ಕರ್ನಾಟಕೀ ಸಂಗೀತದ ಭದ್ರಕೋಟೆ ಎನಿಸಿರುವ ಮೈಸೂರಿನಲ್ಲಿ ಹಿಂದೂಸ್ಥಾನಿ ಸಂಗೀತ ಶಿಕ್ಷಣ ಪಡೆದು ಮೈಸೂರು ಆಸ್ಥಾನದ ವಿದುಷಿಯಾಗಿ ಕಲಾ ಸೇವೆ ಮಾಡಿರುವ ಶ್ರೀಮತಿ ನಾಗೂಬಾಯಿಯವರು ಕರ್ನಾಟಕದ ಹಿರಿಯ ತಲೆಮಾರಿನ ಹಿಂದೂಸ್ಥಾನಿ ಗಾಯಕಿಯರಲ್ಲಿ ಪ್ರಮುಖರು.

ಶ್ರೀಮತಿಯವರು ೧೪-೧-೧೯೦೩ ರಂದು ಮೈಸೂರಿನಲ್ಲಿ ಜನಿಸಿದರು. ತಾಯಿ ಸಂಗೀತ ವಿದುಷಿ ಚಿನ್ನಮ್ಮನವರಿಂದ ಬಾಲ್ಯದಲ್ಲಿ ಹಿಂದೂಸ್ಥಾನಿ ಸಂಗೀತ ಅಭ್ಯಾಸ. ನಂತರ ಉಸ್ತಾದ್‌ ಹಫೀಜ್‌ ಖಾನ್‌. ದುಲ್ಹೆಖಾನ್‌, ಫಯಾಜ್‌ಖಾನ್‌, ಬರಖತುಲ್ಲಾಖಾನ್‌, ವಿಲಾಯತ್‌ ಹುಸೇನ್‌ ಇವರುಗಳಿಂದ ಶಿಕ್ಷಣ ಹಾಗೂ ಮಾರ್ಗದರ್ಶನ ಪಡೆದರು. ಇಸ್ಸಾಸೇಟ್‌ ಅವರಿಂದ ಗಜಲ್‌, ಠುಮ್ರಿ; ಗವಾಯಿ ರಾಮಚಂದ್ರಪ್ಪನವರಿಂದ ಪಲ್ಲವಿ, ಖಯಾಲ್‌ ಗಾಯನವನ್ನೂ ಕಲಿತರು. ೧೯೩೩ ರಿಂದ ಹದಿನಾರು ವರ್ಷಗಳ ಕಾಲ ಅರಮನೆಯಲ್ಲಿ ಆಸ್ಥಾನ ವಿದುಷಿಯಾಗಿ ಕೆಲಸ ಮಾಡಿದರು. ಅರಮನೆಯ ವಾದ್ಯ ವೃಂದದ ಮುಖ್ಯಸ್ಥರಾದ ವೆಂಕಟೇಶಯ್ಯನವರಲ್ಲೂ ಸಂಗೀತಾಭ್ಯಾಸ ಮಾಡಿದರು. ಶ್ರೀಮತಿ ನಾಗೂಬಾಯಿಯವರು ಆಗಿನ ಹೈದರಾಬಾದಿನ ನಿಜಾಮರು, ಕಾಶ್ಮೀರ ಮಹಾರಾಜರು, ಭರತಪುರದ ಮಹಾರಾಜರು, ಕೊಟ್ಟಾಸಂಗಣಿ ರಾಜರು, ಭೋಪಾಲ ನವಾಬರು, ಮೈಸೂರು ಮಹಾರಾಜರು ಮುಂತಾದವರ ಸಮ್ಮುಖದಲ್ಲಿ ಕಛೇರಿ ಮಾಡಿ ಗೌರವಿಸಲ್ಪಟ್ಟಿದ್ದಾರೆ. ಕರ್ನಾಟಕ ಸರ್ಕಾರದಿಂದ ಗೌರವ ಮಾಶಾಸನವನ್ನು ಪಡೆಯುತ್ತಿದ್ದಾರೆ.

ವಿದುಷಿ ಶ್ರೀಮತಿ ಬಾಯಿಯವರ ಸಂಗೀತ ಸೇವೆಯನ್ನು ಗಮನಿಸಿದ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಅವರಿಗೆ “ಕರ್ನಾಟಕ ಕಲಾತಿಲಕ” ಪ್ರಶಸ್ತಿ ನೀಡಿ (೧೯೮೭-೮೮) ಗೌರವಿಸಿದೆ.