ನಾಗಾರಾಧನೆ ಕ್ಷೇತ್ರಗಳು

ತುಳುನಾಡಿನಲ್ಲಿ ನಾಗಪೂಜೆಗೆ ಸಂಬಂಧಿಸಿದಂತೆ ಹೆಜ್ಜೆ ಹೆಜ್ಜೆಗೂ ಆರಾಧನಾ ಕೇಂದ್ರಗಳಿವೆ. ನಾಗಬನ, ನಾಗನ ಕಟ್ಟೆ, ನಾಗನಕಲ್ಲು, ನಾಗನಹುತ್ತ, ನಾಗದೇವಾಲಯ ಮತ್ತು ಆಲಡೆಗಳಲ್ಲಿ ನಾಗಪೂಜೆಯ ಮೂಲಕ ನಾಗನನ್ನು ಸಂತೃಪ್ತಿಪಡಿಸುವ ವಿಧಿ-ವಿಧಾನಗಳು ನಿರಂತರವಾಗಿರುತ್ತವೆ. ಇಲ್ಲಿ ಆರಾಧಿಸುವ ದೈವ-ದೇವರುಗಳಲ್ಲಿ ನಾಗಬ್ರಹ್ಮ, ನಾಗರಾಜ, ನಾಗಕನ್ನಿಕೆ, ನಾಗಯಕ್ಷಿ ಮತ್ತು ತಂಬೂರಿ ನಾಗ ಪ್ರಮುಖವಾಗಿ ಕಂಡುಬರುತ್ತವೆ. ನಾಗಬನಗಳಲ್ಲಿ ಮುಖ್ಯವಾಗಿ ತನುತರ್ಪಣ, ನಾಗ ತಂಬಿಲ, ಆಶ್ಲೇಷಾ ಬಲಿ ಇತ್ಯಾದಿ ಸೇವೆಗಳು ಜರುಗುತ್ತವೆ. ಪ್ರಸ್ತುತ ತುಳುನಾಡಿನ ಬಹುತೇಕ ನಾಗಬನಗಳಲ್ಲಿ ಬ್ರಾಹ್ಮಣ ವೈದಿಕರು, ಪುರೋಹಿತರು ಪೂಜೆ ಮಾಡುತ್ತಾರೆ. ನಾಗಬನಗಳಲ್ಲಿ ನಾಗನೇ ಪ್ರಮುಖವಾಗಿವಾಗಿದ್ದಾನೆ. ಅಂತೆಯೇ ಬ್ರಹ್ಮಸ್ಥಾನ, ಆಲಡೆಗಳಲ್ಲಿಯೂ ನಾಗನೇ/ನಾಗಬ್ರಹ್ಮನೆ ಮುಖ್ಯ ದೈವವಾಗಿ ಪೂಜಿಸಲ್ಪಡುತ್ತಾನೆ. ಒಂದು ಅಂದಾಜಿನ ಪ್ರಕಾರ ತುಳುನಾಡಿನಲ್ಲಿ ನಾಗಬನ-ದೈವಬನಗಳೆಲ್ಲ ಸೇರಿದಂತೆ ದೇವರ ಕಾಡುಗಳ ಸಂಖ್ಯೆ ಸರಿಸುಮಾರು ೪೫ ರಿಂದ ೫೦ ಸಾವಿರ.

ಕುಕ್ಕೆ ಸುಬ್ರಹ್ಮಣ್ಯ, ಕಾಳಾವರ, ಮಂಜೇಶ್ವರ, ಬಳ್ಳಮಂಜ, ಕುಡುಪು, ಪಡುಬಿದ್ರಿ, ಕಾಟುಕುಕ್ಕೆ, ಮುಗು, ಕುಮಾರಮಂಗಲ, ಕೋಟೆಕಾರು, ಪಾವಂಜೆ, ಕಜೆಕಾರು, ಸೂಡ ಇತ್ಯಾದಿ ಪ್ರಸಿದ್ಧಿ ಪಡೆದ ನಾಗ (ಸುಬ್ರಹ್ಮಣ್ಯ) ದೇವಾಲಯಗಳಲ್ಲಿ ಪ್ರತಿನಿತ್ಯ ಸಾವಿರಾರು-ಲಕ್ಷಾಂತರ ಭಕ್ತರು ನಾಗಸಂಬಂಧಿ ಪೂಜಾಕಾರ್ಯಗಳನ್ನು ನೆರವೇರಿಸುತ್ತಾರೆ. ಅನೇಕ ದೇವಾಲಯಗಳಲ್ಲಿ ನಾಗನನ್ನು ದೈವರೂಪದಲ್ಲಿ ಕೋಲ ಕಟ್ಟಿ ಪೂಜಿಸುವ ಸಂಪ್ರದಾಯವೂ ಇದೆ. ಕುಕ್ಕೆ ಶ್ರೀ ಸುಬ್ರಹ್ಮಣ್ಯ ರಾಜ್ಯದ ಪ್ರಸಿದ್ಧ ಧಾರ್ಮಿಕ ಕೇಂದ್ರಗಳಲ್ಲಿ ಒಂದು. ನಾಗದೇವಾಲಯ ಎಂಬ ಹೆಸರು ಪಡಿದಿದ್ದು, ನಾಗಸಂಬಂಧಿ ಪೂಜೆ, ಹರಕೆಗಳಿಗಾಗಿ ದೇಶದ ನಾನಾ ರಾಜ್ಯಗಳಿಂದ ಭಕ್ತರು ಬರುತ್ತಾರೆ. ಸಂತಾನಹೀನತೆ, ಚರ್ಮರೋಗ ಮತ್ತು ಇನ್ನಿತರೆ ಖಾಯಿಲೆಗಳನ್ನು ನಾಗ-ಸುಬ್ರಹ್ಮಣ್ಯ ನಿವಾರಿಸುವನೆಂಬ ನಂಬಿಕೆಯಿದೆ. ಇಲ್ಲಿನ ವಿಶೇಷ ಸೇವೆಗಳೆಂದರೆ ಸರ್ಪ ಸಂಸ್ಕಾರ, ಆಶ್ಲೇಷಾ ಬಲಿ, ನಾಗಪೂಜೆ, ಮಂಡೆಸ್ನಾನ (ಹೊರಳು ಸೇವೆ).

ನಾಗಾರಾಧನೆಯ ಸ್ಥಿತ್ಯಂತರಗಳು

ತುಳುನಾಡು ಮತ್ತು ಅಲ್ಲಿನ ಆಚರಣೆ, ಆರಾಧನೆ – ಸಂಪ್ರದಾಯಗಳ ಬಗೆಗಿನ ಇತ್ತೀಚಿನ ಅಧ್ಯಯನಗಳು ಎಲ್ಲಾ ಸ್ತರದ ಮೂಲಗಳತ್ತ ಒಳಹೊಕ್ಕು ನೋಡುತ್ತಿರುವುದು ಗಮನಾರ್ಹ. ಮೊದಮೊದಲಿನ ಅಧ್ಯಯನಗಳು ಆಚರಣೆಗಳ ವಿಧಿವಿಧಾನಗಳತ್ತ ಮಾತ್ರ ಕೇಂದ್ರೀಕೃತಗೊಂಡಿದ್ದವು; ಪರಿಚಾತ್ಮಕ ಮತ್ತು ವೈಭವೀಕರಣಕ್ಕೆ ಒತ್ತು ಕೊಟ್ಟಿದ್ದವು. ಬದಲಾದ ಕಾಲಘಟ್ಟದಲ್ಲಿ ಆಚರಣೆ – ಆರಾಧನೆಗಳ ಮೂಲ, ಸಾಮಾಜಿಕ ಪ್ರಭಾವ, ಸಾಂಸ್ಕೃತಿಕ ಪ್ರಭಾವ, ಜಾತಿ-ಧರ್ಮಗಳ ಪ್ರಭಾವ, ಆರ್ಥಿಕ-ರಾಜಕೀಯ ಪ್ರಭಾವಗಳ ಮೂಲಕ ವಿಶ್ಲೇಷಿಸುವ ಮೂಲಕ ವಸ್ತುಸ್ಥಿತಿಯನ್ನು ಅರಿಯುವ ಪ್ರಯತ್ನ ನಡೆಯುತ್ತಿದೆ. ಪ್ರಸ್ತುತ ಪ್ರಬಂಧದಲ್ಲಿ ತುಳುನಾಡಿನ ನಾಗಾರಾಧನೆಯ ಸ್ಥಿತ್ಯಂತರಗಳತ್ತ ಗಮನಹರಿಸಲಾಗಿದೆ. ಈಗಾಗಲೇ ನಾಗಾರಾಧನೆಯ ಪರಿಚಯ ಮತ್ತು ಸ್ವರೂಪಗಳನ್ನು ತಿಳಿದಿದ್ದೇವೆ. ಈ ಎಲ್ಲಾ ಸ್ವರೂಪಗಳು ಒಂದೇ ಕಾಲಘಟ್ಟದಲ್ಲಿ ಮೂರ್ತರೂಪ ಪಡೆಯಲು ಸಾಧ್ಯವಿಲ್ಲ ; ಆ ರೀತಿ ನಿರ್ಧಾರಕ್ಕೆ ಬರುವುದು ಸಾಧುವೂ ಅಲ್ಲ.

ತುಳುನಾಡಿನ ನಾಗಾರಾಧನಾ ರೂಪಗಳನ್ನು ಮೂರು ರೀತಿಗಳಲ್ಲಿ ವರ್ಗೀಕರಿಸಬಹುದು. ನಾಗನನ್ನು ಮಾತ್ರ ಆರಾಧಿಸುವ ರೂಪ ಒಂದು ರೀತಿಯದ್ದಾದರೆ; ಎರಡನೆಯದು, ನಾಗನ ಜೊತೆ ಜೊತೆಗೆ ದೈವಗಳನ್ನು ಪೂಜಿಸುವುದು ಮತ್ತು ಮೂರನೆಯದು; ಶುದ್ಧ ವೈದಿಕ ರೀತಿಯಲ್ಲಿ ವೈದಿಕರ ಮೂಲಕ ನಾಗನನ್ನು ಪೂಜಿಸುವುದು.

ನಾಗಪೂಜೆ ದೈವಾರಾಧನೆ ಮತ್ತು ನಾಗಾರಾಧನೆ ವೈದಿಕ ಸಂಸ್ಕೃತಿಯ ನಾಗಪೂಜೆ
ನಾಗಬನ ಕಾಡ್ಯನಾಟ ಡಕ್ಕೆ ಬಲಿ
ನಾಗತಂಬಿಲ ಪಾಣರಾಟ ಬ್ರಹ್ಮಮಂಡಲ
ಮುಗೇರರ ನಾಗಪಂಚಮಿ ಡಕ್ಕೆ ಬಲಿ ನಾಗಮಂಡಲ
ಬಾಕುಡರ ಸರ್ಪಕೋಲ ನಾಗರಪಂಚಮಿ
ನಾಗಕೋಲ ಆಶ್ಲೇಷ ಬಲಿ
ಸರ್ಪಂಕಳ ಸರ್ಪ ಸಂಸ್ಕಾರ
ಗುಳಿಗನ ಕೋಲ ತನುತರ್ಪಣ

ನಾಗಾರಾಧನೆಯ ಸ್ಥಿತ್ಯಂತರಗಳನ್ನು ರೀತಿ ಪಟ್ಟಿ ಮಾಡಬಹುದು.

ನಾಗಬನ – ನಾಗ ಮತ್ತು ವೃಕ್ಷ (ಆದಿಮ ಸ್ಥಿತಿ)

ಕಾಡ್ಯನಟ – ನಾಗ ಮತ್ತು ಬುಡಕಟ್ಟು ದೈವಗಳು ನಾಗಪಂಚಮಿ,

ನಾಗತಂಬಿಲ – ಹಾಲು – ಸೀಯಾಳ, ನೀರು ಅರ್ಪಣೆ ಮತ್ತು ಶಿಲ್ಪಗಳ ಪ್ರವೇಶ

ಪಾಣಾರಟ –  ನಾಗ – ಯಕ್ಷ ಸಂಬಂಧ

ಡಕ್ಕೆ ಬಲಿ – ನೃತ್ಯ, ವಾದ್ಯಪರಿಕರ ಮತ್ತು ವೈದಿಕ ಸಂಸ್ಕೃತಿ ಪ್ರವೇಶ

ನಾಗಮಂಡಲ   – ಆಧುನಿಕೀಕರಣ, (ವೈಭವೀಕರಣ) ವೈದಿಕ ಸಂಸ್ಕೃತಿ, ಇತರೆ ಪ್ರಭಾವ (ವೈದಿಕೇತರರ ಗೈರು)

ನಾಗಬನನಾಗ ಮತ್ತು ವೃಕ್ಷ

ತುಳುನಾಡು ಸಮೃದ್ಧವಾದ ಬೆಟ್ಟ-ಗುಡ್ಡಗಳಿಂದಾವೃತವಾದ ಭೂಭಾಗ. ದಟ್ಟಾರಣ್ಯಗಳಿಂದ ಕೂಡಿದ ಈ ಪ್ರದೇಶ ಉರಗ ಸಂತತಿಗೆ ಸಹಜವಾಗಿಯೇ ಅನುಕೂಲಕರವಾಗಿತ್ತು. ಇದು ಅಲ್ಲಿನ ಮೂಲನಿವಾಸಿಗಳಿಗೆ ಒಂದು ಆತಂಕಕಾರಿ ವಿಷಯವಾಗಿದ್ದುದರಲ್ಲಿ ಅಚ್ಚರಿಯಿಲ್ಲ. ಆತಂಕಕಾರಿ – ಅಪಾಯಕಾರಿ ನಿಸರ್ಗ ಶಕ್ತಿಗಳ ಮಧ್ಯೆ ಜೀವನವೆಂದರೆ ಸುಲಭವೇನಲ್ಲ ಎಂದರಿತ ನಿವಾಸಿಗಳು ಆರಾಧಿಸಿ ಒಲಿಸಿಕೊಳ್ಳುವ ಹಂತಕ್ಕೆ ಬಂದಿರುವುದು ಎಲ್ಲಾ ಭೂಭಾಗಗಳಲ್ಲಿ ನಡೆದಿರುವಂತೆ ಇಲ್ಲಿಯೂ ನಡೆಯಿತು. ತುಳುನಾಡಿನ ಮೂಲ ನಿವಾಸಿಗಳು ಉರಗಗಳಿಂದ ರಕ್ಷಿಸುವ ನಿಟ್ಟಿನಲ್ಲಿ ಭಯ-ಭಕ್ತಿಯನ್ನು ತೋರ್ಪಡಿಸಿ ತಾಂತ್ರಿಕವಾಗಿ ಆರಾಧಿಸಿಕೊಳ್ಳತೊಡಗಿದರು ಎಂದು ಹೇಳಬೇಕು. ಈ ರೀತಿಯ ಆರಾಧನಾ ಕೇಂದ್ರಗಳಾಗಿ ರೂಪುಗೊಂಡ ಮೊದಲ ಹಂತವೇ ನಾಗಬನಗಳು. ಕಾಡಿನ ಮಧ್ಯೆ ಹುಟ್ಟಿ ಬೆಳೆದು ವಿಕಾಸ ಹೊಂದಿದ ಮಾನವನಿಗೆ ಸಹಜವಾಗಿಯೇ ಕಾಡಿನ ಬಗೆಗೆ ಒಂದು ರೀತಿ ಭಯ-ಭಕ್ತಿ, ಅಗತ್ಯತೆಗಳ ಅರಿವಿತ್ತು. ಕಾಡಿನ ಇತರೆ ಪ್ರಾಣಿಗಳನ್ನು – ಸಂತತಿಗಳನ್ನು ಒಲಿಸಿಕೊಂಡು ತನ್ನ ಜೀವನ ಸಾಂಗವಾಗಿ ಸಾಗಿಸುವ ನಿಟ್ಟಿನಲ್ಲಿ ಆರಾಧನಾ ಸಂಪ್ರದಾಯಗಳನ್ನು ಪ್ರಾರಂಭಿಸಿರಬೇಕು. ಈ ಆರಾಧನಾ ಶ್ರೇಣಿಯಲ್ಲಿ ಪ್ರಥಮವಾಗಿ ಕಾಣುವಂಥದ್ದು ನಾಗಬನಗಳು. “ನಾಗ-ವೃಕ್ಷ ಸಂಬಂಧ ಅವಳಿ ಚೇತನಗಳೆಂದು ವ್ಯಾಖ್ಯಾನಿಸಲಾಗಿದೆ. ಆದುದರಿದಂಲೇ ತಂಪಾಗಿರುವ ಹುತ್ತ, ಮರದ ಬೇರುಗಳು, ನೆರಳಿರುವ ಜಾಗವನ್ನು ಆಶ್ರಯಿಸುವ ಸರ್ಪ ಜೀವನ ಕ್ರಮಕ್ಕೆ ಪೂರಕವಾದ ನಾಗ ಸಂಕಲ್ಪಗಳ ಮೂಲಕ ‘ನಾಗಬನ’ಗಳು ಮೂರ್ತ ಸ್ವರೂಪವಾಗಿ ಕಾಣಿಸಿಕೊಂಡುವು” (ಡಾ. ಕೆ. ಪ್ರಭಾಕರ ಆಚಾರ್, ವಿದ್ಯಾ ಎಸ್. ನಾಯಕ್, ೨೦೦೬ :೧೦) ಎಂಬ ವ್ಯಾಖ್ಯಾನ ಗಮನಾರ್ಹ. ಇಲ್ಲಿ ಯಾವುದೇ ರೀತಿಯ ಕೃತಕ ಶಿಲ್ಪಗಳಿಲ್ಲ. ಗಿಡಮರಗಳು, ಹುತ್ತಗಳು ಮತ್ತು ಸಹಜ ಕಲ್ಲುಗಳೇ ನಾಗನ ಸಂಕೇತಗಳು.

ವಿಜ್ಞಾನದ ಪ್ರಕಾರ ಕೋಟ್ಯಾಂತರ ವರ್ಷಗಳ ಹಿಂದೆ ಇಡೀ ಭೂಲೋಕವೇ ದಟ್ಟಾರಣ್ಯಗಳಿಂದ ಕೂಡಿತ್ತು. ಇಂದಿನ ಅಲಾಸ್ಕ, ಗ್ರೀನ್‍ಲಾಂಡ್ ಕೂಡ ಅರಣ್ಯದಿಂದ ಕೂಡಿತ್ತು. ಭಾರತದ ಸಹ್ಯಾದ್ರಿ ಪರ್ವತದ ತಪ್ಪಲು, ಆಫ್ರಿಕಾದ ದಕ್ಷಿಣ ಭಾಗದೊಂದಿಗೆ ಜೋಡಣೆಯಾಗಿತ್ತು. ಈಗಿನ ಅರಬ್ಬೀ ಸಮುದ್ರವಿರಲಿಲ್ಲ. ಆಫ್ರಿಕಾದ ಮೂಲನಿವಾಸಿಗಳ ಅನೇಕ ಆಚಾರ-ವಿಚಾರಗಳಿಗೂ ತುಳುನಾಡಿನ ಆಚಾರ-ವಿಚಾರಗಳಿಗೂ ಸಾಮ್ಯತೆ ಕಂಡು ಬರುವುದರಿಂದ ಭೂಮಿ ಜೋಡಣೆ ನಿಜವಾಗಿ ತೋರುತ್ತದೆ. ಈ ಮೊದಲು ಸ್ಪಷ್ಟಪಡಿಸಿರುವಂತೆ ಉಷ್ಣವಲಯಕ್ಕೆ ಸೇರಿದ ತುಳುನಾಡು ಸದಾ ಬೆಚ್ಚಗಾಗಿದ್ದು, ಆರ್ದ್ರತೆಯ ವಾತಾವರಣದಿಂದ ದಟ್ಟಾರಣ್ಯಗಳು ಕಂಡುಬರುತ್ತವೆ. ಈ ಎಲ್ಲಾ ಅನುಕೂಲಕರ ವಾತಾವರಣ ಉರಗಗಳ ಸಂತತಿಗೆ ಆವಾಸಸ್ಥಾನವಾಗಿರುವುದರಲ್ಲಿ ಎರಡು ಮಾತಿಲ್ಲ.

ಹಾಗಾಗಿ ನಾಗಬನಗಳನ್ನು ನಾಗಾರಾಧನೆಯ ಪ್ರಥಮ ಹಂತವೆಂದು ನಿರ್ಧರಿಸಬಹುದು. ಯಾವುದೇ ರೀತಿಯ ಮಾನವ ನಿರ್ಮಿತ ಪರಿಕರಗಳಿಲ್ಲದೇ, ಪ್ರಕೃತಿಯಾರಾಧನೆಯ ಮೂಲಕ ಕಂಟಕವೆಂದು ತಿಳಿದಂಥ ನಾಗಗಳ ಜೀವನಕ್ಕಾಗಿ ಸೂಕ್ತ ವಾತಾವರಣ ನಿರ್ಮಿಸಿ, ಮಾನಸಿಕ ಧೈರ್ಯವನ್ನು ಪಡೆದಿರುವುದೇ ಈ ನಾಗಬನಗಳ ಹಿಂದಿನ ಆಶಯ. ತುಳುನಾಡಿನ ಮೂಲ ನಿವಾಸಿಗಳಾದ ಕೊರಗ, ಮೇರ (ಮುಗೇರ), ಬಾಕುಡ ಮತ್ತು ಪಾಣ ಸಮುದಾಯಗಳಲ್ಲಿನ ನಾಗಾರಾಧನೆಯೇ ಮೂಲವೆಂದೇ ಕಾಣುತ್ತದೆ. ಎಲ್ಲಾ ರೀತಿಯ ಆಧಾರಗಳಿಂದಲೂ ಇದು ದೃಢಪಟ್ಟಿದೆ.

‘ನಾಗಬನ’ಗಳ ಇನ್ನೊಂದು ಪರ್ಯಾಯ ಹೆಸರು ‘ದೇವರ ಕಾಡು’ಗಳು. ತುಳುನಾಡಿನ ಮೂಲನಿವಾಸಿಗಳ ಸಂಪ್ರದಾಯವೇ ನಾಗಬನಗಳ ಹುಟ್ಟಿಗೆ ಕಾರಣವಾಗಿರುವುದನ್ನು ಈ ಮೊದಲೇ ಸ್ಪಷ್ಟಪಡಿಸಲಾಗಿದೆ. ಆದರೆ ಕಾಲಾಂತರದಲ್ಲಿ, ಪರಿವರ್ತನೆಯ ಹಾದಿಯಲ್ಲಿ ನಾಗಬನಗಳು ನಾಗಬನಗಳಾಗಿ ಉಳಿದಿಲ್ಲ ಎಂಬುದು ಗಮನಾರ್ಹ. ನಾಗ-ದೈವಗಳಿಗೆ ಆವಾಸಸ್ಥಾನವೆಂದು ಆದಿಮ ಸಂಸ್ಕೃತಿ ದೂರಾಲೋಚನೆ ಮಾಡಿದರೆ, ಇಂದು ಅವುಗಳೆಲ್ಲ ಕಾಂಕ್ರೀಟಿಕರಣಗೊಂಡು ಹುಳ-ಹುಪ್ಪಡಿ ಕೂಡ ಸುಳಿಯದ ಸ್ಥಿತಿಗೆ ಬರುತ್ತಿವೆ. ನಾಗಾರಾಧನೆಯಲ್ಲಿ ಸ್ಥಿತ್ಯಂತರಗಳು ಕಂದುಬಂದಂತೆ ನಾಗಬನಗಳಲ್ಲೂ ಅನೇಕ ರೀತಿಯ ಪರಿವರ್ತನೆಗಳೂ ಕಂಡುಬಂದಿವೆ. ಹುತ್ತ, ವೃಕ್ಷ ಮತ್ತು ನಿರಾಕಾರ ಕಲ್ಲುಗಳ ಸ್ಥಾನಕ್ಕೆ ನಾಗಶಿಲ್ಪದ ಪ್ರವೇಶವಾಯಿತು. ಜನಪದರಲ್ಲಿ ಅಥವಾ ಮೂಲದವರಲ್ಲಿ ಶಿಲ್ಪ, ಮಿಥುನಶಿಲ್ಪಗಳ ಕಲ್ಪನೆಗಳಿಲ್ಲ. ಬುಡಕಟ್ಟು ಸಂಸ್ಕೃತಿಯಲ್ಲಿದ್ದ ನಿರಾಕಾರ ನಾಗ ವೈದಿಕ ಪ್ರಭಾವದಿಂದ ಶಿಲ್ಪದ ರೂಪವನ್ನು ಪಡೆದ. ಹಾಗೆಯೇ ನಾನಾ ಕಾರಣಗಳನ್ನು ಮುಂದೊಡ್ಡಿ ನಾಗನ ಬನವನ್ನು ‘ನಾಗನಕಟ್ಟೆ’ಯಾಗಿ ಪರಿವರ್ತನೆಗೊಳಿಸಿದರು. ಅನೇಕ ವಿಶೇಷ ಜಾತಿಯ ಗಿಡಮರಗಳಿಂದಾವೃತವಾಗಿದ್ದ ಬನ ಬೆರಳೆಣಿಕೆಯ ಮರಗಳತ್ತ ಕುಗ್ಗಿತ್ತು. ಕಾರಣ ನಾಗನ ಬಿಂಬಗಳನ್ನು ಗಿಡ-ಮರಗಳನ್ನು ರಚಿಸಿ, ಸಿಮೆಂಟ್ ಕಟ್ಟೆಯ ಮೆಲೆ ಪ್ರತಿಷ್ಟಾಪನೆ ಮಾಡುವಾಗ ಈ ಸುತ್ತಮುತ್ತಲ ಗಿಡ-ಮರಗಳು ತಡೆಯಾದವು? ಪ್ರಕೃತಿ ವಿರೋಧಿ ನೋಟಕ್ಕೆ ಇವು ಹಿತವಾಗಿ ಕಾಣಲಿಲ್ಲ. ಹಿರಿ-ಕಿರಿ ನಾಗಶಿಲ್ಪಗಳು, ಒಂದೆರಡು ಮರಗಳು ಮತ್ತು ಸಿಮೆಂಟ್‍ನಿಂದಾವೃತವಾಗಿ ಕಸಕಡ್ಡಿಗಳಿಲ್ಲದ ನಾಗಕಟ್ಟೆಯೇ ಹಿತವಾಗತೊಡಗಿತು. ಇದರಿಂದ ಒಂದು ರೀತಿಯ ವಾಣಿಜ್ಯೀಕರಣವೇ ಉಂಟಾಯಿತು ಎಂದು ಹೇಳಬೇಕು. ಕಡಿದುರುಳಿಸಿದ ಅನೇಕ ಗಿಡಮರಗಳಿಂದ ಒಂದಷ್ಟು ದುಡ್ಡು ಗಳಿಸಲು ಅನುಕೂಲವಾಯಿತು ಮತ್ತು ಕೃತಕವಾದ ಅರಣ್ಯವನ್ನು ಸೃಷ್ಟಿಸಲು ಸಾಧ್ಯವಾಯಿತು.

ತುಳುನಾಡಿನ ಪ್ರಚಲಿತ ಬಹುತೇಕ ನಾಗಬನಗಳು, ನಾಗನಕಟ್ಟೆಗಳು ಹಾಗೂ ದೈವಸ್ಥಾನಗಳು ತನ್ನ ಮೂಲವನ್ನು ಕಳೆದುಕೊಳ್ಳುತ್ತಿವೆ. ಅಲ್ಲಿನ ಜೀವವೈವಿಧ್ಯತೆ ಅವಸಾನದ ಅಂಚಿಗೆ ಬಂದಿವೆ. ವೈದಿಕೀರಣಗೊಂಡು ನಾಗ ದೇವಾಲಯಗಳಾಗಿ, ಶೈವ ದೇವಾಲಯಗಳಾಗಿ ಪರಿವರ್ತನೆಗೊಳ್ಳುತ್ತಿವೆ. ಬುಡಕಟ್ಟಿನ ನಾಗಬನಗಳೂ ಕೂಡ ಈ ರೀತಿಯ ಪರಿವರ್ತನೆಯಿಂದ ಹೊರತಾಗಿಲ್ಲ. ಬಹುಸಂಖ್ಯಾತ ಸಮುದಾಯಗಳ ಸಂಪ್ರದಾಯ – ಆಚರಣೆಗಳಲ್ಲಿ ಪರಿವರ್ತನೆಗಳುಂಟಾದಾಗ ಅಲ್ಪಸಂಖ್ಯಾತ ಸಮುದಾಯಗಳೂ ಅವುಗಳನ್ನು ಅನುಕರಿಸುತ್ತಿರುವುದು ಎಲ್ಲಾ ಪ್ರದೇಶಗಳಲ್ಲಿ ಕಂಡುಬರುವಂಥದ್ದು. ಅದೇ ರೀತಿ ತುಳುನಾಡಿನಲ್ಲಿಯೂ ನಾಗಾರಾಧನೆಯ ಪರಿವರ್ತನೆಯ ಸಂದರ್ಭದಲ್ಲೂ ನಡೆದಿದೆ. ಸಾಮಾಜಿಕ ಕಾರಣಗಳಿಂದ, ವ್ಯಕ್ತಗತ ಕಾರಣಗಳಿಂದ ಮತ್ತು ಧಾರ್ಮಿಕವಾಗಿ ಎಲ್ಲಿ ನಾವು ಹಿಂದುಳಿಯುತ್ತೇವೆಂಬ ಕೀಳರಮೆ ಪ್ರಜ್ಞೆ ಕಾಡುವುದು ಅನೇಕ ಬುಡಕಟ್ಟುಗಳಲ್ಲಿ ಕಂಡುಬರುತ್ತದೆ. ಅದು ಸಹಜವೂ ಹೌದು. ತುಳುನಾಡಿನಲ್ಲಿ ಭೂಮಾಲೀಕರಾದ ಬಂಟರು (ನಾಡವರು) ಬಿಲ್ಲವರು ಮತ್ತು ಒಕ್ಕಲಿಗರು ವೈದಿಕ ಸಂಸ್ಕೃತಿಯ ಪ್ರಭಾವಕ್ಕೊಳಗಾದಾಗ ಅಲ್ಪಸಂಖ್ಯಾತ ಬುಡಕಟ್ಟುಗಳ ಸ್ಥಿತಿಯ ಬಗ್ಗೆ ಹೆಚ್ಚು ಹೇಳಬೇಕಾಗಿಲ್ಲ. ‘ಬುಡಕಟ್ಟುಗಳು  ‘ತಮ್ಮತನ’ವನ್ನು ಬಿಟ್ಟು ಕೊಡುವವರಲ್ಲ’ ಎಂಬ ವಿದ್ವಾಂಸರ ಸ್ಲೋಗನ್ ಗಳು ಈ ಕಾಲಕ್ಕೆ ತಕ್ಕುದಲ್ಲ.  ‘ತಮ್ಮತನ’ದಿಂದ ಮಾತ್ರ ಜೀವಿಸಲು ಕಷ್ಟಸಾಧ್ಯ. ತುಳುನಾಡಿನಲ್ಲಾದ ವೈದಿಕರ ಪ್ರಭಾವ ಅಂಥ ಸಾಮರ್ಥ್ಯವನ್ನು ಹೊಂದಿದೆ. ಹಾಗಾಗಿಯೇ ಸ್ಥಿತ್ಯಂತರಕ್ಕೆ ಒಳಗಾದ ನಾಗಾರಾಧನಾ ಕೇಂದ್ರಗಳು ಆಲಯಗಳು ಎಲ್ಲಾ ಸೌಲಭ್ಯಗಳನ್ನು ಹೊಂದುತ್ತಿವೆ. ದೇವಾಲಯ, ಕಲ್ಯಾಣ ಮಂಟಪ, ಸಭಾಮಂಟಪ, ಇನ್ನಿತರ ಮಂಟಪಗಳೊಂದಿಗೆ  ‘ದೇವಾಲಯ ಸಂಕೀರ್ಣ’ವಾಗಿಯೇ ರೂಪುಗೊಳ್ಳುತ್ತಿದೆ. ಆ ಮೂಲಕ ಒಂದು ವ್ಯಾಪಾರ ಕೇಂದ್ರಗಳಾಗುತ್ತಿವೆ. ಮಾಧ್ಯಮಗಳ ಮುಖಾಂತರ ಪ್ರಚಾರ ಮತ್ತು ಅಭಿವೃದ್ಧಿ, ಪ್ರವಾಸೋದ್ಯಮಗಳ ನೆಪದಿಂದ ಬನಗಳು ಕಾಡುಗಳಲ್ಲಿಲ್ಲ ; ನಾಡುಗಳಲ್ಲಿವೆ. ಕಾಡುಗಳಲ್ಲಿದ್ದ ನಾಗಬನಗಳಿಗೆ ಹಿಂದೆ ವರ್ಷದಲ್ಲಿ ಒಂದೆರಡು ಸಾರಿ ವಿಶೇಷ ಸಂದರ್ಭಗಳಲ್ಲಿ ಪೂಜೆಗಳು ಆರಾಧನೆಗಳು ನಡೆಯುತ್ತಿದ್ದವು. ಆದರೆ ಇಂದು ದಿನನಿತ್ಯ ಬ್ರಾಹ್ಮಣರಿಂದ ಪೂಜೆ, ತಿಂಗಳ ವಿಶೇಷ ಪೂಜೆ, ವಾರ್ಷಿಕ ವಿಶೇಷ ಪೂಜೆಗಳೊಂದಿಗೆ ಹರಕೆಗಳು ಸಲ್ಲುತ್ತಿವೆ. ಹಾಗಾಗಿ ಯಾವುದೇ ಕಾಡಿನ ಜೀವಿಗಳಿಗೆ ಅಲ್ಲಿ ಪ್ರವೇಶವಿಲ್ಲ. ನಾಗಬನ. ನಾಗನಕಟ್ಟೆಗಳೆಂದು ನಾಮಕರಣ ಮಾಡಿ ನಾಗಗಳ ಸುಳಿವೇ ಇರಲಾರದು : ಇದು ಇಂದಿನ ನಾಗಾರಾಧನಾಲಯಗಳ ಸ್ಥಿತಿ.

ಅತಿಯಾದ ನಂಬಿಕೆಗಳ ಪರಿಣಾಮಗಳು ನಾಗಬನಗಳಿಗೆ ಕುತ್ತು ತಂದಿವೆ. ಬಹುತೇಕ ತರವಾಡು ಮನೆಗಳಿಗೆ, ದೇವಾಲಯಗಳಿಗೆ ಒಂದೊಂದು ನಾಗಕಟ್ಟೆ, ಗುಳಿಗನ ಕಟ್ಟೆಗಳಿರುವುದು ಸಾಮಾನ್ಯ. ಕಾಲಾಂತರದ ಘಟನೆಗಳಿಗೆ ಬಲಿಯಾಗಿ ಚದುರಿಹೋದ ಕುಟುಂಬಗಳು ನೂರಾರು-ಸಾವಿರಾರು. ಇತ್ತೀಚಿನ ದಿನಮಾನಗಳಲ್ಲಿ ಅಷ್ಟಮಂಗಲ ಪ್ರಶ್ನೆಯ ಮೂಲಕ ಒಂದುಗೂಡುವ ಪ್ರಕ್ರಿಯೆಗಳಲ್ಲಿ ನಾಗದೋಷ, ಜೀರ್ಣೋದ್ಧಾರ, ಸರ್ಪಸಂಸ್ಕಾರ, ಆಶ್ಲೇಷ ಬಲಿ – ಈ ರೀತಿಯ ಆಚರಣೆಗಳಿಗೆ ಪರಿಹಾರದ ದೃಷ್ಟಿಯಿಂದ ಮಹತ್ವ ಬಂದಿದೆ. ಆ ಮೂಲಕ ನಾಗಬನಗಳು ಕಾಂಕ್ರೀಟಿಕರಣಗೊಂಡಿವೆ. ನಾಗಕಟ್ಟೆಗಳು ನಾಗ ದೇವಾಲಯಗಳಾಗಿವೆ. ಬದಲಾದ ಕಾಲಘಟ್ಟದಲ್ಲಿ ನಾಗ ಎರಡನೇ ದರ್ಜೆಯ ದೈವವಾಗಿದ್ದಾನೆ. ಉದಾಹರಣೆಗೆ ರಾಜ್ಯದ ಪ್ರಸಿದ್ಧ ನಾಗದೇವಾಲಯ ಕುಕ್ಕೆ ಶ್ರೀ ಸುಬ್ರಹ್ಮಣ್ಯ. ಮೂಲತಃ ಬುಡಕಟ್ಟು (ಮಲೆಕುಡಿಯರಿಂದ)ಗಳಿಂದ ಸ್ಥಾಪಿತವಾದದ್ದೆಂದು ಹೇಳಲಾಗುವ ಈ ದೇವಾಲಯ ಸಂಪೂರ್ಣ ವೈದಿಕರಿಂದಲೇ ನಡೆಸಲ್ಪಡುತ್ತದೆ. ಮೂಲ ನಾಗನ ಹುತ್ತವನ್ನು ಇಂದಿಗೂ ಕಾಣಬಹುದು. ಭಕ್ತರು ಪ್ರಥಮವಾಗಿ ಸಂದರ್ಶಿಸುವುದೇ ಸುಬ್ರಹ್ಮಣ್ಯ ದೇವಾಲಯಕ್ಕೆ. ಇಲ್ಲಿನ ದೇವತಾ ಕಾರ್ಯಗಳನ್ನೆಲ್ಲ ಮುಗಿಸಿ ಕೊನೆಯ ಹಂತವಾಗಿ ಆದಿ ಸುಬ್ರಹ್ಮಣ್ಯಕ್ಕೆ ಭೇಟಿ ನೀಡುವುದನ್ನು ಗಮನಿಸಬಹುದು. “ದಕ್ಷಿಣ ಕನ್ನಡದ  ಅನೇಕ ಆಲಡೆಗಳು, ಬ್ರಹ್ಮಸ್ಥಾನಗಳು ವೈದಿಕೀಕರಣದ ಪ್ರಭಾವಕ್ಕೊಳಗಾಗಿ ಶೈವ ದೇವಾಲಯಗಳಾಗಿ ಬ್ರಾಹ್ಯಣ ಪೂಜೆಗೊಳಗಾಗಿರುವುದನ್ನು ಗಮನಿಸಬಹುದಾಗಿದೆ. ಹಿರಿಯಡಕದ ವೀರಭದ್ರ ದೇವಾಲಯ, ನಂದಳಿಕೆ ಮತ್ತು ಕಬತ್ತಾರಿನ ಮಹಾಲಿಂಗೇಶ್ವರ ದೇವಾಲಯಗಳನ್ನು ಈ ಪ್ರಕ್ರಿಯೆಗೆ ಉದಾಹರಣೆಗಳಾಗಿ ನೀಡಬಹುದಾಗಿದೆ.” (ದಕ್ಷಿಣ ಕನ್ನಡದ ದೇವರ ಕಾಡುಗಳು, ೨೦೦೬:೧೨೭).

ನಾಗಬನ-ದೇವರ ಕಾಡುಗಳ ಬಗ್ಗೆ ವಿಶೇಶ ಅಧ್ಯಯನ ಮಾಡಿರುವ ನಾಗರಿಕ ಸೇವಾ ಟ್ರಸ್ಟ್ (ರಿ.) ಗುರುವಾಯನಕೆರೆ ಇವರು ವೈಜ್ಞಾನಿಕ ರೀತಿಯಲ್ಲಿ ಕ್ಷೇತ್ರಕಾರ್ಯದ ಮೂಲಕ ಅನೇಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ. ನಾಗಬನಗಳನ್ನು ಮೂಲದಲ್ಲಿದ್ದಂತೆ ಬಿಡಬೇಕು. ಜೀರ್ಣೋದ್ಧಾರದ, ದೇವಾಲಯದ ನೆಪದಲ್ಲಿ ನಾಶ ಮಾಡಬಾರದು ಎಂಬ ಎಚ್ಚರಿಕೆಯನ್ನು ಅನೇಕ ವಿದ್ವಾಂಸರು ನಾಡಿನ ಜನತೆಗೆ ನೀಡುತ್ತಿದ್ದಾರೆ. ‘ನಾಗಕಲ್ಲಿನ ನಂಬಿಕೆಯನ್ನು ಒಂದು ಶೋಷಣೆಯ ಅಸ್ತ್ರವಾಗಿ ಬಳಸಬೇಕಾಗಿಲ್ಲ ; ಜನರಿಗೆ ಜೋತಿಷ್ಯದಲ್ಲಿ ನಿಮಿತ್ತ ಕೇಳುವ ಪ್ರವೃತ್ತಿ ಹೆಚ್ಚಾದಂತೆ ನಾಗನ ಉಪಟಲವೂ ಒಂದೇ ಸಮನೆ ಅಧಿಕವಾಗಿ ತೋರುತ್ತದೆ! ಜೀವಂತ ನಾಗನಿಗಿಂತ ಅದೃಷ್ಯ, ಭೂಗತ ನಾಗನದ್ದೇ ದೊಡ್ಡ ಭಾದೆ! ಇದು ತಲತಲಾಂತರಕ್ಕೆ ಬರುತ್ತಿದ್ದಂತೆ! ನಾಗಬೀದಿ, ನಾಗಸನ್ನಿಧಿಗಳ ನಂಬಿಕೆಯಿಂದಾಗಿ ಅನೇಕರ ಕೈಯ ಹಣ, ಮೈಯ ಆರೋಗ್ಯ, ಮನಸ್ಸಿನ ನೆಮ್ಮದಿ ಸೊರಗುತ್ತಾ ಇದೆ.’ ಎಂಬ ಅಮೃತ ಸೋಮೇಶ್ವರರ ಅಭಿಪ್ರಾಯ ನಮ್ಮನ್ನು ನಾವೇ ಪಾಪದ ಕೂಪಕ್ಕೆ ತಳ್ಳಿಕೊಳ್ಳುತ್ತಿರುವ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ.

ಕಾಡ್ಯನಾಟನಾಗ ಮತ್ತು ಬುಡಕಟ್ಟು ದೈವಗಳು

ನಾಗಾರಾಧನೆಯ ಸ್ಥಿತ್ಯಂತರಗಳ ಎರಡನೆಯ ಹಂತವೇ ಕಾಡ್ಯನಾಟ. ಕೇವಲ ಹುತ್ತ, ಕಲ್ಲು ಮತ್ತು ನಾನಾ ಜಾತಿಯ ಗಿಡಮರಗಳಿಗೆ ಸೀಮಿತವಾಗಿದ್ದ ಆರಾಧನಾ ಕೇಂದ್ರ ಮಣ್ಣಿನ ಕುಂಭ (ಕಲಶ) ಮತ್ತು ನಾಗನ ಆಕೃತಿಯೊಂದಿಗೆ ರೂಪಾಂತರ ಹೊಂದಿರುವುದನ್ನು ಗಮನಿಸಬೇಕು. ಇಲ್ಲಿ ಮಾನವ ನಿರ್ಮಿತ ಪರಿಕರಗಳ ಪ್ರವೇಶವಾಯಿತು. ಕಾಲಾಂತರದಲ್ಲಿ ನಾಗರಿಕ ಸಮಾಜದ ಸೃಷ್ಟಿಯೊಂದಿಗೆ ಆರಾಧನಾ ಸ್ವರೂಪವೂ ಬದಲಾವಣೆಯನ್ನು ಪಡೆದಿರುವುದು ಇಲ್ಲಿ ನಿಚ್ಚಳವಾಗಿದೆ.  ‘ಮಣ್ಣಿನ ಕಲಶ’,  ‘ನಾಗನ ರೂಪ’ ಮತ್ತು  ‘ಮನೆ’ (ಕಾಡ್ಯದ ಮನೆ) ರೂಪಗಳು ಬುಡಕಟ್ಟು (ಅನಾಗರಿಕರೆಂದು ಕರೆಯಲ್ಪಟ್ಟ?) ಜನರ ನಾಗರಿಕ ಸ್ಥಿತಿಗೆ ಪಲ್ಲಟಗೊಂಡ ಸಂದರ್ಭದಲ್ಲಾಯಿತು. ಅಲೆಮಾರಿತನದಿಂದ ಸ್ಥಿರವಾಸಸ್ಥಾನಕ್ಕೆ ಸ್ಥಿತ್ಯಂತರಗೊಂಡಂತೆ  ‘ಕಾಡ್ಯನ ಮನೆ’ಗಳು ರೂಪುಗೊಂಡವು.

ಕಾಡ್ಯನಾಟ ಕರಾವಳಿಯ ಉಪಾಸನಾ ಪಂಥದ ಮೂಲಕ್ಕೆ ಹತ್ತಿರವಾದ ಆರಾಧನೆ ಎಂಬುದನ್ನು ಎ.ವಿ. ನಾವಡ – ಗಾಯತ್ರಿ ನಾವಡ ದಂಪತಿಗಳ ಅಧ್ಯಯನ ಸ್ಪಷ್ಟಪಡಿಸುತ್ತದೆ (ಕಾಡ್ಯನಾಟ : ಪಠ್ಯ ಮತ್ತು ಪ್ರದರ್ಶನ, ೧೯೯೨). ಹಾಗೆಯೇ ಹಿ.ಚಿ. ಬೋರಲಿಂಗಯ್ಯ ಅವರು ಕಾಡ್ಯನಾಟದಲ್ಲಿನ ಮಂಡಲದ ಬಗೆಗೆ ಈ ರೀತಿಯ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. “ಮಂಡಲದಲ್ಲಿ ಬಿಡಿಸಿದ ಪ್ರಕೃತಿ ದೈವಗಳು (ಸೂರ್ಯ, ಚಂದ್ರ, ನಕ್ಷತ್ರ) ಹಾಗೂ ಅವರ ಕೃಷಿ ಸಂಬಂಧದ ವಿವಿಧ ವಸ್ತುಗಳು. ಅಂದರೆ ನಿಸರ್ಗಾಧನೆಯಿಂದ ಕೃಷಿಸಂಬಂಧಿ ಆರಾಧನೆಯವರೆಗಿನ ಅವರ ಪ್ರಾಚೀನ ಆಸಕ್ತಿಯನ್ನು  ಇವು ಕಾಣಿಸುವಲ್ಲಿ ಸಫಲವಾಗಿವೆ. ಪ್ರಾಣಿ ಪಕ್ಷಿಗಳ ಚಿತ್ರಗಳೂ ಅಲ್ಲಿ ಬರುವುದರಿಂದ ಇಡೀ ನಿಸರ್ಗವನ್ನು ತಮ್ಮ ಆರಾಧನೆಯ ಕೇಂದ್ರಬಿಂದುವನ್ನಾಗಿ ಮಾಡಿಕೊಂಡಿದ್ದು ಅವರಿಗೆ ಆ ನಿಸರ್ಗದ ಬಗ್ಗೆ ಇರುವ ತೀವ್ರ ಬದ್ಧತೆಯನ್ನು ತೋರುತ್ತದೆ” (೨೦೦೪ : ೫). ಮೇರರ ಪ್ರಕೃತಿಯಾರಾಧನೆಯ ಜೊತೆಗೆ ಬುಡಕಟ್ಟು ದೈವಗಳು ಆರಾಧನೆಗೆ ಒಳಪಟ್ಟಿರುವುದನ್ನು ಗಮನಿಸಬೇಕು. ಅಲೆಮಾರಿತನದಲ್ಲಿ ಕಂಡ  ‘ನಾಗಬನ’ಗಳು ಒಂದು ಕಡೆ ನೆಲೆ ನಿಂತಾಗ ರೂಪುಗೊಂಡ ಸ್ಥಿರವಾದ  ‘ಕಾಡ್ಯನ ಮನೆ’ಗಳು ನಾಗಾರಾಧನೆಯಲ್ಲಾದ ಸ್ಥಿತ್ಯಂತರವನ್ನು ಸ್ಪಷ್ಟಪಡಿಸುತ್ತದೆ. ಕಾಡ್ಯನಾಟದ ‘ಹೊನ್ನಿನ ಕಥೆ’ ಬಗ್ಗೆ ವಿಶ್ಲೇಷಿಸುತ್ತಾ ಹಿ.ಚಿ. ಬೋರಲಿಂಗಯ್ಯ ಅವರು “ಈ ಕಥೆ ಆರಾಧನಾ ರೂಪಗಳಲ್ಲಿ ಆದ ಬದಲಾವಣೆಯ ಹಂತಗಳನ್ನು ಹೇಳುತ್ತದೆ. ಮೊದಲಿಗೆ ಕಾಡ್ಯನಾಟವಾಗಿ ಮೇರರಲ್ಲಿ ಇದ್ದದ್ದು, ನಂತರ ಪಾಣಾರರ ಆಟವಾಗಿ (ಅಂದರೆ ಭೂತಕೋಲದ ಒಂದು ಪ್ರಕಾರವಾಗಿ) ಭೂಮಾಲೀಕರ ಹಂತಕ್ಕೆ ಮುಟ್ಟುತ್ತದೆ. ನಂತರ ಇದೀಗ, ದಕ್ಷಿಣ ಕನ್ನಡದ ಎಲ್ಲೆಲ್ಲೂ ನಾವು ನೋಡುತ್ತಿರುವಂತೆ ಅದ್ಧೂರಿ ಮತ್ತು ವರ್ಣರಂಜಿತ ನಾಗಮಂಡಲ ಆಚರಣೆಯಾಗಿ ಬ್ರಾಹ್ಮಣ ಸಮುದಾಯಗಳಲ್ಲಿ ರೂಢಿಯಲ್ಲಿದೆ. ಇಷ್ಟಾದರೂ ನಾಗಮಂಡಲದ ಆರಾಧನೆಯ ಅನೇಕ ವಿಧಿಗಳು ಹಾಗೂ ಮಂಡಲ ಬರೆಯುವ ಕ್ರಮಗಳು ಮೂಲದ ಮೇರರ ಕಾಡ್ಯನಾಟದಿಂದ ಪ್ರೇರಿತವಾಗಿ, ಈಗಿನ ರೂಪದಲ್ಲಿ ಕಾಣಿಸಿಕೊಂಡಿದೆ ಎಂದರೆ ತಪ್ಪೇನಿಲ್ಲ” (೨೦೦೪ : ೪೩).

ನಾಗಪಂಚಮಿನಾಗತಂಬಿಲ

ಸ್ಥಿತ್ಯಂತರಗಳಲ್ಲಿ ಮೂರನೇ ಹಂತವೆಂದು ಗುರುತಿಸಿದ್ದು ನಾಗರ ಪಂಚಮಿ ಮತ್ತು ನಾಗತಂಬಿಲವನ್ನು. ಮೂರನೇ ಹಂತಕ್ಕೆ ಬಂದಾಗ ನಾಗಶಿಲ್ಪಗಳ ಪ್ರವೇಶವಾಯಿತು. ಒಂದು ರೀತಿಯಲ್ಲಿ ವೈದಿಕ ಸಂಸ್ಕೃತಿಯ ಪ್ರವೇಶವೆಂದೇ ಹೇಳಬೇಕು. ದೈವಾರಾಧನೆಯಲ್ಲಿ ದೈವಗಳಿಗೆ ಸಲ್ಲುವ ಪೂಜೆಗಳಲ್ಲಿ ನಾಗತಂಬಿಲ ಒಂದು. ನಾಗತಂಬಿಲವನ್ನು  ‘ತನು ಹಾಕುವುದು’ ಎಂಬ ಹೆಸರಿನಿಂದಲೂ ಕರೆಯಲಾಗುತ್ತದೆ. ಹೂ, ಹಣ್ಣು, ಹಾಲು, ಎಳನೀರು, ತಾಂಬೂಲಗಳನ್ನು ನಾಗನಿಗೆ ಅರ್ಪಿಸಲಾಗುತ್ತದೆ. ಸಹಜ ಚಿಕ್ಕಗಾತ್ರದ ಮರಗಳ ಬುಡದಲ್ಲಿ ಹುತ್ತಗಳ ಸಮೀಪ ಹಾಕಿ ಪೂಜಿಸಿದ ಮೂಲ ಆರಾಧನಾ ಸ್ವರೂಪಕ್ಕೂ ಮೂರನೇ ಹಂತದ ನಾಗತಂಬಿಲ ರೀತಿಗೂ ಆಗಿರುವ  ಬದಲಾವಣೆಯನ್ನೂ, ಬ್ರಾಹ್ಮಣೀಕರಣದ ಮೊದಲ ಹಂತವನ್ನೂ ಸ್ಪಷ್ಟವಾಗಿ ಗುರುತಿಸಬಹುದು. ಇದರ ಜೊತೆ ಜೊತೆಗೆ ನಾಗಪ್ರತಿಷ್ಠೆಯೂ ವೈಚಾರಿಕತೆಯ ಮೂಲಕ ನಾಗಾರಾಧನೆಯಲ್ಲಿ ಪ್ರವೇಶ ಪಡೆಯಿತೆಂದು ಹೇಳಬಹುದು. ಬ್ರಾಹ್ಮಣರಿಂದ ವಿಷಮ ಸಂಖ್ಯೆಯ ಹೆಡೆಗಳಿರುವ ನಾಗನ ಅಥವಾ ನಾಗ ಯಕ್ಷಯಕ್ಷಿಯರ ಬಿಂಬಗಳನ್ನು ಶಿಲೆಯಲ್ಲಿ ರೂಪಿಸಿ ನಾಗಾಲಯಗಳಲ್ಲಿ (ನಾಗಬನ) ಪ್ರತಿಷ್ಠಾಪನೆ ಮಾಡಲಾಯಿತು.

ಆದಿಮ ತುಳು ಸಂಸ್ಕೃತಿಯ  ದೈವಾರಾಧನಾ ವಿಧಾನಗಳಲ್ಲಿ ‘ತಂಬಿಲ’ಕ್ಕೆ ಪ್ರಥಮ ಪ್ರಾಶಸ್ತ್ಯವಿದೆ. ತುಳುವರ (ಮೂಲ) ದೈವರಾಧನೆಯಾಗಲೀ – ನಾಗಾರಾಧನೆಯಾಗಲೀ ಅಥವಾ ಯಕ್ಷಾರಾಧನೆಯಾಗಲೀ ಈ  ‘ತಂಬಿಲ’ದ ಮೂಲಕ ಅತೀತ ಶಕ್ತಿಗಳನ್ನು ಸಂತೃಪ್ತಿಪಡಿಸಿ ತಾವೂ ಸಂತೋಷಗೊಳ್ಳುವುದನ್ನು ಕಾಣಬಹುದು. ನಾಗಬನಗಳಲ್ಲಿನ ನಾಗಪಂಚಮಿ, ತನು ಹಾಕುವುದು ಮತ್ತು ನಾಗತಂಬಿಲಗಳಂಥ ಅರಾಧನಾ ವಿಧಾನಗಳು ಇತ್ತೀಚಿನವುಗಳಲ್ಲ ಎಂಬುದಕ್ಕೆ ಅನೇಕ ಆಧಾರಗಳು ಕಂಡುಬರುತ್ತವೆ. ಉದಾಹರಣೆಗೆ ಆದಿಮೂಲ ಸಮುದಾಯದವರ ನಾಗಪಂಚಮಿ. ಆಗಸ್ಟ್ ತಿಂಗಳಲ್ಲಿ ಬರುವ ನಾಗರ ಪಂಚಮಿಯಂದು ನಾಗಾಲಯಗಳಲ್ಲಿ, ನಾಗಬನಗಳಲ್ಲಿ ವೈದಿಕರ ಮೂಲಕ ಈ ರೀತಿಯ ಆರಾಧನೆಗಳು ನಡೆಯುತ್ತವೆ. ಆದರೆ ಉಡುಪಿ ತಾಲೂಕಿನ ಕೆಲವೆಡೆಗಳಲ್ಲಿ ಮುಗ್ಗೇರರು, ಹರಿಜನರು ಪಗ್ಗು ತಿಂಗಳ ಆರಂಭದಂದು (ಏಪ್ರಿಲ್ ೧೪) ನಾಗನಿಗೆ ತಂಬಿಲ, ತನು ಹಾಕುವ ಮೂಲಕ ಪೂಜಿಸುತ್ತಾರೆ. ಇಲ್ಲಿ ಅರಾಧನಾ ಕಾಲವನ್ನು ಗಮನಿಸಬೇಕು. ಏಪ್ರಿಲ್ ಕಡುಬೇಸಿಗೆಯ ಕಾಲ. ಈ ಸಂದರ್ಭದಲ್ಲಿ ನಾಗಗಳಿಗೆ ಹುತ್ತ, ಮರಗಳ ಎಲೆಗಳುದುರಿ ಬುಡ ಕಾದ ಸ್ಥಿತಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ತನು ಹಾಕುವುದು (ನೀರು, ಸೀಯಾಳ, ಹಾಲು) ಅತ್ಯಂತ ಸಂದರ್ಭೋಚಿತವಾಗಿ ಕಂಡುಬರುತ್ತದೆ. ತನು ಹಾಕುವ ಮೂಲಕ, ತಂಬಿಲ ನೀಡುವ ಮೂಲಕ ಆ ಪ್ರದೇಶವನ್ನು ತಂಪಾಗಿಸುವುದು. ಇದರಿಂದ ಅ ಪ್ರದೇಶದಲ್ಲಿರುವ ನಾಗಗಳೂ ತಂಪಾದ ವಾತಾವರಣವನ್ನು ಅರಸಿ ಬೇರೆಡೆಗೆ ಹೋಗುವುದಿಲ್ಲ. ಆದರೆ ಪರಿವರ್ತನಾ ದಾರಿಯಲ್ಲಿ ಕಂಡುಬರುವ ನಾಗರಪಂಚಮಿ ಆಚರಿಸುವುದು ಮಳೆಗಾಲದಲ್ಲಿ. ಇದರಿಂದ ನಾಗ ಸಂತತಿಗಳಿಗೆ ಯಾವ ರೀತಿಯಿಂದ ಪ್ರಯೋಜನವಿದೆ?” ಆದಿಮೂಲ ಜನರ, ಕಡುಬೇಸಗೆಯ ಏಪ್ರಿಲ್ – ಮೇ ತಿಂಗಳುಗಳಲ್ಲಿ ವಾರ್ಷಿಕ ತನು ಎರೆಯುವ – ಪೂಜಿಸುವ ಆದಿಮ ಸಂಸ್ಕೃತಿ – ಸಂಪ್ರದಾಯ, ಪರಿಸರ ಸ್ನೇಹೀ ಸಹಜ ವಿಧಾನವಾಗಿದೆ. ಆದರೆ, ಧಾರಾಕಾರ ಮಳೆ ಸುರಿಯುತ್ತಿರುವ ಕಾಲದಲ್ಲಿ (ಅಗಸ್ಟ್ ತಿಂಗಳಲ್ಲಿ) ತಂಪಾಗಿರುವ ಬನಗಳಲ್ಲಿ ಮತ್ತೆ ತಂಪೆರೆಯುವ ನಾಗಪಂಚಮಿ ಆಚರಣೆ ಅಸಹಜವಾಗಿ ಕಾಣುತ್ತದೆ. ಒಂದು ಪರಿಣಾಮಕಾರಿ ಸಂಸ್ಕೃತಿ, ಆದಿಮ ಸಂಸ್ಕೃತಿಯ ಸಹಜ ಜೀವನ ವಿಧಾನ, ನಂಬಿಕೆ, ಆಚರಣೆಗಳ ಮೇಲೆ ಹೇಗೆ ಅವೈಜ್ಞಾನಿಕ ಬದಲಾವಣೆಯನ್ನು ವ್ಯಾಪಕವಾಗಿ ಪರಿಸರಿಸಬಲ್ಲುದು ಎಂಬುದನ್ನು ನಮ್ಮ ಕರಾವಳಿಯ ಈ ನಾಗಾರಾಧನೆಯ ಉದಾಹರಣೆಯಿಂದ ಸ್ಪಷ್ಟವಾಗಿ ಅನಾವರಣಗೊಳ್ಳುತ್ತದೆ” (ದಕ್ಷಿಣ ಕನ್ನಡದ ದೇವರ ಕಾಡುಗಳು, ೨೦೦೬ : ೧೪).

ಬ್ರಾಹ್ಮಣರ ಮೂಲಕ ಪ್ರತಿಷ್ಠಾಪನೆಗೊಂಡ ನಾಗಾಲಯ, ನಾಗಬನಗಳಲ್ಲಿ ಪೂಜಿಸುವ ಹಕ್ಕು ವೈದಿಕೇತರರಿಗೆ ಇರುವುದಿಲ್ಲ. ಇದು ಒಂದು ರೀತಿಯ ಅಲಿಖಿತ ನಿಯಮದಂತೆ ಕಂಡುಬರುತ್ತದೆ. ಬಹುತೇಕ ದೇವಾಲಯಗಳಲ್ಲಿ ಮತ್ತು ಸಾರ್ವಜನಿಕ ನಾಗಬನಗಳಲ್ಲಿ, ನಾಗ ಬೀದಿಗಳಲ್ಲಿರುವ ನಾಗನಿಗೆ ಬ್ರಾಹ್ಮಣರಿಂದ ಮಾತ್ರ ಪೂಜೆ ಸಲ್ಲುತ್ತಿರುವುದನ್ನು ಗಮನಿಸಬಹುದು. ನಾಗಶಿಲ್ಪಗಳ ಕಲ್ಪನೆ ತುಳುನಾಡಿನ ಆದಿಮ ಸಂಸ್ಕೃತಿಯಲ್ಲಿ ಕಾಣಬರುವುದಿಲ್ಲ (ನಾಗಶಿಲ್ಪ, ನಾಗ ಮಿಥುನ ಶಿಲ್ಪಗಳು ಮಾನವನ ಮನಸ್ಸಿನ ಮೇಲೆ ಬೀರುವ ಪ್ರಭಾವಗಳು ವೈಜ್ಞಾನಿಕವಾಗಿ ಏನೇ ಇರಬಹುದು). ಸ್ಥಿತ್ಯಂತರಗಳ ರೂಪದಲ್ಲಿ ಈ ಮೇಲೆ ಉಲ್ಲೇಖಿಸಿರುವ ಆರಾಧನಾ ಸ್ಥಳಗಳಲ್ಲಿರುವ ನಾಗ ವೈದಿಕೇತರರಿಗೆ ಅಸ್ಪೃಶ್ಯನಾಗಿದ್ದಾನೆ ಎಂದರೆ ತಪ್ಪಿಲ್ಲ. ಇನ್ನೂ ಆಶ್ಚರ್ಯದ ಸಂಗತಿಯೆಂದರೆ ತುಳುನಾಡಿನ ಮೂಲನಿವಾಸಿಗಳಾದ ಭೂಮಾಲೀಕರಾದ ಬಂಟರು, ಬಹುಸಂಖ್ಯಾತರಾದ ಬಿಲ್ಲವರು ಕೂಡ ಈ ರೀತಿಯ ಪರಿವರ್ತನೆಗಳಿಗೆ ಚಕಾರವೆತ್ತದೇ ಒಪ್ಪಿಕೊಂಡಿರುವುದು.

ಡಕ್ಕೆ ಬಲಿನೃತ್ಯ, ವಾದ್ಯಪರಿಕರ ಮತ್ತು ವೈದಿಕ ಸಂಸ್ಕೃತಿ ಪ್ರತೀಕ

ಪಾಣಾರಾಟವನ್ನು ಸ್ಥಿತ್ಯಂತರದ ಮೂರನೇ ಹಂತಕ್ಕೆ ಸೇರಿಸಬಹುದು. ಪಾಣಾರು ನಡೆಸುವ ‘ಡಕ್ಕೆ ಬಲಿ’ ಎಂಬ ಶೀರ್ಷಿಕೆಯಲ್ಲಿಯೇ ಇದು ಅವೈದಿಕ ರೂಪದಲ್ಲಿ ಆರಾಧನೆ ಎಂಬುದನ್ನು ಕಂಡುಕೊಳ್ಳಬಹುದು. ‘ಡಕ್ಕೆ’ ಒಂದು ಚರ್ಮವಾದ್ಯ; ‘ಬಲಿ’ ಎನ್ನುವುದು ರಕ್ತಾರ್ಪಣೆಯ ಮೂಲಕ ಸಂತೃಪ್ತಿಪಡಿಸುವುದು. ಡಕ್ಕೆ ಬಲಿ ಆರಾಧನೆ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ಸಾಕ್ಷ್ಯಾಧಾರಗಳಿಲ್ಲ. ಕ್ರಿ.ಶ. ೧೪೫೮ರ ಬಾರಕೂರು ಶಾಸನವೊಂದರಲ್ಲಿ ಡಕ್ಕೆ ಬಲಿಯ ಉಲ್ಲೇಖವಿದೆ. ಹಾಯ್ಗುಳಿ, ಚಿಕ್ಕು, ಹಳೆಯಮ್ಮ, ಬೊಬ್ಬರ್ಯ, ಮಾಂಕಾಳಿ, ಉಮ್ಮಳ್ತಿ ಮೊದಲಾದ ದೈವಗಳ ಸನ್ನಿಧಿಯಲ್ಲಿ ಡಕ್ಕೆ ಬಲಿ ನಡೆಯುತ್ತದೆ. ಡಕ್ಕೆ ಬಲಿ ಬಗ್ಗೆ ಅಮೃತ ಸೋಮೇಶ್ವರ ಅವರು “ಈ ‘ಡಕ್ಕೆ’ ಎಂಬುದು ‘ಯಕ್ಷ’ ಎಂಬುದರಿಂದ ಬಂದಿರಲೂಬಹುದು (ಯಕ್ಷ-ಜಕ್ಕ-ದಕ್ಕ-ಡಕ್ಕ). ಯಕ್ಷಾರಾಧನೆ ಹಿಂದೆ ಈ ವಾದ್ಯವನ್ನು ಬಳಸುತ್ತಿರಬಹುದು. ಈಗಲೂ ಯಕ್ಷನ ಗುಡಿಯ ಮುಂದೆ ದಕ್ಕೆಬಲಿ ಜರಗುವುದಿದೆ. ನಾಗನೂ ಒಂದು ಬಗೆ ಯಕ್ಷ ತಾನೆ?” (೨೦೦೦:೨೩) ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಉತ್ತರ ಭಾರತದಲ್ಲಿ ವೈದಿಕ ಸಂಸ್ಕೃತಿಯಿಂದ ಅವಜ್ಞೆಗೆ ಒಳಗಾದ ಮತ್ತು ಜೈನ, ಬೌದ್ಧ ಧರ್ಮದಿಂದ ಗೌರವಕ್ಕೆ ಒಳಗಾದ ಯಕ್ಷರಾಧನೆ ದಕ್ಷಿಣ ಭಾರತಕ್ಕೂ ಕಾಲಿಟ್ಟಿತು. ಮೇಲ್ವರ್ಗದ ಬ್ರಾಹ್ಮಣರು ಪೌರಾಣಿಕ ದೇವರುಗಳನ್ನು ಪುರಸ್ಕರಿಸಿ ಆರಾಧಿಸಿದರೆ, ಯಕ್ಷ, ನಾಗ, ದೈವ, ಗಂಧರ್ವ, ಕಿನ್ನರ, ಕಿಂಪುರುಷಾದಿಗಳು ಮಾಯಾವಿಗಳೆಂದೂ, ಪೀಡಕಿರೆಂದು, ಮನುಷ್ಯ ಶರೀರದಲ್ಲಿ ಆವಾಹನೆಗೊಳ್ಳುವವರೆಂದೂ ತಿರಸ್ಕರಿಸಿದರು. ಆ ಕಾರಣಕ್ಕಾಗಿ ಯಕ್ಷರ ಆರಾಧನೆ ಕೆಳಮಟ್ಟದ ಶೂದ್ರ ವರ್ಗದವರಲ್ಲಿ ಮಾತ್ರ ಉಳಿಯಿತು. ಹಾಗೆಯೇ ಬೌದ್ಧ, ಜೈನ ಧರ್ಮದ ಮೂಲಕ ಬೇರೆ ಬೇರೆ ರೂಪಗಳಲ್ಲಿ ಯಕ್ಷರು ಕಾಣಿಸಿಕೊಂಡರು. ಯಕ್ಷರನ್ನು ಉತ್ತರ ಭಾರತದಲ್ಲಿ ‘ಬಿರ್’ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು. ಈ ಬಿರ್ ತುಳುನಾಡಿಗೆ ಬಂದು ಬೆರ್ಮೆರ್ ಆಯಿತು. ನಾಗ ದೈವ ಪರಿವಾರದೊಂದಿಗೆ ನಾಗ ಬೆರ್ಮೆರ್ ಆಯಿತು ಎಂಬುದನ್ನು ಗಮನಿಸಬೇಕು. ಹಾಗೆಯೇ ನಾಗಾರಾಧನೆಯಲ್ಲಿ ಯಕ್ಷತ್ರಾಧನೆ ಸೇರಿ ತುಳುನಾಡಿನ ಡಕ್ಕೆ ಬಲಿಯಂಥ ಆಚರಣೆಯಲ್ಲಿ ಸೇರಿಕೊಂಡಿತು. ಇದೇ ಸಂದರ್ಭದಲ್ಲಿ ನಾಗಾರಾಧನೆಯನ್ನು ಉತ್ತರ ಭಾರತದಿಂದ ವಲಸೆ ಬಂದಂಥ ಬ್ರಾಹ್ಮಣರು ತಮ್ಮದೇ ರೀತಿಯಲ್ಲಿ (ಮೂಲ ಅದೇ) ಪೂಜಿಸಲು ಆರಂಭಿಸಿದರು. ವಲಸೆ ಬಂದ ವೈದಿಕರು ನಾಗಪೂಜೆಯನ್ನು ಆರಂಭಿಸುವುದರ ಹಿನ್ನೆಲೆಯ ಕುರಿತು ಪ್ರೊ. ಕೇಶವ ಉಚ್ಚಿಲರ ಅಭಿಪ್ರಾಯಗಳನ್ನು ಉಲ್ಲೇಖಿಸಬಹುದು. “ಪರುಶುರಾಮನು ಬ್ರಾಹ್ಮಣರನ್ನು ಇಲ್ಲಿ ಕುಳ್ಳಿರಿಸಿಹೋದನು. ಆದರೆ ಇಲ್ಲಿನ ಜನರು ಅವರನ್ನು ಇಲ್ಲಿ ನೆಲೆಗೊಳಿಸಲು ಬಿಡಲಿಲ್ಲ. ಹೀಗಾಗಿ ಅವರು ಹಿಂತಿರುಗಿ ಹೋಗಬೇಕಾಯಿತು. ಆದರೆ ಪರುಶುರಾಮನು ಮತ್ತೆ ಇಲ್ಲಿಗೆ ಹಿಂತಿರುಗಿ ಬಂದು ಇಲ್ಲಿನ ಮೂಲ ನಿವಾಸಿಗಳಾದ ನಾಗಾರಾಧಕರೊಂದಿಗೆ ಜಗಳ ಮಾಡಿಕೊಳ್ಳದೆ ಒಳ್ಳೆ ರೀತಿಯಲ್ಲಿ ನಡೆದುಕೊಂಡನು. ಬ್ರಾಹ್ಮಣರನ್ನು ಕರೆದು “ನೀವು ಒಳ್ಳೆಯ ರೀತಿಯಿಂದ ಬಾಳಬೇಕು. ಇಲ್ಲಿನ ಜನರು ನಾಗನನ್ನು ಆರಾಧನೆ ಮಾಡುವ ರೀತಿಯಲ್ಲಿಯೇ ನೀವು ಕೂಡ ಆರಾಧನೆ ನಡೆಸಬೇಕು. ನಾಗಗಳನ್ನು ನಿಮ್ಮ ಮನೆ ದೇವರನ್ನಾಗಿ ಮಾಡಿಕೊಳ್ಳಬೇಕು. ನಿಮಗೆ ಬರುವ ಬ್ರಹ್ಮಾದಾಯದ ಒಂದು ಪಾಲು ಹಣವನ್ನು ಸರ್ಪ ಸಂತುಷ್ಟಿಗಾಗಿ ತೆಗೆದಿಡಬೇಕು” ಎಂದು ಹೇಳಿದನು” (ಉದ್ಧೃತ : ಪಾಲ್ತಾಡಿ ರಾಮಕೃಷ್ಣ ಆಚಾರ್, ೨೦೦೯ : ೨೮). ಇಲ್ಲಿ ವೈದಿಕರ ರಾಜಕೀಯ ಚಾಣಾಕ್ಷತೆ, ಪ್ರಭಾವ, ಸಾಂಸ್ಕೃತಿಕ ಪಲ್ಲಟಗಳು ಯಾವ ರೀತಿಯಲ್ಲಿ ಕೆಲಸ ಮಾಡಿವೆ ಎಂಬುದನ್ನು ಗಮನಿಸಬಹುದು.

ಬ್ರಾಹ್ಮಣರು ‘ಡಕ್ಕೆಬಲಿ’ ಆಚರಣೆಯ ಸಂದರ್ಭದಲ್ಲಿ ಮೂಲದಲ್ಲಿದ್ದ ಚರ್ಮವಾದ್ಯ ಡಕ್ಕೆಯ ಬದಲಾಗಿ ಮರದ ಮತ್ತು ಕಂಚಿನ ವಾದ್ಯವನ್ನು ಬಳಕೆಗೆ ತಂದರು. ಮೂಲತಃ ‘ಡಕ್ಕೆ’ ತುಳು ಸಂಸ್ಕೃತಿಯ ‘ದುಡಿ’. ಆದರೆ ವೈದಿಕರು ಶಿವನ ಕೈಯಲ್ಲಿರುವ ಡಮರುವೇ ಡಕ್ಕೆಯೆಂದೂ, ಸಾಕ್ಷಾತ್ ಶಿವನೇ ಮಂಡಲ ಬರೆದು ಮಂಗಳಾಂತ್ಯದವರೆಗೆ ಡಮರು ಬಾರಿಸುವ ಅಧಿಕಾರವನ್ನು ಬ್ರಾಹ್ಮಣನಿಗೆ ನೀಡಿದನೆನ್ನುವ ನಕಲಿ ಪುರಾಣಕತೆಯನ್ನು ಸೃಷ್ಟಿಸಿದರು. ತುಳುನಾಡು ಪರಶುರಾಮನ ಸೃಷ್ಟಿ ಎನ್ನುವುದೇ ಒಂದು ಕಟ್ಟುಕತೆಯೆಂದು, ಆ ಕಾಲದ ತುಳುವರು ಅತ್ಯಂತ ದೊಡ್ದದಾಗಿ ಸಲ್ಲಿಸುವ ನಾಗಸೇವೆಯೇ ಡಕ್ಕೆಬಲಿ ಎಂದೂ ಅಧ್ಯಯನಕಾರರ ಸ್ಪಷ್ಟನುಡಿ (ಬನ್ನಂಜೆ ಬಾಬು ಅಮೀನ್, ೨೦೦೭ : ೩೬). ಪಾಲ್ತಾಡಿ ರಾಮಕೃಷ್ಣ ಆಚಾರ್ ಅವರ ಹೇಳಿಕೆ ಇಲ್ಲಿ ಪ್ರಸ್ತುತ “ಪ್ರಾಚೀನ ಕಾಲದ ಯಕ್ಷಬಲಿ (ಜಕ್ಕಬಲಿ) ಡಕ್ಕೆ ಬಲಿಯಾಗಿ ಈಗ ನಾಗಮಂಡಲದ ರೂಪದಲ್ಲಿ ವೈಭವೀಕರಣಗೊಂಡಿದೆ. ಈಗಲೂ ಜಕ್ಕೆಬಲಿ ಬ್ರಾಹ್ಮಣರ ವಶವಾದ ಬಗ್ಗೆ ಪಾಣಾರು ಹಲವಾರು ಐತಿಹ್ಯಗಳನ್ನು ಹೇಳುತ್ತಾರೆ. ನಾಗಮಂಡಲ ರಂಗದ ಚಪ್ಪರಕ್ಕೆ ಮೇಲ್ಗಟ್ಟಿನಿಂದ ಇಳಿಬಿಡುವ ಸಿರಿಯೊಲಿಗಳು (ತೆಂಗಿನ ಮರದ ಎಳೆಗರಿ) ಜಕ್ಕೆಬಲಿ ಮೂಲತಃ ಪಾಣರದ್ದಾಗಿತ್ತೆಂಬುದಕ್ಕೆ ಸಾಕ್ಷ್ಯ ನೀಡುತ್ತವೆ. ಬ್ರಾಹ್ಮಣರು ಮತ್ತು ಕ್ಷೇತ್ರಕಾರ್ಯ ನಡೆಸದೆ ನಾಗಮಂಡಲದ ಬಗ್ಗೆ ಬರೆಯುವ ಲೇಖಕರ ಹೊರತಾಗಿ ಉಳಿದವರೆಲ್ಲರೂ ಈಗಲೂ ಈ ಆಚರಣೆಯನ್ನು ಜಕ್ಕೆಬಲಿ ಎಂದೇ ಕರೆಯುತ್ತಾರೆ” (೧೯೯೯ : ೧೪).

‘ಡಕ್ಕೆ ಬಲಿ’ ಶೀರ್ಷಿಕೆಯಲ್ಲಿಯೇ ಇದೊಂದು ಸ್ಥಳೀಯ ಆಚರಣೆ ಎಂಬುದನ್ನು ಗುರುತಿಸಬಹುದು. ಬಹುತೇಕ ತುಳು ಸಂಸ್ಕೃತಿ ದೈವಾರಾಧನೆಯಲ್ಲಿ ‘ಬಲಿ’ಯ ಮೂಲಕ ದೈವಗಳನ್ನು ಸಂತೃಪ್ತಿಪಡಿಸಲು ಸಾಧ್ಯ ಎಂಬುದನ್ನು ಹಿರೀಕರು, ಜನಪದರು ನಂಬಿಕೊಂಡಿದ್ದರು. ಹಾಗಾಗಿ ತಲೆ ತಲಾಂತರದಿಂದಲೂ ರೀತಿಯಲ್ಲಿ ಬದಲಾದರೂ ಮುಂದುವರೆದುಕೊಂಡು ಬಂದಿದೆ. ವೈದಿಕ ಸಂಸ್ಕೃತಿಯಲ್ಲಿ ಕುಂಬಳಕಾಯಿ ಒಡೆದು ಕುಂಕುಮ ಹಾಕಿದರೆ ಶಾಸ್ತ್ರೋಕ್ತ ರೀತಿಯಲ್ಲಿ ಅದು ‘ಬಲಿ’ ಸಮರ್ಪಣೆ ಎಂದೇ ಪರಿಗಣಿತವಾಗುತ್ತದೆ. ಆದರೆ ಅವೈದಿಕ ಸಂಸ್ಕೃತಿಯಲ್ಲಿ ಯಾವುದಾದರೂ ಪ್ರಾಣಿ ಅಥವಾ ಪಕ್ಷಿ (ಕೋಳಿ)ಯ ರಕ್ತಾರ್ಪಣೆಯೇ ‘ಬಲಿ’ಯಾಗಿರುತ್ತದೆ. ಜೈನ ಮತ್ತು ವೈದಿಕ ಧರ್ಮಗಳ ಪ್ರಭಾವದಿಂದ ಪ್ರಾಣಿಬಲಿಯನ್ನು ಬಿಟ್ಟಿರಬಹುದು ಎಂದು ಕ.ವೆಂ. ರಾಜಗೋಪಾಲ (೧೯೮೨) ಅವರ ಅಭಿಪ್ರಾಯ. ನಾಗಬೆರ್ಮರ್ ತುಳುವರ ಆದಿಮೂಲ ದೈವವಾಗಿದ್ದು, ಬ್ರಹ್ಮಸ್ಥಾನ ಅಥವಾ ಆಲಡೆಗಳೆಂಬ ಆರಾಧನಾ ಕೇಂದ್ರಗಳಲ್ಲಿ ಪೂಜಿಸಲ್ಪಡುತ್ತಾನೆ. ಇದೇ ಆಲಯಗಳಲ್ಲಿಯೂ ಡಕ್ಕೆ ಬಲಿಯಂತೆಯೇ ಹಾಯ್ಗುಳಿ, ಮರ್ಲ್‍ಚಿಕ್ಕು, ಮಾಂಕಾಳಿಯಮ್ಮ ಮುಂತಾದ ದೈವಗಳೂ ಆರಾಧನೆಗೆ ಒಳಗಾಗುತ್ತಿರುವುದನ್ನು ಸ್ಪಷ್ಟವಾಗುತ್ತದೆ. ಡಕ್ಕೆ ಬಲಿ ‘ವೈದ್ಯ’ರ ಮೂಲಕ ವೈದಿಕ ಸಂಸ್ಕೃತಿಗೆ ಸ್ಥಿತ್ಯಂತರಗೊಂಡಿರುವುದು ಸ್ಪಷ್ಟವಾಗುತ್ತದೆ.