. ನಾಗಾರ್ಜುನ

ಇಪ್ಪತ್ತೊಂದನೆಯ ಶತಮಾನದ ಕನ್ನಡದ ಮನಸ್ಸೊಂದು ನಾಗಾರ್ಜುನನನ್ನು ಮತ್ತೆ ಎದುರುಗೊಳ್ಳಲು ಅನೇಕ ಒತ್ತಡಗಳಿವೆ. ಕ್ರಿ. ಶ. ಎರಡನೆಯ ಶತಮಾನದಲ್ಲಿದ್ದ ನಾಗಾರ್ಜುನ ಕನ್ನಡ ನೆಲದವನು. ಬುದ್ಧನ ಕೇಂದ್ರ ತಾತ್ವಿಕತೆಯಾದ ಮಧ್ಯಮ ಮಾರ್ಗವನ್ನು ಚಿಂತನಾ ಪ್ರಸ್ಥಾನದ ರೂಪದಲ್ಲಿ ವಿಶ್ವಕ್ಕೆ ಒದಗಿಸಿಕೊಟ್ಟವನು. ಕರ್ನಾಟಕ ಮೂಲದಿಂದ ಉಗಮವಾದ ಪ್ರಜ್ಞಾ ಪರಾಮಿತ ಸೂತ್ರಗಳ ಮೂಲಕ ‘ಮಹಾಯಾನ’ ಕ್ಕೆ ಚಾಲನೆ ನೀಡಿದವನು. ವಿಶ್ವದಾದ್ಯಂತ ಇಂದು ಪ್ರಸ್ತುತವೆನ್ನಿಸಿಕೊಳ್ಳುತ್ತಿರುವ ‘ನಿರಸನ’ ಪ್ರಸ್ಥಾನಗಳಿಗೆ ಬೂಮಿಕೆ ಯನ್ನೊದಗಿಸಿದನು.

ಬೌದ್ಧ ದರ್ಶನದ ಇತಿಹಾಸದಲ್ಲಿ ನಾಗಾರ್ಜುನನಿಗೆ ‘ಎರಡನೆಯ ಬುದ್ಧ’ ನೆಂಬ ವಿಶೇಷಣವಿದೆ. ಅವನಿಗೆ ಸಮನಾದ ಇನ್ನೊಬ್ಬ ತಾತ್ವಿಕ ಇಲ್ಲವೆಂದೇ ಹೇಳಬೇಕು. ಭಾರತೀಯ ದರ್ಶನಗಳ ಇತಿಹಾಸವನ್ನು ಅವಲೋಕಿಸಿದರೆ ಗೋಚರವಾಗುವ ಒಂದು ಪ್ರಮುಖ ಅಂಶವೆಂದರೆ ಬೌದ್ಧೇತರ ದರ್ಶನಗಳ ವಕ್ತಾರರು ನಾಗಾರ್ಜುನನನ್ನು ಎದುರಾಗುವ ಸಂದರ್ಭಗಳನ್ನು ಹೇಗಾದರೂ ಮಾಡಿ ನಿವಾರಿಸಿಕೊಳ್ಳುತ್ತಾರೆ. ಇನ್ನು ಕೆಲವರು ರಂಗದಲ್ಲಿ ನಾಗಾರ್ಜುನ ಇಲ್ಲವೆಂದು ಖಚಿತಪಡಿಸಿಕೊಂಡು ಬಂದು ತಮ್ಮ ವಿಚಾರಗಳನ್ನು ಆತುರಾತುರವಾಗಿ ತೂರಿಬಿಟ್ಟು ಮಾಯವಾಗುತ್ತಾರೆ! ಇಂದಿಗೂ ಸಾಮಾನ್ಯ ಲೋಕವಲಯವಷ್ಟೇ ಅಲ್ಲ ಉನ್ನತ ಬೌದ್ಧಿಕ ವಲಯಗಳಿಂದಲೂ ನಾಗಾರ್ಜುನನನ್ನು ಆಚೆ ಇಡಲು ಸಾಹಸ ಪಡುತ್ತಿರುವ ಅವನ ವಿರೋಧಿಗಳ ಪ್ರಯತ್ನಗಳೇ ಅವನನ್ನು ಎರುರುಗೊಳ್ಳಲು ಪ್ರಮುಖ ಪ್ರೇರಣೆಯಾಗಬೇಕು!

ಕನ್ನಡದ ನೆಲದೊಂದಿಗಿನ ಅವನ ಸಂಬಂಧದಿಂದಲೇ ಅವನ ಪರಿಚಯದ ಮಾತುಗಳನ್ನು ಪ್ರಾರಂಭಿಸಬೇಕು. ಕರ್ನಾಟಕ ಅತ್ಯಂತ ಪ್ರಾಚೀನ ಎರಡು ಬೌದ್ಧ ವಿಶ್ವವಿದ್ಯಾಲಯಗಳಲ್ಲಿ ಒಂದಾದ ಬಳ್ಳಿಗಾವೆಯ ಕೋಢಿಮಠದ (ಇನ್ನೊಂದು ಮಹಿಷಮಂಡಲ, ಮೈಸೂರು) ಜೊತೆಗೆ ನಾಗಾರ್ಜುನನ ಹೆಸರು ಜೋಡಣೆಯಾಗಿದೆ. ಕ್ರಿ. ಶ. ಎರಡನೆಯ ಶತಮಾನದಲ್ಲಿದ್ದ  ಬೌದ್ಧ  ವಜ್ರಯಾನ ಪಂಥದ ಪ್ರಧಾನ ಪೀಠಗಳಾಗಿದ್ದ ಕಾಂಚೀಪುರಂ ಮತ್ತು ಕೋಢಿಮಠಗಳಿಗೆ ಭೇಟಿಕೊಟ್ಟು ಅಲ್ಲಿ ನಡೆಯುತ್ತಿದ್ದ ಶೈಕ್ಷಣಿಕ ಚಟುವಟಿಕೆಗಳ ಬಗೆಗೆ ಹುಯನ್‌ತ್ಸಾಂಗ್‌ ದಾಖಲಿಸಿದ್ದಾನೆ.  ಬಳ್ಳಿಗಾವೆಯ  ಈ ಸನಿವಾಸ ಬೌದ್ಧ ವಿಶ್ವವಿದ್ಯಾಲಯವು ಕ್ರಿ. ಶ. ಒಂಬತ್ತನೆಯ ಶತಮಾನದವರೆಗೂ ಪೂರ್ಣ ಪ್ರಮಾಣದಲ್ಲಿ ಕ್ರಿಯಾಶೀಲ ಚಟುವಟಿಕೆಗಳನ್ನು ನಡೆಸುತ್ತಿತ್ತು. ನಂತರ ಅಲ್ಲಿ ಇತರ ದರ್ಶನಗಳ ಜೊತೆಗೆ ಬೌದ್ಧ ನಾಥಪಂಥವೂ ಜಾಗವನ್ನು ಪಡೆದಿತ್ತು. ಅದೇ ಆವರಣದಲ್ಲಿ ರೂಪುಗೊಂಡವನು ಅಲ್ಲಮಪ್ರಭು!

ಮಂತ್ರಯಾನ, ತಂತ್ರಯಾನ, ಸಹಜಯಾನ ಮತ್ತು ಬೌದ್ಧ ತಾಂತ್ರಿಕ ಪಂಥವೆಂದು ಬೇರೆ ಬೇರೆ ಹೆಸರುಗಳಿಂದ ಸೂಚಿಸಲ್ಪಡುವ  ವಜ್ರಯಾನವನ್ನು ಕೆಲವರು ಮಹಾಯಾನದ ಶಾಖೆಯೆಂದೂ ಇನ್ನು ಕೆಲವರು ಅದು ಸ್ವತಂತ್ರ ಬೌದ್ಧ ಶಾಖೆಯೆಂದೂ ಬಾವಿಸುತ್ತಾರೆ.[1] ನಾಗಾರ್ಜುನನನ್ನು ವಜ್ರಯಾನ ಪಂಥದ ಆಚಾರ್ಯನೆಂದೂ ಗೌರವಿಸಲಾಗುತ್ತದೆ. ವಜ್ರಯಾನ ಅಥವಾ ಮಹಾಯಾನದ ಮೂಲ ಪಠ್ಯಗಳೆಂದು ಪ್ರಜ್ಞಾಪಾರಮಿತ ಸೂತ್ರಗಳನ್ನು ಹೆಸರಿಸುತ್ತಾರೆ. ನಾಗಾರ್ಜುನನ ಎಲ್ಲ ಕೃತಿಗಳನ್ನು ಚೀನೀ ಭಾಷೆಗೆ ಭಾಷಾಂತರಿಸಿದ ಕುಮಾರ ಜೀವ (ಈತನ ಕಾಲ ಕ್ರಿ. ಶ. ೪ ನೇಯ ಶತಮಾನದ ಕೊನೆಯ ಭಾಗ) ಮತ್ತು ಇತರ ಟಿಬೆಟಿಯನ್‌ ಮೂಲಗಳು, ಪ್ರಜ್ಞಾಪಾರಮಿತ  ಸೂತ್ರಗಳನ್ನು ದಕ್ಷಿಣ ಭಾರತದ (ಅದರಲ್ಲೂ ಕರ್ನಾಟಕದ) ‘ಮಹಾನಾಗ’ ನಿಂದ ನಾಗಾರ್ಜುನನು ಪಡೆದನೆಂದು ಖಚಿತವಾಗಿ ತಿಳಿಸುತ್ತವೆ. ಈ ‘ಮಹಾನಾಗ’  ಯಾರು ಎಂಬ ಬಗೆಗೆ ಸ್ಪಷ್ಟ ವಿವರಗಳಿಲ್ಲ. ಕೇವಲ ನಾಗಕುಲದ ಒಡೆಯ ನೆಂಬ ಮಾಹಿತಿ ಮಾತ್ರ ದೊರೆಯುತ್ತದೆ. ಮಹಾಯಾನ ಪಠ್ಯಗಳು ರೂಪುಗೊಂಡದ್ದೇ ಈ ಸೂತ್ರಗಳನ್ನು ಆಧರಿಸಿಯಾದ್ದರಿಂದ ಬೌದ್ಧ ಮಹಾಯಾನದ ಹುಟ್ಟು ಕರ್ನಾಟಕದ ನೆಲ ದಿಂದಲೇ ಎನ್ನುವುದಂತೂ ನಿಶ್ಚಿತವಾಗುತ್ತದೆ.[2]

ಅಲ್ಲಮನಿಗಿರುವಂತೆಯೇ ನಾಗಾರ್ಜುನನ ಹರೆಯವನ್ನು ಕುರಿತ ರೋಚಕ ಕತೆಗಳಿವೆ. ಆದರೆ ಅವುಗಳ ಚಿತ್ರಣವೇ ಐತಿಹಾಸಿಕ ಗಾಂಭೀರ್ಯವನ್ನು ಹೊಂದಿಲ್ಲ. ಅವನ ಬದುಕಿನ ಬಗೆಗಿನ ಅಸ್ಪಷ್ಟ ವಿವರಗಳಿಷ್ಟು : ದಕ್ಷಿಣ ಭಾರತದ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ ನಾಗಾರ್ಜುನ ‘ಅಪರಿಮಿತಾಯುರ್‌ ಧಾರಿಣಿ’ ಎಂಬ ವ್ರತವೊಂದರ ಮೂಲಕ ತನಗಿದ್ದ ಮೃತ್ಯುಗಂಡದಿಂದ ಪಾರಾದ. ಆತನ ಗುರು ರಾಹುಲಭದ್ರ. (ಇವನಿಗೆ ಸರಹನೆಂಬ ಹೆಸರೂ ಇದೆ) ನಾಗಕುಲದ ಒಡೆಯನಾದ ಮಹಾನಾಗನು ನಾಗಾರ್ಜುನನನ್ನು ಕರೆದುಕೊಂಡು ಹೋಗಿ ಅವನೆದುರಿಗೆ ‘ಸಪ್ನರತ್ನಕೋಶ’ ವನ್ನು ತೆರೆದನಂತೆ. ಆದರಲ್ಲಿದ್ದ ವೈಫುಲ್ಯ ಸೂತ್ರಗಳನ್ನು ನಾಗಾರ್ಜುನ ಅಧ್ಯಯನ ಮಾಡಿದನೆಂದೂ, ಬರುವಾಗ ಪ್ರಜ್ಞಾಪಾರಮಿತ  ಸೂತ್ರಗಳನ್ನು ಅಲ್ಲಿಂದ ತಂದನೆಂದೂ ಮುಸುಕು ಮಸುಕಾದ ವಿವರಣೆಗಳಿವೆ. ನಳಂದ ವಿಶ್ವವಿದ್ಯಾಲಯದಲ್ಲಿ ಗುರುವಾಗಿದ್ದ ಬಗ್ಗೆಯೂ ಕೆಲವು ಮೂಲಗಳು ಉಲ್ಲೇಖಿಸುತ್ತವೆ.  ನಾಗಾರ್ಜುನ ತನ್ನ  ಜೀವನದ ಕಡೆಯ ದಿನಗಳನ್ನು ಶ್ರೀ ಪರ್ವತದಲ್ಲಿ ಗೌತಮಿಪುತ್ರ ಸಾತಕರ್ಣಿಯು ತನಗಾಗಿ ಕಟ್ಟಿಸಿದ ವಿಹಾರದಲ್ಲಿ ಕಳೆದನೆಂಬ ವಿವರಗಳಿವೆ. ಅವನ ಕೃತಿಗಳೆಂದರೆ .ಮೂಲಮಧ್ಯಮಕಕಾರಿಕಾ .ವಿಗ್ರಹವ್ಯಾವರ್ತಿನಿ .ಶೂನ್ಯತಾಸಪ್ತತಿ .ಯುಕ್ತಿಷಷ್ಟಿಕಾ .ವೈದಲ್ಯಸೂತ್ರ ಮತ್ತು ಪ್ರಕರಣ .ಸಹೃಲ್ಲೇಖ ಇನ್ನೂ ಕೆಲವು ಕೃತಿಗಳನ್ನು ನಾಗಾರ್ಜುನನಿಂದ ರಚಿತವಾದವು ಗಳೆಂದು ಹೆಸರಿಸಿದರೂ ನಿಶ್ಚಿತವಾಗಿ ಹೇಳಲಾಗುವುದಿಲ್ಲ.

. ಬುದ್ಧ ಮತ್ತು ನಾಗಾರ್ಜುನ

ಇನ್ನು ಮೇಲೆ ನಿರಸನದ ಕಾಲ.  ಇದುವರೆಗೆ ಕಟ್ಟಿಕೊಂಡು ಬಂದ ರಚನೆಗಳು ಮತ್ತು ಅವುಗಳಾನ್ನಾಧರಿಸಿದ ಬದುಕಿನ ಕ್ರಮಗಳು ಇಂದು ತಮ್ಮ್ ಸೋಲನ್ನು ಒಪ್ಪಿಕೊಂಡು ಕೈಚೆಲ್ಲಿವೆ. ರಚನೆಗಳು ನಿಜವೆಂದು ನಂಬಿ ಹುಟ್ಟಿಕೊಂಡ ಮೀಮಾಂಸೆಗಳು ನಮ್ಮ ಬಾಳನ್ನು ಸಂಕಟಕ್ಕೆ ನೂಕಿವೆ. ಇದುವರೆಗೆ ಕಾರಣ ಮೀಮಾಂಸೆ ಮತ್ತು ಪರಿಣಾಮ ಮೀಮಾಂಸೆಗಳು ನಮ್ಮ ಲೋಕಗ್ರಹಿಕೆಯನ್ನು ನಿಯಂತ್ರಿಸಿದವು. ಇವುಗಳನ್ನಾಧರಿಸಿದ ಕಾವ್ಯ ಮೀಮಾಂಸೆಯು ಸಾಹಿತ್ಯ ಮತ್ತು ಸಂಸ್ಕೃತಿ ಚಿಂತನೆಯನ್ನು ನಿರ್ದೇಶಿಸಿತು. ಇದುವರೆಗೆ ನಂಬಿದ ಕಾರಣ ಮತ್ತು ಪರಿಣಾಮ ಮೀಮಾಂಸೆಗಳನ್ನಾಧರಿಸಿದ ಲೋಕಸಂಬಂಧದ ನಿರ್ವಚನವು ಉಂಟು ಮಾಡಿರುವ ವಿಕಲ್ಪಗಳು ನಮ್ಮ ಬದುಕಿನ ಸಾಮರಸ್ಯವನ್ನು ನಾಶಮಾಡಿವೆ. ಜನ ಸಮೂಹಗಳು ಕಟ್ಟಿ ಕೊಂಡಿರುವ ಬದುಕಿನ ಕ್ರಮ, ಒಪ್ಪಿಕೊಂಡಿರುವ ಮೌಲ್ಯಗಳು ಇತ್ಯಾದಿಗಳನ್ನು ಇತ್ಯರ್ಥಗೊಳಿಸುವ ನಿರ್ಧಾರಕ ಶಕ್ತಿಗಳಾಗಿ ಈ ಮೀಮಾಂಸೆಗಳು ಕೆಲಸ ಮಾಡಿರುವುದರಿಂದ ನಮ್ಮ ಲೋಕ ಸಂಬಂಧದ ನಿರ್ವಹಣೆಯಲ್ಲಿನ ತೊಡಕುಗಳೇನಿದ್ದರೂ ಅವುಗಳಿಗೆ ಕಾರಣಗಳನ್ನು ಇಲ್ಲಿಯೇ  ಹುಡಕಬೇಕಾಗಿದೆ. ಕಾರಣ ಮೀಮಾಂಸೆ, ಪರಿಣಾಮ ಮೀಮಾಂಸೆಗಳೆಂಬ ಪರಿಕಲ್ಪನೆಗಳ ಸದ್ಯದ ಬಳಕೆಯ ರೀತಿಯನ್ನು ಇಲ್ಲಿಯೇ ವಿವರಿಸಿ ನಂತರ ಮುಂದುವರಿಯಬಹುದು.

ಪದಾರ್ಥ ಪ್ರಪಂಚಕ್ಕೆ ಶಾಶ್ವತ, ಸ್ವತಂತ್ರ ಆದಿಕಾರಣದ ಶೋಧನೆಗೆ ಸಂಬಂಧಿಸಿದುದು ಕಾರಣ ಮೀಮಾಂಸೆ. ಹಾಗೆಯೇ ಶಾಶ್ವತ ಅಂತ್ಯ, ಫಲ, ಪರಿಣಾಮಗಳನ್ನು ಶೋಧಿಸುವುದು ಪರಿಣಾಮ ಮೀಮಾಂಸೆ. ಆದಿಕಾರಣವೆಂಬುದು ಅಗ್ರಾಹ್ಯವೆಂಬ ಕಾರಣಕ್ಕೆ ಆ ಸಂಬಂಧದ ಪ್ರಶ್ನೆಗಳಿಗೆ ಬುದ್ಧ ಮೌನ ತಾಳಿದ. ಪ್ರಪಂಚದ ಆದಿಕಾರಣದ ಬಗೆಗಿನ ಊಹೆ ಎಂದೂ ಮುಗಿಯದ ಹಿಮ್ಮುಖ ಪಯಣ. ಹಾಗೆಯೇ ಶಾಶ್ವತ ಪರಿಣಾಮವೆಂಬುದು ಕೂಡಾ. ಆದಿಕಾರಣ ಮತ್ತು ಶಾಶ್ವತ ಪರಿಣಾಮಗಳು ಅಂತಿಮವಾಗಿ ಅಸ್ತಿತ್ವವಾದಲ್ಲಿಯೋ ನಾಸ್ತಿತ್ವ ವಾದದಲ್ಲಿಯೋ ವಿರಮಿಸುತ್ತವೆ. ಸದ್ಯದ ‘ಭಾರತೀಯ’ ಬದುಕಿನ ಕ್ರಮ ಮತ್ತು ಕಾವ್ಯ ಮೀಮಾಂಸೆಗಳು ಕಾರಣ ಮೀಮಾಂಸೆ ಮತ್ತು ಪರಿಣಾಮ ಮೀಮಾಂಸೆಗಳನ್ನು ಆಧರಿಸಿದೆ ಎಂಬುದು ನಿಶ್ಚಿತ. ಪರಂಪರೆಯ ಕೊಳಕಿಗೆ ಇದೇ ಹೊಣೆ.

ಬುದ್ಧ ಗುರು ಅಸ್ತಿತ್ವವಾದ ಮತ್ತು ನಾಸ್ತಿತ್ವವಾದಗಳೆಂಬ ಎರಡೂ ತುದಿಗಳನ್ನು ನಿರಾಕರಿಸಿ, ಕಣ್ಣೆದುರಿಗಿನ ಈ ವಸ್ತು ಪ್ರಪಂಚವನ್ನು ‘ಸ್ವೀಕರಿಸಿ’ ಅದನ್ನು ನಿರಂತರ ಚಲನೆಯಲ್ಲಿರುವ, ಶಾಶ್ವತವಲ್ಲದ, ಸ್ವಭಾವವಿಲ್ಲದ ಕ್ರಿಯಾ ಸಾಮರ್ಥ್ಯವನ್ನಾಗಿ ವಿವರಿಸಿದನು.  ಈ ಕ್ರಿಯಾಸಾಮರ್ಥ್ಯವನ್ನು ಚಲನೆಯಲ್ಲಿಯೇ ಇರುವ ಸಾಪೇಕ್ಷ ಕಾರಣ, ಸಾಪೇಕ್ಷ ಪ್ರತ್ಯಯ (ಪರಿಸ್ಥಿತಿ) ಮತ್ತು ಸಾಪೇಕ್ಷ ಫಲಗಳ ನೆರವಿನಿಂದ ವಿವರಿಸಿದನು. ಉದಾಹರಣೆಗೆ : ಬೀಜ- ಮೊಳಕೆ-ಸಸಿ-ವೃಕ್ಷ-ಹೂವು-ಫಲ-ಬೀಜ-ಮೊಳಕೆ-ಸಸಿ…… ಈ ಸರಣಿಯಲ್ಲಿ ಆದಿ-ಅಂತ್ಯಗಳೆಂಬ ತುದಿಗಳು ನಿರಾಕರಣೆಗೊಂಡು, ಪ್ರತಿಯೊಂದು ಮತ್ತೊಂದಕ್ಕೆ ಕಾರಣವಾಗುತ್ತ, ಹಿಂದಿನ ಕಾರಣಕ್ಕೆ ಪರಿಣಾಮವಾಗುತ್ತ ಚಲನೆಯಲ್ಲಿವೆ. ಹೀಗೆ ತುದಿಗಳನ್ನು ವರ್ಜಿಸಿದ (ಶಾಶ್ವತ ಕಾರಣ ಮತ್ತು ಶಾಶ್ವತ ಪರಿಣಾಮಗಳನ್ನು ನಿರಾಕರಿಸಿದ) ಮಧ್ಯಮ ಪ್ರತಿಪದವು ಬುದ್ಧನಿಂದ ಪ್ರತಿಪಾದಿಸಲ್ಪಟ್ಟಿತು. ಇದನ್ನೇ ಇಲ್ಲಿ ‘ಪ್ರಕ್ರಿಯಾ ಮೀಮಾಂಸೆ’ ಎಂದು ಸೂಚಿಸಲಾಗಿದೆ. ಈ ತಾತ್ವಿಕತೆಯನ್ನು ಲೋಕ ವಿವರಣೆಯಾಗಿ ನಾಗಾರ್ಜುನ ತನ್ನ ಮೂಲಮಧ್ಯಮಕಕಾರಿಕಾದಲ್ಲಿ ವಿವರಿಸುತ್ತಾನೆ. ವಿಶ್ವದ ಕಠಿಣ ಪಠ್ಯಗಳಲ್ಲಿ ಇದೂ ಒಂದೆಂಬ ಖ್ಯಾತಿ ಈ ಕೃತಿಗೆ ಇದೆ! ವಸ್ತುರೂಪ, ಸ್ಪರ್ಶ (Contact)[3], ಸಂವೇದನೆ (Feeling) ಮತ್ತು ಬೋಧೆ ಇವುಗಳ ಸಂಘಾತದಿಂದ ಉಂಟಾಗುವ ಸಂಯೋಜನೆಗಳನ್ನು ಮಾಧ್ಯಮಿಕ ತತ್ವವು ವಸ್ತುಗಳೆಂದು ಭಾವಿಸದೆ ಪ್ರಕ್ರಿಯೆ ಎಂದು ವಿವರಿಸುತ್ತದೆ. ಲೋಕದಲ್ಲಿರುವ ಎಲ್ಲವೂ ಸಾಪೇಕ್ಷ ಕಾರಣ ಮತ್ತು ಪ್ರತ್ಯಯಗಳಿಂದಾದ ಸಾಪೇಕ್ಷ ಪರಿಣಾಮಗಳು ಮತ್ತು ಎಲ್ಲವೂ ನಿರಂತರ ಬದಲಾವಣೆಗೊಳ್ಳುತ್ತ ಚಲನೆಯಲ್ಲಿವೆ. ಇದನ್ನು ಪ್ರತೀತ್ಯ ಸಮುತ್ಪಾದ ಎನ್ನುತ್ತಾರೆ.

ಬುದ್ಧ ಗುರು ಈ ಪ್ರತೀತ್ಯ ಸಮುತ್ಪಾದ ತತ್ವದ ತಿಳುವಳಿಕೆಯನ್ನು ದುಃಖದ ಬಿಡುಗಡೆಯ ಮಾರ್ಗವಾಗಿಸಿದನು. ದುಃಖವೆಂಬ ಪದಕ್ಕೆ ಅರ್ಥವನ್ನು ವಿವರಿಸುವ ಅನೇಕ ಪ್ರಯತ್ನಗಳಿವೆ. ಪಾಲಿ ಭಾಷೆಯ ‘ದುಃಖ’ಕ್ಕೆ ಕನ್ನಡದ ‘ದುಃಖ’ ಸಮಾನಾರ್ಥಕ ಪದ ಅಲ್ಲ. ‘ದುಃಖ’ವನ್ನು ಒಂದು ಲೋಕಲಕ್ಷಣವನ್ನಾಗಿಯೂ ಬುದ್ಧ ಗುರುತಿಸಿದ್ದಾನೆ. ಬುದ್ಧ ತಿಳಿಸಿದ ಮೂರು ಲೋಕಲಕ್ಷಣಗಳಲ್ಲಿ ‘ದುಃಖ’ವೂ ಒಂದು.

೧. ಎಲ್ಲ ಸಂಖಾರಗಳೂ ಅನಿತ್ಯವಾದವು (ಸಬ್ಬೇ ಸಂಖಾರ ಅನಿಚ್ಛ)

೨. ಎಲ್ಲ ಸಂಖಾರಗಳೂ ದುಃಖದಿಂದ ಕೂಡಿವೆ (ಸಬ್ಬೇ ಸಂಖಾರ ದುಃಖ)

೩. ಎಲ್ಲ ಧರ್ಮಗಳೂ ಅನಾತ್ಮವಾಗಿವೆ (ಸಬ್ಬೇ ಧಮ್ಮ ಅನಾತ್ತ)

ಮೊದಲಿನ ಎರಡು ಲಕ್ಷಣಗಳು ಎಲ್ಲ ಸಂಯೋಜನೆಗಳನ್ನು ಕುರಿತವುಗಳಾಗಿವೆ. ಲೋಕದ ಎಲ್ಲವೂ ಅಂದರೆ ವಸ್ತು ಮತ್ತು ಜೀವ ಸಮುಚ್ಛಯದ ಎಲ್ಲವೂ ಸಂಯೋಜನೆಗಳೇ (ಸಂಖಾರಗಳು) ಆಗಿವೆ ಮತ್ತು ಅವು ಶಾಶ್ವತವಲ್ಲದವುಗಳೂ ಆಗಿವೆ. ಅಂದರೆ ಸದಾ ಬದಲಾಗುತ್ತಿವೆ. ಎರಡನೆಯದಾಗಿ ಈ ಸಂಯೋಜನೆಗಳು (Formations) ದುಃಖದಿಂದ ಕೂಡಿವೆ. ವಸ್ತು ಪ್ರಪಂಚದ ಸಂಯೋಜನೆಗಳಿಗೆ ಅನ್ವಯವಾಗುವ ಈ ‘ದುಃಖ’ವು ಜೀವ ಪ್ರಪಂಚಕ್ಕೆ ಅನ್ವಯವಾಗುವ ಭಾವ ವಿಶೇಷವಲ್ಲ, ಬದಲಿಗೆ ಸರ್ವವೂ ‘ಆಗುವಿಕೆ’ಯಲ್ಲಿಯೇ ಇರುತ್ತದೆ. ಆಗಿ ಇರುವುದು ಯಾವುದೂ ಇಲ್ಲ. ಹೀಗೆ ಆಗುವ ‘ತಲ್ಲಣ’ದಲ್ಲಿಯೇ ಎಲ್ಲ ಸಂಯೋಜನೆಗಳೂ ನಿರಂತರ ಬದಲಾವಣೆ ಮತ್ತು ಚಲನೆಯಲ್ಲಿಯೇ ಇರುತ್ತದೆ. ಈ ತಲ್ಲಣವನ್ನೇ ದುಃಖವೆಂಬ ಲಕ್ಷಣವನ್ನಾಗಿ ವಿವರಿಸಲಾಗಿದೆ. ಮನುಷ್ಯನಿಗೆ ಸಂಬಂಧಿಸಿದಂತೆ ಸಂತೋಷದ ಅನುಭವವೂ ದುಃಖವೇ. ಅದು ನಿರಂತರವಾಗದುದಕ್ಕೆ ದುಃಖ. ಸಂಕಟದ ಅನುಭವ ದೂರಾಗದುದಕ್ಕೆ ದುಃಖ ಇತ್ಯಾದಿ.

ಆನಿತ್ಯವಾದ ಸಂಯೋಜನೆಗಳನ್ನು, ನಿತ್ಯವಸ್ತುಗಳೆಂದು ಭಾವಿಸಿ ವ್ಯವಹರಿಸುವುದರಿಂದ; ಆಗುವಿಕೆಯಲ್ಲಿಯೇ ಇರುವ ಸಂಯೋಜನೆಗಳನ್ನು ಆಗಿ ಇರುವ ವಸ್ತುಗಳೆಂದು ಭಾವಿಸುವುದರಿಂದ ಮತ್ತು ಈ ಲೋಕವನ್ನು ಪರಿಭಾವಿಸುತ್ತಿರುವ ನಾವೂ ಸೇರಿದಂತೆ ಲೋಕಸಮಸ್ತದಲ್ಲಿ ಸ್ವತಂತ್ರ ಅಸ್ತಿತ್ವವೊಂದನ್ನು ಗುರುತಿಸಿಕೊಂಡು ವ್ಯವಹರಿಸುವ ಮಿಥ್ಯಾ ನಿಲುವಿನಿಂದಾಗಿ ನಾವು ‘ದುಃಖ’ಕ್ಕೆ ಒಳಗಾಗುತ್ತೇವೆ. ಲೋಕಲಕ್ಷಣಗಳನ್ನು ಅರಿತು ಆ ಅರಿವನ್ನು ಸ್ವಯವಾಗಿಸಿ ಕೊಂಡರೆ ಯಾವುದಕ್ಕೂ ಅಂಟಿಕೊಳ್ಳುವ ಸಂದರ್ಭವೇ ಉಂಟಾಗುವುದಿಲ್ಲ. ಲೋಕ ‘ಸಂಬಂಧ’ದ ಜಾಲದಲ್ಲಿ ನಾವು ಬೆರೆತು ಹೋಗುವುದರಿಂದ ‘ದುಃಖಪಡುವ’ ಸ್ವತಂತ್ರ ‘ಭಾವ’ವುಳ್ಳ ಜೀವಿಯೊಂದು ಇರಲೂ ಸಾಧ್ಯವಿಲ್ಲ. ಅದನ್ನೇ ಅಲ್ಲಮ ಹೀಗೆ ನುಡಿಯುತ್ತಾನೆ.

ಸುಖವ ಬಲ್ಲಾತ ಸುಖಿಯಲ್ಲ
ದುಃಖದ ಬಲ್ಲಾತ ದುಃಖಿಯಲ್ಲ
ಸುಖ ದುಃಖವೆರಡನೂ ಬಲ್ಲಾತ ಜ್ಞಾನಿಯಲ್ಲ
ಹುಟ್ಟದ ಮುನ್ನ ಸತ್ತವರ ಕುರುಹಬಲ್ಲಡೆ ಬಲ್ಲ ಗುಹೇಶ್ವರ

ಆಧುನಿಕತೆಯು ಬಹುಸಂಭ್ರಮದಿಂದ ಮುಂದಿಡುವ ವಸ್ತುವಾದಿ ದೃಷ್ಟಿಕೋನವೂ ವಿಕಲ್ಪಗಳ ಸೃಷ್ಟಿಯಲ್ಲಿಯೇ ತೊಡಗಿದೆ. ಲೋಕಸಮಸ್ತವನ್ನೂ ಭಿನ್ನ ಭಿನ್ನ ಘಟಕಗಳನ್ನಾಗಿ ನೋಡುವ ನಿಲುವಿಗೆ, ‘ಸಂಬಂಧ’ ಪಥ್ಯವಾಗದ ಸಂಗತಿ. ಲೋಕವನ್ನು ಸಂಬಂಧಗಳ ಸರಮಾಲೆಯೆಂದು ವಿವರಿಸುವ ಮೂಲಕ ಈ ವಿವರಣೆಯ ಉದ್ಯೋಗವನ್ನು ಲೋಕದ ಸಂಕಟ ಪರಿಹಾರಕ್ಕಾಗಿಯೇ ಮಾಡಿದವರು ಬುದ್ಧ, ನಾಗಾರ್ಜುನ, ಅಲ್ಲಮರು. ಅವರ ವಿಚಾರಗಳಿಗೆ ಮತ್ತೆ ಜೀವ ಬರಬೇಕು. ಅದರಿಂದಾಗಿ ನಾಗಾರ್ಜುನನನ್ನು ಎದುರಾಗಬೇಕು.

. ನಾಗಾರ್ಜುನನಮೂಲಮಧ್ಯಮಕ ಕಾರಿಕಾ

ಬೌದ್ಧ ಧರ್ಮದ ಕೇಂದ್ರ ತಾತ್ವಿಕತೆಯಾದ ಮಾಧ್ಯಮಿಕ ತತ್ವವನ್ನು ಒಂದು ಪ್ರಸ್ಥಾನವನ್ನಾಗಿ ಸಮಗ್ರವಾಗಿ ವಿವರಿಸಿಕೊಟ್ಟವನು ನಾಗಾರ್ಜುನ. ಮೂಲ ಮಧ್ಯಮಕಕಾರಿಕಾವು ನಾಗಾರ್ಜುನನ ಪ್ರಧಾನ ಕೃತಿ. ಇದರಲ್ಲಿ ಒಟ್ಟು ೪೪೯ ಕಾರಿಕೆಗಳಿಂದ ಕೂಡಿದ ೨೭ ಅಧ್ಯಾಯಗಳಿವೆ. ಮೂಲ ಪಠ್ಯ ದೊರಕಿಲ್ಲ. ಕುಮಾರಜೀವನ ಚೀನೀ ಅನುವಾದವಿದೆ. ಕ್ರಿ.ಶ. ೫ನೇ ಶತಮಾನದ ಚಂದ್ರಕೀರ್ತೀಯ ಸಂಸ್ಕೃತ ಪಠ್ಯವೂ ಪುನಾರಚನೆಗೊಂಡಿದ್ದಿರಬೇಕೆಂಬ ವಾದವಿದೆ. ಟಿಬೆಟಿಯನ್‌ ಭಾಷೆಯಲ್ಲಿ ದೊರೆಯುವ ಪಠ್ಯವನ್ನು ಹೆಚ್ಚು ಆಧಿಕೃತವಾದದ್ದೆಂದು ನಂಬಾಲಾಗಿದೆ. ವಿಶ್ವದ ಅನೇಕ ಭಾಷೆಗಳಿಗೆ ಈ ಕೃತಿ ಅನುವಾದಗೊಂಡಿದೆ. ಕ್ರಿ. ಶ. ಐದನೆಯ  ಶತಮಾನದ ಚಂದ್ರಕೀರ್ತೀಯೂ ಸೇರಿದಂತೆ ಹಲವು ವಿದ್ವಾಂಸರು ವ್ಯಾಖ್ಯಾನಗಳನ್ನು ಬರೆದಿದ್ದಾರೆ. ನಾಗಾರ್ಜುನನ ಈ ಕೃತಿಯ ರಚನೆಯ ಹಿಂದೆ ಅನೇಕ ಒತ್ತಡಗಳು ಕೆಲಸ ಮಾಡಿವೆ. ಮೊದಲೆಯದಾಗಿ ಅಭಿಧಮ್ಮ ಕೋಶದ ವ್ಯಾಖ್ಯಾನಗಳು ಬುದ್ಧನ ಮೂಲತತ್ವದಿಂದ ದೂರಸರಿದು ಅಸ್ತಿತ್ವವಾದೆಡೆಗೋ ನಾಸ್ತಿತ್ವವಾದೆಡೆಗೋ ಸಾಗುತ್ತಿದ್ದವು. ಮೊದಲು ಇದನ್ನು ನಿವಾರಿಸಬೇಕಿತ್ತು. ಎರಡನೆಯದಾಗಿ, ಬುದ್ಧನ ಉಪದೇಶ ಪ್ರಮುಖ ಸಂಗತಿಗಳಾದ ನಾಲ್ಕು ಶ್ರೇಷ್ಠ ಸತ್ಯಗಳು, ಪ್ರತೀತ್ಯ ಸಮುತ್ಪಾದ, ಅನಾತ್ಮವಾದಗಳನ್ನು ತರ್ಕದ ಗೋಜಲು ಗಳಿಂದ ಬಿಡಿಸಬೇಕಿತ್ತು. ಹಾಗೆ ಮಾಡಲು ಇನ್ನೂ ಬಲವಾದ ತರ್ಕಮಾರ್ಗವೊಂದನ್ನು ಅವಲಂಬಿಸಿಸಬೇಕಿತ್ತು! ಹಾಗೆ ತರ್ಕವನ್ನವಲಂಬಿಸಿಯೂ ಅದನ್ನು ತರ್ಕಮುಕ್ತಗೊಳಿಸಬೇಕಿತ್ತು.

ನಾಗಾರ್ಜುನ ಮೂಲಮಧ್ಯಮಕಕಾರಿಕಾದ ಅಧ್ಯಯನ ಮತ್ತು ವ್ಯಾಖ್ಯಾನ ಇಂದಿನ ಬೌದ್ಧಿಕರಿಗೆ ಒಂದು ಆಕರ್ಷಕ ಉದ್ಯೋಗ. ಈಚಿನ ಚಿಂತನಾ ಪ್ರಥಾನಗಳಾದ ಡಿಸ್‌ಕೋರ್ಸ್‌ ಮತ್ತು ನಿರಚನಾವಾದಗಳ ಪೂರ್ಣ ಪ್ರಮಾಣದ ವಿವರಣೆ ಈ ಕೃತಿಯಲ್ಲಿ ದೊರೆಯುತ್ತದೆಂಬುದು ನಿರ್ವಿವಾದದ ಸಂಗತಿ. ತ್ರಿಪಿಟಕಗಳಲ್ಲಿರುವ ಬುದ್ಧ ನಡೆಸಿದ ಸಂವಾದ ರೂಪ ದಲ್ಲಿನ ಸೂತ್ರಗಳೇ ಮೂಲಮಧ್ಯಮಕಕಾರಿಕಾದಲ್ಲಿ ಪ್ರಸ್ತಾಪಿತವಾಗಿರುವ ತಾತ್ವಿಕತೆಯ ಆಕರಗಳು. ನಾಗಾರ್ಜುನ ಪದೇ ಪದೇ ಅದನ್ನು ಸ್ಮರಿಸಿಕೊಳ್ಳುತ್ತಾನೆ ಮತ್ತು ತಾನು ಬುದ್ಧನ ತಾತ್ವಿಕತೆಗೆ ತೀರಾ ಹತ್ತಿರದಲ್ಲಿದ್ದೇನೆಂದು ಖಾತರಿಪಡಿಸುತ್ತಿರುತ್ತಾನೆ.

ಪ್ರತೀತ್ಯ ಸಮುತ್ಪಾದವೇ ಲೋಕವಿವರಣೆಗೆ  ಸರಿಯಾದ ಮಾರ್ಗವೆಂದು ಗ್ರಹಿಸಿ ಆ ತಾತ್ವಿಕತೆಯನ್ನು ನಾಗಾರ್ಜುನ ಮೂಲಮಧ್ಯಮಕಕಾರಿಕಾದಲ್ಲಿ ವಿವರಿಸಿದ. ಈ   ತಾತ್ವಿಕತೆ ಅನೇಕ ಲೋಕವಿವರಣೆಗಳೆಲ್ಲ ಒಂದಲ್ಲ. ಬದಲಿಗೆ ಲೋಕವಿವರಣೆಗಳನ್ನು ಅಸ್ತಿತ್ವ ಅಥವಾ ನಾಸ್ತಿತ್ವವನ್ನಾಧರಿಸಿ ನೀಡಲಾಗದು ಎಂಬ ತಿಳುವಳಿಕೆಯೂ ಆಗಿದೆ. ಲೋಕವನ್ನು ಪ್ರಕ್ರಿಯೆಯನ್ನಾಗಿ ವಿವರಿಸುವುದರಿಂದ, ಈ  ವಿವರಣೆಯನ್ನಾಧರಿಸಿ ರೂಪಿಸಬಲ್ಲ ಜೀವನ ಕ್ರಮ ಮತ್ತು ಕಾವ್ಯ ಮೀಮಾಂಸೆಗಳು ಮಾತ್ರ ಲೋಕವನ್ನು ಸರಿಯಾಗಿ ವಿವರಿಸಿಕೊಡಬಲ್ಲವು. ದುಃಖವಿಲ್ಲದ ಸಾಮರಸ್ಯದ ಲೋಕವೊಂದು ‘ಪ್ರಕ್ರಿಯೆ’ ಯನ್ನಾದರಿಸಿದ ಜೀವನ ಮೀಮಾಂಸೆಯಿಂದ ದೊರಕಬಲ್ಲದೆಂಬುದು ಬುದ್ಧ ನಾಗಾರ್ಜುನರು ತೋರಿಸಿಕೊಟ್ಟ ಅರಿವು. ಬೌದ್ಧ ಧರ್ಮದ  ತಾತ್ವಿಕತೆಯಲ್ಲಿ ಇದು ಒಂದಲ್ಲ ಒಂದು ರೀತಿಯಲ್ಲಿ ಪ್ರಸ್ತಾಪಿತವಾಗುತ್ತಲೇ ಇತ್ತು. ನಾಗಾರ್ಜುನ ಈ ತಾತ್ವಿಕತೆಯನ್ನು ಪ್ರಕ್ರಿಯಾ ಮೀಮಾಶೆಯಾಗಿ ಈ ಕೃತಿಯಲ್ಲಿ ಮಂಡಿಸಿದನು.

ಬೌದ್ಧ ಧರ್ಮದ ವಸ್ತು ಪ್ರಪಂಚದ ವಿವರಣೆಯಾದ ಶೂನ್ಯತೆ/ಅನಾತ್ಮ/ಪ್ರತೀತ್ಯ ಸಮುತ್ಪಾದಗಳು ಕೇವಲ ಬೌದ್ಧಿಕ ವಿವರಣೆಗಳಲ್ಲ, ಕಸರತ್ತಲ್ಲ. ಬದಲಿಗೆ ಅದು ಲೋಕಜೀವಿಗಳನ್ನು ದುಃಖದಿಂದ ಬಿಡುಗಡೆಗೊಳಿಸುವ ಕರುಣಾ ಮೈತ್ರಿ ಮಾರ್ಗ. ಲೋಕದ ಗ್ರಹಿಕೆಯಲ್ಲಿ ನಾವು ಎಡವಿರುವುದೇ ನಮ್ಮ ದುಃಖಕ್ಕೆ ಕಾರಣವಾಗಿದೆ. ಲೋಕವನ್ನು ಛಿದ್ರಗೊಳಿಸಿ ಭಿನ್ನ ಭಿನ್ನ ಸ್ವತಂತ್ರ ಘಟಕಗಳನ್ನಾಗಿ ನೋಡುವುದರಿಂದ ಮತ್ತು ಸಮಸ್ತವೂ ನಿತ್ಯವಸ್ತುಗಳೆಂದು ಗ್ರಹಿಸುವುದರಿಂದ ಉಂಟಾಗುವ ಪರಿಣಾಮಗಳೇ ಇಂದಿನ ಧಾರ್ಮಿಕ, ಸಾಮಾಜಿಕ, ರಾಜಕೀಯ, ಅಸಮಾನತೆಗೆ ಕಾರಣಗಳಾಗಿವೆ. ಲೋಕಸತ್ಯವನ್ನು ಗ್ರಹಿಸುವಲ್ಲಿ ನಮ್ಮನ್ನು ಆವರಿಸಿರುವ ಮಹಾವಿಸ್ಮೃತಿ ಮತ್ತು ಅದನ್ನು ಪೋಷಿಸುತ್ತಿರುವ ಧಾರ್ಮಿಕ ಮೂಲಭೂತವಾದ ನಾಗಾರ್ಜುನನನ್ನೂ, ಬುದ್ಧನನ್ನೂ ಅವರ ಮಾಧ್ಯಮಿಕ ತತ್ವವನ್ನೂ ಮುಂಚೂಣಿಗೆ ಬರದಂತೆ ತಡೆಯುತ್ತಾ ಬಂದಿವೆ. ಇದಿಷ್ಟೂ ಪೀಠಿಕೆಯೊಡನೆ ಮೂಲಮಧ್ಯಮಕಕಾರಿಕಾದ ಯಾನಕ್ಕೆ ತೊಡಗಬಹುದು.

. ಅರ್ಪಣೆಯ ವಚನ

ಮೂಲಮಧ್ಯಮಕಕಾರಿಕಾದ
ಅರ್ಪಣೆಯ ವಚನ
ಮಂಗಳವೂ ಪ್ರಾಪಂಚಿಕತೆಯ ಉಪಶಮನವೂ ಆದ
ಪ್ರತೀತ್ಯ ಸಮುತ್ಪಾದವನ್ನು ಅನಿರೋಧ, ಅನುತ್ಪಾದ
ಅನುಚ್ಛೇದ, ಅಶಾಶ್ವತ, ಅನೇಕಾರ್ಥ, ಅನಾನಾರ್ಥ
ಅನಾಗಮ, ಅನಿರ್ಗಮ ಎಂದು ಉಪದೇಶಿಸಿದ
ಸಂಬುದ್ಧನಿಗೆ ವಂದಿಸುತ್ತೇನೆ.

ನಾಗಾರ್ಜುನ ಈ ಅರ್ಪಣೆಯ ವಚನದಲ್ಲಿ ಎಂಟು ನಿರಾಕರಣೆಗಳ ಮೂಲಕ ಲೋಕವಿವರಣೆಯನ್ನು ನೀಡಿ, ಅವುಗಳನ್ನು ಪ್ರತೀತ್ಯ ಸಮುತ್ಪಾದದ ಲಕ್ಷಣಗಳನ್ನಾಗಿಸುತ್ತಾನೆ ಮತ್ತು ಪ್ರತೀತ್ಯಸಮುತ್ಪಾದ ತತ್ವವು ಬುದ್ಧನಿಂದ ಉಪದೇಶಿತವಾದುದೆಂದು ಖಾತರಿ ಪಡಿಸುತ್ತಾನೆ. ಎಲ್ಲ ದೃಷ್ಟಿಗಳನ್ನು ನಿರಾಕರಿಸಿ, ತಮ್ಮದೊಂದು ನಿಲುವು ಇಲ್ಲದ ‘ಸ್ಥಿತಿಯಲ್ಲದ ಸ್ಥಿತಿ’ಯಲ್ಲಿ ನಿಂತ ಮಾಧ್ಯಮಿಕರು ತಮ್ಮ ‘ಇಲ್ಲದ ನಿಲು’ವನ್ನು ಪ್ರಸ್ತಾಪಿಸಿಲು ‘ಪರಸ್ಥಳ’ ವನ್ನವಲಂಬಿಸುತ್ತಾರೆ. ಪರಪಕ್ಷದ ಕ್ಷೇತ್ರದಲ್ಲಿ ನಿಂತು ಅವರ ನಿಲುವನ್ನು ಖಂಡಿಸುತ್ತಾರೆ ಈ ಎಂಟು ನಿರಾಕರಣೆಗಳನ್ನು ಸ್ವಲ್ಪ ವಿಸ್ತರಿಸಿ ನೋಡಬಹುದು.

. ಅನಿರೋಧಅನುತ್ಪಾದ

ಯಾವುದರ ಅಂತ್ಯವೆಂಬುದಿಲ್ಲ. ಚಲನಶೀಲವಾದ ಪ್ರಕ್ರಿಯೆಯಲ್ಲಿ ರೂಪಾಂತರವುಂಟೇ ಹೊರತು ಶಾಶ್ವತ ಅಂತ್ಯವೆಂಬ ಹಂತವೊಂದು ಇರುವುದಿಲ್ಲ. ಹಾಗೆಯೇ ಯಾವುದೂ ‘ಹೊಸದಾಗಿ’ ಉಂಟಾಗುವುದಿಲ್ಲ. ಸದಾಚಲನೆಯಲ್ಲಿ ಇರುವುದರ ರೂಪಾಂತರ ಸಾಧ್ಯವೇ ಹೊರತು ಹೊಸದೊಂದರ ಉದಯ ಸಾಧ್ಯವಾಗದು.

ಲೋಕಕ್ಕೊಂದು ಆದಿಯುಂಟು, ಒಂದು ಅಂತ್ಯವುಂಟು ಎಂಬ ಸಂಗತಿಗಳು ಕೇವಲ ಕಲ್ಪನೆಗಳು. ಕೇವಲ ಊಹೆಗೆ ಸಂಬಂಧಿಸಿದ ಸಂಗತಿಗಳನ್ನು ಕುರಿತಾದ ಪ್ರಶ್ನೆಗಳಿಗೆ ಬುದ್ದ ಮೌನ ತಾಳಿದ. ಅವನು ಕಾರಣ ಮೂಲಸಿದ್ಧಾಂತ ಮತ್ತು ಕಾರಣಾಂತ್ಯ ಸಿದ್ಧಾಂತಗಳನ್ನು ಚರ್ಚಾರ್ಹ ಸಂಗತಿಗಳೆಂದು ಮಾನ್ಯ ಮಾಡಲಿಲ್ಲ. ಲೋಕ ವಿವರಣೆಯನ್ನು ಹಾಗೆ ಪ್ರಥಮ ಕಾರಣವೊಂದರಿಂದ ಪ್ರಾರಂಭಿಸಬೇಕೆನ್ನುವುದೇ ಒಂದು ವಿಪರ್ಯಾಸ. ಆದುದರಿಂದ ಕೇವಲ ಊಹಾಧಾರಿತ ಚರ್ಚೆಗೆ ಬೌದ್ಧರು ಇಳಿಯಲಿಲ್ಲ. ಪ್ರಪಂಚದುದಯಕ್ಕೆ ಪ್ರಥಮ ಕಾರಣವನ್ನು ಕುರಿತಾದ ಚರ್ಚೆಗೆ ಅವರು ತೊಡಗದಿದ್ದುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಮೊದಲನೆಯಾಗಿ ಲೋಕವನ್ನು ನಿರಂತರ ಪ್ರವಾಹ ರೂಪಿಯಾಗಿ ಪರಿಭಾವಿಸಿದವರು ಪ್ರಾರಂಭವನ್ನು ಗುರುತಿಸಿಕೊಳ್ಳಲು ಸಾಧ್ಯವಿಲ್ಲ. ಹಾಗೇ ಪ್ರಾರಂಭವೊಂದನ್ನು  ಗುರುತಿಸಿಕೊಂಡರೆ ಅದರ ‘ನಿರಂತರತೆ’ ಭಂಗಗೊಂಡಂತೆಯೇ. ಹಾಗೆಯೇ ಅಂತ್ಯವೊಂದನ್ನು ಸೂಚಿಸಿದರೂ ಕೂಡ   ‘ನಿರಂತರತೆ’ ಭಂಗಗೊಳ್ಳುತ್ತದೆ. ಎರಡನೆಯದಾಗಿ ಅದು ಎಂತೂ ಅಗ್ರಾಹ್ಯ. ಹಾಗಾಗಿ ಅದು ಚರ್ಚೆಗೆ ಅನರ್ಹ.

ಮಹಾಮುನಿಯು ಅದಿಯ ಮೊದಲು
ತಿಳಿದಿಲ್ಲವೆಂದಿದ್ದಾನೆ
ಸಂಸಾರವು ನಿರಂತರವಾದದ್ದು.
ಅಲ್ಲಿ ಆದಿಯೂ ಇಲ್ಲ ಅಂತ್ಯವೂ ಇಲ್ಲ[4]
(ಕಾರಿಕೆ ೧, ಅಧ್ಯಾಯ ೧೧)

ಲೋಕ ಪ್ರಕ್ರಿಯೆ ‘ಮೊದಲು’ ಎಂಬುದು ಚರ್ಚೆಗೆ ಸ್ವೀಕಾರಾರ್ಹ ಸಂಗತಿಯಲ್ಲ. ಪ್ರಪಂಚದ ಪೂರ್ವಕೋಟಿ ಎಂಬುದು ಸ್ಫುಟವಲ್ಲ. ಹಾಗಾಗಿ,

ಕೊನೆ ಮೊದಲಿಲ್ಲದುದಕ್ಕೆ ಮಧ್ಯವೆಂಬುದು
ಹೇಗಿರಲಿಕ್ಕೆ ಸಾದ್ಯ?
ಅದುದರಿಂದ ಕೊನೆ, ಮೊದಲು ಅಥವಾ
ಮಧ್ಯ ಎಂದು ಗುರುತಿಸುವ ಕ್ರಮ ಸಲ್ಲ
(ಕಾರಿಕೆ ೨, ಅಧ್ಯಾಯ ೧೧)

ಸದಾ ಚಲನೆಯಲಿರುವ ಕೊನೆ ಮೊದಲಿಲ್ಲದುದಕ್ಕೆ ಮಧ್ಯವೆಂಬುದೂ  ಇರಲು ಸಾಧ್ಯವಿಲ್ಲ. ಲೋಕವಿವರಣೆಯಲ್ಲಿ ಸ್ಥಿತಬಿಂದುಗಳಿಗೆ ಅರ್ಥವಿಲ್ಲ. ಅದನ್ನು ಜೀವಪ್ರಕ್ರಿಯೆಗೆ ಅನ್ವಯಿಸಿದರೆ

ಹುಟ್ಟು ಮೊದಲು ಬರುತ್ತದೆ
ಜರೆಮರಣಗಳು ಇನ್ನೊಂದು ತುದಿ
ಎಂದಾದರೆ ಹುಟ್ಟು ಜರೆಮರಣಗಳ
ಸಂಬಂಧವನ್ನು ಕಳೆದುಕೊಳ್ಳುತ್ತದೆ
ಆಗ ಶಾಶ್ವತವೊಂದರ ಉದಯವಾಗುತ್ತದೆ
(
ಕಾರಿಕೆ ೩, ಅಧ್ಯಾಯ ೧೧)

ಜೀವ ಪ್ರಕ್ರಿಯೆಯನ್ನು ಭಿನ್ನ ಭಿನ್ನ ಘಟನೆಗಳನ್ನಾಗಿ ಗ್ರಹಿಸಿದಾಗ ಅವುಗಳ ನಡುವಿನ ಸಂಬಂಧದ ಕೊಂಡಿ ಕಳಚಿ ಹೋಗುತ್ತದೆ. ಹುಟ್ಟೆಂಬುದು ಸ್ವಬಾವಿಯೊಂದರ (ಸ್ವತಂತ್ರವಾದು ದೊಂದರ) ಉದಯವಲ್ಲ. ಹಾಗಾದರೆ ಅದು ಜರೆ ಮರಣಗಳ ಸಂಬಂಧದಿಂದ ಮುಕ್ತವಾಗಿ ಬಿಡುತ್ತದೆ. ಜರೆ-ಮರಣಗಳಿಲ್ಲದ್ದು ಶಾಶ್ವತವಾಗಿ ಬಿಡುತ್ತದೆ. ಜರೆ – ಮರಣಗಳು ಹುಟ್ಟಿನಲ್ಲಿಯೇ ಅಂತರ್ಗತವಾಗಿ ಈಗಾಗಲೇ ‘ಇವೆ’ ಎಂಬೂದೂ ಇದರ ಅಂತಾರ್ಥವಲ್ಲ. ಬದಲಿಗೆ ಪೂರ್ವಾಪರಗಳ ಕಲ್ಪನೆಗಳು ಉಂಟು ಮಾಡುವ ವಿಕಲ್ಪಗಳಿಗೆ ಪರಿಹಾರಗಳಿರುವುದಿಲ್ಲ ಎಂದು ಸೂಚಿಸುವದೇ ಆಗಿದೆ.

ಹುಟ್ಟು ನಂತರ, ಜರೆ ಮರಣ ಮೊದಲು ಎಂದಾದರೆ
ಜರಾ ಮರಣವು ಕಾರಣಹಿತವಾಗಿರುತ್ತದೆ
ಇನ್ನೂ ಹುಟ್ಟಿಲ್ಲದುದಕ್ಕೆ   ಜರಾ ಮರಣ ಹೇಗೆ ಸಾದ್ಯ?
(
ಕಾರಿಕೆ ೪, ಅಧ್ಯಾಯ ೧೧)

ರೇಕಾತ್ಮಕ ಗ್ರಹಿಕೆಯಲ್ಲಿ ಹುಟ್ಟನ್ನು ಜರಾ ಮರಣದ ನಂತರ ಇಟ್ಟರೆ ಅದರ (ಹುಟ್ಟಿನ) ಪೂರ್ವವೆಂಬುದರ ಸಂಬಂಧ ಸಾಧ್ಯವಾಗದೆ ಅದು ಅಸಂಭವಾಗುತ್ತದೆ. ಜರಾ ಮರಣದ ವಿವರಣೆಯೂ ಆಸಾಧ್ಯವಾಗುತ್ತದೆ. ಏಕೆಂದರೆ ಇನ್ನೂ ಹುಟ್ಟಿಲ್ಲದುದರ ಜರಾ ಮರಣ ಆತಾರ್ಕಿಕವಾಗುತ್ತದೆ.

ಹುಟ್ಟು ಮತ್ತು ಜರಾ ಮರಣಗಳು ಒಟ್ಟಿಗೇ ಸಂಭವಿಸಲಾರವು
ಹಾಗೇನಾದರೂ ಆದರೆ, ಹುಟ್ಟುತ್ತಿರುವುದು ಅದೇ ಸಮಯದಲ್ಲಿ
ಮರಣಿಸುತಿರುವುದೂ ಆಗಿ
ಎರಡೂ ಕಾರಣರಹಿತವಾಗುತ್ತವೆ
(
ಕಾರಿಕೆ ೫, ಅಧ್ಯಾಯ ೧೧)

ಆದುದರಿಂದ

ಮೊದಲು ಕೊನೆ ಅಥವಾ ಹುಟ್ಟು ಜರಾಮರಣಗಳನ್ನು
ಹೀಗೆ ಭಿನ್ನ ಮಾಡಿ ಗ್ರಹಿಸಲೇಕೆ?

ಜೀವ ಪ್ರಕ್ರಿಯೆ ಮತ್ತು ವಸ್ತು ನಿರಂತರ ಚಲನೆಯಲ್ಲಿರುವ ಪ್ರವಾಹ. ಇಲ್ಲಿ ಹುಟ್ಟು ಸಾವುಗಳೆಂಬುವು ಕಾಲ್ಪನಿಕ ಹಂತಗಳೇ ಹೊರತು ವಾಸ್ತವಗಳಲ್ಲ. ಆದುದರಿಂದ ಲೋಕ ಸಮಸ್ತವೂ ಅನೊರೋಧ ಮತ್ತು ಅನುತ್ಪಾದ.

 

[1] Studies in the Astasaharika Priajnparamita and other Essays -Linnart Mill pub. Motilal Banarasidas Pub Delhi, P. p. 147, 2005

[2] Nagariuna’ s Philosophy – K. Venkataraman -do-

[3]ಪಂಚೇಂದ್ರಿಯಗಳಮೂಲಕಉಂಟಾಗುವಸಂಬಂಧಎಂಬರ್ಥದಲ್ಲಿ

[4]ಈಕೃತಿಯಲ್ಲಿಉದ್ಧೃತಗೊಂಡಿರುವ ‘ಕಾರಿಕೆ’ ಗಳುಇದೇಲೇಖಕನ ‘ನಾಗಾರ್ಜುನನಮೂಲಮಧ್ಯಮಕಕಾರಿಕಾ’ ಕೃತಿಯಿಂದಆರಿಸ್ಪಟ್ಟಿವೆ.