ವಿಶ್ವಸಂಸ್ಥೆಯು ೨೦೦೪ನೇ ಇಸವಿಯನ್ನು ಅಂತಾರಾಷ್ಟ್ರೀಯ ಭತ್ತದ ವರ್ಷವೆಂದು ಘೋಷಿಸಿತು.  ಈ ಹಿನ್ನೆಲೆಯಲ್ಲಿ ಸಾಗರ ತಾಲ್ಲೂಕಿನ ಭತ್ತ ಬೆಳೆಯುವ ಪ್ರದೇಶದ ಸಮೀಕ್ಷೆಯನ್ನು ಎರಡು ಮೂರು ಸಂಘಟನೆಗಳು ನೆರವೇರಿಸಿದವು.

ಸಾಗರ ನಾಟೀ ಭತ್ತದ ತಳಿಗಳ ಆಗರ.  ಇಲ್ಲಿರುವ ವೈವಿಧ್ಯಮಯ ಭತ್ತದ ತಳಿಗಳಿಗೆ ಕಾರಣ ಪರಿಸರ ಹಾಗೂ ಜನರ ಆಸಕ್ತಿ.  ತಾಲ್ಲೂಕಿನಲ್ಲಿ ಈಗಲೂ ಸಹ ಕೆಂಪಕ್ಕಿಯ ಸಿದ್ಧಸಾಲೆ, ಶ್ರೀಮಂತರು ಮಾತ್ರ ಉಣ್ಣುತ್ತಿದ್ದ ರಾಜಭೋಗ, ಪಾಯಸಕ್ಕಾಗಿಯೇ ಇದ್ದ ಪರಿಮಳಸಾಲೆ, ಜೀರಿಗೆಸಾಲೆ, ಕುಂಕುಮ ಕೇಸರಿ, ಚಕ್ಕುಲಿಗೆ ಪ್ರಿಯವಾದ ಕರಿಕಾಲದಡಿಗ, ಎಷ್ಟು ಉಂಡರೂ ಸಾಕೆನಿಸದ ಸಣ್ಣವಾಳ್ಯ, ಖುಷ್ಕಿಯಲ್ಲೂ ಬೆಳೆಯುತ್ತಿದ್ದ ಹಕ್ಲುಜಡ್ಡು, ತೀರಾ ತೆಳುಸಿಪ್ಪೆಯ ಪುಟ್ಟ ಹೆಗ್ಗೆ, ನೆರೆಯನ್ನು ಎದುರಿಸಿ, ನಲವತ್ತು ದಿನಗಳ ಕಾಲ ಕೊಳೆಯದೇ ಇರುತ್ತಿದ್ದ ನೆರೆಗೂಳಿ, ಹೆಣ್ಣು-ಗಂಡು ಭೇದ ಸ್ಪಷ್ಟವಾಗಿ ತೋರುತ್ತಿದ್ದ ನ್ಯಾರೇಮಿಂಡ, ಬಯಲುಸೀಮೆಯಿಂದ ಬಂದ ಆಲೂರುಸಣ್ಣ ಹೀಗೆ ಎಷ್ಟೆಲ್ಲಾ ತಳಿಗಳ ಮಹಾಪೂರವೇ ಕಾಣಿಸತೊಡಗಿತು.  ಆದರೆ ಕೆಲವು ತಳಿಗಳ ಬೀಜಗಳನ್ನು ರೈತರು ಕಳೆದುಕೊಂಡು ಪರಿತಪಿಸುತ್ತಿದ್ದರು.

ಸಾಗರ ತಾಲ್ಲೂಕಿನಲ್ಲಿ ಮಳೆ ಹೆಚ್ಚು.  ಹಳ್ಳಿ ಹಳ್ಳಿಗಳಲ್ಲಿರುವ ಸಣ್ಣಪುಟ್ಟ ಹಳ್ಳಗಳೆಲ್ಲಾ ತುಂಬಿ ಗದ್ದೆಯಲ್ಲಿ ನೆರೆಯನ್ನೇ ಸೃಷ್ಟಿಸುತ್ತವೆ.  ಇದರಿಂದ ಹೊಸ ತಳಿಗಳ ಸಸಿಗಳೇಳದೆ ನೆಟ್ಟಿ ಮಾಡಿದರೆ ಸಸಿಗಳೆಲ್ಲಾ ಕೊಳೆತು ವಿಫಲವಾಗಿದ್ದೇ ಹೆಚ್ಚು.  ಈ ಕಾರಣದಿಂದ ನಾಟೀ ತಳಿಗಳೇ ಇಲ್ಲಿ ಹೆಚ್ಚು ಜನಪ್ರಿಯ ಎನ್ನುವುದು ತಿಳಿಯಿತು.

ನಾಟೀ ತಳಿಗಳು ಹೆಚ್ಚಾಗಿ ದಪ್ಪ ಭತ್ತ.  ದಪ್ಪ ಭತ್ತಕ್ಕೆ ಮಾರುಕಟ್ಟೆಯಲ್ಲಿ ಬೆಲೆ ಹೆಚ್ಚು.  ಈ ವರ್ಷವಂತೂ [ಇಸವಿ ೨೦೦೭ರಲ್ಲಿ] ಕ್ವಿಂಟಾಲ್ ಒಂದಕ್ಕೆ ೧೦೦೦ ರೂಪಾಯಿ ದಾಟಿದ್ದೂ ಇದೆ.  ಹೀಗಾಗಿ ರೈತರಿಗೆ ನಾಟೀ ಹೆಚ್ಚು ಜನಪ್ರಿಯ.

ನಾಟೀ ತಳಿಗಳಿಗೆ ರೋಗಬಾಧೆ, ಕೀಟಬಾಧೆ ಕಡಿಮೆ. ಖರ್ಚು ಕಡಿಮೆ.  ಬಿತ್ತನೆ ಮಾಡಿದರೆ ಮಾತ್ರ ಕೆಲಸ ಹೆಚ್ಚುತ್ತದೆ.  ನೆಟ್ಟಿ ಮಾಡಿದರೆ ಕೆಲಸವೂ ಕಮ್ಮಿ.  ಹೀಗಾಗಿ ರೈತರು ನಾಟೀ ತಳಿಗಳನ್ನೇ ಹೆಚ್ಚು ಬಿತ್ತಲು ಬಳಸುತ್ತಿದ್ದಾರೆ.

ನಾಟೀ ತಳಿಗಳು ಬರ ಬರಲಿ, ನೆರೆ ಬರಲಿ ಎದುರಿಸಬಲ್ಲವು.  ಹೊಸ ತಳಿಗಳು ಎರಡಕ್ಕೂ ಸೋಲುತ್ತವೆ.  ನಾಟೀ ತಳಿಗಳು ಇದನ್ನೆಲ್ಲಾ ಎದುರಿಸಿದ ಮೇಲೂ ಉತ್ತಮ ಇಳುವರಿ ಕೊಡುತ್ತವೆ.

ಕೆಲವು ತಳಿಗಳು ಆ ಊರಿನ, ಮನೆತನದ ವಿಶಿಷ್ಠ ತಳಿಗಳೆಂದು ಹೆಸರುವಾಸಿ.  ಉದಾಃ ಯಲಕುಂದ್ಲಿಯ ನೆರೆಗೂಳಿ, ನೆಟ್ಟಿಜಡ್ಡು, ಕಾನುಕೊಪ್ಪದ ಗೊಲ್ಟಿಗ. ಇವು ಆ ಊರಿನ ಭಾವನಾತ್ಮಕ ಸಂಬಂಧಗಳಿಗೆ ಕಾರಣವಾಗಿವೆ.

ನಾಟೀ ತಳಿಗಳು ಹೆಚ್ಚು ರುಚಿ.  ಪದಾರ್ಥಗಳೊಂದಿಗೆ ಚೆನ್ನಾಗಿ ಬೆರೆಯುತ್ತದೆ.  ಕೀಟನಾಶಕಗಳ ಸಶೇಷ ಇಲ್ಲ.  ಸ್ವಲ್ಪ ಪ್ರಮಾಣದ ಅನ್ನ ಮಾತ್ರ ಹೊಟ್ಟೆ ತುಂಬಲು ಸಾಕು.  ಬೆಳಗ್ಗೆ ಉಂಡರೆ ಸಂಜೆಯವರೆಗೂ ದಣಿವು ಆಗದಂತೆ ಕೆಲಸ ಮಾಡಬಹುದು.  ರೋಗರುಜಿನಗಳೂ ಕಡಿಮೆ ಎನ್ನುವ ನಂಬಿಕೆಗಳು ನಾಟೀ ತಳಿಗಳ ಬಳಕೆಗೆ, ಉಳಿವಿಗೆ ಕಾರಣ.

ನಾಟೀ ತಳಿಗಳು ಬಹು ಎತ್ತರದ ಸಸಿಗಳಾಗುತ್ತವೆ.  ಇದರಿಂದ ಜಾನುವಾರುಗಳಿಗೆ ಮೇವು ಒದಗುತ್ತದೆ.  ಮಳೆಗಾಲ ಕಳೆದ ಮೇಲೆ ಅಗತ್ಯವಾಗಿ ಬೇಕಾಗುವಷ್ಟು ಹುಲ್ಲು ಸಿಗುವ ಸಾಧ್ಯತೆ ನಾಟೀ ತಳಿಗಳ ಭತ್ತದಲ್ಲೇ ಹೆಚ್ಚು.  ಹೊಸ ತಳಿಗಳು ಗಿಡ್ಡ ಸಸಿಗಳಾದ ಕಾರಣ ಹುಲ್ಲು ಕಡಿಮೆ.

ಈ ಎಲ್ಲಾ ಕಾರಣಗಳೂ ಈ ಪ್ರಾಂತ್ಯದಲ್ಲಿ ನಾಟೀ ತಳಿಗಳ ಉಳಿವಿಗೆ ಕಾರಣವಾಗಿದೆ.  ಆದರೆ ನಾಟೀ ತಳಿಗಳು ತಮ್ಮ ಕೆಲವು ಗುಣಗಳಿಂದಾಗಿ ರೈತರ ಅವಕೃಪೆಗೂ ಕಾರಣವಾಗಿವೆ

ನಾಟೀ ತಳಿಗಳು ದೀರ್ಘಾವಧಿ ತಳಿಗಳು.  ಅಂದರೆ ಆರು ತಿಂಗಳುಗಳ ಕಾಲ ಬೆಳವಣಿಗೆ, ನಾಟಿ, ಕೊಯ್ಲು ಇತ್ಯಾದಿ. ಇಂದು ಬಂದಿರುವ ೯೦ ರಿಂದ ೧೦೦ ದಿನಗಳ ತಳಿಗಳು ಸಮಯದ ಉಳಿತಾಯ ಮಾಡುತ್ತವೆ.

ನಾಟಿಗಳಲ್ಲಿ ಇಳುವರಿ ಕಡಿಮೆ

ರೈತ ಕುಟುಂಬಗಳು ಹಿಸ್ಸೆಯಾಗಿ ಪಾಲಾದಾಗ ಸಿಗುವ ಕಡಿಮೆ ಗದ್ದೆಯಲ್ಲೇ ಹೆಚ್ಚು ಬೆಳೆಯಬೇಕಾದ ಸ್ಥಿತಿ ಬಂದಾಗ ನಾಟೀ ತಳಿಗಳು ಕಣ್ಮರೆಯಾಗಿದ್ದೂ ಇದೆ.  ರಾಸಾಯನಿಕ ಗೊಬ್ಬರಕ್ಕೆ ಹೆಚ್ಚು ಸ್ಪಂದಿಸದ ಕಾರಣ ರೈತರು ಇವನ್ನು ಬಿಡುತ್ತಿದ್ದಾರೆ.  ಬೀಜಗಳು ಸಿಗದೇ ಇರುವುದೂ ಸಹ ನಾಟೀ ತಳಿಗಳ ಕಣ್ಮರೆಗೆ ಕಾರಣ.  ಬೀಜರಕ್ಷಣೆಯನ್ನು ರೈತರು ಇಂದು ಮಾಡುತ್ತಲೇ ಇಲ್ಲ.  ಹೇಗಿದ್ದರೂ ಸುಲಭ ದರದಲ್ಲಿ ಇಲಾಖೆ ನೀಡುತ್ತಿದೆ ಎನ್ನುವ ಉಡಾಫೆ.  ನಾಟೀ ತಳಿಗಳಲ್ಲಿ ಇಳುವರಿ, ಹಣ ಕಡಿಮೆ ಎನ್ನುವ ಉದಾಸೀನಗಳೂ ಕಾರಣ.

ಆದರೂ ಸಾಗರ ಪ್ರಾಂತ್ಯದ ಪರಿಸರದ ವೈಪರೀತ್ಯಗಳಾದ ನೆರೆ ಹಾಗೂ ಬರಗಳೇ ನಾಟೀ ತಳಿಗಳ ಉಳಿವಿಗೆ ಕಾರಣವಾಗಿರುವುದು ಸಂತೋಷದ ವಿಚಾರವಾಗಿದೆ.

ನಾಟೀ ತಳಿಗಳು ಉಳಿಯಲು ಮತ್ತೊಂದು ಪ್ರಮುಖ ಕಾರಣವೆಂದರೆ ಇಲ್ಲಿನ ಜನರ ಸಾವಯವ ಕೃಷಿ ಪದ್ಧತಿ.  ಹುಣಸೆಕೊಪ್ಪದ ಪ್ರಸನ್ನಕುಮಾರ್ ಹೇಳುವಂತೆ ಹೊಸ ತಳಿಗಳನ್ನು ಕೊಟ್ಟಿಗೆ ಗೊಬ್ಬರದಲ್ಲಿ ಬೆಳೆಯಹೊರಟರೆ ರೋಗ-ಕೀಟಬಾಧೆಗಳಿಗೆ ಔಷಧಿ ಸಿಂಪಡಿಸದೇ ಬಿಟ್ಟರೆ ಇಳುವರಿ ಸಿಗುವುದೇ ಇಲ್ಲ.  ಅದಕ್ಕಾಗಿ ತಾನು ನಾಟೀ ಬೆಳೆಗಳನ್ನೇ ಬೆಳೆಯುತ್ತಿದ್ದೇನೆ ಎನ್ನುತ್ತಾರೆ.

ಯಲಕುಂದ್ಲಿಯ ರಾಚಪ್ಪನವರಿಗೆ ನಾಟೀತಳಿಗಳನ್ನು ಬೆಳೆಯುವುದು ಅನಿವಾರ್ಯ.  ಯಾವುದೇ ರಸಗೊಬ್ಬರವಿರಲಿ, ಗೊಬ್ಬರ ಹಾಕಿದರೂ ನೆರೆಯ ಹಾವಳಿಗೆ ಎಲ್ಲಾ ನೀರುಪಾಲಾಗುವುದು ಗ್ಯಾರಂಟಿ.  ಇದರಿಂದ ಹೊಸತಳಿಗಳನ್ನು ನಾಟಿ ಮಾಡಲು ಸಾಧ್ಯವೇ ಇಲ್ಲ ಎನ್ನುವ ಅಭಿಪ್ರಾಯ ಅವರದು.

ಅದೇ ರೀತಿ ನಾಟೀ ತಳಿತಳನ್ನೇ ಪ್ರತಿವರ್ಷ ಸಸಿ, ಬೀಜ, ಇಳುವರಿ, ಹುಲ್ಲು, ರೋಗ ನಿರೋಧಕ ಶಕ್ತಿ ಇವನ್ನೆಲ್ಲಾ ಪರಿಗಣಿಸಿ ಆಯ್ದು ಬೆಳೆದರೆ ಉತ್ತಮ ಪ್ರತಿಫಲ ಸಾಧ್ಯ ಎನ್ನುವ ಅನುಭವ ಕಾನುಕೊಪ್ಪದ ಹುಚ್ಚಪ್ಪನವರದು.  ಹೀಗಾಗಿ ನಾಟೀ ತಳಿಗಳು ಇಲ್ಲಿ ಮುಂದೂ ಉಳಿಯುವ ಸಾಧ್ಯತೆಗಳು ಗೋಚರ.

. . . . . . . . . . ತೀರದ ಭತ್ತಗಳು

ಮಲೆನಾಡಿನ ಎರಡು ದೊಡ್ಡ ನದಿಗಳು ಸಾಗರವನ್ನು ಬಳಸಿಕೊಂಡು ಮುಂದೆ ಹೋಗುತ್ತದೆ.  ಒಂದು ಅರಬ್ಬೀ ಸಮುದ್ರ ಸೇರುವ ಶರಾವತಿ.  ಇನ್ನೊಂದು ಬಂಗಾಳಕೊಲ್ಲಿ ಸೇರುವ ವರದೆ.  ಶರಾವತಿಯ ಹುಟ್ಟೂರು ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥ.  ವರದೆಯದು ಸಾಗರ ತಾಲ್ಲೂಕಿನ ವರದಾಮೂಲ.  ಶರಾವತಿ ಅತಿ ಹೆಚ್ಚು ಕಾಡುಗಳಿಗೆ ಆಸರೆ.  ವರದೆ ಅತಿ ಹೆಚ್ಚು ಕೃಷಿಭೂಮಿಗೆ ಜೀವದಾಯಿನಿ.  ಈ ಎರಡೂ ನದೀತೀರದ ನೆಲ, ಜನ, ಭಾಷೆ, ಕಲೆ, ಕೃಷಿ, ಬದುಕು ಏನೆಲ್ಲಾ ವಿಭಿನ್ನ.  ಎರಡೂ ನದೀತೀರದ ಹೋರಾಟಗಳೂ ಸಹ ವಿಭಿನ್ನ.  ಶರಾವತಿಯದೆಲ್ಲಾ ಪರಿಸರ ಸಂಬಂಧಿ ಹೋರಾಟವಾದರೆ, ವರದೆಯ ಮಡಿಲಿನಲ್ಲಿ ರೈತ, ಕೃಷಿ, ಭೂಮಿಹಕ್ಕುಗಳು, ನೀರಿಗಾಗಿ ಹೋರಾಟ.

ಶರಾವತಿ ಸುಂದರ ಜಲಪಾತ, ಕಣಿವೆಗಳಲ್ಲಿ ಹರಿದರೆ ವರದೆಯು ಐತಿಹಾಸಿಕ ಪರಂಪರೆಗಳಿಗೆ, ನೆಲ ನಂಬಿದ ಜನರ ಸಾಕ್ಷಿಯಗುತ್ತಾಳೆ.  ಸಾಮ್ರಾಜ್ಯಗಳ ಅಳಿವನ್ನು ದಾಖಲಿಸುತ್ತಾಳೆ.  ಕೆಲವೊಮ್ಮೆ ತಾನೇ ಭೀಕರ ರೂಪ ಪಡೆದು ದಾಳಿಗಿಳಿಯುತ್ತಾಳೆ.  ತೀರದ ಜನರ ಬದುಕನ್ನು ತೀರದ ಬವಣೆಗೆ ದಬ್ಬುತ್ತಾಳೆ.  ಶರಾವತಿಗೆ ಎಷ್ಟು ಮಳೆ ಬಂದರೂ ಬೇಕು.  ವರದೆ ಮಳೆ ಹೆಚ್ಚಾದಾಗಲೆಲ್ಲಾ ಅನಾಹುತಗಳಿಗೆ ಕಾರಣವಾಗುತ್ತಾಳೆ.

ಇದು ವಿರುದ್ಧಮುಖಿಗಳ ಪ್ರಸ್ತಾವನೆ

ಮಳೆಗಾಲದಲ್ಲಿ ವರದೆ ಹರಿವೆಡೆಯೆಲ್ಲಾ ನೆರೆ ಖಾಯಂ.  ಹಳ್ಳಗಳು, ತೋಡುಗಳು, ಹೊಳೆಗಳೆಲ್ಲಾ ವರದೆಗೆ ಸೇರುತ್ತಾ ನೆರೆ ಏರಿಸುತ್ತವೆ.  ತಿಂಗಳುಗಟ್ಟಲೆ ಹೊಲಗಳ ಮೇಲೆ ನಿಂತುಬಿಡುತ್ತದೆ.  ಇದೆಲ್ಲಾ ತೀರದ ರೈತರಿಗೆ ತೀರಾ ಸಾಮಾನ್ಯ ವಿಷಯ.  ನೆರೆ ಬರುವನ್ನು ಪ್ರತಿವರ್ಷ ನಿರೀಕ್ಷಿಸಿಯೇ ಕೃಷಿ ಮಾಡುತ್ತಾರೆ.  ಮಾಡಿದ ಬೇಸಾಯ ನೀರುಪಾಲಾಗದಂತೆ ನೆರೆಯ ನೀರನ್ನೇ ಬಳಸಿಕೊಳ್ಳುತ್ತಾರೆ.

ಕಣಸೆಹೊಳೆ, ಕನ್ಹೊಳೆ, ಮಾವಿನಹೊಳೆ ಹಾಗೂ ವರದಾ ನದಿಗಳು ಒಂದೆಡೆ ಸೇರುವ ಜಾಗದಲ್ಲಿ ೪೦-೬೦ ದಿನಗಳ ನೆರೆ ಬರುತ್ತದೆ.  ಆಗ ಯಲಕುಂದ್ಲಿ, ಶುಂಠಿಕೊಪ್ಪ, ತಡಗಳಲೆ, ಕಣಸೆ, ಮಂಡಗದ್ದೆ, ಸಣ್ಣಮನೆ ಮುಂತಾದ ಊರುಗಳ ಹೊಲಗಳು ನೆರೆಹಾವಳಿಗೆ ತುತ್ತು.

ಅಲ್ಲಿನ ರೈತರು ನೆರೆಯನ್ನೆದುರಿಸಿ ಬೆಳೆಯುವ ಭತ್ತದ ತಳಿಗಳನ್ನು ಬಹಳ ಹಿಂದಿನಿಂದಲೂ ಬೆಳೆಯುತ್ತಿದ್ದಾರೆ.  ನೆರೆಗೂಳಿ, ಕರೆಜಡ್ಡು, ಅಕ್ಕಿಬಾಳ, ಜಡ್ಡುಭತ್ತ, ಚಿಟಗ, ಸಣ್ಣವಾಳ್ಯ ಮುಂತಾದವುಗಳೆಲ್ಲಾ ನೆರೆಯನ್ನೆದುರಿಸಬಲ್ಲವು.  ದಪ್ಪ ಎಲೆ, ದಪ್ಪ ಕಾಂಡ, ಎದೆಯೆತ್ತರ ಬೆಳೆಯುತ್ತವೆ.

ಮುಂಗಾರಿನ ಮೊದಲ ಮಳೆ ಬಿದ್ದು ಮಣ್ಣಿನ ವಾಸನೆ ಹಬ್ಬಿದ ಮೇಲೆ ಬಿತ್ತನೆ ಆರಂಭ.  ೧೦ ಗಿದ್ನ ಭತ್ತ (೪೦ ಕಿಲೋಗ್ರಾಂ) ೮ ಗಾಡಿ ಕೊಟ್ಟಿಗೆ ಗೊಬ್ಬರ ಒಂದು ಎಕರೆಗೆ ಬೇಕು.  ಬೇರೇನು ಬೇಡ ಎನ್ನುತ್ತಾರೆ ತಡಗಳಲೆ ಪಟೇಲ ಬಸವರಾಜಪ್ಪ.

ಮಾಗಿ ಉಳುಮೆ ಮಾಡಿದ ಗದ್ದೆಗಳನ್ನು ಹ್ವಾಕೆ [ಲಘು ಉಳುಮೆ] ಮಾಡಲಾಗುತ್ತದೆ.  ಐದು ಅಡಿ ಉದ್ದದ ಕೊರಡಿನಿಂದ ಇಚ್ಚಾಲು [ಎರಡು ಸಾಲು], ಏಳು ಸಾಲು, ಎಂಟು ಸಾಲು ಹೊಡೆಯುತ್ತಾರೆ.  ನೇಗಿಲ ಗೂಟಕ್ಕೆ ಮಂಕರಿ[ಬುಟ್ಟಿ] ಕಟ್ಟಿ ಅದರಲ್ಲಿ ಬಿತ್ತನೆ ಬೀಜಗಳನ್ನು ತುಂಬಿ ರೈತನ ಹೆಂಡತಿ ಬಿತ್ತುತ್ತಾಳೆ.

ಈ ನೆಲಕ್ಕೆ, ಈ ತಳಿಗಳಿಗೆ ಬಿತ್ತನೆ ವಿಧಾನ ಅನಿವಾರ್ಯ.  ಸಸಿಗಳು ಎರಡೆಲೆ ಆದಕೂಡಲೇ ಕುಂಟೆ ಹೊಡೆಯುತ್ತಾರೆ.  ಇದನ್ನೇ ಹರಗುವುದು, ಬರ ಹೊಡೆಯುವುದು ಎಂದು ಕರೆಯುತ್ತಾರೆ.  ಇದನ್ನು ಸಸಿಗಳು ನಾಲ್ಕೆಲೆ ಆಗುವುದರೊಳಗೆ ಮಾಡಬೇಕು.  ಅದಕ್ಕಾಗಿ ರಾತ್ರಿ ಲಾಟೀನು ನೇಗಿಲಿಗೆ ಕಟ್ಟಿಕೊಂಡು ಮಾಡುವವರೂ ಇದ್ದಾರೆ.

ಒಣ ಬಿತ್ತನೆಯಲ್ಲಿ ಬಿತ್ತಿದ ಬೀಜಗಳು ೪೫ ದಿವಸ ಮಳೆ ಬರದೇ ಇದ್ದರೂ ನೆಲದೊಳಗೆ ಹಾಳಾಗದೇ ಇರುತ್ತವೆ.  ಮಳೆ ಹನಿಯ ಸಿಂಚನವಾಗಿದ್ದೇ ಸಸಿಗಳು ಮೊಳಕೆಯೊಡೆಯುತ್ತವೆ.  ಅದೇ ವೇಗದಲ್ಲಿ ಎಲೆಗಳು ಒಡೆಯತೊಡಗುತ್ತವೆ.  ಒಮ್ಮೆ ಹರಗಿದರೆ ಸಾಧಾರಣ ಫಸಲು, ಎರಡು ಬಾರಿ ಹರಗಿದರೆ ಉತ್ತಮ ಫಸಲು, ಮೂರು, ನಾಲ್ಕು ಸಾರಿ ಹರಗಲು ಸಿಕ್ಕರೆ ಅತಿ ಹೆಚ್ಚು ಫಸಲು ಎನ್ನುತ್ತಾರೆ ಯಲಕುಂದ್ಲಿ ದೇವೇಂದ್ರಪ್ಪ.

ಪ್ರತಿ ಸಾರಿ ಹರಗಿದಾಗಲೂ ಸಾಲಿನಲ್ಲಿ ಇಲ್ಲದ ಸಸಿಗಳು ಕಿತ್ತುಹೋಗುತ್ತವೆ.  ಸಮದೂರ, ಸಮಪ್ರಮಾಣದಲ್ಲಿ ಹೊಂದಿಕೆಯಾಗುತ್ತವೆ.  ಇದು ಚೆನ್ನಾಗಿ ಬೇರು ಬರಲು, ಅತಿ ಹೆಚ್ಚು ಹೊಡೆಯೊಡೆಯಲು ಕಾರಣ.  ಹೊಡೆ ಹೆಚ್ಚಾದಷ್ಟೂ ತೆನೆ ಹೆಚ್ಚು. ಫಸಲು ಇಳುವರಿ ಹೆಚ್ಚು.

ಸಸಿಗಳೇ ಹುಟ್ಟದ ಜಾಗದಲ್ಲಿ ಎಡೆನೆಟ್ಟಿ ಮಾಡುತ್ತಾರೆ.  ಅಲೆ ಹೊಡೆಯದ ಭತ್ತ ಉಣ್ಣಾಕೆ ಬರಲ್ಲ ಹೀಗಾಗಿ ಕೊರಡು ಕಟ್ಟಿ ಕುಲ್ಕು ಹೊಡೆದು ಕಳೆ ತೆಗೆಯುತ್ತಾರೆ.  ಕೊರಡಿಗೆ ತಟ್ಟಿ ಮುಳ್ಳು, ಬಿದಿರು ಕಟ್ಟಿ ಕಸ ಗುಡಿಸುತ್ತಾರೆ.

ಸಸಿ ನೊಂದಂಗೆ, ತೆನೆ ಬಂದಂಗೆ ಅನ್ನೋ ಮಾತಿನಂತೆ ಸಸಿಗಳಿಗೆ ಅನೇಕ ಸಾರಿ ಪೆಟ್ಟಾಗುತ್ತದೆ.  ಹೆಚ್ಚು ನೋವಾದಂತೆ ಹೆಚ್ಚು ಗಟ್ಟಿಯಗಿ ಬಲವಾಗಿ ಬೇರು ಬಿಟ್ಟು ಹೊಡೆಯೊಡೆಯುತ್ತದೆ.  ತೆನೆಯೊಡೆಯುತ್ತದೆ ಎಂಬುದು ನಂಬಿಕೆ.

ರೋಗಗಳು ಬರದೇ ಇರಲಿ ಎಂದು ಕರೆಮುಂಡಿಗೆ, ತುಂಬ್ರು, ನೆಲ್ಲಿಕೊಂಬೆಗಳನ್ನು ಅಲ್ಲಲ್ಲಿ ಹುಗಿಯುತ್ತಾರೆ.  ಮಳೆಗಾಲ ಸಾಗಿದಂತೆ ಮಳೆಯೊಂದಿಗೆ ಸಸಿಗಳೂ ಮೇಲೇರತೊಡಗುತ್ತವೆ.

ಮಳೆ ಹೆಚ್ಚಿದಂತೆ ಹೊಳೆಗಳು ತುಂಬುತ್ತವೆ.  ಅಕ್ಕಪಕ್ಕದ ಜಮೀನು ಬಳಸಿ ಹರಿಯತೊಡಗುತ್ತದೆ.  ಈಗ ನೆರೆ ಎದುರಿಸುವ ತಳಿಗಳ ಹರಸಾಹಸ ಪ್ರಾರಂಭವಾಗುತ್ತದೆ.

ನೆರೆಯು ಪಾದ ಮುಚ್ಚುವಷ್ಟು ಬರುತ್ತಿದ್ದಂತೆ ಬೇರುಗಳೆಲ್ಲಾ ಗಟ್ಟಿಯಾಗುತ್ತಾ, ನೀರು ಮೇಲೇರಿದಂತೆಲ್ಲಾ ಕಾಂಡಗಳೆಲ್ಲಾ ಉದ್ದವಾಗಿ ನೀರಮೇಲೆ ಚಿಗುರೊಡೆಯುತ್ತವೆ.  ಮೊಣಕಾಲುಮಟ್ಟ ಏರಿದಾಗ ಚಿಗುರಿದ ಎಲೆಗಳು ನೀರು ನಿರೋಧಕ ಗುಣ ಪಡೆಯುತ್ತದೆ!  ಮನುಷ್ಯನ ಗಂಟಲುಮಟ್ಟ ಬಂದಾಗ ಸಸಿಗಳೆಲ್ಲಾ ಮುಳುಗಿಹೋದರೂ ಹಸುರು ಕಳೆದುಕೊಳ್ಳುವುದಿಲ್ಲ.  ನೆಲವನ್ನು ಗಟ್ಟಿಯಾಗಿ ಕಚ್ಚಿಕೊಂಡು ಉಸಿರಾಡುತ್ತಲೇ ಇರುತ್ತವೆ.

ಹೀಗೆ ಬಂದ ನೆರೆ ಇಳಿಯಲು ೧೫ ದಿನ ಬೇಕು.  ಕೆಲವೊಮ್ಮೆ ೪೦-೬೦ ದಿನಗಳು ಮಳೆ ಸಣ್ಣಗೆ ಬರುತ್ತಿದ್ದರೆ ನೀರು ತಣ್ಣಗೆ ಇರುತ್ತದೆ.  ಬಿಸಿಲು ಬಂದರೆ ನೀರು ಬಿಸಿಯಾಗಿ ಸಸಿಗಳು ಬಾಡಿ ಕೊಳೆಯತೊಡಗುತ್ತದೆ.

ನೆರೆ ಕ್ರಮೇಣ ತಿಳಿಯಾಗುತ್ತಾ ಕೊಳೆ, ಮೆಕ್ಕಲು ಮಣ್ಣೆಲ್ಲಾ ನೆಲಕ್ಕೆ ಇಳಿದು ಉಳಿಯುತ್ತದೆ.  ನೀರು ಹರಿದುಹೋಗುತ್ತದೆ.

ಬೆಳೆದ ಸಸಿಗಳು ನೆರೆ ಇಳಿದು ನಾಲ್ಕೈದು ದಿನಕ್ಕೆ ಹೊಡೆಯೊಡೆದು ಬಿಡುತ್ತವೆ.  ಅರ್ಧ ಕೊಳೆತ ಸಸಿಗಳಲ್ಲು ಅದೆಲ್ಲೋ ಜೀವವಿರುತ್ತದೆ.   ಪಕ್ಕದ ಸಂದಿಯಿಂದ ಚಿಗುರಿಯೇಬಿಡುತ್ತದೆ.  ನೆರೆ ತಂದ ಕಸಕಡ್ಡಿ, ಮೆಕ್ಕಲುಮಣ್ಣೇ ಇವಕ್ಕೆ ಸಕಲ ಪೋಷಕಾಂಶಗಳುಳ್ಳ ಗೊಬ್ಬರ.  ಬೇರೆ  ಗೊಬ್ಬರದ ಅವಶ್ಯಕತೆಯೇ ಇಲ್ಲ.  ಅನಂತರ ತೆನೆಯೊಡೆಯುವುದು, ಕಾಳುಗಟ್ಟುವುದು ಎಲ್ಲಾ ಸರಸರನೆ ನಡೆಯುತ್ತದೆ.  ನೆರೆ ಬಂದ ಗದ್ದೆ ರೋಗದಿಂದ ದೂರ.  ಯಾವ ರೋಗಗಳೂ ಈ ಗದ್ದೆಯ ಬಳಿ ಸುಳಿಯದು.

ನೆರೆಗದ್ದೆಗೆ ಈ ತಳಿಗಳು ಅನಿವಾರ್ಯವೂ ಹೌದು.  ಅವಶ್ಯಕವೂ ಹೌದು.  ನೆರೆಯಿಂದಾಗಿಯೇ ಇಂತಹ ತಳಿಗಳು ಉಳಿದಿವೆ.  ಒಣಬಿತ್ತನೆ, ಬಿತ್ತನೆಯಂತಹ ಸಾಂಪ್ರದಾಯಿಕ ಕೃಷಿ ಪದ್ದತಿಗಳೂ ಉಳಿದಿವೆ.  ರುಚಿಯಾದ ಪೌಷ್ಟಿಕ, ರಾಸಾಯನಿಕರಹಿತ ದಪ್ಪಭತ್ತ, ಬೀಜ, ಹುಲ್ಲು ಇಂದಿಗೂ ಈ ಪ್ರದೇಶಗಳಲ್ಲಿ ಲಭ್ಯ.

ನೆರೆಯಿಂದಾಗಿ ಒಂದೊಮ್ಮೆ ಇಡೀ ಗದ್ದೆಯೇ ನಾಶವಾದರೂ ಬರರತ್ನಚೂಡಿ, ನೆಟ್ಟಿಜಡ್ಡು ಮುಂತಾದ ಬೇಗ ಫಸಲು ಬರುವ ತಳಿಗಳನ್ನು ನಾಟಿ ಮಾಡಿ ಫಲಪಡೆಯುತ್ತಾರೆ.

ನೀರೊಳಗಿರಬಲ್ಲ ಅವಧಿಬೆಳೆಯ ಅವಧಿಇಳುವರಿ ಅಂದಾಜುಬೆಳೆಯುವ ಸಾಧನ

ನೆರೆಗೂಳಿ (ದಪ್ಪ)೩೦-೪೦ ದಿನಗಳುಆರು ತಿಂಗಳು೮-೯ ಕ್ವಿಂಟಾಲ್ಸಾವಯವ, ಬಿತ್ತನೆ

ಕರೆಜಡ್ಡು (ದಪ್ಪ)೩೦-೩೫ ದಿನಗಳುಐದೂವರೆ ತಿಂಗಳು೯-೧೦ ಕ್ವಿಂಟಾಲ್ಸಾವಯವ, ಬಿತ್ತನೆ

ಅಕ್ಕಿಬಾಳ (ದಪ್ಪ)೨೦-೨೫ ದಿನಗಳುಆರು ತಿಂಗಳು೧೫ ಕ್ವಿಂಟಾಲ್ಸಾವಯವ, ಬಿತ್ತನೆ

ಜಡ್ಡು ಭತ್ತ (ದಪ್ಪ)೨೫-೩೦ ದಿನಗಳುಐದೂವರೆ ತಿಂಗಳು೧೦ ಕ್ವಿಂಟಾಲ್ಸಾವಯವ, ಬಿತ್ತನೆ

ಬುಡ್ಡ (ದಪ್ಪ)೨೫-೩೦ ದಿನಗಳುಐದು ತಿಂಗಳು೧೮ ಕ್ವಿಂಟಾಲ್ಸಾವಯವ, ಬಿತ್ತನೆ

ಸಣ್ಣವಾಳ್ಯ (ಸಣ್ಣ)೨೦-೨೫ ದಿನಗಳುಐದೂವರೆ ತಿಂಗಳು೧೫ ಕ್ವಿಂಟಾಲ್ಸಾವಯವ, ಬಿತ್ತನೆ/ನೆಟ್ಟಿ

ನೆರೆಗೂಳಿಯ ಹರಸಾಹಸ

ಪುರಾಣದಲ್ಲಿ ಭೂಮಿಯ ಒಡೆತನ ಹಂದಿಗಳಿಗೆ ಸೇರಿತ್ತು.  ಅವು ಭೂಮಿಯನ್ನು ಉತ್ತು ಬಿತ್ತಿ ಕಷ್ಟಪಟ್ಟು ಬೆಳೆ ಬೆಳೆಯುತ್ತಿದ್ದವು.  ಆದರೆ ಮಳೆರಾಯ ಅದನ್ನು ಸಹಿಸದೇ ಮಳೆಯನ್ನು ತಡವಾಗಿಸುವುದು, ಅತಿಯಾಗಿ ಸುರಿಸಿ ಹೊಲಗಳನ್ನೆಲ್ಲಾ ಮುಳುಗಿಸಿಬಿಡುತ್ತಿದ್ದ.  ಬೀಜಗಳು, ಸಸಿಗಳೆಲ್ಲಾ ನೀರಿನಡಿಯಲ್ಲಿ ಧ್ವಂಸ.  ಪಾಪ ಹಂದಿ ರೈತರು!  ನೆಲಕ್ಕೆ ಮೂಗು ಕಚ್ಚಿ ಬೀಜಗಳನ್ನು ಹುಡುಕುವುದು, ಮತ್ತೆ ಬೇಸಾಯ ಮಾಡುವುದು.  ಪ್ರತಿವರ್ಷ ಇದೇ ಗೋಳು.

ಎಲ್ಲಾ ರೈತ ಹಂದಿಗಳೂ ವರಾಹ ಮಹಾರಾಜನಲ್ಲಿ ಗೋಳು ತೋಡಿಕೊಂಡವು.  ಏನೆಲ್ಲಾ ಪ್ರಾರ್ಥನೆ ಉಪಾಯಗಳಿಗೂ ಮಳೆರಾಯ ಒಲಿಯಲಿಲ್ಲ.  ಪರಶಿವನೇ ಗತಿಯಾಯ್ತು.  ನಮ್ಮ ನಂದಿ ನೋಡಿಕೊಳ್ಳುತ್ತೇನೆಂದು ಶಿವ ಅಭಯವಿತ್ತ. ಹಂದಿರೈತರು ನಂದಿರಕ್ಷಕನೊಂದಿಗೆ ಧರೆಗಿಳಿದರು.  ಉತ್ತಿದರು, ಬಿತ್ತಿದರು.  ಮಳೆರಾಯ ಹಿಂದಿಗಿಂತಲೂ ಜೋರಾಗಿ ಆರ್ಭಟಿಸಿದ.  ಜಡಿಮಳೆ ಸುರಿಯಿತು.  ನೆರೆ ಏರಿತು.  ನಂದಿ ಹೊಲಕ್ಕಿಳಿಯಿತು?!

ಬಿತ್ತಿದ ಬೀಜಗಳಿಗೆ, ಸಸಿಗಳಿಗೆ ಸೂಪರ್‌ಶಕ್ತಿ ಹರಿಸಿತು.  ಸಸಿಗಳು ನೆರೆ ನೀರನ್ನು ಮೆಟ್ಟಿ ಮೇಲೇರತೊಡಗಿದವು.   ಮಳೆ ಹೆಚ್ಚಿ ನೆರೆ ಏರಿದಂತೆ ನೀರಿನ ಮೇಲೆ ತಲೆಯೆತ್ತಿ ನಿಂತವು.  ಭೂಮಂಡಲವೇ ನೀರಿನೊಳಗೆ ಮುಳುಗಿದರೂ ನಂದಿಶಕ್ತಿಯ ಸಸಿಗಳು ಗೂಳಿಯಂತೆ ಮೇಲೆದ್ದವು.

ಮಳೆ ಸುರಿಸಿ ಸುರಿಸಿ ಮಳೆರಾಯ ಸೋತ.  ಈ ಗಡವ ಗೂಳಿಯಿಂದಾಗಿಯೇ ಸೋತೆ ಎಂದು ಅತ್ತ.  ನೆರೆ ಇಳಿಯಿತು.  ಒಳ್ಳೆ ಫಸಲೂ ಬಂತು.

ಹಂದಿರೈತರು ನಂದಿದೇವರಿಗೆ ರುಚಿ ರುಚಿಯಾದ ಹುಲ್ಲಿನ ಔತಣ ನೀಡಿದರು.  ಭತ್ತದ ಬೀಜಕ್ಕೆ ನೆರೆಗೂಳಿ ಎಂಬ ಹೆಸರು ಬಂತು.  ಮುಂದೆ ನೆರೆಯನ್ನೆದುರಿಸುವ ಶಕ್ತಿ ಹೊಂದಿತು.

ಹೇಳಿದವರು : ಬಿ. ಈಶ್ವರಪ್ಪ

ತಳಿ ವೈವಿಧ್ಯ

ಶಿವಮೊಗ್ಗ ಜಿಲ್ಲೆಯ ಸಾಗರ ಕೇವಲ ನೆರೆ ಎದುರಿಸುವ ತಳಿಗಳಿಗೊಂದೇ ಅಲ್ಲ, ಕೆಂಪಕ್ಕಿ, ಪರಿಮಳದಕ್ಕಿ, ಮಂಡಕ್ಕಿ, ಅವಲಕ್ಕಿ ಮುಂತಾದವುಗಳಿಗೂ ಪ್ರಸಿದ್ಧ.  ಸಿಹಿಯಾದ ಕೆಂಪಕ್ಕಿಗೆ ಸಿದ್ಧಸಾಲೆ, ಶ್ರೀಮಂತರ ಊಟಕ್ಕೆ ರಾಜಭೋಗ, ಅವಲಕ್ಕಿಗೆ ಬಿಳಿ ಇಂಟಾನ್, ಮಂಡಕ್ಕಿಗೆ ಇಂಟಾನ್, ಗೌರಿ, ಪಾಯಸಕ್ಕೆ ಪರಿಮಳಸಾಲೆ, ಗಂಧಸಾಲೆ, ಕುಂಕುಮಕೇಸರಿ, ಮಲ್ಲಿಗೆಯಂತಹ ಅನ್ನಕ್ಕೆ ಚಿಟಗ, ಬುತ್ತಿ ಅನ್ನಕ್ಕೆ ಸಣ್ಣವಾಳ್ಯ, ಚಕ್ಕುಲಿಗೆ ಕರೆಕಾಲ್‌ದಡಿಗ, ಹೊನಸು, ತೆಳು ಸಿಪ್ಪೆ ಭತ್ತ, ದಪ್ಪಸಿಪ್ಪೆ ಭತ್ತ, ಉದ್ದ ಭತ್ತ, ಮೀಸೆ ಭತ್ತ ಹೀಗೆ ಎಷ್ಟೆಲ್ಲಾ ತಳಿಗಳೂ ಇವೆ.  ನೆಟ್ಟಿ ಜಡ್ಡುಭತ್ತದ ಗಂಜಿ ಉಂಡರೆ ದಿನವೆಲ್ಲಾ ಕೆಲಸ ಮಾಡಬಹುದು ಎನ್ನುವವರೂ ಇದ್ದಾರೆ.

ಇಡೀ ಹೊಲದಲ್ಲಿ ಗಂಡು, ಜೊಳ್ಳಾಗುವ ಸಸಿ ತೋರಿಸುವ ನ್ಯಾರೆಮಿಂಡ ಎನ್ನುವ ತಳಿಯೂ ಇಲ್ಲಿಯದು.  ಅಷ್ಟೇ ಅಲ್ಲ, ದೋಸೆಗೆ, ಇಡ್ಲಿಗೆ (ಮಲ್ಲಿಗೆ ಇಡ್ಲಿ ಕೇಳಿದ್ದೀರಾ?) ಮುಂತಾದವುಗಳಿಗೂ ವಿಶೇಷ ತಳಿಗಳಿವೆ.