ಮಂಡ್ಯ ಜಿಲ್ಲೆಯ ತೊಣ್ಣುರು, ಮೇಲುಕೋಟೆ, ಕಿಕ್ಕೇರಿ, ಶ್ರೀರಂಗಪಟ್ಟಣಗಳಂತೆ ಹಾಗು ಪಕ್ಕದ ಮೈಸೂರು ಇತ್ಯಾದಿ ಪ್ರದೇಶಗಳಂತೆ ನಾಗಮಂಗಲವೂ ಸಹ ಒಂದು ದೇವಾಲಯಗಳುಳ್ಳ ಪ್ರದೇಶವಾಗಿದೆ. ಈ ಪ್ರದೇಶಗಳನ್ನು ವಿಶೇಷವಾಗಿ ಗಮನಿಸಿದರೆ ಸಾಮಾನ್ಯವಾಗಿ ಒಂದು ರಾಜವಂಶದವರು ತಮ್ಮ ಅನುಕೂಲಕ್ಕೆ ಒಂದು ಅಥವಾ ಹೆಚ್ಚಿನ ದೇವಾಲಯಗಳನ್ನು ಕಟ್ಟಿಸಿದ್ದರೆ ಮುಂದೆ ಬಂದ ಇತರೆ ರಾಜವಂಶಸ್ಥರುಗಳು ಸಹ ಅದೇ ಪ್ರದೇಶದಲ್ಲಿ ಮತ್ತೆ ಕೆಲವು ದೇವಾಲಯಗಳನ್ನು ನಿರ್ಮಿಸಿ ಹಾಗು ಮತ್ತೆ ಮೊದಲೇ ಇದ್ದ ದೇವಾಲಯಗಳನ್ನೂ ಸಹ ಜೀರ್ಣೋದ್ಧಾರ ಮಾಡಿ ಅಥವಾ ಅವುಗಳನ್ನ ಇನ್ನೂ ಹೆಚ್ಚಾಗಿ ವಿಸ್ತರಿಸಿ ಆ ಪ್ರದೇಶಗಳನ್ನು ಒಂದು ಸುಂದರವಾದ ಧಾರ್ಮಿಕವಾದ ಹಾಗು ಆಕರ್ಷಕವಾದ ಪ್ರದೇಶವನ್ನಾಗಿ ಮಾಡಿರುವ ಅನೇಕ ನಿದರ್ಶನಗಳನ್ನು ಇಂದಿಗೂ ಕಾಣಬಹುದು.

ಇಂತಹ ಪ್ರಸಿದ್ಧ ಐತಿಹಾಸಿಕ, ಧಾರ್ಮಿಕ, ಆಕರ್ಷಕ ಮತ್ತು ಸುಂದರವಾದ ದೇವಾಲಯಗಳು ನಗರವಾಗಿ ನಾಗಮಂಗಲ ಉಳಿದುಕೊಂಡು ಬಂದಿದೆ. ಇಲ್ಲಿ ಅತ್ಯಂತ ಪುರಾತನವಾದ ದೇವಾಲಯವಾಗಿ ಕಂಡುಬರುವದು ಹೊಯ್ಸಳ ದೇವಾಲಯಗಳು ಮಾತ್ರ ಇವುಗಳ ಬಗ್ಗೆ ಅಲ್ಲಲ್ಲಿ ಲೇಖನಗಳು ಮತ್ತು ಮಾಹಿತಿಗಳು ಪ್ರಕಟವಾಗಿವೆ. ಇಲ್ಲಿ ನಡೆಸಿದ ಕ್ಷೇತ್ರ ಕಾರ್ಯದಲ್ಲಿ ಕಂಡುಬಂದಂತೆ, ನಾಗಮಂಗಲದ ಹೊರ ಪ್ರದೇಶದಲ್ಲಿ ಗಂಗರ ಕಾಲದ ಉತ್ತಮವಾದ ದೇವಾಲಯವಿದ್ದುದನ್ನು ತಿಳಿಯಬಹುದು. ಈ ದೇವಾಲಯ ಇಂದು ಭಗ್ನಗೊಂಡಿದೆ. ಅದರ ಶಿಖರ, ದೇವಾಲಯದ ಸುತ್ತಲೂ ಇರುವ ಗೋಡೆಗಳು, ಗರ್ಭಗೃಹ, ಸುಖನಾಸಿ, ನವರಂಗ ಇತ್ಯಾದಿ ಭಾಗಗಳೆಲ್ಲವೂ ಕುಸಿದುಬಿದ್ದಿದ್ದು, ಕೇವಲ ಕಂಬಗಳು ಮತ್ತು ಮೇಲ್ಚಾವಣೆಗೆ ಹಾಕಿದ್ದ ಕೆಲವು ಕಲ್ಲುಗಳು ಮಾತ್ರ ಉಳಿದುಕೊಂಡಿವೆ. ನೋಡುಗರಿಗೆ ಕೇವಲ ದೇವಾಲಯದ ಅಸ್ಥಿಪಂಜರ ಮಾತ್ರ ಉಳಿದುಕೊಂಡಿರುವಂತೆ ಕಾಣುತ್ತದೆ. ಅದಲ್ಲದೆ ನೆಲಕ್ಕೆ ಹಾಸಿರುವ ಕೆಲವು ಕಲ್ಲುಗಳು ಸಹ ಉಳಿದುಕೊಂಡಿವೆ. ಉಳಿದಿರುವ ದೇವಾಲಯದ ಭಾಗಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಈ ದೇವಾಲಯವನ್ನು ಗಂಗರ ಕಾಲದ ದೇವಾಲಯವೆಂದು ಹೇಳಲು ಅದಕ್ಕೆ ಬಳಸಿರುವ ಗ್ರಾನೈಟ್ ಶಿಲೆ ಮತ್ತು ಕಂಬಗಳ ಮಾದರಿಯೇ ಆಧಾರವಾಗಿದೆ. ಕೇವಲ ೮ ರಿಂದ ೧೦ ಅಡಿ ಎತ್ತರದ ನುಣುಪಾದ ವೃತ್ತಾಕಾರದ ಕಂಬಗಳು, ಅವುಗಳ ಮೇಲೆ ಯಾವುದೇ ಅಲಂಕಾರದ ಕೆತ್ತನೆಗಳಿಲ್ಲದೆ ವೃತ್ತಕಾರದಲ್ಲಿ ಸಿಂಬಿಯಂತಿರುವ ಬೋದಿಗೆಗಳು ಮಾತ್ರ ಸಾಕ್ಷಿಯಾಗಿ ಉಳಿದುಕೊಂಡಿರುವುದು ನಮ್ಮ ಅದೃಷ್ಟ. ಈ ಕಂಬಗಳ ಅಳತೆ ಮತ್ತು ಕೆತ್ತನೆಯಲ್ಲಿ ಹಾಗು ಬಳಸಿರುವ ಗ್ರಾನೈಟ್ ಕಲ್ಲು ಮೈಸೂರು ಜಿಲ್ಲೆಯ ತಲಕಾಡು, ಮುಡುಕುತೊರೆ ಇತ್ಯಾದಿಗಳಲ್ಲಿನ ಗಂಗರ ಪ್ರಾರಂಭಿಕ ಕಾಲದ ದೇವಾಲಯಗಳ ಕಂಬಗಳಿಗೆ ಬಹಳ ಹೋಲಿಕೆಯಾಗುವುದರಿಂದ ನಾಗಮಂಗಲದ ಈ ದೇವಾಲಯವೂ ಸಹ ಗಂಗರ ಪ್ರಾರಂಭ ಕಾಲದಲ್ಲಿ ಕಟ್ಟಿದ ದೇವಾಲಯವೆಂದು ಹೇಳಬಹುದು. ಮಂಡ್ಯ ಜಿಲ್ಲೆಯ ಹಿಂದಿನ ಬಸ್ತಿ ತಿಪ್ಪೂರು. ಅದು ಈಗ ಕುರುಬರ ಬಸ್ತಿ ತಿಪ್ಪೂರಾಗಿದೆ, ಕಾವೇರಿ ನದಿಯ ಹಿನ್ನೀರಿನ ಪ್ರದೇಶವಾಗಿದ್ದು, ಕೃಷ್ಣರಾಜಪೇಟೆ ತಾಲ್ಲೂಕಿನಲ್ಲಿಯೂ ಸಹ ಇದೆ ಗಂಗರ ಕಾಲದ ಒಂದು ಸಣ್ಣ ದೇವಾಲಯವು ಬಿದ್ದು ಹೋಗಿ, ಈಗ ಕೇವಲ ನಾಗಮಂಗಲದ ದೇವಾಲಯದಂತೆ ಕಂಬಗಳು ಹಾಗೂ ಮೇಲ್ಛಾವಣೆಗೆ ಆಧಾರವಾಗಿ ಹಾಕಿದ ಕಲ್ಲಿನ ತೊಲೆಗಳು ಮಾತ್ರ ಉಳಿದುಕೊಂಡಿವೆ. ಈ ದೇವಾಲಯದ ಸುತ್ತಲೂ ಯಾರದೋ ದಾಳಿಗೆ ಒಳಗಾಗಿ ತುಂಡರಿಸಿದ ಜೈನ ತೀರ್ಥಂಕರರ ಶಿಲ್ಪಗಳನ್ನು ಮತ್ತು ಒಂದು ಬಾಹುಬಲಿ ಶಿಲ್ಪವನ್ನು ಕಾಣಬಹುದು. ಈ ಶಿಲ್ಪಗಳು, ಪಾಳುಬಿದ್ದಿರುವ ದೇವಾಲಯದಂತೆ ಅನಾಥವಾಗಿ ಬಿದ್ದಿದ್ದು ನಮ್ಮ ದೇಶದ ಇತಿಹಾಸ ಮತ್ತು ಸಂಸ್ಕೃತಿಯ ಇಂದಿನ ಸ್ಥಿತಿಯನ್ನು ಅಣುಕಿಸುವಂತಿದೆ.

ಕುರುಬರ ಬಸ್ತಿ ತಿಪ್ಪೂರಿನ ಹಾಳುಬಿದ್ದ ದೇವಾಲಯದ ಸುತ್ತಲೂ ಅಸ್ತಿತ್ವವನ್ನು ಕಳೆದುಕೊಂಡು ಬಿದ್ದಿರುವ ಶಿಲ್ಪಗಳ ಆಧಾರದ ಮೇಲೆ ಈ ದೇವಾಲಯ ಜೈನ ದೇವಾಲಯವಾಗಿದ್ದಿರಬಹುದೆಂದು ಊಹಿಸಬಹುದಾಗಿದೆ. ಆದರೆ ನಾಗಮಂಗಲದ ದೇವಾಲಯದ ಗರ್ಭಗುಡಿಯ ಭಾಗ, ನವರಂಗದ ಭಾಗ ಅಥವ ಆ ದೇವಾಲಯದ ಸುತ್ತಮುತ್ತಲ ಪ್ರದೇಶಗಳಲ್ಲಿ ಯಾವುದೇ ಶಿಲ್ಪಗಳು ನನ್ನ ಕ್ಷೇತ್ರ ಕಾರ್ಯದಲ್ಲಿ ಕಂಡುಬಾರದೆ ಇರುವುದರಿಮದ ಈ ದೇವಾಲಯ ಯಾವ ದೇವರಿಗಾಗಿ ನಿರ್ಮಿಸಿದ್ದೆಂದು ಹೇಳಲು ಸಾಧ್ಯವಿಲ್ಲ. ದೇವಾಲಯದ ಸುತ್ತಲೂ ಸುಮಾರು ೧೦ ಎಕರೆ ಪ್ರದೇಶದಲ್ಲಿ ಉತ್ತಿಬಿತ್ತಿ ವ್ಯವಸಾಯ ಮಾಡಿಕೊಂಡಿರುವುದು ಹಾಗೂ ಇತ್ತೀಚಿನ ದಿನಗಳಲ್ಲಿ ನಿರ್ಮಿಸಿರುವ ಮನೆಗಳು ಮಾತ್ರ ಕಂಡುಬರುತ್ತದೆಯಲ್ಲದೆ ಬೇರೇನು ಮಾಹಿತಿಗಳು ಲಭ್ಯವಾಗುವುದಿಲ್ಲ. ಬಹುಶಃ, ಗಂಗರ ಕಾಲದಲ್ಲಿ ಈ ದೇವಾಲಯದ ಸುತ್ತಮುತ್ತ ಜನವಸತಿ ಇದ್ದು ಅನಂತರ ಹೊಯ್ಸಳರ ಕಾಲದಲ್ಲಿ ಈಗ ಇರುವ ಸ್ಥಳಕ್ಕೆ ನಾಗಮಂಗಲದ ಮನವಸತಿ ಸ್ಥಳಾಂತರಗೊಂಡಿರಬಹುದು. ಅದರೂ ಇದುವರೆವಿಗೂ ನಾಗಮಂಗಲದ ದೇವಾಲಯಗಳ ಇತಿಹಾಸ ಹೊಯ್ಸಳ ಕಾಲದಿಂದ ಪ್ರಾರಂಭವಾಗುತ್ತದೆ ಎಂದು ತಿಳಿದುಕೊಂಡಿದ್ದ ನಮಗೆ, ಈ ದೇವಾಲಯದಿಂದಾಗಿ ಗಂಗರ ಕಾಲದಲ್ಲೇ ಬಹಳ ಪ್ರಸಿದ್ಧ ಸ್ಥಳವಾಗಿತ್ತು ಎಂದು ಧೈರ್ಯವಾಗಿ ಹೇಳಬಹುದು. ಹಾಳು ಬಿದ್ದಿರುವ ಈ ಗಂಗರ ಕಾಲದ ದೇವಾಲಯದ ಸುತ್ತಲ ಪ್ರದೇಶವನ್ನು ಸರಿಯಾಗಿ ಕ್ಷೇತ್ರಕಾರ್ಯಕ್ಕೆ ಒಳಪಡಿಸಿ ಉತ್ಖನನಗಳನ್ನು ನಡೆಸಿದರೆ ನಮಗೆ ಗಂಗರ ಕಾಲದ ಈ ದೇವಾಲಯದ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಸಂಶೋಧನಾತ್ಮಕವಾಗಿ ತಿಳಿದು ಬರುವುದರಲ್ಲಿ ಯಾವುದೇ ಸಂದೇಹಗಳಿಲ್ಲ. ಆದರೆ ಕರ್ನಾಟಕದಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಉತ್ಖನನಗಳು ನಡೆಯದೇ ಇರುವುದರಿಂದ ಹಾಗು ಇಂತಹ ಪಾಳುಬಿದ್ದ ದೇವಾಲಯಗಳು ಕರ್ನಾಟಕದಲ್ಲಿ ಅನೇಕ ಕಡೆ ಕಂಡು ಬರುವುದರಿಂದ ನಮ್ಮ ಸರ್ಕಾರಗಳಿಗಾಗಲಿ ಅಥವಾ ಜನರಿಗಾಗಲಿ ಅವುಗಳ ಬಗ್ಗೆ ಹೆಚ್ಚಿನ ಆಸಕ್ತಿ ಉಳಿದುಕೊಂಡಿಲ್ಲ. ಬಿದ್ದುಹೋದ  ದೇವಾಲಯಗಳ ಕಲ್ಲುಗಳನ್ನು ಬೇಕಾದರೆ ಬಳಸಿಕೊಂಡು ತಮ್ಮ ಕಟ್ಟಡಗಳನ್ನು ಅಥವಾ ಬಾವಿಗಳನ್ನು ಅಥವಾ ಸೇತುವೆಗಳನ್ನು ಯಾವ ಭಯವೂ ಇಲ್ಲದೇ ನಿರ್ಮಿಸಿಕೊಳ್ಳುತ್ತದೆ. ಇದಕ್ಕೆ ನಮಗೆ ಸಾಕಷ್ಟು ಉದಾಹರಣೆಗಳು ದೊರೆಯುತ್ತವೆ. ಉದಾಹರಣೆಗೆ ಬಿದ್ದು ಹೋಗಿರುವ ಈ ಗಂಗರ ಕಾಲದ ನಾಗಮಂಗಲದ ದೇವಾಲಯದ ಗೋಡೆಗಳ ಅಥವಾ ಏನಾದವು ಎಂಬುವುದರ ಬಗ್ಗೆಯೇ ಒಂದು ಸಂಶೋಧನೆ ನಡೆಯಬೇಕಿದೆ. ಸುತ್ತಲಿನ ಹೊಲಗದ್ದೆಗಳಲ್ಲಿ ರೈತರಿಗೆ ಆಕಸ್ಮಿಕವಾಗಿ ಯಾವುದೇ ಶಿಲ್ಪ ದೊರೆತಲ್ಲಿ ಅದರ ಮೇಲಾದರೂ ಮುಂದೊಂದು ದಿನ ಈ ದೇವಾಲಯ ಜೈನರು, ಶೈವರು ಅಥವಾ ವೈಷ್ಣವರಿಗೆ ಸೇರಿದ್ದರೆಂದು ಕಂಡುಕೊಳ್ಳಬಹುದು.

ಕರ್ನಾಟಕದಲ್ಲಿ ಹೊಯ್ಸಳರು ಅನೇಕ ಅಗ್ರಹಾರಗಳನ್ನು ನಿರ್ಮಿಸಿದ ಉದಾಹರಣೆಗಳಿವೆ. ಇಂತಹ ಅಗ್ರಹಾರಗಳು ಮಂಡ್ಯ ಜಿಲ್ಲೆಯಲ್ಲಿ ಕಂಡುಬಂದಿವೆ. ಅವುಗಳೆಂದರೆ ನಾಗಮಂಗಲ, ಬಸರಾಳು, ಗೋವಿಂದನಹಳ್ಳಿ, ಕಿಕ್ಕೇರಿ, ಹೊಸಹೊಳಲು, ಕತ್ತರಘಟ್ಟ, ಹೊಸಬೂದನೂರು, ತೆಂಗಿನಘಟ್ಟ, ಮದ್ದೂರು, ಮಾಚಲಘಟ್ಟ, ಬೆಳ್ಳೂರು ಇತ್ಯಾದಿಗಳು. ಈ ಅಗ್ರಹಾರಗಳು ಜನವಸತಿಗಾಗಿ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡು ಅದೇ ಸಮಯದಲ್ಲಿ ಎರಡು ಅಥವಾ ಅದಕ್ಕೂ ಹೆಚ್ಚಿನ ದೇವಾಲಯಗಳನ್ನು ನಿರ್ಮಿಸಿದ್ದು, ಈ ಅಗ್ರಹಾರಗಳು ಅಂದಿನ ಕಾಲದಲ್ಲಿ ಬಹಳ ಪ್ರಸಿದ್ಧ ಪ್ರದೇಶಗಳಾಗಿದ್ದರಿಂದ ಶಾಸನಗಳಿಂದ ತಿಳಿದುಬರುತ್ತದೆ. ಇಂತಹ ಅಗ್ರಹಾರಗಳನ್ನು ನಿರ್ಮಿಸಿದಾಗ, ಶೈವ, ವೈಷ್ಣವ ಮತ್ತು ಜೈನ ದೇವಾಲಯಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಇಂತಹ ದೇವಾಲಯಗಳಲ್ಲಿ ಅರ್ಧಕ್ಕೂ ಹೆಚ್ಚು ಬಿದ್ದು ಹೋಗಿರುವುದು ಅಥವಾ ಪಾಳುಬಿದ್ದು ಹೋಗಿರುವುದು ಕಂಡುಬರುತ್ತದೆ. ಹೊಸಬೂದನೂರು, ಗೋವಿಂದನಹಳ್ಳಿ, ಕತ್ತರಘಟ್ಟ, ಕಕ್ಕೇರಿಗಳಲ್ಲಿ ಬಿದ್ದುಹೋಗಿರುವ ದೇವಾಲಯಗಳನ್ನು ದನದ ಕೊಟ್ಟಿಗೆಗಳು, ತಿಪ್ಪೆಗುಂಡಿಗಳನ್ನಾಗಿ ಮಾಡಿಕೊಂಡಿರುವುದು ಕಂಡುಬರುತ್ತದೆ. ಇದೇ ಸಂದರ್ಭದಲ್ಲಿ ಹೆನ್ರಿ ಕಸಿನ್ಸ್ ಅವರು ಸುಮಾರು ನೂರು ವರ್ಷಗಳಿಗೂ ಮೊದಲು ಹೇಳಿರುವ ಮಾತುಗಳನ್ನು ಇಲ್ಲಿ ಉಲ್ಲೇಖಿಸಬೇಕಾಗುತ್ತದೆ. “ಹಿಂದುಗಳು ಒಂದು ದೇವಾಲಯವನ್ನು ಕಟ್ಟುವಾಗ ಎಷ್ಟು ಶ್ರಮವಹಿಸುತ್ತಾರೆ ಹಾಗು ಪೂಜೆ ಪುನಸ್ಕಾರಗಳಿಗೆ ಎಷ್ಟು ಮಹತ್ವ ಕೊಡುತ್ತಾರೆ. ಆದರೆ ಅದೇ ದೇವಾಲಯ ಕಾರಣಾಂತರಗಳಿಂದ ಬಿದ್ದುಹೋದರೆ ಅದರ ಕಲ್ಲುಗಳನ್ನು ಬಳಸಿಕೊಳ್ಳಲು  ಅಥವಾ ಕಸದಗುಂಡಿಗಳಾಗಿ ಮಾಡಿಕೊಳ್ಳಲು ಮತ್ತು ಕಕ್ಕಸ್ಸು ಗುಂಡಿಗಳನ್ನು ಮಾಡಿಕೊಳ್ಳಲು ಹೇಸುವುದಿಲ್ಲ ಎಂದು ಹೇಳಿದ್ದಾರೆ” ಇದಕ್ಕೆ ಇನ್ನೂ ಕೆಲವು ಮಾಹಿತಿಗಳನ್ನು ಸೇರಿಸಬೇಕೆಂದರೆ ಕಲ್ಲು ಕತ್ತರಿಸುವ ಕಲ್ವಡ್ಡರು, ಅವುಗಳನ್ನು ತಂದು ಹಾಕುವ ಕೂಲಿಕಾರರು, ಶಿಲ್ಪಗಳನ್ನಾಗಿ, ಕಂಭಗಳನ್ನಾಗಿ ಕೆತ್ತಿ ಅವುಗಳಿಗೆ ಒಂದು ರೂಪವನ್ನು ಕೊಡುವ ಶಿಲ್ಪಿಗಳು, ದೇವಾಲಯಗಳನ್ನಾಗಿ ಕಟ್ಟುವ ಸ್ಥಪತಿಗಳು ಇತ್ಯಾದಿ ಶ್ರಮಜೀವಿಗಳ ಶ್ರಮದಾನದಿಂದ ಒಂದು ಅದ್ಭುತ ಕಲಾರೂಪದಿಂದ ಸಾಮಾಜಿಕ ಮತ್ತು ಧಾರ್ಮಿಕ ಹಾಗು ಕಲಾ ಶಾಲೆಯಾಗಿ ಒಂದು ಹೊಯ್ಸಳ ದೇವಾಲಯ ನಿಲ್ಲುತ್ತದೆ. ಆನಂತರ ಅದೇ ದೇವಾಲಯದಲ್ಲಿ ಒಂದು ದೊಡ್ಡ ಪೂಜೆಯನ್ನು ನಡೆಸಿ, ಮುಖ್ಯ ದೇವರ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡಿದ ನಂತರ ದೇವಾಲಯವನ್ನು ಸುಂದರವಾಗಿ ಬೀಳುವ ಸ್ಥಿತಿಗೆ ಬಂದರೆ ಅಥವಾ ಪಾಳುಬಿದ್ದರೆ ಆ ಕಡೆ ತಿರುಗಿ ಸಹ ನೋಡುವುದಿಲ್ಲ. ಇಂತಹ ವಿಪರ್ಯಾಸಗಳಿಂದಲೇ ನಮ್ಮ ದೇಶದ ಪುರಾತನ ದೇವಾಲಯಗಳಿಗೆ ಈ ದುರ್ಗತಿ ಬಂದಿರುವುದು.

ಬೀದರ್-ಶ್ರೀರಂಗಪಟ್ಟಣ ರಸ್ತೆಯಲ್ಲಿ ಕಂಡುಬರುವ ನಾಗಮಂಗಲವು ಹೊಯ್ಸಳರ ಕಾಲದಲ್ಲಿ ಬಹಳ ಪ್ರಸಿದ್ಧವಾದ ಅಗ್ರಹಾರವಾಗಿದ್ದು, ಶಾಸನಗಳಲ್ಲಿ ನಾಗಮಂಗಲವನ್ನು “ವೀರಬಲ್ಲಾಳ ಚತುರ್ವೇದಿ ಭಟ್ಟಾರತ್ನಾಕರ ಅಗ್ರಹಾರ” ಎಂದು ಕರೆಯಲಾಗಿದೆ. ಈ ನಾಗಮಂಗಲದಲ್ಲಿ ಇದುವರೆವಿಗೂ ೧೩ ಶಾಸನಗಳು ಕಂಡುಬಂದಿದ್ದು ಅವುಗಳಲ್ಲಿ ಗಂಗರ ಕಾಲದಲ್ಲಿ ಮಾರಸಿಂಹನ ಕಾಲದ ಶಾಸನ ಅತ್ಯಂತ ಹಳೆಯದಾಗಿದ್ದು, ಒಂದು ವೀರಗಲ್ಲಿನ ಮೇಲೆ ಬರೆಯಲಾಗಿದೆ. ಹೊಯ್ಸಳರ ಕಾಲದ ಮೊದಲ ಶಾಸನವು ಕ್ರಿ.ಶ. ೧೧೩೪ರಲ್ಲಿ ಬರೆಯಲಾಗಿದ್ದು. ಹೊಯ್ಸಳ ವಿಷ್ಣುವರ್ಧನನ ಪಟ್ಟದರಾಣಿ ಬೊಮ್ಮಲದೇವಿಯು ಶಂಕರನಾರಾಯಣ ದೇವಾಲಯಕ್ಕೆ ಅರಿಕನಕಟ್ಟೆ ಎಂಬ ಹಳ್ಳಿಯನ್ನು ದತ್ತಿಬಿಟ್ಟಿರುವುದು ತಿಳಿದುಬರುತ್ತದೆ. ಹಾಗು ಈ ಬಮ್ಮಲದೇವಿಯು ಪಲ್ಲವ ರಾಜವಂಶದ ಗೋವಿಂದರ ಮತ್ತು ಜಾವುಂಡಬ್ಬರಸಿಯ ಮಗಳೆಂದು ಸಹ ತಿಳಿದುಬರುತ್ತದೆ. ಆದರೆ ನಾಗಮಂಗಲದಲ್ಲಿ ಈ ಹೆಸರಿನ ಯಾವ ದೇವಾಲಯವೂ ಕಂಡುಬರುವುದಿಲ್ಲ. ಆದ್ದರಿಂದ, ಬಹುಶಃ ಈ ಹೆಸರಿನ ಬೇರೊಂದು ದೇವಾಲಯ ಇದ್ದಿರಬಹುದಾಗಿದೆ. ಈಗ ನಾಗಮಂಗಲದಲ್ಲಿ ಗಂಗರ ಕಾಲದ ಬಿದ್ದುಹೋಗಿರುವ ದೇವಾಲಯವಲ್ಲದೆ ಹೊಯ್ಸಳಲರ ಕಾಲದ ಮೂರು ದೇವಾಲಯಗಳು ಮತ್ತು ಅನಂತರ ಕಾಲದಲ್ಲಿ ಕಟ್ಟಿದ ಇನ್ನೂ ಕೆಲವು ಸಣ್ಣಪುಟ್ಟ ದೇವಾಲಯಗಳು ಊರಿನ ಮಧ್ಯಭಾಗದಲ್ಲಿ ಕಂಡುಬರುತ್ತವೆ. ಇವುಗಳಲ್ಲದೆ ಇತ್ತೀಚಿನ ದಿನಗಳಲ್ಲಿ ನಿರ್ಮಿಸಿರುವ ದೇವಾಲಯಗಳು ಸಹಾ ಊರಿನ ಮುಖ್ಯ ಬೀದಿಗಳಲ್ಲಿ ಕಂಡುಬರುತ್ತವೆ. ಇಲ್ಲಿನ ಮೂರು ಮುಖ್ಯ ದೇವಾಲಯಗಳೆಂದರೆ :

೧. ಸೌಮ್ಯಕೇಶವ ದೇವಾಲಯ

೨. ಭುವನೇಶ್ವರ ದೇವಾಲಯ

೩. ಯೋಗಾನರಸಿಂಹ ದೇವಾಲಯ

ಮತ್ತೊಂದು ಶಾಸನವು ಎರಡನೆಯ ಬಲ್ಲಾಳನ ಕಾಲದ್ದಾಗಿದ್ದು ಕ್ರಿ.ಶ. ೧೧೭೧ರಲ್ಲಿ ಬರೆಸಲಾಗಿದೆ. ಇವರ ಕಾಲದಲ್ಲೇ ಇಲ್ಲಿ ಅಗ್ರಹಾರ ಸ್ಥಾಪನೆಯಾಗಿರುವುದು ತಿಳಿದುಬರುವುದಲ್ಲದೆ ಸೌಮ್ಯಕೇಶವ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ದಾನ ದತ್ತಿಗಳನ್ನು ಕೊಟ್ಟಿರುವುದನ್ನು ತಿಳಿಸುತ್ತದೆ. ಹಾಗೆಯೇ ಕ್ರಿ.ಶ. ೧೩೨೯ರ ಮತ್ತೊಂದು ಶಾಸನದಲ್ಲಿ ಹೊಲಟ್ಟಿ ಎಂಬ ಜಾಗವನ್ನು ನಾಗಮಂಗಲದ ಚನ್ನಕೇಶವ ದೇವಾಲಯಕ್ಕೆ ಒಬ್ಬ ಅಧಿಕಾರಿಯಾಗಿದ್ದ ಕರದಾಳುವಿನ ಮಲ್ಲಿದೇವ ಮತ್ತು ಅವನ ಹೆಂಡತಿ ಚನ್ನಾದೇವಿ ಎನ್ನುವವರು ದಾನವಾಗಿ ನೀಡಿರುವುದನ್ನು ತಿಳಿಸುತ್ತದೆ. ಬಹುಶಃ ಸೌಮ್ಯಕೇಶವ ದೇವಾಲಯವನ್ನು ಎರಡನೆಯ ಬಲ್ಲಾಳನ ಕಾಲದಲ್ಲಿ ಕಟ್ಟಿರಬಹುದೆಂದು ಹೇಳಬಹುದಾಗಿದೆ. ಉಳಿದ ಶಾಸನಗಳಲ್ಲಿ ಐದು ಶಾಸನಗಳು ವಿಜಯನಗರ ಕಾಲದ ಶಾಸನಗಳಾಗಿದ್ದು, ಅವುಗಳ ಬಗ್ಗೆ ಲೇಖನದ ಕೊನೆಯಲ್ಲಿ ಚರ್ಚೆ ಮಾಡಲಾಗುತ್ತದೆ.

ಸೌಮ್ಯಕೇಶವ ದೇವಾಲಯ

ಹೊಯ್ಸಳರ ಕಾಲದಲ್ಲಿ ನಿರ್ಮಾಣವಾಗಿರುವ ಅನೇಕ ದೇವಾಲಯಗಳಲ್ಲಿ ಸೌಮ್ಯಕೇಶವ ದೇವಾಲಯವು ಒಂದಾಗಿದ್ದು, ಇದನ್ನು ಕ್ರಿ.ಶ. ೧೨ನೆಯ ಶತಮಾನದ ಮಧ್ಯಭಾಗದಲ್ಲಿ ನಿರ್ಮಿಸಲಾಗಿದೆ (ಚಿತ್ರ ೨). ಸಾಮಾನ್ಯ ಜನರಿಗೆ ಹೊಯ್ಸಳರ ದೇವಾಲಯಗಳೆಂದರೆ ಹೊರಗೋಡೆಯಲ್ಲಿ ಅಡಿಯಿಂದ ಮುಡಿಯವರೆಗೆ ಶಿಲ್ಪಗಳು ಮತ್ತು ಅಲಂಕಾರಯುಕ್ತ ಕೆತ್ತನೆಗಳಿಂದ ಕೂಡಿರುವ ಬೇಲೂರು, ಹಳೇಬೀಡು, ಸೋಮನಾಥಪುರ, ಬಸರಾಳು, ಹೊಸಹೊಳಲು ಹಾಗು ಇತ್ಯಾದಿಗಳನ್ನು ತಕ್ಷಣಕ್ಕೆ ಜ್ಞಾಪಿಸಿಕೊಳ್ಳುತ್ತಾರೆ. ಆದರೆ ಈ ಸೌಮ್ಯಕೇಶವ ದೇವಾಲಯ ಅಂತಹ ಯಾವುದೇ ಅಲಂಕಾರಯುಕ್ತ ಶಿಲ್ಪಗಳ ಕೆತ್ತನೆಗಳಿಂದ ಕೂಡಿರದೆ, ಚೋಳರ ಕಾಲದ ದೇವಾಲಯದ ಮಾದರಿಯ ಅಲಂಕಾರಯುಕ್ತ ಕೆತ್ತನೆಗಳಿಂದ ಹೊರಗೋಡೆ ಕೂಡಿದ್ದರೂ ಆಕರ್ಷಕವಾದ ಮತ್ತು ವಿಶಾಲವಾದ ಒಂದು ಹೊಯ್ಸಳ ದೇವಾಲಯವಾಗಿದೆ. ಇಂತಹ ಹೊಯ್ಸಳ ದೇವಾಲಯಗಳು ಬಹಳ ಕಡಿಮೆ ಸಂಖ್ಯೆಯಲ್ಲಿ ಕಟ್ಟಲ್ಪಟ್ಟಿವೆ. ಕಿಕ್ಕೇರಿಯ ಬ್ರಹ್ಮೇಶ್ವರ ದೇವಾಲಯ ಮತ್ತು ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯಗಳಲ್ಲಿ ಅಡ್ಡಪಟ್ಟಿ ಕೆತ್ತನೆಗಳು, ದುಂಡನೆ ಶಿಲ್ಪಗಳು ಕಂಡು ಬಾರದಿದ್ದರೂ ಹೊರಗೋಡೆಗಳಲ್ಲಿ ಉಬ್ಬು ಕೆತ್ತನೆಯ ಶಿಲ್ಪಗಳನ್ನು ಸ್ವಲ್ಪ ಪ್ರಮಾಣದಲ್ಲಿ ಕೆತ್ತಲಾಗಿದೆ. ಆದರೆ ಈ ಸೌಮ್ಯಕೇಶವ ದೇವಾಲಯದಲ್ಲಿ ಅಂತಹ ಸಣ್ಣ ಪ್ರಮಾಣದ ಉಬ್ಬುಕೆತ್ತನೆಯ ಶಿಲ್ಪಗಳು ಸಹ ಕಂಡುಬಾರದಿರುವುದು ಒಂದು ವಿಶೇಷತೆ ಎಂದು ಹೇಳಬಹುದು.

ಬಹಳ ವಿಶೇಷವಾದ ಹಾಗೂ ವಿಶಾಲವಾದ ತಳಹದಿಯ ಮೇಲೆ ನಿರ್ಮಾಣಗೊಂಡಿರುವ ಈ ದೇವಾಲಯ ತ್ರಿಕೂಟಾಚಲವಾಗಿದ್ದು, ನಾಲ್ಕು ಅಡಿ ಎತ್ತರ ಮತ್ತು ಆರು ಅಡಿ ಅಗಲವಾದ ಹಾಗು ನಕ್ಷತ್ರಾಕಾರದ ಕೋನಗಳಿಂದ ಕೂಡಿದ ವಿಶಾಲವಾದ ಜಗತಿಯನ್ನು ಹೊಂದಿದೆ. ದೇವಾಲಯದ ಮೂರು ಗರ್ಭಗುಡಿಯ ಹೊರಗೋಡೆಗಳಲ್ಲಿ, ಮುಖ್ಯಗರ್ಭಗುಡಿಯ ಹೊರಗೋಡೆಗಳು ಮಾತ್ರ ನಕ್ಷತ್ರಾಕಾರದಿಂದ ಕೂಡಿದ್ದು ಉಳಿದ ಎರಡು ಗರ್ಭಗುಡಿಯ ಹೊರಗೋಡೆಗಳು ಚೌಕಾಕಾರವಾಗಿರುವುದು ಮತ್ತೊಂದು ವಿಶೇಷವೆಂದು ಹೇಳಬಹುದು. ಈ ದೇವಾಲಯದ ಮಹಾದ್ವಾರ (ಚಿತ್ರ ೨), ಪ್ರಾಕಾರ (ಚಿತ್ರ ೩) ಮತ್ತು ಪಾತಾಳಾಂಕಣಗಳನ್ನು ವಿಜಯನಗರದ ಕಾಲದಲ್ಲಿ ಸೇರಿಸಲಾಗಿದೆ. ಅಂದರೆ ಹೊಯ್ಸಳರ ಕಾಲದಲ್ಲಿ ನಿರ್ಮಾಣಗೊಂಡಿರುವ ಈ ದೇವಾಲಯವು ವಿಜಯನಗರ ಕಾಲದಲ್ಲೂ ಸಹ ಪ್ರಸಿದ್ಧವಾಗಿದ್ದು, ವಿಶಾಲ ದೇವಾಲಯವನ್ನಾಗಿ ಮಾಡಿ ಸರಿಯಾದ ಸಂರಕ್ಷಣಾ ಕಾರ್ಯ ಸಹ ನಡೆದಿದೆ ಎಂದು ಹೇಳಬಹುದು. ಯಾವುದೇ ಅಡ್ಡಪಟ್ಟಿ ಕೆತ್ತನೆ ಹಾಗು ಶಿಲ್ಪಗಳ ಅಲಂಕಾರದಿಂದ ಹೊರಗೋಡೆಗಳು ಕೂಡಿರದಿದ್ದರೂ ತನ್ನದೇ ಆದ ಆಕರ್ಷಣೆಯನ್ನು ಹೊಂದಿದ ಸುತ್ತಲೂ ಬರುವ ಉದ್ದುದ್ದದ ಆರು ಪಟ್ಟಿಗಳು ಬರುವಂತೆ ಕೆಳಭಾಗವನ್ನು ಕೆತ್ತಲಾಗಿದ್ದು ಇದನ್ನು ಅಧಿಷ್ಠಾನ ಎಂದು ಕರೆಯಲಾಗಿದೆ. ಅಧಿಷ್ಠಾನದ ಮೇಲ್ಭಾಗದಲ್ಲಿ ನಕ್ಷತ್ರಾಕಾರದ ಕೋನಗಳಿಂದ ಕೂಡಿರುವ ಗೋಡೆಯ ಭಾಗದಲ್ಲಿ ಒಳ ಮತ್ತು ಹೊರ ಕೋನಗಳಲ್ಲಿ ಅಲಂಕಾರಯುಕ್ತ ಪುಟ್ಟ ಪುಟ್ಟ ಕಂಬಗಳನ್ನು ಕೆತ್ತಿ ಅವುಗಳ ಮಧ್ಯಭಾಗದಲ್ಲಿ ಅಧಿಷ್ಠಾನದ ಮಾದರಿಯ ಅಡ್ಡ ಪಟ್ಟಿಗಳು ಬರುವಂತೆ ಕೆತ್ತಿರುವುದಲ್ಲದೆ ಒಳಕೋನಗಳಲ್ಲಿನ ಅಲಂಕಾರಯುಕ್ತ ಕಂಬಗಳ ಮೇಲೆ ಸಣ್ಣ ಸಣ್ಣ ಶಿಖರಗಳ ಮಾದರಿಯನ್ನು ಕೆತ್ತಿ ಅಲಂಕರಿಸಿದ್ಧಾರೆ (ಚಿತ್ರ ೪). ಇವುಗಳ ಮೇಲೆ ಮೂರು ಮಡಿಕೆಗಳನ್ನು ಹೊಂದಿರುವಂತೆ ಕಾಣುವ ಅಲಂಕಾರಯುಕ್ತ ಕಪೋತ ಕಂಡುಬರುತ್ತದೆ. ಈ ಕಪೋತದ ಕೋನದಲ್ಲಿ ಹಲ್ಲಿನಂತಹ ಮೊನಚಾದ ಕೆತ್ತನೆಗಳಿದ್ದು ಅದರ ಆಕರ್ಷಣೆಯನ್ನು ಹೆಚ್ಚಿಸಿದೆ. ಆದರೆ ಇಂತಹ ಆಕರ್ಷಕ ಕೆತ್ತನೆಗಳು ಮತ್ತು ಕೋನಗಳು ಕೇವಲ ಪಶ್ಚಿಮ ಭಾಗದ ಗರ್ಭಗೃಹದ ಹೊರಗೋಡೆಗಳಲ್ಲಿ ಮಾತ್ರ ಕಂಡುಬಂದಿದ್ದು ದಕ್ಷಿಣ ಮತ್ತು ಉತ್ತರದ ಗೋಡೆಗಳಲ್ಲಿ ಈ ರೀತಿ ಕಂಡುಬರುವುದಿಲ್ಲ. ಬಹುಶಃ ಹೊಯ್ಸಳರ ನಂತರದ ಕಾಲದಲ್ಲಿ ಇದನ್ನು ಬದಲಿಸಿರುವ ಸಾಧ್ಯತೆಗಳು ಹೆಚ್ಚಾಗಿ ಕಂಡುಬರುತ್ತದೆ. ಆದರೆ ಈಗ ಕೇವಲ ಪಶ್ಚಿಮ ಭಾಗದ ಗರ್ಭಗೃಹದ ಮೇಲ್ಬಾಗದಲ್ಲಿ ಮಾತ್ರ ಶಿಖರ ಕಂಡುಬರುತ್ತದೆ ಹಾಗು ಇದು ಸುಖನಾಸಿಯ ಮುಂಚಾಚನ್ನು ಸಹ ಹೊಂದಿದೆಯಾದರೂ ಹೊಯ್ಸಳರ ಕಾಲದ ಶಿಖರದಂತೆ ಕಂಡುಬರುವುದಿಲ್ಲ. ಈ ಶಿಖರವನ್ನು ಹೊಯ್ಸಳರ ನಂತರ ಕಾಲದಲ್ಲಿ ಪಿರಮಿಡ್ ಮಾದರಿಯಲ್ಲಿ ಇಟ್ಟಿಗೆ ಮತ್ತು ಗಾರೆಯ ಸಹಾಯದಿಂದ ಕಟ್ಟಲಾಗಿದೆ. ಇದರ ಮೇಲೆ ಲೋಹದ ಕಳಸವನ್ನು ಸೇರಿಸಲಾಗಿದೆ. ಉಳಿದ ಉತ್ತರ ಮತ್ತು ದಕ್ಷಿಣ ಭಾಗದ ಗರ್ಭಗೃಹಗಳ ಮೇಲೆ ಯಾವ ಶಿಖರವೂ ಕಂಡುಬರುವುದಿಲ್ಲ. ಈ ದೇವಾಲಯದ ಹೊರಗೋಡೆಯ ಉಬ್ಬು ಕೆತ್ತನೆಯಲ್ಲಿ ಕೇವಲ ಒಂದು ಉಗ್ರ ನರಸಿಂಹನ ಶಿಲ್ಪ ಮಾತ್ರ ಕಂಡುಬಂದರೂ ಅದೂ ಸಹ ಭಗ್ನಗೊಂಡಿದ್ದು ದಕ್ಷಿಣ ಭಾಗದ ಗೋಡೆಯ ಮಧ್ಯಭಾಗದಲ್ಲಿ ಕೆತ್ತಲಾಗಿದೆ.

ವಿಜಯನಗರ ಮತ್ತು ಆನಂತರ ಕಾಲದಲ್ಲಿ ಈ ದೇವಾಲಯದ ಸುತ್ತಲೂ ಎತ್ತರವಾದ ಪ್ರಾಕಾರವನ್ನು ನಿರ್ಮಿಸಿ ಅದರ ಒಳಭಾಗದಲ್ಲಿ ಅನೇಕ ಕಂಬಗಳನ್ನು ಸೇರಿಸಲಾಗಿದೆ. ಈ ಕಂಬಗಳಲ್ಲಿ ಕೆಲವು ವಿಜಯನಗರ ಕಾಲದ ಬೋದಿಗೆಗಳಿಂದ ಕೂಡಿದ್ದರೆ, ಕೆಲವು ಕಂಬಗಳು ವಿಜಯನಗರ ಕಾಲದ ನಂತರದಲ್ಲಿ ನಿರ್ಮಿಸಿರುವುದು ಕಂಡುಬರುತ್ತದೆ. ಈ ಕಂಬಗಳೆಲ್ಲವೂ ಎತ್ತರದಿಂದ ಕೂಡಿದ್ದು, ಕಡುಗ್ರಾನೈಟ್ ಶಿಲೆಯಿಂದ ಮಾಡಲಾಗಿದೆ. ಪ್ರಾಕಾರದ ಮುಂಭಾಗ ಅಂದರೆ ಪೂರ್ವ ಭಾಗದ ದ್ವಾರದ ಮೇಲ್ಭಾಗದಲ್ಲಿ ಸುಮಾರು ೨೦-೨೫ ಅಡಿ ಎತ್ತರದ ಗೋಪುರವನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅದರ ಸಂರಕ್ಷಣೆ ಮತ್ತು ಪುನರ್ ನಿರ್ಮಾಣದ ಕಾರ್ಯ ನಡೆಯುತ್ತಿದೆ.

ಮೂರು ಗರ್ಭಗೃಹಗಳುಳ್ಳ ಈ ದೇವಾಲಯದಲ್ಲಿ ಮಧ್ಯದಲ್ಲಿರುವ ಅಂದರೆ ಪೂರ್ವದಿಕ್ಕಿಗೆ ತೆರೆದುಕೊಂಡಿರುವ ಗರ್ಭಗೃಹ ಬಹಳ ಮುಖ್ಯವಾದುದು. ಇದರ ಒಳಭಾಗ ಚೌಕಾಕಾರವಾಗಿದ್ದು ಯಾವುದೇ ಜಾಲಾಂದ್ರಗಳಿರುವುದಿಲ್ಲ. ಇದರ ಮಧ್ಯಭಾಗದಲ್ಲಿ, ಅದರ ಪೀಠವೂ ೭ ಅಡಿಗಳಷ್ಟು ಎತ್ತರದ ಸೌಮ್ಯಕೇಶವ ವಿಗ್ರಹವಿದೆ. ಹೆಸರಿಗೆ ತಕ್ಕಂತೆ ಸೌಮ್ಯವಾಗಿ ಕಾಣುವ ಈ ವಿಷ್ಣುವಿನ ವಿಗ್ರಹ ಸಮಭಂಗದಲ್ಲಿ ನಿಂತಿದ್ದು, ನಾಲ್ಕು ಕೈಗಳಿಂದ ಕೂಡಿದ್ದು ಮೇಲಿನ ಬಲಗೈನಲ್ಲಿ ಶಂಖ, ಕೆಳಗಿನ ಬಲಗೈನಲ್ಲಿ ಪದ್ಮ, ಮೇಲಿನ ಎಡಗೈನಲ್ಲಿ ಚಕ್ರ ಮತ್ತು ಕೆಳಗಿನ ಎಡಗೈನಲ್ಲಿ ಗಧೆಯನ್ನು ಹಿಡಿದಿದೆ. ಈ ವಿಷ್ಣುವಿನ ಎರಡೂ ಪಕ್ಕಗಳಲ್ಲಿ ಚಿಕ್ಕದಾಗಿ ಶ್ರೀದೇವಿ ಮತ್ತು ಭೂದೇವಿಯರನ್ನು ಸಹಾ ಕೆತ್ತಲಾಗಿದೆ. ಕರ್ನಾಟಕದ ಹೊಯ್ಸಳರ ಕಾಲದ ಕೇಶವ ಶಿಲ್ಪಗಳಲ್ಲಿ ತುಮಕೂರು ಜಿಲ್ಲೆಯ ಕೈದಾಳದ ಕೇಶವ ಶಿಲ್ಪ ಬಹಳ ಆಕರ್ಷಕ ಮತ್ತು ತಾಲಮಾನ ಪದ್ಧತಿಯಿಂದ ಕೆತ್ತಿದ ಅತ್ಯಂತ ಸುಂದರ ಶಿಲ್ಪವೆಂದು ಹೇಳಲಾಗುತ್ತಿತ್ತು. ಆದರೆ ಈಗ್ಗೆ ಕೆಲವು ದಿನಗಳ ಹಿಂದೆ ಒಬ್ಬ ಮೂರ್ಖ ತನ್ನ ಯಾವುದೋ ಸ್ವಂತದ ಕೋಪದಿಂದ ಈ ಕೇಶವ ಶಿಲ್ಪದ ಕೈಗಳನ್ನು ತುಂಡರಿಸಿದ ಮೇಲೆ ಈಗ ಈ ಸೌಮ್ಯಕೇಶವ ಶಿಲ್ಪವೇ ಹೊಯ್ಸಳರ ಕಾಲದ ಅತ್ಯಂತ ಆಕರ್ಷಕ ಮತ್ತು ಸುಂದರ ಶಿಲ್ಪವೆಂದು ಹೇಳಿದರೆ ತಪ್ಪಾಗಲಾರದು. ಈ ಸೌಮ್ಯಕೇಶವ ಶಿಲ್ಪದ ಪ್ರಭಾವಳಿಯಲ್ಲಿ ಸಣ್ಣದಾಗಿ ವಿಷ್ಣುವಿನ ದಶಾವತಾರದ ಉಬ್ಬುಶಿಲ್ಪಗಳನ್ನು ಕೆತ್ತಲಾಗಿದೆ. ಈ ಗರ್ಭಗೃಹದ ಭುವನೇಶ್ವರಿಯು ೯ ಪದ್ಮಗಳಿಂದ ಕೂಡಿದೆ.

ಗರ್ಭಗೃಹದ ಮುಂಭಾಗದಲ್ಲಿ ಚೌಕಾಕಾರದ ಸುಖನಾಸಿ ಇದ್ದು, ಇದರ ಮೇಲ್ಭಾಗದಲ್ಲಿಯೂ ಸಹ ಗರ್ಭಗೃಹದ ಮಾದರಿಯ ಭುವನೇಶ್ವರಿ ಕಂಡುಬರುತ್ತದೆ. ಗರ್ಭಗೃಹ ಮತ್ತು ಸುಖನಾಸಿಯ ದ್ವಾರಬಂಧಗಳು ಆರು ಅಡಿಗಳಷ್ಟು ಎತ್ತರವಾಗಿದ್ದು ಸರಳವಾಗಿ ಕಂಡುಬರುತ್ತದೆ.

ಸುಖನಾಸಿಯ ಮುಂಭಾಗದಲ್ಲಿ ೪೩ ಮತ್ತು ೩೫ ಅಡಿ ಅಳತೆಯ ಚೌಕಾಕಾರದ ನವರಂಗವನ್ನು ಕಟ್ಟಲಾಗಿದ್ದು, ಅದು ಒಟ್ಟು ೧೨ ಕಂಬ ಹಾಗೂ ೧೨ ಭುವನೇಶ್ವರಿಗಳಿಂದ ಕೂಡಿದೆ. ಈ ನವರಂಗದ ಮಧ್ಯಭಾಗದ ೪ ಕಂಬಗಳನ್ನು ತಿರುಗುವ ರಾಟೆಗಳ ಸಹಾಯದಿಂದ ತಿರುಗಿಸಿ ಆಕರ್ಷಕವಾಗಿ ಕೆತ್ತಿ ಚೆನ್ನಾಗಿ ಮೆರಗು ಕೊಡಲಾಗಿದೆ (ಚಿತ್ರ ೫). ಇದು ಸಾಮಾನ್ಯವಾಗಿ ಎಲ್ಲ ಹೊಯ್ಸಳ ದೇವಾಲಯಗಳ ನವರಂಗಗಳಲ್ಲಿ ಕಂಡುಬರುತ್ತದೆ. ಉಳಿದ ಕಂಬಗಳು ಕೊಳವೆ ಆಕಾರದ ಉದ್ದಪಟ್ಟಿಗಳುಳ್ಳ ಕೆತ್ತನೆಗಳಿಂದ ಕೂಡಿವೆ (ಚಿತ್ರ ೬). ಇಂತಹ ಕೆತ್ತನೆಗಳು ಕಂಬದ ಸುತ್ತಲೂ ಕಂಡುಬರುತ್ತದೆ. ಸೌಮ್ಯಕೇಶವ ದೇವಾಲಯದ ಮೂರು ಗರ್ಭಗೃಹಗಳನ್ನು ಹೊಂದಿದ್ದರೂ ಕೇವಲ ಪೂರ್ವಭಾಗದ ಗರ್ಭಗೃಹ ಮಾತ್ರ ಸುಖನಾಸಿಯನ್ನು ಹೊಂದಿದ್ದು, ಉಳಿದ ದಕ್ಷಿಣ ಮತ್ತು ಉತ್ತರದ ಗರ್ಭಗೃಹಗಳು ನೇರವಾಗಿ ನವರಂಗಕ್ಕೆ ತೆರೆದುಕೊಂಡು ಸುಖನಾಸಿಯನ್ನು ಹೊಂದಿರುವುದಿಲ್ಲ.

ಈ ರೀತಿಯ ಹೊಯ್ಸಳ ದೇವಾಲಯಗಳು ಅನೇಕ ಕಡೆ ಕಂಡುಬಂದಿವೆ. ಅವುಗಳಲ್ಲಿ ಮಂಡ್ಯ ಜಿಲ್ಲೆಯ ಹೊಸಹೊಳಲುವಿನ ಲಕ್ಷ್ಮೀನಾರಾಯಣ ಮತ್ತು ಕಕ್ಕೇರಿಯ ಬ್ರಹ್ಮೇಶ್ವರ ದೇವಾಲಯಗಳನ್ನು ಉದಾಹರಣೆಯಾಗಿ ಹೇಳಬಹುದು. ಉತ್ತರ ಭಾಗದ ಈ ಸಣ್ಣ ಗರ್ಭಗೃಹದಲ್ಲಿ ಈ ಲಕ್ಷ್ಮೀನಾರಸಿಂಹ ವಿಗ್ರಹವಿದ್ದು ಅದು ವಿಜಯನಗರ ನಂತರದ ಕಾಲದ್ಧಾಗಿದೆ. ಹಾಗೆಯೇ ದಕ್ಷಿಣ ಭಾಗದ ಗರ್ಭಗೃಹದಲ್ಲಿ ವೇಣುಗೋಪಾಲ ವಿಗ್ರಹವಿದ್ದು ಅದರ ಎಡ ಮತ್ತು ಬಲಭಾಗದಲ್ಲಿ ಸತ್ಯಭಾಮ ಮತ್ತು ರುಕ್ಮಿಣಿಯರ ಶಿಲ್ಪಗಳಿದ್ದು, ಅವು ಇತ್ತೀಚಿನ ಶಿಲ್ಪಗಳಾಗಿವೆ.

ನವರಂಗದ ೧೨ ಭುವನೇಶ್ವರಿಗಳಲ್ಲಿ ಮಧ್ಯ ಭಾಗದಲ್ಲಿರುವ ಭುವನೇಶ್ವರಿಯು ಬಹಳ ಆಕರ್ಷಕವಾಗಿದ್ದು ನಾಲ್ಕು ಒಂದರೊಳಗೊಂದು ಬರುವಂತೆ ವೃತ್ತಗಳಿಂದ ಕೂಡಿದ ಕೆತ್ತನೆಯಾಗಿದೆ (ಚಿತ್ರ ೭). ಅವುಗಳಲ್ಲಿರುವ ಅಲಂಕಾರಯುಕ್ತ ಕೆತ್ತನೆಗಳು ಕೆಳಗೆ ಬಾಗಿಕೊಂಡಿರುವಂತೆ ಕೂಡಿದ್ದು ಒಳಗಿನ ಮೂರು ವೃತ್ತಗಳಲ್ಲಿ ಮೊಗ್ಗುಗಳನ್ನು ಕೆತ್ತಲಾಗಿದೆ. ಈ ಭುವನೇಶ್ವರಿಯ ಮಧ್ಯಭಾಗದಲ್ಲಿ ದೊಡ್ಡ ಬಾಳೆಹೂವಿನ ಮೊಗ್ಗು ಕೆತ್ತಿರುವುದು ಕಂಡುಬರುತ್ತದೆ. ಇದರಲ್ಲಿನ ಮತ್ತೊಂದು ವಿಶೇಷವೆಂದರೆ, ಸುಮಾರು ೯ ರಿಂದ ೧೧ ಇಂಚುಗಳಷ್ಟು ಉದ್ದವಾದ ಈ ಮೊಗ್ಗಿನ ಬುಡದ ಭಾಗದಲ್ಲಿ ಒಂದು ನಾಗರಹಾವನ್ನು ಕೆತ್ತಲಾಗಿದೆ. ಹೊಯ್ಸಳರ ಕಾಲದ ದೇವಾಲಯಗಳ ಭುವನೇಶ್ವರಿಗಳಲ್ಲಿ ಇದೊಂದು ವಿಶೇಷವಾದ ಕೆತ್ತನೆ ಎಂದು ಹೇಳಬಹುದು. ಏಕೆಂದರೆ ಇಂತಹ ಬಾಳೆ ಅಥವಾ ಕಮಲದ ಹೂವಿನ ಮೊಗ್ಗುಗಳನ್ನು ಸುತ್ತುವರೆದಂತೆ ಹಾವುಗಳನ್ನು ಕೆತ್ತಿರುವುದು ಬಹಳ ಅಪರೂಪವಾಗಿದೆ. ಮಂಡ್ಯ ಜಿಲ್ಲೆಯಲ್ಲೇ ಇರುವ ಕೃಷ್ಣರಾಜಪೇಟೆಯ ತೆಂಗಿನಘಟ್ಟದಲ್ಲಿರುವ ಹೊಯ್ಸಳೇಶ್ವರ ದೇವಾಲಯದ ದಕ್ಷಿಣಾಭಿಮುಖವಾದ ಬಾಳೆಮೊಗ್ಗಿನ ಭುವನೇಶ್ವರಿಯ ಕಮಲದ ಹೂವಿನ ಅಥವಾ ಬಾಳೆಮೊಗ್ಗಿನ ಬುಡಭಾಗದಿಂದ ಹೊರಬಂದಂತೆ ನಾಲ್ಕು ನಾಗರಹಾವಿನ ಹೆಡೆಗಳು ಹಿಂಭಾಗ ಒಂದಕ್ಕೊಂದು ಸೇರಿಕೊಂಡಂತೆ ಕೆತ್ತಲಾಗಿದೆ. ಮಂಡ್ಯ ಜಿಲ್ಲೆಯಲ್ಲಿ ಕಂಡುಬರುವ ೫೦ಕ್ಕೂ ಹೆಚ್ಚು ಹೊಯ್ಸಳ ದೇವಾಲಯಗಳಲ್ಲಿ ಈ ಎರಡು ದೇವಾಲಯಗಳು ಮಾತ್ರ ಭುವನೇಶ್ವರಿಯ ಮೊಗ್ಗಿನಲ್ಲಿ ನಾಗರಹಾವುಗಳನ್ನು ಕೆತ್ತಲಾಗಿದೆ. ಇದರಲ್ಲಿಯ ಮತ್ತೊಂದು ವಿಶೇಷತೆಯೆಂದರೆ ತೆಂಗಿನ ಘಟ್ಟದ ದೇವಾಲಯವು ಶಿವನ ದೇವಾಲಯವಾಗಿದ್ದರೆ, ನಾಗಮಂಗಲದ ದೇವಾಲಯ ಕೇಶವನ ದೇವಾಲಯವಾಗಿದೆ. ನಾಗಮಂಗಲದ ಸ್ಥಳೀಯ ಜನರು ಈ ಕೇಶವ ದೇವಾಲಯದ ಭುವನೇಶ್ವರಿಯಲ್ಲಿರುವ ಈ ನಾಗರಹಾವಿನಿಂದಲೇ ನಾಗಮಂಗಲದ ಎಂಬ ಹೆಸರು ಬಂದಿದೆ ಎಂದು ಹೇಳುತ್ತಾರೆ. ಆದರೆ ಶಾಸನಗಳಲ್ಲಿ ಹೊಯ್ಸಳರ ಕಾಲದಲ್ಲೇ ನಾಗಮಂಗಲದ ಉಲ್ಲೇಖವಿದೆ. ನವರಂಗದ ಉಳಿದ ಭುವನೇಶ್ವರಿಗಳಲ್ಲಿ, ನಾಲ್ಕು ಮೂಲೆಗಳಲ್ಲಿ, ಅಂದರೆ ಆಗ್ನೇಯ, ವಾಯುವ್ಯ, ಈಶಾನ್ಯ ಮತ್ತು ನೈರುತ್ಯ ದಿಕ್ಕುಗಳ ಭುವನೇಶ್ವರಿಗಳನ್ನು ದೇವಾಲಯಕ್ಕೆ ಹೆಚ್ಚು ಬೆಳಕು ಬೇಕೆಂದು ತೆಗೆದು ಹಾಕಲಾಗಿದೆ. ನವರಂಗಕ್ಕೆ ಹೆಚ್ಚು ಬೆಳಕು ಬಂದರೂ ಅದು ದೇವಾಲಯದ ಅಂದವನ್ನೆ ಹಾಳುಮಾಡಿದೆ ಎಂದು ಹೇಳಬಹುದು.

ನವರಂಗಕ್ಕೆ ತೆರೆದುಕೊಂಡಿರುವ ದಕ್ಷಿಣ ಹಾಗೂ ಉತ್ತರ ದಿಕ್ಕಿನ ಗರ್ಭಗೃಹಗಳ ದ್ವಾರಬಂಧಗಳು ಬಹಳ ಸರಳವಾಗಿದ್ದು ಉಲ್ಲೇಖಿಸುವಂತಹ ಕಲೆ ಕಂಡುಬರುವುದಿಲ್ಲ. ಪೂರ್ವದಿಕ್ಕಿಗೆ ಇರುವ ಗರ್ಭಗೃಹದ ಬಾಗಿಲಿನ ಎರಡೂ ಪಕ್ಕಗಳಲ್ಲಿ ಕಂಡುಬರುವ ದ್ವಾರಪಾಲಕದ ಶಿಲ್ಪಗಳೂ ಸಹ ವಿಜಯನಗರ ಕಾಲದ ನಂತರದ್ದಾಗಿವೆ.

ಹೊಯ್ಸಳರ ಕಾಲದ ಶಾಸನಗಳಲ್ಲದೆ ನಾಗಮಂಗಲದಲ್ಲಿ ಐದು ವಿಜಯನಗರ ಕಾಲದ ಶಾಸನಗಳು ಕಂಡುಬಂದಿವೆ. ಅವುಗಳಲ್ಲಿ ೧೫ನೆಯ ಶತಮಾನದ ಒಂದು ಶಾಸನದಲ್ಲಿ ನಾಲ್ಕು ಗದ್ಯಾಣುಗಳನ್ನು ವ್ಯಯ ಮಾಡಿ ಈಗ ಅಲ್ಲಿ ನಿಂತಿರುವ ಏಕಶಿಲಾ ಕಂಬವನ್ನು ಕೆತ್ತಿಸಿ ನಿಲ್ಲಿಸಿರುವುದನ್ನು ಉಲ್ಲೇಖಿಸುತ್ತದೆ. ಅದೇ ರೀತಿ ಸೌಮ್ಯಕೇಶವ ದೇವಾಲಯಕ್ಕೆ ಕ್ರಿ.ಶ. ೧೫೪೪ ರಲ್ಲಿ ಸದಾಶಿವರಾಯನ ಕಾಲದಲ್ಲಿ ಅವನ ಸಾಮಂತ ರಾಜನಾದ ಚನ್ನರಾಜ, ತಿಮ್ಮಪ ನಾಯಕ ಮುಂತಾದವರು ದತ್ತಿ ದಾನಗಳನ್ನು ನೀಡಿರುವಂತೆ ಕಂಡುಬರುತ್ತದೆ. ಈ ಭಾಗದಲ್ಲಿ ಶಾಸನವು ಕಾರಣಾಂತರಗಳಿಂದ ಅಳಿಸಿಹೋಗಿರುವುದಿಂದ ಪೂರ್ಣಮಾಹಿತಿ ತಿಳಿದು ಬರುವುದಿಲ್ಲ. ಆದರೂ ಬೇಗೂರು ಎಂಬ ಊರಿನ ಹೆಸರು ಮಾತ್ರ ತಿಳಿದುಬಂದಿದ್ದು, ಬಹುಶಃ ಈ ಬೇಗೂರನ್ನು ದತ್ತಿ ನೀಡಿರಬಹುದು ?

ದೇವಾಲಯದ ಮುಂಭಾಗದಲ್ಲಿರುವ ಏಕಶಿಲಾ ಸ್ತಂಭದ (ದೀಪ ಸ್ತಂಭ) ಕೆಳಭಾಗದಲ್ಲಿ ಸುಮಾರು ಐದು ಅಡಿ ಎತ್ತರದ ಪೀಠವಿದೆ. ಸ್ಥಂಭದ ಕೆಳಭಾಗದಲ್ಲಿ ಒಂದು ಕಡೆ ಸಮಭಂಗದಲ್ಲಿ ಭಕ್ತಿಯಿಂದ ನಿಂತಿರುವ ಗರುಡನ ವಿಗ್ರಹ, ಮತ್ತೊಂದು ಕಡೆ ಆಂಜನೇಯನ ಶಿಲ್ಪ, ಇನ್ನೊಂದು ಕಡೆ ಶಂಖ ಹಾಗು ಚಕ್ರವನ್ನು ಕೆತ್ತಲಾಗಿದೆ. ಈ ಶಿಲ್ಪಗಳೆಲ್ಲವು ಉಬ್ಬು ಕೆತ್ತನೆಯ ಶಿಲ್ಪಗಳಾಗಿದ್ದು ವಿಜಯನಗರ ಕಾಲದ ಶಿಲ್ಪಗಳ ಗುಣಲಕ್ಷಣಗಳನ್ನು ಹೊಂದಿವೆ. ಈ ಸ್ಥಂಭವನ್ನು ವಿಜಯನಗರ ಕಾಲದಲ್ಲಿ ಸ್ಥಾಪಿಸಲಾಗಿದೆ ಎಂದು ಹೇಳಬಹುದು (ಚಿತ್ರ ೮).

ಭುವನೇಶ್ವರ ದೇವಾಲಯ

ನಾಗಮಂಗಲ ಅಗ್ರಹಾರದ ಮತ್ತೊಂದು ಪ್ರಮುಖ ದೇವಾಲಯವೇ ಈ ಭುವನೇಶ್ವರ ದೇವಾಲಯ. ಕಲೆ ಮತ್ತು ವಾಸ್ತುಶಿಲ್ಪದ ದೃಷ್ಟಿಯಿಂದ ಸಾಮಾನ್ಯ ದೇವಾಲಯದಂತೆ ಕಂಡರೂ ಇದನ್ನು ಸೋಪುಗಲ್ಲಿನಿಂದ ಮತ್ತು ಗ್ರಾನೈಟ್ ಶಿಲೆಗಳಿಂದ ಕಟ್ಟಲಾಗಿದೆ. ಇಲ್ಲಿಯೂ ಸಹ ಹೊರಗೋಡೆಯಲ್ಲಿ ಅಡ್ಡಪಟ್ಟಿ ಕೆತ್ತನೆಗಳಿಲ್ಲದಿದ್ದರೂ ಅಡ್ಡಗೋಡೆಯ ವಿವಿಧ ಪಟ್ಟಿಕೆಗಳನ್ನು ಸೇರಿಸಿ ಕೆಳಭಾಗವನ್ನು ನಿರ್ಮಿಸಲಾಗಿದೆ. ಆದರೆ ಈಗ ಈ ಕೆಳಗಿನ ಅಡ್ಡಗೋಡೆಯ ಕೆಳಭಾಗ ಮಣ್ಣಿನಿಂದ ಮುಚ್ಚಿಕೊಂಡು ಬಿಟ್ಟಿದೆ. ಹೊರಗೆ ಕಾಣುವ ಅಡ್ಡಗೋಡೆಯಲ್ಲಿ ಹಲವು ರೀತಿಯ ಅಲಂಕಾರದ ಕೆತ್ತನೆಗಳು ಕಂಡುಬರುತ್ತವೆ. ದೇವಾಲಯವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದಕ್ಕೆ ಎತ್ತರ ಹಾಗೂ ಅಗಲವಾದ ಜಗತಿ ಇದ್ದಂತೆ ಕಂಡುಬರುವುದಿಲ್ಲ. ದೇವಾಲಯದ ಹೊರಗೋಡೆಯಲ್ಲಿ ಯಾವುದೇ ದೇವತೆಗಳ ಶಿಲ್ಪ ಕಂಡುಬರುವುದಿಲ್ಲ ಮತ್ತು ಅಲಂಕಾರಿಕ ಕಂಬಗಳಾಗಲಿ, ದೇವಕೋಷ್ಠಗಳಾಗಲಿ ಅವುಗಳ ಮೇಲಿನ ಸಣ್ಣ ಶಿಖರ ಅಥವಾ ಚಜ್ಜಗಳಾಗಲಿ ಕಂಡುಬರುವುದಿಲ್ಲ. ಆದರೆ ದೇವಾಲಯದ ಗರ್ಭಗುಡಿಯ ಹೊರಭಾಗದಲ್ಲಿ ಸಮಾನ ಅಂತರದಲ್ಲಿ ಉದ್ದನೆಯ ಅಲಂಕಾರಯುಕ್ತ ಕಂಬಗಳಿದ್ದು ಅವುಗಳ ಮಧ್ಯಭಾಗದಲ್ಲಿ ಉಬ್ಬು ಕೆತ್ತನೆಯಲ್ಲಿ ಹೂವಿನ ಚಿತ್ರಗಳನ್ನು ಕೆತ್ತಲಾಗಿದೆ. ಇದನ್ನು ಬಿಟ್ಟರೆ ಈ ದೇವಾಲಯದಲ್ಲಿ ಬೇರಾವ ಕೆತ್ತನೆಗಳೂ ಕಂಡುಬರುವುದಿಲ್ಲ. ಗರ್ಭಗೃಹದ ಹೊರಗೋಡೆಗಳಲ್ಲಿಯೂ ಸಹ ಯಾವುದೂ ಅಲಂಕಾರಕಯುಕ್ತ ಕೆತ್ತನೆಗಳು ಕಂಡುಬರುವುದಿಲ್ಲ.

ಹೊಯ್ಸಳರು ನಿರ್ಮಿಸಿರುವ ಕರ್ನಾಟಕದಲ್ಲಿನ ಅನೇಕ ಅಗ್ರಹಾರಗಳಲ್ಲಿ ಒಂದು ಶಿವನ ದೇವಸ್ಥಾನವಿದ್ದರೆ ಮತ್ತೊಂದು ವಿಷ್ಣುವಿನ ದೇವಾಲಯವಿರುತ್ತದೆ. ಅವುಗಳಲ್ಲಿ ಯಾವುದಾದರೂ ಒಂದು ದೇವಾಲಯವನ್ನು ಬಹಳ ಎಚ್ಚರಿಕೆಯಿಂದ ಸುಂದರವಾಗಿ, ಆಕರ್ಷಕವಾಗಿ ವಾಸ್ತುಶಿಲ್ಪ ಮತ್ತು ಶಿಲ್ಪಕಲೆಯಲ್ಲಿ ಹೊಯ್ಸಳ ಶೈಲಿಯ ಎಲ್ಲ ಗುಣಲಕ್ಷಣಗಳು ಕಂಡುಬರುವಂತೆ ಕೆತ್ತಿ ಕಟ್ಟಿದ್ದರೆ ಮತ್ತೊಂದು ದೇವಾಲಯವನ್ನು ಸಾಧಾರಣವಾಗಿ ಸರಳವಾಗಿ ನಿರ್ಮಿಸಿರುತ್ತಾರೆ. ಅದು ವಿಷ್ಣು ಅಥವಾ ಶಿವ ಈ ಎರಡರಲ್ಲಿ ಯಾವುದಾದರೂ ಒಂದಾಗಿರಬಹುದು. ಬಹುಶಃ ಆ ಅಗ್ರಹಾರದಲ್ಲಿ ನೆಲೆಸುವ ಆಯ ಸಮುದಾಯಗಳ ಜನಸಂಖ್ಯೆಯ ಆಧಾರದ ಮೇಲೆ ಹೀಗೆ ಮಾಡಿರಬಹುದೇ? ಅಥವಾ ಇನ್ನಾವುದೇ ಕಾರಣದಿಂದ ಹೀಗೆ ಮಾಡಿರಬಹುದು ಎಂದು ಸರಿಯಾಗಿ ತಿಳಿದುಕೊಳ್ಳಲು ನಮಗೆ ಶಾಸನಗಳಾಗಲಿ ಅಥವಾ ಬೇರಾವುದೇ ಆಧಾರಗಳು ಕಂಡುಬರುವುದಿಲ್ಲ. ಇವುಗಳಿಗೆ ಉದಾಹರಣೆಗಳೆಂದರೆ ಮೈಸೂರು ಜಿಲ್ಲೆಯ ಸೋಮನಾಥಪುರ, ಮಂಡ್ಯ ಜಿಲ್ಲೆಯ ಬಸರಾಳು, ಹೊಸಬೂದನೂರು, ಕಿಕ್ಕೇರಿ, ಗೋವಿಂದನಹಳ್ಳಿ, ಸಿಂಧಘಟ್ಟ.

 

ಈ ಭುವನೇಶ್ವರ ದೇವಾಲಯವು ಏಕಕೂಟ ದೇವಾಲಯವಾಗಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ಇಟ್ಟಿಗೆ ಮತ್ತು ಗಾರೆಯಿಂದ ಹೊಯ್ಸಳರ ನಂತರದ ಕಾಲದಲ್ಲಿ ಕಟ್ಟಿದ ಪಿರಮಿಡ್ ಆಕಾರದ ಶಿಖರವಿದೆ. ಈ ದೇವಾಲಯಕ್ಕೆ ನೇರವಾಗಿ ಪೂರ್ವದಿಕ್ಕಿಗೆ ಬಾಗಿಲಿರದೆ ದಕ್ಷಿಣದ ದಿಕ್ಕಿನ ಕಡೆಗೆ ಬಾಗಿಲನ್ನು ನೋಡಬಹುದಾಗಿದೆ. ಇದರ ಮುಂಭಾಗದಲ್ಲಿ ಒಂದು ತೆರೆದ ಮುಖಮಂಟಪವಿದ್ದು ವಿಜಯನಗರ ಅಥವಾ ಅನಂತರ ಕಾಲದ ಕಂಬಗಳಿಂದ ಕೂಡಿದೆ. ಹೊಯ್ಸಳರ ಕಾಲದಲ್ಲಿ ಸೋಪುಗಲ್ಲಿನಿಂದ ದೇವಾಲಯವನ್ನು ಕಟ್ಟಿದ್ದರೂ ಯಾವ ರೀತಿಯಲ್ಲೂ ಇದು ಸೌಮ್ಯಕೇಶವ ದೇವಾಲಯಕ್ಕೆ ಹೋಲಿಕೆ ಆಗುವುದಿಲ್ಲ.

ಈ ದೇವಾಲಯದ ಗರ್ಭಗೃಹದ ಹೊರಗೋಡೆಗಳನ್ನು ಮಾತ್ರ ಸೋಪುಗಲ್ಲಿನಿಂದ ಕಟ್ಟಿರುವುದು ಕಂಡು ಬರುತ್ತದೆಯಲ್ಲದೆ ಕಲೆ ಮತ್ತು ವಾಸ್ತುಶಿಲ್ಪದ ದೃಷ್ಠಿಯಿಂದ ಬಹಳ ಸರಳವಾಗಿದೆ. ಇದರ ಮತ್ತೊಂದು ವಿಶೇಷವೆಂದರೆ, ಸಣ್ಣ ಗರ್ಭಗೃಹ ಮತ್ತು ಅದೇ ಅಳತೆಯ ಸುಖನಾಸಿಯನ್ನು ಹೊಂದಿದ್ದು, ಒಳ ಅವರಣದ ಕಂಬಗಳು ಮತ್ತು ಇತ್ಯಾದಿಗಳಿಗೆ ಕಪ್ಪು ಗ್ರಾನೈಟ್ ಶಿಲೆಯ ಕಲ್ಲನ್ನು ಬಳಸಿರುವುದು. ಸಾಮಾನ್ಯವಾಗಿ ಹೊಯ್ಸಳರ ದೇವಾಲಯಗಳ ನವರಂಗದ ಮಧ್ಯಭಾಗದ ನಾಲ್ಕು ಕಂಬಗಳನ್ನು ಸೋಪುಗಲ್ಲನ್ನು ಬಳಸಿ ತಿರುಗುರಾಟೆಗಳ ಸಹಾಯದಿಂದ ತಿರುಗಿಸಿ ನಯವಾಗಿ ಮಾಡಿರುತ್ತಾರೆ. ಆದರೆ ಈ ಭುವನೇಶ್ವರಿ ದೇವಾಲಯದ ನವರಂಗದ ಮಧ್ಯಭಾಗದ ನಾಲ್ಕು ಕಂಬಗಳು ಸರಳ ಹಾಗೂ ಸುಂದರವಾಗಿದ್ದು ಗ್ರಾನೈಟ್ ಶಿಲೆಯಿಂದ ತಯಾರಿಸಲಾಗಿದೆ. ಹೊಯ್ಸಳರ ಕಾಲದ ಕೆಲವು ಅಗ್ರಹಾರಗಳಲ್ಲಿ ಎರಡು ದೇವಾಲಯಗಳನ್ನು ಕಟ್ಟಿ ಅವುಗಳಲ್ಲಿ ಒಂದು ದೇವಾಲಯವನ್ನು ಸೋಪುಗಲ್ಲಿನಿಂದ ಕಟ್ಟಿದ್ದರೂ ಮತ್ತೊಂದು ದೇವಾಲಯವನ್ನು ಸರಳವಾಗಿ ಗ್ರಾನೈಟ್ ಶಿಲೆಯನ್ನು ಬಳಸಿ ಕಟ್ಟಿರುವುದು ಕಂಡುಬರುತ್ತದೆ. ಅಲ್ಲದೆ ಅಂತಹ ಗ್ರಾನೈಟ್ ಶಿಲೆಯಿಂದ ಕಟ್ಟಿದ ದೇವಾಲಯಗಳ ಒಳಭಾಗದಲ್ಲಿ ಗ್ರಾನೈಟ್ ಶಿಲೆಯಿಂದ ಮಾಡಿದ ಕಂಬಗಳನ್ನು ಕಾಣಬಹುದು. ಇದಕ್ಕೆ ಉದಾಹರಣೆಯಾಗಿ ಹೇಳಬೇಕೆಂದರೆ ಮಂಡ್ಯ ಜಿಲ್ಲೆಯ ಗೋವಿಂದನಹಳ್ಳಿಯ ಪಂಚಲಿಂಗೇಶ್ವರ ದೇವಾಲಯ, ಇದೇ ಜಿಲ್ಲೆಯ ಅಘಲಯದ ಮಲ್ಲೇಶ್ವರ ದೇವಾಲಯ, ಮೈಸೂರು ಜಿಲ್ಲೆಯ ಸೋಮನಾಥಪುರದ ಪಂಚಲಿಂಗೇಶ್ವರ ದೇವಾಲಯಗಳನ್ನು ಹೇಳಬಹುದು.

ನವರಂಗದ ಭುವನೇಶ್ವರಿಗಳಲ್ಲಿ, ಮಧ್ಯಭಾಗದಲ್ಲಿರುವ ಭುವನೇಶ್ವರಿಯಲ್ಲಿ ಮಾತ್ರ ಕೇವಲ ಉಬ್ಬು ಕೆತ್ತನೆಯಲ್ಲಿ ಕೆತ್ತಿರುವ ಪತ್ನಿ ಸಮೇತರಾಗಿ ತಮ್ಮ ವಾಹನಗಳ ಮೇಲೆ ಕುಳಿತಿರುವ ಅಷ್ಠದಿಕ್ಪಾಲಕರ ಶಿಲ್ಪಗಳನ್ನು ಕಾಣಬಹುದು. ಈ ಭುವನೇಶ್ವರಿಯ ಮಧ್ಯಭಾಗದಲ್ಲಿ ನಟರಾಜನ ಶಿಲ್ಪವನ್ನು ಕಾಣಬಹುದು. ನವರಂಗದ ಉಳಿದ ಭುವನೇಶ್ವರಿಗಳೆಲ್ಲವೂ ಸರಳವಾಗಿ ಕಂಡುಬರುತ್ತವೆ. ಈ ದೇವಾಲಯದ ನವರಂಗದ ಈಶಾನ್ಯ ಭಾಗದಲ್ಲಿ ಕಾರ್ತಿಕೇಯ, ಮಹಿಷಮರ್ದಿನಿ ಮತ್ತು ಪೀಠಸಹಿತ ಒಂದು ಲಿಂಗ ಇಟ್ಟಿದ್ದರೆ, ನೈರುತ್ಯದಲ್ಲಿ ಗಣಪತಿ ಮತ್ತು ಲಕುಲೀಶ ಶಿಲ್ಪಗಳಿವೆ. ಆಗ್ನೇಯದಲ್ಲಿ ಗಣಪತಿ, ಸೂರ್ಯ ಹಾಗೂ ಚಂದ್ರಮೌಳೇಶ್ವರ ದೇವತಾ ಶಿಲ್ಪಗಳಿವೆ. ವಾಯುವ್ಯದಲ್ಲಿ ಮತ್ತೆ ಕಾರ್ತಿಕೇಯ, ಮಹಾವಿಷ್ಣು ಮತ್ತು ಪಾರ್ವತಿ ಶಿಲ್ಪಗಳನ್ನು ಕಾಣಬಹುದು. ಈ ಶಿಲ್ಪಗಳ ಕಾಲಗಳನ್ನು ಗುರ್ತಿಸುವುದು ಕಷ್ಟವಾದರೂ ದೇವಾಲಯದ ಸುತ್ತಮುತ್ತ ಸಿಕ್ಕಿದ ಅಥವಾ ದೇವಾಲಯಕ್ಕೆ ಸೇರಿದ ಶಿಲ್ಪಗಳು ಇವಾಗಿವೆ. ಈ ಶಿಲ್ಪಗಳಲ್ಲದೆ ನವರಂಗದ ಮಧ್ಯಭಾಗದ ನಾಲ್ಕು ಕಂಬಗಳ ಮಧ್ಯೆ ಒಂದು ನಂದಿಶಿಲ್ಪ ಸಹ ಕಂಡುಬರುತ್ತದೆ. ದೇವಾಲಯದ ಪೂರ್ವಭಾಗಕ್ಕೆ ಇರುವ ಸಣ್ಣ ಬಾಗಿಲುಗಳ ಬಾಗಿಲುವಾಡಗಳು ಸರಳವಾಗಿ ಹೊಯ್ಸಳ ಮಾದರಿಯಲ್ಲಿ ಅಲಂಕರಿಸಲಾಗಿದೆ. ದಕ್ಷಿಣ ದಿಕ್ಕಿನ ದ್ವಾರದಲ್ಲಿ ಕಂಡುಬರುವ ತೆರೆದ ಮುಖಮಂಟಪ ಆನಂತರ ಕಾಲದಲ್ಲಿ ಕಟ್ಟಿಸಲಾಗಿದ್ದು ದೊಡ್ಡ ದೊಡ್ಡ ಗ್ರಾನೈಟ್ ಕಂಬಗಳನ್ನು ಹೊಂದಿದೆ. ಈ ದೇವಾಲಯದ ಮೂಲನಕ್ಷೆ, ಕಟ್ಟಿರುವ ಶೈಲಿ, ಬಳಸಿರುವ ಸೋಪುಗಲ್ಲು ಮತ್ತು ಗ್ರಾನೈಟ್ ಶಿಲೆಯ ಕಂಬಗಳು, ಹೆಚ್ಚು ಅಲಂಕಾರಯುಕ್ತ ಕೆತ್ತನೆಗಳಿಲ್ಲದಿರುವುದು, ದೇವಾಲಯದ ಅಳತೆ, ಭುವನೇಶ್ವರಿಗಳ ಸರಳತೆ ಇತ್ಯಾದಿಗಳ ಆಧಾರದ ಮೇಲೆ ಈ ದೇವಾಲಯವನ್ನು ಹೊಯ್ಸಳರ ಪ್ರಾರಂಭದ ಕಾಲದ ಸರಳ ದೇವಾಲಯವೆಂದು ಗುರ್ತಿಸಬಹುದಾಗಿದೆ.

ಈ ದೇವಾಲಯದಲ್ಲಿ ಬಹಳಷ್ಟು ಅಳಿಸಿಹೋಗಿರುವ ಒಂದು ಶಾಸನದ ಕಲ್ಲು ಕಂಡುಬರುತ್ತದೆ. ಈ ಕಲ್ಲು ಮತ್ತು ಶಾಸನದ ಲಿಪಿಯ ಆಧಾರದ ಮೇಲೆ ಇದನ್ನು ಹೊಯ್ಸಳರ ಕಾಲದ ಶಾಸನ ಎಂದು ಸುಲಭವಾಗಿ ಗುರ್ತಿಸಬಹುದಾಗಿದೆ. ಇಲ್ಲಿ ಕಂಡುಬರುವ ಹೊಯ್ಸಳರ ಕಾಲದ ಮೊದಲ ಶಾಸನವು ಕ್ರಿ.ಶ. ೧೧೩೪ರಲ್ಲಿ ಬರೆಯಲಾಗಿದ್ದು ವಿಷ್ಣುವರ್ಧನನ ಪಟ್ಟದ ರಾಣಿ ಬೊಮ್ಮಲದೇವಿಯು ಶಂಕರನಾರಾಯಣ ದೇವಾಲಯಕ್ಕೆ ಅರಿಕನಕಟ್ಟೆ ಎಂಬ ಹಳ್ಳಿಯನ್ನು ದತ್ತಿಬಿಟ್ಟಿರುವುದು ಇದರಿಂದ ತಿಳಿದುಬರುತ್ತದೆ. ಅಂದರೆ ಕ್ರಿ.ಶ. ೧೧೩೪ಕ್ಕೂ ಮೊದಲೇ ನಾಗಮಂಗಲದಲ್ಲಿ ಶಂಕರನಾರಾಯಣ ದೇವಾಲಯ ಇದ್ದಿರಬೇಕು? ಆದರೆ ನಾಗಮಂಗಲವನ್ನು ಸಂಪೂರ್ಣವಾಗಿ ಕ್ಷೇತ್ರಕಾರ್ಯಕ್ಕೆ ಒಳಪಡಿಸಿ ಇಲ್ಲಿಯ ಜನರನ್ನು ಕೇಳಿದರೂ ಯಾರಿಗೂ ಸಹ ಈ ಶಂಕರನಾರಾಯಣ ದೇವಾಲಯದ ಬಗ್ಗೆ ತಿಳಿದುಬರುವುದಿಲ್ಲ. ಹಾಗು ಈಗ ಕಂಡುಬರುವ ಭುವನೇಶ್ವರ ದೇವಾಲಯವನ್ನು ಯಾರ ಕಾಲದಲ್ಲಿ ಕಟ್ಟಲಾಯಿತು ಮತ್ತು ಭುವನೇಶ್ವರ ದೇವಾಲಯ ಎಂದು ಯಾವಾಗ ಕರೆಯಲ್ಪಟ್ಟಿತು ಎಂದು ತಿಳಿದುಕೊಳ್ಳುವುದು ಸಹ ಕಷ್ಟವಾಗುವುದರಿಂದ ಈ ಭುವನೇಶ್ವರ ದೇವಾಲಯವೇ ಶಂಕರನಾರಾಯಣ ದೇವಾಲಯ ಏಕೆ ಆಗಿರಬಾರದು ಎಂಬ ಅನುಮಾನ ಸಹ ಮೂಡಿಬರುತ್ತದೆ. ಈ ದೇವಾಲಯದ ಕಲೆ ಮತ್ತು ವಾಸ್ತುಶಿಲ್ಪದಲ್ಲಿ ಕಂಡುಬರುವ ಸರಳತೆಯ ಆಧಾರ ಮತ್ತು ಸೋಪುಗಲ್ಲು ಹಾಗು ಗ್ರಾನೈಟ್ ಶಿಲೆಗಳೆರಡನ್ನು ಬಳಸಿ ಇತರೆ ಹೊಯ್ಸಳ ದೇವಾಲಯಗಳ ಯಾವ ಅಲಂಕರಣಗಳು ಇಲ್ಲದಿರುವುದರಿಂದ, ಕ್ರಿ.ಶ.೧೧೩೪ಕ್ಕೂ ಮೊದಲೇ ಕಟ್ಟಿದ ಶಂಕರನಾರಾಯಣ ದೇವಾಲಯ ಇದೇ ಆಗಿದ್ದು ಅನಂತರ ಕಾಲದಲ್ಲಿ ಭುವನೇಶ್ವರ ದೇವಾಲಯವಾಗಿರಬೇಕೆಂಬ ಅನುಮಾನ ಮೂಡುತ್ತದೆ. ನನ್ನ ಮಟ್ಟಿಗೆ ಈ ಅನುಮಾನಗಳಿದ್ದರು ಈ ದೇವಾಲಯದ ಬಗ್ಗೆ ಇನ್ನೂ ಹೆಚ್ಚಿನ ಸಂಶೋಧನೆ ನಡೆಯಬೇಕೆಂದು ಮತ್ತು ಈ ಶಂಕರನಾರಾಯಣ ದೇವಾಲಯದ ಇನ್ನೂ ಹೆಚ್ಚಿನ ಸಂಶೋಧನಾತ್ಮಕವಾದ ಮಾಹಿತಿಗಳು ಬೇಕಾಗಿವೆ ಎಂದು ಭಾವಿಸುತ್ತೇನೆ.

ಈ ದೇವಾಲಯದ ಉತ್ತರಾಭಿಮುಖವಾದ ಪೂರ್ವದಿಕ್ಕಿನಲ್ಲಿ ಒಂದು ಗುಡಿಯು ಇದ್ದು ಅದೂ ಸಹ ಹೊಯ್ಸಳರ ನಂತರದ ಕಾಲದಲ್ಲಿ ಕಟ್ಟಲಾಗಿದೆ. ಕೇವಲ ಒಂದು ಗರ್ಭಗುಡಿಯಿದ್ದು ಅದರಲ್ಲಿ ಇತ್ತೀಚಿನ ಕಾಲದ ಒಂದು ಲಿಂಗ ಹಾಗು ಗುಡಿಯ ಹೊರಗೆ ಒಂದು ಶಿವನ ಶಿಲ್ಪವಿದೆ. ಈ ಗುಡಿಯ ಬಾಗಿಲಿನ ಬಲಭಾಗದಲ್ಲಿ ನಾಗರಶಿಲ್ಪಗಳನ್ನು ತಂದಿಡಲಾಗಿದೆ. ಇವುಗಳ ಕಾಲವನ್ನು ಗುರ್ತಿಸುವುದು ಕಷ್ಟವಾದರೂ ಹೊಯ್ಸಳರ ನಂತರ ಕಾಲದ್ದೆಂದು ಹೇಳಬಹುದು.

ಅದೇ ರೀತಿ ಭುವನೇಶ್ವರ ದೇವಾಲಯದ ದಕ್ಷಿಣಾಭಿಮುಖವಾದ ಪೂರ್ವಭಾಗದ ಅಕ್ಕಪಕ್ಕದಲ್ಲಿ ಸಣ್ಣದಾದ ಗ್ರಾನೈಟ್ ಶಿಲೆಯಿಂದ ನಿರ್ಮಿಸಿದ ಎರಡು ಗುಡಿಗಳು ಕಂಡುಬರುತ್ತವೆ. ಇವುಗಳ ಮುಂದೆ ಒಂದು ದೀಪಸ್ಥಂಭ ಸಹ ಕಂಡುಬರುತ್ತದೆ.

ಯೋಗನರಸಿಂಹ ದೇವಾಲಯ

ಊರಿನ ಮಧ್ಯಭಾಗದಲ್ಲಿರುವ ಯೋಗನರಸಿಂಹ ದೇವಾಲಯವನ್ನು ಸಹ ಹೊಯ್ಸಳರ ಕಾಲದಲ್ಲೇ ಕಟ್ಟಿದ್ದರೂ ಸಂಪೂರ್ಣವಾಗಿ ಗ್ರಾನೈಟ್ ಶಿಲೆಯಿಂದ ಕಟ್ಟಲಾಗಿದೆ. ಮಂಡ್ಯ ಜಿಲ್ಲೆಯ ತೊಣ್ಣೂರಿನಲ್ಲಿ ಗ್ರಾನೈಟ್ ಶಿಲೆಯನ್ನು ಬಳಸಿ ಕಟ್ಟಿರುವ ನರಸಿಂಹ ದೇವಾಲಯಕ್ಕೆ ಹೋಲಿಸಬಹುದಾಗಿದೆ (ಚಿತ್ರ ೯). ಇದು ಸಹ ಸರಳ ಮತ್ತು ಸುಂದರವಾದ ದೇವಾಲಯ. ಸುತ್ತಲೂ ಎತ್ತರವಾದ ಈ ಪ್ರಾಕಾರವಿದೆ. ಈ ಪ್ರಾಕಾರವನ್ನು ವಿಜಯನಗರ ಅಥವಾ ಅನಂತರದ ಕಾಲದಲ್ಲಿ ಸೇರಿಸಬಹುದು. ಈಗ ಅದರ ಮೇಲೆ ಹಳದಿ ಮತ್ತು ಕಪ್ಪು ಬಣ್ಣದ ಪಟ್ಟೆಗಳನ್ನು ಹೊಡೆದಿದ್ದಾರೆ.

ಈ ಯೋಗನರಸಿಂಹ ದೇವಾಲಯ ಒಂದು ಸಣ್ಣ ಗರ್ಭಗೃಹ, ಅದರ ಮುಂದೆ ಸುಖನಾಸಿ, ಈ ಸುಖನಾಸಿಯ ಮುಂಭಾಗದಲ್ಲಿ ಮತ್ತೊಂದು ಸುಖನಾಸಿ ಇದ್ದು ಇದರ ಮುಂಭಾಗದಲ್ಲಿ ನವರಂಗವನ್ನು ಕಾಣಬಹುದು. ಗರ್ಭಗುಡಿಯ ಮಧ್ಯಭಾಗದಲ್ಲಿ ಯೋಗಪಟ್ಟದಲ್ಲಿ ಕುಳಿತಿರುವ ಯೋಗನರಸಿಂಹ ವಿಗ್ರಹವು ತನ್ನ ಪೀಠವೂ ಸೇರಿ ಸುಮಾರು ೫ ಅಡಿಗಳಷ್ಟು ಎತ್ತರವಿದೆ. ಮೂಲವಿಗ್ರಹಕ್ಕೆ ಹೆಚ್ಚಿನ ಅಲಂಕಾರ ಮಾಡಿರುವುದರಿಂದ ಶಿಲ್ಪದ ವಿವರಣೆಗಳನ್ನು ಕೊಡಲು ಸಾಧ್ಯವಾಗುವುದಿಲ್ಲ. ದೇವಾಲಯವು ಒಂದು ಸಂರಕ್ಷಿತ ಸ್ಮಾರಕವಾಗಿದ್ದರೂ ಗರ್ಭಗುಡಿಯ ಮೂರ್ತಿಯ ಛಾಯಾಚಿತ್ರ ತೆಗೆಯಲು ಅವಕಾಶ ನೀಡುವುದಿಲ್ಲ. ನಾನು ಅನೇಕ ಬಾರಿ ಪ್ರಯತ್ನ ನಡೆಸಿ ವಿಫಲನಾಗಿದ್ದೇನೆ. ಆದರೂ ಮೂಲವಿಗ್ರಹವನ್ನು ಹೊಯ್ಸಳರ ಕಾಲದ ಸೋಪುಗಲ್ಲಿನಿಂದ ಮಾಡಿದ ವಿಗ್ರಹ ಎಂದು ಹೇಳಬಹುದು.

ನವರಂಗದ ಕಂಬಗಳೆಲ್ಲವೂ ಕಡು ಗ್ರಾನೈಟ್ ಶಿಲೆಯಿಂದ ಮಾಡಲಾಗಿದೆ. ಆದರೂ ಅವುಗಳೆಲ್ಲವೂ ಹೊಯ್ಸಳ ಮಾದರಿಯಲ್ಲೇ ಇರುವುದು ಕಂಡುಬರುತ್ತದೆ. ನವರಂಗದ ಮುಂಭಾಗದಲ್ಲಿ ಮುಖಮಂಟಪದ ಕಂಡುಬರುವುದಿಲ್ಲ. ಆದರೆ ದೇವಾಲಯದ ಮುಂಭಾಗದಲ್ಲಿ ಬಹಳ ವಿಶಾಲವಾದ ಮತ್ತು ಎತ್ತರವಾದ ಅನೇಕ ಗ್ರಾನೈಟ್ ಶಿಲೆಯ ಕಂಬಗಳಿಂದ ಕೂಡಿದ ಪಾತಾಳಂಕಣವನ್ನು ಸೇರಿಸಲಾಗಿದ್ದು, ಇದನ್ನು ವಿಜಯನಗರ ಅಥವಾ ಆನಂತರ ಕಾಲದಲ್ಲಿ ಕಟ್ಟಿರಬಹುದು. ದೇವಾಲಯದ ಹೊರಗೋಡೆಗಳಲ್ಲಿ ಯಾವುದೇ ಅಲಂಕಾರಯುಕ್ತ ಕೆತ್ತನೆಗಳಾಗಲಿ ಅಥವಾ ಶಿಲ್ಪಗಳಾಗಲಿ ಕಂಡುಬಾರದೆ ಇರುವುದು ವಿಶೇಷವಾಗಿದೆ. ಆದರೆ ಅಲ್ಲಲ್ಲಿ ಕೇವಲ ಸಣ್ಣ ಸಣ್ಣ ಅಲಂಕಾರಯುಕ್ತ ಕಂಬಗಳನ್ನು ಮಾತ್ರ ಕೆತ್ತಲಾಗಿದೆ. ಗರ್ಭಗೃಹದ ಮೇಲ್ಭಾಗದಲ್ಲಿ ಸಾಮಾನ್ಯ ಅಳತೆಗಿಂತ ಸ್ವಲ್ಪ ಚಿಕ್ಕದಾದ ಒಂದು ಶಿಖರವಿದೆ. ಇದನ್ನು ಇಟ್ಟಿಗೆ ಮತ್ತು ಗಾರೆಯಿಂದ ಕಟ್ಟಲ್ಪಟ್ಟಿದ್ದು ಗಚ್ಚುಗಾರೆ ಶಿಲ್ಪಗಳಿಂದ ಅಲಂಕರಿಸುವುದು ಕಂಡುಬರುತ್ತದೆ. ಇವುಗಳಲ್ಲಿ ವೀರಾಸನದಲ್ಲಿ ಕುಳಿತಿರುವ ಗರುಡನ ಶಿಲ್ಪ ಬಹಳ ಆಕರ್ಷಕವಾಗಿದೆ. ಈ ಶಿಖರವನ್ನು ಹೊಯ್ಸಳರ ನಂತರದ ಕಾಲದಲ್ಲಿ ಕಟ್ಟಿರುವ ಸಾಧ್ಯತೆಗಳೇ ಹೆಚ್ಚಾಗಿವೆ.

ಈ ದೇವಾಲಯದ ಮುಂಭಾಗದಲ್ಲಿ ಬೇರಾವುದೋ ದೇವಾಲಯದ ಎರಡು ಕಂಬಗಳನ್ನು ತಂದು ನಿಲ್ಲಿಸಿ ಅವುಗಳನ್ನು ದೀಪಸ್ಥಂಭಗಳನ್ನಾಗಿ ಪರಿವರ್ತಿಸಲಾಗಿದೆ. ಮತ್ತೊಂದು ವಿಜಯನಗರ ಕಾಲದ ದೀಪಸ್ಥಂಭವನ್ನು ದೇವಾಲಯದ ಮುಂಭಾಗದಲ್ಲಿ ನಿಲ್ಲಿಸಲಾಗಿದೆ. ಇದರ ಕೆಳಭಾಗದಲ್ಲಿ ಸಮಭಂಗಿಯಲ್ಲಿ ನಿಂತಿರುವ ಗರುಡನ ಉಬ್ಬುಶಿಲ್ಪವನ್ನು ಕೆತ್ತಲಾಗಿದೆ.

ಶ್ರೀ ಕಾಳಿಕಾಂಬ ಕಂಟೇಶ್ವರ  ದೇವಾಲಯವು ಸಹ ಇತ್ತೀಚಿನ ದೇವಾಲಯವಾಗಿದ್ದು, ಸುತ್ತಲೂ ಉತ್ತಮ ಪ್ರಾಕಾರವಿದ್ದು, ಮುಂಭಾಗದಲ್ಲಿ ಗೋಪುರವಿದೆ. ವಾಸ್ತುಶೈಲಿಯಲ್ಲಿ ಇದು ಮೈಸೂರು ಒಡೆಯರ ಕಾಲದ ರಚನೆಯಂತೆ ಕಾಣುತ್ತದೆ. ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ದೀಪಸ್ತಂಭವಿದೆ.

ಅದೇ ರೀತಿ ಕೋದಂಡರಾಮ ದೇವಾಲಯವು ಏಕಕೂಟವಾಗಿದ್ದು, ಗ್ರಾನೈಟ್ ಶಿಲೆಯಿಂದ ಕಟ್ಟಲಾಗಿದೆ. ಇದಕ್ಕೆ ಒಂದು ತೆರೆದ ಮುಖಮಂಪಟವಿದೆ. ದೇವಾಲಯದ ಗರ್ಭಗೃಹ ಮತ್ತು ನವರಂಗಗಳು ಬಹಳ ಉದ್ದವಾಗಿವೆ. ಗರ್ಭಗೃಹದ ಮೇಲ್ಭಾಗದಲ್ಲಿ ಪಿರಮಿಡ್ ಮಾದರಿಯ ಇಟ್ಟಿಗೆ ಮತ್ತು ಗಾರೆಯಿಂದ ನಿರ್ಮಿಸಿದ ಶಿಖರವಿದೆ. ಇದು ಸಹ ಇತ್ತೀಚಿನ ದೇವಾಲಯವಾಗಿದೆ. ಇದಲ್ಲದೆ ಇನ್ನೂ ಅನೇಕ ದೇವಾಲಯಗಳನ್ನು ವಿಜಯನಗರ ಕಾಲದಲ್ಲಿ ಹಾಗೂ ನಂತರದಲ್ಲಿ ಕಟ್ಟಿರುವುದು ಕಂಡುಬರುತ್ತದೆ. ಅವುಗಳಲ್ಲಿ ಶ್ರೀಕಾಳಿಕಾಂಬ ಕಮಟೇಶ್ವರ, ಲಕ್ಷ್ಮೀದೇವಿ, ಜಡೆಮುನೀಶ್ವರ ವೀರಭದ್ರೇಶ್ವರ ದೇವಾಲಯಗಳಲ್ಲದೆ ಸುಮಾರು ಎಂಟು ಆಂಜನೇಯನ ಗುಡಿಗಳು ಸಹ ಕಂಡು ಬರುತ್ತವೆ. ಇವುಗಳಲ್ಲಿ ವೀರಭದ್ರೇಶ್ವರ ದೇವಾಲಯ ಸಾಕಷ್ಟು ನವೀಕರಣಗೊಂಡಿದೆ. ದೇವಾಲಯವು ಮುಖಮಂಟಪ, ಸಭಾಮಂಟಪ, ಸುಖನಾಸಿ ಮತ್ತು ಗರ್ಭಗೃಹಗಳನ್ನು ಹೊಂದಿದೆ. ಗರ್ಭಗೃಹ ತಗ್ಗಿನಲ್ಲಿದೆ. ಮುಖಮಂಟಪದ ಮೇಲೆ ಪುಟ್ಟ ಮಂಟಪವೊಂದನ್ನು ನಿರ್ಮಿಸಲಾಗಿದೆ. ದೇವಾಲಯದ ಮುಂಭಾಗದಲ್ಲಿ ದೀಪಸ್ತಂಭ ಮತ್ತು ಉಯ್ಯಾಲೆ ತೋರಣವನ್ನು ಕಾಣಬಹುದು. ಗರ್ಭಗೃಹದ ಮೇಲೆ ಗಾರೆ ಶಿಖರವಿದೆ (ಚಿತ್ರ ೧೦-೧೨). ಹೀಗೆ ನಾಗಮಂಗಲ ಪಟ್ಟಣವು ಗಂಗರ ಕಾಲದಿಂದ ಮೊದಲುಗೊಂಡು ಮೈಸೂರು ಅರಸರ ಕಾಲದವರೆಗೂ ನಿರ್ಮಾಣಗೊಂಡಿರುವ ದೇವಾಲಯಗಳನ್ನು ಒಳಗೊಂಡಿದೆ. ಇದರಿಂದ ಒಂದೇ ಊರಿನಲ್ಲಿ ಒಂದು ಸಾವಿರ ವರ್ಷಗಳ ಕಾಲ ನಿರಂತರವಾಗಿ ಬೆಳೆದುಬಂದ ವಾಸ್ತು ಪರಂಪರೆಯನ್ನು ಅಧ್ಯಯನ ಮಾಡಲು ಅವಕಾಶವಿರುವುದು ಗಮನಾರ್ಹ. ಹಾಗಾಗಿ ನಾಗಮಂಗಲ ನಮ್ಮ ನಾಡಿನ ಹೆಮ್ಮೆಯ ಸಾಂಸ್ಕೃತಿಕ ಪಟ್ಟಣ ಎಂದರೆ ತಪ್ಪಾಗಲಾರದು.

 

ಪರಾಮರ್ಶಿತ ಗ್ರಂಥಗಳು

೧. ಎಪಿಗ್ರಾಫಿಯ ಕರ್ನಾಟಕ, ೧೯೭೯ : ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೨. Mandya District Gazetter, 1967 : Govt. Press, Bangalore

೩. Rangaraju N.S. : Hoysala Temples in Mandya and Tumkur Districts, Prasaranga, Mysore University, Mysore.

೪. Rangaraju.N.S. 1982 – 83 : Hoysala Temples at Nagamangala Article in Journal of Archeological Studies, Vol. VII, DoS in Ancient History and Archaeology, Manasagangotri, Mysore University, Mysore.

೫. ಕ್ಷೇತ್ರಕಾರ್ಯದಲ್ಲಿ ಸಂಗ್ರಹಿಸಿದ ಮಾಹಿತಿಗಳು.

೬. ಕನ್ನಡ ವಿಷಯ ವಿಶ್ವಕೋಶ, (ಭೂಗೋಳ ವಿಜ್ಞಾನ) ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು ವಿಶ್ವವಿದ್ಯಾಲಯ, ಮೈಸೂರು.

೭. ಮಹದೇವ ಸಿ. ೨೦೦೯ : ತೊಣ್ಣೂರು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.