ಆಸಕ್ತಿ ಮತ್ತು ಕುತೂಹಲದಿಂದಾಗಿಯೇ ಜಾನಪದ ಸಾಹಿತ್ಯ, ಅಧ್ಯಯನ, ಸಂಗ್ರಹ, ಸಂಪಾದನೆ ಕಾರ್ಯದಲ್ಲಿ ನಿರತರಾದ ಇವರು ಸುಮಾರು ೨೩ ಪುಸ್ತಕಗಳನ್ನು ರಚಿಸಿದ್ದಾರೆ. ಒಂದೊಂದು ಕಾರಣಗಳಿಂದ ಈ ಎಲ್ಲ ಕೃತಿಗಳು ವೈಶಿಷ್ಟ್ಯಪೂರ್ಣವಾಗಿವೆ. ಜಾನಪದ ರಂಗಭೂಮಿಗಾಗಿ ಸೃಜನವಾಗಿ ಸೃಷ್ಟಿಸಿರುವ ನಾಟಕಗಳಿಗೆ ಐತಿಹಾಸಿಕ ಮಹತ್ವವಿದೆ. ಅಕಾಡೆಮಿಕ್ ವಿದ್ವಾಂಸರಿಗೂ ಸವಾಲಾಗಬಲ್ಲದು ಇವರ ವಿದ್ವತ್ ಪರಂಪರೆ. ವಚನಗಾರ್ತಿ ಸೂಳೆ ಸಂಕವ್ವಳ ಒಂದೇ ಒಂದು ವಚನದ ಆಧಾರ ಮೇಲೆಯೇ `ಸೂಳೆ ಸಂಕವ್ವ` ನಾಟಕ ರಚಿಸಿದ್ದು ಐತಿಹಾಸಿಕ ದಾಖಲೆ ಎನ್ನಬಹುದಾಗಿದೆ. ಇವರ ಇಂತಹ ವಿದ್ವತ್ ಪರಂಪರೆಯನ್ನು ಗುರುತಿಸಿಯೇ ನಾಡಿನ ಅಕಾಡೆಮಿಕ್ ಸಂಸ್ಥೆಗಳು ವಿಶ್ವವಿದ್ಯಾಲಯ, ಸರ್ಕಾರ ಪದವಿ, ಗೌರವಗಳನ್ನು ನೀಡಿವೆ.

ಇವರ ರಂಗಭೂಮಿಯ ಪ್ರತಿಭೆ, ಸಾಧನೆಯನ್ನು ಗುರುತಿಸಿ ಕರ್ನಾಟಕ ನಾಟಕ ಅಕಾಡೆಮಿಯು ಫೆಲೋಸಿಪ್‌ನ್ನು ೧೯೮೯ರಲ್ಲಿ ನೀಡಿದೆ. ಜಾನಪದ ಸಂಗ್ರಹ, ಸಂಪಾದನೆ, ವಿದ್ವತ್‌ನ್ನು ಕಂಡು ಕರ್ನಾಟಕ ಜಾನಪದ ಅಕಾಡೆಮಿಯು `ಜಾನಪದ ತಜ್ಞ` ೧೯೯೨ ಪ್ರಶಸ್ತಿಯನ್ನು ನೀಡಿದೆ. ಇವುಗಳ ಜೊತೆಗೆ ಕನ್ನಡ ಸಾಹಿತ್ಯದ ವಿದ್ವತ್‌ನ್ನು ಕಂಡು ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ೨೦೦೧ರಲ್ಲಿ ನೀಡಿದೆ. ಇದಲ್ಲದೆ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿಯನ್ನು ೨೦೦೨ರಲ್ಲಿ ನೀಡಿ ಗೌರವಿಸಿದೆ.

ಏಕೀಕರಣದ ಸಂದರ್ಭದಲ್ಲಿ ಹೋರಾಡಿ ಒಂದು ತಿಂಗಳ ಕಾಲ ಸೆರೆಮನೆ ವಾಸ ಅನುಭವಿಸಿದ ಸಂಗಣ್ಣನವರ ನಾಡು-ನುಡಿಯ ಸೇವೆಯನ್ನು ಗುರುತಿಸಿದ ಸರ್ಕಾರ ಸುವರ್ಣ ಕರ್ನಾಟಕದ ಸಂದರ್ಭದಲ್ಲಿ `ಏಕೀಕರಣ ಪ್ರಶಸ್ತಿ`ಯನ್ನು ನೀಡಿ ಗೌರವಿಸಿದೆ. ಎಂ.ಪಿ. ಪ್ರಕಾಶ್‌ರ ಅಧ್ಯಕ್ಷತೆಯ ಸಮಿತಿಯು ಮುದೇನೂರು ಸಂಗಣ್ಣನವರನ್ನು ಆಯ್ಕೆ ಮಾಡಿತ್ತು. ಕನ್ನಡ ವಿಶ್ವವಿದ್ಯಾಲಯವು ಪ್ರತಿ ವರ್ಷ ಆಚರಿಸುವ `ನುಡಿಹಬ್ಬ`ದ ಸಂದರ್ಭದಲ್ಲಿ ಕರ್ನಾಟಕದ ಜನ, ಭಾಷೆ, ಸಾಹಿತ್ಯ, ಸಾಂಸ್ಕೃತಿಗಳ ಏಳಿಗಾಗಿ ದುಡಿದ ಮಹನೀಯರನ್ನು ಗುರುತಿಸಿ ಅವರಿಗೆ `ನಾಡೋಜ` ಎಂಬ ಗೌರವ ಪದವಿಯನ್ನು ನೀಡುತ್ತಾ ಬಂದಿದೆ. ನಮ್ಮ ಆದಿ ಕವಿ ಪಂಪನಿಗೆ ಸಂಬಂಧಿಸಿರುವ `ನಾಡೋಜ` ಎಂಬ ಶಬ್ದವು ಕರ್ನಾಟಕದ ಪರಂಪರೆಯ ಸಾಹಿತ್ಯವನ್ನು, ನಾಡನ್ನು ಕಟ್ಟಿದವರು ಎಂಬ ಮನ್ನಣೆಯನ್ನು ಸೂಚಿಸುವಂತದ್ದಾಗಿದೆ. ಇಂಥಹ ಪರಂಪರೆಯ `ನಾಡೋಜ` ಪದವಿಯನ್ನು ಮುದೇನೂರು ಸಂಗಣ್ಣನವರಿಗೆ ನೀಡಿ ಗೌರವಿಸಿದೆ.

ಬಳ್ಳಾರಿ ಜಿಲ್ಲಾ ೪ನೇ ಕನ್ನಡ ಸಾಹಿತ್ಯ ಸಮ್ಮೇಳನ ೧೯೯೪ರಲ್ಲಿ ಹಡಗಲಿಯಲ್ಲಿ ನಡೆಯಿತು ಇದರ ಅಧ್ಯಕ್ಷರಾಗಿದ್ದವರು. ದಾವಣಗೆರೆ ಹೊಸ ಜಿಲ್ಲೆಯಾಗಿ ರಚನೆಯಾದಾಗ ದಾವಣಗೆರೆ ಜಿಲ್ಲಾ ಮೊದಲ ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷತೆಯ ಗೌರವ. ಎರಡು ಜಿಲ್ಲೆಗಳ ಜಿಲ್ಲಾ ಸಾಹಿತ್ಯ ಸಮ್ಮೇಳನಗಳಲ್ಲಿ ಗೌರವವನ್ನು ಪಡೆದ ಹೆಗ್ಗಳಿಕೆ ಸಂಗಣ್ಣನವರದ್ದು. ೧೯೯೪ರಲ್ಲಿ ಧಾರವಾಡದಲ್ಲಿ ನಡೆದ ೨೧ನೇ ಅಖಿಲ ಕರ್ನಾಟಕದ ಜಾನಪದ ಸಮ್ಮೇಳನ ಅಧ್ಯಕ್ಷರಾದವರು.

ಅತ್ಯಂತ ಶ್ರಮಪಟ್ಟು ಸಿದ್ಧಪಡಿಸಿರುವ `ಚಿಗಟೇರಿ ಪದಕೋಶ`ಕ್ಕೆ ಅಂತರಾಷ್ಟ್ರೀಯ ದ್ರಾವಿಡ ಭಾಷಾ ವಿಜ್ಞಾನ ಪ್ರಶಸ್ತಿ ಲಭ್ಯವಾಗಿದೆ. ಇವರ ಸಾಹಿತ್ಯ ಸೇವೆಯನ್ನು ಗುರುತಿಸಿ, ಉಮಾಪತಿ ಚುಕ್ಕೆ ಪ್ರತಿಷ್ಟಾನ ಪ್ರಶಸ್ತಿ, ಕನ್ನಡ ಸಿರಿ ಪ್ರಶಸ್ತಿ, ಮಹಾಲಿಂಗ ರಂಗ ಪ್ರಶಸ್ತಿ ಮೊದಲಾದವು ದೊರೆತಿವೆ. ಈ ಯಾವ ಪ್ರಶಸ್ತಿ ಪದವಿಗಳನ್ನು ಮುದೇನೂರು ಸಂಗಣ್ಣ ನಿರೀಕ್ಷಿಸಿದವರಲ್ಲ. ಆದರೆ ಬಂದ ಗೌರವಗಳನ್ನು ಅತ್ಯಂತ ವಿನಯದಿಂದ ಸ್ವೀಕರಿಸಿದ್ದಾರೆ.

ನಮ್ಮ ಕನ್ನಡ ಸಾಹಿತ್ಯ ಸಂಸ್ಕೃತಿಗಳಿಗೆ ತಾಯಿಬೇರಾದ ಜಾನಪದ ಕಲೆಗಳನ್ನು ಕುರಿತಂತೆ ನಾನು ತಳೆದಿರುವ ಸಕ್ರಿಯ ಆಸಕ್ತಿಯನ್ನೇ ಪ್ರೀತಿಯ ರನ್ನಗನ್ನಡಿಯಲ್ಲಿ ದೊಡ್ಡದಾಗಿ ಕಂಡು ಈ ಕನ್ನಡ ವಿಶ್ವವಿದ್ಯಾಲಯದ ಸಮಸ್ತರು ಒಮ್ಮನದಿಂದ ನನ್ನನ್ನು ಇಂದಿನ ಈ ನುಡಿಹಬ್ಬದಲ್ಲಿ ಮುಖ್ಯ ಭಾಷಣ ಮಾಡಲು ಬರಮಾಡಿಕೊಂಡಿದ್ದಾರೆ. ಅನಿರೀಕ್ಷಿತವಾಗಿ ಇವರು ನೀಡಿರುವ ಈ ಗೌರವ ನಮ್ಮ ಕನ್ನಡ ಜನಪದ ದೈವಕ್ಕೆ ಸಲ್ಲುತ್ತದೆ. ಅದರ ಪರವಾಗಿ ಮತ್ತು ನನ್ನ ಪರವಾಗಿ ವಿನೀತವಾಗಿ ನಾನು ಇವರೆಲ್ಲರಿಗೂ “ಶರಣುವಯ್ಯ“ ಎನ್ನುತ್ತೇನೆ ಎಂದವರು.