Categories
ರಾಜ್ಯೋತ್ಸವ 2019 ರಾಜ್ಯೋತ್ಸವ ಪ್ರಶಸ್ತಿ ಸಂಗೀತ

ನಾಗವಲ್ಲಿ ನಾಗರಾಜ್

ಕರ್ನಾಟಕ ಶಾಸ್ತ್ರೀಯ ಸಂಗೀತ ಕ್ಷೇತ್ರ ಕಂಡ ವಿಶಿಷ್ಟ ಕಲಾವಿದೆ ವಿದ್ವಾನ್ ನಾಗವಲ್ಲಿ ನಾಗರಾಜ್, ತ್ರಿಸ್ಥಾಯಿಯಲ್ಲೂ ಸಂಚರಿಸಬಲ್ಲ ಅಪರೂಪದ ಕಂಠವುಳ್ಳ ಶಾರದಾಪುತ್ರಿ.
ಪ್ರಸಿದ್ಧ ವಾಗ್ಗೇಯಕಾರರಾದ ಕೊಳತ್ತೂರು ರಾಮಕೃಷ್ಣ ಶಾಸ್ತ್ರಿಗಳ ಮೊಮ್ಮಗಳು ನಾಗವಲ್ಲಿ ನಾಗರಾಜ್. ತಂದೆಯೂ ಸಂಗೀತಜ್ಞ ಬಾಲ್ಯದಲ್ಲೇ ಸ್ವರಸಂಸ್ಕಾರ, ತಂದೆಯೇ ಮೊದಲ ಗುರು, ಪ್ರಸಿದ್ಧ ಪಿಟೀಲು ವಿದ್ವಾಂಸರಾದ ಅನೂರು ರಾಮಕೃಷ್ಣ ಅವರಲ್ಲಿ ಉನ್ನತಸ್ತರದ ವ್ಯಾಸಂಗ, ಬೆಂಗಳೂರು ವಿಶ್ವವಿದ್ಯಾಲಯದಿಂದ ಎಂ.ಎ ಹಾಗೂ ಪಿಎಚ್‌ಡಿ ಪಡೆದವರು, ಬೆಂಗಳೂರು ವಿ.ವಿ ಯಲ್ಲಿ ಪ್ರಾಧ್ಯಾಪಕಿಯಾಗಿ ಮೂರು ದಶಕಗಳಿಂದಲೂ ನಿರಂತರ ಸೇವೆ. ಏಕಕಾಲಕ್ಕೆ ವಿದ್ವಾಂಸರು, ಜನಸಾಮಾನ್ಯರನ್ನು ರಂಜಿಸಬಲ್ಲ ವಿಶಿಷ್ಟ ಗಾಯನ ಶೈಲಿವುಳ್ಳ ಆಕಾಶವಾಣಿಯ ಎ ಟಾಪ್ ಕಲಾವಿದೆ. ರಾಜ್ಯ, ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಂಗೀತಸುಧೆ ಹರಿಸಿ ಸುವಿಖ್ಯಾತರಾದವರು. ಸಂಗೀತ ಚೂಡಾಮಣಿ, ಸಂಗೀತ ವಿದ್ಯಾವಾರಿಧಿ, ಗಾನಕಲಾಶ್ರೀ ಮುಂತಾದ ಬಿರುದುಗಳಿಂದ ಭೂಷಿತರು. ರಾಗವಲ್ಲಿ ರಸಾಲ ಹೆಸರಿನಡಿ ಅರವತ್ತು ಕೃತಿಗಳನ್ನು ಹೊರತಂದಿರುವ ಹೆಗ್ಗಳಿಕೆ. ಕನ್ನಡದ ಮಹಾಕಾವ್ಯಗಳಾದ ಕುಮಾರವ್ಯಾಸ ಭಾರತ, ಹರಿಶ್ಚಂದ್ರಕಾವ್ಯ ದಾಸಸಾಹಿತ್ಯ ಮತ್ತು ವಚನಸಾಹಿತ್ಯವನ್ನು ಸಂಗೀತಕ್ಕಳವಡಿಸಿ ಜನಪ್ರಿಯಗೊಳಿಸಿದ ಹಿರಿಮೆಯ ನಾಗವಲ್ಲಿ ಅವರು ಅಭಿಜಾತ ಕಲೆಗಳ ಉಳಿವಿಗೆ ಅನವರತ ಸೇವಾನಿರತರು.