ನಾಗಮಂಗಲವು ಮಂಡ್ಯ ಜಿಲ್ಲೆಯ ಪ್ರಮುಖ ಪ್ರಾಚೀನ ಸ್ಥಳಗಳಲ್ಲಿ ಒಂದು. ಬೀದರ್ – ಶ್ರೀರಂಗಪಟ್ಟಣ ರಸ್ತೆಯಲ್ಲಿ ಪ್ರಮುಖ ಸ್ಥಳವಾಗಿದೆ. ಈ ಸ್ಥಳವು ಉತ್ತರ ೧೨೦ ಅಕ್ಷಾಂಶದ ಉತ್ತರಕ್ಕೆ (೪೯’) ಮತ್ತು ಪೂರ್ವ ರೇಖಾಂಶ ೭೬೦ ಯಿಂದ ಪೂರ್ವಕ್ಕೆ (೪೯’) ಭೂಪಟದಲ್ಲಿ ಗುರುತಿಸಲ್ಪಟ್ಟಿದೆ. ಈ ಊರಿನ ಇತಿಹಾಸ ಕ್ರಿ.ಶ. ೧೨೭೦ ಕ್ಕಿಂತ ಹಿಂದೆ ಪ್ರಾರಂಭವಾಗುತ್ತದೆನ್ನಬಹುದು. ಕ್ರಿ.ಶ.೧೨೭೦ ರಲ್ಲಿ ಜೈವಿಡ ದಂಡನಾಯಕನು ನಾಗಮಂಗಲದ ಒಳಕೋಟೆಯನ್ನು ಕಟ್ಟಿದನೆಂದು ತಿಳಿದುಬರುತ್ತದೆ. ಇವರು ಲೋಹಗಾರ ಮನೆತನದವರಾಗಿದ್ದು, ಕ್ರಿ.ಶ.೧೫ನೆಯ ಶತಮಾನದ ಕೊನೆಯವರೆಗೆ ಆಳಿದರೆಂದು ಬಿ.ಎಸ್. ರೈಸ್ ಅಭಿಪ್ರಾಯ ಪಡುತ್ತಾರೆ. ತಿಮ್ಮಣ್ಣ ದಣಾಯಕನು ಸಿಂಗಣ್ಣ ಒಡೆಯರ‍್ ಮತ್ತು ಆತನ ಪತ್ನಿ ಸೀತಾಂಬಿಕೆಯ ಪುತ್ರನೆಂದು ತಿಳಿದುಬರುತ್ತದೆ. ಇವನು ಇಮ್ಮಡಿ ಪ್ರೌಢದೇವರಾಯನ ಮಂತ್ರಿಯಾಗಿದ್ದನೆಂದು, ಈತನೇ ಮೇಲುಕೋಟೆ ಸ್ಥಳವನ್ನು ಜೀರ್ಣೋದ್ಧಾರ ಮಾಡಿದನು. ಅಲ್ಲದೆ ಶ್ರೀರಂಗಪಟ್ಟಣದ ಕೋಟೆಯನ್ನು ಸಹ ಕಟ್ಟಿಸಿದನೆಂದು ತಿಳಿದುಬರುತ್ತದೆ. ಇದೇ ಮನೆತನದ ಸಿಂಗಣ್ಣ ಒಡೆಯನು ಕಾವೇರಿನದಿಗೆ ಆಣೆಕಟ್ಟನ್ನು ಕಟ್ಟಿ ಹಲವು ಗ್ರಾಮವನ್ನು ನೀರಾವರಿಗೆ ಒಳಪಡಿಸಿದನೆಂದು ಶಾಸನಗಳಿಂದ ತಿಳಿದುಬರುತ್ತದೆ. ಇವರ ನಂತರ ಜಗದೇವರಾಯನು ಈ ಪ್ರದೇಶದ ಮೇಲೆ ತನ್ನ ಪ್ರಭುತ್ವವನ್ನು ಸಾರಿದನು. ಕ್ರಿ.ಶ. ೧೬೩೦ರಲ್ಲಿ ಜಗದೇವರಾಯನಿಂದ ಈ ಪ್ರದೇಶವನ್ನು ಮೈಸೂರಿನ ಒಡೆಯರಾದ ಚಾಮರಾಜರು ಗೆದ್ದಕೊಂಡರು. ಮರಾಠರು ಈ ನಗರವನ್ನು ಕ್ರಿ.ಶ. ೧೭೯೨ರಲ್ಲಿ ದಾಳಿ ಮಾಡುವವರೆಗೆ ಅತ್ಯಂತ ಸುಸ್ಥಿತಿಯಲ್ಲಿದ್ದಿತ್ತು. ಪರಶುರಾಮ್ ಬಾಹುವಿನ ನೇತೃತ್ವದಲ್ಲಿ ಮರಾಠ ಸೈನ್ಯ ನಾಗಮಂಗಲದ ಮೇಲೆ ದಾಳಿ ಮಾಡಿ ಒಂದೂವರೆ ಲಕ್ಷಕ್ಕೂ ಮೀರಿದ ತೆಂಗು ಮತ್ತು ಅಡಿಕೆಯ ಮರಗಳನ್ನು ಕಡಿದುರಳಿಸಿದರು. ಅಲ್ಲದೇ ಇಡಿ ಪಟ್ಟಣವನ್ನು ಸೂರೆಗೊಂಡರು.

ಇಂತಹ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಗಮಂಗಲ, ಹೊಯ್ಸಳರ ಕಾಲಕ್ಕಾಗಲೇ ಪ್ರಖ್ಯಾತವಾದ ನಗರವಾಗಿದ್ದಿತು. ಶ್ರೀರಂಗಪಟ್ಟಣ ಮತ್ತು ಮೇಲುಕೋಟೆ ಅಗ್ರಹಾರಗಳ ಅಡಳಿತ ಕೇಂದ್ರ ಕೂಡ ಇದಾಗಿತ್ತು. ಹೊಯ್ಸಳ ವಿಷ್ಣುವರ್ಧನನ ತರುವಾಯ ಅಧಿಕಾರಕ್ಕೆ ಬಂದ ಹೊಯ್ಸಳ ಬಲ್ಲಾಳನ ಅಧಿಕಾರಾವಧಿಯಲ್ಲಿ ಈ ಸ್ಥಳವನ್ನು “ಶ್ರೀ ಮದನಾದಿ ಅಗ್ರಹಾರ ಶ್ರೀ ವೀರಬಲ್ಲಾಳ ಚತುರ್ವೇದಿ ಭಟ್ಟರತ್ನಾಕರವಾದ ನಾಗಮಂಗಲ” ಎಂದು ಕರೆಯಲಾಗಿದೆ. ಅಂದರೆ ಶಾಸನಗಳು ಸಹ ಈ ಅಗ್ರಹಾರ ಯಾರ ಕಾಲದಲ್ಲಿ ನಿರ್ಮಾಣವಾಯಿತೆಂದು ತಿಳಿಸುವಲ್ಲಿ ವಿಫಲವಾಗಿವೆ. ಕ್ರಿ.ಶ. ೧೧೭೧ರ ಹೊತ್ತಿಗಾಗಲೇ ಇದು ಅನಾದಿಯ ಅಗ್ರಹಾರವಾಗಿತ್ತೆಂದು ತಿಳಿದುಬರುವ ಹಿನ್ನೆಲೆಯಲ್ಲಿ ಕಡೇ ಪಕ್ಷ ಮೇಲೆ ಉಲ್ಲೇಖಿಸಿದ ಕಾಲಮಾನಕ್ಕೆ ಐದು ತಲೆಮಾರುಗಳ ಹಿಂದೆ ಈ ಅಗ್ರಹಾರ ನಿರ್ಮಿತವಾಗಿರಬೆಕು. ಕಾರಣ, ನಿರ್ಮಾಣವಾದಾಗ ಅಲ್ಲಿ ನೆಲೆಸಿದ ಸಮುದಾಯಕ್ಕೆ ಮೂರು ತಲೆಮಾರುಗಳ ನೇರ ಪರಿಚಯ ಮತ್ತು ನಾಲ್ಕು ಐದನೇ ತಲೆಮಾರುಗಳ ಕನಿಷ್ಟ ಪರಿಚಯವಾದರೂ ಇರುತ್ತದೆ. ಅಂದಮೇಲೆ ಪ್ರತಿ ತಲೆಮಾರಿಗೆ ಮೂವತ್ತು ವರ್ಷಗಳಂತೆ ಲೆಕ್ಕ ಹಾಕಿದರೂ ಕ್ರಿ.ಶ. ೧೧೭೧ಕ್ಕೆ ೧೫೦ ವರ್ಷಗಳ ಹಿಂದೆ ಈ ಗ್ರಾಮ ಚತುರ್ವೇದಿ ಮಂಗಲವಾಗಿ ನಿರ್ಮಾಣವಾಗಿರುವ ಎಲ್ಲಾ ಸಾಧ್ಯತೆಗಳಿವೆ. ಈ ಕಾಲ ನಮ್ಮನ್ನು ತಲಕಾಡು ಮತ್ತು ಗಂಗವಾಡಿ ಚೋಳರ ವಶವಾದ ಕಾಲಕ್ಕೆ ಕೊಂಡೊಯ್ಯುತ್ತದೆ. ಅಂದರೆ ಕ್ರಿ.ಶ. ೧೧ನೆಯ ಶತಮಾನದ ಆರಂಭದ ದಿನಗಳಲ್ಲಿ ಇಲ್ಲಿ ಚತುರ್ವೇದಿ ಮಂಗಲದ ನಿರ್ಮಾಣವಾಗಿರಬೇಕು. ಮಂಡ್ಯ ಜಿಲ್ಲೆಯ ಚತುರ್ವೇದಿ ಮಂಗಲಗಳ ಆರಂಭ ಕಾಲವನ್ನು ಸಹ ಇದೇ ಕಾಲಘಟ್ಟಕ್ಕೆ ಈಗಾಗಲೇ ಶಾಸನಾಧಾರಗಳ ಸಹಿತವಾಗಿ ನಿರ್ದೇಶಿಸಿರುವ ಹಿನ್ನಲೆಯಲ್ಲಿ, ನಾಗಮಂಗಲದ ಚತುರ್ವೇದಿ ಅಗ್ರಹಾರವು ಇದೇ ಕಾಲಘಟ್ಟದಲ್ಲಿ ನಿರ್ಮಾಣವಾಗಿರುವ ಎಲ್ಲಾ ಸಾಧ್ಯತೆಗಳಿವೆ.

ಇಂತಹ ರೋಚಕ ಐತಿಹಾಸಿಕ ಹಿನ್ನೆಲೆ ಹೊಂದಿರುವ ನಾಗಮಂಗಲದ ಕೆರೆಕಟ್ಟೆಗಳ ಬಗೆಗೆ ಆಕರಗಳಲ್ಲಿ ಅತ್ಯಲ್ಪ ವಿವರ ದೊರಕುತ್ತದೆ. ನಾಗಮಂಗಲದ ಇಂದಿನ ವ್ಯಾಪ್ತಿಯಲ್ಲಿ ಮೂರು ಕೆರೆಗಳು, ಎರಡು ಕಟ್ಟೆಗಳು, ಮೂರು ಕೊಳಗಳು ಕಂಡುಬರುತ್ತವೆ. ಸೂಳೆಕೆರೆ, ಸಿಂಗರಸನಕೆರೆ ಮತ್ತು ಹಿರಿಯಕೆರೆಗಳು ಪ್ರಮುಖ ಕೆರೆಗಳು, ಬಡವು ಕಟ್ಟೆ ಮತ್ತು ಅಮ್ಮನಕಟ್ಟೆ ಸಣ್ಣ ಜಲಾಶ್ರಯಗಳು, ಸಿಂಗರಸನಕೆರೆ ಸೂಳೆಕೆರೆ ಮತ್ತು ಅಮ್ಮನಕಟ್ಟೆ ವಿಜಯನಗರ ಕಾಲದಲ್ಲಿ ನಿರ್ಮಾಣವಾದವು (ಭೂಪಟ ನೋಡಿ)

ಹಿರಿಕೆರೆ

ಹಿರಿಕೆರೆ ಹೊಯ್ಸಳ ವಿಷ್ಣುವರ್ಧನನ ಕಾಲಕ್ಕೆ ಪೂರ್ವದಲ್ಲಿಯೇ (ಕ್ರಿ.ಶ. ೧೧೩೪) ನಿರ್ಮಾನವಾಗಿದ್ದವು ಎಂದು ಇಲ್ಲಿನ ಶಾಸನ ಖಚಿತಪಡಿಸುತ್ತದೆ.೧೦ ಮಿಕ್ಯಾವ ಕೆರೆಗಳಿಗೂ ನಿರ್ಮಾಣದ ಬಗೆಗಿನ ಆಕರಗಳಿಲ್ಲ. ಕ್ರಿ.ಶ. ೧೦ನೆಯ ಶತಮಾನದ ತುರುಗೋರ್ಳ ವೀರಗಲ್ಲಿನ ಆಧಾರದ ಮೇಲೆ ಆ ಕಾಲಕ್ಕಾಗಲೇ ನಾಗಮಂಗಲ ಪ್ರಮುಖ ಜನವಸತಿ ಕೇಂದ್ರವಾಗಿತ್ತೆಮದು ಭಾವಿಸಬಹುದು.೧೧ ಅಂದರೆ ಅಗ್ರಹಾರವಾಗಿ ಮಾರ್ಪಾಡು ಮಾಡುವ ಕಾಲದಲ್ಲಿ ಅಗ್ರಹಾರದ ನಿರ್ಮಾತೃಗಳು ಜನವಸತಿಯನ್ನು ನಿರ್ಮಾಣ ಮಾಡಿ ಅದರ ಕೆಳಗಿನ ವ್ಯವಸಾಯ ಯೊಗ್ಯ ಭೂಮಿಯನ್ನು ದೇವಾಲಯಗಳಿಗೆ ಮತ್ತು ಬ್ರಾಹ್ಮಣರಿಗೆ ಮತ್ತು ದೇವಾಲಯದ ಇತರೆ ಕಸುಬಿನವರಿಗೆ ವೃತ್ತಿಗಳಾಗಿ ನೀಡುತ್ತಿದ್ದರು. ಇದನ್ನು ಗಮನಿಸಿದಾಗ ಚೋಳರು ಗಂಗವಾಡಿಯ ಮೇಲೆ ತಮ್ಮ ಅಧಿಪತ್ಯ ಸ್ಥಾಪಿಸಿದ ಮೇಲೆ ಈ ಕೆರೆಯನ್ನು ಅಭಿವೃದ್ಧಿಗೊಳಿಸಿ, ವ್ಯವಸಾಯಕ್ಕೆ ಮತ್ತು ವಿದ್ಯಾಭ್ಯಾಸಕ್ಕೆ ಸಹಕರಿಸಿದರೆಂದು ನಿರ್ಧರಿಸಲೇಬೇಕಾಗುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಹಿರಿಯಕೆರೆ ಸಹ ಚೋಳರ ಕಾಲದಲ್ಲಿಯೇ ನಿರ್ಮಾಣವಾಯಿತೆಂದು ನಂಬಬಹುದಾಗಿದೆ.

ಕ್ರಿ.ಶ. ೧೧೩೪ರ ವಿಷ್ಣುವರ್ಧನನ ಕಾಲದ ನಾಗಮಂಗಲದ ಶಾಸನ ಆತನ ಪತ್ನಿ ಬೊಮ್ಮಲಾದೇವಿಯು ಹೊರಡಿಸಿದ್ದು, ಅದರಲ್ಲಿ ಹಿರಿಯಕೆರೆಯ ಉಲ್ಲೇಖವಿದೆ.೧೨ ಅಂದ ಮೇಲೆ ಕ್ರಿ.ಶ. ೧೧೩೪ ಕ್ಕೆ ಹಿಂದೆಯೇ ನಾಗಮಂಗಲ ಒಂದು ಪ್ರಖ್ಯಾತ ಸ್ಥಳವಾಗಿರುವ ಮತ್ತು ಅಗ್ರಹಾರವಾಗಿ ಕೂಡ ಕಾರ್ಯನಿರ್ವಹಿಸಿರಬಹುದೆಂದು ಹೇಳಬಹುದು. ಶಾಸನ ಈ ಸ್ಥಳದ ಹೆಸರನ್ನು ನಾಗಮಂಗಲವೆಂದು ಉಲ್ಲೇಖಿಸಿದೆ. ಈ ಶಾಸನಾಧಾರಗಳು ಆ ಹೊತ್ತಿಗಾಗಲೇ ನಾಗಮಂಗಲ ಸಾಂಸ್ಕೃತಿಕ ಸಮೃದ್ಧಿಯನ್ನು ಹೊಂದಿದ ಸ್ಥಳವಾಗಿದ್ದಿತೆಂದು ತಿಳಿಸುತ್ತದೆ. ಈ ಹಿನ್ನೆಲೆಯಲ್ಲಿ ಗಮನಿಸಿದಾಗ ಮೊದಲೇ ತಿಳಿಸಿದಂತೆ ಚತುರ್ವೇದಿ ಮಂಗಲಗಳ ರಚನೆ ಈ ಪರಿಸರದಲ್ಲಿ ಚೋಳರಿಂದ ಪ್ರಾರಂಭವಾಗಿದೆ. ಚತುರ್ವೇದಿಮಂಗಲ ನಂತರದ ದಿನಗಳಲ್ಲಿ ಚತುರ್ವೇದಿ ಭಟ್ಟರತ್ನಾಕರವೆಂದು ಪುನಃ ನಾಮಕರಣಗೊಂಡಿದೆ. ಇದೇ ಲೇಖಕರು ತೊಂಡನೂರಿನ ಬಗೆಗೆ ಅಧ್ಯಯನ ಮಾಡಿದ ಸಂದರ್ಭದಲ್ಲಿಯೂ ಮತ್ತು ಮಂಡ್ಯ ಜಿಲ್ಲೆಯ ಪ್ರಾಚೀನ ಶಿಕ್ಷಣವನ್ನು ಶಾಸನಗಳ ಆಧಾರದಲ್ಲಿ ಅಧ್ಯಯನ ಮಾಡಿದ ಕಾಲದಲ್ಲಿಯೂ ಇದೇ ಬಗೆಯ ನಿರ್ಧಾರಕ್ಕೆ ಬಂದಿದ್ಧಾರೆ.೧೩ ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮಾರು ಅಗ್ರಹಾರದ ತಮಿಳು ಶಾಸನ ಇದಕ್ಕೆ ನೇರ ಆಧಾರವಾಗಿದೆ.೧೪ ಅಲ್ಲದೇ ಜಿಲ್ಲೆಯ ಯಾವ ಅಗ್ರಹಾರಗಳು ಹತ್ತನೆಯ ಶತಮಾನಕ್ಕೆ ಪೂರ್ವದಲ್ಲಿ ನಿರ್ಮಾಣವಾದದ್ದಕ್ಕೆ ಶಾಸನಾಧಾರಗಳನ್ನು ಹೊಂದಿಲ್ಲ. ಜಿಲ್ಲೆಯ ಅತ್ಯಂತ ಪ್ರಾಚೀನ ಅಗ್ರಹಾರ ಶ್ರೀರಂಗಪಟ್ಟಣ ತಾಲ್ಲೂಕಿನ ಬಮ್ಮೂರು ಅಗ್ರಹಾರ ಅಲ್ಲದೇ ಜಿಲ್ಲೆಯಲ್ಲಿ ಕಂಡುಬರುವ ಎಲ್ಲಾ ಚತುರ್ವೇದಿ ಮಂಗಲಗಳು ಕ್ರಿ.ಶ. ೧೦೦೪ ಮತ್ತು ಕ್ರಿ.ಶ. ೧೧೧೬ರ ನಡಡುವೆ ನಿರ್ಮಿತವಾದವುಗಳು. ಚತುರ್ವೇದಿ ಮಂಗಲಗಳ ರಚನೆ ಚೋಳಪರಂಪರೆ. ಇವರ ಅಧಿಕಾರಾವಧಿಯಲ್ಲಿಯೇ ಜಿಲ್ಲೆಯ ಎಲ್ಲಾ ಚತುರ್ವೇದಿ ಮಂಗಲಗಳು ರಚನೆಯಾಗಿವೆ. ಅನಂತರದ ಅಗ್ರಹಾರಗಳ ರಚನಾ ಉದ್ದೇಶ ಪುಣ್ಯಪ್ರಾಪ್ತಿಗೆ ಮಾತ್ರ ಸೀಮಿತವಾಗಿತ್ತೆಂದು ಹೇಳಬೇಕು. ಪ್ರಾಚೀನ ದಕ್ಷಿಣಾಪಥದ ಹೆದ್ದಾರಿ ಅತಿ ಸಮೀಪದಲ್ಲಿದ್ದ ನಾಗಮಂಗಲ ಚೋಲರ ಕಾಲದಲ್ಲಿ ನಿರ್ಮಾಣವಾಗಿ ಆನಂತರದ ದಿನಗಳಲ್ಲಿ ಗಂಗವಾಡಿ ಪ್ರದೇಶ ಪಡೆದುಕೊಂಡ ಅರ್ಥಿಕ ಮತ್ತು ಸಾಂಸ್ಕೃತಿಕ ಮಹತ್ವದಿಂದಾಗಿ ಹೊಯ್ಸಳರು ಈ ಪ್ರದೇಶವನ್ನು ತಮ್ಮದಾಗಿಸಿಕೊಳ್ಳಲು ಹವಣಿಸಿದರೆಂದು ಹೇಳಬಹುದು. ಈ ಹಿನ್ನೆಲೆಯಲ್ಲಿ ಹಿರಿಯಕೆರೆಯ ಕಾಲವನ್ನು ಚೋಳರ ಕಾಲಕ್ಕೆ ನಿಗದಿಪಡಿಸಬಹುದು.

ಹಿರಿಕೆರೆಯನ್ನು ನಾಗಮಂಗಲ ಸ್ಥಳದ ಪಶ್ಚಿಮ ದಿಕ್ಕಿಗಿರುವ ಬೆಟ್ಟಗಳ ನಡುವೆ ಹರಿದುಬರುವ ತೊರೆಗೆ ಅಡ್ಡಲಾಗಿ ಎತ್ತರವಾದ ಏರಿಯ ನಿರ್ಮಾಣದಿಂದ ಮಾಡಲಾಗಿದೆ. ಕೆರೆಯ ಕೋಡಿಯು ಗ್ರಾಮದ ಉತ್ತರ ದಿಕ್ಕಿಗಿದ್ದು ಅಲ್ಲೊಂದು ದೇವಿಯ ದೇವಾಲಯವಿದೆ. ಅದನ್ನು ಬಡಗೂಡಮ್ಮ ಎಂದು ಕರೆಯಲಾಗುತ್ತದೆ. ಇದರ ಸಮೀಪದಲ್ಲಿಯೇ ಹತ್ತನೆಯ ಶತಮಾನದ್ದೆಂದು ಗುರುತಿಸಲಾದ ಗಂಗರ ತುರುಗೋಳ್ ವೀರಗಲ್ಲು ಶಾಸನವಿದೆ.೧೫ ಈ ಆಧಾರದ ಹಿನ್ನೆಲೆಯಲ್ಲಿ ಗಮನಿಸಿದಾಗಲೂ ನಾಗಮಂಗಲ ಸ್ಥಳವು ವೀರಗಲ್ಲಿನ (ಕ್ರಿ.ಶ. ೯೬೩-೯೬೪) ಕಾಲದ ಹೊತ್ತಿಗಾಗಲೇ ಜನವಸತಿಯ ಪ್ರಮುಖ ಸ್ಥಳವಾಗಿದ್ದು, ಇತರರನ್ನು ಅಕರ್ಷಿಸುವ ಮಟ್ಟಿಗೆ ಬೆಳೆದಿತ್ತೆಂದು ನಿರ್ಧರಿಸಬಹುದು. ಇಲ್ಲಿ ಆ ಕಾಲದ ಹೊತ್ತಿಗೆ ಕೆರೆ ಕೂಡ ನಿರ್ಮಾಣವಾಗಿತ್ತೆಂದು ತಿಳಿಯಬಹುದು. ಇದನ್ನು ಒಪ್ಪಿಕೊಂಡರೆ ಹಿರಿಯ ಕೆರೆಯ ಕಾಲವನ್ನು ಹತ್ತನೆಯ ಶತಮಾನಕ್ಕೆ ನಿರ್ಧರಿಸಬಹುದಾಗಿದೆ. ಕೆರೆಯ ಒಡ್ಡು ಹಂಪೆಯರಸನ ಕೊಳಕ್ಕೆ ಹೊಂದಿಕೊಂಡಂತೆ ಮುಂದುವರೆಯುತ್ತದೆ (ಚಿತ್ರ ೩೬-೩೭). ಅಲ್ಲದೆ ನಾಗಮಂಗಲದ ಜನರ ಕುಡಿಯುವ ನೀರಿನ ಅಸರೆ ಕೂಡ ಇದಾಗಿದ್ದಿತು. ಇತ್ತೀಚಿನ ದಿನಗಳಲ್ಲಿ ಸೂಳೆಕೆರೆಯ ನೀರನ್ನು ಕುಡಿಯುವುದಕ್ಕೆ ಬಳಸಿಕೊಳ್ಳಲಾಗಿದೆ.

ಸೂಳೆಕೆರೆ

ಈ ಕೆರೆಯ ಇತಿಹಾಸ ಯಾವ ಶಾಸನಗಳಲ್ಲಿಯೂ ಉಲ್ಲೇಖವಾಗದಿದ್ದರೂ ನಾಗಮಂಗಲದ ಕೈಫಿಯತ್ತು ಅದರ ಬಗ್ಗೆ ಉಲ್ಲೇಖಿಸುತ್ತದೆ. ನಾಗಮಂಗಲದ ಒಳಕೋಟೆಯನ್ನು ಕಟ್ಟಿಸಿದ ತಿಮ್ಮಣ್ಣ ದಣಾಯಕನೇ ಸೂಳೆಕೆರೆಯನ್ನು ಕಟ್ಟಿಸಿದನೆಂದು ತಿಳಿದುಬರುತ್ತದೆ. ಕೈಫಿಯತ್ತಿನ೧೬ ಪ್ರಕಾರ ಈ ತಿಮ್ಮಣ್ಣ ದಣಾಯಕನು ಕೆರೆಯ ಒಡ್ಡನ್ನು ನಿರ್ಮಿಸುತ್ತಿದ್ಧಾಗ ಒಡ್ಡು ನಿಲ್ಲದೆ ಕೆಲಸ ಅಪೂರ್ಣವಾಯಿತು. ಆ ದಿನಗಳಲ್ಲಿ ಚಿಂತಿತನಾಗಿದ್ದ ದಣಾಯಕನ ಕನಸಿನಲ್ಲಿ ಗಂಗಾದೇವಿಯು ಮುತ್ತೈದೆ ರೂಪದಲ್ಲಿ ಬಂದು ನಿನ್ನ ಆತ್ಮ ಸಖಿಯಾದ ಗಾಂಧರ್ವ ಪತ್ನಿಯನ್ನು ಬಲಿಕೊಟ್ಟರೆ ಕೆರೆಯ ಒಡ್ಡು ಕುಸಿಯದೆ ನಿಲ್ಲುತ್ತದೆಂದು ತಿಳಿಸಿದಳು. ಮರುದಿನ ತಿಮ್ಮಣ್ಣ ದಣಾಯಕರನು ತನ್ನ ಕನಸಿನಲ್ಲಿ ನಡೆದ ಎಲ್ಲಾ ವೃತ್ತಾಂತವನ್ನು ತನ್ನ ಪ್ರಿಯ ಸಖಿಯಲ್ಲಿ ಹೇಳಿಕೊಂಡನು. ಗಂಗೆಯು ಕನಸಿನಲ್ಲಿ ಹೇಳಿದ ಮಾತನ್ನು ಆದರ್ಶವಾಕ್ಯವಾಗಿ ಭಾವಿಸಿದ ಈಕೆ ಸರ್ವಾಲಂಕಾರ ಭೂಷಿತಳಾಗಿ ಶುಭಮುಹೂರ್ತದಲ್ಲಿ ಕೆರೆಯ ಏರಿಗೆ ಬಂದು ತನ್ನೆಲ್ಲಾ ಆಭರಣಗಳನ್ನು ಬ್ರಾಹ್ಮಣರಿಗೆ ದಾನ ಮಾಡಿ ತನ್ನ ಮಾಂಗಲ್ಯವನ್ನು ಕುಸಿಯುತ್ತಿದ್ದ ಏರಿ ಪ್ರದೇಶದಲ್ಲಿ ಹಾಕಿ ಈ ತಿಮ್ಮಣ್ಣ ದಣಾಯಕರು ಮೊದಲಾದ ಸಮಸ್ತ ಮಂದಿ ಬಳಗದ ಇರುವ ಮುಂದೆ, ಗುಡ್ಡಕ್ಕೆ ಅಪಾರ ಶಿಲೆಯಾಗಿ ಬೆಳೆಯುತ್ತ ಬರಲೆಂದು ಹಾರೈಸಿ ಕೆರೆಗೆ ಹಾರವಾದಳು. ಆ ನಂತರ ಕೆರೆಯ ಕಟ್ಟೆ ನಿಂತು ಅಪಾರವಾದ ಜಲರಾಶಿ ಕೆರೆಯಲ್ಲಿ ಶೇಖರವಾಯಿತು. ಹೀಗಾಗಿ ತಿಮ್ಮಣ್ಣ ದಣಾಯಕನು ನಿರ್ಮಿಸಿದ ಕೆರೆಯನ್ನು ಸೂಳೆ ಕೆರೆಯೆಂದು ಹೆಸರಿಸಲಾಗಿದೆ. ಈ ಕೆರೆಯನ್ನು ಎರಡು ಬೆಟ್ಟಗಳ ನಡುವೆ ಒಡ್ಡನ್ನು ಕಟ್ಟಿ ನಿರ್ಮಿಸಲಾಗಿದೆ (ಚಿತ್ರ ೩೮-೪೦).

ಕೆರೆಯ ಪಕ್ಕದ ಬೆಟ್ಟದಲ್ಲಿರುವ ಮಂಟಪ ಮತ್ತು ಅದಕ್ಕೆ ಹೊಂದಿಕೊಂಡಂತಿರುವ ಕೆಲವು ರಚನೆಗಳು, ಅಂದಿನ ದಿನಗಳಲ್ಲಿ ತಿಮ್ಮಣ್ಣ ದಣಾಯಕನ ಗೆಳತಿಯ ನಿವಾಸವಾಗಿತ್ತೆಂದು ಇಲ್ಲಿನ ಕೆಲವು ಉತ್ಸಾಹಿ ಯುವಕರು ಗುರುತಿಸುತ್ತಾರೆ. ಹೀಗಾಗಿ ಅದನ್ನು ಗೆಳತಿಯ ಗುಡ್ಡವೆಂದು ಸಹ ಕರೆಯುತ್ತಾರೆ (ಚಿತ್ರ ೪೧).

ಅಮ್ಮನ ಕೆರೆ

ಸೂಳೆ ಕೆರೆ ಕೆಳಗೆ ಪೂರ್ವ ದಿಕ್ಕಿನಲ್ಲಿ ಅಮ್ಮನಕೆರೆಯೆಂದು ಕರೆಯಲ್ಪಡುತ್ತಿದ್ದ ಇಂದಿನ ಅಮ್ಮನಕಟ್ಟೆ ಇದೆ. ಇದನ್ನು ಸಹ ತಿಮ್ಮಣ್ಣ ದಣಾಯಕನೇ ನಿರ್ಮಿಸಿದನೆಂದು ಕೈಫಿಯತ್ತು ತಿಳಿಸುತ್ತದೆ.೧೭ ತಿಮ್ಮಣ್ಣ ದಣಾಯಕನ ತಾಯಿ ಮಗನನ್ನು ಕುರಿತು, ಎಲ್ಲಾ ದಾನಧರ್ಮಗಳನ್ನು ನಿನ್ನ ಹೆಸರಿನಲ್ಲಿ ಮಾಡುತ್ತಿರುವೆ, ನನ್ನ ಹೆಸರಿನಲ್ಲಿ ಏನಾದರೂ ದಾನಧರ್ಮ ಮಾಡಿದ್ದೀಯಾ ಎಂದು ಪ್ರಶ್ನಿಸಲಾಗಿ ದಣಾಯಕನು ಈ ಸ್ಥಳದ ಪೂರ್ವದಿಕ್ಕಿಯಲ್ಲಿ ಕೆರೆಯೊಂದನ್ನು ನಿರ್ಮಿಸಿ ಅದನ್ನು ಅಮ್ಮನ ಕೆರೆಯೆಂದು ಹೆಸರಿಸಿದನು. ಈ ಕಟ್ಟೆ ಬಹುಶಃ ಅಂದಿನ ಕಾಲದಲ್ಲಿ ಊರ ಹೊರಗೆ ತಂಗುವವರ ಸೌಕರ್ಯಕ್ಕಾಗಿ ನಿರ್ಮಿಸಿದ ಒಂದು ನೀರಾಸರೆಯೆಂದು ತಿಳಿದುಬರುತ್ತದೆ. ಕಾರಣ ಸೂಳೆಕೆರೆಯ ನೀರನ್ನು ಇದು ಆಶ್ರಯಿಸಿದೆ. ಕೋಡಿಯೊಂದರ ಮೂಲಕ ಹರಿವ ನೀರು ಈ ಕಟ್ಟೆಯನ್ನು ಸೇರುತ್ತಿದ್ದಿತೆಂದು ಭಾರತ ಸರ್ವೇಕ್ಷಣ ಭೂಪಟ ತಿಳಿಸಿಕೊಡುತ್ತದೆ ( ಚಿತ್ರ ೪೨).

ಸಿಂಗರಸನ ಕೆರೆ

ನಾಗಮಂಗಲದ ಕೈಫಿಯತ್ತು ಮತ್ತು ಇತರ ದಾಖಲೆಗಳು ನಾಗಮಂಗಲದ ಸ್ಥಳದಲ್ಲಿನ ಸಿಂಗರಸನ ಕೆರೆಯ ಬಗೆಗೆ ಯಾವುದೇ ಮಾಹಿತಿಯನ್ನು ನೀಡುವುದಿಲ್ಲ ಆದರೆ ಸ್ಥಳೀಯ ಐತಿಹ್ಯತಗಳು, ಮೌಖಿಕ ಇತಿಹಾಸದಲ್ಲಿ ಈ ಕೆರೆಯ ಬಗೆಗೆ ಕೆಲವು ವಿಷಯಗಳು ತಿಳಿದುಬರುತ್ತದೆ. ಬಿ.ಎಲ್. ರಯರ್ಸ ರವರು ಮೈಸೂರು ಗೆಜೆಟಿಯರನಲ್ಲಿ ತಿಮ್ಮಣ್ಣ ದಣಾಯಕರ ತಂದೆತಾಯಿಗಳನ್ನು ಸಿಂಗಣ್ಣ ಒಡೆಯರು ಮತ್ತು ಸೀತಾಂಬಿಕಾ ಎಂದು ಗುರುತಿಸಿದ್ಧಾರೆ.೧೮ ಪಾಂಡವಪುರ ತಾಲ್ಲೂಕಿನ ಸೀತಾಪುರದ ಶಾಸನ ಮತ್ತು ಮೇಲುಕೋಟೆಯ ಶಾಸನಗಳಲ್ಲಿ ಸಿಂಗಣ್ಣ ಒಡೆಯರ ಮತ್ತು ಸೀತಾಂಬಿಕೆಯ ಉಲ್ಲೇಖವಿದೆ. ಸೀತಾಪುರದ ಶಾಸನದಂತೆ ಇವರ ಪುತ್ರ ದೇವರಾಜನು ಸೀತಾಪುರ ಗ್ರಾಮವನ್ನು ಶ್ರೀರಾಮಸೀತಾಪುರವೆಂಬ ಹೆಸರಿನಲ್ಲಿ ಅಗ್ರಹಾರವಾಗಿ ನಿರ್ಮಿಸಿ ಕಾವೇರಿಯ ನದಿಗೆ ಅಡ್ಡಗಟ್ಟೆಯನ್ನು ಕಟ್ಟಿ ಹರವು ಗ್ರಾಮಕ್ಕೆ ನೀರಾವರಿ ಸೌಲಭ್ಯವನ್ನು ಒದಗಿಸಿದ್ದನ್ನು ಶಾಸನಗಳು ಉಲ್ಲೇಖಿಸುತ್ತವೆ.೧೯ ಸಿಂಗರಸನ ಕೆರೆಯ ಬಗ್ಗೆ ಬರೆಯುವಾಗ ಈ ಹಿನ್ನೆಲೆ ಅನವಶ್ಯಕವೆಂದು ತೋರಬಹುದು. ಆದರೆ ಈ ಬಗೆಯ ಧರ್ಮಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದ ಸಿಂಗಣ್ಣ ಒಡೆಯರನ ಮಕ್ಕಳಾದ ತಿಮ್ಮಣ್ಣ ಮತ್ತು ದೇವರಾಜ ಒಡೆಯರ ದಿನೇ ದಿನೇ ಬೆಳೆಯುತ್ತಿದ್ದ ನಾಗಮಂಗಲದ ಸ್ಥಳದ ನೀರಿನ ಅವಶ್ಯಕತೆಯನ್ನು ಪೂರೈಸಲು ಸಿಂಗರಸನ ಕೆರೆಯನ್ನು ಕಟ್ಟಿಸಿದ್ದಿರಬಹುದೆಂದು ಈ ಹಿನ್ನೆಲೆಯಲ್ಲಿ ಮತ್ತು ಹೆಸರಿನ ಸಾಮ್ಯತೆಯ ಆಧಾರದ ಮೇಲೆ ಊಹಿಸಬಹುದಾಗಿದೆ. ಸ್ಥಳದ ಮೌಖಿಕ ಇತಿಹಾಸದ ಬೆನ್ನು ಹತ್ತಿದಾಗ ಸಹ ಇದೇ ವಿಷಯ ವೇದ್ಯವಾಗುತ್ತದೆ. ಕೈಫಿಯತ್ತಿನ ಅಮ್ಮಕಟ್ಟೆಯ ಬಗೆಗಿನ ಉಲ್ಲೇಖದ ಹಿನ್ನೆಲೆಯಲ್ಲಿ ನೋಡಿದಾಗ ಸಹ ತಿಮ್ಮಣ್ಣ ದಣಾಯಕನೇ ಸಿಂಗರಸನ ಕೆರೆಯನ್ನು ನಿರ್ಮಿಸಿರುವ ಸಾಧ್ಯತೆ ಎದುರಾಗುತ್ತದೆ. ಈ ಎಲ್ಲಾ ಹಿನ್ನಲೆಯಲ್ಲಿ ಸಿಂಗರಸನ ಕೆರೆಯನ್ನು ತಿಮ್ಮಣ್ಣ ದಣಾಯಕರೇ ನಿರ್ಮಿಸಿದರೆಂದು ಅಭಿಪ್ರಾಯಪಡಬಹುದಾಗಿದೆ ೨೦ (ಚಿತ್ರ ೪೩).

ಹಂಪೆಯರಸನ ಕೊಳ

ಹಿರಿಯಕೆರೆ ಪಕ್ಕದಲ್ಲಿಯೇ ಕೆರೆಯ ಏರಿಗೆ ಸೇರಿದಂತಿರುವ ಕೊಳವೇ ಹಂಪೆ ಅರಸನಕೊಳ. ಕೆರೆಯ ತೊಂಬೊಂದರ ಮೂಲಕ ಬರುವ ಜಲ ಚೌಕಾಕಾರವಾದ ಮೆಟ್ಟಿಲುಗಳಿಂದ ನಿರ್ಮಿತವಾದ ಈ ಕೊಳವನ್ನು ತುಂಬಿಸುತ್ತದೆ. ಹೆಚ್ಚಿನ ನೀರು ಹೊರಗಿಂಡಿಯ ಮೂಲಕ ಹೊರಟು ಹಂಪೆಯರಸ ಕೊಳದ ಆಗ್ನೇಯಕ್ಕಿರುವ ಮತ್ತೊಂದು ಕೊಳವನ್ನು ಸೇರುತ್ತಿತ್ತು. ವಿಜಯನಗರದ ಸಾಳ್ವ ನರಸಿಂಹನು ಶ್ರೀರಂಗಪಟ್ಟಣದ ಮುತ್ತಿಗೆಯ ಕಾಲದಲ್ಲಿ ನಾಗಮಂಗಲವನ್ನು ಸಂದರ್ಶಿಸಿದ್ದು, ಇಲ್ಲಿಯ ಆಡಳಿತವನ್ನು ನೋಡಿಕೊಳ್ಳಲು ಯಾರು ಇಲ್ಲದಿದ್ದುದ್ದನ್ನು ಮನಗಂಡು ಹಂಪಿಯರಸು ಮತ್ತು ಚನ್ನರಸು ಎಂಬ ಇಬ್ಬರು ಅಣ್ಣತಮ್ಮಂದಿರನ್ನು ಈ ಪ್ರದೇಶದ ಆಡಳಿತ ನೋಡಿಕೊಳ್ಳಲು ನೇಮಿಸಿದನು.೨೧ ಇವರು ದಣಾಯಕರು ಆಳ್ವಿಕೆ ನಡೆಸುತ್ತಿದ್ದ ಎಲ್ಲಾ ಪ್ರದೇಶಗಳನ್ನು ಸ್ವಾಧೀನ ಮಾಡಿಕೊಂಡು ಉತ್ತಮ ಆಡಳಿತ ನಿರ್ವಹಣೆ ನಡೆಸುತ್ತಿದ್ದರು. ಇವರುಗಳು ನಿರ್ಮಿಸಿದ ಜಲಾಶ್ರಯವನ್ನು ಹಂಪೆ ಅರಸನ ಕೊಳವೆಂದು ಜನರು ಕರೆಯಲಾರಂಭಿಸಿದ್ದರಿಂದ ಈ ಜಲಾಶ್ರಯಕ್ಕೆ ಇದೇ ಅನ್ವರ್ಥನಾಮ ಬಂದಿದೆ.೨೨ ದಿನ ಕಳೆದಂತೆ ಜನರ ಆಸಕ್ತಿ ಶುಚಿತ್ವ ಕಾಪಾಡುವಲ್ಲಿ ಹಿಂದೆ ಸರಿಯಿತು. ಹೀಗಾಗಿ ಐತಿಹಾಸಿಕ ಮಹತ್ವವುಳ್ಳ ಈ ಜಲಾಶ್ರಯ ತಮ್ಮ ಸೌಂದರ್ಯವನ್ನು ಕಳೆದುಕೊಂಡು ವಿಕಾರವಾಗಿದ್ದವು. ಸ್ವಾತಂತ್ರ‍್ಯ ನಂತರ ಹಂಪಿ ಅರಸನ ಕೊಳವನ್ನು ಸ್ಥಳೀಯ ಪುರಸಭೆಯವರು ಅದರ ಮೂಲರೂಪ ಉಳಿಸಿಕೊಂಡು ಕೊಳಕ್ಕೆ ಶುಚಿತ್ವವನ್ನು, ದೈವ ಸಾನಿಧ್ಯವನ್ನು ಒದಗಿಸಿದ್ದಾರೆ (ಚಿತ್ರ ೪೪). ಇದೇ ಮಾದರಿಯ ಮತ್ತೊಂದು ಕೊಳ ಇದರ ಸಮೀಪದಲ್ಲೇ ಕಂಡು ಬರುತ್ತಿದೆಯಾದರು ಅದರ ವಿಸ್ತಾರವನ್ನು ಮತ್ತು ಅದರ ಆಕಾರವನ್ನು ಗುರುತಿಸಲಾರದಷ್ಟು ನಶಿಸಿದೆ. ಇದನ್ನು ಪುನಃ ಪೂರ್ವ ಸ್ಥಿತಿಗೆ ತರುವ ಪ್ರಯತ್ನಗಳು ಸ್ಥಳದ ಆಸಕ್ತರಿಂದ ಮತ್ತು ಇತರರಿಂದ ನಡೆಯಿತಾದರೂ ಅದು ಯಶಸ್ಸನ್ನು ಕಂಡಿಲ್ಲ.

ಚಕ್ರತೀರ್ಥ

ಗ್ರಾಮದ ಪೂರ್ವಕ್ಕೆ ಒಂದು ಕಿ.ಮೀ. ದೂರದಲ್ಲಿ ಒಂದು ಕಲ್ಲಿನ ವೃತ್ತಾಕಾರವಾದ ಕೊಳವಿದೆ. ಈ ಕೊಳ ಶ್ರೀ ವೈಷ್ಣವ ಸಂಪ್ರದಾಯದ ವ್ಯಕ್ತಿಯೊರ್ವರ ಖಾಸಗಿ ಜಮೀನಿನಲ್ಲಿದೆ. ಈ ಕೊಳ ೬೦ ಅಡಿ ವ್ಯಾಸವನ್ನು ಹೊಂದಿದ್ದು ೩ ರಿಂದ ೪ ಅಡಿಗಳಷ್ಟು ಆಳವಾಗಿದ್ದು, ಸ್ವಚ್ಚವಾದ ಜಲರಾಶಿಯನ್ನು ಹೊಂದಿದೆ.೨೩ ಕೊಳದ ಕೆಳಭಾಗವನ್ನು ಹಾಸುಗಲ್ಲುಗಳಿಂದ ಸಮತಟ್ಟಾಗಿ ನಿರ್ಮಿಸಿ ಅದರ ಮೇಲೆ ಕೊಳದ ಮೆಟ್ಟಿಲುಗಳನ್ನು ನಿರ್ಮಿಸಲಾಗಿದೆ. ಸರ್ವಕಾಲದಲ್ಲಿಯೂ ಇಲ್ಲಿ ಜಲರಾಶಿ ಒಂದೇ ಮಟ್ಟದಲ್ಲಿರುತ್ತದೆ. ಹೆಚ್ಚಿನ ನೀರು ತೂಬಿನ ಮೂಲಕ ಹಾದು ಹೊರಹೋಗುತ್ತದೆ. ಇಲ್ಲಿನ ಪ್ರತೀತಿಯ ಪ್ರಕಾರ ಇದನ್ನು ವಿಜಯನಗರ ಸಂಸ್ಥಾನದ ನಂತರದ ದಿನಗಳಲ್ಲಿ ಈ ಪ್ರದೇಶವು ಜಗದೇವರಾಯನಿಗೆ ಹಸ್ತಾಂತರವಾಯಿತು. ಆ ಕಾಲದಲ್ಲಿ ಜಗದೇವರಾಯನು ಇದನ್ನು ತನ್ನ ಪ್ರೇಯಸಿಯಾದ ತರಂಗಿಣಿಯ ಜಲಕ್ರೀಡೆಗಾಗಿ ನಿರ್ಮಿಸಿದನೆಂದು ಐತಿಹ್ಯವು ತಿಳಿಸುತ್ತದೆ. ಜಗದೇವರಾಯನನ್ನು ಮಣಿಸುವ ಸಲುವಾಗಿ ಶತ್ರುಗಳು ಮೋಸದಿಂದ ಆತನ ಪ್ರೇಯಸಿ ತರಂಗಿಣಿಯನ್ನು ಕೊಂದರೆಂದು ತಿಳಿದುಬರುತ್ತದೆ.೨೪ ಕೈಫಿಯತ್ತು ಕೂಡ ಜಗದೇವರಾಯನನ್ನು ಉಲ್ಲೇಖಿಸುತ್ತದೆಯೇ ಹೊರತು ಆತನು ನಿರ್ಮಿಸಿದ ಕೊಳದ ಬಗ್ಗೆ ಏನನ್ನು ಹೇಳುವುದಿಲ್ಲ. ಮತ್ತೊಂದು ಐತಿಹ್ಯದ ಪ್ರಕಾರ ರಾಮಾನುಜಾಚಾರ್ಯರು ಚಕ್ರತೀರ್ಥವನ್ನು ಗುರುತಿಸಿ ಜೀರ್ಣೋದ್ಧಾರ ಮಾಡಿದರೆಂದು ತಿಳಿದುಬರುತ್ತದೆ. ಇದಕ್ಕೆ ಪೂರ್ವದಲ್ಲಿ ಧರ್ಮರಾಯನು ಅಶ್ವಮೇಧ ಯಾಗವನ್ನು ಮಾಡಿದಾಗ ಬಬ್ರುವಾಹನನು ಪಿತೃಹತ್ಯೆಯ ದೋಷವನ್ನು ನಿವಾರಿಸಿಕೊಳ್ಳುವ ಸಲುವಾಗಿ ಈ ಚಕ್ರಕೊಳದಲ್ಲಿ ತಪಸ್ಸನ್ನಾಚರಿಸಿ ಶಾಪವಿಮುಕ್ತನಾದನೆಂದು ತಿಳಿಸುತ್ತದೆ. ರಾಮಾನುಜಾಚಾರ್ಯರು ಇದನ್ನು ನಿರ್ಮಿಸಿದರೋ ಇಲ್ಲವೋ ತಿಳಿಯದು. ಬಬ್ರುವಾಹನನು ಇಲ್ಲಿ ತಪ್ಪಸನ್ನಾಚರಿಸಿದ್ದು, ಐತಿಹ್ಯವೇ ಸರಿ. ಈ ಐತಿಹ್ಯಗಳ ಹಿನ್ನೆಲೆಯಲ್ಲಿ ನಾಗಮಂಗಲ ಸ್ಥಳಕ್ಕೆ ಫಣಿಪುರ, ಮಣಿಪುರ, ನಾಗಾಪುರ, ನಾಗಮಂಡಲ ಮುಂತಾದ ಹೆಸರುಗಳು ಬಂದಿವೆ. ಇಲ್ಲಿನ ನರಸಿಂಹಸ್ವಾಮಿಯ ದೇವಾಲಯ ಮತ್ತು ಚಕ್ರಕೊಳವನ್ನು ಆಚಾರ್ಯರು ನಿರ್ಮಿಸಿದರೆಂದು ಈ ಎಡು ಸ್ಥಳಗಳು ರಾಮಾನುಜರಿಗೆ ಪೂರ್ವದಲ್ಲಿಯೇ ಮಹಿಮಾನ್ವಿತ ಸ್ಥಳಗಳಾಗಿದ್ದವೆಂದು ತಿಳಿದುಬರುತ್ತದೆ.

ಈ ಐತಿಹ್ಯವನ್ನು ಒಪ್ಪುವುದಾದರೆ ಜಗದೇವರಾಯನು ಇದನ್ನು ತನ್ನ ಪ್ರೇಯಸಿಯ ಜಲಕ್ರೀಡೆಯ ಸಾಧನವಾಗಿ ಬಲಸಿದನೆಂಬುದನ್ನು ನಂಬಲಾಗವುದಿಲ್ಲ. ಆದರೆ ಕೊಳದ ಮಧ್ಯ ದಲ್ಲಿರುವ ಮಂಟಪದ ಸಹಾಯದಿಂದ ಇದು ದೈವಕಾರ್ಯಗಳಿಗೆ ನಿಯೋಜಿತವಾಗಿದ್ದ ಸ್ಥಳವೆಂದು ಮಾತ್ರ ಗುರುತಿಸಬಹುದಾಗಿದೆ (ಚಿತ್ರ ೪೫-೪೬). ಪ್ರಾಯಶಃ ಗ್ರಾಮದ ಪೂರ್ವದಲ್ಲಿಯರು ಈ ಕೊಳವು ಪರಿಶುದ್ಧ ಜಲರಾಶಿಯನ್ನು ಹೊಂದಿರುವುದರಿಂದ ದೇವತೆಗಳ ಅವಭೃತ ಸ್ನಾನಕ್ಕೆ ಮೀಸಲಾಗಿತ್ತೆಂದು ಊಹಿಸಬಹುದು. ಗ್ರಾಮದ ಒಳಗೆ ಅರಮನೆಯ ನಿವೇಶನವೆಂದು ಗುರುತಿಸಲ್ಪಟ್ಟ ಸ್ಥಳದಲ್ಲಿ ಇಂತಹ ಮತ್ತೊಂದು ಕೊಳವಿದ್ದುದನ್ನು ಹಿರಿಯರು ಇಂದಿಗೆ ನೆನೆಯುತ್ತಾರೆ. ಆದರೆ ಅದು ನಗರೀಕರಣ ವ್ಯವಸ್ಥೆಗೆ ಸ್ಥಳ ಮಾಡಿಕೊಡುವುದರೊಂದಿಗೆ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದೆ. ಬಹುಶಃ ಆ ಕೊಳವನ್ನು ಜಗದೇವರಾಯನು ನಿರ್ಮಿಸಿ ಜಲಕ್ರೀಡೆಗೆ ಬಳಸಿದ್ದಿರಬಹುದು.

ನಾಗಮಂಗಲದ ಬೆಳವಣಿಗೆಯ ಇತಿಹಾಸ ಮತ್ತು ಅಲ್ಲಿನ ಜಲರಾಶಿಯ ನಿರ್ಮಾಣಗಳು ಒಂದಕ್ಕೊಂದು ಹೆಣೆದುಕೊಂಡಿದೆ. ಅಂದರೆ ನಾಗಮಂಗಲದ ಸ್ಥಳದ ಪ್ರಾಮುಖ್ಯತೆ ಬೆಳೆದಂತೆ, ಅಲ್ಲಿನ ಜನವಸತಿ, ಆರ್ಥಿಕ ವಹಿವಾಟು ಸಹ ಬೆಳೆಯಿತು. ಇದು ಅಂದಿನ ಅಡಳಿತಗಾರರನ್ನು ಆಕರ್ಷಿಸಿ ಸ್ಥಾನಿಯ ರಾಜಧಾನಿಯನ್ನಾಗಿ ಮಾರ್ಪಡಿಸುವಂತೆ ಪ್ರೇರೇಪಿಸಿತು. ಹೊಯ್ಸಳರ ಅವನತಿಯ ಹೊತ್ತಿಗೆ ನಾಗಮಂಗಲ ಶ್ರೀರಂಗಪಟ್ಟಣ – ದೋರಸಮುದ್ರ, ದೋರಸಮುದ್ರ -ಕಂಚಿ ಹೆದ್ದಾರಿಯ ಪ್ರಮುಖ ಸ್ಥಾನವಾಗಿದ್ದಿತು. ಇದು ವಿಜಯನಗರದ ಅರಸರ ಅಕರ್ಷಣೆಯ ಕೇಂದ್ರವಾಯಿತು. ಮೈಸೂರು ಅರಸರು ಈ ಪ್ರದೇಶದ ಅಭಿವೃದ್ಧಿಗೆ ತಮ್ಮದೇ ಆದ ಕಾಣಿಕೆ ನೀಡಿದರು. ಈ ಎಲ್ಲಾ ರಾಜಕೀಯ ಮನೆತನಗಳ ಪ್ರೋತ್ಸಾಹದಿಂದ ನಾಗಮಂಗಲ ಸ್ಥಳ ಪ್ರಮುಖ ಸಾಂಸ್ಕೃತಿಕ ಮತ್ತು ರಾಜಕೀಯ ಕೇಂದ್ರವಾಗಿ ಬೆಳೆಯಿತು. ಬೆಳವಣಿಗೆಗೆ ಅನುಸಾರವಾಗಿ ನೀರಿನ ಅವಶ್ಯಕತೆಯನ್ನು ಒದಗಿಸಲು ಅಂದಿನ ಡಳಿತಗಾರರು ಅಸಕ್ತಿ ವಹಿಸಿದ್ದರು. ಅದರ ಫಲವಾಗಿ ಇಲ್ಲಿನ ಕೆರೆಗಳು, ಕಟ್ಟೆಗಳು ನಿರ್ಮಾಣವಾದವು. ಈ ಕೆರೆಕಟ್ಟೆಗಳು ಕೇವಲ ಭೌತಿಕ ಆಕಾರಗಳಷ್ಟೇ ಅಲ್ಲ. ಸಾಂಸ್ಕೃತಿಕ ಮತ್ತು ಇತಿಹಾಸದ ಕುರುಹುಗಳಾಗಿ ಸಹ ನಮ್ಮ ಮುಂದಿವೆ.

 

ಅಡಿಟಿಪ್ಪಣಿಗಳು

೧. ರೈಸ್ ಬಿ.ಎಲ್., ೧೮೯೭ : ಮೈಸೂರು, ಎ ಗೆಜೆಟಿಯರ ಕಂಪೈಲ್ಡ್ ಫಾರ‍್ ಗೌರ‍್ನಮೆಂಟ್, ವೆಸ್ಟ ಮಿನಿಸ್ಟರ, ಲಂಡನ್, ಸಂ.೨, ಪು ೨೮೪-೨೮೭

೨. ಅದೇ,

೩. ಅದೇ

೪. ಸ್ವಾಮಿ ಲ.ನ. ೨೦೦೮ : ಮಂಡ್ಯ ಜಿಲ್ಲೆಯ ಶಾಸನಗಳಲ್ಲಿ ಕಂಡಂತೆ ಪ್ರಾಚೀನ ಶಿಕ್ಷಣ, ಮಂಡ್ಯ ಜಿಲ್ಲೆಯ ಇತಿಹಾಸ ಮತ್ತು ಪರಾತತ್ವ ಡಾ. ಆರ. ಗೋಪಾಲ್ (ಸಂ) ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯ, ಮೈಸೂರು, ಪುಟ ೫೨-೬೪ ಎ.ಕ.ಸಂ. ೭, ಪಾಂ.ಪು.೧೫೩,೧೯

೫. ರೈಸ್ ಬಿ.ಎಲ್., ಪೂರ್ವೋಕ್ತ

೬. ಅದೇ,

೭. ಸ್ವಾಮಿ ಲ.ನ. ಪೂರ್ವೋಕ್ತ : ಎ.ಕ.ಸಂ. ೭, ನಾಮಂ. ೧, ೮, ಪಾಂ.ಪು. ೧೫೭

೮. ಅದೇ

೯. ಅದೇ

೧೦. E.C. ಸಂ.೭, ನಾ.ಮಂ. ಕ್ರಿ.ಶ. ೧೧೩೪

೧೧. E.C. ಸಂ.೭, ನಾ.ಮಂ.೧೨ ಕ್ರಿ.ಶ. ೯೬೩-೬೪

೧೨. E.C. ಸಂ.೭, ನಾ.ಮಂ. ೭ ಕ್ರಿ.ಶ. ೧೧೩೪

೧೩. ಸ್ವಾಮಿ ಲ.ನ. ೨೦೦೮ : ಪೂರ್ವೋಕ್ತ : ಲ.ನ. ಸ್ವಾಮಿ ೨೦೦೮, “ಕೆರೆಕಟ್ಟೆಗಳು”, ತೊಣ್ಣೂರು, ಮಹದೇವ ಸಿ. (ಸಂ.), ಕನ್ನಡ ವಿಶ್ವವಿದ್ಯಾಲಯ, ಹಂಫೆ, ಪುಟ ೧೨೯-೧೪೯

೧೪. E.C. ಸಂ.೬, ಶ್ರೀ.ಪ. ೬೭ ಕ್ರಿ.ಶ. ೧೧೦೨-೧೧೦೩

೧೫. E.C. ಸಂ.೭, ನಾ.ಮಂ.೧೨ ಕ್ರಿ.ಶ. ೯೬೩-೬೪

೧೬. ಕಲಬುರ್ಗಿ ಎಂ.ಎಂ. ೧೯೯೪ : ಕರ್ನಾಟಕ ಕೈಫಿಯತ್ತುಗಳು, ಕನ್ನಡ ವಿಶ್ವವಿದ್ಯಾಲಯ, ಹಂಪೆ, ಪುಟ ೮೨-೮೬

೧೭. ಅದೇ

೧೮. ರೈಸ್ ಬಿ.ಎಲ್., ಪೂರ್ವೋಕ್ತ

೧೯. ಸ್ವಾಮಿ ಲ.ನ. ೨೦೦೮ : ಪೂರ್ವೋಕ್ತ

೨೦. ಮುಹಮ್ಮದ್ ಕಲೀಂ ಉಲ್ಲ, ೨೦೦೩ : ನಾಗಮಂಗಲ ತಾಲ್ಲೂಕು ದರ್ಶನ, ಲೇಖಕರಿಂದ ಪ್ರಕಟಿತ,ಪುಟ ೨೯

೨೧. ಕಲ್ಬುರ್ಗಿ ಎಂ.ಎಂ., ಪೂರ್ವೋಕ್ತ

೨೨. ಅದೇ

೨೩. ಅನಂತರಾಮ, ಸಕ್ಕರೆಯ ಸೀಮೆ, ಅನಂತ ಪ್ರಕಾಶನ, ಮೈಸೂರು, ಪುಟ ೩೦೦-೩೧೦

೨೪. ಅದೇ

ನಾಗಮಂಗಲದ ಕೆರೆಕಟ್ಟೆಗಳ ನಕ್ಷೆ

ನಾಗಮಂಗಲದ ಕೆರೆಕಟ್ಟೆಗಳ ನಕ್ಷೆ