ನಾಗಮಂಗಲವು ಮಂಡ್ಯ ಜಿಲ್ಲೆಯಲ್ಲಿನ ಒಂದು ಪ್ರಮುಖ ಐತಿಹಾಸಿಕ ನಗರ ಹಾಗು ತಾಲ್ಲೂಕು ಕೇಂದ್ರ. ಮೊದಲಿಗೆ ಗಂಗರ ಅಡಳಿತಕ್ಕೆ ಒಳಪಟ್ಟಿದ್ದ ಈ ಪ್ರದೇಶವು ಹೊಯ್ಸಳರ ಕಾಲದಲ್ಲಿ ಅಗ್ರಹಾರವಾಗಿದ್ದು ನಂತರ ವಿಜಯನಗರ ಮತ್ತು ಮೈಸೂರು ಅರಸು ಮನೆತನಗಳ ಆಳ್ವಿಕೆಗೆ ಒಳಗಾಗಿತ್ತು. ಈ ಪಟ್ಟಣವು ತನ್ನ ಇತಿಹಾಸವನ್ನು ತನ್ನಲ್ಲಿರುವ ಸ್ಮಾರಕಗಳ ಮೂಲಕ ಇಂದಿಗೂ ಸಾರಿ ಹೇಳುತ್ತಿದೆ. ಈ ಪಟ್ಟಣದಲ್ಲಿ ಅನೇಕ ಸ್ಮಾರಕಗಳಿದ್ದು, ಹೆಚ್ಚಿನವು ದೇವಾಲಯಗಳಾಗಿವೆ. ಈ  ದೇವಾಲಯಗಳಲ್ಲಿ ಅಪೂರ್ವವಾದ, ಇತಿಹಾಸದ ಕಾಲ ರಚನೆಗೆ ಅನುಕೂಲವಾಗುವ ಸಮಾಜ, ಧರ್ಮ, ಪಂಥ ಮತ್ತು ಸಂಸ್ಕೃತಿಗಳ ಮೇಲೆ ಬೆಳಕು ಚೆಲ್ಲುವ ಅನೇಕ ವಿವಿಧ ಮೂರ್ತಿಗಳಿವೆ. ಈ ಲೇಖನದಲ್ಲಿ ನಾವು ಶಿಲ್ಪಗಳ ಲಕ್ಷಣಗಳ ಜೊತೆಗೆ ಈ ಶಿಲ್ಪಗಳು ಯಾವ ಯಾವ ಪಂಥಗಳ ಆಚರಣೆಗೆ ಸಂಬಂಧಪಟ್ಟಿವೆ ಎಂಬುದನ್ನು ತಿಳಿಯೋಣ.

ನಾಗಮಂಗಲದ ಶಿಲ್ಪಗಳನ್ನು ನಾವು ಈ ಕೆಳಕಂಡ ವಿಭಾಗಗಳಲ್ಲಿ ಅಭ್ಯಾಸ ಮಾಡಬಹುದು.

೧. ವೈಷ್ಣವ ಶಿಲ್ಪಗಳು

೨. ಶೈವ ಶಿಲ್ಪಗಳು

೩. ಸಾಮಾನ್ಯ ಶಿಲ್ಪಗಳು

ಈ ಮೇಲ್ಕಂಡ ವಿಭಾಗಗಳಲ್ಲಿಯೂ ನಾವು ಇವುಗಳನ್ನು ಈ ಕೆಳಕಂಡಂತೆ ಉಪವಿಭಾಗಗಳಾಗಿ ವಿಂಗಡಿಸಬಹುದು.

೧. ಶಿಲಾ ಶಿಲ್ಪಗಳು

೨. ಲೋಹ ಶಿಲ್ಪಗಳು

೩. ಗಚ್ಚುಗಾರ ಶಿಲ್ಪಗಳು

೪. ಕಾಷ್ಠ ಶಿಲ್ಪಗಳು

ಮೊದಲಿಗೆ ವೈಷ್ಣವ ದೇವಾಲಯಗಳ ಶಿಲ್ಪಗಳ ಬಗೆಗೆ ನಾವು ತಿಳಿಯೋಣ.

ಸೌಮ್ಯಕೇಶವ ದೇವಾಲಯ

ಈ ಪಟ್ಟಣದ ಪ್ರಮುಖ ದೇವಾಲಯವಾದ ಸೌಮ್ಯಕೇಶವ ದೇವಾಲಯಕ್ಕೆ ಹೋಗುವ ಹಾದಿಯಲ್ಲಿ ವಿಜಯನಗರ ವಾಸ್ತುಶೈಲಿಗೆ ಸೇರಿದ ಎರಡು ಸ್ವತಂತ್ರ ಸ್ತಂಭಗಳಿದ್ದು, ಅವುಗಳಲ್ಲಿನ ಕೆಲವು ಮುಖಗಳು ಉಬ್ಬು ಶಿಲ್ಪಗಳನ್ನು ಒಳಗೊಂಡಿದ್ದು ಮನಮೋಹಕವಾಗಿವೆ. ಈ ಸ್ತಂಭಗಳಲ್ಲಿ ಎಡಮುಖದ ಸ್ತಂಭದ ಪೂರ್ವಾಭಿಮುಖವಾಗಿರುವ ಕೆಳಫಲಕದಲ್ಲಿ ಆನೆಯು ತನ್ನ ಕಾಲಿಗೆ ಹಾಕಿರುವ ಸರಪಳಿಯನ್ನು ಸೊಂಡಿಲಿನಿಂದ ಬಿಡಿಸಿಕೊಳ್ಳುವಂತೆ ಒಂದು ಉಬ್ಬು ಶಿಲ್ಪವನ್ನು ಕೆತ್ತಲಾಗಿದೆ. ಆನೆಯ ಚಿತ್ರಣ ವಾಸ್ತವೆತೆಗೆ ಹತ್ತಿರದಲ್ಲಿದ್ದರೂ, ಶರೀರದ ಅಂಗಗಳು ಪ್ರಮಾಣದಲ್ಲಿರುವುದು ಗಮನಾರ್ಹ, ಇತರ ಮೇಲ್ಭಾಗದ ಫಲಕಗಳಲ್ಲಿ ಕಡೆದಿರುವ ಪೌರಾಣಿಕ ಕಾಲ್ಪನಿಕ ಪ್ರಾಣಿಗಳ ಚಿತ್ರಣವಿದ್ದು, ಸಿಂಹ ಹಾಗೂ ಯಾಳಿಗಳು ಅತ್ಯಂತ ಸುಂದರವಾಗಿ ಮೂಡಿ ಬಂದಿದೆ. ಈ ಕಂಬಕ್ಕೆ ಎದುರಿಗಿರುವ ಮತ್ತೊಂದು ಸ್ತಂಭದ ಉತ್ತರ ಭಾಗದ ಕೆಳಫಲಕದಲ್ಲಿ ಹಂಸಪಕ್ಷಿಯ ಚಿತ್ರಣವು ಅತ್ಯಂತ ಪ್ರಭಾವಶಾಲಿಯಾಗಿ ಮೂಡಿಬಂದಿದೆ. ಹಂಸದ ಕೊಕ್ಕಿನಲ್ಲಿ ಬಳ್ಳಿಯ ಚಿತ್ರಣವನ್ನು ತೋರಿಸಲಾಗಿದೆ.

ಸೌಮ್ಯಕೇಶವ ದೇವಾಲಯದ ಎದುರಿಗೆ ಎತ್ತರವಾದ ಏಕಶಿಲಾ ಗರುಡಗಂಬವಿದ್ದು, ಇದನ್ನು ಶಾಸ್ತ್ರಗಳಲ್ಲಿ ದೀಪಸ್ತಂಭ ಎಂದು ಕರೆಯಲಾಗುತ್ತದೆ. ಕಾರ್ತಿಕ ದೀಪೋತ್ಸವದ ಸಂದರ್ಭದಲ್ಲಿ ಕುಂಭದೀಪವನ್ನು ಈ ಸ್ತಂಭದ ಮೇಲ್ಬಾಗದಲ್ಲಿ ಹೊತ್ತಿಸಬೇಕೆಂದು ಶಾಸ್ತ್ರಗಳಲ್ಲಿ ನಿರ್ದೇಶನವಿದ್ದು, ಇದಕ್ಕೆ ಪೂರಕವಾಗಿ ಈ ಕುಂಭದದೀಪವನ್ನು ಸ್ತಂಭದ ಮೇಲೆ ಇಡುವುದಕ್ಕೆ ಮಾಡಲಾದ ವ್ಯವಸ್ಥೆಗಳು ಇಂದೂ ಸಹ ಉಳಿದು ಬಂದಿದೆ.

ಈ ಸ್ತಂಭದ ಕೆಳಭಾಗದ ನಾಲ್ಕು ಮುಖಗಳಲ್ಲಿ ನಾಲ್ಕು ಸುಂದರ ಉಬ್ಬು ಶಿಲ್ಪಗಳಿದ್ದು, ಪೂರ್ವಮುಖದಲ್ಲಿ ಶಂಖ, ಚಕ್ರ ಮತ್ತು ತಿರುನಾಮದ ಶಿಲ್ಪವಿದೆ. ಇಲ್ಲಿರುವ ಶಿಲ್ಪದ ಪ್ರಕಾರ ಇದು ತೆಂಗಲೈ ಸಂಪ್ರದಾಯದ ದೇವಾಲಯವಾಗಿದ್ದು, ದೇವಾಲಯದಲ್ಲಿ ವೇದಾಂತದೇಶಿಕರ ವಿಗ್ರಹವು ಕಂಡು ಬರದಿರುವುದು ಗಮನಾರ್ಹವಾಗಿದೆ. ದಕ್ಷಿಣ ಮುಖದಲ್ಲಿ ಸಿಂಹದ ಮೂರ್ತಿಯಿದ್ದು ತನ್ನೆರಡು ಮುಂದಿನ ಕಾಲುಗಳನ್ನು ಒಂದು ವಿಧವಾದ ಕಾಯಿಯ ಮೇಲೆ ಊರಿಕೊಂಡು ಕುಳಿತಿರುವಂತಿದೆ. ಆಕರ್ಷಕವಾದ ಮುಖ ಮುಖದಲ್ಲಿನ ಕೇಸರಗಳು, ಹಿಂಗಾಲು ಹಾಗೂ ಮುಂಗಾಲುಗಳಲ್ಲಿ ನಖಗಳು (ಉಗುರುಗಳು) ಕಾಣುವಂತೆ ಕಡೆದಿರುವ ಪಂಚನಖೀ ಎಂಬುದನ್ನು ಸಾಬೀತುಪಡಿಸುವಂತಿದೆ. ಸಿಂಹದ ಮುಖದ ಸಂತೋಷವನ್ನು ಬಿಂಬಿಸಲಾಗಿದ್ದು, ಸಿಂಹದ ಪುಚ್ಛವು ಅಥವಾ ಬಾಲವು ಆಕರ್ಷಕವಾಗಿದೆ.

ಇದೇ ಸ್ತಂಭದ ಪಶ್ಚಿಮ ಮುಖದಲ್ಲಿ ಅಂದರೆ ಸೌಮ್ಯಕೇಶವ ದೇವರ ಎದುರಿನ ಮುಖದಲ್ಲಿ ಗರುಡನ ಸಮಭಂಗದ ಸ್ಥಾನಕ ಉಬ್ಬುಶಿಲ್ಪವಿದ್ದು, ಅಂಜಲಿ ಮುದ್ರೆಯಿಂದ (ನಮಸ್ಕಾರ ಮಾಡುವ ಭಂಗಿ) ಕೂಡಿದ್ದಾನೆ. ಕೇವಲ ಎರಡು ಭುಜಗಳನ್ನು ಮಾತ್ರ ಹೊಂದಿದ್ದು, ಎರಡೂ ಭುಜಗಳ ಪಕ್ಕದಲ್ಲಿ ರೆಕ್ಕೆಗಳನ್ನು ತೋರಿಸಲಾಗಿದ್ದು ಇದು ಪಕ್ಷಿ ಜಾತಿಗೆ ಸೇರಿದವನು ಎಂದು ಹೇಳುತ್ತದೆ. ಗರುಡನು ಕಿರೀಟ ಭುಜಕೀರ್ತಿ, ಕಟಕಗಳನ್ನು ಧರಿಸಿದ್ದು, ಸರ್ಪಾಭರಣಗಳಿಂದಲೂ ಅಲಂಕೃತನಾಗಿದ್ಧಾನೆ (ಚಿತ್ರ ೧೩).

ಗರುಡ ಪಕ್ಷಿಯ ಮೂಗನ್ನು ಉಳಿದು ಇತರ ಭಾಗವು ಮನುಷ್ಯನ ಅಕೃತಿಯಂತಿದೆ. ಅಗಮ ಶಾಸ್ತ್ರಗಳ ಪ್ರಕಾರ ಗರುಡನ ಶರೀರದಲ್ಲಿ ಈ ಕೆಳಗಿನಂತೆ ಸಪೃಗಳ ಸ್ಥಾನಗಳನ್ನು ಉಲ್ಲೇಖಿಸಲಾಗಿದೆ.

ಅನನ್ತನು ಎಡ ಬಾಹುವಿನ ಬಳೆ, ಪದ್ಮನು ಬಲಕಿವಿಯ ಕುಂಡಲ, ಮುಹಾಪದ್ಮನು ಎಡಕಿವಿಯ ಕುಂಡಲ, ವಾಸುಕಿಯ ಜನಿವಾರ, ಎದೆಯಲ್ಲಿನ ಹಾರವು ಕಾರ್ಕೋಟ ಉಡಿದಾರವು ತಕ್ಷಕ, ಶಂಕನು ತಲೆಯಲ್ಲಿ, ಗುಳಿಕನು ಎರಡು ಭುಜಗಳ ಮಧ್ಯದಲ್ಲಿ ಇರುತ್ತಾರೆ.

ಈ ಗರುಡನ ಮೂರ್ತಿಯಿರುವುದರಿಂದಲೇ ಜನರು ಇದನ್ನು ಗರುಡಗಂಬ ಎಂದು ಕರೆಯುತ್ತಾರೆ. ಉತ್ತರದ ಮುಖದಲ್ಲಿ ಭಕ್ತಾಂಜನೇಯನ ಶಿಲ್ಪವನ್ನು ಬಿಡಿಸಲಾಗಿದೆ. ಹನುಮಂತನು ದೇವರಿಗೆ ನಮಸ್ಕಾರ ಮಾಡುವಂತೆ ಕೆತ್ತಲಾಗಿದ್ದು ಬ್ರಾಹ್ಮಣವಟುವಿನಂತೆ ತೋರಿಸಲಾಗಿದೆ. ರಾಮಾಯಣದಲ್ಲಿ ಶ್ರೀರಾಮನನ್ನು ಭೇಟಿ ಮಾಡಿದಾಗ ಅವನು ಬ್ರಾಹ್ಮಣ ವೇಷದಲ್ಲಿ ಬಂದಿದ್ದ ಎಂದು ಉಲ್ಲೇಖಿಸಲಾಗಿದೆ. ಇಲ್ಲಿಯೂ ಕೂಡ ಬ್ರಾಹ್ಮಣ ಬ್ರಹ್ಮಚಾರಿಯಂತೆ ಶಿಖಾ (ಗಂಡು ಕಟ್ಟಿರುವ ತಲೆಯ ಹಿಂಭಾಗದ ಜುಟ್ಟು), ಯಜ್ಞೋಪವೀತ (ಜನಿವಾರ), ಕೌಪೀನ (ಲಂಗೋಟ), ಉಡಿದಾರ ಮತ್ತು ಮೌಂಜಿಗಳನ್ನು ತೋರಿಸಲಾಗಿದ್ದು, ಅತ್ಯಂತ ಸುಂದರವಾದ ಮೂರ್ತಿಯಾಗಿದೆ. ವಿಷ್ಣುಭಕ್ತನಾದ್ದರಿಂದ ತುಳಸಿ ಮಣೆಗಳ ಕಟಕ, ಮಣಿಕಟ್ಟುಗಳಲ್ಲಿ ಬಳೆಗಳು, ಬೆರಳುಗಳಲ್ಲಿ ಉಂಗುರಗಳು, ಕಿವಿಯಲ್ಲಿ ಕುಂಡಲಗಳ ಕೆತ್ತನೆ ಮೈನವಿರೇಳಿಸುತ್ತದೆ. ಕಪಿಯ ಭಾವದ ಕೋರೆಹಲ್ಲುಗಳನ್ನು ಕಟವಾಯಿಯಲ್ಲಿ ತೋರಿಸಲಾಗಿದ್ದು, ಕಾಲುಗಳಲ್ಲಿ ಕಾಲ್ಗಡಗ ಬಿಂಬಿಸಲಾಗಿದ್ದು, ಶ್ರೀವೈಷ್ಣವ ಸಂಪ್ರದಾಯಕ್ಕನುಗುಣವಾಗಿ ಪಡೆಮೂಡಿಸಲಾಗಿದೆ. ಶ್ರೀವೈಷ್ಣವ ಸಂಪ್ರದಾಯದಲ್ಲಿ ಗರುಡನನ್ನು ಪೆರಿಯ ತಿರುವಡಿ ಅಂದರೆ ದೇವರ ದೊಡ್ಡ ಪಾದ ಅಥವಾ ಬಲಗಾಲು ಎಂತಲೂ, ಹನುಮಂತನನ್ನು ಶಿರಿಯ ತಿರುವಡಿ ಅಂದರೆ ಚಿಕ್ಕಪಾದ ಅಥವಾ ಎಡಗಾಲು ಎಂದೂ ಕರೆಯುವುದು ಇಲ್ಲಿ ನೆನೆಯಬೇಕಾದ ಅಂಶವಾಗಿದೆ. ಈ ಸ್ತಂಭವು ವಿಜಯನಗರ ಶೈಲಿಯ ರಚನೆಯಾಗಿದೆ ಎಂದು ಈ ಶಿಲ್ಪಗಳ ಆಧಾರದ ಮೇಲೆ ಊಹಿಸಬಹುದು.

ಈ ಗರುಡಗಂಬದ ನಂತರ ನಾವು ಈ ದೇವಾಲಯದ ರಾಯಗೋಪುರದ ಬಳಿಗೆ ಬರುತ್ತೇವೆ. ರಾಯಗೋಪುರವು ಈಗ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯಿಂದ ದುರಸ್ತಿಗೊಳ್ಳುತ್ತಿದ್ದು, ಅಲ್ಲಿನ ಗಚ್ಚುಗಾರೆಯ ಶಿಲ್ಪಗಳ ವಿವರವನ್ನು ಈ ಲೇಖನವು ಒಳಗೊಂಡಿರುವುದಿಲ್ಲ. ದೇವಾಲಯದ ಪ್ರವೇಶದ್ವಾರದ ಎಡ ಮತ್ತು ಬಲಭಾಗಗಳಲ್ಲಿ ದ್ವಾರಪಾಲಕರ ವಿಗ್ರಹಗಳಿವೆ. ಇವು ಗಾತ್ರದಲ್ಲಿ ಸಣ್ಣದಾಗಿದ್ದು, ನಾಲ್ಕು ಕೈಗಳಲ್ಲಿ, ಶಂಖ, ಚಕ್ರ, ಗದೆ ಹಾಗೂ ತರ್ಜನಿಹಸ್ತಗಳಿಂದ ಕೂಡಿವೆ. ಪೂರ್ವ ದಿಕ್ಕಿನ ಬಾಗಿಲುಗಳಲ್ಲಿರುವುದರಿಂದ ಇವುಗಳನ್ನು ಚಂಡ ಮತ್ತು ಪ್ರಚಂಡ ಎಮದು ಗುರುತಿಸಲಾಗುತ್ತದೆ.ಆದರೆ ಸಾಮಾನ್ಯವಾಗಿ ಜಯ, ವಜಯರು ಎಂದು ಉಲ್ಲೇಖಿಸುವುದು ಶಾಸ್ತ್ರವಮ್ಮತವಾಗಿರುವುದಿಲ್ಲ. ದ್ವಾರಪಾಲಕರ ಮೂರ್ತಿಗಳ ಪಕ್ಕದಲ್ಲಿ ಪದ್ಮನಿಧಿ ಮತ್ತು ಶಂಕನಿಧಿಗಳ ಉಬ್ಬುಶಿಲ್ಪಗಳನ್ನೂ, ನೃತ್ಯಗಾರ್ತಿಯ ಶಿಲ್ಪವನ್ನೂ ಸಹ ಗಮನಿಸಬಹುದು. ಈ ದ್ವಾರಪಾಲಕರ ನಂತರ ನಮಗೆ ರಾಜಗೋಪುರದ ಅಡಿಭಾಗದ ಪ್ರವೇಶದ್ವಾರದ ಮಂಟಪದ ಇಕ್ಕೆಲಗಳಲ್ಲಿ ಜಗತಿಯಂತರ ರಚನೆಯ ಮೇಲ್ಭಾಗದಲ್ಲಿರುವ ಸ್ತಂಭಗಳಲ್ಲಿ ಕೆಲವು ಸುಂದರ ಉಬ್ಬು ಶಿಲ್ಪಗಳು ಕಂಡುಬರುತ್ತವೆ. ಈ ಭಾಗದಲ್ಲಿ ವೇಣುಗೋಪಾಲ, ಕೃಷ್ಣನ ಇತರ ವಿವಿಧ ಶಿಲ್ಪಗಳು ಕಂಡರಿಸಿದ್ದು, ಗಮನಿಸಬೇಕಾದ ಎರಡು ಶಿಲ್ಪಗಳನ್ನು ಇಲ್ಲಿ ಮುಖ್ಯವಾಗಿ ಉಲ್ಲೇಖಿಸಲಾಗಿದೆ. ಅವೆಂದರೆ ಮೃದಂಗ ನುಡಿಸುತ್ತಿರುವ ವ್ಯಕ್ತಿ ಮತ್ತು ಆ ಮೃದಂಗದ ತಾಳಕ್ಕೆ ಅನುಗುಣವಾಗಿ ನೃತ್ಯ ಮಾಡುತ್ತಿರುವ ನಾಟ್ಯ ಪ್ರವೀಣೆಯ ಶಿಲ್ಪ. ಮೃದಂಗ ನುಡಿಸುತ್ತಿರುವವನ ಮುಖದಲ್ಲಿ ಸಂತೋಷವು ಕಂಡುಬರುತ್ತಿದ್ದು, ಅವನ ಕತ್ತುಗಳಲ್ಲಿ ಕಂಡುಬರುವ ಹಾರ ಹಾಗು ಅವನ ವಸ್ತ್ರಗಳು ಹಾಗು ತಲೆಯ ಶೃಂಗಾರ ಇವು ವಿಜಯನಗರ ಕಾಲದ ಸಾಮಾಜಿಕ ಪರಿಸ್ಥಿತಿಯನ್ನು ವಿವರಿಸುತ್ತವೆ. ನೃತ್ಯಗಾತಿಯು ತನ್ನ ನೃತ್ಯಭಂಗಿಯ ಪರಾಕಾಷ್ಠತೆಯಲ್ಲಿ ಎಡಗಾಲನ್ನು ತನ್ನ ತಲೆಗೆ ತಾಗಿಸಿದ್ದು, ಇದು ನಾಟ್ಯದಲ್ಲಿ ಯೋಗಭಂಗಿಯ ಸಂಯೋಗವನ್ನು ತೋರಿಸುತ್ತದೆ. ಈ ವೇಷಭೂಷಣಗಳು ಇಂದಿಗೂ ಭರತನಾಟ್ಯದಲ್ಲಿ ನಮಗೆ ಕಾಣಸಿಗುತ್ತವೆ. ಅದೇ ರೀತಿ ಇಲ್ಲಿ ಕೃಷ್ಣನಿಗೆ ಸಂಬಂಧಪಟ್ಟ ಎರಡು ಮೂರ್ತಿಗಳಿದ್ದು, ಕೃಷ್ಣನ ಕಾಳಿಂಗ ಮರ್ಧನ ಹಾಗೂ ಗೋಪಾಲಕೃಷ್ಣನ ಮೂರ್ತಿಗಳು ಅತ್ಯಂತ ಸುಂದರವಾಗಿ ಆದರೆ ಅಷ್ಟೇ ಸರಳವಾಗಿ ಚಿತ್ರಿತವಾಗಿದೆ.

ಇಲ್ಲಿಂದ ಮುಂದೆ ನಾವು ಗಮನಿಸಬೇಕಾದ ಪ್ರಮುಖ ಮೂರ್ತಿಗಳೆಂದರೆ, ಹೊಯ್ಸಳರ ಕಾಲದ ಗರ್ಭಗೃಹದಲ್ಲಿ ಆರಾಧನೆಗೊಳ್ಳುತ್ತಿರುವ ಸೌಮ್ಯಕೇಶವ ಸ್ವಾಮಿಯ ಶಿಲ್ಪ (ಚಿತ್ರ ೧೪). ಈ ಶಿಲ್ಪವು ಗರುಡಪೀಠದ ಮೇಲೆ ನಿಲ್ಲಿಸಲ್ಪಟ್ಟಿದ್ದು ಸಮಸ್ಥಾನಕ ಭಂಗಿಯಲ್ಲಿದೆ. ಇದನ್ನು ವೈಷ್ಣವಸ್ಥಾನಕ ಎಂದೂ ಸಹ ಕರೆಯಲಾಗುತ್ತದೆ. ನಾಲ್ಕು ಬಾಹುಗಳನ್ನು ಹೊಂದಿದ್ದು, ಮುಂದಿನ ಬಲ ಕೈಯಲ್ಲಿ ಪದ್ಮವನ್ನು, ಎಡ ಕೈಯಲ್ಲಿ ಗದೆಯನ್ನು ಹಿಡಿದಿದ್ಧಾನೆ. ಹಿಂದಿನ ಬಲಗೈಯಲ್ಲಿ ಶಂಖವನ್ನೂ, ಎಡಗೈಯಲ್ಲಿ ಚಕ್ರವನ್ನೂ ಹಿಡಿದಿರುವ ಭಂಗಿಯಲ್ಲಿದೆ. ಸೌಮ್ಯವಾಗಿರುವುದರಿಂದ ಸೌಮ್ಯಕೇಶವ ಎಂತಲೂ, ಶಾಸನಗಳಲ್ಲಿ ಚನ್ನಕೇಶವ ಎಂದು ಕರೆದಿದ್ದು, ಮೂರ್ತಿಯ ಹಿಂಭಾಗದಲ್ಲಿ ಪ್ರಭಾವಳಿಯನ್ನು ಹೊಂದಿದ್ದು, ಪ್ರಭಾವಳಿಯಲ್ಲಿ ದಶಾವತಾರದ ಚಿಕ್ಕ ಮೂರ್ತಿಗಳನ್ನು ಒಳಗೊಂಡಿದೆ. ಮೂರ್ತಿಯ ಪಾದಗಳ ಎರಡು ಪಕ್ಕಗಳಲ್ಲಿ ಎರಡು ಚಿಕ್ಕ ದೇವಿಯರ ಬಹುಶಃ ಶ್ರೀದೇವಿ ಮತ್ತು ಭೂದೇವಿ ಎಂದು ಕರೆಯಿಸಿಕೊಳ್ಳಲ್ಪಡುವ ಚಾಮರಧಾರಿಣಿಯರ ಉಬ್ಬು ಶಿಲ್ಪಗಳಿವೆ. ಪದ್ಮಪೀಠದ ಕೆಳಭಾಗದಲ್ಲಿ ಗರುಡನ ಬಿಂಬವಿದ್ದು ಶಾಸ್ತ್ರಗಳಿಗೆ ಅನುಸಾರವಾಗಿ ಮೂಡಿಬಂದಿದೆ. ಆದರೆ ಹರಿನಾರು ವಿಧದ ಆಭರಣಗಳನ್ನು ನಾವು ಗಮನಿಸಲಾಗಿಲ್ಲ. ಏಕೆಂದರೆ ಮೂರ್ತಿಯನ್ನು ಲೋಹದ ಕವಚಗಳಿಂದ ಅಲಂಕಾರಗೊಳಿಸಲಾಗಿದ್ದು, ಶಿಲ್ಪದ ವಿವರಗಳು ಕಾಣಲಾಗುವುದಿಲ್ಲ.

ಇದು ಪೂರ್ಣವಾಗಿ ಹೊಯ್ಸಳರ ಕಾಲದ ಮೂರ್ತಿಯಾಗಿದ್ದು, ಹೊಯ್ಸಳ ಕಲಾಶೈಲಿಯ ಎಲ್ಲಾ ಲಕ್ಷಣಗಳನ್ನು ಹೊಂದಿದೆ. ಆಗಮ ಶಾಸ್ತ್ರಗಳ ಪ್ರಕಾರ ಈ ಮೂರ್ತಿಯಲ್ಲಿರುವ ಶಂಖ, ಚಕ್ರ, ಗದಾ, ಪದ್ಮಗಳ ಆಧಾರದ ಮೇಲೆ ಈ ಮೂರ್ತಿಯನ್ನು ಕೇಶವ ಎಂದು ಕರೆಯಬಹುದು. ಶಾಸ್ತ್ರಗಳಲ್ಲಿ ಈ ಶಂಖ, ಚಕ್ರ, ಗದಾ, ಪದ್ಮಗಳ ವ್ಯತ್ಯಾಸಗಳ ಆಧಾರದ ಮೇಲೆ ಕೇಶವನಿಂದ ಕೃಷ್ಣನವರೆಗೆ ಇಪ್ಪತ್ತನಾಲ್ಕು ವಿಧವಾದ ಮೂರ್ತಿಗಳು ರೂಪುಗೊಳ್ಳುತ್ತವೆ. ಅದನ್ನು ಚತುರ್ವಿಂಶತಿ ಮೂರ್ತಿ ಎಂದು ಕರೆಯಲಾಗುತ್ತದೆ.

ಈ ಮೂರ್ತಿಯನ್ನು ನಿಲ್ಲಿಸಿರುವ ಪದ್ಮಪೀಠದ ಮುಂಭಾಗದಲ್ಲಿ ಚಿಕ್ಕ ಗರುಡ ಶಿಲ್ಪವಿದ್ದು, ಇದು ವಿಷ್ಣುವಿಗಾಗಿ ಸಿದ್ಧಪಡಿಸಿದ ಪೀಠ ಎಂದು ದೃಢೀಕರಿಸಲ್ಪಡುತ್ತದೆ. ಹೊಯ್ಸಳರ ಕಾಲದಲ್ಲಿ ಇಪ್ಪತ್ತನಾಲ್ಕು ವಿಷ್ಣುವಿನ ಮೂರ್ತಿಗಳಲ್ಲಿಯೇ ಅದಿಯಾರ ಅಂದರೆ ಮೊದಲಿನಾದ ಕೇಶವನಿಗಾಗಿ ದೇವಾಲಯವನ್ನು ನಿರ್ಮಿಸುವುದು ಸಹಜವಾಗಿತ್ತು. ಅದೂ ಅಲ್ಲದೆ ಕೃಷ್ಣನ ಜನ್ಮಸ್ಥಳವಾದ ಮಥುರಾದಲ್ಲಿ ಕೃಷ್ಣ ದೇವಾಲಯವನ್ನು ಆದಿಕೇಶವರಾಯ ಸ್ವಾಮಿ ಎಂದು ಕರೆದಿದ್ದು, ಹೊಯ್ಸಳರೂ ಸಹ ಯಾದವ ವಂಶದವರು ಎಂದು ಹೇಳಿಕೊಂಡಿರುವುದರಿಂದ ಸಹಜವಾಗಿಯೇ ಕೃಷ್ಣನ ಅಂದರೆ ಆದಿಕೇಶವರಾಯನ ದೇವಾಲಯಗಳು ಇಲ್ಲಿ ನಿರ್ಮಾಣ ಗೊಂಡಿರಬೇಕು. ಅನೇಕ ಹೊಯ್ಸಳ ಶಾಸನಗಳು ಆದಿಮೂರ್ತಿಯೆನಿಸಿದ ಕೇಶವ ಎಂದು ಉಲ್ಲೇಖಿಸುತ್ತವೆ.

ಗರ್ಭಗೃಹದ ಹೊರಭಾಗದಲ್ಲಿ ಶುಕನಾಸಿಯಿದ್ದು, ಇಲ್ಲಿ ಕೇವಲ ಉತ್ಸವ ಮೂರ್ತಿಗಳನ್ನು ಇಡಲಾಗಿದೆ. ಈ ಮೂರ್ತಿಗಳು ಲೋಹದಿಂದ ಮಾಡಿದ ಮೂರ್ತಿಗಳಾಗಿದ್ದು, ಮುಂದೆ ಇದರ ಬಗ್ಗೆ ಚರ್ಚಿಸಲಾಗುವುದು.

ಸುಕನಾಸಿಯ ಮುಂದಿನ ನವರಂಗದ ದಕ್ಷಿಣದಲ್ಲಿ ಮತ್ತೊಂದು ಗರ್ಭಗೃಹವಿದ್ದು, ಮೊದಲೇ ಹೇಳಿದಂತೆ ತ್ರಿಕೂಟಾಚಲ ಮಾದರಿಯ ದಕ್ಷಿಣದ ಗರ್ಭಗೃಹವಾಗಿದೆ. ಇಲ್ಲಿ ಲಕ್ಷ್ಮೀನರಸಿಂಹಸ್ವಾಮಿಯ ಮೂರ್ತಿಯಿದೆ. ಹಾರುವ ಭಂಗಿಯಲ್ಲಿ ಅಂಜಲಿಹಸ್ತನಾಗಿ (ಕೈಮುಗಿದ ಭಂಗಿ) ರುವ ಗರುಡ ಪೀಠದ ಮೇಲೆ ಈ ಲಕ್ಷ್ಮೀನರಸಿಂಹಸ್ವಾಮಿಯನ್ನು ಪ್ರತಿಷ್ಠಾಪಿಸಲಾಗಿದೆ. ನರಸಿಂಹನು ಚತುರ್ಭುಜನಾಗಿದ್ದು, ಲಕ್ಷ್ಮಿಯು ಅವನ ತೊಡೆಯ ಮೇಲಿರುವಂತೆ ಕಡೆಯಲಾಗಿದೆ. ಇಲ್ಲಿ ಲಕ್ಷ್ಮಿಯನ್ನು ದ್ವಿಭುಜದಲ್ಲಿ ಕಡೆಯಲಾಗಿದ್ದು, ಅಭಯಹಸ್ತ (ನರಸಿಂಹನನ್ನು ಒಂದು ಕೈಯಲ್ಲಿ ಆಲಂಗಿಸಿಕೊಂಡ ದಕ್ಷಿಣ ಹಸ್ತ) ಹಾಗೂ ಕಮಲದ ಮೊಗ್ಗನ್ನು ತನ್ನೆರಡು ಕೈಗಳಲ್ಲಿ ಹಿಡಿದಿದ್ಧಾಳೆ. ನರಸಿಂಹನು ತನ್ನ ಬಲ ಮೇಲಿನ ಕೈಯಲ್ಲಿ ಚಕ್ರವನ್ನು, ಬಲ ಕೆಳಗಿನ ಕೈಯಲ್ಲಿ ಅಭಯ ಹಸ್ತವನ್ನು ಹೊಂದಿದ್ದು, ಎಡ ಮೇಲಿನ ಕೈಯಲ್ಲಿ ಶಂಖವನ್ನು ಹಾಗೂ ಕೆಳ ಎಡಗೈಯಿಂದ ಲಕ್ಷ್ಮೀಯನ್ನು ಆಲಂಗಿಸಿಕೊಂಡಿದ್ಧಾನೆ. ನರಸಿಂಹನ ಮುಖದಲ್ಲಿ ಕ್ರೌರ್ಯದ ಭಾವನೆಯನ್ನು ಕಾಣಬಹುದಾದರೂ, ನಿಜವಾದ ಘೋರತೆಯು ಕಂಡುಬರುವುದಿಲ್ಲ. ಬಾಯಿಂದ ನಾಲಿಗೆಯನ್ನು ಹೊರಹಾಕಿದ ಭಂಗಿಯಲ್ಲಿದ್ದು, ಸಿಂಹದ ಕೇಸರಗಳನ್ನು ಚೆನ್ನಾಗಿ ಮೂಡಿಸಲಾಗಿದೆ. ಹಿಂಭಾಗದಲ್ಲಿ ಕೀರ್ತಿಮುಖದಿಂದ ಕೂಡಿರುವ ಪ್ರಭಾವಳಿಯಿದ್ದು, ನರಸಿಂಹನ ಕಿರೀಟದ ಮೇಲ್ಭಾಗದಲ್ಲಿ ಐದು ಹೆಡೆಗಳಿಂದ ಕೂಡಿದ ಆದಿಶೇಷನನ್ನು ಕೆತ್ತಲಾಗಿದೆ. ಈ ಮೂರ್ತಿಯ ಲಕ್ಷಣಗಳು ನರಸಿಂಹ ಸಹಸ್ರನಾಮಸ್ತೋತ್ರದಲ್ಲಿ ಬರುವ ಧ್ಯಾನಶ್ಲೋಕಕ್ಕೆ ಅನುಗುಣವಾಗಿದೆ. ಆದರೆ ಕೇವಲ ಬಿಳಿಯ ಬಣ್ಣದಲ್ಲಿ ಮಾತ್ರ ವ್ಯತ್ಯಾಸ ಕಂಡು ಬರುತ್ತದೆ. ನರಸಿಂಹನು ಸುಖಾಸನದಲ್ಲಿ ಕುಳಿತು, ಲಕ್ಷ್ಮಿಯು ಲಲಿತಾಸನದಲ್ಲಿ ಕುಳಿತಿದ್ಧಾಳೆ (ಚಿತ್ರ ೧೫).

ಇನ್ನು ವಿಗ್ರಹದ ಕಾಲವನ್ನು ವಿವೇಚಿಸಿದರೆ ಇದು ಹೊಯ್ಸಳರ ಕಾಲದ್ದಲ್ಲ ಎಂದು ಸುಲಭವಾಗಿ ಸ್ಪಷ್ಟವಾಗುತ್ತದೆ. ಪ್ರಭಾವಳಿ, ಕೀರ್ತಿಮುಖ, ನರಸಿಂಹನ ಮುಖಲಕ್ಷಣ ಹಾಗೂ ಲಕ್ಷ್ಮಿಯ ಸೌಮ್ಯತೆಗಳು ಈ ವಿಗ್ರಹವು ವಿಜಯನಗರ ಕಾಲದ ಶಿಲ್ಪ ಎಂದು ನಿಚ್ಚಳವಾಗಿ ತೋರಿಸುತ್ತದೆ. ಅಂದರೆ ಮೊದಲಿಗೆ ಈ ದೇವಾಲಯವು ತ್ರಿಕೂಟಾಚಲವಾಗಿಲ್ಲದೆ ನಂತರದ ಕಾಲದಲ್ಲಿ ತ್ರಿಕೂಟಗಳನ್ನು ಅಂದರೆ ಮೊದಲಿನ ಗರ್ಭಗುಡಿಗೆ ಮತ್ತೆರಡು ಗರ್ಭಗುಡಿಗಳನ್ನು ದಕ್ಷಿಣ ಹಾಗೂ ಉತ್ತರ ದಿಕ್ಕಿನಲ್ಲಿ ಸೇರಿಸಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ನರಸಿಂಹನ ಎದುರು ಭಾಗದಲ್ಲಿ ಅಂದರೆ ಉತ್ತರದ ಗರ್ಭಗೃಹದಲ್ಲಿ ರುಕ್ಮಿಣಿ ಸತ್ಯಭಾಮೆಯರೊಂದಿಗಿರುವ ವೇಣುಗೋಪಾಲನ ವಿಗ್ರಹವಿದೆ. ನರಸಿಂಹನ ಪೀಠದಲ್ಲಿರುವ ಗರುಡನಂತೆ ಈ ಪೀಠದ ಗರುಡನು ಸುಂದರವಾಗಿಲ್ಲದಿದ್ದರೂ ಗರುಡನ ಪಕ್ಕದಲ್ಲಿ ಎರಡು ಸ್ತ್ರೀಯರ ಉಬ್ಬುಶಿಲ್ಪಗಳು ಇಲ್ಲಿ ಕಂಡುಬಂದಿರುವುದು ವಿಶೇಷವಾಗಿದೆ. ಪೀಠದ ಮೇಲ್ಬಾಗದಲ್ಲಿ ಮಧ್ಯದಲ್ಲಿ ಕೊಳಲನ್ನು ನುಡಿಸುತ್ತಿರುವ ಕೃಷ್ಣನಿದ್ದು, ಬಲಗಾಲನ್ನು ಸ್ಥಿರವಾಗಿ ಊರಿಕೊಂಡು ಎಡಗಾಲನ್ನು ಮಡಿಸಿಕೊಂಡು ಎಡಗಾಲಿನ ಹೆಬ್ಬೆರಳನ್ನು ಭೂಮಿಗೆ ಆನಿಸಿಕೊಂಡಂತೆ ಕೆತ್ತಲಾಗಿದೆ. ಇದನ್ನು ಸ್ವಸ್ತಿಕಪಾದಾಸನ ಎಂದು ಕರೆಯಲಾಗುತ್ತದೆ. ಗಮನಿಸಬೇಕಾದ ಅಂಶವೆಂದರೆ ಕಾಲುಗಳ ಭಾಗದಲ್ಲಿ ಒಂದು ಭಾಗವು ಕಂಡು ಬಂದರೂ ಸಹ ಇದು ತ್ರಿಭಂಗಿಯಲ್ಲಿ ಇಲ್ಲ ಎಂಬುದು. ಅಂದರೆ ಕೃಷ್ಣನನ್ನು ಅವನ ಶತನಾಮಾವಳಿ ಸ್ತೋತ್ರದಲ್ಲಿ ತ್ರಿಭಂಗಿನೇ ನಮಃ ಎಂದು ಕರೆಯಲಾಗುತ್ತದೆ.೧೦ ಅಂದರೆ ಮೂರು ಭಾಗಗಳಲ್ಲಿ ಶರೀರವನ್ನು ಬಗ್ಗಿಸಿಕೊಂಡು ನಿಂತಿರುವ ಭಂಗಿ ಎಂದು ತಿಳಿದು ಬರುತ್ತದೆ. ಆದರೆ ಇಲ್ಲಿ ಕೇವಲ ಕಾಲುಗಳಲ್ಲಿ ಬಿಟ್ಟು ಮತ್ತೆಲ್ಲಿಯೂ ಭಂಗವಿಲ್ಲದೆ, ಸಮಭಂಗಿಯು ಕಂಡುಬರುತ್ತದೆ. ಅಂದರೆ ಏಕಭಂಗಿಯಲ್ಲಿ ಕಡೆಯಲಾಗಿದೆ. ಕೃಷ್ಣನ ಬಲಭಾಗದಲ್ಲಿ ರುಕ್ಷ್ಮಿಣಿಯಿದ್ದು ಬಲಗೈಯ ದೋಲಹಸ್ತಭಂಗಿಯಲ್ಲಿದ್ದು, ಎಡಗೈಯಲ್ಲಿ ಕಮಲದ ಮೊಗ್ಗನ್ನು ಹಿಡಿದಿರುವಂತೆ ಕಡೆಲಾಗಿದೆ. ಕೃಷ್ಣನ ಎಡಭಾಗದಲ್ಲಿ ಸತ್ಯಭಾಮೆಯಿದ್ದ ಬಲಹಸ್ತದಲ್ಲಿ ಕಮಲವನ್ನೂ, ಎಡಹಸ್ತವನ್ನು ದೋಲಹಸ್ತವನ್ನಾಗಿ ಚಿತ್ರಿಸಲಾಗಿದೆ. ಎರಡೂ ದೇವಿಯರ ಎತ್ತರಗಳಲ್ಲಿ ವ್ಯತ್ಯಾಸವಿದ್ದು, ಎರಡೂ ದೇವಿಯರ ಕೈಗಳಲ್ಲಿರುವ ಪದ್ಮದ ಮೊಗ್ಗುಗಳಲ್ಲಿಯೂ ಸಹ ನಾವು ವ್ಯತ್ಯಾಸವನ್ನು ಗಮನಿಸಬಹುದು. ಶಿಲ್ಪಶಾಸ್ತ್ರಗಳಲ್ಲಿ ರುಕ್ಮಿಣಿಗೆ ಕಮಲದ ಮೊಗ್ಗು ಹಾಗೂ ಸತ್ಯಭಾಮೆಗೆ ನೀಲೋತ್ಪಲವನ್ನು ಹೇಳಲಾಗಿದೆ. ಆದರೂ ಶಾಸ್ತ್ರಗಳಲ್ಲಿ ಹೇಳಿರುವಂತೆ ಈ ಮೇಲಿನ ದೇವಿಯರನ್ನು ಗುರುತಿಲಾಗಿದ್ದು,೧೧ ಕೇವಲ ವಿಗ್ರಹದಲ್ಲಿನ ವ್ಯತ್ಯಾಸಗಳಿಂದ ರುಕ್ಮಿಣಿ-ಸತ್ಯಭಾಮೆಯರನ್ನು ಗುರುತಿಸುವುದು ಕಷ್ಟಸಾಧ್ಯ.

ಈ ವಿಗ್ರಹಗಳ ಶಿಲೆ ಹಾಗು ಶಿಲ್ಪ ಲಕ್ಷಣಗಳಿಂದ ಇದೂ ಸಹ ಲಕ್ಷ್ಮೀನರಸಿಂಹ ಸ್ವಾಮಿಯ ಮೂರ್ತಿಯ ಕಾಲದ್ದು, ಅಂದರೆ ವಿಜಯನಗರದ ಕಾಲದ್ದು ಎಂದು ನಾವು ಊಹಿಸಬಹುದಾಗಿದೆ (ಚಿತ್ರ ೧೬).

ಮುಂದೆ ನಾವು ಲಕ್ಷ್ಮೀನರಸಿಂಹಸ್ವಾಮಿಯ ಪಕ್ಕದಲ್ಲಿರುವ ಮತ್ತೊಂದು ಕೋಷ್ಠದಂತಹ ರಚನೆಯಲ್ಲಿರುವ ವಿಷ್ವಕ್ಸೇನನ ವಿಗ್ರಹವನ್ನು ನೋಡಬಹುದು. ಈ ಶಿಲ್ಪವು ಸುಮಾರು ಎರಡೂವರೆ ಅಡಿ ಎತ್ತರವಿದ್ದು, ಸವ್ಯಲಲಿತ ಆಸನದ ಮೇಲೆ ಕುಳಿತಿರುವ ಭಂಗಿಯಲ್ಲಿದೆ. ಬಲಗಾಲನ್ನು ಇಳಿಬಿಟ್ಟು, ಎಡಗಾಲನ್ನು ಮಡಚಿಕೊಂಡು ಕೂರಲಾಗಿದೆ. ಚತುರ್ಭುಜಗಳನ್ನು ಹೊಂದಿದ್ದು, ಮೇಲಿನ ಎರಡು ಕೈಗಳಲ್ಲಿ ಕ್ರಮವಾಗಿ ಬಲ, ಎಡಭಾಗಗಳಲ್ಲಿ ಚಕ್ರ ಹಾಗೂ ಶಂಖಗಳನ್ನು ಹಾಗು ಕೆಳ ಬಲಭಾಗದ ಕೈಯಲ್ಲಿ ತರ್ಜನೀಹಸ್ತ ಭಂಗಿಯನ್ನು ಹೊಂದಿದೆ. ಎಡ ಕೆಳಗೈಯಲ್ಲಿ ಗದೆಯನ್ನು ಹಿಡಿದಂತೆ ಕೆತ್ತಲಾಗಿದೆ. ಕಂಠದಲ್ಲಿ ಸುಂದರವಾದ ಹಾರಗಳೂ, ಯಜ್ಞೋಪವೀತ ಮುಂತಾದವುಗಳನ್ನು ಸುಂದರವಾಗಿ ಕೆತ್ತನೆ ಮಾಡಲಾಗಿದ್ದು, ಪಾಂಚರಾತ್ರ ಸಂಹಿತೆಗಳ ಅನುಸಾರ ಇದು ವಿಷ್ವಕ್ಷೇನನ ವಿಗ್ರಹವಾಗಿದೆ.೧೨ ಕೆಲವು ಸಂಹಿತೆಗಳಲ್ಲಿ ಗದೆಯ ಬದಲಾಗಿ ದಂಡವನ್ನು ಅಂದರೆ ವೇತ್ರಹಸ್ತನಾಗಿರಬೇಕೆಂದು ತಿಳಿಸಲಾಗಿದೆ.೧೩

ನವರಂಗದ ಮಧ್ಯದ ಮೇಲ್ಭಾಗದ ಸುಖನಾಸಿಯಲ್ಲಿ ಸರ್ಪಮಂಟಪವನ್ನು ಕೆತ್ತಲಾಗಿದ್ದು, ಬಹುಶಃ ಈ ನಾಗಮಂಡಲ ರೂಪದ ಭುವನೇಶ್ವರಿಯಿಂದಲೇ ಇದಕ್ಕೆ ನಾಗಮಂಗಲ ಎಂದು ಹೆಸರು ಬಂದಿದೆ ಎಂದು ಸ್ಥಳೀಯರು ಹೇಳುತ್ತಾರೆ. ಆದರೆ ಇದಕ್ಕೆ ಸ್ಪಷ್ಟವಾದ ಆಧಾರಗಳು ದೊರಕುವುದಿಲ್ಲ.

ಈ ವಿಗ್ರಹಗಳನ್ನು ಬಿಟ್ಟರೆ ಇನ್ನಾವುದೇ ವಿಗ್ರಹಗಳು ಈ ನವರಂಗದಲ್ಲಿ ಕಂಡುಬರುವುದಿಲ್ಲ. ಮುಂದೆ ನಾವು ಪಾತಾಳಾಂಕಣಕ್ಕೆ ಇಳಿದು ಪಾಕಶಾಲೆಯ ಪಕ್ಕದಲ್ಲಿರುವ ಗರ್ಭಗೃಹದಲ್ಲಿರುವ ಅಂದರೆ ಪರಮಪದನಾಥನ ಸನ್ನಿಧಿಯಲ್ಲಿರುವ ವಿಗ್ರಹಗಳನ್ನು ಹೀಗೆ ವಿಮರ್ಶಿಸಬಹುದು. ಪರಮಪದನಾತನ ಸನ್ನಿಧಿಯಲ್ಲಿ ಅನಂತನ ಮೇಲೆ ಕುಳಿತಿರುವ ವೈಕುಂಠನಾರಾಯಣನ ವಿಗ್ರಹವಿದ್ದು, ಅನಂತನ ಏಳು ಹೆಡೆಗಳ ಕೆಳಭಾಗದಲ್ಲಿ ಮೇಲಿನ ಬಲಗೈಯಲ್ಲಿ ಚಕ್ರ ಹಾಗೂ ಮೇಲಿನ ಎಡಗೈಯಲ್ಲಿ ಶಂಖವನ್ನು ಹಿಡಿದಿರುವ ರೀತಿಯಲ್ಲಿ ಕಡೆಯಲಾಗಿದೆ. ಬಲ ಕೆಳಗೈ ವಿಸ್ತಾರವಾಗಿ ಚಾಚಿದ್ದು, ಎಡಗೈ ಅನಂತನ ಮೇಲೆ ಊರಲಾಗಿದೆ. ಬಲಗಾಲನ್ನು ಮಡಿಚಿಕೊಂಡು ಅನಂತನ ಮೇಲೆ ಇಟ್ಟುಕೊಳ್ಳಲಾಗಿದೆ. ಎಡಗಾಲು ಪ್ರಸಾರಿತವಾಗಿದೆ. ಅಂದರೆ ಕೆಳಗೆ ಚಾಚಲಾಗಿದೆ. ನಾರಾಯಣನು ಕಿರೀಟ, ಕುಂಡಲ, ಭುಜಸ್ಕಂಧ, ಮುಕ್ತಾಹಾರ, ಕಟಕ, ಪಾದನೂಪುರ, ಜಾಲಕ, ಯಜ್ಞೋಪವೀತ ಮುಂತಾದ ಎಲ್ಲಾ ಆಭರಣಗಳಿಂದ ಅಲಂಕೃತನಾಗಿದ್ದಾನೆ. ನಾರಾಯಣನ ಬಲಭಾಗಕ್ಕೆ ಲಕ್ಷ್ಮಿಯ ವಿಗ್ರಹವಿದ್ದು, ಕುಳಿತಿರುವ ಭಂಗಿಯಲ್ಲಿದ್ದು, ಬಲಗೈ ವರದ ಹಸ್ತವನ್ನು ಹಾಗೂ ಎಡಗೈಯಲ್ಲಿ ಕಮಲದ ಮೊಗ್ಗಿದೆ. ಲಕ್ಷ್ಮೀಯು ಕಿರೀಟ, ಕುಂಡಲ ಹಾಗೂ ಇತರ ಸಾಮಾನ್ಯ ಆಭರಣಗಳಿಂದ ಅಲಂಕೃತಳಾಗಿದ್ಧಾಳೆ. ನಾರಾಯಣನ ಎಡಬದಿಯಲ್ಲಿ ಮೊದಲಿಗೆ ಭೂದೇವಿಯ ವಿಗ್ರಹವಿದ್ದು, ಭೂದೇವಿಯು ದ್ವಿಭುಜಳಾಗಿದ್ಧಾಳೆ. ಬಲಗೈಯಲ್ಲಿ ಕಮಲದ ಮೊಗ್ಗನ್ನು ಹಿಡಿದಿದ್ದು, ಎಡಗೈಯು ವರದಹಸ್ತಮುದ್ರೆಯನ್ನು ಹೊಂದಿದೆ. ಭೂಮಿಯು ಸಹ ಕಿರೀಟಾದಿ ಆಭರಣಗಳಿಂದ ಅಲಂಕೃತಳಾಗಿದ್ದು, ಭೂಮಿ ತಾಯಿಯ ಎಡಕ್ಕೆ ನೀಲಾದೇವಿಯೂ ಸಹ ಕುಳಿತಿರುವ ಭಂಗಿಯಲ್ಲಿ ಪೀಠದಲ್ಲಿದ್ದು ದ್ವಿಭುಜದೊಂದಿಗೆ ಪ್ರತಿಷ್ಠಾಪಿಸಲಾಗಿದೆ. ಬಲಗೈಯಲ್ಲಿ ನೀಲೋತ್ಪಲವನ್ನೂ, ಎಡಗೈಯಲ್ಲಿ ವರದಹಸ್ತ ಮುದ್ರೆಯನ್ನು ಹೊಂದಿದ್ಧಾಳೆ. ಒಟ್ಟಿನಲ್ಲಿ ನಾರಾಯಣನು ವೈಕುಂಠದಲ್ಲಿ ಶ್ರೀ ಮತ್ತು ಶ್ರೀ, ಭೂ ಮತ್ತು ನೀಳಾದೇವಿಯೊಡಗೂಡಿ ವಾಸಿಸುವ ಪುರಾಣದ ಮತ್ತು ಅಗಮಶಾಸ್ತ್ರಗಳ ವಿವರಣೆಗಳು ಈ ವಿಗ್ರಹಕ್ಕೆ ಸರಿಹೊಂದುತ್ತವೆ. ಎಲ್ಲಾ ನಾಲ್ಕು ವಿಗ್ರಹಗಳನ್ನೂ, ಗರುಡನ ಉಬ್ಬು ಶಿಲ್ಪವಿರುವ ಒಂದೇ ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದ್ದರೂ ಸಹ ನಾರಾಯಣನು ಮಾತ್ರ ಅನಂತರ ಮೇಲೆ ಕುಳಿತುಕೊಂಡಿರುವವುದನ್ನು ನಾವು ಗಮನಿಸಬೇಕಾಗುತ್ತದೆ. ಈ ಎಲ್ಲಾ ಲಕ್ಷಣಗಳೂ ಸಹ ಅಷ್ಟಾಕ್ಷರೀ ಕಲ್ಪದ ವೈಕುಂಠನಾರಾಯಣಮೂರ್ತಿಗೆ ಸರಿಹೊಂದುತ್ತದೆ.೧೪ ಪರಮದನಾಥ ಎಂಬುವುದು ಸಹ ವೈಕುಂಠನಾರಾಯಣ ಮೂರ್ತಿಗೆ ಪರ್ಯಾಯ ಶಬ್ದವಾಗಿದೆ. ಈ ವಿಗ್ರಹಗಳ ಕಲಾಶೈಲಿಯನ್ನು ನಾವು ಗಮನಿಸಿದರೆ ಇವುಗಳು ವಿಜಯನಗರ ಕಾಲದ ಮಧ್ಯಭಾಗದ ನಂತರ ರಚಿತಗೊಂಡಂತೆ ಕಂಡುಬರುತ್ತದೆ. ಹೊಯ್ಸಳರ ಕಾಲದಲ್ಲಿ ಇದೇ ಮೂರ್ತಿಲಕ್ಷಣಗಳನ್ನು ಒಳಗೊಂಡ ಆದರೆ ಎಡಗೈ ಪ್ರಸಾರಿಸಲ್ಪಟ್ಟ ಮೂರ್ತಿಗಳನ್ನು ಆದಿಮೂರ್ತಿ ಎಂದು ಕರೆಯಲಾಗಿದೆ.

ಇದೇ ಪರಮಪದನಾಥನ ಸನ್ನಿಧಿಯಲ್ಲಿ ಅಂದರೆ ಗರ್ಭಗೃಹದಲ್ಲಿ ಹಲವಾರು ಆಳ್ವಾರರುಗಳ ಶಿಲಾವಿಗ್ರಹಗಳನ್ನೂ ಸಹ ಪ್ರತಿಷ್ಠಾಪಿಸಲಾಗಿದೆ. ಆಳ್ವಾರರುಗಳು ಭಕ್ತವಿಗ್ರಹಗಳಾಗಿದ್ದು, ಆಗಮಶಾಸ್ತ್ರಗಳಲ್ಲಿ ಇವರ ಲಕ್ಷಣಗಳನ್ನು ಪ್ರಮುಖವಾಗಿ ಚರ್ಚಿಸಿಲ್ಲ. ಆದರೆ ಸಂಪ್ರದಾಯ ಗ್ರಂಥಗಳಲ್ಲಿ ಬರುವ ಕಥೆಗಳ ಆಧಾರದ ಮೇಲೆ ಇವರನ್ನು ಗುರುತಿಸಬೇಕಾಗುತ್ತದೆ. ಆಳ್ವಾರರುಗಳು ಸಾಮಾನ್ಯವಾಗಿ ಯಾವುದೇ ಜಾತಿ ಅಥವಾ ಪಂಥದ ಮೇಲೆ ಪೂಜೆಗೆ ಅರ್ಹರಾಗಿಲ್ಲ ಎಂಬುದು ಗಮನಿಸಬೇಕಾದ ಅಂಶ. ನಮ್ಮಾಳ್ವಾರ‍್ ಗೌಡರಾದರೆ, ತಿರುಪ್ಪಾಣಾಳ್ವಾರ ಆಸ್ಪೃಶ್ಯ ಜಾತಿಗೆ (ಅಂತ್ಯ) ಸೇರಿದವರಾಗಿದ್ದರು. ತಿರುಮಂಗೈಯಾಳ್ವಾರ ಬೇಡವಾದರೆ, ಕುಲಶೇಖರ ಅಳ್ವಾರ ಕೇರಳದ ರಾಜರಾಗಿದ್ದರು, ಹೀಗಾಗಿ ಇವರ ಕಥೆಗಳ ಆಧಾರದ ಮೇಲೆ ಇವರ ಶಿಲ್ಪಗಳನ್ನು ಗುರುತಿಸಬೇಕಾತ್ತದೆ. ಹೊಯ್ಸಳರ ಕಾಲಕ್ಕೆ ಶ್ರೀವೈಷ್ಣವ ಧರ್ಮದ ಸ್ಪಷ್ಟ ಪ್ರಭಾವ ದೇವಾಲಯಗಳಲ್ಲಿ ಕಂಡು ಬರುವುದಾದರೂ, ಆಳ್ವಾರರುಗಳು ವಿಗ್ರಹಗಳು ಹೊಯ್ಸಳ ಶೈಲಿಯಲ್ಲಿ ಕಂಡುಬಂದಿಲ್ಲ. ಮುಂದೆ ವಿಜಯನಗರ ಕಾಲಕ್ಕೆ ಆಳ್ವಾರರುಗಳು ವಿಗ್ರಹಗಳ ಪ್ರತಿಷ್ಠೆಯು ಶ್ರೀವೈಷ್ಣವ ದೇವಾಲಯಗಳಲ್ಲಿ ಒಂದು ಪ್ರಮುಖ ಅಂಗವಾಗಿ ಕಂಡುಬರುತ್ತದೆ.

ಪುರಾಣಗಳ ಆಧಾರದ ಮೇಲೆ ಗಮನಿಸುವುದಾದರೆ, ಲಿಂಗಪುರಾಣದಲ್ಲಿ “ವಿಷ್ಣುವು ವೈಕುಂಠದಲ್ಲಿ ಶ್ರೀ, ಭೂ, ನೀಳಾ ಪರಿವೃತನಾಗಿ, ತನ್ನೆಲ್ಲಾ ಭಕ್ತರ ಜೊತೆಯಲ್ಲಿ ಅನಂತನ ಮೇಲೆ ಅಸೀನನಾಗಿರುತ್ತಾನೆ” ಎಂಬ ವಚನವಿದೆ. ಸಂಪ್ರದಾಯಗಳಲ್ಲಿ ಆಳ್ವಾರರುಗಳನ್ನು ನಾರಾಯಣನ ವಿವಿಧ ಆಯುಧಗಳಿಂದ ಜನಸಿದವರು ಹಾಗೂ ಅವರು ನಿತ್ಯಸೂರಿಗಳು ಅಂದರೆ ವೈಕುಂಠದಲ್ಲಿ ಸರ್ವದಾ ಭಗವಂತರೊಡನೆ ವಾಸಿಸುವವರು ಎಂದು ಕರೆಯಲಾಗಿದ್ದು, ಈ ಎರಡು ಹಿನ್ನೆಲೆಗಳಲ್ಲಿ ಪರಮಪದನಾಥನ ಸನ್ನಿಧಿಯಲ್ಲಿ ಸಾಮಾನ್ಯವಾಗಿ ಹನ್ನೆರಡು ಆಳ್ವಾರರುಗಳನ್ನು ಪ್ರತಿಷ್ಠಾಪಿಸಲಾಗಿರುತ್ತದೆ. ಆಳ್ವಾರರುಗಳ ಜೊತೆಗೆ ವಿಷ್ವಕ್ಷೇನನ್ನು ಸಹ ಪ್ರತಿಷ್ಠಾಪಿಸಲಾಗಿರುತ್ತದೆ. ನಾಗಮಂಗಲದ ಪಕ್ಕದಲ್ಲಿರುವ ಶ್ರೀವೈಷ್ಣವರ ಪವಿತ್ರ ಕ್ಷೇತ್ರವಾದ ಮೇಲುಕೋಟೆಯಲ್ಲಿಯೂ ಸಹ ಇದೇ ಕ್ರಮವನ್ನು ಅನುಸರಿಸಿರುವುದನ್ನು ನಾವು ಕಾಣಬಹುದು.

ಇಲ್ಲಿರುವ ಆಳ್ವಾರರುಗಳ (ಭಕ್ತವಿಗ್ರಹಗಳು) ಶಿಲ್ಪಗಳೆಂದರೆ, ಪೊಯ್ ಹೈ ಆಳ್ವಾರ, ಪೂದತ್ತಾಳ್ವಾರ‍್, ಪೇಯ್ ಆಳ್ವಾರ‍್, ಮಧುರಕವಿ ಆಳ್ವಾರ‍್, ಕುಲಶೇಖರಾಳ್ವಾರ‍್, ಭಟರ‍್ ಪಿರಾನ್ (ಪೆರಿಯಾಳ್ವಾರ‍್), ನಮ್ಮಾಳ್ವಾರ‍್, ತಿರುಪ್ಪಾಣಾಳ್ವಾರ‍್, ತಿರುಂಗೈ ಆಳ್ವಾರ, ಆಂಡಾಳ್ (ಏಕಮಾತ್ರ ಹೆಣ್ಣು ಆಳ್ವಾರ‍್ ), ತೊಂಡರಡಿಪ್ಪೊಡಿಯಾಳ್ವಾರ‍್, ತಿರುಮಳಿಶೈಆಳ್ವಾರ‍್, ಇದಲ್ಲದೇ ವಷ್ವಕ್ಸೇನನ ವಿಗ್ರಹವನ್ನು ಸಹ ನಾವು ಇಲ್ಲಿ ಗಮನಿಸಬಹುದು. ದೇವರ ಬಲಭಾಗದ ಪೀಠದಲ್ಲಿ ಏಳು ಜನ (ವಿಷ್ವಕ್ಸೇನರನ್ನು ಸೇರಿ) ಹಾಗೂ ಎಡಭಾಗದಲ್ಲಿ ಆರು ಜನರನ್ನು ಪ್ರತಿಷ್ಠಾಪಿಸಲಾಗಿದೆ. ಒಟ್ಟು ಹದಿನೇಳು ವಿಗ್ರಹಗಳು ಈ ಸನ್ನಿಧಿಯಲ್ಲಿ ನಮಗೆ ಕಂಡುಬರುತ್ತವೆ. ಆಳ್ವಾರರುಗಳಲ್ಲಿ ಸಮ್ಮಾಳರ ಅವರನ್ನು ಮಾತ್ರ ವಿಶಿಷ್ಟವಾದ ಸೋಮಸೂತ್ರವಿರುವ ಪೀಠದ ಮೆಲೆ ಪ್ರತಿಷ್ಠಾಪಿಸಲಾಗಿದೆ.

ದೇವಾಲಯದ ನೈಋತ್ಯ ಮೂಲೆಯಲ್ಲಿ ಚಿಕ್ಕದಾದ ಗರ್ಭಗೃಹದಲ್ಲಿ ಸಾಮಾನ್ಯ ಪೀಠದ ಮೇಲ್ಭಾಗದ ಸಮಸ್ತಾನಕ ಭಂಗಿಯಲ್ಲಿರುವ ಸುದರ್ಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದೆ. ಪೀಠ ಹಾಗು ಸುದರ್ಶನ ಚಕ್ರಮೂರ್ತಿಯನ್ನು ಒಂದೇ ಶಿಲೆಯಲ್ಲಿ ಕೆತ್ತಲಾಗಿದ್ದು, ಸುದರ್ಶನನು ಅಷ್ಟಭುಜ ಅಥವಾ ಎಂಟು ಕೈಗಳನ್ನು ಹೊಂದಿದ್ದಾನೆ. ಸುದರ್ಶನ ಪುರುಷನನ್ನು ಮುಂಭಾಗದಲ್ಲಿ ಕೆತ್ತಲಾಗಿದ್ದು, ಹಿಂಭಾಗದಲ್ಲಿ ಚಕ್ರವನ್ನು ಕಂಡರಿಸಲಾಗಿದೆ. ಇದು ಚಕ್ರಮಧ್ಯದಲ್ಲಿರುವ ಸುದರ್ಶನನನ್ನು ಧ್ಯಾನಿಸಬೇಕು ಎಂಬ ಅಹಿರ್ಬುಧ್ನ್ಯಸಂಹಿತೆಯ ಧ್ಯಾನಶ್ಲೋಕಕ್ಕೆ ಸರಿಯಾಗಿದೆ. ಸುದರ್ಶನ ಮೂರ್ತಿಯ ಕಿರೀಟ ಭಾಗದಲ್ಲಿ ಹಾಗು ಅದರ ಮೇಲ್ಭಾಗದ ಚಕ್ರದ ಮಧ್ಯದಲ್ಲಿ ಬೆಂಕಿಯ ಜ್ವಾಲೆಯ ರಚನೆಯನ್ನು ಕೆತ್ತಲಾಗಿದೆ. ಏಕೆಂದರೆ, ಧ್ಯಾನಶ್ಲೋಕಗಳಲ್ಲಿ ಬೆಂಕಿಯ ಜ್ವಾಲೆಯನ್ನು ತಲೆಯ ಕೂದಲುಗಳನ್ನಾಗಿ ಉಳ್ಳವನು ಎಂದು ಹೇಳಲಾಗಿರುವುದರಿಂದ ಈ ರೀತಿಯ ಕೆತ್ತನೆ ಮಾಡಲಾಗಿದೆ. ಸುದರ್ಶನ ಎಂದರೆ ಒಳ್ಳೆಯ ರೂಪವುಳ್ಳವನು ಎಂದರ್ಥ. ಆದರೆ ವಿಷ್ಣುವುನ ಸುದರ್ಶನ ಚಕ್ರದ ಕೆಲಸವೆಂದರೆ ರಾಕ್ಷಸರನ್ನು ಸಂಹಸರಿಸುವುದು. ಅದಕ್ಕಾಗಿಯೇ ಕನ್ನಡದ ಪ್ರಥಮ ಶಾಸನ ಹಲ್ಮಿಡಿ ಶಾಸನವು,೧೫ “ದಾನವನ ಕಣ್ಣಿಗೆ ಯುಗದ ಅಂತ್ಯದಲ್ಲಿ ಉಂಟಾಗುವ ಪ್ರಳಯಾಗ್ನಿಯಂತೆಯೂ ಶಿಷ್ಟರಿಗೆ ಸುದರ್ಶನನಾಗಿಯೂ ಕಾಣುತ್ತಾನೆ” ಎಂದು ವರ್ಣಿಸಿದೆ. ಇಲ್ಲಿ ಸುದರ್ಶನನು ಬಲ ಕೈಗಳಲ್ಲಿ ಚಕ್ರ, ಮುಸಲ, ಅಂಕುಶ ಹಾಗು ಪದ್ಮಗಳನ್ನು ಹಿಡಿದಿದ್ಧಾನೆ. ಎಡ ಕೈಗಳಲ್ಲಿ ಗದೆ, ಪಾಶ, ಧನಸ್ಸು ಮತ್ತು ಶಂಖಗಳನ್ನು ಹಿಡಿದಿದ್ಧಾನೆ. ಕಿರೀಟ, ಕುಂಡಲ, ಭುಜಸ್ಕಂಧ, ಸ್ಕಂಧಮಾಲಾ, ಕಂಠಿ, ಮುಕ್ತಾಹಾರ, ಯಜ್ಞೋಪವೀತ, ಕಟಕ, ಕೇಯೂರ, ಅಂಗುಲೀಕ, ವನಮಾಲಾ, ಕಟಿಸೂತ್ರ, ಊರುದಾಮ, ಪಾದ ಜಾಲಕ, ನೂಪುರ ಇತ್ಯಾದಿ ಆಭರಣಗಳಿಂದ ಅಲಂಕೃತನಾಗಿ ಸುಂದರನಾಗಿದ್ಧಾನೆ. ಚಕ್ರದ ಪಟ್ಟಿಯನ್ನು ಎಂಟು ದಳಗಳುಳ್ಳ ಪದ್ಮದ ಅಲಂಕರಣದಿಂದ ಕೆತ್ತಲಾಗಿದೆ. ಚಕ್ರವು ಸರಿಯಾಗಿ ೩೬೦ ಡಿಗ್ರಿಗಳ ವೃತ್ತವನ್ನು ಹೊಂದಿಲ್ಲದಿದ್ದರೂ ವೃತ್ತದ ಪರಿಪೂರ್ಣತೆಯನ್ನು ನಮಗಾಗಿಸುತ್ತದೆ. ಉತ್ತರೀಯದ ಎರಡು ಭಾಗಗಳನ್ನು ರೆಕ್ಕೆಗಳಂತೆ ನಾವು ಪಾದಗಳ ಬಳಿಯಲ್ಲಿ ಕಾಣಬಹುದಾಗಿದೆ. ಶಿಲ್ಪದ ದೃಷ್ಟಿಯಿಂದ ಹೇಳುವುದಾದರೆ ಇದೂ ಸಹ ವಿಜಯನಗರ – ಮೈಸೂರು ಅರಸರ ಶೈಲಿಯನ್ನು ಬಿಂಬಿಸುತ್ತದೆ. ಇದು ಸುದರ್ಶನನಾರಸಿಂಹ ಎಂದು ಹೇಳು, ನಮಗೆ ಮತ್ತೊಂದು ಮುಖದ ವಿವರಗಳು ಅವಶ್ಯಕವಾಗಿದ್ದು, ಅದು ಸಾಧ್ಯವಿಲ್ಲದ್ದರೀಮದ ಸುದರ್ಶನನಾರಸಿಂಹ ಎಂದು ಹೇಳಲು ಬರುವುದಿಲ್ಲ. ಸಂಪ್ರದಾಯಗಳ ಪ್ರಕಾರ ಸುದರ್ಶನ ಚಕ್ರವನ್ನು ಸುದರ್ಶನ ಆಳ್ವಾರ ಎಂದು ಕರೆಯಲಾಗುವುದರಿಂದ ಈ ಗುಡಿಯನ್ನು ಸುದರ್ಶನಾಳ್ವಾರ ಸನ್ನಿಧಿ ಎಂದು ಕರೆಯಲಾಗುತ್ತದೆ. ಶಾಸ್ತ್ರಗ್ರಂಥಗಳ ಪ್ರಕಾರ ಅಭಿಚಾರಿಕ ಕೃತ್ಯಗಳು (ಮಂತ್ರ -ಮಾಟ) ಇತ್ಯಾದಿಗಳ ನಿವಾರಣೆಗಾಗಿ ಸುದರ್ಶನನ ಪೂಜೆಯನ್ನು ಮಾಡಲಾಗುತ್ತದೆ.

ಸುದರ್ಶನ ಸನ್ನಿಧಿಯ ಪಕ್ಕದಲ್ಲಿ ಮತ್ತೊಂದು ಚಿಕ್ಕ ಗುಡಿಯಲ್ಲಿ ನಮಗೆ ಭಕ್ತಾಂಜನೆಯ ವಿಗ್ರಹವು ಕಂಡು ಬರುತ್ತದೆ. ಆಂಜನೇಯನು ಕೈಮುಗಿದು ಬಾಲವನ್ನು ತನ್ನ ತಲೆಯ ಮೇಲ್ಭಾಗದಲ್ಲಿ ಸುರುಳಿ ಮಾಡಿಕೊಂಡಿರುವಂತೆ ಇಲ್ಲಿ ವಿಗ್ರಹವನ್ನು ಖಂಡರಿಸಲಾಗಿದೆ. ಈ ರೀತಿ ಕೈಮುಗಿದ ನಿಂತಿರುವ ಹನುಮಂತನ ಭಂಗಿಯನ್ನು ಭಕ್ತಾಂಜನೇಯ ರೂಪ ಎಂದು ಗುರುತಿಸಲಾಗಿದೆ. ಹನುಮಂತನು ದೊಡ್ಡದಾದ ಕುಂಡಲಗಳಿಂದ ಅಲಂಕೃತನಾಗಿದ್ದು, ತುಳಸೀಮಣಿಗಳನ್ನು ಕತ್ತಿನಲ್ಲಿ ಕಾಣಬಹುದಾಗಿದೆ. ಈ ರೂಪವು ಬ್ರಹ್ಮಚಾರಿಯ ರೂಪದಲ್ಲಿದ್ದು, ಈಗಾಗಲೇ ಹೇಳಿದಂತೆ ಶ್ರೀವೈಷ್ಣವ ಸಂಪ್ರದಾಯದ ಪ್ರಕಾರ ಹನುಮಂತನನ್ನು ಶಿರಿಯ ತಿರುವಡಿ ಅಥವಾ ದೇವರ ಎಡಭಾಗದ ಪಾದ ಎಂದು ನಂಬಲಾಗಿದೆ. ಮಾಧ್ವ ಸಂಪ್ರದಾಯದಲ್ಲಿ ಹನುಮಂತನನ್ನು ಮುಖ್ಯಪ್ರಾಣ ಎಂದು ಸಂಭೋಧಿಸಲಾಗುತ್ತದೆ. ಹನುಮಂತನ ಮೇಲ್ಭಾಗದಲ್ಲಿ ಕೀರ್ತಿಮುಖವನ್ನು ನಾವು ಕಾಣಬಹುದಾಗಿದ್ದು, ವಿಗ್ರಹ ಲಕ್ಷಣಗಳನ್ನು ನೋಡಿದರೆ ಇತ್ತೀಚಿನದು ಎನ್ನಿಸುತ್ತದೆ.

ದೇವಾಲಯದ ವಾಯುವ್ಯಮೂಲೆಯಲ್ಲಿ ಶ್ರೀಸೌಮ್ಯನಾಯಕಿ ಅಮ್ಮನ ಗುಡಿಯು ಕಂಡುಬರುತ್ತದೆ. ಹೊಯ್ಸಳರ ಕಾಲಕ್ಕೆ ಪ್ರತ್ಯೇಕ ಅಮ್ಮನವರ ಗುಡಿಯನ್ನು ಕಟ್ಟಿಸುವುದು ಆಗ ತಾನೆ ಅರಂಭವಾಗುತ್ತಿದ್ದ ಒಂದು ಸಂಗತಿಯಾಗಿತ್ತು. ಶ್ರೀರಾಮಾನುಜಾಚಾರ್ಯರ ಸಂಪ್ರದಾಯದ ಪ್ರಕಾರ ಶ್ರೀ ಅಥವಾ ಮಹಾಲಕ್ಷ್ಮೀಗೆ ಒಂದು ಪ್ರತ್ಯೇಕವಾದ ಆಲಯವನ್ನು ಪ್ರಧಾನ ದೇವಾಲಯದ ಒಳಗೆ ಕಟ್ಟುವುದು ಆರಂಭವಾಯಿತು. ಏಕೆಂದರೆ, ಶ್ರೀವೈಷ್ಣವ ಧರ್ಮದ ಪ್ರಕಾರ ಶ್ರೀ ಅಥವಾ ಮಹಾಲಕ್ಷ್ಮೀಗೆ ವಿಷ್ಣುವಿಗೆ ಸಮಾನವಾದ ಸ್ಥಾನವನ್ನು ನೀಡಲಾಗಿದೆ. ಆಗಮ ಶಾಸ್ತ್ರಗಳ ಪ್ರಕಾರ ನಾರಾಯಣನ ವಕ್ಷಸ್ಥಳದಲ್ಲಿರುವ ಲಕ್ಷ್ಮಿಗೆ ಯೋಗಲಕ್ಷ್ಮಿ ಎಂದೂ, ಪಾರ್ಶ್ವದಲ್ಲಿ ನಿಂತಿರುವ ಲಕ್ಷ್ಮಿಗೆ ಭೋಗಲಕ್ಷ್ಮಿ ಎಂದೂ, ಹಾಗೂ ಪ್ರತ್ಯೇಕ ಆಲಯ ಅಥವಾ ಗುಡಿಯಲ್ಲಿ ಇರುವ ಲಕ್ಷ್ಮಿಗೆ ವೀರಲಕ್ಷ್ಮಿ ಎಂದು ಕರೆಯಲಾಗುತ್ತದೆ.೧೬. ಆ ದೃಷ್ಟಿಯಲ್ಲಿ ಸೌಮ್ಯನಾಯಕಿ ದೇವಿಯವರು ವೀರಲಕ್ಷ್ಮೀ ಸ್ವರೂಪವಾಗಿದ್ದು, ನಾಗಮಂಗಲದಲ್ಲಿ ಕೇಶವನ ನಾಯಕಿಯಾಗಿ ಸೌಮ್ಯನಾಯಕಿ ಎಂದು ಕರೆಯಲಾಗಿದೆ. ಇಲ್ಲಿ ಸೌಮ್ಯನಾಯಕಿಯು ಪದ್ಮಾಸನದಲ್ಲಿ ಕುಳಿತಿರುವ ಭಂಗಿಯಲ್ಲಿದ್ದು, ಮೇಲಿನ ಎರಡು ಕೈಗಳಲ್ಲಿ ಪದ್ಮಗಳನ್ನು ಹಿಡಿದಿದ್ದು, ಕೆಳಗಿನ ಬಲಗೈಯಲ್ಲಿ ಆಭಯಮುದ್ರೆ ಹಾಗೂ ಎಡ ಕೈಗಳಲ್ಲಿ  ವರದ ಮುದ್ದೆಯಿಂದ ಕೂಡಿದ್ಧಾಳೆ (ಚಿತ್ರ ೧೭). ಇದು ಸ್ಷಷ್ಟವಾಗಿ ವೀರಲಕ್ಷ್ಮೀ ಪ್ರತಿಮಾಲಕ್ಷಣಗಳಾಗಿದ್ದು, ಈ ಮೇಲೆ ನಾವು ಹೇಳಿದ ವಿಷಯಗಳನ್ನು ಸಮರ್ಥಿಸುತ್ತದೆ.೧೭ ಈ ವಿಗ್ರಹದ ಆಭರಣಗಳು ಹಾಗೂ ಮುಖದ ಲಕ್ಷಣಗಳನ್ನು ಗಮನಿಸಿದರೆ, ಇದು ವಿಜಯನಗರದ ಕಲಾಶೈಲಿಗೆ ಹೊಂದಾಣಿಕೆಯಾಗುತ್ತದೆ.

ಈ ಗುಡಿಯ ಪಕ್ಕದಲ್ಲಿಯೇ ಮತ್ತೊಂದು ಚಿಕ್ಕಗುಡಿಯ ರಚನೆಯಿದ್ದು, ಇಲ್ಲಿ ಸ್ವತಂತ್ರವಾದ ಅಂಡಾಳ್ ಅಮ್ಮನವರ ಶಿಲ್ಪವೊಂದಿದೆ (ಚಿತ್ರ ೧೮). ಅಂಡಾಳ್, ಒಬ್ಬ ಸ್ತ್ರೀ ಆಳ್ವಾರಳಾಗಿದ್ದು,೧೮ ಪೆರಿಯಾಳ್ವಾರ‍್ ಅವರ ಮಗಳು. ಸಾಂಪ್ರದಾಯಿಕ ಕಥೆಗಳ ಪ್ರಕಾರ ಅವಳು ಅಯೋನಿಜೆ ಅಂದರೆ ತುಲಸೀವನದಲ್ಲಿ ಶಿಶುರೂಪದಲ್ಲಿ ಸಿಕ್ಕಿದ್ದು, ಶ್ರೀಮನ್ನಾರಾಯಣನ ಪತ್ನಿಯಾದ ನೀಲಾದೇವಿಯ ಅವತಾರ. ಹಾಗಾಗಿ ಈ ಶಿಲ್ಪದಲ್ಲಿ ಅಂಡಾಳ್ ಳ ಸಾಮಾನ್ಯ ರೂಪವಾದ ಕೊಂಡೆ ಎಂದು ಕರೆಯಲ್ಪಡುವ ಕೇಶಶೈಲಿಯಲ್ಲಿ ಇಲ್ಲದೆ, ನೀಲಾದೇವಿಯ ಕಿರೀಟದಿಂದ ಅಲಂಕೃತಳಾಗಿದ್ಧಾಳೆ. ಉಳಿದಂತೆ ದ್ವಿಭುಜದಿಂದ ಕೂಡಿರುವ ಈ ಶಿಲ್ಪದಲ್ಲಿ ಬಲಗೈ ಪದ್ಮವನ್ನು ಹಿಡಿದಿದ್ದು, ಎಡಗೈ ಸುಮ್ಮನೆ ಇಳಿಬಿದ್ದ, (ಡೋಲಹಸ್ತ) ಭಂಗಿಯಲ್ಲಿದೆ. ಅಂಡಾಳ್ ಕೇಶವಿನ್ಯಾಸ ವಿಭಿನ್ನವಾಗಿದ್ದು, ಇಲ್ಲಿ ಕಿರೀಟವನ್ನು ಧರಿಸಿರುವುದು ಗಮನಿಸಬೇಕಾದ ಅಂಶವಾಗಿದೆ. ಅಂಡಾಳ ಶಿಲ್ಪವು ಪೀಠದ ಮೇಲೆ ತ್ರಿಭಂಗಿಯಿಂದ ಕೂಡಿದ್ದು,ಕಿರೀಟ, ಕುಂಡಲ, ಕಂಠಿ, ಸ್ಕಂಧಮಾಲೆ, ಛನ್ನವೀರ, ಕಟಕ, ಅಂಗದ, ಕೇಯೂರ, ಅಂಗುಲೀಯಕ, ವಲಯ ಇತ್ಯಾದಿ ಆಭರಣಗಳಿಂದ ಅಲಂಕೃತವಾಗಿದ್ದು, ವಿಜಯನಗರ ಕಲಾಶೈಲಿಯಲ್ಲಿ ಕೆತ್ತಲ್ಪಟ್ಟಿದೆ. ವಿಜಯನಗರ ಕಾಲದ ಶ್ರೀವೈಷ್ಣವ ಸಂಪ್ರದಾಯದ ಪಾರಮ್ಯತೆಯನ್ನು ಈ ಶಿಲ್ಪವು ಸೂಚಿಸುತ್ತದೆ.

ಇದೇ ಕೇಶವ ದೇವಾಲಯದಲ್ಲಿರುವ ಮತ್ತೊಂದು ವಿಭಿನ್ನ ಶಿಲ್ಪವೆಂದು ಮಹಾಲಕ್ಷ್ಮಿಯ ಸ್ವರೂಪದಲ್ಲಿಯೇ ಇರುವ ಮಡಪಳ್ಳಿ ನಾಚ್ಚೀಯಾರ‍್ ಅಥವಾ ಅಡುಗೆ ಮನೆಯ ಅಮ್ಮನವರ ವಿಗ್ರಹ. ಶ್ರೀವೈಷ್ಣವ ಸಂಪ್ರದಾಯದ ಪ್ರಕಾರ ದೇವಾಲಯದ ಅಡುಗೆಮನೆಯಲ್ಲಿ (ಪಾಕಶಾಲೆ) ಮಹಾಲಕ್ಷ್ಮಿಯನ್ನು ಪೂಜಿಸಲಾಗುತ್ತದೆ. ಆ ದೇವಿಗೆ ಚತುರ್ಭುಜಗಳಿದ್ದು, ಮೇಲಿನ ಎರಡು ಕೈಗಳಲ್ಲಿ ಅರಳಿದ ತಾವರೆ ಹಾಗೂ ಕೆಳಗಿನ ಎರಡು ಕೈಗಳಲ್ಲಿ ಅಭಯ ಮತ್ತು ವರದ ಹಸ್ತಗಳನ್ನು ತೋರಿಸಲಾಗುತ್ತದೆ. ಸಾಮಾನ್ಯವಾಗಿ ದೇವಾಲಯದ ಪಾಕಶಾಲೆಗೆ ಪ್ರವೇಶವಿಲ್ಲದಿರುವುದರಿಂದ ಈ ಶಿಲ್ಪಗಳು ಬೆಳಕಿಗೆ ಬರುವುದು ಅಪರೂಪ. ಈ ದೇವಾಲಯದ ಮಡಪಳ್ಳಿ ನಾಚ್ಚಿಯಾರ‍್ ಶಿಲ್ಪವು ಅತ್ಯಂತ ಸುಂದರವಾದ ಶಿಲ್ಪವಾಗಿದ್ದು, ಈ ರೀತಿಯ ಶಿಲ್ಪಗಳಿಗೆ ಉತ್ತಮ ಉದಾಹರಣೆಯಾಗಿದೆ. ಪ್ರಭಾವಳಿಯ ವಿನ್ಯಾಸ ಹಾಗು ಅದರ ಮಧ್ಯಭಾಗದಲ್ಲಿರುವ ಕೀರ್ತಿಮುಖದ ಕೆತ್ತನೆ ಮನಸೆಳೆಯುತ್ತದೆ.

ಇದಲ್ಲದೇ ಇದೇ ದೇವಾಲಯದ ಸ್ತಂಭಗಳ ಮೇಲಿರುವ ಅನೇಕ ಉಬ್ಬುಶಿಲ್ಪಗಳು ನಮ್ಮ ಗಮನ ಸೆಳೆದರೂ, ಅವುಗಳೆಲ್ಲದವ ಉಲ್ಲೇಖ ಹಾಗೂ ಛಾಯಾಚಿತ್ರಗಳ ಸಹಿತ ನಿರೂಪಣೆ ಪ್ರಸ್ತುತ ಲೇಖನದ ಗಾತ್ರವನ್ನು ಹಿಗ್ಗಿಸುವುದರಿಂದ ಪ್ರಮುಖ ಹಾಗೂ ಗಮನಾರ್ಹ ಶಿಲ್ಪಗಳನ್ನು ಮಾತ್ರ ನಿರೂಪಿಸಲಾಗಿದೆ.

ಸೌಮ್ಯನಾಯಕಿ ಅಮ್ಮನವರ ಗುಡಿಯ ಮುಂದಿನ ಅಂಕಣದಲ್ಲಿರುವ ಸ್ತಂಭಗಳ ಮೇಲೆ ಅನೇಕ ಉಬ್ಬುಶಿಲ್ಪಗಳನ್ನು ನಾವು ಗಮನಿಸಬಹುದು. ಅವುಗಳಲ್ಲಿ ಪೌರಾಣಿಕ ವಿಚಿತ್ರ ಪ್ರಾಣಿಗಳ ಶಿಲ್ಪಗಳು ನಮ್ಮ ಗಮನ ಸೆಳೆಯುತ್ತವೆ.

ಸೌಮ್ಯಕೇಶವ ದೇವಾಲಯದ ಲೋಹಶಿಲ್ಪಗಳು

ದೇವಾಲಯದ ಸೌಮ್ಯಕೇಶವರ ಉತ್ಸವಮೂರ್ತಿ ಹಾಗೂ ಜೊತೆಯಲ್ಲಿರುವ ಶ್ರೀದೇವಿ ಮತ್ತು ಭೂದೇವಿಯ ಉತ್ಸವ ಮೂರ್ತಿಗಳು ಪ್ರಮುಖ ಹಾಗೂ ಗಾತ್ರದಲ್ಲಿ ದೊಡ್ಡದಾದ ಶಿಲ್ಪಗಳಾಗಿವೆ. ಗಮನಾರ್ಹವಿಚಾರವೆಂದರೆ, ಕೇಶವನ ಉತ್ಸವ ಮೂರ್ತಿಯು ಅದೇ ರೂಪದಲ್ಲಿ ಇಲ್ಲದೇ, ಕಟಿಹಸ್ತನಾಗಿ, ವರಪ್ರದನಾಗಿರುವುದು ಕಂಡುಬರುತ್ತದೆ. ಮೇಲಿನ ಎರಡು ಭುಜಗಳಲ್ಲಿ ಶಂಖ, ಚಕ್ರಗಳನ್ನು ಧರಿಸಿದ್ದರೂ, ಕೆಳಬಲಗೈ ವರದ ಮುದ್ರೆಯಲ್ಲಿದ್ದು, ಎಡಗೈ ಕಟಿಹಸ್ತಮುದ್ರೆಯಲ್ಲಿದೆ. ಆದರೆ ಶಾಸ್ತ್ರಗಳ ಪ್ರಕಾರ ಉತ್ಸವಮೂರ್ತಿಯು ಮೂಲಮೂರ್ತಿಯ ರೂಪದಲ್ಲಿರಬೇಕು ಅಥವಾ ಸಾಮಾನ್ಯ ವಿಷ್ಣುರೂಪವಾದ ಶಂಖ, ಚಕ್ರ, ಗದೇ ಅಭಯಹಸ್ತಗಳಿಂದ ಕೂಡಿರಬೇಕು.೧೯ ಆದರೆ ಈ ವಿಗ್ರಹವು ತಿರುಪತಿಯ ವೆಂಕಟೇಶ್ವರನ ಭಂಗಿಯಲ್ಲಿದ್ದು ನಮಗೆ ಅನೇಕ ಪ್ರಶ್ನೆಗಳನ್ನು ತಂದೊಡ್ಡುತ್ತದೆ. ಮೊದಲನೆಯದಾಗಿ ಉತ್ಸವ ಮೂರ್ತಿಯ ಪ್ರಾಚೀನತೆ ಮತ್ತು ಎರಡನೆಯದಾಗಿ ಕೇಶವ ಅಥವಾ ವಿಷ್ಣುರೂಪದ ಬದಲಾಗಿ ಏಕೆ ವೆಂಕಟೇಶ್ವರ ರೂಪ ನೀಡಲಾಗಿದೆ ಎಂಬುದು. ಈ ವಿಗ್ರಹದ ಜೊತೆಗೆ ಅಕ್ಕಪಕ್ಕದಲ್ಲಿ ಶ್ರೀದೇವಿ ಮತ್ತು ಭೂದೇವಿಯರ ವಿಗ್ರಹಗಳು ಇವೆ. ಈ ಶ್ರೀದೇವಿ ಮತ್ತು ಭೂದೇವಿಯರ ವಿಗ್ರಹಗಳನ್ನು ಹಾಗು ಅವುಗಳ ಲೋಹದ ಬಣ್ಣಗಳನ್ನು ಗಮನಿಸಿದಾಗ ಇವು ನೂತನವಾಗಿ ತಯಾರುಗೊಂಡ ದೇವಿಯರು ಎಂದು ನಿಸ್ಸಂದೇಹವಾಗಿ ಹೇಳಬಹುದು. ಅದರಂತೆಯೇ ಈ ಎರಡೂ ದೇವಿಯರ ವಿಗ್ರಹಕ್ಕಿಂತ ವೆಂಕಟೇಶ್ವರ ಉತ್ಸವಮೂರ್ತಿಯು ಸ್ವಲ್ಪ ಹಳೆಯದಾಗಿರಬಹುದುದೇ ಹೊರತು ಹೊಯ್ಸಳರ ಕಾಲದ ವಿಗ್ರಹವಲ್ಲ ಎಂದು ಸ್ಪಷ್ಟವಾಗುತ್ತದೆ. ಉಳಿದಂತೆ ಸೌಮ್ಯನಾಯಕಿಯ ಕಲ್ಯಾಣೋತ್ಸವ ವಿಗ್ರಹವು ಸಹ ಮೂಲಮೂರ್ತಿಯ ಬಲಭಾಗದಲ್ಲಿ ಕಂಡುಬರುತ್ತದೆ. ಮೂಲಮೂರ್ತಿಯ ಬಲಭಾಗದಲ್ಲಿ ಸೀತಾ, ರಾಮ, ಲಕ್ಷ್ಮಣರ ಲೋಹವಿಗ್ರಹಗಳಿದ್ದು, ಕೋದಂಡರಾಮಸ್ವಾಮಿ ದೇವಾಲಯದ ಉತ್ಸವಮೂರ್ತಿಗಳಾಗಿವೆ. ಕಾಲಾನುಕ್ರಮದಲ್ಲಿ ನೋಡುವುದಾದರೇ, ಇವು ಸೌಮ್ಯ ಕೇಶವ ದೇವರ ಉತ್ಸವಮೂರ್ತಿಗಳಿಗಿಂತ ಪ್ರಾಚೀನ ಎನ್ನುವುದು ಸ್ಷಷ್ಟವಾಗುತ್ತದೆ. ಈ ಮೂರು ವಿಗ್ರಹಗಳ ಪಕ್ಕದಲ್ಲಿಯೇ ಮೂರು ಭಕ್ತ ವಿಗ್ರಹಗಳು ಕಂಡುಬರುತ್ತದೆ. ಮೊದಲನೆಯದು ನಮ್ಮಾಳ್ವಾರ‍್ ಉತ್ಸವಮೂರ್ತಿ, ಎರಡನೆಯದು ಶ್ರೀ ರಾಮಾನುಜರ ಉತ್ಸವಮೂರ್ತಿ ಹಾಗು ಮೂರನೆಯದು ಪಿಳ್ಳೈ ಲೋಕಾಚಾರ್ಯರ ಮೂರ್ತಿ, ನಮ್ಮಾಳ್ವಾರ ಮತ್ತು ರಾಮಾನುಜರ ವಿಗ್ರಹಗಳ ತಾಮ್ರಛಾಯೆಯು ಅವುಗಳ ಪ್ರಾಚೀನತೆಯನ್ನು ಹೇಳುತ್ತವೆ. ಆದರೆ ಪಿಳ್ಳೈ ಲೋಕಾಚಾರ್ಯರ ವಿಗ್ರಹವು ಇತ್ತೀಚಿಗಷ್ಟೆ ತಯಾರು ಮಾಡಿದ ವಿಗ್ರಹದಂತೆ ಕಂಡುಬರುತ್ತದೆ. ಮೂಲಮೂರ್ತಿಯ ಎಡಭಾಗದ ಪಾದದ ಬಳಿ ಚತುರ್ಭುಜ ವೇಣುಗೋಪಾಲನ ಚಿಕ್ಕಮೂರ್ತಿಯಿದ್ದು ನಮ್ಮ ಗಮನವನ್ನು ಸೆಳೆಯುತ್ತದೆ. ವಿಜಯನಗರಕಾಲದ ಲೋಹಮೂರ್ತಿಗಳ ಲಕ್ಷಣವನ್ನು ಅದು ಹೊಂದಿದ್ದು, ಕೃಷ್ಣಜನ್ಮಾಷ್ಠಮಿಯ ಸಂದರ್ಭದಲ್ಲಿ ವಿಶೇಷ ಪೂಜೆಗೆ ಪಾತ್ರವಾಗಿದೆ.

ನಾಗಮಂಗಲವು ಲೋಹವಿಗ್ರಹಗಳ ತಯಾರಿಕೆಯಲ್ಲಿ ವಿಶಿಷ್ಟಸ್ಥಾನವನ್ನು ಪಡೆದಿದ್ದು, ಈ ದೇವಾಲಯದ ಮೇಲ್ಕಂಡ ಉಲ್ಲೇಖಿತ ನೂತನ ವಿಗ್ರಹಗಳು ಇಲ್ಲಿನ ಶಿಲ್ಪಿಗಳಿಂದಲೇ ಎರಕಮಾಡಿದ್ದಿರಬಹುದಾಗಿದೆ. ಇಂದಿಗೂ ಕೂಡ ಇಲ್ಲಿ ಲೋಹದ ವಿಗ್ರಹಗಳನ್ನು ತಯಾರು ಮಾಡುವ ಶಿಲ್ಪಿಗಳು ಕಂಡುಬರುತ್ತಾರೆ.

ಗಾರೆಶಿಲ್ಪಿಗಳು

ಸೌಮ್ಯಕೇಶವ ದೇವಾಲಯದ ಗಚ್ಚುಗಾರೆಯ ಶಿಲ್ಪಗಳು ನಮ್ಮ ಮನಸ್ಸನ್ನು ಸೂರೆಗೊಳ್ಳುತ್ತವಾದರೂ, ಈ ಲೇಖನ ಸಿದ್ದಪಡಿಸುವ ಕಾಲಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣೆಯಿಂದ ಸಂರಕ್ಷಣಾ ಕಾರ್ಯವು ನಡೆಯುತ್ತಿದ್ದು, ಗಾರೆಶಿಲ್ಪಗಳನ್ನು ಪುನರ್ನಿರ್ಮಾಣ ಮಾಡುತ್ತಿರುವುದರಿಂದ ನಮಗೆ ವಿವರಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ.

ಕಾಷ್ಠಶಿಲ್ಪಗಳು

ಸೌಮ್ಯಕೇಶವ ದೇವಾಲಯದ ಉತ್ಸವ ಸಂದರ್ಭಗಳಿಗಾಗಿ ನಿರ್ಮಿಸಲಾಗಿರುವ ವಾಹನಗಳನ್ನು ಮರದಲ್ಲಿ ನಿರ್ಮಿಸಲಾಗಿದ್ದು, ಇವು ಆಕರ್ಷಕವಾಗಿರುವುದರಿಂದ ನಮ್ಮ ಗಮನ ಸೆಳೆಯುತ್ತದೆ. ಇದಕ್ಕೆ ಉತ್ತಮ ಉದಾಹರಣೆಯೆಂದರೆ, ದೇವಾಲಯದ ಪಾತಾಳಂಕಣದಲ್ಲಿರುವ ಗರುಡನ ಶಿಲ್ಪ. ಈ ಶಿಲ್ಪದ ಕೆತ್ತನೆಯು ನೈಜವಾಗಿ ಮೂಡಿಬಂದಿದ್ದು, ಶಾಸ್ತ್ರಕ್ಕೆ ಅನುಗುಣವಾಗಿ ಸರ್ಪಾಭರಣ, ಸರ್ಪಕುಂಡಲಗಳನ್ನು ಕೆತ್ತಲಾಗಿದೆ. ಗರುಡಾಸನ ಎಂಬ ಭಂಗಿಯಲ್ಲಿ ಕುಳಿತಿದ್ಧಾನೆ.