೧೨ನಾಗಾರ್ಜುನ  ‘ವೈದಲ್ಯ ಪ್ರಕರಣದಿಂದ ಉದ್ಧೃತ ಭಾಗಗಳು

ಪ್ರಮಾಣ ಮತ್ತು ಪ್ರಮೇಯ :ಪ್ರಮಾಣ ಮತ್ತು ಪ್ರಮೇಯಗಳನ್ನು ಕುರಿತಾದ ಗೊಂದಲಗಳು :

ಪ್ರಮಾಣ ಮತ್ತು ಪ್ರಮೇಯಗಳೆರಡನ್ನೂ ಗೊಂದಲಕ್ಕೀಡು ಮಾಡಲಾಗಿದೆ. ಏಕೆಂದರೆ ಪ್ರಮೇಯ (ವಸ್ತು) ಇದ್ದಾಗ ಮಾತ್ರ ಪ್ರಮಾಣಕ್ಕೆ (ತಿಳಿಸಿ ಕೊಡುವ ಸಾಧನ ಅಥವಾ ಅಳತೆ) ಪ್ರಮಾಣದ ಸ್ಥಾನ ದೊರಕುತ್ತದೆ. ಮತ್ತು ಪ್ರಮಾಣವಿದ್ದಾಗ ಮಾತ್ರ ಪ್ರಮೇಯಕ್ಕೆ  ಪ್ರಮೇಯದ ಸ್ಥಾನ ದೊರಕುತ್ತದೆ. ಹಾಗಾಗಿ ಪ್ರಮೇಯದಿಂದಾಗಿ ಪ್ರಮಾಣ ಸಿದ್ಧವಾಗುತ್ತದೆ ಮತ್ತು ಪ್ರಮಾಣದಿಂದಾಗಿ ಪ್ರಮೇಯ ಸಿದ್ಧವಾಗುತ್ತದೆ. ಅಂದರೆ ಪ್ರಮೇಯದಿಂದ ಪ್ರಮಾಣ ಸಿದ್ಧವಾದುದರಿಂದ ಪ್ರಮಾಣವು ಪ್ರಮೇಯದ ಪ್ರಮೇಯವಾಗುತ್ತದೆ. ಅಲ್ಲದೆ ಪ್ರಮೇಯವು  ಪ್ರಮಾಣದ ಪ್ರಮಾಣವಾಗುತ್ತದೆ. ಅದನ್ನು ಇದು ಇದನ್ನು ಅದು ಅವಲಂಬಿಸಿ ಉಂಟಾಗುತ್ತವೆ. ಹಾಗಾಗಿ ಪ್ರಮಾಣವು ಪ್ರಮೇಯ ಮತ್ತು  ಪ್ರಮಾಣ ಎರಡೂ ಆದಂತಾಗುತ್ತದೆ. ಹಾಗೂ ಪ್ರಮೇಯವು ಪ್ರಮಾಣ ಮತ್ತು ಪ್ರಮೇಯ ಎರಡೂ ಅದಂತಾಗುತ್ತದೆ. ಆದುದರಿಂದ ಎರಡು ಗೊಂದಲಕ್ಕೀಡಾಗುತ್ತವೆ.

ಪ್ರಮಾಣ ಮತ್ತು ಪ್ರಮೇಯಗಳು ಪರಸ್ಪರಾವಲಂಬಿಗಳಾದುದರಿಂದ ಅಸ್ತಿಯೂ ಅಲ್ಪ ನಾಸ್ತಿಯೂ ಅಲ್ಲ ಅಸ್ತಿ-ನಾಸ್ತಿ ಉಭಯವೂ ಅಲ್ಲ. ಇಲ್ಲೊಂದು ಸಾಮಾನ್ಯ ತಾರ್ಕಿಕ ನಿಯಮವಿದೆ. ಅದೇನೆಂದರೆ . ವಸ್ತುವೊಂದು ಈಗಾಗಲೇ ‘ಇದೆ’ ಎಂದಾದರೆ ಅದು ತನ್ನ ಅಸ್ತಿತ್ವಕ್ಕಾಗಿ ಮತ್ತೊಂದನ್ನು ಅವಲಂಬಿಸಬೇಕಾದ ಅಗತ್ಯವಿಲ್ಲ. . ವಸ್ತುವೊಂದು ಅಸ್ತಿತ್ವದಲ್ಲಿ ‘ಇಲ್ಲ’ ಎಂದಾದರೆ ಆಗಲೂ ಅದು ಯಾವುದನ್ನೂ ಅವಲಂಬಿಸಬೇಕಾಗಿಲ್ಲ. . ಇರುವ – ಇಲ್ಲದಿರುವ ವಸ್ತುವೆಂಬುದು ಅತಾರ್ಕಿಕ. ಹಾಗಾಗಿ ಅದು ಮತ್ತೊಂದನ್ನು  ಅವಲಂಬಿಸುವ ಸಂದರ್ಭವೇ ಬರುವುದಿಲ್ಲ ಈ ನಿಯಮ ಪ್ರಮಾಣ ಮತ್ತು ಪ್ರಮೇಯಗಳಿಗೆ ಅನ್ವಯವಾಗುತ್ತದೆ.

ಪೂರ್ವಪಕ್ಷದ ನಿಲುವು : ಪ್ರಮಾಣಗಳು ದೀಪದ ಪ್ರಕಾಶದಂತೆ ಸ್ವಯಂಸಿದ್ಧವಾದವು. ಹಾಗಾಗಿ ಪ್ರಮಾಣಗಳಿಗೆ ಮತ್ತೆ ಪ್ರಮಾಣಗಳನ್ನು ಹುಡುಕುವ ಎಂದೂ ಮುಗಿಯದ ಹಿಂಪಯಣ ಉಂಟಾಗದು. ದೀಪವು ಹೇಗೆ ಸ್ವಯಂಪ್ರಕಾಶಿ ಮತ್ತು ಅನ್ಯಪ್ರಕಾಶಿಯೋ ಹಾಗೆಯೇ ಪ್ರಮಾಣಗಳೂ ಕೂಡಾ ತಮ್ಮನ್ನೂ ಸಿದ್ಧಗೊಳಿಸಿಕೊಳ್ಳುತ್ತವೆ ಮತ್ತು ಪ್ರಮೇಯಗಳನ್ನೂ ಸಿದ್ಧಿಸಿಕೊಡುತ್ತವೆ.

ನಾಗಾರ್ಜುನ : ನೀನು ಕೊಡುತ್ತಿರುವೆ ದೀಪದ ಬೆಳಕಿನ ಉದಾಹರಣೆ ಇಲ್ಲಿಗೆ ಅನ್ವಯಿಸುವುದಿಲ್ಲ. ನೀನು ತಪ್ಪಾಗಿ ಉದಾಹರಿಸುತ್ತೀಯ. ಏಕೆಂದರೆ ಬೆಳಕು ಕತ್ತಲಿನ ಜೊತೆಗೆ ಸಂಪರ್ಕವನ್ನೇ ಪಡೆಯುವುದಿಲ್ಲವಾದುದರಿಂದ ಅದನ್ನು (ಕತ್ತಲನ್ನು) ನಾಶಮಾಡುವ ಸಂದರ್ಭವೇ  ಬಾರದು. ಸಂಪರ್ಕಕ್ಕೆ ಬಾರದ ಕತ್ತಿ ಹೇಗೆ ತುಂಡರಿಸಲಾರದೋ ಹಾಗೆ ಬೆಳಕು ಕೂಡಾ.

(ಕತ್ತಲನ್ನು ನಾಗಾರ್ಜುನ ಬೇರೆಡೆ ಸರಿಯಾಗಿ ವಿವರಿಸಿಕೊಟ್ಟಿದ್ದಾನೆ. ಅವನು ಅದನ್ನು ಬೆಳಕಿಗೆ ‘ಪ್ರತಿ’ ಯಾಗಿ ಭಾವಿಸುವುದಿಲ್ಲ. ಕತ್ತಲೆಂದರೆ ‘ಏನೂ ಇಲ್ಲದ್ದು’ ಆಕಾಶದಂತೆ. ಅದರೆ ಬೆಳಕು ಸದಾ ಚಲನೆಯಲ್ಲಿರುವ ಕ್ರಿಯಾ ಸಾಮಾರ್ಥ್ಯ, ಏನೂ ಅಲ್ಲದಿರುವುದು  ಕ್ರಿಯಾ ಸಾಮಾರ್ಥ್ಯಕ್ಕೆ ಪ್ರತಿಯಲ್ಲ.)

ಪೂರ್ವಪಕ್ಷ : ಗ್ರಹಗಳು ದೂರದಲ್ಲಿದ್ದೂ ಮನುಷ್ಯನ ಮೇಲೆ ಪ್ರಭಾವ ಬೀರುವಂತೆ, ಬೆಳಕು ದೂರದಲ್ಲಿದ್ದೂ ಕತ್ತಲನ್ನು ಓಡಿಸಬಲ್ಲದು.

ನಾಗಾರ್ಜುನ : ಹಾಗದರೆ ಇಲ್ಲಿದ್ದೇ ಬೆಳಕು ಬೇರೆ ಲೋಕದ ಕತ್ತಲನ್ನೂ, ಭೂಮಿಯಲ್ಲಿರುವ ಎಲ್ಲ ಗುಹೆಗಳ ಕತ್ತಲನ್ನೂ ಕಳೆಯಲು ಸಾಧ್ಯವಾಗಬೇಕು. ಆದರೆ ಹಾಗಿಲ್ಲ.  ಮತ್ತೂ ಮುಂದಕ್ಕೆ-

ಪ್ರಮಾಣ ಪ್ರಯೇಯಗಳು ಮೂರು ಕಾಲಗಳಲ್ಲಿ ಸಿದ್ಧಗೊಳ್ಳುವುದಿಲ್ಲ. ಹೇಗೆಂದರೆ – ಪ್ರಮಾಣದ ಅಸ್ತಿತ್ವದ ಮೂರು ಸಾಧ್ಯತೆಗಳಿವು: ಒಂದು, ಪ್ರಮಾಣವು ಪ್ರಮೇಯಕ್ಕೆ ಮುನ್ನ ಅಸ್ತಿತ್ವದಲ್ಲಿರಬೇಕು. ಎರಡು, ಪ್ರಮಾಣವು ಪ್ರಮೇಯದ ನಂತರ ಅಸ್ತಿತ್ವದಲ್ಲಿರಬೇಕು ಮತ್ತು ಮೂರನೆಯದಾಗಿ ಪ್ರಮಾಣ ಪ್ರಯೇಯಗಳು ಒಂದೇ ಸಮಯದಲ್ಲಿ ಸಿದ್ಧಗೊಳ್ಳಬೇಕು. ಈ ಸಾಧ್ಯತೆಗಳಲ್ಲಿ ಮೊದಲನೆಯದಾಗಿ ಪ್ರಮೇಯಕ್ಕೆ ಮುನ್ನ ಪ್ರಮಾಣ ಸಿದ್ಧಗೊಂಡಿದೆ ಎನ್ನುವುದಾದರೆ ಪ್ರಮೇಯವಾದರೂ ಯಾಕೆ ಬೇಕು? ಅದನ್ನು ಪ್ರಮಾಣ ಎಂದಾದರೂ ಯಾಕೆ ಕರೆಯಬೇಕು? ಎರಡನೆಯದಾಗಿ ಪ್ರಮೇಯಾನಂತರ ಪ್ರಮಾಣವು ಸಿದ್ಧಿಸುತ್ತದೆ ಎಂದಾದರೆ ಈಗಾಗಲೇ ಪ್ರಮೇಯವು ಸಿದ್ಧಿಸಿರುವುದರಿಂದ ಪ್ರಮಾಣವಾದರೂ ಯಾಕೆ ಬೇಕು?  ಜೊತೆಗೆ ಈಗಾಗಲೇ ಇರುವ ಪ್ರಮೇಯಕ್ಕೆ ಇನ್ನೂ ಇಲ್ಲದ ಪ್ರಮಾಣ ಹೇಗೆ ಪ್ರಮಾಣವಾಗಲೂ ಸಾಧ್ಯ? ಇರುವ ಮೊಲಕ್ಕೆ ಇನ್ನೂ ಇಲ್ಲದ ಅದರ ಕೊಂಬುಗಳು ಪ್ರಮಾಣವೆ? ಈಗಾಗಲೇ ಇರುವುದು ಮತ್ತು ಇನ್ನೂ ಇಲ್ಲದಿರುವುದು ಜೊತೆಯಲ್ಲಿರಲು ಸಾಧವೇ?

ಪ್ರಮಾಣ  ಮತ್ತು ಪ್ರಯೇಯಗಳೆರಡೂ ಜೊತೆಯಲ್ಲಿ ಸಿದ್ಧಿಸುತ್ತದೆ ಎಂದಾದರೆ ಕಾರಣ ಮತ್ತು ಪರಿಣಾಮಗಳು ಒಂದೇ ಎಂದಾಗುತ್ತದೆ. ಅದೂ ಅಸಂಭವ.

ಪೂರ್ವಪಕ್ಷ :  ಪ್ರಮಾಣ ಪ್ರಮೇಯಗಳು ತ್ರಿಕಾಲಗಳಲ್ಲಿಯೂ ಸಿದ್ಧಿಸಿಲ್ಲ ಎನ್ನುವುದಾದರೆ ಅವುಗಳ ನಿರಾಕರಣೆಯೂ ತಾರ್ಕಿಕವಾಗಿ ಸಾಧ್ಯವಿಲ್ಲ. ಯಾವುದರ ನಿರಾಕರಣೆ ಸಾಧ್ಯವೋ, ಅದು ಪರೀಕ್ಷಿಸಲ್ಪಟ್ಟು ನಿರಾಕರಣೆಗೊಂಡಿರುವುದರಿಂದ ಅದು ಇದೆಯೆಂದೇ ಅರ್ಥ. ಇಲ್ಲವಾದರೆ ನಿನ್ನ ನಿರಾಕರಣೆಯೂ ನಿರಾಕರಣೆಗೊಳ್ಳಬೇಕಾಗುತ್ತದೆ.

ನಾಗಾರ್ಜುನ : ತ್ರಿಕಾಲಗಳಲ್ಲಿ ಪ್ರಮಾಣ ಪ್ರಮೇಯಗಳು ಸಿದ್ಧಿಸಿವೆಯೋ ಇಲ್ಲವೋ ಎಂಬ ಪರೀಕ್ಷೆ ನಡೆದದ್ದೇ ಪೂರ್ವ ಸಮ್ಮತಿಯಿಂದ, ಆದುದರಿಂದ ಪರೀಕ್ಷೆಯ ಫಲಿತಾಂಶದೊಂದಿಗೆ ನಮ್ಮ ವಾದ ಮುಕ್ತಾಯವಾಗಲೇಬೇಕು. ಪ್ರಮಾಣ -ಪ್ರಮೇಯಗಳು ತ್ರಿಕಾಲಗಳಲ್ಲಿಯೂ ಸಿದ್ಧಿಸಿಲ್ಲ ಎಂಬ ಫಲಿತಾಂಶವೇ ನನ್ನ ನಿರಾಕರಣೆ. ಆದನ್ನು ಮೊದಲು ಒಪ್ಪಿಕೊಂಡು, ನಿರಾಕರಣೆಯನ್ನು ನಿರಾಕರಿಸುವುದಾದರೆ, ಕೇವಲ ವಾದಕ್ಕೆ ವಾದ ಎನ್ನುವುದಾದರೆ ನನ್ನ ಪ್ರತಿಕ್ರಿಯೆಯನ್ನು ಮುಕ್ತಾಯಗೊಳಿಸುತ್ತೇನೆ.

ತನ್ನ ವಿಗ್ರಹ ವ್ಯಾವರ್ತಿನಿಯಲ್ಲಿ ನಾಗಾರ್ಜುನ ಪ್ರಮಾಣದ ಬಗ್ಗೆ ಹೀಗೆ ನಿಶ್ವಿತವಾಗಿ ನುಡಿಯುತ್ತಾನೆ.

ನಾನು ಪ್ರತ್ಯಕ್ಷ ಇತ್ಯಾದಿ  ಸಾಧನಗಳಿಂದ ಏನನ್ನಾದರೂ ಗ್ರಹಿಸಿದ್ದರೆ ಆಗ ನಿರಾಕರಿಸುತ್ತಿದ್ದೆ ಅಥವಾ ಒಪ್ಪುತ್ತಿದ್ದೆ. ಆದರೆ ಅದು ಹಾಗಲ್ಲ. ಹೀಗಾಗಿ ಪ್ರಮಾಣವೊಂದರ ಮೂಲಕ ನಾನು ಗ್ರಹಿಸಿ ಅದನ್ನು ನಿರಾಕರಿಸುತ್ತಿದ್ದೆ ಎಂದು ನೀನು ಹೇಳಿದರೆ ಅದಕ್ಕೆ ನನ್ನ ಉತ್ತರಪ್ರಮಾಣಗಳೂ ಇಲ್ಲ, ಅವುಗಳಿಂದ ಗಮ್ಯವಾದದ್ದೂ ಇಲ್ಲ.’ ಒಂದು ಪಕ್ಷ ಪ್ರಮಾಣಗಳ ಮೂಲಕ ಪ್ರಮಾಣಗಳು ಸಿಧವಾಗುತ್ತವೆ ಎಂದಾದರೆ ಆಗ ಅವು ಅನಂತವಾಗುತ್ತವೆ. ಆಗ ಯಾವುದರ ಪ್ರಾರಂಭ, ಮಧ್ಯ, ಅಂತ್ಯ,ಎಂಬುದು ಕೂಡ ಸಿದ್ಧವಾಗುವುದಿಲ್ಲ“.

ಯಾವುದನ್ನು ಸಿದ್ಧಮಾಡಬೇಕು ಎಂದು ಹೊರಡುತ್ತೇವೆಯೋ ಅದರ ಪ್ರಮಾಣವನ್ನು ಸಿದ್ಧ ಮಾಡಬೇಕಾಗುತ್ತದೆ. ಅದೊಂದು ಎಂದೂ ಮುಗಿಯದ ಹಿಂಪ್ರಯಾಣವಾಗುತ್ತದೆ.

ನಾಗಾರ್ಜುನ ತರ್ಕ ಮಾರ್ಗ ಮತ್ತು ಅವನು ವ್ಯವಹರಿಸುವ ಅತ್ಯಂತ ಸೂಕ್ಷ್ಮಸ್ತರಗಳನ್ನು ಸೂಚಿಸುವ’ ಮೂಲಮಧ್ಯಮಕಕಾರಿಕಾದ’ ‘ಕಾಲ ಪರೀಕ್ಷೆ’ ಎಂಬ ಅಧ್ಯಾಯವನ್ನು ಇಲ್ಲಿ ವಿಶ್ಲೇಷಿಸಬಹುದು. ಏಕೆಂದರೆ ದರ್ಶನಗಳು ಮತ್ತು ಅಧುನಿಕ ವಿಜ್ಞಾನ ತಪ್ಪದೇ ಪ್ರತಿಕ್ರಿಯಿಸುವ ಸಂಗತಿಗಳಲ್ಲಿ ‘ಕಾಲ’ ವೂ ಒಂದು . ಈ ವಿಷಯದಲ್ಲಿ ಬೌದ್ಧ ಮಾಧ್ಯಮಿಕರ ನಿಲುವು ಅತ್ಯಂತ ವಿಶಿಷ್ಟವಾದುದು (ತೀರಾ ಇತ್ತೀಚೆಗೆ ವಿಜ್ಞಾನಿ ಸ್ಟೀಫನ್‌ ಹಾಕಿಂಗ್‌ ಕಾಲದ ಬಗ್ಗೆ ವ್ಯಕ್ತಪಡಿಸಿದ ನಿಲುವನ್ನು ಪರಿಭಾವಿಸಬಹುದು).

ವರ್ತಮಾನ ಮತ್ತು ಭವಿಷ್ಯತ್ಕಾಲಗಳು
ಭೂತಕಾಲವನ್ನಾಧರಿಸಿ ಉಂಟಾಗುತ್ತವೆ ಎಂದಾದರೆ
ವರ್ತಮಾನ ಮತ್ತು ಭವಿಷ್ಯತ್ಕಾಲಗಳು
ಭೂತಕಾಲದೊಳಗೇ ಇವೆ ಎಂದಂತಾಯಿತು.
(
ಕಾರಿಕೆ ೧ ಅಧ್ಯಾಯ ೧೯)

ವರ್ತಮಾನ ಮತ್ತು ಭವಿಷ್ಯತ್ಕಾಲಗಳು
ಭೂತಕಾಲದೊಳಗೇ ಇಲ್ಲವಾದರೆ
ವರ್ತಮಾನ ಮತ್ತು ಭವಿಷ್ಯತ್ಕಾಲಗಳು
ಭೂತಕಾಲವನ್ನಾಧರಿಸಿ ಉತ್ಪನ್ನವಾಗುವುದೆಂತು?
(
ಕಾರಿಕೆ ೨ ಅಧ್ಯಾಯ ೧೯)

ವರ್ತಮಾನ ಮತ್ತು ಭವಿಷ್ಯತ್ಕಾಲಗಳು
ಭೂತಕಾಲವನ್ನವಲಂಬಿಸದೇ ಸಿದ್ಧಗೊಳ್ಳಲಾರವು
ಹಾಗಾಗಿ ವರ್ತಮಾನಕಾಲವೂ ಇಲ್ಲ  ಭವಿಷ್ಯತ್ಕಾಲವೂ ಇಲ್ಲ.
(
ಕಾರಿಕೆ ೩ ಅಧ್ಯಾಯ ೧೯)

ನಾಗಾರ್ಜುನ ಈ ಕಾರಿಕೆಗಳನ್ನು ಟಿಬೆಟಿಯನ್‌ ತಾತ್ವಿಕ ಸಾಂಖಪಾ ಹೀಗೆ ವ್ಯಾಖ್ಯಾನಿಸುತ್ತಾರೆ. ‘ವರ್ತಮಾನ ಮತ್ತು ಭವಿಷ್ಯಗಳು ಬೂತದಲ್ಲಿ ಅಂತರ್ಗತವಾಗಿ ಅಸ್ತಿತ್ವದಲ್ಲಿದ್ದುದೇ ಆದರೆ, ಅವುಗಳಲ್ಲಿ ಯಾವುದೊಂದನ್ನೂ ದಾಟಿ ಹೋಗಲಾಗುವುದಿಲ್ಲ. ವರ್ತಮಾನ ಮತ್ತು ಭವಿಷ್ಯಗಳು ಭೂತಕಾಲದಿಂದ ಉದಯಿಸಿ ಸಂಭವಿಸಬೇಕಾದರೆ ಅವು ಬೂತಕಾಲದಲ್ಲಿ ಅಸ್ತಿತ್ವವನ್ನು ಪಡೆದಿರಬೇಕು. ಹಾಗೇನಾದರೂ ಭೂತಕಾಲದಲ್ಲೇ ಅವು ಇದ್ದರೆ, ಅವೂ ಭೂತಕಾಲವೇ ಆಗಿಬಿಡುತ್ತವೆ. ಆಗ ಭೂತಕಾಲವನ್ನೂ ಸ್ಥಾಪಿಸಲು ಸಾಧ್ಯವಾಗುವುದಿಲ್ಲ. ಭೂತ ಮತ್ತು ಭವಿಷ್ಯತ್ತುಗಳನ್ನೇನಾದರೂ ಒಟ್ಟಿಗೇ ಸ್ಥಾಪಿಸ ಹೋದರೆ ವರ್ತಮಾನವನ್ನು ಸ್ಥಾಪಿಸಲು ಸಾಧ್ಯವಿಲ್ಲ. ಭೂತ ಮತ್ತು ಭವಿಷ್ಯತ್ತುಗಳು ವರ್ತಮಾನದ ಸಂಬಂಧದಲ್ಲಿ ಮಾತ್ರ ಸ್ಥಾಪಿಸಲು ಸಾಧ್ಯವಾಗುವಂಥವು. ಆದರೆ ವರ್ತಮಾನ ಕಾಲವು ಇಲ್ಲದಿರುವುದರಿಂದ ಭೂತ ಭವಿಷ್ಯತ್ತುಗಳೂ ಇಲ್ಲ.

ಭೂತಕಾಲ ಮಾತ್ರ ಸತ್ಯ ಎಂದಾದರೆ ಮೊಳಕೆ ತನ್ನ ಸ್ಥಿತಿಯಿಂದ ಮುಂದಕ್ಕೇ ಹೋಗದು. ಭೂತಕಾಲದ ಮುಂದುವರಿಕೆಯಾಗಿ ವರ್ತಮಾನವನ್ನು ಸ್ಥಾಪಿಸಬಹುದೇ ಹೊರತು ಅದನ್ನು ಸ್ವತಂತ್ರವಾಗಿ ಸ್ಥಾಪಿಸಲಾಗದು. ಹಾಗೆಯೇ ಭವಿಷ್ಯತ್ತು ಕೂಡ ಪರೋಕ್ಷವಾಗಿ ಭೂತವನ್ನೇ ಅವಲಂಬಿಸಿದೆ. ಭೂತಕಾಲದಲ್ಲಿ ಇರುವ ವರ್ತಮಾನವಾಗಲೀ ಭವಿಷ್ಯತ್ತಾಗಲೀ ಅಸ್ತಿತ್ವದಲ್ಲಿಲ್ಲದವು. ಭೂತಕಾಲದ ಹೊರತಾಗಿ ಬೇರಾವುದನ್ನೂ ಅವಲಂಬಿಸಿ ಅಸ್ತಿತ್ವಕ್ಕೆ ಬರಲಾರವು. ಅಸ್ತಿತ್ವಕ್ಕೆ ಬಾರದಿರುವುದರಿಂದ ಕತ್ತೆಯ ಕೊಂಬುಗಳಂತೆ ಅವು ಇಲ್ಲವೆಂದೇ ಹೇಳಬೇಕು.

ಕಾಲವನ್ನು ಸತ್ಯವೆನ್ನುವ ದೃಷ್ಟಿವಾದವು ಭೂತಕಾಲವನ್ನು ವರ್ತಮಾನ ಕಾಲಕ್ಕೆ ಅಗತ್ಯವಾದ ಪ್ರತ್ಯಯ ಎನ್ನುತ್ತದೆ. ಮಡಕೆಯ ಮಾಡುವರೆ ಮಣ್ಣೆ ಮೊದಲು ಎನ್ನುವಂತೆ. ಅಸ್ತಿತ್ವವೆಂಬುದು ಆದಿ ಮತ್ತು ಅಂತ್ಯವುಳ್ಳದ್ದೆಂದು ಗ್ರಹಿಸುವಲ್ಲಿನ ಪರಮಾದವು ಕಾಲದ ಗ್ರಹಿಕೆಗೆ ಅಡ್ಡಿಯಾಗಿದೆ. ಆದಿಯುಂಟು, ಎಂಬ ತಪ್ಪು ಗ್ರಹಿಕೆ ಭೂತಕಾಲಕ್ಕೆ ಸಂಬಂಧಿಸಿದ್ದಾದರೆ ಅಂತ್ಯವುಂಟೆಂಬ ತಪ್ಪು ಗ್ರಹಿಕೆ ಭವಿಷ್ಯತ್ಕಾಲಕ್ಕೆ ಸಂಬಂಧಿಸಿದ್ದುದ್ದಾಗಿದೆ. ಇದಕ್ಕೆ ಮಾಧ್ಯಮಿಕರು ಸೂಚಿಸಿದ ಪರಿಹಾರವೆಂದರೆ ಲೋಕವು ಸಂಬಂಧಗಳಿಂದ ಸೃಷ್ಟಿಯಾದುದು ಮತ್ತು ನಿರಂತರ ಪ್ರವಾಹರೂಪಿಯಾದುದು. ಪ್ರತಿಹಂತವೂ ಅದರ ಹಿಂದನ್ನು ಮತ್ತು ಮುಂದನ್ನು ಅದಕ್ಕೆ ಸಂಬಂಧಿಸಿದ ಹಾಗೆ ಹೊಂದಿದೆ. ಆ ಹಂತವಾಗಲೀ ಅದರ ಹಿಂದಾಗಲೀ ಮುಂದಾಗಲೀ ಶಾಶ್ವತ ಸ್ಥಿತಿಯನ್ನು ಪಡೆದು ಇರಲಾರವು. ಭೂತ, ಭವಿಷ್ಯತ್‌, ವರ್ತಮಾನ ಕಾಲಗಳು ಸಾಪೇಕ್ಷ ಕಲ್ಪನೆಗಳಷ್ಟೇ ಆಗಿದ್ದು ಕಾಲವೆನ್ನುವುದಿಲ್ಲ.

ಕಾಲವು ಶಾಶ್ವತ ಎನ್ನುವುದಾದರೆ, ಅದರ ಲಕ್ಷಣಗಳೂ ಶಾಶ್ವತ ಸ್ವರೂಪವಾದವುಗಳಾಗಿರಬೇಕು. ಕಾಲವನ್ನು ಒಂದು ಸ್ವತಂತ್ರ ಘಟಕವನ್ನಾಗಿ ಗ್ರಹಿಸಿ ವಿಶ್ಲೇಷಿಸಲೂ ನಾಗಾರ್ಜುನ ಸಿದ್ಧನಿಲ್ಲ.

ಅಸ್ತಿತ್ವದಲ್ಲಿಲ್ಲದ ಕಾಲ ಗ್ರಾಹ್ಯವಲ್ಲ
ಸ್ಥಿತ ಕಾಲವಿಲ್ಲ. ಅಗ್ರಾಹ್ಯ ಕಾಲವನ್ನು
ಗ್ರಹಿಸಿದ್ದಾರೆ ವ್ಯಕ್ತಪಡಿಸುವುದು ಹೇಗೆ?

ಕಾಲವೆಂತೂ ‘ಏಕಾಕಿ’ಯಾಗಿ ತನ್ನ ವ್ಯವಹಾರವನ್ನು ಮಾಡಲಾರದು. ಅದಕ್ಕೆ ಸ್ವತಂತ್ರ ಅಸ್ತಿತ್ವವಂತೂ ಇಲ್ಲ. ಇಲ್ಲದ ಮತ್ತು ಗ್ರಹಿಕೆಗೆ ಸಿಗದ್ದನ್ನು ವ್ಯಕ್ತಪಡಿಸಲೂ ಸಾಧ್ಯವಿಲ್ಲ, ಶುದ್ಧಕಾಲ (absolute time) ಎನ್ನುವುದಕ್ಕೆ ನಾಗಾರ್ಜುನನ ದೃಷ್ಟಿಯಲ್ಲಿ ಅರ್ಥವಿಲ್ಲ. ಹಾಗಾದರೆ ಕಾಲದ ವ್ಯವಹಾರವನ್ನು ವಸ್ತು ಅಥವಾ ‘ಭಾವ’ವೊಂದರ ಸಂಬಂಧದಲ್ಲಿ ಅಂದರೆ ಪ್ರಕ್ರಿಯೆಯ ನೆರವಿನಲ್ಲಿ ಮಾಡುತ್ತೇವೆ. ಹಾಗಾದರೆ ಭಾವದ ನೆರವಿನಲ್ಲಿ ಅದನ್ನು ಗ್ರಹಿಸಬಹುದೆ? ನಾಗಾರ್ಜುನ ಹೀಗೆನ್ನುತ್ತಾನೆ.

ಭಾವವನ್ನಲಂಬಿಸಿ ಕಾಲ ಇರುತ್ತದೆ ಎಂದಾದರೆ
ಇಲ್ಲದ್ದನ್ನವಲಂಬಿಸಿ ಇರಲು ಸಾಧ್ಯವೆ?
ಭಾವವೆಂಬ ಯಾವುದಕ್ಕೂ ಅಸ್ತಿತ್ವವಿಲ್ಲ
ಕಾಲ ಇರುವುದಾದರೂ ಎಲ್ಲಿ?

ಶುದ್ಧಕಾಲವನ್ನು ಈಗಾಗಲೇ ನಿರಾಕರಿಸಿಯಾಗಿದೆ. ಭಾವವನ್ನವಲಂಬಿಸಿ ಕಾಲ ಅಸ್ತಿತ್ವಕ್ಕೆ ಬರುತ್ತದೆಯೆಂದಾರೆ ಭಾವಶೂನ್ಯನತೆಯನ್ನೂ ಸಿದ್ಧಪಡಿಸಿದೆ. ಹಾಗಾಗಿ ಕಾಲವೆನ್ನುವುದು, ಭಾವದ ನೆರವಿನಿಂದ ಗ್ರಹಿಸಲೂ ಸಾಧ್ಯವಿಲ್ಲ. ಕಾಲವು ಶಾಶ್ವತ ರೆನ್ನುವುದಾದರೆ ಅದರ ಲಕ್ಷಣಗಳೂ ಶಾಶ್ವತ ಸ್ವರೂಪದವುಗಳಾಗಿರಬೇಕು. ಅಂದರೆ ಭೂತಕಾಲ ಭವೊಷ್ಯತ್ಕಾಲವನ್ನು ಸೃಷ್ಟಿಸಲಾರದು. ಕಾಲವೊಂದು ‘ಸತ್ಯ’ ಎನ್ನುವುದಾದರೆ ಭೂತಕಾಲವು ವರ್ತಮಾನ ಕಾಲವನ್ನಾಗಲೀ, ಭವೊಷ್ಯತ್ಕಾಲವನ್ನಾಗಲೀ ಸೃಷ್ಟಿಸುವ ಸಂದರ್ಭವೇ ಬಾರದು. ಹಾಗಾಗಿ ಕಾಲವೆನ್ನುವುದು ಇಲ್ಲ. ನಾಗಾರ್ಜುನ ಈ ಸೂತ್ರಗಳ ಜೊತೆಗೇ ಡೆಸೆಜ್‌ ಸುಜುಕಿಯ ಒಂದು ಹೇಳಿಕೆ ಮತ್ತು ಅಲ್ಲಮನ ಒಂದು ವಚನವನ್ನು ಇಲ್ಲಿ ನೆನೆಯಬಹುದು.

ಡೆಸೆಜ್ಸುಜುಕಿ : In this spiritual world there are no time divisions such as the past, present and future; for they have contracted themselves into a single moment of the present . . . . . The past and the future are rolled up in this present moment of illumination.

ಅಲ್ಲಮನ ವಚನ : ಹಿಂದಣ ಅನಂತವನು ಮುಂದಣ ಅನಂತವನು ಒಂದು ದಿನ ಒಳಕೊಂಡಿತ್ತು ನೋಡಾ ! ಒಂದು ದಿನವನೊಳಕೊಂಡು ಮಾತನಾಡುವ ಮಹಂತನ ಕಂಡು ಬಲ್ಲವರಾರಯ್ಯ? ಆದ್ಯರು ವೇದ್ಯರು ಅನಂತ ಹಿರಿಯರು ಲಿಂಗದಂತುವನರಿಯದೆ ಅಂತೆ ಹೋದರು ಕಾಣಾ ಗುಹೇಶ್ವರ!

ದಿನ ಬೆಳಗಾದರೆ ಭಕ್ತಿಯನ್ನು ಅಭಿನಯಿಸುತ್ತಲೇ ‘ವಸ್ತು’ಗಳ ಹಿಂದೆ ವೇಗವಾಗಿ ಓಡುತ್ತಿರುವ ಸಮೂಹಕ್ಕೆ ಭಕ್ತಿ ವಿರೋಧ ಮತ್ತು ವಸ್ತು ನಿರಸನ ಈ ಎರಡೂ ಪಥ್ಯವಾಗದ ಸಂಗತಿಗಳು. ಅಧಿಕಾರ ಕೇಂದ್ರಗಳು ಅತ್ಯಂತ ಬಲಿಷ್ಠವಾಗಿರುವುದು ಮತ್ತು ದುರ್ಬಲ ಸಮೂಹಗಳನ್ನು ಹತ್ತಿಕ್ಕುತ್ತಿರುವುದು ಹೀಗೆ ದೊರೆತ ಅಧಿಕಾರದಿಂದಲೇ. ಪಾಶ್ಚಾತ್ಯ ‘ನಿರಚನಾ’ ಪ್ರಸ್ಥಾನಗಳು ಈ ಸತ್ಯವನ್ನು ಮನಗಂಡು ನಿರಚನೆಯ ಮೂಲಕ ಲೋಕವಿವರಣೆಗೆ ತೊಡಗಿವೆ. ಬುದ್ಧ ನಾಗಾರ್ಜುನರಿಂದ ಪ್ರಸ್ತಾಪಿಸಲ್ಪಟ್ಟ ಪ್ರತೀತ್ಯ ಸಮುತ್ಪಾದವು ಪ್ರಸ್ತುತ ಲೋಕಜೀವನಕ್ಕೆ ಭಿನ್ನವಾದ ಜೀವನಕ್ರಮವೊಂದನ್ನು ಮುಂದಿಡುತ್ತದೆ. ಅದರ ಕೆಲವು ಪ್ರಮುಖಾಂಶಗಳನ್ನು ಪಟ್ಟಿ ಮಾಡಬಹುದು :

೧. ಕಾರಣ ಮತ್ತು ಪರಿಣಾಮ ಮೀಮಾಂಸೆಗಳನ್ನು ಬಲವಾಗಿ ಆಧರಿಸಿ ರೂಪಿತವಾಗಿರುವ ‘ಭಾರತೀಯ ಕಾವ್ಯ ಮೀಮಾಂಸೆ’ ಎಂದು ಕರೆಯಲ್ಪಡುತ್ತಿರುವ ಕಾವ್ಯಮೀಮಾಂಸೆಯು ಅಪ್ರಸ್ತುತವಾಗುತ್ತದೆ. (ಈ ಚರ್ಚೆಗೆ ವಿಸ್ತಾರವಾದ ವೇದಿಕೆಯ ಅಗತ್ಯವಿದೆ).

೨. ಭಾರತೀಯ ಕಾವ್ಯ ಮೀಮಾಂಸೆಯು ರೂಪಿತವಾಗಿರುವ ನಿಲುವಿನಿಂದಲೇ ರೂಪಿತವಾಗಿರುವ ಸದ್ಯದ ಭಾರತೀಯ ಜೀವನಕ್ರಮವು ಮಿಥ್ಯಾದೃಷ್ಟಿಯನ್ನಾಧರಿಸಿದೆ ಯಾದುದರಿಂದ ನಿರಾಕರಣಯೋಗ್ಯವಾಗುತ್ತದೆ.

೩. ‘ಸಂಶೋಧನೆ’ ಎಂಬ ಪದ ಈಗ ಇಕ್ಕಟ್ಟಿಗೆ ಸಿಲುಕಿದೆ. ಸಾಮಾನ್ಯಾರ್ಥದ ‘ಸತ್ಯಶೋಧನೆ’ ಎಂಬ ಪರಿಕಲ್ಪನೆಯನ್ನು ಮೊದಲಿಗೆ ಅನುಮಾನಿಸಿ ಈಗ ಅದರಿಂದ ದೂರ ಬಂದಿದ್ದೇವೆ. ಸತ್ಯವೆಂಬುದು ಕಟ್ಟಬೇಕಾದದ್ದೇ ಹೊರತು ಶೋಧಿಸಬೇಕಾದ್ದಲ್ಲ ಎಂಬ ನಿಲುವು ಇದೀಗ ಪ್ರಶ್ನಾತೀತವಾಗಿದೆ. ಕಾಲದೇಶಾತೀತವಾಗಿ ಗ್ರಹಿಸಲ್ಪಡುತ್ತಿದ್ದ ಸತ್ಯವನ್ನು ಕಾಲದೇಶಗಳ ವಶಕ್ಕೊಪ್ಪಿಸಿದಾಗ ಸತ್ಯದ ನಿತ್ಯತ್ವವು ಪ್ರಶ್ನಾತೀತವಾಗಿ ಉಳಿಯಲಾರದು.

೪. ಜ್ಞಾನ ಮತ್ತು ಜ್ಞೇಯಗಳ ಜೊತೆಗೆ ಜ್ಞಾತೃವು ಮೂರನೆಯ ಆಯಾಮವಾಗಿ ಸೇರಿಕೊಂಡಾಗ, ಅವೆಲ್ಲವೂ ಪರಸ್ಪರಾವಲಂಬಿಗಳಾದುದರಿಂದ ಮತ್ತು ಯಾವುದಕ್ಕೂ ಸ್ವತಂತ್ರ ಶಾಶ್ವತ ಅಸ್ತಿತ್ವವಿಲ್ಲವೆಂಬ ನಿಲುವು ಸತ್ಯವೂ ಸಾಪೇಕ್ಷವಾಗಿರಲೇಬೇಕು ಎಂಬ ಅರಿವನ್ನುಂಟುಮಾಡುತ್ತದೆ.

೫. ನಾಗಾರ್ಜುನ ಪ್ರಮಾಣ ನಿರಾಕರಣೆಯು ‘ಭಾರತೀಯ’ ಜೀವನಕ್ರಮಕ್ಕೆ ಮತ್ತು ಅಧಿಕಾರ ಕೇಂದ್ರಗಳಿಗೆ ಅರಗಿಸಿಕೊಳ್ಳಲಾರದ ಸಂಗತಿಯಾಗಿದೆ. ಅಧಿಕಾರ ಕೇಂದ್ರಗಳು ಅಧಿಕಾರವನ್ನು ರೂಢಿಸಿಕೊಳ್ಳುವುದು ಎರಡು ಮೂಲಗಳಿಂದ. ಒಂದು, ಸಮೂಹದಿಂದ ದೊರಕುವ ಅಧಿಕಾರವಾದರೆ ಇನ್ನೊಂದು ‘ಶಬ್ದ ಪ್ರಮಾಣ’ ಮೂಲದಿಂದ. ಅಂದರೆ ತನ್ನನ್ನು ಪ್ರಸ್ನಿಸಲಾಗದು ಎನ್ನುವ ‘ದಾಖಲಾತಿ’ ಗಳಿಂದ. ಮೊದಲನೆಯದು ಶುದ್ಧಾರ್ಥದಲ್ಲಿ ಪ್ರಜಾಸತ್ತೆಯಾದರೆ ಎರಡನೆಯದು ಮೂಲಬೂತವಾದಿ ಸಂಸ್ಥೆಗಳು, ಪ್ರಜಾಸತ್ತೆ ಬುಡಮೇಲಾಗುವುದೇ  ಎರಡನೆಯದು ಮೇಲುಗೈ ಪಡೆದಾಗ, ನಾಗಾರ್ಜುನನ  ಪ್ರಮಾಣ ನಿರಾಕರಣೆಯು ಇಂತಹ ಮೂಲಭೂತವಾದಿ ನಂಬಿಕೆಗಳನ್ನು, ಆಚರಣೆಗಳನ್ನು ಮತ್ತು ಕುರುಹುಗಳನ್ನು ಕಲ್ಪಿಸುವುದಿಲ್ಲಾಗಿ ಪ್ರಜಾಸತ್ತೆಯ ಪ್ರಥಮ ಲಕ್ಷಣಗಳಾದ ಚಲನೆ ಮತ್ತು ಲೋಕಹಿತವನ್ನು ಕಾಪಾಡುತ್ತದೆ.

೬. ಭಾಷೆ ಮತ್ತು ವಿಧಾನದ ಬಗೆಗಿನ ನಂಬಿಕೆಗಳ ನಡುವಿನ ಗುದ್ದಾಟಕ್ಕೆ ಭರ್ತೃಹರಿಯಿಂದ ಡೆರಿಡಾನವರೆಗೆ ಸಾತತ್ಯದ ಎಳೆಯಿದೆ. ವೈದಿಕರಿಗೆ ಭಾಷೆ ಎನ್ನುವುದು ಅನುಭಾವದ ಲೀಲೆ,  ಅನುಭಾವಕ್ಕೆ ಮೆಟ್ಟಿಲು. ಅವರ ಪಾಲಿಗೆ ಶಬ್ಧಕ್ಕೆ ಅರ್ಥದ ಜೊತೆ ಇರುವ ಸಂಬಂಧವು ನಿತ್ಯವಾದುದು. ಬೌದ್ಧರಿಗೆ ಮತ್ತು ಇತರ ಶ್ರಮಣ ಪಂಥಗಳಿಗೆ ದೊಡ್ಡ ತಕರಾರು ಶುರುವಾಗುವುದು ಇಲ್ಲಿಯೇ. ಭಾಷೆ ಎನ್ನುವುದು ವೈದಿಕೇತರಿಗೆ ಒಂದು ದೊಡ್ದ ಸಮಸ್ಯೆ. ಅನುಭಾವದ ಹಾದಿಯಲ್ಲಿ ಅದೊಂದು ಅಡ್ದಿ, ತೆರೆ, ಅದನ್ನು ಸರಿಸದೆ ನಿರ್ವಾಣಕ್ಕೆ ಪ್ರವೇಶವಿಲ್ಲ. ಅದರ ಹಂಗಿನಲ್ಲಿರುವವರೆಗೆ ಅನುಭಾವ ಸಾಧ್ಯವಿಲ್ಲ. ಭಾಷೆಯೆನ್ನುವುದು ವಿಕಲ್ಪವನ್ನು ಸೃಷ್ಟಿಸುವ ಮಾಧ್ಯಮ. ಭಾಷಿಕ ಪ್ರಪಂಚವೆಂದರೇನೇ ನಿರಂತರ ಬೌದ್ಧಿಕ ಚಿತ್ರ ಸೃಷ್ಟಿ. ಹಾಗಾಗಿಶಬ್ಧ ಅರ್ಥದ ಶಾಶ್ವತ ಸಂಬಂಧವನ್ನು  ನಾಗಾರ್ಜುನ  ತಾರ್ಕಿಕವಾಗಿ ಅಲ್ಲಗಳೆದರೆ ಅಲ್ಲಮನಂತಹ ಅನುಭಾವಿಗಳು ಭಾಷೆಯನ್ನು ಈಡಾಡಿಬಿಡುವುದರ ಮೂಲಕ ಅದನ್ನು ತೋರಿಸಿಕೊಡುತ್ತಾರೆ. ನುಡಿ ಪಡಿಗೆಡುವುದು ಅಲ್ಲಮನಿಗೆ ಸಹಜ ಪ್ರಕ್ರಿಯೆ. ಭಾಷಿಕರ ಸಂಕೇತಗಳು ಸ್ಥಗಿತಗೊಳ್ಳದಂತೆ ಅಲ್ಲಮ ಅವುಗಳನ್ನು ‘ಆದಿಮ’ ಸ್ಥಿತಿಯರೆಗೆ ತಳ್ಳಿಬಿಡುತ್ತಾನೆ. ಶಬ್ಧ ಅರ್ಥಗಳ ಸಂಬಂಧ ಸ್ಥಗಿತವಾಗುವುದು ಪ್ರಕ್ರಿಯಾ ಮೀಮಾಂಸೆಗೆ ವಿರುದ್ಧವಾದುದು. ನಿತ್ಯಲೋಕದ ಕುಟುಂಬ ಸಂಬಂಧಗಳು ಸಹ ಎಲ್ಲ ಮುಜುಗರವನ್ನು ಕಳೆದುಕೊಂಡು ಅಲ್ಲಮನಲ್ಲಿ ಕಲಸುಮೇಲೋಗರವಾಗುತ್ತವೆ. ಹೀಗೆ ಸಂಬಂಧಗಳನ್ನು ಕಲಸುವ ಪ್ರವೃತ್ತಿ ಬೌದ್ಧ ಮಾಧ್ಯಮಿಕರ ಕೊಡುಗೆ.

೭. ಯಾವ ಪಂಥದ ಲೋಕವಿವರಣೆಯೂ ವಸ್ತು ಪ್ರಂವಂಚದ ನಿರ್ಲಿಪ್ತ ವಿವರಣೆಯಲ್ಲ. ಅಂತಹ  ವಿವರಣೆಯ ಹಿಂದೆ ನಿರ್ದಿಷ್ಟ ಜನಸಮೂಹಕ್ಕೆ ಜೀವ ಸಮೂಹಕ್ಕೆ ಅಧಿಕಾರವನ್ನು ದೊರಕಿಸಿಕೊಡುವ ಹಂಬಲ ಇರುತ್ತದೆ. ಉದಾಹರಣೆಗೆ ವಿಜ್ಞಾನವು ಮನುಷ್ಯನನ್ನು ನಿಸರ್ಗದ ಕೇಂದ್ರದಲ್ಲಿಟ್ಟು ಅವನಿಗೆ ಯಜಮಾನಿಕೆಯನ್ನು ನೀಡಿ ಅವನಿಗೋಸ್ಕರ ತನ್ನ ವಿವರಣೆಯ ಉದ್ಯೋಗವನ್ನು ಮಾಡುತ್ತದೆ. ಕೆಲವು ಪಾರಂಪರಿಕ ಚಿಂತನಾ ಪ್ರಸ್ಥಾನಗಳು ಕೆಲವು ಪ್ರಾಚೀನ ದಾಖಲೆಗಳನ್ನು ಮೊದಲು ಪ್ರಶ್ನಾತೀತ ನೆಲೆಯಲ್ಲಿ ಪ್ರತಿಷ್ಠಾಪಿಸಿ ಆ ಮೂಲಕ ತನ್ನ ವಿವರಣೆಯು ಅಂತಹ ಪ್ರಶ್ನಾತೀತ ಮೂಲರೂಪವನ್ನಾಧರಿಸಿದ್ದು ಎಂಬ ಅತಾರ್ಕಿಕ ನಿಲುವಿನ ಮೂಲಕ ವಿವರಿಸುತ್ತವೆ. ಈ ಪ್ರಸ್ಥಾನಗಳು ಬಹುಜನ ಸಮುದಾಯವನ್ನು ತೊತ್ತುಗಳನ್ನಾಗಿಸಿ ಕೆಲವರ ಗುಂಪಿಗೆ ಯಜಮಾನಿಕೆಯನ್ನು ದೊರಕಿಸಿಕೊಡುವ ಉದ್ಯೋಗದಲ್ಲಿ ತೊಡಗಿವೆ. ನಾಗಾರ್ಜುನನ ಶೂನ್ಯತಾವಾದವು ಈ ಎಲ್ಲ ವಿವರಣೆಗಳ, ದೃಷ್ಟಿವಾದಗಳ ನಿರಾಕರಣೆಯಾಗಿರುವುದರಿಂದ ಮತ್ತು ‘ತನ್ನದೇ ಆದ’ ಯಾವ ವಿವರಣೆಯೂ ಇಲ್ಲದಿರುವುದರಿಂದ ಎಲ್ಲ ರೀತಿಯ ಸಾಂಸ್ಥಿಕ ಸ್ಥಿರ ಅಧಿಕಾರಿಗಳು ಕಳಚಿಬೀಳುತ್ತವೆ. ಎರಡನಯದಾಗಿ ಲೋಕಸಂಬಂಧದ ‘ವಿವರಣೆ’ಯಾದ ಪ್ರತೀತ್ಯ ಸಮುತ್ಪಾದವು ದುಃಖಕಾರಣ ಮತ್ತು ದುಃಖನಿವಾರಣೆಯ ಮಾರ್ಗಕ್ಕೆ ಬೆಸೆಯಲ್ಪಟ್ಟಿದೆ. ಅದು ಕರುಣಾ ಮೈತ್ರಿ ಮಾರ್ಗವನ್ನು ಪ್ರವರ್ತಿಸುತ್ತದೆ.

೮. ವಾಗರ್ಥದ ಉದ್ಯೋಗದಲ್ಲಿ ತೊಡಗಿರುವ ಭಾಷೆಯಾಗಲೀ ಅದು ನುಡಿಯುತ್ತಿರುವ ಲೋಕರಚನೆಗಳಾಗಲೀ ನಿತ್ಯಪದಾರ್ಥಗಳಲ್ಲ; ಅವು ಕಾರಣ ಪರಿಸ್ಥಿತಿಗಳ ಸಂಯೋಜನೆಗಳಷ್ಟೇ. ಇಂತಹ ಸಂಯೋಜನೆಗಳಿಂದಾದುದೇ ಲೋಕ. ಈ ಸಂಯೋಜನೆಗಳು ಪರಾವಲಂಬಿಗಳು. ಹೀಗೆ ಅವಲಂಬನೆಯಿಂದುಂಟಾದ ಸಂಯೋಜನೆಗಳಿಗಾಗಲೀ, ಈ ಸಂಯೋಜನೆಗಳ ಘಟಕಳಾದ ಕಾರಣ ಪರಿಸ್ಥಿತಿಗಳಿಂದಾಲೀ ಸ್ವತಂತ್ರ ಅಸ್ತಿತ್ವವಿಲ್ಲ. ಎಲ್ಲವೂ ಮತ್ತೊಂದನ್ನು ಅವಲಂಬಿಸಿದಾಗ ಮಾತ್ರ ಉಂಟಾಗಲು ಸಾಧ್ಯ ಎಂಬ ತತ್ವವು ಅನೇಕ ಗಂಭೀರ ಪರಿಣಾಮ ಸಾಧ್ಯತೆಗಳನ್ನು ಹೊಂದಿದೆ. ಮೊದಲನೆಯದಾಗಿ ಸಂಶೋಧನಾ ವಿಧಾನಗಳು ಮಹತ್ವದ ಬದಲಾವಣೆಗೆ ಒಳಪಡುತ್ತವೆ. ಈಗಾಗಲೇ ‘ಇದೆ’ ಎಂದು ನಡೆಸುವ ಸಂಶೋಧನೆಗಳಿಗೆ ತಡೆಬಿದ್ದು, ಅಂತಹ ಸಂಯೋಜನೆಗಳ ‘ಸಂಕಥನ’ (disconrse) ಮಾತ್ರ ಸಾಧ್ಯವೆಂಬ ಮಹತ್ತರ ಬದಲಾವಣೆಯೊಂದು ಅನಿವಾರ್ಯವಾಗುತ್ತದೆ. ‘ಸತ್ಯ ಹುಡುಕಬೇಕಾದ್ದಲ್ಲ ಕಟ್ಟಬೇಕಾದ್ದ’ ಎಂಬ ನಿಲುವು ಮುಂಚೂಣಿಗೆ ಬರುತ್ತದೆ. ಸಂಯೋಜನೆಗೊಂಡು ‘ಇದೆ’ ಎಂಬ ಭ್ರಮಾಸತ್ಯದ ಬದಲಿಗೆ ಅದರ ಸಂಯೋಜನಾ ಘಟಕಗಳಾದ ಕಾರಣ ಪ್ರತ್ಯಯಗಳು ಸಂಶೋಧನಾ ಸಂಗತಿಗಳಾಗುತವೆ ಲೋಕಾನುಸಂಧಾನದ ಮರುವ್ಯಾಖ್ಯಾನವನ್ನು ಅದು ಪ್ರಚೋದಿಸುತ್ತದೆ. ಸತ್ಯ ಕಟ್ಟಬೇಕಾದದ್ದು ಎಂದಾಕ್ಷಣ ಅದು ಪ್ರಕ್ರಿಯಾ ಮೀಮಾಂಸೆಗೆ ತೊಡಗುವುದರಿಂದ ಕಾರಣ ಮತ್ತು ಪರಿಣಾಮ ಮೀಮಾಂಸೆಗಳು ನಿರಾಕರಣೆಗೊಳ್ಳುತ್ತವೆ.

ಪ್ರತೀತ್ಯ ಸಮುತ್ಪಾದದ ಮೂಲಕ ವಿವರಿಸಲ್ಪಡುವ ಲೋಕ ಸಂಬಂಧದ ನಿರ್ವಚನವು ಕೇವಲ ಧಾರ್ಮಿಕತೆಯಲ್ಲವಾದುದರಿಂದ ಅದಕ್ಕಿರುವ ಪ್ರಾಮುಖ್ಯತೆ ಮೇಲ್ನೋಟಕ್ಕೇ ಅರಿವಾಗುತ್ತದೆ. ಈ ಸಂಬಂಧದ ತಿಳಿವಳಿಕೆಯು ಲೋಕಜೀವಿಗಳನ್ನು ದುಃಖದಿಂದ ಬಿಡುಗಡೆಗೊಳಿಸಲು ಇರುವ ಮಾರ್ಗವೆಂದು ತಿಳಿದ ಬುದ್ಧ ನಾಗಾರ್ಜುನ ಮತ್ತು ಅಲ್ಲಮರು ಅದು ಲೋಕಕ್ಕೆಲ್ಲ ತಿಳಿಯಲಿ ಎಂಬ ಕಾರಣಕ್ಕೆ ‘ಮಹಾಯಾನಿ’ಗಳಾದರು. ತ್ರಿಲಕ್ಷಣಗಳ ವಿವರಣೆಯೇ ಶೂನ್ಯತೆ. ಇದನ್ನು ವಿವರಿಸುವ ನಾಗಾರ್ಜುನನ ಮೂಲ ಮಧ್ಯಮಕಕಾರಿಕಾ ಕೃತಿಯ ಪ್ರವೇಶಕ್ಕೆ ಮುನ್ನ ಯಾವ ಅರ್ಹತೆಗಳನ್ನು ಬೇಡುವುದಿಲ್ಲವಾದರೂ, ಈಗಾಗಲೇ ನಮ್ಮ ಬಳಿ ಕಿಕ್ಕಿರಿದಿರುವ ದೃಷ್ಟಿವಾದಗಳನ್ನು ದೂರೀಕರಿಸಲು ಪ್ರಯತ್ನ ಮಾಡಬೇಕಾಗುತ್ತದೆ. ಈ ನೆಲೆಯಲ್ಲಿ ಕೆಲವು ಸಂಗತಿಗಳನ್ನು ನೆನಪಿನಲ್ಲಿಡುವುದು ಯುಕ್ತ.

.ಶೂನ್ಯತೆಯ ಎಲ್ಲ ದೃಷ್ಟಿಗಳಿಂದ (ಬುದ್ಧನ ಕಾಲಕ್ಕೆ ಅರವತ್ತೆರಡು ದೃಷ್ಟಿವಾದಗಳಿದ್ದವು) ಬಿಡುಗಡೆಯಾಗಿದೆ. ಹೀಗೆ ಉಕ್ತಗೊಳಿಸಿದ ಶೂನ್ಯತೆಯು ತಾನೇ ಒಂದು ದೃಷ್ಟಿಯಾಗಿ ‘ರಚನೆಗೊಳ್ಳುವುದಿಲ್ಲ’ ಇದು ನಿವಾರಣೆಯೇ ಹೊರತು ಉಂಟಾಗಿಸುವುದಲ್ಲ.

.ದೃಷ್ಟಿಗಳು ಸ್ಥಿತ ಪರಿಕಲ್ಪನೆಗಳು. ಇವು ಭಾಷೆಯಲ್ಲಿ ಸಂಭವಿಸುತ್ತವೆ. ನಿತ್ಯ ಚಲನಶೀಲವಾದ ವಸ್ತು ಪ್ರಪಂಚಕ್ಕೂ, ಅದನ್ನು ಗ್ರಹಿಸುವ ಮನೋಭೂಮಿಕೆಗೂ ಮತ್ತು ಈ ಪರಿಕಲ್ಪನೆಗಳಿಗೂ ಅಂತಸ್ಸಂಬಂಧವೇನೂ ಇಲ್ಲ. ಎಲ್ಲ ದೃಷ್ಟಿಗಳೂ ಸ್ಥಗಿತಗೊಂಡವುಗಳು ಆಗಿರಲೇಬೇಕಿರುವುದರಿಂದ ಅವು ಸತ್ಯವನ್ನು ಕಟ್ಟಿಕೊಡಲಾರವು. ಈಗಾಗಲೇ ಸ್ಥಿತವಾಗಿ ಇರುವ ಸತ್ಯವನ್ನು ನುಡಿವ ಉದ್ದೇಶದ ದೃಷ್ಟಿಗಳಿಗೆ ಸತ್ಯ ಸ್ಥಿತವಲ್ಲವೆಂಬುದು ಮಾನ್ಯವಾಗದು. ತೊಡೆಯಲಾಗದ್ದನ್ನು ಬರೆಯಲಾಗದು ಎಂಬ ಮಾತು ಅವಕ್ಕೆ ಪಥ್ಯವಾಗದು.

.ಶೂನ್ಯತೆಯ ತಾನೊಂದು ದೃಷ್ಟಿಯಾಗದೆ ತನ್ನ ಶೂನ್ಯಸ್ಥಿತಿಯನ್ನೂ ಕಾಪಾಡಿಕೊಳ್ಳುತ್ತದೆ ಮತ್ತು ವಸ್ತು ಪ್ರಪಂಚದ ಶೂನ್ಯ ಸ್ಥಿತಿಯನ್ನು ವಿವರಿಸುತ್ತದೆ.

.ಇಲ್ಲಿ ಕೆಲವು ತೊಡಕುಗಳಿವೆ. ರಚನೆಗಳನ್ನು ಮಾತ್ರ ನುಡಿಯಲು ಸಿದ್ಧಗೊಂಡಿರುವ ಭಾಷೆಗೆ ‘ರಚನೆಯಲ್ಲದ್ದನ್ನು’ ನುಡಿಯಲು ಸದ್ಯದ ಅದರ ಸ್ಥಿತಿಯಲ್ಲಿ ಸಾಧ್ಯವಾಗುತ್ತಿಲ್ಲ. ಅದಕ್ಕಾಗಿ ಭಾಷೆಯ ಜಾಡು ತಪ್ಪಿಸಬೇಕು! ಸಂಧಾ ಭಾಷೆ, ಬೆಡಗಿನ ಭಾಷೆ, ಉಲಟ್‌ ಭಾಷೆ ಮುಂತಾದವು ಅಂತಹ ಪ್ರಯತ್ನಗಳೇ. ಅಲ್ಲಮನ ಬೆಡಗಿನ ವಚನದ ಮೂಲ ನಾಗಾರ್ಜುನ ಶೂನ್ಯತೆಯ ವಿವರಣೆಯಲ್ಲಿದೆ. ಎರಡನೆಯದಾಗಿ ವಸ್ತುಪ್ರಂಪಚನ್ನು ರಚನೆಯನ್ನಾಗಿ ಗ್ರಹಿಸಲು ಮಾನವಮತಿ ಮೊಂಡು ಹಿಡಿಯುತ್ತದೆ. ಜಾಡಿಗೆ ಬಿದ್ದಿರುವ ಅದನ್ನು ಜಾಡು ತಪ್ಪಿಸಬೆಕು. ಮೂರನೆಯದಾಗಿ ರಚನೆಯಲ್ಲದ ಶೂನ್ಯತೆಯನ್ನು ಅದರ ನಿರಂತರ ಚಲನೆಯನ್ನು ಹಾಗೇ ಅರಿಯಬೇಕು.

ಶೂನ್ಯತೆಯೆಂಬುದು ಸರ್ವದೃಷ್ಟಿಗಳಿಂದ ಮುಕ್ತವಾದುದು
ಇದು ಜೀವನ ಮಾತು
ಶೂನ್ಯತೆಯೆಂಬ ದೃಷ್ಟಿಗೇ ಅಂಟಿಕೊಂಡವರು
ತಿದ್ದಲಾಗದ ಮೊಂಡರು
(
ಕಾರಿಕೆ ೮ ಅಧ್ಯಾಯ ೧೩)

ನಡೆದರೆ ಎಡೆಗೆಟ್ಟ ನುಡೆಯ ನಡೆವುದಯ್ಯ
ನುಡಿದರೆ ಪಡಿಗೆಟ್ಟ ನುಡಿಯ ನುಡಿವುದಯ್ಯ
ಮಾಡಿದರೆ ಮರಹುಗೆಟ್ಟ ಮಾಟವ ಮಾಡುವುದಯ್ಯಾ
ಕೂಡಿದರೆ ಕುರುಹುಗೆಟ್ಟ ಕೂಟವ ಕೂಡುವುದಯ್ಯ
ಗುಹೇಶ್ವರ, ನಿಮ್ಮ ಶರಣನ ನಿಜಪಥವಿದಯ್ಯ
ಅಲ್ಲಮಪ್ರಭು