ನಾಗಮಹಾಶಯ —ರಾಮಕೃಷ್ಣ ಪರಮಹಂಸರ ಶಿಷ್ಯರಲ್ಲಿ ಒಬ್ಬರು. ಎಲ್ಲ ಪ್ರಾಣಿಗಳಲ್ಲಿ ಅಪಾರ ದಯೆ. ವೈದ್ಯರಾಗಿದ್ದುದು ಹಣಕ್ಕಾಗಿ ಅಲ್ಲ, ರೋಗಿಗಳ ಸೇವೆಗಾಗಿ. ಸಂಸಾರದಲ್ಲಿದ್ದೂ ಸನ್ಯಾಸಿ, ಎಲ್ಲ ಬಗೆಯ ಆಸೆಗಳನ್ನು ಗೆದ್ದ ಮಹಾಪುರುಷ.

ನಾಗಮಹಾಶಯ

 

ದುರ್ಗಾಚರಣ ನಾಗ ಎಂಬ ಬಾಲಕ. ಅವನಿದ್ದುದು ಚಿಕ್ಕ ಹಳ್ಳಿಯಲ್ಲಿ. ಅಲ್ಲಿ ದೊಡ್ಡ ಶಾಲೆಯಿರಲಿಲ್ಲ. ಬಾಲಕನಿಗಾದರೋ ಕಲಿಯಲು ತುಂಬ ಉತ್ಸಾಹ. ಬಡತನದ ಮನೆತನ. ಪರವೂರಿನ ಶಾಲೆಗೆ ಕಳಿಸಲು ತಂದೆಗೆ ಅನುಕೂಲವಿರಲಿಲ್ಲ. ಆ ಹಳ್ಳಿಯಿಂದ ಹತ್ತು ಮೈಲಿ ದೂರದಲ್ಲಿ ಒಂದು ದೊಡ್ಡ ನಗರವಿತ್ತು. ಅಲ್ಲಿ ಒಳ್ಳೆಯ ಶಾಲೆಗಳಿದ್ದವು. ಬಾಲಕನು ತನ್ನ ವಿದ್ಯಾಭ್ಯಾಸ ಮುಂದುವರಿಸುವ ಹಂಬಲವನ್ನು ತಡೆಯದಾದ. ಪ್ರತಿನಿತ್ಯವೂ ಹತ್ತುಮೈಲಿ ನಡೆದುಹೋಗಿ ನಗರದ ಶಾಲೆಯಲ್ಲಿ ಕಲಿಯಬೇಕೆಂದು ಮನಸ್ಸು ಮಾಡಿದ. ಇದರಿಂದ ಬಾಲಕನಿಗೆ ತೊಂದರೆಯಾಗುವುದೆಂದು ಪಾಲಕರು ಹೇಳಿದರು. ಬಾಲಕ ತನ್ನ ನಿರ್ಧಾರದಿಂದ ಕದಲಲಿಲ್ಲ. ಕಷ್ಟಪಡುವುದಕ್ಕೆ ಹಿಂಜರಿಯಲಿಲ್ಲ. ಬಿಸಿಲು, ಮಳೆ, ಮಂಜು ಇರುವಾಗಲೂ ಈತನು ನಿತ್ಯವೂ ನಗರದ ಶಾಲೆಗೆ ಹೋಗಿ ಬರತೊಡಗಿದ. ದಾರಿಯಲ್ಲಿ ಹಸಿವೆಯಾದಾಗ ಮೂರು ಕಾಸಿನ ಪುರಿಕಡಲೆ ತಿನ್ನುತ್ತಿದ್ದ. ಹೀಗೆ ಕಷ್ಟಪಡುತ್ತ ಆತನು ತನ್ನ ವಿದ್ಯಾಭ್ಯಾಸ ಮುಂದುವರೆಸಿದ.

ಎಲ್ಲ ಪ್ರಾಣಿಗಳ ಗೆಳೆಯ

ದುರ್ಗಾಚರಣ ಮುದ್ದು ಹುಡುಗ. ವಿನಯವಂತ. ಶಾಂತ ಸ್ವಭಾವದವ. ಎಂದೂ ಸುಳ್ಳು ಹೇಳುತ್ತ್ತಿರಲಿಲ್ಲ. ಯಾವಾಗಲೂ ತನ್ನ ಅಭ್ಯಾಸದಲ್ಲಿ ತೊಡಗುತ್ತಿದ್ದ ವರ್ಗದ ಹುಡುಗರು ಜಗಳವಾಡುತ್ತಿದ್ದರೆ ಈತನು ಮಧ್ಯೆ ಬಂದು ಅವರ ಜಗಳ ತೀರಿಸುತ್ತಿದ್ದ. ಬೆಳದಿಂಗಳನ್ನು, ಗಿಡಮರಗಳನ್ನು ನೋಡಿ ಹರ್ಷಪಡುತ್ತಿದ್ದ. ಶಾಲೆಯಲ್ಲಿ ಗುರುಗಳ ಮೆಚ್ಚುಗೆ ಗಳಿಸಿದ. ಎಲ್ಲ ವಿದ್ಯಾರ್ಥಿಗಳೂ ಅವನನ್ನು ಪ್ರೀತಿಸುತ್ತಿದ್ದರು.

ಅವರ ಮನೆಯ ಮುಂದೆ ಒಂದು ಕೊಳ. ಹುಡುಗ ಕೊಂಚ ಅನ್ನವನ್ನು ತೆಗೆದುಕೊಂಡು ಕೊಳದ ಮೀನುಗಳಿಗೆ ಹಾಕುತ್ತಿದ್ದ. ಮೀನುಗಳು ಬಂದು ಅನ್ನದ ಅಗುಳು ಕಚ್ಚುತ್ತಿರುವುದನ್ನು ಕಂಡು ಈತ ಹಿರಿಹಿರಿ ಹಿಗ್ಗುತ್ತಿದ್ದ. ಒಬ್ಬ ಮೀನುಗಾರ ಆ ಕೊಳಕ್ಕೆ ಬಂದು ಬಲೆಹಾಕಿ ಮೀನು ಹಿಡಿಯುತ್ತಿದ್ದ. ಮೀನುಗಳು ಅವನ ಬುಟ್ಟಿಯಲ್ಲಿ ವಿಲಿವಿಲಿ ಒದ್ದಾಡುತ್ತಿದ್ದವು. ಇದನ್ನು ಕಂಡು ಈ ಬಾಲಕನ ಕಣ್ಣಲ್ಲಿ ನೀರು ಬರುತ್ತಿತ್ತು. ಆಗ ಈತನು ಮಿನುಗಾರನಿಗೆ ಕಾಸುಕೊಟ್ಟು ಮೀನುಗಳನ್ನು ಕೊಳ್ಳುತ್ತಿದ್ದ. ಮತ್ತೆ ಅವನ್ನು ಆ ನೀರಿಗೆ ಬಿಡುತ್ತಿದ್ದ ಅವು ನೀರಿನಲ್ಲಿ ನೆಗೆಯುತ್ತಿರುವುದನ್ನು ಕಂಡು ಆನಂದ ಪಡುತ್ತಿದ್ದ.

ನಾಯಿಬೆಕ್ಕುಗಳು ಕೂಗಿದಾಗ ಅವು ಹಸಿವೆಯಿಂದ ಹಾಗೆ ಮಾಡುತ್ತಿವೆ ಎನ್ನಿಸುತ್ತಿತ್ತು ಹುಡುಗನಿಗೆ. ತಾನೇ ಕೊಂಚ ತಿಂಡಿ ತೆಗೆದುಕೊಂಡು ಹೋಗಿ ಅವುಗಳಿಗೆ ಹಾಕುತ್ತಿದ್ದ.

ಕೆಲವು ಹಕ್ಕಿಗಳು ಈ ಬಾಲಕನೊಂದಿಗೆ ಸಲಿಗೆಯಿಂದ ಇದ್ದವು. ಅವು ಬಂದು ಇವನ ಮೇಲೆ ಕುಳಿತುಕೊಳ್ಳುತ್ತಿದ್ದವು. ಅವು ಬಂದಾಗ ಈತನು “ಬಂದಿರಾ, ಬನ್ನಿ ತಾಯಿ, ನಿಮಗೆ ತಿಂಡಿಕೊಡುತ್ತೇನೆ” ಎಂದು ಹೇಳಿ ಅಕ್ಕಿಕಾಳು ತಿನ್ನಿಸುತ್ತಿದ್ದ. ಬಾಲಕ ದೊಡ್ಡವನಾದ. ಈತನ ಹಳ್ಳಿಯ ನೆರೆಯಲ್ಲಿ ಒಂದು ಕಾರ್ಖಾನೆ ಇತ್ತು. ಅಲ್ಲಿ ಬಿಳಿಯ ಜನ ಇದ್ದರು. ಅವರು ಈ ಹಳ್ಳಿಗೆ ಬಂದು ಅಲ್ಲಿಯ ಹಕ್ಕಿಗಳನ್ನು ಬಂದೂಕಿನಿಂದ ಹೊಡೆಯುತ್ತಿದ್ದರು. ಹಕ್ಕಿಗಳನ್ನು ಕೊಲ್ಲಬಾರದೆಂದು ಈತ ಹೇಳುತ್ತಿದ್ದ. ’ಈ ಹುಚ್ಚು ಹುಡುಗನ ಮಾತೇನು ?’ ಎಂದು ಅವರು ತಮ್ಮ ಶಿಕಾರಿ ಮುಂದುವರಿಸುತ್ತಿದ್ದರು. ಒಮ್ಮೆ ಧಾಂಡಿಗ ಸಾಹೇಬರ ಕೈಯಿಂದ ಬಂದೂಕನ್ನೆ ಕಿತ್ತುಕೊಳ್ಳುವ ಧೈರ್ಯತೋರಿಸಿದ ಹುಡುಗ. ಬರಬರುತ್ತ ಆ ಜನರಿಗೆ ಈ ಹುಡುಗನ ಮೇಲೆ ಪ್ರೀತಿಯುಂಟಾಯಿತು. ಅವರು ಅಲ್ಲಿಗೆ ಶಿಕಾರಿಗಾಗಿ ಬರುವುದನ್ನು ನಿಲ್ಲಿಸಿಬಿಟ್ಟರು.

ಈತನು ಯಾವಾಗಲೂ ಸಿಟ್ಟಿಗೇಳುತ್ತಿರಲಿಲ್ಲ. ಯಾವುದೇ ಕಾರಣಕ್ಕಾಗಿ ಕೋಪಬಂದರೆ ತನ್ನನ್ನು ತಾನೇ ಹೊಡೆದುಕೊಂಡು ಕೋಪವನ್ನು ನಿವಾರಿಸಿಕೊಳ್ಳುತ್ತಿದ್ದ. ಯಾರು ಈ ಬಾಲಕ ?

ತಂದೆ  ಅತ್ತೆ

ಈಗಿನ ಬಾಂಗ್ಲಾ ದೇಶವು ಮೊದಲು ನಮ್ಮ ದೇಶದ ಬಂಗಾಳ ಪ್ರಾಂತದ ಪೂರ್ವಭಾಗವಾಗಿತ್ತು. ಅಲ್ಲಿಯ ಒಂದು ಹಳ್ಳಿಯಲ್ಲಿ ದೀನದಯಾಳು ಮತ್ತು ತ್ರಿಪುರಸುಂದರಿ ಎಂಬ ದಂಪತಿಗಳಿದ್ದರು. ಇವರ ಮಗ ದುರ್ಗಾಚರಣ ನಾಗ. ಈತನು ೧೮೪೬ ರಲ್ಲಿ ಆಗಸ್ಟ್ ೨೧ ರಂದು ಜನಿಸಿದ. ತಾಯಿ ತ್ರಿಪುರಸುಂದರಿಯು ಬೇಗನೆ ಮರಣ ಹೊಂದಿದಳು. ಬಾಲಕ ದುರ್ಗಾಚರಣ ಸೋದರತ್ತೆ ಭಗವತಿಯ ಲಾಲನೆ ಪಾಲನೆಗಳಲ್ಲಿ ಬೆಳೆದ. ಆಕೆ ಈ ಬಾಲಕನಿಗೆ ಪುರಾಣದ ಪುಣ್ಯಕಥೆ ಹೇಳುತ್ತಿದ್ದಳು. ಪುರಾಣದ ದೇವದೇವಿಯರು ಬಾಲಕ ದುರ್ಗಾಚರಣನ ಕನಸಿನಲ್ಲಿ ಕಂಡಂತಾಗುತ್ತಿತ್ತು. ಆ ಕಥೆಗಳು ಈ ಬಾಲಕನ ಮನಸ್ಸಿನ ಮೇಲೆ ಒಳ್ಳೆಯ ಪರಿಣಾಮ ಬೀರಿದವು.

ತಂದೆ ದೀನದಯಾಳು ಕಲ್ಕತ್ತ ನಗರದ ಹರಿಚರಣಪಾಲ ಚೌಧರಿ ಎಂಬವರಲ್ಲಿ ಸಣ್ಣ ಕೆಲಸದಲ್ಲಿದ್ದರು. ಕಷ್ಟಪಟ್ಟು ದುಡಿಯುತ್ತಿದ್ದರು. ಬಹಳ ಪ್ರಾಮಾಣಿಕರು, ಸತ್ಯನಿಷ್ಠರು, ಧಾರ್ಮಿಕರು. ತಮ್ಮದಲ್ಲದ ಯಾವ ಹಣಕ್ಕೂ ಆಶೆ ಬೀಳುತ್ತಿರಲಿಲ್ಲ. ಒಮ್ಮೆ ಕೆಲಸದ ನಿಮಿತ್ತ ಪ್ರಯಾಣ ಕೈಗೊಂಡಿದ್ದರು. ಮಧ್ಯೆ ಒಂದು ಕಾಡು. ಅಲ್ಲಿ ನೆಲದಲ್ಲಿ ಹೂಳಿಟ್ಟಿದ್ದ ಹೊನ್ನಿನರಾಶಿ ಇವರ ಕಣ್ಣಿಗೆ ಬಿತ್ತು. ಬೇರೆಯವರ ಈ ಸಂಪತ್ತನ್ನು ದೀನದಯಾಳು ವಿಷದಂತೆ ಕಂಡರು. ಕೂಡಲೇ ಆ ಸ್ಥಳದಿಂದ ದೂರ ಓಡಿದರು. ಬಡತನದ ಸ್ಥಿತಿಯಲ್ಲಿ, ಅಲ್ಪ ಸಂಬಳದಲ್ಲಿ ಇದ್ದ ಅವರು ಅನಾಯಾಸವಾಗಿ ದೊರೆಯುವ ಹೊನ್ನಿನ ರಾಶಿಗೆ ಆಶೆ ಮಾಡಲಿಲ್ಲ. ಅವರ ಬಡತನ ಹಾಗೆಯೇ ಉಳಿಯಿತು. ಆದರೆ ಅವರ ಸತ್ವ ಬೆಳೆಯಿತು. ಇಂತಹ ಸಾತ್ವಿಕ ಸ್ವಭಾವದ ತಂದೆಯ ಗುಣಗಳಿಂದಲೂ ಬಾಲಕ ದುರ್ಗಾಚರಣನಿಗೆ ಬಾಲ್ಯದಲ್ಲಿ ಒಳ್ಳೆಯ ಸಂಸ್ಕಾರ ಒದಗಿಬಂದಿತು.

ಬಾಲಕರಿಗೆ ಉಪದೇಶ
ಬಾಲಕನಿಂದ

ತನ್ನ ಹಳ್ಳಿಯ ಬಳಿಯ ನಾರಾಯಣಗಂಜದ ಪ್ರಾಥಮಿಕ ಶಾಲೆಯಲ್ಲಿ ದುರ್ಗಾಚರಣ ಓದಿದ. ಮುಂದಿನ ವಿದ್ಯಾಭ್ಯಾಸಕ್ಕಾಗಿ ಈತನು ಹತ್ತುಮೈಲಿ ದೂರವಿದ್ದ ಢಾಕಾ ನಗರಕ್ಕೆ ಹೋಗಿಬರುತ್ತಿದ್ದ.

ತಾಯಿನುಡಿಯಾದ ಬಂಗಾಳಿಯನ್ನು ಈತನು ಚೆನ್ನಾಗಿ ಓದಲು ಕಲಿತ. ಆ ಭಾಷೆಯ ಒಳ್ಳೆಯ ಪುಸ್ತಕಗಳನ್ನು ಓದಿದ. ಅವುಗಳಲ್ಲಿದ್ದ ನೀತಿಯ, ಸದಾಚಾರದ ಮಾತುಗಳನ್ನು ಸಂಗ್ರಹಿಸಿ ನಿಬಂಧ ಬರೆದ. ಅಂತಹ ನಿಬಂಧಗಳನ್ನು ಸೇರಿಸಿ ’ಬಾಲಕರಿಗೆ ಉಪದೇಶ’ ಎಂಬ ಚಿಕ್ಕ ಪುಸ್ತಕವನ್ನು ರಚಿಸಿದ. ಮುಂದೆ ಆ ಪುಸ್ತಕವನ್ನು ಅಚ್ಚು ಹಾಕಿಸಿ ಹುಡುಗರಿಗೆ ಉಚಿತವಾಗಿ ಹಂಚಿಬಿಟ್ಟ.

ದುರ್ಗಾಚರಣ ಕೆಲವು ವರುಷ ಢಾಕಾನಗರದಲ್ಲಿ ವಿದ್ಯಾಭ್ಯಾಸ ಮುಂದುವರಿಸಿದ. ಅನಂತರ ಆತನು ತನ್ನ ತಂದೆ ವಾಸಿಸುತ್ತಿದ್ದ ಕಲ್ಕತ್ತ ನಗರಕ್ಕೆ ಬಂದ. ಅಲ್ಲಿ ವೈದ್ಯಕೀಯ ಶಾಲೆಯಲ್ಲಿ ಅಭ್ಯಾಸವನ್ನು ಆರಂಭಿಸಿದ.

ಮದುವೆ

ಕಲ್ಕತ್ತ ನಗರಕ್ಕೆ ಬರುವ ಮೊದಲೆ ದುರ್ಗಾಚರಣನ ತಂದೆಯು ಆತನಿಗೆ ಮದುವೆ ಮಾಡಿದ್ದ. ದುರ್ಗಾಚರಣನಿಗೆ ಮದುವೆ ಮಾಡಿಕೊಳ್ಳುವ ಮನಸ್ಸು ಇರಲಿಲ್ಲ. ಈ ಮದುವೆ ನಡೆದುದು ತಂದೆಯ ಬಲವಂತದಿಂದಲೇ. ಆಗ ನಮ್ಮ ದೇಶದಲ್ಲಿ ಬಾಲ್ಯವಿವಾಹದ ರೂಢಿ ಇತ್ತು. ದುರ್ಗಾಚರಣನ ಹೆಂಡತಿಯ ಹೆಸರು ಪ್ರಸನ್ನಕುಮಾರಿ. ಮದುವೆಯಾದಾಗ ಆಕೆಗೆ ಹನ್ನೊಂದು ವರ್ಷ.

ಪ್ರಸನ್ನಕುಮಾರಿ ಇನ್ನೂ ತವರುಮನೆಯಲ್ಲೆ ಇದ್ದಳು. ದುರ್ಗಾಚರಣ ವೈದ್ಯಕೀಯ ಅಭ್ಯಾಸಕ್ಕಾಗಿ ಕಲ್ಕತ್ತೆಯಲ್ಲಿ ವಾಸಿಸುತ್ತಿದ್ದ. ಹೆಂಡತಿ ಎಂದರೆ ದುರ್ಗಾಚರಣ ಸಂಕೋಚಪಟ್ಟುಕೊಳ್ಳುತ್ತಿದ್ದ. ಅವಳಿಂದ ದೂರ ಇರುತ್ತಿದ್ದ. ಈ ಬಗೆಯ ನಡತೆಯು ಸೋದರತ್ತೆ ಭಗವತಿಗೆ ವಿಚಿತ್ರವಾಗಿ ಕಂಡಿತು. ಆದರೆ ದಿನ ಕಳೆದಂತೆ ದುರ್ಗಾಚರಣನಲ್ಲಿ ಬದಲಾವಣೆ ಆಗಬಹುದು, ಹೆಂಡತಿಯೊಂದಿಗೆ ಆತನ ನಡತೆಯು ಸರಿಯಾಗಬಹುದು ಎಂದು ಆಕೆ ಭಾವಿಸಿದಳು. ಸ್ವಲ್ಪ ಕಾಲದಲ್ಲಿ ಪ್ರಸನ್ನಕುಮಾರಿ ಅಕಾಲ ಮರಣಕ್ಕೆ ತುತ್ತಾದಳು. ಇದರಿಂದ ದುರ್ಗಾಚರಣನಿಗೆ ದುಃಖವಾಯಿತು, ನಿಜ. ಆದರೆ ಸಂಸಾರದ ಬಂಧನದಿಂದ ಪಾರಾದೆನೆಂಬ ಸಮಾಧಾನವೂ ಈತನಿಗೆ ಉಂಟಾಯಿತು.

ವೈದ್ಯ

ಅವನು ಕಲ್ಕತ್ತ ನಗರದ ವೈದ್ಯಕೀಯ ಶಾಲೆಯಲ್ಲಿ ಕೆಲವು ಕಾಲ ಓದಿದ. ಅನಂತರ ಆತನು ಡಾಕ್ಟರ್ ವಿಹಾರಿಲಾಲ್ ಬಹದುರಿ ಅವರ ಬಳಿ ಹೋಮಿಯೋಪತಿ ಅಭ್ಯಾಸವನ್ನು ಆರಂಭಿಸಿದ. ಅಲ್ಲಿ ಮನಸ್ಸುಕೊಟ್ಟು ಓದಿ, ಶ್ರಮಪಟ್ಟು ದುಡಿದ. ರೋಗಿಗಳ ಆರೈಕೆ ಮಾಡಿ ಅವರ ರೋಗಗಳನ್ನು ದೂರಮಾಡಬೇಕೆಂದು ಆತನಲ್ಲಿ ಉತ್ಸಾಹ ತುಂಬಿತು.

ಇನ್ನೂ ವಿದ್ಯಾರ್ಥಿಯಾಗಿರುವಾಗಲೆ ದುರ್ಗಾಚರಣ ಒಂದು ಔಷಧದ ಪೆಟ್ಟಿಗೆಯನ್ನು ಕೊಂಡುಕೊಂಡ. ಬಡವರಿಗೆ ಪುಕ್ಕಟೆಯಾಗಿ ಔಷಧ ಕೊಡಲು ಆರಂಭಿಸಿದ. ಆತನ ಕೈಗುಣವು ಚೆನ್ನಾಗಿತ್ತು. ರೋಗಿಗಳ ಬಹುಕಾಲದ ರೋಗಗಳೆಲ್ಲ ಅವನಿಂದ ನಿವಾರಣೆಯಾಗುತ್ತಿದ್ದವು. ಅವನ ಕೀರ್ತಿಯು ಹೆಚ್ಚಿತು ಅವನಲ್ಲಿಗೆ ಬರುತ್ತಿದ್ದ ರೋಗಿಗಳ ಸಂಖ್ಯೆ ಬೆಳೆಯಿತು. ಮನಸ್ಸು ಮಾಡಿದ್ದರೆ ಆತನು ಈಗಲೆ ಸಾಕಷ್ಟು ಹಣ ಗಳಿಸಬಹುದಾಗಿತ್ತು. ಅವನು ಹಾಗೆ ಮಾಡಲಿಲ್ಲ. ಬಡವರ ಬಂಧು, ಪರೋಪಕಾರಿ ಎಂದು ಅವನು ಹೆಸರು ಗಳಿಸಿದ.

ದುರ್ಗಾಚರಣ ಪರೋಪಕಾರದ ಕಾರ್ಯಗಳಲ್ಲಿಯೇ ವೇಳೆ ಕಳೆಯುತ್ತಿದ್ದ. ವೈದ್ಯಕೀಯ ಉಪಚಾರವಂತೂ ಸಾಗಿತ್ತು. ಆತನು ಬೇರೆಯವರಿಗಾಗಿ ಎಂತಹ ಶ್ರಮದ ಇಲ್ಲವೆ ಕೀಳಾದ ಕೆಲಸ ಮಾಡಲೂ ಮುಂದಾಗುತ್ತಿದ್ದ. ಭಾರವಾದ ಮೂಟೆ, ಸೌದೆಗಳನ್ನು ಹೊತ್ತು ತರುವ ಕೆಲಸವನ್ನು ವಹಿಸಿಕೊಳ್ಳುತ್ತಿದ್ದ. ಬಡವರು ಮಾತ್ರವಲ್ಲ, ಸೋಮಾರಿಗಳು, ಜಿಪುಣರು ಆತನ ನೆರವನ್ನು ಪಡೆಯುತ್ತಿದ್ದರು. ಶವನನ್ನು ಹೊತ್ತುಕೊಂಡು ಹೋಗುವ ಕೆಲಸವನ್ನೂ ಆತನು ಮಾಡಿದ. ತನಗಾಗುವ ತೊಂದರೆಯನ್ನು ಆತ ಲೆಕ್ಕಿಸಲಿಲ್ಲ. ಅವನಿಗೆ ಜಂಬ ಎಳ್ಳಷ್ಟೂ ಇರಲಿಲ್ಲ. ಜನರಿಗೆ ನೆರವಾಗುವುದರಲ್ಲಿಯೇ ಅವನಿಗೆ ಸಂತೋಷ.

ಸುರೇಶಬಾಬು

ಡಾ. ಬಹದುರಿ ಅವರ ಬಳಿ ಹೋಮಿಯೋಪತಿ ಅಭ್ಯಾಸ ಮಾಡುತ್ತಿರುವಾಗ ದುರ್ಗಾಚರಣನಿಗೆ ಸುರೇಶ ಬಾಬುವಿನ ಪರಿಚಯವಾಯಿತು. ಇವರಿಬ್ಬರಲ್ಲಿ ಸ್ನೇಹವು ಬೆಳೆಯಿತು. ಸುರೇಶಬಾಬು ಬ್ರಹ್ಮಸಮಾಜಕ್ಕೆ ಸೇರಿದವನು. ಬ್ರಹ್ಮಸಮಾಜದವರು ದೇವರಿಗೆ ಆಕಾರವಿಲ್ಲ, ಅವನು ನಿರಾಕಾರ ಎಂದು ನಂಬುತ್ತಿದ್ದರು. ಸಾಕಾರ (ಎಂದರೆ ಆಕಾರ ಇರುವ) ದೇವತೆಗಳ ಬಗೆಗೆ ಅವರಿಗೆ ವಿಶ್ವಾಸವಿರಲಿಲ್ಲ. ಸಂಪ್ರದಾಯದ ಹಿಂದುಗಳು ಪೂಜಿಸುತ್ತಿದ್ದ ನಾನಾ ಆಕಾರದ ಮೂರ್ತಿಗಳ ಬಗೆಗೆ ಸುರೇಶನು ಹಾಸ್ಯಮಾಡುತ್ತಿದ್ದ. ಆಗ ದುರ್ಗಾಚರಣ ಅವನಿಗೆ ಹೇಳುತ್ತಿದ್ದ : “ಪರಮಾತ್ಮನು ನಿರಾಕಾರನೂ ಅಹುದು. ಸಾಕಾರನೂ ಆಗಬಲ್ಲ. ಸಾಮಾನ್ಯ ಜನರಿಗೆ ಸಾಕಾರ ಮುರ್ತಿಪೂಜೆಯಿಂದಲೇ ನಿರಾಕಾರ ಬ್ರಹ್ಮನನ್ನೂ ಅರಿತುಕೊಳ್ಳಲು ಸಾಧ್ಯವಾಗುವುದು. ಬ್ರಹ್ಮಜ್ಞಾನ ನಮ್ಮ ಕೊನೆಯ ಗುರಿ. ಆದರೆ ಅದು ಎಲ್ಲರಿಗೂ ಒಮ್ಮೆಲೆ ಸಾಧ್ಯವಾಗುವುದಿಲ್ಲ. ಆದುದರಿಂದ ಸಾಮಾನ್ಯರು ಮೂರ್ತಿಪೂಜೆಯನ್ನು ಕೈಗೊಳ್ಳಬೇಕು.” ದುರ್ಗಾಚರಣ- ಸುರೇಶಬಾಬುವಿನ ವಾದಗಳು ಪ್ರತಿದಿನ ನಡೆಯುತ್ತಿದ್ದವು. ಒಬ್ಬರ ಅಭಿಪ್ರಾಯವನ್ನು ಇನ್ನೊಬ್ಬರು ಒಪ್ಪಿಕೊಳ್ಳಲಿಲ್ಲ. ಆದರೆ ಭಿನ್ನಾಭಿಪ್ರಾಯ ಅವರ ಸ್ನೇಹಕ್ಕೆ ಅಡ್ಡಿಯಾಗಲಿಲ್ಲ. ಒಬ್ಬರು ಇನ್ನೊಬ್ಬರ ಒಳ್ಳೆಯ ಗುಣಗಳನ್ನು ಮೆಚ್ಚಿದ್ದರು.

ಧ್ಯಾನ, ಚಿಂತನೆ

ದುರ್ಗಾಚರಣ ಪುರಾಣ ಶಾಸ್ತ್ರಗಳನ್ನು ಶ್ರಮಪಟ್ಟು ಅಭ್ಯಾಸಮಾಡುತ್ತಿದ್ದ. ವಿಷಯವನ್ನು ಪಂಡಿತರಿಂದ ತಿಳಿದುಕೊಳ್ಳುತ್ತಿದ್ದ. ವೈದ್ಯಕೀಯ ಅಭ್ಯಾಸಕ್ಕಿಂತ ಶಾಸ್ತ್ರದ ಚರ್ಚೆಯಲ್ಲಿ ಆತನು ಹೆಚ್ಚು ವೇಳೆ ಕಳೆಯುತ್ತಿದ್ದ. ಆದರೆ ತಂದೆಯ ಒತ್ತಾಯಕ್ಕಾಗಿ ವೈದ್ಯಕೀಯ ಅಭ್ಯ್ಯಾಸವನ್ನು ಮುಂದುವರಿಸಿದ.

ಆತನು ಪ್ರತಿನಿತ್ಯ ಗಂಗಾನದಿಗೆ ಹೋಗಿ ಸ್ನಾನ ಮಾಡುತ್ತಿದ್ದ. ಉಪವಾಸ ಇತ್ಯಾದಿ ವ್ರತಗಳನ್ನು ಕ್ರಮವಾಗಿ ಆಚರಿಸುತ್ತಿದ್ದ. ಸ್ಮಶಾನಘಟ್ಟಕ್ಕೆ ಹೋಗಿ ಅಲ್ಲಿ ಗಂಭೀರವಾಗಿ ಧ್ಯಾನ ಮಾಡುತ್ತಿದ್ದ. ರಾತ್ರಿ ಹೊತ್ತು ಸ್ಮಶಾನದಲ್ಲಿ ಬೆಂಕಿ ಉರಿಯುತ್ತಿತ್ತು. ಸಮೀಪದಲ್ಲಿ ಗಂಗಾನದಿ ಜುಳುಜುಳು ಎಂದು ಹರಿಯುತ್ತಿತ್ತು. ಇಂತಹ ಸ್ಥಳದಲ್ಲಿ ಈತನು ಮಧ್ಯರಾತ್ರಿಯವರೆಗೆ ಧ್ಯಾನದಲ್ಲಿ ತೊಡಗುತ್ತಿದ್ದ. ಪರಮಾತ್ಮನೊಬ್ಬನೇ ಸತ್ಯ, ಆತನನ್ನು ಪಡೆಯುವುದು ಹೇಗೆ ? ಎಂಬುದೇ ಆತನ ಚಿಂತನೆಯ ವಿಷಯವಾಗಿತ್ತು. ತರುಣ ವಯಸ್ಸಿನಲ್ಲಿ ದುರ್ಗಾಚರಣ ತನ್ನ ಲೌಕಿಕ ಬಾಳಿನ ಬಗೆಗೆ, ಮುಂದಿನ ಸಂಸಾರದ ಬಗೆಗೆ ಗಮನಕೊಡದೆ ಪರಮಾತ್ಮನ ಹಂಬಲದಲ್ಲಿಯೇ ಕಾಲ ಕಳೆಯುತ್ತಿದ್ದ.

ಮತ್ತೆ ಮದುವೆ

ದುರ್ಗಾಚರಣನ ಈ ವಿಚಿತ್ರ ವರ್ತನೆಯಿಂದ ತಂದೆಗೆ ಅಸಮಾಧಾನವಾಯಿತು. ಮಗನಿಗೆ ಇನ್ನೊಮ್ಮೆ ಮದುವೆ ಮಾಡಿದರೆ ಅವನಿಗೆ ಸಂಸಾರದ ಕಡೆಗೆ ಒಲವು ಉಂಟಾಗುವುದು, ಅವನು ಸರಿಯಾದ ಹಾದಿಗೆ ಬರಬಹುದು. ಹೀಗೆಂದು ತಂದೆ ವಿಚಾರ ಮಾಡಿ ಹೆಣ್ಣು ಗೊತ್ತು ಮಾಡಿದ.

ಇತ್ತ ದುರ್ಗಾಚರಣನಿಗಾದರೋ ಸಂಸಾರದ ಬಂಧನ ಬೇಕಾಗಿರಲಿಲ್ಲ. ತನಗೆ ಮದುವೆ ಬೇಡವೆಂದು ಸ್ಪಷ್ಟವಾಗಿ ಹೇಳಿದ. ಆಗ ತಂದೆ ಸಿಟ್ಟಿಗೆದ್ದು ಹಠ ಹಿಡಿದ. ಅದರಿಂದಲೂ ಪ್ರಯೋಜನವಾಗಲಿಲ್ಲ. ತಂದೆಯ ಮಾತು ಕೇಳದಿದ್ದರೆ ನಿನಗೆ ಕಲ್ಯಾಣವಾಗುವುದಿಲ್ಲವೆಂದು ಹೇಳಿದ. ಮತ್ತು ಆತನು ದುಃಖದಿಂದ ಅಳುತ್ತ ಕುಳಿತುಬಿಟ್ಟ. ತಂದೆಯ ಈ ದುಃಖವನ್ನು ನೋಡಲಾರದೆ ದುರ್ಗಾಚರಣ ಎರಡನೆಯ ಮದುವೆಗೆ ಒಪ್ಪಬೇಕಾಯಿತು.

ಶರತ್ಕಾಮಿನಿ ಎಂಬ ಹುಡುಗಿಯ ಜೊತೆ ಮದುವೆ ನಿಶ್ಚಯವಾಯಿತು. ಇದರಿಂದ ಎಲ್ಲರಿಗೂ ಸಂತೋಷವೆನಿಸಿತು. ಆದರೆ ಮದುವೆಯಾಗುವವನಿಗೇ ಸಂತೋಷವಿರಲಿಲ್ಲ. ಅಂತು ಮದುವೆ ನಡೆದುಹೋಯಿತು. ಹೊಸ ಸಂಸಾರಕ್ಕಾಗಿ ಸಂಪಾದನೆ ಮಾಡುವುದು ಅವಶ್ಯವೆನಿಸಿತು. ಆದುದರಿಂದ ದುರ್ಗಾಚರಣ ವೈದ್ಯಕೀಯ ಅಭ್ಯಾಸವನ್ನು ಮುಗಿಸಿ ವೈದ್ಯವೃತ್ತಿಯನ್ನು ಕೈಗೊಂಡ.

ವಿರಕ್ತಿ

ಮದುವೆ ನಡೆದ ಕೆಲವು ದಿನಗಳಲ್ಲಿ ಸೋದರತ್ತೆ ಭಗವತಿಯು ಮರಣಹೊಂದಿದಳು. ಈ ಮರಣವು ದುರ್ಗಾಚರಣನಿಗೆ ಬಹಳ ದುಃಖವನ್ನುಂಟುಮಾಡಿತು. ತನ್ನ ತಾಯಿಯನ್ನೇ ಕಳೆದುಕೊಂಡಂತಾಗಿ ಊಟ ಬಿಟ್ಟು ಅಳುತ್ತ ಕೂಡುತ್ತಿದ್ದ. ಈಗ ಮನಸ್ಸು ಇನ್ನಿಷ್ಟು ತತ್ವಜ್ಞಾನದ ಕಡೆಗೆ ಹರಿಯಿತು. ’ನಾನು’, ’ನನ್ನದು’ ಎಂಬ ಯಾವ ಆಸಕ್ತಿಯನ್ನು ಇಟ್ಟುಕೊಳ್ಳಬಾರದೆಂಬ ಭಾವನೆ ಅವನಲ್ಲಿ ಬೆಳೆಯಿತು.

ವೈದ್ಯವೃತ್ತಿಯನ್ನು ಕೈಕೊಂಡ ದುರ್ಗಾಚರಣ ತೀರಾ ಸಾದಾ ಜೀವನ ನಡೆಸಿದ. ಒಳ್ಳೆಯ ಉಡುಪಾಗಲಿ ವಾಹನದ ಅನುಕೂಲತೆಯಾಗಲಿ ಅವನಿಗೆ ಬೇಕೆನಿಸಲಿಲ್ಲ. ಯಾವಾಗಲೂ ಸಾಮಾನ್ಯ ಉಡುಪು ಧರಿಸುತ್ತಿದ್ದ. ಎಷ್ಟು ದೂರವಾದರೂ ನಡೆದು ಹೋಗಿ ರೋಗಿಗಳಿಗೆ ಔಷಧ ಕೊಡುತ್ತಿದ್ದ. ಒಮ್ಮೆ ತಂದೆ ಡಾಕ್ಟತ್ ಆಗಿರುವ ಮಗನಿಗೆಂದು ಒಳಯ ಉಡುಪು ಹೊಲಿಸಿ ತಂದುಕೊಟ್ಟ. ಆಗ ದುರ್ಗಾಚರಣ “ಇಂತಹ ಉಡುಪು ನನಗೆ ಬೇಕಾಗಿರಲಿಲ್ಲ. ಇದೇ ಹಣವನ್ನು ಬಡವರ ಉಪಚಾರಕ್ಕಾಗಿ ಖರ್ಚು ಮಾಡಬೇಕಾಗಿತ್ತು” ಎಂದು ತಂದೆಗೆ ಹೇಳಿದ.

ರೋಗಿಗಳಿಗಾಗಿ ವೈದ್ಯಕೀಯ

ಹಣ ಸಂಪಾದಿಸುವ ಕಡೆಗೆ ದುರ್ಗಾಚರಣನಿಗೆ ಲಕ್ಷ್ಯವೇ ಇರಲಿಲ್ಲ. ಪರೋಪಕಾರದಲ್ಲಿ ತೊಡಗುವುದೇ ಈತನ ಉದ್ದೇಶವಾಗಿತ್ತು. ಈತ ಒಮ್ಮೆ ಬಡ ರೋಗಿಗೆ ತಾನು ಹೊದ್ದುಕೊಳ್ಳುತ್ತಿದ್ದ ಶಾಲನ್ನೇಕೊಟ್ಟ. ಇನೊಮ್ಮೆ ತನ್ನ ಮನೆಯಲ್ಲಿಯ ಹಾಸಿಗೆಯನ್ನೇ ಒಯ್ದು ಕೊಟ್ಟ. ರೋಗಿಗಳಿಗೆ ಗುಣವಾಗದೆ ಅವರು ಮರಣ ಹೊಂದಿದಾಗ ಈತನು ಅಳುತ್ತ ಕೂಡುತ್ತಿದ್ದ.

ಈತನ ಬಡತನದ ಬಾಳನ್ನು ಕಂಡು ಕೆಲವರಿಗೆ ಕನಿಕರವೆನಿಸುತ್ತಿತ್ತು. ಒಮ್ಮೆ ಒಬ್ಬ ಶ್ರೀಮಂತ ರೋಗಿ ಈತನಿಗೆ ಐವತ್ತು ರೂಪಾಯಿ ಕೊಟ್ಟ. ಆಗ ದುರ್ಗಾಚರಣ “ಇದು ಬಹಳವಾಯಿತು. ಇಷ್ಟು ಹಣ ತೆಗೆದುಕೊಳ್ಳಲಾರೆ “ ಎಂದು ಹೇಳಿ ಮೂವತ್ತು ರೂಪಾಯಿಗಳನ್ನು ಹಿಂದಿರುಗಿಸಿದ. ಇದನ್ನು ಕೇಳಿ ಇವನ ತಂದೆಗೆ ಕೋಪ ಬಂದಿತು. ಆಗ ದುರ್ಗಾಚರಣ ಹೇಳಿದ : “ಧರ್ಮ ಮಾರ್ಗದಲ್ಲಿ ನಡೆಯಬೇಕೆಂದು ನೀವೇ ನನಗೆ ಬಾಲ್ಯದಲ್ಲಿ ಉಪದೇಶ ಮಾಡಿದಿರಿ. ರೋಗಿಗಳ ಕಡೆಯಿಂದ ಹೆಚ್ಚಿಗೆ ಹಣ ಪಡೆಯುವುದು ಅಧರ್ಮವಲ್ಲವೇ ? ಅನ್ಯಾವೆಂದು ತಿಳಿದುದನ್ನು ನಾನು ಪ್ರಾಣ ಹೋದರೂ ಮಾಡಲಾರೆ.”

ಶರತ್ಕಾಮಿನಿಯ ಕೊರಗು

ಇಂತಹ ಸ್ವಭಾವದ ದುರ್ಗಾಚರಣನ ಹೆಸರು ಎಲ್ಲ ಕಡೆಗೂ ಪ್ರಸಿದ್ಧಿ ಪಡೆಯಿತು. ಇವನಲ್ಲಿಗೆ ಬರುವ ರೋಗಿಗಳ ಸಂಖ್ಯೆಯೂ ಹೆಚ್ಚಿತು. ಆದರೂ ಈತನ ಬಡತನವೇನೂ ಕಡಿಮೆಯಾಗಲಿಲ್ಲ. ಒಮ್ಮೊಮ್ಮೆ ಊಟದ ವೆಚ್ಚಕ್ಕೂ ಹಣ ಇಲ್ಲದಂತಾಗುತ್ತಿತ್ತು. “ನಾವು ಚಿಂತೆಮಾಡಿ ಕೊರಗಬಾರದು. ದೇವರ ಮೇಲೆ ಭಾರ ಹಾಕಿ ಬಾಳಬೇಕು”- ಹೀಗೆಂದು ದುರ್ಗಾಚರಣನ ಅಭಿಪ್ರಾಯವಾಗಿತ್ತು. ಈತನು ಡಾಕ್ಟರ್ ಆಗಿದ್ದರೂ ಮನೆಯಲ್ಲಿ ಆಳು ಇಟ್ಟುಕೊಂಡಿರಲಿಲ್ಲ. ಮನೆಗೆಲಸ ಅಡಿಗೆಗಳನ್ನು ಸ್ವತಃ ಮಾಡಿಕೊಳ್ಳುತ್ತಿದ್ದ.

ಎರಡನೆಯ ಹೆಂಡತಿ ಶರತ್ಕಾಮಿನಿ ಗಂಡನ ಮನೆಗೆ ಬಂದಳು. ಗಂಡನ, ಮಾವನ ಸೇವೆಯನ್ನು ಕೈಕೊಂಡಳು. ಆಕೆ ಜಾಣೆ, ಮನೆಗೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದಳು. ದುರ್ಗಾಚರಣ ಆಕೆಯ ಬಗೆಗೆ ಯಾವ ಪ್ರೀತಿಯನ್ನೂ ತೋರಲಿಲ್ಲ. ತನ್ನ ಅಭ್ಯಾಸ, ಔಷಧೋಪಚಾರ, ಪರೋಪಕಾರದ ಕೆಲಸಗಳಲ್ಲಿಯೇ ನಿರತನಾಗಿದ್ದ. “ಪರಮಾತ್ಮನನ್ನು ಪ್ರತ್ಯಕ್ಷ ಮಾಡಿಕೊಳ್ಳುವುದು ಹೇಗೆ” ಎಂಬ ಚಿಂತೆಯಲ್ಲಿಯೇ ಈತನು ಕಾಲ ಕಳೆಯುತ್ತಿದ್ದನು. ಇದರಿಂದ ಶರತ್ಕಾಮಿನಿಗೆ ಬಹಳ ನಿರಾಶೆಯಾಯಿತು, ದುಃಖವಾಯಿತು.

ದೀಕ್ಷೆ

ದುರ್ಗಾಚರಣ ಗಂಗಾತೀರಕ್ಕೆ ಹೋಗಿ ಧ್ಯಾನ ಮಾಡುತ್ತ ಕೂಡುವ ತನ್ನ ಪದ್ಧತಿಯನ್ನು ಮಂದುವರಿಸಿದ. ಅಲ್ಲಿ ಏಕಾಗ್ರತೆಯಿಂದ ಹಾಡುತ್ತ ಕುಣಿಯುತ್ತ ಆನಂದ ಪಡೆಯುತ್ತಿದ್ದ. ಇದು ಕೆಲಕಾಲ ನಡೆಯಿತು. ಮುಂದೆ ಅವನಿಗೆ ತನ್ನ ಭಕ್ತಿಯು ಹೀಗೆ ಹೊರಗಿನ ಪ್ರದರ್ಶನವಾಗಬಾರದು, ಭಕ್ತಿಯ ಆಚರಣೆಯು ಗುಪ್ತವಾಗಿ ಸಾಗಬೇಕು ಎಂದು ತೋರಿತು. ಈಗ ಗುರುವಿನಿಂದ ದೀಕ್ಷೆ ಪಡೆಯುವ ಹಂಬಲ ತಲೆದೋರಿತು. ಯೋಗ್ಯ ಗುರುವನ್ನು ಪಡೆಯುವ ಆತುರ ಹೆಚ್ಚಾಯಿತು. ಅದಕ್ಕಾಗಿಯೆ ಗಂಗಾತೀರದಲ್ಲಿ ಹೆಚ್ಚು ಕಾಲ ಕಳೆಯತೊಡಗಿದ. ತನಗೆ ಯೋಗ್ಯ ಗುರು ದೊರೆಯಲೆಂದು ಗಂಗಾಮಾತೆಗೆ ಪ್ರಾರ್ಥನೆ ಸಲ್ಲಿಸುತ್ತಿದ್ದ.

ಒಮ್ಮೆ ಗಂಗಾನದಿಯಲ್ಲಿ ಸ್ನಾನ ಮಾಡುತ್ತಿರುವಾಗ ಒಂದು ದೋಣಿಯು ತನ್ನ ಕಡೆಗೆ ಬರುತ್ತಿರುವುದನ್ನು ಕಂಡ. ಆ ದೋಣಿಯಲ್ಲಿ ಅವರ ಕುಲಗುರು ಕೈಲಾಸಚಂದ್ರರು ಬಂದರು. ದುರ್ಗಾಚರಣ ಹತ್ತಿರ ಹೋಗಿ ನಮಸ್ಕಾರ ಮಾಡಿದ. ಅನಿರೀಕ್ಷಿತವಾಗಿ ಅವರು ಅಲ್ಲಿಗೆ ಬಂದ ಕಾರಣ ಕೇಳಿದ. ಆಗ ಕೈಲಾಸಚಂದ್ರರು ಹೇಳಿದರು : “ದುರ್ಗಾಚರಣ, ಗಂಗಾಮಾತೆಯ ಅಪ್ಪಣೆಯಂತೆ ನಿನಗೆ ದೀಕ್ಷೆ ಕೊಡಲು ಬಂದಿದ್ದೇವೆ.” ಗಂಗಾಮಾತೆಯು ತನ್ನ ಪ್ರಾರ್ಥನೆಯನ್ನು ಕೇಳಿದಳೆಂದು ದುರ್ಗಾಚರಣನಿಗೆ ಹಿರಿಹಿರಿ ಹಿಗ್ಗಾಯಿತು. ಕೈಲಾಸಚಂದ್ರ ಗುರುಗಳಿಂದ ದೀಕ್ಷೆ ಪಡೆದ.

ಒಬ್ಬಂಟಿಗ

ಮದುವೆಯಾಗಿದ್ದರೂ ದುರ್ಗಾಚರಣ ಸನ್ಯಾಸಿಯಂತೆ ಜೀವನ ನಡೆಸಿದ್ದ. ದೀಕ್ಷೆ ಪಡೆದ ನಂತರ ಆತನು ಹೆಚ್ಚಿನ ಸಾಧನೆಯನ್ನು ಕೈಕೊಂಡ. ಇಡಿ ರಾತ್ರಿ ಜಪ- ಧ್ಯಾನಗಳಲ್ಲಿ ತೊಡಗಿದ. ಗಂಗಾತೀರದಲ್ಲಿ ಧ್ಯಾನಕ್ಕೆ ಕುಳಿತಿದ್ದಾಗ ಪ್ರಪಂಚವನ್ನೇ ಮರೆಯುತ್ತಿದ್ದ. ಒಮ್ಮೆ ಹೀಗೆ ಮೈಮರೆತು ಜಪ ಮಾಡುತ್ತ ಕುಳಿತಿದ್ದ. ಆಗ ಗಂಗಾನದಿಯ ಪ್ರವಾಹವು ಬಂದು ಈತನನ್ನು ಕೊಚ್ಚಿಕೊಂಡು ನದಿಯ ಆಳಕ್ಕೆ ತೆಗೆದುಕೊಂಡು ಹೋಯಿತು. ಆಗ ಇವನಿಗೆ ಮೈಮೇಲೆ ಎಚ್ಚರ ಬಂದು ಈಜುತ್ತ ತಿರುಗಿ ನದಿಯ ದಡಕ್ಕೆ ಬಂದ.

ಈಗ ದುರ್ಗಾಚರಣ ಬಾಹ್ಯ ಪೂಜೆಯನ್ನು ಕಡಿಮೆ ಮಾಡಿ ಜಪ- ಧ್ಯಾನಗಳಲ್ಲಿಯೇ ಹೆಚ್ಚು ವೇಳೆ ಕಳೆಯತೊಡಗಿದ. ಕೆಲವು ಕೀರ್ತನೆಗಳನ್ನು ಸ್ವತಃ ರಚಿಸಿ ಅವುಗಳನ್ನು ಹಾಡುತ್ತಿದ್ದ. ವೈದ್ಯಕೀಯ ಉದ್ಯೋಗದ ಕಡೆಗೆ ಅಲಕ್ಷ್ಯವಾಯಿತು. ಬರುತ್ತಿದ್ದ ರೋಗಿಗಳ ಸಂಖ್ಯೆಯು ಕಡಿಮೆಯಾಯಿತು. ರೋಗಿಗಳು ಮನೆಗೆ ಬಂದಾಗ ಈತನು ಮನೆಯಲ್ಲಿ ಇರುತ್ತಿರಲಿಲ್ಲ. ಗಂಗಾತೀರದಲ್ಲಿ ಧ್ಯಾನದಲ್ಲಿ ಮಗ್ನನಾಗುತ್ತಿದ್ದ. ಹೀಗಾಗಿ ಬರುತ್ತಿದ್ದ ಅಲ್ಪ ಸಂಪಾದನೆಯೂ ಇಳಿಮುಖವಾಯಿತು. ಇದರಿಂದ ಮುಪ್ಪಿನ ತಂದೆಗೆ ನಿರಾಶೆ ಕವಿಯಿತು.

ಬರುಬರುತ್ತ ದುರ್ಗಾಚರಣನ ಸಾಧನೆಯು ಉಗ್ರವಾಗಿ ಬೆಳೆಯಿತು. ಇತ್ತ ಮುಪ್ಪಿನ ತಂದೆಯ ದೇಹಶಕ್ತಿಯು ಇಳಿಯಿತು. ಆಗ ದುರ್ಗಾಚರಣ ತಂದೆಯ ನೌಕರಿಯ ಕೆಲಸವನ್ನು ತಾನು ವಹಿಸಿಕೊಂಡ. ತಂದೆಯನ್ನು ತಮ್ಮೂರಿಗೆ ಕಳಿಸಿಕೊಟ್ಟ. ಅವನ ಸೇವೆಗೆಂದು ಹೆಂಡತಿಯನ್ನೂ ಅಲ್ಲಿಗೆ ಕಳಿಸಿದ. ಕೆಲಕಾಲದ ನಂತರ ತಾನು ವಹಿಸಿಕೊಂಡಿದ್ದ ನೌಕರಿಯ ಕೆಲಸವನ್ನೂ ಬಿಟ್ಟು ತಮ್ಮೂರಿಗೆ ಹೋದ. ಅಲ್ಲಿ ತಂದೆಯ ಕೊನೆಗಾಲದಲ್ಲಿ ಸೇವೆ ಸಲ್ಲಿಸಿದ.

ತಂದೆಯನ್ನೂ ಹೆಂಡತಿಯನ್ನೂ ಊರಿಗೆ ಕಳಿಸಿದ ನಂತರ ದುರ್ಗಾಚರಣ ಮನೆಯಲ್ಲಿ ಒಬ್ಬಂಟಿಗನಾದ. ಆಗ ಸಾಧುಸಂತರ ಸಹವಾಸ ಪಡೆಯುವ ಹಂಬಲವು ಹೆಚ್ಚಿತು.

ನಾಗಮಹಾಶಯ

ಕಲ್ಕತ್ತಾ ನಗರದ ಉತ್ತರಕ್ಕೆ ಸ್ವಲ್ಪ ದೂರದಲ್ಲಿ ಗಂಗಾನದಿಯ ದಂಡೆಯ ಮೇಲೆ ದಕ್ಷಿಣೇಶ್ವರ ಎಂಬ ಪ್ರಸಿದ್ಧ ಕ್ಷೇತ್ರವಿದೆ. ಅಲ್ಲಿ ರಾಣಿ ರಾಸಮಣಿಯು ಭವ್ಯವಾದ ಕಾಳೀ ದೇವಾಲಯವನ್ನು ಕಟ್ಟಿಸಿದ್ದಾಳೆ. ಆ ದೇವಾಲಯದ ಪೂಜಾರಿಯಾಗಿ ಅಲ್ಲಿಗೆ ಬಂದ ರಾಮಕೃಷ್ಣ ಪರಮಹಂಸರು ದೇವಮಾನವರೆಂದು ಪ್ರಸಿದ್ಧಿ ಪಡೆದರು.

ಸಾಧುಸಂತರ ಸಹವಾಸಕ್ಕಾಗಿ ಹಾತೊರೆಯುತ್ತಿದ್ದ ದುರ್ಗಾಚರಣನನ್ನು ಒಮ್ಮೆ ಸುರೇಶಬಾಬು ದಕ್ಷಿಣೇಶ್ವರಕ್ಕೆ ಕರೆದುಕೊಂಡು ಹೋದನು. ರಾಮಕೃಷ್ಣರ ಮೊದಲ ದರ್ಶನವೇ ದುರ್ಗಾಚರಣನ ಮೇಲೆ ಅದ್ಭುತವಾದ ಪರಿಣಾಮವನ್ನು ಬೀರಿತು. ಆಗಿನಿಂದಲೆ ಆತನು ಪರಮಹಂಸರ ಪರಮ ಶಿಷ್ಯನಾದ. ಪರಮಹಂಸರ ಶಿಷ್ಯರಲ್ಲಿ ದುರ್ಗಾಚರಣನಿಗೆ ಬಹಳ ಮಹತ್ವದ ಸ್ಥಾನವಿದೆ. ದುರ್ಗಾಚರಣ ಸನ್ಯಾಸಾಶ್ರಮ ಸ್ವೀಕರಿಸಿರಲಿಲ್ಲ. ಆದರೂ ಗೃಹಸ್ಥ ಶಿಷ್ಯರಲ್ಲಿ ಅವನು ಬಹಳ ದೊಡ್ಡವನೆಂದು ಬಹು ಜನರು ಆತನನ್ನು ಹೊಗಳಿದ್ದಾರೆ. ಎಲ್ಲರೂ ದುರ್ಗಾಚರಣನನ್ನು ’ನಾಗಮಹಾಶಯ’ ಎಂದು ಗೌರವಪೂರ್ವಕವಾಗಿ ಕರೆದಿದ್ದಾರೆ. ಇನ್ನು ನಾವೂ ಆತನನ್ನು ’ನಾಗಮಹಾಶಯ’ ಎಂದೇ ಸಂಬೋಧಿಸೋಣ.

ನಿಮಗೋಸ್ಕರ ಕಾಯುತ್ತಿದ್ದೆ

ಮೊದಲ ದರ್ಶನದ ಕಾಲಕ್ಕೆ ಪರಮಹಂಸರು ನಾಗಮಹಾಶಯರೊಂದಿಗೆ ಹೆಚ್ಚಿನ ಸಲಿಗೆ ತೋರಿಸಿರಲಿಲ್ಲ. ಆದರೆ ಅವರ ಒಳಗಣ್ಣಿಗೆ ನಾಗಮಹಾಶಯರ ಹಿರಿಮೆಯು ಹೊಳೆದಿತ್ತು ಎರಡನೆಯ ಭೇಟಿಯ ಕಾಲಕ್ಕೆ ಅವರಿಗೆ ಭಾವಾವೇಶವುಂಟಾಯಿತು. ಅವರು ನಾಗಮಹಾಶಯರಿಗೆ “ಬಂದಿರಾ, ಬನ್ನಿರಿ. ನಾನು ನಿಮಗೋಸ್ಕರ ಇಷ್ಟು ದಿನ ಕಾಯುತ್ತಿದ್ದೆ” ಎಂದು ಹೇಳಿದರು.

ತಾವು ಮದುವೆಯಾದ ಗೃಹಸ್ಥ. ಇನ್ನೂ ಸನ್ಯಾಸ ಸ್ವೀಕರಿಸಿಲ್ಲವೆಂಬ ಅಳುಕು ನಾಗಮಹಾಶಯರಿಗಿತ್ತು. ಅಂತಹ ಅಳುಕಿಗೆ ಕಾರಣವಿಲ್ಲವೆಂದು ಪರಮಹಂಸರು ಹೇಳಿದರು. “ಒಂದು ಜಾತಿಯ ಮೀನು ಕೆಸರಿನಲ್ಲಿ ಬಿದ್ದರೂ ಅದರ ಮೈಗೆ ಕೆಸರು ಸೋಂಕುವುದಿಲ್ಲ ಸಂಸಾರದಲ್ಲಿ ಹಾಗೆ ಇರಬೇಕು” ಎಂದು ಅವರು ತಿಳಿಸಿದರು. ನಾಗಮಹಾಶಯರು ಬಾಳಿದ್ದೂ ಹಾಗೆಯೇ. ಅವರು ಸಂಸಾರದಲ್ಲಿದ್ದರೂ ಸನ್ಯಾಸಿಯಂತೆ ಬಾಳಿದರು.

ಒಮ್ಮೆ ಪರಮಹಂಸರನ್ನು ಕಂಡಮೇಲೆ ನಾಗಮಹಾಶಯರು ಸತತವಾಗಿ ಅವರ ಕಡೆಗೆ ಹೋಗ ತೊಡಗಿದರು. ಅವರ ಸಂಪರ್ಕವಿಲ್ಲದೆ ಬಾಳುವುದು ಅವರಿಗೆ ಕಠಿಣವೆನಿಸಿತು. ಪರಮಹಂಸರು ಅವರ ಬಗೆಗೆ ಬಹಳ ಮೆಚ್ಚಿಗೆ ತೋರಿಸುತ್ತಿದ್ದರು.

ಔಷಧದ ಪೆಟ್ಟಿಗೆ ಗಂಗಾನದಿಗೆ

ಒಮ್ಮೆ ಪರಮಹಂಸರು ನಾಗಮಹಾಶಯರ ಎದುರಿನಲ್ಲಿ ಇನ್ನೊಬ್ಬ ಭಕ್ತರಿಗೆ ಹೀಗೆ ಹೇಳುತ್ತಿದ್ದರು : “ಡಾಕ್ಟರು, ವಕೀಲರು ಮುಂತಾದವರಿಗೆ ಧರ್ಮಲಾಭವಾಗುವುದು ಕಠಿಣ. ಡಾಕ್ಟರರ ಮನಸ್ಸು ಔಷಧೋಪಚಾರದ ಕಡೆಗೇ ಇರುತ್ತದೆ. ಅದು ಪರಮಾತ್ಮನ ಕಡೆಗೆ ಹೊರಳುವುದಿಲ್ಲ.” ಈ ಮಾತು ನಾಗಮಹಾಶಯರನ್ನು ಕುರಿತು ಆಡಿದ್ದಲ್ಲ. ಆದರೂ ಇದನ್ನು ಕೇಳಿದ ನಾಗಮಹಾಶಯರಿಗೆ ತಮ್ಮ ವೈದ್ಯಕೀಯ ಕಸುಬಿನ ಬಗೆಗೆ ಕೆಡುಕೆನಿಸಿತು. ಇನ್ನು ಮುಂದೆ ತಾವು ವೈದ್ಯಕೀಯ ಉದ್ಯೋಗವನ್ನು ಬಿಟ್ಟುಬಿಡಬೇಕೆಂದು ನಿರ್ಧರಿಸಿದರು. ಮನೆಗೆ ಬಂದು ತಮ್ಮ ಔಷಧದ ಪೆಟ್ಟಿಗೆ, ಪುಸ್ತಕಗಳನ್ನು ಗಂಟುಕಟ್ಟಿದರು. ಆ ಗಂಟನ್ನು ಗಂಗಾನದಿಗೆ ಹಾಕಿ ಸ್ನಾನಮಾಡಿ ಮರಳಿಬಂದರು. ಇನ್ನು ಮುಂದೆ ಪರಮಹಂಸರ ಕಡೆಗೆ ಹೋಗಿಬರುವುದೇ ಅವರ ಮುಖ್ಯ ಉದ್ಯೋಗವಾಯಿತು.

ಸಂಸಾರದ ಸಂಬಂಧ ಇಲ್ಲ

ಒಮ್ಮೆ ಅವರು ತಮ್ಮ ಹಳ್ಳಿಗೆ ಹೋಗಿದ್ದರು. ಇವರ ಭಾವಾವೇಶದ ವರ್ತನೆಯಿಂದ ಅವರ ಹೆಂಡತಿಗೆ ಹೆದರಿಕೆಯಾಯಿತು. ಆಗ ಅವರು ಹೇಳಿದರು : “ನನ್ನ ದೇಹವು ಪರಮಹಂಸರಿಗೆ ಅರ್ಪಿತವಾಗಿದೆ. ಇನ್ನುಮುಂದೆ ಸಂಸಾರದ ಸಂಬಂಧವು ನನಗಿಲ್ಲ.” ಊಟ ತಿಂಡಿಗಳ ಕಡೆಗೆ ಮೊದಲಿನಿಂದಲೂ ಅವರ ಗಮನ ಕಡಿಮೆ. ನಾಲಿಗೆಯ ರುಚಿಗಾಗಿ ಏನನ್ನೂ ತಿನ್ನಬಾರದೆಂದು ಈಗ ನಿರ್ಧರಿಸಿದರು. ಉಪ್ಪು- ಸಿಹಿಗಳನ್ನು ಬಿಟ್ಟರು. ತವುಡನ್ನು ನೀರಿನಲ್ಲಿ ಕಲಸಿ ತಿನ್ನುವುದೇ ಇವರ ಆಹಾರವಾಯಿತು. ಆಹಾರದ ಕಡೆಗೆ ಗಮನಕೊಟ್ಟರೆ ದೇವರ ಸ್ಮರಣೆಗೆ ವೇಳೆಯುಳಿಯುವುದಿಲ್ಲವೆಂದು ಅವರು ಹೇಳುತ್ತಿದ್ದರು. ದೇವರನ್ನು ಕುರಿತ ಮಾತುಗಳನ್ನು ಬಿಟ್ಟು ಉಳಿದ ಯಾವ ಮಾತನ್ನೂ ಅವರು ಆಡುತ್ತಿರಲಿಲ್ಲ. ಜುಬ್ಬಾ ಹಾಕುತ್ತಿರಲಿಲ್ಲ. ಒಂದು ಧಾವಳಿ ಮಾತ್ರ ಹೊದ್ದುಕೊಳ್ಳುತ್ತಿದ್ದರು. ಕಾಲಿಗೆ ಚಪ್ಪಲಿ ಇಲ್ಲ.

ಅರಳಿದ ಹೂವು

ಸಂಸಾರಿಗಳಿಗೆ ವಿಚಿತ್ರವಾಗಿ ತೋರುವಂತೆ ಅವರು ವರ್ತಿಸುತ್ತಿದ್ದರು. ಒಮ್ಮೆ ಅವರ ತೋಟದ ಬಳಿ ಯಾರೋ ಹಸುವನ್ನು ಕಟ್ಟಿದ್ದರು. ಅಲ್ಲಿಂದ ಅದು ತೋಟದೊಳಗಿನ ಗಿಡಬಳ್ಳಿಗಳನ್ನು ತಿನ್ನಲು ಪ್ರಯತ್ನಿಸುತ್ತಿತ್ತು. ಆದರೆ ಅವು ಅದಕ್ಕೆ ನಿಲುಕುವಂತಿರಲಿಲ್ಲ. ಇದನ್ನು ಕಂಡ ನಾಗಮಹಾಶಯರು ಹಸುವಿನ ಬಳಿಗೆ ಬಂದರು. ’ತಿನ್ನಮ್ಮ, ತಿನ್ನು’ ಎಂದು ಕಟ್ಟಿದ ಹಗ್ಗವನ್ನು ಬಿಚ್ಚಿದರು. ಈ ಬಗೆಯ ಸಂಗತಿಗಳು ಅವರ ಜೀವನದಲ್ಲಿ ಎಷ್ಟೋ ನಡೆದವು.

ಮನೆಯನ್ನು ತೊರೆದು ಸನ್ಯಾಸಿಯಾಗುವ ಯೋಚನೆಯೂ ನಾಗಮಹಾಶಯರಿಗೆ ಹೊಳೆದಿರಬೇಕು. ಆದರೆ ಪರಮಹಂಸರು ಹಾಗೆ ಮಾಡಬೇಕಾಗಿಲ್ಲವೆಂದು ತಿಳಿಸಿ ಹೇಳಿದರು.

ಪರಮಹಂಸ : ಮನೆಯಲ್ಲಿ ವಾಸಿಸುವ ನಿಮ್ಮಂತಹ ಗೃಹಸ್ಥರು ಇತರ ಗೃಹಸ್ಥರಿಗೆ ಆದರ್ಶವಾಗುತ್ತರೆ.

ನಾಗಮಹಾಶಯ : ನಾನು ಮನೆಯಲ್ಲಿಯೇ ಇದ್ದರೆ ನನಗೆ ಸಾಧುಗಳ ಸಹವಾಸ ದೊರೆಯುವುದು ಹೇಗೆ ?

ಪರಮಹಂಸ : ನಿವು ಮನೆಯಲ್ಲಿ ಇದ್ದರೂ ಸಾಧುಗಳು ನಿಮ್ಮ ಬಳಿಗೆ ಬಂದು ನಿಮಗೆ ಸಹವಾಸ ಒದಗಿಸುವರು.

ಪರಮಹಂಸರ ಈ ಮಾತು ನಿಜವಾಗಿ ಪರಿಣಮಿಸಿತು. ನಾಗಮಹಾಶಯರು ತಮ್ಮೂರಿನ ಮನೆಯಲ್ಲಿ ವಾಸಿಸುವಾಗ ಅನೇಕ ಸಾಧುಗಳು ಅವರಲ್ಲಿಗೆ ಬರತೊಡಗಿದರು. ಇದಕ್ಕೆ ಸಂಬಂಧಿಸಿದಂತೆ ಪರಮಹಂಸರು ಇನ್ನೂ ಒಂದು ಮಾತು ಹೇಳಿದ್ದರು. “ಹೂವು ಅರಳಿದಾಗ ಭ್ರಮರಗಳು ತಾವಾಗಿಯೇ ಅಲ್ಲಿಗೆ ಬರುತ್ತವೆ.” ಅಂತು ನಾಗಮಹಾಶಯರ ಒಳಗಿನ ಚೇತನವು ಅರಳಿದ ಹೂವಾಗಿತ್ತು.

ರಾಮಕೃಷ್ಣರು

ದೇಹ ಬಿಟ್ಟನಂತರ

ಪರಮಹಂಸರ ಕೊನೆಗಾಲ ಸಮೀಪಿಸಿತು. ಒಮ್ಮೆ ಅವರ ದೇಹವು ಕೆಂಡದಂತಾಗಿ ಉರಿಯತೊಡಗಿತ್ತು. ಆಗ ಅವರು ನಾಗಮಹಾಶಯರಿಗೆ “ನಿನ್ನ ತಂಪಾದ ದೇಹದಿಂದ ನನ್ನ ದೇಹದ ಉರಿ ತಣ್ಣಗಾಗುತ್ತದೆ” ಎಂದು ಹೇಳಿ ಅವರನ್ನು ತಮ್ಮ ಬಳಿ ಕರೆದುಕೊಂಡರು. ಅಹುದು, ನಾಗಮಹಾಶಯರ ದೇಹ ಮತ್ತು ಸ್ವಭಾವ ತಂಪಾಗಿದ್ದವು. ಆದರೆ ಅವರ ಒಳಗಿನ ಚೇತನವು ಪರಮಹಂಸರೇ ಹೇಳಿದಂತೆ ’ಒರೆಯಿಂದ ಹಿರಿದ ಕತ್ತಿ’ ಆಗಿತ್ತು. ರೋಗದಿಂದ ಬಳಲುತ್ತಿದ್ದ ಪರಮಹಂಸರಿಗೆ ಪರಿ ಪರಿಯ ಸೇವೆ ಮಾಡಿದರು. ಪರಮಾತ್ಮನ ಸಂಕಲ್ಪದಂತೆ ಪರಮಹಂಸರು ೧೮೮೬ ರಲ್ಲಿ ದೇಹ ಬಿಟ್ಟರು.

ನಾಗಮಹಾಶಯರಿಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಅವರು ದುಃಖದಿಂದ ಕಂಗೆಟ್ಟರು, ಉಪವಾಸ ಮಾಡಿ ಹಾಸಿಗೆಯಲ್ಲಿ ಬಿದ್ದುಕೊಂಡರು. ಹಾಸಿಗೆ ಬಿಟ್ಟು ಏಳಲೇ ಇಲ್ಲ. ಈ ಸಮಾಚಾರ ತಿಳಿದ ಸ್ವಾಮಿ ವಿವೇಕಾನಂದರು ಬೇರೆ ಕೆಲವರೊಂದಿಗೆ ನಾಗಮಹಾಶಯರ ಮನೆಗೆ ಹೋದರು. ಅವರು ನಾಗಮಹಾಶಯರಿಗೆ “ಸ್ವಾಮಿ, ನಾವೆಲ್ಲ ಇಂದು ನಿಮ್ಮ ಮನೆಗೆ ಭಿಕ್ಷೆಗೆ ಬಂದಿದ್ದೇವೆ” ಎಂದು ಹೇಳಿದರು. ಆಗ ನಾಗಮಹಾಶಯರು ಎದ್ದು ಬಂದವರಿಗಾಗಿ ಊಟದ  ವ್ಯವಸ್ಥೆ ಮಾಡಿದರು. ಅವರ ಒತ್ತಾಯದಿಂದ ತಾವೂ ಆಹಾರ ಸ್ವೀಕರಿಸಿದರು. ಹೀಗೆ ಬಂದವರು ನಾಗಮಹಾಶಯರು ಬೇರೆ ಕಡೆಗೆ ವಾಸಿಸುವಂತೆ ಮಾಡಿ ಅವರ ಯೋಗಕ್ಷೇಮದ ಹೊಣೆ ವಹಿಸಿಕೊಳ್ಳಲು ಪ್ರಯತ್ನಿಸಿದರು. ಅದಕ್ಕೆ ನಾಗಮಹಾಶಯರು ಒಪ್ಪಲಿಲ್ಲ. “ಪರಮಹಂಸರು ’ನಿನ್ನ ಮನೆಯಲ್ಲಿಯೇ ವಾಸಿಸು’ ಎಂದು ಅಪ್ಪಣೆ ಕೊಟ್ಟಿದ್ದಾರೆ. ನಾನು ಅದನ್ನು ಪಾಲಿಸುತ್ತೇನೆ,” ಹೀಗೆಂದು ಹೇಳಿ ಅವರು ತಮ್ಮೂರಿಗೆ ಹೋಗಿ ಮನೆಯಲ್ಲಿ ವಾಸಿಸತೊಡಗಿದರು.

ದೇವಭೋಗಹಳ್ಳಿಯ ತಮ್ಮ ಮನೆಯಲ್ಲಿ ನಾಗಮಹಾಶಯರು ತಮ್ಮ ತಂದೆಯ ಸೇವೆ ಕೈಕೊಂಡರು. ತಂದೆಯ ಕೊನೆಗಾಲದ ಆಶೆಗಳನ್ನೆಲ್ಲ ಶ್ರಮಪಟ್ಟು ಪೂರೈಸಿದರು. ತಂದೆ ದೀನದಯಾಳು ಅವರ ಮರಣ ಸಮೀಪಿಸಿತು. ಮಗನ ಪ್ರಭಾವದಿಂದ ಅವರು ಸಂಸಾರದ ಚಿಂತೆಯನ್ನು ಬಿಟ್ಟು ದೇವರ ಧ್ಯಾನದಲ್ಲಿ ತೊಡಗಿದರು. ಹಾಗೆ ಧ್ಯಾನ ಮಾಡುತ್ತಲೆ ಶಾಂತವಾಗಿ ಪ್ರಾಣ ಬಿಟ್ಟರು. ನಾಗಮಹಾಶಯರು ಸಂಪ್ರದಾಯದಂತೆ ತಂದೆಯ ಉತ್ತರಕ್ರಿಯೆ ಮಾಡಿದರು. ಅದಕ್ಕಾಗಿ ಹಣವಿರಲಿಲ್ಲ. ಕೆಲವರು ಅವರಿಗೆ ಸಹಾಯ ಮಾಡಬೇಕೆಂದು- ಕಾಣಿಕೆ ರೂಪದಿಂದ ಹಣ ಕೊಡಲು ಮುಂದೆ ಬಂದರು. ನಾಗಮಹಾಶಯರು ಅದನ್ನು ಒಪ್ಪಲಿಲ್ಲ. ಸಾಲ ಮಾಡಿಯೇ ಹಣ ಪಡೆದುಕೊಂಡರು. ತಂದೆಯ ಮರಣದ ನಂತರ ಒಮ್ಮೆ ಕ್ಷೇತ್ರಯಾತ್ರೆ ಮಾಡಿಬಂದರು.

ಪರಮಹಂಸರು ಕಣ್ಮರೆಯಾದ ನಂತರ ಅವರ ಪತ್ನಿ ಶ್ರೀಮಾತೆ ಶಾರದಾದೇವಿಯವರ ಕೃಪೆಗೆ ನಾಗಮಹಾಶಯರು ಪಾತ್ರರಾಗಿದ್ದರು. ಅದರಿಂದ ಅವರಿಗೆ ಸಮಾಧಾನವೂ ದೊರೆತಿತ್ತು. ಈಗ ಶ್ರೀಮಾತೆಯವರ ದರ್ಶನ ಪಡೆದುಕೊಂಡು ಬರಲು ಹೊರಟರು. ದಾರಿಯಲ್ಲಿ ಹೊಟ್ಟೆನೋವು ತಲೆದೋರಿ ಅಲ್ಲಿಯೆ ಬಿದ್ದಿದ್ದರು. ಗಾಡಿ ಮಾಡಿಕೊಂಡು ತಿರುಗಿ ಮನೆಗೆ ಹೋಗಬಹುದಾಗಿತ್ತು. ಆದರೆ ಶ್ರೀಮಾತೆಯ ದರ್ಶನಕ್ಕೆ ಹೊರಟು ಹಾಗೆಯೇ ತಿರುಗಿ ಹೋಗಬಾರದೆಂದು ನಿರ್ಧರಿಸಿದರು. “ಅಮ್ಮಾ ಅಮ್ಮಾ”, ಎಂದು ನರಳುತ್ತ ದಾರಿಯಲ್ಲಿಯೆ ಮಲಗಿದರು. ಮುಂದೆ ನೋವು ಕಡಿಮೆಯಾದಾಗ ನಡೆದು ಹೋಗಿ ದರ್ಶನ ಪಡೆದರು.

ದೇವಭೋಗಹಳ್ಳಿಯಲ್ಲಿ ನಾಗಮಹಾಶಯರು ಸನ್ಯಾಸಿಯಂತೆ ಬಾಳತೊಡಗಿದರು. ಅವರ ಪತ್ನಿಯೂ ಇದಕ್ಕೆ ಒಪ್ಪಿಕೊಂಡಳು. ನಾಗಮಹಾಶಯರು ಲೌಕಿಕ ಬಾಳಿನಲ್ಲಿ ಅಲೌಕಿಕ ಸನ್ಯಾಸಿಯಂತೆ ಇದ್ದರು.

ಎಲ್ಲ ಪ್ರಾಣಿಗಳಲ್ಲಿ ದಯೆ

ಅವರು ಯಾವ ಪ್ರಾಣಿಯನ್ನೂ ಹಿಂಸಿಸುತ್ತಿರಲಿಲ್ಲ. ಒಂದು ಬಾರಿ ಇವರ ಮನೆಯ ಅಂಗಳದಲ್ಲಿ ಒಂದು ಹಾವು ಬಂದಿತು. ಶರತ್ಕಾಮಿನಿಗೆ ಹೆದರಿಕೆಯಾಯಿತು. ಹಾವನ್ನು ಕೊಲ್ಲಬೇಕೆಂದು ಸೂಚಿಸಿದಳು. ಆಗ ನಾಗಮಹಾಶಯರು ಹೇಳಿದರು : “ನಾವು ನಮ್ಮ ಮನದ ಹಾವಿಗೆ ಹೆದರಬೇಕು. ಬೆದರದಿದ್ದರೆ ವನದ ಹಾವು ನಮ್ಮನ್ನು ಕಚ್ಚುವುದಿಲ್ಲ” ಹೀಗೆ ಹೇಳಿ ಅವರು ಹಾವಿನ ಬಳಿಗೆ ಬಂದು “ನೀನು ಕಾಡಿನಲ್ಲಿರಬೇಕು. ಬಡವನ ಗುಡಿಸಿಲಿಗೆ ಬರಬಾರದು” ಎಂದು ಹೇಳಿ ಅದು ಅಲ್ಲಿಂದ ತಿರುಗಿ ಹೋಗುವಂತೆ ಮಾಡಿದರು.

ಅವರು ಎಂದೂ ಸೊಳ್ಳೆ ತಿಗಣೆಗಳನ್ನು ಕೊಲ್ಲುತ್ತಿರಲಿಲ್ಲ. ಇರುವೆ ಮೈಮೇಲೆ ಬಂದರೂ ಅವುಗಳನ್ನು ಹಾಗೆಯೇ ಉಪಾಯವಾಗಿ ಸರಿಸಿಬಿಡುತ್ತಿದ್ದರು. ಒಮ್ಮೆ ಇವರ ಮನೆಯ ಕಂಬಕ್ಕೆ ಗೆದ್ದಿಲುಗಳು ಹತ್ತಿಕೊಂಡಿದ್ದವು. ಒಬ್ಬರು ಅವುಗಳನ್ನು ಓಡಿಸಲೆಂದು ಕಂಬಕ್ಕೆ ಗಟ್ಟಿಯಾಗಿ ಹೊಡೆದರು. ಆಗ ಗೆದ್ದಿಲುಗಳು ರಾಶಿರಾಶಿಯಾಗಿ ನೆಲದ ಮೇಲೆ ಹರಿದಾಡತೊಡಗಿದವು. ಅದನ್ನು ಕಂಡ ನಾಗಮಹಾಶಯರು “ಅಯ್ಯೋ ಇದನ್ನೇನು ಮಾಡಿದೆ ? ಪಾಪ ! ಗೆದ್ದಿಲುಗಳು ಹಾಯಾಗಿ ಇದ್ದವು. ಅವುಗಳ ಮನೆಯನ್ನು ನೀನು ಹಾಳು ಮಾಡಿದೆಯಲ್ಲ !” ಎಂದು ಹೇಳಿ ಕಣ್ಣೀರು ಸುರಿಸಿದರು. “ನೀವು ಪುನಃ ಕಂಬದಲ್ಲಿ ಮನೆ ಕಟ್ಟಿಕೊಳ್ಳಿ” ಎಂದು ಗೆದ್ದಿಲುಗಳಿಗೆ ಹೇಳಿದರು. ಕಾಲಾಂತರದಲ್ಲಿ ಆ ಗೆದ್ದಿಲುಗಳಿಂದ ಮನೆಯ ಕಂಬವು ಕುಸಿದು ಬಿದ್ದಿತಂತೆ.

ಪರಮಾತ್ಮನ ಕೃಪೆ
ಕಾಣುವ ಕಣ್ಣು

ಇವರ ನೆರೆಮನೆಗೆ ಒಮ್ಮೆ ಬೆಂಕಿಬಿದ್ದಿತು. ಬೆಂಕಿಯ ಕಿಡಿಗಳು ಇವರ ಮನೆಯವರೆಗೆ ಬರತೊಡಗಿದವು. ಸುತ್ತಲೂ ಗಲಾಟೆ ಆರಂಭವಾಯಿತು. ಇವರ ಪತ್ನಿಗೆ ದಿಗಿಲಾಯಿತು. ನಾಗಮಹಾಶಯರು ಮಾತ್ರ ತಣ್ಣಗೆ ಕುಳಿತಿದ್ದರು. ಶರತ್ಕಾಮಿನಿ ಬಟ್ಟೆಗಳನ್ನು ಹೊರಗೆ ಸಾಗಿಸುವ ವ್ಯವಸ್ಥೆ ಮಾಡತೊಡಗಿದಳು. ಆಗ ನಾಗಮಹಾಶಯರು “ಆ ಹಾಳು ಬಟ್ಟೆ ಕಟ್ಟಿಕೊಂಡು ಏನು ಮಾಡುವುದು ? ಅಗೋ ಬ್ರಹ್ಮನು ನಮ್ಮ ಮನೆಯ ಕಡೆಗೇ ಬರುತ್ತಿದ್ದಾನೆ. ಅವನ ಪೂಜೆ ಮಾಡೋಣ” ಎಂದು ಹೇಳಿದರು. ಉರಿಯ ಜ್ವಾಲೆಗಳನ್ನು ಇವರು ಬ್ರಹ್ಮ ಎಂದು ಭಾವಿಸಿದರು. ಅವರ ಮನೆಗೆ ಏನೂ ಅಪಾಯವಾಗಲಿಲ್ಲ.

ಬಾಳಿನಲ್ಲಿ ನಡೆಯುವ ಆಕಸ್ಮಿಕಗಳಲ್ಲಿ ಕೂಡ ನಾಗಮಹಾಶಯರು ಪರಮಾತ್ಮನ ಮಂಗಲವನ್ನೇ ಕಾಣುತ್ತಿದ್ದರು. ಒಂದು ರಾತ್ರಿ ಬೆಕ್ಕು ಬಂದು ಇವರ ಮೈಯನ್ನು ಪರಚಿತು. ಕಣ್ಣಿಗೆ ಗಾಯವಾಯಿತು. ಅದನ್ನು ಕಂಡು ಇವರ ಪತ್ನಿಯು ಗಾಬರಿಯಾಗಿ ಅಳತೊಡಗಿದಳು. ಆಗ ನಾಗಮಹಾಶಯರು “ಈ ಹಾಳು ದೇಹದ ಬಗೆಗೆ ಏಕೆ ಯೋಚನೆ ಮಾಡುತ್ತೀ ? ನಾನು ಹಿಂದೆ ಏನೋ ಪಾಪ ಮಾಡಿರಬೇಕು. ಗುರುದೇವನು ಬೆಕ್ಕಿನ ರೂಪದಲ್ಲಿ ಬಂದು ನನಗೆ ಶಿಕ್ಷೆ ಕೊಟ್ಟಿದ್ದಾನೆ. ಈಗ ನನ್ನ ಪಾಪ ಅಳಿಯಿತು. ಇದು ದೇವರ ದಯೆ” ಎಂದರು. ಇನ್ನೊಮ್ಮೆ ಅವರ ಎರಡೂ ಕೈಗಳಿಗೆ ನೋವು ಉಂಟಾಗಿತ್ತು. ಕೈಗಳನ್ನು ಅಲುಗಾಡಿಸಲು ಬರುತ್ತಿರಲಿಲ್ಲ. ಆಗ ಇವರು ಹೇಳಿದರು : “ಇದು ಒಳ್ಳೆಯದೇ ಆಯಿತು. ಯಾವಾಗಲೂ ಕೈಗಳನ್ನು ಮುಗಿದುಕೊಂಡೇ ಇರುವುದನ್ನು ಕಲಿಸುವುದಕ್ಕೆ ದೇವರು ಹೀಗೆ ಮಾಡಿದ್ದಾನೆ.”

ಹುಚ್ಚಆದರೆ ಎಂತಹ ಹುಚ್ಚು !

ಪಾಲ್‌ಬಾಬುಗಳು ಒಮ್ಮೆ ಇವರ ಪ್ರಯಾಣದ ವೆಚ್ಚಕ್ಕೆಂದು ಎಂಟುರೂಪಾಯಿ ಕೊಟ್ಟಿದ್ದರು. ಪ್ರಯಾಣದ ಟಿಕೆಟ್ ಕೊಳ್ಳಲು ಹೋದಾಗ ಒಬ್ಬ ಭಿಕ್ಷುಕಿ ತನ್ನ ಮಕ್ಕಳನ್ನು ಕಟ್ಟಿಕೊಂಡು ಇವರ ಬಳಿ ಬಂದಳು. ತನ್ನ ಕಷ್ಟಗಳನ್ನು ಹೇಳಿ ಭಿಕ್ಷೆ ಕೊಡಬೇಕೆಂದು ಹೇಳಿದಳು. ಆಗ ನಾಗಮಹಾಶಯರು ತಮ್ಮಲ್ಲಿದ್ದ ಹಣವನ್ನೆಲ್ಲ ಆಕೆಗೆ ಕೊಟ್ಟು “ತಾಯೀ ಈ ಹಣವನ್ನು ತೆಗೆದುಕೊಂಡು ಹೋಗಿ ನಿನ್ನ ಮತ್ತು ಮಕ್ಕಳ ಹಸಿವೆ ತೀರಿಸಿಕೋ” ಎಂದು ಹೇಳಿದರು. ತಮ್ಮ ಕಂಬಳಿಯನ್ನೂ ಆಕೆಗೆ ಕೊಟ್ಟರು. ಅನಂತರ ಚಳಿಯಲ್ಲಿ ನಡೆಯುತ್ತ ಊರಿಗೆ ಹೊರಟರು. ಮಧ್ಯದಲ್ಲಿ ದೇವಸ್ಥಾನಗಳಲ್ಲಿ ತಂಗುತ್ತಿದ್ದರು. ನದಿಗಳಿದ್ದರೆ ಈಸುತ್ತಿದ್ದರು. ಇಪ್ಪತ್ತೊಂದು ದಿನಗಳ ಪ್ರಯಾಣದ ನಂತರ ಊರನ್ನು ತಲುಪಿದರು.

ನಾಗಮಹಾಶಯರ ಈ ಬಗೆಯ ವರ್ತನೆಯನ್ನು ಕಂಡ ಕೆಲವರು ಅವರನ್ನು ಹುಚ್ಚರೆಂದು ಕರೆದರು. ಆದರೆ ನಿಜವಾಗಿ ಜ್ಞಾನಿಗಳಾದವರು ಇವರ ಹಿರಿಮೆಯನ್ನು ಮೆಚ್ಚಿಕೊಂಡರು.

ಶರಶ್ಚಂದ್ರ ಚಕ್ರವರ್ತಿ ಎಂಬ ದೊಡ್ಡ ಮನುಷ್ಯರೊಬ್ಬರು ನಾಗಮಹಾಶಯರೊಂದಿಗೆ ಸಲಿಗೆಯಿಂದ ವರ್ತಿಸುತ್ತಿದ್ದರು. ಒಮ್ಮೆ ಅವರು ನಾಗಮಹಾಶಯರೊಂದಿಗೆ ಬೀದಿಯಲ್ಲಿ ನಡೆದಿದ್ದರು. ’ತರ್ಕರತ್ನ’ ಎಂಬ ಬಿರುದನ್ನು ಪಡೆದ ಪಂಡಿತರೊಬ್ಬರು ಇದನ್ನು ಕಂಡರು. “ ಈ ಹುಚ್ಚನ ಜೊತೆ ಏಕೆ ಹೊರಟಿದ್ದೀರಿ ?” ಎಂದು ಚಕ್ರವರ್ತಿಗಳಿಗೆ ಕೇಳಿದರು. ಆಗ ಚಕ್ರವರ್ತಿ ಹೇಳಿದರು, “ಅಹುದು ಅವರು ಹುಚ್ಚರು. ಆದರೆ ನಾವೆಲ್ಲ ಹುಚ್ಚರೇ ಆಗಿದ್ದೇವೆ. ಸಂಪತ್ತು, ಅಧಿಕಾರ, ಹೆಣ್ಣು, ಕೀರ್ತಿ, ಜಂಬ ಹೀಗೆ ಒಂದೊಂದು ವಿಷಯದ ಹುಚ್ಚು ನಮಗೆ. ಆದರೆ ನಾಗಮಹಾಶಯರಿಗೆ ಪರಮಾತ್ಮನ ಬಗೆಗೆ ಹುಚ್ಚು.” ಈ ಮಾತು ಕೇಳಿ ಪಂಡಿತರು ತಣ್ಣಗಾದರು.

ಸ್ವಾಮಿ ವಿವೇಕಾನಂದರು ನಾಗಮಹಾಶಯರ ಬಗೆಗೆ ಗೌರವಪೂರ್ವಕವಾಗಿ ಮಾತನಾಡುತ್ತಿದ್ದರು. ಅವರು ಹೇಳಿದರು : “ನಾವು ಬರಿಯ ತತ್ವವನ್ನು ಹುಡುಕುವಲ್ಲಿ ಕಾಲ ಕಳೆಯುತ್ತೇವೆ. ಆ ತತ್ವದ ನಿಜವಾದ ಆಚರಣೆ ಕಂಡುಬರುತ್ತಿರುವುದು ನಾಗಮಹಾಶಯರಲ್ಲಿ ಮಾತ್ರ. ತ್ಯಾಗ ಇಂದ್ರಿಯಸಂಯಮಗಳಲ್ಲಿ ಅವರು ನಮಗಿಂತಲೂ ಶ್ರೇಷ್ಠರಾಗಿದ್ದಾರೆ.” ಅವರು ಇನ್ನೊಮ್ಮೆ ಹೇಳಿದರು : “ನಾಗಮಹಾಶಯರು ವಾಸಿಸುವ ಪ್ರದೇಶದಲ್ಲಿ ನನ್ನ ಉಪನ್ಯಾಸ ಉಪದೇಶಗಳು ಅವಶ್ಯವಿಲ್ಲ. ನಾಗಮಹಾಶಯರ ಜೀವನಕ್ಕಿಂತ ಹೆಚ್ಚಿಗೆ ನಾನು ಏನು ಹೇಳಬಲ್ಲೆ ?” ಸ್ವಾಮಿ ವಿವೇಕಾನಂದರಿಂದ ಇಂತಹ ಹೊಗಳಿಕೆಯನ್ನು ಪಡೆದ ನಾಗಮಹಾಶಯರು ಪುಣ್ಯಪುರುಷರೇ ಸರಿ.

ಶಿಷ್ಯರು

ನಾಗಮಹಾಶಯರಂತಹ ಪುಣ್ಯಪುರುಷರ ಶಿಷ್ಯರಾಗ ಬೇಕೆಂದು ಹಲವರು ಅಪೇಕ್ಷಿಸಿದರು. ಆದರೆ ನಾಗಮಹಾಶಯರು ಯಾರಿಗೂ ಮಂತ್ರೋಪದೇಶ ಕೊಟ್ಟು ಶಿಷ್ಯರನ್ನಾಗಿ ಮಾಡಿಕೊಳ್ಳಲಿಲ್ಲ. “ನಾನು ಕ್ಷುದ್ರ. ನಾನು ಹೇಗೆ ಗುರುವಾಗಬಲ್ಲೆ?” ಎಂಬುದು ಅವರ ಅಭಿಪ್ರಾಯವಾಗಿತ್ತು.

ದೀಕ್ಷೆ ಪಡೆದ ಶಿಷ್ಯರು ಯಾರೂ ಇಲ್ಲವಾದರೂ ನಾಗಮಹಾಶಯರ ಬಗೆಗೆ ಭಕ್ತಿಯನ್ನು ತೋರುವವರು ಹಲವರಿದ್ದರು. ಅವರ ಆಶೀರ್ವಾದ ಪಡೆಯಲು ಅನೇಕರು ಅವರಲ್ಲಿ ಬರುತ್ತಿದ್ದರು. ಹೀಗೆ ಬರುವವರಿಗೆ ನಾಗಮಹಾಶಯರ ಮನೆಯೇ ಆಶ್ರಮವಾಯಿತು. ಅಂತಹವರಿಗೆ ನಾಗಮಹಾಶಯ- ಶರತ್ಕಾಮಿನಿಯರು ತಂದೆ- ತಾಯಿಗಳಾದರು. ಬಂದವರಿಗೆ ವಾತ್ಸಲ್ಯಪೂರ್ವಕವಾದ ಆತಿಥ್ಯ ದೊರೆಯುತ್ತಿತ್ತು.

ಢಾಕಾ ಕಾಲೇಜಿನಲ್ಲಿ ಓದುತ್ತಿದ್ದ ಒಬ್ಬ ವಿದ್ಯಾರ್ಥಿ ನಾಗಮಹಾಶಯರ ಭಕ್ತನಾಗಿದ್ದ. ಇವರ ದರ್ಶನ ಪಡೆಯದೆ ಅವನಿಗೆ ಸಮಾಧಾನವೆನಿಸುತ್ತಿರಲಿಲ್ಲ. ಒಮ್ಮೆ ಆತನು ನಾರಾಯಣಗಂಜ್‌ಗೆ ಬರುವ ಹೊತ್ತಿಗೆ ರಾತ್ರಿಯಾಯಿತು. ಮಳೆ ಸುರಿಯುತ್ತಿತ್ತು. ಚಳಿ ಕೊರೆಯುತ್ತಿತ್ತು. ಆದರೂ ಆ ವಿದ್ಯಾರ್ಥಿ ಅಂತಹ ವೇಳೆಯಲ್ಲಿ ನೀರಿನ ಪ್ರವಾಹದಲ್ಲಿ ಈಸುತ್ತ ದೇವಭೋಗಹಳ್ಳಿ ತಲುಪಿದ. ಇನ್ನೊಮ್ಮೆ ನಾಗಮಹಾಶಯರ ದರ್ಶನದ ಸಲುವಾಗಿ ಪ್ರಾಣಕೊಡಲು ಸಿದ್ಧನಾಗಿದ್ದ.

ನಾಗಮಹಾಶಯರಿಗೆ ಅನೇಕ ಮಂದಿ ಭಕ್ತರಿದ್ದರು. ಕಾಶೀಪುರದ ಮುಸ್ಲಿಮನೊಬ್ಬ ಎಪ್ಪತ್ತು ವರ್ಷದ ಮುದುಕ ದೂರದಿಂದ ನಡೆದು ನಾಗಮಹಾಶಯರನ್ನು ನೋಡಲು ಬರುತ್ತಿದ್ದ. ಅವರ ಭಕ್ತರಲ್ಲಿ ಎಲ್ಲರಿಗಿಂತ ಹೆಚ್ಚಿನ ಸ್ಥಾನ ಅವರ ಪತ್ನಿಗೇ ದೊರೆಯಬೇಕು- ಆಕೆ ಸಹನೆ, ತ್ಯಾಗ, ಸೇವೆಗಳಿಂದ ಜೀವನ ಸಾಗಿಸಿದಳು. ಸಂಸಾರದ ಕಡೆಗೆ ಲಕ್ಷ್ಯಗೊಡದೆ ಹುಚ್ಚನಂತೆ ವರ್ತಿಸುತ್ತಿದ್ದ ಪತಿಯನ್ನು ಆಕೆ ದೇವರಂತೆ ಕಂಡಳು. ಸೇವೆ ಮಾಡಿದಳು. ಪೂಜಿಸಿದಳು. ಮನೆಗೆ ಬರುವ ಅನೇಕ ಅತಿಥಿಗಳಿಗೆ ತಾಯಿಯ ವಾತ್ಸಲ್ಯ ತೋರಿದಳು. ಗಂಡನ ವಿಚಿತ್ರವಾದ ಬಾಳಿಗೆ ಹೊಂದಿಕೊಂಡು ಹೋಗುವುದು ಸುಲಭವಾಗಿರಲಿಲ್ಲ. ಆದರೂ ಆಕೆ ಕೆಚ್ಚಿನಿಂದ ಹಾಗೆ ಮಾಡಿ ಎಲ್ಲರ ಗೌರವಕ್ಕೆ ಪಾತ್ರಳಾದಳು.

ಬರಬರುತ್ತ ದೇವಭೋಗಹಳ್ಳಿಯ ಜನರೆಲ್ಲ ನಾಗಮಹಾಶಯರ ಭಕ್ತರಾಗಿ ಪರಮಾತ್ಮನತ್ತ ಹೊರಳಿದರು.

ಮಹಾಯಾತ್ರೆ

೧೮೮೯ರಲ್ಲಿ ನಾಗಮಹಾಶಯರಿಗೆ ಕಾಯಿಲೆಯಾಯಿತು. ಆಗ ಮನೆಯ ಹೊರಭಾಗದಲ್ಲಿ ಹರಕು ಚಿಂದಿಯ ಮೇಲೆ ಮಲಗಿಬಿಟ್ಟರು. ವಿಪರೀತ ಚಳಿಯಿದ್ದರೂ ಅವರು ಮನೆಯೊಳಗೆ ಹೋಗಲಿಲ್ಲ. ರಾಮಕೃಷ್ಣರ ಹೆಸರಿನಿಂದ ಜಪ ಮಾಡುತ್ತ ಹೊರಗೇ ಉಳಿದರು. ಆಗ ಅವರ ಅನೇಕ ಸ್ನೇಹಿತರು ಭಕ್ತರು ಅಲ್ಲಿಗೆ ಬಂದರು. ನಾಗಮಹಾಶಯರ ದೇಹದ ಸ್ಥಿತಿಯನ್ನು ಕಂಡು ದುಃಖಿತರಾದರು. ಆಗ ನಾಗಮಹಾಶಯರು “ನನ್ನ ಈ ಹಾಳು ಅಸ್ಥಿಪಂಜರಕ್ಕಾಗಿ ಏಕೆ ಯೋಚನೆ ಮಾಡುತ್ತಿದ್ದೀರಿ?” ಎಂದರು. ತಮ್ಮ ರೋಗದ ಬಗೆಗೆ ಅವರು ಮಾತನಾಡದೆ ಗುರುದೇವ ಪರಮಹಂಸರ ಬಗೆಗೆ ಮಾತನಾಡತೊಡಗಿದರು. ರೋಗ ಇನ್ನೂ ಹೆಚ್ಚಿತು. ಆಪ್ತೇಷ್ಟರೆಲ್ಲ ಬಂದರು. ನಾಗಮಹಾಶಯರ ಅಪೇಕ್ಷೆಯಂತೆ ಪುರಾಣ ಓದುವ, ಭಜನೆ ಮಾಡುವ ಕಾರ್ಯಕ್ರಮ ಆರಂಭವಾಯಿತು. “ನನ್ನ ಅಸ್ಥಿಪಂಜರಕ್ಕೆ ಏನಾದರೂ ಆಗಲಿ ಮನಸ್ಸೇ ನೀನು ಆನಂದವಾಗಿ ಇದ್ದುಬಿಡು” ಎಂದು ನಾಗಮಹಾಶಯರು ಅಂದುಕೊಳ್ಳುತ್ತಿದ್ದರು. ಸುತ್ತಲೂ ಸೇರಿದ ಜನರಿಗೆ “ನನ್ನ ದೇಹದ ವಿಚಾರ ಬೇಡ. ಜಗನ್ಮಾತೆಯ ಸ್ತೋತ್ರ ಹೇಳಿರಿ” ಎಂದು ಕೇಳಿಕೊಂಡರು.

ಒಂದು ದಿನ ’ಪ್ರಯಾಣಕ್ಕೆ ಒಳಯ ಮುಹೂರ್ತ ಯಾವುದು ನೋಡಿರಿ’ ಎಂದು ನಾಗಮಹಾಶಯರು ಹೇಳಿದರು. ಏಕೆಂಬುದು ತಿಳಿಯದೆ ಆಪ್ತರು ಒಂದು ಒಳ್ಳೆಯ ಮುಹೂರ್ತವನ್ನು ನೋಡಿ ತಿಳಿಸಿದರು. ಆಗ ನಾಗಮಹಾಶಯರು ನಿಶ್ಚಿಂತರಾಗಿ “ಸರಿ. ನಾನು ಆ ದಿನವೇ ಮಹಾಯಾತ್ರೆ ಮಾಡುತ್ತೇನೆ” ಎಂದರು. ಇದನ್ನು ಕೇಳಿ ಆಪ್ತರಿಗೆ ದಿಗಿಲಾಯಿತು. ನಾಗಮಹಾಶಯರು ಪ್ರಸಿದ್ಧ ಯಾತ್ರಾಸ್ಥಳಗಳ ಮಹತ್ವವನ್ನು ಕುರಿತು ಮಾತನಾಡತೊಡಗಿದರು.

ಒಳ್ಳೆಯ ಮುಹೂರ್ತವೆಂದು ಹೇಳಿದ ದಿನವೇ ನಾಗಮಹಾಶಯರು ಜೀವಬಿಟ್ಟರು. ಮರಣದ ಕಾಲಕ್ಕೆ ಅವರ ಮುಖದಲ್ಲಿ ಶಾಂತಿ, ಪ್ರಸನ್ನತೆಯ ಕಳೆ ತುಂಬಿತ್ತು.

ಮರಣದ ಸಮಾಚಾರ ತಿಳಿದು ಜನರು ಯಾತ್ರೆಗೆ ಸೇರಿದಂತೆ ನಾಗಮಹಾಶಯರ ಕೊನೆಯ ದರ್ಶನಕ್ಕಾಗಿ ಸೇರಿದರು. ಜೀವಿಸಿರುವವರೆಗೆ ಅವರು ಭಾವಚಿತ್ರ ತೆಗೆಸಿಕೊಳ್ಳಲು ಒಪ್ಪಿರಲಿಲ್ಲ. ಈಗ ಅವರ ಭಾವಚಿತ್ರ ತೆಗೆಯಲಾಯಿತು.

ನಾಗಮಹಾಶಯರು ಕಣ್ಮರೆಯಾದರು, ಆದರೆ ಅವರ ಪ್ರಭಾವ ಎಲ್ಲರ ಹೃದಯಗಳಲ್ಲಿ ಉಳಿಯಿತು.

ನಾಗಮಹಾಶಯರ ಉತ್ತರಕ್ರಿಯೆ ನಡೆದ ಸ್ಥಳದಲ್ಲಿ ಮುಂದೆ ಅವರ ಸಮಾಧಿಯನ್ನು ಕಟ್ಟಲಾಯಿತು. ಈಗಲೂ ಅಲ್ಲಿ ಸರಳ ರೀತಿಯಲ್ಲಿ ಪೂಜೆ ನಡೆಯುತ್ತದೆ.