. ಪ್ರತೀತ್ಯಸಮುತ್ಪಾದ

ತನ್ನಿಂದಾಗಲೀ ಪರದಿಂದಾಗಲೀ
ಉಭಯದಿಂದಾಗಲೀ ಕಾರಣರಹಿತವಾಗಿಯಾಗಲೀ
ಯಾವುದೂ ಎಲ್ಲಿಯೂ ಎಂದೂ ಉಂಟಾಗುವುದಿಲ್ಲ
(
ಕಾರಿಕೆ ೧ ಅಧ್ಯಾಯ ೧)

ವಸ್ತುವನ್ನು ನಿರಂತರ ಚಲನೆಯಲ್ಲಿರುವ, ಸದಾ ಬದಲಾಗುತ್ತಿರುವ ಪ್ರವಾಹ ಎಂದು ವಿವರಿಸುವ ನಾಗಾರ್ಜುನ ತನ್ನ ಮೂಲಮಧ್ಯಮಕಕಾರಿಕಾದ ಮೊದಲನೆ ಅಧ್ಯಾಯದ ಮೊದಲನೆಯ ಕಾರಿಕೆಯಲ್ಲಿಯೇ ಕಾರಣ ಸಿದ್ಧಾಂತದ ವಿಶ್ಲೇಷಣೆಗೆ ತೊಡಗುತ್ತಾನೆ. ವಸ್ತು ಪ್ರಪಂಚದ ವಿವರಣೆಯು ಕಾರಣಗಳ ಪರೀಕ್ಷೆಯ ಮೂಲಕ ಪ್ರಾರಂಭವಾಗುವುದು ಯುಕ್ತವೂ ಹೌದು. ಮೊದಲನೆಯದಾಗಿ ಅವನು ಲೋಕವಿವರಣೆಯ ವಿಧಾನವಾಗಿ ಭಿನ್ನ ಮೀಮಾಂಸೆಯೊಂದನ್ನು ಮುಂದಿಡುತ್ತಾನೆ. ಬೌದ್ದೇತರ ದರ್ಶನಗಳು ಲೋಕವಿವರಣೆಗೆ ಕಾರಣ ಮೀಮಾಂಸೆಯನ್ನು ಆಧರಿಸುತ್ತವೆ. ಅಂದರೆ ಈ ಲೋಕರಚನೆಗೆ ಆದಿಕಾರಣವೊಂದನ್ನು ಆಧರಿಸುತ್ತವೆ. ಆದರೆ ನಾಗಾರ್ಜುನ ಪ್ರಕ್ರಿಯಾ ಮೀಮಾಂಸೆಯನ್ನು ಲೋಕವಿವರಣೆಯ ವಿಧಾನವಾಗಿ ಮಂಡಿಸುತ್ತಿದ್ದಾನೆ.

ನಿರಂತರ ಚಲನಶೀಲತೆಯನ್ನಷ್ಟೇ ಮಾನ್ಯ ಮಾಡುವ ಪ್ರಕ್ರಿಯಾ ಮೀಮಾಂಸೆಯು ಶಾಶ್ವತ ಆದಿಕಾರಣವನ್ನು ನಿರಾಕರಿಸುವ ಮೂಲಕವೇ ತನ್ನ ಯಾನವನ್ನು ಪ್ರಾರಂಭಿಸಬೇಕು. ಆದಿಬಿಂದುವೊಂದು ದೊರಕುವುದಾದರೆ ಚಲನೆಯ ನಿರಂತರತೆ ಭಂಗಗೊಳ್ಳುವುದರಿಂದ ಅದರ ನಿರಾಕರಣೆ ಯುಕ್ತವೂ ಹೌದು. ವಾಸ್ತವವೂ ಹೌದು. ಎರಡನೆಯದಾಗಿ ಶಾಶ್ವತ, ಸ್ವತಂತ್ರ ಆದಿಕಾರಣವೊಂದನ್ನು ನಿರಾಕರಿಸುವ ಪ್ರಕ್ರಿಯಾ ಮೀಮಾಂಸೆಯು, ಪ್ರಕ್ರಿಯೆಯೊಂದಕ್ಕೆ ಸಂಬಂಧಿಸಿದ ಹಾಗೆ ‘ಸಾಪೇಕ್ಷ ಪ್ರತ್ಯಯ’ವನ್ನು ಮಾತ್ರ ಸ್ವೀಕರಿಸುತ್ತದೆ. ಸಾಪೇಕ್ಷ ಪ್ರತ್ಯಯವನ್ನು ಬೀಜ ಮೊಳಕೆ ಸಸಿಯ ಉದಾಹರಣೆಯ ಮೂಲಕ ಹಿಂದೆ ವಿವರಿಸಲಾಗಿದೆ. ಪ್ರತ್ಯಯಕ್ಕೆ ನಿಶ್ಚಿತ ಸ್ವಾತಂತ್ರ ಸ್ಥಾನವಿಲ್ಲ. ಪ್ರತ್ಯಯವು (ಅಂದರೆ ಕಾರಣವು) ಉಂಟು ಮಾಡುವ ಪರಿಣಾಮವು ‘ಒಂದಕ್ಕೆ ಒಂದು’ ಎಂಬ ರೀತಿಯದ್ದಲ್ಲ. ಈ ನಿರಂತರ ಪ್ರವಾಹದಲ್ಲಿ ಅದರ ಸ್ಥಾನವೂ ಸಾಪೇಕ್ಷವೇ.

ಬೌದ್ಧೇತರ ದರ್ಶನಗಳು ಪದಾರ್ಥಗಳು ಉಂಟಾಗಲು ಈ ನಾಲ್ಕರಲ್ಲಿ ಯಾವುದಾದರೊಂದು ಕಾರಣವನ್ನು ಮುಂದಿಡುತ್ತವೆ.

  • ತಾನೇ ಕಾರಣ
  • ಪರ ಕಾರಣ
  • ಉಭಯ ಕಾರಣ
  • ಯಾವ ಕಾರಣವೂ ಇರದು

ಕೆಲವು ಪ್ರಸ್ಥಾನಗಳು ಮೊದಲನೆಯದನ್ನು ಅಂದರೆ ಯಾವುದರಿಂದಲೂ ಬದಲಾಗದ ಆತ್ಮ, ಬ್ರಹ್ಮ, ಪರಾವಾಕ್‌, ಪರಾಸಂವಿತ್‌ ಇತ್ಯಾದಿ ‘ಸ್ವಭಾವ’ ಕಾರಣವನ್ನು ಒಪ್ಪುತ್ತವೆ. (ಉದಾಹರಣೆಗೆ ಕಾಶ್ಮೀರ ಶೈವಾಗಮಗಳನ್ನಾಧರಿಸಿದ ಮೀಮಾಂಸಾ ಪ್ರಸ್ಥಾನಗಳು) ಎಲ್ಲ ಪರಿಣಾಮಗಳೂ ಆತ್ಮದಲ್ಲೇ ಅಂತರ್ಗತವಾಗಿದ್ದು ಅದು ಮಾತ್ರ ಶಾಶ್ವತ ಸ್ವರೂಪದ್ದಾಗಿರುತ್ತದೆ. ಶಾಶ್ವತ ಸ್ವರೂಪದ್ದಕ್ಕೆ ಬದಲಾವಣೆ ಸಾಧ್ಯವಿಲ್ಲ.

ಎರಡನೆಯ ಪರಕಾರಣವು ಎಲ್ಲ ಬದಲಾವಣೆಗಳಿಗೂ ಮತ್ತೊಂದು (ದೈವ, ವಿಧಿ ಇತ್ಯಾದಿ) ಕಾರಣವೆನ್ನುತ್ತದೆ. ಇಲ್ಲಿ ಕಾರಣ ಮತ್ತು ಪರಿಣಾಮದ ನಡುವೆ ಅಂತಸ್ಸಂಬಂಧವಿಲ್ಲ. ಆದುದರಿಂದ ಯಾವುದು ಯಾವುದರಿಂದಲೂ ಸಂಭವಿಸಬಹುದು. ಪದಾರ್ಥಗಳು ಸ್ವ ಮತ್ತು ಪರ ಎರಡರಿಂದಲೂ ಸಂಭವಿಸುತ್ತವೆ ಅಥವಾ ಇವೆರಡರ ಸಂಯೋಗ ಕಾರಣವೆನ್ನುವಲ್ಲಿ ಮೇಲಿನ ಎರಡು ತೊಡಕುಗಳೂ ಬೆರೆತು ಹೋಗಿವೆಯಷ್ಟೆ.

ಕೊನೆಯದಾದ, ಪದಾರ್ಥಗಳುಂಟಾಗಲು ಕಾರಣ ಬೇಕಿಲ್ಲ ಎಂಬ ನಿಲುವು ಅನಿರ್ದಿಷ್ಟವಾದದ ಕಡೆಗೆ ಕೈತೋರುತ್ತದೆ. ಹಾಗಾಗಿ ಯಾವುದಾದರೂ ಎಲ್ಲಿಯಾದರೂ, ಯಾವಾಗಲಾದರೂ ಸಂಭವಿಸಲು ಸಾಧ್ಯ ಎನ್ನುವುದಾದರೆ ಎಲ್ಲವೂ, ಎಲ್ಲಿಯೂ ಯಾವಾಗಲೂ ಸಂಭವಿಸಲು ಸಾಧ್ಯ ಎನ್ನುವ ನಿಲುವಿಗೆ ಬರಬೇಕಾಗುತ್ತದೆ. ಹಾಗಾಗಿ ಈ ನಾಲ್ಕು ನಿಲುವುಗಳೂ ಇಲ್ಲಿ ನಿರಾಕರಣೆಗೊಂಡಿವೆ.

ಮೇಲಿನ ಕಾರಿಕೆಯ ಅರ್ಥಕ್ಕೆ ಭಂಗಬಾರದಂತೆ ಅದನ್ನು ಹೀಗೆಯೂ ಪುನರ್ರಚಿಸಬಹುದು.

. ಸ್ವಕಾರಣದಿಂದ ಯಾವ ಪದಾರ್ಥವೂ ಉಂಟಾಗುವುದಿಲ್ಲ.
. ಪರಕಾರಣದಿಂದ ಯಾವ ಪದಾರ್ಥವೂ ಉಂಟಾಗುವುದಿಲ್ಲ.
. ಸ್ವ ಮತ್ತು ಪರ ಎರಡೂ ಕಾರಣಗಳಿಂದ ಯಾವ ಪದಾರ್ಥವೂ ಉಂಟಾಗುವುದಿಲ್ಲ.
. ಕಾರಣವಿಲ್ಲದೆಯೂ ಯಾವ ಪದಾರ್ಥವೂ ಉಂಟಾಗುವುದಿಲ್ಲ.

ಅರ್ಥಾತ್‌ ಶಾಶ್ವತ, ಸ್ವತಂತ್ರ ವಸ್ತುವೊಂದು ಉಂಟಾಗುವುದೇ ಇಲ್ಲ. ಲೋಕವೆಲ್ಲವೂ ಪ್ರಕ್ರಿಯೆಯ ನಾಟ್ಯ ವಿಲಾಸವೇ. ಸ್ವತಂತ್ರ, ಶಾಶ್ವತ ಅಸ್ತಿತ್ವವೊಂದು ಸಿದ್ಧಗೊಳ್ಳುವುದೇ ಇಲ್ಲ ಎಂಬುದನ್ನು ನಿರೂಪಿಸುವುದು ಕಾರಿಕಾದ ಮೊದಲನೆಯ ಹಂತ. ಇಲ್ಲಿ ಚರ್ಚಿತವಾಗಿರುವುದು ಕಾರಣ ಮತ್ತು ಪರಿಣಾಮದ ಸಂಬಂಧ. ಸಂಗತಿಯೊಂದು ಚರುಗಲು ನಾಲ್ಕು ಕಾರಣ ಸಾಧ್ಯತೆಗಳನ್ನು ಅಥವಾ ಕಾರಣ ಮತ್ತು ಪರಿಣಾಮದ ನಾಲ್ಕು ಸಂಬಂಧ ಸಾಧ್ಯತೆಗಳನ್ನು ಗುರುತಿಸಿ ಕೊಳ್ಳಬಹುದು. ಅವುಗಳೆಂದರೆ .ಕಾರಣ ಮತ್ತು ಪರಿಣಾಮ ಒಂದೇ .ಕಾರಣ ಮತ್ತು ಪರಿಣಾಮ ಬೇರೆ ಬೇರೆ .ಕಾರಣ ಮತ್ತು ಪರಿಣಾಮ ಭಿನ್ನ ಅಭಿನ್ನ ಎರಡೂ ೪. ಸಂಗತಿಗಳು ಕಾರಣವಿಲ್ಲದೆ ಜರಗುತ್ತವೆ.

ಇದರಾಚೆಗೆ ಕಾರಣ ಪರಿಣಾಮದ ಯಾವ ಸಂಬಂಧ ಸಾಧ್ಯತೆಗಳೂ ಇರಲು ಸಾಧ್ಯವಿಲ್ಲ. ಇವಿಷ್ಟೇ ಎಂದು ಹೇಗೆ ಮಿತಗೊಳಿಸಿಕೊಳ್ಳಲಾಗಿದೆ? ಇದನ್ನು ಮಾಧ್ಯಮಿಕರು ಹೀಗೆ ವಿವರಿಸುತ್ತಾರೆ. ಸಂಗತಿಯೊಂದು ಜರಗಲು ಕಾರಣವಿರಬೇಕು ಅಥವಾ ಇಲ್ಲದಿರಬೇಕು. ಈ ಎರಡೂ ಸಾಧ್ಯತೆಗಳನ್ನು ಈ ಕಾರಿಕೆ ವಿಶ್ಲೇಷಿಸಿದೆ. ಕಾರಿಕೆಯ ಮೊದಲ ಮೂರು ಸಾಧ್ಯತೆಗಳು
ಕಾರಣ ಉಂಟು ಎಂಬ ಪ್ರಮೇಯವನ್ನು ವಿಶ್ಲೇಷಿಸಿದರೆ ಕೊನೆಯದು ಕಾರಣವಿಲ್ಲ  ಎಂಬ ಪ್ರಮೇಯವನ್ನು ವಿಶ್ಲೇಷಿಸುತ್ತದೆ. ಕಾರಣವುಂಟು ಎನ್ನುವುದಾರೆ ಎರಡು ಪರ್ಯಾಯಗಳಿವೆ. ಒಂದು ಕಾರಣ ಮತ್ತು ಪರಿಣಾಮ ಒಂದೇ ಎನ್ನುವುದು. ಇನ್ನೊಂದು ಕಾರಣ ಮತ್ತು ಪರಿಣಾಮ ಬೇರೆ ಬೇರೆ ಎನ್ನುವುದು. ಮೇಲಿನ ಮೂರನೆಯ ಪ್ರಮೇಯ ಒಂದು ಮತ್ತು ಎರಡರ ಸಂಯೋಗವಷ್ಟೇ, ಈ ನಾಲ್ಕು ಪ್ರಮೇಯಗಳು ಆಸಂಗತವಾದವುಗಳೆಂದು ನಾಗಾರ್ಜುನ ಸಿದ್ಧಪಡಿಸುತ್ತಾನೆ. ಮೇಲಿನ ಕಾರಣ ಪರಿಣಾಮದ ಸಂಬಂಧದ ಪ್ರಮೇಯಗಳು  ಆಗ್ಗೆ ಪೆಚಲಿತವಿದ್ದ ಭಿನ್ನ ಭಿನ್ನ ಚಿಂತನಾ ಪ್ರಸ್ಥಾನಗಳು ಮುಂದಿಟ್ಟ ದೃಷ್ಟಿಕೋನಗಳಾಗಿದ್ದವು. ಕಾರಣ ಪರಿಣಾಮಗಳು ಒಂದೇ ಎನ್ನುವುದು ಸಾಂಖ್ಯರ ನಿಲುವು. ಬೌದ್ಧರಲ್ಲಿ ವೈಭಾಷಿಕರು ಮತ್ತು ಸೌತ್ರಾಂತ್ರಿಕರು ಹಾಗೂ ಕೆಲವು ಹಿಂದೂ ಪ್ರಸ್ಥಾನಗಳು ಕಾರಣ ಪರಿಣಾಮಗಳು ಬೇರೆ ಬೇರೆ ಎಂದು ಪ್ರತಿಪಾದಿಸಿದ್ದರು. ತನ್ನ ಮತ್ತು ಅನ್ಯ ಕಾರಣಗಳೆರಡರಿಂದಲೂ ವಸ್ತುಗಳು ಸಂಭವಿಸುತ್ತವೆ ಎನ್ನುವುದು ಜೈನರ ನಿಲುವು. ಭೌತವಾದಿಗಳು ಪದಾರ್ಥದ ಉತ್ಪತ್ತಿಗೆ ಕಾರಣದ ಆಗತ್ಯವಿಲ್ಲ ಎಂದು ವಾದಿಸುತ್ತಾರೆ.

ನಾಗಾರ್ಜುನ ಈ ನಾಲ್ಕೂ ದೃಷ್ಟಿವಾದಗಳನ್ನು ತನ್ನ ಪ್ರಖ್ಯಾತವಾದ reductio ad absurdum (ಪ್ರಸಂಗವಾದ?) ಎಂಬ ವಿಧಾನದಿಂದ ಪರೀಶಿಲಿಸಿ ತಿರಸ್ಕರಿಸುತ್ತಾನೆ. ತನ್ನದೇ ಅದ ಯಾವ ನಿಲುವನ್ನೂ ಮುಂದಿಡದೆ ಪ್ರತಿಪಕ್ಷದ ದೃಷ್ಟಿವಾದದಲ್ಲಿರುವ ಅಸಂಗತೆಯನ್ನು ಸಿದ್ಧಪಡಿಸುವುದು ಇಲ್ಲಿಯ ಕ್ರಮವಾಗಿದೆ. ಉದಾಹರಣೆಗೆ ಮೊದಲನೆಯ ಪ್ರಮೇಯವಾದ ವಸ್ತು ಅಸ್ತಿತ್ವಕ್ಕೆ ಬರಲು ‘ತಾನೇ’ ಕಾರಣವಾಗುವುದಾದರೆ ಹೊಸದೊಂದು ಅಸ್ತಿತ್ವಕ್ಕೆ ಬರಲು ಸಾಧ್ಯವೇ ಆಗದು. ಹೊಸದೊಂದು  ಸಂಯೋಜನೆ ಬರಲು ಸಾಧ್ಯವಾಗದಿದ್ದರೆ ಅದೊಂದು ಕ್ರಿಯಾಹೀನ ಜಡಜಗತ್ತಾಗುತ್ತದೆ. ಆದರೆ ಜಗತ್ತು ಹಾಗಿಲ್ಲ. ಎರಡನೆಯದಾದ ಪದಾರ್ಥ ಅಸ್ತಿತ್ವಕ್ಕೆ ಬರಲು  ಮತ್ತೊಂದು ಕಾರಣ ಎನ್ನುವುದಾದರೆ ಕಾರ್ಯ ಕಾರಣ ಸಂಬಂಧವೇ ಹತವಾಗುತ್ತದೆ. ಯಾವುದು ಯಾವುದರಿಂದಲಾದರೂ ಉಂಟಾಗಬಹುದು. ಇದು ಅಸಂಗತವಾದುದು. ಮೂರನೆಯ ಪ್ರಮೇಯದಲ್ಲಿ ಮೇಲಿನ ಎರಡೂ ಸಮಸ್ಯೆಗಳು ಮಿಳಿತಗೊಳ್ಳುತ್ತವೆ. ಕೊನೆಯದಾದ ಪರಿಣಾಮಕ್ಕೆ ಕಾರಣದ ಆಗತ್ಯವಿಲ್ಲ ಎಂಬ ನಿಲುವು ಆರಾಜಕತೆಯತ್ತ ಜಾರುತ್ತದೆ. ಯಾವುದಾರೂ, ಎಲ್ಲಿಯಾದರೂ, ಯಾವಾಗಲಾದರೂ ಉಂಟಾಗಲು ಸಾಧ್ಯ ಎನ್ನುವುದಾದರೆ, ಯಾವುದೂ, ಎಲ್ಲಿಯೂ, ಯಾವಾಗಲೂ ಉಂಟಾಗಲು ಸಾಧ್ಯ ಎನ್ನುವ ನಿಲುವಿಗೆ ಬರಬೇಕಾಗುತ್ತದೆ. ಹಾಗಾಗಿ ಈ ನಾಲ್ಕೂ ನಿಲುವುಗಳೂ ಮಿಥ್ಯಾ ದೃಷ್ಟಿಗಳೆಂದು ಸಿದ್ಧವಾಗುತ್ತದೆ.

ಮಾಧ್ಯಮಿಕ ತತ್ವವು ಉತ್ಪತ್ತಿ ಸ್ಥಿತಿ ಲಯಗಳನ್ನು ಶಾಶ್ವತ ‘ಸ್ಥಿತಿ’ ಗಳನ್ನಾಗಿ ನೋಡುವುದಿಲ್ಲ. ಮೂಲಮಧ್ಯಮಕಾರಿಕಾದಲ್ಲಿ ಪ್ರಸ್ತಾಪಿತವಾಗಿರುವ ಮಾಧ್ಯಮಿಕ ತತ್ವವು  ಮೂರು ಹಂತಗಳ ವಿವರಣೆಯಾಗಿ ನಿರೂಪಿಸಲ್ಪಟ್ಟಿದೆ. ಆವುಗಳೆಂದರೆ . ಸ್ವಬಾವ  ನಿರಾಕರಣೆ  ಅಥವಾ ನಿಃಸ್ವಭಾವವಾದ  . ಪ್ರತೀತ್ಯ ಸಮುತ್ಪಾದ  . ಶೂನ್ಯತೆಯ ಶೂನ್ಯತೆ.

೧೦. ಭಿನ್ನಾಭಿನ್ನ ನಿರಾಕರಣೆ

ಬುದ್ಧನ ಪರಿನಿರ್ವಾಣದ ಸುಮಾರು ಇನ್ನೂರು ವರ್ಷಗಳ ನಂತರ ಬಂದ ಅಥೆನ್ಸ್‌ನ ತಾತ್ವಿಕ ಹೆರಾಕ್ಲೀಟಸ್‌ನ ಮಾತೊಂದಿದೆ. ಅದೇನೆಂದರೆ “ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ”. ನಾಗಾರ್ಜುನ ಮಾಧ್ಯಮಿಕವಾದ ಈ ಮಾತನ್ನು ಹೀಗೆ ವಿಸ್ತರಿಸುತ್ತದೆ.

ಒಂದು ನದಿಗೆ ಎರಡು ಸಾರಿ ಕಾಲಿಡಲು ಸಾಧ್ಯವಿಲ್ಲ
ಎರಡು ಸಾರಿ ಕಾಲಿಟ್ಟ ಆ ಮನುಷ್ಯ ಒಬ್ಬನೇ ಅಲ್ಲ
ಎರಡು ಸಾರಿ ಕಾಲಿಟ್ಟಾಗಿನ ಪರಿಸ್ಥಿತಿಗಳು ಒಂದೇ ಅಲ್ಲ
ಎರಡು ಸಾರಿ ಕಾಲಿಟ್ಟಾಗಿನ ಪರಿಣಾಮಗಳು ಒಂದೇ ಅಲ್ಲ

ಮತ್ತೂ ಮುಂದಕ್ಕೆ

ಎರಡು ಸಾರಿ ಕಾಲಿಟ್ಟ ಆ ನದಿ ಒಂದೇ ಅಲ್ಲ
ಬೇರೆ ಬೇರೆಯೂ ಅಲ್ಲ, ಎರಡು ಸಾರಿ ಕಾಲಿಟ್ಟ ಆ
ಮನುಷ್ಯ ಒಬ್ಬನೇ ಅಲ್ಲ, ಬೇರೆ ಬೇರೆಯೂ ಅಲ್ಲ, …….
ಇತ್ಯಾದಿ

ನಾಗಾರ್ಜುನ ಒನ್ನೆರಡು ಉದಾಹರಣೆಗಳನ್ನು ಮುಂದಿಡುತ್ತಾನೆ.

ಸ್ವಭಾವವು ಇಲ್ಲವಾದರೆ ಯಾವುದರಲ್ಲಿ ಅನ್ಯತಾ ಭಾವವುಂಟಾಗಬೇಕು?
ಸ್ವಬಾವವು ಇದೆಯಾದರೆ ಅನ್ಯತಾಭಾವ ಉಂಟಾಗಲು ಹೇಗೆ ಸಾಧ್ಯ?
(
ಕಾರಿಕೆ ೪ ಅಧ್ಯಾಯ ೧೩)

ವಸ್ತು ಪ್ರಪಂಚವನ್ನು ಇದೆ ಇಲ್ಲವೆಂಬ ನಿಲುವುಗಳ ಮೂಲಕ ವಿವರಿಸಲು ಸಾಧ್ಯವಿಲ್ಲ. ಏಕೆಂದರೆ ಬದಲಾವಣೆಯೆಂಬುದು ಸಂಪೂರ್ಣ ಮತ್ತು ನಿರಂತರವಾದುದು. ಯಾವ ಹಂತದಲ್ಲಿಯೇ ಆದರೂ ವಸ್ತುವೊಂದನ್ನು ಸ್ಥಾಪಿಸಿಬಿಟ್ಟರೆ ಅದು ಸ್ವತಂತ್ರವಾಗಿ ಶಾಶ್ವತವಾಗಿ ಬಿಡುತ್ತದೆ. ಶಾಶ್ವತವಾದದ್ದರ ಬದಲಾವಣೆ ಸಾಧ್ಯವಿಲ್ಲ. ಹಾಗೆಯೇ ಯಾವುದೇ ಹಂತದಲ್ಲಿ ‘ ಏನೂ ಇಲ್ಲದ ಸ್ಥಿತಿ’ ಯೊಂದನ್ನು ಅರೋಪಿಸಿಬಿಟ್ಟರೆ ಆಗ ಕೂಡಾ ಬದಲಾವಣೆ ಸಾಧ್ಯವಿಲ್ಲ. ಏಕೆಂದರೆ ಬದಲಾಗಬೇಕಾದ ಕ್ರಿಯಾ ಸಾಮರ್ಥ್ಯ ಇಲ್ಲವಾಗುತ್ತದೆ. ಹಾಗಾಗಿ ಅಸ್ತಿತ್ವ ನಾಸ್ತಿತ್ವಗಳೆರಡನ್ನೂ ನಿರಾಕರಿಸಿದ ಮಧ್ಯಮ ಮಾರ್ಗ ಅಥವಾ ಶೂನ್ಯತೆಯೇ ವಸ್ತು ಪ್ರಪಂಚದ  ನಿತ್ಯ ಬದಲಾವಣೆಯನ್ನು ವಿವರಿಸಬಲ್ಲದು.

ಭಾವವೊಂದು ತಾನೇ ಅನ್ಯವಾಗಿ ಬದಲಾಗದು
ಹೇಗೆಂದರೆ, ಯುವಕ ತಾನೇ ವೃದ್ಧನಾಗುವುದಿಲ್ಲ
ವೃದ್ಧನೂ (ಪುನಃ) ವೃದ್ಧನಾಗುವುದಿಲ್ಲ
(ಕಾರಿಕೆ ೫ ಅಧ್ಯಾಯ ೧೩)

ಜರೆಯು ನಾಗಾರ್ಜುನನಿಂದ ನಿರಾಕರಿಸಲ್ಪಟ್ಟಿಲ್ಲ. ಆದರೆ ಅನ್ಯತಾ ಅಥವಾ ಅನನ್ಯತಾ ವಾದಗಳ ಮೂಲಕ ಬದಲಾವಣೆಯನ್ನು ವಿವರಿಸಲು  ಸಾಧ್ಯವಿಲ್ಲ . ಯಾರೊಬ್ಬನನ್ನೂ ಶಾಶ್ವತ ಆತ್ಮವುಳ್ಳವನೆಂದು ಗ್ರಹಿಸುವುದಾಗಲೀ ಕ್ಷಣದಿಂದ ಕ್ಷಣಕ್ಕೆ ಭಿನ್ನನೆಂದು ಗ್ರಹಿಸುವುದಾಗಲೀ ಯುಕ್ತವಲ್ಲ. ಯುವಕ ವೃದ್ಧನಾಗುವ ಪ್ರಕ್ರಿಯೆ ಉಂಟೇ ಹೊರತು ಯುವಕ ಯಾವಾಗ ವೃದ್ಧನಾದ? ಎಂಬ ಪ್ರಶ್ನೆಗೆ ಉತ್ತರವಿಲ್ಲ. ಏಕೆಂದರೆ ‘ಯುವಕ’ ಎನ್ನುವ ಹಂತ ಒಂದು ಕ್ಷಣ ಮಾತ್ರವೂ ಸ್ವತ್ರಂತ್ರವಾಗಿ, ಸ್ಥಗಿತವಾಗಿ ಇಲ್ಲ. ಹಾಗಾಗಿ ಯುವಕ ವೃದ್ಧ ಒಬ್ಬನೇ ಅಲ್ಲ. ಹಾಗೆಯೇ ಬೇರೆ ಬೇರೆಯೂ ಅಲ್ಲ ಏಕೆಂದರೆ ಯುವಕ ವೃದ್ಧನಾಗುವು ‘ಪ್ರಕ್ರಿಯೆ’ ಇದೆ.

ಇದೇ ಆದಾಗಿ ಬದಲಾಗುವುದಾರೆ
ಹಾಲು ತಾನೇ ಮೊಸರು ಎನ್ನಲು ಸಾಧ್ಯವಾಗುತ್ತದೆ
ಆಗ ಮೊಸರುತನ (ದಧೀಭಾವ) ಹಾಲಿನಿಂದ ಬೇರೆಯಾಗುತ್ತದೆ

ಹಾಲು ಮೊಸರಾಗುವ ಪ್ರಕ್ರಿಯೆ ಇದೆ. ಹಾಲು ಮೊಸರು ಬೇರೆ ಬೇರೆ ಎಂದಾದರೆ ಮೊಸರು ಉಂಟಾಗಲು ಬೇಕಾದ ‘ಕಾರಣ’ವಾದ ಹಾಲನ್ನೇ ನಿರಾಕರಿಸಿದಂತಾಗುತ್ತದೆ. ಅಥವಾ ಹಾಲೇ ಮೊಸರು ಎಂದಾದರೆ ‘ಮೊಸರುತನ (ದಧೀಭಾವ) ಹಾಲಿನಿಂದ ಬೇರೆಯಾಗಿ ಅಲಾಯಿದ ಉಳಿದುಬಿಡುತ್ತದೆ. ಅದನ್ನು ವಿವರಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಹಾಲು ಮೊಸರು ಬೇರೆ ಬೇರೆಯೂ ಅಲ್ಲ ಮತ್ತು ಒಂದೇ ಅಲ್ಲ. ಹಾಲು ಮೊಸರಾಗುವ ಪ್ರಕ್ರಿಯೆ ಉಂಟೇ ಹೊರತು ಯಾವಾಗ? ಎಂಬ ಪ್ರಶ್ನೆಗೆ ಉತ್ತರ ಸಿಗಲಾರದು. ಇಲ್ಲಿ ಕಾಲದ ಅಂಶವನ್ನು ಹೊರಗಿಟ್ಟು ಚರ್ಚಿಸಲಾಗುತ್ತಿದೆ. ಮಾಧ್ಯಮಿಕರ ಕಾಲದ ಬಗೆಗಿನ ನಿಲುವನ್ನು ಮುಂದೆ ಚರ್ಚಿಸಲಾಗಿದೆ. ಈ ಕಾರಿಕೆಗಳಲ್ಲಿ ವಿಶ್ಲೇಷಿಸಲಾಗುತ್ತಿರುವ ಅಂಶವೆಂದರೆ ನಾಗಾರ್ಜುನನ ಪೂರ್ವಪಕ್ಷವು ಹೇಗಾದರೂ ಮಾಡಿ ಒಂದು ಕ್ಷಣಕ್ಕಾದರೂ ವಸ್ತುವೊಂದನ್ನು ಸ್ಥಾಪಿಸಲು ಹೆಣಗುತ್ತಿತ್ತು. ಆದರೆ ನಾಗಾರ್ಜುನನ ಅತ್ಯಂತ ಹರಿತವಾದ ತರ್ಕಾಯುಧಗಳು ಅಂತಹ ಯಾವ ಪ್ರಯತ್ನವನ್ನೂ ಬಿಡದೆ ಹತಮಾಡಿಬಿಡುತ್ತಿದ್ದವು. ನಾಗಾರ್ಜುನ ತನ್ನ ಪ್ರಕ್ರಿಯಾ ಮೀಮಾಂಸೆಯ ಪರಿಕರಗಳನ್ನಾಗಿ ಪ್ರಮಾಣ ನಿರಾಕರಣೆ, ಕಾಲ ನಿರಾಕರಣೆ ಮತ್ತು ಧಾತು ನಿರಾಕರಣೆಗಳನ್ನೂ ರೂಪಿಸಿ ಬಳಸಿದ್ದಾನೆ. ಅವುಗಳ ಸ್ಥೂಲ ಪರಿಚಯವನ್ನು ಇಲ್ಲಿ ಕೊಡಬಹುದು.

೧೧. ಪ್ರಮಾಣ ನಿರಾಕರಣೆ

ವಸ್ತುಸ್ವಭಾವ ಅಥವಾ ಸತ್ಯವನ್ನು ತಿಳಿಯಲು ಇರುವ ಸಾಧನಗಳೇ ಪ್ರಮಾಣಗಳೆಂದು ಸ್ಥೂಲವಾಗಿ ಹೇಳಬಹುದು. ಲೋಕವಿವರಣೆಗೆ ದರ್ಶನಗಳು ಪ್ರಮಾಣಗಳನ್ನು ಆಧಾರವಾಗಿ ಸ್ವೀಕರಿಸುತ್ತವೆ. ಸ್ಥೂಲವಾಗಿ ಪ್ರತ್ಯಕ್ಷ, ಅನುಮಾನ ಮತ್ತು ಶಬ್ದಗಳನ್ನು ಪ್ರಮಾಣಗಳೆನ್ನುತ್ತಾರೆ. ಉಪಮಾನ, ಅರ್ಥಾಪತ್ತಿ ಮತ್ತು ಅನುಪಲಬ್ಧವೆಂಬ ಅಪ್ರಮುಖ ಪ್ರಮಾಣಗಳೂ ಉಂಟು. ಒಂದೊಂದು ದರ್ಶನವು ಒಪ್ಪುವ ಪ್ರಮಾಣಗಳು ಎಷ್ಟು ಮತ್ತು ಯಾವುವು ಎಂಬುದು ಆಯಾ ದರ್ಶನದ ನಿಲುವಿಗೆ ಸಂಬಂಧಿಸಿದ ವಿಚಾರ. ಇಂದ್ರಿಯ ಗೋಚರವಾದ ರೂಪ, ರಸ, ಗಂಧ ಮುಂತಾದವುಗಳಿಗೆ ಸಂಬಂಧಿಸಿದ್ದು ಪ್ರತ್ಯಕ್ಷ. ತರ್ಕದ ಮೂಲಕ ಸಾಧಿತವಾಗುವುದು ಅನುಮಾನ. ಉದಾಹರಣೆಗೆ ಹೊಗೆ ಇರುವುದರಿಂದ ಬೆಂಕಿ ಇದೆ ಎಂದು ಅನುಮಾನಿಸುವುದು. ಶಬ್ಧವೆಂದರೆ ವೇದಗಳೆನ್ನುವುದು ಸ್ಥೂಲಾರ್ಥ, ತಾನು ಪ್ರಶ್ನಾತೀತವೆಂದು ಸಾಧಿಸಬಯಸುವ ಎಲ್ಲಾ ದಾಖಲೆಗಳನ್ನು ಶಬ್ಧವೆಂದರೂ ಸರಿಯೇ. ಚಾರ್ವಾಕರು ಪ್ರತ್ಯಕ್ಷವನ್ನು, ಸಾಂಖ್ಯರು  ಪ್ರತ್ಯಕ್ಷ, ಅನುಮಾನ ಮತ್ತು  ಶಬ್ಧವನ್ನು, ನೈಯಾಯಿಕರು ಪ್ರತ್ಯಕ್ಷ, ಅನುಮಾನ ಉಪಮಾನ ಮತ್ತು ಶಬ್ಧವನ್ನು ಪ್ರಮಾಣಗಳೆಂದು ಮಾನ್ಯ ಮಾಡುತ್ತಾರೆ. ಬೌದ್ಧರೂ ಪ್ರತ್ಯಕ್ಷ ಮತ್ತು ಅನುಮಾನಗಳನ್ನು ಪ್ರಮಾಣಗಳೆನ್ನುತ್ತಾರೆಂದು ವಿದ್ವಾಂಸರು ಸೂಚಿಸಿದ್ದರೂ ಪ್ರಮಾಣದ ಬಗ್ಗೆ ನಾಗಾರ್ಜುನ ನಿಲುವು ಬೇರೆಯೇ ಇದೆ. ನಾಗಾರ್ಜುನ  ತನ್ನ ಅನೇಕ ಪಠ್ಯಗಳಲ್ಲಿ ಪ್ರಮಾಣ ನಿರಾಕರಣೆ ಮಾಡಿರುವನಾದರೂ ಅವನ ವೈದಲ್ಯ ಪ್ರಕರಣ ಮತ್ತು ವಿಗ್ರಹ ವ್ಯಾವರ್ತಿನಿಯಲ್ಲಿ ಈ ನಿರಾಕರಣೆ ಅತ್ಯಂತ ಪ್ರಮುಖ ನೆಲೆಯಲ್ಲಿ ವಿವರಿಸಲ್ಪಟ್ಟಿದೆ. ಬಾರತೀಯ ದರ್ಶನ ಪರಂಪರೆಯಲ್ಲಿ ಪ್ರಮಾಣ ನಿರಾಕರಣೆಯ ಧಾರೆಯೊಂದನ್ನು ಗುರುತಿಸಲು ಸಾಧ್ಯವಿದೆ. ಕನ್ನಡದ ಅಲ್ಲಮ ಪ್ರಮಾಣಗಳನ್ನು ನಿರಾಕರಿಸುವ ಧಾರೆಯ ಮುಂದುವರಿಕೆಯಾಗಿದ್ದಾನೆ (ನಾನೆಂಬುದು ಪ್ರಮಾಣ, ನೀನೆಂಬುದು ಪ್ರಮಾಣ, ಸ್ವಯವೆಂಬುದು ಪ್ರಮಾಣ ಪರವೆಂಬುದು ಪ್ರಮಾಣ ಪ್ರಮಾಣವೆಂಬುದು ಪ್ರಮಾಣ ಗುಹೇಶ್ವರನೆಂಬುದು ಅಪ್ರಮಾಣ).