“ನಮ್ಮ ಜಗತ್ತೆಂಬ ಹಳ್ಳಿಯ ಬದುಕಿನಲ್ಲಿ ಮಾನವತೆ ಗಂಡಾಂತರದಲ್ಲಿದೆ. ಉದಾರೀಕರಣ, ಖಾಸಗೀಕರಣ, ಜಾಗತೀಕರಣಗಳ ಹೊಸ ಮುಖವಾಡಗಳ ಮರೆಯಲ್ಲಿ ಉಳ್ಳವರ ಸ್ವಾರ್ಥ ಶೋಷಣೆಗಳು ಕಾರುಬಾರು ನಡೆಸಿವೆ. ಜಾಗತಿಕ ಶಾಂತಿಗಾಗಿ ನಿಶ್ಯಸ್ತ್ರೀಕರಣ, ಆತ್ಮರಕ್ಷಣೆಗಾಗಿ ಶಸ್ತ್ರೀಕರಣ, ಧರ್ಮ ರಕ್ಷಣೆಯ ಹೆಸರಿನಲ್ಲಿ ಮತಾಂಧತೆಯ ವೈಭವೀಕರಣ ಇವುಗಳ ಅಟ್ಟಹಾಸಗಳು ಕರ್ಣಪಟಲಗಳನ್ನು ಛಿದ್ರಗೊಳಿಸುತ್ತದೆ. ಈ ಎಲ್ಲಾ ಅಮಾನುಷತ್ವದ ಭೀಕರತೆಯನ್ನು ತಿಳಿಸುವ ಮಾನವೀಕರಣತೆಯನ್ನು ಉದಾತ್ತೀಕರಿಸುವ ಮೇರು ಕಾರ್ಯವನ್ನು ಸಾಹಿತ್ಯ ಮತ್ತು ಕಲೆಗಳಿಂದ ಸಾಧಿಸಬೇಕಾಗಿದೆ”.

ಇದು ಸಂಗಣ್ಣರು ಸಾಹಿತ್ಯದ ಬಗ್ಗೆ ಇಟ್ಟುಕೊಂಡಿದ್ದ ಸದಾಶಯವಾಗಿತ್ತು. ಹಳ್ಳಿಯಲ್ಲಿದ್ದು ಆಧುನಿಕ ಜಗತ್ತಿನ ಪಲ್ಲಟಗಳು, ತಲ್ಲಣಗಳನ್ನು ಜಾಗತೀಕರಣದ ಪರಿಣಾಮಗಳು ನಮ್ಮ ಸ್ಥಳೀಯ ಕಲೆ, ಸಂಸ್ಕೃತಿ, ಪರಂಪರೆಯ ಮೇಲೆ ಬೀರಬಹುದಾದ ಅಪರಿಣಾಮಗಳ ಕುರಿತು ಚಿಂತಿಸುತ್ತಿದ್ದರು.

ಅವರ ಬೌದ್ಧಿಕ ಹಸಿವು, ಅವರನ್ನು ಜಾನಪದದ ಸಂಗ್ರಹ, ಅಧ್ಯಯನ, ಜಾನಪದ ರಂಗಭೂಮಿಯ ಆಳಕ್ಕೆ ಇಳಿಸಿತು. ಮೂಲತಃ ಕವಿ ಸ್ವಭಾವದ ಇವರು, ಸಾಹಿತ್ಯಾಸಕ್ತಿ ಬೆಳೆದಾಗ `ನವೋದಯ`ದ ಕಾಲಘಟ್ಟ. ಮುಂದೆ ಕನ್ನಡದ ನವ್ಯ, ದಲಿತ, ಬಂಡಾಯ ಈ ಎಲ್ಲ ಸಾಹಿತ್ಯ ಪ್ರಕಾರಗಳ ಅಧ್ಯಯನದಲ್ಲಿ ನಿರತರಾಗಿದ್ದವರು. ಬಸವಣ್ಣ, ಗಾಂಧಿ, ಅರವಿಂದ, ಲೋಹಿಯಾ, ಅಂಬೇಡ್ಕರ‍ರ ವಿಚಾರಧಾರೆಗಳನ್ನು ಅರಿತವರಾಗಿದ್ದರು. ಈ ಪ್ರಭಾವದ ಹಿನ್ನೆಲೆಯಲ್ಲೇ ಅವರು ವೈಜ್ಞಾನಿಕ ಮನೋಭಾವ ಬೆಳೆಸಿಕೊಂಡು ತಮ್ಮ ಅಧ್ಯಯನ, ಬರವಣಿಗೆಯನ್ನು ಮಾಡಿದ್ದಾರೆ.

೧೯೪೫ರಿಂದಲೇ ಕವಿತೆಗಳನ್ನು ಬರೆದಿದ್ದಾರೆ. ಇವರ ಮೊದಲ ಕವಿತೆಯಿಂದ ಹಿಡಿದು ಬಹಳಷ್ಟು `ಜಯಂತಿ`ಯಲ್ಲಿ ಪ್ರಕಟವಾಗಿವೆ. ಲಂಕೇಶರು ಹೊಸಗನ್ನಡ ಕಾವ್ಯದ ಬಗ್ಗೆ ಪುಸ್ತಕ ತಂದಾಗ, ಮಾಹಿತಿಯ ಕೊರತೆಯಿಂದಲೋ, ಉಪೇಕ್ಷೆಯಿಂದಲೋ ಹೈದ್ರಾಬಾದ್-ಕರ್ನಾಟಕ ಪ್ರದೇಶದ ಯಾವಬ್ಬ ಕವಿಯ ಕವಿತೆಗಳು ಆ ಕವನ ಸಂಕಲನದಲ್ಲಿ ಇರಲಿಲ್ಲ. ಆಗ ಶಾಂತರಸರ ಸಂಪಾದಕ್ವದಲ್ಲಿ `ಬೆನ್ನ ಹಿಂದಿನ ಬೆಳಕು` ಎನ್ನುವ ಈ ಭಾಗದ ಕವಿತೆಗಳ ಕವನ ಸಂಕಲನವನ್ನು ಹೊರತಂದಾಗ ಸಂಗಣ್ಣನವರ ಬಹಳಷ್ಟು ಕವಿತೆಗಳು ಇದರಲ್ಲಿ ಪ್ರಕಟಗೊಂಡವು. ಬಿಡಿಬಿಡಿಯಾಗಿ ಹಲವಾರು ಕವಿತೆಗಳು ಸಹ ಪ್ರಕಟವಾಗಿವೆ. ಆದರೆ ಇವರು ಕವಿಯಾಗಿ ಗುರುತಿಸಿಕೊಳ್ಳಲಿಲ್ಲ. ಏಕೆಂದರೆ ಇವರಿಗೆ ಕವಿತೆ ಬರೆಯುವುದು ಮುಖ್ಯವಾಗಿರಲಿಲ್ಲ. ಅವರ ಸಾಹಿತ್ಯ, ಸಾಂಸ್ಕೃತಿಕ ಅಭಿವ್ಯಕ್ತಿ ಜಾನಪದದ ನಾಟಕ, ರಂಗಭೂಮಿ, ಜಾನಪದ ರಂಗಭೂಮಿಯತ್ತ ಕೇಂದ್ರಿತವಾಯಿತು.

ಜಾನಪದತ್ತ ಆಕರ್ಷಿತರಾಗಿ, ಆಸಕ್ತಿ ಬೆಳೆದದ್ದು ೧೯೪೬ರಲ್ಲಿ. ಇವರು ಮೊದಲ ಸಲ ಗರತಿಯ ಹಾಡು ಪುಸ್ತಕ ನೋಡಿದಾಗ, `ನಮ್ಮ ಹಳ್ಳಿಯ ಜನರ ಜಾನಪದ ಸಾಹಿತ್ಯಿಕವಾಗಿ ಪರಿಗಣಿಸಲ್ಪಡುತ್ತದೆಯಲ್ಲ ಎಂದು ಅದರತ್ತ ಮುಖಮಾಡಿದರು. ಆ ದಾರಿಯಲ್ಲಿ ಬಹುದೂರ ಕ್ರಮಿಸಿದರು. ಇವರ ಜಾನಪದ ಎಲ್ಲದಕ್ಕೂ `ಗರತಿಯ ಹಾಡು` ಪ್ರೇರಣೆಯನ್ನು ತಂದಿತ್ತು. ಮುಂದೆ ಹಲಸಂಗಿ ಗೆಳೆಯರ ಗುಂಪು ಸಹ ಸ್ಪೂರ್ತಿ ಪ್ರೇರಣೆಯನ್ನು ನೀಡಿತು. ಇದರಿಂದ ಸಾಹಿತ್ಯ ಸಂಗ್ರಹ ಕಾರ್ಯ ಆರಂಭಗೊಂಡಿತ್ತು.

ಇವರು ಬೇರೆ ಊರಿಗೆ ಹೋದಾಗ-ಬಂದಾಗ ಜಾನಪದವನ್ನು ಆಸಕ್ತಿಯಿಂದ ಸಂಗ್ರಹಿಸುತ್ತಿದ್ದರು. ಇವರು ಹರಿಹರದಲ್ಲಿ ಮದುವೆಯಾದ ಮೇಲೆ, ಮಾವನ ಮನೆಯವರಿಗೂ ಹಾಗೂ ಅಲ್ಲಿನ ಮಿತ್ರರಿಗೂ ಹೇಳಿ ಸಂಗ್ರಹದ ಕೆಲಸ ಮಾಡಿದರು. ಹೀಗೆ ಸಂಗ್ರಹದಲ್ಲಿ ದಾಖಲಾದ ತ್ರಿಪದಿಗಳನ್ನು ಮಾತ್ರ ಪ್ರಕಟಿಸಿದರು. ನಂತರ ಕೆ. ವಿರೂಪಾಕ್ಷ ಗೌಡರ ಜೊತೆಗೆ `ಹಳ್ಳಿಯ ಪದಗಳು` ಅಂತ ಪ್ರಕಟಿಸಿದರು. ಇವರು ಜಾನಪದ ಸಾಹಿತ್ಯವನ್ನು ದಾಖಲು ಮಾಡಲು ಆಗ ತಾನೇ ಮಾರುಕಟ್ಟೆಗೆ ಬಂದಿದ್ದ `ಗ್ರೌಂಡಿಸ್ ಟೇಪ್ ರೆಕಾರ್ಡ್‌`ನ್ನು ಖರೀದಿಸಿದರು. ಅದನ್ನು ಎತ್ತಿನ ಬಂಡಿಯಲ್ಲಿ ಇಟ್ಟುಕೊಂಡು ಹಳ್ಳಿಗಳಿಗೆ ಹೋಗಿ ಅದರಿಂದ ಸಾಹಿತ್ಯವನ್ನು ಸಂಗ್ರಹಿಸುತ್ತಿದ್ದರು. ಇದರಿಂದ ಅನೇಕ ಹಾಡು, ಕಥನ ಗೀತೆಗಳನ್ನು ಸಂಗ್ರಹಿಸಿದರು. ನೂರಾರು ಗಂಟೆಗಳ ಕಾಲ ಕೇಳಬಹುದಾದ ಜಾನಪದ ಕಥೆ, ಹಾಡು ಇವರ ಸಂಗ್ರಹದಲ್ಲಿದೆ.

ಜಾನಪದ ಸಂಗ್ರಹದ ಜೊತೆಗೆ ಅವರೆ ನಾಟಕಗಳನ್ನು ಬರೆದರು. ಅವುಗಳೆಂದರೆ `ಚಾತಿ ಚಂದ್ರ`, `ಬಂಗಾರದ ತಟ್ಟೆ`, `ಜನ ಅರಣ್ಯ`, `ಮೋಚಿಮಾಮ`, `ಅಂಗುಲಿಮಾಲ`, `ಸೂಳೆ ಸಂಕವ್ವ`, `ಅವ್ವೆಣ್ಣೆವ್ವ` ಗೊಂದಲಿಗರ ಕಥಾ ಪ್ರಸಂಗದ ನಾಟಕ ರೂಪ `ಶೀಲಾವತಿ`, `ಬಾಳ ಭಿಕ್ಷುಕ`, `ಚಿತ್ರ ರಾಮಾಯಣ`, `ಲಕ್ಷ್ಮಿಪತಿ ರಾಜನ ಕಥೆ`, `ರಸರಾಳ ರಾಜನ ಕಥೆ`, `ಬುದ್ಧಬಾಲ` ಮೊದಲಾದ ಜಾನಪದ ರಂಗಭೂಮಿಗೆ ಸಂಬಂಧಿಸಿದ ನಾಟಕಗಳನ್ನು ಸೃಜನ ಮಾಡಿ ಜಾನಪದ ರಂಗಭೂಮಿಗೆ ತಮ್ಮದೇ ಆದ ವಿಶಿಷ್ಟ ಕೊಡುಗೆಯನ್ನು ಇವರು ನೀಡಿದ್ದಾರೆ.

ಜನಪದ ಮುಕ್ತಕಗಳು, ಗೊಂಬಿಗೌಡರ ಸೂತ್ರದ ಆಟಗಳು, ಗೊಂದಲಿಗರ ದೇವೇಂದ್ರಪ್ಪನ ಆಟಗಳು, ಜಾನಪದದ ಇತರೆ ಕೃತಿಗಳು. ಜಾನಪದದ ಹಾಡು, ಸಾಹಿತ್ಯ, ಸಂಗ್ರಹ ಪ್ರಕಟಣೆಯಲ್ಲಿ ತೊಡಗಿರುವಾಗಲೇ ಅವರು ಸುಭೋದ್ ಘೋಷರ ಬಂಗಾಳಿ ಕಥೆಗಳ ಕಡೆ ಆಕರ್ಷಿತರಾದರು. ಬಂಗಾಲಿ ಕಥೆಗಳನ್ನು ಓದುಬೇಕೆನ್ನುವ ಆಸೆಯಿಂದಲೆ ಅವರು ಬಂಗಾಲಿ ಕಲಿತರು. ಭಾಷೆಯನ್ನು ಕಲಿಯಲು ಈಗಿನಂತೆ ಸೌಲಭ್ಯಗಳು ಇಲ್ಲದ ಕಾಲದಲ್ಲಿಯು ಅವರು ಸ್ವ-ಇಚ್ಛೆಯಿಂದಲೇ ಬಂಗಾಲಿ, ಇಂಗ್ಲೀಶ್ ಪದಕೋಶಗಳ ಸಹಾಯದಿಂದ ಬಂಗಾಲಿಯನ್ನು ಕಲಿತು, ಬಂಗಾಲಿ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದರು. ಸುಭೋದ್, ಘೋಷರ ೧೮ ಕಥೆಗಳನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ತಂಬಾಕಿನ ವ್ಯಾಪಾರದ ನಂಟಿನಿಂದ ನಿಪ್ಪಾಣಿಯೊಂದಿಗೆ ಇದ್ದ ಸಂಪರ್ಕದಿಂದಲೇ ಅವರು ಮರಾಠಿ ಭಾಷೆಯನ್ನು ಕಲಿತ್ತಿದ್ದರು. ಭಾಷೆಯನ್ನು ಕೇವಲ ವ್ಯವಹಾರಕ್ಕೆ ಬಳಸದೆ, ಮರಾಠಿಯ ಸಾಹಿತ್ಯ-ಸಂಗೀತದತ್ತ ಗಮನಹರಿಸಿದರು. ಇದರಿಂದಾಗಿ `ಘಾಶೀರಾಮ ಕೊತ್ವಾಲ` ಮರಾಠಿ ನಾಟಕವನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ.

ಇವರ `ಸೂಳೆ ಸಂಕವ್ವ` ಕೆಲವು ಕಾರಣಗಳಿಂದಾಗಿ ಮಹತ್ವ ಪಡೆದ ನಾಟಕ. `ಸೂಳೆ ಸಂಕವ್ವ` ೧೨ನೆಯ ಶತಮಾನದ ಒಬ್ಬ ವಚನಗಾರ್ತಿ. ಈ ವರೆಗೆ ಅವಳದು ಒಂದೇ ಒಂದು ವಚನ ಲಭ್ಯವಿದೆ. “ಬತ್ತೆಯ ಹಿಡಿದು ಮತ್ತೊತ್ತೆಯ ಹಿಡಿಯೆ. ಹಿಡಿದಡೆ ಬತ್ತಲೆ ನಿಲಿಸಿ ಕೊಲುವರಯ್ಯಾ….“ ಈ ವಚನ ಆಧಾರದ ಮೇಲೆಯೇ ಸಂಗಣ್ಣನವರು ತಮ್ಮದೇ ಆದ ದೃಷ್ಟಿಯಲ್ಲಿ ಪರಭಾವಿಸಿಕೊಂಡು ನಾಟಕ ರಚನೆ ಮಾಡಿದ್ದಾರೆ. ಸೂಳೆತನದ ಕೋಟೆಯನ್ನು ದಾಟಲು ಯತ್ನಿಸಿದ ಸಂಕವ್ವ ಎದುರಿಸಿದ ಕಷ್ಟ-ಪ್ರತಿರೋಧ ಇದರಿಂದ ಸಂಭವಿಸಿದ ಘರ್ಷಣೆಗಳು ನಾಟಕದಲ್ಲಿ ಅರ್ಥವತ್ತಾಗಿ ಬಿಂಬಿತವಾಗಿದೆ. ದೊರೆತ ಒಂದೇ ಒಂದು ವಚನದ ಆಧಾರದ ಮೇಲೆ ರಚನೆಯಾದ ನಾಟಕಕ್ಕೆ ಐತಿಹಾಸಿಕ ಮಹತ್ವವಿದೆ. ಸಾಣೇಹಳ್ಳಿಯ `ಶಿವಸಂಚಾರ` ಇವರು ಈ ನಾಟಕವನ್ನು ರಂಗದ ಮೇಲೆ ಪ್ರಯೋಗಿಸಿದ್ದಾರೆ.

`ಗೊಂದಲಿಗರ ದೇವೇಂದ್ರಪನ ಆಟಗಳು` ಈ ಕೃತಿಯನ್ನು ಕನ್ನಡ ವಿಶ್ವವಿದ್ಯಾಲಯ, ಪ್ರಕಟಿಸಿದೆ. ಸ್ಥಿತ್ಯಂತರಗೊಳ್ಳುವ ಕಾಲದೊಂದಿಗೆ ಮುಖಾಮುಖಿಯಾಗುತ್ತಿದ್ದಂತೆಯೇ ಜಾನಪದ ಕಲೆಗಳು ಬದಲಾಗುತ್ತಿದ್ದರೂ `ದೇವೇಂದ್ರಪ್ಪನಂಥ ಒಬ್ಬ ಕಲಾನಿಷ್ಠ ಬದುಕಿನ ಜೀವನಾನುಭವ ನಿಷ್ಠೆ ತೋರಿಸುತ್ತಿರುವುದನ್ನು ಸಂಗಣ್ಣನವರು ಗುರುತಿಸಿದ್ದರು. ೬೬ ಪುಟಗಳ ಪೀಠಿಕೆಯಲ್ಲಿ, ಗೊಂದಲಿಗರದು “ಕತೆಯಲ್ಲ ಆಟ“ ಎಂದು ತೋರಿಸುವ ಮತ್ತು ಒಂದು ಜಾನಪದ ಕಲೆ, ಭಾಷೆ, ಪ್ರದೇಶ, ಜನಾಂಗ, ಧರ್ಮ ಇತ್ಯಾದಿಗಳನ್ನು ಮೀರಿ ಬದುಕನ್ನು ಕಲಾತ್ಮಕವಾಗಿ ಕಾಣುವ ಹಿನ್ನೆಲೆಯಲ್ಲಿ ದುಡಿಯುತ್ತದೆ ಎಂಬುದನ್ನು ಪ್ರಮೇಯಾತ್ಮಕ ವಿಶ್ಲೇಷಣೆಯ ಮೂಲಕ ತಿಳಿಸುತ್ತಾರೆ. `ಗೊಂದಲಿಗರ ಕಥೆ` ನಿಜಾರ್ಥದಲ್ಲಿ ಅದು ಕತೆಯಲ್ಲ, ಆಟ ಎಂದು ಮನನ ಮಾಡುವಾಗ ಅವರು ಈ ಕಲಾಪ್ರಕಾರಕ್ಕಿರುವ “ವಾಕ್ಸಂಪ್ರದಾಯ, ಕಥೆಯ ಕತೆ, ಕಥಾಕೀರ್ತನ, ಪೌರಾಣಿಕ-ಕಾಲ್ಪನಿಕ ಕಥಾ ಸಂಬಂಧ, ಗದ್ಯಪದ್ಯ, ಕಥನಗಳು, ಗೊಂದಲಿಗರ ಕಲ್ಪನಾವಿಲಾಸ, ಗೊಂದಲಿಗರು, ಕಿನ್ನರಿ-ಗೊಂದಲಿ ಜೋಗಿಗಳು, ಗೊಂದಲಿ-ಕರ್ನಾಟಕದಲ್ಲಿ, ಬೆಳಗಾವಿ ವಿಭಾಗದಲ್ಲಿ, ಕರಾವಳಿ ಭಾಗದಲ್ಲಿ ಹೈದರಾಬಾದ್ ಕರ್ನಾಟಕದಲ್ಲಿ, ಆಂಧ್ರ ಪ್ರದೇಶದಲ್ಲಿ, ಕರ್ನಾಟಕ-ಮಹಾರಾಷ್ಟ್ರ ಸಂಬಂಧ, ಭಾಷಾ ಬಾಂಧವ್ಯ ಗೊಂದಲ-ಮಹಾರಾಷ್ಟ್ರ ಕಥೆಯಲ್ಲಿ ಆಟ ರಂಗಸ್ಥಳ ಕಥೋದ್ದೇಶ, ಕಥಾ ಬಾಂಧವ್ಯಗಳು, ಕಥಾವಸ್ತುಗಳ ಹೆಸರು, ಇವನ್ನು ಬಳಸಿಕೊಳ್ಳುವ ವಿವಿಧ ಕಲಾವಿದರು, ಕಿನ್ನರಿ ಜೋಗಿಗಳು-ಗೊಂದಲಿಗರು….“ ಹೀಗೆ ಸಂಗಣ್ಣನವರು ನೀಡುವ ಐವತ್ತೆರಡು ಉಪಶೀರ್ಷಿಕೆಗಳು ಅಧ್ಯಯನದ ಆಳ, ಗ್ರಹಿಕೆಯ ಸ್ಪಷ್ಟತೆಯನ್ನು ಹೇಳುತ್ತದೆ.

`ಶೀಲಾವತಿ` ಗೊಂದಲಿಗರ ಕಥಾ ಪ್ರಸಂಗದ ನಾಟಕ ರೂಪ. ಒಂದು ಜಾನಪದ ಕಥಾನಕವನ್ನು ಆಧುನಿಕ ನಾಟಕವನ್ನಾಗಿಸಿದವರು ಮುದೇನೂರು ಸಂಗಣ್ಣನವರು. ಜಾನಪದ ರಂಗಭೂಮಿಯ ಸಿದ್ಧ ಹಸ್ತರಾಗಿದ್ದ ಇವರಿಗೆ ಮಾತ್ರ ಇಂಥ ಪ್ರಯೋಗವನ್ನು ಮಾಡಲು ಸಾಧ್ಯವಾಗಿದ್ದು ಹಾಗೂ ಆ ನಿಟ್ಟಿನಲ್ಲಿ ಯಶಸ್ವಿಯಾದವರು. ಇದನ್ನು ಮರಿಯಮ್ಮನಹಳ್ಳಿಯ ಲಲಿತಕಲಾ ರಂಗದ ಕಲಾವಿದರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿಯೂ ಇದನ್ನು ಪ್ರದರ್ಶಿಸಿದ್ದಾರೆ. ನೂರಕ್ಕೂ ಹೆಚ್ಚು ಪ್ರದರ್ಶನಗಳನ್ನು ಕಂಡು ಜನಪ್ರಿಯ ನಾಟಕವಾಗಿ ಹೆಸರು ಪಡೆದುಕೊಂಡಿದೆ. ಲಲಿತಕಲಾ ರಂಗವು ಸಹ ಈ ನಾಟಕದಿಂದ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿತು.

ಒಂದು ಜನಪದ ಗೀತೆಯನ್ನಾಧರಿಸಿ ರಚಿಸಿದ ನಾಟಕ `ಅವ್ವಣ್ಣೆವ್ವ` ಜನಪದ ಗೀತೆಯ ಮೂಲ ಕಥೆಯನ್ನು ವಿಸ್ತರಿಸಿ ಒಂದು ಅರ್ಥಪೂರ್ಣವಾದ ನಾಟಕವನ್ನು ಸಂಗಣ್ಣನವರು ರಚಿಸಿದ್ದಾರೆ. ಒಂದು ಹಳ್ಳಿಯಲ್ಲಿ ನಡೆದ ಅಂತರ್ಜಾತೀಯ ಪ್ರೇಮ ಪ್ರಕರಣ ವಿವಿಧ ಆಯಾಮಗಳನ್ನು ಪಡೆದುಕೊಳ್ಳುವುದನ್ನು ಇದು ಚಿತ್ರಿಸುತ್ತದೆ. ಅವ್ವಣ್ಣೆವ್ವ ಬೇರೆ ಜಾತಿಯ ಬಡವನಾದ ಯುವಕನನ್ನು ಪ್ರೀತಿಸುತ್ತಾಳೆ. ಅವರ ಅಣ್ಣಂದಿರು ಅದಕ್ಕೊಪ್ಪದೇ ಸ್ವಜಾತಿಯ ವರನೊಂದಿಗೆ ಮದುವೆ ನಡೆಯುತ್ತದೆ. ಗಂಡ ಅಲ್ಪಾಯುಷಿ. ತರುಣ ವಿಧವೆ ಅವ್ವಣ್ಣೆವ್ವನನ್ನು ಮೊದಲಿನ ಪ್ರೇಮಿ ಮದುವೆ ಮಾಡಿಕೊಂಡು ಊರು ಬಿಡುತ್ತಾನೆ. ಪ್ರೇಮ ಜೀವನವನ್ನು ದಿಕ್ಕರಿಸಿದ ಊರಿಗಿಂತ ನಿರ್ಜನವಾದ ಕಾಡು ಲೇಸೆಂದು ಭಾವಿಸಿ ಅಡವಿ ಸೇರುತ್ತಾರೆ. ಮಗು ಹುಟ್ಟಿದ ಮೇಲೆ ಕಾಡಿನ ಜೀವನ ಬೇಸರ ತರಿಸುತ್ತದೆ. ಸಮಾಜವಿಲ್ಲದೆ ಬದುಕು ಅಸನೀಯವೆಂಬ ವೇದನೆ ಸಂಗಣ್ಣನವರದ್ದಾಗಿದೆ. ಅವ್ವಣ್ಣೆವ್ವ ಗಂಡ ಮಗನೊಂದಿಗೆ ಪುನಃ ಊರಿಗೆ ಬರುತ್ತಾಳೆ. ಸಂಘಜೀವಿಯಾದ ಮನುಷ್ಯ ಸಮಾಜವಿಲ್ಲದೆ ಬದುಕಲು ಅಸಾಧ್ಯವೆಂಬ ತಿರ್ಮಾನದಿಂದಾಗಿ ಸಂಗಣ್ಣನವರು ಈ ನಾಟಕವನ್ನು ರಚಿಸಿದ್ದಾರೆ.

ಕಿನ್ನರಿ ಜೋಗಿಗಳ ಕಥಾಪ್ರಸಂಗವನ್ನು ವಿವರಿಸುವ ನಾಟಕ `ಲಕ್ಷಾಪತಿ ರಾಜನ ಕಥೆ`. ಕಿನ್ನರಿ ಜೋಗಿಗಳ ರಂಜನೀಯ ವೃತ್ತಿಜನ್ಮ ಕಥೆಗಾರಿಕೆಯ ತಂತ್ರವನ್ನೇ ಬಳಸಿಕೊಂಡು ಇದನ್ನು ರಂಗರೂಪಕ್ಕೆ ಅಳವಡಿಸಲಾಗಿದೆ. ನಿರ್ದೇಶಕಿ-ನಟಿ ಬಿ. ಜಯಶ್ರೀ `ಲಕ್ಷಾಪತಿ ರಾಜನ ಕಥೆ`ಯನ್ನು ರಂಗರೂಪಕ್ಕೆ ಅಳವಡಿಸಿದ್ದಾರೆ. ಮೂಲ ಕಲೆಯ ಶೈಲಿ ಸತ್ವಗಳನ್ನು ಹಾಡಿನ ದಾಟಿಗಳನ್ನು ಉಳಿಸಿಕೊಂಡು ಕಥಾವಸ್ತುವನ್ನು ಇನ್ನಷ್ಟು ಪುಷ್ಟಗೊಳಿಸಿ ಪ್ರದರ್ಶನ ನೀಡಲಾಗಿದೆ. ಅಭಿನಯ, ಗತ್ತಿನ ಹೆಜ್ಜೆ, ರಂಗ ರಚನೆಗಳನ್ನು ಬಳಸಿ ಅನ್ಯ ಭಾಷಾ ಪ್ರೇಕ್ಷಕರಿಗೆ ಭಾಷೆಯ ತೊಡಕೇ ಅನುಭವಕ್ಕೆ ಬಾರದಂತೆ ನಿರ್ದೇಶಿಸಿದ್ದಾರೆ. ಸೂತ್ರದ ಗೊಂಬೆ ಆಟ ಒಂದು ಪ್ರಾಚೀನ ಜಾನಪದ ಕಲೆ, ಸಮೂಹ ಮಾಧ್ಯಮದ ಕಲೆಯಾಗಿ ಪ್ರೇಕ್ಷಕರ ಮೇಲೆ ಗಮನಾರ್ಹ ಪರಿಣಾಮವನ್ನಿಟ್ಟು ಮಾಡಿದ್ದ ಪ್ರದರ್ಶನ ಕಲೆ. ಈ ಕಲೆಯನ್ನು ಸಂಗಣ್ಣನವರು `ರಾತ್ರಿ ಸಾಲಿ` ಎಂದೇ ಕರೆದಿದ್ದಾರೆ.

ಕಂಠಸ್ಥವಾಗಿದ್ದ ಸೂತ್ರದ ಗೊಂಬೆಯಾಟದ ಪ್ರಸಂಗಗಳನ್ನು ಸಂಪಾದಿಸಿರುವ ಕೃತಿಯೇ `ಗೊಂಬೀಗೌಡರ ಸೂತ್ರದ ಗೊಂಬೆ ಆಟಗಳು`. ಈ ಕೃತಿಯಲ್ಲಿ `ರಾವಣ ವದಾ`, `ಅಭಿಮನ್ಯು ವದಾ` ಈ ಎರಡು ಆಟಗಳನ್ನು ಸಂಪಾದಿಸಿದ್ದಾರೆ. ಗೊಂಬೆ ಆಟದವರು ಆಡುವ ಭಾಷೆಯನ್ನು ಹಾಗೇ ಉಳಿಸಿಕೊಳ್ಳುವ ಮೂಲಕ ಸಂಪಾದಕರು ಆಟಗಳ ರಂಗ ಸಂಭಾಷಣೆಯ ಕಲಾತ್ಮಕತೆಯನ್ನು ಸಂರಕ್ಷಿಸಿದ್ದಾರೆ. ಈ ಬಗ್ಗೆ ಸಾಹಿತ್ಯದ ಅನರೂಪ, ಕಾಲದ ಧೂಳಿನಲ್ಲಿ ಮರೆಯಾಗಿ ಹೋಗುತ್ತಿದ್ದ ಈ ಕಂಠಸ್ಥ ಆಟ ಪ್ರಸಂಗಗಳನ್ನು ಗ್ರಂಥಸ್ಥಗೊಳಿಸಿ ಜಾನಪದ ಕ್ಷೇತ್ರಕ್ಕೆ ಉಪಯುಕ್ತವಾದ ಕಾರ್ಯವನ್ನು ಮಾಡಿದ್ದಾರೆ. `ಗೊಂಬೀಗೌಡರ ಸೂತ್ರದ ಗೊಂಬೆ ಆಟಗಳು` ಇದನ್ನು ಕನ್ನಡ ಸಾಹಿತ್ಯ ಪರಿಷತ್ತು ೧೯೯೫ರಲ್ಲಿ ಪ್ರಕಟಿಸಿದೆ.

ಇವರ ಬಿಡಿ ಕವಿತೆಗಳನ್ನು ಒಟ್ಟಿಗೆ ಸೇರಿಸಿ `ಆ ಅಜ್ಜ ಈ ಮೊಮ್ಮಗ` ಕವನ ಸಂಕಲನ ಪ್ರಕಟಿಸಲಾಗಿದೆ. ೧೯೪೫ರಿಂದ ೨೦೦೦ ವರೆಗಿನ ಅವಧಿಯಲ್ಲಿ ಪ್ರಕಟಗೊಂಡ ಇವರ ಕವಿತೆಗಳ ಸಂಕಲನ ಇದಾಗಿದೆ.

`ಆ ಅಜ್ಜ ಈ ಮೊಮ್ಮಗ` ಇವರ ಕವನಗಳ ಸಂಕಲನ ನವೋದಯದ ಎಲ್ಲ ಕವಿತೆಗಳಂತೆ ಸಂಗಣ್ಣನವರು ನಿಸರ್ಗದ ಚೆಲುವಿಗೆ ಕೌತುಕಕ್ಕೆ ಮನ ಸೋತಿದ್ದಾರೆ. ಅದರ ಬೆಡಗು ಭಿನ್ನಾಣಗಳನ್ನು ಅಚ್ಚರಿಯಿಂದ ವರ್ಣಿಸುತ್ತಲೇ ನಿಸರ್ಗ-ಮನುಷ್ಯ ಸಂಬಂಧದ ಅನ್ವೇಷಣೆಗೂ ತೊಡಗುತ್ತಾರೆ. ಕವಿತೆಗಳಲ್ಲಿ ಅಂತರ್ ವಾಹಿನಿಯಾಗಿ ಹರಿದು ಬರುವ ಭಾವುಕತನ ವೈಚಾರಿಕತೆಯೊಂದಿಗೆ ಸಂಲಗ್ನಗೊಂಡಿರುವುದನ್ನು ಕಾಣಬಹುದಾಗಿದೆ. ಸಂಗಣ್ಣನವರು ಭಾವುಕತನದಲ್ಲಿ ಮೈಮರೆಯದೆ ಲೌಕಿಕ ಬದುಕನ್ನು ತೆಕ್ಕೆಯಲ್ಲಿ ಹಿಡಿದುಕೊಳ್ಳುತ್ತಾರೆ. ಬದುಕಿನ ವಾಸ್ತವತೆಯನ್ನು ದೃಢೀಕರಿಸುತ್ತ ಅದಕ್ಕೆ ತಮ್ಮದೇ ಆದ ವ್ಯಾಖ್ಯಾನ ನೀಡುತ್ತಾರೆ. ಅವರ ಪಾಲಿಗೆ ಕವಿತೆಯೆಂಬುದು ಬದುಕಿನ ವ್ಯಾಖ್ಯಾನ-ನಿರೂಪಣೆ-ಸಮರ್ಥನೆ-ದರ್ಶನ ಎಲ್ಲವೂ ಆಗಿದೆ. ಹಾಗಂತ ಅವರ ಕಾವ್ಯ ಲೌಕಿಕದ ಪರಿಧಿಯಲ್ಲಿ ಗಿರಕಿಹೊಡೆಯಲಾರದು. ಲೌಕಿಕದಾಚೆಯ ಏನನ್ನೋ ಸ್ಪರ್ಶಿಸುವ ದರ್ಶಿಸುವ ತುಡಿತ ಎದ್ದುಕಾಣುತ್ತದೆ. ಸಂಗಣ್ಣನವರ ಕವಿತೆಗಳಲ್ಲಿರುವ ತಣ್ಣನೆಯ ಬಂಡಾಯ ಮನೋಜ್ಞವಾಗಿದೆ. ಅಮಾನವೀಯ ಮೌಢ್ಯಗಳನ್ನು ಧಿಕ್ಕರಿಸುತ್ತ ಪರಂಪರಾಗತ ಮೌಲ್ಯಗಳನ್ನು ಪ್ರತಿಪಾದಿಸುವರು. ಎಚ್ಚರದಿಂದ ನಡೆಸುವ ಮೌಲ್ಯಗಳ ಅನ್ವಯಿಕೆಯಲ್ಲಿ ಕಂದಾಚಾರವಿರುವುದಿಲ್ಲ. ಲೋಕಾನುಭವ ಮತ್ತು ಸ್ವಾನುಭಾವಗಳ ಅಮಿತಶಕ್ತಿ ಅವರ ಕವಿತೆಗಳ ಆರೋಗ್ಯ ವರ್ದಿಸಿದೆ. ಸದಾ ಮಾನವತೆಗಾಗಿ ಹಂಬಲಿಸುವ ಸಂಗಣ್ಣನವರ ವಿಡಂಬನೆ ಅತ್ಯಂತ ನಾಜೂಕಾದುದು, ಸ್ವಗತ ಸಂಭಾಷಣೆಯ ರೂಪದಲ್ಲಿರುವಂಥದು. ಅಸಮಾನತೆ, ಶೋಷಣೆ, ಅನೈತಿಕತೆ, ಭ್ರಷ್ಟಾಚಾರಗಳಿಂದ ಸಾಮಾಜಿಕ ವ್ಯವಸ್ಥೆಯ ಮಧ್ಯದಲ್ಲಿರುವ ಸಂಗಣ್ಣನವರ ಕವಿತೆಗಳಲ್ಲಿ ಆಶಾವಾದದ ಬೆಳಕಿದೆ. ಇತ್ತೀಚೆಗೆ ಅವರು ಹಲವಾರು ಕಥನ ಕವನಗಳನ್ನು ರಚಿಸಿದ್ದಾರೆ. ಅಲ್ಲಿಯ ಬಹಳಷ್ಟು ಕಥಾನಕಗಳು ಸುಪರಿಚಿತ. ಆದರೂ ಪ್ರಥಮ ಸಲ ಪರಿಚಯಿಸುವ ಉತ್ಸಾಹದಲ್ಲಿ ಸಂಗಣ್ಣನವರು ನಿರೂಪಿಸಿಸುತ್ತಾರೆ. ಅವುಗಳಲ್ಲಿ ತಮ್ಮದೇ ಆದ ಹೊಸ ಅರ್ಥ ತುಂಬುತ್ತಾರೆ. ಆ ಅರ್ಥದ ಮೂಲಕ ಧ್ವನಿಶಕ್ತಿ ಸ್ಥಾಪಿಸುತ್ತಾರೆ. ಅವು ತಮ್ಮಲ್ಲಿ ಅಡಗಿಸಿಕೊಂಡಿರುವ ನೀತಿ ಬೋಧೆಗಳನ್ನು ತೆರೆದಿಡುತ್ತ ಪುನರ್ಮನನದ ಅನುಭವ ನೀಡುತ್ತವೆ. ಸಂಗಣ್ಣನವರ ಕಾವ್ಯಭಾಷೆ ವಿಶಿಷ್ಟವಾದುದು. ನಡುಗನ್ನಡ ಕಾವ್ಯ-ವಚನಸಾಹಿತ್ಯ-ನವೋದಯ ಕಾವ್ಯಗಳ ಆಳವಾದ ಅಧ್ಯಯನದ ಫಲವಾಗಿ ಪಾಕಗೊಂಡಿರುವ ಅವರ ಕಾವ್ಯಭಾಷೆಯ ಸೊಗಸೇ ಬೇರೆ. ಕವಿತೆಗಳ ಸಾಲುಸಾಲುಗಳಲ್ಲಿ ಇದು ವ್ಯಕ್ತವಾಗುತ್ತದೆ. ಒಟ್ಟಾರೆ ಸಂಗಣ್ಣನವರ ಕಾವ್ಯವನ್ನು ಸಮೀಕ್ಷಿಸಿದ ಮೇಲೆ “ಸಂಗಣ್ಣನವರು ಕವಿತೆಯ ರಚನೆಯನ್ನೇ ಮುಖ್ಯವಾಗಿಟ್ಟುಕೊಂಡು ಕಾವ್ಯೋದ್ಯೋಮಿ ಕವಿಯಲ್ಲ. ಅವರ ಸಾಂಸ್ಕೃತಿಕ ಅಭಿವ್ಯಕ್ತಿ ಹಲವು ಹತ್ತು ಅಭಿವ್ಯಕ್ತಿಗಳನ್ನು ಪಡೆದುಕೊಂಡಿದೆ. ಕವಿತೆಯೆಂಬುದು ಅವರ ಅನೇಕ ಅಭಿವ್ಯಕ್ತಿಗಳಲ್ಲಿ ಒಂದು ಅಷ್ಟೆ“ (ಓ.ಎಲ್. ನಾಗಭೂಷಣಸ್ವಾಮಿ-ಆ ಅಜ್ಜ ಈ ಮೊಮ್ಮಗ-ಮುನ್ನುಡಿ)

ಕರ್ನಾಟಕ ಸಾಹಿತ್ಯ ಅಕಾಡೆಮಿ ಕುರಿತು ಪ್ರಕಟಿಸಿರುವ `ಜನಪದ ಮುಕ್ತಕಗಳು` ಇವರ ಮತ್ತೊಂದು ಕೃತಿ. ಮುಕ್ತಕಗಳನ್ನು ಹೀಗೆಂದಿದ್ದಾರೆ. ಜನಪದ ಮುಕ್ತಕಗಳ ಕಡೆಗೆ ನಮ್ಮ ವಿದ್ವಾಂಸರ ಗಮನ ಹರಿದಿದೆ. ಇದನ್ನು ಹೊಸ ಬಗೆಯಿಂದ ಅವರು ನೋಡತೊಡಗಿದ್ದಾರೆ. ಇಲ್ಲಿ ಸಂಕಲನವಾಗಿರುವ ಮುಕ್ತಕಗಳು ಜಾನಪದರ ಜೀವನ, ವಿಧಾನ, ಚಿಂತನೆ, ಮನೋಗ್ರಹಿಕೆಗಳ ಹಿನ್ನೆಲೆಯಲ್ಲಿ ವ್ಯಕ್ತಿ, ಕುಟುಂಬ, ಸಮಾಜಗಳ ಎಲ್ಲ ವಿಧದ ಸಂಬಂಧಗಳನ್ನೂ ಹೇಳುತ್ತವೆ. ಇವು ಅನುಭವ ಬಿಟ್ಟು ಅರ್ಥಕ್ಕೂ ದುಂಬಾಲು ಬೀಳುವ ದಡ್ಡತನ ತೋರಿಲ್ಲ. ಭಾವಕ್ಲೀಷ್ಟತೆ, ಕ್ಲೀಷ್ಟೆಗಳ ಸೋಂಕಿಲ್ಲದ ಇವುಗಳಲ್ಲಿ ಮಣ್ಣಿನ ಬದುಕಿನ ಅಂತಃಸ್ಸತ್ವದ ಹೂಳಹು ಇದೆ.

ಜಾನಪದರು ತಮ್ಮ ವೃತ್ತಿ ಆಧಾರಿತ ಜಾತಿ, ಮತ, ಪಂಗಡಗಳ ಎಲ್ಲೇ ಮೀರಿ ಮಾನವ ಕಾಳಜಿ ತೋರಿರುವುದನ್ನು ಇಲ್ಲಿಯ ಮುಕ್ತಕಗಳು ಅರಿವಿಗೆ ತರುತ್ತವೆ. ಇವು ಅವರ ಸ್ವಭಾವೋಕ್ತಿ ಪ್ರಿಯತೆ. ಅವರವರ ಪಾರಿಸರಿಕ ಜೀವನ ಕ್ಷೇತ್ರಗಳಿಂದಲೇ ದೃಷ್ಟಾಂತಗಳನ್ನು ಆಯ್ದುಕೊಳ್ಳುವ ಸ್ವಂತಿಕೆಗಳನ್ನು ಮರೆಯುತ್ತವೆ. ಅಂತೆಯೇ ಜನಪದ ಮುಕ್ತಕಗಳು ಬೆಲ್ಲದ ಪುತ್ಥಳಿಗಳು. `ಎಲ್ಲಿ ಚುಂಬಿಸಿದರೂ ಇನಿದು` ಕನ್ನಡ ಸೊಲ್ಮಿನ ರಸಗಮ್ಯ ಬಂಧದತೆಯನ್ನು ವಿಜೃಂಭಿಸುವ ಮೇಲ್ಮೈ ಇದಕ್ಕಿದೆ.

ಇವರ ಮತ್ತೊಂದು ಅಪರೂಪದ ಕೃತಿ `ಚಿಗಟೇರಿ ಪದಕೋಶ. ಕನ್ನಡದ ಸಂದರ್ಭದಲ್ಲಿ ಇದು ತನ್ನಷ್ಟಕ್ಕೆ ತಾನೇ ಮಾದರಿಯಾಗಿರುವ ನಿಘಂಟು. ಈ ನಿಘಂಟು ರಚನೆಯ ಹಿಂದೆ ಐವತ್ತು ವರ್ಷಗಳ ಶ್ರಮವಿದೆ. ಹಲವಾರು ಕಥೆ ಇದೆ. “ಸುಮಾರು ಐವತ್ತೈದು ವರ್ಷಗಳ ಹಿಂದೆ ಒಂದು ದಿನ ನಮ್ಮೂರ ೮೦-೮೫ರ ವಯಸ್ಸಿನ ದಿ. ಗುಡ್ಲಾನೂರ ಗೋಣೆಜ್ಯನ ಮಕ ಕಂಡಾಗ “ಏನಜ್ಜ, ಎಲ್ಲಿ ಹೋಗಿದ್ದಿ? ಎಂದು ಕೇಳಿದೆ ನಮ್ಮಾಕಿಗೆ ಈ ಸಾಲಿ ತರಾಕೆ“ ಎಂದು ಬಗಲಲ್ಲಿಯ ರಾಂಪುರದ ಸೀರೆ ತೋರಿಸಿದ. ಸಾಲಿ ಎಂದರೆ ಓದೋ ಸಾಲಿ ಎಂದು ಮಾತ್ರ ತಿಳಿದಿದ್ದ ನಾನು ನಿಬ್ಬೆರಗಾದೆ. “ಸಾಲಿ ಅಂದ್ರೆ ಸೀರಿ ಅಂತಾ ಅರ್ಥೇನು ಸಾರ್“ ಎಂದು ನಮ್ಮ ಸಾಲಿ ಮೇಷ್ಟ್ರನ್ನ ಕೇಳಿದೆ. ಅದೊಂದು ಅಚ್ಚಗನ್ನಡದ ಗ್ರಾಮ್ಯ ಶಬ್ದವಿರಬೌದು“ ಎಂದರು. ಈ ಶಬ್ದ ನನ್ನ ಕುತೂಹಲ ಕೆರಳಿಸಿ ಆಡು ಮಾತುಗಳನ್ನು ಕಿವಿಗೊಟ್ಟು ಕೇಳುವಂತೆ ಮಾಡಿತು. ಆ ನಂತರ ನನ್ನ ಗಮನ ಸೆಳೆದ ಗಬಸ್ದುಳಿ, ಗದ್ಮಿ, ಕಾಟುಗ, ಚಾವತ್ತು, ದಸಾರಿ, ನೆಲಹಡುಕ ಮುಂತಾದ ಎಷ್ಟೋ ಆಡು ನುಡಿಗಳು ಕುತೂಹಲ ಕೆರಳಿಸಿದವು. ಇವು ನಿಘಂಟಿಗೆ ಹೊರತಾದ ಶಬ್ದಗಳೆಂದು ಕಂಡುಕೊಂಡೆ. ಕಳೆದ ನಲವತ್ತೈದು ವರ್ಷಗಳಿಂದ ನನ್ನ ಕಿವಿದೆರೆಯ ಮೇಲೆ ಬಿದ್ದ ಗ್ರಂಥಸ್ಥವಲ್ಲದ, ಕಿಟೆಲ್ ಕೋಶವಲ್ಲಿಲ್ಲದ ಪದಗಳನ್ನು ಈ ವರೆಗೆ ಸಂಗ್ರಹಿಸುತ್ತಾ ಬಂದಿದ್ದೇನೆ.

ನನ್ನ ಈ ಸಂಗ್ರಹಕಾರ್ಯದ ಹುಚ್ಚನ್ನು ೧೯೫೪ರಲ್ಲಿ ಒಮ್ಮೆ ಡಾ. ಶಿವರಾಮ ಕಾರಂತರಲ್ಲಿ ತಿಳಿಸಿದೆ. “ಪ್ರಕಟನೆಯ ಅವಸರ ಬೇಡ ಇನ್ನೂ ಸಂಗ್ರಹಿಸುತ್ತಾ ಹೋಗಿ. ಮತ್ತಷ್ಟು ಹೆಚ್ಚಿನ ನಿಧಿ ದೊರಿತೀತು“ ಎಂದರು. ೧೯೭೦ರಲ್ಲಿ ನನ್ನ ಈ ಪದಕೋಶ ರಚನೆಯ ಬಗ್ಗೆ ಲಿಂ. ಸಂ.ಶಿ. ಭೂಸನೂರಮಠರೊಂದಿಗೆ ಸಮಾಲೋಚಿಸಿದೆ. “ನಮ್ಮಲ್ಲಿ ಪ್ರತ್ಯೇಕ ಉಪಭಾಷಾಕೋಶವೇ ಇಲ್ಲ. ಅಗತ್ಯ ಮಾಡ್ರಿ. ನಮ್ಮ ಶರಣರ ಸೂಳ್ನುಡಿಗಳೊಳಗ ಎಂಥಂಥಾ ಆಡು ಮಾತುಗಳನ್ನು ಬಳಸ್ಯಾರ. ಒಂದೊಂದು ಶಬ್ದಕ್ಕೂ ಮುತ್ತು ಮಾಣಿಕ್ಯದ ಕಿಮ್ಮತ್ತು“ ಎಂದು ಬೆನ್ನು ತಟ್ಟಿದರು. ಒಂದೊಮ್ಮೆ ಬಳ್ಳಾರಿ ಜಿಲ್ಲೆಯ ಸಮಸ್ತ ಆಡು ನುಡಿಗಳ ನಿಘಂಟನ್ನು ರಚಿಸುವ ಆವೇಶ ನನ್ನದಾಗಿತ್ತು. ಆದರೆ ಅದಕ್ಕೆ ನನ್ನಂಥ ಹಲವಾರು ಜನ ಬೇಕೆಂಬುದರ ಅರಿವಾಯಿತು. ಪೆಡಂಭೂತಾಕಾರಾದ ಕ್ಷೇತ್ರಕಾರ್ಯ ಬಾಹುಳ್ಯ ನನ್ನನ್ನು ಹಿಮ್ಮೆಟ್ಟಿಸಿತು. ಅಂತೆಯೇ ನಾನು ಕೂಡಿಟ್ಟ ಆಡು ನುಡಿಗಳಲ್ಲಿ ಒಂಬತ್ತು ಸಾವಿರದಷ್ಟನ್ನು ಹೆಕ್ಕಿ ತೆಗೆದು ಈ `ಚಿಗಟೇರಿ ಪದಕೋಶ`ವನ್ನು ಸಿದ್ಧಗೊಳಿಸಿದ್ದೇನೆ. (ಚಿಗಟೇರಿ ಪದಕೋಶ: ಅರಿಕೆಯಿಂದ) ಈಗಿರುವ ನಿಘಂಟುಗಳನ್ನು, ಅವುಗಳ ಮಾದರಿಗಳನ್ನು, ಅವು ಕೇವಲ ಗ್ರಾಂಥಿಕ ಭಾಷೆಯಲ್ಲೇ ಇದ್ದದ್ದನ್ನು ಗಮನಿಸಿದ ಸಂಗಣ್ಣನವರು ನಿಘಂಟುಗಳ ದೋಷವನ್ನು ಕಂಡರು. ಭಾಷೆಗೆ ನಿಜವಾದ ಶಕ್ತಿ ಇರುವುದು ಜನ ಸಾಮಾನ್ಯರು ಆಡುವ ಭಾಷೆಯಲ್ಲಿ. ಇದನ್ನು ಸಹಜವಾಗಿ ಗಮನಿಸಿದ ಇವರು ತಾವಿದ್ದ ಚಿಗಟೇರಿ ಹಾಗೂ ಸುತ್ತಲಿನ ಹಳ್ಳಿಗಳ ಪರಿಸರದ ಪದಗಳನ್ನು ಸಂಗ್ರಹಿಸುತ್ತಾ ಬಂದರು. ಹೀಗೆ ಸಂಗ್ರಹಿಸುತ್ತ ಬಂದ ಪದಗಳ ಕೋಶವೇ `ಚಿಗಟೇರಿ ಪದಕೋಶ`. ಚಿಗಟೇರಿ ಪದಕೋಶ ಎಂಬುದು ಪ್ರಾದೇಶಿಕ `ಕನ್ನಡ ವಿಶೇಷ`ದ ಅಪೂರ್ವ ಪದಕೋಶ. ತಾವು ವಾಸಿಸುತ್ತಿದ್ದ ಪ್ರದೇಶದ ನುಡಿ, ನುಡಿಗಟ್ಟುಗಳು, ಅರ್ಥ, ಬಾಳಾರ್ಥ, ಮಾಧುರ್ಯ, ಧ್ವನಿ ಇವೆಲ್ಲವನ್ನೂ ಅದನಾಡುವ ಜನರ ಹಾವ ಭಾವವೂ ಕಣ್ಣೆದುರು ಕಟ್ಟುವಂತೆ ಪರಿಶ್ರಮದ ಧಾರೆ ಹರಿಸಿ ಸಂಗಣ್ಣನವರು ರಚಿಸಿದ್ದಾರೆ. ಈ ಪದಕೋಶದಲ್ಲಿ ಮಳೆ ಬೀಳೋದನ್ನು ೨೪ ನಮೂನಿ ಗುರಿತಿಸಿದ್ದಾರೆ. ಹೀಗೆ ಅಪರೂಪದ, ಜನರಿಂದ ಮರೆಯಾಗುತ್ತಿರುವ ಅನೇಕ ಶಬ್ದಗಳನ್ನು ಇವರು ಸಂಗ್ರಹಿಸಿದ್ದಾರೆ. `ಚಿಗಟೇರಿ ಪದಕೋಶ` ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಧ್ಯಯನಕ್ಕೆ ಗಮನಾರ್ಹ ಆಕರ ಗ್ರಂಥವಾಗಿದೆ. ಸಂಸ್ಥೆ ಅಥವಾ ವಿಶ್ವವಿದ್ಯಾಲಯಗಳು ಮಾಡಬಹುದಾದ ಕಾರ್ಯವನ್ನು ಸಂಗಣ್ಣರೊಬ್ಬರೆ ಮಾಡಿ ತೋರಿಸಿದ್ದಾರೆ. ಜಾನಪದ ವಿದ್ವಾಂಸ, ಭಾಷಾತಜ್ಞರು ಆದದ್ದು ಇವರ ವಿಶೇಷ. (ಈ ಕೃತಿಗೆ ಅಂತರಾಷ್ಟ್ರೀಯ ಭಾಷಾ ವಿಜ್ಞಾನ ಪ್ರಶಸ್ತಿ ದೊರೆತಿದೆ)

ಸಂಗಣ್ಣನವರು ಬರೆದ ಏಕೈಕ ಜೀವನ ಚರಿತ್ರೆ ಕೊಂಡಜ್ಜಿ ಬಸಪ್ಪನವರು`. ಕೊಂಡಜ್ಜಿ ಬಸಪ್ಪನವರು ಈ ನಾಡು ಕಂಡ ಅಪರೂಪದ ಧೀಮಂತ ರಾಜಕಾರಣಿ. ಸರಳ, ಸಜ್ಜನರಾಗಿದ್ದ ಬಸಪ್ಪನವರು ಸಂಗಣ್ಣನವರ ಆತ್ಮೀಯ ಸನ್ಮಿತ್ರರು. ಬಸಪ್ಪನರೊಂದಿಗೆ ಹೆಚ್ಚು ಸ್ನೇಹ, ವಿಶ್ವಾಸಗಳಿಂದ ಇಬ್ಬರು ಹತ್ತಿರದವರಾಗಿದ್ದರು. ಈ ಕಾರಣದಿಂದಾಗಿಯೇ ಕೊಂಡಜ್ಜಿ ಬಸಪ್ಪನವರ ಜೀವನವನ್ನು ಹಾಗೂ ಸಮಕಾಲಿನ ರಾಜಕೀಯ ಮೌಲ್ಯ-ಅಪಮೌಲ್ಯಗಳ ಹಿನ್ನೆಲೆಯಲ್ಲಿ ದಾಖಲಿಸಿದ್ದಾರೆ.