ನಾಗಮಂಡಲಆಧುನಿಕೀರಣ, ವೈದಿಕ ಸಂಸ್ಕೃತಿ

ನಾಗಪೂಜ್ಯ ಸ್ಥಿತ್ಯಂತರಗಳಲ್ಲಿ ನಾಲ್ಕನೆಯ ಹಂತವಾಗಿ ನಾಗಮಂಡಲವನ್ನು ಕಾಣಬಹುದು. ತುಳುನಾಡಿನ ತುಳುವರಾದ ಪಾಣರು ತಮ್ಮ ಆದಿದೈವವಾದ ನಾಗನನ್ನು ಡಕ್ಕೆಬಲಿಯ ಮೂಲಕ ಆರಾಧಿಸುವುದನ್ನು ವಲಸೆ ಬಂದ ವೈದಿಕರು ಕೆಲವೊಂದು ಮಾರ್ಪಾಡುಗಳೊಂದಿಗೆ ನಾಗನೊಂದಿಗೆ ತಮ್ಮನ್ನೂ ಒಳಗು ಮಾಡಿಕೊಂಡು ಮುಂದುವರೆದರು. ಆದರೆ ಈ ಸಂದರ್ಭದಲ್ಲಿ ತುಳುನಾಡಿನ ಯಾವುದೇ ಮೂಲ ನಿವಾಸಿಗಳು ಇದಕ್ಕೆ ಯಾವುದೇ ರೀತಿಯಲ್ಲಿ ವಿರೋಧ ವ್ಯಕ್ತಪಡಿಸದಿರುವುದು ಗಮನಾರ್ಹ.

ಚರ್ಮವಾದ್ಯದ ಬದಲಾಗಿ ಲೋಹದ ಡಕ್ಕೆಯನ್ನು (ಕಂಚು) ಬಳಕೆಗೆ ತಂದರು. ಭರತನಾಟ್ಯದ ಹೆಜ್ಜೆಗಾರಿಕೆಯೊಂದಿಗೆ ದಾಸರ ಪದಗಳನ್ನು ಅಳವಡಿಸಿಕೊಂಡರು. ಕಿರಿದಾಗಿದ್ದ ಮಂಡಲವನ್ನು ಹಿರಿದು ಮಾಡಿ ಇತರೆ ಪರಿಕರಗಳನ್ನು ಬಳಸಿ ಆಕರ್ಷಕವಾಗಿ, ಕಲಾತ್ಮಕವಾಗಿರುವಂತೆ ನೋಡಿಕೊಂಡರು. ಯಕ್ಷಗಾನದ ರಂಗಸ್ಥಳದಂತೆ ವೇದಿಕೆಯನ್ನು ಸಜ್ಜುಗೊಳಿಸಿ ಜನಸಾಮಾನ್ಯರೆಲ್ಲರೂ ಬೆರಗುಗಣ್ಣಿನಿಂದ ನೋಡುವಂತೆ ಮಾದಿದರು. ಒಂದು ನಾಗಮಂಡಲಕ್ಕೆ ಲಕ್ಷಾಂತರ ರೂಪಾಯಿಗಳನ್ನು ವೆಚ್ಚ ಮಾಡುವಂತೆ ಬದಲಾವಣೆ ತಂದರು. ನಾಗನ ಮಂಡಲದ ಸುತ್ತ ರಾಶಿ ರಾಶಿ ಹಿಂಗಾರ(ಅಡಿಕೆ ಹೂ)ವನ್ನು ಹಾಕಿ ಇಡೀ ಆಚರಣೆಯಲ್ಲಿ ನಾಗಪಾತ್ರಿಯ ಮೂಲಕ ಉಜ್ಜಿಸಿ, ಹಿಸುಕಿಸಿ ಕಸದ ರಾಶಿಯನ್ನೇ ಸೃಷ್ಟಿಸುವಂತೆ ಮಾಡಿದರು. ನಾಗಮಂಡಲದ ಹಿಂಗಾರದ ಬಗ್ಗೆ ಬನ್ನಂಜೆ ಬಾಬು ಅಮೀನ್ ಹೀಗೆನ್ನುತ್ತಾರೆ. “ನಾಗಮಂಡಲದಾನಿ ಸಾರಕಟ್ಲೆ ಲತ್ತ್ ತಿಂಗರೊನ್ ಕಾರಡಿಕ್ ಪಾಡ್ದ್ ದೊಂಕೂನ ಕಿರ್ಮಲ ಇಜ್ಜಾಂಡ್” (ನಾಗಮಂಡಲದ ದಿನ ಸಾವಿರಗಟ್ಟಲೆ ಎಳೆಯ ಹಿಂಗಾರಗಳನ್ನು ಕಾಲಡಿಯಲ್ಲಿ ಹಾಕಿ ಒದೆಯುವ ಕರ್ಮ ಇದ್ದಿಲ್ಲ) (೨೦೦೭, ೩೭). ತುಳು ಸಂಸ್ಕೃತಿಯಲ್ಲಿ  ಹಿಂಗಾರಕ್ಕಿರುವ ಮಹತ್ವ ಮತ್ತು ಸಾವಿರಗಟ್ಟಲೆ ಹಿಂಗಾರವನ್ನು ನಾಶಪಡಿಸುವ ವೈದಿಕ ಸಂಸ್ಕೃತಿಯ ಬಗೆಗಿನ ಈ ವ್ಯಾಖ್ಯಾನ ವೈದಿಕ – ಅವೈದಿಕ ಮಧ್ಯೆ ವ್ಯತ್ಯಾಸವನ್ನು ಎತ್ತಿ ತೋರಿಸುತ್ತದೆ.

ಮತ್ತೊಂದು ಪ್ರಮುಖವಾದ ಅಂಶವನ್ನು ಪ್ರಸ್ತಾಪಿಸಲೇಬೇಕು. ಆರಾಧನಾ ಸ್ಥಿತ್ಯಂತರದ ಜೊತೆಜೊತೆಗೆ ಸಾಮಾಜಿಕ ಸ್ಥಿತ್ಯಂತರವೂ ನಾಗಮಂಡಲದ ಮೂಲಕ ಘಟಿಸಿದೆ. ಡಕ್ಕೆ ಬಲಿ ಮತ್ತು ನಾಗಮಂಡಲ ಆರಾಧನೆಗಳಲ್ಲಿ ಭಾಗವಹಿಸುವವರು ಬ್ರಾಹ್ಮಣ ಸಮಾಜದ ‘ವೈದ್ಯ’ ಕುಲದವರು. ಪೂರ್ವದಲ್ಲಿ ವೈದ್ಯ ಕುಲದವರಿಗೂ ಬ್ರಾಹ್ಮಣ ಕುಲದವರಿಗೂ ಯಾವುದೇ ಹೇಳಿಕೊಳ್ಳುವಂಥ ಸಂಬಂಧಗಳಿರಲಿಲ್ಲ. ವೈದ್ಯರು ಬ್ರಾಹ್ಮಣರ ಒಂದು ಪಂಗಡದವರಾದರೂ ‘ಸಹಭೋಜನ’ದಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಆದರೆ ಡಕ್ಕೆಬಲಿ, ನಾಗಮಂಡಲದ ಮೂಲಕ ವೈದ್ಯರು ಸಮಾಜದಲ್ಲಿ ಪ್ರಮುಖರಾಗಿ ಕಾಣಿಸಿಕೊಂಡರೋ, ಅಂದಿನಿಂದ ಬ್ರಾಹ್ಮಣರ ಸಾಲಿಗೆ ಸೇರಿಕೊಂಡರು. ಅವರಿಬ್ಬರೂ ಜೊತೆಜೊತೆಯಾಗಿ ನಾಗಮಂಡಲವನ್ನು ನೆರವೇರಿಸಿಕೊಡುವ ಹಂತಕ್ಕೆ ಬಂದಿದ್ದಾರೆ.

ಡಕ್ಕೆ ಬಲಿಯ ವಿಸ್ತೃತ ಹಾಗೂ ವೈಭವೀಕೃತ ರೂಪ ಪಡೆದ ನಾಗಮಂಡಲ ಸಾವಿರಾರು ಭಕ್ತರನ್ನು ಆಕರ್ಷಿಸುವಲ್ಲಿ ಸಫಲವಾಗಿದೆ. ಆಡಂಬರದಿಂದ ಕೂಡಿದ ನಾಗಮಂಡಲ ತುಳುನಾಡಿನ ಯಾವ ಪ್ರದೇಶದಲ್ಲಿ ನಡೆದರೂ ನೂರಾರು – ಸಾವಿರಾರು ಜನ ಭಕ್ತರು ಸೇರುತ್ತಾರೆ. ರಂಗಪರಿಕರ, ಭರತನಾಟ್ಯದ ಹೆಜ್ಜೆಗಾರಿಕೆ, ಮಂಡಲ ರಚನೆ, ಹಾಡು, ನರ್ತಕರ, ಹಾವಭಾವ ಇತ್ಯಾದಿಗಳೆಲ್ಲವೂ ಭಕ್ತರಿಗೆ ಅತ್ಯಾಕರ್ಷಕವಾಗಿ ಕಂಡಿದೆ. “ನಾಗಪಾತ್ರಿ ಆವೇಶಕ್ಕೆ ಒಳಗಾಗಿ, ನಾದವೈದ್ಯ ಅರ್ಧನಾರಿಯಾಗಿ ಜೊತಿಗೂಡಿ ಚಲಿಸುವ ಪದಚಲನೆಯ ಒಂದು ಅಪೂರ್ವ ನೃತ್ಯದ ಭಾಗವು ಮಿಥುನದ ಸಂಕೇತವಾಗಿರುವುದರಿಂದಲೇ ಏನೋ ಇಂತಹ ಆಚರಣೆಗೆ ‘ಮಂಡಲ ಭೋಗ ಸೇವೆ’ ಎಂತಲೂ ಸೂಕ್ಷ್ಮವಾಗಿ ಕರೆಯಲಾಗಿದೆ” (ದಕ್ಷಿಣ ಕನ್ನಡ ದೇವರ ಕಾಡುಗಳು, ೨೦೦೬ : ೧೩). ಅತ್ಯಂತ ಕಲಾತ್ಮಕ ಹಾಗೂ ಆಕರ್ಷಕವಾಗಿ ಬರೆಯುವ ಮಂಡಲ ನೋಡುಗರ ಮನಸ್ಸಿಗೆ ಮುದ ನೀಡುವುದರಲ್ಲಿ ಎರಡು ಮಾತಿಲ್ಲ. ಕರಾವಳಿ ಯಕ್ಷಗಾನದ ರಂಗ ಸ್ಥಳದಂತೆ ನಾಗಮಂಡಲದ ಮೇಲ್ಛಾವಣಿಯನ್ನು ಆಕರ್ಷಕವಾಗಿ ಶೃಂಗರಿಸಿರುತ್ತಾರೆ. ಒಟ್ಟಾರೆ ವಿಜೃಂಭಣೆಯ ಆರಾಧನೆಯನ್ನು ಸವಿಯುವ ಗುಂಗಿನಲ್ಲಿ ಭಕ್ತರಿಗೆ – ಜನಸಾಮಾನ್ಯರಿಗೆ ನಾಗಾರಾಧನೆಯ ಮೂಲ, ಪ್ರಭಾವ, ಸ್ಥಿತ್ಯಂತರಗಳೆಲ್ಲ ನಗಣ್ಯವಾಗಿ ತೋರುತ್ತವೆ ಎಂದರೆ ಅತಿಶಯೋಕ್ತಿಯಲ್ಲ.

ಶಿವರಾಮ ಕಾರಂತರ ಪ್ರಕಾರ “ನಾಗಮಂಡಲವು ಪ್ರಾಚೀನ ದೈವಾರಾಧನೆಯ ಮೇಲೆ ಆರ್ಯ ಸಂಸ್ಕೃತಿಯ ವರ್ಚಸ್ಸನ್ನು ಬೀರುವ ಒಂದು ಕುಣಿತ ವಿಧಾನ”. ಮೂಲನಿವಾಸಿಗಳ ನಾಗಪೂಜೆ ನಾಲ್ಕನೆಯ ಹಂತದ ಸ್ಥಿತ್ಯಂತರದಲ್ಲಿ (ನಾಗಮಂಡಲ) ಪೂರ್ತಿವೈದಿಕರ ಸಂಸ್ಕೃತಿಯ ಆಚರಣೆಯಾಗಿ ಬದಲಾಯಿತು. ಪ್ರಚಲಿತದಲ್ಲಿನ ನಾಗಮಂಡಲದಲ್ಲಿ ವೈದಿಕೇತರರು ಪ್ರೇಕ್ಷಕರು ಅಥವಾ ಭಕ್ತರು ಮಾತ್ರ. “…ಜಾನಪದ ಕುಣಿತಗಳು ಎಷ್ಟೇ ಪ್ರಚಲಿತದಲ್ಲಿದ್ದರೂ ವೈದಿಕ ಸಂಸ್ಕೃತಿ ಅವುಗಳನ್ನು ನಿರ್ಧರಿಸುವಷ್ಟು ಸಾಮರ್ಥ್ಯವನ್ನು ಹೊಂದಿದೆ. ಇದಕ್ಕೆ ಕಾರಣ ಸಂಸ್ಕೃತಿ ಅವುಗಳನ್ನು ರಚನೆ ಮತ್ತು ಉತ್ಪಾದನಾ ವ್ಯವಸ್ಥೆ. ಇದರೊಡನೆ ಅನಕ್ಷರತೆ, ಮುಗ್ಧತೆ ಹಾಗೂ ಅತಿಯಾದ ನಂಬಿಕೆಯೂ ಸೇರಿಕೊಂಡಿದೆ” ಎಂಬ ಮೋಹನ್ ಕೃಷ್ಣ ರೈ (೧೯೯೯ : ೩೦) ಅವರ ಅಭಿಪ್ರಾಯ ಇಲ್ಲಿ ಪ್ರಸ್ತುತ. ನಾಗಮಂಡಲದ ಮೂಲಕ ನಾಗಪೂಜೆಯನ್ನು ಮಾಡಿಸುವುದು ಧಾರ್ಮಿಕ ನಂಬಿಕೆಯ ತಳಹದಿಯ ಮೇಲಲ್ಲ. ಇಂದಿನ ದಿನಮಾನಗಳಲ್ಲಿ ತುಳುನಾಡಿನಾದ್ಯಂತ ವರ್ಷದಲ್ಲಿ ನೂರಾರು ನಾಗಮಂಡಲಗಳು ಜರುಗುತ್ತವೆ. ‘ನಂಬಿಕೆ’ಯು ಸ್ಥಾನಪಲ್ಲಟಗೊಂಡು ‘ಸಾಮಾಜಿಕ ಪ್ರತಿಷ್ಠೆ’ ಮುಖ್ಯವಾಗಿದೆ. ಜೀವನೋಪಾಯಕ್ಕಾಗಿ ನೆರೆಯ ಮುಂಬಯಿಗೆ ವಲಸೆ ಹೋಗಿ ಆರ್ಥಿಕವಾಗಿ ಪ್ರಬಲರಾದ ಬಂಟರು, ಬಿಲ್ಲವರು ವರ್ಷಕ್ಕೊಂದು ಬಾರಿ ತಾಯ್ನಾಡಿಗೆ ಬಂದು ಲಕ್ಷಾಂತರ ರೂ.ಗಳನ್ನು ಖರ್ಚುಮಾಡಿ ನಾಗಮಂಡಲ ಮಾಡಿಸುತ್ತಾರೆ. ಆ ಮೂಲಕ ತಾಯ್ನಾಡಿನಲ್ಲಿ ತಮ್ಮ ಅಸ್ತಿತ್ವವನ್ನು, ಪ್ರತಿಷ್ಠೆಯನ್ನು ಜೀವಂತವಾಗಿರುವಂತೆ ಜಾಗ್ರತೆ ವಹಿಸುತ್ತಾರೆ. ಮೋಹನ್ ಕೃಷ್ಣ ರೈ ಅವರು ವ್ಯಾಖ್ಯಾನಿಸಿದಂತೆ ಪ್ರಸ್ತುತ ತುಳುನಾಡಿನ ನಾಗಾರಾಧನೆ, ದೈವಾರಾಧನೆ ಶೋಕೀ ಜೀವನದ ಒಂದು ಭಾಗವಾಗಿ ಪರಿವರ್ತನೆಗೊಂಡಿವೆ (೧೯೯೯ : ೫೩).

ಪ್ರಕೃತಿಯೇ ದೇವರೆಂದು ಪರಿಭಾವಿಸಿ ಹಲವು ಸಂಪ್ರದಾಯ – ಆಚರಣೆಗಳನ್ನು ನಮ್ಮ ಪೂರ್ವಿಕರು ರೂಪಿಸಿದರು. ಪ್ರಕೃತಿ ಸಹಜ ಬದುಕನ್ನು ಬದುಕಿದ ಅವರು ಪರೋಕ್ಷವಾಗಿ ಪ್ರಕೃತಿ – ಪರಿಸರ ನಾಶವಾಗದಂತೆ ನೋಡಿಕೊಂಡರು. ಎಲ್ಲಾ ಧಾರ್ಮಿಕ ಆಚರಣೆ, ಸಂಪ್ರದಾಯ, ನಡೆ – ನುಡಿಗಳಲ್ಲಿ ಪ್ರಕೃತಿ ಉಳಿವಿನ, ಸಹಜ ಬದುಕಿಗೆ ನಿಷ್ಠರಾಗುವಂತೆ ಬದುಕಲು ಬೇಕಾದ ಅಂಶಗಳನ್ನು ತುರುಕಿಸಿದರು.  ಪ್ರತ್ಯಕ್ಷವಾಗಿ ನಮಗೇನು ಕಾಣಬರದಿದ್ದರೂ ಮೂಲ ಆಚರಣೆ, ಆಶಯಗಳನ್ನು ಪರಾಂಬರಿಸಿ ನೋಡಿದಾಗ ದೂರದೃಷ್ಟಿತ್ವ ನಮಗೆ ಗೋಚರಿಸುತ್ತದೆ. ಇದಕ್ಕೆ ನಾಗಾರಾಧನೆಯೂ ಹೊರತಾಗಿಲ್ಲ. ಆದರೆ ಪರೋಕ್ಷವಾಗಿರುವ ಮಾನವ ಜೀವಪೋಷಕ ಅಂಶಗಳು ತಿಳಿದುಕೊಳ್ಳುವ ಜಾಣತನ ಮಾಡಬೇಕಷ್ಟೆ!

ಪ್ರಸ್ತುತ ಅಧ್ಯಯನದಲ್ಲಿ ಕಂಡುಕೊಂಡಂತೆ ಸ್ಥಿತ್ಯಂತರಗೊಂಡ ನಾಗಾರಾಧನೆಯ ಪ್ರಮುಖ ಉದ್ದೇಶಗಳೆಂದರೆ ಸಂತಾನ ಪ್ರಾಪ್ತಿ, ಕೃಷಿ ಸಮೃದ್ಧಿ, ದೈಹಿಕ ವ್ಯಾಧಿಗಳ ನಿವಾರಣೆ, ಸಂಪತ್ತು ಮತ್ತು ಆಯುರಾರೋಗ್ಯದ ಆಶಯಗಳು ಸ್ಥಿತ್ಯಂತರಗಳ ಹಾದಿಯಲ್ಲಿ ಆದಿಮ ನಾಗಾರಾಧನೆಯ ಆಶಯಗಳಿಗೆ ಧಕ್ಕೆ ಬರದಿದ್ದರೂ, ವಿಧಿವಿಧಾನಗಳಲ್ಲಿ ತೊಡಕುಗಳಾಗಿರುವುದು ಕಂಡುಬರುತ್ತಿದೆ. ಈ ದಿಸೆಯಲ್ಲಿ ನಾಗಬನ, ನಾಗನ ಆರಾಧನ ವಿಧಾನಗಳ ಬಗೆಗೆ ಚಿಂತನೆ ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡಾ. ಕೆ. ಪ್ರಭಾಕರ ಆಚಾರ್ ಅವರ ಮಾತುಗಳು ನಮ್ಮನ್ನು ಎಚ್ಚರಿಸುತ್ತಿವೆ. “ನಾಗಾರಾಧನೆ ಪ್ರಕೃತಿಯ ಪೂಜೆಯ ಒಂದು ಭಾಗ ಎಂಬುದನ್ನು ಎಲ್ಲರೂ ಗಮನಿಸತಕ್ಕದ್ದು. ಈ ಉಪಾಸನೆ ವೈದಿಕ ವಿಧಿಗಳತ್ತ ಸರಿದಂತೆ ಔಪಚಾರಿಕವಾಗುತ್ತ ಬಂದಿದೆಯೇ ಹೊರತು ಪ್ರಾಮಾಣಿಕವಾದ ಭಯಭಕ್ತಿಗಳು ದೂರ ಸರಿಯುತ್ತಿವೆ. ನಾಗಮಂಡಲಗಳು ಕೂಡ ಭಕ್ತಿ ಪ್ರಧಾನವಾಗಿರುವುದಕ್ಕಿಂತ ಆಡಂಬರವಾಗಿರುವುದೇ ಹೆಚ್ಚು. ಪ್ರಕೃತಿದತ್ತವಾದ ನಾಗಬನಗಳು ಮರೆಯಾಗಿ ನಾಗಕಟ್ಟೆಗಳು, ಗುಡಿಗಳು ಸಿಮೆಂಟಿನಿಂದಲೇ ನಿರ್ಮಿಸಲ್ಪಡುತ್ತಿರುವುದು ವಿಪರ್ಯಾಸವೇ ಸರಿ. ಜ್ಯೋತಿಷಿಗಳು, ನಾಗಪಾತ್ರಿಗಳು, ಅರ್ಚಕರು ಸೇರಿ ಮನಸ್ಸು ಮಾಡಿದಲ್ಲಿ, ನಾಗಾರಾಧನೆಯ ಮೂಲ ಆಶಯಗಳನ್ನು ಸಕಾರಾತ್ಮಕವಾಗಿ ಜನರ ಸ್ಮೃತಿ ಪಟಲದಲ್ಲಿ ಬಿತ್ತಿದಲ್ಲಿ, ನಾಗಬನ ನಾಶದಂತಹ ಪ್ರಕೃತಿಯ ಮೇಲೆ ನಿರಂತರವಾಗಿ ನಡೆಯುತ್ತಿರುವ ಅತ್ಯಾಚಾರವನ್ನು ಶಾಶ್ವತವಾಗಿ ತಡೆಯಲು ಸಾಧ್ಯವಿದೆ (೨೦೦೬ : VII).

ನಾಗಾರಾಧನೆಯ ಸ್ಥಿತ್ಯಂತರಗಳಲ್ಲಿ ಆದ ಬದಲಾವಣೆಗಳಲ್ಲಿ ಅತೀ ಮುಖ್ಯವಾಗಿ ಕಾಣಬರುವುದು ನಾಗಬನಗಳು ಮತ್ತು ಪ್ರಕೃತಿ. ದಕ್ಷಿಣ ಕನ್ನಡದ ಆಯ್ದ ದೇವರ ಕಾಡು (ನಾಗಬನಗಳು ಸೇರಿದಂತೆ)ಗಳ ಸಮೀಕ್ಷೆಯಲ್ಲಿ ದಾಖಲಿಸಿರುವ ಸಸ್ಯ ಪ್ರಭೇದಗಳ ಸಂಖ್ಯೆ ೨೯೪, ಪ್ರಾಣಿ ಪ್ರಭೇದಗಳ ಸಂಖ್ಯೆ ೨೨, ಪಕ್ಷಿ ಪ್ರಭೇದಗಳ ಸಂಖ್ಯೆ ೫೫ ಮತ್ತು ಉರಗ ಪ್ರಭೇದಗಳ ಸಂಖ್ಯೆ ೧೮, ಈ ದಾಖಲಾತಿ ಸಂಖ್ಯೆಗಳನ್ನು ಗಮನಿಸಿದಾಗಲೇ ಈ ಪ್ರದೇಶದಲ್ಲಿರುವ ಪರೋಕ್ಷವಾಗಿ ಮಾನವ ಕುಲದ ಉಳಿವಿಗಾಗಿ ಉಪಕರಿಸುತ್ತಿವೆ ಎಂಬುದನ್ನು ಮನಗಾಣಬೇಕಾಗಿದೆ.

ಸಸ್ಯ ವಿಜ್ಞಾನ ಪ್ರಕಾರ ಅಶ್ವತ್ಥ ಮತ್ತು ಬೇವಿನ ಮರಗಳ ಬೇರುಗಳು ಪ್ರಾತಃಕಾಲದಲ್ಲಿ. ಸುಮಧುರ ಪರಿಮಳಭರಿತ ಘನೀಭೂತವಾದ ಆಮ್ಲಜನಕ(ಪ್ರಾಣವಾಯು)ವನ್ನು ಹೊರಸೂಸುತ್ತವೆ. ಇದಕ್ಕೆ ‘ಓಜೋನ್’ (೦) ಎಂದು ಕರೆಯಲಾಗುತ್ತದೆ. ಇದು ಮಾನವನ ಆರೋಗ್ಯದ ಮೇಲೆ, ಅದರಲ್ಲೂ ಜನನೇಂದ್ರಿಯದ ಮೇಲೆ ಒಳ್ಳೆಯ ಪ್ರಭಾವ ಬೀರುತ್ತದೆ. ಪ್ರಾತಃಕಾಲದಲ್ಲಿ ನಿಯಮಬದ್ಧವಾದ ಪ್ರದಕ್ಷಿಣೆ ಹಾಗೂ ನಮಸ್ಕಾರಗಳಿಂದ ಶರೀರಕ್ಕೆ ಹೆಚ್ಚಿನ ವ್ಯಾಯಾಮ ದೊರೆಯುತ್ತದೆ. ಈ ಮೂಲಕ ಅವರ ಶರೀರದ ದೋಷಗಳು ನಿವಾರಣೆಯಾಗಿ ಮಾನಸಿಕ ಸಂತೃಪ್ತಿಯೂ ದೊರಕಿ, ಸಂತಾನ ಪ್ರಾಪ್ತಿಗೆ ಅನುಕೂಲವಾದ ವಾತಾವರಣ ನಿರ್ಮಾಣಗೊಳ್ಳುತ್ತದೆ (೨೦೦೬ : ೯೪). ಈ ಎಲ್ಲಾ ವೈಜ್ಞಾನಿಕ ಕಾರಣಗಳನ್ನು ಯುವ ಜನತೆ ತಿಳಿದುಕೊಳ್ಳುವುದು ಅತ್ಯಗತ್ಯ. ಅದರಿಂದ ಡಾಂಭಿಕ ಭಕ್ತಿ ಮರೆಯಾಗಿ ನಿಜವಾದ ಮನಸ್ಸಿನಿಂದ, ಪ್ರಕೃತಿಯಾರಾಧನೆಗೆ ದಾರಿ ಸುಗಮವಾಗಿಸಿಕೊಳ್ಳಬೇಕಾಗಿದೆ.

ಉರಗಗಳು ಶೀತರಕ್ತ ಪ್ರಾಣಿಗಳು. ಹಾಗಾಗಿ ಅವು ತಂಪಾಗಿರುವ ಪ್ರದೇಶಗಳನ್ನೇ ಅಶ್ರಯಿಸುತ್ತವೆ. ಹುತ್ತ, ಗಿಡ – ಮರಗಳಿಂದಾವೃತವಾದ ನೆರಳಿರುವ ಪ್ರದೇಶಗಳೇ ಅವುಗಳ ವಾಸಸ್ಥಾನಗಳಾಗಿರುತ್ತವೆ. ಆಧುನೀಕರಣದ ಭರಾಟೆಯಲ್ಲಿ ನಾಗಬನಗಳನ್ನು ದೊಡ್ಡ ದೊಡ್ಡ ನಾಗದೇವಾಲಯಗಳನ್ನಾಗಿ, ಕಾಂಕ್ರೀಟ್ ನಾಗಬನಗಳನ್ನಾಗಿ ನಿರ್ಮಾಣ ಮಾಡಿದರೆ ಅವುಗಳಿಗೆ ಏನು ಪ್ರಯೋಜನ? ಕಾಂಕ್ರೀಟಿನ ಮೇಲೆ ಉರಗಗಳಿಗೆ ಬೇಕಾದ ಸಸ್ಯ ಸಂಕುಲ ಹುಟ್ಟಲು ಸಾಧ್ಯವೇ? ಕಾಲಕ್ಕೆ ತಕ್ಕಂತೆ ಅಥವಾ ಪರಿವರ್ತನೆ ಜಗದ ನಿಯಮ ಎಂಬ ವಿತಂಡವಾದದೊಂದಿಗೆ ಕಲ್ಲನಾಗನಿಗೆ ಹಾಲೆರೆದರೆ ನಾಗನಿಗಲ್ಲ, ಯಾವ ಪ್ರಾಣಿ-ಕ್ರಿಮಿ, ಕೀಟಗಳಿಗೂ ಪ್ರಯೋಜನವಾಗಲು ಸಾಧ್ಯವಿಲ್ಲ. ಬೇಕಾದಷ್ಟು ಆರ್ಥಿಕ ಸಂಪತ್ತು ಗಳಿಸಿದ್ದೇನೆ ಎಂಬ ‘ಅಹಂ’ನಿಂದ ಲಕ್ಷಾಂತರ ರೂ.ಗಳನ್ನು ಖರ್ಚು ಮಾಡಿ ‘ನಾಗಮಂಡಲ’ ನಾಗಾರಾಧನಾ ಆಚರಣೆಯನ್ನು ಮಾಡಿಸುತ್ತೇನೆ. ಆ ಮೂಲಕ ಸಾಮಾಜಿಕ ಪ್ರತಿಷ್ಠೆ ಹೆಚ್ಚಾಗುತ್ತದೆ ಎಂಬ ಅರೆಮನಸಿನ ಒಣಪ್ರತಿಷ್ಠೆಗಳಿಂದ ಮೂಲ ನಾಗಾರಾಧನೆಗೆ ಧಕ್ಕೆಯಾಗುವುದರಲ್ಲಿ ಎರಡು ಮಾತಿಲ್ಲ. ಅದೇ ಹಣದಲ್ಲಿ ನಾಗಬನಗಳ ರಕ್ಷಣೆ ಮಾಡಿದರೆ ಪ್ರಕೃತಿಯ ಸಮತೋಲನವಾಗುವುದು ಮಾತ್ರವಲ್ಲದೇ ಲಕ್ಷಾಂತರ ಜನರಿಗೆ ಶುದ್ಧ ಗಾಳಿಯನ್ನು ಪರೋಕ್ಷವಾಗಿ ಒದಗಿಸಿದಂತಾಗುತ್ತದೆ. ಈ ನಿಟ್ಟಿನಲ್ಲಿ ತುಳುನಾಡಿನ ಶ್ರೀಮಂತರು, ಭೂಮಾಲೀಕರು, ವ್ಯಾಪಾರಸ್ಥರು ಗಮನಹರಿಸಬೇಕಾಗಿದೆ.

ನಾಗರಪಂಚಮಿ ಮತ್ತು ಇತರೆ ನಾಗಾರಾಧನಾ ವಿಶೇಷ ದಿನಗಳಲ್ಲಿ ನಾಗಬನ, ನಾಗದೇವಾಲಯಗಳಲ್ಲಿ ನಾಗನಿಗೆ ಅಭಿಷೇಕ ಮಾಡಿ ಕೃತಾರ್ಥರಾಗುವ ಜೊತೆ ಜೊತೆಗೆ ಹೆಚ್ಚುವರಿಯಾಗಿ ನಮ್ಮ ಪರಿಸರಕ್ಕೆ ಪೂರಕವಾದ ದೇಸಿ ಗಿಡಗಳನ್ನು ನೆಟ್ಟು ಬೆಳೆಸಬೆಕು. ಆ ಮೂಲಕ ಆರಾಧನೆಯ ಹೆಸರಲ್ಲಿ ವೃಕ್ಷ ಸಂಪತ್ತನ್ನು ಹೆಚ್ಚಿಸಬೇಕಾಗಿದೆ. ತುಳುವರು ಧಾರ್ಮಿಕಾಚರಣೆಗಳಲ್ಲಿ, ದೈವ-ದೇವರುಗಳಲ್ಲಿ ಅಪಾರವಾದ (ಅತಿಯಾದ?) ನಂಬಿಕೆಯುಳ್ಳವರು. ಪ್ರತಿಯೊಂದು ಆಚರಣೆ-ಆರಾಧನೆ ಸಂದರ್ಭಗಳಲ್ಲಿ ‘ಜ್ಯೋತಿಷ’ರ ಮಾತಿನಂತೆ ಮುಂದುವರೆಯುತ್ತಾರೆ. ಕಳೆದ ದಶಕದಿಂದೀಚೆಗೆ ನೂರಾರು ನಾಗಬನ-ದೇವಾಲಯ, ಆಲಡೆ-ಬ್ರಹ್ಮಸ್ಥಾನಗಳು ಜೀರ್ಣೋದ್ಧಾರ, ಪ್ರತಿಷ್ಠಾಪನೆ, ಬ್ರಹ್ಮಕಲಶೋತ್ಸವ – ಇತ್ಯಾದಿಗಳ ಮೂಲಕ ಪರಿವರ್ತನೆ (ಅಭಿವೃದ್ಧಿ!)ಯ ಹಾದಿಯಲ್ಲಿವೆ. ಇಂಥ ಸಂದರ್ಭಗಳಲ್ಲಿ ಪರಿಸರಕ್ಕೆ ಯಾವುದೇ ರೀತಿಯಲ್ಲಿ ಧಕ್ಕೆ ಬರದಂತೆ ಪರಿವರ್ತಿಸಬೇಕೆಂದು ಜೋತಿಷ್ಯರು ತಮ್ಮ ತೀರ್ಮಾನಗಳನ್ನು ನೀಡಿದರೆ ಅದೆಷ್ಟೋ ಬೆಲೆಬಾಳುವ ಗಿಡ-ಮರಗಳು ಉಳಿದಾವು; ನಾಗಬನಗಳು ಮೂಲದಲ್ಲಿರುವಂತೆ ಉಳಿದಾವು. ಈ ಹಿನ್ನೆಲೆಯಲ್ಲಿ ಜೋತಿಷ್ಯರ, ತಾಂತ್ರಿಕಾಚಾರಣೆ ಮಾರ್ಗದರ್ಶಕರ ಪಾತ್ರವೂ ಅತೀ ಮಹತ್ವದ್ದು.

ಭೂಮಿಗೆ ಸಂಬಂಧಿಸಿದ ಶಕ್ತಿಯಾಗಿ ನಾಗ ಗುರುತಿಸಲ್ಪಟ್ಟಿದ್ದು, ನಾಗ-ಭೂಮಿ (ಪ್ರಕೃತಿ) ಸಂಬಂಧ ನಮ್ಮಲ್ಲಿ ಗಾಢವಾಗಿ ಬೇರೂರಿದೆ. ಇದು ತಲೆ ತಲಾಂತರಕ್ಕೆ ಮುಂದುವರಿಯುತ್ತಿದೆ; ಮುಂದುವರಿಯಬೇಕಿದೆ. ಸಂಬಂಧ ಗಟ್ಟಿಯಾಗಿದ್ದರೇ ನಾಗಾರಾಧನೆಯಂಥ ಆರಾಧನೆಗಳು ಜರುಗುತ್ತವೆ. ಆ ಮೂಲಕ ಪ್ರಕೃತಿಯನ್ನು ಗೌರವಿಸಿ, ಉಳಿಸುವತ್ತ ಗಮನಹರಿಸಬಹುದಾಗಿದೆ. ನಾಗಾಲಯ (ನಾಗಬನ)ಗಳು ಅಂತರ್ಜಲ ಮಟ್ಟವನ್ನು ಪುನಶ್ಚೇತನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿರುವಾಗ, ಜೀರ್ಣೋದ್ಧಾರ, ಪಾತ್ರವಹಿಸುತ್ತಿವೆ ಎಂದು ವೈಜ್ಞಾನಿಕವಾಗಿ ದೃಢಪಟ್ಟಿರುವಾಗ, ಜೀರ್ಣೋದ್ಧಾರ, ಪ್ರವಾಸೋದ್ಯಮ, ಆಧುನೀಕರಣಗಳು ನೆಪವೊಡ್ಡಿ ಕೆಡವಿದರೆ ನಮ್ಮ ಮೂರ್ಖತನಕ್ಕೆ ನಾವೇ ಮುಂದೊಂದಿನ ಬೆಲೆ ತೆರಬೇಕಾಗುತ್ತದೆ. ಹಾಗಾಗಿ ನಾಗಾರಾಧನೆಯ ಮೂಲ ಆಶಯವನ್ನು ಮರೆಯದೆ ಗೌರವಿಸುತ್ತಾ, ಆದಿಮ ಆರಾಧನಾ ಕ್ರಮವನ್ನು ರೂಢಿಸಿಕೊಳ್ಳಬೇಕಾಗಿದೆ. ಆ ಮೂಲಕ ಒಂದು ಆದಿಕಾಲದ ಉಪಾಸನಾ ಸಂಸ್ಕೃತಿಯನ್ನು ಜೀವಂತವಿರಿಸಿ, ನಮ್ಮ ಬದುಕನ್ನು ಹಸನುಗೊಳಿಸಿಕೊಳ್ಳುವಲ್ಲಿ ನಮ್ಮೆಲ್ಲರ ಪಾತ್ರ ಮಹತ್ವದ್ದು.

—-
ಕೃತಜ್ಞತೆ
: ಅಧ್ಯಯನಕ್ಕೆ ಮಾಹಿತಿಮಾರ್ಗದರ್ಶನ ನೀಡಿರುವ ಕನ್ನಡ ವಿಶ್ವವಿದ್ಯಾಲಯ ಪ್ರಾಧ್ಯಾಪಕರಾದ ಪ್ರೊ. . ಸುಬ್ಬಣ್ಣ ರೈ, ಪ್ರೊ. .ಚಿ. ರಮೇಶ್ ಇವರಿಗೆ, ಡಾ. ಪುತ್ತಿ ವಸಂತ ಕುಮಾರ್, ಎಂ.ಜಿ.ಎಂ. ಕಾಲೇಜು, ಉಡುಪಿ ಮತ್ತು ಶ್ರೀ ಶ್ರೀಧರ ಏತಡ್ಕ, ಸರ್ಕಾರಿ ಕಾಲೇಜು, ಕಾಸರಗೋಡು ಇವರಿಗೆ ಹೃತ್ಪೂರ್ವಕ ಕೃತಜ್ಞತೆಗಳು.