ಜೀವನ ಪ್ರೀತಿಗೆ ಹೆಸರಾಗಿದ್ದ ಸಂಗಣ್ಣನವರು, ಬದುಕಿನ ನಿಗೂಢಗಳನ್ನೂ ಶೋಧಿಸುತ್ತಲೇ ಅದನ್ನು ಅರ್ಥಪೂರ್ಣವಾಗಿರಿಸಿಕೊಂಡಿದ್ದವರು. ತಮ್ಮ ಊರನ್ನೇ ಕೇಂದ್ರವಾಗಿರಿಸಿಕೊಂಡು ಬೇರೆ ಬೇರೆ ಊರುಗಳ ಸ್ನೇಹಿತರೊಂದಿಗೆ ಸಂಪರ್ಕವಿರಿಸಿಕೊಂಡಿದ್ದರು. ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ ರಿಂದ ಎಂ.ಪಿ. ಪ್ರಕಾಶ, ಕುಂ. ವೀರಭದ್ರಪ್ಪ, ಬಸವರಾಜ ಮಲಶೆಟ್ಟಿ, ಮೃತ್ಯುಂಜಯ ರುಮಾಲೆ, ಸುಭದ್ರಮ್ಮ ಮನ್ಸೂರು, ಗೊಂದಲಿಗರ ದೇವೆಂದ್ರಪ್ಪನಿಂದ ನೂರಾರು ಜಾನಪದ ಕಲಾವಿದರನ್ನೊಳಗೊಂಡು ನನ್ನಂಥ ಕಿರಿಯನವರಿಗೂ ಅವರ ಸ್ನೇಹ, ಸಂಪರ್ಕವಿತ್ತು. ಮನೆಯಲ್ಲಿ ಏನಾದರೊಂದು ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದರೆ ಒಡನಾಡಿಗಳೆಲ್ಲರಿಗೂ ಅಂಚೆಯ ಮೂಲಕ ಪತ್ರ ಬರೆದು ಆಹ್ವಾನಿಸುತ್ತಿದ್ದರು.

`ಅತಿಥಿ ದೇವೋಭವ` ಎನ್ನುವ ಮಾತನ್ನು ಅಕ್ಷರ ಸಹ ಪಾಲಿಸಿದವರು ಇವರು ಹಾಗೂ ಇವರ ಕುಟುಂಬ. ಮನೆಗೆ ಯಾರಾದರೂ ಅತಿಥಿ ಬಂದರೆ, ಸ್ವತಃ ಸಂಗಣ್ಣರೆ ಎದ್ದು ಬಂದು ಒಳ ಕರೆದು, ಅವರ ಮುಖ ತೊಳೆಯಿಸಿ, ಊಟವನ್ನು ಮಾಡಿಸಿದ ಮೇಲೆಯೇ ಅವರೊಂದಿಗೆ ಮಾತು ಶುರುಮಾಡುತ್ತಿದ್ದರು. ಅತಿಥಿ ಸತ್ಕಾರಕ್ಕೆ ಹೆಂಡತಿ, ಮಗ, ಸೊಸೆ, ಮೊಮ್ಮಕ್ಕಳು ಹೀಗೆ ಎಲ್ಲರೂ ನಿಲ್ಲುತ್ತಿದ್ದರು. ಇಂಥ ಪರಂಪರೆಯನ್ನು ಈ ಹೊತ್ತಿನ ಯಾವ ಸಾಹಿತಿಯ ಮನೆಯಲ್ಲಿಯು ನಾನು ಕಂಡಿಲ್ಲ.

ಸಂಗಣ್ಣರಿಗೆ ನಾಡಿನ ತುಂಬ ಸ್ನೇಹಿತರು. ಪಕ್ಕದ ಹಡಗಲಿ, ದಾವಣಗೆರೆ, ಮರಿಯಮ್ಮನ ಹಳ್ಳಿ, ಹೊಸಪೇಟೆಯಿಂದ ದೂರದ ಹೆಗ್ಗೋಡು, ಉಡುಪಿಯವರಿಗೆ, ಅತ್ತ ಬೆಳಗಾವಿ ಜಿಲ್ಲೆಯ ಗಡಿ ಭಾಗವಾದ ನಿಪ್ಪಾಣಿ ಗ್ರಾಮದ ಜನರಿಗೂ ಇವರ ಸ್ನೇಹ. ಬೇರೆ ಬೇರೆ ಊರುಗಳಲ್ಲಿ ರಂಗ ಪ್ರಯೋಗಗಳು, ನಾಟಕಗಳು ನಡೆಯುತ್ತಿದ್ದರೆ ಅಲ್ಲಿಗೆ ಹೋಗುತ್ತಿದ್ದರು. ಹಿಂದೊಮ್ಮೆ ಹಡಗಲಿಗೂ ಇವರಿಗೂ ಕರುಳ ಬಳ್ಳಿಯ ಸಂಬಂಧ ಎಂ.ಪಿ. ಪ್ರಕಾಶ್‌ರ ಎಲ್ಲಾ ರಂಗಭೂಮಿ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಗಣ್ಣನವರು ಇರಲೇಬೇಕು. ಪ್ರಕಾಶ್‌ರು ನಿರ್ದೇಶಿಸುವ ನಾಟಕಗಳನ್ನು ಮೊದಲು ಸಂಗಣ್ಣನವರು ನೋಡಲೇಬೇಕಿತ್ತು. ಡಾ. ಶಿವರಾಮ ಕಾರಂತರ ೬೦ನೇ ಹುಟ್ಟು ಹಬ್ಬ ಉಡುಪಿಯ ಎಂ.ಜಿ.ಎಂ. ಕಾಲೇಜ್‌ನಲ್ಲಿ ನಡೆದಾಗ ಸಂಗಣ್ಣ ಹಾಗೂ ಎಂ.ಪಿ. ಪ್ರಕಾಶ್‌ರು ಜೊತೆಯಲ್ಲೇ ಹೋಗಿ ಬಂದಿದ್ದರು.

ಇವರು ರಚಿಸಿದ ಕವಿತೆ, ಸಾಹಿತ್ಯ ಹಾಗೂ ನಾಟಕಗಳಲ್ಲಿ ಮಾನವೀಯತೆ, ಪ್ರೀತಿ, ವಿಶ್ವಾಸಕ್ಕೆ ಆದ್ಯತೆ ಇತ್ತು. ೨೫ರ ಹರಯದಿಂದಲೇ ಜಾನಪದದ ಅಧ್ಯಯನಕ್ಕೆ ಈಡಾದ ಇವರು ತಮ್ಮ ೬೦ನೇ ವಯಸ್ಸಿನವರಿಗೂ ಎಲ್ಲೂ ಸದ್ದು-ಗದ್ದಲವಿಲ್ಲದೆ ಸಾಧನೆ ಮಾಡಿದ ಸಾಧಕರಾಗಿದ್ದಾರೆ. ನಂತರ ಸಭೆ ಸಮಾರಂಭಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸಂಗಣ್ಣ ಯಾರಿಂದಲೂ ಉಚಿತವಾಗಿ ಅಥವಾ ಗೌರವ ಪ್ರತಿಯನ್ನಾಗಿ ಸಾಹಿತ್ಯ ಪುಸ್ತಕಗಳನ್ನು ಪಡೆದವರಲ್ಲ. ಯಾವುದಾದರೂ ಹೊಸ ಪುಸ್ತಕ ಬಿಡುಗಡೆಯಾದರೆ, ಅದರ ಹತ್ತಾರು ಪ್ರತಿಗಳನ್ನು ತಮ್ಮ ಸ್ವಂತದ ಹಣದಿಂದ ಖರೀದಿಸುತ್ತಿದ್ದರು. ತಮ್ಮ ಹೆಗಲಿನ ಚೀಲದಲ್ಲಿ ಇಟ್ಟುಕೊಂಡು, ಓದುವ ಹವ್ಯಾಸವಿದ್ದ ಆಸಕ್ತ ಒಡನಾಡಿಗಳಿಗೆ ತಾವೇ ಉಚಿತವಾಗಿಯೇ ಕೊಡುತ್ತಿದ್ದರು. ಹೀಗೆ ಸಾಹಿತ್ಯವನ್ನು ಬೆಳೆಸುವ ಕಾಯಕವನ್ನು ನಿಷ್ಠೆಯಿಂದ ಮಾಡಿದವರು.

ಆಧುನಿಕತೆಯ ಅಬ್ಬರದಲ್ಲಿ ನಾಡಿನ ಪಾಮರ ಸಾಹಿತ್ಯ ತನ್ನ ಸ್ಥಾನ ಕಳೆದುಕೊಳ್ಳುತ್ತಿರುವ ಬಗ್ಗೆ ಅಪಾರ ಕಳಕಳಿಯುಳ್ಳವರಾಗಿದ್ದರು. ಅನೇಕ ವಿಚಾರಗಳನ್ನು ಅಂತರಂಗದಲ್ಲಿ ತುಂಬಿಕೊಂಡು ಧ್ಯಾನಿಸುತ್ತಿದ್ದರು. ಜಪಾನ್ ಏನೆಲ್ಲ ತಾಂತ್ರಿಕವಾಗಿ ಮುಂದುವರಿದಿದ್ದರೂ, ಅದು `ಬುಲ್‌ರಾಕ್‌` ಎಂಬ ಜಾನಪದ ಕಲೆಯನ್ನು ಉಳಿಸಿಕೊಂಡಿದೆ. ಅಲ್ಲಿಯ ಸಾಹಿತಿಗಳು ಈ ಕಲೆಯ ಉಳುವಿಗಾಗಿಯೇ ಪ್ರತಿವರ್ಷ ಹೊಸ ನಾಟಕಗಳನ್ನು ಬರೆಯುತ್ತಾರೆ. ಆದರೆ ನಮ್ಮ ಜಾನಪದ ಕಲೆಗಳಿಗಾಗಿ ಯಾವ ಸಾಹಿತಿ ಬರೆಯುತ್ತಾರೆ ಹೇಳಿ? ಎಂದು ಪ್ರಶ್ನಿಸುತ್ತಿದ್ದರು.

ನಮ್ಮ ಸಾಂಘಿಕ ಗುಣದ ಜನಪದ ಕಲ್ಪನೆ ತುಂಬಾ ಪುರಾತನವಾದದ್ದು. ರಾಜ್ಯ-ರಾಜಪದ್ಧತಿಗೂ ಮೊದಲಿನದು. ಇಂದಿಗೂ ಈ ಘಟಕನಾಮ ಹಾಗೇ ಉಳಿದಿರುವುದೊಂದು ಅಚ್ಚರಿ. ನಮ್ಮ ದೇಸಿತನದ ತಾಯಿಬೇರಿರುವುದೇ ಜನಸಾಮಾನ್ಯರ ಜೀವನದಲ್ಲಿ. ಸ್ಥಳೀಯ ಪ್ರಾದೇಶಿಕ, ಭೌಗೋಳಿಕ, ಪಾರಂಪರಿಕ ಪರಿಸ್ಥಿತಿಗಳನ್ನು ದೇಸಿ ಹೊಂದಿಕೊಂಡಿದೆ. ಜನಪದ ಜೀವನ ವಿಧಾನದಲ್ಲಿ ನಂಬುಗೆ, ಆಚರಣೆ, ಸಾಮಾಜಿಕ ಸಂರಚನೆಗಳಲ್ಲಿ ವೈವಿದ್ಯ ಇದೆ. ಜಾತಿ-ಮತ-ಪಂಥಗಳೇನೇ ಇದ್ದರೂ ನೈತಿಕ ನಡುವಳಿಕೆಯ ಬದ್ಧತೆ ಇದೆ. ಊಟ, ಉಡುಗೆ, ಕಾಯಕ ಮುಂತಾದವುಗಳಲ್ಲಿ ವಿಭಿನ್ನತೆ ಇದ್ದರೂ, ಪರಸ್ಪರ ವಿಶ್ವಾಸ, ಪ್ರೀತಿ, ಅನುಕಂಪ, ಮಾನವೀಯತೆಗಳ ಆಗರವದು. ಕಾಯಕಕ್ಕೂ ವಿಭಿನ್ನ. ಸಾಮಾಜಿಕರು ಒಬ್ಬರಿಗೊಬ್ಬರು ಪೂರಕರು ಎನ್ನುತ್ತಾರೆ.

ಮನೆ ಬಾಗಿಲಿಗೆ ಬರುವ ಹೆಳವರು, ಚೌಡಿಕೆಯವರು, ಮಂಡರು, ಕೊಲೆ ಬಸವರು, ಬಾಲ ಬಸವರು, ಎಣ್ಣೆ ಜೋಗೇರು, ಸುಡಗಾಡ ಸಿದ್ಧರು, ದಾಸಪ್ಪಗಳು ಇನ್ನಿತರರು ಭಿಕ್ಷುಕರಲ್ಲ, ನಮ್ಮ ಇತಿಹಾಸ, ಪರಂಪರೆಯನ್ನು ಉಳಿಸಿ, ಬೆಳೆಸುವ ಪ್ರಚಾರಕರು ಎಂದು ನಂಬಿಕೊಂಡಿದ್ದವರು.

ಜಾನಪದದ ಬಗ್ಗೆ ಕಾರ್ಯ ಮಾಡುತ್ತಲೇ ವಿಜ್ಞಾನ ತಂತ್ರಜ್ಞಾನ ಕುರಿತು ಚಿಂತಿಸುತ್ತಿದ್ದರು. ನಾವೀಗ ವೈಜ್ಞಾನಿಕ ಹಾಗೂ ತಾಂತ್ರಿಕ ಸಮೃದ್ಧಿಗಳ ಯುಗಾವತಾರಿಗಳು. ವಿದ್ಯುನ್ಮಾನ ಮಾಧ್ಯಮಗಳು ಈ ಅಪರಂಪಾರ ಪೃಥ್ವಿಯನ್ನು ಒಂದು ಪುಟ್ಟ ಹಳ್ಳಿಯಾಗಿಸಿದೆ. ನಮ್ಮ ಗೋತ್ರವೀಗ ಭೂಗೋತ್ರ. ನೋಬೆಲ್ ಪಾರಿತೋಷಕ ವಿಜೇತ ವಿಜ್ಞಾನಿ ಡಾ. ಆರ್ನೋ ಪೆಂಜಿಯಾಸ್ ಹೇಳುತ್ತಾರೆ. ಮುಂದಿನ ಇಪ್ಪತ್ತೈದು ವರ್ಷಗಳಲ್ಲಿ ಕಂಪ್ಯೂಟರ್‌ಗಳು ಅಂಚೆ ಬಿಲ್ಲಿಯ ಬೆಲೆಗೆ ದೊರೆಯುತ್ತದೆ. ನಮ್ಮ ನಾಡಿನ ಶೈಕ್ಷಣಿಕ ರಂಗವನ್ನು ಈಗಾಗಲೇ ಅವು ಪ್ರವೇಶಿಸಿವೆ.

ಇಷ್ಟೇ ಅಲ್ಲ ವಿಜ್ಞಾನಿಗಳು ಮತ್ತು ತಂತ್ರಜ್ಞಾನಿಗಳು ಕಣಿ ಹೇಳುತ್ತಿರುವುದಕ್ಕೆ ಮಿತಿಯೇ ಇಲ್ಲಿವೆನ್ನುತ್ತಾರೆ.

ಈ ಶತಮಾನದ ಕೊನೆಗೆ ಬರವಣಿಗೆಯೆಂಬುದೇ ಇನ್ನಿಲ್ಲವಾಗುತ್ತದೆ. ಗ್ರಂಥ ಸಂತಾನವೇ ನಾಶವಾಗುತ್ತದೆ. ಕಾಂಪ್ಯಾಕ್ಟ ಡಿಸ್ಕಗಳ ಹಾವಳಿ ಹೆಚ್ಚಾಗುತ್ತದೆ. ಸಾಕ್ಷರತೆ ನಿರುಪಯುಕ್ತವಾಗುವ ಕಾಲ ಸನಿಹದಲ್ಲಿದೆ. ಬರೀ ವಾಕ್‌ದೃಶ್ಯಗಳ ದರ್ಬಾರಿನ ಯುಗ ಆರಂಭವಾಗಲಿದೆ… ಇತ್ಯಾದಿ. ಈಗಾಗಲೇ ಈ-ಮೇಲ್ ಪುಸ್ತಕ ಭಾರತೀಯ ಪೇಟೆಗೆ ಬಂದಿವೆಯಲ್ಲ!

ಆದರೂ ಈ ವಿಜ್ಞಾನ ತಂತ್ರಜ್ಞಾನಗಳಿಗೆ ಅವುಗಳದೇ ಆದ ಮಿತಿ ಇದೆ. ತಾವೇನು ಸಾಧಿಸಬಲ್ಲೆವು ಎಂದು ಮಾತ್ರ ಹೇಳುವ ಅವು ನಾವೇನು ಮಾಡಬೇಕೆಂಬುದನ್ನು ಹೇಳಲಾರವು. ಪುಸ್ತಕದ ಓದು ಕೊಡುವ ಅನುಭವಗಳನ್ನೆಲ್ಲ ದೂರದರ್ಶನ, ಸಿನೆಮಾ, ಇಂಟರ್‌ನೆಟ್ ಕೊಡಲಾರವು. ಮುಂದೇನಾಗುತ್ತದೋ ಗೊತ್ತಿಲ್ಲ. ಆದರೆ ಸದ್ಯಕ್ಕಂತೂ ಇಷ್ಟು ನಿಜ ಓದು ಆಂತರಿಕವಾಗಿ ಅರಳಿಸುತ್ತದೆ. ಮರು ಓದಿನಲ್ಲಿ ಹೊಸ ಅರ್ಥಗಳನ್ನು ಹೊಳೆಸುತ್ತದೆ. ಮನಸ್ಸು ಹೃದಯಗಳನ್ನು ತಟ್ಟಿ ಪ್ರಜ್ಞೆಯನ್ನು, ನಮ್ಮನ್ನು ಸಂಮೋಹನಗೊಳಿಸುತ್ತವೆ ಅಷ್ಟೇ. ನಮ್ಮ ಅರಿವಿನ ಸಾಧನವಾಗಿ ಗ್ರಂಥದ ಪ್ರಾಮುಖ್ಯತೆ ಈಗಲೂ ಗಟ್ಟಿಯಾಗಿದೆ.

ಸಾಂಪ್ರದಾಯಿಕ ಕುಟುಂಬದಿಂದ ಬಂದಿದ್ದ ಸಂಗಣ್ಣನವರು ಎಂದೂ ಕುರುಡ ನಂಬಿಕೆ, ಸಂಪ್ರದಾಯಗಳನ್ನು ನಂಬಿದವರಲ್ಲ. ಸಮಾಜವಾದದ ಚಿಂತನೆಯ ಹಿನ್ನೆಲೆಯಲ್ಲಿ ಬಂದ ಇವರು ದೇವರು, ಧರ್ಮ ಎಂದೂ ನಂಬಿದವರಲ್ಲ. ಯಾವ ಮಠ, ಮಂದಿರಗಳಿಗೆ ಹೋದವರಲ್ಲ. ಆದರೆ ವೈಚಾರಿಕತೆ ಹಾಗೂ ವೈಜ್ಞಾನಿಕತೆಯ ಚಿಂತನೆಯಿರುವ ಸ್ವಾಮೀಜಿ, ಯಾರೇ ಆಗಿರಲಿ ಅವರೊಂದಿಗೆ ಮಾತ್ರ ಸಂಪರ್ಕವಿತ್ತು. ಆದರೆ ಮತ್ತೊಬ್ಬರ ವಿಚಾರ, ನಂಬಿಕೆಗಳನ್ನು ವಿರೋಧಿಸಿದವರಲ್ಲ. ಕಾಲೇಜಿನ ವಿದ್ಯಾಭ್ಯಾಸ ಮುಗಿಸಿಕೊಂಡು ಚಿಗಟೇರಿಗೆ ಬಂದಾಗ, ಇನ್ನೂ ಉತ್ಸಾಹದ ಯುವಕ. ಊರಿನ ಕೊರವರು ಊದುತ್ತಿದ್ದ ಮುಖವೀಣೆಯನ್ನು ಊದಿದಾಗ, ಸಂಪ್ರದಾಯವಾದಿಗಳ ಕೆಂಗಣ್ಣಿಗೆ ಗುರಿಯಾಗಿ ಜಾತಿ ಭ್ರಷ್ಟನನ್ನಾಗಿಸಿ ಕೆಲ ವರ್ಷ ಜಾತಿಯಿಂದ ಹೊರಗಿಟ್ಟಿದ್ದರು. ಜಾತ್ಯಾತೀತ ಮನಸ್ಸಿನ ಸಂಗಣ್ಣರಿಗೆ ಇದು ಬಹಳ ನೋವನ್ನುಂಟು ಮಾಡಿತು. ಇಂಥ ಘಟನೆಗಳಿಂದ ಅವರು ಅಂತರ್ಮುಖಿಗಳಾಗುತ್ತ ಹೋದರು.

ಹತ್ತಾರು ವರ್ಷಗಳ ಹಿಂದೆ ಸಂಗಣ್ಣನವರು ಹಠಾತ್ ಹೃದಯಾಘಾತಕ್ಕೆ ಈಡಾದರು. ನಂತರ ಹೃದಯ ಚಿಕಿತ್ಸೆ ಮಾಡಿಸಿಕೊಂಡು ಬಂದು, ಸ್ವಲ್ಪ ದಿನ ವಿಶ್ರಾಂತಿ ಪಡೆದು ಮತ್ತೆ ಎಂದಿನಂತೆ ಸಾಹಿತ್ಯ-ಸಾಮಾಜಿಕ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದರು. ತಮ್ಮ ಸ್ನೇಹಿತ ಕೊಂಡಜ್ಜಿ ಬಸಪ್ಪ ಕುರಿತ ಜೀವನ ಚರಿತ್ರೆ ಬರೆದು ಬಿಡುಗಡೆಗೊಳಿಸಿದರು.

ಕು.ಶಿ. ಹರಿದಾಸಭಟ್ಟ ಪ್ರಶಸ್ತಿಯನ್ನು ಪಡೆಯಲೆಂದು ಉಡುಪಿಗೆ ಹೋದಾಗ “ಕಡೆಯ ಸಲ ನಿಮ್ಮಲ್ಲಿಗೆ ಬರುತ್ತಿದ್ದೇನೆ, ಒಮ್ಮೆ ಬಂದು ಹೋಗಬೇಕಂತ ಇತ್ತು. ಆ ಆಸೆ ನೆರವೇರುತ್ತಿದೆ ತಾಯಿ“ ಎಂದು ಖ್ಯಾತ ಲೇಖಕಿ ವೈದೇಹಿಯವರ ಮುಂದೆ ತಮ್ಮ ಮನದ ಇಚ್ಛೆಯನ್ನು ವ್ಯಕ್ತಮಾಡಿದ್ದರು.

ಮತ್ತೊಂದು ಸಂದರ್ಭದಲ್ಲಿ ತಮ್ಮ ಮನೆಯಲ್ಲಿ ಸಂಗೀತ ಕಾರ್ಯಕ್ರಮವನ್ನು ಏರ್ಪಡಿಸಿ, ಒಡನಾಡಿಗಳನ್ನೆಲ್ಲಾ ಕರೆಯಿಸಿ, ಸಂಗೀತ ಕಛೇರಿ ಏರ್ಪಡಿಸಿ, ಪುಷ್ಕಳ ಊಟ ಉಣಬಡಿಸಿದ ಮೇಲೆ ಒಡನಾಡಿಗಳನ್ನು ಕುರಿತು “ಇದೇ ನನ್ನ ವೈಕುಂಠ ಸಮಾರಾಧನೆಯ ಊಟ ಎಂದು ಹೇಳಿದ್ದರು“. ಇದ್ದಾಗ ತಿಥಿ ಊಟ ಮಾಡಿಸಿ ಖುಷಿ ಪಟ್ಟ ಸಂತ ಸಂಗಣ್ಣ. ಈ ಧೈರ್ಯ ಯಾರಿಗೆ ತಾನೇ ಬಂದೀತು…!

ಈ ರೀತಿ ತಮ್ಮ ಸಾವಿನ ಮುನ್ಸೂಚನೆಯಂತೆ ಆಡಿದ ಮಾತುಗಳನ್ನು ಅವರ ಒಡನಾಡಿಗಳ್ಯಾರು ಗ್ರಹಿಸಿರಲಿಲ್ಲ. ಆದರೆ ಅವರು ನುಡಿದಂತೆ ಇರುವುದೆಲ್ಲವ ಬಿಟ್ಟು ಎದ್ದು ಹೊರಟೆ ಹೋಗಿ ಬಿಟ್ಟರು. ಹೋಗುವಾಗಲು ಅವರು ಹಾಗೆ ಸುಮ್ಮನೆ ಹೋಗಲಿಲ್ಲ. ತಮ್ಮ ದೇಹವನ್ನು ದಾವಣಗೆರಿಯ ಬಾಪೂಜಿ ಮೆಡಿಕಲ್ ಕಾಲೇಜಿಗೆ ದಾನ ಬರೆದಿಟ್ಟಿದ್ದರು. ನೀವು ಎಂತಹ ಸಾವನ್ನು ಬಯಸುತ್ತೀರಿ? ಎಂದು ಪ್ರಶ್ನೆ ಕೇಳಿದಾಗ, ಸದ್ದಿಲ್ಲದೇ ಯಾರೊಬ್ಬರಿಗೂ ಹೊರೆಯಾಗದೆ ಒಮ್ಮೆಗೆ ವಿದಾಯ ಹೇಳುವಂತಹದು. ಅವರು ತಾವು ಬಯಸಿರುವಂತಯೇ ಸದ್ದು ಮಾಡದೆ, ಯಾರಿಗೂ ತೊಂದರೆ, ಹೊರೆಯಾಗದ ರೀತಿಯಲ್ಲೇ ಸಾವನಪ್ಪಿದರು.

ಮಗ ಅಶೋಕರಿಗೆ ಕಟ್ಟುನಿಟ್ಟಾಗಿ ಹೇಳಿ, ಮಣ್ಣಲ್ಲಿ ಮಣ್ಣಾಗಿ ಹೋಗುವ ಬದಲು, ವೈದ್ಯ ವಿದ್ಯಾರ್ಥಿಗಳಿಗೆ ಉಪಯೋಗವಾಗಲಿ ಎಂದು ದೇಹವನ್ನು ದಾನ ಮಾಡಿದರು. ಇವರು ಕಣ್ಣುಗಳು ಕುರುಡನೊಬ್ಬನಿಗೆ ಬೆಳಕನ್ನು ನೀಡಿವೆ. ಇದರಿಂದ ಬದುಕಿದಾಗಲೂ ಆದರ್ಶವಾಗಿದ್ದ ಸಂಗಣ್ಣ ಸತ್ತಾಗಲೂ ಆದರ್ಶವಾದರು.

ಜಾನಪದವೊಂದು ತನ್ನ ನಿಜ ಸತ್ಯವನ್ನು ಗಟ್ಟಿಯಾಗಿ ಇಟ್ಟುಕೊಂಡೇ ಆಧುನಿಕ ಜ್ಞಾನ ವಿಜ್ಞಾನದ ಸಂಸ್ಕಾರ ಪುಷ್ಠಿ ಪಡೆದರೆ ಹೇಗೆ-ಹಾಗೇ ಮುದೇನೂರು ಸಂಗಣ್ಣ. ಜಾನಪದವನ್ನು ಉಸಿರಾಗಿಸಿಕೊಂಡು ಬದುಕಿದ ಇವರು ಕೊನೆಗೆ ಅಂತ್ಯ ಸಂಸ್ಕಾರದ ವಿಧಿ-ವಿಧಾನಗಳನ್ನು ಧಿಕ್ಕರಿಸಿ, ತಮ್ಮ ದೇಹವನ್ನು ವೈದ್ಯ ಕಾಲೇಜಿಗೆ ಕೊಟ್ಟು ವೈದ್ಯ ವಿದ್ಯಾರ್ಥಿಗಳ ಅಧ್ಯಯನಕ್ಕೆ ವಸ್ತು ಆಕರವಾದರು. ತಮ್ಮ ಜಾನಪದ ಸತ್ವದ ದೇಹಕ್ಕೆ ವೈಜ್ಞಾನಿಕ ಸತ್ವ ನೀಡಿದರು. ಹೃದ್ರೋಗ ತೊಂದರೆಯಿಂದ ತೀವ್ರ ಅಸ್ವಸ್ಥರಾಗಿ ಆಸ್ಪತ್ರೆಗೆ ದಾಖಲಾಗಿದ್ದ ಸಂಗಣ್ಣ ದಿನಾಂಕ ೨೬.೧೦.೨೦೦೮ರಂದು ನಿಧನರಾದರು. ಅವರಿಗೆ ೮೨ ವರ್ಷ ವಯಸ್ಸಾಗಿತ್ತು.

ತನ್ನನ್ನು ತಾನು ಎಲ್ಲೂ ಬಿಂಬಿಸಿಕೊಳ್ಳದೆ, ಜಾನಪದ, ಸಾಹಿತ್ಯ, ರಂಗಭೂಮಿಗೆ ತಮ್ಮ ಬದುಕನ್ನೇ ಮುಡುಪಾಗಿಸಿದ ಅಪರೂಪದ ಸಾಂಸ್ಕೃತಿಕ ವ್ಯಕ್ತಿತ್ವದ ಮುದೇನೂರು ಸಂಗಣ್ಣ ಇಂದಿನ ಯುವ ಜನಾಂಗಕ್ಕೆ ಆದರ್ಶವಾದವರು.