ಕರ್ನಾಟಕದ ಇತಿಹಾಸದಲ್ಲಿ ನಾಗಮಂಗಲ ಗುರುತಿಸಿಕೊಳ್ಳುವುದು ಸಾಮಾನ್ಯವಾಗಿ ಇಲ್ಲಿಯ ಸ್ಮಾರಕಗಳಿಂದ. ಪ್ರಾಚೀನ ಕಾಲದಿಂದ ಆಧುನಿಕ ಕಾಲದವರೆಗೆ ವಿವಿಧ ಕಾಲಘಟ್ಟದಲ್ಲಿ ನಿರ್ಮಿಸಲಾದ ಅನೇಕ ಸ್ಮಾರಕಗಳು ಇಲ್ಲಿವೆ. ಇವು ಈ ಭಾಗವನ್ನಾಳಿದ ವಿವಿಧ ಮನೆತನಗಳ ಪ್ರತಿಬಿಂಬವಾಗಿವೆ. ಇವುಗಳ ಹಿಂದೆ ಅವುಗಳದ್ದೇ ಆದ ರೋಚಕ ಇತಿಹಾಸವಿದೆ. ಭವಿಷ್ಯಕ್ಕೆ ಪಾಠ ಹೇಳುವ ಸ್ಮಾರಕಗಳನ್ನ ನಿರ್ಮಿಸುವುದು ಒಂದು ಪುಣ್ಯಕಾರ್ಯ. ಸಂಸ್ಕೃತಿಯನ್ನು ಇತಿಹಾಸದಲ್ಲಿ ಶಾಶ್ವತವಾಗಿ ದಾಖಲಿಸುವ ದೃಷ್ಟಿಯಿಂದ, ರಾಜರುಗಳು ಅಥವಾ ಅವರ ಸಾಮಂತರುಗಳು ಸ್ಮಾರಕಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ಇಂತಹ ಸ್ಮಾರಕಗಳು ಅಂದಿನ ವೈಭವದ ಬದುಕಿಗೆ ಹಿಡಿದ ಕನ್ನಡಿಗಳಾಗಿವೆ. ಈ ಪರಿಸರದ ಸಮಾಜ, ಸಂಸ್ಕೃತಿ, ರಾಜಕೀಯ, ಆರ್ಥಿಕ ಮತ್ತಿತರ ವಿಚಾರಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಅಲ್ಲದೆ ವಿವಿಧ ಕಾಲಘಟ್ಟದಲ್ಲಿ ಆದ ವಾಸ್ತು ರಚನೆ ಮತ್ತು ವಿನ್ಯಾಸವನ್ನು ಪರಿಚಯಿಸುವುದರದೊಂದಿಗೆ ಸ್ಥಳೀಯ ಸಂಪನ್ಮೂಲಗಳ ಸದ್ಭಳಕೆಯನ್ನು ಪರಿಚಯಿಸುತ್ತವೆ.

ಲೇಖನದ ಶೀರ್ಷಿಕೆ ಹೇಳುವಂತೆ ಇದು ನಾಗಮಂಗಲದ ರಕ್ಷಣಾ ಸ್ಮಾರಕಗಳನ್ನು ಮತ್ತು ಅವುಗಳ ವಾಸ್ತು ವೈಶಿಷ್ಟ್ಯತೆಯನ್ನು ಕುರಿತ ಲೇಖನ. ವಾಸ್ತವಾಗಿ ಇಲ್ಲಿ ರಕ್ಷಣೆ ಎಂಬುದು ಕೋಟೆಯಾಗಿದೆ. ಕೋಟೆ ಮುಖ್ಯವಾಗಿ ರಾಜ್ಯ ಮತ್ತು ರಾಜನಿಗೆ ರಕ್ಷಣೆ ಒದಗಿಸುವ ಸ್ಥಳವಾಗಿದೆ. ಯುದ್ಧ ತಂತ್ರ ಮತ್ತು ರಕ್ಷಣಾ ದೃಷ್ಟಿಯಿಂದ ನಿರ್ಮಿಸಿರುವ ಇಂತಹ ಸ್ಮಾರಕಗಳು ಅಂದಿನ ಮಾನವನ ಜೀವನ ವಿಧಾನಕ್ಕೆ ಸಾಕ್ಷಿಯಾಗಿದೆ. ಸ್ಥಳೀಯ ಇತಿಹಾಸದ ಪುನರ‍್ ರಚನೆಯ ಪ್ರಮುಖ ಸಾಮಗ್ರಿಗಳಾಗಿರುವ ರಕ್ಷಣಾ ಸ್ಮಾರಕಗಳು ತಮ್ಮದೇ ಆದ ಪ್ರಾಮುಖ್ಯತೆ ಮತ್ತು ಮಹತ್ವಗಳ ಬಗ್ಗೆ ಬರೆಯುವಂತೆ ಸ್ಪೂರ್ತಿಯನ್ನು ನೀಡುವ ಮೂಲಕ ಇತಿಹಾಸದ ವೀರಗಾಥೆಯನ್ನು ನೆನಪಿಸುತ್ತವೆ.

ನಾಗಮಂಗಲಕ್ಕೆ ಹಿಂದೆ “ಫಣಿಪುರ”, “ಮಣಿಪುರ”, “ನಾಗಪುರ” ಮುಂತಾದ ಹೆಸರುಗಳಿರುವುದು ಕಂಡು ಬರುತ್ತದೆ. ವೈದನ ಸಾಹಿತ್ಯದಲ್ಲಿ ಕೋಟೆಗಳಿಗೆ “ಪುರ” ಅಥವಾ “ಮಹಾಪುರ” ಎಂದರೆ ಕರೆಯಲಾಗಿದೆ. ಈ ಹಿನ್ನೆಲೆಯಲ್ಲಿ ಫಣಿಪುರ, ಮಣಿಪುರ, ನಾಗಪುರ ಎಂಬ ಹೆಸರುಗಳಲ್ಲಿ “ಪುರ” ಎಂಬ ಪದ ಬಳಕೆಯಾಗಿರುವುದನ್ನು ಗಮನಿಸಿದರೆ, ನಾಗಮಂಗಲದಲ್ಲಿ ಬಹು ಪ್ರಾಚೀನ ಕಾಲದಿಂದಲೇ ಕೋಟೆ ಇತ್ತು ಎಂಬುದು ಸ್ಪಷ್ಟವಾಗುತ್ತದೆ. ಪ್ರಾರಂಭದಲ್ಲಿ ತಾನು ವಾಸಿಸುವ ಪ್ರದೇಶದ ಸುತ್ತಲೂ ಮಣ್ಣಿನ ದಿಬ್ಬವನ್ನು ಏರಿಸುವುದು, ಆಳವಾದ ಕಂದಕವನ್ನು ತೋಡುವುದು, ನಂತರ ಇಟ್ಟಿಗೆ ಮತ್ತು ಕಲ್ಲುಗಳಿಂದ ತಡೆಗೋಡೆಗಳನ್ನು ನಿರ್ಮಿಸುವ ಮೂಲಕ ಪ್ರಾರಂಭವಾದ ರಕ್ಷಣಾ ವಾಸ್ತುಶಿಲ್ಪದಂತೆ ಇಲ್ಲಿಯ ರಕ್ಷಣಾ ವಾಸ್ತುಶಿಲ್ಪದ ಬೆಳವಣಿಗೆಯು ಸಹ ಕಾಲ-ಕ್ರಮೇಣ ಬದಲಾಗುತ್ತಾ ರಚನೆ ಮತ್ತು ಗಾತ್ರದಲ್ಲಿ ಬೆಳವಣಿಗೆಯಾಗಿ ವಿಕಸನ ಹೊಂದಿರುವುದನ್ನು ನಾವಿಲ್ಲಿ ಗುರುತಿಸಬಹುದಾಗಿದೆ. ಏಕೆಂದರೆ, ಒಂದು ಕಾಲದ ಬದಲಾವಣೆಯು ಮುಂದಿನ ಮತ್ತೊಂದರ ವಿಕಸನ ರೂಪವಾಗಿ ಪರಿವರ್ತನೆ ಪಡೆದಿರುವುದನ್ನು ಇತಿಹಾಸದ ಪುಟಗಳಲ್ಲಿ ಗುರುತಿಸುತ್ತಾ ಬಂದಿದ್ದೇವೆ. ವಿಕಾಸ ಅಥವಾ ಬದಲಾವಣೆ ಆಕಸ್ಮಿಕ ರೀತಿಯಲ್ಲಿ ಆಗದೇ ಓತಸ್ರೋತವಾದ ಒಂದು ಭವ್ಯ ದೇಶಿಯ ಮಾರ್ಗವನ್ನು ಪಡೆದಿರುತ್ತದೆ. ಅಂದರೆ ಒಂದು ನಿರಂತರತೆಯಿಂದ ಕೂಡಿದ ಪರಂಪರಾಗತ ವೈಶಿಷ್ಟ್ಯತೆಯನ್ನು ಮೈಗೂಡಿಸಿಕೊಂಡಿರುತ್ತದೆ. ಆ ಮೂಲಕ ಕಾಲಕಾಲಕ್ಕೆ ಬದಲಾವಣೆ ಪಡೆದ ಇಲ್ಲಿಯ ರಕ್ಷಣಾ ಸ್ಮಾರಕಗಳು ತನ್ಮೂಲಕ ವಿಕಾಸವನ್ನು ಪಡೆದು ಪ್ರಾದೇಶಿಕ ಕೋಟೆಗಳ ನಿರ್ಮಾಣದವರೆಗೆ ಸಾಗಿ ಬಂದಿರುವುದನ್ನು ನಾವಿಲ್ಲಿ ಗುರುತಿಸಬಹುದಾಗಿದೆ.

ಕೋಟೆಯ ಕಾಲಮಾನ ಹಾಗು ನಿರ್ಮಾಪಕರು

ಮೇಲೆ ಚರ್ಚಿಸಿದಂತೆ ನಾಗಮಂಗಲದಲ್ಲಿ ಪ್ರಾಚೀನ ಕಾಲದಿಂದಲೂ ಕೋಟೆ ಇದ್ದಿತ್ತಾದರೂ ನಮಗೆ ಸ್ಪಷ್ಪವಾದ ಸಾಹಿತ್ಯ ಆಕರಗಳು ಲಭ್ಯವಾಗುವುದು ಕ್ರಿ.ಶ. ೧೩ ಮತ್ತು ೧೪ನೆಯ ಶತಮಾನದಲ್ಲಿ. ಪುರಾತತ್ವ ಆಕರಗಳು ಕೂಡ ಇಲ್ಲಿಯ ಕೋಟೆಯ ವಾಸ್ತುವಿನ್ಯಾಸ ಹಾಗೂ ರಚನೆಯನ್ನು ವಿಜಯನಗರ ಮತ್ತ ವಿಜಯನಗರೋತ್ತರ ಕಾಲಕ್ಕೆ ಕೊಂಡೊಯ್ಯುತ್ತವೆ. ನಾಗಮಂಗಲದಲ್ಲಿ ಇಂದು ನಮಗೆ ನೋಡ ಸಿಗುವುದು ಎರಡು ಸುತ್ತಿನ ಕೋಟೆ ಮಾತ್ರ. ಒಳ ಸುತ್ತಿನ ಕೋಟೆಯನ್ನು ಲೋಹಿತ ವಂಶಕ್ಕೆ ಸೇರಿದ ಜೈವಿಡ ನಾಯಕನೆಂಬುವನು ಕ್ರಿ.ಶ.೧೨೭೦ ರಲ್ಲಿ ನಿರ್ಮಿಸಿದನೆಂದು ಹೇಳಲಾಗಿದೆ. ಜೈವಿಡ ನಾಯಕನು ನಾಗಮಂಗಲದ ಪ್ರಭುಗಳಲ್ಲೊಬ್ಬ. ಈತನು ವಿಜಯನಗರ ಆಶ್ರಯದಲ್ಲಿ ನಾಗಮಂಗಲವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಆಳ್ವಿಕೆ  ನಡೆಸುತ್ತಿದ್ದನು.

ಕೋಟೆಗಳ ನಿರ್ಮಾಣಕ್ಕೆ ವ್ಯಾಪಕವಾದ ಉತ್ತೇಜನ ಹಾಗು ಒತ್ತು ನೀಡಿದ್ದೇ ವಿಜಯನಗರದ ಅರಸರು. ಕರ್ನಾಟಕದಲ್ಲಿ ಇವರ ಕಾಲದಲ್ಲಿ ನಿರ್ಮಾಣವಾದಷ್ಟು ಕೋಟೆಗಳು ಬೇರೆ ಯಾರ ಕಾಲದಲ್ಲೂ ನಿರ್ಮಾಣವಾಗಿಲ್ಲ. ವಿಶೇಷವಾಗಿ ದಕ್ಷಿಣ ಕರ್ನಾಟಕದಲ್ಲಿ ಆಯಕಟ್ಟಿನ ಸ್ಥಳಗಳಲ್ಲಿ ಕೋಟೆಕೊತ್ತಲಗಳನ್ನು ನಿರ್ಮಿಸುವ ಮೂಲಕ ದಕ್ಷಿಣ ಭಾಗವನ್ನು ಸಮರ್ಥವಾಗಿಯೇ ಬಳಸಿಕೊಂಡರು. ಇವರ ಈ ಸಂಪ್ರದಾಯವನ್ನು ಇವರ ಸಾಮಂತರು ಹಾಗೂ ತರುವಾಯ ಬಂದ ಅರಸರು ಮುಂದುವರೆಸಿದರೆನ್ನಬಹುದು. ಹಾಗೆಯೇ ವಿಜಯನಗರ ರಾಜರಿಗೆ ಸಾಮಂತರಾಗಿ ನಾಗಮಂಗಲದಲ್ಲಿ ಆಳ್ವಿಕೆ ನಡೆಸುತ್ತಿದ್ದ ಲೋಹಿತ ವಂಶದವರು ಕೂಡ ಸಹಜವಾಗಿಯೇ ಇಲ್ಲಿ ಕೋಟೆ-ಕೊತ್ತಲಗಳ ನಿರ್ಮಾಣಕ್ಕೆ ಒತ್ತುಕೊಟ್ಟರು. ಇವರು ಕ್ರಿ.ಶ.೧೬ನೆಯ ಶತಮಾನದದ ಹೊತ್ತಿಗೆ ಅಧಿಕಾರ ಕಳೆದುಕೊಂಡ ಮೇಲೆ ನಾಗಮಂಗಲವು ಚನ್ನಪಟ್ಟಣದ ಪ್ರಭುಗಳು ಒಡೆತನಕ್ಕೆ ಒಳಪಟ್ಟಿತು. ಆಗ ಚನ್ನಪಟ್ಟಣವನ್ನು ಆಳುತ್ತಿದ್ದ ಜಗದೇವರಾಯನು ನಾಗಮಂಗಲದಲ್ಲಿ ಹೊರಕೋಟೆಯನ್ನು ಕ್ರಿ.ಶ.೧೫೭೮ರಲ್ಲಿ ನಿರ್ಮಿಸಿದನು.

ಕೋಟೆಯ ಪ್ರಕಾರ

ನಾಗಮಂಗಲದ ಕೋಟೆಯು ಒಂದು ಸ್ಥಳ ದುರ್ಗವಾಗಿದ್ದು, ಅಯತಾಕಾರವಾಗಿ ಎರಡು ಸುತ್ತುಗಳಲ್ಲಿ ನಿರ್ಮಿಸಲಾಗಿದೆ. ಆದರೆ ಹಿಂದೆ ಇದೊಂದು ವನದುರ್ಗ ಹಾಗೂ ಜಲದುರ್ಗವಾಗಿತ್ತೆಂದು ಸ್ಥಳೀಯರು ಅಭಿಪ್ರಾಯಪಡುತ್ತಾರೆ. ಇವರ ಹೇಳಿಕೆಗೆ ಪೂರಕವಾಗಿ ನಾಗಮಂಗಲದ ಇತಿಹಾಸವನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ಅವರ ಅಭಿಪ್ರಾಯಕ್ಕೆ ಪೂರಕವಾದ ಮೂರು ಮಾಹಿತಿಗಳು ದೊರೆಯುತ್ತವೆ. ಮೊದಲನೆಯದಾಗಿ ನಾಗಮಂಗಲ ಪ್ರದೇಶವು ದಂಡಕಾರಣ್ಯವಾಗಿತ್ತೆಂದು, ಅರಣ್ಯಪ್ರದೇಶವಾಗಿತ್ತೆಂದು, ಹಾಗು ಇಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಅಂದರೆ ಲಕ್ಷಾಂತರ ತಾಳೆಮರಗಳು ಇದ್ದವೆಂದು, ಇವುಗಳನ್ನು ಕ್ರಿ.ಶ. ೧೮೯೨ರಲ್ಲಿ ಪರಶುರಾಮ ಭಾವೆಯ ನೇತೃತ್ವದ ಮರಾಠ ಸೈನವು ನಾಗಮಂಗಲದ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಒಂದೂವರೆ ಲಕ್ಷ ತಾಳೆಮರಗಳನ್ನು ಕಡಿದು ಹಾಕಿದರೆಂದು ಅಭಿಪ್ರಯಪಡಲಾಗಿದೆ. ಈ ಹಿನ್ನೆಲೆಯಲ್ಲಿ ಹಿಂದ ನಾಗಮಂಗಲ ಕೋಟೆಯು ವನದುರ್ಗವಾಗಿತ್ತೆಂಬ ಅಭಿಪ್ರಾಯವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಇಂದು ನಾಗಮಂಗಲ ಪರಿಸರವನ್ನು ಗಮನಿಸಿದರೆ ಹಿಂದೆ ಇದೊಂದು ಅರಣ್ಯ ಪ್ರದೇಶವಾಗಿತ್ತೆಂದು ಊಹಿಸಲು ಸಾಧ್ಯವಾಗದ ರೀತಿಯಲ್ಲಿ ಇದೊಂದು ಬಯಲು ಪ್ರದೇಶವಾಗಿದೆ.

ನಾಗಮಂಗಲದ ಸುತ್ತಲೂ ಅಮ್ಮನಕೆರೆ, ಹಿರಿಯಕೆರೆ, ಸಿಂಗರಸನಕೆರೆ ಮತ್ತು ಸೂಳೆಕೆರೆಗಳೆಂಬ ನಾಲ್ಕು ಕೆರೆಗಳಿದ್ದು, ಇದೊಂದು ಜಲದುರ್ಗವಾಗಿತ್ತೆಂಬ ಹೇಳಿಕೆಯನ್ನು ಒಪ್ಪುವುದು ಕಷ್ಟ. ಕಾರಣ ಕೋಟೆಗೆ ಹೊಂದಿಕೊಂಡಂತೆ ಇರುವ ಹಿರಿಯಕೆರೆಯನ್ನು ಹೊರತುಪಡಿಸಿ ಉಳಿದ ಮೂರು ಕೆರೆಗಳು ಕೋಟೆಗೆ ದೂರದಲ್ಲಿದ್ದು, ಒಂದು ಕೆರೆಯಿಂದ ಮತ್ತೊಂದು ಕೆರೆಗೆ ತುಂಬಾ ಅಂತರವಿದೆ. ಅದರಲ್ಲೂ ಪೂರ್ವಭಾಗದಲ್ಲಿ ಯಾವುದೇ ಕೆರೆಗಳಿಲ್ಲ. (ಭೂಮಾಪನ ಇಲಾಖೆಯು ತಯಾರಿಸಿದ ನಾಗಮಂಗಲದ ಗ್ರಾಮದ ನಕ್ಷೆಯನ್ನು ಗಮನಿಸಿ) ಕೋಟೆಯ ಸುತ್ತ ಕಂದಕವನ್ನು ಏರ್ಪಡಿಸಿ ಹಿರಿಕೆರೆಯ ನೀರನ್ನು ಕಂದಕಕ್ಕೆ ತುಂಬಿಸುವ ಮೂಲಕ ಕೋಟೆಯನ್ನು ಒಂದು ಜಲದುರ್ಗವನ್ನಾಗಿಸಿದ್ಧಾರೆಂದು ಹೇಳಬಹುದು.

ವ್ಯಾಪ್ತಿ ಮತ್ತು ವಿಸ್ತೀರ್ಣ

ಒಳಕೋಟೆಯು ಆಯತಾಕಾರವಾಗಿದ್ದು, ಅಗ್ನೇಯ ದಿಕ್ಕಿನಲ್ಲಿರುವ ಹುಲ್ಲೇಸಳ ಆಂಜನೇಯ ದೇವಾಲಯ, ನೈರುತ್ಯಕ್ಕೆ ವೀರಭದ್ರಸ್ವಾಮಿ ಸರ್ಕಲ್, ವಾಯುವ್ಯದಲ್ಲಿ ಕೆಂಪಯ್ಯನ ಮನೆ ಹಾಗೂ ಈಶಾನ್ಯದಲ್ಲಿ ಕಾಳಮ್ಮ ದೇವಾಲಯಗಳನ್ನೊಳಗೊಂಡಂತೆ ನಾಲ್ಕು ದಿಕ್ಕುಗಳಲ್ಲಿ ಕೋಟೆಯನ್ನು ನಿರ್ಮಿಸಲಾಗಿದೆ. ಈ ಒಳಕೋಟೆಯು ಪೂರ್ವ ಪಶ್ಚಿಮವಾಗಿ ೧೮೭೦ ಅಡಿ ಉದ್ದ ಹಾಗೂ ಉತ್ತರ-ದಕ್ಷಿಣವಾಗಿ ೭೦೦ ಅಡಿ ಅಗಲವಿದೆ. ಹೊರಕೋಟೆಯನ್ನು ಸಹ ಆಗ್ನೇಯ ದಿಕ್ಕಿನಲ್ಲಿರುವ ಆಂಜನೇಯ ದೇವಾಲಯದಿಂದ (ತರಕಾರಿ ಮಾರುಕಟ್ಟೆ) ನೈರುತ್ಯದಲ್ಲಿ ಪಡುವಲ ಆಂಜನೇಯ ದೇವಸ್ಥಾನ. ಉತ್ತರಕ್ಕೆ ವಾಯುವ್ಯದಲ್ಲಿ ಸುಣ್ಣದಗೂಡಿನ ಮನೆಯಿಂದ (ನೀರಿನ ಟ್ಯಾಂಕ್) ಈಶಾನ್ಯದಲ್ಲಿ ಅಡೆವೆಪ್ಪನ ತೋಟದ ಮನೆಯವರೆಗೆ ವ್ಯಾಪಿಸಿದ್ದು, ಪೂರ್ವಪಶ್ಚಿಮವಾಗಿ ೧೯೭೦ ಅಡಿ ಉದ್ದವಿದ್ದು, ದಕ್ಷಿಣೋತ್ತರವಾಗಿ ೯೦೦ ಅಡಿ ವಿಸ್ತಾರವಾಗಿದೆ. ಹೊರಕೋಟೆ ಮತ್ತು ಒಳಕೋಟೆಗೆ ಪೂರ್ವಭಾಗದಲ್ಲಿ ೫೦೦ ಅಡಿ ಹಾಗೂ ಪಶ್ಚಿಮಭಾಗದಲ್ಲಿ ೨೦೦ ಅಡಿ ಅಂತರದಲ್ಲಿ ಕೋಟೆ ನಿರ್ಮಿಸಲಾಗಿದೆ. ಉಳಿದಂತೆ ಎರಡು ದಿಕ್ಕುಗಳಲ್ಲಿ ಒಳ ಹಾಗೂ ಹೊರ ಕೋಟೆಗೆ ೨೦೦ ಅಡಿ ಅಂತರವನ್ನು ಕಾಯ್ದುಕೊಳ್ಳಲಾಗಿದೆ.

ಕೋಟೆಯ ರಚನೆ

ಸ್ಥಳದುರ್ಗವಾಗಿರುವ ನಾಗಮಂಗಲ ಕೋಟೆಯನ್ನು ಇಂದು ಸಂಪೂರ್ಣವಾಗಿ ಪಟ್ಟಣವು ಆವರಿಸಿಕೊಂಡಿದೆ. ಕೋಟೆಯ ೮೦% ರಷ್ಟು ಭಾಗವು ನಾಶವಾಗಿದ್ದು, ಕೇವಲ ಅಳಿದುಳಿದಿರುವ ಅವಶೇಷಗಳಿಂದ ಕೋಟೆಯನ್ನು ಗುರುತಿಸಬಹುದಾಗಿದೆ. ಈ ಕೋಟೆ ರಚನೆಯನ್ನು ಸೂಕ್ಷ್ಮವಾಗಿ ಗಮನಿಸಿದಾಗ ವಿವಿಧ ರೀತಿಯ ಚಿತ್ರಣ ನಮಗೆ ದೊರೆಯುತ್ತದೆ. ಪ್ರಾರಂಭದ ಹಂತದಲ್ಲಿ ನಿರ್ಮಾಣಗೊಂಡ ಕೋಟೆಯ ಭಾಗಗಳು ಇನ್ನು ಕೆಲವು ಕಡೆ ಉಳಿದುಕೊಂಡಿವೆ. ಇಂತಹ ಕೋಟೆಯನ್ನು ನಾರಾಯಣಪ್ಪನ ಮನೆ ಮುಂಭಾಗ, ಲಕ್ಷ್ಮೀ ದೇವಾಲಯದ ಹಿಂಭಾಗ, ಬಡಗೊಡಮ್ಮ ದೇವಾಲಯ ಹಾಗು ಕಾಳಮ್ಮ ದೇವಾಲಯಗಳ ಹತ್ತಿರ ಕಾಣಬಹುದಾಗಿದೆ. ಒಳಕೋಟೆಯು ಹೊರಕೋಟೆಗಿಂತ ತುಂಬಾ ಪ್ರಾಚೀನವಾಗಿದ್ದು, ಕ್ರಿ.ಶ. ಸುಮಾರು ೧೩ನೆಯ ಶತಮಾನದಲ್ಲಿ ನಿರ್ಮಿಸಿದಂತೆ ಕಂಡುಬರುತ್ತದೆ. ಕೋಟೆ ಗೋಡೆಯನ್ನು ಗುರುತಿಸಲು ಸಾಧ್ಯವಾಗದ ರೀತಿಯಲ್ಲಿ ಮನೆಗಳು ನಿರ್ಮಾಣವಾಗಿವೆ.

ಒಳಕೋಟೆಯು ೩ ರಿಂದ ೬ ಅಡಿ ಅಗಲವಾಗಿದ್ದು, ೪ ರಿಂದ ೧೦ ಅಡಿ ಎತ್ತರವಾಗಿದೆ. ಗೋಡೆಗೆ ಮಧ್ಯಮ ಗಾತ್ರದ ಕಲ್ಲುಗಳನ್ನು ಬಳಸಿದ್ದಾರೆ. ಯಾವುದೇ ಕಲ್ಲುಗಳನ್ನು ನಯಗೊಳಿಸದೆ ಸ್ವಾಭಾವಿಕವಾದವುಗಳನ್ನೇ ಬಳಸಿದ್ಧಾರೆ. ಕಲ್ಲುಗಳ ಅಂಚುಗಳು ಒಂದಕ್ಕೊಂದು ಸರಿಯಾಗಿ ಹೊಂದಿಕೊಳ್ಳದೆ ಉಂಟಾದ ಸಂಧಿಗಳಲ್ಲಿ ಚಕ್ಕೆ ಕಲ್ಲುಗಳನ್ನು ಉಪಯೋಗಿಸಿದ್ಧಾರೆ. ಕಲ್ಲುಗಳ ಮಧ್ಯೆ ಕೆಸರು ಮಣ್ಣನ್ನು ಸೇರಿಸಿ ಗೋಡೆ ನಿರ್ಮಿಸಿರುವುದು ಕಂಡುಬರುತ್ತದೆ. ಎಲ್ಲಿಯೂ ಸಹ ಕೋಟೆ ಗೋಡೆಗೆ ಬಂದೂಕು ರಂಧ್ರಗಳಿಲ್ಲ. ನಾರಾಯಣಪ್ಪನ ಮನೆ, ಹನುಮೇಗೌಡರ ಮಂಜಣ್ಣನ ಮನೆ ಮುಂಭಾಗದಲ್ಲಿರುವ ಕೋಟೆ ಗೋಡೆಯ ಕಲ್ಲುಗಳ ಮಧ್ಯೆ ಗಾರೆ ಲೇಪನ ಮಾಡಿರುವುದು ವಿಶೇಷವಾಗಿದೆ. ಈ ಬೆಳವಣಿಗೆ ನಂತರದ ದಿನಗಳಲ್ಲಿ ಅಂದರೆ ೧೫ ಮತ್ತು ೧೬ ನೆಯ ಶತಮಾನದಲ್ಲಿ ಆಗಿರಬಹುದು. ಕಾರಣ ಪ್ರಾಚೀನವಾದ ಈ ಗೋಡೆಗೆ ಭದ್ರತೆಯನ್ನು ಒದಗಿಸುವ ದೃಷ್ಟಿಯಿಂದ ಕೇವಲ ಹೊರ ಭಾಗದಲ್ಲಿ ಮಾತ್ರ ಗಾರೆ ಲೇಪನ ಮಾಡಿರುವುದನ್ನು ಸೂಕ್ಷ್ಮವಾಗಿ ಗಮನಿಸಬಹುದಾಗಿದೆ.

ಒಳಕೋಟೆಯ ನಾಲ್ಕು ಮೂಲೆಗಳಲ್ಲದೆ ಕೋಟೆ ಬುರುಜಗಳಲ್ಲಿ ಕೇವಲ ಕಾಳಮ್ಮ ದೇವಾಲಯದ ಹತ್ತಿರ ಬುರುಜಿನ ಅವಶೇಷಗಳಟು ಮಾತ್ರ ಕಂಡುಬರುತ್ತವೆ. ಉಳಿದಂತೆ ಎಲ್ಲಾ ಬುರುಜುಗಳು ನಾಶವಾಗಿವೆ. ಈ ಕೋಟೆಯ ಪೂರ್ವ ದಿಕ್ಕಿನಲ್ಲಿರುವ ಹುಲ್ಲೆಸಳ ಅಂಜನೇಯ ದೇವಾಲಯದ ಹತ್ತಿರ ಇದ್ದ ದ್ವಾರಬಾಗಿಲು ಈಗ ಸಂಪೂರ್ಣ ನಾಶವಾಗಿದೆ. ಹಾಗೆಯೇ ಕಾಳಮ್ಮ ದೇವಾಲಯದ ಪಕ್ಕದಲ್ಲಿದ್ದ ದಿಡ್ಡಿಬಾಗಿಲು ಕಾಣದಂತೆ ಮನೆಗಳು ನಿರ್ಮಾಣಗೊಂಡಿವೆ. ಕೋಟೆಯ ದಕ್ಷಿಣ ದಿಕ್ಕಿನಲ್ಲಿ ಹಳೆಯೂರಮ್ಮ, ನಗರೇಶ್ವರ, ಲಕ್ಷ್ಮೀದೇವಾಲಯ ಹಾಗು ಪಶ್ಚಿಮಕ್ಕೆ ಬಡಗುಡಮ್ಮ ದೇವಾಲಯಗಳಲ್ಲದೆ ಪೂರ್ವಕ್ಕೆ ಬಸವೇಶ್ವರ, ಕಾಳಮ್ಮ ಮುಂತಾದ ದೇವಾಲಯಗಳಿವೆ.

ಒಳಕೋಟೆಯ ಆವರಣದಲ್ಲಿ ಪ್ರಸಿದ್ಧವಾದ ಯೋಗನರಸಿಂಹಸ್ವಾಮಿ, ಸೌಮ್ಯಕೇಶವ, ಸುಗ್ರೀವಸ್ವಾಮಿ, ಮಾರಮ್ಮ, ಕೋದಂಡಸ್ವಾಮಿ ಮುಂತಾದ ದೇವಾಲಯಗಳಿವೆ. ಯೋಗನರಸಿಂಹಸ್ವಾಮಿ ಮತ್ತು ಸೌಮ್ಯಕೇಶವ ದೇವಾಲಯದ ಮಧ್ಯಭಾಗದಲ್ಲಿರುವ ಸ್ಥಳದಲ್ಲಿ ಜಗದೇವರಾಯನ ಅರಮನೆ ಇತ್ತೆಂದು ಹೇಳಲಾಗುತ್ತಿದೆ. ಆದರೆ ಇಂದು ಕೇವಲ ಕಟ್ಟಡವೊಂದರ ತಳಪಾಯದ ಅವಶೇಷಗಳು ಮಾತ್ರ ಕಂಡುಬರುತ್ತವೆ. ಎಲ್ಲಾ ಸ್ಮಾರಕಗಳ ಸಮುಚ್ಚಯಗಳಿಗೆ ರಕ್ಷಾ ಕವಚದಂತೆ ಒಳಕೊಟೆಯನ್ನು  ನಿರ್ಮಿಸಿರುವುದು ಗಮನಾರ್ಹ.

ಒಳಕೋಟೆಗಿಂತ ಹೊರ ಕೋಟೆಯ ರಚನೆಯು ತುಂಬಾ ಸುಂದರವಾಗಿದೆ. ಹಿಂದೆ ಈ ಕೋಟೆಯು ಶ್ರೀರಂಗಪಟ್ಟಣದ ಕೋಟೆಯನ್ನು ಹೋಲುತ್ತಿತ್ತು ಎಂದು ಸ್ಥಳೀಯರು ಅಭಿಪ್ರಾಯ ಪಡುತ್ತಾರೆ. ಆದರೆ ಇಂದು ಬಹುತೇಕ ಕೋಟೆ ನಾಶವಾಗಿದೆ. ಹೊರಕೋಟೆಯ ರಚನೆಯ ಸ್ವರೂಪವೇ ಬದಲಾವಣೆಯಾಗಿದೆ. ಸಾಮಾನ್ಯವಾಗಿ ಒಳಕೋಟೆಯಲ್ಲಿರುವ ದೇವಾಲಯಗಳ ಆದಾಯ, ಹೆಚ್ಚಿನ ಜನಸಂಖ್ಯೆ, ಆಡಳಿತ ವಿಸ್ತರಣೆ ಹಾಗೂ ರಕ್ಷಣೆ ಕೊಡುವ ದೃಷ್ಠಿಯಿಂದ ಹೊರಸುತ್ತಿನ ಕೋಟೆಯನ್ನು ನಿರ್ಮಿಸಿದಂತೆ ಕಂಡುಬರುತ್ತದೆ. ಈ ಕೋಟೆಯ ಪಾಲು ಸಂಪೂರ್ಣವಾಗಿ ಸಂರಕ್ಷಣಾ ಸ್ವರೂಪದ್ದು.

ಕಲ್ಲಿನ ಗಾತ್ರವನ್ನು ಹೆಚ್ಚಿಸುವ ಮೂಲಕ ಕೋಟೆಯನ್ನು ಎತ್ತರಗೊಳಿಸಿರುವುದು, ಬೃಹದಾಕಾರದ ಕಲ್ಲುಗಳನ್ನು ಸೀಳಿ ಅವುಗಳನ್ನು ನಯಗೊಳಿಸಿ ಒಂದರ ಮೇಲೊಂದರಂತೆ ಗಾರೆಯ ಬಳಕೆ ಇಲ್ಲದೆ ಸುಭದ್ರವಾಗಿ ಜೋಡಿಸಿರುವುದು ಈ ಕೋಟೆಯ ಸಾಲಿನ ವಿಶೇಷವಾಗಿದೆ. ಇಲ್ಲಿ ಮುಂದುವರೆದ ಕಲ್ಲು ಕೆಲಸದ ತಂತ್ರಜ್ಞಾನವನ್ನು ಯಶಸ್ವಿಯಾಗಿ ಬಳಸಿಕೊಳ್ಳಲಾಗಿದೆ. ಈ ಹಂತದ ರಚನೆಯನ್ನು ಸೈನಿಕ ವಾಸ್ತುಶಿಲ್ಪದ ಬೆಳವಣಿಗೆ ಎನ್ನಬಹುದು. ಕೋಟೆಯ ಅಗಲವನ್ನು ೨೦ ರಿಂದ ೩೦ ಅಡಿಯವರೆಗೆ ವಿಸ್ತರಿಸಲಾಗಿದೆ. ಹಾಗೆ ಎತ್ತರವನ್ನು ಸಹ ಹೆಚ್ಚಿಸಿರುವುದನ್ನು ದಕ್ಷಿಣ ದಿಕ್ಕಿನ ಕೋಟೆಯ ಸಾಲಿನಲ್ಲಿ ಕಾಣಬಹುದಾಗಿದೆ. ಈ ಕೋಟೆಗೆ ಹೊಂದಿಕೊಂಡಂತೆ ವಿಶಾಲವಾದ ಕಂದಕವನ್ನು ನಿರ್ಮಿಸಿ ಶತ್ರುಗಳಿಗೆ ಭಯವನ್ನುಂಟು ಮಾಡಿರುವುದನ್ನು ಗಮನಿಸಬಹುದು. ಕಂದಕಕ್ಕೆ ಹಿರಿಕೆರೆಯ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಕಲ್ಪಿಸಿರುವುದು ಅವರ ತಂತ್ರಜ್ಞಾನಕ್ಕೆ ಹಿಡಿದ ಕನ್ನಡಿಯಾಗಿದೆ. ಕೋಟೆ ಗೋಡೆಗೆ ಭದ್ರತೆಯನ್ನೊದಗಿಸುವ ಬುರುಜುಗಳು ಬಹುತೇಕ ಹಾಳಾಗಿವೆ.

ಹೊರಕೋಟೆಗೆ ಪೂರ್ವ ದಿಕ್ಕಿನಲ್ಲಿದ್ದ ವಿಶೇವಾದ ಹುಲಿಮುಖದ ದ್ವಾರಬಾಗಿಲು ಸಂಪೂರ್ಣವಾಗಿ ನಾಶವಾಗಿದೆ. ದ್ವಾರಬಾಗಿಲು ಇದ್ದ ಸ್ಥಳ ಇಂದಿಗೂ ರಸ್ತೆಯಾಗಿ ಮಾರ್ಪಾಡಾಗಿದೆ. ಇಂದು ದ್ವಾರಬಾಗಿಲನ್ನು ಗುರುತಿಸುವ ಯಾವ ಅವಶೇಷಗಳು ಉಳಿದಿಲ್ಲ. ಹೊರಕೋಟೆ ಮತ್ತು ಒಳಕೋಟೆಯ ಆವರಣದಲ್ಲಿ ಅನೇಕ ಸ್ವಾರಕಗಳಿವೆ. ಪ್ರಮುಖವಾಗಿ ಪೂರ್ವಭಾಗದಲ್ಲಿರುವ ಹಂಪಿ ಅರಸನಕೊಳ, ಚನ್ನರಸನಕೊಳ, ಉತ್ಸವ ಮಂಟಪಗಳಲ್ಲದೆ ಗಣಪತಿ, ವೆಂಕಟರಮಣ, ಬಸವೇಶ್ವರ, ವಾಸವಿ, ವೀರಭದ್ರ ಮಾರಮ್ಮ, ಪಡವಲ ಆಂಜನೇಯ, ಲಕ್ಷ್ಮೀ ಮುಂತಾದ ದೇವಾಲಯಗಳಿವೆ.

ನಾಗಮಂಗಲದ ಕೋಟೆಗೆ ಕಳಶಪ್ರಾಯವೆಂಬಂತೆ ಈಶಾನ್ಯ ದಿಕ್ಕಿನಲ್ಲಿ ಸುಂದರವಾದ ಹಾಗೂ ವಿಶಾಲವಾದ ಪುಷ್ಕರಣೆಯಿಂದೆ. ಕ್ರಿ.ಶ.೧೮೭೦ರ ನಾಗಮಂಗಲದ ಕೈಫಿಯತ್ತಿನ ಪ್ರಕಾರ ವಿಜಯನಗರದ ಸಾಳುವ ನರಸಿಂಹರಾಯರು ನಾಗಮಂಗಲದ ರಕ್ಷಣೆಗೆ ತಮ್ಮ ಕಡೆಯಿಂದ ಹಂಪಿಯರಸ ಮತ್ತು ಚನ್ನರಸ ಎಂಬ ಇಬ್ಬರು ಸಹೋದರರನ್ನು ಕಳುಹಿಸಿಕೊಡುತ್ತಾರೆ. ಹಿರಿಕೆರೆ ಬಳಿ ಇರುವ ಎರಡು ಕೊಳಗಳನ್ನು ಇವರೇ ನಿಮಿಸಿದರೆಂದು ಹೇಳಲಾಗಿದೆ. ವೆಂಕಟರಮಣ ದೇವಾಲಯದ ಮುಂಭಾಗದಲ್ಲಿರುವ ವಿಶಾಲವಾದ ಕೊಳವನ್ನು ಹಂಪಿ ಅರಸನ ಕೊಳವೆಂದು ಹೊರಕೋಟೆಗೆ ಹೊಂದಿಕೊಂಡಂತೆ ಇರುವ ಚಿಕ್ಕ ಕೊಳವನ್ನು ಚನ್ನರಸನ ಕೊಳವೆಂದು ಈಗಲೂ ಕರೆಯುತ್ತಾರೆ. ಹಂಪಿಯರಸನ ಕೊಳವು ಪೂರ್ವ ಪಶ್ಚಿಮವಾಗಿ ೭೨ ಮೀಟರ  ಹಾಗೂ ದಕ್ಷಿಣೋತ್ತರವಾಗಿ ೫೮ ಮೀಟರ ವಿಸ್ತೀರ್ಣವನ್ನು ಹೊಂದಿದ್ದು ಸುತ್ತಲೂ ಕಲ್ಲಿನ ಪಾವಟಿಕೆಗಳನ್ನು ನಿರ್ಮಿಸಲಾಗಿದೆ.

ನಾಗಮಂಗಲದ ಕೋಟೆಯ ರಚನೆ, ಗಾತ್ರ ಮತ್ತು ವಿನ್ಯಾಸವನ್ನು ಸೂಕ್ಷ್ಮವಾಗಿ ಗಮನಿಸಿದರೆ ಇದನ್ನು ಯಾವುದೇ ಹೊರಗಿನ ಪ್ರಬಲವಾದ ಆಕ್ರಮಣಗಳನ್ನು ಎದುರಿಸಲು ನಿರ್ಮಿಸಲಾದ ಕೋಟೆಯಲ್ಲ ಎಂಬುದು ಸ್ಪಷ್ಟವಾಗುತ್ತದೆ. ನಾಗಮಂಗಲವು ಹಿಂದೆ ಅಗ್ರಹಾರವಾಗಿದ್ದು, ಒಂದು ವಿದ್ಯಾಕೇಂದ್ರವಾಗಿ ಮಾರ್ಪಟ್ಟಿರುವುದನ್ನು ಇತಿಹಾಸದ ಪುಟಗಳಲ್ಲಿ ಕಾಣಬಹುದು. ಅದರಲ್ಲೂ ವಿಶೇಷವಾಗಿ ನಾಗಮಂಗಲದಲ್ಲಿ ಸುಮಾರು ೨೦ಕ್ಕೂ ಹೆಚ್ಚು ದೇವಾಲಯಗಳಿದ್ದು, ಇವು ಅಂದಿನ ಸಂಪನ್ಮೂಲಗಳ ಪ್ರಮುಖ ಆದಾಯ ಕೇಂದ್ರಗಳಾಗಿದ್ದವು. ಇಂತಹ ಕೇಂದ್ರಗಳ ಮೇಲೆ ಸಹಜವಾಗಿಯೇ ಸ್ಥಳೀಯ ದಾಳಿಗಳು ನಡೆಯುತ್ತಿದ್ದುದನ್ನು ನಾವು ಗಮನಿಸಿದ್ದೇವೆ. ಈ ಹಿನ್ನೆಲೆಯಲ್ಲಿ ದೇವಾಲಯಗಳಿಗೆ ರಕ್ಷಣೆ ಎಂಬಂತೆ ಕೋಟೆ ಕೊತ್ತಲಗಳನ್ನು ನಿರ್ಮಿಸಿರುವುದು ಕಂಡುಬರುತ್ತದೆ. ದಾಖಲೆಗಳು ಸ್ಪಷ್ಟಪಡಿಸುವಂತೆ ಈ ಭಾಗದಲ್ಲಿ ಆಳ್ವಿಕೆ ನಡೆಸಿ ಕೋಟೆಕೊತ್ತಲಗಳನ್ನು ನಿರ್ಮಿಸಿದವರು ನಾಗಮಂಗಲದ ಪ್ರಭುಗಳು ಮತ್ತು ಚನ್ನಪಟ್ಟಣದ ಪ್ರಭುಗಳು. ಇವರು ತಮ್ಮ ಆರ್ಥಿಕ ಶಕ್ತಿಗಳಿಗನುಗುಣವಾಗಿ ಹಾಗೂ ಸ್ಥಳೀಯ ಸಂಪನ್ಮೂಲಗಳನ್ನು ಬಳಸಿಕೊಂಡು ಕೋಟೆ ನಿರ್ಮಿಸಿರುವುದು ಕಂಡುಬರುತ್ತದೆ.

ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ನಾಗಮಂಗಲದಲ್ಲಿ ಕೋಟೆ ನಿರ್ಮಾಣ ಮಾಡುವಷ್ಟು ಕಲ್ಲಿನ ಸಂಪನ್ಮೂಲಗಳು ದೊರೆಯದೇ ಇದ್ದರೂ ಸಹ ಸಮೀಪದ ಅಂದರೆ ನಾಗಮಂಗಮಕ್ಕೆ ಮೂರ‍್ನಾಲ್ಕು ಕಿ.ಮೀ. ದೂರದಲ್ಲಿರುವ ಪಡುವಲಗುಡ್ಡ, ಹಾಲತಿಬೆಟ್ಟ, ಕೋಟೆಬೆಟ್ಟಗಳಲ್ಲಿ ದೊರೆಯುವ ಕಲ್ಲುಗಳನ್ನು ತಂದು ನಾಗಮಂಗಲದಲ್ಲಿ ಕೋಟೆ ಕಟ್ಟುವ ಮೂಲಕ ಶಕ್ತಿಸಾಮರ್ಥ್ಯವನ್ನು ಪ್ರದರ್ಶಿಸಿದ್ಧಾರೆ. ಒಟ್ಟಾರೆ ಅವರ ಶ್ರಮ ಹಾಗು ಸಾಹಸಗಳೆರಡನ್ನು ಪ್ರತಿಪಾದಿಸುವ ಈ ಕೋಟೆಯನ್ನು ಯಾವುದೇ ಪರಿಸರಕ್ಕೆ ಧಕ್ಕೆಯಾಗದಂತೆ ನಿರ್ಮಿಸುವ ಮೂಲಕ ಸ್ಥಳೀಯ ಆಡಳಿತವನ್ನು ವ್ಯವಸ್ಥೆಗೊಳಿಸಿರುವುದು ನಿಜಕ್ಕೂ ಶ್ಲಾಘನೀಯ.

ಒಟ್ಟಾರೆ ನಾಗಮಂಗಲದ ರಕ್ಷಣಾ ಸ್ಮಾರಕಗಳು ಅಂದಿನ ಕಾಲದ ಕಲ್ಪನಾ ಸಾಮರ್ಥ್ಯಕ್ಕೆ ಮಿಗಿಲಾದ ರಚನೆಗೊಂಡಿವೆ. ಇಂತಹ ಸ್ಮಾರಕಗಳು ಸ್ಥಳೀಯ ಸಂಗತಿಗಳನ್ನು ಸ್ಪಷ್ಟವಾಗಿ ಬೆಳಕಿಗೆ ಬರಬಲ್ಲವು. ಏಕೆಂದರೆ, ಯಾವುದೇ ಒಂದು ದೊಡ್ಡ ಸಾಮ್ರಾಜ್ಯ ಅಥವಾ ಚಕ್ರವರ್ತಿಗಳಿಗೆ ಕೆಳಸ್ತರದಲ್ಲಿ ಬಾಳಿ ಬದುಕುತ್ತಿದ್ದ ಜನಪದರ ನೇರ ಸಂಪರ್ಕವೇ ಇರುತ್ತಿರಲಿಲ್ಲ. ಇದಕ್ಕೆ ವ್ಯತಿರಿಕ್ತವಾಗಿ ನಾಗಮಂಗಲದಂತಹ ಸಣ್ಣ ಪುಟ್ಟ ಮನೆತನಗಳು ಯಾವಾಗಲೂ ಜನರ ಬದುಕಿಗೆ ಹತ್ತಿರವಾಗಿ ಅವರ ಕಷ್ಟ-ಸುಖಗಳನ್ನು ಅರಿತು ಸಮಾಜದ ಸವಾಲುಗಳಿಗೆ ಅನುಸಾರವಾಗಿ ಪರಿಹರಿಸುವತ್ತಾ ಗಮನ ನೀಡಿದರು. ಅದ್ದರಿಂದಲೇ ಅವರು ನಿರ್ಮಿಸಿದ ಪ್ರತಿಯೊಂದು ಸ್ಮಾರಕಗಳಲ್ಲೂ ಒಂದೊಂದು ಸಂದೇಶವಿರುವುದನ್ನು ಗಮನಿಸಬಹುದು. ಇಂತಹ ಅಮೂಲ್ಯ ಸ್ಮಾರಕಗಳು ವಿಶೇಷವಾಗಿ ರಕ್ಷಣಾ ಸ್ಮಾರಕಗಳು ನಾಗಮಂಗಲದಲ್ಲಿ ಹೇಳ ಹೆಸರಿಲ್ಲದೆ ಕಣ್ಮರೆಯಾಗುತ್ತಿವೆ. ಬೆಳೆಯುತ್ತಿರುವ ಪಟ್ಟಣ, ರಸ್ತೆ ವಿಸ್ತರಣೆ ಮುಂತಾದ ಕಾರಣಗಳಿಂದ ರಕ್ಷಣಾ ಸ್ಮಾರಕಗಳನ್ನು ಗುರುತಿಸಲೂ ಸಾಧ್ಯವಿಲ್ಲದಂತೆ ಪರಿಸ್ಥಿತಿ ನಿರ್ಮಾಣವಾಗಿರುವುದು ಇತಿಹಾಸದ ದುರಂತವೇ ಸರಿ. ಅದರಲ್ಲೂ ಕೋಟೆಯ ಒಳ ಮತ್ತು ಹೊರಭಾಗದ ಕಲ್ಲುಗಳನ್ನು ಕಿತ್ತು ಮನೆಯ ಗೋಡೆಗೆ ಬಳಸಿಕೊಳ್ಳಲಾಗುತ್ತಿದೆ. ಹಾಗೆಯೇ ಎಷ್ಟೋ ಕಡೆ ಕೋಟೆಯ ಬುನಾದಿಯ ಮೇಲೆಯೇ ಮನೆಗಳನ್ನು ನಿರ್ಮಿಸಲಾಗಿದೆ (ಚಿತ್ರ ೩೫). ಕಲ್ಲುಗಳನ್ನು ಸೀಳಿ ಮನೆ ನಿರ್ಮಿಸುತ್ತಿರುವ ದೃಶ್ಯಗಳನ್ನು ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಸೆರೆ ಹಿಡಿಯಲಾಗಿದೆ. ಇನ್ನಾದರೂ ಇಂತಹ ಅಮೂಲ್ಯ ಸ್ಮಾರಕಗಳನ್ನು ತುರ್ತಾಗಿ ರಕ್ಷಿಸಬೇಕಾಗಿದೆ.

 

ಆಕರ ಗ್ರಂಥಗಳು

೧. ಶ್ರೀನಿವಾಸಯ್ಯ ಹೊ., ೧೯೮೬ : ನಾಗಮಂಗಲ ತಾಲ್ಲೂಕು ದರ್ಶನ, ಐಬಿಹೆಚ್ ಪ್ರಕಾಶನ, ಬೆಂಗಳೂರು, ಪುಟ ೮

೨. ತಿಪ್ಪೇಸ್ವಾಮಿ ಎಸ.,೨೦೦೪ : ರಕ್ಷಣಾ ವಾಸ್ತುಶಿಲ್ಪ ಚಿತ್ರದುರ್ಗ ಜಿಲ್ಲೆ, (ಅಪ್ರಕಟಿತ ಮಹಾ ಪ್ರಬಂಧ), ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೯೯

೩. ಕನ್ನಡ ವಿಷಯ ವಿಶ್ವಕೋಶ, ಪುಟ ೯೯

೪. ಮುಹಮ್ಮದ್ ಕಲೀಂ ಉಲ್ಲಾ, ೨೦೦೩ : ನಾಗಮಂಗಲ ತಾಲ್ಲೂಕು ದರ್ಶನ, ಪುಟ ೩

೫. ಕನ್ನಡ ವಿಷಯ ವಿಶ್ವಕೋಶ, ಪುಟ ೮೨೯

೬. ಕಲ್ಬುರ್ಗಿ ಎಂ.ಎಂ. ( ಸಂ) ೧೯೯೪ : ಕರ್ನಾಟಕದ ಕೈಫಿಯತ್ತುಗಳು, ಪ್ರಸಾರಾಂಗ ಕನ್ನಡ ವಿಶ್ವವಿದ್ಯಾಲಯ, ಹಂಪಿ, ಪುಟ ೮೨

೭. ಮುಹಮ್ಮದ್ ಕಲೀಂ ಉಲ್ಲಾ, ೨೦೦೩ : ನಾಗಮಂಗಲ ತಾಲ್ಲೂಕು ದರ್ಶನ, ಪುಟ ೧೪

೮. ಪ್ರಸ್ತುತ ಕ್ಷೇತ್ರಕಾರ್ಯದಲ್ಲಿ ಗ್ರಮದ ನಕ್ಷೆಯನ್ನು ಕೊಟ್ಟು ಸಹಕರಿಸಿದ ಮಾಜಿ ಪುರಸಭಾ ಸದಸ್ಯರಾದ ಎನ್.ಜೆ. ರಾಮಕೃಷ್ಣಪ್ಪನವರಿಗೆ ನಾನು ಅಭಾರಿಯಾಗಿದ್ದೇನೆ.