ಈ ಪ್ರಕಾರ ತಿಮ್ಮಣ್ಣ ದಂಡನಾಯಕರನು ಧರ್ಮಾಭೀರುವಾಗಿದ್ದರೆ, ಅವನ ಸೋದರನಾದ ದೇವರಾಜನು, ಸಮಾಜಕಲ್ಯಾಣ ಕಾರ್ಯದಲ್ಲಿ ನಿಸ್ಸೀಮನಿದ್ದು, ಇವನಿಂದ ಕ್ರಿ.ಶ. ೧೪೬೭ರಲ್ಲಿ ನೀಡಲ್ಪಟ್ಟಿರುವ ಶಾಸನವು,೪೦ ಪಾಂಡವಪುರ ತಾಲ್ಲೂಕಿನ ಸೀತಾಪುರದಲ್ಲಿದೆ. ಈ ಶಾಸನದಲ್ಲಿರುವ ಎರಡು ತೇದಿಗಳಲ್ಲಿ ಮೊದಲ ತೇದಿಯಾದ ಕ್ರಿ.ಶ. ೧೪೫೫ರಲ್ಲಿ ನಾಗಮಂಗಲದ ಶಿಂಗಣ್ಣ ದೊರೆಯರ ಮಗನಾದ ದೇವರಾಜನು ತನ್ನ ತಾಯಿ ಸೀತಾಂಬಿಕೆಯ ಧರ್ಮಾರ್ಥವಾಗಿ ಹೊಸಹಳ್ಳಿಯನ್ನು ಶ್ರೀರಾಮ ಸೀತಾಪುರ ಅಗ್ರಹಾರವನ್ನಾಗಿಸಿ ೨೨ ಮಹಾಜನಗಳಿಗೆ ಧಾರೆಯನೆರೆದು ಕೊಟ್ಟಿದ್ದನ್ನು ದಾಖಲಿಸುತ್ತದೆ. ಇದೇ ೨೨ ಮಹಾಜನಗಳಿಗೆ, ಅದೇ ದೇವರಾಜನು ತಾನು ಕಾವೇರಿ ನದಿಗೆ ಹೊಸದಾಗಿ ಕಟ್ಟೆಯನ್ನು ಕಟ್ಟಿ, ಕಾಲುವೆಯನ್ನು ನಿರ್ಮಿಸಿ ನೀರನ್ನು ಹರಿಸಿದ್ದಕ್ಕೆ ಹರಿನ ಮಹಾಜನಗಳು, ಹೊಸಹಳ್ಳಿ ಗ್ರಾಮವನ್ನು ಅವನಿಗೆ ಶ್ರೋತ್ರಿಯಾಗಿ ನೀಡಿದರು. ಅದನ್ನು ೨೦೮ ವೃತ್ತಿಗಳನ್ನಾಗಿ ವಿಭಜಿಸಿ, ಅದರಲ್ಲಿ ೨೦೦ ವೃತ್ತಿಯನ್ನು ವಿವಿಧ ಗೋತ್ರದ ೨೬ ಬ್ರಾಹ್ಮಣೋತ್ತಮರಿಗೆ ಹಾಗೂ ಉಳಿದ ಎಂಟು ವೃತ್ತಿಗಳನ್ನು ಹರಹಿನ ಗ್ರಾಮಾಧಿದೇವತೆಯಾದ ಶ್ರೀರಾಮಚಂದ್ರ ದೇವರಿಗೆ ತನ್ನ ತಾಯಿ ಸೀತಾಂಬಿಕೆಯ ಹೆಸರಲ್ಲಿ ದಾನ ನೀಡಿದ್ದನ್ನು ತಿಳಿಸುತ್ತದೆ. ಅಲ್ಲದೆ ದಾನ ಪಡೆದ ಬ್ರಾಹ್ಮಣರಲ್ಲಿ ಲೋಹಿತ ಗೋತ್ರದ ಶಿಂಗಣ್ಣಗಳ ಕೃಷ್ಣಭಟ್ಟ ಹಾಗು ಲೋಹಿತ ಗೋತ್ರದ ಶ್ರೀರಂಗಭಟ್ಟರ ನರಸಿಂಹ ದೀಕ್ಷಿತರನ್ನೂ ಹೆಸರಿಸುತ್ತದೆ. ಮಿಗಿಲಾಗಿ ದಾನಿ ದೇವರಾಜನಿಗೆ ಚಿಕ್ಕಮಳಲಿ, ತೊಂಡನೂರು ಹಾಗು ಕೆಂದನಹಾಳು ಗ್ರಾಮಗಳಲ್ಲೂ ಸಾಕಷ್ಟು ಪ್ರಮಾಣದಲ್ಲಿ ಭೂಮಿ ಇದ್ದ ಅಂಶ ವೇದ್ಯವಾಗುತ್ತದೆ. ಈ ಶಾಸನದ ದಾನ ಭಾಗದಲ್ಲಿ ಹರಹಿನ ನಾಗಪಟ್ಟಣದ ಸೀಮೆ ಹಾಗೂ ನಾಗಪಟ್ಟಣದ ಜೋಗಿ ಬಂಡೆಯ ಉಲ್ಲೇಖಗಳಿದ್ದು, ಅದೇನೆಂದು ಕ್ಷೇತ್ರಕಾರ್ಯದ ಮೂಲಕ ಅರ್ಥೈಸಬೇಕಿದೆ.

ಹೊಯ್ಸಳ ಒಂದನೆಯ ನರಸಿಂಹನ (ಕ್ರಿ.ಶ. ೨೨೭೨-೭೩) ಆಡಳಿತಾವಧಿಗೆ ಸೇರಿದ ತೊಂಡನೂರಿನ ಶಾಸನದಿಂದ೪೧ ಕುರುವಂಕ ನಾಡಿನ ಹೊಳೆಯ ಸುಂಕಾದಾಯದಲ್ಲಿ ೬೪ ಗದ್ಯಾಣಗಳನ್ನು ಹರಹಿನ ಕಾಲುವೆಯ ವಾರ್ಷಿಕ ದುರಸ್ತಿ ಹಾಗು ನಿರ್ವಹಣೆಗಳಿಗೆಂದೇ ತೊಣ್ಣೂರಿನ ಮಹಾಜನರಿಗೆ ದತ್ತಿ ಬಿಟ್ಟಿದ್ದ ಅಂಶ ಗೊತ್ತಾಗುತ್ತದೆ. ಈ ಹಿನ್ನೆಲೆಯಲ್ಲಿ ಇಲ್ಲಿ ಉಕ್ತವಾಗಿರುವ ಹರಹಿನ ಕಾಲುವೆ ಹಾಗು ಕ್ರಿ.ಶ. ೧೪೬೭ರ ಸೀತಾಪುರ ಶಾಸನದಲ್ಲಿ ಉಕ್ತವಾಗಿರುವ ಹರಹಿನ ಕಾಲುವೆಗಳು ಬಗ್ಗೆ ಪುನರ ವಿವೇಚಿಸುವ ಅಗತ್ಯವಿದೆ. ಇವನು ನಾಗಮಂಗಲಕ್ಕೂ ಕಾವೇರಿ ನೀರನ್ನು ಇವನು ಹರಿಸಬೇಕೆಂದಿದ್ದನು ಎಂದು ಹೇಳಲಾಗುತ್ತದೆ. ಆದರೆ ಇದಕ್ಕೆ ಆಧಾರಗಳಿಲ್ಲ. ಸೀತಾಪುರದ ಈ ಶಾಸನದಲ್ಲಿ ನಾಗಮಂಗಲದ ಶಿಂಗಣ್ಣ ಒಡೆಯನಿಗಾಗಲಿ, ದೇವರಾಜನಿಗಾಗಲಿ ಏನೇನು ವಿಶೇಷಣಗಳಿಲ್ಲ. ಮಿಗಿಲಾಗಿ, ದೇವರಾಜನ ಹಿರಿಯ ಸೋದರ ತಿಮ್ಮಣ್ಣ ದಂಡನಾಯಕನ ಬಗ್ಗೆ ಪ್ರಸ್ತಾಪವೇ ಇಲ್ಲ. ಆದರೂ ತಾಯಿ ಸೀತಾಂಬಿಕೆಯ ಹೆಸರನ್ನು ದೇವರಾಜನ ಸೀತಾಪುರ ಶಾಸನ ಹಾಗು ತಿಮ್ಮಣ್ಣ ದಂಡನಾಯಕನ ಮೇಲುಕೋಟೆ, ನೆಲಮನೆ ಶಾಸನಗಳು ಪ್ರಸ್ತಾಪಿಸುವುದರಿಂದ ಇವರಿಬ್ಬರು ಸೋದರರೆಂಬ ಅಂಶ ಸ್ಪಷ್ಟವಾಗುತ್ತದೆಯಾದರೂ ವಿಜಯನಗರದ ಪ್ರಾಂತ್ಯಾಧಿಕಾರಿಗಳಾಗಿ ಇವರು ಸೇವೆಯಲ್ಲಿದ್ದರೆಂಬ ಅಂಶವನ್ನು ಪುನರ್ ಪರಿಶೀಲಿಸಬೇಕು. ಕರಾವಳಿ ಭಾಗದ ಬಹುಪಾಲು ಶಾಸನಗಳು ಇದೀಗ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಈ ಕಾರ್ಯವನ್ನು ಆದಷ್ಟು ಜಾಗ್ರತೆ ಕೈಗೊಳ್ಳುಬೇಕಿದೆ. ಈ ಹಿನ್ನೆಲೆಯಲ್ಲಿ “ನಾಗಮಂಗಲ ಪ್ರಭು / ನಾಗಮಂಗಲ ಮಹಾಪ್ರಭು ” ಎಂಬ ವಿಶೇಷಣವನ್ನು “ಅಗ್ರಹಾರ ನಾಗಮಂಗಲದ ಮಹಾಜನರ ಮುಖ್ಯಸ್ಥ ಎಂದಷ್ಟೇ ಸ್ವೀಕರಿಸುವುದು ಸೂಕ್ತವೆಂದು ತೋರುತ್ತದೆ. ಈ ನಿಟ್ಟಿನಲ್ಲಿ ಇನ್ನಷ್ಟು ಆಳವಾದ ಅಧ್ಯಯನ ನಡೆಸಿ ಮೇಲಿನ ಅಭಿಪ್ರಾಯವನ್ನು ಖಚಿತಪಡಿಸಿಕೊಳ್ಳಬೇಕಿದೆ.

ವಿಜಯನಗರದ ಅರಸ ಸಾಳುವ ನರಸಿಂಹನ ಆಳ್ವಿಕೆಗೆ ಸೇರಿದ ಕ್ರಿ.ಶ. ೧೪೭೨ರ ಉಂಬಳಿ ದೇವಲಾಪುರ ಶಾಸನ,೪೨ ಅರಸನು ಹಳ್ಳಿಕಾರ ಚಿಕ್ಕಾಲ್ಲಪನಾಯಕನಿಗೆ ಉಂಬಳಿ ನೀಡಿದ್ದ ದೇವಲಾಪುರದ ಲಕ್ಷ್ಮೀಕಾಂತ ಗುಡಿಗೆ ಬಾಗಿಲುವಾಡ ಹಾಗೂ ದೀಪಮಾಲೆಕಂಬಗಳನ್ನು ಮಾಡಿಸುವುದರ ಜೊತೆಗೆ ಗೋಪಿನಾಥ ದೇವರ ಸೇವೆಗೆಂದು, ದೇವಲಾಪುರದ ಹಿರಿಯಕೆರೆಯ ಕೆಳಗಣ ಗದ್ದೆಯನ್ನು ಶ್ರೀವೈಷ್ಣವರಾದ ಕೋನೇರಿಅಯ್ಯನವರಿಗೆ ದಾನ ನೀಡಿದ್ದನ್ನು ದಾಖಲಿಸುತ್ತದೆ. ನೆರೆಯ ಚುಂಚನಹಳ್ಳಿಯ ಕ್ರಿ.ಶ. ೧೪೮೪ರ ಶಾಸನ,೪೩ ಸಾಳುವ ನರಸಿಂಗರಾಜ ಒಡೆಯನ ಮನೆಯ ಪ್ರಧಾನ ವಿರೂಪಾಕ್ಷ ದೇವಣ್ಣನು ದತ್ತಿ ಬಿಟ್ಟಿದ್ದನ್ನು ದಾಖಲಿಸುತ್ತದೆ. ಈ ಶಾಸನಗಳು ನಾಗಮಂಗಲ ಪರಿಸರದಲ್ಲಿ ಲಭಿಸಿರುವ ಶಾಸನಗಳಾಗಿದ್ದರೂ, ಅವುಗಳಿಂದ ನಾಗಮಂಗಲದ ಬಗ್ಗೆ ಏನೇನೂ ಮಾಹಿತಿ ದೊರೆಯುವುದಿಲ್ಲ. ಆದರೆ ಸುಮಾರು ಕ್ರಿ.ಶ. ೧೮೦೭ರಲ್ಲಿ ಸಂಕಲನಗೊಂಡಿರುವ ನಾಗಮಂಗಲದ ಕೈಫಿಯತ್ತು,೪೪ ಸಾಳುವ ನರಸಿಂಹನ ಆಳ್ವಿಕೆಯಲ್ಲಿ ಅವನ ಅಧಿಕಾರಿಗಳಾಗಿದ್ದ ಹಂಪೆಯರಸ-ಚನ್ನರಸ ಸೋದರರು ನಾಗಮಂಗಲದ ಹಿರಿಯಕೆರೆ ಬಳಿ ಕೊಳವನ್ನು ನಿರ್ಮಿಸಿದರೆಂದು ದಾಖಲಿಸುತ್ತಾ, ಮುಂದೆ ಅವರನ್ನು ಶ್ರೀರಂಗಪಟ್ಟಣದಕ್ಕೆ ವರ್ಗಾಯಿಸಲಾಯಿತೆಂದು ಉಲ್ಲೇಖಿಸುತ್ತದೆ. ಆದರೆ, ಇದನ್ನು ಪುಷ್ಠೀಕರಿಸಲು ಪೂರಕ ದಾಖಲೆಗಳ ಅಗತ್ಯವಿದೆ.

ಮುಂದೆ ಸಾಳುವರ ನಂತರ, ವಿಜಯನಗರದಲ್ಲಿ ಅಧಿಕಾರಕ್ಕೆ ಬಂದ ತುಳುವರಲ್ಲೇ ಖ್ಯಾತನಾದ ಕೃಷ್ಣದೇವರಾಯನ ಶಾಸನಗಳಿಂದ ನಾಗಮಂಗಲವು ಒಂದು ಪ್ರಾಂತ್ಯವಾಗಿ ರೂಪುಗೊಂಡು “ನಾಗಮಂಗಲ ರಾಜ್ಯ” ಎಂದೇ ಖ್ಯಾತಿ ಪಡೆದಿದ್ದ ಅಂಶ ವೇದ್ಯವಾಗುತ್ತದೆ. ಅದರಲ್ಲೂ ಕೃಷ್ಣರಾಯನ ಆಳ್ವಿಕೆಯ ಎರಡನೆಯ ವರ್ಷದಲ್ಲಿ ನೀಡಲ್ಪಟ್ಟಿರುವ ದೊಡ್ಡಮಾಲೂರು೪೫ (ಕುಣಿಗಲ್ ತಾ.), ಮಂಚನಬೇಳೆ೪೬ (ಚಿಕ್ಕಬಳ್ಳಾಪುರ ತಾ.), ಅಗಳಿ೪೭ (ಮಡಕಶಿರಾ ತಾ.), ರಾಮೇಶ್ವರ,೪೮ ಮುಂತಾದೆಡೆಯಲ್ಲಿ ಲಭಿಸಿರುವ ಶಾಸನಗಳು ಮಂತ್ರ ಸಾಳುವ ತಿಮ್ಮರಸ ಮತ್ತಿತರ ಕೋರಿಕೆಯಂತೆ ಕೃಷ್ಣರಾಯನು ಗೊಲ್ಲ ಜನಾಂಗದ ವಧು-ವರ ಹಾಗೂ ಇತರ ಜಾತಿಯ ವಧುದರೆಯನ್ನು ಮನ್ನಾ ಮಾಡಿದ ಅಂಶವನ್ನು ದಾಖಲಿಸುತ್ತವೆ. ಆ ರಿಯಾಯತಿಯ ನಾಗಮಂಗಲದ ರಾಜ್ಯಕ್ಕೂ ಅನ್ವಯಿಸಿರುವ ಅಂಶವನ್ನು ಸೂಚಿಸುತ್ತವೆ. ಈ ಶಾಸನಗಳಲ್ಲಿ ನಾಗಮಂಗಲವು ಒಂದು ಸೀಮೆ / ಪ್ರಾಂತ್ಯ / ರಾಜ್ಯದ ಆಡಳಿತ ಕೇಂದ್ರವಾಗಿ ಅಸ್ತಿತ್ವಕ್ಕೆ ಬಂದುದನ್ನು ಸೂಚಿಸುತ್ತವೆಯಾದರೂ, ನಾಗಮಂಗಲ ರಾಜ್ಯದ ಪ್ರಾಂತ್ಯಾಧಿಕಾರಿಂದ ಉಲ್ಲೇಖವಿಲ್ಲ. ನಾಗಮಂಗಲದ ವೀರಭದ್ರಗುಡಿಯ ನವರಂಗ ಮಂಟಪದ ದ್ವಾರದ ಬಲಭಾಗದಲ್ಲಿರುವ ಕ್ರಿ.ಶ. ೧೫೧೧ರ ಶಾಸನ,೪೯ ಕೃಷ್ಣದೇವರಾಯನ ಅರಮನೆಯ ಬೇಹಾರಿಯಾಗಿದ್ದ ಗುಮ್ಮಳಾಪುರದ ಅಕ್ಕನ ಚನಿನಸೆಟ್ಟಿಯ ಮಗನಾದ ಹೊನ್ನಿಸೆಟ್ಟಿಯು ಅನಾದಿ ಅಗ್ರಹಾರ ಶ್ರೀ ವೀರಬಲ್ಲಾಳ ಚತುರ್ವೇದಿ ಭಟ್ಟರತ್ನಾಕರವಾದ ನಾಗಮಂಗಲ ವೀರಭದ್ರದೇವರ ಗುಡಿಯ ರಂಗಮಂಟಪದ ಮುಂದಣ ಗಂಧ ಗೋಡಿ ಮಂಟಪವನ್ನು ಮಾಡಿಸಿ, ವೀರಭದ್ರದೇವರ ಪಾದಕ್ಕೆ ಸಮರ್ಪಿಸಿದ ಅಂಶವನ್ನು ತಿಳಿಸುತ್ತವೆ. ಇದರಿಂದ ಆ ವೇಳೆಗಾಗಲೇ, ವೀರಭದ್ರನ ಗುಡಿಯ ಅಸ್ಥಿತ್ವಕ್ಕೆ ಬಂದು ವೀರಶೈವರೂ ನಾಗಮಂಗಲದಲ್ಲಿ ನೆಲೆಯೂರಿದ್ದ ಅಂಶ ವೇದ್ಯವಾಗುತ್ತವೆ. ಇದೇ ತಾಲ್ಲೂಕಿನ ದೊಂದೇ ಮಾದಿಹಳ್ಳಿಯ ಕ್ರಿ.ಶ. ೧೫೨೧ರ ಶಾಸನ,೫೦ ನಾಗಮಂಗಲ ಅಗ್ರಹಾರದ ಮಹಾಜನಗಳು ಆಲೂರ ವಿಠಣ್ಣನವರಿಗೆ ಕೆರೆಯನ್ನು ಕಟ್ಟಲು ಅನುಮತಿ ನೀಡಿ ಕೆರೆಕೊಡುಗೆಯಾಗಿ, ನೀರಾವರಿಗೆ ಒಳಪಡುವ ಅಚ್ಚಕಟ್ಟು ಪ್ರದೇಶದಲ್ಲಿ ನಾಲ್ಕು ಭಾಗವನ್ನು ಸರ್ವಮಾನ್ಯವಾಗಿ ನೀಡಿದ್ದನ್ನು ದಾಖಲಿಸುತ್ತದೆ. ಈ ಶಾಸನವನ್ನು ಬರೆದ ಸೇನಬೋವ ರಂಗದೇವನ್ನು ಹೆಸರಿಸುತ್ತದೆ.

ವೀರಭದ್ರೇಶ್ವರ ಗುಡಿಯ ನವರಂಗದ ಎಡಭಾಗದಲ್ಲಿರುವ ಕ್ರಿ.ಶ. ೧೫೪೯ರ ಇನ್ನೊಂದು ಶಾಸನ,೫೧ ಭಟ್ಟರತ್ನಾಕರವಾದ ನಾಗಮಂಗಲದ ಮಹಾಜನಗಳು ಊರ ವೀರಭದ್ರದ ದೇವರ ಸೇವೆಗೆಂದು ಈ ಹಿಂದೆ, ಅಳಿ-ಬಲಿ ತೆರಿಗೆಯ ಮೊದಲ (ಐದು ಪಣವನ್ನು ನೀಡಿದ್ದು, ಅದು ಸಾಲದೆನಿಸಿದ್ದರಿಂದ ಅಳಿ-ಬಳಿ ತೆರಿಗೆ ಮೂಲದಿಂದ ಬರುತ್ತಿದ್ದ ಉಳಿದ ಆದಾಯವನ್ನು ಬೋಕಿಸೆಟ್ಟಿ ನೀಡಿದ್ದು, ಸೇನಬೋವ ಕಾವಣ್ಣನು ಶಾಸನ ಬರೆದನೆಂದು ಅದು ತಿಳಿಸುತ್ತದೆ. ಮೇಲಿನ ಶಾಸನದಿಂದ ನಾಗಮಂಗಲವು ಕ್ರಿ.ಶ. ೧೬ನೆಯ ಶತಮಾನದ ಮಧ್ಯದವರೆಗೂ ಅಗ್ರಹಾರವಾಗಿ ಮುಂದುವರಿದ ಅಂಶ ವೇದ್ಯವಾಗುತ್ತದೆ. ಅಲ್ಲದೆ, ಅಂದಿನ ದಿನಗಳಲ್ಲಿ ಅಗ್ರಹಾರಗಳು ಹೊಂದಿದ್ದ ಆಂತರಿಕ ಸ್ವಾತಂತ್ತ್ಯದ ಬಗ್ಗೆ ಬೆಳಕು ಚೆಲ್ಲುವಲ್ಲಿ ಈ ಶಾಸನಗಳು ನೆರವಾಗುತ್ತವೆ.

ಚನ್ನಪಟ್ಟಣದ ಪಾಳೆಯಗಾರನಾದ ಜಗದೇವರಾಯ ಒಡೆಯನು ಪೆನುಗೊಂಡೆಯ ರಕ್ಷಣೆಗಾಗಿ ತೋರಿದ ಶೌರ್ಯ ಸಾಹಸಗಳಿಗಾಗಿ ಅವನಿಗೆ ನಾಗಮಂಗಲ ತಾಲ್ಲೂಕಿನ ಹೊನ್ನಾವರದ ಕ್ರಿ.ಶ. ೧೫೬೩ರ ಶಾಸನ,೫೨ ಸದಾಶಿವರಾಯ, ರಾಜರಾಜ ಒಡೆಯರನ್ನು ಉಲ್ಲೇಖಿಸುತ್ತಾ. ಜಗದೇವರಾಯನ ಕಾರ್ಯಕರ್ತನಾಗಿದ್ದ ಆಲುಲಮಲ್ಲಕ ಒಡೆಯರ (ಐನ್.ಉಲ್.ಮುಲ್ಕ್) ಶ್ರೋಯೋಭಿವೃದ್ಧಿಗಾಗಿ ಚಮ್ಮೋಜಿ ಪಂಡಿತರು, ಲಕ್ಷ್ಮೀಕಾಂತದೇವರ ಸೇವೆಗೆಂದು ಮಾದಿಹಳ್ಳಿ ಗ್ರಾಮವನ್ನು ದತ್ತಿ ನೀಡಿದ್ದನ್ನು ದಾಖಲಿಸಿವೆ. ಕಾರಬೈನಲಿನಿಂದ ವರದಿಯಾಗಿರುವ ಸುಮಾರು ಇದೇ ಕಾಲಕ್ಕೆ ಗುರುತಿಸಬಹುದಾದ ಇನ್ನೊಂದು ಶಾಸನ೫೩, ಸದಾಶಿವರಾಯನ ಆಳ್ವಿಕೆಯಲ್ಲಿ ಜಗದೇವರಾಯನು, ತಳವಾರ ದಾಸಪ್ಪನಾಯಕನ ಮಗ ಚಿಕ್ಕರಸನಾಯಕನಿಗೆ ಕಾರಬಯಲು ಗ್ರಾಮವನ್ನು ಬಾಡಿಗೆ ಉಂಬಳಿಯಾಗಿ ದಾನ ನೀಡಿದ ಅಂಶವನ್ನು ತಿಳಿಸುತ್ತದೆ. ನಾಗಮಂಗಲ ಪಟ್ಟಣದ ಹೊರಕೋಟೆಯನ್ನು ಜಗದೇವರಾಯನು ಸುಮಾರು ಕ್ರಿ.ಶ. ೧೫೭೮ರಲ್ಲಿ ನಿರ್ಮಿಸಿದನೆಂಬ ಅಭಿಪ್ರಾಯವಿದ್ದು, ಇವನು ತಿಮ್ಮಣ್ಣ ದಂಡನಾಯಕನ ಮಗನೆಂದು ಚಿತ್ರಿಸಲಾಗಿದೆ. ಆದರೆ ಇದನ್ನು ಪುಷ್ಠೀಕರಿಸಲು ಪೂರಕ ಆಕರವನ್ನು ಶೋಧಿಸಬೇಕಾಗಿದೆ. ಜಗದೇವರಾಯನ ಅರಮನೆ ನಾಗಮಂಗಲದ ಪಟ್ಟಣದಲ್ಲಿ ಇಂದು ಒಕ್ಕಲಿಗರ ಕಲ್ಯಾಣ ಮಂಟಪವಿರುವ ಸ್ಥಳದಲ್ಲಿದ್ದು, ಸೌಮ್ಯಕೇಶವ ಗುಡಿಯ ಹಿಂಭಾಗದ ದ್ವಾರವನ್ನು ( ಪಶ್ಚಿಮ) ರಾಜರು ಬಳಸುತ್ತಿದ್ದ ದ್ವಾರ ಎಂಬ ಹೇಳಿಕೆಯಿದೆ, ಕೇಶವ ಗುಡಿ ಮುಂದಣ ಗರುಡಗಂಬ ಹಾಗು ನಾಗಶಿಲ್ಪಗಳು ಇವನಿಂದ ಪ್ರತಿಷ್ಠಾಪನೆಗೊಂಡವೆಂದು ಹೇಳಲಾಗುತ್ತದೆ. ಮುತ್ತಗೆರೆಯ ಕ್ರಿ.ಶ. ೧೬೩೩ರ ಕೂಟ ಶಾಸನ,೫೪ ಜಗದೇವರಾಯನ್ನನು ಉಲ್ಲೇಖಿಸುತ್ತಾ ನಾಗಮಂಗಲದ ಸ್ಥಳದ ಮುತ್ತಿಗೆರೆ ಗ್ರಾಮವನ್ನು ದತ್ತಿ ನೀಡಿದ್ದನ್ನು ತಿಳಿಸುತ್ತದೆ. ಇದೇ ತೇದಿಯಲ್ಲಿ ನೀಡಲ್ಪಟ್ಟಿರುವ ತಿಬ್ಬನಹಳ್ಳಿಯ ಶಾಸನ೫೫ ರಾಣಾ ಪೆದ್ದ ಜಗದೇವರಾಯನನ್ನು ಉಲ್ಲೇಖಿಸುತ್ತಾ ನಾಗಮಂಗಲದ ಸ್ಥಳವನ್ನು ಹೆಸರಿಸುತ್ತದೆ.

ನಾಗಮಂಗಲವನ್ನು ವಶಪಡಿಸಿಕೊಳ್ಳಲು ಚಾಮರಾಜ ಒಡೆಯರ ಪರವಾಗಿ ದಳವಾಯಿ ಬೆಟ್ಟದರಸು ನಾಗಮಂಗಲದ ಪಾಳೆಯಗಾರ ಚೆನ್ನಯ್ಯನ ಅಣ್ಣ ದೊಡ್ಡಯ್ಯನ ವಿರುದ್ಧ ಹೊನ್ನೆಮಡುವಿನ ಬಳಿ ಯುದ್ಧ ಮಾಡುತ್ತಾನೆ. ಈ ಯುದ್ಧದಲ್ಲಿ ದೊಡ್ಡಯ್ಯನು ನಿಧನ ಹೊಂದಿದನು.೫೬ ಮುಂದುವರಿದ ದಾಳಿಯಲ್ಲಿ ಜಗದೇವ ರಾಯನ ಸೋದರ ಮತ್ತು ಪ್ರಧಾನಿ ಅಂಕುಶರಾಯನು ಬೆಟ್ಟದರಸನನ್ನು ಎದುರಿಸಿ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾದನಾದರೂ, ಕ್ರಿ.ಶ. ೧೬೩೬ರಲ್ಲಿ ನಡೆದ ಕದನದಲ್ಲಿ ಜಗದೇವರಾಯನು ಸೋತು ನಾಗಮಂಗಲವು ಮೈಸೂರು ಅರಸರ ಕೈವಶವಾಯಿತು. ನಾಗಮಂಗಲದ ಒಂದು ಶಾಸನ ಅಂಕುಶರಾಯನನ್ನು ಉಲ್ಲೇಖಿಸುತ್ತದೆ.೫೭ ನಾಗಮಂಗಲವನ್ನು ವೀರಾಂಬುಧಿ ಊರು ಎಂದು ದಾಖಲಿಸಿರುವುದು ಉಲ್ಲೇಖಾರ್ಹ. ಬಿಜಾಪುರದ ರಣದುಲ್ಲಾಖಾನನು ಕ್ರಿ.ಶ. ೧೬೩೮-೩೯ರಲ್ಲಿ ಶ್ರೀರಂಗಪಟ್ಟಣಕ್ಕೆ ಮುತ್ತಿಗೆ ಹಾಕಿದನು. ಆಗ ಮೂಗುಕುಯ್ಸಿಕೊಂಡ ಬಿಜಾಪುರದ ಸೈನಿಕರಲ್ಲಿ, ನಾಗಮಂಗಲದಲ್ಲೂ ಸುಮಾರು ೨೦೦೦ ಸೈನಿಕರು ಮೂಗು ಕಳೆದುಕೊಂಡರೆಂದು ’ಕಂಠೀರವನರಸರಾಜ ವಿಜಯ’ದಲ್ಲಿ ಗೋವಿಂದ ವೈದ್ಯನು ಉಲ್ಲೇಖಿಸಿರುವನೆಂದು ತಿಳಿದುಬರುತ್ತದೆ.

ನೆರೆಯ ಸೋಮನಹಳ್ಳಿಯ ಪಾಳೆಯಗಾರ ಬೊಮ್ಮನಾಯಕನ ಮಗಳಾದ ಸೋಮನಾಯಕಿಯನ್ನು ನಾಗಮಂಗಲದ ಪಾಳೆಯಗಾರನಿಗೆ ಕೊಟ್ಟು ವಿವಾಹ ಮಾಡಿಕೊಡಲಾಗಿತ್ತು. ಆದರೆ ಸೋಮನಹಳ್ಳಿ ಸೇನಾನಿ ತಿಮ್ಮನಾಯಕನ ಮಗ ಹಿಮ್ಮಡಿದಾಸನು ದುರಾಸೆಯಿಂದ ಸೋಮನಾಯಕಿಯನ್ನು ಅಪಹರಿಸಿದನಾದರೂ, ಅದೇ ಅವನ ಅವನತಿಗೂ ಕಾರಣವಾಯಿತು ಎಂಬ ಅಭ್ರಿಪ್ರಾಯವಿದೆ.೫೮ ಆದರೆ ಈ ಅಂಶವನ್ನು ಪುಷ್ಠೀಕರಿಸಲು ಪುರಾವೆಗಳು ದೊರೆಯಬೇಕಿದ್ದು, ಪ್ರಸ್ತುತ ಇದಕ್ಕೆ ಮೌಖಿಕ ಪರಂಪರೆಯೇ ಆಧಾರವಾಗಿದೆ. ಆದರೆ ಹಿಂದೆ ಅಲ್ಲಿ ಇದ್ದಿರಬಹುದಾದ ಸ್ಥಳೀಯ ಪಾಳೆಯಗಾರರ ಬಗ್ಗೆ ಸುಳಿವು ನೀಡುತ್ತಿದ್ದು, ಇದನ್ನು ಇನ್ನಷ್ಟು ಸಂಶೋಧಿಸುವ ಅಗತ್ಯವಿದೆ.

ಮಾಳಗೂರಿನ ಕ್ರಿ.ಶ. ೧೬೬೫ ಶಾಸನ,೫೯ ನಾಗಮಂಗಲ ಹೋಬಳೀಯೊಳಗಣ ಬಾಚಹಳ್ಳಿ ಸ್ಥಳಕ್ಕೆ ಸೇರಿದ್ದ ಮಾಲಗೂರನ್ನು ದೇವದಾನವಾಗಿ ನೀಡಿದ್ದನ್ನು ದಾಖಲಿಸುತ್ತದೆ. ತಲಕಾಡಿನ ಕ್ರಿ.ಶ. ೧೬೬೩ರ ಶಾಸನ,೬೦ ನಾಗಮಂಗಲ ಪತ್ತನ (ಪಟ್ಟಣ) ಸ್ಥಳದ ಹಳ್ಳಿಕೆರೆ ಗ್ರಾಮವನ್ನು ದಾನ ನೀಡಿದ್ದನ್ನು ತಿಳಿಸಿದರೆ, ಮೈಸೂರಿನ ಕ್ರಿ.ಶ. ೧೬೭೪ರ ತಾಮ್ರಶಾಸನ, ೬೧ ನಾಗಮಂಗಲದ ನಾರಾಯಣ ಭಾಗವತನು, ಬ್ರಹ್ಮದೇಯ ಪಡೆದ ಬ್ರಾಹ್ಮಣರಲ್ಲೊಬ್ಬನಾಗಿದ್ದ ಅಂಶವನ್ನು ತಿಳಿಸುತ್ತದೆ. ಇವು ನಾಗಮಂಗಲದ ಬಗ್ಗೆ ಹೊರಗಿನಿಂದ ಬೆಳಕನ್ನು ಚೆಲ್ಲುವ ಆಕರಗಳಾಗಿವೆ.

ಮಂಡ್ಯ ಜಿಲ್ಲೆ ಮುದಗಂದೂರಿನ ಕ್ರಿ.ಶ. ೧೭೬೦ರ ತಾಮ್ರಶಾಸನ,೬೨, ಇಮ್ಮಡಿ ಕೃಷ್ಣರಾಜವಡೆಯರ ಆಳ್ವಿಕೆಯಲ್ಲಿ ಪಟ್ಟಣ ಹೋಬಳಿಯ ವಿಚಾರದ ಚಾವಡಿಗೆ ಸೇರಿದ ನಾಗಮಂಗಲ ಸ್ಥಳದ ನಿಯಂತ್ರಣಕ್ಕೊಳಪಟ್ಟಿದ್ದ, ೨೧೧ ವರಾಹ ೨ ಹಣ ಹುಟ್ಟುವಳಿ ಕಂದಾಯದ ಕಲಿದೇವನಹಳ್ಳಿ, ಮತ್ತದರ ಉಪಗ್ರಾಮ ಹೊನ್ನೂರುಗಳನ್ನು ೨೧೧೭  ವರಾಹಗಳಿಗೆ ಕೃಷ್ಣಯ್ಯ ಹಾಗೂ ಗೋವಿಂದಯ್ಯರಿಗೆ ವಿಕ್ರಯಿಸಿದ್ದನ್ನು ತಿಳಿಸುತ್ತದೆ. ಆ ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದ ಮೈಸೂರು ಸಂಸ್ಥಾನದಲ್ಲಿ ಹೈದರಾಲಿಯು ಮೇಲುಗೈ ಸಾಧಿಸಿದ್ದು, ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲೆಂದು ಕಂದಾಯ ಗ್ರಾಮಗಳನ್ನು ಸಂಸ್ಥಾನದ ವಿವಿಧೆಡೆ ವಿಕ್ರಯಿಸಿರುವ ಅಂಶವನ್ನು ಅನೇಕ ಶಾಸನಗಳು ದಾಖಲಿಸಿದ್ದು, ಈ ಶಾಸನವೂ ಅದಕ್ಕೆ ನಿದರ್ಶನವಾಗಿದೆ. ಮೈಸೂರು ಸಂಸ್ಥಾನವು ಕ್ರಿ.ಶ. ೧೭೬೦ರಲ್ಲಿ ಮರಾಠ ದಾಳಿಯನ್ನು ಎದುರಿಸಬೇಕಾಗಿತ್ತು. ಆಗ ಮರಾಠ ಬಾಲಾಜಿರಾಯನು ಕಪ್ಪ ಮತ್ತು ಯುದ್ಧ ದಂಡಕ್ಕಾಗಿ ತಗಾದೆ ಮಾಡಿದಾಗ, ಇಮ್ಮಡಿ ಕೃಷ್ಣರಾಯನು ಒತ್ತೆ ಇಟ್ಟ ಭಾಗಗಳಲ್ಲಿ ಬೆಳ್ಳೂರು, ನಾಗಮಂಗಲದ ಪ್ರದೇಶಗಳೂ ಸೇರಿದ್ದು, ಮರಾಠರು ಈ ಭಾಗದಲ್ಲೂ ತೆರಿಗೆ ಸಂಗ್ರಹ ಮಾಡುತ್ತಿದ್ದರೆಂದು ತಿಳಿದುಬರುತ್ತದೆ.

ಮುಂದೆ ಮರಾಠ ಸೇನೆಯು ಕ್ರಿ.ಶ. ೧೭೯೨ರಲ್ಲಿ ಸಂಸ್ಥಾನದ ಮೇಲೆ ದಾಳಿ ಮಾಡಿದಾಗ, ಈ ಪಟ್ಟಣವೂ (ನಾಗಮಂಗಲ) ಅವರ ದಾಳಿಗೆ ಸಿಲುಕಿ ನಾಶವಾಯಿತು. ಆ ಸಂದರ್ಭದಲ್ಲಿ ಸುಮಾರು ಒಂದೂವರೆ ಲಕ್ಷ ತಾಳೆಮರಗಳನ್ನು ನಾಶಮಾಡಲಾಯಿತೆಂದು ತಿಳಿದುಬರುತ್ತದೆ.೬೩

ಹದಿನೆಂಟನೆಯ ಶತಮಾನದ ಅಂತ್ಯದಲ್ಲಿ ಬ್ರಿಟಿಷರೊಂದಿಗೆ ಜರುಗಿದ ನಿರ್ಣಾಯಕವಾದ ನಾಲ್ಕನೆಯ ಆಂಗ್ಲೋ-ಮೈಸೂರು ಯುದ್ಧದಲ್ಲಿ (ಕ್ರಿ.ಶ. ೧೭೯೯) ಟಿಪ್ಪು, ಬ್ರಿಟಿಷರ ಕೈಲಿ ಸೋತು ಮರಣ ಹೊಂದಿದನು. ಇದರ ಬೆನ್ನಲ್ಲೇ ಕ್ರಿ.ಶ. ೧೮೦೦ರಲ್ಲಿ ಮದ್ರಾಸ್ ಪ್ರಾಂತ್ಯದ ಬ್ರಿಟಿಷ್ ಅಧಿಕಾರಿಯು ಫ್ರಾನ್ಸಿಸ್ ಬುಕಾನನ್ ಎಂಬುವನ್ನು, ಟಿಪ್ಪು ಆಳ್ವಿಕೆಗೆ ಒಳಪಟ್ಟಿದ್ದ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡು,೬೪ ಸಾಮಾಜಿಕ-ಆರ್ಥಿಕ ಸ್ಥಿತಿಗತಿಗಳ ಬಗ್ಗೆ ವರದಿಯನ್ನು ಸಲ್ಲಿಸಲು ಸೂಚಿಸಿ ಕಳುಹಿಸಿದನು. ಆ ಪ್ರಕಾರ ಬುಕಾನನ್ ಕ್ರಿ.ಶ. ೧೮೦೦-೦೧ ಅವಧಿಯಲ್ಲಿ ಮೈಸೂರು ಸಂಸ್ಥಾನ, ಮಲಬಾರ‍್ ಮತ್ತು ಮದ್ರಾಸ್ ಪ್ರಾಂತ್ಯಗಳಲ್ಲಿ ಸಂಚರಿಸಿ, ಅರ್ಥಪೂರ್ಣವಾದ ವರದಿಯನ್ನು ಸಿದ್ಧಪಡಿಸಿ ಮದ್ರಾಸ್ ಸರ್ಕಾರಕ್ಕೆ ಸಲ್ಲಿಸಿದನು. ಅದು ಕ್ರಿ.ಶ. ೧೮೦೭ರಲ್ಲಿ ಪ್ರಕಟಗೊಂಡಿತು.

ಈ ಪ್ರವಾಸ ಸಂದರ್ಭದಲ್ಲಿ ಬೆಳ್ಳೂರಿನಿಂದ ನಾಗಮಂಗಲಕ್ಕೆ ದಿನಾಂಕ ೨೭-೮-೧೮೦೦ ರಂದು ಭೇಟಿ ನೀಡಿದ ಬುಕಾನನ್, ಪಟ್ಟಣ ರಾಮಸದೆ ತಾಲ್ಲೂಕು ನಾಗಮಂಗಲದಲ್ಲಿ ೪೨೬೮ ಕುಟುಂಬಗಳಿದ್ದು, ೪೮೮೨ ಜನರು ವಾಸಿಸುತ್ತಿದ್ದು, ೨೯೬೩ ತೆಂಗಿನ ಮರಗಳಿದ್ದವೆಂದು ನಾಗಮಂಗಲಕ್ಕೆ ಸಂಬಂಧಿಸಿದಂತೆ ಖಾನೆ ಸುಮಾರಿ ವಿವರವನ್ನು ನೀಡಿದ್ದಾನೆ. ಬೆಳ್ಳೂರಿನಿಂದ ಮೂರು ಕೋರ್ಸ್ ದೂರದಲ್ಲಿದ್ದ ನಾಗಮಂಗಲವು ಬಂಜರು ಬಿದ್ದಿದ್ದು ಅತ್ಯಲ್ಪ ಭೂಮಿ ಬೇಸಾಯಗೊಂಡಿದ್ದು, ಬಹಳ ಚಿಕ್ಕ ಗ್ರಾಮವಾಗಿದ್ದು, ಕ್ರಿ.ಶ. ೧೭೯೨ರ ಮರಾಠ ದಾಳಿಯಿಂದಾಗಿ ಪಾಳುಬಿದ್ದ ಕುಗ್ರಾಮವಾಗಿತ್ತೆಂದು ಹೇಳುತ್ತಾನೆ. ಈ ಪಟ್ಟಣಕ್ಕೆ ಚೌಕಾಕಾರದ ಮಣ್ಣಿನ ಕೋಟೆ ಇದ್ದು, ನಡುಮಧ್ಯದಲ್ಲಿ ಚಿಕ್ಕನಾಯಕನಹಳ್ಳಿಯಲ್ಲಿರುವಂತೆ, ಚೌಕಾಕಾರದ ಬತೇರಿ ಇತ್ತೆಂದು ಹೇಳುತ್ತಾ ಪಟ್ಟಣದ ಮುಖ್ಯ ದಾರಿಯ ಇಕ್ಕೆಲದಲ್ಲಿ ಕಿರುಬೀದಿಗಳಿದ್ದು, ಒಳಕೋಟೆ ಭಾಗದಲ್ಲಿ ಎರಡು ದೊಡ್ಡ ದೇವಾಲಯಗಳೂ ಸೇರಿದಂತೆ ಇತರೆ ಧಾರ್ಮಿಕ ಸೇವೆಗಳು ಸುಸ್ಥಿತಿಯಲ್ಲಿದ್ದು, ಧಾನ್ಯ ಸಂಗ್ರಹ ಕೋಠಿಗಳೂ ಇವೆ. ಈ ಕೋಠಿಗಳನ್ನು ಜಗದೇವರಾಯನು ನಿರ್ಮಿಸಿದ್ದ. ಅವನು ವಾಸಿಸುತ್ತಿದ್ದ ಅರಮನೆ, ಮಹಲ್ ಹಾಗೂ ಕಛೇರಿ ಕಟ್ಟಡಗಳಿಂದು ಶಿಥಿಲಾವಸ್ಥೆಯಲ್ಲಿವೆ ಎಂದೂ ಹೇಳುತ್ತಾನೆ. ಅಲ್ಲದೆ, ಕ್ರಿ.ಶ. ೧೭೯೨ರಲ್ಲಿ ಪರಶುರಾಮಭಾವೆಯ ದಾಳಿಗೆ ಸಿಲುಕಿದ ಈ ಪಟ್ಟಣದ ಜನೆಗಳ ಸಂಖ್ಯೆ ೧೫೦೦ ರಿಂದ ೭೦೦ಕ್ಕೆ ಇಳಿದು, ಇತ್ತೀಚಿಗೆ ೪೦ ಮನೆಗಳನ್ನು ನೂತನವಾಗಿ ನಿರ್ಮಿಸಲಾಗಿದ್ದು, ಊರಲ್ಲಿ ಮೂರು ಕೆರೆಗಳಿದ್ದರೂ, ನಾಲ್ಕು ವರ್ಷಗಳಿಂದ ಮಳೆ ಆಗಿಲ್ಲದಿರುವ ಅಂಶವನ್ನು ತಿಳಿಸುತ್ತಾ, ಕೆರೆ ಬರಿದಾಗಿರುವುದನ್ನೂ ದಾಖಲಿಸಿದ್ಧಾನೆ. ನಾಗಮಂಗಲದ ಹೆಚ್ಚಿನ ನಿವಾಸಿಗಳು ತಿಗುಳರಾಗಿದ್ದು, ತಾಯಿಕುಲದವರಾಗಿದ್ದು, ತಮಿಳು ಮಾತನಾಡುತ್ತಿದ್ದರೆಂದು ತಿಳಿಸುತ್ತಾನೆ. ರೈತರು, ಗೌಡವೊಕ್ಕಲಿಗರು ಹಾಗು ಜಾಗೀರುದಾರರು ಇಲ್ಲಿ ವಾಸಿಸುತ್ತಿದ್ದು, ಪಟ್ಟಣದ ಪಶ್ಚಿಮಕ್ಕೆ ಬಳಪದ ಕಲ್ಲಿನ ಬೆಟ್ಟವಿತ್ತೆಂದು ದಾಖಲಿಸುತ್ತಾನೆ. ಅಂದು ರಾತ್ರಿ ನಾಗಮಂಗಲದಲ್ಲಿ ತಂಗಿದ್ದ ಬುಕಾನನ್ ದಿನಾಂಕ ೨೮-೦೮-೧೮೦೦ ರಂದು ಮುಂಜಾನೆ ಇದರಿಂದ ಕಡೆಗೆ ಪಯಣ ಮುಂದುವರಿಸಿದನೆಂದು ತಿಳಿದುಬರುತ್ತದೆ. ಇದರಿಂದ ಕ್ರಿ.ಶ. ೧೮೦೦ ರಲ್ಲಿ ನಾಗಮಂಗಲ ಹೇಗಿತ್ತೆಂದು ಕಲ್ಪಿಸಿಕೊಳ್ಳಬಹುದಾಗಿದೆ.

ನಾಗಮಂಗದ ಸರ್ಕಾರಿ ಶಾಲೆಯ ಮೆಟ್ಟಿಲ ಬಳಿಯಿರುವ ಕ್ರಿ.ಶ. ೧೮೪೫ರ ಶಾಸನ,೬೫ ಪಟ್ಟಣದ ಕಮ್ಮಗಾರರ ಸಂತತಿಯನ್ನು ಹೇಳುತ್ತಾ, ಕಾಳಿಕಾ ದೇವಿಯ ಸೇವೆಗೆಂದು ಗೋಪುರ, ವಿಮಾನಗಳನ್ನು ಜೀರ್ಣೋದ್ಧಾರ ಮಾಡಿ, ದೇವರ ಪ್ರಭಾವಳಿ, ಬಾಗಿಲವಾಡ, ಚಿನ್ನಬೆಳ್ಳಿಯ ಆಭರಣಗಳನ್ನು ಸ್ವಯಾರ್ಜಿತವಾಗಿ ನೀಡಿದ್ದನ್ನು ದಾಖಲಿಸಿವೆ. ಈ ವಂಶಕ್ಕೆ ಸೇರಿದ ಅಕ್ಕಸಾಲೆ ಕುಟುಂಬಗಳನ್ನು ಇಂದಿಗೂ ನಾಗಮಂಗಲ ಪಟ್ಟಣದಲ್ಲಿ ನೋಡಬಹುದಾಗಿದೆ. ಇಂದಿಗೂ ನಾಗಮಂಗಲದ ಅಕ್ಕಸಾಲಿಗರು ಲೋಹದ ಪ್ರತಿಮೆಗಳನ್ನು ಸಿದ್ಧಪಡಿಸುವುದರಲ್ಲಿ ಸಿದ್ಧಹಸ್ತರಿದ್ಧಾರೆ. ಸೌಮ್ಯಕೇಶವ ದೇವಾಲಯದ ಮುಂದಿರುವ ಗರುಡಪೀಠ ಶಾಸನ, ಸುಮಾರು ೧೯ನೆಯ ಶತಮಾನಕ್ಕೆ ಸೇರಿದ್ದು, ಕೇಶವ ದೇವರಿಗೆ ಗರುಡಪೀಠದ ಸೇವೆಯನ್ನು ಬೇಡಿಗಪಳ್ಳಿಯ ಚಲುವನು ಮಾಡಿಸಿದ ಅಂಶವನ್ನು ತಿಳಿಸುತ್ತದೆ. ನಾಗಮಂಗಲವು ಧಾರ್ಮಿಕ ಕೇಂದ್ರವಾಗಿ ಮುಂದುವರಿದ ಅಂಶವನ್ನು ಇದು ಸೂಚಿಸುತ್ತದೆ.

ಏತನ್ಮಧ್ಯೆ ಮೈಸೂರು ಸಂಸ್ಥಾನವು ಕ್ರಿ.ಶ. ೧೮೩೧ರಲ್ಲಿ ಬ್ರಿಟಿಷ್ ಕಮಿಷನರುಗಳ ಆಳ್ವಿಕೆಯಡಿಯಲ್ಲಿ ಆಡಳಿತಾತ್ಮಕ ಸುಧಾರಣೆಗೆ ಒಳಪಟ್ಟಿತ್ತು. ತತ್ಪರಿಣಾಮವಾಗಿ, ದೇಶದ ಇತರೆಡೆ ಸ್ವಾತಂತ್ತ್ಯ ಸಂಗ್ರಾಮದ ಕಿಚ್ಚನ್ನು ೧೯ನೆಯ ಶತಮಾನದ ಕೊನೆಯಲ್ಲೇ ಕಾಣಬಹುದಾದರೂ, ಅದರ ಬಿಸಿ ಸಂಸ್ಥಾನವನ್ನು ತಲುಪಿದ್ದು ಕ್ರಿ.ಶ. ೧೯೨೦ರ ನಂತರವೇ. ಗಾಂಧೀಜಿ ಆಗಮನದೊಂದಿಗೆ ದೇಶದಲ್ಲೆಡೆ ವ್ಯಾಪಿಸಿದರೂ ಸಂಸ್ಥಾನದಲ್ಲಿ ಇದು ನಿಜವಾದ ಅರ್ಥದಲ್ಲಿ ಆರಂಭವಾಗಿದದ್ದು ಶಿವಪುರದ ಸತ್ಯಾಗ್ರಹದೊಂದಿಗೆ, ಶಿವಪುರ ಸತ್ಯಾಗ್ರಹ, ವಿದುರಾಶ್ವತ ಸತ್ಯಾಗ್ರಹ (ಕ್ರಿ.ಶ.೧೯೩೭), ಚಲೇಜಾವ್ (ಕ್ರಿ.ಶ.೧೯೪೨), ಮೈಸೂರು ಚಲೋ ಚಳುವಳಿಗಳಲ್ಲಿ ತಾಲ್ಲೂಕಿನಿಂದ ಸಾಕಷ್ಟು ಜನ ಪಾಲ್ಗೊಂಡಿದ್ದರು. ಆ ಬಗ್ಗೆ ಮಾಹಿತಿ ಕಲೆಹಾಕಬೇಕಿದೆ.

ಮೈಸೂರು ಸಂಸ್ಥಾನದಲ್ಲಿ ಕ್ರಿ.ಶ. ೧೮೮೧ರಲ್ಲಿ ಅಸ್ತಿತ್ವಕ್ಕೆ ಬಂದ ಪ್ರಜಾಪ್ರತಿನಿಧಿ ಸಭೆ ಆಧುನಿಕ ಪ್ರಜಾಪ್ರಭುತ್ವ್ ವ್ಯವಸ್ಥೆಗೆ ಮಾದರಿ ವ್ಯವಸ್ಥೆಯಾಗಿತ್ತು. ಆ ಪ್ರಕಾರ ತಾಲ್ಲೂಕಿನ ಆನಂದಾಳ್ವಾರ‍್ ಅಯ್ಯಂಗಾರ‍್ (೧೮೯೦), ಬ್ರಹ್ಮಯ್ಯ (೧೮೯೨), ಭಗವಾಗಭಟ್ಟ (೧೮೯೨), ಬಿಳಿಗುಂದ ತಿಮ್ಮೇಗೌಡ (೧೮೯೭,೧೯೦೩-೦೬), ಚಿಕ್ಕೇಗೌಡ (೧೮೮೮-೮೯, ೧೮೯೧), ದೇವಶೆಟ್ಟಿಗೌಡ (೧೮೮೪-೮೬), ದೊಡ್ಡೆಗೌಡ (೧೮೮೮, ೧೮೯೪-೯೬), ಹರಗೌಡ (೧೮೯೦), ಮರಿಯಣ್ಣ (೧೮೯೩), ಹೊನ್ನಯ್ಯ (೧೯೦೭), ಲಕ್ಕಣ್ಣ (೧೮೮೬), ನಂಜುಂಡಯ್ಯ (೧೮೮೮, ೧೯೦೧-೦೩), ೧೮೯೧-೯೨), ರಾಮಯ್ಯ (೧೮೮೮-೯೧, ೧೮೯೩), ಚಂದ್ರಶೇಖರಯ್ಯ (೧೯೦೮-೨೧), ಮಹ್ಮದಖಾನ (೧೯೧೯-೨೦), ಸಂಗಪ್ಪ (೧೯೧೨), ಉಪಾಧ್ಯ ಶ್ರೀನಿವಾಸಯ್ಯಂಗಾರ (೧೯೧೫-೧೯), ಎಂ. ವೆಂಕಟರಾಮಯ್ಯ (೧೯೧೨-೨೨), ಟಿ.ಎಂ. ಕಪನಿಗೌಡ (೧೯೨೪-೩೬), ಮಹ್ಮದ ಗೌಸ್ (೧೯೨೪-೨೬),ಕೆ.ಎಂ. ಕೃಷ್ಣಪ್ಪಗೌಡ (೧೯೩೦-೪೦), ಟಿ.ಮರಿಯಪ್ಪ (೧೯೩೭-೪೦), ಅಬ್ದುಲ್ ರಸೂಲ್ (೧೯೪೧-೪೪), ಎಂ. ಶಂಕರಲಿಂಗೇಗೌಡ (೧೯೪೧-೪೯), ಅಬ್ದುಲ್ ರೆಹಮಾನ್ (೧೯೪೫-೪೯), ಬಸವಯ್ಯಗೌಡ (೧೯೪೫-೪೯), ಎ. ಕಪನಯ್ಯಗೌಡ (೧೯೪೫-೪೯) ಮುಂತಾದವರು ಕ್ರಿ.ಶ.೧೮೮೧ – ೧೯೪೯ರ ವರೆಗೆ ತಾಲ್ಲೂಕನ್ನು ಪ್ರತಿನಿಧಿಸಿದ್ದ ಸದಸ್ಯರುಗಳಾಗಿದ್ದು, ಕಂಸದಲ್ಲಿರುವ ವರ್ಷ, ಅವರು ಸದಸ್ಯರಾಗಿದ್ದ ಅವಧಿಯನ್ನು ಸೂಚಿಸುತ್ತದೆ. ೬೬

ಕ್ರಿ.ಶ.೧೮೬೯ ರಲ್ಲಿ ಹಾಸನ ಜಿಲ್ಲೆ ಅಸ್ತಿತ್ವಕ್ಕೆ ಬಂದಾಗ ನಾಗಮಂಗಲದ ತಾಲ್ಲೂಕು ಹಾಸನ ಜಿಲ್ಲೆಯಲ್ಲಿತ್ತು. ಕ್ರಿ.ಶ. ೧೮೮೨ರಲ್ಲಿ ಹಾಸನ ಜಿಲ್ಲೆ ರದ್ದಾದಾಗ ನಾಗಮಂಗಲದ ತಾಲ್ಲೂಕನ್ನು ಮೈಸೂರು ಜಿಲ್ಲೆಗೆ ವರ್ಗಾಯಿಸಲಾಯಿತು. ಮತ್ತೆ ಕ್ರಿ.ಶ. ೧೮೮೬ರಲ್ಲಿ ಹಾಸನ ಜಿಲ್ಲೆ ಮರುಹುಟ್ಟು ಪಡೆದರೂ, ನಾಗಮಂಗಲದ ತಾಲ್ಲೂಕು ಮೈಸೂರು ಜಿಲ್ಲೆಯಲ್ಲೇ ಮುಂದವರೆಯಿತು. ಕ್ರಿ.ಶ.೧೯೧೮ರ ವೇಳೆಗೆ ನಾಗಮಂಗಲದ ಪುರಸಮಿತಿ ಅಸ್ತಿತ್ವ ಪಡೆಯಿತು. ಮುಂದೆ ಕ್ರಿ.ಶ. ೧೯೩೯ರಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದ ಮಂಡ್ಯ ಜಿಲ್ಲೆಯಲ್ಲಿ ಸೇರಿತು. ಕ್ರಿ.ಶ. ೧೯೪೭ರ ಸ್ವಾತಂತ್ತ್ಯ ನಂತರ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ರಾಜ್ಯದ ವಿಧಾನಸಭೆಗೆ ಸದಸ್ಯರನ್ನು ಚುನಾವಣೆ ಮೂಲಕ ಆಯ್ಕೆ ಮಾಡಿ ಕಳುಹಿಸುತ್ತಿದೆ.

ಹೀಗೆ ನಾಗಮಂಗಲ ಪಟ್ಟಣವು ೧೦೦೦ ವರ್ಷಕ್ಕೂ ಹೆಚ್ಚು ಪ್ರಾಚೀನ ಸಾಂಸ್ಕೃತಿಕ ಇತಿಹಾಸವನ್ನು ಹೊಂದಿದ್ದು, ಹಲವಾರು ಏಳು-ಬೀಳುಗಳನ್ನು ಕಂಡುಂಡು ಉಳಿದು ಬಂದಿದೆ. ಇಂದಿಗೂ ತನ್ನ ಪ್ರಾಮುಖ್ಯತೆಯನ್ನು ಮುಂದುವರೆಸಿಕೊಂಡು ಬಂದಿದೆ. ಈ ಹಿನ್ನೆಲೆಯಲ್ಲಿ ನಾಗಮಂಗಲ ಪರಿಸರದ ಇತಿಹಾಸವನ್ನು ಇನ್ನಷ್ಟು ಸೂಕ್ಷ್ಮವಾಗಿ ಅಧ್ಯಯನ ಮೂಲಕ ಅರಿಯುವ ಅಗತ್ಯವಿದೆ.

 

ಅಡಿ ಟಿಪ್ಪಣಿಗಳು

೧. ಮಂಡ್ಯ ಡಿಸ್ಟ್ರಕ್ಟ್, ಗ್ಯಾಸೆಟಿಯರ, ೧೯೬೯ : ಬೆಂಗಳೂರು,

೨. E.C.VI, ಪಾಂಡವಪುರ ತಾ., ಪುಟ ೨೧೭

೩. ಅದೇ, IX, ಪೀಠಿಕೆ ಪುಟ Lxxiii

೪. ಅದೇ  IX, ಬೇಲೂರು ೧೫೨, ಪುಟ ೧೧೧

೫. ಸೌಮ್ಯಕೇಶವ ದೇವಾಲಯದ ಅರ್ಚಕರಾದ ಶ್ರೀ ತಿರುನಾರಾಯಣಾಚಾ ಅವರು ಗುಡಿಯ ನವರಂಗದ ಛತ್ತಿನ ನಾಗಮಂಡಲದ ಬಗ್ಗೆ ಗಮನ ಸೆಳೆದು, ಅದರ ಸುತ್ತ ಇರುವ ಜನಪದೀಯ ನಂಬಿಕೆಗಳನ್ನು ತಿಳಿಸಿಕೊಟ್ಟರು.

೬. E.E.VII, ನಾಗ, 149, ಪುಟ 144-150

೭. ಅದೇ , ನಾಗ 12, ಪುಟ 10-11

೮. ಅದೇ , ನಾಗ 7, ಪುಟ 6-8

೯. ಅದೇ , ಪುಟ 169

೧೦. ನಾಗಮಂಗಲ ಸ್ಥಳನಾಮವು ’ನಾಗಮಂಗಲ’ ರೂಪದಲ್ಲಿ ದೊರಕುತ್ತದೆ. ನಾಗಮಂಗಲದ ಹೆಸರಿನ ಗ್ರಾಮಗಳು ಕೋಲಾರ ಜಿಲ್ಲೆಯ ಮುಳಬಾಗಿಲು, ಕೋಲಾರ ಹಾಗೂ ಶಿಡ್ಲಘಟ್ಟ ತಾಲ್ಲೂಕು, ತರಿಕೆರೆ ತಾಲ್ಲೂಕು, ತುಮಕೂರು ತಾಲೂಕು, ಮಾಗಡಿ ತಾಲೂಕು, ಬೆಂಗಳೂರು ನಗರ ಜಿಲ್ಲೆ ಮುಂತಾದಡೆಗಳಲ್ಲಿ ಕಂಡುಬರುತ್ತದೆ. ಹುಣಸೂರು ತಾಲೂಕಿನ ಧರ್ಮಾಪುರದ ಹಾಗು ಎಚ್.ಡಿ. ಕೋಟೆ ತಾಲೂಕಿನ ಅಂಕನಾಥಪುರದ (೧೦೩೭) ಶಾಸನಗಳಲ್ಲಿ ’ನಾಗಮಂಗಲ’ ಉಲ್ಲೇಖವಿದೆ. ಇದು ಆ ದಿನಗಳಲ್ಲಿ ಆ ಭಾಗದಲ್ಲೂ ’ನಾಗಮಂಗಲ’ ಹೆಸರಿನ ಗ್ರಾಮಗಳಿದ್ದ ಅಂಶವನ್ನು ಸೂಚಿಸುತ್ತದೆ. ’ನಾಗಮಂಗಲ’ ನಾಮನಿಷ್ಪತ್ತಿಯನ್ನು ನಾಗಾರಾಧನೆ ಹಾಗು ಮಂಗಳಕಾರದ ಎಂಬ ಆರ್ಥದ ಹಿನ್ನೆಲೆಯಲ್ಲಿ ವಿವೇಚಿಸಬೇಕಾಗಿದ್ದು, ಸೌಮ್ಯಕೇಶವ ದೇವಾಲಯದ ಛತ್ತದಲ್ಲಿರುವ ನಾಗಮಂಡಲ, ಮಕ್ಕಳಾಗದವರು ಅದಕ್ಕೆ ನಡೆದು ಕೊಳ್ಳುವುದು ಮುಂತಾದ ಅಂಶಗಳು ಇದನ್ನೇ ಸೂಚಿಸುವಂತಿದೆ.

೧೧. E.C.VII, ನಾಗ, ೧, ಪುಟ ೩-೪

೧೨. ಅದೇ , ನಾಗ ೮೨, ಪುಟ ೮೫ ; ಅದೇ ನಾಗ ೮೩, ಪುಟ ೮೭

೧೩. ಅದೇ , ನಾಗ ೧೮, ಪುಟ ೧೫

೧೪. ಅದೇ, ನಾಗ, ೧೯, ಪುಟ ೧೫

೧೫. ಮಂಡ್ಯ ಜಿಲ್ಲಾ ಗ್ಯಾಸೆಟಿಯರ, (ಪರಿಷ್ಕೃತ ಅವೃತ್ತಿ), ೨೦೦೩ : ಗ್ಯಾಸೆಟಿರ ಇಲಾಖೆ, ಬೆಂಗಳೂರು.

೧೬. E.C.VII, ನಾಗ ೨, ಪುಟ ೪-೫

೧೭. ಅದೇ VI, ಪಾಂ.ಪು.

೧೮. S.I.I., VII, ಸಂಖೆಯ ೩೧೦

೧೯. ಅದೇ ನಾಗ, ೧೦, ಪುಟ ೧೦

೨೦. ಹಯವದನರಾವ್ ಸಿ., ಮೈಸೂರು ಗ್ಯಾಸೆಟಿಯರ‍್, ಸಂ. V, ನಾಗಮಂಗಲದ ತಾ. ಭಾಗ ನೋಡಿ

೨೧. E.C.VI, ನೆಲಮನೆ ಮತ್ತು ಮೇಲುಕೋಟೆಯ ಶಾಸನಗಳನ್ನು ನೋಡಿ

೨೩. S.I.I., VII, ಬಾರಕೂರು

೨೪. E.C. ಪಾ.ಪು., ಮೇಲುಕೋಟೆ

೨೫. ಅದೇ, ಮೇಲುಕೋಟೆ

೨೬. S.I.I. VII, ನಂ. ೧೯೬, ಪು ೮೯-೯೧, ದಕ್ಷಿಣ ಕನ್ನಡ ಜಿಲ್ಲೆ ಗ್ಯಾಸೆಟಿಯರ (ಪರಿಷ್ಕೃತ ಆವೃತ್ತಿ) ೨೦೦೮ : ಪು ೮೯೩

೨೭. ಗೋಪಾಲ ಬಿ.ಅರ., ವಿಜಯನಗರ ಇನ್ಸಕ್ರಿಪ್ಷನ್ಸ , ಸಂಪುಟ II, ನಂ. ೧೦೬೪

೨೮. ಅದೇ, ನಂ. ೧೦೬೮

೨೯. ಅದೇ, ಸಂಪುಟ II, ನಂ. ೧೧೧೦, ಪುಟ ೨೦೭

೩೦. E.C.VI, ಪಾಪು ೧೭೯

೩೧. ಮಂಡ್ಯ ಜಿಲ್ಲಾ ಗ್ಯಾಸೆಟಿಯರ (ಪರಿಷ್ಕೃತ ಆವೃತ್ತಿ), ೨೦೦೩ : ಬೆಂಗಳೂರು

೩೨. E.C.VI, ಪಾ.ಪು ೧೭೯

೩೩. ಅದೇ, ಮೇಲುಕೋಟೆ

೩೪. ಅದೇ, ಶ್ರೀರಂಗಪಟ್ಟಣ ಪು. ೪೧೩

೩೫. ಅದೇ, ಮೇಲುಕೋಟೆ

೩೬. ಅದೇ, ಮೇಲುಕೋಟೆ

೩೭. ಅದೇ, ಮೇಲುಕೋಟೆ

೩೮. E.C.VII, ಮದ್ದೂರು ೨೪, ಪುಟ ೨೬೭.

೩೯. ಅದೇ, ಮಂಡ್ಯ ೩೯, ಪುಟ ೨೨೭-೨೮

೪೦. ಅದೇ, VI ಪಾಪು, ಪುಟ ೧೧೪-೧೯

೪೧. ಮಹದೇವ ಸಿ. (ಸಂ) ೨೦೦೯ : ತೊಣ್ಣೂರು, ಕನ್ನಡ ವಿಶ್ವವಿದ್ಯಾಲಯ ಹಂಪಿ, ಈ ಸಂಪುಟದ್ಲಿ ತೊಣ್ಣೂರಿನ ಇತಿಹಾಸ ಲೇಖನ ನೋಡಿ.

೪೨. E.C.VII, ನಾಗ ೧೫೮, ಪುಟ ೧೫೪-೫೫

೪೩. ಅದೇ, ನಾಗ ೧೦೮, ಪುಟ ೧೧೩-೧೪

೪೪. ಕಲ್ಬುರ್ಗಿ ಎಂ.ಎಂ. (ಸಂ) : ಕರ್ನಾಟಕದ ಕೈಪಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ, ಹಂಪಿ.

೪೫. ಗೋಪಾಲ್ ಬಿ.ಅರ. (ಸಂ) ವಿಜಯನಗರ ಶಾಸನಗಳು ಸಂ. III, ಶಾಸನ ಸಂಖ್ಯೆ ೨೧೮೨.

೪೬. ಅದೇ, ಪುಟ ೨೧

೪೭. ಅದೇ, ಸಂ., IV, ಪುಟ ೯೪

೪೮. ಅದೇ, ಶಾಸನ ಸಂಖ್ಯೆ ೭೩.

೪೯. E.C. VII, ನಾಗ ೮, ಪುಟ ೮೦೯

೫೦. E.C. VII, ನಾಗ ೧೫೧

೫೧. ಅದೇ, ನಾಗ ೯, ಪುಟ ೯-೧೦

೫೨. ಅದೇ, ನಾಗ ೪೦, ಪುಟ ೨೫

೫೩. ಅದೇ, ನಾಗ ೧೨೬, ಪುಟ ೧೨೪

೫೪. E.C. VII, ಮಂಡ್ಯ ೨೮, ಪುಟ ೧೬೩

೫೫. ಅದೇ, ನಾಗ ೧೬೪, ಪುಟ ೧೬೩

೫೬. ಪಾಳೆಯಗಾರ ಚೆನ್ನಯ್ಯ ಗಾಣಿಗ ಕುಲದವನೆಂದು ಸ್ಥಳೀಯ ಐತಿಹ್ಯವಿದೆ. ಈತನ ಮನೆತನದವರೆಂದು ಹೇಳಿಕೊಳ್ಳುವ ಗಾಣಿಗ ಕುಟುಂಬಗಳು ನಾಗಮಂಗಲದಲ್ಲಿವೆ. ಕೆಲವು ಕುಟುಂಬಗಳು ಬೇರೆಡೆ ವಾಸಿಸುತ್ತಿವೆ. ಇವರು, ನಮ್ಮ ಪೂರ್ವಿಕರು ಚನ್ನಪಟ್ಟಣ ತಾಲ್ಲೂಕಿನ ಹುಣಸನಳ್ಳಿಯಿಂದ ಬಂದವರೆಂದು ತಿಳಿಸುತ್ತಾರೆ. ಇವರ ಮನೆದೇವರು ಚನ್ನಪಟ್ಟಣದ ಬಳಿ ಇರುವ ದೇವರ ಹೊಸಹಳ್ಳಿಯ ಆಂಜನೇಯ ಮತ್ತು ಹುನಸನಳ್ಳಿಯ ಬಿಸಿಲು ಮಾರಮ್ಮ. ಪಿತೃ ಪಕ್ಷದ ಸಂದರ್ಭದಲ್ಲಿ ಇವರು ಕತ್ತಿ ಕಠಾರಿಗಳನ್ನು ಪೂಜಿಸುತ್ತಾರೆ. ಈ ಮನೆತನದವರು ನಾಗಮಂಗಲದಲ್ಲಿ ಹೆಸರಾಂತ ಕುಸ್ತಿಪಟುಗಳಾಗಿದ್ದರು.

೫೭. ಅದೇ, ರಾಗ, ೧೧, ಪುಟ ೧೦ : ವಿಚಾರ ಸಂಕಿರಣದ ಸಂಧರ್ಭದಲ್ಲಿ ತ್ರುಟಿತ ಅಪ್ರಕಟ ಶಾಸನವೊಂದನ್ನು ನಾಗಮಂಗಲದದ ನಾ.ಸು. ನಾಗೇಶ್ ನನ್ನ ಗಮನಕ್ಕೆ ತಂದರು. ಅದು ಸುಮಾರು ಕ್ರಿ.ಶ. ೧೬ನೆಯ ಶತಮಾನಕ್ಕೆ ಸೇರಿದ್ಧಾಗಿದೆ.

೫೮. ಮುಹಮ್ಮದ್ ಕಲೀಂ ಉಲ್ಲಾ ೨೦೦೩ : ನಾಗಮಂಗಲ ತಾಲೂಕು ದರ್ಶನ ನಾಗಮಂಗಲ ೨೦೦೩

೫೯. E.C.VI, ಶ್ರೀರಂಗಪಟ್ಟಣದ ಭಾಗ ನೋಡಿ

೬೦. E.C.V, ತಿ.ನ. ೨೧೮, ಪುಟ ೫೯೫-೯೬

೬೧. ಅದೇ ಮೈಸೂರು ೯೯, ಪುಟ ೨೦೯

೬೨. ಅದೇ, VII, ಮಂಡ್ಯ ೨೪, ಪು ೨೦೭-೮

೬೩. ಫ್ರಾನ್ಸಿಸ್ ಬುಕಾನನ್,  ೧೯೦೭ : ಎ ಜರ್ನಿ ಫ್ರಮ್ ಮದ್ರಾಸ್ ಮೈಸೂರ ಆಂಡ್ ಮಲಬಾ‌ರ‍್, ಲಂಡನ್

೬೪. ಅದೇ, ಸಂಪುಟ II, ಪುಟ ೬೫-೬೬

೬೫. E.C.VII, ನಾಗ ೧೩, ಪುಟ ೧೧

೬೬. ಮೆಂಬರ್ಸ್ ಆಫ್ ದಿ ಮೈಸೂರ‍್ ರೆಪ್ರೆಸೆನ್ಟೇಟಿವ್ಸ್ ಅಸೆಂಬ್ಲಿ (೧೮೮೧-೧೯೪೯), ಬೆಂಗಳೂರು (I -IV ಸಂಪುಟಗಳು)