ಪ್ರವೇಶ

ನಾಗಾರಾಧನೆ ಪ್ರಪಂಚದ ಬಹುಪ್ರಾಚೀನ ಆರಾಧನಾ ಸಂಪ್ರದಾಯಗಳಲ್ಲಿ ಒಂದು. ಕ್ರಿ.ಪೂ. ೨೬೦೦ ವರ್ಷಗಳ ಹಿಂದೆಯೇ ಸುಮೇರಿಯನ್ ದೊರೆ ಗುದಿಯನ ಸುರಾ ಪಾತ್ರೆಯ ಮೇಲೆ ನಾಗ ಮಿಥುನದ ಸ್ವಾರಸ್ಯವಾದ ಚಿತ್ರಣದಿಂದಲೇ ನಾಗ ಸಂಬಂಧಿ ಸಂಪ್ರದಾಯದ ಪ್ರಾಚೀನತೆಯನ್ನು ತಿಳಿಯಬಹುದು. ಸತ್ತವರ ಆತ್ಮಗಳು ಸರ್ಪರೂಪದಲ್ಲಿ ಗೋಚರಿಸುತ್ತವೆಂಬ ನಂಬಿಕೆ ದಕ್ಷಿಣ ಆಫ್ರಿಕಾ, ಇಂಡಿಯಾ ಮತ್ತು ಗ್ರೀಸ್ ದೇಶದಲ್ಲಿ ಪ್ರಬಲವಾಗಿತ್ತು. ಸರ್ಪ ಚಿಹ್ನೆಯನ್ನು ರಾಷ್ಟ್ರಲಾಂಛನದಲ್ಲಿ ಗ್ರೀಕರು ಮಾಡಿಕೊಂಡಿದ್ದರು. ಅವರ ವೈದ್ಯದೇವತೆ ರುಸ್ಕು ಲೇಪಿಯನ್ ಹಿಡಿದಿರುವ ದಂಡದ ಸುತ್ತ ನಾಗಮಿಥನವಿದೆ. ನಂತರ ಇದೇ ಚಿಹ್ನೆಯನ್ನು ವೈದ್ಯ ವಿಜ್ಞಾನದ ಲಾಂಛನವನ್ನಾಗಿ ಮಾಡಿಕೊಳ್ಳಲಾಗಿದೆ. ಎಥೆನ್ಸ್ ನಗರದಲ್ಲಿ ಸರ್ಪ ದೇವಾಲಯಗಳಿದ್ದ ಬಗ್ಗೆ ಇತಿಹಾಸವಿದೆ. ಸರ್ಪಗಳು ದೇವತೆಗಳಿಗೆ ಸಂದೇಶ ವಾಹಕರು ಎಂದು ಗ್ರೀಕರ ನಂಬಿಕೆ. ಬ್ಯಾಬಿಲೋನಿಯಾ ಸಂಸ್ಕೃತಿಯಲ್ಲಿಯೂ ನಾಗರಾಧನೆಗೂ ವಿಶೇಷ ಸ್ಥಾನವಿತ್ತು. ಅಲ್ಲಿಯೂ ಸರ್ಪಕ್ಕೆ ದೇವಾಲಯವನ್ನು ಕಟ್ಟಿ ಆರಾಧಿಸಿದ ಪರಿಪಾಠವಿದ್ದಿದನ್ನು ಇತಿಹಾಸಕಾರರು ತಿಳಿಸುತ್ತಾರೆ.

ಆಫ್ರಿಕನ್ನರು ಬೊಂಬಾಟ್ ಎಂಬ ಜಾತಿಯ ಮರದಡಿ ಗೂಟ ಹಾಕಿ ಅದನ್ನು ಹಾವಿನ ಪ್ರತಿರೂಪವೆಂದು ನಂಬಿ ಪೂಜಿಸುತ್ತಿದ್ದರು. ನಾಗಲಾಂಛನದ ಮೇಲೆ ಕಲಬಾಕ್ ಎಂಬ ಮರದ ಪಾತ್ರಯಲ್ಲಿ ಮೊಸರು ಮತ್ತು ಜೋಳದ ಹಿಟ್ಟಿನ ಅಭಿಷೇಕ ಮಾಡುತ್ತಿದ್ದರು. ಬ್ರಿಟನ್ ನ ಡ್ರೂಯಿಕ್ ಜನರು ನಾಗಾರಾಧಕರಾಗಿದ್ದರು. ಹಾಗೆಯೇ ಈಜಿಪ್ಟನ ನೈಲ್ ನದಿ ಜಲಾನಯನ ಪ್ರದೇಶಗಳಲ್ಲಿ ನಾಗಾರಾಧನೆಯ ಕುರುಹುಗಳಿರುವುದನ್ನು ಸಂಶೋಧಕರು ಶೋಧಿಸಿದ್ದಾರೆ. ಶ್ರೀಲಂಕಾ, ಕಾಂಬೋಡಿಯಾ, ಫಿಜಿದ್ವೀಪ, ಚೀನಾ, ಬರ್ಮಾ, ಜಪಾನ್, ಜಾವಾ, ಬೋರ್ನಿಯಾ ದ್ವೀಪ ಇತ್ಯಾದಿ ದೇಶಗಳಲ್ಲೂ ಸಮಾನ ನಾಗಾರಾಧನಾ ಪದ್ಧತಿಗಳು ಕಂಡುಬರುತ್ತವೆ. ಬಹುಪ್ರಾಚೀನ ಕಾಲದಿಂದಲೂ ಈ ಎಲ್ಲಾ ದೇಶಗಳಲ್ಲಿ ನಾಗನನ್ನು ವಿವಿಧ ಕಾರಣಗಳಿಗಾಗಿ ಆರಾಧಿಸುತ್ತಾ, ಫಲ ಸಮೃದ್ಧಿಯ ಸಂಕೇತವೆಂದು ನಂಬಿಕೊಂಡು ಬರುತ್ತಿದ್ದಾರೆ.

ಭಾರತದ ಉದ್ದಗಲಕ್ಕೂ ಸಾರ್ವತ್ರಿಕವಾಗಿ ಸರ್ಪಾರಾಧನೆಯನ್ನು ಕಾಣುತ್ತೇವೆ. ವೇದಪೂರ್ವದ ಸೈಂಧವ ಸಂಸ್ಕೃತಿಯಲ್ಲಿ ನಾಗ ಕಾಣಿಸಿಕೊಂಡಿದ್ದಾನೆ. ಸಿಂಧು ಪೂರ್ವ ಸಂಸ್ಕೃತಿಗಳಲ್ಲಿ ಒಂದಾದ ಗುಮ್ಲಾ ಸಂಸ್ಕೃತಿಯ ಜನರು ನಾಗಾರಾಧಕರಾಗಿದ್ದರು ಎಂಬುದನ್ನು ಸಂಶೋಧನೆಗಳು ತಿಳಿಸಿವೆ. ನಮ್ಮ ದೇಶದಲ್ಲಿ ಇದಕ್ಕಿರುವಷ್ಟು ಪ್ರಾಶಸ್ತ್ಯ ಇತರೆ ದೇಶಗಳಲ್ಲಿ ಇರಲಾರದು. ಶೈವ, ಶಾಕ್ತ, ವೈಷ್ಣವ, ಬೌದ್ಧ, ಜೈನ ಇತ್ಯಾದಿ ಎಲ್ಲಾ ಮತ-ಧರ್ಮ ಸಂಪ್ರದಾಯಗಳಲ್ಲಿ ನಾಗಪೂಜೆಯನ್ನು ಕಾಣಬಹುದು. ಪಂಜಾಬ್ ಮತ್ತು ಕಾಶ್ಮೀರ ಪ್ರಾಂತಗಳಲ್ಲಿ ಮೊತ್ತಮೊದಲಿಗೆ ನಾಗಪೂಜೆ ಆರಂಭ ಪಡೆಯಿತೆಂಬುದು ತಜ್ಞರ ಅಭಿಮತ. ಪಂಜಾಬ್‍ನ ‘ಮಿರಾಸನ್’ ನಾಗಾರಾಧಕ ಸಮುದಾಯದವರು ಪ್ರತಿವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಒಂಬತ್ತು ದಿನಗಳ ಸಾರ್ವತ್ರಿಕ ನಾಗಪೂಜೆಯನ್ನು ಆಚರಿಸುತ್ತಾರೆ. ಇಂದಿಗೂ ಈ ಸಂಪ್ರದಾಯ ಮುಂದುವರೆದುಕೊಂಡು ಬಂದಿದೆ. ಸರೋವರಗಳ ನಾಡಾದ ಕಾಶ್ಮೀರದಲ್ಲಿಯೂ ನಾಗಪೂಜೆಯ ಬಗೆಗೆ ಪುರಾತನ ಕಾಲದಲ್ಲಿನ ಉಲ್ಲೇಖಗಳಿವೆ (ನೀಲಮತ ಪುರಾಣ). ಹೀಗೆ ಎಲ್ಲಾ ರಾಜ್ಯಗಳಲ್ಲೂ ನಾಗಪೂಜೆಯನ್ನು ಸಾರ್ವತ್ರಿಕವಾಗಿ ಆಚರಿಸುತ್ತಾರೆ. ಹಿಂದೂಗಳ ಬಹುತೇಕ ದೇವಾನು-ದೇವತೆಗಳೂ ಒಂದಲ್ಲ ಒಂದು ರೀತಿಯಲ್ಲಿ ಸರ್ಪ ಸಂಬಂಧವನ್ನು ಹೊಂದಿವೆ. “ಶಿವ ನಾಗಭೂಷಣ, ವಿಷ್ಣು ನಾಗಶಯನ, ಲಂಬೋದರನ ಉದರವು ಸರ್ಪರಜ್ಜು ಬಂಧಿತ ಸುಬ್ರಹ್ಮಣ್ಯನಂತೂ ನಾಗರೂಪಿ, ದೇವಿ ಶಾಂತಾದುರ್ಗ ನಾಗಸ್ವರೂಪಿಣಿ, ಬಂಗಾಲದ ಮಾನಸಾದೇವಿ ನಾಗದೇವಿಯೆನಿಸಿದ್ದಾಳೆ” (ಅಮೃತ ಸೋಮೇಶ್ವರ, ೨೦೦೭ : ೧೬). ಹೀಗೆ ನಾಗಪೂಜೆ ಅಥವಾ ನಾಗಶಿಲ್ಪಗಳಿಲ್ಲದ ಪ್ರದೇಶಗಳಿಲ್ಲವೆಂದು ಹೇಳಬೇಕು.

ದಕ್ಷಿಣ ಭಾರತದಲ್ಲಿ ನಾಗಾರಾಧನೆಯ ಮೂಲವನ್ನು ಅಚ್ಚ ದ್ರಾವಿಡ ಸಂಸ್ಕೃತಿಯ ಸೆಲೆಯಾದ ಅವಿಭಜಿತ ದಕ್ಷಿಣ ಕನ್ನಡ (ತುಳುನಾಡು) ಮತ್ತು ಹತ್ತಿರ ಕೇರಳದಲ್ಲಿ ಕಾಣಬಹುದು. ಪ್ರಾಚೀನ ಕಾಲದಲ್ಲಿ ‘ನಾಗ’ರೆಂಬ ನಾಗಾರಾಧಕ ಜಾತಿಯ ಜನರು ನೆಲೆಸಿದ್ದರು. ಹಾಗಾಗಿ ಈ ಪ್ರದೇಶವನ್ನು ನಾಗರಖಂಡವೆಂದೂ ಕರೆಯಲಾಗುತ್ತಿತ್ತು. “ತುಳುನಾಡಿಗೆ ‘ಅಲುಕ’ ಎಂಬುದು ಪ್ರಾಚೀನ ಹೆಸರುಗಳಲ್ಲೊಂದೆಂದೂ ‘ಆಲುಕ’ ಎಂದರೆ ಸರ್ಪ ರಾಜನೆಂದು ಹೇಳಿಕೆ ಇದೆ.” (ಅಮೃತ ಸೋಮೇಶ್ವರ, ೨೦೦೭ : ೧೭). ರಾಷ್ಟ್ರಕವಿ ಗೋವಿಂದ ಪೈಯವರೂ ಪಶ್ಚಿಮ ಕರಾವಳಿಯಲ್ಲಿ ನಾಗ ಕುಲದವರಾದ ಚಂಗ (ಸಂಕ) ಎಂಬ ಬೆಸ್ತ ಜನಾಂಗದವರಿದ್ದರೆಂಬುದನ್ನು ಗುರುತಿಸಿದ್ದಾರೆ. ಉತ್ತರದ ವೈದಿಕ ಸಂಸ್ಕೃತಿ ತುಳುನಾಡನ್ನು ಪ್ರವೇಶಿಸುವ ಮೊದಲೇ ಇಲ್ಲಿ ನಾಗಾರಾಧನೆ ನಡೆಯುತ್ತಿತ್ತು ಎಂಬುದು ಬಹುತೇಕ ವಿದ್ವಾಂಸರ ವಾದ.

ಒಟ್ಟಾರೆಯಾಗಿ ತುಳುನಾಡಿನಲ್ಲಿ ಪುರಾತನ ಕಾಲದಿಂದಲೂ ನಾಗಾರಾಧನೆ ನಡೆಯುತ್ತಿತ್ತೆಂಬುದು ನಿಸ್ಸಂಶಯ. ಇದಕ್ಕೆ ಪ್ರಾಕೃತಿಕ ವೈಶಿಷ್ಟ್ಯ ಕೂಡ ಪ್ರಮುಖವಾದ ಕಾರಣಗಳಲ್ಲಿ ಒಂದು. ಸಮುದ್ರ, ಕರಾವಳಿ, ಬೆಟ್ಟಗುಡ್ಡಗಳು, ಹೊಳೆ-ಬೆಳಗಳು, ಹರಿದ್ವರ್ಣದ ಕಾಡು, ವೃಕ್ಷಗಳು ಇತ್ಯಾದಿಗಳೆಲ್ಲವೂ ಪ್ರತ್ಯಕ್ಷ, ಪರೋಕ್ಷವಾಗಿ ಕಾರಣೀಭೂತವಾಗಿವೆ. ಈ ರೀತಿಯ ವೈಶಿಷ್ಟ್ಯಪೂರ್ಣ ಭೂಮಿಯನ್ನು ನಾಗಾರಾಧನೆಯ ಮೂಲಭೂಮಿ ಎಂದು ಕರೆಯಲಾಗುತ್ತದೆ. ಅನೇಕ ಬುಡಕಟ್ಟುಗಳ ತಾಣವಾದ ಕಾಡುಗಳು ನಾನಾ ರೀತಿಯ ಉರಗಗಳಿಗೆ ಅತ್ಯುತ್ತಮ ನೆಲೆಯಾಯಿತು. ಕಾಡಿನ ಬುಡಕಟ್ಟುಗಳಿಗೆ ಸುಗಮ ಜೀವನ ಮತ್ತು ಅಂತರ್ಯದ ಭಯ-ಭಕ್ತಿಗಳು ಕಾಡಿನ ಸರ್ಪಗಳನ್ನು ಪೂಜಿಸುವತ್ತ ಕೊಂಡೊಯ್ದವು. ಹಲವು ಬುಡಕಟ್ಟುಗಳು ಸರ್ಪವನ್ನು ಫಲೋತ್ಪತ್ತಿಯ ಸಂಕೇತವೆಂದೇ ಇಂದಿಗೂ ನಂಬುತ್ತಿರುವುದನ್ನು ಕಾಣಬಹುದು.

ಕರ್ನಾಟಕ ರಾಜ್ಯದ ಇತರೆ ಪ್ರದೇಶಗಳಿಗೆ ಹೋಲಿಸಿದರೆ ಅಖಂಡ ತುಳುನಾಡು (ದಕ್ಷಿಣ ಕನ್ನಡ, ಉಡುಪಿ ಮತ್ತು ಕೇರಳದ ಕಾಸರಗೋಡಿನ ಭಾಗಾಂಶ) ನಾಗಾರಾಧನೆಯ ತಾಣವೆಂದು ಹೆಸರುವಾಸಿ. ಇಲ್ಲಿನ ಪ್ರತಿಯೊಂದು ಜಾತಿ – ಸಮುದಾಯಗಳಿಗೂ ನಾಗ ಬಹು ಜನಪ್ರಿಯ ಆರಾಧ್ಯ ದೈವ. ಜಗತ್ತಿನಲ್ಲಿರುವ ಎಲ್ಲಾ ಪ್ರಾಣಿ-ಜೀವಿಗಳಿಗಿಂತ ಭಿನ್ನವಾಗಿ ಜೀವಿಸಲು ಪ್ರಾರಂಭಿಸಿದ ಮಾನವನಿಗೆ ಪ್ರಕೃತಿಯಲ್ಲಿನ ಎಡರು-ತೊಡರುಗಳನ್ನು ಜಯಿಸಲೇಬೇಕಾಯಿತು. ತನ್ನ ಅಸ್ತಿತ್ವವನ್ನು ಕಂಡುಕೊಳ್ಳುವ ಹಾದಿಯಲ್ಲಿ ಭಯ-ಭಕ್ತಿ ಅನೇಕ ಆಚರಣೆಗಳ, ಸಂಪ್ರದಾಯಗಳ ಸೃಷ್ಟಿಗೆ ನಾಂದಿಯಾಯಿತು. ಅವುಗಳೇ ಇಂದು ನಮಗೆ ಆದಿಮ ಸಂಸ್ಕೃತಿಯ ಅತ್ಯಮೂಲ್ಯ ಕೊಡುಗೆಯೆಂದೇ ಪರಿಗಣಿತವಾಗಿದೆ. ನಾಗಪೂಜೆಗೆ ಸಂಬಂಧಿಸಿದಂತೆ ವೇದಪೂರ್ವಕಾಲದಿಂದ ವಿಧಿವಿಧಾನಗಳಲ್ಲಿ, ಆಶಯಗಳಲ್ಲಿ ಅನೇಕ ರೀತಿಯ ರೂಪಾಂತರಗಳನ್ನು ಪಡೆದುಕೊಂಡು ಬಂದಿದೆ. ತುಳುನಾಡು ವ್ಯಾಪ್ತಿಗೆ ಸೀಮಿತಗೊಂಡಂತೆ ಅಂತಹ ಸ್ಥಿತ್ಯಂತರಗಳ ಒಂದು ಕಿರುನೋಟ ಪ್ರಸ್ತುತ ಅಧ್ಯಯನದ ಉದ್ದೇಶ.

ನಾಗಾರಾಧನೆಯ ಪ್ರಚಲಿತ ರೂಪಗಳ ಸಂಕ್ಷಿಪ್ತ ನೋಟ

ಈ ಮೊದಲು ಪ್ರಸ್ತಾಪಿಸಿರುವಂತೆ ಭಾರತದ ಎಲ್ಲಾ ಪ್ರದೇಶಗಳಲ್ಲೂ ನಾಗಪೂಜೆ ಸಂಪ್ರದಾಯವನ್ನು ಕಾಣುತ್ತೇವೆ. ಆದರೆ ಪಶ್ಚಿಮ ಕರಾವಳಿ(ತುಳುನಾಡು)ಯಲ್ಲಿರುವಷ್ಟು ಆಚರಣೆಗಳು, ದೇವಾಲಯಗಳು, ಸಂಪ್ರದಾಯ-ನಂಬಿಕೆಗಳು, ಪೂಜೆ-ಹರಕೆ-ಆರಾಧನೆಗಳು ಇತರೆಡೆಗಳಲ್ಲಿ ಕಂಡುಬರುವುದಿಲ್ಲ. ಪ್ರಸ್ತುತ ತುಳುನಾಡಿನಲ್ಲಿರುವ ನಾಗಾರಾಧನೆಯ ಸಂಕ್ಷಿಪ್ತ ರೂಪಗಳನ್ನು ನೋಡೋಣ.

ಕಾಡ್ಯನಾಟ

ಕುಂದಾಪುರ ತಾಲೂಕಿನ ಪರಿಶಿಷ್ಟ ಪಂಗಡಕ್ಕೆ ಸೇರಿದ ಮೇರರು ಸಾಮಾನ್ಯವಾಗಿ ಪಗ್ಗು – ಬೇಸು (ಮಾರ್ಚ್ – ಏಪ್ರಿಲ್) ತಿಂಗಳಲ್ಲಿ ನಡೆಸುವ ನಾಲ್ಕು ರಾತ್ರಿ ಮೂರು ಹಗಲುಗಳ ಸುದೀರ್ಘ ಸಮಯದ ಕಾಳಿಂಗನ ಆರಾಧನೆಯೇ ಕಾಡ್ಯನಾಟ. ‘ಕಾಡ್ಯ’ನೆಂದರೆ ಕಾಳಿಂಗ ಸರ್ಪ (ತುಳು: ಸಂಕಪಾಲ). ಮೇರರು ವಾಸವಾಗಿರುವ ಪ್ರದೇಶಗಳ ಹತ್ತಿರದಲ್ಲಿಯೇ ಕಾಡ್ಯನ ಆರಾಧನಾ ಕೇಂದ್ರಗಳಾದ  ‘ಕಾಡ್ಯನ ಮನೆ’ಗಳನ್ನು ಕಾಣಬಹುದು. ಪ್ರಕೃತಿಯ ಮಡಿಲಲ್ಲಿ ಹುತ್ತವನ್ನು ಸೇರಿಕೊಂಡಿರುವ ಕಾಡ್ಯನ ಮನೆ ಇತರೆ ಹಲವಾರು ದೈವಗಳಿಗೂ ಆವಾಸಸ್ಥಾನ. ಸ್ವಾಮಿ, ಬ್ರಹ್ಮ, ಉಮ್ಮಳ್ತಿ, ಬೊಬ್ಬರ್ಯ, ಜಟ್ಟಿಗ, ಗಾಮ, ಯಕ್ಷಿ, ಕಲ್ಕುಡ, ನೆತ್ತರ್ ಹಾಯ್ಗುಳಿ ಮತ್ತು ಕಾನ್ ಪಂಜುರ್ಲಿ ಇತ್ಯಾದಿ ದೈವಗಳು ಇಲ್ಲಿವೆ. ಹಾಗಾಗಿ ಕಾಡ್ಯನ ಮನೆಯನ್ನು ಕಾಡ್ಯನೇ ಪ್ರಧಾನವಾಗಿರುವ ಇತರೆ ದೈವಗಳ ಸಂಕೀರ್ಣ ಆರಾಧನಾಲಯ ಎಂದು ಹೇಳಲಾಗಿದೆ.

ನಾಲ್ಕು ಕಂಬಗಳ ಹುಲ್ಲಿನ ಛಾವಣಿಯನ್ನು ಹೊಂದಿರುವ ಸರಳ ಆವಾಸ. ಮಧ್ಯೆ ಬೃಹದಾಕಾರವಾಗಿ ಬೆಳೆದ ಹುತ್ತವಿದ್ದು, ಅದರ ಬುಡದಲ್ಲಿ ನಾಗನಕಲ್ಲು ಮತ್ತು ಸರ್ಪಗಳ ಉಬ್ಬು ಚಿತ್ರಗಳನ್ನು ಒಳಗೊಂಡ ವಿವಿಧಾಕೃತಿಯ ಮಣ್ಣಿನ ಕುಂಭಗಳಿರುತ್ತವೆ. ಪ್ರತಿಯೊಂದು ಕುಂಭ(ಕಲಶ)ಗಳಲ್ಲಿ ಹನ್ನೊಂದು ಸಂಖ್ಯೆಯ ಸರ್ಪನ ಆಕೃತಿಯಿರುತ್ತವೆ.

ಕಾಡ್ಯನಾಟ ಶನಿವಾರ ರಾತ್ರಿಯಿಂದ ಆರಂಭಗೊಂಡು ಮಂಗಳವಾರ ಮಧ್ಯರಾತ್ರಿಯ ತನಕ ನಿರಂತರವಾಗಿ ದೀರ್ಘಕಾಲ ನಡೆಯುವ ಆಚರಣೆ. ವಿವಿಧ ವಿಧಿಕ್ರಿಯಾ ಕಾರ್ಯಗಳಲ್ಲಿ ಇತರೆ ಜಾತಿಯವರನ್ನು ಸಾಂಕೇತಿಕವಾಗಿ ತಮ್ಮಲ್ಲೇ ಆಯ್ಕೆ ಮಾಡಿಕೊಳ್ಳುತ್ತಾರೆ. ಬೈದ್ಯ, ಪಾತ್ರಿ, ಯಜಮಾನರ ಯಜಮಾನಿಕೆಯಲ್ಲಿ ಎಲ್ಲಾ ವಿಧಿಯಾಚರಣೆಗಳು ನೆರವೇರುತ್ತವೆ. ಸೂರ್ಯ, ಚಂದ್ರ, ನಕ್ಷತ್ರ, ಕಮಲದ ಹೂ, ಹೊನ್ನರಳಿ, ಸರ್ಪ, ಚೆನ್ನೆಮಣೆ, ಗಣಪತಿ, ಡೋಲು, ದೋಣಿ ಇತ್ಯಾದಿ ಪಂಚವರ್ಣದಲ್ಲಿ ಚಿತ್ರಗಳನ್ನು ಮಂಡಲದಲ್ಲಿ ರಚಿಸುತ್ತಾರೆ. ಮಂಡಲದ ಮಧ್ಯದಲ್ಲಿ ತಮ್ಮ ಸಮುದಾಯದ ಮೂಲಸ್ತ್ರೀ ಎಂದು ಹೇಳಲಾಗುವ ‘ಹೊನ್ನಿ’ಯ ಸಂಕೇತವಾಗಿ ಓರ್ವ ಸ್ತ್ರೀಯನ್ನು ನಿಲ್ಲಿಸಿ ಬೈದ್ಯನು ಅಕ್ಕಿಕಾಳನ್ನು ಹಾಕುವ ಮೂಲಕ ಕಾಡ್ಯನಾಟವನ್ನು ಯಾವುದೇ ತಾಪತ್ರಯಗಳಿಲ್ಲದಂತೆ ನಡೆಸಿಕೊಡಬೇಕೆಂದು ಅರಿಕೆ ಮಾಡಿಕೊಳ್ಳುತ್ತಾನೆ. ಮೊದಲ ದಿನ ಗುರುಶಾಸ್ತ್ರವಾದರೆ ಎರಡನೆ ದಿನ ಬ್ರಾಹ್ಮಣ ಕೋಲ, ಮಂಡಲ ರಚನೆ ಇತ್ಯಾದಿ ವಿಧಿವಿಧಾನಗಳು ನಡೆಯುತ್ತವೆ. ಮೂರನೆ ದಿನ ಹಿಡ್ಗಾಯಿ ಹಾಕುವುದು, ಅಂಜೋಡಿ ಆಡುವುದು, ಕೊರಗ ಕೋಲ, ದಾಸರ ಕೋಲ, ಹುಲಿ-ಹಂದಿ ಕೋಲ, ಜ್ವರದ ಕೋಲ ಮತ್ತು ಜಕ್ಕಿಣಿಯರ ಕುಣಿತ ಇತ್ಯಾದಿ ಆಚರಣೆಗಳು ಜರುಗುತ್ತವೆ. ನಾಲ್ಕನೆ ದಿನ ಕುದುರೆ ಕೋಲ, ಪೊಟ್ಲ ಆಡುವುದು ಮತ್ತು ಭೂತ ಬಲಿ.

ಮುಗ್ಗೇರರ ನಾಗರಪಂಚಮಿ

ಉಡುಪಿ ತಾಲೂಕಿನ ಪರಿಶಿಷ್ಟ ಜಾತಿಗೆ ಸೇರಿದ ಮುಗ್ಗೇರರು ಮೂಲಸ್ಥಾನದಲ್ಲಿರುವ ನಾಗನಿಗೆ ಪಗ್ಗು(ಏಪ್ರಿಲ್ ೧೪)ವಿನ ಆರಂಭದಲ್ಲಿ ಸಲ್ಲಿಸುವ ಪೂಜೆಯೇ ನಾಗರಪಂಚಮಿ. ವರ್ಷದಲ್ಲಿ ಒಂದು ಸಾರಿ ಕುಟುಂಬಸ್ಥರೆಲ್ಲರೂ ನಾಗಬನದಲ್ಲಿರುವ ನಾಗಪ್ರತಿಮೆಗಳಿಗೆ(ನಾಗಮೂರ್ತಿ) ‘ತನು’ ಮತ್ತು ‘ತಬಲ’ವನ್ನು ಅರ್ಪಿಸುತ್ತಾರೆ. ಹಾಲು, ಎಳನೀರು ಮತ್ತು ನೀರು ಎರೆಯುವುದನ್ನು ತನು ಅರ್ಪಣೆ ಎಂದು ಕರೆಯಲಾಗುತ್ತದೆ.

ಸರ್ಪಕೋಲ

ಕಾಸರಗೋಡು ಪರಿಸರದ ಹರಿಜನ ಪಂಗಡಕ್ಕೆ ಸೇರಿದ ಬೈಲ ಬಾಕುಡರು ಕುಲದೈವವಾಗಿ ನಾಗನನ್ನು ಪೂಜಿಸಿಕೊಂಡು ಬರುತ್ತಾರೆ. ತಮ್ಮ ಮನೆಗಳ ಹತ್ತಿರ ನಾಗನ ಆರಾಧನಾ ಕಾರಣಾರ್ಥ ಅನೇಕ ನಾಗಬನಗಳಿವೆ. ಪ್ರತಿವರ್ಷ ಬೆರ್ಮೆರೆ ಸೇವೆ, ಬೆರ್ಮೆರೆ ನಲಿಕೆ ಮತ್ತು ಸರ್ಪಕೋಲಗಳೆಂದು ಕರೆಯಲ್ಪಡುವ ಆಚರಣೆಗಳನ್ನು ‘ನಲಿಕೆ’ ಅಥವಾ ‘ಕೋಪಾಳ’ರ ಮೂಲಕ ಆಚರಿಸುತ್ತಾರೆ.

ಸಂಕಪಾಲ(ಕಾಳಿಂಗ ಸರ್ಪ)ನಿಗೆ ಏಳು ನೂರ ಎಪ್ಪತ್ತೇಳು ಹೆಡೆಯಿದೆ ಎಂಬ ನಂಬಿಕೆಯಿದೆ. ಸರ್ಪಕೋಲದ ಸಂದರ್ಭದಲ್ಲಿ ದೈವಮಾಧ್ಯಮ ಶಂಕುವಿನಾಕಾರದ ಅಡಿಕೆ ಹಾಳೆಯ ಬೃಹದಾಕಾರದ ‘ಮುಡಿ’ಯನ್ನು ಧರಿಸುತ್ತಾನೆ. ಏಳು ನೂರ ಎಪ್ಪತ್ತೇಳು ಹೆಡೆಗಳನ್ನು ಇದು ಸಂಕೇತಿಸುತ್ತದೆ. ಬೃಹದಾಕಾರವಾಗಿರುವ ಕಾರಣ ದೈವಮಾಧ್ಯಮ ಕೋಪಾಳನ ಎಡ-ಬಲದಲ್ಲಿ ಸಹಾಯಕರಿರುತ್ತಾರೆ. ಸಾಮಾನ್ಯವಾಗಿ ಗದ್ದೆಯಲ್ಲಿ ಸರ್ಪಕೋಲ ನಡೆಯುತ್ತದೆ. ಅಂದು ಸಂಕಪಾಲನಿಗೆ ದಾರಿಯಾಗಿ ಗದ್ದೆಯ ಕಸಕಡ್ಡಿಗಳನ್ನು ಸರಿಸಿ ಸ್ವಚ್ಛಗೊಳಿಸಲಾಗುತ್ತದೆ. ‘ಕುಕ್ಕಿಂಬಿಲ’ ಎನ್ನುವ ಆಳೆತ್ತರದ ಮಾವಿನ ಹಸಿಕೊಂಬೆಗಳನ್ನು ಗದ್ದೆಯಲ್ಲಿ ಅಲ್ಲಲ್ಲಿ ಹುಗಿದಿರುತ್ತಾರೆ. ದೈವಮಾಧ್ಯಮನ ದೇಹಕ್ಕೆ ಕಾಳಿಂಗಸರ್ಪ ಆವಾಹನೆಯಾಗಿ ಹಾವಿನಂತೆ ಹರಿದಾಡುತ್ತಾ ‘ಕುಕ್ಕಿಂಬಿಲ’ಕ್ಕೆ ಹೋಗುತ್ತಾನೆ. ಬ್ರಾಹ್ಮಣ ಮಂತ್ರವಾದಿಯೊಬ್ಬ ಅದರ ಜೊತೆಗಿದ್ದು, ದೈವಮಾಧ್ಯಮ ಕುಕ್ಕಿಂಬಿಲದಲ್ಲಿ ಮಲಗಿಕೊಂಡಿರುವಾಗ ಮಂತ್ರವಾದಿ ಮಾವಿನ ಸೊಪ್ಪನ್ನು ಅದರ ಮೇಲೆ ಎಸೆಯುತ್ತಾನೆ. ದೈವಮಾಧ್ಯಮ ಸಿಟ್ಟಿನಿಂದ ಹಾವಿನಂತೆ ಬುಸುಗುಡುತ್ತದೆ. ಹೆಡೆಯೆತ್ತುವ ರೀತಿಯಲ್ಲಿ ಹೂಂಕರಿಸುತ್ತಾ ಮತ್ತೊಂದು ಕುಕ್ಕಿಂಬಲಕ್ಕೆ ಹೋಗುತ್ತದೆ. ಹಾಡು, ಹಾಸ್ಯಪ್ರಧಾನ ಸಂಭಾಷಣೆಗಳಿಂದ ಕೂಡಿದ ಸರ್ಪಕೋಲ ಒಂದು ಪೂರ್ತಿ ರಾತ್ರಿಯ ಆಚರಣೆ.

ಡಕ್ಕೆ ಬಲಿ

ಡಕ್ಕೆ ಬಲಿ ಬ್ರಹ್ಮಸ್ಥಾನಗಳಲ್ಲಿ ಅಥವಾ ಆಲಡೆಗಳಲ್ಲಿ ವಾರ್ಷಿಕ ಪೂಜೆಯಾಗಿ ಹಾಗೂ ಹರಕೆಯ ರೂಪದಲ್ಲಿ ಸುಮಾರು ಎಡರಿಂದ ಮೂರು ಗಂಟೆಗಳ ಅವಧಿಯಲ್ಲಿ ನಡೆಯುವ ನಾಗಸಂಬಂಧಿ ಆಚರಣೆ. ಇದನ್ನು ದಕ್ಕೆಬಲಿ, ಜಕ್ಕೆಬಲಿ ಎಂದೂ ಕರೆಯಲಾಗುತ್ತದೆ. ಡಕ್ಕೆ ಬಲಿ ಆಚರಣೆಯನ್ನು ಬ್ರಾಹ್ಮಣ – ವೈದ್ಯರು, ಪಾಣಾರರೂ ನಡೆಸುತ್ತಾರೆ. ಮಧ್ಯರಾತ್ರಿಯಿಂದ ಆರಂಭವಾಗುವ ಡಕ್ಕೆಬಲಿಯಲ್ಲಿ ಪಾಣಾರರು ಆಯತಾಕಾರದ ಚಿಕ್ಕಗಾತ್ರದ ಮಂಡಲವನ್ನು ಬರೆಯುತ್ತಾರೆ. ಬಿಳಿ, ಕೆಂಪು, ಅರಿಶಿಣ ಮತ್ತು ಜಂಗಮ ಸೊಪ್ಪಿನ ಹಸಿರು ಹುಡಿಗಳನ್ನು ಮಂಡಲ ಬರೆಯಲು ಬಳಸುತ್ತಾರೆ. ಮಂಡಲದಲ್ಲಿ ಸ್ವಸ್ತಿಕ, ಅಕ್ಕಿ-ತೆಂಗಿನಕಾಯಿಯ ಸುತ್ತಿಗೆ (ತುಳು : ಸುತ್ಯೆ), ಇರಿಸಿ ಕಾಲುದೀಪ ಬೆಳಗಿಸಲಾಗುತ್ತದೆ. ಅಡಿಕೆ ಹೂ (ಹಿಂಗಾರ) ಮತ್ತು ಇತರೆ ಹೂಗಳಿಂದ ಮಂಡಲವನ್ನು ಅಲಂಕರಿಸಲಾಗುತ್ತದೆ. ನಾಗಪಾತ್ರಿ, ಅರ್ಧನಾರೀಶ್ವರ ಮತ್ತು ತಾಳಧಾರಿ – ಹೀಗೆ ಪ್ರಮುಖ ಮೂವರು ಡಕ್ಕೆ ಬಲಿ ನರ್ತಕರಿರುತ್ತಾರೆ.

ಹಿಮ್ಮೇಳದವರ ತೆಂಬರೆ, ಜಾಗಟೆಯ ಬಾರಿಸುವಿಕೆಗೆ ಅರ್ಧನಾರೀಶ್ವರ ಮತ್ತು ಪಾತ್ರಿಗೆ ಆವೇಶವುಂಟಾಗುತ್ತದೆ. ಅರ್ಧನಾರೀಶ್ವರನ ನಾಗ, ಸ್ವಾಮಿ ಮತ್ತು ದೈವದ ಹೊಗಳಿಗೆಗಳನ್ನು ಇತರರು ಪುನರುಚ್ಚರಿಸುತ್ತಾರೆ. ಜೊತೆಗೆ ಆವೇಶಭರಿತ ಕುಣಿತವೂ ಮುಂದುವರಿಯುತ್ತದೆ. ತಮ್ಮ ಕೈಯಲ್ಲಿರುವ ಹಿಂಗಾರವನ್ನು ಮುಖ, ಮೈಗೆ ತಿಕ್ಕಿಕೊಳ್ಳುತ್ತಾರೆ. ಈ ರೀತಿಯ ನರ್ತನ  ಮಧ್ಯರಾತ್ರಿಯಿಂದ ಬೆಳಗಿನ ಸಮಯದವರೆಗೂ ಮುಂದುವರೆಯುತ್ತದೆ. ಬಳಿಕ ಮಂಗಳಾರತಿ ನಡೆದು ನರ್ತನಗಾರರು ಭಕ್ತರಿಗೆ ಅಭಯ ನೀಡಿ ಪ್ರಸಾದ ವಿತರಣೆ ಮಾಡುತ್ತಾರೆ. ಬ್ರಾಹ್ಮಣ-ವೈದ್ಯರ ಡಕ್ಕೆಬಲ ಪಾಣಾರರು ನಡೆಸುವ ಡಕ್ಕೆಬಲಿಗಿಂತ ಭಿನ್ನವಾಗಿದೆ.

ನಾಗಮಂಡಲ 

ನಾಗಮಂಡಲ ಕುಣಿತ ಪ್ರಧಾನವಾದ ನಾಗಸಂಬಂಧಿ ಆಚರಣೆ. ಡಕ್ಕೆಬಲಿಯ ವಿಸ್ತೃತ ಹಾಗೂ ವೈಭವಕೃತ ರೂಪವೇ ನಾಗಮಂಡಲವೆಂದು ಬಹುತೇಕ ವಿದ್ವಾಂಸರ ವಾದ. ತುಳುನಾಡಿನಲ್ಲಿ ಇಂದು ನಡೆಯುವ ಬಹುತೇಕ ನಾಗಮಂಡಲ ಆಚರಣೆಯ ವಿಧಿ-ವಿಧಾನಗಳನ್ನು ನಡೆಸುವವರು ಬ್ರಾಹ್ಮಣರಲ್ಲಿನ ವೈದ್ಯ ಕುಲದವರು. ನಾಗಮಂಡಲದಲ್ಲೊ ಪೂರ್ಣಮಂಡಲ, ಅರ್ಧಮಂಡಲ, ಕಾಲುಮಂಡಲ ಎಂಬ ಪ್ರಭೇದಗಳನ್ನು ಕಾಣಬಹುದು. ಪೂರ್ಣಮಂಡಲದಲ್ಲಿ ಹದಿನಾರು ‘ಪವಿತ್ರ’ಗಳಿಂದ ಕೂಡಿದ ಸರ್ಪಾಕೃತಿಯನ್ನು ಪಂಚವರ್ಣಗಳಿಂದ ಚಿತ್ರಿಸುತ್ತಾರೆ. ವಿವಿಧ ಹೂಗಳಿಂದ ಮತ್ತು ಹಿಂಗಾರದ ರಾಶಿಯಿಂದ ಮಂಡಲ ಅಲಂಕೃತಗೊಂಡರೆ, ಹೂ, ಹಣ್ಣು, ಸೀಯಾಳ, ಹಣ್ಣಡಿಕೆ ಮತ್ತು ವೀಳ್ಯದೆಲೆಗಳಿಂದ ಇಡೀ ಚಪ್ಪರವನ್ನು ಶೃಂಗರಿಸುತ್ತಾರೆ. ಮಂಡಲದಲ್ಲಿ ಚಿತ್ರಿತ ಹಾವುಗಳು ಒಂದಕ್ಕೊಂದು ಗಂಟು ಹಾಕಿಕೊಂಡಿದ್ದು ನೋಡಲು ಅತ್ಯಾಕರ್ಷಕವಾಗಿರುತ್ತದೆ.

ನಾಗಪಾತ್ರಿ ಮತ್ತು ಅರ್ಧನಾರೀಶ್ವರ ಪಾತ್ರಧಾರಿಗಳು ಪರಸ್ಪರ ಪ್ರಮಾಣವನ್ನು ವ್ಯಕ್ತಪಡಿಸುತ್ತಾ ನರ್ತಿಸುತ್ತಾರೆ. ಸಂದರ್ಭನುಸಾರ ಪ್ರಣಯ, ಕೋಪ ಇತ್ಯಾದಿ ಹಾವಭಾವಗಳು ಪ್ರದರ್ಶಿತವಾಗುತ್ತವೆ. ಮಂಡಲದ ಸತ್ತ ರಾಶಿ ಹಾಕಿರುವ ಹಿಂಗಾರವನ್ನೆತ್ತಿಕೊಂಡು ನಾಗಪಾತ್ರಿ ತನ್ನ ಮುಖ-ಮೈಗೆ ಉಜ್ಜಿಕೊಂಡು, ಹಿಸುಕಿಕೊಂಡು ಶರೀರವನ್ನು ಹಾವಿನಂತೆ ಬಳುಕಿಸಿ ಕುಣಿಯುವ ದೃಶ್ಯವನ್ನು ನಾವು ಕಾಣಬಹುದು. ನಾಗನೃತ್ಯದ ನಂತರ ನಾಗಪಾತ್ರಿಯು ಅಭಯ ವಾಕ್ಯ, ಭಕ್ತರ ನಿವೇದನೆಗಳಿಗೆ ಸಮಾಧಾನ, ಪರಿಹಾರಗಳನ್ನು ನೀಡುತ್ತಾನೆ.

ತುಳುನಾಡಿನ ಉತ್ತರಭಾಗದಲ್ಲಿ ವ್ಯಾಪಕವಾಗಿ ಪ್ರಚಲಿತದಲ್ಲಿದ್ದ ನಾಗಮಂದಲ ಇತ್ತೀಚಿನ ದಿನಗಳಲ್ಲಿ ದಕ್ಷಿಣ ಭಾಗಕ್ಕೂ ವ್ಯಾಪಿಸಿದೆ. ಒಂದು ದಿನದ ನಾಗಮಂಡಲ ನಡೆಸಲು ಲಕ್ಷಾಂತರ ಹಣ ವೆಚ್ಚವಾಗುತ್ತದೆ. ನೂರಾರು-ಸಾವಿರಾರು ಅಡಿಕೆ ಹಿಂಗಾರದ ಗೊಂಚಲು ಬೇಕಾಗುತ್ತದೆ. ದಿನದಿಂದ ದಿನಕ್ಕೆ ವೈಭವೀಕರಣವನ್ನು ಹೆಚ್ಚಿಸುತ್ತಾ ಹೋಗುತ್ತಿದೆ ನಾಗಮಂಡಲ.

ಪಾಣಾರಾಟ  

ಕುಂದಾಪುರದ ಕನ್ನಡ ಭಾಷಿಕ ಪ್ರದೇಶದಲ್ಲಿ ಪಾಣಾರ ಸಮುದಾಯದವರ ನಾಗಾರಾಧನೆಯನ್ನು ಪಾಣಾರಾಟ ಅಥವಾ ಸ್ವಾಮಿ ಆರಾಧನೆ ಎಂದು ಕರೆಯುತ್ತಾರೆ. ಬಂಟರು (ನಾಡವರು) ಕೂಡ ನಾಗರೂಪಿ ಸ್ವಾಮಿಯನ್ನು ತಮ್ಮ ಮನೆದೈವವೆಂದು ನಂಬುತ್ತಾರೆ. ಪಾಣಾರಾಟ ಗ್ರಾಮದ ಗುಡಿಗಳಲ್ಲಿ ವಾರ್ಷಿಕ ಜಾತ್ರೆಯಾಗಿ ಮೂರರಿಂದ ಎಂಟು ದಿನಗಳವರೆಗೆ ನಡೆಯುತ್ತದೆ. ಮಂಡಲ ಚಿತ್ತಾರದ ಸುತ್ತ ನಾಗನನ್ನು ಕುರಿತು ಹೊಗಳಿಕೆಯನ್ನು ಕುಣಿತದೊಂದಿಗೆ ಹಾಡಲಾಗುತ್ತದೆ. ಆಚರಣೆಯಲ್ಲಿ ಪುರುಷದಲ್ಲದೇ ಪಾಣಾರ ಸಮುದಾಯದ ಮಹಿಳೆಯರೂ ಭಾಗವಹಿಸುತ್ತಾರೆ. ದೈವದ ಮನೆಗಳಲ್ಲಿರುವ ‘ಉರು’ಗಳಿಗೆ ಪೂಜೆ ಸಲ್ಲಿಸುವ ಮೂಲಕ ಆರಾಧನಾ ಕಾರ್ಯಕ್ರಮ ಪ್ರಾರಂಭವಾಗುತ್ತದೆ. ತೆಂಬರೆ ನುಡಿಸುತ್ತಾ ಪ್ರಾರ್ಥನೆ ಹಾಡುವ ಕಾರ್ಯ ಪಾಣಾರ ಮಹಿಳೆಯರದ್ದು. ಈ ಸಂದರ್ಭದಲ್ಲಿ ವಿಧಿಯಾಚರಣೆಯಂತೆ ಹಲವಾರು ದೈವಗಳಿಗೆ ಕೋಲ ಸಂಪ್ರದಾಯ ನಡೆಯುತ್ತದೆ. ದೈವಾವೇಶಗೊಂಡ ವ್ಯಕ್ತಿ ಕುಣಿಯುತ್ತ ತನ್ನ ಹುಟ್ಟು, ಸಾಧನೆ, ಪಡೆದ ಉಪಚಾರಕ್ಕೆ ಸಂತೃಪ್ತಿಯನ್ನು ನುಡಿಗಟ್ಟುಗಳ ಮೂಲಕ ನೀಡುತ್ತಾನೆ. ಇನ್ನಿತರ ಸಾಂಪ್ರದಾಯಿಕ ವಿಧಿ ಆಚರಣೆಗಳೊಂದಿಗೆ ಎರಡು – ಮೂರು ಗಂಟೆಗಳ ಕಾಲಾವಧಿಯ ಸ್ವಾಮಿ ಆರಾಧನೆ ಕೊನೆಗೊಳ್ಳುತ್ತದೆ.

ಬಂಟರು ಮನೆದೈವ ಸ್ವಾಮಿಗೆ ಪ್ರತಿನಿತ್ಯ ದೀಪ ಹಚ್ಚಿ ನೀರಿಡುವ ಸಂಪ್ರದಾಯವನ್ನಿಟ್ಟುಕೊಂಡಿದ್ದಾರೆ. ಮನೆತನದ ಮಟ್ಟದಲ್ಲಿ ವಾರ್ಷಿಕವಾಗಿ ಪಾಣಾರರ ಮೂಲಕ ಆರಾಧನೆಯನ್ನು ನಡೆಸುತ್ತಾರೆ.

ನಾಗಪಂಚಮಿ

ಶ್ರಾವಣ ಮಾಸದ ಶುಕ್ಲ ಪಂಚಮಿಯಂದು ದೇಶದಾದ್ಯಂತ ನಾಗಪೂಜೆ ನಡೆಯುವಂತೆ ತುಳುನಾಡಿನ ನಾಗಗುಡಿ, ನಾಗಬನಗಳಲ್ಲಿನ ನಾಗಕಲ್ಲುಗಳಿಗೆ ಪೂಜೆ ಸಲ್ಲುತ್ತದೆ. ಆ ದಿನ ನಾಗಕಲ್ಲುಗಳಿರುವ ಪರಿಸರವನ್ನು ಶುಚಿಗೊಳಿಸಿ ನಾಗಮೂರ್ತಿಗಳನ್ನು ತೊಳೆದು ಅರಿಶಿಣ, ಸಕ್ಕರೆ, ಹಾಲು, ಎಳನೀರು ಮತ್ತು ಜೇನುತುಪ್ಪದಿಂದ ಅಭಿಷೇಕ ಮಾಡುತ್ತಾರೆ. ಈ ಸಂದರ್ಭದಲ್ಲಿ ‘ನಾಗತಂಬಿಲ’ವೂ ನಡೆಯುತ್ತದೆ. ಹೊದ್ಲು, ಎಳನೀರು, ಕಾಯಿ, ಬೆಲ್ಲ ಮತ್ತು ಬಾಳೆಹಣ್ಣು ಇತ್ಯಾದಿಗಳನ್ನು ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ನಾಗನಿಗೆ ಇಷ್ಟವೆಂದು ಹೇಳಲಾಗುವ ಕೇದಗೆ, ಮಲ್ಲಿಗೆ, ಸಂಪಿಗೆ, ಸೇವಂತಿಗೆ, ಹಿಂಗಾರಗಳಿಂದ ನಾಗನನ್ನು ಅಲಂಕರಿಸಿ ಆರತಿ ಬೆಳಗುತ್ತಾರೆ.

ಆಶ್ಲೇಷಾ ಬಲಿ

ಚತುವರ್ಣಗಳಿಂದ ರಂಗೋಲಿ ಬರೆದು ಅದರಲ್ಲಿ ಅಷ್ಟನಾಗರನ್ನು ವೈದಿಕ ಮಂತ್ರ ಪೂರ್ವಕವಾಗಿ ಆವಾಹಿಸಿ ಅನ್ನದ ಬಲಿ ಸಮರ್ಪಿಸುವುದೆ ಆಶ್ಲೇಷ ಬಲಿ, ಚಕ್ರವರ್ತಿ ಜನಮೇಜಯನ ಸರ್ಪಯಾಗದಲ್ಲಿ ಸತ್ತ ಸರ್ಪಗಳ ಹತ್ಯೆಯ ಪ್ರಾಯಶ್ಚಿತಕ್ಕಾಗಿ ವೈದಿಕ ವಿಧಿವಿಧಾನದಲ್ಲಿ ಈ ಆಚರಣೆಯನ್ನು ನಡೆಸಲಾಗುತ್ತದೆ. ಆಶ್ಲೇಷಾ ನಕ್ಷತ್ರದ ದಿನ ನಡೆಸಲಾಗುತ್ತದೆ. ಸಾಮಾನ್ಯವಾಗಿ ಆಶ್ಲೇಷ ಬಲಿಯಲ್ಲಿ ತಿಲಹೋಮ, ಕೂಷ್ಮಾಂಡ ಹೋಮ ಮತ್ತು ಪರಮಾನ ಹೋಮಗಳನ್ನು ನಡೆಸುತ್ತಾರೆ.

ನಾಗಕೋಲ

ಪಾಣಾರಾದ ಸಂದರ್ಭದಲ್ಲಿನ ಒಂದು ಸಣ್ಣ ಆಚರಣಾ ವಿಧಿಯೇ ನಾಗಕೋಲ. ಸಾಮಾನ್ಯವಾಗಿ ನಾಗಕೋಲ ಪಾಣಾರಾಟದ ಒಂದು ಭಾಗ. ನಾಗಬನದಲ್ಲಿ ನಾಗನಿಗೆ ತಂಬಿಲ ಸಲ್ಲಿಸಿದ ನಂತರ ನಾಗಕೋಲ ನಡೆಯುತ್ತದೆ. ಅರ್ಧನಾರಿ ವೇಷಧಾರಿ ನಾಗನ ಹೊಗಳಿಕೆ ಹೇಳುತ್ತಾ ಸರಳವಾಗಿ ರಚಿಸಿದ ಮಂಡಲದ ಸುತ್ತ ಪ್ರದಕ್ಷಿಣೆ ಹಾಕುತ್ತಾನೆ. ಈತನ ಜೊತೆಗೆ ನಾಗಪಾತ್ರಿಯೂ ಹೆಜ್ಜೆ ಹಾಕುತ್ತಾನೆ. ನಾಗಪಾತ್ರಿಯು ತಲೆಗೆ ನಾಗನ ಹೆಡೆಯನ್ನು ಹೋಲುವ ಅಡಿಕೆ ಹಾಳೆಯ ಕಿರೀಟವನ್ನು ಧರಿಸಿರುತ್ತಾನೆ. ಅರ್ಚಕ ವೀಳ್ಯ ಕೊಟ್ಟು ನಾಗಕೋಲ ನಡೆಸಲು ಅನುಮತಿ ನೀಡುತ್ತಾನೆ. ಹಿಮ್ಮೇಳದೊಂದಿಗೆ ಸಹಗರ್ತಿಗಳ ಹಾಡು ಆರಂಭವಾಗುವಾಗ ನಾಗವರ್ತನವೂ ನಡೆಯುತ್ತದೆ. ತದನಂತರದಲ್ಲಿ ಭಕ್ತರಿಗೆ ಅಭಯ ನೀಡಿಕೆ ಮತ್ತು ಪ್ರಸಾದ ವಿತರಣೆಯಾಗುತ್ತದೆ.

ಬೆರ್ಮೆರೆ ಸೇವೆ

ಕಾಸರಗೋಡು ಪರಿಸರದ ಬಾಕುಡರಲ್ಲಿ ‘ಬೆರ್ಮೆರೆ ಸೇವೆ’ ಆರಾಧನೆ ಪ್ರಚಲಿತದಲ್ಲಿದೆ. ತಮ್ಮ ಕುಲದೈವರಾದ ನಾಗಬೆರ್ಮರಿಗೆ ಬಾಕುಡ ಹೆಂಗಸರು ವಿಶೇಷವಾದ ಸೇವೆ ಸಲ್ಲಿಸುತ್ತಾರೆ. ಒಂದು ಕುಡ್ತೆ ಎಣ್ಣೆ, ಅರ್ಧ ಸೇರು ಅಕ್ಕಿ ಮತ್ತು ವೀಳ್ಯದೆಲೆಗಳನ್ನು ನಾಗಬೆರ್ಮರಿಗೆ ಅರ್ಪಿಸುವುದನ್ನು ‘ಬೆರ್ಮರೆ ಸೇವೆ’ ಎಂದು ಕರೆಯುತ್ತಾರೆ.

ಸರ್ಪದೋಷದಿಂದಾಗಿ ‘ಸರ್ಪಸುತ್ತು’ ಎಂಬ ಚರ್ಮವ್ಯಾದಿ ಬರುತ್ತದೆ ಎಂಬ ನಂಬಿಕೆ ಇವರಲ್ಲಿದೆ. ಈ ದೋಷ ನಿವಾರಣೆಗಾಗಿ ಬೆರ್ಮೆರೆ ಸೇವೆಯನ್ನು ಹೆಂಗಸರು ಮಾಡುತ್ತಾರೆ. ಸಂತಾನ ಭಾಗ್ಯಕ್ಕೂ ಈ ಸೇವೆಯನ್ನು ಮಾಡುವುದಿದೆ.

ಕಂಚಿಲು ಸೇವೆ

ತುಳುನಾಡಿನಲ್ಲಿ ಸಾಮಾನ್ಯವಾಗಿ ಗರ್ಭಿಣಿ ಸ್ತ್ರೀಯರು ತಮ್ಮ ಸುಖ ಪ್ರಸವಕ್ಕಾಗಿ, ಮಗುವಿನ ಅಯುಷ್ಯ ಮತ್ತು ಆರೋಗ್ಯಕ್ಕಾಗಿ ಬ್ರಹ್ಮ ದೇವರಿಗೆ ‘ಕಂಚಿಲು ಸೇವೆ’ಯ ಹರಕೆ ಹೊತ್ತುಕೊಳ್ಳುತ್ತಾರೆ. ಈ ಹರಕೆ ಬಗ್ಗೆ ಕೋಟಿ ಚೆನ್ನಯ, ಕೋಟೆದ ಬಬ್ಬು ಪಾಡ್ದನಗಳಲ್ಲಿ ಉಲ್ಲೇಖವಾಗಿದೆ. ಕೋಟಿ ಚೆನ್ನಯರ ತಾಯಿ ದೇಯಿ ಬೈದೆತಿಯ ತನ್ನ ಕುಲದೇವರಾದ ಕೆಮ್ಮಲಜೆಯ ‘ನಾಗಬೆರ್ಮ’ನನ್ನು ನೆನೆದು ‘ತನ್ನ ಗರ್ಭ ಕಳೆದು ಸುಖ ಪ್ರಸವವಾದರೆ ಹೆತ್ತ ಮಗುವಿನಿಂದ ನಿಮ್ಮ ಭಂಡಾರಕ್ಕೆ ಕಂಚಿಲ್ ‘ಪುಂಡಿ ಪಣವು’ ಸಲ್ಲಿಸುತ್ತೇನೆ ಎಂಬ ಹರಕೆ ಹೊರುತ್ತಾಳೆ. ಇಂದೂ ಕೂಡ ಈ ಹರಕೆ ಸಂಪ್ರದಾಯ ಪ್ರಚಲಿತದಲ್ಲಿದೆ.

ಕದ್ರ್ ಹಬ್ಬ

ಉಡುಪಿ ಜಿಲ್ಲೆಯ ಮುಗ್ಗೇರ, ಪ್ರಾಣ, ಕೊರಗ, ಮೊಗವೀರ ಮತ್ತು ಬಂಟರು ತಮ್ಮದೇಯಾದ ನಾಗಬನಗಳನ್ನು ಹೊಂದಿದ್ದಾರೆ. ಪ್ರತಿಯೊಂದು ಗೋತ್ರ (ಬಳಿ) ದವರಿಗೂ ಪ್ರತ್ಯೇಕವಾದ ನಾಗಬನಗಳಿರುವುದನ್ನು ಕಾಣಬಹುದು. ಈ ನಾಗಬನಗಳನ್ನು ‘ಮೂಲದ ಮನೆ’, ‘ಹುಟ್ಟು’ ಎಂದು ಕರೆಯುತ್ತಾರೆ. ಮೂಲದ ಮನೆಯಲ್ಲಿ ಕದ್ರ್ ಹಬ್ಬ ಮತ್ತು ನಾಗತಂಬಿಲ, ತನು ಹಾಕುವುದನ್ನು ವಾರ್ಷಿಕವಾಗಿ ಎರಡು ಬಾರಿ ಆಚರಿಸುತ್ತಾರೆ. ನಾಡವರ ಮುಂದಾಳ್ತನದಲ್ಲಿ ನಡೆಯುವ ಈ ಆಚರಣೆಯ ಕೊನೆಗೆ ನಾಗಕೋಲ, ಪಾಣರಾಟ ನಡೆಯುತ್ತವೆ.

ಇವುಗಳಲ್ಲದೆ ಸರ್ಪಂಕಳ, ಮುನಿಸೇವೆ, ಸರ್ಪ ಸಂಸ್ಕಾರ, ನಾಗತಂಬಿಲ, ತನುತರ್ಪಣ ಇತ್ಯಾದಿ ನಾಗಸಂಬಂಧಿ ಆಚರಣೆಗಳು ಪ್ರತಿವರ್ಷ ಜರುಗುತ್ತವೆ. ಮರಾಟಿ ನಾಯ್ಕರ ಭೈರವ ಆರಾಧನೆಯ ಮೌಖಿಕ ಇತಿಹಾಸ, ನಂಬಿಕೆ ಮತ್ತು ಆರಾಧನಾ ವಿಧಾನಗಳನ್ನು ಗಮನಿಸಿದರೆ ಅದೂ ಕೂಡ ನಾಗಸಂಬಂಧಿ ಆಚರಣೆ ಎಂದು ಹೇಳಬೇಕು. ಸರ್ಪಂಕಳ ಆಚರಣೆಯನ್ನು ಮಂಜೇಶ್ವರ, ಉಳ್ಳಾಲ ಪ್ರದೇಶಗಳಲ್ಲೂ; ಮುನಿಸೇವೆಯನ್ನು ಕುಂದಾಪುರ ಭಾಗದಲ್ಲಿ ಕಾಣಬಹುದು. ಭೈರವಾಚರಣೆಯು ತುಳುನಾಡಿನ ದಕ್ಷಿಣ ಭಾಗದಲ್ಲಿ ಪ್ರಚಲಿತದಲ್ಲಿದೆ.

ಮರಾಟಿ ನಾಯ್ಕರ ಭೈರವ ಪೂಜೆ ನಾಗನಿಗೆ ಅಸುರ ಕ್ರಿಯೆಯ ಮೂಲಕ ಸಲ್ಲುತ್ತಿರುವುದು ವಿಶಿಷ್ಟವಾಗಿದೆ. ಜಾನಪದ ಸಂಸ್ಕೃತಿಯಲ್ಲಿ ನಾಗನು ಕ್ಷೇತ್ರಪಾಲ. ಮರಾಟಿ ನಾಯ್ಕರ ಮೌಖಿಕ ಇತಿಹಾಸವೂ ಕೂಡ ಭೈರವನು ನಾಗನ ಸಂಕೇತವೆಂದು ಹೇಳುತ್ತದೆ. ನಾಗಬನಗಳಂತೆಯೇ ಭೈರವ ಬನಗಳನ್ನು ಕಾಣುತ್ತೇವೆ. ಮೂಲ ನಾಗಬನಗಳಲ್ಲಿರುವ ನಿರಾಕಾರ ಕಲ್ಲುಗಳಂತೆ ಭೈರವ ಬನಗಳಲ್ಲಿ ಚಪ್ಪಟೆಯಾಕಾರದ ಒಂದೆರಡು ನಿರಾಕಾರ ಕಲ್ಲಿಗಳನ್ನು ಪ್ರತಿಷ್ಠಾಪಿಸಿರುತ್ತಾರೆ. ಅಸುರ ಕ್ರಿಯೆಯಲ್ಲಿ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಭೈರವ ದೈವನೂ ಹೌದು. ನಾಗನೂ ಹೌದು. ಕೆಲವೊಂದು ಬನಗಳಲ್ಲಿ ಭೈರವನೊಂದಿಗೆ ಗುಳಿಗ(ನಾಗ)ನೂ ಪೂಜೆಗೊಳ್ಳುತ್ತಾನೆ. ನಾಗನು ಮನೆಯ ಸುತ್ತಮುತ್ತ ಕಾಣಿಸಿಕೊಂಡರೆ ಅಶುದ್ಧಿಯಾಗಿದೆಯೆಂದು ನಂಬುತ್ತಾರೆ. “ನಾಗರಹಾವನ್ನೋ ಅದರ ಮೊಟ್ಟೆ, ವಾಸಸ್ಥಳ, ಬೀದಿ ಇತ್ಯಾದಿಗಳನ್ನು ಪೂಜಿಸಿದವರಿಗೆ ದೃಷ್ಟಿದೋಷ, ಕುಷ್ಟರೋಗ, ಸಂತಾನಕ್ಷಯಾದಿ ದೋಷ ತಟ್ಟುವುದೆಂಬ ನಂಬಿಕೆಯಿದೆ. ‘ಸರ್ಪಮತ್ಸರ’ ಎಂಬುದು ಪ್ರಸಿದ್ಧವೇ ಆಗಿದೆ. ಸಾಮಾನ್ಯವಾಗಿ ತಿಳಿದು ತಿಳಿದೂ ಯಾರೂ ನಾಗರಹಾವನ್ನು ಹಿಂಸಿಸುವುದಿಲ್ಲ. ಅದರ ಸಾನ್ನಿಧ್ಯ ಇರುವ ಸ್ಥಳದಲ್ಲಿ ಅಶುದ್ಧಿ ಮಾಡಲು ಅಂಜುತ್ತಾರೆ. ಅಶುದ್ಧಿಯಾದರೆ ಸರ್ಪ ಕಾಣಿಸಿಕೊಳ್ಳುವುದೆನ್ನುತ್ತಾರೆ. ನಾಗ ಪಾವಿತ್ರ್ಯದ ಸಂಕೇತವೆನಿಸಿದೆ” (ಅಮೃತ ಸೋಮೇಶ್ವರ, ೨೦೦೭ : ೧೮).

ತಮ್ಮ ಒಡೆತನದ ಜಮೀನನ್ನು ಭೈರವ ಸದಾ ಕಾಯುತ್ತಿರುತ್ತಾನೆ ಎಂಬ ನಂಬಿಕೆ ಮರಾಟಿ ನಾಯ್ಕರದು. ಇವರ ನಂಬಿಕೆಯ ಪ್ರಕಾರ ನಾಗ ಇಲ್ಲಿ ಕ್ಷೇತ್ರಪಾಲ. ತುಳುನಾಡಿನ ದಕ್ಷಿಣ ಭಾಗದಲ್ಲಿ ಆಚರಣೆಗೊಳ್ಳುತ್ತಿರುವ ಭೈರವ ಬನಗಳು ಯಾವುದೇ ರೀತಿಯ ಪ್ರಭಾವಕ್ಕೆ ಒಳಗಾಗಿಲ್ಲ. ಆದರೆ ಸರಳ ರೀತಿಯಲ್ಲಿ ನಡೆಯುವಂಥ ಪೂಜೆ ಇತ್ತೀಚೆಗೆ ಅದ್ದೂರಿತನ ಪಡೆದುಕೊಳ್ಳುತ್ತಿದೆ. ಬನಗಳು ಯಾವುದೇ ರೀತಿಯಲ್ಲಿ ಕಾಂಕ್ರೀಟಿಕರಣಗೊಂಡಿಲ್ಲ. ಅದ್ಧೂರಿತನ ಹೆಚ್ಚಾದಂತೆಲ್ಲಾ ಭಯ-ಭಕ್ತಿ-ನಂಬಿಕೆಗಳಲ್ಲಿ ಸಡಿಲತೆ ಅಥವಾ ತಾತ್ಸಾರ ಮನೋಭಾವಗಳು ನುಸುಳುವುದು ಸಹಜ. ಹಾಗಾಗಿ ಇಂಥ ಆಡಂಬರ, ಪರಿವರ್ತನೆಗಳು ಆಗದಿರಲಿ. ಪ್ರಕೃತಿ ಸಹಜ ಬನಗಳು ಇನ್ನೂ ಹೆಚ್ಚಾಗಲೀ ಎಂಬುದು ಎಲ್ಲರ ಆಶಯ.

ತುಳುನಾಡಿನ ದಕ್ಷಿಣ ಭಾಗದಲ್ಲಿ  ‘ಗುಳಿಗ’ ಅಥವಾ  ‘ಗುಳಿಕ’ ಜನಪ್ರಿಯ ದೈವ. “ಕುಳಿಕ ಎಂಬುದು ಅಷ್ಟನಾಗರಾಜರಲ್ಲಿ ಒಬ್ಬನ ಹೆಸರಾಗಿದೆ. ಹಾಗಾಗಿ ಗುಳಿಕನು ನಾಗಸ್ವರೂಪಿಯೂ ಅಹುದು. ಜ್ಯೋತಿಷ್ಯಶಾಸ್ತ್ರದಲ್ಲಿ ಸರ್ಪರೂಪಿ ಎಂದು ತಿಳಿಯುವುದುಂಟು – ರಾಹುವಿನಿಂದ ಒಡಗೂಡಿದ ಸಂಯುಕ್ತ ಶಕ್ತಿಗೆ ರಾಹುಗುಳಿಗ ಎನ್ನುತ್ತಾರೆ. ನಾಗನಿಗೆ ಬನಗಳಿರುವಂತೆಯೇ ಗುಳಿಗನಿಗೂ ಬನಗಳಿರುವುದುಂಟು. ಅಲ್ಲಿ ಗುಳಿಗನ ಕಲ್ಲುಗಳಿರುವುದುಂಟು. ಕಾಡುಬೆಟ್ಟಗಳ ಗುಳಿಗಳಲ್ಲಿ ನೆಲೆಸಿರುವವನಾದುದರಿಂದ ಗುಳಿಗ ಎಂದು ಹೆಸರಾಯಿತು” ಎಂಬ ವೆಂಕಟರಾಜ ಪುಣಿಂಚತ್ತಾಯರ ಅಭಿಪ್ರಾಯವನ್ನು ಅಮೃತ ಸೋಮೇಶ್ವರ ಅವರು ಉಲ್ಲೇಖಿಸುತ್ತಾರೆ (೨೦೦೭:೧೧೯). ಪಂಪಭಾರತದಲ್ಲಿ  ‘ದುರ್ಯೋಧನಂ ದಾಡೆಗಳೆದ ಕುಳಿಕನಂತೆಯುಂ’ – ಆಶ್ವಾಸ-೭, ವಚನ-೩೯ ಎಂದು ಹೇಳಿರುವುದನ್ನು ವಿದ್ವಾಂಸರು ಸರ್ಪ=ಕುಳಿಕಂ ಎಂದು ಅರ್ಥೈಸಿದ್ದಾರೆ. ಸುಳ್ಯ, ಪುತ್ತೂರು ಪರಿಸರದಲ್ಲಿರುವ ಭೈರವ ಬನಗಳಲ್ಲೂ ಗುಳಿಗನ ಆರಾಧನೆ ಭೈರವನ ಜೊತೆ ಸಲ್ಲುವುದನ್ನು ಗಮನಿಸಬಹುದು.