ನಾಗಾರ್ಜುನಪ್ರಾಚೀನ ಭಾರತದ ಅಸಾಧಾರಣ ಮೇಧಾವಿ, ಬುದ್ಧನ ಶಿಷ್ಯ. ರಸಾಯನ ಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ವೈದ್ಯಶಾಸ್ತ್ರ, ದರ್ಶನ, ಕಲೆ, ಸಾಹಿತ್ಯ ಎಲ್ಲದರಲ್ಲಿ ನಿಸ್ಸೀಮನಾದ ಪ್ರತಿಭಾ ವಂತ.

ನಾಗಾರ್ಜುನ

‘ದ್ವೇಸತ್ಯೇ ಸಮುಪಾಶ್ರಿತ್ಯ ಬುದ್ಧಾನಾಂ ಧರ್ಮ ದೇಶಾನಾ ಲೋಕಸಂವೃತಿ ಸತ್ಯಂಚ ಸತ್ಯಂಚ ಪರಮಾರ್ಥತಃ
ಯೇನಯೋರ್ನ ವಿಜಾನಂತಿ ವಿಭಾಗಂ ಸತ್ಯಯೋರ್ದ್ವಯೋಃ| ತೇ ತತ್ವಂ ನ ವಿಜಾನಂತಿ ಗಂಭೀರಂ ಬುದ್ಧ ಶಾಸನೇ||’

ಪರಮಾತ್ಮ ರೂಪ, ನಾಮ, ಗುಣಗಳಿಗೆ ಅತೀತನಾದವನು. ಅದಕ್ಕೆಂದೇ ಆಕಾರವಿಲ್ಲದವನು, ಆದಿಅಂತ್ಯರಹಿತನು ಎಂದೂ ಎಂದು ವರ್ಣಿಸಲಾಗುತ್ತದೆ. ಆದರೆ ನಾವಿರುವ ಜಗತ್ತಿಗೆ ಅದರಲ್ಲಿಯವಕ್ಕೆ ರೂಪ, ನಾಮ, ಗುಣಗಳು ಇವೆ. ಆದ್ದರಿಂದ ಹುಟ್ಟು-ಸಾವು ಇದೆ. ಇವೆರಡೂ ಪರಸ್ಪರ ವಿರುದ್ಧವಾದವು. ಜಗತ್ತನ್ನು ಅದಕ್ಕೆ ಸಂಬಂಧಿಸಿದ ಸತ್ಯಗಳನ್ನು ‘ಲೋಕ ಸಂವೃತಿ ಸತ್ಯ’  ಎಂದರೆ ಪರಮಾತ್ಮನಿಗೆ ಸಂಬಂಧಿಸಿ ಪ್ರತ್ಯಕ್ಷವಾಗಿ ಕಂಡು ಸತ್ಯವೆಂದು ನಿರೂಪಿಸಲಾರದು ಸತ್ಯವನ್ನು ‘ಪರಮಾರ್ಥ ಸತ್ಯವೆಂದು’ ಹೇಳಲಾಗುತ್ತದೆ.

ಬುದ್ಧನ ಧರ್ಮೋಪದೇಶ ಆಶ್ರಯಿಸಿರುವ ಸತ್ಯದ ಈ ಎರಡು ಮುಖಗಳನ್ನೂ ಅರ್ಥಮಾಡಿಕೊಳ್ಳಬೇಕು. ‘ಲೋಕ ಸಂವೃತಿ ಸತ್ಯ’  ಕಣ್ಣನ್ನು ಇಂದ್ರಿಯಗಳನ್ನು ನಂಬಿಸುವುದರಿಂದ ಮನವನ್ನು ಅಪಹರಿಸುತ್ತದೆ. ‘ಪರಮಾರ್ಥ ಸತ್ಯ’ ಕಾಣದಾದರೂ ಪ್ರಯತ್ನಿಸಿ ಅರಿತು ನಂಬಬೇಕಾದುದು. ಸತ್ಯದ ಈ ಎರಡು ಮುಖಗಳನ್ನೂ ತಿಳಿದವರು ಮಾತ್ರ ಬುದ್ಧನ ಧರ್ಮೋಪದೇಶದ ಅಂತರಾಳವನ್ನು, ಗಾಂಭೀರ್ಯವನ್ನು ಅರಿಯಬಲ್ಲರು.

ಗೌತಮ ಬುದ್ಧನ ತತ್ವಗಳಿಗೆ ಹೊಸ ಅರ್ಥ, ಕಳೆ ನೀಡಿ ಬೌದ್ಧ ಧರ್ಮವನ್ನೂ ಅದರ ದರ್ಶನ ಶಾಸ್ತ್ರದ ವ್ಯಾಪ್ತಿಯನ್ನೂ ವಿಸ್ತಾರಗೊಳಿಸಿದ ನಾಗಾರ್ಜುನನ ‘ಶೂನ್ಯವಾದ ಅಡಿಗಲ್ಲು? ಈ ತತ್ವ.

ಬಹುಮುಖ ಪ್ರತಿಭೆ

ನಾಗಾರ್ಜುನ ಜಗದ್ವಿಖ್ಯಾತಿ ಯತಿ. ‘ಭಾರತದ ಪೂರ್ವ ದಿಗಂತದಲ್ಲಿ ಅಶ್ವಘೋಷ, ದಕ್ಷಿಣ ದಿಗಂತದಲ್ಲಿ ಆರ್ಯದೇವ, ಪಶ್ಚಿಮ ದಿಗಂತದಲ್ಲಿ ನಾಗಾರ್ಜುನ, ಉತ್ತರ ದಿಗಂತದಲ್ಲಿ ಕುಮಾರಜೀವ ಈ ನಾಲ್ವರು ಸೂರ್ಯ ಸಮರಾಗಿ ಬೌದ್ಧ ಧರ್ಮವನ್ನು ಬೆಳಗಿದರು’ ಎಂದು ಹ್ಯುಯೆನ್-ತ್ಸಾಂಗ್ ತನ್ನ ಯಾತ್ರಾ ಸ್ಮರಣೆಯಲ್ಲಿ ಬರೆದಿದ್ದಾನೆ. (ಹ್ಯುಯೆನ್-ತ್ಸಾಂಗ್ ಕ್ರಿಸ್ತಶಕ ಏಳನೆ ಶತಮಾನದಲ್ಲಿ ಭಾರತಕ್ಕೆ ಬಂದ ಚೀನೀ ಯಾತ್ರಿಕ.)

ಸಂಸ್ಕೃತ ಸಾಹಿತ್ಯದಲ್ಲಿ ಅಶ್ವಘೋಷನ ನಂತರ ಸಾಹಿತ್ಯಸೇವೆ ನಡೆಸಿದವರಲ್ಲಿ ನಾಗಾರ್ಜುನ ಪ್ರಮುಖ. (ಅಶ್ವಘೋಷ ಕ್ರಿಸ್ತಶಕ ಒಂದನೆಯ ಶತಮಾನದಲ್ಲಿದ್ದ ಕವಿ.) ಈ ಬಹುಮುಖೀ ಪ್ರತಿಭಾವಂತ ಗಳಿಸಿರುವ ಖ್ಯಾತಿಯೂ ಅಪೂರ್ವ.ರಸಾಯನ ಶಾಸ್ತ್ರಜ್ಞ, ತಂತ್ರಶಾಸ್ತ್ರಜ್ಞ, ಲೋಹಶಾಸ್ತ್ರ ಪ್ರವೀಣ, ತತ್ವಶಾಸ್ತ್ರ ಪಂಡಿತ. ತರ್ಕಶಾಸ್ತ್ರ ಚಾಣಾಕ್ಷ. ಬೌದ್ಧಮತದ ಪ್ರಧಾನ ಗುರು. ಬುದ್ಧನ ನಂತರ ಬುದ್ಧನಿಗೆ ಸರಿಸಮ ಪರಿಪೂರ್ಣ ಜ್ಞಾನಿ ಎನಿಸಿಕೊಂಡ ಚೇತನ. ನಿರುಪಮ ಪ್ರತಿಭಾವಂತ. ಒಮ್ಮೆ ಕೇಳಿದ್ದನ್ನು ಒಡನೆಯೇ ಕಂಠಸ್ಥ ಸೂತ್ರದಂತೆ ಹೇಳುವ ಅಪೂರ್ವ ಶಕ್ತಿ ಪಡೆದಿದ್ದ ಏಕಸಂಧಿಗ್ರಾಹಿ. ಶೂನ್ಯವಾದದ ಪ್ರಧಾನ ಪ್ರವರ್ತಕ. ಸಿದ್ಧ. ಕಾಯಕಲ್ಪವನ್ನು ವಿಷವೈದ್ಯವನ್ನೂ ನಾಗರಾಜನಿಂದಲೇ ಅರಿತು ಬಂದವ. ಭಾರತೀಯ ರಸಾಯನ ಶಾಸ್ತ್ರಕ್ಕೆ ಈತ ಜನಕ. ಕಲ್ಲನ್ನು ಚಿನ್ನವನ್ನಾಗಿ ಪರಿವರ್ತಿಸುವ ವಿದ್ಯೆ ಈತನಿಗೆ ಸಿದ್ಧಿಸಿತ್ತು ಎಂದು ಹ್ಯುಯೆನ್-ತ್ಸಾಂಗ್ ಹೇಳಿದ್ದಾನೆ.

-ಈ ವರ್ಣನೆ ಮತ್ತಷ್ಟು ಬೆಳೆಸಿದರೂ ನಾಗಾರ್ಜುನನ ವ್ಯಕ್ತಿತ್ವದ, ಅವನ ಪ್ರತಿಭೆಯ ಸಮಷ್ಟಿ ಚಿತ್ರಣ ಕೊಡುವುದು ಕಷ್ಟ.

ಎಲ್ಲಿದ್ದ?

ನಾಗಾರ್ಜುನ ಭಾರತದ ಯಾವ ಭಾಗದಲ್ಲಿ ಹುಟ್ಟಿದ  ಎಂಬುದು ಸಮಸ್ಯೆ. ಲಾಮಾ ತಾರಾನಾಥ ಎಂಬುವನು ಟಿಬೆಟ್ಟಿನ ಬೌದ್ಧ ಧರ್ಮದ ಚರಿತ್ರೆ ರಚಿಸಿದ್ದಾನೆ. ಲಾಮಾ ತಾರಾನಾಥನ ಬರಹದಿಂದ ನಾಗಾರ್ಜುನ ಇದ್ದದ್ದು ‘ಪರ್ವತ’ ಅಥವ ‘ಶ್ರೀಪರ್ವತ’  ಎಂದು ತಿಳಿಯುತ್ತದೆ. ಫಾಹಿಯಾನ್ ಶ್ರೀಪರ್ವತವನ್ನು ವರ್ಣಿಸಿದ್ದಾನೆ. ಹ್ಯುಯೆನ್-ತ್ಸಾಂಗ್ ನಾಗಾರ್ಜುನನ ಗ್ರಂಥಾಲಯ, ಆಶ್ರಮವನ್ನು ಕಣ್ಣಾರೆ ಕಂಡು ಬರೆದಿದ್ದಾನೆ. ಇವುಗಳ ಆಧಾರದಿಂದ ನಾವು ನಾಗಾರ್ಜುನನ ಸ್ಥಳದ ವಿಷಯ ಊಹೆ ಮಾಡಬಹುದು. ಆಂಧ್ರ ಪ್ರದೇಶದ ಗುಂಟೂರು ಜಿಲ್ಲೆಯಲ್ಲಿರುವ ನಾಗಾರ್ಜುನ ಕೊಂಡಕ್ಕೆ ಮೊದಲು ಶ್ರೀಪರ್ವತ ಎಂಬ ಹೆಸರಿತ್ತು. ಕೆಲವರು ಶ್ರೀ ಶೈಲವೇ ಶ್ರೀಪರ್ವತ ಎಂದು ತಪ್ಪಾಗಿ ಭಾವಿಸಿರುವುದೂ ಉಂಟು. ಶ್ರೀಶೈಲದಲ್ಲಿ ಕಾಣಲಾರದ ಗುಹಾರಾಮಗಳು ನಾಗಾರ್ಜುನ ಕೊಂಡದಲ್ಲಿವೆ. ನಾಗಾರ್ಜುನ ಇಲ್ಲಿಯೇ ವಾಸವಾಗಿದ್ದ ಎಂಬುದು ರೂಢಿಯಲ್ಲಿದೆ. ಇದೇ ಸತ್ಯ ಎಂದು ನಂಬಲು ಅಡ್ಡಿ ಇಲ್ಲ.

ನಿಖರವಾಗಿ ಹೇಳಬಹುದಾದುದು ಇಷ್ಟು: ಈತ ದಕ್ಷಿಣ ಭಾರತದವ. ಹುಟ್ಟು ತೆಲುಗ ಆಗಿರಲಾರ. ಕೊನೆಗೆ ಶ್ರೀಪರ್ವತದಲ್ಲಿ ಬಹುಕಾಲ ವಾಸಿಸಿದ. ಅಲ್ಲಿಯೇ ನಿರ್ವಾಣವನ್ನು ಪಡೆದ. ಅದಕ್ಕೆಂದೇ ಆ ಪರ್ವತಕ್ಕೆ ನಾಗಾರ್ಜುನಕೊಂಡ ಎಂಬ ಹೆಸರೂ ಬಂತು.

ಈಗ ನಾಗಾರ್ಜುನ ಕೊಂಡದ ಬಳಿ ವಿಶಾಲವಾದ ಅಣೆಕಟ್ಟಿದೆ. ಅದಕ್ಕೆ ನಾಗಾರ್ಜುನ ಸಾಗರ ಎಂದು ಹೆಸರು ಕೊಟ್ಟಿದೆ. ನಾಗಾರ್ಜುನ ಕೊಂಡದ ಬಹುಭಾಗ ನಾಗಾರ್ಜುನಸಾಗರದಲ್ಲಿ ಮುಳುಗಿದೆ.

ನಾಗಾರ್ಜುನನ ಶಿಷ್ಯರಲ್ಲಿ ಪ್ರಸಿದ್ಧನಾದ ಆರ್ಯದೇವ ಇದ್ದದ್ದು ಎರಡು ಅಥವಾ ಮೂರನೆಯ ಶತಮಾನ. ನಾಗಾರ್ಜುನನ ಕಾಲದ ಬಗ್ಗೆ ಅನೇಕ ರೀತಿಯ ವಾದಗಳಿವೆ. ಆದರೆ ಬಹುಜನ ಸಮ್ಮತವಾದ ಕಾಲವೆಂದರೆ ಎರಡನೆಯ ಶತಮಾನ. ಕ್ರಿಸ್ತಶಕ ೧೩೪ರಿಂದ ೧೬೪ರ ತನಕ ನಾಗಾರ್ಜುನ ಜೀವಿಸಿದ್ದ ಎಂದು ನಂಬಬಹುದು.

ಅಲ್ಪಾಯುಷಿ ಬಾಲಕ

ನಾಗಾರ್ಜುನನ ಹುಟ್ಟನ್ನು ವಿವರಿಸಲು ನಾಗಾರ್ಜುನ ಕೊಂಡ ಪ್ರಾಂತದಲ್ಲಿ ಪ್ರಚಲಿತವಾಗಿರುವ ದಂತ ಕಥೆ ಇದು:

ಪೆಂದೋಟ ಪ್ರಾಂತದ ಶಿಲ್ಪಿ ಕುಟುಂಬವೊಂದರಲ್ಲಿ ಅನೇಕ ಹರಕೆ, ಬೇಡಿಕೆ, ವ್ರತಗಳ ಫಲವಾಗಿ ಒಂದು ಮಗು ಹುಟ್ಟಿತು. ಆ ಕೂಸನ್ನು ಕಂಡು ತುಂಬಾ ಹರ್ಷಿತರಾದ ತಂದೆತಾಯಿಗಳಿಗೆ ಸಿಡಿಲಿನಂತಹ ಸುದ್ದಿ ಕಾದಿತ್ತು-ಮಗು ಅಲ್ಪಾಯುಷಿ; ಏಳನೆಯ ವಯಸ್ಸಿಗೇ ಸಾಯುತ್ತದೆ. ಶಿಲ್ಪಿಯಾದವನಿಗೆ ತಂತ್ರ-ಮಂತ್ರ ಸಂಹಿತೆಯೂ ಆವಶ್ಯಕ. ತಂದೆಯು ತನ್ನ ಶಾಸ್ತ್ರಜ್ಞಾನದಿಂದ ಮಗನ ಗಂಡವನ್ನು ತೊಲಗಿಸಲು ಎಲ್ಲಾ ಪ್ರಯತ್ನಗಳನ್ನೂ ನಡೆಸಿದ. ಮೊದಲ ಏಳನೆಯ ವರ್ಷದ ಗಂಡವನ್ನು ತುಂಬಾ ಸಾಹಸದಿಂದ ದೂರೀಕರಿಸಿದ. ಎರಡನೆಯ ಬಾರಿ ಮತ್ತೆ ಏಳು ವರ್ಷಕ್ಕೆ ಬರಲಿರುವ ಗಂಡವನ್ನು ತೊಲಗಿಸಲು ಸಾಧ್ಯವಾಗಲಿಲ್ಲ. ಪುನರ್ಜನ್ಮ ಅನಿವಾರ್ಯವಾಗಿತ್ತು. ಮತಾಂತರವೆಂದರೆ ಪುನರ್ಜನ್ಮವೇ. ಅದಕ್ಕೆಂದೇ ಬೌದ್ಧ ಭಿಕ್ಷುವಿಗೆ ನಾಗಾರ್ಜುನನನ್ನು ದಾನವನ್ನಾಗಿ ನೀಡಿದರು.

ಇನ್ನು ಕೆಲವು ಬರಹಗಳಲ್ಲಿ ಈ ಕಥೆ ಸ್ವಲ್ಪ ಬದಲಾಗುತ್ತದೆ. ಮಗು ಅಲ್ಪಾಯುಷಿ ಎಂದು ತಿಳಿದು ತಂದೆ, ತಾಯಿ ತಮ್ಮ ಕಣ್ಣೆದುರಿಗೇ ತಮ್ಮ ಕೂಸಿನ ಸಾವು ಕಾಣಲಾರದೆ ಊರಿನ ಹೊರಗೆ ಕಣಗಲೆ ಗಿಡದ ಅಡಿಯಲ್ಲಿ ಮಗುವನ್ನು ಬಿಟ್ಟುಬಂದರು. ಅದನ್ನು ಒಬ್ಬ ಬೌದ್ಧಭಿಕ್ಷು ಕಂಡ. ಅವನೇ ಆ ಮಗುವನ್ನು ಸಲಹಿದ. ಕಣಗಲೆಗೆ ಅರ್ಜುನವೃಕ್ಷವೆಂಬುದು ಪರ್ಯಾಯ ಪದ. ಅದಕ್ಕೆ ಮಗುವಿಗೆ ನಾಗಾರ್ಜುನ ಎಂದು ಹೆಸರಿಟ್ಟ.

ಇನ್ನೊಂದು ಕಥೆಯ ಪ್ರಕಾರ ರೋಗಗ್ರಸ್ತ ಮಗುವನ್ನು ಬೌದ್ಧ ಭಿಕ್ಷು ದಾನವಾಗಿ ಪಡೆದ. ಆ ಭಿಕ್ಷು ಅರ್ಜುನ ವೃಕ್ಷದ ಗಾಳಿಯಿಂದ ಮಗುವಿನ ಖಾಯಿಲೆ ಗುಣವಾಗುವುದೆಂಬ ರಹಸ್ಯ ಅರಿತಿದ್ದ. ಮಗುವಿನ ತೇಜಸ್ಸು, ಭವಿಷ್ಯವನ್ನು ಗುರುತಿಸಿದ್ದ. ಅದಕ್ಕೆ ಆ ಮಗುವನ್ನು ಅಕ್ಕರೆಯಿಂದ ಪಾಲಿಸಿದ.

ಟಿಬೆಟ್ಟಿನ ದಂತ ಕಥೆಯೊಂದರಂತೆ ಹನ್ನೆರಡು ವರ್ಷಗಳ ಬಾಲಕನನ್ನು ಅವನ ತಂದೆ-ತಾಯಿಗಳು ಅವನ ಮರಣವನ್ನು ನೋಡಲಾರದೆ ಕಾಡಿನಲ್ಲಿ ಬಿಟ್ಟು ಬಂದರು. ಹುಡುಗ ದಿಕ್ಕುಗಾಣದೆ ಅಳುತ್ತಾ ಅಲೆಯುತ್ತಿದ್ದ. ಆಗ ಮಹಾಬೋಧಿಸತ್ವ ಅವಲೋಕಿತೇಶ್ವರ ಬಾಲಕನಿಗೆ ಕಾಣಿಸಿಕೊಂಡು ‘ಸಾವಿನಿಂದ ಉಳಿಯಬೇಕಾದರೆ ನಾಳಂದ ವಿಹಾರಕ್ಕೆ ಹೋಗು’ ಎಂದು ಹೇಳಿ ಆಶೀರ್ವದಿಸಿದ. ಅಲ್ಲಿ ಸರಾಹಭದ್ರ ಬಾಲಕನನ್ನು ಆದರಿಸಿದ.

ನೇಪಾಳದಲ್ಲಿ ಬಳಕೆಯಲ್ಲಿರುವ ‘ಆಮ್ನಾಯ’ ವೊಂದರ ಪ್ರಕಾರ ನಾಗಾರ್ಜುನನ ತಂದೆಯಹೆಸರು ತ್ರಿವಿಕ್ರಮ. ತಾಯಿಯ ಹೆಸರು ಸಾವಿತ್ರಿ.

ಈ ಎಲ್ಲಾ ಕಥೆಗಳೂ ಮುಖ್ಯವಾಗಿ ನಿರೂಪಿಸುವುದು ನಾಗಾರ್ಜುನ ಅಲ್ಪಾಯುಷಿ ಎಂಬ ನಂಬಿಕೆಯಿಂದ ತಂದೆ-ತಾಯಿಗಳಿಂದ ದೂರನಾದ ಎಂದು

ಬಾಲ್ಯಯೌವನ

ಬಾಲ್ಯದಲ್ಲಿ ಅವನಿಗೆ ದೊರೆತ ವಿದ್ಯೆ ವೇದ ಮತದ್ದು. ಹುಟ್ಟಿನಿಂದ ನಾಗಾರ್ಜುನ ಬೌದ್ಧನಲ್ಲ. ಯೌವನದಲ್ಲಿ ಅಡಿ ಇರಿಸುವ ವೇಳೆಗೇ ನಾಲ್ಕು ವೇದಗಳನ್ನು, ಅವುಗಳ ಅಂತರಂಗವನ್ನು, ಉಪನಿಷತ್ತುಗಳ ಸಾರವನ್ನು ಗ್ರಹಿಸಿ ವೇದಾಂತ ಶಾಸ್ತ್ರವನ್ನು ಕರತಲಾಮಲಕ ಮಾಡಿಕೊಂಡಿದ್ದ. ಸೂಕ್ಷ್ಮಗ್ರಾಹಿ. ಒಬ್ಬ ಪಂಡಿತ ಲಕ್ಷಗಾಥೆಗಳಿರುವ ಗ್ರಂಥವೊಂದನ್ನು ಬರೆದಿದ್ದನಂತೆ. ಅದನ್ನು ಒಬ್ಬ ವ್ಯಕ್ತಿಯ ಆಯುಸ್ಸೆಲ್ಲಾ ವಿನಿಯೋಗಿಸಿದರೂ ಓದಿ ಅರ್ಥಹೇಳಲು ಸಾಧ್ಯವಿಲ್ಲ ಎಂಬುದು ಆತನ ಹೆಮ್ಮೆಯ ನುಡಿ. ನಾಗಾರ್ಜುನ ಅಂತಹುದನ್ನು ಒಂದು ಬಾರಿ ಓದಿಸಿ ಕೇಳಿ ಮರುಕ್ಷಣದಿಂದಲೇ ಆ ಗ್ರಂಥವನ್ನೆಲ್ಲ ಮತ್ತೆ ಕಣ್ಣಮುಚ್ಚಿಕೊಂಡೇ ಹೇಳಿ ಮುಗಿಸಿದನಂತೆ.

ಬಾಲ್ಯದಲ್ಲಿಯೇ ತಂತ್ರ ಶಾಸ್ತ್ರಜ್ಞನಾಗಿ ಸಿದ್ಧನೆಂಬ ಖ್ಯಾತಿ ಗಳಿಸಿದ್ದ. ಯೌವನದಲ್ಲಿ ನಾನಾ ರೀತಿಯ ಕುಚೇಷ್ಟೆಗಳನ್ನು ನಡೆಸಿ ಪರಪೀಡಕ ಎನಿಸಿಕೊಂಡಿದ್ದ. ಜೀವನದ ಗುರಿ, ಇತಿ ಮಿತಿಗಳ ಕಲ್ಪನೆ ಅವನಿಗೆ ಸ್ಪಷ್ಟವಾಗಲಿಲ್ಲ. ಬಾಳಿನಲ್ಲಿ ರಂಜಕತೆ ಅವನಿಗೆ ಬೇಕೆನಿಸಿತು. ಅದಕ್ಕೆ ಸೆಣಸಾಡಿ ತಾನೂ ಸಾಹಸಪ್ರಿಯ ಬದುಕು ಬದುಕಬೇಕೆಂದುಕೊಂಡ. ಅನ್ಯರು ಮಾಡಲಾರದ, ಕೇಳಿದರೆ ಕೌತುಕದಿಂದ ತುಟಿಕಚ್ಚುವಂತಹ ಸಾಹಸ ನಡೆಸಬೇಕೆಂದು ನಿಶ್ಚಯಿಸಿದ.

ಸತ್ಯಾನ್ವೇಷಣೆ

ನಾಗಾರ್ಜುನ ‘ಕಪಿಮಲ’  ಎಂಬ ಬೌದ್ಧ ಭಿಕ್ಷುವಿಂದ ದೀಕ್ಷೆ ಪಡೆದ. ಚೀನೀ ಭಾಷೆಯ ಹಲವಾರು ಕೃತಿಗಳ ಅವಲೋಕನದ ನಂತರ ನಾಗಾರ್ಜುನನ ಧಾರ್ಮಿಕ ಜೀವನದ ವಿವರಗಳನ್ನು ಇಂತು ಸಂಗ್ರಹಿಸಬಹುದು.

ನಾಗಾರ್ಜುನ ಸತ್ಯವನ್ನು ತಿಳಿದುಕೊಳ್ಳಬೇಕು ಎಂದು ಹಂಬಲಿಸಿದ. ವೇದಗಳ ತಿಳಿವು, ಹಿಂದೂ ಧರ್ಮದ ತತ್ವಗಳು ಅವನ ಸತ್ಯಾನ್ವೇಷಕ ಬುದ್ಧಿಗೆ ಸೂಕ್ತ ಉತ್ತರಗಳನ್ನು, ಸಮಸ್ಯೆಗಳಿಗೆ ಪರಿಹಾರಗಳನ್ನು ಕೊಡಲು ಆಶಕ್ತವೆಂದು ತೋರಿತು. ಅದಕ್ಕೆಂದು ಬೌದ್ಧ ‘ಪಿಠಕ’ ಗಳನ್ನು ಅಭ್ಯಸಿಸಿದ. ತೊಂಬತ್ತೇ ದಿನಗಳಲ್ಲಿ ಅವನ್ನೆಲ್ಲಾ ಅರ್ಥ ಮಾಡಿಕೊಂಡ ನಂತೆ. ಆದರೂ ತೃಪ್ತಿ ಅವನದಾಗಲಿಲ್ಲ. ಧ್ಯಾನಾಸಕ್ತನಾಗಿ ಕಾಡಿನಲ್ಲಿ ಏಕಾಂಗಿಯಾಗಿ ತಪಸ್ಸನ್ನು ಆಚರಿಸಿದ.ತಪದಿಂದ ಸೂಕ್ಷ್ಮವೂ, ಅತೀಂದ್ರಿಯಗ್ರಾಹ್ಯವೂ ಆದುದನ್ನು ಅರಿತ; ‘ಜ್ಞಾನಿ’ ಯಾದ. ಆದರೂ ಏನೋ ಕೊರತೆ. ಇನ್ನೂ ಯಾವುದೋ ಬೇಕಾಗಿದೆ ಎಂಬ ಅನಿಸಿಕೆ. ತಾನು ಸಾಧಿಸಬೇಕಾಗಿರುವುದು ಇನ್ನೂ ಇದೆ ಎಂಬ ನಂಬಿಕೆ.

ಇದರಿಂದ ದೂರವಾಗಬೇಕೆಂದೇ ಯಾತ್ರೆ ಕೈಗೊಂಡ. ಹಿಮಾಲಯ ಪರ್ವತಗಳು ಸಿದ್ಧಿ ಅರಸುವವರ ಬೀಡು. ಅಲ್ಲಿ ಮಹಾಯಾನದ ಹಲವು ಗ್ರಂಥಗಳನ್ನು ಪಠಿಸಿ ಅವುಗಳತ್ತ ಆಕರ್ಷಿತನಾದ. ಆದರೆ ಅದರ ಅಂತರಂಗ ಬೇಧನೆ ಅವನಿಗೆ ಸಾಧ್ಯವಾಗಲಿಲ್ಲ. ಬೇರೆ ಗ್ರಂಥಗಳಿಗಾಗಿ ತಡಕಾಡಿದ. ಯಾವುವೂ ದೊರೆಯಲಿಲ್ಲ. ಬೌದ್ಧರೊಂದಿಗೆ ಸತ್ಸಂಗ, ಅನ್ಯರೊಂದಿಗೆ ವಾದ. ಈ ಎರಡು ಸಂದರ್ಭಗಳಲೂ ತನ್ನ ತಿಳಿವೇ ಇತರರಿಗಿಂತಲೂ ತುಂಬಾ ಶ್ರೇಷ್ಠ ಎಂಬ ಭಾವನೆ ಮೂಡುತ್ತಿತ್ತು. ತತ್ಫಲವಾಗಿ ತನ್ನ ತಿಳಿವಿನಲ್ಲಿ ಹೆಮ್ಮೆ. ಆದರೆ ತನ್ನಲ್ಲಿಯೇ ಅಸಂಪೂರ್ಣತೆಯ ಅತೃಪ್ತಿ. ಮಹಾಯಾನದ ಬೋಧನೆಗಳು ಸರಿ ಎನಿಸುವಂತಿದ್ದರೂ ಅವಕ್ಕೆ ತರ್ಕಬದ್ಧ ನಿರೂಪಣೆಯ ಅವಶ್ಯಕತೆ ಇತ್ತು. ತರ್ಕಬದ್ಧವಾಗಿ ಅವನ್ನು ನಿರೂಪಿಸಲು ಆತಂಕಗಳೊದಗುತ್ತಿದ್ದವು. ಯಾವುದನ್ನು ತರ್ಕ ಸಮ್ಮತವಾಗಿ ಸಾಧಿಸಲು ಸಾಧ್ಯವಿಲ್ಲವೋ ಅದು ಪೂರ್ಣ ಸತ್ಯವಾಗಿರಲಾರದು. ಬೌದ್ಧ ಧರ್ಮದ ವಿರೋಧಿಗಳು ಒಡ್ಡುತ್ತಿದ್ದ ಪ್ರಶ್ನೆಗಳು ಸೂಕ್ತವೆನಿಸುತ್ತಿತ್ತು. ಆದ್ದರಿಂದ ಸರ್ವಜ್ಞನಾದ ಬುದ್ಧನ ಬೋಧನೆಯೇ ಅಸಂಪೂರ್ಣ ಎಂದ. ಬುದ್ಧನ ಕಟು ವಿಮರ್ಶಕನಾಗಿ ರೂಪುಗೊಂಡು ‘‘ನನಗೆ ಗುರುವಿಲ್ಲ’’ ಎಂದು ಸಾರಿದ. ತಾನೇ ಹೊಸದಾಗಿ ಸತ್ಯವನ್ನು ಸಾಕ್ಷಾತ್ಕರಿಸಿಕೊಂಡು ತನ್ನ ಹೊಸ ತತ್ವವನ್ನು ಪ್ರಕಟಿಸುವುದಾಗಿ ಘೋಷಿಸಿದ. ತರ್ಕಬದ್ಧವಾಗಿ ಬುದ್ಧಿಗೆ ಎಟುಕಬಲ್ಲ ಧರ್ಮವನ್ನು ರೂಪಿಸುವೆನೆಂದ. ತನ್ನ ಹೊಸ ಧರ್ಮದ ತತ್ವಗಳ ಉಪದೇಶಕ್ಕೆ ಮುಹೂರ್ತವನ್ನೂ ನಿಗದಿ ಮಾಡಿದ.

ವೈಪುಲ್ಯ ಸೂತ್ರ ಸಿಕ್ಕಿತು.

ಇದನ್ನು ಕಂಡ ಮಹಾನಾಗ ಬೋಧಿಸತ್ವನಿಗೆ ನಗೆಬಂತು. ಮಹಾನಾಗ ಬೋಧಿಸತ್ವ ನಾಗಜಾತಿಯವರಲ್ಲಿ ತಿಳಿವು ಕಂಡುಕೊಂಡವನು. ನಾಗಾರ್ಜುನ ಇವನ ಸ್ನೇಹಿತನಾಗಿದ್ದ.  ನಾಗಾರ್ಜುನನ ಈ ವರ್ತನೆಯಿಂದ ಕ್ರುದ್ಧನಾಗಲಿಲ್ಲ – ಕರುಣಾಮಯನಾಗಿ ಕನಿಕರಿಸಿದ. ಇವನಿಂದ ನಾಗಾರ್ಜುನನಿಗೆ ಅಸಾಧಾರಣ ಸಹಾಯವಾಯಿತು ಎಂದು ಹೇಳುತ್ತಾರೆ. ಅಕ್ಕರೆಯಿಂದ ನಾಗಲೋಕಕ್ಕೆ ಕರೆದೊಯ್ದು ಅಲ್ಲಿಯ ಅರಮನೆಯಲ್ಲಿದ್ದ ಏಳು ಪೆಟ್ಟಿಗೆಗಳನ್ನು ತೋರಿದ. ಅವುಗಳಲ್ಲಿ ಬುದ್ಧನ ಬೋಧನೆಗಳ ಮಹಾರಹಸ್ಯ ಅಡಗಿತ್ತು. ಜ್ಞಾನೋದಯವಾದ ಹದಿನಾರು ವರ್ಷಗಳ ನಂತರ ಗೃಧ್ರ ಶಿಖರದ ಮೇಲೆ ಬುದ್ಧ ಬೋಧಿಸಿದ ಸೂತ್ರಗಳನ್ನು ಮಹಾಕಶ್ಯಪ ಭದ್ರಪಡಿಸಿ ನಾಗರಾಜನ ವಶಕ್ಕೆ ಕೊಟ್ಟಿದ್ದನಂತೆ- ಮುಂದೆ ಬರಲಿರುವ ಮಹಾಚೇತಸನಿಗೆ ಅರ್ಪಿಸಲೆಂದು.ಆ ರಹಸ್ಯ ಸೂತ್ರಗಳನ್ನೆಲ್ಲಾ ಅಭ್ಯಸಿಸಿದ. ಅವುಗಳಲ್ಲಿ ಮಹಾನಾಗ ‘ವೈಪುಲ್ಯ ಸೂತ್ರ’ ವೊಂದನ್ನು ಮಾತ್ರ ನಾಗಾರ್ಜುನನಿಗೆ ಅರ್ಪಿಸಿದ. ತೊಂಬತ್ತು ದಿನಗಳ ಕಾಲ ಅದನ್ನು ಅಧ್ಯಯನ ಮಾಡಿ ತಿರುಳನ್ನು ಅರಿತು ಸಮಾಧಿ ಸ್ಥಿತಿಯನ್ನು ಪ್ರವೇಶಿಸಿದ. ತಾನೇ ಜ್ಞಾನಿ ಎಂಬ ಅಹಂಕಾರ ಮುರಿಯಿತು. ಜ್ಞಾನದ ಕಣ್ಣು ತೆರೆಯಿತು. ಬುದ್ಧನ ಸರ್ವಜ್ಞತೆ ಅರಿವಾಯಿತು. ಬುದ್ಧನ ಮಾರ್ಗವನ್ನು ಪ್ರವೇಶಿಸಿದ. ಸ್ವಯಂ ಬೋಧಿಸತ್ವನಾದ.

ಪಾತಾಳಲೋಕದಿಂದ ಹಿಂತಿರುಗುವಾಗ ವಾಸುಕಿ ರಮಣೀಯವಾದ ‘ಮಂದಾಕಿನಿ’ ಎಂಬ ಮುತ್ತಿನ ಹಾರವೊಂದನ್ನು ಕೊಟ್ಟನಂತೆ. ಅದರ ಸ್ಪರ್ಶದಿಂದ ಎಲ್ಲಾ ರೀತಿಯ ನೋವುಗಳು ಮಾಯವಾಗಿ ಎಂತಹ ವಿಷವಾದರೂ ಇಳಿಸುವ ಶಕ್ತಿ ಇತ್ತಂತೆ-ಇದರಿಂದಲೇ ವಿಷವೈದ್ಯವೂ ನಾಗಾರ್ಜುನನ ಸಾಧನೆಗಳಲ್ಲಿ ಒಂದು ಎಂದು ಹೇಳಲಾಗುತ್ತದೆ.

ವೈಪುಲ್ಯ ಸೂತ್ರದೊಂದಿಗೆ ನಾಗಾರ್ಜುನ ದಕ್ಷಿಣ ಭಾರತಕ್ಕೆ ಬಂದ. ಈಗ ನಾಗಾರ್ಜುನನ ಮನಸ್ಸಿನಲ್ಲಿ ಕೋಪ, ದುಃಖ ಮೊದಲಾದುವಿರಲಿಲ್ಲ. ಅವನು ಸದಾ ಶಾಂತ. ಯಾರ ವಿಷಯವೂ ಅಸೂಯೆ ಇಲ್ಲ. ತನ್ನವರು ಬೇರೆಯವರು ಎಂಬ ವ್ಯತ್ಯಾಸವಿಲ್ಲ. ಮಿತ್ರರು ಶತ್ರುಗಳು ಎಂಬ ಭಾವನೆ ಇಲ್ಲ. ತಾನು ಕಂಡುಕೊಂಡ ಸತ್ಯವನ್ನು ವಿವರಿಸಲು ಪ್ರಾರಂಭಿಸಿದ. ಬುದ್ಧ ಧರ್ಮದ ವಿರೋಧಿಗಳ ಪಾಲಿಗೆ ಅಜೇಯನಾದ. ಬಗ್ಗು ಬಡಿಯಲು ಅಸಾಧ್ಯವಾದ. ಮಹಾಯಾನ ಪಂಥದ ಖ್ಯಾತಿಯನ್ನೂ, ಜನಪ್ರಿಯತೆಯನ್ನೂ ಬೆಳೆಸಿದ. ಮಾಧ್ಯಮಿಕಾ ದರ್ಶನದ ಆಚಾರ್ಯನಾದ.

ಲಾಮಾ ತಾರಾನಾಥನ ಬರಹದಂತೆ ನಾಗಾರ್ಜುನ ನಾಳಂದಕ್ಕೆ ಬಂದು ಬಾಲ ಸರೋಹ (ರಾಹುಲ ಭದ್ರ)ನ ಶಿಷ್ಯನಾದ. ಮಹಾಯಾನ, ಹೀನಯಾನ ಪಿಟಕಗಳನ್ನು ಪೂರ್ಣವಾಗಿ ಅರಿತ. ತನ್ನ ಕಾಲದ ಶ್ರೇಷ್ಠ ತಾಂತ್ರಿಕ ನೆನಿಸಿದ. ಚಿನ್ನವನ್ನು ತಯಾರಿಸುವ ರಸ ವಿದ್ಯೆಯಲ್ಲಿ ಅಪ್ರತಿಮನಾದ. ಮಹಾಯಾನ ವಿರೋಧಿಗಳೊಂದಿಗೆ ಹೋರಾಟ ನಡೆಸಿದ. ಮಗಧ ರಾಜ್ಯದಲ್ಲಿ ಹನ್ನೆರಡು ವರ್ಷಗಳ ಕಾಲ ಘೋರವಾದ ಕ್ಷಾಮ ತಾಂಡವ ನಡೆಸಲು ಪ್ರಾರಂಭಿಸಿದಾಗ ಸ್ವರ್ಣಯೋಗದಿಂದ ಅದನ್ನು ದೂರೀಕರಿಸಿದ ಎಂದು ಹೇಳುತ್ತಾರೆ. ಮಹಾಯಾನ ಪಂಥಕ್ಕೆ ಸೂರ್ಯಸಮನಾದ.

ಚರಿತ್ರೆಯ ದೃಷ್ಟಿಯಲ್ಲಿ

ಚರಿತ್ರೆಯ ಕಣ್ಣಿನಿಂದ ಇದನ್ನು ಅವಲೋಕಿಸಿದರೂ ನಾಗಾರ್ಜುನನ ಬಾಳಿನಲ್ಲಿ ಇವೆಲ್ಲ ನಡೆದಿರಲು ಸಾಧ್ಯ ಎನಿಸದೆ ಇರದು. ವೇದ ಧರ್ಮದಲ್ಲಿಯೇ ಅತೃಪ್ತಿಗೊಂಡವನಿಗೆ ಸುಲಭವಾಗಿ ಬೌದ್ಧಧರ್ಮ ತೃಪ್ತಿ ನೀಡಿತು ಎಂದರೆ ನಂಬಿಕೆಯ ಮಾತಾಗದು. ಅವನ ಬಾಳಿಗೆ ಗುರಿಯೇ ಕಾಣಿಸಲಿಲ್ಲ. ಆಗ ಯಾರೋ ವೃದ್ಧ ಭಿಕ್ಷು ಅವನಿಗೆ ಮಹಾಯಾನ ಪಂಥದ ತಿಳಿವು ಮುಂದಿರಿಸಿರಬೇಕು. ಆ ವೃದ್ಧ ಭಿಕ್ಷುವೇ ಕಪಿಮಲನಾಗಿದ್ದರೂ ಇರಬಹುದು. ಆದರೆ ಇದೂ ಅವನಿಗೆ ತೃಪ್ತಿ ನೀಡಲಿಲ್ಲ. ಆಗ ಹೊಸ ಮತದ ಯೋಚನೆ ಬಂದಿರಬೇಕು. ಅಂತಹ ಇಕ್ಕಟ್ಟಿನ ಸಮಯದಲ್ಲಿ ವೈಪುಲ್ಯ ಸೂತ್ರ ಅವನ ಕೈಗೆ ಸಿಕ್ಕಿತು. ಅವನು ಅರಸುತ್ತಿದ್ದ ಹೊಸ ಬೆಳಕು ಅವನಿಗೆ ಕಾಣಿಸಿತು. ಅವನ ಸಮಸ್ಯೆಗಳು, ತೊಡಕುಗಳು ನಿವಾರಣೆಯಾಗಿ ಜ್ಞಾನದ ಕಣ್ಣು ತೆರೆಯಿಸಿತು. ಮುಕ್ತನಾದ, ಬುದ್ಧನ ಅಗ್ರಗಣ್ಯ ಭಕ್ತನಾದ. ಅವನ ಧರ್ಮ ಪ್ರಚಾರಕನಾದ. ಅವನ ಕಣ್ತೆರೆಸಿದ ‘ವೈಪುಲ್ಯಸೂತ್ರ’ ವೇ ‘ಪ್ರಜ್ಞಾ ಪರಿಮಿತ ಸೂತ್ರ’ ಇರಬೇಕು. ಬಹುಶಃ ಅದು ಈಗ ತಾನೇ ಬೌದ್ಧರಲ್ಲಿ ಹರಡುತ್ತಿದ್ದಿರಬೇಕು.

ಇದರಲ್ಲಿ ಒಂದೇ ಕಸಿವಿಸಿ ಎಂದರೆ ನಾಗಲೋಕದ ಮಾತು. ಬಹುಶಃ ಇದರಲ್ಲಿ ಅಂತಹ ತೊಡಕಿಲ್ಲ. ಭಾರತೀಯರ ಪಾಲಿಗೆ ಸರ್ಪ ಅತ್ಯಂತ ಪವಿತ್ರವಾದುದು. ಭೂಮಿಯಲ್ಲಿ ಅಡಗಿರುವ ಬೆಲೆಬಾಳುವ ನಿಧಿ-ನಿಕ್ಷೇಪಗಳನ್ನು ಸಂರಕ್ಷಿಸುವ ಶಕ್ತಿಯಾಗಿ ಸಾಮಾನ್ಯವಾಗಿ ಜನಪದ ಕಥೆಗಳಲ್ಲಿ ರೂಪಿಸಲ್ಪಟ್ಟಿರುವುದು ಬಲ್ಲ ಸಂಗತಿ. ಅಂತೆಯೇ ‘ನಾಗ’ ಇಲ್ಲಿ ಸಂಕೇತವಾಗಿರಬಹುದು. ಬುದ್ಧನದೇ ಆದ ಸೂತ್ರವನ್ನು ಹೊರಗಿಡಲು ಅರ್ಹನೂ ಸತ್ವಯುತನೂ ಆದ ಅಧಿಕಾರಿ ದೊರೆಯದೆ ನಾಗರಾಜನ ಬಳಿ ಪಾತಾಳ ಲೋಕದಲ್ಲಿ ಭದ್ರವಾಗಿತ್ತು. ಅರ್ಹನಾದ ನಾಗಾರ್ಜುನ ತಂದು ಜಗತ್ತನ್ನು ಉದ್ಧರಿಸಿದ. ಅದು ಬುದ್ಧನ ವಾಕ್ಯಗಳೇ ಆದ್ದರಿಂದ ಅದು ಪರಿಪೂರ್ಣ ಪ್ರಜ್ಞೆಯ ಫಲ. ಸರ್ವಜ್ಞತೆಯ ಫಲ- ‘ಪ್ರಜ್ಞಾ ಫಲ. ಸರ್ವಜ್ಞತೆಯ ಫಲ-‘ಪ್ರಜ್ಞಾ ಪರಿಮಿತ ಸೂತ್ರ.’ ಬಹುಶಃ ಈ ಕಲ್ಪನೆ ಬೆಳೆಯಲು ನಾಗಾರ್ಜುನ ಎಂಬ ಹೆಸರೂ ಸ್ವಲ್ಪ ಮಟ್ಟಿಗೆ ಕಾರಣವಾಗಿದ್ದರೂ ಇರಬಹುದು.

ಚರಿತ್ರೆಯ ಪ್ರಕಾರ ‘ನಾಗ’  ಮತ್ತು ‘ಶಕ್ತಿ’ ಪೂಜಕರು ದಕ್ಷಿಣ ಭಾರತದಲ್ಲಿದ್ದರು. ವೇದಗಳಲ್ಲೂ ಈ ಪೂಜಕರ ಉಲ್ಲೇಖಗಳಿವೆ. ಈ ನಾಗ ಪೂಜಕರು, ಶಕ್ತಿ ಪೂಜಕರು ಮಹಾರಾಷ್ಟ್ರದ ಬಳಿ ಇದ್ದರು ಎಂದರೆ ಮತ್ತೆ ಕೆಲವರು ಇವರನ್ನು ಲಂಕೆಗೆ ಒಯ್ಯುತ್ತಾರೆ. ಅಂತೂ ಈ ನಾಗಲೋಕಯಾತ್ರೆ ಲಂಕಾಯಾತ್ರೆ ಎಂದೇ ಭಾವಿಸಬಹುದು.

ನಾಗರು ಎಂದು ಕರೆಯಿಸಿಕೊಳ್ಳುತ್ತಿದ್ದ ಸರ್ಪ ಪೂಜಕರು ಇದ್ದರು. ಅವರಲ್ಲಿ ಪ್ರಜ್ಞಾಪರಿಮಿತ ಸೂತ್ರಗಳು ರೂಪಗೊಂಡು ಅವು ಪ್ರಾಕೃತದಲ್ಲಿ ಇದ್ದಿರಬಹುದು. ಜಾತಕ ಕಥೆಗಳಲ್ಲಿ ನಾಗರಾಜರ, ನಾಗರಾಜ್ಯದ ಉಲ್ಲೇಖಗಳು ದೊರೆಯುತ್ತವೆ. ವಿಶಾಖನಾಗ. ಕಮ್ಮ ನಾಗ ಮುಂತಾದವರು ಐತಿಹಾಸಿಕ ವ್ಯಕ್ತಿಗಳು. ಇದರಿಂದ ಪ್ರಾಚೀನರೂ, ಪ್ರಖ್ಯಾತರೂ ಆದ ಈ ಜನಾಂಗದವರಿಂದಲೇ ನಾಗಾರ್ಜುನ ತಿಳಿವನ್ನು ಪಡೆದಿರಬಹುದು.

ಹೆಸರಿನ ವಿವರಣೆಗಳು

ನಾಗಾರ್ಜುನ ಎಂಬುದು ಅವನ ನಿಜವಾದ ಹೆಸರಲ್ಲ ಎಂದು ಕೆಲವರು ವಾದಿಸುತ್ತಾರೆ. ಈ ಹೆಸರು ಆತನೇ ಇರಿಸಿಕೊಂಡಿದ್ದಿರಬೇಕು ಎಂದೂ ಅನುಮಾನಿಸುತ್ತಾರೆ. ಆದರೆ ಈ ವಾದಕ್ಕೆ ಆಧಾರ ದೊರೆಯದು. ಚೀನೀ ಭಾಷೆಯಲ್ಲಿರುವ ಪ್ರಾಚೀನ ಚರಿತ್ರೆಯಲ್ಲಿ ನಾಗಾರ್ಜುನನ ಹೆಸರನ್ನು ‘ಲುಂಗ್ ಷೂ’ (ಸರ್ಪವೃಕ್ಷ) ಎಂದು ಅನುವಾದಿಸಲಾಗಿದೆ. ಕುಮಾರ ಜೀವ ನಾಗಾರ್ಜುನನಿಗೆ ಈ ಹೆಸರು ಬರಲು ಅರ್ಜುನ ವೃಕ್ಷದಡಿ ದೊರೆತಿದ್ದು ಅರ್ಜುನ ವೃಕ್ಷದೊಂದಿಗೇ ಮುಕ್ತನಾದುದು ಕಾರಣ ಎನ್ನುತ್ತಾನೆ. (ಕುಮಾರಜೀವ ನಾಲ್ಕನೆಯ ಶತಮಾನದಲ್ಲಿದ್ದ. ಸಂಸ್ಕೃತ ಮತ್ತು ಚೀನೀಭಾಷೆಗಳಲ್ಲಿ ಅಸಾಧಾರಣ ಪಾಂಡಿತ್ಯ ಇವನದು. ನಾಗಾರ್ಜುನನ ಜೀವನಚರಿತ್ರೆ ಭಾರತದಲ್ಲಿ ಸಿಕ್ಕುವುದಿಲ್ಲ. ಕುಮಾರದೇವ ಅದನ್ನು ಚೀನೀಭಾಷೆಗೆ ಅನುವಾದಿಸಿದ. ಇದರಿಂದ ನಮಗೆ ಅದು ಉಳಿದಿದೆ.) ಮತ್ತೆ ಕೆಲವು ಗ್ರಂಥಗಳಲ್ಲಿ ‘ಲುಂಗ್ ಷೆಂಗ್’ (ಸರ್ಪಗಳ ಅಧಿಪತಿ) ಎಂದು ಅನುವಾದಿಸಲಾಗಿದೆ. ಟಿಬೆಟ್ ಭಾಷೆಯಲ್ಲಿ ‘ಕ್ಲುಷ್-ಗ್ರಬ್’ (ಸರ್ಪಗಳಿಂದ ಪರಿಪೂರ್ಣತೆಗಳಿಸಿದವ) ಎಂದು ಹೇಳಲಾಗುತ್ತದೆ.

ಬೂ-ಸೃನ್ ‘ನಾಗಾರ್ಜುನ’ ಹೆಸರನ್ನು ದೀರ್ಘವಾಗಿ ವಿವರಿಸುತ್ತ ರಮ್ಯವಾದ ಅರ್ಥವನ್ನೇ ಕೊಟ್ಟಿದ್ದಾನೆ. ‘ಸಾಗರದಿಂದ ಹುಟ್ಟಿದ ನಾಗ ಎರಡು ದಡಗಳನ್ನೂ ಬಿಡುವಂತೆ ಸಮ್ಯಕ್ ಸಂಬುದ್ಧ ಸಾಗರದಲ್ಲಿ (ಅಪಾರವಾದ ಜ್ಞಾನರಾಶಿಯಲ್ಲಿ) ಜನಿಸಿ ಸತ್ಯ-ಮಿಥ್ಯಗಳ ಕೋಟಲೆಯಿಂದ ಬಿಡುಗಡೆ ಹೊಂದುವವ, ನಾಗಮಣಿ, ನಾಗನ ಖಜಾನೆಯಂತೆಯೇ ಧರ್ಮ ಭಂಡಾರಿ. ಸರ್ಪದ ಕಣ್ಣು, ವಿಷಜ್ವಾಲೆಯಂತೆ ಎದುರಾಳಿಯನ್ನು ನೋಡುವ ದೃಷ್ಟಿಯೇ ಅವನ ಭ್ರಮೆಗಳನ್ನು ವಿರೋಧವನ್ನೂ ಸುಟ್ಟು ಜ್ಞಾನಜ್ಯೋತಿಯನ್ನು ಬೆಳಗಿಸುತ್ತಿತ್ತು. ಅದಕ್ಕೆಂದೇ ಅವನನ್ನು ನಾಗ ಎಂದು ಕರೆಯುತ್ತಿದ್ದುದು. ಪಾಂಡವರಲ್ಲಿ ಒಬ್ಬನಾದ ಅರ್ಜುನನ ಬಾಣದ ವರ್ಷ ಶತ್ರು ಸೈನ್ಯವನ್ನು ದಿಕ್ಕೆಡಿಸಿ ಭಯತಪ್ತರನ್ನಾಗಿ ಮಾಡುತ್ತಿದ್ದಂತೆ ನಾಗಾರ್ಜುನ ಬೋಧಿಸತ್ವ ತನ್ನ ಜ್ಞಾನದಿಂದ ಜಗತ್ತಿನ ಅಜ್ಞಾನವನ್ನು ಅವಿದ್ಯೆಯನ್ನು ಕಂಗೆಡಿಸಿ ನಾಶಗೊಳಿಸುತ್ತಿದ್ದ.’

ಇದು ನಾಗಾರ್ಜುನ ಎಂಬ ಪದದ ಸುಂದರ ಅರ್ಥವಿವರಣೆ ಮಾತ್ರ. ಸಂಸ್ಕೃತದ ಯಾವ ಹೆಸರನ್ನಾದರೂ ಈ ರೀತಿ ವಿಶ್ಲೇಷಿಸಿ ಅರ್ಥ ಹೇಳಬಹುದು. ನಾಗಾರ್ಜುನ ಎಂಬುದೇ ಮೂಲ ಹೆಸರು ಎಂದರೂ ಸಂಶಯ ವ್ಯಕ್ತಪಡಿಸುವ ಅಗತ್ಯ ತೋರದು. ಆದರೆ ನಾಗಾರ್ಜುನನಿಗೆ ಒಂದೇ ಹೆಸರಲ್ಲ ಎಂಬುದು ಮಾತ್ರ ಗಮನಿಸಬೇಕಾದ ಅಂಶ. ನಾಗ, ನಾಗಾಹ್ವಯ, ಬೋಧಿಸತ್ವ ನಾಗಾರ್ಜುನ, ತಥಾಗತಭದ್ರ ಆಚಾರ್ಯ, ನಾಗಾರ್ಜುನ, ನಾಗಾರ್ಜುನಾಚಾರ್ಯ ಇತ್ಯಾದಿ ಹೆಸರುಗಳಿವೆ.

ಹಲವು ಸಾಧನೆಗಳು

ನಾಗಾರ್ಜುನ ಜ್ಞಾನವನ್ನು ಹುಡುಕಿಕೊಂಡೋ ಧರ್ಮಪ್ರಸಾರದ ಉದ್ದೇಶದಿಂದಲೋ ಹಿಮಾಲಯದಿಂದ ಲಂಕೆಯ ತನಕ ಯಾತ್ರೆ ನಡೆಸಿ ಭಾರತವನ್ನೆಲ್ಲಾ ಕಂಡವ ಎಂಬುದು ಸತ್ಯಸಂಗತಿ. ನಾಗಾರ್ಜುನ ಕೆಲವು ಕಾಲ ಕಾಶ್ಮೀರದಲ್ಲೂ ಇದ್ದ ಎಂದು ಹೇಳುತ್ತಾರೆ. ಬೌದ್ಧ ಧರ್ಮದ ಪ್ರಸಾರಕ್ಕಾಗಿ, ಧಾರ್ಮಿಕ ಹಾಗೂ ದಾರ್ಶನಿಕ ವಾದವಿವಾದಗಳಲ್ಲಿ ಭಾಗವಹಿಸಲು ಸುತ್ತಾಡುತ್ತಿದ್ದಿರ ಬಹುದು. ಪಾಟಲೀ ಪುತ್ರದ ಬಳಿಯ ಕುಕ್ಕುಟಾರಾಮದ ಬಳಿ ಹನ್ನೆರಡು ದಿನಗಳ ಸತತ ಚರ್ಚೆಯ ನಂತರ ನಾಗಾರ್ಜುನ ವಿರೋಧ ಪಂಥದವರನ್ನೆಲ್ಲಾ ಸೋಲಿಸಿದ. ಅರಸ ಇದರಿಂದ ಹರ್ಷಗೊಂಡು ಈ ದಿಗ್ವಿಜಯದ ಸ್ಮರಣಾರ್ಥ ಒಂದು ಸ್ಮಾರಕ ನಿರ್ಮಿಸಿದ ಎಂದು ಫಾಂಗ್- ಚಿನ್ ಎಂಬಾತ ಬರೆಯುತ್ತಾನೆ. ಹ್ಯುಯೆನ್-ತ್ಸಾಂಗ್ ಈ ಸಾಧನೆ ನಾಗಾರ್ಜುನನ ಶಿಷ್ಯ ಆರ್ಯ ದೇವನದು ಎಂದು ಹೇಳುತ್ತಾನೆ.

ಬುದ್ಧ ವಿಗ್ರಹದ ಆರಾಧನೆ, ಪ್ರದಕ್ಷಿಣೆ, ಸ್ತೂಪಗಳಿಗೆ ಭಕ್ತಿ ಸೂಚಿಸಿ ನಮಸ್ಕರಿಸುವ ಪದ್ಧತಿ ಇತ್ಯಾದಿಗಳನ್ನು ಪ್ರಸರಿಸಿದ ಮಹಾಯಾನ ಧಾರ್ಮಿಕ ಚಟುವಟಿಕೆಗಳಲ್ಲಿ ನಾಗಾರ್ಜುನ ತುಂಬಾ ಮುಖ್ಯವಾಗಿ ಪಾಲ್ಗೊಂಡಿದ್ದ. ನಾಗಾರ್ಜುನನ ಪ್ರೇರಣೆಯಿಂದ ಕಟ್ಟಿದ ಬುದ್ಧಾಲಯಗಳು, ಭದ್ರಪಡಿಸಿದ ಸ್ತೂಪಗಳು ಅನೇಕ. ಬುದ್ಧಗಯಾದಲ್ಲಿಯ ಪವಿತ್ರ ಸ್ಥಳವನ್ನು ನಿರಂಜನ ನದಿಯಿಂದ ಸಂರಕ್ಷಿಸಿದ, ಅಲ್ಲಿಯ ಬೋಧಿವೃಕ್ಷ ಮತ್ತು ಆಲಯವನ್ನು ಅಂದವಾದ ಕೆತ್ತನೆಗಳುಳ್ಳ ಪ್ರಾಕಾರಗಳಿಂದ ರಕ್ಷಿಸಿದ, ಧಾನ್ಯ ಕಟಕದ (ಇಂದಿನ ಗುಂಟೂರು ಜಿಲ್ಲೆಯಲ್ಲಿಯ ಅಮರಾವತಿ) ಸ್ತೂಪವನ್ನು ಪ್ರಾಕಾರದಿಂದ ಭದ್ರಪಡಿಸಿದ. ಈ ರಕ್ಷಣಾ ಕಾರ್ಯ ತುಂಬಾ ಕಲಾತ್ಮಕವಾಗಿ ಸಾಧಿಸಿದ್ದು ನಾಗಾರ್ಜುನನ ನೈಪುಣ್ಯ. ಭಾರತೀಯ ಶಿಲ್ಪಕಲೆಗೇ ಸೊಬಗು ನೀಡಿರುವ ನಾಜೂಕಿನ ಕೆಲಸ. ನಾಗಾರ್ಜುನ ಕೊಂಡದಲ್ಲಿರುವ ಅನೇಕ ಗುಹಾರಾಮಗಳೂ, ಚೈತ್ಯಗಳೂ ಇವನ ಪ್ರೇರಣೆಯಿಂದಲೇ ರೂಪುಗೊಂಡವು.

ಯತಿಯೊಬ್ಬ ಇಷ್ಟೊಂದು ಹೇಗೆ ಸಾಧಿಸಿದ ಎಂಬ ಅಚ್ಚರಿಗೆ ಅವಕಾಶವಿಲ್ಲದಂತೆ ಈತ ಆ ಕಾಲದ ಅರಸನೊಬ್ಬನ ಆಪ್ತ ಎಂದು ಹೇಳಲಾಗುತ್ತದೆ. ಹ್ಯುಯೆನ್-ತ್ಸಾಂಗ್ ಶ್ರೀಪರ್ವತದ ಸಂಘಾರಾಮದ ಬಗ್ಗೆ ಇಂತು ಬರೆಯುತ್ತಾನೆ.

ರಾಜಧಾನಿಯಿಂದ ಆಗ್ನೇಯಕ್ಕೆ ಮುನ್ನೂರು ಲೀ (ಅರವತ್ತು ಮೈಲಿ)ಗಳ ದೂರದಲ್ಲಿ ವೊ-ಲೊ-ಮೊ-ಲೊ-ಕಿ-ಲೀ ಇದೆ. ಅಲ್ಲಿಯೇ ಇನ್-ಫಿಂಗ್ (ಸದ್ದಾಹಾ) ನಾಗಾರ್ಜುನನಿಗಾಗಿ ಒಂದು ಸಂಘಾರಾಮನನ್ನು ನಿರ್ಮಿಸಿದ. ಸಂಘಾರಾಮವೆಂದರೆ ಬೌದ್ಧ ಸನ್ಯಾಸಿಗಳ ಮಠ. ಇಲ್ಲಿ ವಿಶಾಲವಾದ ಕಟ್ಟಡಗಳಿವೆ. ಈ ಕಟ್ಟಡಗಳಲ್ಲಿ ಐದು ಅಂತಸ್ತಿನವೂ ಉಂಟು. ಒಂದೊಂದು ಅಂತಸ್ತಿನಲ್ಲೂ ವಿಹಾರಗಳಿಂದ ಆವರಿಸಲ್ಪಟ್ಟ ನಾಲ್ಕು ವಿಶಾಲವಾದ ಹಜಾರಗಳು. ಇಲ್ಲಿಯ ಆಲಯಗಳಲ್ಲಿ ಚಿತ್ರಕಲೆಯ ನೈಪುಣ್ಯ ದರ್ಶನ ಲಭ್ಯವಾಗುತ್ತಿತ್ತು. ಸರ್ವಾಂಗ ಸುಂದರವಾದ ಆಳೆತ್ತರದ ಬುದ್ಧನ ಸ್ವರ್ಣ ವಿಗ್ರಹಗಳನ್ನು ಕಾಣಬಹುದು. ಇಲ್ಲಿ ನೀರು, ಬೆಳಕುಗಳ ತೊಂದರೆ ಇಲ್ಲ. ನಾಗಾರ್ಜುನ ಇಲ್ಲಿಯೇ ಶಾಕ್ಯಮುನಿ ವಿರಚಿತ ತ್ರಿಪಿಟಕ ಧರ್ಮಶಾಸ್ತ್ರವನ್ನು ಭದ್ರಪಡಿಸಿದ್ದ. ಸಂಘಾರಾಮಕ್ಕೆ ಆವಶ್ಯಕ ವಸ್ತುಗಳ ಕೊರತೆ ಬರದಂತೆ ವ್ಯವಸ್ಥೆ ನಡೆಸಲಾಗಿತ್ತು. ಈ ಕಾರ್ಯ ಪೂರ್ಣರಾಗಲು ಕೆಲಸಗಾರರಿಗೇ ಒಂಬತ್ತು ಕೋಟಿ ಚಿನ್ನದ ನಾಣ್ಯಗಳನ್ನು ಕೊಡಬೇಕಾಯಿತು.

ಈ ಸಂದರ್ಭಗಳು ಉಲ್ಲೇಖಿಸಿರುವ ಸಂಗತಿ ಇದು. ಅರಸನ ಬೊಕ್ಕಸ ಬರಿದಾದರೂ ಸಂಘಾರಾಮ ಪೂರ್ಣವಾಗಲಿಲ್ಲ. ಮುಂದೇನು ಮಾಡಬೇಕೆಂದು ಚಿಂತಾಕ್ರಾಂತನಾದ. ಆತನ ಚಿಂತೆಯನ್ನರಿತ ನಾಗಾರ್ಜುನ ‘‘ಚಿಂತಿಸಲು ಕಾರಣವಿಲ್ಲ. ನಾಳೆ ನೀವು ಬೇಟೆ ಮುಗಿಸಿಕೊಂಡು ಬನ್ನಿ. ಆಗ ಈ ಬಗ್ಗೆ ಯೋಚಿಸೋಣ’’ ಎಂದು ಹೇಳಿದ.

ನಾಗಾರ್ಜುನ ತನ್ನ ರಸವಿದ್ಯಾ ಪರಿಣತಿಯಿಂದ ಅರಸ ಬೇಟೆಗೆ ಹೋಗುವ ಹಾದಿಯಲ್ಲಿದ್ದ ಕಲ್ಲುಗಳನ್ನೆಲ್ಲಾ ಬಂಗಾರವನ್ನಾಗಿಸಿದ. ಮರುದಿನ ಅರಸ ಬೇಟೆಯಿಂದ ಹಿಂತಿರುಗಿ ‘‘ಹಾದಿಯಲ್ಲಿ ಚಿನ್ನದ ಬಂಡೆಗಳೇ ಕಾಣಿಸುತ್ತಿವೆ’’ ಎಂದ. ‘‘ಇದು ನಿನ್ನ ಪುಣ್ಯ ಪ್ರಭಾವ, ಅವುಗಳಿಂದ ಸಂಘಾರಾಮವನ್ನು ಪೂರ್ಣಗೊಳಿಸು’’ ಎಂದ. ಅನಂತರ ನಾಗಾರ್ಜುನ ಬೋಧಿಸತ್ವ ಅಲ್ಲಿಯೇ ವಾಸಿಸುತ್ತಿದ್ದ. ಆ ಕಾಲದ ಅರಸ ಸದವಾಹಾ (ಸೊತೊಪೊಹೊ) ಆ ಅರಸನಿಗೆ ನಾಗಾರ್ಜುನನೆಂದರೆ ಅಪಾರ ಗೌರವ. ಆತನೇ ನಾಗಾರ್ಜುನನ ಆವಶ್ಯಕತೆಗಳನ್ನೆಲ್ಲಾ ನಿರ್ವಹಿಸುತ್ತಿದ್ದ.

ಇದರಲ್ಲಿಯ ಘಟನೆಯ ಸತ್ಯಾಸತ್ಯತೆ ಏನೇ ಆದರೂ ನಾಗಾರ್ಜುನನ ಮಿತ್ರ ಅಥವಾ ಶಿಷ್ಯ ಒಬ್ಬ ಅರಸನಾಗಿದ್ದ ಎಂಬುದು ಸ್ಪಷ್ಟ. ನಾಗಾರ್ಜುನನದೇ ಕೃತಿ ಎನ್ನಲಾಗುವ ‘ರಸರತ್ನಾಕರ’ ದಲ್ಲಿ ನಾಗಾರ್ಜುನ ಮತ್ತು ಶಾತವಾಹನರ ಮಧ್ಯೆ ನಡೆದ ಸಂಭಾಷಣೆಯಿದೆ. ಈ ಅರಸ ಮೂರು ಸಾಗರಗಳ ಅಧಿಪತಿ, ಭುವನೈಕ ಪರಾಕ್ರಮಿ, ಚಕ್ರೇಶ. ಇಂತಹ ಅರಸ ಬಹುಶಃ ಯಜ್ಞ ಶ್ರೀ ಶಾತಕರ್ಣಿಯೇ ಇರಬೇಕು. ಅರಸ ಮತ್ತು ತಾಪಸಿಯ ಬಾಂಧವ್ಯ ಅನ್ಯೋನ್ಯವಾಗಿತ್ತು. ಇವರ ಬಾಂಧವ್ಯ ವಿವರಿಸುವ ಉಲ್ಲೇಖಗಳು ಅನೇಕವಾಗಿದೆ.

ಕಡೆಯ ದಿನಗಳು

ಸಿದ್ಧನಾದ ನಾಗಾರ್ಜುನನಿಗೆ ವೃದ್ಧಾಪ್ಯವನ್ನು ದೂರಗೊಳಿಸುವ ರಹಸ್ಯ ತಿಳಿದಿತ್ತು. ಇದರ ಫಲವಾಗಿ ನೂರಾರು ವರ್ಷ ಬದುಕಿದ್ದ. ಅರಸ ಮಿತ್ರನಿಗೂ ಇದೇ ರೀತಿಯ ಕಾಯಕಲ್ಪ ನಡೆಸಿದ. ಅರಸನ ಸಂಸಾರ ಬೆಳೆಯುತ್ತಿತ್ತು. ಧರ್ಮನಿರತನೂ, ಪರಾಕ್ರಮಶಾಲಿಯೂ ಆದ ಅರಸನೇ ನಾಗಾರ್ಜುನನ ಮಿತ್ರ ಎನ್ನುವುದಕ್ಕೆ ‘ರತ್ನಾವಳಿ’ ಯಲ್ಲಿ ಅನೇಕ ವಾಕ್ಯಗಳು ದೊರೆಯುತ್ತವೆ. ‘ಅಮರಾವತಿಯ ಶಿಲ್ಪ ಭಾರತೀಯ ಶಿಲ್ಪದ ಇತಿಹಾಸದಲ್ಲಿಯೇ ಮಹತ್ತರವೂ ಬೃಹತ್ತರವೂ ಆದ ನಾಜೂಕಿನ ಸುಂದರ ಶಿಲಾ ಪುಷ್ಪ, ಭಾರತೀಯ ಶಿಲ್ಪದ ಉತ್ತುಂಗ ಶಿಖರ…..’ ಮುಂತಾಗಿ ಹೊಗಳಿಸಿಕೊಂಡಿರುವ ಕಲೆಯ ನಿರ್ಮಾಪಕ ಕಲಾಭಿಮಾನಿ,  ಸದ್ಧರ್ಮಪ್ರಿಯನಾಗಿದ್ದ ಎನ್ನುವುದರಲ್ಲಿ ಆಶ್ಚರ್ಯವೇನು?

ನಾಗಾರ್ಜುನ ಎಷ್ಟು ಕಾಲ ಬದುಕಿದ್ದ ಎಂಬುದನ್ನು ನಿರ್ಣಯಿಸಿ ಹೇಳುವುದು ಕಷ್ಟವಾಗಿದೆ. ಟಿಬೆಟ್ಟಿನ ಮೂಲಗಳ ಪ್ರಕಾರ ಅರವತ್ತು ವರ್ಷಗಳೆಂದರೆ ಇತರ ಮೂಲಗಳಿಂದ ಆರು ನೂರು ವರ್ಷಗಳ ತನಕ ಬೆಳೆಯುತ್ತದೆ. ಸತ್ತು ಮತ್ತೆ ಜೀವಂತನಾದ ಕತೆಗಳೂ ದೊರೆಯುತ್ತವೆ. ಎಲ್ಲಾ ಕತೆಗಳಲ್ಲೂ ಸಾಮಾನ್ಯವಾಗಿ ಬರುವುದು ಶ್ರೀಪರ್ವತದಲ್ಲಿಯೇ ಈತ ಸತ್ತ ಎಂಬುದು. ಕುಮಾರ ಜೀವನ ಪ್ರಕಾರ ನಾಗಾರ್ಜುನ ಬ್ರಾಹ್ಮಣನೊಬ್ಬನನ್ನು ಮಂತ್ರವಿದ್ಯೆಯಲ್ಲಿ ಸೋಲಿಸಿದ ನಂತರ ‘‘ನಾನು ಇನ್ನೂ ಬದುಕಿರಬೇಕು ಎನ್ನುವೆಯಾ?’’  ಎಂದು ಕೇಳಿದ. ‘‘ನಿಜ ಹೇಳಬೇಕೆಂದರೆ ನೀನು ಇಲ್ಲದಿರುವುದೇ ವಾಸಿ’’ ಎಂದ ಈ ಮಾತಿನ ನಂತರ ತನ್ನ ಗುಹಾರಾಮದಲ್ಲಿ ಹೋದ ನಾಗಾರ್ಜುನ ಮತ್ತೆ ಹೊರಗೆ ಬರಲಿಲ್ಲ. ಬಾಗಿಲು ಬಡಿದರೂ ಉತ್ತರವಿಲ್ಲ. ಬಾಗಿಲು ಮುರಿದು ಒಳಗೆ ಹೋದರು. ಹಕ್ಕಿಯೊಂದು ಹಾರಿಹೋಯಿತು. ನಾಗಾರ್ಜುನ ಇರಲಿಲ್ಲ.

ಹ್ಯುಯನ್‌ತ್ಸಾಂಗ್ ನಾಗಾರ್ಜುನನ ಅಂತ್ಯವನ್ನು ಇಂತು ವಿವರಿಸುತ್ತಾನೆ. ಶಾತವಾಹನ ಚಕ್ರೇಶ, ನಾಗಾರ್ಜುನ ಇಬ್ಬರೂ ಸಾವನ್ನು ದೂರಮಾಡಿ ಬದುಕುತ್ತಿದ್ದರು. ಯುವರಾಜನಾಗಿದ್ದವನು ತಾನು ಅರಸನಾಗುವ ಅವಕಾಶ ಕಾಯುತ್ತಾ ಬೇಸರಗೊಂಡಿದ್ದ. ಆಗ ಅವನ ತಾಯಿ ಅರಸನ ಆಯುಸ್ಸು ನಾಗಾರ್ಜುನನ ಆಯುಸ್ಸನ್ನು ಅವಲಂಬಿಸಿದೆ ಎಂದು ಹೇಳಿ ಆ ಯತಿಯನ್ನು ಒಲಿಸಿಕೊಳ್ಳಬೇಕೆಂದು ಸೂಚಿಸಿದಳು. ನೇರವಾಗಿ ಅರಸುಕುಮಾರ ನಾಗಾರ್ಜುನನ ಆಶ್ರಮಕ್ಕೆ ಬಂದ. ಸಂಜೆಯಾಗಿತ್ತು. ನಾಗಾರ್ಜುನ ಮಂತ್ರ ಪಠಿಸುತ್ತಿದ್ದ. ವಿಶೇಷವೇನೆಂದು ವಿಚಾರಿಸಿದ. ‘‘ಮಹಾಸ್ಥವಿರ, ಬೋಧಿಸತ್ವ ಪರೋಪಕಾರಾರ್ಥವಾಗಿ ಜೀವನವನ್ನೇ ಧಾರೆ ಎರೆದ. ಶಿಬಿ ಹದ್ದಿಗೆ ಮೈಮಾಂಸವನ್ನೇ ಕೊಟ್ಟು ಪಾರಿವಾಳವನ್ನು ಉಳಿಸಿದ. ಅನೇಕ ಹಿರಿಯರು ಹೀಗೆ ನಡೆದುಕೊಂಡಿದ್ದಾರೆ. ಆದ್ದರಿಂದ ಈ ಪರಂಪರೆಯನ್ನು ಉಳಿಸಬೇಕೆಂದು ಕೋರಲು ಬಂದಿದ್ದೇನೆ. ನಿಮ್ಮ ತಲೆಯನ್ನು ದಯವಿಟ್ಟು ನನಗೆ ದಾನಮಾಡಿ’’ ಎಂದು ಕೋರಿದ. ಈ  ಮಾತು ಕೇಳಿದ ನಾಗಾರ್ಜುನ ನಕ್ಕ. ‘‘ಮನುಷ್ಯನ ಬಾಳು ನೀರಿನ ಮೇಲಣ ಗುಳ್ಳೆ’’ ಎನ್ನುತ್ತಾ ದರ್ಭೆಯಿಂದ ತನ್ನ ತಲೆಯನ್ನು ಕತ್ತರಿಸಿಕೊಂಡ. ಈ ಸುದ್ದಿ ಕೇಳುತ್ತಿದ್ದಂತೆಯೇ ಅರಸನೂ ಸತ್ತ. ಟಿಬೆಟ್ಟಿನಲ್ಲೂ ಇದೇ ಕತೆ ಪ್ರಚಲಿತವಾಗಿದೆ. ಮತ್ತೆ ಕೆಲವು ಲೇಖಗಳ ಪ್ರಕಾರ ಅವನು ಅಮಿತಾಭನ ಸ್ವರ್ಗಕ್ಕೆ ಹೋದ.

ನಾಗಾರ್ಜುನನ ಅಂತ್ಯದ ನಂತರದ ನೂರು ವರ್ಷಗಳಿಗೆ ನಾಗಾರ್ಜುನ ಆಲಯಗಳನ್ನು ದಕ್ಷಿಣ ಭಾರತದಲ್ಲಿ ಕಟ್ಟಲಾಯಿತು. ಅಲ್ಲಿ ಬುದ್ಧನಂತೆ ಈ ಯತಿಯನ್ನು ಅರ್ಚಿಸಲಾಗುತ್ತಿತ್ತು ಎಂದು ಕುಮಾರಜೀವ ಹೇಳುತ್ತಾನೆ. ನಾಗಾರ್ಜುನ ಕೊಂಡದಲ್ಲಿ ದೊರೆತಿರುವ ಪೂರ್ಣ ಕುಂಭವೊಂದರಲ್ಲಿ ಎರಡು ಹಲ್ಲುಗಳು ದೊರೆತಿವೆ. ಅವು ನಾಗಾರ್ಜುನನದೇ ಇರಬಹುದೆಂದು ಅನುಮಾನಿಸುತ್ತಾರೆ.

ಈತನ ಶಿಷ್ಯರಲ್ಲಿ ಪ್ರಖ್ಯಾತನಾದವನು ಆರ್ಯದೇವ. ದೇವ, ಕಾಣದೇವ, ನೀಲನೇತ್ರ, ನಂಜಿಯೋ ಎಂಬ ಹೆಸರುಗಳೂ ಉಂಟು. ನಿಜವಾದ ಹೆಸರು ಕಂಡ್ರಕಿಷ್ಟಿ. ತೀವ್ರ ಮತಾಭಿಮಾನಿ. ಒಳ್ಳೆಯ ಮಾತುಗಾರ. ಒಂದೇ ಕಣ್ಣಿನವ. ಕೆನ್ನೆಗಳ ಮೇಲೆ ಕಣ್ಣುಗಳಂತೆ ಎರಡು ಮಚ್ಚೆಗಳಿದ್ದವು. ಮೊದಮೊದಲು ನಾಗಾರ್ಜುನನ ವೈರಿಯಾಗಿದ್ದು ಅನಂತರ ನಾಗಾರ್ಜುನನಲ್ಲಿ ವಿದ್ಯೆಗಾಗಿ ಬಂದು ಬಾಗಿಲಲ್ಲಿ ನಿಂತ.

ಆರ್ಯದೇವ ನಾಗಾರ್ಜುನನ ಬಳಿಗೆ ಬರುವ ವೇಳೆಗೇ ವಿದ್ವಾಂಸನೆಂದು ಹೆಸರುಗಳಿಸಿದ್ದವ. ಬಾಗಿಲ ಬಳಿ ಇದ್ದ ಶಿಷ್ಯ ನಾಗಾರ್ಜುನನಿಗೆ ಆರ್ಯದೇವನ ಬರವನ್ನು ಸೂಚಿಸುತ್ತಲೇ ಅವನ ಖ್ಯಾತಿಯನ್ನು ಕೇಳಿದ್ದ ನಾಗಾರ್ಜುನ ಒಂದು ಪಾತ್ರೆಯ ತುಂಬಾ ನೀರನ್ನು ಕಳುಹಿಸಿದ. ಅದನ್ನು ಕಂಡು ಆರ್ಯದೇವ ಅದರಲ್ಲಿ ಸೂಜಿಯನ್ನು ಹಾಕಿದ. ಇದನ್ನು ಕಂಡ ನಾಗಾರ್ಜುನ ಆರ್ಯದೇವನ ಚಾತುರ್ಯ ಮೆಚ್ಚಿದ. ಶಿಷ್ಯರ ಮುಂದೆ ತನ್ನ ಮೆಚ್ಚುಗೆ ವ್ಯಕ್ತಪಡಿಸಿದ. ಇದರ ಅರ್ಥವನ್ನು ಕೇಳಿದವರಿಗೆ ತುಂಬಿದ ನೀರಿನ ಪಾತ್ರೆ ನಾಗಾರ್ಜುನನ ಜ್ಞಾನದ ಸಂಕೇತವಾದರೆ ಆರ್ಯದೇವ ಹಾಕಿದ ಸೂಜಿ ಈ ಜ್ಞಾನದ ಗಹನತೆಯನ್ನು ಗ್ರಹಿಸಿರುವೆ ಎಂಬ ಉತ್ತರ ಎಂದ. ಕಲಿಯಲು ವಿನೀತನಾಗಿ ಬಂದ ಪಂಡಿತೋತ್ತಮ. ನಾಗಾರ್ಜುನ ಬಾಯ್ತುಂಬ ಆತನ ಪಾಂಡಿತ್ಯ ಹೊಗಳಿದ. ಧರ್ಮದ ದೀಪವನ್ನು ತನ್ನಿಂದ ಅವನಿಗೆ ವರ್ಗಾಯಿಸಬೇಕೆಂಬ ತನ್ನ ಆಸೆ ಆತನ ಮುಂದಿರಿಸಿದ. ತಾನು ವೃದ್ಧನಾಗುತ್ತಿರುವೆ ಎಂದೂ ವಿವರಿಸಿದ. ಅನಂತರ ಬುದ್ಧನ ಬೋಧನೆಯ ಬಗ್ಗೆ ಒಂದು ಪ್ರವಚನ ನೀಡಲು ಕೇಳಿದ. ಪ್ರವಚನ ಪ್ರಾರಂಭಿಸಲು ಬಾಯ್ತೆರೆಯುತ್ತಾ ಆರ್ಯದೇವ ನಾಗಾರ್ಜುನನ ಮುಖ ನೋಡಿದ. ಗಂಭೀರವಾದ ಪ್ರಶಾಂತ ಮುದ್ರೆಯ ಮುಖ-ಅದೇ ಬುದ್ಧನ ಮುಖ. ಮಾತು ಮೂಕಾಯಿತು. ತನ್ನನ್ನು ಶಿಷ್ಯರ ಪರಿವಾರದಲ್ಲಿ ಸೇರಿಸಿಕೊಳ್ಳಬೇಕೆಂದು ಕೋರಿದ. ನಾಗಾರ್ಜುನನ ಶಿಷ್ಯನಾದ.

‘‘ನಾನು ವೃದ್ಧನಾದೆ. ಯಾವ ವಿದ್ಯೆಯನ್ನು ನನ್ನಿಂದ ಸಂಗ್ರಹಿಸಬಲ್ಲೆ?’’ ಎಂದು ನಾಗಾರ್ಜುನ ಕೇಳಿದ. ‘‘ನನ್ನಲ್ಲಿ ಸಂಗ್ರಹದ ಯೋಗ್ಯತೆ ಇಲ್ಲ. ಯಥಾಶಕ್ತಿ ತಮ್ಮ ಆಜ್ಞೆ ಪಾಲಿಸುತ್ತೇನೆ’’ ಎಂದ ಶಿಷ್ಯ. ಇದರಿಂದ ಮತ್ತೂ ಸಂಪ್ರೀತನಾಗಿ ತನ್ನೆಲ್ಲಾ ವಿದ್ಯೆಯನ್ನು ಈ ಶಿಷ್ಯನಿಗೆ ಧಾರೆಯೆರೆದ-ಇದೆಲ್ಲಾ ಹ್ಯುಯೆನ್-ತ್ಸಾಂಗ್ ಬರೆದಿರುವ ಸಂಗತಿಗಳು.

ಬೋಧನೆ

ನಾಗಾರ್ಜುನ ಬೋಧಿಸಿದ್ದನ್ನು ಸ್ಪಷ್ಟವಾಗಿ ಅರಿಯುವುದು ಆವಶ್ಯಕ. ಭಾರತೀಯ ತತ್ವಶಾಸ್ತ್ರದಲ್ಲಿ ಆತ್ಮದ ಇರುವಿಕೆಯನ್ನು ಕೆಲವರು ಒಪ್ಪಿದರೆ ಮತ್ತೆ ಕೆಲವರು ಅಲ್ಲಗಳೆಯುತ್ತಾರೆ. ಆದರೆ ನಾಗಾರ್ಜುನ ಈ ಬಗ್ಗೆ ಮಧ್ಯಮ ಮಾರ್ಗವನ್ನು ಅನುಸರಿಸಿದ. ಎಂದರೆ ಆತ್ಮ ಇದೆ ಎಂದಾಗಲಿ ಇಲ್ಲವೆಂದಾಗಲಿ ಹೇಳದೆ ಅದು ನೀವು ನೋಡುವ ದೃಷ್ಟಿಯನ್ನು ಅವಲಂಬಿಸಿರುತ್ತದೆ ಎಂದು ಹೇಳಿದ. ತನ್ನ ಈ ದೃಷ್ಟಿಯನ್ನು ಹೀಗೆ ಸಮರ್ಥಿಸಿದ. ಈ ಜಗತ್ತಿನ ಇರುವಿಕೆ ಹಲವು ಅವಸ್ಥೆಗಳಿಗೆ ಒಳಪಟ್ಟಿರು ವಂತೆ ಇದೆ. ಇದು ಪೂರ್ಣವಾಗಿ ಸತ್ಯವಾಗಲಿ, ಪೂರ್ಣವಾಗಿ ಅಸತ್ಯವಾಗಲಿ ಅಲ್ಲ. ಆದ್ದರಿಂದಲೇ ಯಾವ ವಸ್ತುವಿಗೂ ತನ್ನದೇ ಆದ ಸ್ವಭಾವವಾಗಲಿ, ತಾನೇತಾನಾಗಿ ರೂಪುಗೊಳ್ಳುವ ಶಕ್ತಿಯಾಗಲಿ ಇಲ್ಲ. ವಸ್ತು ಮತ್ತೊಂದರ ಸಂಪರ್ಕ, ಸಾನ್ನಿಧ್ಯದ ಫಲವಾಗಿಯೇ ಆ ಸ್ವಭಾವ ಶಕ್ತಿಗಳನ್ನು ಗಳಿಸಿಕೊಳ್ಳುತ್ತದೆ. ಇಂತು ಜಗತ್ತೇ ಹಲವಾರು ಸಂಬಂಧ,ಸಂಪರ್ಕ, ಸಂಯೋಗಗಳ ಫಲ. ಆದ್ದರಿಂದಲೇ ನೀರಿನಲ್ಲಿ ಮೂಡಿ ಮುಂದೆ ಸಾಗುವ ವರ್ತುಲಗಳಂತೆ ಈ ಜಗತ್ತಿನ ರೂಪ. ಹುಟ್ಟು-ಸಾವುಗಳ ಸಂಬಂಧ ಕುದುರಿಸುವ ಮೂಲ ಭಾವವೇ ಅಸತ್ಯವಾದುದು. ನಮ್ಮಲ್ಲಿ ಊಹೆಗಳನ್ನು ಬಡಿದೆಬ್ಬಿಸಿ, ಆಸೆಯನ್ನು ರೂಪಿಸಿ ಅಶಾಂತಿಯ ಕಿಡಿಯನ್ನು ಹೊತ್ತಿಸುವ ಈ ಭಾವನೆಗಳಲ್ಲಿಯೇ ದುಃಖದ ಮೂಲತತ್ವಗಳು ಅಡಗಿವೆ. ಮನುಷ್ಯರು ಈ ತತ್ವಗಳಿಗೇ ಅಂಟಿಕೊಂಡಿದ್ದಾರೆ ಆದ್ದರಿಂದಲೇ ಅವರ ಬಾಳು ದುಃಖಮಯವಾಗಿದೆ.

ಬುದ್ಧನು ಹೇಳಿದ್ದ ವೈಭಾಷಿಕ, ಸೌತ್ರಾಂತಿಕ, ಯೋಗಾಚಾರ ಮತ್ತು ಮಾಧ್ಯಮಿಕ ಶಾಖೆಗಳಲ್ಲಿ ನಾಗಾರ್ಜುನ ಆರಿಸಿಕೊಂಡಿದ್ದು ಮಾಧ್ಯಮಿಕ ಶಾಖೆ. ಆತ್ಮದ ಇರುವಿಕೆಯು ತಾನು ನೋಡುವ ದೃಷ್ಟಿಯನ್ನು ಅನುಸರಿಸುತ್ತದೆ ಎಂದು ಹೇಳಿ ಆಸ್ತಿಕರು, ನಾಸ್ತಿಕರು ಇಬ್ಬರನ್ನೂ ಬಿಟ್ಟು ಮಧ್ಯದ ಹಾದಿ ತೆರೆದ. ಬುದ್ಧನ ನಂತರ ಆಚಾರ್ಯ ಶಂಕರರ ಮೊದಲು ಭಾರತದಲ್ಲಿ ನಾಗಾರ್ಜುನನ ಸಮ ತೂಗುವಂತಹ ಮೇಧಾಶಾಲಿ, ದರ್ಶನ ಶಾಸ್ತ್ರಜ್ಞ, ಮಹಾಚೇತಸ ಬೇರಾರೂ ಇಲ್ಲ. ಬುದ್ಧನಿಗೆ ಸರಿಸಮ ನಿಲ್ಲಬಲ್ಲ ಸಿದ್ಧ ಎಂದು ಚರಿತ್ರಕಾರರು ಹೇಳಿರುವುದು ಉತ್ಪ್ರೇಕ್ಷೆಯಲ್ಲ. ಶಂಕರಾಚಾರ್ಯರ ಅದ್ವೆ ತ ಸಿದ್ಧಾಂತಕ್ಕೂ ನಾಗಾರ್ಜುನ ಶೂನ್ಯ ಸಿದ್ಧಾಂತಕ್ಕೂ ಸಂಬಂಧ ಉಂಟು. ಶೂನ್ಯವಾದ ಜಪಾನ್, ಚೀನಾ ಮತ್ತು ಟಿಬೆಟ್‌ಗಳಲ್ಲಿ ಅಪಾರ ಜನಮನ್ನಣೆ ಗಳಿಸಿತು.

ಕೃತಿಗಳು

ನಾಗಾರ್ಜುನ ಕೃತಿಗಳು ಅನೇಕವಾಗಿದ್ದಿರಬಹುದಾದರೂ ಬಹುಪಾಲು ಈಗ ದೊರೆಯುವಂತಿಲ್ಲ. ಮೂಲ ಸಂಸ್ಕೃತದ ಕೃತಿಗಳು ವೇದ ಮತ ಹಾಗೂ ಬೌದ್ಧ ಮತದವರ ಮಧ್ಯೆ ನಡೆಯುತ್ತಿದ್ದ ಘರ್ಷಣೆಗಳಲ್ಲಿ ನಾಶವಾಗಿದೆ. ಸ್ಥಳ ಪುರಾಣಗಳಲ್ಲಿ ಸೇರಿಕೊಳ್ಳುವಷ್ಟು ಬಲವಾಗಿದ್ದ ಈ ಘರ್ಷಣೆಗಳ ಫಲವಾಗಿ ಭರತಖಂಡದಲ್ಲಿ ಮೇಧಾಶಾಲಿಗಳಾಗಿದ್ದ ಅಶ್ವಘೋಷ, ನಾಗಾರ್ಜುನ, ಅಸಂಗ, ವಸುಬಂಧ, ಧರ್ಮಕೀರ್ತಿ ಮುಂತಾದವರ ಕೃತಿಗಳು ಭಾರತದಲ್ಲಿಯೇ ಅದೃಶ್ಯವಾಗಿವೆ. ಮೂಲ ಕೃತಿಗಳು ದೊರೆಯದಿದ್ದರೂ ಅವುಗಳಲ್ಲಿ ಕೆಲವು ಚೀನೀಭಾಷೆಯಲ್ಲಿ  ಅನುವಾದ ರೂಪದಲ್ಲಿ ದೊರೆಯುತ್ತವೆ. ಚೀನೀ ತ್ರಿಪಿಟಕದ ಪ್ರಕಾರ ನಾಗಾರ್ಜುನನ ಕೃತಿಗಳು ಇಪ್ಪತ್ನಾಲ್ಕು. ಅವುಗಳಲ್ಲಿ ಹದಿನೆಂಟು ಚೀನೀ ಭಾಷೆಯಲ್ಲಿ ದೊರೆಯುತ್ತವೆ. ನಾಗಾರ್ಜುನನ ಕೃತಿಗಳೇ ಎಂದು ಸಾಮಾನ್ಯವಾಗಿ ಪಂಡಿತರು ಒಪ್ಪಿರುವ ಕೃತಿಗಳು ಇವು:

. ಸುಹೃಲ್ಲೇಖ: ಈ ಕೃತಿಯ ಮೂಲ ಸಂಸ್ಕೃತ ರೂಪ ದೊರೆತಿಲ್ಲ. ಟಿಬೆಟ್ ಮತ್ತು ಚೀನೀ ಭಾಷೆಯಲ್ಲಿ ಅನುವಾದಿತವಾಗಿ ದೊರೆಯುತ್ತದೆ. ಇತ್ಸಿಂಗನ ಪ್ರಕಾರ ‘ಇದು ಭಾರತ ದೇಶದಲ್ಲಿ ವೃದ್ಧರು, ಮಕ್ಕಳು ಸಮಾನ ಆಸಕ್ತಿಯಿಂದ ಪಠಿಸುತ್ತಿದ್ದ ಜನಪ್ರಿಯ ಕೃತಿ’.

. ಪ್ರಜ್ಞಾ ಪ್ರದೀಪ ಶಾಸ್ತ್ರಕಾರಿಕ: ಆತ್ಮದ ಇರವು ಇಲ್ಲ. ಇಲ್ಲದೆಯೂ ಇಲ್ಲ. ಅದು ಶಾಶ್ವತವೂ ಅಲ್ಲ, ಅಶಾಶ್ವತವೂ  ಅಲ್ಲ. ಸಾವಿನಿಂದ ನಶಿಸುವುದೂ ಅಲ್ಲ. ನಶಿಸದ್ದೂ ಅಲ್ಲ. ಇದು ಮಾಧ್ಯಮಿಕ ಶಾಖೆಯವರ ವಾದ.

. ದಶಭೂಮಿ ವಿಭಾಷಾಶಾಸ್ತ್ರ: ಇದರ ಎರಡು ಚೀನೀ ಅನುವಾದಗಳಿವೆ. ಸಂಸ್ಕೃತ ಮೂಲ ದೊರೆಯುತ್ತದೆ.

. ಮಹಾಪ್ರಜ್ಞ ಪರಿಮಿತ ಸೂತ್ರ ವಾಖ್ಯಾಶಾಸ್ತ್ರ: ಇದನ್ನೇ ‘ಪ್ರಜ್ಞಾ ಪಾರಮಿತ ಶಾಸ್ತ್ರ’ ಎನ್ನುತ್ತಾರೆ. ಮೂಲ ಸಂಸ್ಕೃತ ಕೃತಿಯಲ್ಲಿ ೧,೨೫,೦೦೦ ಶ್ಲೋಕಗಳುಂಟು. ಇದು ಅಮೂಲ್ಯವಾದ ಕೃತಿ. ಇದರ ಅನುವಾದ ಅನೇಕ ಭಾಷೆಗಳಲ್ಲಿ ದೊರೆಯುತ್ತದೆ. ಇದು ಮಹಾಯಾನ ಪಂಥಕ್ಕೆ ಜ್ಞಾನದ ಖನಿ. ಅಶ್ವಘೋಷ ಈ ಶಾಸ್ತ್ರದ ಪ್ರಾರಂಭ ಬೋಧಕ. ಅನಂತರ ನಾಗಾರ್ಜುನ. ‘ವಜ್ರಸೂತ್ರ’ ಗಳು ಈ ಗ್ರಂಥದಲ್ಲಿಯವೇ. ಇವನ್ನು ಮೊದಲು ಚೀನೀ ಭಾಷೆಗೆ ಅನುವಾದಿಸಿದವ ಕುಮಾರ ಜೀವ. ಅನಂತರ ಹ್ಯುಯೆನ್-ತ್ಸಾಂಗ್ ಇದನ್ನು ಪೂರ್ಣಗೊಳಿಸಿದ.

. ಅವತಂಶಕ ಸೂತ್ರ (ಬುದ್ಧಾವತಂಶಕ): ಇದರಲ್ಲಿ ಆರು ಭಾಗಗಳಿವೆ. ಮೊದಲ ಎರಡು ಭಾಗಗಳು ಬರೆಯಲ್ಪಡದೆ ಬೋಧಿಸತ್ವರ ಮಹತ್ತಿನಿಂದ ಪ್ರಚಲಿತವಾಗಿತ್ತು. ಉಳಿದ ನಾಲ್ಕು ಭಾಗಗಳು ನಾಗಲೋಕದಲ್ಲಿದ್ದು ಜಂಜೂದ್ವೀಪದ ಜನರಿಗೆ ಲಭ್ಯವಾಗಿರಲಿಲ್ಲ. ಅಲ್ಲಿಂದ ಒಂದು ಭಾಗವನ್ನು ಮಾತ್ರ ನಾಗಾರ್ಜುನ ತಂದು ಹಿಂದೂ ದೇಶದಲ್ಲಿ ಹಂಚಿದ. ಇದರಲ್ಲಿ ಹೇಳಿರುವುದು: ‘ಸಾರ ಕಾಂತಿಯುತವಾದ ಕನ್ನಡಿಯಂತಿದೆ. ಕಣ್ಣಿಗೆ ಕಾಣಿಸುವುದಕ್ಕೆಲ್ಲ ಮೂಲವಾಗಿ, ಬುನಾದಿಯಾಗಿ, ನಿತ್ಯವಾಗಿ, ಸನಾತನವಾದುದು. ಕಾಣಿಸುವುದೆಲ್ಲ ಅಶಾಶ್ವತ, ಮಿಥ್ಯೆ. ಕನ್ನಡಿ ಹೇಗೆ ಎಲ್ಲ ವಸ್ತುಗಳನ್ನೂ ಬಿಂಬಿಸುತ್ತದೆಯೋ ಅಂತೆಯೇ ಸಾರವು ಕಣ್ಣಿಗೆ ಕಾಣಿಸುವುದನ್ನೆಲ್ಲ ಆವರಿಸುತ್ತದೆ. ಎಲ್ಲವೂ ಅದರಲ್ಲಿ, ಅದರಿಂದ ಮುಳುಗುತ್ತದೆ. ಅದೇ ಶೂನ್ಯ, ಮಹಾಶೂನ್ಯ ಎನ್ನಲ್ಪಡುತ್ತದೆ.’

. ವಿಗ್ರಹ ವ್ಯಾವರ್ತಿನಿ: ಇದು ತರ್ಕಶಾಸ್ತ್ರ ಗ್ರಂಥ. ನಾಗಾರ್ಜುನನ ತರ್ಕಶಾಸ್ತ್ರದ ತಿಳಿವು ತೋರಲು ಇದು ರನ್ನಗನ್ನಡಿ. ‘ಯಾವ ಆಶ್ರಯವೂ ಇಲ್ಲದ ಹುಟ್ಟು, ಆದಿ-ಅಂತ್ಯಗಳಿಲ್ಲದ ಬದಲಾವಣೆಗಳಿಲ್ಲದಿರುವುದೇ ಪರಿಪೂರ್ಣತೆ. ಅದೇ ನಿರ್ವಾಣ’ ಎಂದು ಹೇಳುತ್ತದೆ.

. ಶ್ರದ್ಧೋತ್ಪಾದಕ ಶಾಸ್ತ್ರವ್ಯಾಖ್ಯ: ಅಶ್ವಘೋಷನ ಗ್ರಂಥಕ್ಕೆ ವ್ಯಾಖ್ಯೆ ಇದು. ಮಹಾಯಾನ ಶಾಸ್ತ್ರ ವ್ಯಾಖ್ಯೆ ಎಂದು ಕೂಡ ಕರೆಯುತ್ತಾರೆ.

. ಪ್ರಣ್ಯಮೂಲ ಶಾಸ್ತ್ರ ಟೀಕೆ: ಇದರಲ್ಲಿ ನಿರ್ವಾಣದ ವರ್ಣನೆ ಇದೆ. ಆತ್ಮ, ಪ್ರಕೃತಿಗಳಿಲ್ಲ ಎಂಬುದಾಗಿ ಪ್ರತಿಪಾದಿಸಲಾಗಿದೆ.

. ಏಕಶ್ಲೋಕ ಶಾಸ್ತ್ರ: ಒಂದೇ ಶ್ಲೋಕದ ಆಧಾರದ ಮೇಲೆ ರೂಪಿಸಿದ ಕೃತಿ, ಸತ್ಯ ಒಂದೇ. ಸೂರ‍್ಯನ ಬೆಳಕು ಯಾರ ರಾಜ್ಯದಲ್ಲಾದರೂ ಒಂದೇ. ಕಣ್ಣಿದ್ದು ಕಾಣಬಲ್ಲವ ಅದರ ಏಕತ್ವದ ಚಿಹ್ನೆಗಳನ್ನು ವಿಪುಲವಾಗಿ ಕಾಣಬಹುದು ಎಂಬುದೇ ಆ ಶ್ಲೋಕ.

೧೦. ಮಾಧ್ಯಮಿಕ ಕಾರಿಕ: ಜಪಾನಿನಲ್ಲೂ ಪ್ರಖ್ಯಾತಿ ಗಳಿಸಿದ ಕೃತಿ. ಆರ್ಯದೇವನು ನಾಗಾರ್ಜುನ ನೊಂದಿಗೆ ಸೇರಿ ಈ ಕೃತಿ ರಚಿಸಿದನಂತೆ.

೧೧. ಮಾಧ್ಯಮಿಕ ಸೂತ್ರಗಳು: ಇದು ಎರಡು ಭಾಗಗಳಲ್ಲಿದೆ. ಮೊದಲ ಭಾಗ ಸಂಪ್ರತಿ ಸತ್ಯ. ಎರಡನೆಯ ಭಾಗ ಪರಮಾರ್ಥಸತ್ಯ.

೧೨. ಮಹಾಯಾನ ವಿಂಶಕ: ಇದರ ಮೂಲವೂ ಲುಪ್ತವಾಗಿದೆ. ಟಿಬೆಟಿನಲ್ಲಿ ಅನುವಾದಗಳ ಆಧಾರದ ಮೇಲೆ ಮತ್ತೆ ಸಂಸ್ಕೃತದಲ್ಲಿ ಇದನ್ನು ಬರೆಯಲಾಗಿದೆ.

೧೩.ರಸ ರತ್ನಾಕರ: ಇದರ ಕರ್ತೃತ್ವದ ಬಗ್ಗೆ ವಿವಾದವಿದೆ.

‘ರಸರತ್ನಾಕರ’ ದಲ್ಲಿ ಮುಖ್ಯವಾಗಿ ರಸಾಯನ ತಂತ್ರವಿವರಗಳು ದೊರೆಯುತ್ತವೆ. ಇದರಲ್ಲಿ ‘‘ಹನ್ನೆರಡು ವರ್ಷಗಳ ಕಠೋರ ಪರಿಶ್ರಮ ಮಾಡಿದ್ದೇನೆ. ದೇವೀ, ನೀನು ನನ್ನ ಈ ವ್ರತಕ್ಕೆ ಸಂತುಷ್ಟಳಾಗಿದ್ದರೆ ಮೂರು ಲೋಕಗಳಲ್ಲೂ ದುರ್ಲಭವಾದ ರಸಾಯನ ಜ್ಞಾನವನ್ನು ನನಗೆ ದಯಪಾಲಿಸು’’ ಎಂಬ ಪ್ರಾರ್ಥನೆ ಇದೆ. ರಸಾಯನ ಕ್ರಿಯೆಗಳಲ್ಲಿ ಬಳಸಲಾಗುವ ಅನೇಕ ಯಂತ್ರಗಳ, ಪರಿಕರಗಳ ಉಲ್ಲೇಖ, ವಿವರಣೆ ದೊರೆಯುತ್ತದೆ. ಈ ವಿಷಯದ ಬಗ್ಗೆ ಆಗ ಪ್ರಚಲಿತವಾಗಿದ್ದ ಹಲವಾರು ಕೃತಿಗಳ ವಿವರವಿದೆ. ಆ ಕಾಲದ ರಸಾಯನ ಶಾಸ್ತ್ರದ ಔನ್ನತ್ಯ ತೋರುವ ಕೈಗನ್ನಡಿ. ವಿಖ್ಯಾತ ರಸಾಯನ ಶಾಸ್ತ್ರಜ್ಞ ಪಿ.ಸಿ. ರೇ ಅವರು ನಾಗಾರ್ಜುನನನ್ನು ಭಾರತೀಯ ರಸಾಯನ ಶಾಸ್ತ್ರದ ಜನಕ ಎಂದು ಹೇಳಿದ್ದಾರೆ. ಅಲ್ಬರೂನಿ ಎಂಬ ಯಾತ್ರಿಕನ ಬರಹದಿಂದ ಇದು ಸಿದ್ಧ  ನಾಗಾರ್ಜುನನ ಕೃತಿ ಎಂದು ತಿಳಿಯುತ್ತದೆ. ಆದರೆ ಶಾತವಾಹನನೊಂದಿಗೆ ಸಂಭಾಷಣೆ ಇರುವುದರಿಂದ ಇದು ಬೋಧಿಸತ್ವ ನಾಗಾರ್ಜುನನ ಕೃತಿ ಎಂದು ಹಲವರ ಅಭಿಪ್ರಾಯ.

ಅನೇಕ ರೀತಿಯ ಚೂರ್ಣ, ಪುಟ ಇತ್ಯಾದಿಗಳ ವಿವರ ದೊರೆಯುತ್ತದೆ. ಚೀನಾ ದೇಶದಲ್ಲಿ ಇಂದಿಗೂ ನೇತ್ರ ಚಿಕಿತ್ಸೆ ಅದ್ಭುತವಾದುದು ಎಂದು ಪ್ರತೀತಿ. ಆ ದೇಶ ಈ ವಿಭಾಗದಲ್ಲಿ ಇಷ್ಟೊಂದು ಔನ್ನತ್ಯಕ್ಕೇರಲೂ ನಾಗಾರ್ಜುನನ ಔಷಧಪ್ರಕಾರವನ್ನು ಅಳವಡಿಸಿಕೊಂಡಿದ್ದೇ ಕಾರಣ ಎಂದು ಕೆಲವರ ಅಭಿಮತ.

ಭಾರತೀಯ ರಸಾಯನ ಪದ್ಧತಿಯ ಬಗ್ಗೆ ಅನ್ವೇಷಣೆ ನಡೆಸುವವರಿಗೆ ಇದು ಕೈದೀವಿಗೆ.

೧೪. ರತ್ನಾವಳಿ: ಐದು ಅಧ್ಯಾಯಗಳ ಕೃತಿ. ನಾಲ್ಕು ಮತ್ತು ಐದನೆಯ ಅಧ್ಯಾಯಗಳು ಸಂಸ್ಕೃತದಲ್ಲಿ ಲುಪ್ತವಾಗಿವೆ. ಮೊದಲ ಮೂರು ಅಧ್ಯಾಯಗಳು ಇಂಗ್ಲಿಷಿನಲ್ಲಿ ಪ್ರಕಟವಾಗಿವೆ. ಟಿಬೆಟ್ ಮತ್ತು ಚೀನೀ ಭಾಷೆಗಳಲ್ಲಿ ಗ್ರಂಥ ಪೂರ್ಣರೂಪದಲ್ಲಿದೆ.

ನಾಗಾರ್ಜುನ ಬೋಧಿಸತ್ವನ ಕೃತಿಗಳು ಇನ್ನೂ ಹಲವಾರು ಇವೆ. ಆದರೆ ಆತನ ಬಾಳು, ಗಳಿಸಿದ ಕೀರ್ತಿ ಅಪಾರವಾದವು. ಧಾರ್ಮಿಕ ಚರಿತ್ರೆಯ ಮೇಲೆ ನಾಗಾರ್ಜುನನ ಪ್ರಭಾವ ಮಾಸಲಾರದೆ ಅಚ್ಚೊತ್ತಿದೆ. ಮಾನವನ ಕಲ್ಪನೆಗೆ ನಿಲುಕದಂತೆ, ಅಸಾಧ್ಯನಾಗಿ, ಬೃಹತ್ ಚೇತನಾಪುಂಜವಾಗಿ ರೂಪುಗೊಂಡು ನಾನಾ ಶಾಖೆಗಳಲ್ಲಿ, ನಾನಾ ವಿದ್ಯೆಗಳಲ್ಲಿ ಅಪಾರ ಪರಿಣತಿಯನ್ನು ಗಳಿಸಿದವನು ಎನಿಸಿಕೊಂಡ. ತಂತ್ರ, ರಸಾಯನಶಾಸ್ತ್ರ, ಧರ್ಮಶಾಸ್ತ್ರ, ತರ್ಕಶಾಸ್ತ್ರ, ವೈದ್ಯ, ದರ್ಶನ, ಕಲೆ, ಸಾಹಿತ್ಯ ಎಲ್ಲದರಲ್ಲೂ ನಿಸ್ಸೀಮ. ಪ್ರಜ್ಞಾ-ಪರಿಮಿತವನ್ನು ಪ್ರಚಾರಕ್ಕೆ ತಂದವನೇ ಮಾಧ್ಯಮಿಕ ಕಾರಿಕೆಯನ್ನೂ ಬರೆದ! ಭಾರತದ ಇತಿಹಾಸದಲ್ಲಿ ಈ ರೀತಿಯ ಅತಿ ಮೇಧಾವಿ ಕಾಣಸಿಗುವುದು ವೇದವ್ಯಾಸರೊಬ್ಬರೇ. ಅದಕ್ಕೇ ಅವರು ಹರಿ ಸ್ವರೂಪರಾದರು. ನಾಗಾರ್ಜುನನೂ ಬುದ್ಧನಂತೆ ಪೂಜೆ ಪಡೆದ.