.ಅನುಚ್ಛೇದಆಶಾಶ್ವತ

ಯಾವುದೂ ಉಚ್ಛೇದಗೊಳ್ಳದು ಯಾವುದಕ್ಕೂ ವಿನಾಶವೆಂಬುದಿಲ್ಲ
ಯಾವುದೂ ಶಾಶ್ವತವಲ್ಲ. ಎಲ್ಲವೂ ನಿರಂತರ ಬದಲಾವಣೆಗೊಳ
ಪಟ್ಟಿದೆ

ವಸ್ತುವೊಂದು ಶಾಶ್ವತತೆಯನ್ನು ಪಡೆಯಲು ಸ್ವತಂತ್ರ ಅಸ್ತಿತ್ವವನ್ನು ಪಡೆದಿರಬೇಕಾಗುತ್ತದೆ. ಅಂತಹ ಸ್ವತಂತ್ರ ಅಸ್ತಿತ್ವ ಉಂಟೆ? ಎಂಬುದನ್ನು ನಾಗಾರ್ಜುನ ತನ್ನ ಕಾರಿಕಾದ ಹದಿನೈದನೆಯ ಅಧ್ಯಾಯದಲ್ಲಿ ವಿಶ್ಲೇಷಿಸುತ್ತಾನೆ. ವಸ್ತುವಿಗೆ ತನ್ನ ಸ್ವತಂತ್ರ ಅಸ್ತಿತ್ವವನ್ನು ಮತ್ತು  ಶಾಶ್ವತ ಅಸ್ತಿತ್ವವನ್ನು ಸಿದ್ಧಗೊಳಿಸಲು ಅದರದ್ದೇ ಆದ ಏನಾದರೂ ಉಂಟೆ? ಎಂದು ಪರೀಕ್ಷಿಸುತ್ತಾನೆ.

ಕಾರಣ ಪ್ರತ್ಯಯಗಳಿಂದ ಸ್ವಭಾವ (ಸ್ವತಂತ್ರ ಅಸ್ತಿತ್ವ) ವು ಸಂಭವಿಸುತ್ತದೆ
ಎನ್ನುವುದು ಯುಕ್ತವಲ್ಲ.
ಕಾರಣ ಪ್ರತ್ಯಯಗಳಿಂದ ಸಂಭವಿಸಿದ
ಸ್ವಭಾವವು ಕೃತಕವಾದುದಾಗಿರುತ್ತದೆ.
(
ಕಾರಿಕೆ ೧ ಅಧ್ಯಾಯ ೧೫)

ಎಲ್ಲ ವಿದ್ಯಮಾನಗಳನ್ನು ಸಾಪೇಕ್ಷ ಕಾರಣ ಮತ್ತು ಪ್ರತ್ಯಯ (ಪರಿಸ್ಥಿತಿ) ಗಳಿಂದಾದ ಪರಿಣಾಮಗಳೆಂದು ಬೌದ್ಧ ಧರ್ಮವು ವಿವರಿಸುತ್ತದೆ. ಉದಾಹರಣೆಯೊಂದರ ಮೂಲಕ ವಿವರಿಸುವುದಾರೆ ‘ಮೊಳಕೆ’ ಎನ್ನುವುದು, ಬೀಜ ಎನ್ನುವ ‘ಸಾಪೇಕ್ಷ ಕಾರಣ’ ಮತ್ತು ಅದು ಮೊಳೆಯಲು ಅಗತ್ಯವಾದ ಪರಿಸ್ಥಿಗಳಾದ ನೀರು, ಶಾಖ ಇತ್ಯಾದಿಗಳ ಪರಿಣಾಮವಾಗಿರುತ್ತದೆ. ಇಲ್ಲಿ ಬೀಜ ಮತ್ತು  ಮೊಳಕೆ ಎರಡೂ ಅನುಕ್ರಮವಾಗಿ ‘ಸಾಪೇಕ್ಷ ಕಾರಣ’ ಮತ್ತು  ‘ಸಾಪೇಕ್ಷ ಪರಿಣಾಮ’ ಗಳಾಗಿವೆ. ಅವು ಸಾಪೇಕ್ಷ ಯಾಕೆಂದರೆ ಬೀಜವು ಮೊಳಕೆಗೆ ಕಾರಣವಾದರೆ ಅದು ಉಂಟಾದ ಗಿಡದ ಅಥವಾ ಮರದ ಹಣ್ಣಿಗೆ ಪರಿಣಾಮವಾಗಿರುತ್ತದೆ. ಇಲ್ಲಿ ಮೊಳಕೆಯು ಬೀಜಕ್ಕೆ ಪರಿಣಾಮವಾದರೆ ಅದರ ಮುಂದಿನ ಹಂತವಾದ ಸಸಿಗೆ ಕಾರಣವಾಗುತ್ತದೆ. ಹಾಗಾಗಿ ಬೀಜ-ಮೊಳಕೆ-ಸಸಿ-ಗಿಡ ಹೂ-ಹಣ್ಣು-ಬೀಜ-ಮೊಳಕೆ…… ಈ ಸರಣಿಯಲ್ಲಿ ಯಾವುದೂ ಸ್ವತಂತ್ರ ಹಂತವಲ್ಲ.

ಸ್ವ-ಭಾವಿಯಾದುದು (ಸ್ವತಂತ್ರ ಅಸ್ತಿತ್ವವುಳ್ಳದು) ತನ್ನ ವ್ಯಾಖ್ಯಾನದಿಂದಲೇ ಮತ್ತೊಂದನ್ನು ಅವಲಂಬಿಸಿ ಉಂತಾದುದಲ್ಲ. ಮತ್ತೊಂದನ್ನು ಅವಲಂಬಿಸಿ ಉಂಟಾದುದು ‘ಕೃತಕ’ ವಾದುದಾಗಿರುತ್ತದೆ. ಆದನ್ನು ಶಾಶ್ವತವೆನ್ನಲಾಗದು.

ಸ್ವಭಾವವಿಲ್ಲದಿರಲು ಪರಭಾವವುಂಟೆ?
ಪರಭಾವವು ಪರವಸ್ತುವಿನ ಸ್ವಭಾವವಲ್ಲವೆ?
(
ಕಾರಿಕೆ ೩ ಅಧ್ಯಾಯ ೧೫)

ಸ್ವ -ಭಾವ ಪರಭಾವಗಳು ಸಾಪೇಕ್ಷ ಪರಿಕಲ್ಪನೆಗಳು ಒಂದು ಮತ್ತೊಂದರ ನೆರವಿನಿಂದಲೇ ಉಂಟಾಗಬೇಕು. ‘ಪರಭಾವ’ ಪದದ ಅರ್ಥ ಸಾಧ್ಯತೆಯೆಂದರೆ ತನ್ನಲ್ಲಿ ಉಂಟುಮಾಡಿ ಕೊಳ್ಳಲಾಗದ ಶಾಶ್ವತೆಯನ್ನು ಮತ್ತೊಂದು ವಸ್ತುವಿನಲ್ಲಿ ಉಂಟುಮಾಡುವುದು. ಆ ಪರಿಶೀಲನೆಯನ್ನೂ ನಾಗಾರ್ಜುನ ನಡೆಸುತ್ತಾನೆ. ಅಂತಹ ಸಾಧ್ಯತೆ ಇರುವುದಾರೆ ಅದು ಪರವಸ್ತುವಿನ ‘ಸ್ವ -ಭಾವ’ ದ ಸಾಧ್ಯಾ ಸಾಧ್ಯತೆಗಳು ಅದಕ್ಕೂ ಅನ್ವಯವಾಗಿ ಬಿಡುತ್ತವೆ.

ಸ್ವಭಾವ ಪರಭಾವಗಳೆಂದು
ಅಸ್ತಿತ್ವ ನಾಸ್ತಿತ್ವಗಳೆಂದು
ಗ್ರಹಿಸುವವರು ಬುದ್ಧ ಸಾಸನದ ಸತ್ಯವನ್ನು ಅರಿಯಲಾರರು,
(
ಕಾರಿಕೆ ೬ ಅಧ್ಯಾಯ ೧೫)

ಏಕೆಂದರೆ

ಅಸ್ತಿತ್ವವುಂಟು ಎಂದರೆ ಶಾಶ್ವತವಾದ
ಇಲ್ಲ ಎಂದರೆ ಉಚ್ಛೇದವಾದ
ಆದುದರಿಂದ ವಿಚಕ್ಷಣೆಯುಳ್ಳವನು
ಅಸ್ತಿತ್ವ ನಾಸ್ತಿತ್ವಗಳೆರಡರಲ್ಲೂ ವಿಶ್ವಾಸವಿಡುವುದಿಲ್ಲ
(
ಕಾರಿಕೆ ೧೦ ಅಧ್ಯಾಯ ೧೫)

ಕೊನೆಯದಾಗಿ

ಮೂಲ ಪ್ರಕೃತಿಯೇ ಇಲ್ಲವೆಂದರೆ
ಆಗುವ ಬದಲಾವಣೆ ಯಾರದ್ದು?
ಮೂಲ ಪ್ರಕೃತಿಉಂಟು ಎಂದರೆ
ಆಗುವ ಬದಲಾವಣೆ ಯಾರದ್ದು?
(
ಕಾರಿಕೆ ೯ ಅಧ್ಯಾಯ ೧೫)

ವಸ್ತುವೆಂಬುದು ಇಲ್ಲವೇ ಇಲ್ಲ (ಉಚ್ಛೇದವಾದ) ಎಂದರೆ ಬದಲಾವಣೆ ಸಾಧ್ಯವಿಲ್ಲ. ಏಕೆಂದರೆ ಅದು ಅಸ್ತಿತ್ವದಲ್ಲಿಯೇ ಇಲ್ಲ. ವಸ್ತುವೆಂಬುದು ಶಾಶ್ವತವಾಗಿ ಇದೆ ಎಂದರೆ ಆಗಲೂ  ಬದಲಾವಣೆ ಅಸಾಧ್ಯ. ಏಕೆಂದರೆ ಅದು ಶಾಶ್ವತವಾದದ್ದು. ಹಾಗಾಗಿ ವಸ್ತು ಪ್ರಪಂಚವನ್ನು ಇದೆ, ಇಲ್ಲ, ಇದೆ ಇಲ್ಲ ಎರಡೂ ಹೌದು, ಇದೆ ಇಲ್ಲ ಎರಡೂ ಇಲ್ಲ- ಈ ನಾಲ್ಕು ಕ್ರಮದಲ್ಲಿ ವಿವರಿಸಲಾಗದು. (ಈ ನಾಲ್ಕೂ ತುದಿಗಳಿಂದ ಲೋಕವನ್ನು ವಿವರಿಸುವುದನ್ನು ‘ಚತುಷ್ಕೋಟಿ’ (tetralemma) ಎಂದು ಸೂಚಿಸುತ್ತಾರೆ). ನಾಗಾರ್ಜುನ ಈ  ಚತುಷ್ಕೋಟಿಗಳನ್ನು ದಾಟಿ ಲೋಕವನ್ನು ಪ್ರತೀತ್ಯ ಸಮುತ್ಪಾದವೆಂದು ವಿವರಿಸಿದನು. ಹಾಗಾಗಿ ಪ್ರತೀತ್ಯ ಸಮುತ್ಪಾದವು ಅನುಚ್ಛೇದ ಮತ್ತು ಆಶಾಶ್ವತ.

. ಅನೇಕಾರ್ಥಅನಾನಾರ್ಥ

ಲೋಕ ಪ್ರವಾಹದಲ್ಲಿ ಕಾಣಬರುವ ಸಂಯೋಜನೆಗಳು ಒಂದರಿಂದ ಇನ್ನೊಂದು ಭಿನ್ನವೂ ಅಲ್ಲ, ಅಭಿನ್ನವೂ ಅಲ್ಲ. ಪ್ರಕ್ರಿಯೆಯನ್ನು ಭಿನ್ನಾಭಿನ್ನಗಳ ಮೂಲಕ ವಿವರಿಸಲು ಸಾಧ್ಯವಾಗದು. ಭಿನ್ನಾಭಿನ್ನ ನಿರಾಕರಣೆಯ ಸಲಕರಣೆಯು ಹೇಗೆ ಬಳಕೆಗೊಂಡಿದೆ ಎಂಬುದನ್ನು ಮುಂದಿನ ಪುಟಗಳಲ್ಲಿ ಚರ್ಚಿಸಲಾಗಿದೆ.

ಲೋಕವಿವರಣೆಯಲ್ಲಿ ಭಿನ್ನಾಭಿನ್ನ ನಿರಾಕರಣೆ,  ನಾಗಾರ್ಜುನನ ತಾತ್ವಿಕತೆ ಒಂದು ಮುಖ್ಯ ವಿನ್ಯಾಸ. ಮೂಲಮಧ್ಯಮಕಕಾರಿಕಾದ ತಾತ್ವಿಕತೆ  ಪ್ರಸ್ತಾಪಿತವಾಗುವುದೇ ಈ ವಿನ್ಯಾಸದಲ್ಲಿ .ನಾಗಾರ್ಜುನ ಕಾಲಕ್ಕೆ ಅನೇಕ ಚಿಂತನಾ ಪ್ರಸ್ಥಾನಗಳು ಎದುರು ನಿಂತು ಸೆಣಸುತ್ತಿದ್ದವು. ಹಾಗಾಗಿ ತನ್ನ ತಾತ್ವಿಕತೆಯನ್ನು ಎದುರಾಳಿಗಳು ಒಪ್ಪಿಕೊಳ್ಳಬೇಕಾದ ತಾರ್ಕಿಕ ಅಂತ್ಯದವರೆಗೆ ತಂದು ನಿಲ್ಲಿಸಬೇಕಾಗಿತ್ತು. ಇದರಿಂದಾಗಿ ಅವನು ಯಾವ ವಿದ್ಯಮಾನವನ್ನು ವಿಶ್ಲೇಷಿಸಿದರೂ ಅದರ ಪೂರ್ಣ ಪ್ರಾಪಂಚಿಕ ಸಾಧ್ಯತೆಗಳನ್ನು ಮೊದಲು ಗುರುತಿಸಿಕೊಂಡು ಎಲ್ಲವನ್ನೂ  ವಿಶ್ಲೇಷಣೆಗೆ ಒಡ್ಡುತ್ತಿದ್ದನು. ಸಂಯೋಜನೆಗಳ ಸಂಬಂಧ ವಿನ್ಯಾಸವನ್ನು ವಿವರಿಸಲು ಭಿನ್ನಾಭಿನ್ನ ನಿರಾಕರಣೆ ಒಂದು ಕ್ರಮ. ಭಿನ್ನಾಭಿನ್ನ ನಿರಾಕರಣೆಗೊಳ್ಳದ ಹೊರತು ಸಂಬಂಧ ಉಂಟಾಗದು. ಇದರ ಅನ್ವಯದ ಮಾದರಿಯನ್ನು ಕೆಲವು ಕಾರಿಕೆಗಳ ಮೂಲಕ ಗಮನಿಸಬಹುದು. ಈ ಪರಿಕರವನ್ನು ಎರಡು ರೀತಿಯಲ್ಲಿ ಬಳಸಲಾಗಿದೆ. ಮೊದಲೆಯದಾಗಿ ಕಾರಣ ಮತ್ತು ಪರಿಣಾಮಗಳ ಸಂಬಂಧವನ್ನು ವ್ಯಾಖ್ಯಾನಿಸಲು ಮತ್ತು ಎರಡನೆಯದಾಗಿ ಪ್ರವಾಹ ರೂಪೀ ವಿದ್ಯಮಾನದ ಮುಂದುವರಿಕೆಯನ್ನು ವಿವರಿಸಲು ಬಳಸಲಾಗಿದೆ.

ಮೂಲಮಧ್ಯಮಕಕಾರಿಕಾದ ಹತ್ತನೆಯ ಅಧ್ಯಾಯ ಆಗ್ನಿ ಇಂಧನ ಪರೀಕ್ಷೆಯನ್ನು ಕುರಿತದ್ದಾಗಿದೆ. ಕಾರಿಕಾದಲ್ಲಿ ಈ ಅಧ್ಯಾಯಕ್ಕೆ ವಿಶೇಷ ಸ್ಥಾನವಿದೆ. ಕಾರಣ ಪರಿಣಾಮಗಳನ್ನು ಭಿನ್ನ-ಅಭಿನ್ನಗಳ ಮೂಲಕ ವಿವರಿಸುವ ಅನೇಕ ಪ್ರಸ್ಥಾನಗಳು ನಾಗಾರ್ಜುನನ  ಕಾಲದಲ್ಲಿ ಲೋಕವಿವರಣೆಗೆ ತೊಡಗಿದ್ದವು. ಹಾಗಾಗಿ ಅಂತಹ ಪ್ರಸ್ಥಾನಗಳ ಮಿಥ್ಯಾದೃಷ್ಟಿಯನ್ನು ಸರಳ, ಸಮಾನ್ಯ ತರ್ಕದ ಮೂಲಕವೂ ಅನಾವರಣ ಮಾಡಬೇಕಿತ್ತು. ಅಂತಹ ಪ್ರಯತ್ನವನ್ನು ನಾಗಾರ್ಜುನ ಇಲ್ಲಿ ಮಾಡುತ್ತಾನೆ.

ಅಗ್ನಿ ಮತ್ತು ಇಂಧನ ಒಂದೇ ಎಂದಾದರೆ
ಕರ್ತೃ ಮತ್ತು ಕರ್ಮ ಒಂದೇ ಎಂದಾಗುತ್ತದೆ.
ಅಗ್ನಿ ಮತ್ತು ಇಂಧನ ಬೇರೆ ಬೇರೆ ಎಂದಾದರೆ
ಅಗ್ನಿ ಇಂಧನವಿಲ್ಲದೆಯೂ ಇರಬಲ್ಲುದಾಗುತ್ತದೆ
(
ಕಾರಿಕೆ ೧ ಅಧ್ಯಾಯ ೧೦)

ಅಗ್ನಿ ಮತ್ತು ಇಂಧನ ಅಭಿನ್ನ ಎಂದಾದರೆ ಮತ್ತೊಂದು ಉಂಟಾಗುವ ಸಾಧ್ಯತೆಯೆ ಇಲ್ಲದ ಕ್ರಿಯಾಹೀನತೆ ಉಂಟಾಗುತ್ತದೆ. ಇಂಧನ ಅಗ್ನಿ ಬೇರೆ ಬೇರೆ ಎಂದಾದರೆ ಅಗ್ನಿಗೆ ಕಾರಣವೇ ಬೇಕಿಲ್ಲವೆಂದಾಗುತ್ತದೆ.

ಕಾರಣವಿಲ್ಲದೆ ಉಂಟಾದ ಅಗ್ನಿ ನಿತ್ಯವಾಗುತ್ತದೆ
ಅದರ ಪ್ರಾರಂಭವೆನ್ನುವುದು ಅರ್ಥಹೀನವಾಗುತ್ತದೆ
ಹೀಗಾದಾಗ ಅದು ಕ್ರಿಯಾಹೀನವಾಗುತ್ತದೆ
(
ಕಾರಿಕೆ ೨ ಅಧ್ಯಾಯ ೧೦)

ಇಂಧನವೆಂಬ ಕಾರಣವಿಲ್ಲದೆ ಮತ್ತು ಘರ್ಷಣೆ ಇತ್ಯಾದಿ ಪರಿಸ್ಥಿತಿ ಒಗ್ಗೂಡದೆ ಅಗ್ನಿ ಎಂಬ ಪರಿಣಾಮ ಉಂಟಗುವುದಿಲ್ಲ. ಕಾರಣ ಮತ್ತು ಪರಿಣಾಮಗಳು ಬೇರೆ ಬೇರೆ ಎಂದಾದರೆ ಅಗ್ನಿ ಇಂಧನವೆಂಬ ಕಾರಣದ ಹೊರತಾಗಿಯೂ ಇರಬಲ್ಲದು ಎಂದಾಗುತ್ತದೆ.

ಅಗ್ನಿ ಸ್ವತಂತ್ರ ಎಂದಾದರೆ
ಅದು ಪ್ರಾರಂಭವಾಗಲು ಕಾರಣದ ಅಗತ್ಯವಿಲ್ಲ
ಹಾಗೇನಾದರೂ ಅಗ್ನಿ ಸ್ವತ್ರಂತ್ರವಾಗಿ ಇದ್ದಲ್ಲಿ ಅದು ನಿತ್ಯವಾಗುತ್ತದೆ
ನಿತ್ಯವಾದುದರ ಪ್ರಾರಂಭವೆನ್ನುವುದು ಅರ್ಥಹೀನ
(
ಕಾರಿಕೆ ೩ ಅಧ್ಯಾಯ ೧೦)

ಇಲ್ಲಿ, ಉರಿಯುತ್ತಿರುವಾಗ ಇಂಧನವೇ ಅಗ್ನಿ
ಎನ್ನುವುದಾದರೆ ಯಾವುದರಿಂದ ಅದನ್ನು ಹತ್ತಿಸಬೇಕು?
(
ಕಾರಿಕೆ ೪ ಅಧ್ಯಾಯ ೧೦)

ಉಷ್ಣವು ಅಂತರ್ಗತವಾಗಿ ಇಂಧನದಲ್ಲಿ ಇದೆ ಎಂದಾದರೆ ಅಡು ಈಗಾಗಲೇ ಉರಿಯುತ್ತಿರಬೇಕು. ಏಕೆಂದರೆ ಅಗ್ನಿಯ ಲಕ್ಷಣವೇ ಉರಿಯುವುದು. ಉರಿಯದ ಅಗ್ನಿ ಇರಲಾರದು. ಹಾಗದರೆ ಅಗ್ನಿ ಪ್ರಾರಂಭವಾದದ್ದು ಯಾವಾಗ ಎಂದಾಗಲೀ ಕಾರಣವನ್ನಾಗಲೀ ಪ್ರಶ್ನಿಸುವಂತೆಯೇ ಇಲ್ಲ. ಮತ್ತೂ ಮುಂದಕ್ಕೆ –

(ಇಂಧನದಿಂದ) ಅನ್ಯವಾಗಿ ಇರುವ ಅಗ್ನಿ ಅದನ್ನು ತಲುಪುದಿಲ್ಲ
ಸಂಪರ್ಕಕ್ಕೆ ಸಿಗದ್ದು ಹತ್ತಿಕೊಳ್ಳುವುದಿಲ್ಲ
ಹತ್ತಿಕೊಳ್ಳದೇ ಇರುವುದು ನಂದುವುದಿಲ್ಲ
ನಂದದಿರುವುದು ನಿತ್ಯವಾಗುತ್ತದೆ
(
ಕಾರಿಕೆ ೫ ಅಧ್ಯಾಯ ೧೦)

ಅಗ್ನಿ ಮತ್ತು ಇಂಧನ ಪ್ರತ್ಯೇಕ ಎಂದಾದರೆ ಪ್ರಶ್ನೆಗಳ ಸರಮಾಲೆಯೇ ಎದುರಾಗುತ್ತದೆ. ಪ್ರತ್ಯೇಕ ಎಂದರೆ ಸ್ವತ್ರಂತ್ರ ಅಸ್ತಿತ್ವ ಎಂದಾಗುತ್ತದೆ. ಸ್ವತ್ರಂತ್ರ ಅಸ್ತಿತ್ವವುಳ್ಳದ್ದು ಅನ್ಯವನ್ನು ತಲುಪುವುದಿಲ್ಲ. ಆಗ್ನಿ ಇಂಧನದ ಸಂಪರ್ಕವೇ ಏರ್ಪಡುದಿಲ್ಲ. ಅವೆರಡರ ಸಂಪರ್ಕ ಏರ್ಪಡದಿದ್ದರೆ ಅಗ್ನಿ ಉರಿಯುವುದಿಲ್ಲ.

ಅಗ್ನಿಯು ಇಂಧನದಿಂದ ಅನ್ಯವಾದಾಗ
ಹೆಣ್ಣು ಗಂಡನ್ನು ಸೇರುವಂತೆ ಗಂಡು ಹೆಣ್ಣನ್ನು ಸೇರುವಂತೆ
ಅಗ್ನಿಯು ಇಂಧನವನ್ನು ಸೇರುತ್ತದೆ
(
ಕಾರಿಕೆ ೬ ಅಧ್ಯಾಯ ೧೦)

ಇದು ಪೂರ್ವಪಕ್ಷದ ನಿಲುವು. ಎರಡರ ನಡುವಿನ ಪೂರಕ ಸಂಬಂಧದ ಒಂದು ಸಾಧ್ಯೆತೆಯಾಗಿ ಈ ನಿಲುವನ್ನು ನಾಗಾರ್ಜುನ ಪರೀಕ್ಷೆಗೆ ಸ್ವೀಕರಿಸುತ್ತಾನೆ.

ಅಗ್ನಿ ಮತ್ತು ಇಂಧನ ಪ್ರತ್ಯೇಕಿತವಾಗಿದ್ದರೆ
ಅಗ್ನಿ ಇಂಧನದಿಂದ ಭಿನ್ನವಾಗಿದ್ದರೂ
ಅದನ್ನು ಸೇರಬಹುದು
(
ಕಾರಿಕೆ ೭ ಅಧ್ಯಾಯ ೧೦)

ಅಕರ್ಷಣೆಯ ಸಂಬಂಧ ಪ್ರತ್ಯೇಕಿತರಾಗಿದ್ದಾಗ ಮಾತ್ರ ಸಾಧ್ಯವಾಗುವಂಥದ್ದು . ಅಗ್ನಿ ಇಂಧನ ಪ್ರತ್ಯೇಕ ಸ್ವತಂತ್ರ ಅಸ್ತಿತ್ವವುಳ್ಳವುಗಳಲ್ಲ. (ಅವುಗಳೆರಡೂ ಒಂದೇ ಅಲ್ಲ ಎನ್ನುವುದೂ ಅಷ್ಟೇ ಮುಖ್ಯವಾದದ್ದು). ಪ್ರತ್ಯೇಕವಲ್ಲದವುಗಳ ನಡುವೆ ಅಕರ್ಷಣೆಯ  ಮಾತು ಅಸಂಬದ್ಧ. ಹಾಗಾಗಿ ಸ್ತ್ರೀಪುರುಷರ ಅಕರ್ಷಣೆಯ ಹೋಲಿಕೆಯನ್ನು ಇಲ್ಲಿಗೆ ಅನ್ವಯಿಸಲಾಗದು. ಯಾವುದೇ  ಸಂಬಂಧಗಳನ್ನು  ನಾಗಾರ್ಜುನ  ಸ್ವೀಕರಿಸಲು ಸಿದ್ಧ, ವಿಶ್ಲೇಷಿಸಲೂ ಸಿದ್ಧ. ಆದರೆ ಅವುಗಳ ಮೂಲಕ ಸ್ವತಂತ್ರ ಅಸ್ತಿತ್ವವುಳ್ಳ ವಸ್ತುವೊಂದನ್ನು ಸಿದ್ಧಪಡಿಸುವ ಪ್ರಯತ್ನವಿದ್ದರೆ, ತಕ್ಷಣ ಅದನ್ನು ಹತ ಮಾಡಿಬಿಡುತ್ತಾನೆ.

ಅಗ್ನಿ ಇಂಧನದ ಸಂಬಂಧಕ್ಕೆ ಸ್ತ್ರೀಪುರುಷರ  ಪರಸ್ಪರಾಕರ್ಷಣೆಯ ಸಂಬಂಧವನ್ನು ಹೋಲಿಸುವಲ್ಲಿ ಒಂದು ವೈಷಮ್ಯವಿದೆ. ಅದೇನೆಂದರೆ ಸ್ತ್ರೀಪುರುಷರು ಪರಸ್ಪರಾವಲಂಬಿಗಳಾದರೂ ಭಿನ್ನ ವಾಸ್ತವಿಕ ಅಸ್ತಿತ್ವವುಳ್ಳವರು. ಅಗ್ನಿ ಇಂಧನನಗಳಿಗೆ ಭಿನ್ನ ದೇಶಾವಸ್ಥೆ ಇಲ್ಲ. ಸ್ತ್ರೀ ಪುರುಷರು ಪರಸ್ಪರಾಪೇಕ್ಷೆ ಇಲ್ಲದೆ ಹೊತ್ತು ಭಿನ್ನ ದೇಶಾವಸ್ಥೆಯಲ್ಲಿರುತ್ತಾರೆ. ಆ ಸಂಬಂಧದ ಸ್ವರೂಪವೇ ಬೇರೆ.

ಅಗ್ನಿಯನ್ನವಲಂಬಿಸಿ ಇಂಧನವೂ
ಇಂಧನವನ್ನವಲಂಬಿಸಿ ಅಗ್ನಿಯೂ ಇರುತ್ತಾವಾದರೆ
ಯಾವುದರ ಪೂರ್ವ ನಿಷ್ಟನ್ನದಿಂದ
ಅಗ್ನಿಯು ಇಂಧನವನ್ನವಲಂಬಿಸುವಂತಾಗುತ್ತದೆ?
(
ಕಾರಿಕೆ ೮ ಅಧ್ಯಾಯ ೧೦)

ವಸ್ತುವಾದಿಗಳ ಯಾವ ಹತಾಶೆಯ ಪ್ರಯತ್ನವನ್ನೂ ಬಿಡದೆ ಎದುರಿಸುವ ನಾಗಾರ್ಜುನ, ಯಾವುದರ ಪೂರ್ವನಿಷ್ಟನ್ನವೂ ಅಂತಿಮವಾಗಿ ಸ್ವತಂತ್ರಸ್ತಿತ್ವವನ್ನು ಪ್ರಶ್ನಾತೀತವಾಗಿ ಸಿದ್ಧಮಾಡಿಬಿಡುತ್ತದೆ ಎಂಬುದನ್ನು ಮುಂದಿಡುತ್ತಾನೆ.

ಭಾವವೊಂದು ತನ್ನ ಸಿದ್ಧಿಗಾಗಿ ಇನ್ನೊಂದನ್ನು ಅಪೇಕ್ಷಿಸುತ್ತದೆ
ಎಂದಾದರೆ  ಆ ಇನ್ನೊಂದು ತನ್ನ ಸಿದ್ಧಿಗಾಗಿ ಇದನ್ನು ಅಪೇಕ್ಷಿಸುತ್ತದೆ
ಎಂದಾದರೆ ಅಪೇಕ್ಷಿಸುತ್ತಿರುವ ಅವು ಈಗಾಗಲೇ ಇವೆ ಎಂದಾಗುತ್ತದೆ
ಹಾಗಾದರೆ ಅಪೇಕ್ಷೆಯ ಮಾತೇಕೆ?
(
ಕಾರಿಕೆ ೧೦ ಅಧ್ಯಾಯ ೧೦)

ಸಂಬಂಧದಲ್ಲಿ ಉಂಟಾಗಬೇಕಾದವುಗಳಿಗೆ ಸಂಬಂಧಪೂರ್ವದಲ್ಲಿಯೇ ಸ್ವತಂತ್ರಾಸ್ತಿತ್ವ ಸಾಧ್ಯವಾಗುವುದಾದರೆ ಸಂಬಂಧವೇ ಉಂಟಾಗದು. ಅದರ ಅಗತ್ಯವೂ ಇರುವುದಿಲ್ಲ. ಸಿದ್ಧಗೊಂಡ ಮತ್ತು ಇನ್ನೂ ಸಿದ್ಧಗೊಳ್ಳದ ಎರಡೂ ಸ್ಥಿತಿಯಲ್ಲಿ ಸ್ವತಂತ್ರ ವಸ್ತುವಿನ ಸಾಧ್ಯತೆಯನ್ನು ನಾಗಾರ್ಜನ ಅಲ್ಲಗಳೆಯುತ್ತಾನೆ. ಹಾಗಾದರೆ ಆ  ಸಂಬಂಧದ ಕ್ರಮವೇನು?

ಅಗ್ನಿಯು ಇಂಧನವನ್ನವಲಂಬಿಸಿ ಇಲ್ಲಇಂಧನವನ್ನವಲಂಬಿಸದೆಯೂ ಇಲ್ಲ
ಇಂಧನ ಅಗ್ನಿಯನ್ನವಲಂಬಿಸಿ ಇಲ್ಲ; ಅಗ್ನಿಯನ್ನವಲಂಬಿಸದೆಯೂ ಇಲ್ಲ
(
ಕಾರಿಕೆ ೧೨ ಅಧ್ಯಾಯ ೧೦)

ಸಂಬಂಧವೆನ್ನುವುದು ಎರಡು ‘ಸಿದ್ಧ’ ವಸ್ತುಗಳ ನಡುವೆ ನಡೆಯುವ ಸಂಯೋಜನೆಯಲ್ಲ. ಸಂಯೋಜನೆಯ ನಂತರವೂ ಸ್ವತಂತ್ರ ವಸ್ತುವೊಂದು ಸಿದ್ಧಸಿಲ್ಲ. ಸಂಬಧಪೂರ್ವದಲ್ಲಿಯೋ, ಸಂಬಂಧಸಮಾನಾಂತರದಲ್ಲಿಯೋ, ಸಂಬಂಧೋತರದಲ್ಲಿಯೋ ಸ್ವತಂತ್ರ ವಸ್ತುವೊಂದನ್ನು ಹುಡುಕುವ ಹಠಕ್ಕೆ ಬಿದ್ದ ಮನಸ್ಸಿಗೆ, ಅಂತಹ ಸ್ವತಂತ್ರ ವಸ್ತುವಿಲ್ಲದ, ಸಂಬಂಧದಲ್ಲಿ ಮಾತ್ರ ಉಂಟಾಗಿ ಸಂಬಂಧ ಭಂಗಗೊಂಡಾಗ ನಿರಸಗೊಳ್ಳುವ ಪ್ರಕ್ರಿಯೆಯನ್ನು, ವಸ್ತುವೆಂಬ ಸಿದ್ಧಸ್ಥಿತಿಯನ್ನು ಎಂದೂ ತಲುಪದ ಪ್ರವಾಹರೂಪೀ ವಿದ್ಯಮಾನವನ್ನು ತಿಳಿಸುವ ಪ್ರಯತ್ನವನ್ನು ನಾಗಾರ್ಜುನ ಪುನಃ ಪುನಃ ಮಾಡುತ್ತಿದ್ದಾನೆ. ಚಲನರೂಪೀ  ಸಂಬಂಧವನ್ನು ಸ್ಥಿತಗೊಳಿಸಿ ನುಡಿಯಾಲಾಗದು ಎಂಬುದು ಅವನ ಇಂಗಿತವಾಗಿದೆ.

ಮತ್ತು ಮುಂದಕ್ಕೆ, ಇಂಧನನವೇ ಅಗ್ನಿಯಲ್ಲ
ಇಂಧನದ ಹೊರತಾಗಿಯೂ ಅಗ್ನಿಯಲ್ಲ
ಅಗ್ನಿಯಲ್ಲಿ ಇಂಧನವಿಲ್ಲ ಇಂಧನದಲ್ಲಿ ಅಗ್ನಿ ಇಲ್ಲ
(
ಕಾರಿಕೆ ೧೪ ಅಧ್ಯಾಯ ೧೦)

ಅಗ್ನಿ ಇಂಧನದ ಯಾಖ್ಯಾನವು ಆತ್ಮ ಉಪಾದಾನಗಳ
ಸಂಬಂಧಕ್ಕೂ ಅನ್ವಯವಾಗುತ್ತದೆ ಹಾಗೆಯೇ
ಮಣ್ಣುಮಡಿಕೆ , ದಾರಬಟ್ಟೆ ಇತ್ಯಾದಿಗಳಿಗೂ ಅನ್ವಯಿಸಬಹುದು
(
ಕಾರಿಕೆ ೧೫ ಅಧ್ಯಾಯ ೧೦)

ಪ್ರತೀತ್ಯ ಸಮುತ್ಪಾದದ ವಿವರಣೆಯು ಇಂತಹ ಸೂಕ್ಷ್ಮಸ್ತರವನ್ನು ಪ್ರವೇಶಿಸಿದಾಗ ನಾಗಾರ್ಜುನ ತರ್ಕದ ಹತ್ತಾರುಗಳನ್ನು ಮಸೆದು ಪ್ರಯೋಗಿಸುತ್ತಾನೆ! ಮಾಧ್ಯಮಿಕರ ವಿವರಣೆಗಳ ಹೆಚ್ಚು ಭಾಗ ಹೀಗೆ ವಸ್ತುವಾದಿಗಾಳ ಸಂರಚನೆಗಳನ್ನು ನಿರಚನೆಗೊಳಿಸಲು ಅನಿವಾರ್ಯವಾಗಿ ಬಳಕೆಯಾಗಿದೆ.

ಇಲ್ಲ, ಇಲ್ಲ. ಇಲ್ಲ ಎಂದು ಪುನಃ ಪುನಃ ನುಡಿವ ಪರಿಯನ್ನು ಗಮನಿಸಿ ಮಾಧ್ಯಮಿಕರು ಉಚ್ಛೇದ ವಾದಿಗಳೇ ಇರಬೇಕೆಂಬ ಸಾಮಾನ್ಯ ಸಂಶಯವನ್ನೇ,  ನಾಗಾರ್ಜುನ  ವಿರೋಧಿಗಳು ದುರ್ಬಳಕೆ ಮಾಡಿಕೊಂಡು ಮಾಧ್ಯಮಿಕರ ಶೂನ್ಯವಾದವನ್ನು ದಿಕ್ಕು ತಪ್ಪಿಸುವ ಪ್ರಯತ್ನಗಳನ್ನು ಮಾಡಿದ್ದಾರೆ. ಶೂನ್ಯವಾದವೆಂದರೆ ‘ಏನೂ ಇಲ್ಲದ್ದನ್ನು’ ವಿವರಿಸುವ ಉದ್ಯೋಗವೆಂಬ ಸರಳ ವ್ಯಾಖ್ಯಾನ ಮಾಡಿದವರೂ ಇದ್ದಾರೆ. ಅದರೆ  ನಾಗಾರ್ಜುನ  ಮತ್ತು ಇತರ ಮಾಧ್ಯಮಿಕರು ಪೂರ್ವಪಕ್ಷದ ಬಗೆಗೆ ತುಂಬಾ ಸಹಾನುಭೂತಿಯಿಂದ ನಡೆಕೊಂಡಿದ್ದಾರೆ. ಬುದ್ಧನ ಕರುಣಾ ಮೈತ್ರಿ ಮಾರ್ಗ ಇಲ್ಲಿಯೂ ಬಳಕೆಯಾಗಿದೆ.

ತಾನು ಮತ್ತು ಇದಿರನ್ನು ಶಾಶ್ವತ ಭಾವಗಳೆಂದು
ವಾದಿಸುವವರು (ಬುದ್ಧನ) ಉಪದೇಶವನ್ನು
ಅರಿತಿದ್ದಾರೆಂದು ನಾನು ಭಾವಿಸುವುದಿಲ್ಲ
(
ಕಾರಿಕೆ ೧೬ ಅಧ್ಯಾಯ ೧೦)

. ಅನಾಗಮಂಅನಿರ್ಗಮಂ

ಹೊದದೊಂದರ ಅಗಮನ ಸಾಧ್ಯವಿಲ್ಲ. ಇರುವ ಯಾವುದರ ನಿರ್ಗಮನವೂ ಸಾಧ್ಯವಿಲ್ಲ. ಪದಾರ್ಥಗಳಿಗೆ ರೂಪಾಂತರ ಸಾಧವೇ ಹೊರತು ವಿನಾಶವಲ್ಲ. ಆದರೆ ಬದಲಾವಣೆಯನ್ನೇ ನಾವು ವಿವಿಧ ಹಂತಗಳೆಂದು ಗುರುತಿಸಿಕೊಳ್ಳುತ್ತೇವೆ ಮತ್ತು ಆ ಹಂತಗಳನ್ನು ಶಾಶ್ವತದ ರೀತಿಯಲ್ಲಿ ಗ್ರಹಿಸುತ್ತೇವೆ.

ನಾಗಾರ್ಜುನ  ಲೋಕವಿವರಣೆಗಾಗಿ ಬಳಸಿಕೊಂಡಿರುವ ಈ ಎಂಟು ನಿರಾಕರಣೆಗಳು ಯಾವುಗಳನ್ನು ನಿರಾಕರಿಸುತ್ತಿವೆಯೋ ಅವು ಸಾಮಾನ್ಯ ಮತಿಗೆ ದೃಢವಾದ ಸಂರಚನೆಗಳಾಗಿ ಲೋಕಾನುಸಂಧಾನಕ್ಕೆ ಅಡ್ಡಿಯನ್ನುಂಟು ಮಾಡುತ್ತೇವೆ. ಇಂತಹ ಸಂರಚನೆಗಳನ್ನು ಗುಡಿಸಿ ಸ್ವಚ್ಛಗೊಳಿಸಿದ ಮೇಲಷ್ಟೇ ಪ್ರತೀತ್ಯ ಸಮುತ್ಪಾದದ ಮಹಾಯಾನ ಸಾಧ್ಯವಾಗುವುದು ಅದನ್ನು ಅಲ್ಲಮ ಹೀಗೆ ನುಡಿಯುತ್ತಾನೆ.

ಆದಿಯಾಧಾರವಿಲ್ಲದಂದು
ಹಮ್ಮುಬಿಮ್ಮುಗಳಿಲ್ಲದಂದು
ಸುರಾಳ ನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನದಯಿಸಿದನಂದು