ನಾಟ್ಯಶಾಸ್ತ್ರ: ಸಂಸ್ಕೃತ ನಾಟ್ಯ ಮೀಮಾಂಸೆಯ ಗ್ರಂಥ. ಪ್ರಧಾನವಾಗಿ ನಾಟ್ಯ ಲಕ್ಷಣವನ್ನು ಕುರಿತು ಹೇಳಿದ್ದರೂ, ಎಲ್ಲಾ ಕಾವ್ಯತತ್ತ್ವ ವಿಚಾರಗಳಿಗೆ ಆಕರವೂ ನೆಲೆಯೂ ಆಗಿದೆ. ಇದರ ಕೃತಭರತಮುನಿಯೆಂದು ಪ್ರತೀತಿ. ಈ ಗ್ರಂಥದ ವಿಚಾರವಾಗಿ ಏಕ ಕರ್ತೃವೆಂಬ ಪದವೂ ಏಕಕೃತ್‌ವಲ್ಲ ಎಂಬ ಇನ್ನೊಂದು ವಾದವೂ ಉಂಟು. ಇದರ ಬಹುಭಾಗ ಅನುಷ್ಪಪ್ ಛಂದಸ್ಸಿನ ಕಾರಿಕೆಗಳ ಸ್ವರೂಪದಲ್ಲಿದೆ. ಕೆಲವು ಅಧ್ಯಾಯಗಳಲ್ಲಿ ಗದ್ಯವೂ ಬರುತ್ತದೆ.

ಈ ಕೃತಿಯ ರಚನೆಯ ಕಾಲ ನಿರ್ವಿವಾದವಾಗಿ ಕ್ರಿಸ್ತಶಕ ಮೂರನೆಯ ಶತಮಾನಕ್ಕೂ ಹಿಂದೆ. ಇದೊಂದು ವಿಶ್ವಕೋಶವೆನ್ನಲು ಅಡ್ಡಿಯಿಲ್ಲ. ಅದರಲ್ಲಿ ಮೂವತ್ತಾರು ಅಧ್ಯಾಯಗಳಲ್ಲಿ ಸುಮಾರು ಆರು ಸಾವಿರ ಶ್ಲೋಕಗಳಿವೆ. ನಾಟ್ಯದ ಉತ್ಪತ್ತಿ ಪ್ರಯೋಗ, ಅಂಗಾಗಳು ಇತ್ಯಾದಿಗಳ ಕುರಿತು ಹೇಳದಿರುವ ವಿಷಯವೇ ಇಲ್ಲ. ಇದರಲ್ಲಿ ನಾಟ್ಯವು ಹುಟ್ಟಿದ ವಿಚಾರ, ಪ್ರೇಕ್ಷಕ ಗೃಹವನ್ನು ಕಟ್ಟುವಿಕೆ, ರಂಗದೇವತೆಗಳನ್ನು ಒಲಿಸುವಿಕೆ, ತಾಂಡವದ ವಿಚಾರ, ನೃತ್ಯಗಳು, ಬಗೆಬಗೆಯ ಅಭಿನಯಗಳು, ಪಾತ್ರಗಳು, ಅವರುಗಳ ವೇಷಭೂಷಣಗಳು, ನಾಟ್ಯದಲ್ಲಿ ಬರುವಂತೆ ಭಾಷೆ, ಛಂದಸ್ಸು, ಗೀತ ವಾದ್ಯಗಳು-ಅವುಗಳ ವಿವರ ಮತ್ತು ಅವಶ್ಯಕತೆಗಳು, ರಸ-ಭಾವಗಳ ಸ್ವರೂಪ, ನಾಟಕಾದಿಗಳಲ್ಲಿ ಇರುವ ವಿಧ, ಪಾತ್ರಗಳ ಅವಶ್ಯಕತೆ ಅಲ್ಲದೆ ಕಾವ್ಯಮೀಮಾಂಸೆಗೆ ಸಂಬಂಧಿಸಿದ ಅಂಶಗಳೂ ಇವೆ. ಅವುಗಳಲ್ಲಿ ರಸ-ಭಾವಗಳ ವಿಚಾರ ಅತಿ ಮುಖ್ಯ. ನಾಟ್ಯಕಲೆಯ ಸರ್ವಾಂಗಗಳನ್ನು ವಿವರವಾಗಿ ಲಕ್ಷಿಸುವ ಒಂದು ಬೃಹತ್ ಲಕ್ಷಣ ಗ್ರಂಥವಿದು.

ಗ್ರಂಥಕರ್ತೃ ಎಲ್ಲಾ ಕಲಾಪ್ರಕಾರಗಳಲ್ಲಿ ಎಂದರೆ, ಆಂಗಿಕ, ವಾಚಿಕ, ಆಹಾರ್ಯ ಹಾಗೂ ಸಾತ್ತ್ವತಿಗಳ ರಸೈಕ ದೃಷ್ಟಿಯನ್ನಿಟ್ಟುಕೊಂಡಿದ್ದಾನೆ. ಒಂದೊಂದು ಕಲಾಪ್ರಕಾರದ ಬಂಧ ನಿಯಮಗಳಲ್ಲೂ ರಸದೌತಣವಾದ ಪ್ರತಿಭಾ ಪ್ರಕಾಶನದ ವಿಸ್ತಾರಕ್ಕೆ ಉದಾರ ಅವಕಾಶಕೊಟ್ಟಿರುವುದು ಗ್ರಂಥದ ಉದ್ದಕ್ಕೂ ಎದ್ದು ತೋರುತ್ತಿದೆ. ಎಲ್ಲಾ ಲಲಿತಕಲೆಗಳೂ ಅಂಗವಾಗಿರುವ ನಾಟ್ಯಕಲೆಯನ್ನು ಇಲ್ಲಿ ಸಮಗ್ರವಾಗಿ ವಿವೇಚಿಸಿರುವ ಕಾರಣ, ಕಾವ್ಯ, ನೃತ್ಯ, ಸಂಗೀತ, ಶಿಲ್ಪ-ಈ ಎಲ್ಲವುಗಳ ಲಕ್ಷಣವೂ ಈ ಗ್ರಂಥಗಳಲ್ಲಿ ಅಡಕವಾಗಿದೆ.

ದಶರೂಪಕ: ನಾಟ್ಯಶಾಸ್ತ್ರವನ್ನು ಕುರಿತ ಗ್ರಂಥ, ಧನಂಜಯ ಎನ್ನುವವ ಗ್ರಂಥ ಕರ್ತೃ ಶ್ರೀ ವಾಕ್ಪತಿರಾಜದೇವ ಶ್ರೀಮುಂಜರಾಜ ಎಂಬ ಅರಸನ ಆಸ್ಥಾನದಲ್ಲಿದ್ದವನು ಧನಂಜಯ ಕಾಲ 10ನೇಯ ಶತಮಾನದ ಕೊನೆ.

ಈ ಗ್ರಂಥದಲ್ಲಿ ನಾಲ್ಕು ಪ್ರಕಾರಗಳಿವೆ. ಮೊದಲನೆಯ ಪ್ರಕಾಶದಲ್ಲಿ ಗಣೇಶಸ್ತುತಿ, ನಾಟ್ಯದ ಮೂಲ ಸ್ತೋತ್ರ, ರೂಪಲಕ್ಷಣ, ಎರಡನೆಯದರಲ್ಲಿ ನಾಯಕ-ನಾಯಿಕಾ ಭಾವಗಳು, ವೃತ್ತಿಗಳು, ಮೂರನೆಯದರಲ್ಲಿ ರೂಪಕ ಭೇದಗಳ ವಿವರಗಳು, ಪ್ರಹಸನ ಲಕ್ಷಣ-ಹಾಗೂ ನಾಲ್ಕನೆಯದರಲ್ಲಿ ರಸದ ದಿಗ್ದರ್ಶನಗಳಿವೆ ಹಾಗೂ ರಸವಿಚಾರದ ಉಪಸಂಹಾರವಿದೆ.

ಅಗ್ನಿ ಪುರಾಣ: ಇದು ಪ್ರಾಚೀನ ಪುರಾಣವೆಂಬ ಹೆಸರು ಪಡೆದಿದೆ. ಇದು ಮಧ್ಯಮ ಯುಗೇನ ಕೃತಿ ಇಲ್ಲಿ ಭರತನ ಉಲ್ಲೇಖವಿದೆ. ನಾಟ್ಯಶಾಸ್ತ್ರದಿಂದಲೂ ಎತ್ತಿರುವ ಶ್ಲೋಕಗಳಿವೆ. ಅಲಂಕಾರ ಲಕ್ಷಣಗಳು, ರಸಸಿದ್ಧಾಂತಗಳನ್ನು ನಿರೂಪಿಸುತ್ತಿದೆ. ಕಾವ್ಯಾವಿಲಕ್ಷಣ, ನಾಟಕನಿರೂಪಣೆ, ಶೃಂಗಾರಾದಿ ರಸನಿರೂಪಣೆ, ನೃತ್ಯವಿಚಾರ, ಅಭಿನಯಾದಿ ನಿರೂಪಣೆ, ಕಾವ್ಯಗುಣ ವಿವೇಕ ಹಾಗೂ ಕಾವ್ಯ ಮೀಮಾಂಸೆಗೆ ಸಂಬಂಧಪಟ್ಟ ಪ್ರಮುಖ ವಿಚಾರಗಳು ನಿರೂಪಿತಗೊಂಡಿವೆ.

ಕಾವ್ಯಾನುಶಾಸನ-ಜನಪ್ರಿಯ ಅಲಂಕಾರಶಾಸ್ತ್ರ. ಬರೆದುದು ಆಚಾರ್ಯ ಹೇಮಚಂದ್ರ-ಇದರ ಅಧ್ಯಾಯಗಳಲ್ಲಿ ಕಾವ್ಯ, ರಸ, ಸ್ಥಾಯೀಭಾವ, ವ್ಯಭಿಚಾರಿಭಾವ, ಸಾತ್ತ್ವಿಕ ಭಾವಗಳ ನಿರೂಪಣೆ ಇದೆ. ನಯಕ-ನಾಯಿಕ ವಿಚಾರ, ಪ್ರೇಕ್ಷಕ ಮತ್ತು ಶ್ರವ್ಯ ಎಂಬ ವಿಭಾವಗಳಿವೆ.

ನಾಟಕ ಲಕ್ಷಣ ರತ್ನಕೋಶ: ನಾಟ್ಯಶಾಸ್ತ್ರದ ಮೇಲಿನ ಗ್ರಂಥ: ಬರೆದುದು ಸಾಗರನಂದಿ ಇದರಲ್ಲಿ, ನಾಟಕ ವಿಧಾನ, ರಸಭಾವಾದಿಗಳು, ಲಕ್ಷಣಾದಿಗಳಿವೆ – 13 ಶತಮಾನ.

ಭರತಾವರ್ಣವ: ಗ್ರಂಥ ಕರ್ತೃ ನಂದಿಕೇಶ್ವರ. ಈತ ಶಿವನ ಆರಾಧಕನು ಲಿಂಗಪುರಾಣದಲ್ಲಿ ಈತ ಒಬ್ಬ ದೃಷ್ಟಿ ಹೀನಳಾದ ಶಿಲಾದ ಎಂಬ ಹೆಸರಿನವಳಿಗೆ ಹುಟ್ಟಿದ್ದ. ತನಗೆ ಉತ್ತಮನಾದ ಮಗುಬೇಕೆಂದು ಶಿವನನ್ನು ಪ್ರಾರ್ಥಿಸಿದಾಗ ಶಿವನು ಅನುಗ್ರಹಿಸಿದ ಮಗು ಈತ. ತನ್ನ ಗುಣಕ್ಕೆ ಮುಖ್ಯಸ್ಥನಾಗುವಂತೆ ವರವಿತ್ತು ಹುಟ್ಟಿದವ. ಈ ನಂದೀಶ್ವರನೇ ತಂಡು ಎಂಬ ಹೆಸರನ್ನು ಪಡೆದ. ಹಿಂದೆ ಬ್ರಹ್ಮನಿಗೆ ಶಿವನ ಆಜ್ಞೆ ಪ್ರಕಾರ ನಾಟ್ಯಕ್ಕೆ ಸಂಬಂಧಿಸಿದ “ತಾಂಡವ”ವನ್ನು ಕಲಿಸಿದವನೇ ಇವನು.

ಈ ಕೃತಿಯಲ್ಲಿ ಅಭಿನಯವೆಂದರೆ ರೂಪ ಮತ್ತು ರೂಪಕ ಅಥವಾ ಪ್ರೇಕ್ಷಾ ಎಂಬ ಹೆಸರು ಪಡೆದು, ನರ್ತನವೇ ಮುಖ್ಯವಾಗಿದ್ದು, ಅದಕ್ಕೆ ಸಂಬಂಧಿಸಿದ ಇತರ ಗುಣಗಳನ್ನು ಬಿಟ್ಟಿದೆ.

ಇಲ್ಲಿ ಸಪ್ತಲಾಸ್ಯಗಳು, ಭ್ರಮಣತಾಂಡವ, ಸಂಯುತ, ಅಸಂಯುತ ಹಸ್ತ-ಮುದ್ರೆಗಳು ಶಿರ, ರಸದೃಷ್ಟಿಗಳು, ಸ್ಥಾಯೀಭಾವ-ವ್ಯಭಿಚಾರಿ ದೃಷ್ಟಿಗಳು, ಪಾದಲಕ್ಷಣ, ನಿಲುಗಡೆಯ ಸ್ಥಾನಗಳು (ಅದಕ್ಕೆ ಹೊಂದುವ ಹಸ್ತಗಳು), 108 ತಾಳಗಳು, ಚಾರಿಗಳು, ಅಂಗಹಾರ, ನಾನಾರ್ಥ ಹಸ್ತಗಳು, ಶೃಂಗನಾಟ್ಯ, ಲಾಸ್ಯಾಂಗ, ದೇಶೀತಾಂಡವದಲ್ಲಿ ಕರಣಗಳು (ಚಾರಿಗಳು, ತಾಳ, ಶಬ್ಧ, ಪೇರುಣಿನಾಟ್ಯ, ಪುಷ್ಟಾಂಜಲಿ ಕ್ರಮ, ದೇವತಾಹಸ್ತಗಳು, ಮುದ್ರೆಗಳು ಮತ್ತಿತರ ವಿಷಯಗಳಿವೆ.

ಅಭಿನಯ ದರ್ಪಣ: ನಂದೀಸ್ವರನ ಕೃತಿ, ಈ ಗ್ರಂಥವು ಆಂಗಿಕ ಅಭಿನಯಕ್ಕೆ ಸಂಬಂಧಿಸಿದ ಹಸ್ತಚಲನೆ, ನಿಂತಿರುವ ಸ್ಥಾನ ಹಾಗೂ ಅದಕ್ಕೆ ಸಂಬಂಧಿಸಿದ ಕಾಲುಗಳ ಪ್ರಯೋಗವನ್ನು ಒಳಗೊಂಡಿದೆ. ನಾಟ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯವಿದೆ.

ಅಭಿನಯದರ್ಪಣವು ನಂದೀಶ್ವರನ ಇನ್ನೊಂದು ಗ್ರಂಥ “ಭರತಾರ್ಣವ”ದ ಹ್ರಸ್ವಸ್ವರೂಪವೆಂದು ತಿಳಿಯುತ್ತಾರೆ. ಈ ಕೃತಿಯ ರಚನೆ ಸಾಧಾರಣ A.C. 1250 ಇರಬಹುದು. ಈ ಗ್ರಂಥದಲ್ಲಿ ಶಿರ, ದೃಷ್ಟಿ, ಗ್ರೀವ, ಸಂಯುತ – ಅಸಂಯುತ ಹಸ್ತಗಳು, ನವಗ್ರಹಗಳು, ದೇವತೆಗಳು, ದಶಾವತಾರಗಳು, ವರ್ಣಗಳು ಬಾಂಧವ್ಯ ಹಸ್ತ, ನಿಲುಗಡೆಯ ರೀತಿಗಳು, ಸ್ಥಾನಕಗಳು, ಉತ್ಪವಣ ಇತ್ಯಾದಿಗಳ ಲಕ್ಷಣ ಮತ್ತು ಪ್ರಯೋಗವನ್ನು ಹೇಳಿದೆ.

ನಾಟಕ ರತ್ನಕೋಶ:

ಸಾಗರನಂದಿ ರಚನಕಾರ ಕಾಲ 11ನೇಯ ಶತಮಾನ-ನಾಟಕಕ್ಕೆ ಸಂಬಂಧಿಸಿದ ಎಲ್ಲಾ ವಿವರಣೆಗಳನ್ನು ರೂಪಕ ಪ್ರಕಾರಗಳನ್ನು ವಿಸ್ತ್ರತವಾಗಿ ವಿವೇಚಿಸಿದ್ದಾನೆ. ಈ ಗ್ರಂಥವು ಸಂಪೂರ್ಣವಾಗಿ ಭರತನ ನಾಟ್ಯಶಾಸ್ತ್ರದ ಮೇಲೆ ನಿರ್ಭರವಾಗಿ ನಿಂತಿದೆ. ಇವನು ನಾಟ್ಯದ ಅಭಿನಯಾಂಗವನ್ನು ಸಂಕ್ಷೇಪವಾಗಿ ಚರ್ಚಿಸಿದ್ದಾನೆ.

ಸರಸ್ವತಿ ಕಂಠಾಭರಣ ಶೃಂಗಾರಪ್ರಕಾಶ

ಸಂಸ್ಕೃತ ಸಾಹಿತ್ಯದಲ್ಲಿ ಭೋಜನು ಕವಿ ಮತ್ತು ಕವಿಗಳಿಗೆ ಆಶ್ರಯದಾತನು. ಅವನು ವಿವಿಧ ಶಾಸ್ತ್ರವಿಜ್ಞತೃವೂ, ಗಂಭೀರ ವಿಚಾರದವನೂ ಅನೇಕ ಗ್ರಂಥ ನಿರ್ಮಾಪಕನೂ ಆಗಿದ್ದನು. ಗದ್ಯಕಾವ್ಯ, ಅಲಂಕಾರಶಾಸ್ತ್ರ, ಧರ್ಮಶಾಸ್ತ್ರ, ಜ್ಯೋತಿಷ್ಯ ಯೋಗಶಾಸ್ತ್ರವ್ಯಾಕರಣ, ವಾಸ್ತುವಿದ್ಯೆಗಳಲ್ಲಿ ನಿಷ್ಣಾತನಾಗಿ ಅವುಗಳಲ್ಲಿ ಗ್ರಂಥಗಳನ್ನು ಬರೆದಿದ್ದಾನೆ. ಸರಸ್ವತಿ ಕಂಠಾಭರಣ ಶೃಂಗಾರ ಪ್ರಕಾರಗಳೆರಡೂ ಅಲಂಕಾರಶಾಸ್ತ್ರವನ್ನು ಕುರಿತಾದದ್ದು. ಅವನು ಶೃಂಗಾರ ಪ್ರಕಾಸದಲ್ಲಿ ನಾಟ್ಯ ಮತ್ತು ಅಂಗಗಳನ್ನು ವಿಸ್ತಾರವಾಗಿ ವಿಮರ್ಶಿಸಿದ್ದಾನೆ. ಇವರ ಅಭಿಪ್ರಾಯದಲ್ಲಿ ದೃಶ್ಯಕಾವ್ಯಕ್ಕಿಂತ ಶ್ರವ್ಯಕಾವ್ಯದ ಕ್ಷೇತ್ರವು ವ್ಯಾಪಕವಾದುದು. ಇವರ ಕಾಲ 11ನೇಯ ಶತಮಾನದ ಪೂರ್ವಾರ್ಧ.

ನಾಟ್ಯದರ್ಪಣಸೂತ್ರ:

ರಾಮಚಂದ್ರ ಗುಣಚಂದ್ರರು ಜೈನಾಚಾರ್ಯನಾದ ಹೇಮಚಂದ್ರನ ಶಿಷ್ಯರು. ಇವರಿಬ್ಬರೂ ಕಲೆತು ನಾಟ್ಯದರ್ಪಣ ಸೂತ್ರವನ್ನು ರಚಿಸಿದ್ದಾರೆ. ನಾಟಕದ ರಚನಾ ವಿಷಯದಲ್ಲಿ ಅಧಿಕವಾಗಿ ಚರ್ಚಿಸಿದ್ದಾರೆ. ಇವರಿಬ್ಬರ ಕಾಲ 12ನೇಯ ಶತಮಾನ. ಅವರ ಕಾರಿಕಾವೃತ್ತಿಗಳೆರಡರಲ್ಲಿಯೂ ಕೆಲವು ನಾಟ್ಯ ಶಾಸ್ತ್ರಕಾರರ ಹಾಗೂ ಪ್ರಕರಣಗ್ರಂಥಗಳ ವಿಷಯಗಳನ್ನು ಆಲೋಚಿಸಿದ್ದಾರೆ. ಸಾಮಾಜಿಕ ಪ್ರವೃತ್ತಿಗನುಗುಣವಾಗಿ ನಾಟಕ ರಚನಾ ವಿಷಯದಲ್ಲಿ ಅಧಿಕವಾಗಿ ಚರ್ಚಿಸಿದ್ದಾರೆ.

ಭಾವಪ್ರಕಾಶನ

ಶಾರದಾತನಯ ರಚನಾಕಾರ ಕಾಶ್ಯಪಗೋತ್ರದ ಭಟ್ಟಗೋಪಾಲನ ಮಗ. ಭಟ್ಟ ಗೋಪಾಲನು ಶಾರದಾದೇವಿಯ ಉಪಾಸನೆಯಿಂದ ಮಗನನ್ನು ಪಡೆದದ್ದರಿಂದ ಶಾರದಾತನಯನೆಂದೇ ಹೆಸರಿಟ್ಟರು. ಶಾರದಾತನಯನು ವೇದಶಾಸ್ತ್ರಾದಿ ವಿದ್ಯೆಗಳನ್ನು ಕಲಿತನಲ್ಲದೆ, ಆಚಾರ್ಯ ದಿವಾಕರನಿಂದ ನಾಟ್ಯವಿದ್ಯೆಯನ್ನು ಕಲಿತನು. ಇವನ ಕಾಲ ೧೩ನೇ ಶತಮಾನ.

ಶಾರದಾತನಯನು ಪೂರ್ವಾಚಾರ್ಯರ ಗ್ರಂಥಗಳನ್ನು ಆಧಾರವಾಗಿಟ್ಟುಕೊಂಡು ತನ್ನ ಗ್ರಂಥವನ್ನು ರಚಿಸಿದ್ದಾನೆ. ನಾಟ್ಯ ವಿಷಯವನ್ನು ಭಾವಗಳ ಆಧಾರದಿಂದ ಗ್ರಹಿಸಿ ಅವನು ಪ್ರೇಕ್ಷಕರ ಮುಂದಿಡಲು ಪ್ರಯತ್ನಿಸಿದ್ದಾನೆ. ನಾಟ್ಯ ಭಾವಗಳ ಪ್ರದರ್ಶನವೇ ಮುಖ್ಯವಾದ್ದರಿಂದ ತನ್ನ ಗ್ರಂಥಕ್ಕೂ ಭಾವಪ್ರಕಾಶವೆಂದೇ ಹೆಸರಿಟ್ಟಿದ್ದಾನೆ. ಭಾವ, ರಸ, ನಾಯಕಾದಿ ಸ್ವರೂಪ, ರೂಪಕಗಳ ಪ್ರಕಾರ, ಕಥಾವಸ್ತುಗಳ ಸ್ಪಷ್ಟ ವಿವೇಚನೇಗಳನ್ನೇ ಅಲ್ಲದೆ ಅಭಿನಯಾದಿಗಳನ್ನು ಪರಾಮರ್ಶಿಸಿದ್ದಾನೆ. ತತ್ಕಾಲದಲ್ಲಿ ಪ್ರಚಲಿತವಾದ ಪ್ರವೃತ್ತಿಗಳ ಕಡೆಗೂ ಗಮನಹರಿಸಿ ನಾಟ್ಯಗಳ ಸಮಸ್ತ ಅಂಗಗಳಿಗಿಂತ ಹೆಚ್ಚಾಗಿ ರೂಪಕಸಂಬದ್ಧ ವಿಷಯಗಳನ್ನು ದಶರೂಪಕದಂತೆ ಇಲ್ಲಿ ಪ್ರದರ್ಶಿಸುತ್ತಾನೆ.

ರಸಾವರ್ಣ ಸುಧಾಕರ:
ಸಿಂಹಭೂಪಾಲನ ನಾಟ್ಯಕ್ಕೆ ಸಂಬಂಧಿಸಿದಂತೆ ಪುಸ್ತಕ. ಇವನು ಅನಂತ ಅನ್ನಮ್ಮರ ಮಗ. ವಂಶಪರಂಪರಾಪ್ರಾಪ್ತವಾದ ರಾಜಾಚಲ ರಾಜಧಾನಿಯಲ್ಲಿ ರಾಜ್ಯಭಾರ ಮಾಡುತ್ತಿದ್ದ. ಇವನ ರಾಜ್ಯದ ಎಲ್ಲೆಕಟ್ಟು ವಿಂದ್ಯಾಚಲದಿಂದ ಹಿಡಿದು ಶ್ರೀಶೈಲಪರ್ವತದ ಮಧ್ಯವರ್ತಿಯಲ್ಲಿತ್ತು. ಇವನ ವಂಶಾವಳಿಯ ಆಧಾರದಿಂದ ಈತನು ೧೩೩೦ ಎಂದರೆ ೧೪ನೇ ಆದಿಯಲ್ಲಿದ್ದನು. ಇವನು ನಾಟ್ಯ ಮತ್ತು ಸಂಗೀತದ ಮೇಲೂ ಗ್ರಂಥಗಳನ್ನು ಬರೆದಿದ್ದಾನೆ. ಇವನು ಕವಿ ಮತ್ತು ಕವಿಗಳಿಗೆ ಆಶ್ರಯ. ಇವನ ರಸಾರ್ಣವ ಸುಧಾರಕವೂ. ನಾಟಕ ಪರಿಭಾಷೆಯೂ, ನಾಟ್ಯ ಶಾಸ್ತ್ರೀಯ ಗ್ರಂಥಗಳು, ಕುವಲಯಾವಲಿಯೂ ನಾಟಕ, ಸಂಗೀತ ರತ್ನಾಕರಕ್ಕೆ ಇವನೊಂದು ವಾಖ್ಯೆ ದೊರೆತಿದೆ. ರಸಾರ್ಣವ ಸುಧಾರಕವು ದಶರೂಪಕದಂತಹ ಒಂದು ಪ್ರಕರಣ ಗ್ರಂಥ. ಇದರಲ್ಲಿ ರೂಪಕಗಳಿಗೆ ಸಂಬಂಧಿಸಿದ ಎಲ್ಲ ವಿಷಯಗಳೂ ಸಾಧಿಕಾರವಾಗಿ ಪ್ರತಿಪಾದಿತವಾಗಿದೆ.

ಸಾಹಿತ್ಯ ದರ್ಪಣ:

ವಿಶ್ವನಾಥ ಕವಿರಾಜ. ಸಾಹಿತ್ಯದರ್ಪಣವೂ ಅಲಂಕಾರ ಶಾಸ್ತ್ರದ ಅತಿ ಪ್ರಸಿದ್ಧವಾದ ಲಕ್ಷಣಗ್ರಂಥ. ಇವನು ನಾಟಕೀಯ ತತ್ತ್ವಗಳನ್ನು ವಿವೇಚಿಸುತ್ತಾ ಗ್ರಂಥಕಾರನು ಪೂರ್ವಸ್ಥಿತ ನಾಟ್ಯಗ್ರಂಥ ವಿಷಯಗಳನ್ನು, ಸಿದ್ಧಾಂತಗಳನ್ನು ಸಂ‌ಕ್ಷಿಪ್ತವಾಗಿ ಮುಂದಿಡುತ್ತಾನೆ. ಇದರಲ್ಲಿ ನಾಟಕಲಕ್ಷಣ, ರೂಪಕವಿಭೇದ, ಉಪಬೇದ, ಅರ್ಧಪ್ರಕೃತಿ, ಸಂಧಿ ಮುಂತಾದವೆಲ್ಲವೂ ಸೋದಾಹರಣವಾಗಿ ಪ್ರತಿಪಾದಿತವಾಗಿದೆ.

ಕವಿರಾಜ ವಿಶ್ವನಾಥನು ಉತ್ಕಲದೇಶದ ಬ್ರಾಹ್ಮಣವಂಶಜನು ಈತನು ನಾಲ್ಕನೆಯ ಭಾನುದೇವನ ಸಭಾಪಂಡಿತನಾಗಿದ್ದನು. ಈತನು ೧೫ನೇ ಶತಮಾನದ ಆದಿಭಾಗದಲ್ಲಿದ್ದನು. ಹೀಗೆ ನಾಟ್ಯಶಾಸ್ತ್ರೀಯ ಪ್ರಕರಣಗ್ರಂಥಗಳು ಕ್ರಮಕ್ರಮವಾಗಿ ಬೆಳೆದು ವಿಶ್ವನಾಥನ ಪ್ರತಾಪರುದ್ರ ಯಶೋಭೂಷಣ ಪ್ರಕಾಶಕ್ಕೆ ಬಂದಿತು. ಅವುಗಳಲ್ಲಿ ನಾಟ್ಯಶಾಸ್ತ್ರೀಯ ವಿವರಣಗಳು ಹಂತಹಂತವಾಗಿ ನಾಟಕಾದಿ ಲಕ್ಷಣಗಳವರೆಗೆ ವೃದ್ಧಿಗೊಂಡವು. ಅಭಿನವ ಭಾರತಿಯಲ್ಲಿ ನಾಟಕದ ಸಂಧ್ಯಂಗಗಳೂ, ನಾಟ್ಯಾಂಗಗಳೂ ಸೋದಾಹರಣವಾಗಿ ವಿವೃತವಾಗಿವೆಯಲ್ಲದೆ  ನೂತನ ಸಿದ್ಧಾಂಗಗಳ ಉದ್ಧಾವನೆಯೂ, ನಾಟ್ಯಶಾಸ್ತ್ರೀಯ ತತ್ತ್ವಗಳೂ ದಾರ್ಶನಿಶಾಧಾರಗಳ ಮೇಲೆ ಚರ್ಚಿತವಾಗಿವೆ.

ಕುವಲಯಾನಂದ:

ಅಪ್ಪಯ್ಯನ ದೀಕ್ಷಿತ: ಇವನ ಕಾಲ ೧೫೪೯-೧೬೧೨ರವರೆಗೆ, ದಾಕ್ಷಿಣತ್ಯದಲ್ಲಿ ಈತ ಪ್ರಮುಖ, ಹಲವು ಶಾಸ್ತ್ರಶಾಖೆಗಳಲ್ಲಿ ನಿಷ್ಣಾತ. ವ್ಯಾಕರಣ ಅಲಂಕಾರಶಾಸ್ತ್ರಗಳಿಗೆ ಆದ್ವೆತ ಸಿದ್ಧಾಂತಗಳಲ್ಲಿ ಇವನದ್ದು ಅಪ್ರತಿಮ ವಿದ್ವತ್ತು. ಅಲಂಕಾರಶಾಸ್ತ್ರಕ್ಕೆ ಸಂಬಂಧಿಸಿದಂತೆ ಮೂರು ಕೃತಿಗಳಿವೆ. ಕುವಲಯಾನಂದ, ಚಿತ್ರಮೀಮಾಂಸ, ವೃತ್ತಿವಾರ್ತಿಕ, ಲಕ್ಷಣ ರತ್ನಾವಳೀ ಇವುಗಳನ್ನು ಬರೆದಿದ್ದಾನೆ. ಕುವಲಯಾನಂದವೂ ಜನಪ್ರಿಯ ಅಲಂಕಾರಗ್ರಂಥ. ದಕ್ಷಿಣ ಭಾರತದಲ್ಲಿ ಇದು ಸಂಸ್ಕೃತ ವಿದ್ಯಾರ್ಥಿಗಳ ಕೈಪಿಡಿ.

ಅಭಿನವ ಭಾರತೀ:

ಅಭಿನವಗುಪ್ತ ಕಾಶ್ಮೀರದಲ್ಲಿದ್ದ ಬಹು ದೊಡ್ಡ ಅಲಂಕಾರಿಕ. ಇವನ ಕಾಲ ಕ್ರಿ.ಶ.೯೮೦-೧೦೨೦. ಧ್ವನಿಲೋಕದಲ್ಲಿ ಧ್ವನಿತವಾಗಿದ್ದ ರಸದ ಪಾರಮ್ಯವನ್ನು ಸ್ಪಷ್ಠೋಕ್ತಿಯಲ್ಲಿ ದೃಢಪಡಿಸಿದವನು. ಇವನು ಕೇವಲ ಕಾವ್ಯಲಕ್ಷಣಕಾರ ಮಾತ್ರವಲ್ಲ; ಬಹುದೊಡ್ಡ ದಾರ್ಶನಿಕ ಸಾಧಕ, ಅನುಭಾವೀ ಮಹಾಮಹೇಶ್ವರ.

ಜೈನ ಬೌದ್ಧ, ನಾಸ್ತಿಕಗುರುಗಳನ್ನು ಕೂಡ ಅವರ ಶಾಸ್ತ್ರಗಳನ್ನು ತಿಳಿವ ಕುತೂಹಲದಿಂದ ಆಶ್ರಯಸಿದಂತೆ. ಸಾಹಿತ್ಯದಲ್ಲೂ ದರ್ಶನದಲ್ಲೂ ಮಹಾತೀಶ್ರಮತಿ. ಕಾರಣಾಂತರಗಳಿಂದ ಸಂಸಾರದಲ್ಲಿ ವಿರಕ್ತಿಬಂದು ರೆವೋಪಾಸನೆಯ ಕಡೆಗೆ ಮನಸ್ಸು ತಿರುಗಿತು. ಹೆಂಡತಿ ಮಕ್ಕಳ ಬಂಧನ ಅವನಿಗೆ ಒದಗಲಿಲ್ಲ. ಅನೇಕ ಸಾಧನೆಗಳನ್ನು ನಡೆಸಿ ಹಲವು ಸಿದ್ದಿಗಳನ್ನು ಪಡೆದನಂತೆ. ಇವನು ಭೈರವನ ಅವತಾರವೆಂದು ಜನರು ಭಾವಿಸಿದ್ದರು. ಅವನ ಶಿವಭಕ್ತಿ ಶಿವಾನುಭವಗಳಂತೂ ಅತಿಶಯವಾದವುಗಳು. ಇವನು ಸಾಹಿತ್ಯಕ್ಕೆ ಸಂಬಂಧಪಟ್ಟವು ಮೂರು ಮಾತ್ರ: ೧. ಕಾವ್ಯಕೌತುಕ ವಿವರಣೆ, ೨. ಧ್ವನ್ಯಾಲೋಕ ಲೋಚನ, ೩. ಅಭಿನವ ಭಾರತೀ ಅಥವಾ ನಾಟ್ಯವೇದ ವಿವೃತ್ತಿ.

ರಸಗಂಗಾಧರ:

ಜಗನ್ನಾಥನು ೧೭ನೇ ಶತಮಾನದಲ್ಲಿದ್ದ ಪ್ರಸಿದ್ಧ ಆಲಂಕಾರಿಕ. ಇವನ ರಸಗಂಗಾಧರ ಸಂಸ್ಕೃತ ಕಾವ್ಯವಿಮಾಂಸೆಯಲ್ಲಿ  ವಿದಗ್ಧ ಕೃತಿ. ಇವನ ತಂಡೆ ಪೇರುಭಟ್ಟನೇ ಮಗನಿಗೆ ಗುರು. ಮೊಘಲ ಚಕ್ರವರ್ತಿ ಶಹಜಹಾನನು ಜಗನ್ನಾಥನಿಗೆ ಪಂಡಿತರಾಜನೆಂಬ ಬಿರುದನ್ನು ಕೊಟ್ಟನು. ಜಗನ್ನಾಥನ ಮಹತ್ವದ ಕೃತಿ ರಸಗಂಗಾಧರವು ಅಲಂಕಾರಶಾಸ್ತ್ರದ ಮೇಲಿನ ಅಪೂರ್ವ ಗ್ರಂಥ. ಕಾವ್ಯಸ್ವರೂಪ, ಕಾವ್ಯಭೇದ, ರಸವಿಚಾರ, ಅರ್ಥಾಲಂಕಾರಗಳನ್ನು ಒಳಗೊಂಡಿದೆ. ಕಾವ್ಯಲಕ್ಷಣ, ಕಾವ್ಯವಿಭಾಗ, ರಸಸ್ವರೂಪ, ಭಾವವಿವೇಚನೆ, ಗುಣಗಳು, ಸಂಘಟನಾದೋಷ, ಭಾವಧ್ವನಿ, ವ್ಯಭಿಚಾರಿ ಭಾವ, ರಸಾಭಾವ, ಭಾವೋದಯ, ಭಾವಶಾಂತಿ ಹಾಗೂ ವ್ಯಂಗ್ಯಭೇದಗಳನ್ನು ಒಳಗೊಂಡಿದೆ.

ರಸರತ್ನಾಕರ:

ಕನ್ನಡದ ಪ್ರಸಿದ್ಧಗ್ರಂಥ. ಈ ಗ್ರಂಥವು ರಸಸಂಪ್ರದಾಯದ ಮುಖ್ಯ ವಿಚಾರಗಳನ್ನು ನಿರೂಪಿಸುತ್ತದೆ. ಇದನ್ನು ಬರೆದವನು ಸಾಳ್ವ. ಇವರ ಕಾಲ ಸುಮಾರು ೧೫೫೦ ಇದರಲ್ಲಿ ಶೃಂಗಾರಪ್ರಪಂಚ ವಿವರಣಂ, ನವರಸಪ್ರಪಂಚ ವಿವರಣಂ, ನಾಯಕ-ನಾಯಿಕ ವಿವರಣಂ, ವ್ಯಭಿಚಾರಿಭಾವ ವಿವರಣಂ ಎಂಬ ನಾಲ್ಕು ಪ್ರಕರಣಗಳಿವೆ. ಸಾಳ್ವನು ಎಲ್ಲ ರಸಗಳನ್ನು  ರಸಾಭಾವ, ಭಾವಭಾವನಾದಿಗಳನ್ನು ನಿರೂಪಿಸಿದ್ದರೂ ಅನೇಕ ಲಾಕ್ಷಣಿಕರಂತೆ ಶೃಂಗಾರಕ್ಕೆ ಪ್ರಾಶಸ್ತ್‌ಯ ಕೊಟ್ಟು  ಆ ರಸಕ್ಕೆ ಸಂಬಂಧಪಟ್ಟ ಆಲಂಬನ, ಉದ್ದೀಪನ, ವಿಪ್ರಲಂಭ ಪ್ರಕಾರಗಳನ್ನು ಚಕ್ಷು, ಪ್ರೀತಿ ಮೊದಲಾದ ದಶಾವಸ್ಥೆಗಳನ್ನು ನಿರೂಪಿಸುತ್ತಾನೆ. ಇವನು ಲಕ್ಷಣಗಳನ್ನು ಪ್ರಭೇದಗಳನ್ನು ಕೇವಲ ಪಟ್ಟಿಯ ರೂಪದಲ್ಲಿ ಕೊಡದೆ ಅಲ್ಲಲ್ಲೇ ವಿಚಾರಗಳನ್ನು ಸೇರಿಸುತ್ತಾನೆ. ಈತನು ಭಾರತ, ರತರತ್ನಾಕರ, ವೈದ್ಯಸೌಂಗತ್ಯ – ಇವುಗಳನ್ನು ಬರೆದಿದ್ದಾನೆ. ಈತ ಜೈನಕವಿ, ತಂದೆ ಧರ್ಮಚಂದ, ಗುರು ಜತಕೀರ್ತಿ.

ಚಿಕ್ಕ ದೇವರಾಯಸಪ್ತಪದಿ ಹಾಗೂ ಗೀತಗೋಪಾಲ

ತಿರುಮಲಾಚಾರ್ಯ – ಎರಡೂ ಗೇಯನಾಟಕಗಳು ಏಳು ಹಾಡುಗಳುಳ್ಳ ಒಂದು ಸಮುಚ್ಛಯ. ಇದಕ್ಕೆ ಸಪ್ತಪದಿಯೆಂಬ ಹೆಸರು ಇದೆ. ಶೃಂಗಾರರಸದ ವರ್ಣನೆಯಲ್ಲಿ ತೊಡಗಿ ನಾನಾ ನಾಯಕ- ನಾಯಕೀ ಭಾವಗಳನ್ನು ಕವಿಯು ಹೇಳುತ್ತಿದ್ದಾನೆ. ಕವಿಯು ತನ್ನ ಪ್ರಭುವಾದ ಚಿಕ್ಕದೇವರಾಯನನ್ನೇ ನಾಯಕನನ್ನಾಗಿ ತೆಗೆದುಕೊಂಡು, ನಾಯಕಿಯ ಸತ್ವಜವಾದ ಅಲಂಕಾರಗಳಿಂದ ಹುಟ್ಟುವ ಚೇಷ್ಟೆಗಳ ಕುರಿತು ಹಾಗೂ ರಾಯರ ಅಪ್ರತಿಮ ವೀರಚರಿತೆಗಳನ್ನು ರಚಿಸಿದ್ದಾನೆ. ಮೈಸೂರಿನ ಕಲಾ ಇತಿಹಾಸದಲ್ಲಿ ಈ ಕೃತಿ ರಚಿತವಾಗಿದೆ. ಕ್ರಿ.ಶ.೧೬೭೩-೧೭೦೪ರ ಒಳಗೆ.

ಅಮರು ಶತತಕಮ್‌- ಅಮರು ಕವಿ ರಚಿತವಾದದು. ಶೃಂಗಾರ ರಸಪ್ರದಾನವಾದ ಕಾವ್ಯಗಳಲ್ಲಿ ಅಮರು ಶತಕಕ್ಕೆ ಪ್ರಥಮ ಸ್ಥಾನವಿದೆ. ಶ್ಲೋಕಸರಣಿಯು ಲಲಿತವಾಗಿದ್ದರೂ ಅರ್ಥಗಾಂಭೀರ್ಯ ಸುಲಭವಾಗಿಲ್ಲ. ಸಂಸ್ಕೃತ ಸಾಹಿತ್ಯದಲ್ಲಿ ಕವಿಗಳಿಗೆ ಅಮರುಕವಿ ಒಬ್ಬನಾಗಿದ್ದ. ಕ್ರಿಸ್ತಶಕ ಸುಮಾರು ೮೦೦ರ ಸಮಯದಲ್ಲಿ ಈ ಕೃತಿ ರಚಿತವಾಯಿತು. ಅವನ ಈ ಶತಕದ ಪದ್ಯಗಳು ಮುಕ್ತಕವೆಂಬ ಕಾವ್ಯಭೇದಕ್ಕೆ ಸೇರಿದವು. ಇದು ಭಾವಗೀತೆಯೆಂತಲೂ ತಿಳಿಯಬಹುದು.ವಿಪ್ರಲಂಭ ಶೃಂಗಾರದಲ್ಲಿ ಕವಿಯು ವಿಶೇಷವಾಗಿ ‌ಪ್ರತಿಪಾದಿಸಿದ್ದಾನೆ. ಪ್ರೇಮಪ್ರಪಂಚಕ್ಕೆ ಸೇರಿದ ಗಾಢವಾದ ಆಳವಾದ ಸಮಸ್ಯೆಗಳನ್ನು ಆತ ಬಹಳ ಸುಲಭವಾಗಿ ಚಿತ್ರಿಸಿದ್ದಾನೆ. ಕವಿಯ ಕಾಲವು ಅನಿಶ್ಚಿತವಾದರೂ ಸುಮಾರು ಕ್ರಿ.ಶ. ೭೦೦ರಲ್ಲಿರಬಹುದು.

ಶ್ರೀಕೃಷ್ಣಕರ್ಣಾಮೃತಂ:

ಲೀಲಾಶುಕಕವಿ (ಈತನೇ ಬಿಲ್ವಮಂಗಲನೆಂದು ಜನ ತಿಳಿಯುತ್ತಾರೆ). ಈತ ದಾಮೋದರ ಮತ್ತು ನೀಲೀ ಇವರ ಸುಪುತ್ರ. ೧೭ನೇ ಶತಮಾನದಲ್ಲಿ ಈ ಕೃತಿ ರಚನೆಯಾದದ್ದು. ಚಿಂತಾಮಣಿ ಎಂಬ ನಾಟ್ಯಗಾತಿ ಲೀಲಾಶುಕನಿಗೆ ಗುರುವಾಗಿ ಆತನ ಚಿತ್ರವನ್ನು ಭಗವಂತನದಲ್ಲಿ ರೂಢಿಸಿದವಳು. ಲೀಲಾಶುಕನ ಕೃತಿಯಲ್ಲಿ ಚಿಂತಾಮಣಿಯ ಹೆಸರು ಬಂದಿರಲು, ಆತ ಅವಳಲ್ಲಿ ಕಂಡ ವೈಶಿಷ್ಟ್ಯವನ್ನು ಕಾಣಬಹುದು. ೧೪ನೇ ಶತಮಾನದಲ್ಲಿ ಈ ಕೃತಿ ರಚನೆಯಾದದ್ದು.

ಶೃಂಗಾರ ರತ್ನಾಕರ:

ಕನ್ನಡದಲ್ಲಿ ರಸವಿಷಯವನ್ನು, ಅದರಲ್ಲೂ ಶೃಂಗಾರರಸದ ವಿಷಯವನ್ನು ನಾಯಕ, ನಾಯಕಿಯರ ಪ್ರಭೇದಗಳನ್ನು, ಶೃಂಗಾರ ಚೇಷ್ಟೆಗಳು ಮೊದಲಾದ ಪರಿಕರಗಳೊಡನೆ ವಿಸ್ತಾರವಾಗಿ ಪ್ರತಿಪಾದಿಸುವ ಗ್ರಂಥಗಳಲ್ಲಿ ಮೊದಲನೆಯದು. ರಸವಿವೇಕ ಎಂಬುದು ಅವರ ಇನ್ನೊಂದು ಹೆಸರು. ಇದರಲ್ಲಿ ನವರಸವ್ಯಾವರ್ಣ, ಭಾವಭೇದನಿರ್ಣಯ, ನಾಯಕನಾಯಿಕಾ ವಿಕಲ್ಪ ವಿಸ್ತಾರ, ಸಖಸಖೀಸಂಭೋಗ, ವಿಪ್ರಲಂಭ ಪ್ರಮಾವಿಸ್ತರ ಎಂಬ ನಾಲ್ಕು ಪರಿಚ್ಛೇದಗಳಿವೆ.

ಶೃಂಗಾರ ರತ್ನಾಕರದ ಕಾಲ ಕ್ರಿ.ಶ.ಸುಮಾರು ೧೨೦೦ ಆಗಿರಬಹುದು. ಕವಿಕಾಮದೇವ ಗ್ರಂಥವಿದು.