ವಿಶಾಲವಾದ ಬಯಲಿನ ನಡುವಿನಲ್ಲಿ ರಚಿಸಿದ್ದ ಅದ್ಭುತವಾದ ಮಂಟಪ. ಮಂಟಪದ ಕಂಭ ಕಂಭಗಳೂ ಅಡಕೆ ಗೊನೆ, ತೆಂಗಿನ ಕಾಯಿ ಮತ್ತು ಹೂವಿನ ಮಾಲೆಗಳಿಂದ ಅಲಂಕೃತವಾಗಿ ಕಂಗೊಳಿಸುತ್ತಿದ್ದವು. ಆ ಸುಂದರ ಮಂಟಪದೊಳಗೆ ಎತ್ತರವಾಗಿ ರಚಿಸಿದ್ದ ವೇದಿಕೆ. ಅದರ ಮೇಲೆ ಪಂಚವರ್ಣಗಳ ದ್ರವ್ಯದಿಂದ ರಚಿಸಿದ್ದ ಬೃಹತ್ ರಂಗೋಲಿ. ಅದರ ಸುತ್ತ ಹೂವು, ತರಕಾರಿ, ಸೀಯಾಳ, ಅಡಿಕೆ ಗೊನೆ ಮತ್ತು ಅಡಿಕೆ ಸಿಂಗಾರದ ರಾಶಿ ರಾಶಿ. ಹತ್ತಿರದ ನಾಗ ಬನದಿಂದ ಜನರ ಮೆರವಣಿಗೆ ಬರುವುದನ್ನೆ ನೆರೆದಿದ್ದ ಸಾವಿರಾರು ಸಂಖ್ಯೆಯ ಜನಸ್ತೋಮ ಕಾಯುತ್ತಿತ್ತು. ಸೂರ್ಯಾಸ್ತವಾಗಿ ಕೆಲ ಘಂಟೆಗಳ ನಂತರ ಢಕ್ಕೆಯ ವಾದನದೊಡನೆ ಉತ್ಸವದಂತೆ ಒಂದು ಮೆರವಣಿಗೆ ಆಗಮಿಸಿ ವೇದಿಕೆಯನ್ನೇರಿತು. ವೇದಿಕೆಯ ಮೇಲಿದ್ದ ಮಂಡಲದ ಸುತ್ತ ಇಬ್ಬರು ನರ್ತಕರ ನೃತ್ಯ – ನಟನೆ ಆರಂಭವಾಯಿತು. ಇತ್ತ ಬಂದವರಿಗೆಲ್ಲ ಬಾಯಾರಿಕೆಗೆ, ಹಸಿವೆಗೆ ಪಾನೀಯ ಮತ್ತು ಊಟದ ಸಂತರ್ಪಣೆ. ಅತ್ತ ವೇದಿಕೆಯಲ್ಲಿ ರಾತ್ರೆ ಇಡೀ ನಡೆಯುವ ನೃತ್ಯ. ಆವೇಶ, ಪ್ರಶ್ನೆ-ಉತ್ತರ. . . . ಪ್ರತಿ ಕ್ಷಣವನ್ನೂ ಶ್ರದ್ಧೆ, ಭಕ್ತಿ ಮತ್ತು ಕುತೂಹಲದಿಂದ ಅನುಭವಿಸುತ್ತ ಕುಳಿತ ಭಕ್ತವೃಂದ. . . .ಬೆಳಗಾಗುವಾಗ ಎಲ್ಲ ಸಂಭ್ರಮಕ್ಕೆ ತೆರೆ. ಪ್ರಸಾದ ಸ್ವೀಕಾರದ ನಂತರ ಧನ್ಯತೆಯ ಭಾವ. . ಅದುವೆ ನಾಗಮಂಡಲ. ದಕ್ಷಿಣ ಕನ್ನಡದ ತುಳುವರ ಪವಿತ್ರ ನಾಗಾರಾಧನೆಯ ಒಂದು ಭಾಗ.

  

ತುಳುನಾಡಿನಲ್ಲಿ ಬಹಳ ಪ್ರಾಚೀನ ಕಾಲದಿಂದಲೂ ಪ್ರಚಲಿತದಲ್ಲಿರುವ ನಾಗಾರಾಧನೆಯ ಹಲವು ವಿಧಿಗಳಲ್ಲಿ ನಾಗಮಂಡಲವೂ ಒಂದು. ನಾಗರ ಪಂಚಮಿಗಳಂದು ನಾಗನಿಗೆ ಹಾಲೆರೆಯುವುದು ಒಂದು ಸರಳ ವಿಧಾನವಾದರೆ, ಢಕ್ಕೆಬಲಿ ಎಂಬುದು ಮತ್ತೊಂದು ಪೂಜಾ ವಿಧಾನ. ಏನಾದರೂ ದೋಷಗಳಿದ್ದರೆ ಅದರ ಪರಿಹಾರಾರ್ಥವಾಗಿ ನಡೆಸುವ ಸರ್ಪ ಸಂಸ್ಕಾರ ಅಥವ ಸರ್ಪ ಕಾರ್ಯ ಇನ್ನೊಂದು ವಿಧಾನ. ಇದಲ್ಲದೆ  ಸುಬ್ರಹ್ಮಣ್ಯ ಮೊದಲಾದೆಡೆ ನಡೆಯುವ ಆಶ್ಲೇಶ ಬಲಿ ಸ್ವಲ್ಪ ಸಂಕೀರ್ಣವಾದುದು. ಎಲ್ಲದಕ್ಕಿಂತಲೂ ಸಂಕೀರ್ಣವಾದ ದೀರ್ಘಕಾಲ ನಡೆಯುವ ಮತ್ತು ಹೆಚ್ಚು ವೆಚ್ಚದ ನಾಗಾರಾಧನೆಯೆ ‘ನಾಗಮಂಡಲ’. ನಾಗಮಂಡಲವು ತುಳುನಾಡಿನ ಎಲ್ಲಕಡೆ ನಡೆಯುತ್ತದಾದರೂ ಮೂರ್ನಾಲ್ಕು ತಾಲ್ಲೂಕುಗಳಲ್ಲಿ ಹೆಚ್ಚಾಗಿ ಆಚರಿಸಲ್ಪಡುತ್ತದೆ. ನಾಗಾರಾಧನೆಯ ಇತರ ವಿಧಾನಗಳಂತೆ ನಾಗಮಂಡಲವು ಹೆಚ್ಚಾಗಿ ಕಾಣಿಸಿಕೊಳ್ಳ್ಳದೆ ಅಪರೂಪಕ್ಕೊಮ್ಮೆ ನಡೆಯುತ್ತದೆ. ಅದಕ್ಕೆ ಕಾರಣ ಅದಕ್ಕೆ ಬೇಕಾದ ಅಪಾರವಾದ ಶ್ರಮ, ತಯಾರಿ ಮತ್ತು ಹಣದ ಸಮಸ್ಯೆಯೆ ಆಗಿದೆ. ಹೆಚ್ಚು ಖರ್ಚಿನ ಬಾಬತ್ತಾದ ನಾಗಮಂಡಲವನ್ನು ನಡೆಸುವ ಶ್ರೀಮಂತರು ವಿರಳ. ಕುಟುಂಬದಲ್ಲಿನ ಸಮಸ್ಯೆಗಳ ನಿವಾರಣೆಗೆ ಅಥವಾ ಕುಟುಂಬದ ಸಮೃದ್ಧಿ ಮತ್ತು ಒಳಿತನ್ನು ಪ್ರಾರ್ಥಿಸಿಕೊಳ್ಳಲು ನಾಗಮಂಡಲವನ್ನು ನಡೆಸುವುದು ರೂಢಿಯಲ್ಲಿದೆ.

ಭಾರತದೆಲ್ಲೆಡೆ ನಾಗನನ್ನು ದೇವರೆಂದು ಪೂಜಿಸುವುದು ಸಾಮಾನ್ಯ. ನಾಗಪೂಜೆ ಯಾವಾಗಿನಿಂದ ಆಚರಣೆಯಲ್ಲಿ ಬಂದಿತೋ ನಿಖರವಾಗಿ ಹೇಳುವುದು ಹೇಗೆ ಸಾಧ್ಯ? ಮಹಾಭಾರತದಂತಹ ಮಹಾಕಾವ್ಯದಲ್ಲೂ ಹಲವಾರು ಪುರಾಣಗಳಲ್ಲೂ ನಾಗಪೂಜೆಯ ಪ್ರಸ್ತಾಪ ಇದೆಯಷ್ಟೆ? ಭಾರತದೆಲ್ಲೆಡೆ ಇರುವಂತೆ ತುಳುನಾಡಿನಲ್ಲಿ ಸಹಾ ನಾಗಪೂಜೆ ಇದ್ದರೂ ಇಲ್ಲಿ ನಾಗಾರಾಧನೆಗೆ ವಿಶೇಷವಾದ ಮಹತ್ವವಿದೆ. ‘ಬ್ರಹ್ಮ’ ಮತ್ತು ‘ನಾಗ’ ಇಲ್ಲಿನ ಎರಡು ಪ್ರಧಾನ ದೇವತೆಗಳು. ಅದರಲ್ಲೂ ನಾಗನನ್ನು ಕಂಡರೆ ಭಯ ಮತ್ತು ಭಕ್ತಿ ಎರಡೂ ಸ್ವಲ್ಪ ಹೆಚ್ಚೆ. ಊರಿಗೊಂದು ನಾಗಬನ ಹೇಗೂ ಇರುತ್ತದಾದರೂ ಕುಟುಂಬಕ್ಕೊಂದು ಪ್ರತ್ಯೇಕ ನಾಗಬನವೂ ಇರುತ್ತದೆ. ತುಳುನಾಡಿನಲ್ಲಿನ ನಾಗಾರಾಧನೆಯ ಆರಂಭವನ್ನೂ ಸಹಾ ನಿಖರವಾಗಿ ಗುರುತಿಸಲು ಸಾಧ್ಯವಿಲ್ಲ ಎಂಬುದು ಸಂಶೋಧಕರ ಅಭಿಪ್ರಾಯ. ದೇಶದ ಉತ್ತರ ಭಾಗದಿಂದ ಇಲ್ಲಿಗೆ ವಲಸೆ ಬಂದ ನಾಗಾರಾಧಾಕರಾದ ದ್ರಾವಿಡ ಜನಾಂಗವೇ ತಮ್ಮೊಡನೆ ನಾಗಪೂಜೆಯನ್ನೂ ತಂದಿರಬಹುದು. ಅದರೊಳಗೆ ಬ್ರಾಹ್ಮಣರ ಪ್ರವೇಶವಾದುದು ಅಥವ ಬ್ರಾಹ್ಮಣ ಸಂಸ್ಕೃತಿಯ ಲೇಪನವಾದದ್ದು ನಂತರದ ಬೆಳವಣಿಗೆ. ಏಕೆಂದರೆ ಇತಿಹಾಸಕಾರರ ಅಭಿಪ್ರಾಯದಂತೆ ದ್ರಾವಿಡ ನಿವಾಸಿಗಳು ಇಲ್ಲಿಗೆ ಬಂದ ಎಷ್ಟೋ ಶತಮಾನಗಳ ನಂತರವಷ್ಟೆ ಬ್ರಾಹ್ಮಣರ ಆಗಮನವಾಯಿತು. ಇಂದಿಗೂ ಸಹಾ ಆಚರಣೆಯಲ್ಲಿ ವಿಧಿ ವಿಧಾನಗಳನ್ನು ಪೂರೈಸಲು ಬ್ರಾಹ್ಮಣರ ಮಧ್ಯಸ್ತಿಕೆ ಬೇಕಾಗುತ್ತದಾದರೂ ನಾಗಮಂಡಲವನ್ನು ನಡೆಸುವವರು ಮಾತ್ರ ಇಲ್ಲಿನ ಮೂಲನಿವಾಸಿಗಳೆನ್ನಿಸಿಕೊಂಡವರೆ. ಹೆಚ್ಚಾಗಿ ಬಂಟ ಜನಾಂಗದವರು. ನಾಗವಂಶೀಯರೆಂದು ಕರೆಸಿಕೊಳ್ಳುವ ಅವರಿಗೆ ನಾಗ ಪ್ರಧಾನ ದೇವರು. ಕಷ್ಟ ಸುಖ ಸಮೃದ್ಧಿ ಸಂತೋಷ ಎಲ್ಲದಕ್ಕೂ ಅವರು ನಾಗನನ್ನೆ ಹೆಚ್ಚಾಗಿ ನಂಬುತ್ತಾರೆ.

ವರ್ಣಮಯ ನಾಗಮಂಡಲ.

ನಾಗಮಂಡಲವನ್ನು ಮುಖ್ಯವಾಗಿ ಸಂತಾನಾಪೇಕ್ಷೆಯಿಂದ ನಡೆಸುತ್ತಾರೆ. ಇತರ ಕಷ್ಟ ನಷ್ಟಗಳ ಪರಿಹಾರಾರ್ಥವಾಗಿಯೂ ನಡೆಸುವುದಿದೆ. ನಾಗಮಂಡಲವು ಭಕ್ತಿ ಪರವಶತೆಯ ಒಂದು ಸಂಕೀರ್ಣ ಆಚರಣೆಯಾಗಿರುವುದಷ್ಟೆ ಅಲ್ಲದೆ ಅದರಲ್ಲಿ ಬಣ್ಣಗಳ ಸಂಭ್ರಮ, ನೃತ್ಯ, ಸಂಗೀತ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ವೈಭವಯುತವಾಗಿರುವುದು ಅದರ ಜನಪ್ರಿಯತೆಗೆ ಕಾರಣವಾಗಿದೆ. ಆ ಕಾರಣದಿಂದಲೆ ಇಡೀ ರಾತ್ರೆ ನಡೆಯುವ ದೀರ್ಘ ಕಾಲೀನ ಆಚರಣೆ ಮುಗಿಯುವವರೆಗೂ ಬಂದ ಜನ ಮಿಸುಕಾಡದೆ ಕುಳಿತಿರುತ್ತಾರೆ.

ನಾಗಮಂಡಲ ನಡೆಯುವ ಚಪ್ಪರವೆ ಅತ್ಯಂತ ವೈಭವಯುತವಾದುದು.

ವಿಶಾಲ ಮೈದಾನದ ನಡುವಿನಲ್ಲಿ ದೊಡ್ಡದಾದ ಚಪ್ಪರವನ್ನು ಹಾಕಲಾಗುತ್ತದೆ. ಅಷ್ಟು ದೊಡ್ಡ ಚಪ್ಪರಕ್ಕೆ ನಡುವಿನಲ್ಲೆಲ್ಲೂ ಕಂಭಗಳು ಅಡ್ಡ ಬಾರದಂತೆ ಕಟ್ಟುವುದೂ ಒಂದು ಸವಾಲಾಗಿರುತ್ತದೆ. ಅದರ ಕಂಭಗಳೆಲ್ಲವನ್ನೂ ಅಡಿಕೆ ಗೊನೆ, ಅಡಿಕೆ ಸಿಂಗಾರ, ಸೀಯಾಳ ಮತ್ತು ಮಾವಿನಸೊಪ್ಪಿನಿಂದ ಅಲಂಕರಿಸಿರುತ್ತಾರೆ. ವೇದಿಕೆಯಲ್ಲಿ ಖಾಲಿ ಜಾಗವಿರುವಲ್ಲೆಲ್ಲ ನಾಗಮಂಡಲದ ಪ್ರಧಾನ ಪರಿಕರಗಳಾಲ್ಲೊಂದಾದ ‘ಅಡಿಕೆ ಸಿಂಗಾರ’ವನ್ನು ರಾಶಿರಾಶಿಯಾಗಿ ತಂದು ತುಂಬಿಸಿರುತ್ತಾರೆ. ಮಂಟಪದ ಒಳಭಾಗದಲ್ಲಿ ಸಂಪೂರ್ಣ ಹೂವಿನ ಅಲಂಕಾರವಿರುತ್ತದೆ. ಮಂಟಪದ ಮೇಲ್ಭಾಗದಲ್ಲಿ ನಾಗದೇವತೆಗಳ ಚಿತ್ರ ಮತ್ತು ಮ್ಯೂರಲ್‌ಗಳನ್ನು ಅಳವಡಿಸಿರುತ್ತಾರೆ. ಇಡೀ ಮಂಟಪವನ್ನು ವಿದ್ಯುತ್ ದೀಪದಿಂದ ಜಗಮಗಗೊಳಿಸಿದಾಗ ನೋಡಲು ಸ್ವಪ್ನಲೋಕವೊಂದು ತೆರೆದುಕೊಂಡ ಅನುಭವವಾಗದಿರದು!

  

ಆ ವರ್ಣವೈಭವದ ಮಂಟಪದ ಒಳಗೆ ವಿಶಾಲವಾದ ವೇದಿಕೆಯೊಂದನ್ನು ಸಿದ್ಧಗೊಳಿಸಲಾಗುತ್ತದೆ. ವೇದಿಕೆಯ ಮಧ್ಯಭಾಗದಲ್ಲಿ ದೊಡ್ಡದಾದ ಮಂಡಲವನ್ನು ರಚಿಸಲಾಗುತ್ತದೆ. ಅದೇ ನಾಗಮಂಡಲ. ಅದರ ಸುತ್ತಲೆ ಮುಖ್ಯ ಆಚರಣೆ ನಡೆಯುವುದು. ಅಷ್ಟು ದೊಡ್ಡದಾದ ಮಂಡಲವನ್ನು ರಚಿಸುವುದೂ ವಿಶೀಷ್ಟವಾದ ಕಲೆಗಾರಿಕೆಯೆ ಆಗಿರುತ್ತದೆ. ಅದನ್ನು ಬರೆಯುವವರು ವೈದ್ಯರೆಂಬ ಜನಾಂಗದವರು. ಅದು ಅವರ ವಂಶದ ಹಕ್ಕು. ಕಾಲುಬಲಿ (ನಾಲ್ಕುಮಂಡಲಗಳೂ) ಅರ್ಧಬಲಿ (ಎಂಟು ಮಂಡಲಗಳು) ಪೂರ್ಣಬಲಿ (ಹದಿನಾರು ಮಂಡಲ) ಹೀಗೆ ಯಾವ ರೀತಿಯ ಆರಾಧನೆ ನಡೆಯುತ್ತದೋ ಅದಕ್ಕೆ ಹೊಂದಿಕೊಂಡು ಚೌಕಾಕಾರದ, ಆಯತಾಕಾರದ ಅಥವ ಅಷ್ಟಭುಜಾಕೃತಿಯ ಮಂಡಲಗಳನ್ನು ರಚಿಸಲಾಗುತ್ತದೆ. ಕೆಲವೊಮ್ಮೆ ವೃತ್ತಾಕಾರದಲ್ಲೂ ಮಂಡಲದ ರಚನೆ ಇರುತ್ತದೆ. ಮಂಡಲವನ್ನು ರಚಿಸುವಾಗ ಸಹಾ ಕೆಂಪು, ಬಿಳಿ, ಹಸಿರು, ಹಳದಿ ಮತ್ತು ಕಪ್ಪು ಬಣ್ಣಗಳನ್ನು ಮಾತ್ರ ಉಪಯೋಗಿಸಬೇಕು ಮತ್ತು ಬಣ್ಣಗಳನ್ನೂ ಸಹ ನೈಸರ್ಗಿಕ ವಿಧಾನದಿಂದ ಪಡೆದುದಾಗಿರಬೇಕು ಎಂಬ ಕಟ್ಟಲೆ ಇದೆ. ಹಾಗಾಗಿ ಅರಿಶಿನ ಮತ್ತು ಸುಣ್ಣವನ್ನು ಬೆರೆಸಿ ಕೆಂಪು ಬಣ್ಣವನ್ನೂ, ಬಿಳಿ ಶೇಡಿ ಮಣ್ಣಿನಿಂದ ಬಿಳಿ ಬಣ್ಣವನ್ನೂ, ಎಲೆಗಳ ಪುಡಿಯಿಂದ ಹಸಿರು ಬಣ್ಣವನ್ನೂ, ಭತ್ತದ ಹೊಟ್ಟನ್ನು ಸುಟ್ಟು ಕಪ್ಪು ಬಣ್ಣವನ್ನೂ ತಯಾರಿಸಿಕೊಳ್ಳುತ್ತಾರೆ. ಹೀಗೆ ಪಂಚವರ್ಣದಿಂದ ರಚಿತವಾದ ಮಂಡಲದ ಸುತ್ತ ಅಕ್ಕಿ, ಅಡಿಕೆ ಸಿಂಗಾರ, ಬಾಳೆಗೊನೆಗಳನ್ನಿರಿಸಿ ಅದರ ಸುತ್ತಲೂ ದೀಪದ ಕಂಭಗಳನ್ನಿರಿಸುತ್ತಾರೆ.

ನಾಗಮಂಡಲದ ವಿಧಿಗಳು ಎರಡುದಿನಗಳ ಕಾಲ ನಡೆಯುತ್ತವಾದರೂ ಮಂಟಪದಲ್ಲಿ ನಡೆಯುವ ನಾಗನರ್ತನವೆ ಪ್ರಧಾನವಾದುದು. ನಾಗಬನದಲ್ಲಿ ಅರಿಸಿನ ಮಿಶ್ರಿತ ಹಾಲು ಮತ್ತು ಅಕ್ಕಿಹಿಟ್ಟು ಮಿಶ್ರಣದ ಅಭಿಷೇಕದ ಸೇವೆಯಿಂದ (ಹಾಲಿಟ್ಟು ಸೇವೆ)ಅರಂಭವಾಗುವ ಸಕಲ ಪೂಜಾವಿಧಿಗಳನ್ನು ಪೂರೈಸಿದ ನಂತರ ನಾಗಮಂಡಲ ನಡೆಸುವ ಕುಟುಂಬದ ಯಜಮಾನ, ಪಾತ್ರಿ, ನಾಗನರ್ತಕ, ವಾದ್ಯಗಾರರು, ಪುರೋಹಿತರು ಹೀಗೆ ಎಲ್ಲರ ಗುಂಪು ವೇದಿಕೆಗೆ ಬರುತ್ತದೆ. ಆ ವೇಳೆಗೆ ಸಂಪೂರ್ಣವಾಗಿ ಕತ್ತಲು ಕವಿದಿದ್ದು ನಾಗನರ್ತನಕ್ಕೆ ಸೂಕ್ತ ವಾತಾವರಣ ನಿರ್ಮಾಣವಾಗಿರುತ್ತದೆ. ನಾಗಪಾತ್ರಿ ಮತ್ತು ನಾಗನರ್ತಕ ಆ ಸಮಯದ ಪ್ರಧಾನ ಪಾತ್ರಧಾರಿಗಳು. ಅದರಲ್ಲಿ ಕೆಂಪು ವಸ್ತ್ರವನ್ನು ಮಾತ್ರ ಧರಿಸಿದ ಪಾತ್ರಿಯು ಮಾಧ್ಯಮವೆನ್ನಿಸಿದರೆ ಪೇಟ, ಕಪ್ಪು ಪೈಜಾಮ, ಸೀರೆ ಮತ್ತು ರವಿಕೆ ಧರಿಸಿದ ಅರ್ಧನಾರಿ ವೇಷದ ನಾಗನರ್ತಕನನ್ನು ಹೆಣ್ಣು ಹಾವೆಂದು ಪರಿಗಣಿಸಲಾಗುತ್ತದೆ. ಹಾಡು ಮತ್ತು ಸಂಗೀತದೊಡನೆ ನರ್ತನ ಆರಂಭವಾಗುತ್ತದೆ. ಕೈಯಲ್ಲಿ ಹಿಡಿದ ಢಕ್ಕೆಯನ್ನು ಬಾರಿಸುತ್ತ ಹಿನ್ನೆಲೆಯ ವಾದ್ಯಗಾರರ ನಾಗಸ್ವರದೊಡನೆ ಹಾವಿನ ಬಳುಕಾಟದಂತಹ ನರ್ತನ ಆರಂಭವಾಗುತ್ತದೆ. ಹಾಗೆ ನರ್ತಿಸುವ ಅರ್ಧನಾರಿ ಅಥವ ನಾಗಕನ್ನಿಕೆಯ ವೇಷಧಾರಿಯು ವೈದ್ಯರೆಂಬ ಜನಾಂಗದವರೆ ಆಗಿರಬೇಕು. ನರ್ತನದ ನಡುವೆ ಪಾತ್ರಧಾರಿಗಳ ನಡುವಲ್ಲಿ ಪ್ರಶ್ನೆ ಉತ್ತರಗಳಿರುತ್ತವೆ.

ರಾತ್ರೆಯಿಡೀ ಬಿಡುವಿಲ್ಲದಂತೆ ನಡೆಯುವ ನಾಗನರ್ತನ ಮುಂಜಾನೆ ಮುಗಿಯುವಾಗ ನಡೆಸಿದ ಕುಟುಂಬದವರ ಶ್ರೇಯೋಭಿವೃದ್ಧಿಗಾಗಿ ಹರಸಲಾಗುತ್ತದೆ. ಭಾವುಕರಾಗಿ ಕುಳಿತಿದ್ದ ಭಕ್ತರಿಗೆ ಪ್ರಸಾದ ವಿನಿಯೋಗವಾಗುತ್ತದೆ.

ದೋಷಪರಿಹಾರಾರ್ಥ.

ನಾಗಮಂಡಲದ ಆಚರಣೆಯಿಂದ ಸಂತೃಪ್ತಗೊಂಡ ನಾಗದೇವತೆ ಎಲ್ಲರಿಗೂ ಒಳ್ಳೆಯದನ್ನು ಮಾಡುತ್ತದೆನ್ನುವುದು ನಂಬಿಕೆ. ನಾಗಮಂಡಲದ ಪ್ರತಿಫಲವಾಗಿ ಮಕ್ಕಳಿಲ್ಲವಾದಲ್ಲಿ ಮಕ್ಕಳ ಲಾಭವಾಗುತ್ತದೆನ್ನುವುದೂ ಒಂದು ನಂಬಿಕೆ. ಜೀವನದ ಹಾದಿಯಲ್ಲಿ ವಿವಿಧ ಕಾರಣಗಳಿಂದ ಅಂಟಿಕೊಂಡ ದೋಷಗಳು ಪರಿಹಾರವಾಗಿ ಆರ್ಥಿಕ ಉನ್ನತಿ ಒದಗುತ್ತದೆನ್ನುವುದು ಮತ್ತೊಂದು ನಂಬಿಕೆ. ನಾಗಮಂಡಲವೆಂಬುದು ಅತೀ ಖರ್ಚಿನ ಧಾರ್ಮಿಕ ಆಚರಣೆಯಾದುದರಿಂದ ಹಣಕಾಸಿನ ಬಲವಿದ್ದವರೇ ಇದನ್ನು ನಡೆಸಲು ಸಾಧ್ಯ. ಕೆಲವೊಮ್ಮೆ ಸಾಮೂಹಿಕ ನೆಲೆಯಲ್ಲಿಯೂ ನಾಗಮಂಡಲ ನಡೆಸುವುದಿದೆ.  ಏನೆ ಆದರೂ ನಾಗಮಂಡಲಾಚರಣೆಯ ನಂತರ ದೊರಕುವ ಮಾನಸಿಕ ನೆಮ್ಮದಿ ಹಾಗೂ ನಿರಾಳತೆಗೆ ಬೆಲೆ ಕಟ್ಟಲು ಸಾಧ್ಯವೆ ಇಲ್ಲ.

ನಾಗಮಂಡಲದ ನಾಗನರ್ತನವು ನಿಜಕ್ಕೂ ನವರಸಗಳ ಸಂಗಮ. ನಾಗ ಮತ್ತು ನಾಗನರ್ತಕಿ ಮುಖಾಮುಖಿಯಾದಾಗ ಉಪಯೋಗವಾಗುವ ಸಾಹಿತ್ಯ ಆಧಾರಿತ ಗೀತೆಗಳು, ಸಾಹಿತ್ಯಮಯವಾದ ಸಂಭಾಷಣೆಗಳು, ಸಿಂಗಾರದಿಂದ ಬಡಿದುಕೊಳ್ಳುವ ನಾಗದೇವನ ಆವೇಶ, ನಾಗನರ್ತಕಿಯ ನರ್ತನ, ಢಮರುವಿನ ವಿಶಿಷ್ಟವಾದ ಲಯಬದ್ಧವಾದ ಸ್ವರ, ಹಿಮ್ಮೇಳದ ವಾದ್ಯಗಳು ಇವೆಲ್ಲವೂ ವಿಶಿಷ್ಟವಾದ ವರ್ಣನಾತೀತವಾದ ಅನುಭವವನ್ನು ನೀಡುತ್ತವೆ.

  

ಬೇಸಿಗೆ ಕಾಲದಲ್ಲಿ ಮೇ ತಿಂಗಳವರೆಗೆ ಅಥವ ಮಳೆಗಾಲ ಆರಂಭವಾಗುವವರೆಗೂ ನಡೆಯುವ ನಾಗಮಂಡಲ ತುಳುನಾಡಿನಲ್ಲಿ ಮಾತ್ರ ಕಂಡುಬರುವ ಒಂದು ಅನನ್ಯ ಧಾರ್ಮಿಕ ವಿಧಿ. ಹಾಗಾಗಿಯೆ ಇದನ್ನು ‘ತುಳುನಾಡಿನ ಹೆಗ್ಗುರುತುಗಳಲ್ಲೊಂದು’ ಎಂದು ಭಾವಿಸಲಾಗುತ್ತದೆ. ಮೂಲಭೂತವಾಗಿ ಇದೊಂದು ಧಾರ್ಮಿಕ ನಂಬುಗೆಯ ಚಟುವಟಿಕೆಯಾದರೂ ಇದನ್ನೊಂದು ಕಲಾಪ್ರಕಾರವೆಂದೂ ಭಾವಿಸಲಾಗುತ್ತದೆ. ಯಾಕೆಂದರೆ ಇದರಲ್ಲಿ ಸಾಹಿತ್ಯವಿದೆ, ಸಂಗೀತವಿದೆ ಮತ್ತು ಅದರೊಡನೆ ನೃತ್ಯವೂ ಸೇರಿಕೊಂಡು ಲಲಿತಕಲೆಗಳ ಸಂಗಮದಂತಿದೆ. ಪ್ರಶ್ನೋತ್ತರಗಳ ರೀತಿಯ ಸಂಭಾಷಣೆಗಳಿಂದ ಇದಕ್ಕೊಂದು ನಾಟಕೀಯತೆಯೂ ಲಭ್ಯವಾಗುತ್ತದೆ. ನಾಗನರ್ತನದ ಹೆಜ್ಜೆಗಳಲ್ಲಿ ಯಕ್ಷಗಾನದ ಕುಣಿತದ ಪ್ರಭಾವವನ್ನೂ ಗುರುತಿಸಲಾಗುತ್ತದೆ. ಒಟ್ಟಾರೆ ನಾಗಮಂಡಲವೆಂದರೆ ಅದೊಂದು ಭಕ್ತಿ ಮಾರ್ಗವಾಗಿರುವಂತೆ ಕಲಾಪ್ರಕಾರವೂ ಆಗಿದೆ. ಅಲ್ಲಿ ಭಯವಿದೆ, ಭಕ್ತಿಯಿದೆ, ನಂಬಿಕೆಯಿದೆ, ಕುತೂಹಲವಿದೆ, ಅಚ್ಚರಿಯಿದೆ ಹಾಗೆ ಬೆರಗೂ ಇದೆ.

ಇವೆಲ್ಲ ಇರುವುದರಿಂದಲೆ ನಾಗಮಂಡಲವೆಂಬ ಆರಾಧನಾ ವಿಧಿಯು ಸಹಸ್ರಾರು ವರ್ಷಗಳಿಂದಲೂ ನಿರಂತರವಾಗಿದೆ.