚಾರ್ಯರು ಇಲ್ಲಿಗೆ ಬಂದು ತಪಸ್ಸು ಮಾಡಿದ ಅಂಶವನ್ನು ತಿಳಿಸುತ್ತದೆ. ಇಲ್ಲಿ ತಪಸ್ಸು ಮಾಡಿದ ರಾಮಾನುಜಾಚಾರ್ಯರು ಕುಡುಗಬಾಳು ರಾಮರಾಯರ ಮಠದ ಮಠಾಧಿಪತಿಗಳೆಂದು ಇದರಿಂದ ವೇದ್ಯವಾಗುತ್ತಿದ್ದು, ಕ್ರಿ.ಶ. ೧೨ನೇ ಶತಮಾನದಲ್ಲಿದ್ದ ರಾಮಾನುಜಾಚಾರ್ಯರಿಗೂ ಇದಕ್ಕೂ ಸಂಬಂಧವಿಲ್ಲವೆಂಬ ಅಂಆಸ ಇದರಿಂದ ಸ್ಪಷ್ಟವಾಗುತ್ತದೆ.೧೫

ನಾಗಮಂಗಲದ ಸೌಮ್ಯಕೇಶವ ದೇವಾಲಯದ ರಂಗಮಂಟಪದ ಕಂಬವೊಂದರ ಮೇಲಿರುವ ಕ್ರಿ.ಶ. ೧೩೨೯ರ ಶಾಸನ, ೧೬ ಮುಮ್ಮಡಿ ಬಲ್ಲಾಳನ ಆಳ್ವಿಕೆಗೆ ಸೇರಿದ್ದು, ಶ್ರೀ ಬಲ್ಲಾಳ ಚತುರ್ವೇದಿ ನಾಗಮಂಗಲದ ಚನ್ನಕೇಶವ ದೇವರ ಸೇವೆಗೆಂದು ಕರದಾಳ (ಕರಡಹಳ್ಳಿ) ಮಲ್ಲಿದೇವ ಮತ್ತವನ ಮಡದಿ ಚನ್ನಾದೇವಿ ಸಂಯುಕ್ತವಾಗಿ ಹೊಲತ್ತಿಯಲ್ಲಿ (ಹಾಲ್ತಿ) ದೇವರ ಕೊಡುಗೆಯಾಗಿ ಭೂದಾನ ನೀಡಿದ್ದನ್ನು ದಾಖಲಿಸುತ್ತದೆ. ಇದು ಅಗ್ರಹಾರ ನಾಗಮಂಗಲದ ಮುಂದವರಿದ ಪ್ರಾಮುಖ್ಯತೆಯನ್ನು ಸೂಚಿಸುವುದರ ಜೊತೆಗೆ ವಿವಿಧೆಡೆಯಿಂದ ದಾನಿಗಳನ್ನು ಆಕರ್ಷಿಸುತ್ತಿದ್ದ ಅಂಶವನ್ನು ನಿವೇದಿಸುತ್ತದೆ.

ನೆರೆಯ ಮತ್ತೊಂದು ಪ್ರಖ್ಯಾತ ಶ್ರೀವೈಷ್ಣವ ಕ್ಷೇತ್ರವಾಗಿದ್ದು, ರಾಮಾನುಜರಿಂದಾಗಿ ವಿಶೇಷ ಮಹತ್ವ ಪಡೆದಿದ್ದ ಮೇಲುಕೋಟೆಯ ಚೆಲುವನಾರಾಯಣ ಗುಡಿಯಲ್ಲಿರುವ ಸುಮಾರು ಕ್ರಿ.ಶ. ೧೪ನೆಯ ಶತಮಾನದ ಲಿಪಿ ಸ್ವರೂಪದಲ್ಲಿರುವ ಶಾಸನ, ೧೭ ಅನಾದಿ ಅಗ್ರಹಾರ ವೀರ ಬಲ್ಲಾಳ ಚತುರ್ವೇದಿ ಭಟ್ಟರತ್ನಾಕರ ನಾಗಮಂಗಲದ ಗಂಗಣ್ಣನು ಯಾದವಗಿರಿಯಾದ ಮೇಲುಕೋಟೆಯ ನಾರಾಯಣದೇವರಿಗೆ ದಾನ ನೀಡಿದ್ದನ್ನು ದಾಖಲಿಸುವ ಮೂಲಕ ಅಗ್ರಹಾರ ನಾಗಮಂಗಲದ ನಿವಾಸಿ ಗಂಗಣ್ಣನ ಔದಾರ್ಯವನ್ನು ಎತ್ತಿ ಹಿಡಿದಿದೆ. ಮೇಲುಕೋಟೆ ಹಾಗೂ ನಾಗಮಂಗಲದ ನಿವಾಸಿಗಳು ಹೊಂದಿದ್ದ ಪರಸ್ಪರ ಗೌರವಾದರಗಳನ್ನು ಇದು ಸೂಚಿಸುತ್ತದೆ. ಹೀಗೆ ಹೊಯ್ಸಳರ ಆಡಳಿತಾವಧಿಯಲ್ಲಿ ಅಗ್ರಹಾರವಾಗಿ ಆಂತರಿಕ ಆಡಳಿತದಲ್ಲಿ ಸ್ವಾಯಕ್ತತೆಯನ್ನು ಹೊಂದಿದ್ದು, ಮಹಾಜನರ ನಿರ್ದೇಶನದಂತೆ ರಾಜಪ್ರಭುತ್ವದ ಅನಗತ್ಯ ಹಸ್ತಕ್ಷೇಪಕ್ಕೆ ಒಳಗಾಗದೇ ನಿರಾತಂಕವಾಗಿ ವೇದಾಧ್ಯಯನಗಳಲ್ಲಿ ತೊಡಗಿಸಿಕೊಂಡು ಸಮೃದ್ಧವಾಗಿತ್ತೆಂದು ತರ್ಕಿಸಬಹುದಾಗಿದೆ. ಏತನ್ಮಧ್ಯೆ ಉತ್ತರ ಭಾರತದಲ್ಲಿ ಆದ ರಾಜಕೀಯ ವಿದ್ಯಮಾನದಿಂದಾಗಿ ಖಿಲ್ಜಿ ಹಾಗೂ ತುಘಲಕ್ ಮನೆತನದ ಅಕ್ರಮಕಾರಿ ಸಾಮ್ರಾಜ್ಯ ವಿಸ್ತರಣಾ ನೀತಿಯಿಂದಾಗಿ ದಕ್ಷಿಣದ ಒಂದೊಂದೇ ರಾಜಮನೆತನಗಳು ಕಣ್ಮರೆಯಾದವು. ಆದರೆ ಇದರ ಬೆನ್ನಲ್ಲೇ ಈ ರಾಜಕೀಯ ಕ್ಷೋಭೆಯ ನಡುವೆಯೂ ದಕ್ಷಿಣ ಭಾರತದಲ್ಲಿ ವಿಜಯನಗರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವಿಜಯನಗರ ಸಾಮ್ರಾಜ್ಯವನ್ನು ಸುಮಾರು ಕ್ರಿ.ಶ. ೧೩೩೬ (ಕ್ರಿ.ಶ.೧೨೪೨) ರಲ್ಲಿ ಸ್ಥಾಪಿಸಿದ ಸಂಗಮ ಸೋದರರು ಹಾಗೂ ಕ್ರಿ.ಶ. ೧೨೪೭ರಲ್ಲಿ ಸ್ಥಾಪನೆಗೊಂಡ ಬಹುಮನಿ ಸಾಮ್ರಾಜ್ಯಗಳು ದಕ್ಷಿಣ ಭಾರತದ ರಾಜಕೀಯ ಚುಕ್ಕಾಣಿ ಹಿಡಿಯಲು ಮುಂದಾದವು. ಈ ಅವಧಿಯಲ್ಲಿ ನಾಗಮಂಗಲವು ಅಗ್ರಹಾರವಾಗಿ ಮುಂದುವರಿಯಿತಾದರೂ ವಿಜಯನಗರದ ಸಂಗಮರಸರ ಆರಂಭಿಕ ಅವಧಿಯ ಶಾಸನಗಳು ನಾಗಮಂಗಲ ಪರಿಸರದಲ್ಲಿ ದೊರೆತಿಲ್ಲ.

ದೂರದ ಬಾರಕೂರಿನ (ಉಡುಪಿ ಜಿ.) ಸೋಮೇಶ್ವರ ಗುಡಿಯಲ್ಲಿರುವ ಕ್ರಿ.ಶ. ೧೪೧೨ರ ಶಾಸನ, ೧೮ ಬಾರಕೂರು ರಾಜ್ಯವನ್ನು ಶಂಕರದೇವ ಒಡೆಯನು ಆಳುತ್ತಿದ್ದನು. ಮೂಡುಕೇರಿಯ ಸೋಮನಾಥ ದೇವಾಲಯದಲ್ಲಿ ಜರುಗುವ ರುದ್ರಪೂಜೆ ಸಂದರ್ಭದಲ್ಲಿ ಬ್ರಾಹ್ಮಣನೋರ್ವನ ಭೋಜನಕ್ಕೆಂದು ಭತ್ತವನ್ನು ನಾಗಮಂಗಲದ ಅರಕನಗಟ್ಟದ ಜೋಗಿಸೆಟ್ಟಿ ಮಡದಿ ರಾಮಕ್ಕ ಹಾಗೂ ಅವರ ಮಗ ಚಿಕ್ಕಸೆಟ್ಟಿಯರು ಸಂಯುಕ್ತವಾಗಿ ನೀಡಿದ್ದನ್ನು ದಾಖಲಿಸುತ್ತದೆ. ಆದರೆ ಸುಮಾರು  ಕ್ರಿ.ಶ. ೧೪-೧೫ನೆಯ ಶತಮಾನಕ್ಕೆ ಸೇರಿದ ಶಾಸನವೊಂದು, ೧೯ ನಾಗಮಂಗಲದ ಸೌಮ್ಯಕೇಶವರ ದೇವಾಲಯದ ಅರೆಗಂಬದ ಮೇಲಿದ್ದು, ಶಂಕರ ಕರಣಿಕರು ನಾಲ್ಕು ಗದ್ಯಾಣ ವೆಚ್ಚದಲ್ಲಿ ಕಂಬದ ಸೇವಾಕಾರ್ಯವನ್ನು ಕೈಗೊಂಡ ಅಂಶವನ್ನು ದಾಖಲಿಸುವ ಮೂಲಕ ಸೌಮ್ಯಕೇಶವ ದೇವಾಲಯವು ಸುಮಾರು ಕ್ರಿ.ಶ. ೧೪-೧೫ನೆಯ ಶತಮಾನದಲ್ಲಿ ವಿಸ್ತರಣೆಗೆ ಒಳಪಟ್ಟ ಅಂಶವನ್ನು ಸೂಚಿಸುತ್ತದೆ. ಇದು ಅಗ್ರಹಾರದ ಚಟುವಟಿಕೆ ಅಧಿಕಗೊಂಡದ್ದನ್ನು ಮತ್ತು ಚನ್ನಕೇಶವ ದೇವಾಲಯದ ಹೆಚ್ಚಿದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಮಹತ್ವವನ್ನು ಧ್ವನಿಸುವಂತೆ ತೋರುತ್ತದೆ. ಇದೇ ರೀತಿ ನಾಗಮಂಗಲದ ವೀರಭದ್ರನ ಗುಡಿ ಮುಂದಣ ಉಯ್ಯಾಲೆ ಮಂಟಪದ ಕಂಬದ ಮೇಲಿರುವ ಸುಮಾರು ಕ್ರಿ.ಶ. ೧೪೧೦ರ ಶಾಸನ ಬಹಳ ಹಾಳಾಗಿದ್ದು, ೨೦ ಹೆಚ್ಚಿನ ವಿವರವನ್ನು ಪಡೆಯಲಾಗುತ್ತಿಲ್ಲ. ಆದರೆ ನಾಗಮಂಗಲದಲ್ಲಿ ಜೈನ ಬಸದಿಯೇನಾದರೂ ಇತ್ತೋ ಹೇಗೆಂದು ಪರಿಶೀಲಿಸುವ ಅಗತ್ಯವಿದ್ದು, ಊರಿನ ವೀರಭದ್ರ ದೇವಾಲಯ ಪರಿಸರದಲ್ಲಿ ಜೈನಾವಶೇಷಗಳು ದೊರೆಯುವ ಸಾಧ್ಯತೆಗಳಿವೆ.

ನಾಗಮಂಗಲದ ಪ್ರಭುಗಳು

ವಿಜಯನಗರದ ಅರಸರ ಆಳ್ವಿಕೆಯವಧಿಯಲ್ಲಿ ನಾಗಮಂಗಲವು ಸ್ಥಳೀಯ ಪ್ರಭುಗಳ ಆಳ್ವಿಕೆಗೆ ಒಳಪಟ್ಟಿದ್ದು, ಅವರನ್ನು ನಾಗಮಂಗಲದದ ಮಹಾಪ್ರಭುಗಳೆಂದೇ ಶಾಸನಗಳು ದಾಖಲಿಸಿವೆ. ಆದರೆ ಈ ಮನೆತನದ ಇತಿಹಾಸಕ್ಕೆ ಸಂಬಂಧಿಸಿದಂತೆ ಅಗತ್ಯ ಆಕರಗಳ ಕೊರತೆ ಇತಿಹಾಸಕಾರರನ್ನು ಕಾಡುತ್ತಿದೆ. ಈ ಮನೆತನದ ಮೊದಲನೆಯ ಪಾಳೆಯಗಾರ ಜೈವಿಡ ದಂಡನಾಯಕನಾಗಿದ್ದು, ನಾಗಮಂಗಲದ ಒಳಕೋಟೆಯನ್ನು ಸುಮಾರು  ಕ್ರಿ.ಶ. ೧೨೩೦ರಲ್ಲಿ ಇವನು ನಿರ್ಮಿಸಿರಬಹುದೆಂದು ಹಯವದನರಾಯರು ಅಭಿಪ್ರಾಯಪಡುತ್ತಾರೆ.೨೧ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳನ್ನು ನೀಡಿಲ್ಲದಿರುವುದು ಉಲ್ಲೇಖಾರ್ಹ. ಈ ಹಿನ್ನೆಲೆಯಲ್ಲಿ ಜೈವಿಡ ದಂಡನಾಯಕನ ಚಾರಿತ್ರಿಕ ಅಸ್ತಿತ್ವವೇ ಅನುಮಾನಾಸ್ಪದವಾಗುತ್ತದೆ. ಅಲ್ಲಿಂದಾಚೆಗೆ ಸುಮಾರು ಕ್ರಿ.ಶ.೧೫ನೆಯ ಶತಮಾನದ ಪೂರ್ವಾರ್ಧ ಭಾಗದಲ್ಲಿದ್ದ ಸಿಂಗಣ್ಣವೊಡೆಯ ಮತ್ತವನ ಮಡದಿ ಸೀತಾಂಬಿಕೆಯ ಉಲ್ಲೇಖ, ಅವರ ಮಕ್ಕಳಾದ ತಿಮ್ಮಣ್ಣ ದಂಡನಾಯಕ ಹಾಗು ದೇವರಾಜವೊಡೆಯರ ಕ್ರಿ.ಶ. ೧೪೫೦-೧೪೬೦ರ ಕಾಲಾವಧಿಗೆ ಸೇರಿದ ಶಾಸನಗಳಿಂದ ವೇದ್ಯವಾಗುತ್ತದೆ.೨೨ ಆದರೆ ಸಿಂಗಣ್ಣವೊಡೆಯರ ಪೂರ್ವ ವೃತ್ತಾಂತವಾಗಲಿ, ಅವನ ಕಿರಿಯ ಮಗ ದೇವರಾಜವೊಡೆಯರ ಉತ್ತರೋತ್ತರಕ್ಕೆ ಸಂಬಂಧಿಸಿದಂತಾಗಲಿ ಏನೇನೂ ಮಾಹಿತಿ ಲಭ್ಯವಿಲ್ಲ. ಆದರೂ ಲಭ್ಯವಿರುವ ಮಾಹಿತಿಯನ್ನಾಧರಿಸಿ, ಲೋಹಿತ ಕುಲಾನ್ವಯಕ್ಕೆ ಸೇರಿದ ತಿಮ್ಮಣ್ಣ ದಂಡನಾಯಕ ಮತ್ತವನ ಸೋದರ ದೇವರಾಜ ಒಡೆಯನ ಕಾಲದಲ್ಲಿ ನಾಗಮಂಗಲವು ಸಾಕಷ್ಟು ಖ್ಯಾತಿಯನ್ನು ಪಡೆಯುವ ಮೂಲಕ “ನಾಗಮಂಗಲ ರಾಜ್ಯ” ದ ಆಡಳಿತ  ಕೇಂದ್ರವಾಗಿ ರೂಪುಗೊಳ್ಳುತ್ತಿದ್ದಿತೆಂದು ತರ್ಕಿಸಬಹುದಾಗಿದ್ದು, ಈ ಸೋದರರ ಶಾಸನಗಳು ಮೇಲುಕೋಟೆ, ಮೈಸೂರು, ಸೀತಾಪುರ, ನೆಲಮನೆ ಮುಂತಾದೆಡೆ ಲಭಿಸಿವೆ. ಅಲ್ಲದೆ, ದೂರದ ಮೂಡಬಿದಿರೆಯಲ್ಲಿ ದೊರೆತಿರುವ ಶಾಸನವಂತೂ ಕುತೂಹಲಕರ ಎಲ್ಲಕ್ಕೂ ಮಿಗಿಲಾಗಿ ನಾಗಮಂಗಲದ ಪ್ರಭುಗಳೆನಿಸಿಕೊಂಡಿದ್ದ ಇವರ ಒಂದೇ ಒಂದು ಶಾಸನ ಈವರೆಗೆ ನಾಗಮಂಗಲ ಪಟ್ಟಣದಲ್ಲಿ ದೊರೆತಿಲ್ಲ. ಮುಂದೆಂದಾದರೂ ದೊರೆಯಬಹುದೇನೋ ?

ಲೋಹಿತ ಕುಲಕ್ಕೆ ಸೇರಿದ ನಾಗಮಂಗಲ ಪ್ರಭುಗಳಲ್ಲಿ ಸಿಂಗಣ್ಣವೊಡೆಯ ಮತ್ತವನ ಮಡದಿ ಸೀತಾಂಬಿಕಾ ಹಾಗೂ ಇವರ ಮಕ್ಕಳಾದ ತಿಮ್ಮಣ್ಣ ದಂಡನಾಯಕ ಮತ್ತವನ ಮಡದಿ ರಂಗಾಂಬಿಕಾ ಹಾಗೂ ದೇವರಾಜ ಒಡೆಯರ ಉಲ್ಲೇಖ ಶಾಸನಗಳಲ್ಲಿ ಅಧಿಕೃತವಾಗಿ ಕಂಡುಬರುತ್ತದೆಯಾದರೂ ಸಿಂಗಣ್ಣ ಒಡೆಯರನ ಸಮಕಾಲೀನ ಶಾಸನಗಳು ಖಚಿತವಾಗಿ ದೊರೆತಿಲ್ಲ. ಆದರೆ ಕ್ರಿ.ಶ.೧೨೯೨ರ ಬಾರಕೂರು ಶಾಸನ, ೨೩ ಸಿಂಗಣ್ಣವೊಡೆಯನೆಂಬುವನು ತುಳುರಾಜ್ಯವನ್ನು ಆಳುತ್ತಿದ್ದು ಕ್ರಿ.ಶ. ೧೪೦೪-೦೫ರಲ್ಲಿ ಮಹಾಪ್ರಧಾನ ಸಿಂಗಣ್ಣ ದಂಡನಾಯಕನೆಂಬುವನು ತುಳುರಾಜ್ಯವನ್ನಾಳುತ್ತಿದ್ದು, ಕ್ರಿ.ಶ. ೧೪೩೪-೩೫ರಲ್ಲಿ ಇನ್ನೊಬ್ಬ ಸಿಂಗಣ್ಣದಂಡನಾಯಕನ ಉಲ್ಲೇಖ ಲಭಿಸುತ್ತಾದರೂ ಇವರನ್ನು ನಾಗಮಂಗಲದ ಮಹಾಪ್ರಭು ಸಿಂಗಣ್ಣವೊಡೆಯನೊಂದಿಗೆ ಸಮೀಕರಿಸಲು ಪುರಾವೆಗಳು ಸಾಲದು. ಅಲ್ಲದೆ ಆ ಶಾಸನಗಳಲ್ಲಿ ಈ ಬಗ್ಗೆ ಆಂತರಿಕ ಸುಳಿವುಗಳು ಇಲ್ಲ. ಮೇಲುಕೋಟೆಯ ಕ್ರಿ.ಶ. ೧೪೩೨ರ ಒಂದು ಶಾಸನವು ೨೪ ಇಮ್ಮಡಿ ದೇವರಾಯನ ಆದೇಶದಂತೆ ದೇವರಾಜ ಒಡೆಯರು ಹೊಸಹಳ್ಳಿ, ಮೈಯಿಲನಹಳ್ಳಿಗಳನ್ನು ಸಂಪತ್ಕರನಾರಾಯಣ ದೇವರ ಸೇವೆಗೆಂದು ದತ್ತಿ ನೀಡಿದ್ದನ್ನು ತಿಳಿಸುತ್ತದೆಯಾದರೂ, ಇಲ್ಲಿಯ ಶಾಸನೋಕ್ತ ದೇವರಾಜೊಡೆಯನಿಗೆ ಯಾವುದೇ ವಿಶೇಷಣಗಳಿಲ್ಲದಿರುವುದು ಉಲ್ಲೇಖಾರ್ಹ. ಅಲ್ಲೇ ಇರುವ ಇದೇ ಕಾಲದ ಇನ್ನೊಂದು ಶಾಸನ೨೫ ದೇವರ ವಸಂತೋತ್ಸವ ಸೇವೆಗೆಂದು ೫೦೫ ಹಣವನ್ನು ದತ್ತಿ ಬಿಟ್ಟಿದ್ದನ್ನು ಉಲ್ಲೇಖಿಸುತ್ತದೆ. ದೂರದ ಕರಾವಳಿಯ ಮೂಡಬಿದ್ರಿಯಿಂದ ವರದಿಯಾಗಿರುವ ಕ್ರಿ.ಶ. ೧೪೩೦ರ ಶಾಸನ, ೨೬ ಅಲ್ಲಿಯ ಹೊಸಬಸದಿಯ ಮುಂದೆ ನಿಂತಿದ್ದು, ನಾಗಮಂಗಲದ ದೇವರಾಜ ವೊಡೆಯನು, ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದು, ಅರಸ ಹಾಗೂ ಮಹಾಪ್ರಧಾನ ಪೆರುಮಾಳೆದೇವರ ದಂಡನಾಯಕನ ನಿರೂಪದಂತೆ, ದೇವರಾಜವೊಡೆಯನು ಬಿದಿರೆಯಲ್ಲಿ ಆರು ಬಲ್ಲಾಳರು, ಚೌಟರು, ಹಲರು, ಎಂಟು ಪ್ರಜೆ, ಸೆಟ್ಟಿಕಾರರನ್ನೊಳಗೊಂಡ ಸಮಸ್ತರ ನೆರವಿನೊಂದಿಗೆ ಅಭಿನವಚಾರುಕೀರ್ತಿ ಪಂಡಿತದೇವರು ತ್ರಿಭುವನ ಚೂಡಾಮಣಿ ಮಹಾಚೈತ್ಯಾಲಯವನ್ನು ನಿರ್ಮಿಸುವುದಕ್ಕೆ ಅನುಕೂಲವಾಗುವಂತೆ ವಿಶಾಲವಾದ ನಿವೇಶನವನ್ನು ನೀಡಿದ ಅಂಶವನ್ನು ಅರಹುತ್ತದೆ. ಆದರೆ ಇಲ್ಲಿಯ ಶಾಸನೋಕ್ತ ದೇವರಾಜವೊಡೆಯನು ನಾಗಮಂಗಲದವನೆಂದು ಹೇಳಲಾಗಿದೆಯಾದರೂ ನಾಗಮಂಗಲಪ್ರಭು, ಲೋಹಿತ ಕುಲ ಅಥವಾ ವಂಶಾವಳಿಯ ಪ್ರಸ್ತಾಪವಿಲ್ಲ.

ಈ ಹಿನ್ನೆಲೆಯಲ್ಲಿ ಮೇಲಿನ ಶಾಸನೋಕ್ತ ದೇವರಾಜವೊಡೆಯನ ನಾಗಮಂಗಲವನ್ನು ಕರಾವಳಿ ಪ್ರದೇಶದಲ್ಲಿ ಗುರುತಿಸಬೇಕೆಂದೆನಿಸುತ್ತದೆ. ಇದೇ ರೀತಿ ಉಡುಪಿ ಜಿಲ್ಲೆಯ ಯಡಮಂಗಲ೨೭ ಹಾಗೂ ಕಾಂತಾವರದ ಕ್ರಿ.ಶ. ೧೪೩೨ರ ಶಾಸನಗಳಲ್ಲೂ ೨೮ ಇಮ್ಮಡಿ ದೇವರಾಯನ ಆಳ್ವಿಕೆಯಲ್ಲಿ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ದೇವರಾಜವೊಡೆಯನ ಉಲ್ಲೇಖ ಕಂಡುಬರುತ್ತದೆ. ಆದರೆ ಇವನಿಗೂ ನಾಗಮಂಗಲದ ದೇವರಾಜವೊಡೆಯನಿಗೂ ಸಂಬಂಧ ಕಲ್ಪಿಸಲು ಕಿಂಚಿತ್ ಪುರಾವೆಯೂ ದೊರೆಯುವುದಿಲ್ಲ. ಆದರೆ ಈಗಾಗಲೇ ನೋಡಿರುವಂತೆ ಬಾರಕೂರಿನ ಕ್ರಿ.ಶ. ೧೪೧೨ರ ಶಾಸನ ೨೯, ನಾಗಮಂಗಲದ ಬಳಿಯ ಅರಕನಗಟ್ಟದ ಜೋಗಿಸೆಟ್ಟಿ ಕುಟುಂಬದವರು ಬ್ರಾಹ್ಮಣ ಭೋಜನಕ್ಕೆಂದು ಕೆಲವು ಮೂಡೆ ಬತ್ತವನ್ನು ದತ್ತಿ ಬಿಟ್ಟಿರುವ ಅಂಶ ಅದಾಗಲೇ ನಾಗಮಂಗಲದ ವರ್ತಕರು ಕರಾವಳಿ ಭಾಗದಲ್ಲಿ ವ್ಯಾಪಾರದಲ್ಲಿ ತೊಡಗಿದ್ದುದಕ್ಕೆ ಪೂರಕ ಸಾಕ್ಷಿಯನ್ನು ಒದಗಿಸುತ್ತದೆ. ಈ ಶಾಸನದಲ್ಲಿ ಉಕ್ತವಾಗಿರುವ ನಾಗಮಂಗಲ ಮತ್ತು ಅರಕನಕಟ್ಟೆಗಳು ನಾಗಮಂಗಲದ ಕ್ರಿ.ಶ. ೧೧೭೩ರ ಇಮ್ಮಡಿ ಬಲ್ಲಾಳನ ಶಾಸನದಲ್ಲಿ ಉಲ್ಲೇಖಿತಗೊಂಡಿರುವ ಸ್ಥಳಗಳೇ ಆಗಿದ್ದು, ಇದು ಕ್ರಿ.ಶ. ೧೪೧೨ರ ಶಾಸನೋಕ್ತ ಜೋಗಿಸೆಟ್ಟಿ ಕುಟುಂಬ ಮೂಲತಃ ಇಂದಿನ ನಾಗಮಂಗಲ ಪಟ್ಟಣದವರೇ ಎಂಬ ಅಂಶವನ್ನು ಖಚಿತಪಡಿಸುತ್ತದೆ. ಆದರೆ, ಇದೇ ಅಭಿಪ್ರಾಯವನ್ನು ಕ್ರಿ.ಶ. ೧೪೩೦ರಲ್ಲಿ ಮಂಗಳೂರು ರಾಜ್ಯದ ರಾಜ್ಯಪಾಲನಾಗಿದ್ದ ದೇವರಾಜವೊಡೆಯನ ಬಗ್ಗೆ ಹೇಳಲು ಬರುವುದಿಲ್ಲ. ಮಿಗಿಲಾಗಿ ಇವನನ್ನು ಲೋಹಿತ ಕುಲದ ನಾಗಮಂಗಲ ಮಹಾಪ್ರಭು ಮನೆತನಕ್ಕೆ ಸೇರಿದ ದೇವರಾಜವೊಡೆಯನೊಂದಿಗೆ ಗುರುತಿಸಲಾಗುವುದಿಲ್ಲ. ಏಕೆಂದರೆ, ನಾಗಮಂಗಲದ ಲೋಹಿತ ಕುಲದ ದೇವರಾಜವೊಡೆಯನು ತಿಮ್ಮಣ್ಣ ದಂಡನಾಯಕನ ಕಿರಿಯ ಸೋದರನಾಗಿದ್ದು, ಈ ಸೋದರರೀರ್ವರ ಶಾಸನಗಳು ಕ್ರಿ.ಶ. ೧೪೫೫-೧೪೬೯ರ ಕಾಲಾವಧಿಗೆ ಮಾತ್ರ ಸೀಮಿತವಾಗಿದೆ. ಕಾಲದ ದೃಷ್ಟಿಯಿಂದ ಮೂರು ದಶಕಗಳ ಅಂತರವಿರುವುದು ಅಷ್ಟೇ ಗಮನಾರ್ಹವಾದ ಅಂಶವಾಗಿದೆ.

ಲೋಹಿತ ಕುಲದ ಶಿಂಗಣ್ಣವೊಡೆಯ-ಸೀತಾಂಬಿಕೆಯರ ಇಬ್ಬರು ಮಕ್ಕಳಲ್ಲಿ, ಹಿರಿಯನಾದ ತಿಮ್ಮಣ್ಣದಂಡನಾಯಕ ಒಡೆಯನ ಉಲ್ಲೇಖವಿರುವ ಅಲ್ಲದೆ, ಅವನು, ಮಡದಿ ರಂಗಾಂಬಿಕೆಯೊಡಗೂಡಿ ನೀಡಿರುವ ದಾನಶಾಸನಗಳು ಮೇಲುಕೋಟೆ, ನೆಲಮನೆ, ಡಣಾಯಕಪುರ ಹಾಗು ದಾಸನದೊಡ್ಡಿಗಳಲ್ಲಿ ಲಭಿಸಿವೆ. ಅದರಲ್ಲೂ, ತಿಮ್ಮಣ್ಣ ದಂಡನಾಯಕನನ್ನು ವೇದಮಾರ್ಗ ಪ್ರತಿಷ್ಠಾಚಾರ್ಯ, ಯಾದವಗಿರಿ ಜೀರ್ಣೋದ್ಧಾರಕ, ಲೋಹಿತಾನ್ವಯ ಕುಲಶೇಖರ, ಯದುಗಿರಿ ನಾರಾಯಣ ಚರಣಾರವಿಂದ, ಭಕ್ತಿ ತಾತ್ಪರ್ಯನಿಷ್ಠ, ತುಲಾಪುರುಷಾದಿ ಮಹಾದಾನ ವೃತ ದೀಕ್ಷಿತ, ರಂಗಾಂಬಿಕಾ ಮನೋವಲ್ಲಭ ಮಹಾಪ್ರಧಾನ ಎಂದು ಮೇಲುಕೋಟೆಯ ಜೀಯರ ಗುಡಿಯ ಕೈಸಾಲೆ ಮಂಟಪದಲ್ಲಿರುವ ಕ್ರಿ.ಶ. ೧೪೫೮ರ ಶಾಸನ ವರ್ಣಿಸಿದೆ.೩೦ ಅಲ್ಲದೆ, ಸಾಂಧರ್ಭಿಕವಾಗಿ ಇವನ ತಂದೆಯಾದ ಶಿಂಗಣ್ಣನನ್ನು ನಾಗಮಂಗಲದ ಮಹಾಪ್ರಭು, ಪರಮಭಾಗವತ, ಲೋಹಿತಕುಲಶೇಖರನೆಂದು ಹೊಗಳುತ್ತಾ ತಾಯಿ ಸೀತಾಂಬಿಕೆಯನ್ನು ಈ ಶಾಸನ ಹೆಸರಿಸಿದೆ. ಶ್ರೀರಂಗಪಟ್ಟಣದ ಕೋಟೆಯನ್ನು ನಿರ್ಮಿಸಿದ ತಿಮ್ಮಣ್ಣ ದಂಡನಾಯಕನು (ಹೆಬ್ಬಾರ) ವಿಜಯನಗರಕ್ಕೆ ಭೇಟಿ ನೀಡಿ, ಆಳರಸನಿಂದ ಕೋಟೆಯ ನಿರ್ಮಾಣಕ್ಕೆ ಪರವಾನಗಿ ಪಡೆದು ಶ್ರೀರಂಗಪಟ್ಟಣದ ವಾಯುವ್ಯ ಭಾಗದಲ್ಲಿ ಕೋಟೆ-ಕೊತ್ತಲ-ಕಂದಕಗಳನ್ನು ನಿರ್ಮಿಸಿ, ನದಿಯ ನೀರನ್ನು ಕಂದಕಕ್ಕೆ ತುಂಬುವ ವ್ಯವಸ್ಥೆ ಮಾಡಿ, ಮೊಸಳೆಗಳನ್ನು ಬಿಟ್ಟು ನೆಲದುರ್ಗ, ಜಲದುರ್ಗಗಳನ್ನು ನಿರ್ಮಿಸುವುದರ ಜೊತೆಗೆ, ನೆರೆಯ ಕಳಸವಾಡಿಯ (ಶ್ರೀರಂಗಪಟ್ಟಣ-ಮೈಸೂರು ರಸ್ತೆಯಲ್ಲಿರುವ ಕಳಸ್ತವಾಡಿ ಗ್ರಾಮ) ಜೈನ ಬಸದಿಯ ಅವಶೇಷಗಳನ್ನು ಬಳಸಿ ರಂಗನಾಥ ದೇವಾಲಯವನ್ನು ವಿಸ್ತರಿಸಿದನೆಂದು ಹೇಳಲಾಗುತ್ತದಾದರೂ, ಇದನ್ನು ಪುಷ್ಠೀಕರಿಸುವ ಸಾಕ್ಷ್ಯಾಧಾರಗಳನ್ನು ಶೋಧಿಸಬೇಕಿದೆ.೩೧

ಮೇಲುಕೋಟೆಯ ಕ್ರಿ.ಶ. ೧೪೫೮ರ ಈ ಶಾಸನ, ೩೨ ಮಹಾಪ್ರಧಾನ ತಿಮ್ಮಣ್ಣ ದಂಡನಾಯಕನ ಮಡದಿ ರಂಗಮ್ಮಳು ರತ್ನಾಭರಣ ರಜತಪರಿಯುಕ್ತ ಮಂಟಪ, ಮಹಾತಟಾಕಾದಿಗಳನ್ನು ನಿರ್ಮಿಸಿ, ಪಾಳು ಬಿದ್ದಿದ್ದ ನಿವೇಶನವನ್ನು ಖರೀದಿಸಿ ದೇಶಾಂತರಿ ಮಠವನ್ನು ಕಟ್ಟಿಸಿ, ರಂಗಮಠದಲ್ಲಿ ೨೪ ವೈದಿಕ ಬ್ರಾಹ್ಮಣರ ಭೋಜನಕ್ಕೆ ವ್ಯವಸ್ಥೆ ಮಾಡುವ ಮೂಲ ರಾಮಾನುಜಕೂಟವನ್ನು ನಡೆಸಲೆಂದು ಕುರವಂಕ ನಾಡಿನಲ್ಲಿದ್ದ, ೮೦ ವರಾಹ ಆದಾಯವಿರುವ ಬಲ್ಲೇನಹಳ್ಳಿ ಹಾಗು ಯಲವದಹಳ್ಳಿಗಳನ್ನೂ ರಂಗಸಮುದ್ರದ ಕೆರೆಯ ಕೆಳಗೆ ಭೂಮಿಯನ್ನು ರಂಗಮಠದ ಲಕ್ಷ್ಮೀದೇವಿಯರ ಚರುಪುಗೆಂದು ವೃಂದಾವನಮಠದ ಬಾಣಸಿಗ ಪರಿಚಾರಕರ ನಿರ್ವಹಣೆಗೆಂದು ರಾಮಾನುಜ ಜೀಯರಿಗೆ ತಿಮ್ಮಣ್ಣ ದಂಡನಾಯಕನು ದತ್ತಿಬಿಟ್ಟ ಸಂದರ್ಭದಲ್ಲಿ ದೇವಸ್ಥಾನದ ಐವತ್ತಿಬ್ಬರು ಸಾಕ್ಷಿಯಾಗಿದ್ದ ಅಂಶವನ್ನು ತಿಳಿಸುತ್ತದೆ. ಅದೂ ಸಾಲದಿದ್ಧಾಗ ೪೦ ವರಹ ಆದಾಯದ ಭೂಮಿಯನ್ನು ೪೦೦ ವರಹಗಳಿಗೆ ಖರೀದಿಸಿ ದಾನ ನೀಡಿದ್ದನ್ನು ಇನ್ನೊಂದು ಶಾಸನ ತಿಳಿಸುತ್ತದೆ. ಈ ದೇವಾಲಯದ ರಂಗಪ್ರಾಸಾದವನ್ನು ಇವನೇ ಮಾಡಿಸಿದ ಅಂಶವನ್ನು ಅಲ್ಲೇ ಇರುವ ಕ್ರಿ.ಶ. ೧೪೫೭ರ ಇನ್ನೊಂದು ಶಾಸನ ಅರಹುತ್ತದೆ.೩೩ ನೆಲಮನೆಯ ಕ್ರಿ.ಶ. ೧೪೫೮ರ ಶಾಸನವು, ೩೪ ಸಿಂಗಣ್ಣನನ್ನು ಮಹಾಪ್ರಭು ಎಂದು ಕರೆದು ಶುದ್ಧ ಲೋಹಿತ ವಂಶದ ಮೂಲ ಎಂದು ಹೊಗಳುತ್ತಾ ತಿಮ್ಮಣ್ಣ ದಂಡನಾಯಕನನ್ನು ಸ್ಥಿರ ವೈಭವಸ್ತ ಸ್ವರಾಜ್ಯ ದುರಂಧರೋ, ಧರಣಿಪತೆಃ ಸಚಿವೊಸಭಾವೈಭವ, ಯಾದವಗಿರಿ ಜೀರ್ಣೋದ್ಧಾರಕನೆಂದು ಹೇಳುತ್ತಾ ನಾಗಮಂಗಲ ರಾಜ್ಯದಲ್ಲಿದ್ದ ನೆಲಮನೆ ಗ್ರಾಮವನ್ನು ದತ್ತಿ ನೀಡಿದ್ದನ್ನು ತಿಳಿಸುತ್ತದೆ. ಈ ಶಾಸನದಿಂದ ಇವನು ಇಮ್ಮಡಿ ದೇವರಾಯನಿಗೆ ಸಚಿವನಾಗಿದ್ದ ಅಂಶ ವೇದ್ಯವಾಗುತ್ತದೆ.

ಮೇಲುಕೋಟೆಯಲ್ಲೇ ಇರುವ ಕ್ರಿ.ಶ. ೧೪೬೦-೬೧ರ ಇನ್ನೊಂದು ಶಾಸನ೩೪ ತಾಯಿ ಸೀತಮ್ಮಳ ಹೆಸರಿನಲ್ಲಿ ಹೊಸಹಳ್ಳಿ ಗ್ರಾಮವನ್ನು ಧರ್ಮ ಅಗ್ರಹಾರವನ್ನಾಗಿ ಮಾಡಿ, ೨೦ ಮಂದಿ ಶ್ರೀವೈಷ್ಣವ ಬ್ರಾಹ್ಮಣರಿಗೆ ತಿಮ್ಮಣ್ಣ ದಂಡನಾಯಕನು ಹಂಚಿದ್ದನನ್ನು ನಿವೇದಿಸುತ್ತದೆ. ಅಲ್ಲೇ ಇರುವ ಕ್ರಿ.ಶ. ೧೪೬೯ರ ಇನ್ನೊಂದು ಶಾಸನ, ೩೬ ಮಹಾಪ್ರಧಾನ ತಿಮ್ಮಣ್ಣದಂಡನಾಯಕ ಒಡೆಯರು ರಾಮಾನುಜರ ಪ್ರಥಮ ಶಿಷ್ಯ, ಐವತ್ತಿಬ್ಬರು ಶ್ರೀವೈಷ್ಣವರೊಂದಿಗೆ ಸೇರಿಕೊಂಡು ಆಳ್ವಾರರ ಸೇವೆಗೆಂದು ನಲ್ಲಿಹಳ್ಳಿ ಗ್ರಾಮವನ್ನು ದತ್ತಿಬಿಟ್ಟ ಅಂಶವನ್ನು ದಾಖಲಿಸಿದೆ, ಅದರಲ್ಲೂ ಮೇಲೆ ಚರ್ಚಿಸಿರುವ ಕೊನೆಯ ಶಾಸನದಲ್ಲಿ ಸಾಂದರ್ಭಿಕವಾಗಿ ತಿರುಪತಿ ಕಂದಾಡಿಗಳ ಉಲ್ಲೇಖವಿದ್ದು, ಕಂದಾಡಿ ಚೆನ್ನಸರನ ವೃಂದಾವನ, ಹಿರಿಯವೀಧಿಯ ಕಲ್ಯಾಣ ಸರಸ್ವತಿಗೆ ಹೋಗುವ ಸೂರ್ಯವೀದಿಗಳ ಜೊತೆಗೆ ತೆಂಕಣಕೋಟೆಯ ಪ್ರಸ್ತಾಪವೂ ಇದೆ. ಈ ಅವಧಿಯಲ್ಲಿ ವಿಜಯನಗರದ ಸಿಂಹಾಸನವನ್ನು ವಿರೂಪಾಕ್ಷನು ಅಲಂಕರಿಸಿದ್ದ ಅಂಶವನ್ನು ಈ ಶಾಸನಗಳು ದಾಖಲಿಸಿವೆ. ಮೇಲುಕೋಟೆಯ ಸುಮಾರು ಕ್ರಿ.ಶ. ೧೪೬೦ರ ಇನ್ನೊಂದು ಶಾಸನದಿಂದ,೩೭ ಯಾದವಗಿರಿಯ ನಾರಾಯಣನ ರಂಗಮಂಟಪದಲ್ಲಿ ಕಂಬಗಳ ಮೇಲಿನ ಪುರಾಣ ಕಥನ ಶಿಲ್ಪಗಳನ್ನು ಆಕರ್ಷಕ ಚಿತ್ರಗಳಿಂದ ಅಲಂಕರಿಸಿದವನು ನಾಗಮಂಗಲದ ಶುಕಚರಿತನೆಂದು ಹೇಳುತ್ತದೆ. ಇಲ್ಲಿ ಉಲ್ಲೇಖಿಸಿರುವ ಶುಕಚರಿತನು ನಾಗಮಂಗಲದ ಮಹಾಪ್ರಧಾನ ತಿಮ್ಮಣ್ಣ ದಂಡನಾಯಕನೇ ಆಗಿದ್ಧಾನೆ. ಈ ಶಾಸನಗಳಿಂದ ತಿಮ್ಮಣ್ಣ ದಂಡನಾಯಕನ ಧಾರ್ಮಿಕ ಶ್ರದ್ಧೆ ವ್ಯಕ್ತವಾಗುತ್ತದೆ. ಈ ದಂಪತಿಗಳು ಮಾಡಿಸಿದ ಮೇಲುಕೋಟೆಯ ನಾರಾಯಣ ಗುಡಿ, ಲಕ್ಷ್ಮೀ ಗುಡಿ, ರಂಗಮಂಟಪಗಳ ಸೇರ್ಪಡೆಯ ದುರಸ್ತಿ, ಉತ್ತರ, ದಕ್ಷಿಣ ಹಾಗು ಪಶ್ಚಿಮದ ಕೈಸಾಲೆ ಮಂಟಪದ ಕಂಬಗಳ ರಾಮಾಯಣ, ಮಹಾಭಾರತ, ಭಾಗವತಗಳಿಗೆ ಸಂಬಂಧಿಸಿದ ಕೆಲವು ಅಪೂರ್ವ ಉಬ್ಬುಕೆತ್ತನೆಗಳಿದ್ದು, ಕಿರುಪಟ್ಟಿ ಶಾಸನಗಳೂ ಇವೆ. ಆದರೆ ತನ್ನ ಹುಟ್ಟೂರಾದ ಶ್ರೀವೈಷ್ಣವ ಅಗ್ರಹಾರ ನಾಗಮಂಗಲದಲ್ಲಿ ಇಂತಹ ಧಾರ್ಮಿಕ ಕಾರ್ಯಗಳನ್ನು ಇವನೇಕೆ ಕೈಗೊಳ್ಳಲಿಲ್ಲವೆಂಬ ಪ್ರಶ್ನೆಗೆ ಸದ್ಯದ ಮಟ್ಟಿಗೆ ಶಾಸನಾಧಾರಗಳ ಮೌನವೇ ಉತ್ತರವೆಂದು ತೋರುತ್ತದೆ. ಇವನು ತನ್ನ ತಂದೆಯ ಸ್ಮರಣಾರ್ಥ ಸಿಂಗರಸಿನಕೆರೆ, ತಾಯಿಯ ಹೆಸರಲ್ಲಿ ಅಮ್ಮನಕಟ್ಟೆ ಹಾಗು ಪ್ರೇಯಸಿಯ ನೆನಪಾಗಿ ವಿಶಾಲವಾದ ಸೂಳೆಕೆರೆಯನ್ನು ನಾಗಮಂಗಲದಲ್ಲಿ ನಿರ್ಮಿಸಿದನೆಂದು ಹೇಳಲಾಗುತ್ತದಾದರೂ ಇದನ್ನು ಸಮರ್ಥಿಸುವ ಸಾಕ್ಷ್ಯಾಧಾರಗಳಿಲ್ಲ. ಆದರೆ ನಾಗಮಂಗಲ ಪಟ್ಟಣದ ಸುತ್ತ ಕೆರೆಗಳಿರುವುದಂತೂ ಎಲ್ಲರೂ ಬಲ್ಲ ವಿಷಯ. ಮದ್ದೂರು ತಾಲ್ಲೂಕಿನ ರಾಂಪುರ೩೮ ಹಾಗು ಮಂಡ್ಯ ತಾಲ್ಲೂಕಿನ ಡಣಾಯಕನಪುರದ ಕ್ರಿ.ಶ. ೧೪೫೯ರ ಶಿಲಾಶಾಸನಗಳು,೩೯ ವಿಜಯನಗರದ ಅರಸ ಮಲ್ಲಿಕಾರ್ಜುನನ ಆಳ್ವಿಕೆಯಲ್ಲಿ ಮಹಾಪ್ರಧಾನ ತಿಮ್ಮಣ್ಣ ದಂಡನಾಯಕ ಪೆನುಕೊಂಡೆಯಲ್ಲಿ ರಾಜ್ಯಕಾರ್ಯವಾಗಿ ಆಳುತ್ತಿದ್ಧಾಗ, ಅವರ ನಿರೂಪದಂತೆ ಮಳಲಿಯ ತಿಪ್ಪಯ್ಯನು ಬೆಳತೂರ ರಾಮಯ್ಯ ದೇವರಿಗೆ ಬಸವಪಟ್ಟಣವನ್ನು ದಾನ ನೀಡಿದ್ದನ್ನು ದಾಖಲಿಸುತ್ತವೆ. ಆದರೆ ಇಲ್ಲಿಯ ಶಾಸನೋಕ್ತ ತಿಮ್ಮಣ್ಣ ದಂಡನಾಯಕ ತನ್ನನ್ನು ನಾಗಮಂಗಲದವನೆಂದು ಹೇಳಿಕೊಂಡಿಲ್ಲ.