ಯೋಗನರಸಿಂಹ ದೇವಾಲಯದ ಶಿಲ್ಪಗಳು

ಈ ದೇವಾಲಯದಲ್ಲಿಯೂ ಸಹ ಮೇಲ್ಕಂಡ ನಾಲ್ಕು ವಿಭಾಗಗಳಲ್ಲಿ ಇಲ್ಲಿರುವ ಶಿಲ್ಪಗಳನ್ನು ನಾವು ವಿವೇಚಿಸಬಹುದು. ಮೊದಲಿಗೆ ಈ ದೇವಾಲಯದ ಮುಂಭಾಗದಲ್ಲಿರುವ ಗರುಡಗಂಭದಲ್ಲಿನ ಯೋಗನರಸಿಂಹನಿಗೆ ಮುಖಮಾಡಿರುವ ಸ್ತಂಭದ ಫಲಕದಲ್ಲಿರುವ ಗರುಡನ ಉಬ್ಬುಶಿಲ್ಪವನ್ನು ನಾವು ಗಮನಿಸಬಹುದು. ಆದರೆ ಈ ಶಿಲ್ಪವು ಸೌಮ್ಯಕೇಶವ ದೇವಾಲಯದ ಗರುಡಗಂಬದ ಶಿಲ್ಪಕ್ಕೆ ಯಾವುದೇ ರೀತಿಯಲ್ಲಿ ಸಮಾನವಾಗಿಲ್ಲ. ಇಲ್ಲಿ ಗರುಡನು ಸಮಸ್ಥಾನಕ ಭಂಗಿಯಲ್ಲಿ ನಿಂತಿದ್ದು ಪಕ್ಷಗಳು ಹರಡಿಕೊಂಡಿವೆ ಹಾಗು ಅಂಜಲೀ ಮುದ್ರೆಯಿಂದ ಕೂಡಿ ನರಸಿಂಹನನ್ನು ನಮಸ್ಕರಿಸುವ ಭಂಗಿಯಲ್ಲಿ ಕೆತ್ತಲಾಗಿದೆ. ಸ್ತಂಭದ ಇತರ ಯಾವುದೇ ಮುಖದಲ್ಲಿ ಶಿಲ್ಪಗಳನ್ನು ಕಡೆದಿಲ್ಲ. ಇದು ಈ ಕಂಬದ ನಿರ್ಮಾಣವು ಇತ್ತೀಚಿನದು. ಹೊಯ್ಸಳ ಅಥವಾ ವಿಜಯನಗರ ಕಾಲದಲ್ಲಿ ಎಂದು ಸಾರುತ್ತದೆ. ನರಸಿಂಹ ದೇವಾಲಯದ ಪ್ರಧಾನ ದ್ವಾರದ ಮೇಲ್ಭಾಗದ ಲಲಾಟದಲ್ಲಿ ರುಕ್ಮಿಣಿ ಹಾಗೂ ಸತ್ಯಭಾಮೆಯರೊಂದಿಗಿರುವ ವೇಣುಗೋಪಾಲನ ಉಬ್ಬುಶಿಲ್ಪವಿದೆ. ಕೃಷ್ಣನು ದ್ವಿಭುಜದಿಂದ ಕೂಡಿದ್ದು, ಸ್ವಸ್ತಿಕಪಾದ ಭಂಗಿಯಲ್ಲಿದ್ದು, ವೇಣುನಾದ ಮಾಡುವಂತೆ ಚಿತ್ರಿಸಲಾಗಿದೆ. ಈ ವೇಣುಗೋಪಾಲ ಮೂರ್ತಿಯ ಮೇಲ್ಭಾಗದಲ್ಲಿ ಎರಡು ಪಾರ್ಶ್ವಗಳಲ್ಲಿ ಎರಡು ಹಸುಗಳನ್ನು ಚಿತ್ರಿಸಲಾಗಿದೆ.

ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಯೋಗನರಸಿಂಹನನ್ನು ಪ್ರತಿಷ್ಠಾಪಿಸಲಾಗಿದ್ದು, ಮೂರ್ತಿಯು ಚತುರ್ಭುಜಗಳನ್ನು ಹೊಂದಿದ್ದು, ಮೇಲಿನ ಬಲಗೈಯಲ್ಲಿ ಚಕ್ರವನ್ನೂ, ಮೇಲಿನ ಎಡಗೈಯಲ್ಲಿ ಶಂಖವನ್ನು ಹಿಡಿದಿದೆ. ಕೆಳ ಎರಡೂ ಕೈಗಳನ್ನು ಮಂಡಿಯ ಮೇಲೆ ಇಟ್ಟುಕೊಂಡಿರುವ ಭಂಗಿಯಲ್ಲಿದ್ದು, ಹಸ್ತಗಳು ಮಂಡಿಯಿಂದ ಜೋತುಬಿದ್ದಿವೆ. ಇದನ್ನು ಶಾಸ್ತ್ರಗಳಲ್ಲಿ ದೋಲಹಸ್ತ ಎಂದು ಕರೆಯಲಾಗಿದೆ. ಯೋಗಾಸನದಲ್ಲಿ ಕುಳಿತಿರುವ ಮೂರ್ತಿಯ ಎರಡೂ ಮಂಡಿಗಳ ನಡುವೆ ಬೆನ್ನಿಗೆ ಸೇರಿದಂತೆ ಒಂದು ಯೋಗಪಟ್ಟವನ್ನು ಕೆತ್ತಲಾಗಿದೆ. ಸ್ವಾಮಿಯ ಪಾದಗಳು ಸ್ವಸ್ತಿಕ ಭಂಗಿಯಲ್ಲಿದ್ದು, ನರಸಿಂಹ ಮುಖ, ವೃತ್ತಾಕರದ ಕಣ್ಣುಗಳು, ಕಿವಿ, ಕೋರವಾಡೆಗಳು, ನಖಗಳು, ಸೂಕ್ಷ್ಮವಾಗಿ ಕೆತ್ತಲ್ಪಟ್ಟಿವೆ. ಆದರೆ ಪೂರ್ಣ ವಿವರಗಳನ್ನು ಅಭ್ಯಸಿಸಲು ನಿತ್ಯ ಅಲಂಕಾರಗಳು ಅವಕಾಶ ಮಾಡಿಕೊಡುವುದಿಲ್ಲ.

ನರಸಿಂಹ ದೇವಾಲಯದ ಈಶಾನ್ಯ ಭಾಗದಲ್ಲಿ ಪ್ರತ್ಯೇಕ ಸನ್ನಿಧಿಯಲ್ಲಿ ಸುದರ್ಶನ ನರಸಿಂಹರ ವಿಗ್ರಹವನ್ನು ಸ್ಥಾಪಿಸಲಾಗಿದೆ (ಚಿತ್ರ ೧೯) ವಿಷ್ಣುವಿನ ಆಯುಧವಾದ ಸುದರ್ಶನ ಚಕ್ರದ ಮುಂಭಾಗದಲ್ಲಿ ಆಯುಧ ಪುರುಷನಾದ ಸುದರ್ಶನನ್ನು ಚಕ್ರದ ಮಧ್ಯಭಾಗದಲ್ಲಿ ಅಲೀಢಾಸನದಲ್ಲಿ ಕೆತ್ತಲಾಗಿದ್ದು, ಸ್ವಾಮಿಯು ಅಷ್ಟಭುಜಗಳಿಂದ ಕೂಡಿದ್ಧಾನೆ. ಆದರೆ ಬಹಳಷ್ಟು ಸವೆದು ಹೋಗಿರುವುದರಿಂದ ಎಲ್ಲಾ ಆಯುಧಗಳನ್ನು ಗುರುತಿಸುವುದು ಕಷ್ಟಸಾಧ್ಯ. ಇದೇ ವಿಗ್ರಹದ ಹಿಂಭಾಗದಲ್ಲಿ ಆರು ಕೋನಗಳಿಂದ ಕೂಡಿದ ಜ್ಯಾಮಿತಿಕ ಯಂತ್ರದ ಮುಂಭಾಗ, ಚಕ್ರದ ಮಧ್ಯದಲ್ಲಿರುವಂತೆ ನರಸಿಂಹನನ್ನು ಯೋಗದಲ್ಲಿ ಕುಳಿತಿರುವ ಭಂಗಿಯಲ್ಲಿ ಚಿತ್ರಿಸಲಾಗಿದೆ ( ಚಿತ್ರ ೨೦). ನರಸಿಂಹನು ಯೋಗಪಟ್ಟ ದಿಂದ ಕುಡಿದ್ದು ಉಗ್ರವಾದ ಕಣ್ಣುಗಳು, ತೆರೆದ ಬಾಯಿ, ಜೋಲಾಡುತ್ತಿರುವ ಕೇಸರಗಳಿಂದ ಉಗ್ರಸ್ವರೂಪಿಯಾಗಿದ್ಧಾನೆ. ನರಸಿಂಹನಿಗೆ ಚತುರ್ಭುಜಗಳಿದ್ದು ಚಕ್ರ ಹಾಗೂ ಶಂಖಗಳನ್ನು ತನ್ನ ನಾಲ್ಕು ಕೈಗಳಲ್ಲಿಯೂ ಹಿಡಿದಿದ್ಧಾನೆ. ವಿಹಗೇಂದ್ರ ಸಂಹಿತೆಯಲ್ಲಿ ಉಕ್ತವಾಗಿರುವ ಶಾಸ್ತ್ರಲಕ್ಷಣಗಳು ಈ ವಿಗ್ರಹಕ್ಕೆ ಸರಿಹೊಂದುತ್ತವೆ.೨೦ ಈ ವಿಗ್ರಹವೂ ಸಹ ವಿಜಯನಗರದ ಆರಂಭ ಕಾಲ ಅಥವಾ ನರಸಿಂಹನ ವಿಗ್ರಹದ ಸಮಕಾಲೀನವಾಗಿರಬಹುದು.

ಈ ಸುದರ್ಶನ ನರಸಿಂಹ ಸನ್ನಿಧಿಯ ಪಕ್ಕದಲ್ಲಿ ಕೈಮುಗಿದ ನಿಂತಿರುವ ಭಕ್ತಾಂಜನೇಯನ ವಿಗ್ರಹವಿದೆ. ಹನುಮಂತನು ಅಂಜಲಿಮುದ್ರಾಯುಕ್ತನಾಗಿ ಕೈ ಮುಗಿದು ನಿಂತಿದ್ದರೆ, ಅವನನ್ನು ಭಕ್ತಾಂಜನೇಯ ಎಂದು ಕರೆಯುಲಾಗುತ್ತದೆ. ತಲೆಯಲ್ಲಿ ಕಿರೀಟವನ್ನು ಧರಿಸಿದ, ಶಿಖಾಧಾರಿಯಾಗಿ, ಮಾಲೆಗಳಿಂದ ಅಲಂಕೃತನಾಗಿರುವಂತೆ ಕಡೆಯಲಾಗಿದೆ. ಅದೂ ಅಲ್ಲದೇ ತನ್ನ ಬಾಲವನ್ನು ಸುರುಳಿಸುತ್ತಿಕೊಂಡು ಬಲಗಾಲಿನ ಕಾಲಿನ ಪಕ್ಕದಲ್ಲಿ ನೆಲೆನಿಲ್ಲಿಸಿರುವಂತೆ ಕಡೆದಿರುವುದೂ ಸಹ ಭಕ್ತಾಂಜನೇಯನ ಲಕ್ಷಣಗಳಿಗೆ ಪೂರಕವಾಗಿದೆ. ಆದರೆ ವಿಗ್ರಹವು ಇತ್ತೀಚಿನದೆಂದು ಕಂಡುಬರುತ್ತದೆ.

ಹನುಮಾನ್ ಗುಡಿಯ ಪಕ್ಕದಲ್ಲಿ ಪಟ್ಟಾಭಿರಾಮ ಸನ್ನಿಧಿಯಿದ್ದು, ಇಲ್ಲಿ ಎರಡು ಪ್ರತ್ಯೇಕ ಶಿಲೆಗಳಲ್ಲಿ ರಾಮ,ಸೀತಾ, ಹನುಮಾನರ ಒಂದು ವಿಗ್ರಹ ಹಾಗೂ ಲಕ್ಷ್ಮಣನ ಪ್ರತ್ಯೇಕ ವಿಗ್ರಹಗಳನ್ನು ಸ್ಥಾಪಿಸಲಾಗಿದೆ. ಶ್ರೀರಾಮನು ಕೇವಲ ಎರಡು ಭುಜಗಳಿಂದ ಕೂಡಿದ್ದು, ರಾಮನ ಬಲಗೈ ಅಭಯ ಮುದ್ರೆಯಲ್ಲಿದೆ. ಎಡಗೈಯಲ್ಲಿ ತನ್ನ ತೊಡೆಯ ಮೇಲೆ ಕುಳಿತಿರುವ ಸೀತೆಯನ್ನು ಅಲಂಗಿಸಿದ್ಧಾನೆ. ರಾಮನು ಸವ್ಯಲಲಿತಾಸನದಲ್ಲಿ ಕುಳಿತಿದ್ದು, ಎಡಗಾಲು ಮಡಚಿರುವ ಭಂಗಿಯಲ್ಲಿದ್ದು, ಬಲಗಾಲನ್ನು ಪೀಠದಿಂದ ಇಳಿಬಿಡಲಾಗಿದೆ. ಸೀತೆಯು ರಾಮನ ಎಡತೊಡೆಯ ಮೆಲೆ ಅಸೀನಳಾಗಿದ್ಧಾಳೆ. ಸೀತೆಯೂ ಸಹ ದ್ವಿಭುಜದಿಂದ ಕೂಡಿದ್ದು, ಬಲಗೈಯಲ್ಲಿ ಪದ್ಮವನ್ನೂ ಹಾಗೂ ಎಡಗೈ ಜೋತುಬಿದ್ದಿರುವಂತೆ ಕಡೆಯಲಾಗಿದೆ. ರಾಮ ಹಾಗೂ ಸೀತೆಯರು ಕಿರೀಟ, ಕುಂಡಲ, ಉಪಗ್ರೀವ, ಕಂಠೀ, ಹಾರ, ಮುಕ್ತಾಹಾರ, ಭುಜಸ್ಕಂದ, ಸ್ಕಂಧಮಾಲಾ, ಕೇಯೂರ, ಕಟಕ, ವಲಯ, ಅಂಗುಲೀಯಕ, ಯಜ್ಞೋಪವೀತ, ಉರುದಾಮ, ಪಾದವಲಯ, ಪಾದಜಾಲಕ ಮುಂತಾದ ಹಲವಾರು ಆಭರಣಗಳಿಂದ ಅಲಂಕೃತರಾಗಿದ್ಧಾರೆ. ರಾಮನ ಬಲಪಾದದ ಬಳಿ ಮಾರುತಿಯನ್ನು ಪಡಿಮೂಡಿಲಾಗಿದ್ದು, ಶ್ರೀರಾಮನ ಪಾದಸೇವೆಯಲ್ಲಿರುವಂತೆ ಅವನನ್ನು ಚಿತ್ರಿಲಾಗಿದೆ. ರಾಮನ ಮುಂದೆ ಬಲಭಾಗದಲ್ಲಿ ಲಕ್ಷ್ಮಣನ ಶಿಲ್ಪವಿದ್ದು ಸಕಲ ಆಭರಣಗಳಿಂದ ಅಲಂಕೃತನಾಗಿದ್ದಾನೆ. ಆದರೆ ಸಾಮಾನ್ಯವಾಗಿ ಕಂಡು ಬರುವ ಬಿಲ್ಲು ಮತ್ತು ಬಾಣಗಳನ್ನು ಹೊಂದಿಲ್ಲದೆ. ಅಂಜಲಿ ಮುದ್ರಾಯುಕ್ತನಾಗಿದ್ಧಾನೆ. ಅಂದರೆ ರಾಮ ಮತ್ತು ಸೀತೆಯರಿಗೆ ಕೈಮುಗಿಯುವ ಭಂಗಿಯಲ್ಲಿ ಇದ್ದಾನೆ. ಈ ಎಲ್ಲಾ ವಿಗ್ರಹಗಳೂ ವಿಜಯನಗರದ ಕಲಾ ಶೈಲಿಯನ್ನು ಹೊಂದಿವೆ (ಚಿತ್ರ ೨೧).

ಈ ದೇವಾಲಯದ ಒಳಪ್ರಕಾರದ ಎಡಕೈಸಾಲೆಯಲ್ಲಿ ನವಗ್ರಹ ಹಾಗೂ ಗಣಪತಿ ವಿಗ್ರಹಗಳು ಕಂಡು ಬರುತ್ತವಾದರೂ ಅವು ಅತ್ಯಂತ ಈಚಿನ ಕಾಲದಲ್ಲಿ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದಲ್ಲಿ ಅಮ್ಮನವರ ಗುಡಿಯಿದ್ದು, ಇಲ್ಲಿ ನಾವು ಈ ಮೊದಲೇ ಹೇಳಿದಂತೆ ವೀರಲಕ್ಷ್ಮಿಯ ವಿಗ್ರಹವನ್ನು ಪ್ರತಿಷ್ಠಾಪಿಸಲಾಗಿದೆ. ಇಲ್ಲಿ ಲಕ್ಷ್ಮಿಯ ಮೇಲಿನ ಎರಡು ಕೈಗಳಲ್ಲಿ ಪದ್ಮವನ್ನು ಹಿಡಿದಿದ್ದು, ಕೆಳಭಾಗದ ಕೈಗಳಲ್ಲಿ ಅಭಯ ಹಾಗೂ ವರದಮುದ್ರೆಯಿಂದ ಕೂಡಿದ್ಧಾಳೆ. ಈ ದೇವಾಲಯದಲ್ಲಿ ಕಂಡು ಬರುವ ಮತ್ತೊಂದು ಶಿಲ್ಪವೆಂದರೆ, ಶ್ರೀರಾಮಾನುಜಾಚಾರ್ಯರ ಶಿಲ್ಪ. ವಿಜಯನಗರದ ಅರಸರ ಕಾಲದಲ್ಲಿ ಪ್ರತಿಷ್ಠಾಪಿತವಾಗಿರಬಹುದಾದ ಈ ಶಿಲ್ಪವು ಕುಳಿತಿರುವ ಭಂಗಿಯಲ್ಲಿದ್ದು, ಎರಡು ಕೈಗಳನ್ನು ಜೋಡಿಸಿ ನಮಸ್ಕಾರಮು‌ದ್ರೆಯಲ್ಲಿದೆ. ಇದಲ್ಲದೆ, ದೇವಾಲಯದ ಗೋಡೆಗಳಲ್ಲಿ ಹಾಗೂ ಸ್ತಂಭಗಳಲ್ಲಿ ಉತ್ತಮ ರೀತಿಯ ಉಬ್ಬುಶಿಲ್ಪಗಳು ಕಂಡುಬರುತ್ತವೆ. ತುಳಸಿಯ ಬೃಂದಾವನದ ಮುಂಭಾಗದಲ್ಲಿರುವ ಚಿಕ್ಕದಾದ ದ್ವಿಭುಜ ವೇಣುಗೋಪಾಲ ಹಾಗೂ ದೇವಾಲಯದ ಗರ್ಭಗೃಹದ ಹಿಂಭಾಗದ ಗೋಡೆಯ ಗಣೇಶನ ವಿಗ್ರಹಗಳು ಆಕರ್ಷಕವಾಗಿವೆ.

ಗಚ್ಚುಗಾರೆಯ ಶಿಲ್ಪಗಳು

ದೇವಾಲಯದ ಹಾರದ ಭಾಗ ಹಾಗೂ ವಿಮಾನ ಪ್ರಾಸಾದಗಳಲ್ಲಿ ನಾವು ಅನೇಕ ಗಾರೆಯ ಶಿಲ್ಪಗಳನ್ನು ಕಾಣಬಹುದಾಗಿದ್ದು, ಇವು ವಿಜಯನಗರದ ಅಥವಾ ಅದರ ನಂತರದ ಕಾಲದಲ್ಲಿ ಕಂಡುಬರುವ ಗಾರೆಯ ಶಿಲ್ಪಗಳನ್ನು ಹೋಲುತ್ತವೆ. ಕಾಲನ ವಶಕ್ಕೆ ಸಿಲುಕಿ ಅನೇಕ ವಿಗ್ರಹಗಳು ಭಗ್ನವಾಗಿದ್ದರು, ಕೆಲವು ಶಿಲ್ಪಗಳು ನಮ್ಮನ್ನು ಅಕರ್ಷಿಸುತ್ತವೆ. ಅವುಗಳೆಂದರೆ, ವಿಮಾನನಾಸಿಯ ಪೂರ್ವಮುಖದ ವರಾಹ ಶಿಲ್ಪ, ಕೀರ್ತಿಮುಖ, ಪ್ರಾಸಾದದ ಗರುಡನ ವಿಗ್ರಹ, ಯೋಗನರಸಿಂಹ, ಲಕ್ಷ್ಮೀ ನರಸಿಂಹ, ನಾರಾಯಣ, ಲಕ್ಷ್ಮೀನಾರಾಯಣ, ಪರಮಪದನಾಥ, ವೈಕುಂಠನಾರಾಯಣ ಹಾಗೂ ಹಾರದ ಮೂಲೆಗಳಲ್ಲಿ ಕಂಡುಬರುವ ಕುಳಿತಿರುವ ಸಿಂಹದ ಶಿಲ್ಪಗಳು ಮುಖ್ಯವಾದವು.

ಕಾಷ್ಠಶಿಲ್ಪಗಳು

ಇಲ್ಲಿನ ದೇವರ ಉತ್ಸವಕ್ಕೆ ಉಪಯೋಗಿಸುವ ವಾಹನಗಳನ್ನು ಮರದಲ್ಲಿ ಮಾಡಲಾಗಿದ್ದು, ಗರುಡನ ಪಾದಕ್ಕೆ ಮಾತ್ರ ಮೇಲ್ಭಾಗದಲ್ಲಿ ಲೋಹದ ತಗಡಿನ ಹೊದಿಕೆಯನ್ನು ಮಾಡಲಾಗಿದೆ. ಇಲ್ಲಿನ ಗರುಡವಾಹನ (ಚಿತ್ರ ೨೨), ಹನುಮಂತ ವಾಹನ, ಶೇಷವಾಹನ, ಸಿಂಹವಾಹನ, ಗಜವಾಹನ ಮತ್ತು ಹಂಸವಾಹನಗಳು ಕಾಷ್ಠಶಿಲ್ಪಗಳಿಗೆ ಉತ್ತಮ ಉದಾಹರಣೆಗಳಾಗಿವೆ. ವಾಹನಗಳು ಶತಮಾನದಷ್ಟು ಹಳೆಯದಾಗಿದ್ದು, ಆಧುನಿಕ ಬಣ್ಣಗಳಿಂದ ಈಗ ಅಲಂಕರಿಸಲ್ಪಟ್ಟಿವೆ.

ಕೋದಂಡರಾಮಸ್ವಾಮಿ ದೇವಾಲಯ

ಶಿಲ್ಪಗಳ ಅಧ್ಯಯನದ ದೃಷ್ಟಿಯಿಂದ ಕೋದಂಡರಾಮಸ್ವಾಮಿ ದೇವಾಲಯವು ನಾಗಮಂಗಲದ ಮತ್ತೊಂದು ಆಕರ್ಷಕ ದೇವಾಲಯವಾಗಿದೆ. ಗರ್ಭಗೃಹದಲ್ಲಿ ಒಂದೇ ಪದ್ಮಪೀಠದ ಮೇಲ್ಭಾಗದಲ್ಲಿ ಮತ್ತೆ ಮೂರು ಪೀಠಗಳ ಮೇಲ್ಭಾಗದಲ್ಲಿ ಲಕ್ಷ್ಮಣ, ಕೋದಂಡರಾಮ ಹಾಗೂ ಸೀತಾಮಾತೆಯರ ವಿಗ್ರಹಗಳನ್ನು ಪ್ರತಿಷ್ಠಾಪಿಸಲಾಗಿದೆ. ಲಕ್ಷ್ಮಣನು ದ್ವಿಭುಜಗಳಿಂದ ಕೂಡಿದ್ದು ಸಮಸ್ಥಾನಕಪಾದ ಭಂಗಿಯಲ್ಲಿ ನಿಂತಿದ್ದು, ಬಲಗೈಯಲ್ಲಿ ಅರ್ಧಚಂದ್ರಾಕೃತಿಯ ಅಲುಗನ್ನು ಹೊಂದಿರುವ ಬಾಣವನ್ನು ಹಿಡಿದಿದ್ಧಾನೆ. ಶ್ರೀರಾಮನೂ ಸಹ ಅದೇ ಭಂಗಿಯಲ್ಲಿ ನಿಂತಿದ್ದು, ಸೀತಾಮಾತೆಯು ಮಾತ್ರ ಪದ್ಮ ಹಾಗೂ ಎಡಗೈಯನ್ನು ತೂಗುಬಿಟ್ಟಿರುವ ಭಂಗಿಯಲ್ಲಿ ನಿಂತಿದ್ಧಾಳೆ. ಮೂರು ಮೂರ್ತಿಗಳೂ ಸಹ ಕಿರೀಟ, ಕುಂಡಲ, ಕಂಠಿ, ಹಾರ, ಮುಕ್ತಾಹಾರ ಮುಂತಾದ ಮಾಮೂಲಿನ ಆಭರಣಗಳಿಂದ ಅಲಂಕೃತವಾಗಿವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ರಾಮ ಮತ್ತು ಲಕ್ಷ್ಮಣರು ಬಿಲ್ಲನ್ನು ಹಿಡಿದಿರುವ ಭಂಗಿ ಹಾಗೂ ಸಮಸ್ಥಾನಕ ಪಾದದಲ್ಲಿ ನಿಂತಿರುವ ಭಂಗಿಗಳು ವಿಶೇಷವಾಗಿ ಕಂಡುಬರುತ್ತವೆ. ವಿಗ್ರಹಗಳು ಕಲೆಯ ದೃಷ್ಟಿಯಿಂದ ವಿಮರ್ಶಿಸುವುದಾದರೆ ಆಕರ್ಷಕವಾಗಿದ್ದು, ಪ್ರಮಾಣಪೂರ್ಣವಾಗಿ ಅಂದರೆ ಸರಿಯಾದ ಅಂಗಾಂಗಗಳ ಅಳತೆಯ ಪ್ರಮಾಣದಲ್ಲಿ ಕೆತ್ತಲ್ಪಟ್ಟಿವೆ. ಇವುಗಳನ್ನು ಶಾಸ್ತ್ರಗಳಲ್ಲಿ ಮಾನ, ಪ್ರಮಾಣ, ಉನ್ಮಾನ, ಲಂಬಮಾನ ಅಳತೆಗಳು ಎಂದು ಕರೆಯಲಾಗುತ್ತದೆ. ಇವು ವಿಜಯನಗರಕಾಲದ ವಿಗ್ರಹಗಳಂತೆ ಕಂಡುಬರುತ್ತವೆ (ಚಿತ್ರ ೨೩).

ಇದೇ ದೇಗುವಲದ ಮತ್ತೆರಡು ಶಿಲ್ಪಗಳೆಂದರೆ, ನಮ್ಮಳ್ವಾರ‍್ ಹಾಗೂ ಶ್ರೀರಾಮಾನುಜಾಚಾರ್ಯರ ಶಿಲಾವಿಗ್ರಹಗಳು, ಸುಮಾರು ಎರಡು ಅಡಿ ಎಲ್ಲರವಿರುವ ಈ ವಿಗ್ರಹಗಳು ಸೌಮ್ಯಕೇಶವ ದೇವಾಲಯದ ಆಳ್ವಾರ‍್ ವಿಗ್ರಹಗಳಿಗಿಂತ ಪ್ರಮಾಣ ಬದ್ಧವಾಗಿ ಹಾಗೂ ಆಕರ್ಷಕವಾಗಿ ಕೆತ್ತಲ್ಪಟ್ಟಿವೆ. ನಮ್ಮಾಳ್ವಾರ ಅವರ ಬಲ ಹಾಗೂ ಎಡಕೈಗಳಲ್ಲಿ ಸೂಚಿಸಲ್ಪಟ್ಟಿರುವ ಮುದ್ರೆಗಳೂ ಸಹ ಸಂಪ್ರದಾಯಕ್ಕೆ ಅನುಗುಣವಾಗಿ ಅಭಿವ್ಯಕ್ತಗೊಳಿಸಲ್ಪಟ್ಟಿವೆ. ಈ ಎರಡೂ ವಿಗ್ರಹಗಳೂ ಸಹ ಮೂರು ವಿಗ್ರಹದ ಕಾಲದ್ದೇ ಆಗಿರಬಹುದು ಎನಿಸುತ್ತದೆ.

ಶೈವಶಿಲ್ಪಗಳು

ಭುವನೇಶ್ವರ ದೇವಾಲಯ

ನಾಗಮಂಗಲದ ಪ್ರಾಚೀನ ದೇವಾಲಯವೆಂದರೆ ಭುವನೇಶ್ವರ ದೇವಾಲಯ ಇದು ಶಾಸ್ತ್ರಗಳಲ್ಲಿ ಹೇಳಿರುವಂತೆ ವಿಷ್ಣುದೇವಾಲಯದ ಅಂದರೆ ಸೌಮ್ಯಕೇಶವ ದೇವಾಲಯದ ಈಶಾನ್ಯಭಾಗದಲ್ಲಿ ಕಟ್ಟಲ್ಪಟ್ಟಿದೆ. ವಿಗ್ರಹಗಳ  ಲಕ್ಷಣಗಳಿಂದ ಇದು ಪ್ರಾಚೀನವಾಗಿರಬಹುದು ಎಂದು ಅಭಿಪ್ರಾಯ ಪಡಬಹುದೆ ಹೊರತು, ಯಾವುದೇ ಶಾಸನಗಳು ಶಿಲ್ಪದ ಪ್ರಾಚೀನತೆಯನ್ನು ನಿರ್ಧರಿಸುವಲ್ಲಿ ಸಹಾಯಕ್ಕೆ ಬರುವಿದಿಲ್ಲ. ಇಲ್ಲಿನ ಕಲವು ವಿಗ್ರಹಗಳು ಚೋಳ-ಹೊಯ್ಸಳ ಶೈಲಿಯನ್ನು ಹೊಂದಿದ್ದು, ಅದರಿಂದ ಇವು ಚೋಳ-ಹೊಯ್ಸಳ ಕಾಲಕ್ಕೆ ಸೇರಿದ ವಿಗ್ರಹಗಳೆಂದು ಭಾವಿಸಬಹುದಾದರೂ ಸಾಕಷ್ಟು ಆಧಾರಗಳು ನಮಗೆ ಸಿಗುವುದಿಲ್ಲವಾದ್ದರಿಂದ ಕಾಲವನ್ನು ನಿಷ್ಕರ್ಷವಾಗಿ ಹೇಳುವುದು ಸಾಧ್ಯವಿಲ್ಲವಾಗಿದೆ. ಈ ದೇವಾಲಯದ ಪ್ರಧಾನ ಗರ್ಭಗೃಹದಲ್ಲಿ ಈಗ ಲಿಂಗವಿದ್ದು, ಎತ್ತರವಾದ ಪಿಂಡಿಕೆಯ ಮೇಲೆ ಸ್ಥಾಪಿಸಲ್ಪಟ್ಟಿದೆ. ಲಿಂಗದ ಪಾಣಿಯು ಚೌಕಾಕಾರದಲ್ಲಿದ್ದು, ಬ್ರಹ್ಮ, ವಿಷ್ಣು ಮತ್ತು ರುದ್ರ ಭಾಗಗಳನ್ನು ಒಳಗೊಂಡಿದೆ. ಆದರೆ ಶಿಲೆಯ ಆಧಾರದ ಮೇಲೆ ಇದರ ಕಾಲವನ್ನು ಹೇಳಲು ಸಾಧ್ಯವಿಲ್ಲ. ಬಹುಶಃ ಈ ಲಿಂಗದ ಹೆಸರಿನಿಂದ ಇದು ಭುವನೇಶ್ವರ ಗುಡಿ ಎಂದು ಗುರುತಿಸಿಕೊಂಡಿರಬಹುದು. ಈಗ ಅದು ಭುವನೇಶ್ವರಿಯಾಗಿದೆ. ಆದರೆ ಶಾಸನಗಳಲ್ಲಿ ಈ ದೇವಾಲಯದ ಬಗಲಿಗೆ ಇಲ್ಲೇ ಇರುವ ಶಾಸನಗಳಲ್ಲಿ ಶಂಕರನಾರಾಯಣನ ದೇವಾಲಯದ ಉಲ್ಲೇಖಗಳು ಕಂಡುಬರುತ್ತವೆ.೨೧ ಈ ಶಾಸನದ ಪ್ರಕಾರ ವಿಷ್ಣುವರ್ಧನ ಅರಸಿಯಾದ ಬಮ್ಮಲದೇವಿಯು ಮೊದಲೇ ಇದ್ದ ಶಂಕರ ನಾರಾಯಣನ ದೇವಾಲಯವನ್ನು ಜೀರ್ಣೋದ್ಧಾರ ಮಾಡಿಸಿದಳು. ಇದರಿಂದ ನಮಗೆ ತಿಳಿಯ ಬರುವ ಅಂಶವೆಂದರೆ, ನಾವು ಮೊದಲೇ ಹೇಳಿದಂತೆ ಇಲ್ಲಿರುವ ವಿಗ್ರಹಗಳು ಶಂಕರನಾರಾಯಣ ದೇವಾಲಯಲಕ್ಕೆ ಸೇರಿದ್ದು, ಹೊಯ್ಸಳರ ಕಾಲಕ್ಕಿಂತ ಪ್ರಾಚೀನವಾಗಿರುವುದರಿಂದ ಚೋಳ-ಹೊಯ್ಸಳ ಶೈಲಿಯನ್ನು ಒಳಗೊಂಡಿವೆ.

ಈ ದೇವಾಲಯದ ಶಿಲ್ಪಗಳೆಂದರೆ ಲಿಂಗದ ಮುಂಭಾಗದಲ್ಲಿರುವ ಸಣ್ಣ ಗಣೇಶ, ಮುಂಭಾಗದಲ್ಲಿರುವ ನಂದಿ, ನವರಂಗಲ್ಲಿರುವ ಗಣೇಶ, ಲಕುಳೀಶ, ಸುಬ್ರಹ್ಮಣ್ಯ ಅಥವಾ ಕಾರ್ತಿಕೇಯ, ಚಾಮುಂಡೇಶ್ವರಿ, ಪಾರ್ವತಿ, ವಿಷ್ಣು, ಸೂರ್ಯ ಮತ್ತು ಚಂದ್ರಶೇಖರ ಶಿಲ್ಪಗಳು. ಈ ಎಲ್ಲಾ ವಿಗ್ರಹಗಳನ್ನು ನಾವು ಗಮನಕ್ಕೆ ತೆಗೆದುಕೊಂಡಾಗ ಇದು ಚೋಳರ ಶೈಲಿ ಹೊಂದಿರುವ ಹೊಯ್ಸಳರ ಕಾಲದ ದೇವಾಲಯಲವೆಂಬುದು ಸಹ ನಿರ್ವಿವಾದವಾಗಿ ಸಿದ್ಧವಾಗುತ್ತದೆ. ಹಾಗೂ ಸೌಮ್ಯಕೇಶವ ದೇವಾಲಯಕ್ಕಿಂತ ಪ್ರಾಚೀನವಾಗಿತ್ತೆಂಬುದೂ ಸಹ ನಿರ್ಣಯವಾಗುತ್ತದೆ. ಸಾಮಾನ್ಯವಾಗಿ ಕಲ್ಯಾಣ ಚಾಲುಕ್ಯರ ಶಾಸನಗಳಲ್ಲಿ ನಾವು ಲಾಕುಳಶೈವರಿಗೆ ಅಂದರೆ ದಕ್ಷಿಣಾಚಾರ್ಯ ಪಂಥಕ್ಕೆ ಸೇಋಇದ ಶೈವಸಿದ್ಧಾಂತದ ಯತಿಗಳಿಗೆ ಪ್ರೋತ್ಸಾಹ ನೀಡಿರುವುದು ಕಂಡುಬರುತ್ತದೆ. ಹಾಗೆಯೇ ಹೊಯ್ಸಳ ಶಾಸನಗಳಲ್ಲಿ ಸಹ ಲಾಗುಳಾಗಮಪ್ರವೀಣರು ಹಾಗೂ ಶುದ್ಧ ಶೈವಪದ್ಧತಿಯನ್ನು ಅನುಸರಿಸುತ್ತಿದ್ದ ಅನೇಕ ಶೈವಚಾರ್ಯರ ಉಲ್ಲೇಖಗಳನ್ನು ಕಾಣುತ್ತೇವೆ. ಈ ಕಾಳಾಮುಖಮ ಮತ್ತು ಲಾಕುಳಶೈವರು ತಮ್ಮ ದೇವಾಲಯಗಳಲ್ಲಿ ಶಿವನ ಲಿಂಗದ ಜೊತೆಗೆ ಚಾಮುಂಡೇಶ್ವರಿ, ಗಣಪತಿ, ಸೂರ್ಯ,ವಿಷ್ಣು ಮತ್ತು ಸಪ್ತಮಾತೃಕೆಯರ ಮೂರ್ತಿಗಳನ್ನು ಪ್ರತಿಷ್ಠಾಪಿಸುತ್ತಿದ್ದರು. ಈಗಲೂ ಸಹ ಕಲ್ಯಾಣ ಚಾಲುಕ್ಯರ ಅನೇಕ ದೇವಾಲಯಗಳಲ್ಲಿ ಈ ಅಂಶವನ್ನು ಗಮನಿಸಬಹುದು. ಹಾಗಾಗಿ ಪ್ರಸ್ತುತ ನಾಗಮಂಗಲದ ಈ ಶಂಕರನಾರಾಯಣ ಅಥವಾ ಭುವನೇಶ್ವರ ದೇವಾಲಯಲವು ಈ ಕಾಳಾಮುಖ ಶೈವರ ಪೂಜಾ ಪದ್ಧತಿಯಿಂದ ಕೂಡಿತ್ತು ಎಂದು ನಾವು ನಿರ್ವಿವಾದವಾಗಿ ಹೇಳಬಹುದು.

ಗಣೇಶನ ಶಿಲ್ಪವು ನಾಲ್ಕು ಕೈಗಳಿಂದ ಕೂಡಿದ್ದು, ಪಾಶ, ಅಂಕುಶಗಳನ್ನು ಮೇಲಿನ ಕೈಗಳಲ್ಲಿ ಹಿಡಿದಿದ್ದರೆ, ಕೆಳಗಿನ ಬಲಗೈಯಲ್ಲಿ ಮುರಿದ ದಂತ ಹಾಗೂ ಕೆಳ ಎಡಗೈಯಲ್ಲಿ ಮೋದಕವನ್ನು ಹಿಡಿದಿದ್ದು, ತನ್ನ ಸೊಂಡಿಲಿನಿಂದ ಅದನ್ನು ತಿನ್ನುತ್ತಿರುವಂತೆ ಕೆತ್ತಲಾಗಿದೆ. ಹಿಂಭಾಗದಲ್ಲಿ ಪ್ರಭಾವಳಿಯಿದ್ದು, ಪ್ರಭಾವಳಿಯ ಮಧ್ಯಭಾಗದಲ್ಲಿ ಕೀರ್ತಿಮುಖವಿದೆ. ಕಿರೀಟ ಹಾಗೂ ಇತರ ಆಭರಣಗಳಿಂದ ಕೂಡಿದ್ದು ವಿಗ್ರಹವು ಅತ್ಯಾಕರ್ಷಕವಾಗಿದೆ (ಚಿತ್ರ ೨೪).

ಲಕುಳೀಶ ಅಥವಾ ಶಿವನ ಸದಾಶಿವ (?) ಶಿಲ್ಪವು ಅಧ್ಯಯನಾಸ್ತಕರ ಗಮನ ಸೆಳೆಯುವ ಒಂದು ಪ್ರಮುಖ ಶಿಲ್ಪ. ಲಾಕುಳಾಗಮಗಳ ಪ್ರಕಾರ ಶಿವನು ಲಕುಳೀಶ ರೂಪದಲ್ಲಿ ಕುಳಿತಿದ್ದು ಶೂಲ ಮತ್ತು ಡಮರುಗಳ ಜೊತೆಗೆ ಬಲಗೈಯಲ್ಲಿ ಲಗುಡವನ್ನು ಹಿಡಿದಿರುತ್ತಾನೆ. ಎಡಗೈಯಲ್ಲಿ ಕಪಾಲ ಅಥವಾ ಪಾತ್ರೆಯನ್ನು ಹಿಡಿದಿದ್ದು ಮೂರು ಕಣ್ಣುಗಳಿಂದ ಹಾಗೂ ಜಟೆಯಿಂದ ಅಲಂಕರಿಸಲ್ಪಟ್ಟಿರುತ್ತಾರೆ. ಪ್ರಮುಖವಾಗಿ ಇವು ನಗ್ನನಾಗಿರಬೇಕು. ಪಸ್ತುತ ಶಿಲ್ಪವು ಈ ಎಲ್ಲಾ ಲಕ್ಷಣಗಳಿಂದ ಕೂಡಿದ್ದು, ನಗ್ನತೆಯು ಸಹ ಗೋಚರಿಸುವುದರಿಂದ ಈ ಶಿಲ್ಪವನ್ನು ಲಕುಳೀಶನ ವಿಗ್ರಹ ಎಂದರೆ ತಪ್ಪಾಗಲಾರದು. ಕೆಳ ಬಲಗೈಯಲ್ಲಿ ಖಡ್ಗದಂತೆ ಗೋಚರಿಸಿದರೂ ಸಹ, ಲಗುಡವೂ ಸಹ ಅದೇ ಆಕಾರದಲ್ಲಿರುತ್ತದೆ.೨೨ ಲಕುಳೀಶನ ಶಿಲ್ಪದ ಪೀಠದಲ್ಲಿ ವೃಶ್ಚಿಕ ಅಥವಾ ಚೇಳಿನ ಗುರುತಿರಬೇಕು. ಈ ಶಿಲ್ಪದಲ್ಲಿ ಇದನ್ನೂ ಸ್ವಲ್ಪಮಟ್ಟಿಗೆ ಗುರುತಿಸಬಹುದಾಗಿರುತ್ತದೆ (ಚಿತ್ರ ೨೫)

ನವಿಲಿನ ಮೇಲೆ ಕುಳಿತಿರುವ ಷಣ್ಮಖನ ವಿಗ್ರಹವು ಇಲ್ಲಿನ ಮತ್ತೊಂದು ಉತ್ತಮ ಶಿಲ್ಪವಾಗಿದೆ. ಷಣ್ಮುಖ ಎಂಬ ಹೆಸರೇ ಸೂಚಿಸುವಂತೆ ಆರು ಮುಖಗಳನ್ನು ಹೊಂದಿರಬೇಕು. ಆದರೆ ಈ ಶಿಲ್ಪದಲ್ಲಿ ಕೇವಲ ಮೂರು ಮುಖಗಳನ್ನು ಮುಂಭಾಗದಲ್ಲಿ ಕೆತ್ತಲಾಗಿದೆ. ತನ್ನ ನಾಲ್ಕು ಭುಜಗಳಲ್ಲಿ ಪಾಸ, ಅಂಕುಶ, ಜಪಸರ ಹಾಗೂ ಫಲಗಳನ್ನು ಹಿಡಿದಿದ್ಧಾನೆ. ಇದು ಸಂದೇಹಕ್ಕೆ ಎಡೆ ಮಾಡದಂತೆ ಸುಬ್ರಹ್ಮಣ್ಯನ ವಿಗ್ರಹ ಎಂಬುದನ್ನು ಸ್ಪಷ್ಟಪಡಿಸುತ್ತದೆ. ಕಿರೀಟ, ಕುಂಡಲ ಹಾಗು ಇತರ ಆಭರಣಗಳಿಂದ ಅಲಂಕೃತನಾಗಿದ್ದು, ಮುಖದಲ್ಲಿ ಕುಮರ ಎಂಬ ಹೆಸರಿಗೆ ತಕ್ಕಂತೆ ಕೌಮಾರ್ಯವನ್ನು ಅಭಿವ್ಯಕ್ತಿಗೊಳಿಸಲಾಗಿದೆ.

ಮೇಲಿನ ಶಿಲ್ಪದ ಪಾರ್ಶ್ವದಲ್ಲಿ ಕಂಡುಬರುವ ಮಹಿಷಮರ್ದಿನಿಯ ಶಿಲ್ಪವು ನಾಲ್ಕು ಭುಜಗಳನ್ನು ಹೊಂದಿದ್ದು, ಮೇಲಿನ ಎರಡು ಕೈಗಳಲ್ಲಿ ಚಕ್ರ ಹಾಗೂ ಶಂಖಗಳನ್ನೂ ಧರಿಸಿದ್ಧಾಳೆ. ಬಲ ಕೆಳಗೈಯಲ್ಲಿ ತ್ರಿಶೂಲದಿಂದ ಕೋಣದ ರೂಪದಲ್ಲಿರುವ ಮಹಿಷಾಸುರನನ್ನು ವಧಿಸುತ್ತಿದ್ದು, ಮಹಿಷವು ತಪ್ಪಿಸಿಕೊಳ್ಳದಂತೆ ತನ್ನ ಎಡ ಕೆಳಗೈಯಲ್ಲಿ ಅದರ ಮೂರ್ತಿಯನ್ನು ಹಿಡಿದಿದ್ಧಾಳೆ. ಎಡಗಾಲನ್ನು ಭೂಮಿಯ ಮೇಲೆ ಆಧಾರವಾಗಿಟ್ಟುಕೊಂಡು ಬಲಗಾಲನ್ನು ಮಹಿಷದ ಮೇಲೆ ಇಟ್ಟಿರುವ ಭಂಗಿಯಲ್ಲಿರುವ ಈ ವಿಗ್ರಹ ಅತ್ಯಂತ ಆಕರ್ಷಕವಾಗಿದೆ. ಆದರೆ ಈ ಶಿಲ್ಪವನ್ನು ಅಧ್ಯಯನ ಮಾಡುವಾಗ ಮಹಿಷಮರ್ದಿನಿಯು ಪಾರ್ವತಿಯೇ ಅಥವಾ ಮಹಾಲಕ್ಷ್ಮೀಯೇ ಎಂಬ ಅಭಿಪ್ರಾಯ ಮೂಡುತ್ತದೆ. ಏಕೆಂದರೆ ಯಾವ ಪುರಾಣ ದಲ್ಲಿಯೂ ಮಹಿಷಿಮರ್ದಿನಿಯು ಪಾರ್ವತಿ ಅಥವಾ ದುರ್ಗೆ ಎಂದು ಹೇಳಿಲ್ಲ. ಬದಲಿಗೆ ಮಹಾಲಕ್ಷ್ಮೀ ಎಂದು ಹೇಳಲಾಗಿದೆ. ಚಂಡಮುಂಡರನ್ನು ವಧಿಸಿದ ಚಾಮುಂಡಿ ಪಾರ್ವತಿಯೂ, ಮಹಿಷಮರ್ದಿನಿ ಮಹಾಲಕ್ಷ್ಮಿ ಮತ್ತು ಶುಂಭನಿ ಶುಂಭರನ್ನು ವಧಿಸಿದ್ದು ಸರಸ್ವತಿ ಎಂದು ಪುರಾಣಗಳಲ್ಲಿ ಹೇಳಿರುವ ವಿಷಯವನ್ನು ನಾವು ಮತ್ತೊಮ್ಮೆ ಅಧ್ಯಯನ ಮಾಡಬೇಕಾದ ಅವಶ್ಯಕತೆ ಕಂಡುಬರುತ್ತದೆ. ಪಕ್ಕದಲ್ಲಿ ಪಾಶ, ಅಂಕುಶ, ಪದ್ಮ ಹಾಗೂ ವರದ ಹಸ್ತಗಳಿಂದ ಕೂಡಿರುವ ಪಾರ್ವತಿಯ ಶಿಲ್ಪವು ಅಷ್ಟೇನೂ ಸುಂದರವಾಗಿಲ್ಲದಿದ್ದರೂ ಗಮನ ಸೆಳೆಯುತ್ತದೆ.

ಮಹಾವಿಷ್ಣುವಿನ ಶಿಲ್ಪವು ಪೂರ್ಣಪ್ರಮಾಣದ ಚೋಳ ಕಲಾಶೈಲಿಯನ್ನು ಹೊಂದಿದ್ದರೂ, ಕಾಲದ ಪ್ರಭಾವದಿಂದ ಸಾಕಷ್ಟು ಸವೆತಕ್ಕೆ ಒಳಗಾಗಿದೆ. ನಾಲ್ಕು ಭುಜಗಳ ಈ ಮೂರ್ತಿಯ ಮೇಲ್ಭಾಗದ ಬಲಗೈಯಲ್ಲಿ ಪ್ರಯೋಗಚಕ್ರವನ್ನು ಹಿಡಿದಿದ್ದು, ಈ ಚಾಲುಕ್ಯ ಪಲ್ಲವ ಹಾಗು ಚೋಳಶೈಲಿಗಳಲ್ಲಿ ಕಂಡುಬರುವ ಒಂದು ವಿಶಿಷ್ಟ ಅಂಶವಾಗಿದೆ. ನಂತರದ ಕಾಲಗಳಲ್ಲಿ ಚಕ್ರ ಹಾಗೂ ಶಂಖಗಳನ್ನು ಒಂದೇ ರೀತಿಯಲ್ಲಿ ಕೆತ್ತಿರುವುದನ್ನು ನಾವು ನೋಡಬಹುದಾಗಿದ್ದು, ಪ್ರಯೋಗಚಕ್ರ ಎಂದರೆ ಎನ್ನೇನು ಚಕ್ರವನ್ನು ಪ್ರಯೋಗ ಮಾಡುವ ಅಥವಾ ಎಸೆಯುವ ಭಂಗಿಯಲ್ಲಿ ಹಿಡಿದಿರುವ ಮುದ್ರೆಯಾಗಿದೆ. ಹೊಯ್ಸಳ, ವಿಜಯನಗರದ ಶಿಲ್ಪಗಳಲ್ಲಿ ಈ ಅಂಶವು ನಮಗೆ ಕಂಡು ಬರುವುದಿಲ್ಲ. ಉಳಿದಂತೆ, ಇತರ ಕೈಗಳಲ್ಲಿ ಶಂಖ, ಅಭಯಹಸ್ತ ಮತ್ತು ಗದೆಗಳನ್ನು ಹಿಡಿದಿದ್ಧಾನೆ. ಕಿರೀಟ, ಕುಂಡಲಗಳು, ಹಾರ, ಕಂಠಿ, ಮುಕ್ತಾಹಾರ, ಯಜ್ಞೋಪವೀತ, ಭುಜಸ್ಕಂದ, ಸ್ಕಂಧಮಾಲೆ, ಕೇಯೂರ, ಕಟಕ, ಅಂಗುಲೀಯಕ, ಉದರಬಂಧ, ಊರುದಾಮ, ಕಾಂಚೀಗುಣ, ನೂಪುರ, ಇತ್ಯಾದಿ ಎಲ್ಲಾ ಅಭರಣಗಳು ಸ್ಪಷ್ಟವಾಗಿ ಕೆತ್ತಲ್ಪಟ್ಟಿವೆ. ತಲೆಯ ಹಿಂಭಾಗದಲ್ಲಿ ಕೆತ್ತಲ್ಪಟ್ಟಿರುವ ಶಿರಶ್ಚಕ್ರ ಮತ್ತು ಸಣ್ಣದಾದ ಪಟ್ಟಿಯಾಕಾರದ ಪ್ರಭಾವಳಿಗಳು ಸಹ ಶಿಲ್ಪದ ಕಾಲವನ್ನು ಸ್ಪಷ್ಪಪಡಿಸುತ್ತವೆ. ಈ ಶಿಲ್ಪದಲ್ಲಿ ವಿಷ್ಣುವು ವೈಷ್ಣವಸ್ಥಾನಕ ಭಂಗಿಯಲ್ಲಿ ನಿಂತಿದ್ಧಾನೆ. ವನಮಾಲೆ ಮತ್ತು ಪಾರ್ಶ್ವಗಳಲ್ಲಿ ದೇವಿಯರು ಇಲ್ಲದಿರುವುದನ್ನು ನಾವು ಗಮನಿಸಬಹುದಾಗಿದೆ (ಚಿತ್ರ ೨೬).

ಸೂರ್ಯನಾರಾಯಣನ ಶಿಲ್ಪವೂ ಸಹ ಮಹಾವಿಷ್ಣುವಿನ ಶಿಲ್ಪದ ಮಾದರಿಯಲ್ಲಿಯೇ ಇದ್ದು, ಆಭರಣಗಳಲ್ಲಿ ಮತ್ತು ಉಡುಪಿನಲ್ಲಿಯೂ ಸಹ ವ್ಯತ್ಯಾಸಗಳು ಕಂಡುಬರುತ್ತವೆ. ಇದನ್ನು ಶಾಸ್ತ್ರಗಳಲ್ಲಿ ಹೇಳಲಾಗಿದ್ದು, ಅದನ್ನು ಇಲ್ಲಿ ಚಿತ್ರಿಸಿರುವುದು ಶಿಲ್ಪಿಗಳ ಶಾಸ್ತ್ರಜ್ಞಾನದ ಮಟ್ಟವನ್ನು ತೋರಿಸುತ್ತದೆ (ಚಿತ್ರ ೨೭). ಇಲ್ಲಿ ಸೂರ್ಯನ ತಲೆಯ ಹಿಂಭಾಗದಲ್ಲಿ ಕಿರಣಗಳನ್ನು ಸೂಚಿಸುವ ಶಿರಶ್ಚಕ್ರ ಅಥವಾ ಪ್ರಭಾಚಕ್ರವನ್ನು ಕೆತ್ತಲಾಗಿದ್ದು, ಸೂರ್ಯನು ತನ್ನೆರಡು ಕೈಗಳಲ್ಲಿ ಕಮಲವನ್ನು ಹಿಡಿದಿದ್ಧಾನೆ. ಸೂರ್ಯನು ಸಮಸ್ಥಾನಕ ಭಂಗಿಯಲ್ಲಿ ನಿಂತಿದ್ದು, ಆತನ ಎಡಬಲಗಳಲ್ಲಿ ಉಷೆ ಮತ್ತು ಪ್ರತ್ಯೂಷೆರನ್ನು ಕೆತ್ತಲಾಗಿದೆ. ಅವರು ಸಾಮಾನ್ಯವಾಗಿ ಮಂದೇಹರಾಕ್ಷಸರೊಡನೆ ಯುದ್ಧಮಾಡುವಂತೆ ಹೊಯ್ಸಳ ಶಿಲ್ಪಗಳಲ್ಲಿ ತೋರಿಸಲಾಗಿರುತ್ತದೆ. ಆದರೆ ಇಲ್ಲಿ ಕೇವಲ ಅವರು ನಿಂತಿದ್ದು, ಬಲಭಾಗದಲ್ಲಿರುವ ಉಷೆಯು ಖಡ್ಗ ಮ್ತು ಗುರಾಣಿಗಳನ್ನು ಹಿಡಿದಿದ್ದು, ಎಡಭಾಗದಲ್ಲಿರುವ ಪ್ರತ್ಯೂಷೆಯು ಬಿಲ್ಲು ಹಾಘೂ ಬಾಣಗಲ್ಲನು ಹಿಡಿದಿದ್ಧಾಳೆ. ಇದು ಸುಪ್ರಭೇದಾಗಮದಲ್ಲಿ ಬರುವ ಮೂರ್ತಿಲಕ್ಷಣಕ್ಕೆ ಸರಿಯಾಗಿದೆ. (ಸೂರ್ಯನ ಪಕ್ಕದಲ್ಲಿ ಛಾಯಾ ಹಾಗೂ ಸಂಜ್ಞಾದೇವಿ, ಕೆಲವು ಸಮಯಗಳಲ್ಲಿ ದಂಡ ಮತ್ತು ಪಿಂಗಳ ಇರಬೇಕೆಂದು ಅನೇಕ ಪ್ರತಿಮಾಶಾಸ್ತ್ರ ಗ್ರಂಥಗಳು೨೩ ಹೇಳುತ್ತವಾದರೂ, ಇಲ್ಲಿ ನಾವು ಉಷೆ ಮತ್ತು ಪ್ರತ್ಯೂಷೆಯರನ್ನು ಕಾಣಬಹುದಾಗಿದೆ). ಸೂರ್ಯನು ಪದ್ಮದ ಮೇಲೆ ನಿಂತಿದ್ದು, ಕೆಳಭಾಗದ ಪೀಠದಲ್ಲಿ ಏಳು ಕುದುರೆಗಳನ್ನು ಕೆತ್ತಲಾಗಿದೆ (ಎಡಭಾಗದ ಏಳನೇ ಕುದುರೆ ಮುಚ್ಚಿಹೋಗಿದೆ). ಮಧ್ಯದ ಕುದುರೆಯು ಹಿಂಭಾಗದಲ್ಲಿ ಸೂರ್ಯನ ಸಾರಥಿಯೂ, ಗರುಡನ ಅಣ್ಣನೂ ಆದ ಅರುಣನನ್ನು ಚಾವಟಿ ಹಿಡಿದು ರಥವನ್ನು ನಡೆಸುತ್ತಿರುವಂತೆ ಚಿತ್ರಿಸಲಾಗಿದೆ.೨೪ ಸೂರ್ಯನು ಪ್ರಭಾವಳಿ ಮಧ್ಯದಲ್ಲಿದ್ದು, ಪ್ರಭಾವಳಿಯ ಎರಡು ಭಾಗಗಳಲ್ಲಿ ಮಕರಗಳನ್ನು ಕೆತ್ತಲಾಗಿದೆ. ಒಟ್ಟಿನಲ್ಲಿ ಚೋಳ ಶಿಲ್ಪದ ಎಲ್ಲಾ ಅಲಂಕರಣಗಳನ್ನು ನಾವು ಈ ಶಿಲ್ಪದಲ್ಲಿ ಕಾಣಬಹುದಾಗಿದ್ದು, ಸುಂದರವಾಗಿ ಮೂಡಿಬಂದಿದೆ.

ಕರ್ನಾಟಕದಲ್ಲಿ ಕೆಲವು ಶಿವನ ಲೀಲೆಗಳು ಶಿಲ್ಪಗಳಲ್ಲಿ ಅಪರೂಪವಾಗಿದ್ದು, ಕೆಲವಂತು ಕಂಡು ಬರುವುದೇ ಇಲ್ಲ. ಅಪರೂಪದ ಶಿಲ್ಪಗಳಲ್ಲಿ ಚಂದ್ರಶೇಖರ ಮೂರ್ತಿಯೂ ಸಹ ಒಂದು. ಈ ದೇವಾಲಯದಲ್ಲಿ ಕಂಡು ಬರುವ ಮತ್ತೊಂದು ಶಿಲ್ಪವೆಂದರೆ ಈ ಚಂದ್ರಶೇಖರಮೂರ್ತಿಯ ಪ್ರತಿಮೆ (ಚಿತ್ರ ೨೮) ಶಿವನು ಸಮಸ್ಥಾನಕ ಪಾದದಲ್ಲಿದ್ದು, ಪರಶು ಮತ್ತು ಹರಿಣಗಳನ್ನು ಮೇಲಿನ ಕೈಗಳಲ್ಲಿ ಹಿಡಿದಿದ್ದಾನೆ.ಕೆಳಗಿನ ಕೈಗಳಲ್ಲಿ ಅಭಯ ಮತ್ತು ವರದ ಮುದ್ರೆಗಳನ್ನು ಹೊಂದಿದ್ದಾನೆ. ಶಾಸ್ತ್ರಗಳ ಪ್ರಕಾರ ಗೌರಿಯು ಅವನ ಭುಜದೇತ್ತರಕ್ಕೆ ಇರಬೇಕಾಗುತ್ತದೆ.೨೫ ಆದರೆ ಇಲ್ಲಿ ಒಂದೇ ಶಿಲ್ಪದಲ್ಲಿ ಪಡಿಮೂಡಿಸಿರುವುದರಿಂದ ಗೌರಿಯನ್ನು ಅಷ್ಟು ಪ್ರಧಾನವಾಗಿ ಕೆತ್ತಲಾಗಿಲ್ಲ ಎಂದು ಸ್ಪಷ್ಟವಾಗುತ್ತದೆ. ಆದರೂ ಕಿರೀಟ, ಅಲಂಕರಣ ಇತ್ಯಾದಿಗಳನ್ನು ಚಂದ್ರಶೇಖರಮೂರ್ತಿಗೆ ಉಕ್ತವಾಗಿರುವ ಲಕ್ಷಣಗಳಿಂದ ಕೆತ್ತಿರುವುದರಿಂದ ಸಾಧ್ಯವಾದಷ್ಟು ಶಿಲ್ಪಶಾಸ್ತ್ರ ಗ್ರಂಥಗಳನ್ನು ಅನುಸರಿಸಿರುವುದು ಕಂಡುಬರುತ್ತದೆ. ವಿಗ್ರಹವು ಯಾವ ಕಾಲದ್ದು ಎಂಬುದರ ಬಗೆಗೆ ಸಂದೇಹಗಳು ಮೂಡುತ್ತಾ, ಅತೀ ಪ್ರಾಚೀನವಲ್ಲ ಎಂಬ ಅಂಶ ಸ್ಪಷ್ಟವಾಗುತ್ತದೆ.

ಲೋಹಶಿಲ್ಪಗಳು

ಈ ದೇವಾಲಯದಲ್ಲಿ ನಾಲ್ಕು ಲೋಹದ ಶಿಲ್ಪಗಳು ಕಂಡುಬರುತ್ತವೆ. ಅವುಗಳೆಂದರೆ, ಸ್ಥಾನಕ ಗಣಪತಿಯ ವಿಗ್ರಹ, ಪಾರ್ವತಿ, ಚಂದ್ರಶೇಖರ ಹಾಗು ಒಂದು ನಂದಿಯ ವಿಗ್ರಹಗಳು, ಈ ನಾಲ್ಕರಲ್ಲಿ ತಾಮ್ರದ ಲೋಹವನ್ನು ಅಧಿಕವಾಗಿ ಹೊಂದಿರುವ ಗಣಪತಿ ಮತ್ತು ಪಾರ್ವತಿಯ ವಿಗ್ರಹಗಳು ಪ್ರಾಚೀನ ವಿಗ್ರಹಗಳಾಗಿದ್ದು, ಚಂದ್ರಶೇಖರ ಮತ್ತು ನಂದಿಯ ಶಿಲ್ಪಗಳು ನೂತನವಾಗಿ ಎರಕಗೊಂಡಿರುವುದು ಸ್ಪಷ್ಟವಾಗಿ ಮೊದಲನೇ ನೋಟದಲ್ಲಿಯೇ ಗೋಚರಿಸುತ್ತದೆ. ಇಲ್ಲಿ ಚಂದ್ರಶೇಖರ ಮತ್ತು ಗೌರಿದೇವಿಯ ಶಿಲ್ಪಗಳು ಶಾಸ್ತ್ರಗಳಿಗೆ ಅನುಗುಣವಾದ ಪ್ರಮಾಣವನ್ನು ಹೊಂದಿದೆ. ಆದರೆ ಇವುಗಳ ಕಾಲಮಾನಗಳಲ್ಲಿ ವ್ಯತ್ಯಾಸ ಕಂಡುಬರುತ್ತದೆ (ಚಿತ್ರ ೨೯).

ಕಾಳಿಕಾದೇವಿ ಮತ್ತು ಕಮಠೇಶ್ವರ ದೇವಾಲಯ

ಈ ದೇವಾಲಯಲವು ಸೌಮ್ಯಕೇಶವ ದೇವಾಲಯದ ಮುಂಭಾಗದಲ್ಲಿದ್ದು, ಇಲ್ಲಿನ ದೇವಾಲಯದ ಶಿಲ್ಪಗಳಲ್ಲಿ ಕೆಲವು ಪ್ರಾಚೀನ ಶಿಲ್ಪಗಳಾಗಿವೆ. ದೇವಾಲಯವನ್ನು ಪ್ರವೇಶಿಸುವಾಗ ದ್ವಾರದ ಬಲಗಡೆಯಲ್ಲಿ ಒಂದು ಗಣಪತಿಯನ್ನು ಕಾಣುತ್ತೇವೆ. ಇದು ಒಂದು ಸುಂದರಶಿಲ್ಪವಾಗಿದ್ದು, ಆನೆಯ ಮುಖವನ್ನು ನಿಜವಾದ ಆನೆಯಂತೆಯೇ ಕೆತ್ತಲಾಗಿದೆ. ಹಾಗೂ ಕಿರೀಟದ ಅಲಂಕರಣವೂ ಸಹ ಸುಂದರವಾಗಿ ಮೂಡಿಬಂದಿದ್ದು, ಇದು ಕೇವಲ ಕೆಲವು ಶಿಲ್ಪಗಳಲ್ಲಿ ಮಾತ್ರ ಅಭಿವ್ಯಕ್ತವಾಗಿದೆ. ದೇವಾಲಯಲದ ಒಳಭಾಗದಲ್ಲಿ ಪಾರ್ವತಿಯ ಹಾಗೂ ಶಿವನ ಲಿಂಗವಿದ್ದು, ಕಾಳಿಕಾದೇವಿ ಮತ್ತು ಕಮಠೇಶ್ವರ ಎಂದು ಕರೆಯಲಾಗತ್ತದೆ. ಆದರೆ ಪುರಾಣಗಳಲ್ಲಿ ಆಗಮಗ್ರಂಥಗಳಲ್ಲಿ ಎಲ್ಲಿಯೂ ಕಮಠೇಶ್ವರ ಎಂದು ಕಂಡುಬರುವುದಿಲ್ಲ. ಕಚ್ಚಪ ಅಥವಾ ಕಮಠ ಎಂದರೆ ಸಂಸ್ಕೃತದಲ್ಲಿ ಆಮೆ ಎಂದರ್ಥ. ಆದರೆ ಇಲ್ಲಿ ಯಾವ ಆಮೆಗೂ ಸಂಬಂಧಪಟ್ಟ ವಿಚಾರ ಬರುವುದಿಲ್ಲ. ಆದ್ದರಿಂದ ಇದು ಕಮಠೇಶ್ವರ ಅಲ್ಲ ಎಂದು ಸ್ಪಷ್ಟವಾಗುತ್ತದೆ. ಬಹುಶಃ ಇದು ಕರ್ಮಠೇಶ್ವರ ಎಂದಿರಬೇಕು. ಏಕೆಂದರೆ ಕರ್ಮಥ ಎಂದರೆ ಕೆಲಸದಲ್ಲಿ ಹೆಚ್ಚು ಆಸಕ್ತಿ ಇರುವವನು ಎಂದರ್ಥ. ಅದೂ ಅಲ್ಲದೇ ಈ ನಾಗಮಂಗಲದಲ್ಲಿ ಕಮ್ಮಾರಿಕೆ ಅಂದರೆ ಲೋಹಕೆಲಸ, ಗುಡಿ ಕೈಗಾರಿಕೆಗಳು ಕಂಡುಬರುತ್ತವೆ. ಹಿಂದಿನಿಂದಲೂ ನಾಗಮಂಗಲವು ದೇವಾಲಯದ ವಾಹನಗಳನ್ನು ನಿರ್ಮಿಸುವುದರಲ್ಲಿ ಪ್ರಸಿದ್ಧಿಯನ್ನು ಪಡೆದಿತ್ತು. ಹಾಗಾಗಿ ಇದು ಕರ್ಮಠೇಶ್ವರ ಎಂಬ ಪದವು ಇಂದು ಕಮಠೇಶ್ವರ ಆಗಿರಬೇಕು. ಈ ದೇವಾಲಯ ವಿಶ್ವಕರ್ಮ ಜನಾಂಗದವರ ನಿರ್ವಹಣೆಯಲ್ಲಿದ್ದು, ಭಕ್ತಿಯಿಂದ ನಡೆದುಕೊಳ್ಳುತ್ತಾರೆ.

ಈ ದೇವಾಲಯದ ಹಿಂಭಾಗದಲ್ಲಿ ಮೈಸೂರು ಒಡೆಯರ ಕಲಾಶೈಲಿಯನ್ನು ಹೊಂದಿರುವ ವೀರಭದ್ರನ ಶಿಲ್ಪವೊಂದು ಕಂಡುಬರುತ್ತದೆ. ಈ ಶಿಲ್ಪಕ್ಕೆ ನಾಲ್ಕು ಕೈಗಳಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ ಹಾಗು ಎಡಗೈಯಲ್ಲಿ ಬಿಲ್ಲು, ಕೆಳಗಿನ ಎಡಗೈಯಲ್ಲಿ ಗುರಾಣಿ, ಹಾಗು ಕೆಳ ಬಲಗೈಯಲ್ಲಿ ಖಡ್ಗವನ್ನು ಹಿಡಿದಿದ್ಧಾನೆ. ಅಕ್ಕ ಪಕ್ಕಗಳಲ್ಲಿ ಬಹುಶಃ ದಕ್ಷ ಮತ್ತು ಅವನ ಹೆಂಡತಿಯನ್ನು ಚಿತ್ರಿಸಲಾಗಿದೆ. ಈ ವಿಗ್ರಹದ ಸುತ್ತಲೂ ಇತ್ತೀಚಿನ ನಾಗಪ್ರತಿಮೆಗಳನ್ನು ಪ್ರತಿಷ್ಠಾಪಿಸಲಾಗಿದೆ (ಚಿತ್ರ ೩೦). ಈ ದೇವಾಲಯದಲ್ಲಿಯೂ ಇತ್ತೀಚಿನ ನವಗ್ರಹ ಪ್ರತಿಮೆಗಳನ್ನು ನಾವು ಕಾಣಬಹುದಾಗಿದೆ.

ವೀರಭದ್ರೇಶ್ವರ ದೇವಾಲಯ

ನಾಗಮಂಗಲದ ಪ್ರಮುಖ ದೇವಾಲಯಗಳಲ್ಲಿ ವೀರಭದ್ರೇಶ್ವರ ದೇವಾಲಯಲವು ಸಹ ಒಂದು.೨೬ ಇದು ವೀರಶೈವ ಧರ್ಮದ ಆಚರಣೆಗಳನ್ನು ಒಳಗೊಂಡಿದೆ. ಇಲ್ಲಿ ಹೊಸದಾದರೂ ಕೆಲವು ವಿಶಿಷ್ಟ ಶಿಲ್ಪಗಳನ್ನು ಹಾಗು ಆ ಶಿಲ್ಪಗಳಿಗೆ ಸಂಬಂಧಪಟ್ಟ ಆಚರಣೆಗಳನ್ನು ನಾವು ಕಾಣಬಹುದಾಗಿದೆ. ಈ ದೇವಾಲಯದ ಪ್ರಮುಖ ಶಿಲ್ಪವೆಂದರೆ ವೀರಭದ್ರ ದೇವರ ಮೂರ್ತಿ, ನಾಲ್ಕು ಭುಜದ ಈ ಮೂರ್ತಿಯು ನಿಂತಿರುವ ಭಂಗಿಯಲ್ಲಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ ಹಾಗು ಎಡಗೈಯಲ್ಲಿ ಡಮರು, ಕೆಳಗಿನ ಬಲಗೈಯಲ್ಲಿ ಖಡ್ಗ ಹಾಗು ಎಡಗೈಯಲ್ಲಿ ಕಪಾಲವನ್ನು ಹಿಡಿದಿದೆ. ವೀರಭದ್ರನು ಚಲಿಸುವ ಭಂಗಿಯಲ್ಲಿದ್ದು, ಕಿರೀಟ, ಕುಂಡಲ ಮುಂತಾದ ಆಭರಣಗಳಿಂದ ಅಲಂಕೃತನಾಗಿದ್ಧಾನೆ. ವಿಜಯನಗರ ಕಾಲದ ಶಾಸನಗಳಲ್ಲಿ ಈ ದೇವಾಲಯಲದ ಉಲ್ಲೇಖವಿದ್ದು, ಬಹುಶಃ ಮೂರ್ತಿಯೂ ಸಹ ಅದೇ ಕಾಲಕ್ಕೆ ಸೇರಿರಬೇಕು. ಆದರೆ ಅಲ್ಲಿನ ಜನರು ಇದನ್ನು ಚೋಳರ ಕಾಲದ್ದು ಎನ್ನುತ್ತಾರೆ. ಆದರೆ ಶಿಲ್ಪದ ಆಧಾರದಲ್ಲಿಯಾಗಲೀ, ಅಥವಾ ಶಾಸನಗಳ ಆಧಾರದಿಂದಾಗಲೀ ಇದನ್ನು ದೃಢೀಕರಿಸಲಾಗುವುದಿಲ್ಲ. ಹಾಗಾಗಿ ಇದು ವಿಜಯನಗರ ಕಾಲದ ವಿಗ್ರಹ ಎಂಬುದು ನಿರ್ವಿವಾದವಾದ ಸಂಗತಿ. ಈ ವಿಗ್ರಹವು ಗರ್ಭಗೃಹದಲ್ಲಿದ್ದು, ಗರ್ಭಗೃಹವು ದೇವಾಲಯದ ಇತರ ವಾಸ್ತುಭಾಗಗಳಿಂತ ತಗ್ಗಾದ ಪ್ರದೇಶದಲ್ಲಿದೆ. ಅಂದರೆ ಮಟ್ಟಿಲನ್ನು ಇಳಿದು ಈ ಗರ್ಭಗೃಹವನ್ನು ಪ್ರವೇಶಿಸಬೇಕಾಗುತ್ತದೆ. ಮೂರ್ತಿಯು ಸುಮಾರು ಎರಡುವರೆ ಅಥವಾ ಮೂರು ಅಡಿಯಷ್ಟು ಎತ್ತರವಾಗಿದೆ (ಚಿತ್ರ ೩೧).

ಮತ್ತೊಂದು ಈ ದೇವಾಲಯದ ಪ್ರಮುಖ ಶಿಲ್ಪವೆಂದರೆ ಕಾಳಿಕಾದೇವಿಯ ಶಿಲ್ಪ (ಚಿತ್ರ ೩೨). ಪುರಾಣಗಳ ಪ್ರಕಾರ ದಕ್ಷಯಜ್ಞವನ್ನು ಧ್ವಂಸ ಮಾಡಲು ಕಾಳಿಕಾ ಮತ್ತು ವೀರಭದ್ರರು ನಿಯೋಜಿಸಲ್ಪಟ್ಟಿದ್ದರು. ಈ ಕಾಳಿಕಾಮೂರ್ತಿಯು ಚತುರ್ಭುಜವನ್ನು ಹೊಂದಿದ್ದು, ಮೇಲಿನ ಬಲಗೈಯಲ್ಲಿ ತ್ರಿಶೂಲ ಹಾಗು ಎಡಗೈಯಲ್ಲಿ ಡಮರು, ಕೆಳಗಿನ ಬಲಗೈಯಲ್ಲಿ ಖಡ್ಗ ಹಾಗು ಎಡಗೈಯಲ್ಲಿ ಗುರಾಣಿಯನ್ನು ಹಿಡಿದಿದ್ಧಾಳೆ. ಇದೂ ಸಹ ವಿಜಯನಗರದ ಅಂದರೆ ವೀರಭದ್ರನ ಮೂರ್ತಿಯ ಸಮಕಾಲೀನ ಮೂರ್ತಿಯಾಗಿದೆ.

ಈ ದೇವಾಲಯದ ಮತ್ತೆ ಕೆಲವು ಆಕರ್ಷಣೀಯ ಶಿಲ್ಪಗಳೆಂದರೆ, ಭೈರವ, ಗಣಪತಿ, ಅಯ್ಯಪ್ಪ, ದಕ್ಷಿಣಾಮೂರ್ತಿ, ಹಾಗೂ ದ್ವಾರಪಾಲಕ ಮೂರ್ತಿಗಳು, ಭೈರವನ ಶಿಲ್ಪವು ಅತ್ಯಂತ ಆಕರ್ಷಕವಾಗಿದ್ದು, ನವರಂಗದಲ್ಲಿ ಇಡಲ್ಪಟ್ಟಿದೆ. ಭೈರವು ನಗ್ನನಾಗಿ ಪಾದುಕೆಗಳನ್ನು ಧರಿಸಿ ಲೋಕಪರ್ಯಟನೆ ಮಾಡುವ ಭಂಗಿಯಲ್ಲಿದ್ದು, ಚತುರ್ಭುಜಗಳಿಂದ ಕೂಡಿದ್ಧಾನೆ. ಭೈರವನು ನಗ್ನನಾಗಿದ್ದು, ತಲೆಯ ಮೇಲೆ ಸುರುಳಿಕೂದಲು ಕಂಡುಬರುತ್ತದೆ. ಪ್ರಭಾವಳಿಯಲ್ಲಿ ಸರ್ಪದ ಹೆಡೆಗಳನ್ನು ಕೆತ್ತಲಾಗಿದೆ. ಭೈರವನ ಎಡು ಬದಿಗಳಲ್ಲಿ ಪಿಶಾಚಿಗಳು ಮದ್ಯಪಾತ್ರೆಯನ್ನು ಹಿಡಿದಿವೆ. ಭೈರವನು ತನ್ನ ನಾಲ್ಕು ಕೈಗಳಲ್ಲಿ, ಮೇಲಿನ ಬಲಗೈಯನ್ನು ತ್ರಿಶೂಲವನ್ನು, ಕೆಳಗಿನ ಬಲಗೈಯಲ್ಲಿ ಖಡ್ಗವನ್ನು, ಕೆಳಗಿನ ಎಡಗೈಯಲ್ಲಿ ಕಪಾಲ ಮತ್ತು ರುಂಡವನ್ನು ಮತ್ತು ಮೇಲಿನ ಎಡಗೈಯಲ್ಲಿ ಡಮರುವನ್ನು ಹಿಡಿದಿದ್ಧಾನೆ. ಎಡಗೈಯಲ್ಲಿ ನೇತಾಡುತ್ತಿರುವ ರುಂಡದಿಂದ ಬರುವ ರಕ್ತವನ್ನು ನಾಯಿಯು ನೆಕ್ಕುತ್ತಿದೆ. ಒಟ್ಟಿನಲ್ಲಿ ಶಿಲ್ಪ ಲಕ್ಷಣದಲ್ಲಿ ಹೇಳಿರುವ ಎಲ್ಲಾ ಲಕ್ಷಣಗಳನ್ನು ಈ ವಿಗ್ರಹ ಹೊಂದಿದೆ. ಆದರೆ ರುಂಡಮಾಲೆಯು ಅಷ್ಟು ಸ್ಪಷ್ಟವಾಗಿಲ್ಲ. ಈ ವಿಗ್ರಹವು ವಿಜಯನಗರ ಕಲಾಶಯಲಿಗೆ ಸೇರಿರಬಹುದಾಗಿದೆ (ಚಿತ್ರ ೩೩).

ಈ ದೇವಾಲಯದಲ್ಲಿ ಎರಡು ಗಣೇಶವನ ಶಿಲಾ ಶಿಲ್ಪಗಳು ಕಂಡುಬರುತ್ತವೆ. ಇವುಗಳಲ್ಲಿ ದೇವಾಲಯದ ಒಳಭಾಗದಲ್ಲಿರುವ ವಿಗ್ರಹವು ಸುಂದರವಾಗಿದೆ. ಹೊರಭಾಗದ ಗಣೇಶ ಸಾಧಾರಣವಾಗಿದೆ. ದೇವಾಲಯದ ಉಳಿದ ಶಿಲ್ಪಗಳೆಂದರೆ ದ್ವಾರಪಾಲಕರ ಶಿಲ್ಪಗಳು, ಹಾಗು ದಕ್ಷಿಣಾಮೂರ್ತಿಯ ಶಿಲ್ಪ, ಸರಿಯಾದ ವ್ಯವಸ್ಥೆ ಇಲ್ಲದೆ ಇವುಗಳನ್ನು ಇಂದು ಗುರುತಿಸುವುದೇ ಕಷ್ಟವಾಗಿದೆ. ವಿಗ್ರಹವನ್ನು ಗುರುತಿಸುವುದು ಸುಲಭವಾದರು, ಅವುಗಳ ಲಕ್ಷಣ, ಕೈಯಲ್ಲಿ ಹಿಡಿದಿರುವ ಆಯುಧಗಳು, ಆಭರಣಗಳ ವಿನ್ಯಾಸ ಇತ್ಯಾದಿಗಳನ್ನು ಗಮನಿಸುವುದು ಇವುಗಳಿರುವ ಪರಿಸ್ಥಿತಿಯಲ್ಲಿ ಕಷ್ಟವಾಗುತ್ತದೆ.

ಉಳಿದಂತೆ ಕಾಳಿಕಾದೇವಿಯ ಗರ್ಭಗೃಹದ ಮುಂದಿರುವ ಕಂಬಗಳಲ್ಲಿ ನಾವು ಅನೇಕ ಉಬ್ಬುಶಿಲ್ಪಗಳನ್ನು ಕಾಣುತ್ತೇವೆ. ಈ ಕಂಬಗಳು ಮೈಸೂರು ಒಡೆಯರವರ ಕಾಲದ ಕಲಾಶೈಲಿಯನ್ನು ಹೊಂದಿದ್ದು, ಬಹುಶಃ ಮೈಸೂರು ಅರಸರ ಕಾಲದಲ್ಲಿ ಅಭಿವೃದ್ಧಿ ಹೊಂದಿರಬೇಕು. ಈ ಕಂಬಗಳಲ್ಲಿ ಗಣಪತಿ, ಕುಮಾರ, ಶಿವನ ವೀರಭದ್ರ ಲೀಲೆ, ನಟರಾಜ ಲೀಲೆ, ವೃಷಭಾರೂಡ ಚಂದ್ರಶೇಖರ ಲೀಲೆ ಹಾಗು ಅನೇಕ ಭಕ್ರ ವಿಗ್ರಹಗಳನ್ನು ಬಿಡಿಸಲಾಗಿದೆ. ಇತ್ತೀಚಿಗೆ ಸೇರಿಸಿರಬಹುದಾದ ನವಗ್ರಹಗಳನ್ನು ಸಹ ಈ ದೇವಾಲಯದಲ್ಲಿ ಕಾಣಬಹುದು.

ಲೋಹಶಿಲ್ಪಗಳು

ಈ ವೀರಭದ್ರ ದೇವಾಲಯದ ಪ್ರಮುಖ ಆಕರ್ಷಣೆಯೆಂದರೆ ಇಲ್ಲಿನ ಲೋಹ ಶಿಲ್ಪಗಳು, ವಿವಿಧ ಬಗೆಯ ಲೋಹಗಳಿಂದ ಹಾಗು ವಿವಿಧ ದೇವ-ದೇವತೆಯರ ವಾಹನಗಳಿಂದ ಈ ದೇವಾಲಯಲವು ತುಂಬಿಹೋಗಿದೆ. ಈ ದೇವಾಲಯದ ಪ್ರಮುಖ ಹಾಗು ವಿಶಿಷ್ಟ ಶಿಲ್ಪವೆಂದರೆ ಶರಭಾವತಾರದ ವಿಶಿಷ್ಟ ಲೋಹಶಿಲ್ಪ. ಕರ್ನಾಟಕದಲ್ಲಿ ಸಾಮಾನ್ಯವಾಗಿ ಶರಭಾವತಾರ, ಮತ್ಯಸಂಹಾರ, ಚಕ್ರದಾನ ಮುಂತಾದ, ಮತಗಳ ಘರ್ಷಣೆಗೆ ಕಾರಣವಾದ ಶಿವನ ಶಿಲ್ಪಗಳನ್ನು ಕಂಡರಿಸಿರುವುದು ಅಪರೂಪವಾಗಿದೆ. ಶರಭಾವತಾರದ ಶಿಲ್ಪವಂತೂ ನನ್ನ ಅನುಭವದಲ್ಲಿ ಕರ್ನಾಟಕದ ಯಾವ ಪ್ರಾಚೀನ ಪ್ರಸಿದ್ಧ ದೇವಾಲಯದಲ್ಲಿಯೂ ಕಂಡುಬಂದಿಲ್ಲ. ವಿಷ್ಣುವು ನರಸಿಂಹ ಅವತಾರವನ್ನು ಎತ್ತಿದ ನಂತರ, ಅವನು ಉದ್ಧಟತನಕ್ಕೆ ಒಳಗಾಗಿ ಪ್ರಜೆಗಳನ್ನು ತಿನ್ನಲು ಆರಂಭಿಸಿದಾಗ, ಶಿವನು ಜನರನ್ನು ರಕ್ಷಿಸಲು ಶರಭಾವತಾರವನ್ನು ಎತ್ತಿದನು ಎಂದು ಶೈವಪುರಾಣಗಳಲ್ಲಿ ವರ್ಣಿಸಿದರೆ, ಶಿವನು ಶರಭಾವತಾರವನ್ನು ಎತ್ತಿ ಲೋಕಕ್ಕೆ ಕಂಟಕನಾದಾಗ, ವಿಷ್ಣುವು ಗಂಡಭೇರುಂಡ ಅವತಾರವನ್ನು ತಳೆದನು ಎಂದು ವೈಷ್ಣವಪುರಾಣಗಳು ಹೇಳುತ್ತವೆ. ಒಟ್ಟಿನಲ್ಲಿ ಶಿವ ಮತ್ತು ವೈಷ್ಣವ ಅವತಾರ ಅಥವಾ ಲೀಲೆಗಳಲ್ಲಿ ನಾವು ಒಂದು ರೀತಿಯ ಸ್ಪರ್ಧೆ ಹಾಗೂ ವಿವಾದವನ್ನು ಕಾಣುತ್ತೇವೆ. ವಿಜಯನಗರದ ಕಾಲದ ಲಕ್ಕಣದಂಡೇಶನು ಶಿವತತ್ವ ಚಿಂತಾಮಣಿಯಲ್ಲಿ ಶಿವನು ಈ ಎಲ್ಲಾ ಲೀಲೆಗಳನ್ನು ಹೆಚ್ಚು ಎಂದು ಹೇಳಿರುವುದನ್ನು ಕಾಣಬಹುದು.

ಈ ದೇವಾಲಯದ ಲೋಹಶಿಲ್ಪದಲ್ಲಿ ಈ ದೃಷ್ಟಿಯಿಂದ ಈ ಶರಭಾವತಾರ ವಿಗ್ರಹ ಮನಸೆಳೆಯುತ್ತದೆ. ಇಷ್ಟಕ್ಕೂ ಇದು ಪೂರ್ಣಪ್ರಮಾಣದ ವಿಗ್ರಹವಲ್ಲ ಬದಲಿಗೆ ಉಬ್ಬುಕೆತ್ತನೆಯಾಗಿದೆ. ಅದೂ ಅಲ್ಲದೇ ಇದು ಪ್ರಾಚೀನವಾದ ವಿಗ್ರಹವೂ ಅಲ್ಲ. ಈ ಶರಭಾವತಾರ ಮೂರ್ತಿಗೆ ೩೨ ಕೈಗಳಿದ್ದು, ನರಸಿಂಹನನ್ನು ಶರಭನ ಪಾದದ ಬಳಿ ಚಿತ್ರಿಸಲಾಗಿದೆ (ಚಿತ್ರ ೩೪).

ಇನ್ನುಳಿದ ಲೋಹಶಿಲ್ಪಗಳೆಂದರೆ, ಅಯ್ಯಪ್ಪ, ದಕ್ಷಿಣಾಮೂರ್ತಿ, ವೀರಭದ್ರ, ಕುರಿ ತಲೆಯನ್ನು ಹೊಂದಿರುವ ದಕ್ಷಬ್ರಹ್ಮ, ಋಷಿಗಳು, ಕೈಮುಗಿದು ನಿಂತಿರುವ ನಂದಿ ಪಾರ್ವತಿ, ವಾಹನಗಳು ಇತ್ಯಾದಿ ೫೦ಕ್ಕೂ ಹೆಚ್ಚು ಸಣ್ಣ ಹಾಗೂ ದೊಡ್ಡ ಪ್ರಮಾಣದ ಶಿಲ್ಪಗಳು ಕಂಡುಬರುತ್ತವೆ. ಆದರೆ ಅದರಲ್ಲಿ ಎಲ್ಲವೂ ಪ್ರಾಚೀನಕಾಲದ್ದಲ್ಲ. ಕೆಲವನ್ನು ಬಿಟ್ಟು ಉಳಿದವು ಈಚಿನದು ಎಂದು ಒಂದೇ ನೋಟದಲ್ಲಿ ತಿಳಿದುಬರುತ್ತದೆ. ಗಾತ್ರದ ದೃಷ್ಟಿಯಿಂದ ಗಣಪತಿಯ ವಿಗ್ರಹದ ಮುಂದಿರುವ ಇಲಿಯ ಶಿಲ್ಪ ಗಮನಸೆಳೆಯುತ್ತದೆ. ಉತ್ಸವಕ್ಕಾಗಿ ಮಾಡಿರುವ ನಾನಾ ವಿಧವಾದ ವಾಹನಗಳನ್ನು ನಾವು ಇಲ್ಲಿ ಕಾಣಬಹುದಾಗಿದ್ದು, ಅವುಗಳಲ್ಲಿ, ಕುದುರೆಗಳು, ಆನೆಗಳು, ಸಿಂಹ, ರಾಕ್ಷಸ, ರಾವಣ, ನಂದಿ, ನಾಗ ಮುಂತಾದ ವಾಹನಗಳು ನಾಗಮಂಗಲದ ಲೋಹದ ಕೆಲಸಗಾರರ ನಿಪುಣತೆಯನ್ನು ಸಾರಿ ಹೇಳುತ್ತದೆ.

ಉಪಸಂಹಾರ

ನಾಗಮಂಗಲದಲ್ಲಿ ಈ ಮೇಲೆ ಹೇಳಿದ ಶಿಲ್ಪಗಳಲ್ಲದೆ ಮತ್ತೂ ಹಲವು ಶಿಲ್ಪಗಳು ಕಂಡುಬರುತ್ತವೆ. ಉದಾಹರಣೆಗೆ ವೀರಭದ್ರೇಶ್ವರ ದೇವಾಲಯದ ಬಳಿ ಭೂಮಿಯಲ್ಲಿ ನೆಟ್ಟಿರುವ ಎರಡು ಸ್ತ್ರೀದೇವತಾ ಪ್ರತಿಮೆಗಳು, ಆದರೆ ಅವೆಲ್ಲವನ್ನೂ ಪ್ರಸಿದ್ಧವಾಗಿಲ್ಲದಿರುವುದರಿಂದ ಈ ಲೇಖನದ ಪರಿಧಿಯಲ್ಲಿ ಚರ್ಚಿಸುವುದು ಸುಲಭ ಸಾಧ್ಯವಲ್ಲ. ಕೆಲವು ಶಿಲ್ಪಗಳನ್ನಂತೂ ಗುರುತಿಸಲೂ ಸಾಧ್ಯವಾಗದಷ್ಟು ಪೂಜಾಪದ್ಧತಿಗಳು ಆಕ್ರಮಿಸಿಕೊಂಡಿವೆ. ಈ ಮೇಲಿನ ನಾಗಮಂಗಲದ ಮೂರ್ತಿಶಿಲ್ಪಗಳ ಅಧ್ಯಯನದಿಂದ ನಮಗೆ ತಿಳಿದು ಬರುವುದೇನೆಂದರೆ ನಾಗಮಂಗಲವು ಅನೇಕ ಜಾತಿ, ಮತ, ಪಂಥಗಳಿಂದ ಕೂಡಿದ ಜನರಿಗೆ ಒಂದು ಸೌಹಾರ್ದ ತಾಣವಾಗಿದ್ದು, ಶಿಲ್ಪಗಳ ಪ್ರತಿಮಾಶಾಸ್ತ್ರ ಅಧ್ಯಯನಾಸಕ್ತರಿಗೆ ಒಂದು ಉತ್ತಮ ಕಾರ್ಯಕ್ಷೇತ್ರವಾಗಿದೆ.

ಅಡಿಟಿಪ್ಪಣಿಗಳು

೧. ಈಶ್ವರ ಸಂಹಿತಾ, ಪಾದ್ಮ ಸಂಹಿತಾ

೨. ಪಾದ್ಮ ಸಂಹಿತಾ – ಚಾರ್ಯಾಪಾದ -ಹತ್ತನೇ ಅಧ್ಯಾಯ – ಮಹೋತ್ಸವ ವಿಧಿ

೩. ಈಶ್ವರ ಸಂಹಿತಾ – ಹತ್ತನೇ ಅಧ್ಯಾಯ – ಮಹೋತ್ಸವ ವಿಧಿ ( ಎರಡೂ ಸಂಹಿತೆಗಳು ಒಂದೇ ವಿಧವಾಗಿ ಹೇಳುತ್ತವೆ)

೪. ಶ್ರೀಕಂಠಶಾಸ್ತ್ರಿ ಎಸ್., ೧೯೬೫ : ಹೊಯ್ಸಳ ವಾಸ್ತುಶಿಲ್ಪ, ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ, ಪುಟ ೬೨, ಈ ಸ್ತಂಭವನ್ನು ಚನ್ನಪಟ್ಟಣದ ಜಗದೇವರಾಯನು ಸ್ಥಾಪಿಸಿದನು.

೫. ಚಂಡ -ಪ್ರಚಂಡ ಪೂರ್ವಕ್ಕೆ, ಧಾತೃ -ವಿಧಾತೃ ದಕ್ಷಿಣಕ್ಕೆ,ಜಯ-ವಿಜಯ ಪಶ್ಚಿಮಕ್ಕೆ ಹಾಗು ಭದ್ರ-ಸುಭದ್ರರು ಉತ್ತರಕ್ಕೆ ಎಂಬುದು ಸಂಪ್ರದಾಯ. ಹೆಚ್ಚಿನ ವಿವರಗಳಿಗೆ ನೋಡಿ – ಪಾರಮೇಶ್ವರ ಸಂಹಿತೆ ೧೧:೧೨-೧೯, ಪೌಷ್ಕರ ಸಂಹಿತೆ ೪:೧೬೫-೧೬೯, ಈಶ್ವರ ಸಂಹಿತೆ ೯:೧೨-೧೮

೬. ಪಾದ್ಮ ಸಂಹಿತಾ – ಕ್ರಿಯಾಪಾದ – ಅಧ್ಯಾಯ ೧೬-೩೦

೭. ಈ ಅಂಶವನ್ನು ನಾವು ಅನೇಕ ಹೊಯ್ಸಳ ಶಾಸನಗಳಲ್ಲಿ ಕಾಣಬಹುದಾಗಿದ್ದು, ಶಾಸನಗಳಲ್ಲಿ ಕೇಶವನ್ನು ಮೊದಲ ದೇವರು ಎಂದು ಅಂಗೀಕರಿಸಲಾಗಿದೆ.

೮. ನರಸಿಂಹ ಸಹಸ್ರನಾಮ ಸ್ತೋತ್ರದ ಧ್ಯಾನಶ್ಲೋಕ

೯. ಈ ಅಭಿಪ್ರಾಯವನ್ನು ಎಸ್. ಶ್ರೀಕಂಠಶಾಸ್ತ್ರಿಗಳ ಹೊಯ್ಸಳ ವಾಸ್ತುಶಿಲ್ಪ ಪುಸ್ತಕದಲ್ಲಿಯೂ ಸಹ ಕಾಣಬಹುದು.

೧೦. ಶ್ರೀಕೃಷ್ಣಷ್ಟೋತ್ತರ ಶತನಾಮಾವಳಿ ಸ್ತೋತ್ರ

೧೧. ಪಾದ್ಮ ಸಂಹಿತಾ – ಕ್ರಿಯಾಪಾದ – ಅಧ್ಯಾಯ ೧೮

೧೨. ಪಾದ್ಮ ಸಂಹಿತಾ – ಕ್ರಿಯಾಪಾದ – ಅಧ್ಯಾಯ ೨೨

೧೩. ಈಶ್ವರ ಸಂಹಿತಾ ಹಾಗು ಪಾದ್ಮ ಸಂಹಿತಾ – ಕ್ರಿಯಾಪಾದ – ೨೨:೩೬-೪೧

೧೪. ಅಷ್ಟಾಕ್ಷರೀಕಲ್ಪ, ವಿಷ್ಣುಶತ್ವನಿಧಿ, ಪ್ರಾಚ್ಯವಸ್ತು ಸಂಶೋಧನಾಲಯ, ಮೈಸೂರು

೧೫. ಹಲ್ಮಿಡಿ ಶಾಸನ, ೧ನೆಯ ಸಾಲು

೧೬. ಈಶ್ವರ ಸಂಹಿತಾ – ಅಧ್ಯಾಯ ೭, ೭-೧೫, ವಿಹಗೇಂದ್ರ ಸಂಹಿತಾ, ೨:೧೧-೧೨

೧೭. ವಿಶ್ವಕ್ಸೇನ ಸಂಹಿತಾ -೨೦ : ೨೫೫-೨೬೧

೧೮. ಆಳ್ವಾರ‍್ ಎಂದರೆ ಭಕ್ತ ಎಂದರ್ಥ. ಇಲ್ಲಿ ಭಕ್ತೆ ಎಂದರ್ಥ

೧೯. ಪಾದ್ಮ ಸಂಹಿತಾ – ಕ್ರಿಯಾಪಾದ – ೧೭ : ೧೨

೨೦. ವಿಹಗೇಂದ್ರ ಸಂಹಿತಾ – ೪ : ೧-೬

೨೧. ಇ.ಅ. ಸಂಪುಟ ೭ , ನಾಗಮಂಗಲ , ಸಂಖ್ಯೆ ೭

೨೨. ಹೆಚ್ಚಿನ ವಿವರಗಳಿಗಾಗಿ ಡಾ. ವಸುಂಧರಾ ಫಿಲಿಯೋಜಾ ಅವರ ಕರ್ನಾಟಕದಲ್ಲಿ ಲಾಕುಳ ಶೈವಜಕ್ಕಣಾಚಾರ್ಯರು ಎಂಬ ಗ್ರಂಥವನ್ನು ನೋಡಬಹುದು. ಇದು ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಿಂದ ಮುದ್ರಿಸಲ್ಪಟ್ಟಿದೆ.

೨೩. ಹಯಶೀರ್ಷ ಸಂಹಿತಾ – ಆದಿ ೨೩ : ೧-೬, ನಾರದೀಯ ಸಂಹಿತಾ ೨೮:೪೭, ಸನತ್ಕುಮಾರ ಸಂಹಿತಾ , ಶಿವ ೧:೧೪೨-೧೪೮

೨೪. ಅರುಣನ ಪ್ರತಿಮಾಲಕ್ಷಣ ಮತ್ತು ಹೆಚ್ಚಿನ ವಿವರಗಳನ್ನು ತಿಳಿಯಲು ಮಹಾಭಾರತದ ಆದಿಪರ್ವದಲ್ಲಿ ಬರುವ ಗರುಡೋಪಾಖ್ಯಾನ ನೋಡಿ

೨೫. ಅಜಿತಾಗಮ, ಸುಪ್ರಭೇದಾಗಮ ಮತ್ತು ಸಕಲಾಧಿಕಾರಗಳಲ್ಲಿ ಹೆಚ್ಚಿನ ವಿವರಗಳನ್ನು ಕಾಣಬಹುದು.

೨೬. ವೀರಭದ್ರೇಶ್ವರ ದೇವಾಲಯದಲ್ಲಿ, ಕರ್ನಾಟಕದಲ್ಲಿ ಎಲ್ಲೂ ಇಲ್ಲದ ಒಂದು ಸಂಪ್ರದಾಯ ನಡೆದು ಬರುತ್ತಿದೆ. ಅದೆಂದರೆ ವೀರಭದ್ರದೇವರಿಂದ ದಕ್ಷ ಸಂಹಾರವಾದ ಪ್ರಸಂಗವನ್ನು ಇಂದೂ ಸಹ ಸಾಂಕೇತಿಕವಾಗಿ ಮಡಿ ಮತ್ತು ನೇಮಗಳಿಂದ ಆಚರಿಸಿಕೊಂಡು ಬರುತ್ತಿರುವುದು. ನಾಗಮಂಗಲದಲ್ಲಿರುವ ಈ ವೀರಭದ್ರ ದೇವಾಲಯದಲ್ಲಿ ಅರ್ಚಕ ಹಾಗು ಲಿಂಗದ ವೀರರು ಎಂಬ ಎರಡು ಬೇರೆ ಬೇರೆ ವಂಶಗಳಿವೆ. ಈ ಲಿಂಗದ ವೀರರು ಮನೆತನದವರು ವೀರಭದ್ರೇಶ್ವರ ದೇವರ ಅಲಂಕರಣಗಳನ್ನು ಮಾಡಿಕೊಂಡು ವೀರಗಾಸೆ ಎಂಬ ಜನಪದ ಕಲೆಯನ್ನು ಅಭ್ಯಸಿಸಿ, ಅಭಿನಯಿಸಿ ಪೋಷಿಸಿಕೊಂಡು ಬಂದಿದ್ಧಾರೆ. ಪ್ರತಿವರ್ಷ ಮಹಾಲಯ ಅಮಾವಾಸ್ಯೆಯ ಹಿಂದೆ ಬರುವ ಭಾನುವಾರದದಂದು ಈ ದಕ್ಷಸಂಹಾರ ಉತ್ಸವ ನಡೆಯುತ್ತದೆ. ಅಂದು ಚಿತ್ರದುರ್ಗದ ಒಂದು ವಂಶದವರು ವಿಶಿಷ್ಟವಾದ ದಕ್ಷಬ್ರಹ್ಮನ ಬೊಂಬೆಯನ್ನು ಮಾಡಿ ಅದರಲ್ಲಿ ರಕ್ತದ ಬಣ್ಣದ ನೀರನ್ನು ತುಂಬುತ್ತಾರೆ. ನಂತರ ಅದನ್ನು ದೇವಾಲಯಕ್ಕೆ ತರಲಾಗುತ್ತದೆ. ಆ ಭಾನುವಾರದ ರಾತ್ರಿ ಲಿಂಗದ ವೀರರ ಮನೆತನದ ಗಂಡುಮಕ್ಕಳೆಲ್ಲರೂ ಸಹ ವೀರಭದ್ರ ದೇವರ ಅಲಂಕರಣ ಮಾಡಿಕೊಂಡು ಸರಿ ರಾತ್ರಿ ಸಮಸ್ತ ವಾದ್ಯ, ಬಾಜಾ, ಭಜಂತ್ರಿಗಳೊಡನೆ ಮೆರವಣಿಗೆಯಲ್ಲಿ ಸಾಗಿ ದೇವಾಲಯಕ್ಕೆ ಸುಮಾರು ೩ ಗಂಟೆಗೆ ಆಗಮಿಸುತ್ತಾರೆ. ವಿಶೇಷವೆಂದರೆ ಈ ಲಿಂಗದ ದೇವರ ವಂಶದ ಮನೆಯ ಹಿರಿಯ ಮಗ ಪ್ರಧಾನ ವೀರಭದ್ರೇಶ್ವರನಾಗಿ ಅಭಿನಯಿಸುತ್ತಾನೆ. ಹಾಗು ವಂಶಪಾರಂಪರ್ಯದಿಂದ ಬಂದಿರುವ ಕೆಂಪು ಭೂತಾಳೆ ಮರದ ಅಲಂಕರಣಗಳನ್ನು ಧರಿಸಿರುತ್ತಾನೆ. ಇದು ಇನ್ನಿತರರು ಧರಿಸುವಂತಿಲ್ಲ ಎಂಬ ನಂಬಿಕೆಯಿದೆ. ನಂತರ ಒಂದು ವಿಶೇಷ ಮೂಹೂರ್ತದಲ್ಲಿ ಲಿಂಗದ ದೇವರ ಮನೆತನದ ವೀರಭದ್ರನು ದಕ್ಷಬ್ರಹ್ಮನ ಬೊಂಬೆಯ ತಲೆಯನ್ನು ಕತ್ತರಿಸುತ್ತಾನೆ. ಕತ್ತರಿಸಿದ ಕ್ಷಣವೇ ಅಲ್ಲಿ ಹೊತ್ತಿಸಿದ ವಿಶೇಷ ದೀಪವು ಆರಿಹೋಗುತ್ತದೆ. ನಂತರ ಈ ರಕ್ತದ ಓಕುಳಿಯಿಂದ ದೇವಾಲಯದ ಸುತ್ತ ಅರ್ಚಕರು ಬಲಿಯನ್ನು ಹಾಕಿ, ಮರುದಿನವೇ ಸುಣ್ಣಬಣ್ಣಗಳಿಂದ ದೇವಾಲಯವನ್ನು ಶುದ್ಧಿಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ವೀರಭದ್ರೇಶ್ವರನ ಜಾತ್ರೆಯು ವೈಭವದಿಂದ ನಡೆಯುತ್ತದೆ. ಈಗ ಈ ಲಿಂಗದ ವೀರರ ಮನೆತನದ ಹಿರಿಯರಾದ ಮಹಾದೇವಪ್ಪನವರು ಈ ಪರಂಪರೆಯನ್ನು ನಡೆಸಿಕೊಂಡು ಬರುತ್ತಿದ್ಧಾರೆ. ಈ ಮಾಹಿತಿಯನ್ನು ನೀಡಿದವರು ಮಹಾದೇವಪ್ಪ ಅವರ ಅಳಿಯಂದಿರು.