ಕೃಷಿ ಮತ್ತು ಗ್ರಾಮೀಣ ಪತ್ರಿಕೋದ್ಯಮದ ವಿಚಾರ ಬಂದಾಗ ನಾವು ತಪ್ಪದೇ ಗಮನಿಸಬೇಕಾದ ವಿಷಯ ನಾಟಿ ತಳಿಗಳ ಸಂರಕ್ಷಣೆ. ಇತ್ತೀಚೆಗೆ ಕೃಷಿ ಕ್ಷೇತ್ರಕ್ಕೆ  ಹೆಚ್ಚು ಅಗತ್ಯವೆನಿಸಿರುವ ಹಾಗೂ ಚರ್ಚಿಸಲ್ಪಡುತ್ತಿರುವ ವಿಚಾರ ಇದು. ಈ ಕಾರಣದಿಂದ ಹಾಗೂ ಈ ವಿಚಾರದ ಬಗ್ಗೆ ಮಾಧ್ಯಮಗಳು ಗಮನ ಹರಿಸಿರುವುದು ಕಡಿಮೆಯಾದ್ದರಿಂದ  ಬರಹಗಾರರಿಗೆ ಹೆಚ್ಚು ಸುಳಿವುಗಳು ಈ ಕ್ಶೇತ್ರದಲ್ಲಿ ಲಭ್ಯವಾಗುತ್ತವೆ.

ನಾವು ನಮ್ಮ ಬರವಣಿಗೆಯನ್ನು ಪ್ರಾರಂಭಿಸಿದ್ದೇ ನಾಟಿ ಬೀಜಗಳ ಕುರಿತು ಬರೆಯುವ ಮೂಲಕ. ಈ ವಿಚಾರದ ಬಗ್ಗೆ ನಾವು ಹೆಚ್ಚೆಚ್ಚು ಬರೆಯಲು ಕಾರಣ ನಮ್ಮ ಕಾರ್ಯ ಕ್ಷೇತ್ರವೇ ನಾಟಿ ಬೀಜ ಸಂರಕ್ಷಣೆಯಾಗಿತ್ತು. ನಾಟಿ ತಳಿಗಳ ಹುಡುಕಾಟ, ಅವುಗಳ ಬಗ್ಗೆ ಅಧ್ಯಯನ, ಸಂಶೋಧನೆ, ಸಂಗ್ರಹಿಸಿದ ತಳಿಗಳನ್ನು ರೈತರ ಮೂಲಕ ವಿತರಣೆ, ಬೆಳೆ ಪದ್ಧತಿಗಳ ದಾಖಲಾತಿ, ಹಳ್ಳಿಗಳ ಜೊತೆ ನಿರಂತರ ಒಡನಾಟವಿದ್ದುದರಿಂದ ಅವುಗಳ ಬಗ್ಗೆ ಬರೆಯುವುದು ನಮಗೆ ಸುಲಭವಾಗಿತ್ತು. ಆ ಮೂಲಕ ಜನರಲ್ಲಿ ಅರಿವು ಮೂಡಿಸುವುದೂ ಸಹ ನಮ್ಮ ಉದ್ದೇಶವಾಗಿತ್ತು.

ಹೊಸದಾಗಿ ಬರವಣಿಗೆ ಆರಂಭಿಸುವವರಿಗೆ ನಾಟಿ ತಳಿ, ಬೀಜ ಸಂರಕ್ಷಣೆ, ಈ ಬಗೆಗಿನ ರೈತರ ಜ್ಞಾನ, ವಿವಿಧ ಪದ್ಧತಿಗಳನ್ನು ಕುರಿತು ಬರೆಯುವುದು ಸುಲಭ. ನಾಟಿ ತಳಿಗಳು ಕಣ್ಮರೆಯಾಗುತ್ತಿರುವ ಈ ಸಂದರ್ಭದಲ್ಲಿ ಬರಹಗಾರರು ಈ ಕುರಿತು ಬರೆಯುವುದು ಜವಾಬ್ದಾರಿಯೂ ಹೌದು.

ನಾಟಿ ತಳಿಗಳ ಬಗ್ಗೆ ಏಕೆ ಬರೆಯಬೇಕು?

 • ದೇಸೀ ತಳಿಗಳು ಮೂಲೆ ಗುಂಪಾಗಿವೆ, ಸೂಕ್ತ ದಾಖಲೆ ಮತ್ತು ಕಾಳಜಿಯಿಲ್ಲದೆ ಎಷ್ಟೋ ತಳಿಗಳು ಪೂರ್ತಿ ಕಣ್ಮರೆಯಾಗಿವೆ.
 • ಈ ತಳಿಗಳ ಕುರಿತ ಅಪರೂಪದ ರೈತ ಜ್ಞಾನ ನಶಿಸುತ್ತಿದೆ.
 • ಸರ್ಕಾರಗಳು, ಕೃಷಿ ವಿಶ್ವವಿದ್ಯಾಲಯಗಳು ಈ ಬಗ್ಗೆ ನಿರ್ಲಕ್ಷ್ಯ ವಹಿಸಿವೆ.
 • ಸೂಕ್ತ ದಾಖಲೆ ಇಲ್ಲದೆ ನಮ್ಮ ಅಮೂಲ್ಯ ತಳಿಗಳು ಪೇಟೆಂಟ್ ಹಾವಳಿಗೆ ತುತ್ತಾಗುತ್ತಿವೆ. ಕಂಪನಿಗಳ ಮತ್ತು ಬಲಾಢ್ಯ ದೇಶಗಳ ಪಾಲಾಗುತ್ತಿವೆ.
 • ಬರೆಯುವುದರ ಮೂಲಕ ತಳಿ ಪ್ರಸಾರ ಮಾಡಬಹುದು
 • ಪ್ರಚಲಿತ ಮಾಧ್ಯಮಗಳು ನಿರ್ಲಕ್ಷ್ಯ ವಹಿಸಿರುವುದು

ನಾವು ಲೇಖನ ಬರೆಯುವುದರಿಂದ ಮೇಲಿನ ಉದ್ದೇಶಗಳು ಸಂಪೂರ್ಣವಲ್ಲದಿದ್ದರೂ ಸಹ ಸ್ವಲ್ಪಮಟ್ಟಿಗಾದರೂ ಈಡೇರುವುದರಿಂದ ಇದೊಂದು ಜವಾಬ್ದಾರಿ ಎಂದು ನಮ್ಮ ಅನಿಸಿಕೆ.

ಹೇಗೆ ಬರೆಯುವುದು?

ತಿಳಿವಳಿಕೆ ಅಗತ್ಯ : ನಾಟಿ ತಳಿಗಳ ಕುರಿತು ಬರೆಯುವವರಿಗೆ ಆ ಕ್ಷೇತ್ರದ ಬಗ್ಗೆ ಕೆಲವು ಮೂಲಭೂತ ಅಂಶಗಳ ತಿಳಿವಳಿಕೆ ಅಗತ್ಯ. ಅಂದರೆ ನಮ್ಮ ಸುತ್ತಮುತ್ತಲಿನ, ನಮ್ಮ ಪ್ರದೇಶದ, ನಮ್ಮ ರಾಜ್ಯದ ವಿವಿಧ ಭಾಗಗಳ ಹಾಗೂ ಸಾಧ್ಯವಾದರೆ ನಮ್ಮ ದೇಶದ  ಮುಖ್ಯ ಬೆಳೆಗಳು, ಮಿಶ್ರ ಬೆಳೆಗಳು, ತೃಣ ಧಾನ್ಯಗಳು, ತರಕಾರಿ ಬೆಳೆಗಳು, ಕಾಳುಬೆಳೆಗಳು, ಬೆಳೆ ಪದ್ಧತಿಗಳು ಇತ್ಯಾದಿಗಳ ಗ್ಗೆ ಮಾಹಿತಿ ಹೊಂದಿರಬೇಕು. ಆಯಾ ಬೆಳೆಗಳ ತಳಿಗಳ ಹೆಸರುಗಳನ್ನು ತಿಳಿದುಕೊಂಡಿದ್ದರೆ ಮತ್ತೂ ಒಳ್ಳೆಯದು.

(ಬೆಳೆ ಮತ್ತು ತಳಿಗಿರುವ ವ್ಯತ್ಯಾಸ: ಭತ್ತ ಬೆಳೆ, ಅದರಲ್ಲಿ ದೊಡ್ಡಿ ಭತ್ತ, ಸ್ವಾತಿ ಭತ್ತ, ರತ್ನಚೂಡಿ, ಹಂಸ, ಗೀಜಗಾರು, ಜೋಳಗ ಮುಂತಾದವು ತಳಿಗಳು. ಹಾಗೆಯೇ ಬದನೆ ಬೆಳೆಯಲ್ಲಿ ಮುಳ್ಳು ಬದನೆ, ಗುಳು ಬದನೆ ಇತ್ಯಾದಿ ತಳಿಗಳು. ಬಹುತೇಕ ಎಲ್ಲ ಬೆಳೆಗಳಲ್ಲೂ ವಿವಿಧ ತಳಿಗಳನ್ನು ಕಾಣಬಹುದು)

ರೈತರನ್ನು ಮಾತಿಗೆಳೆಯಲು, ಅವರಿಂದ ಮಾಹಿತಿ ಪಡೆಯಲು ಹಾಗೂ ನಿಮ್ಮ ಬಗ್ಗೆ ಅವರಿಗೆ ವಿಶ್ವಾಸ  ಮೂಡಲು ಈ ತಿಳಿವಳಿಕೆ ಬಹಳ ಸಹಕಾರಿ. ನಿಮ್ ಕಡೆ ಏನೇನ್ ಹಳೇ ಬೆಳೆ ಬೆಳಿತೀರಾ? ಎಂದು ಕೇಳುವುದಕ್ಕಿಂತ ನಿಮ್ ಕಡೆ ಈಗ್ಲೂ ರತ್ನ ಚೂಡಿ ಭತ್ತ ಬೆಳಿತೀರಾ? ಎಂಬ ಪ್ರಶ್ನೆ ಹೆಚ್ಚು ಪರಿಣಾಮಕಾರಿ. ಹಿರಿಯ ರೈತರು, ರೈತ ಮಹಿಳೆಯರು ಹಾಗೂ ಇತರ ಆಸಕ್ತರೊಂದಿಗೆ ಚರ್ಚಿಸುವ ಮೂಲಕ ಹಾಗೂ ಗೆಜ಼ೆಟಿಯರ್‌ಗಳು ಮತ್ತು ಪುಸ್ತಕಗಳನ್ನು ಓದಿ ಬೆಳೆ ಮತ್ತು ತಳಿಗಳ ಬಗ್ಗೆ ತಿಳಿಯಬಹುದು. ಗ್ರೀನ್ ಪ್ರತಿಷ್ಠಾನ ಮತ್ತು ಕೃಷಿ ಪ್ರಯೋಗ ಪರಿವಾರ ಪ್ರಕಟಿಸಿರುವ ಪ್ರಕಟಣೆಗಳು ಈ ನಿಟ್ಟಿನಲ್ಲಿ ಸಹಕಾರಿ.

ತಳಿ ಇತಿಹಾಸದ ಬಗ್ಗೆ ತಿಳಿದಿರಲಿ:  ನಾಟಿ ತಳಿಗಳು ಹೇಗೆ ರೂಪುಗೊಂಡವು, ಸುಧಾರಿತ ತಳಿಗಳ ಯುಗ ಯಾವಾಗ ಶುರುವಾಯಿತು, ಹೈಬ್ರಿಡ್ ಅಥವಾ ಅಧಿಕ ಇಳುವರಿ ತಳಿಗಳು ರೂಪುಗೊಂಡಿದ್ದು ಯಾವಾಗ, ಕುಲಾಂತರಿ ಅಥವಾ ಬಂಜೆ ಬೀಜಗಳ ಉಗಮ — ಈ ತಳಿ ಇತಿಹಾಸದ ಬಗ್ಗೆ ಬರಹಗಾರರು ತಿಳಿದಿದ್ದರೆ ಒಳ್ಳೆಯದು. ಮುಖ್ಯವಾಗಿ ೬೦ ರ ದಶಕದಲ್ಲಿ ಪ್ರಾರಂಭವಾದ ಹಸಿರು ಕ್ರಾಂತಿ ಮತ್ತು ಅದರ ನಂತರದ ಬೆಳವಣಿಗೆಗಳ ಬಗ್ಗೆ ಮಾಹಿತಿ ಹೊಂದಿರಬೇಕು. ನಾವು ರೈತರಿಂದ ಸಂಗ್ರಹಿಸಿದ ಪ್ರಾಥಮಿಕ ಮಾಹಿತಿಯನ್ನು ವಿಶ್ಲೇಷಿಸಲು ಇದರಿಂದ ಸಾಧ್ಯ. ತಪ್ಪುಗಳಿಗೆ ಅವಕಾಶವಿರುವುದಿಲ್ಲ.

ಆಯಾ ತಳಿಗಳ ಹೆಸರುಗಳ ಆಧಾರದ ಮೇಲೆ ಅದು ನಾಟಿ ತಳಿ, ಸುಧಾರಿತ ಅಥವಾ ಹೈಬ್ರಿಡ್ ತಳಿ ಬಹುತೇಕ ಸಂದರ್ಭಗಳಲ್ಲಿ ತಿಳಿಯಬಹುದು. ಉದಾಹರಣೆಗೆ: ರಾಗಿಯಲ್ಲಿ ಕೋಣಕೊಂಬಿನ ರಾಗಿ, ಮಜ್ಜಿಗೆ ರಾಗಿ, ಪಿಚ್ಚಕಡ್ಡಿ ರಾಗಿ, ಬಾಳೆಪಟ್ಟೆ ರಾಗಿ ಇತ್ಯಾದಿಗಳು ನಾಟಿ ತಳಿಗಳಾದರೆ ಅನ್ನಪೂರ್ಣ, ಸರಸ್ವತಿ ಮುಂತಾದವು ಸುಧಾರಿತ ತಳಿಗಳು. ಇನ್ನು ಜಿ.ಪಿ.ಯು.- ೨೮, ಎಮ್.ಆರ್. ೧ ಮುಂತಾದವು ಅಧಿಕ ಇಳುವರಿ ತಳಿಗಳು. ಎಲ್ಲ ಬೆಳೆಗಳಲ್ಲೂ ಇದನ್ನು ಸುಲಭವಾಗಿ ಗುರುತಿಸಬಹುದು.

 ತಳಿ ಹುಡುಕಾಟ: ಕೇವಲ ರೈತರೊಂದಿಗೆ ಮಾತನಾಡಿ ಸಂಗ್ರಹಿಸಿದ ಮಾಹಿತಿಯನ್ನಾಧರಿಸಿ ಲೇಖನ ಬರೆಯುವುದು ಒಳ್ಳೆಯದಲ್ಲ. ಹೊಲಕ್ಕೆ ಹೋಗಿ ನೋಡಬೇಕು. ಅಡ್ಡಾಡಬೇಕು,  ಬೆಳೆಯ ಕಾಂಡ, ಎಲೆ, ಹೂವು, ಕಾಯಿ, ತೆನೆ, ಹಣ್ಣು, ಬೀಜ ಮುಂತಾದ ಭಾಗಗಳನ್ನು ಗಮನಿಸಬೇಕು, ಸ್ಪರ್ಶಿಸಬೇಕು, ವಾಸನೆ ನೋಡಬೇಕು, ತಿಂದು ರುಚಿ ನೋಡಬೇಕು. ಆ ಎಲ್ಲ ಅನುಭವಗಳಿಂದ ನಮ್ಮ  ರವಣಿಗೆ ಪರಿಪೂರ್ಣವಾಗುತ್ತದೆ.

ಗೋದಾವರಿ ಇಸುಕುವಡ್ಲು ಎಂಬ ಭತ್ತದ ತಳಿ ಸುವಾಸನೆಯುಕ್ತ ಎಂಬ ಮಾಹಿತಿ ಸ್ವಲ್ಪ ಕುತೂಹಲ ಮೂಡಿಸಿತ್ತು ಆದರೆ ಸಿಂಗೇಗೌಡ ಎಂಬ ರೈತರ ಹೊಲದ ಬದುವಿನ ಮೇಲೆ ನಿಂತು ಅದರ ಘಮಲನ್ನು ಅನುಭವಿಸಿದಾಗ ಪಡೆದ ಸಂತೋಷ ಅನನ್ಯವಾದುದಾಗಿತ್ತು. ಹಾಗೆಯೇ ಕಡುಗಂದು ಬಣ್ಣದ ಗರಿಗಳ  ನ್ಯಾರೆಮಿಂಡ ಭತ್ತದ ತಳಿ, ಅಚ್ಚ ಬಿಳಿ ಬಣ್ನದ ಮಜ್ಜಿಗೆ ರಾಗಿ ತಳಿಗಳನ್ನು ಕಂಡಾಗಲೂ ಸಹ ಇದೇ ರೀತಿ ಅಚ್ಚರಿಪಟ್ಟಿದ್ದೆವು. ಸ್ವತಃ ನೋಡಿದಾಗ ತಳಿಯ ಬಗ್ಗೆ ಮತ್ತಷ್ಟು ಗುಣಗಳು ಸಿಗುವುದೂ ಉಂಟು. ಉದಾಹರಣೆಗೆ: ಮದನಪಲ್ಲಿ ಟೊಮ್ಯಾಟೊ ತಳಿಗೆ ತಳಭಾಗದಲ್ಲಿ ರುಪಾಯಿ ನಾಣ್ಯದಗಲದ ಕಂದು ಮಚ್ಚೆ ಇರುವ ಸಂಗತಿ ಯಾವ ದಾಖಲೆಗಳಲ್ಲೂ ಇರಲಿಲ್ಲ, ಹಣ್ಣನ್ನು ಕಿತ್ತು ನೋಡಿದಾಗ ಆ ಅಂಶ ತಿಳಿಯಿತು.

ಭತ್ತದ ಕಾಳಿನ ತುದಿಯಲ್ಲಿ ಮುಳ್ಳಿರುವುದು, ರಾಗಿ ಕಾಂಡದ ಗೆಣ್ಣುಗಳ ಬಳಿ ವೃತ್ತಾಕಾರದ ರಿಂಗುಗಳಿರುವುದು ಇತ್ಯಾದಿ ಸೂಕ್ಷ್ಮ ವಿವರಗಳು ಕಣ್ಣಾರೆ ನೋಡುವುದರಿಂದ ಲಭ್ಯವಾಗಿ ನಮ್ಮ ಬರವಣಿಗೆಗೆ ಹೆಚ್ಚು ಮೌಲ್ಯ ಕೊಡುತ್ತವೆ. 

ಬೆಳೆಗಳು ಕಾಯಿ ಕಟ್ಟುವ ಹಂತದಲ್ಲಿ ಭೇಟಿ ಕೊಟ್ಟರೆ ಉತ್ತಮ. ಛಾಯಾಚಿತ್ರಕ್ಕೆ ಈ ಹಂತ ಸೂಕ್ತ. ತಳಿ ಹುಡುಕಾಟಕ್ಕೆ ನಗರದ ಸೋಂಕಿನಿಂದ ದೂರವಿರುವ ಕಾಡು ಹಳ್ಳಿಗಳು ಸೂಕ್ತ. ಐದಾರು ಮೈಲಿ ನಡೆದು ತಲುಪಬೇಕಾದ ಮಂಚಿಬೆಟ್ಟ ಎಂಬ ಪ್ರದೇಶದಲ್ಲಿ ನಮಗೆ ಮೂರು ದಿನ ಸಂಗ್ರಹಿಸಿದರೂ ಮುಗಿಯದಷ್ಟು ತಳಿಗಳು ಲಭ್ಯವಾಗಿದ್ದವು. ಗೊಲ್ಲರಹಟ್ಟಿಗಳಲ್ಲಿ, ಇರುಳಿಗರು, ಸೋಲಿಗರು ಮುಂತಾದ ಆದಿವಾಸಿ ತಾಣಗಳಲ್ಲಿ ಹೆಚ್ಚು ನಾಟಿ ತಳಿಗಳಿರುವುದು ನಮ್ಮ ಅನುಭವ. ಕೆಲವೊಮ್ಮೆ ನಮ್ಮೂರಿನಲ್ಲೇ ಸಿಗಬಹುದು. ರೈತರ ಹೊಲ, ಹಿತ್ತಿಲುಗಳಲ್ಲಿ ಅಡ್ಡಾಡುವಾಗ ಗಮನಿಸುತ್ತಿರಬೇಕು.

ಒಂದು ಪ್ರದೇಶದಲ್ಲಿ ಹಿಂದೆ ಇದ್ದಿರಬಹುದಾದ ಬೆಳೆ ಮತ್ತು ತಳಿಗಳ ಮಾಹಿತಿಯನ್ನಾಧರಿಸಿ ಹುಡುಕುವುದು ಮತ್ತು ಆ ಬಗ್ಗೆ ಬರೆಯುವುದು  ಪರಿಣಾಮಕಾರಿ ವಿಧಾನ. ಉದಾಹರಣೆಗೆ ಘಮ್ ಗಡಲೆ ಭತ್ತದ ತಳಿ ತುಮಕೂರು ಪ್ರದೇಶದ್ದು ಎಂಬ ಮಾಹಿತಿಯನ್ನಾಧರಿಸಿ ಸತತ ಪ್ರಯತ್ನದಿಂದ ಅದನ್ನು ಹುಡುಕಿ ಲೇಖನ ಬರೆಯಲಾಯಿತು.

ಕ್ರಾಸ್‌ಚೆಕ್ ಮತ್ತು ಚೆಕ್‌ಲಿಸ್ಟ್:  ಲಭ್ಯವಾದ ತಳಿಯ ಮಾಹಿತಿಯ ಬಗ್ಗೆ ಬೇರೆ-ಬೇರೆಯವರನ್ನು ವಿಚಾರಿಸಿ ಖಚಿತಪಡಿಸಿಕೊಳ್ಳಬೇಕು. ಆ ತಳಿ  ಬೆಳೆಯುವ ರೈತರನ್ನು ಎಷ್ಟು ವರ್ಷದಿಂದ ಬೆಳೆಯುತ್ತಿದ್ದೀರಿ, ಬೀಜ ಎಲ್ಲಿಂದ ತಂದಿರಿ ಎಂದು ಮತ್ತೆ-ಮತ್ತೆ ಕೇಳಿ ತಿಳಿಯಬೇಕು. ಈ ಕ್ರಾಸ್ ಚೆಕ್ ಮುಗಿದು ಅದು ನಾಟಿ ತಳಿ ಎಂದು ಖಚಿತಗೊಂಡ ಮೇಲೆ ಅದರ ಸಮಗ್ರ ವಿವರಗಳನ್ನು ಕಲೆ ಹಾಕಬೇಕು. ಅದಕ್ಕಾಗಿ ಒಂದು ಚೆಕ್‌ಲಿಸ್ಟ್ ತಯಾರಿಸಿಕೊಳ್ಳಬೇಕು. ಆ ಚೆಕ್ ಲಿಸ್ಟ್ ನಲ್ಲಿ ಇರಲೇಬೇಕಾದ ಕೆಲವು ಪ್ರಶ್ನೆಗಳನ್ನು ಇಲ್ಲಿ ನೀಡಲಾಗಿದೆ. ಸುಳಿವು ತಿಳಿದು ಸ್ಠಳ ಭೇಟಿಗೆ ರೈತರ ಹೊಲಕ್ಕೆ ಹೋಗುವಾಗ ಈ ಚೆಕ್‌ಲಿಸ್ಟ್ ನಮ್ಮ ಬಳಿ ಇರಬೇಕು.

 

 • ಬೆಳೆ ಹೆಸರು:
 • ತಳಿ ಹೆಸರು:
 • ರೈತನ ಹೆಸರು ಮತ್ತು ವಿಳಾಸ:
 • ತಳಿಯ ಅವಧಿ:
 • ಬೆಳೆಯುವ ಕಾಲ:
 • ಎಂತಹ ಮಣ್ಣಿಗೆ ಸೂಕ್ತ:
 • ಬಿತ್ತನೆ ವಿಧಾನ:
 • ಕಾಳಿನ ಬಣ್ಣ ಮತ್ತು ಆಕಾರ:
 • ಬೆಳೆಯ ಎತ್ತರ:
 • ಕಾಂಡ/ಬಳ್ಳಿಯ ಬಣ್ಣ:
 • ಎಲೆ/ಗರಿಯ ಬಣ್ಣ, ಆಕಾರ :
 • ಅಂತರ ಬೇಸಾಯದ ರೀತಿ:
 • ಬೆಳೆಯ ವಿವಿಧ ಹಂತದಲ್ಲಿ ಕಾಡುವ ರೋಗ/ ಕೀಟ ಮತ್ತು ಅವುಗಳಿಂದ ರಕ್ಷಣೆ:
 • ಕುಯಿಲು ಮಾಡುವಾಗ ವಹಿಸಬೇಕಾದ ಎಚ್ಚರಿಕೆಗಳು:
 • ಇಳುವರಿ (ಕಾಳು ಮತ್ತು ಹುಲ್ಲು):
 • ಕಾಳು ಬಚ್ಚಿಡುವ ವಿಧಾನ:
 • ಬಿತ್ತನೆ ಬೀಜದ ಆಯ್ಕೆ ಮತ್ತು ಸಂರಕ್ಷಣೆ:
 • ಅದರಿಂದ ತಯಾರಿಸಬಹುದಾದ ಅಡುಗೆಗಳು ಮತ್ತು ಇತರ ಬಳಕೆ:
 • ಇತರೆ ಮಾಹಿತಿ:

 

ರೈತರೊಂದಿಗೆ ಮಾತು-ಕತೆ, ಹೊಲಕ್ಕೆ ಭೇಟಿ ಮತ್ತು ಮೇಲಿನ ಚೆಕ್‌ಲಿಸ್ಟ್ ಪ್ರಕಾರ ಮಾಹಿತಿ ಸಂಗ್ರಹಿಸಿದರೆ ಲೇಖನವನ್ನು ಸಮಗ್ರವಾಗಿ ಕಟ್ಟಿಕೊಡಬಹುದು. ಇದರ ಜೊತೆಗೆ ಆ ಬೆಳೆಯ ಕುಟುಂಬ, ಸಾಮಾನ್ಯ ಹೆಸರು (ಇಂಗ್ಲಿಷ್), ಮೂ , ಇತರೆ ಹೆಸರುಗಳು- ಈ ವಿವರಗಳನ್ನು ಸೇರಿಸಿದರೆ ಉತ್ತಮ. ಲೇಖನದಲ್ಲಿ ತಳಿ ಸಂರಕ್ಷಕರ ವಿಳಾಸವನ್ನು ತಪ್ಪದೇ ನೀಡಿ. ಮುಂಚಿತವಾಗಿ ಅವರಿಗೆ ಆ ವಿಷಯವನ್ನು ತಿಳಿಸಿ ಒಪ್ಪಿಗೆ ಪಡೆಯುವುದು ಸೂಕ್ತ.

ತಳಿಯ ಬಗ್ಗೆ ಲೇಖನ ಬರೆಯುವಾಗ ಚೆಕ್‌ಲಿಸ್ಟ್‌ನಲ್ಲಿರುವ ಕೆಲವು ಅಂಶಗಳನ್ನು  ಸೂಚ್ಯವಾಗಿ ಹೇಳಿ ವಿವರವಾದ ಮತ್ತೊಂದು ಲೇಖನವನ್ನು ಮಾಡಬಹುದು. ಉದಾ: ವಿಶೇಷವಾದ ಬೀಜ ಸಂರಕ್ಷಣೆ ಮಾಹಿತಿಯಿದ್ದಾಗ ಅಥವಾ ಅಂತರ ಬೇಸಾಯದ ಮಾಹಿತಿ ದೊರೆತಾಗ ಅಂತಹುದೇ ಬೇರೆ-ಬೇರೆ ವಿಧಾನಗಳನ್ನು ಕಲೆಹಾಕಿ ಪ್ರತ್ಯೇಕ ಲೇಖನ ಮಾಡಬಹುದು.

ಒಮ್ಮೆ ನೀವು ಈ ವಿಷಯದ ಆಳಕ್ಕೆ ಹೋದಂತೆ, ಸೀರಿಯಸ್ಸಾಗಿ ಇದರಲ್ಲಿ ತೊಡಗಿಸಿಕೊಂಡಂತೆ ನಿಮಗೇ ಸುಳಿವುಗಳು ದೊರೆಯುತ್ತಾ ಹೋಗುತ್ತವೆ. ಬೀಜ ವೈವಿಧ್ಯ ಒಂದು ಅದ್ಭುತ ಲೋಕ. ಈವರೆಗೆ ಹೆಚ್ಚು ಪತ್ರಕರ್ತರು ಈ ಅದ್ಭುತ ಬೀಜ ಕಣಜಕ್ಕೆ ಕೈ ಹಾಕಿಲ್ಲ. ಹಾಗಾಗಿ ಅಸಂಖ್ಯ ವಿಷಯಗಳ ರಾಶಿಯೇ ಅಲ್ಲಿದೆ. ಕೆದಕುವ ಮನಸ್ಸು, ಉತ್ಸಾಹ ಬೇಕಷ್ಟೇ.

ಬೀಜ ಪ್ರಸಾರ

ಒಮ್ಮೆ ನಾವು ಕೆಲಸ ಮಾಡುತ್ತಿದ್ದ ಥಳಿ ಊರಿನ ಪಕ್ಕದ ಕುಣಿಗಲ್ (ತಮಿಳುನಾಡು) ಗ್ರಾಮದ ಹಿತ್ತಿಲೊಂದರಲ್ಲಿ ವಿಶೇಷ ದಂಟು ಸೊಪ್ಪಿನ ಗಿಡವೊಂದು ಬೆಳೆದಿತ್ತು. ಆರೇಳು ಅಡಿ ಎತ್ತರಕ್ಕಿದ್ದ ಅದರ ಬಗ್ಗೆ ಚಿಕ್ಕ ಲೇಖನವನ್ನು ಫೋಟೋ ಸಮೇತ ಪ್ರಜಾವಾಣಿ ಕೃಷಿ ವಿಭಾಗಕ್ಕೆ ಕಳಿಸಿದೆವು. ನಮ್ಮ ಸಂಸ್ಥೆಯ ವಿಳಾಸವನ್ನೂ ನೀಡಿದ್ದೆವು. ಅದು ಪ್ರಕಟಗೊಂಡ ನಾಲ್ಕೈದು ದಿನದಲ್ಲಿ ನೂರಾರು ಪತ್ರಗಳು ಬಂದು ಬೀಳತೊಡಗಿದವು. ಎಲ್ಲರದೂ ಒಂದೇ ಬೇಡಿಕೆ! ನಮಗೆ ಬೀಜ ಕಳುಹಿಸಿ. ನಮ್ಮ ಅಂಚೆಯಣ್ಣ ಸುಸ್ತೋ ಸುಸ್ತು !

೫೦ ಪದಗಳ ಆ ಲೇಖನ ಅನೇಕ ಪಾಠಗಳನ್ನು ಕಲಿಸಿತು. ಹೊಸ-ಹೊಸ ಸಾಧ್ಯತೆಗಳನ್ನು ನಮ್ಮೆದುರು ತೆರೆದಿಟ್ಟಿತು. ನಾಟಿ ಬೀಜಗಳಿಗಿರುವ ಅಗಾಧ ಬೇಡಿಕೆಯ ಅರಿವಾಯಿತು.

ಈ ಅನುಭವದ ಆಧಾರದ ಮೇಲೆ ಪ್ರಜಾವಾಣಿ ಕೃಷಿ ವಿಭಾಗದಲ್ಲಿ ಬೀಜ ಪ್ರಸಾರದ ಅಂಕಣವನ್ನು ಪ್ರಾರಂಭಿಸಿದೆವು. ಆಗ ಕೃಷಿ ವಿಭಾಗ ನೋಡಿಕೊಳ್ಳುತ್ತಿದ್ದ ಶ್ರೀ ನಾಗೇಶ್ ಹೆಗ್ಡೆಯವರ ಮಾರ್ಗದರ್ಶನ ಮತ್ತು ಒತ್ತಾಸೆಗಳೂ ಇದಕ್ಕೆ ಕಾರಣ. ‘ಬೀಜ ಬಂಗಾರ’ ಹೆಸರಿನ ಈ ಅಂಕಣದ ಮೂಲಕ ನೂರಾರು ಅಪರೂಪದ ತಳಿಗಳ ಲೇಖನ ಪ್ರಕಟಗೊಂಡು ಸಾವಿರಾರು ಆಸಕ್ತರಿಗೆ ಬೀಜ ಹಂಚಿಕೆಯಾಯ್ತು. ಕಳೆ ಕ್ಯಾರೆಟ್ ತಳಿಗೆ ಸುಮಾರು ೧೦೦೦, ಬೀನ್ಸ್ ತಳಿಗೆ ಸುಮಾರು ೭೫೦, ದಪ್ಪ ಬದನೆ ತಳಿಗೆ ೫೦೦ಕ್ಕೂ ಹೆಚ್ಚು ಪತ್ರಗಳು ಬಂದಿದ್ದು ದಾಖಲೆ.

ಬೀಜ ಪ್ರಸಾರದ ಜೊತೆಗೆ ಅದನ್ನು ಬೆಳೆದ ರೈತರಿಗೆ ಹಾಗೂ ಸ್ವಸಹಾಯ ಸಂಘಗಳಿಗೆ ಇದೊಂದು ಆದಾಯದ ಮೂಲವಾಯ್ತು. ಹಿತ್ತಿಲಿನಲ್ಲಿ ತರಕಾರಿ ಬೆಳೆದು ಮಾರಾಟ ಮಾಡಿ ಹತ್ತಿಪ್ಪತ್ತು ರುಪಾಯಿ ಸಂಪಾದಿಸುತ್ತಿದ್ದ ಹೆಣ್ಣುಮಕ್ಕಳು ಮತ್ತು ಸಣ್ಣ ರೈತರು ಅದೇ ತರಕಾರಿಯನ್ನು ಒಪ್ಪವಾಗಿ ಬೀಜ ಮಾಡಿ ಸಾವಿರಾರು ರುಪಾಯಿ ಗಳಿಸಲು ನಮ್ಮ ಲೇಖನಗಳು ಸಹಾಯ ಮಾಡಿದವು. ಇದು ತರಕಾರಿಯ ಮೌಲ್ಯವರ್ಧನೆ.

ಪ್ರಜಾವಾಣಿಯ ಅನುಭವದಿಂದ ಅಡಿಕೆ ಪತ್ರಿಕೆಯಲ್ಲಿ ‘ತೆನೆಗೂಡಿ ಬಳ್ಳ’ ಮತ್ತು ಸಿರಿಸಮೃದ್ಧಿ ಪತ್ರಿಕೆಯಲ್ಲಿ ‘ಬೀಜದ ನಂಟು’ ಅಂಕಣಗಳನ್ನು ಶುರುಮಾಡಿದೆವು. ಇದರಿಂದ ಪ್ರೇರಣೆಗೊಂಡು ವಿಜಯ ಕರ್ನಾಟಕ ಪತ್ರಿಕೆಯಲ್ಲಿ ‘ಕಣಜ’ ಎಂಬ ಅಂಕಣವೂ ಸಹ ಆನಂತರ ಪ್ರಾರಂಭವಾಯಿತು.

ಬೀಜಪ್ರಸಾರಕ್ಕಾಗಿ ಬರೆಯುವ ಲೇಖನಗಳು ಸರಳವಾಗಿರಬೇಕು. ತಳಿಯ ವಿಶೇಷತೆ, ಬೆಳೆಯುವ ರೀತಿ, ಇಳುವರಿ ಇತ್ಯಾದಿ ಅಗತ್ಯ ಮಾಹಿತಿ, ಬೆಳೆದ ರೈತನ ಸ್ಪಷ್ಟ ವಿಳಾಸ, ತಳಿಯ ಬಗ್ಗೆ ಸ್ಪಷ್ಟ ಚಿತ್ರಣ ನೀಡುವ ಒಂದೆರಡು ಫೋಟೋಗಳು (ಬೀಜದ/ಕಾಯಿಯ ಕ್ಲೋಸಪ್ ಮತ್ತು ಗಿಡ/ಬೆಳೆಯ ಚಿತ್ರ) ಮುಖ್ಯವಾಗಿ ಬೀಜ ಪಡೆಯಬೇಕಾದವರು ಹತ್ತು ರುಪಾಯಿ ಮನಿಯಾರ್ಡರ್ ಕಳಿಸುವ ಕೋರಿಕೆ. ಇಷ್ಟು ಬರೆದರೆ ಸಾಕು.

ಎಚ್ಚರಿಕೆಗಳು!

ಬರವಣಿಗೆಯೇನೋ ಇಷ್ಟು ಸಾಕು, ಆದರೆ ಇತರ ಎಚ್ಚರಿಕೆಗಳನ್ನು ಸಾಕಷ್ಟು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಇಲ್ಲಿ ಕೇವಲ ಲೇಖನ ಬರೆಯುತ್ತಿಲ್ಲ, ಆ ಮೂಲಕ ಬೀಜಪ್ರಸಾರ ಮಾಡುತ್ತಿದ್ದೇವೆ. ಇಲ್ಲಿ ಸ್ವಲ್ಪ ಎಚ್ಚರ ತಪ್ಪಿದರೆ ಹಲವಾರು ತೊಂದರೆಗಳು ಎದುರಾಗುತ್ತವೆ. ಹಾಗಾಗಿ ಈ ಎಚ್ಚರಗಳು ಮುಖ್ಯ.

 • ನಾಟಿ ತಳಿ ಹೌದೇ ಎಂದು ಖಚಿತಪಡಿಕೊಳ್ಳಿ, ಏಕೆಂದರೆ ಇದು ನಿಮ್ಮ ಮತ್ತು ನಿಮ್ಮ ಲೇಖನದ ವಿಶ್ವಾಸಾರ್ಹತೆಯ ಪ್ರಶ್ನೆ.
 • ತಳಿಯ ಪ್ರದೇಶಾವಾರು ಹೆಸರುಗಳಲ್ಲಿ ವ್ಯತ್ಯಾಸವಿದ್ಧರೆ ಲೇಖನದಲ್ಲಿ ಸ್ಪಷ್ಟಪಡಿಸಿ. ಉದಾ: ಸಜ್ಜೆಗೆ ಕೆಲವೆಡೆ ಕೊಂಬು ಎನ್ನುತ್ತಾರೆ, ಕೆಲವು ಕಡೆ ಕುಂಬಳಕ್ಕೆ ಸೋರೆ ಎಂತಲೂ ಸೋರೆಗೆ ಕುಂಬಳ ಎಂತಲೂ ಕರೆಯುತ್ತಾರೆ.
 • ಆಯಾ ತಳಿಗಳ ಬಿತ್ತನೆ ಕಾಲದಲ್ಲಿ ಲೇಖನ ಪ್ರಕಟಿಸುವುದು ಸೂಕ್ತ. ಒಮ್ಮೆ ಅಕಾಲದಲ್ಲಿ ಬಾಸುಮತಿ ಭತ್ತದ ಲೇಖನ ಬರೆದು ಒಂದು ಪತ್ರವೂ ಬರಲಿಲ್ಲ.
 • ರೈತನ ಬಳಿ ಸಾಕಷ್ಟು ಪ್ರಮಾಣದ ಶುದ್ಧ ಬೀಜಗಳಿರುವ ಬಗ್ಗೆ ಖಚಿತಪಡಿಸಿಕೊಳ್ಳಿ. ಅಡಿಕೆ ಪತ್ರಿಕೆಯಲ್ಲಿ ಪ್ರಕಟವಾದ ಹಾವು ಪಡವಲದ ಬೀಜಗಳು ಕಡಿಮೆ ಪ್ರಮಾಣದಲ್ಲಿ ಇದ್ದು ಬೇಡಿಕೆ ಸಾಕಷ್ಟು ಬಂದು ಮುಜುಗರ ಪಡುವಂತಾಯಿತು.
 • ನೀವು ಲೇಖನ ಬರೆಯುವ ವಿಷಯ ರೈತನಿಗೆ ತಿಳಿದಿರಲಿ ಮತ್ತು ಬೀಜ ಕಳಿಸುವ ರೀತಿ ರಿವಾಜುಗಳ ಬಗ್ಗೆ ಸ್ಪಷ್ಟ ಮಾಹಿತಿ ಇರಲಿ.
 • ಲೇಖನ ಪ್ರಕಟಗೊಂಡ ತಕ್ಷಣ ರೈತರಿಗೆ ಮತ್ತು ಸಂಬಂಧಪಟ್ಟ ಪೋಸ್ಟ್‌ಮ್ಯಾನ್‌ಗೆ ತಿಳಿಸಿ. ಗೋದಾವರಿ ಭತ್ತದ ಲೇಖನ ಪ್ರಕಟಗೊಂಡಾಗ ನಾವು ಒಂದು ವಾರ ಅನಿವಾರ್ಯವಾಗಿ  ರೈತನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ವಾರದ ನಂತರ ಅವರ ಹಳ್ಳಿಗೆ ಹೋದರೆ ಅನಾಹುತವೇ ನಡೆದುಹೋಗಿತ್ತು. ಎಲ್ಲ ಮನಿಯಾರ್ಡರ್‌ಗಳೂ ನಮ್ಮ ರೈತರ ಹೆಸರಿನದೇ ಮತ್ತೊಬ್ಬರಿಗೆ ಹೋಗಿ, ಅವರಿಗೆ ಒಮ್ಮೆಲೇ ಹತ್ತು ರುಪಾಯಿಯ ಇಷ್ಟೊಂದು ಮನಿಯಾರ್ಡರ್ ನೋಡಿ ಗಾಬರಿಯಾಗಿತ್ತು. ಈ ಗೋಜಲುಗಳನ್ನೆಲ್ಲಾಬಗೆಹರಿಸುವ ಹೊತ್ತಿಗೆ ಸಾಕಾಗಿಹೋಯ್ತು.
 • ಮನಿಯಾರ್ಡರ್ ಕಳಿಸುವ ಅರ್ಧಕ್ಕರ್ಧ ಮಂದಿ ತಮ್ಮ ವಿಳಾಸವನ್ನು ‘ಮಾಹಿತಿಗಾಗಿ ಸ್ಥಳ ಎಂಬ ಕಡೆ ಬರೆದಿರುವುದಿಲ್ಲ. ಅಂಚೆಯವರಿಂದ ಹಣ ಪಡೆಯುವಾಗ ವಿಳಾಸವನ್ನು ಪರಿಶೀಲಿಸುವಂತೆ ಎಚ್ಚರಿಕೆವಹಿಸಬೇಕು. ಇಲ್ಲವಾದರೆ ಹಣ ನಮ್ಮ ಬಳಿ ಇರುತ್ತದೆ ವಿಳಾಸ ಇರುವುದಿಲ್ಲ, ಆಗಿರುವ ತಪ್ಪಿನ ಅರಿವಿರದ ಹಣ ಕಳಿಸಿರುವವರು ಅಪನಂಬಿಕೆ ಪಡುತ್ತಾರೆ.
 • ಅಂಚೆ ಮೂಲಕ ಬೀಜ ಪ್ರಸಾರಕ್ಕೆ ಬದನೆ, ಸೊಪ್ಪು, ರಾಗಿ, ಕ್ಯಾರೆಟ್ ಇತ್ಯಾದಿ ಸಣ್ಣ ಸಣ್ಣ ಗಾತ್ರದ ಬೀಜಗಳು ಉತ್ತಮ. ಅವರೆ, ಹಾಳವಾಣ, ವೆಲ್‌ವೆಟ್ ಬೀನ್ಸ್ ಮುತಾದ ದಪ್ಪ ಬೀಜಗಳನ್ನು ಕಳಿಸುವುದು ಕಷ್ಟ.
 • ಕಳಿಸುವ ಬೀಜ ಹಸಿ ಇರಬಾರದು, ಇದ್ದರೆ ಅವು ಅಂಚೆಯಲ್ಲಿ ಹೋಗಿ ತಲುಪುವ ವೇಳೆಗೆ ಮೊಳಕೆ ಬಂದಿರುತ್ತವೆ ಅಥವಾ ಬೂಷ್ಟು ಹಿಡಿದಿರುತ್ತವೆ. ನಾವೊಮ್ಮೆ ಮಿಂಟ್ ಸಸ್ಯದ ತುಂಡುಗಳನ್ನು ಈ ರೀತಿ ಕಳಿಸಿ ಅವು ತಲುಪುವ ಹೊತ್ತಿಗೆ ಕೊಳೆತು ವಾಸನೆ ಬರುತ್ತಿದ್ದವು.
 • ಬೀಜ ಕಳಿಸಲು ೬ ರುಪಾಯಿ ಅಂಚೆ ಚೀಟಿಯ ಪೋಸ್ಟಲ್ ಕವರ್ ಬಳಸಬೇಕು.
 • ಕೆಲವರು ಪತ್ರ ಬರೆದು ಮಾಹಿತಿ ಕೇಳಿರುತ್ತಾರೆ, ಅವರಿಗೆ ಉತ್ತರಿಸಲು ರೈತರಿಗೆ ಸಹಾಯಮಾಡಬೇಕು.
 • ಕೆಲವೊಮ್ಮೆ ಕಂಪನಿಯವರು ಹಾಗೂ ಅವುಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶದ ವಿಜ್ಞಾನಿಗಳು ಬೇಡಿಕೆ ಇಡುತ್ತಾರೆ. ಅಂತಹವರ ಬಗ್ಗೆ ಎಚ್ಚರಿಕೆವಹಿಸಬೇಕು. ಒಮ್ಮೆ ಬೀನ್ಸ್ ಬೀಜಕ್ಕೆ ಕಂಪನಿಯೊಂದು ಹಣ ಕಳಿಸಿದಾಗ ನಾವು ಸಂಘದ ಸದಸ್ಯರಿಗೆ ಬೀಜ ಕಳಿಸದಿರಲು ಸೂಚಿಸಿದ್ದೆವು.
 • ಬೀಜ ಪಡೆದವರ ವಿಳಾಸಗಳನ್ನು ಸಂಗ್ರಹಿಸಿಡಲು ಹೇಳಿ, ಫ಼ಾಲೊಅಪ್ ಮಾಡಲು ಅನುಕೂಲ.

ಇದನ್ನೆಲ್ಲಾ ನೋಡಿದರೆ ಯಾರಿಗೆ ಬೇಕು ರಗಳೆ ಅನಿಸುವುದುಂಟು, ಆದರೆ ಎಲ್ಲ ಸಂದರ್ಭಗಳಲ್ಲೂ ಸಮಸ್ಯೆ ಬರುವುದಿಲ್ಲ. ಮುನ್ನೆಚ್ಚರಿಕೆ ಮುಖ್ಯ. ರೈತರ ವಿಳಾಸ, ದೂರವಾಣಿ ಸಂಖ್ಯೆ ನೀಡಿ ಆಸಕ್ತರು ಸಂಪರ್ಕಿಸಿ ಎಂದು ಸಹ ಲೇಖನದಲ್ಲಿ ಹೇಳಬಹುದು.