ಆನಂದಕಂದರು ಕಾವ್ಯ, ಕಥೆ-ಕಾದಂಬರಿಗಳಂತೆ ನಾಟಕಗಳನ್ನೂ ರಚಿಸಿ ಖ್ಯಾತನಾಮರಾಗಿದ್ದಾರೆ. ಇವರ ನಾಟಕಗಳೆಂದರೆ ರಂಗಭೂಮಿಯ ಪ್ರದರ್ಶನಗಳಾಗದೆ ಆಕಾಶವಾಣಿಗಾಗಿ ಬರೆದ ರೂಪಕಗಳಾಗಿವೆ. ಬಾನುಲಿಗಾಗಿ ಪ್ರಸಾರವಾಗುವ ಕಿರುನಾಟಕಗಳನ್ನು ರೂಪಕಗಳೆಂದೂ ಹೇಳುತ್ತಾರೆ. ಆನಂದಕಂದರು ಇವುಗಳನ್ನೇ ‘ತರಂಗರೂಪಕ’ ಎಂದು ಕರೆದರು.

“…ಇಲ್ಲಿ ಕೇವಲ ಧ್ವನಿಯೊಂದರ ಸಾಧನದಿಂದಲೇ ಕತೆಯನ್ನೂ, ಸನ್ನಿವೇಶವನ್ನೂ, ರಸಾನುಭವಗಳನ್ನೂ ಅಭಿವ್ಯಕ್ತಗೊಳಿಸಬೇಕಾಗುತ್ತದೆ… ಕೇವಲ ಧ್ವನಿ ವಿಕಾರಗಳಿಂದಲೇ ಎಲ್ಲವನ್ನು ಪೂರ್ಣಗೊಳಿಸಿ ತೋರಿಸಬೇಕಾಗುವುದು. ಆದುದರಿಂದ ರಂಗಭೂಮಿಯ ನಾಟಕಗಳಿಗಿಂತ ತರಂಗಭೂಮಿಯ ನಾಟಕಗಳನ್ನು ಬರೆಯುವುದು ಹೆಚ್ಚು ಪ್ರಯಾಸದ ಕಲಾ ಸಿದ್ಧಿಯಾಗಿದೆ.”-ಎಂದು ಆನಂದಕಂದರೇ ತಮ್ಮ ಬಾನುಲಿ ರೂಪಕಗಳಾದ ‘ಬೆಳವಡಿ ಮಲ್ಲಮ್ಮ’ ಹಾಗೂ ‘ಬೆಂದ ಹೃದಯ’ದ ಮುನ್ನುಡಿಗಳಲ್ಲಿ ಹೇಳಿಕೊಂಡಿದ್ದಾರೆ.

ಆನಂದಕಂದರು ಆಕಾಶವಾಣಿಗಾಗಿ ಬರೆದ ರೂಪಕಗಳ ಸಂಖ್ಯೆ ೩೨ ಎಂದರೆ, ಇವರ ಆಕಾಶವಾಣಿ ನಾಟಕಗಳ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಇವುಗಳಲ್ಲಿ ೧೭ ರೂಪಕಗಳು ಸೇರಿ ನಾಲ್ಕು ಪುಸ್ತಕಗಳಲ್ಲಿ ಪ್ರಕಟವಾಗಿದ್ದು, ಇನ್ನೂ ೨೦ ರೂಪಕಗಳು ಪುಸ್ತಕಗಳಲ್ಲಿ ಸೇರದೆ ಹಾಗೇ ಉಳಿದಿವೆ. ೧೯೫೧ ರಲ್ಲಿ ಪ್ರಕಟವಾದ ‘ಬೆಳವಡಿ ಮಲ್ಲಮ್ಮ’ ಈ ಪುಸ್ತಕದಲ್ಲಿ ಆರು ರೂಪಕಗಳಿವೆ. ಬೆಳವಡಿ ಮಲ್ಲಮ್ಮ ಹಾಗೂ ಮಹಾರಾಷ್ಟ್ರದ ಶೂರ ಛತ್ರಪತಿ ಶಿವಾಜಿಯ ಐತಿಹಾಸಿಕ ಹಿನ್ನೆಲೆಯ ಚಿತ್ರಣ ‘ಬೆಳವಡಿ ಮಲ್ಲಮ್ಮ’ ರೂಪಕದಲ್ಲಿದೆ. ಮಲ್ಲಮ್ಮನ ಧೀರ ವೃತ್ತಿ, ಶಿವಾಜಿಯ ಪರದಾರ ಸೋದರತ್ವಗಳ ಜತೆ ಕನ್ನಡಿಗರ ಯುದ್ಧ ಪದ್ಧತಿಯ ಚಿತ್ರಣವೂ ಸಾದಂರ್ಭಿಕವಾಗಿ ಬಂದಿದೆ.

ಎರಡನೆಯ ರೂಪಕ ‘ನವರಾತ್ರಿ’ಯಲ್ಲಿ ಕರ್ನಾಟಕದ ವಿಶಿಷ್ಟ ನಾಡಹಬ್ಬವಾದ ನವರಾತ್ರಿಯ ಸಾಂಸ್ಕೃತಿಕ ಪರಿಚಯವು ವಿಜಯನಗರ ಸಾಮ್ರಾಜ್ಯದ ಹಿನ್ನೆಲೆಯಲ್ಲಿದೆ. ಕರ್ನಾಟಕದ ಇತಿಹಾಸ ಹಾಗೂ ಸಂಸ್ಕೃತಿಯನ್ನು ಅರೆದು ಕುಡಿದಿದ್ದ ಆನಂದಕಂದರು ತಮ್ಮ ಇತಿಹಾಸ ಪ್ರಜ್ಞೆಯನ್ನು ಈ ರೂಪಕದಲ್ಲಿ ಧಾರಾಳವಾಗಿ ಉಪಯೋಗಿಸಿಕೊಂಡಿದ್ದಾರೆ. ಮೂರನೆಯ ರೂಪಕ ‘ಬಲಿಚಕ್ರವರ್ತಿ’ಯ ಪೌರಾಣಿಕ ಕಥೆಯನ್ನು ಹೊಸ ದೃಷ್ಟಿಯಿಂದ ನಿರೂಪಿಸಿದ್ದಾರೆ. ಬಲಿ-ವಾಮನರ ಮನಮುಟ್ಟುವ ಸಂವಾದ, ಹಿನ್ನೆಲೆಯಾಗಿ ಬಂದ ಹಾಡುಗಳು ಇವುಗಳಿಂದ ಈ ರೂಪಕ ಸುಂದರವಾಗಿ ಮೂಡಿ ಬಂದಿದೆ.

ನಾಲ್ಕನೆಯ ರೂಪಕ ‘ಅಮೃತಾತ್ಮ’ ಭಾರತ ಸ್ವಾತಂತ್ಯ್ರ ಪಡೆದ ಬಳಿಕ ಜರುಗಿದ ಅನಾಹುತಗಳ ಹಿನ್ನೆಲೆಯಲ್ಲಿ ನಿರೂಪಿತವಾಗಿದೆ. ಗಾಂಧೀಜಿ ಮೊದಲಾದ ರಾಷ್ಟ್ರೀಯ ಮುಖಂಡರು ಅಗಲಿದ ಬಳಿದ ದೇಶ ಎದುರಿಸಬಹುದಾದ ಸಮಸ್ಯೆಗಳಲ್ಲಿಯೂ ಆಶಾಕಿರಣ ಮೂಡವಂತಿದ್ದು, ಆ ರೀತಿಯ ರಾಷ್ಟ್ರದ ಹಿತಚಿಂತನೆಯಲ್ಲಿ ಒಳ್ಳೆಯದನ್ನು ಬಯಸುವ ನಾಟಕಕಾರರ ಆಶಯ ಚೆನ್ನಾಗಿ ನಿರೂಪಿತವಾಗಿದೆ. ಜನಜೀವನ ರೂಪಕ ಎಂದು ಆನಂದಕಂದರೇ ಕರೆದ ‘ತಂಬಿಟ್ಟು’ ಉತ್ತರ ಕರ್ನಾಟಕದ ವಿಶಿಷ್ಟ ಹಬ್ಬವಾದ ನಾಗರಪಂಚಮಿಯನ್ನು ಕುರಿತಾಗಿದೆ. ಮಹಿಳೆಯರು ಹಾಗೂ ಮಕ್ಕಳಿಗೆ ತುಂಬ ಹಿಡಿಸುವ ವಸ್ತುವನ್ನೊಳಗೊಂಡ ಈ ರೂಪಕದಲ್ಲಿ ತಮ್ಮ ಜನಪ್ರಿಯ ಜಾನಪದ ಧಾಟಿಯ ಗೀತೆಗಳನ್ನು, ಲಾವಣಿಗಳನ್ನು, ಪಂಜೆ ಮಂಗೇಶರಾಯರ ‘ನಾಗರ ಹಾವೇ’ ಎಂಬ ಪ್ರಸಿದ್ಧ ಪದ್ಯವನ್ನು ಹಿನ್ನೆಲೆಯಾಗಿ ಸೇರಿಸಿಕೊಂಡಿದ್ದು, ರೂಪಕದ ಸೊಗಸು ಹೆಚ್ಚಿದೆ. ಶಾಲಾ ಮಕ್ಕಳಿಗಾಗಿಯೇ ಬರೆದ ‘ನಾನೇನಾಗುವೆ?” ಈ ರೂಪಕ ಈ ಸಂಕಲನದಲ್ಲಿ ಆರನೆಯದು. ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶೈಕ್ಷಣಿಕ ಪ್ರವಾಸಕ್ಕೆ ಹೋದಾಗ, ನಡೆಯುವ ಒಂದು ರಂಜನೆಯ ಕಾರ್ಯಕ್ರಮದಲ್ಲಿ, ಎಲ್ಲ ವಿದ್ಯಾರ್ಥಿಗಳು ಮುಂದೆ ‘ನಾನೇನಾಗುವೆ?’ ಎಂಬ ಚರ್ಚೆಯಲ್ಲಿ ತಮಗೆ ತಿಳಿದಂತೆ, ತಮ್ಮ ಭವಿಷ್ಯತ್ತಿನ ಬಗೆಗೆ ಹೇಳಿಕೊಳ್ಳುವರು. ಮಕ್ಕಳ ಮಾನಸಿಕ ಸ್ತರಗಳನ್ನು ಚಿತ್ರಿಸುವ ಈ ರೂಪಕ, ಒಂದು ಬಗೆಯ ಬಾಲಮನೋವಿಜ್ಞಾನವನ್ನು ಒಳಗೊಂಡಿದೆ ಎಂದು ಹೇಳಬಹುದು.

೧೯೫೪ ರಲ್ಲಿ ಪ್ರಕಟವಾದ ಆನಂದಕಂದರ ‘ಬೆಂದ ಹೃದಯ’ ಎರಡನೆಯ ರೂಪಕ ಸಂಗ್ರಹ. ಇದರಲ್ಲಿ ಐದು ಬಾನುಲಿ ರೂಪಕಗಳಿವೆ. ಅಸಂತುಷ್ಟಳಾದ ಓರ್ವ ದುಷ್ಟ ಸ್ತ್ರೀ ಒಂದು ಸಂಸಾರವನ್ನು ಮಣ್ಣುಗೂಡಿಸುವ ಕಟುಚಿತ್ರಣ ‘ಬೆಂದ ಹೃದಯ’ದಲ್ಲಿದೆ. ಈ ಸಾಮಾಜಿಕ ರೂಪಕ ದುಷ್ಟ ಸ್ವಭಾವದಿಂದಾಗುವ ಅನಾಹುತದ ಬಗೆಯನ್ನು ಕರುಳು ಕಲಕುವಂತೆ ನಿರೂಪಿಸುತ್ತದೆ. ಆನಂದಕಂದರು ತಮ್ಮ ಕಥೆ ‘ಕಾಣದ ಕೈ’ಯನ್ನು ಆಧರಿಸಿ ಇದೇ ಹೆಸರಿನ ರೂಪಕ ರಚಿಸಿದ್ದಾರೆ. ಸಂದೇಹದ ಸ್ವಭಾವದ ಪರಿಣಾಮದಿಂದಾಗುವ ಅನಾಹುತದ ಚಿತ್ರಣವನ್ನು ಗ್ರಾಮೀಣ ಬದುಕಿನ ಹಿನ್ನೆಲೆಯಲ್ಲಿ ರೂಪಿಸಿದ ಪ್ರಸಿದ್ಧ ಕತೆ ಬಾನುಲಿ ರೂಪಕದಲ್ಲಿಯೂ ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿದೆ.

ಮೂರನೆಯ ರೂಪಕ ಪೌರಾಣಿಕ ಹಿನ್ನೆಲೆಯ ‘ಶಿವಭಕ್ತ ನಂದನಾರ್’. ೧೨ನೆಯ ಶತಮಾನದ ತಮಿಳುನಾಡಿನ ಬಾಲಕ ತನ್ನ ಭಕ್ತಿಯಿಂದ ಶಿವನನ್ನು ಒಲಿಸಿಕೊಂಡ ಕಥೆಯ ಹಂದರದ ಮೇಲೆ ಈ ರೂಪಕ ರಚಿತವಾಗಿದೆ. ನಾಲ್ಕನೆಯ ರೂಪಕ ವಿಜಯನಗರ ಸಾಮ್ರಾಜ್ಯದ ವೈಭವವನ್ನು ನಿರೂಪಿಸುವ ‘ನವರಾತ್ರಿ’ ಐತಿಹಾಸಿಕ ವಸ್ತುವನ್ನೊಳಗೊಂಡಿದೆ. ಈ ಸಂಗ್ರಹದ ಕೊನೆಯ ರೂಪಕ ‘ಹುಡುಗರ ಆಟ’ ಇದು ನಾಲ್ಕು ಜನ ಉಡಾಳ ಹುಡುಗರ ಮಾತುಗಳ ಹಿನ್ನೆಲೆಯಾಗಿ ಮೂಡಿಬಂದಿದೆ. ಸಾಮಾಜಿಕ, ಪೌರಾಣಿಕ ,ಐತಿಹಾಸಿಕ ವಿಷಯ ವಸ್ತುವನ್ನೊಳಗೊಂಡ ಈ ಎಲ್ಲ ರೂಪಕಗಳು ಜನ ಮೆಚ್ಚುಗೆ ಗಳಿಸಿದ್ದವು.

‘ಮುಂಡರಿಗೆಯ ಗಂಡುಗಲಿ’ ೧೯೬೨ ರಲ್ಲಿ ಪ್ರಕಟವಾದ ಒಂದು ಐತಿಹಾಸಿಕ ರೂಪಕ. ೧೯೫೨ ರಲ್ಲಿ ಬ್ರಿಟಿಶ್‌ ಸತ್ತೆಯ ವಿರುದ್ಧ ಕರ್ನಾಟಕದಲ್ಲಿ ಜರುಗಿದ ಬಂಡಾಯದಲ್ಲಿ ಮುಂಡರಗಿಯ ನಾಡಗೌಡನಾದ ಭೀಮರಾಯ ಹೋರಾಟದ ಕಥಾವಸ್ತು ಇದರಲ್ಲಿದೆ. ಭೀಮರಾಯನ ಸಾಹಸ, ಆತನ ಉಜ್ವಲವಾದ ರಾಷ್ಟ್ರಭಕ್ತಿಯ ಹಿನ್ನೆಲೆಯಲ್ಲಿ ಆತನ ಪಾತ್ರ ಪ್ರಭಾವಪೂರ್ಣವಾಗಿ ಮೂಡಿಬಂದಿದ್ದು, ಇಲ್ಲಿ ದೇಸಿ ನುಡಿಯ ಸಂವಾದದಿಂದ ರೂಪಕ ಸಮರ್ಥವಾಗಿ ನಿರೂಪಿತವಾಗಿದೆ.

ಐವರು ಧಾರ್ಮಿಕ ಮಹಾನುಭಾವಿಗಳ ಆದರ್ಶ ಬದುಕನ್ನು, ಅವರ ಉದಾತ್ತ ವಿಚಾರಗಳನ್ನು ‘ಪಂಚಗಂಗಾ’ ಎಂಬ ೧೯೬೩ ರಲ್ಲಿ ಪ್ರಕಟವಾದ ರೂಪಕಗಳ ಈ ಸಂಗ್ರಹದಲ್ಲಿ ಬಿಂಬಿಸಿದ್ದಾರೆ. ‘ಪವಿತ್ರಭಾವತರಂಗಿಣಿಯ ಪ್ರವಾಹವೇ ಈ ರೂಪಕಗಳ ಜೀವಾಳ’ ಎಂದು ಆನಂದಕಂದರು ಹೇಳಿಕೊಂಡಿದ್ದಾರೆ. ವೈಷ್ಣವ ಸಂತ ಸಾಧಕಿ ‘ಹೆಳವನ ಕಟ್ಟೆ ಗಿರಿಯಮ್ಮ’ನ ಹಾಡುಗಳ ಹಿನ್ನೆಲೆಯಲ್ಲಿ ಈ ಹೆಸರಿನ ರೂಪಕ ಮೂಡಿಬಂದಿದೆ. ಗಿರಿಯಮ್ಮನ ಉನ್ನತ ಭಕ್ತಿಭಾವದ ನಿರೂಪಣೆ ಇದರಲ್ಲಿದೆ. ದಾಸಶ್ರೇಷ್ಠ ಪರುಂದರರ ಬದುಕಿನ ಸಂದರ್ಭವನ್ನೊಳಗೊಂಡ ರೂಪಕ ನಮ್ಮ ಭಾಗ್ಯ ದೊಡ್ಡದೊ ನಿಮ್ಮ ಭಾಗ್ಯ ದೊಡ್ಡದೊ’ ಪುರಂದರದಾಸರ ಭಕ್ತಿಯ ಮಹತಿಸಾರುವ, ನಿಜವಾದ ಭಿಕ್ಷೆಯನ್ನು ಪರಿಚಯಿಸಿಕೊಡುವ ಪ್ರಸಂಗ ಇದಾಗಿದೆ.

ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಮಾಧವಾಚಾರ್ಯರ ಸಾಧನೆಯ ಚಿತ್ರಣ ‘ಮಾಧವ ಮಹಿಮಾ ದರ್ಶನ’ ಈ ರೂಪಕದಲ್ಲಿ ಒಡಮೂಡಿದೆ. ವೇದಗಳನ್ನು ಗಂಟು ಕಟ್ಟಿಟ್ಟು ಸಂದರ್ಭಕ್ಕೆ ಅನುಸರಿಸಿ ಖಡ್ಗ ಧರಿಸುವ ಅವಶ್ಯಕತೆಯನ್ನು ಚೆನ್ನಾಗಿ ನಿರೂಪಿಸಿದ್ದಾರೆ. ಬಾಲ್ಯದಲ್ಲಿಯೇ ಪ್ರಕಾಂಡ ಪಾಂಡಿತ್ಯ ಪಡೆದ ಶಂಕರಾಚಾರ್ಯರು ನರ್ಮದಾ ತೀರದ ಗೋವಿಂದ ಭಗವತ್ಪಾದರಿಂದ ಸಂನ್ಯಾಸ ದೀಕ್ಷೆ ಪಡೆದು ಬದರಿಕಾಶ್ರಮಕ್ಕೆ ತೆರಳುವ ಚಿತ್ರಣ ‘ಶಂಕರಾಚಾರ್ಯರು’ ಈ ರೂಪಕದಲ್ಲಿ ಇದೆ. ಈ ಸಂಕಲನದ ಕೊನೆಯ  ರೂಪಕ ‘ಭಕ್ತ ಸುದಾಮ’. ಕೃಷ್ಣ ಸುದಾಮರ ಉದಾತ್ತ ಸ್ನೇಹ-ಸಂಬಂಧವನ್ನು ಪರಿಚಯಿಸುವ ಪ್ರಸಂಗವಿದು. ಈ ಸಂಕಲನದ ರೂಪಕಗಳಲ್ಲಿಯೂ ಆನಂದಕಂದರ ಐತಿಹಾಸಿಕ ಹಾಗೂ ಪೌರಾಣಿಕ ಪ್ರಜ್ಞೆ ದಟ್ಟವಾಗಿ ಮೂಡಿಬಂದಿದೆ.

ಆಕಾಶವಾಣಿಯ ತಂತ್ರವನ್ನಾಧರಿಸಿ ಬರೆದ ಆನಂದಕಂದರ ಹೆಚ್ಚಿನ ರೂಪಕಗಳು ಯಶಸ್ವಿಯಾಗಿ ಮೂಡಿಬಂದಿದ್ದು ಮೇಲಿನವು ಮಾತ್ರ ಪುಸ್ತಕ ರೂಪದಲ್ಲಿ ಸೇರಿಕೊಂಡಿವೆ. ಸರ್ವಜ್ಞ, ಗಂಡುಗಲಿ ಕುಮಾರರಾಮ, ಅಂಗೂಲಿಮಾಲ, ಮಮತೆಯ ಮುಡಿಪು (ಇವರದೇ ಕಥೆ ಆಧಾರಿತ), ಕಾರಹುಣ್ಣಿಮೆಯಂಥ ಖ್ಯಾತಿ ಪಡೆದ ೨೦ ಬಾನುಲಿ ರೂಪಕಗಳು ಗ್ರಂಥ ರೂಪದಲ್ಲಿ ಬರದೆ, ಅವುಗಳನ್ನು ಓದಿ ರಸಾಸ್ವಾದನೆ ಮಾಡುವ ಸಂದರ್ಭ ಬರದೇ ಹೋಗಿದೆ.