೭-೪-೧೯೫೦ ರಂದು ಮೈಸೂರಿನಲ್ಲಿ ಜನಿಸಿದ ನಾಗಮಣಿ ತಮ್ಮ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ಐದನೇ ವಯಸ್ಸಿನಿಂದಲೇ ಆರಂಭಿಸಿದರು. ಅರಕೆರೆ ನಾರಾಯಣರಾವ್‌, ಗೌರಿ ಕುಪ್ಪುಸ್ವಾಮಿ, ವಿ. ರಾಮರತ್ನಂ ಇವರುಗಳಲ್ಲಿ ಶಿಕ್ಷಣ ಪಡೆದು ಸಂಗೀತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು.  ರಾಜ್ಯ ಸರ್ಕಾರವು ನಡೆಸುವ ಪರೀಕ್ಷೆಯಲ್ಲೂ ವಿದ್ವತ್‌ದರ್ಜೆಯಲ್ಲಿ ಮೊದಲ ಸ್ಥಾನ ಗಳಿಸಿದರು. ಕೇಂದ್ರ ಸರ್ಕಾರದ ವಿದ್ಯಾರ್ಥಿ ವೇತನ ದೊರಕಿದಾಗ ಗುರುಕುಲ ಪದ್ಧತಿಯಲ್ಲಿ ರಾಮನಾಥ್‌ ಕೃಷ್ಣನ್‌ಅವರಲ್ಲಿ ಶಿಕ್ಷಣ ಪಡೆದರು. ಬಿ. ಎಸ್‌. ಕೃಷ್ಣನ್‌, ಟಿ.ಎಂ. ತ್ಯಾಗರಾಜನ್‌, ಪಾಲ್ಘಾಟ್‌ಕೆ.ವಿ. ನಾರಾಯಣಸ್ವಾಮಿ ಮುಂತಾದವರಿಂದಲೂ ಮಾರ್ಗದರ್ಶನ ಪಡೆದರು. ಶ್ರೀಮತಿಯರಾದ ಬೃಂದಾ-ಮುಕ್ತಾ ಅವರಿಂದ ಪದ-ಜಾವಳಿಗಳನ್ನು ಕಲಿತರು.

ಮೊದಲು ಮೈಸೂರು ಮಹಾರಾಣಿ ಕಾಲೇಜಿನ ಸಂಗೀತ ವಿಭಾಗದ ಮುಖ್ಯಸ್ಥೆಯಾಗಿದ್ದು ಪ್ರಸ್ತುತ ಬೆಂಗಳೂರು ಮಹಾರಾಣಿ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ‘ಸುನಾದ ಸಾಂಸ್ಕೃತಿಕ ಕೇಂದ್ರ’ವನ್ನು ಸ್ಥಾಪಿಸಿ ತನ್ಮೂಲಕ ಮೈಸೂರಿನಲ್ಲಿ ಹಲವಾರು ವಿದ್ಯಾರ್ಥಿಗಳಿಗೆ ಸಂಗೀತ ಶಿಕ್ಷಣ ನೀಡಿದ್ದಾರೆ. ಆಕಾಶವಾಣಿ ದೂರದರ್ಶನಗಳ ಮಾಧ್ಯಮದಿಂದಲೂ ಸಂಗೀತ ಪ್ರಿಯರಿಗೆ ಸುರಿಚಿತರಾಗಿರುವ ನಾಗಮಣಿ ವಾಗ್ಗೇಯಕಾರರಾಗಿ ವರ್ಣ ಕೀರ್ತನೆ ತಿಲ್ಲಾಣಗಳನ್ನು ರಚಿಸಿ ಕ್ಷೇತ್ರಕ್ಕೆ ನೀಡಿರುತ್ತಾರೆ. ಉಭಯಗಾನ ವಿದುಷಿ ಶ್ಯಾಮಲಾ ಜಿ. ಭಾವೆಯವರೊಡನೆ ಹಲವಾರು ಜುಗಲ್‌ಬಂದಿ ಕಾರ್ಯಕ್ರಮಗಳನ್ನು ನೀಡಿದ್ದಾರೆ.

‘ಹರಿದಾಸ ಸ್ಪಂದನ’, ‘ತಿಲ್ಲಾನಗಳು’, ‘ಕೃಷ್ಣಂ ವಂದೇ ಜಗದ್ಗುರುಂ’ – ಇವರ ಅಪೂರ್ವ ಧ್ವನಿಸುರುಳಿಗಳಲ್ಲಿ ಕೆಲವು. ಶಿಕ್ಷಕರ ದಿನಾಚರಣೆಯ ಸಂದರ್ಭದಲ್ಲಿ ‘ಉತ್ತಮ ಶಿಕ್ಷಕಿ’ ಎಂಬ ರಾಷ್ಟ್ರಪತಿ ಪ್ರಶಸ್ತಿಯನ್ನು ಗಳಿಸಿರುವ ಇವರನ್ನು ಅನೇಕ ಸಂಘ ಸಂಸ್ಥೆಗಳು, ಸಭೆಗಳೂ ಸನ್ಮಾನಿಸಿವೆ. ‘ಗಾನ ಕಲಾಶ್ರೀ’, ‘ಗಾನ ಸರಸ್ವತಿ’ ಪ್ರಶಸ್ತಿಗಳೊಡನೆ ‘ಕರ್ನಾಟಕ ಕಲಾಶ್ರೀ’ ಪ್ರಶಸ್ತಿಯೂ ಸಂದಿದೆ. ಉತ್ತಮ ಗಾಯಕಿಯೂ, ಬೋಧಕಿಯೂ ಆಗಿರುವ ನಾಗಮಣಿಯವರ ಸೇವೆ ಪ್ರಶಂಸನೀಯ.