ಏಕೀಕರಣ ಚಳವಳಿ ಹಾಗೂ ಸ್ವಾತಂತ್ಯ್ರ ಹೋರಾಟದ ಚಳವಳಿಯಲ್ಲಿ ಬಳ್ಳಾರಿ ಜಿಲ್ಲೆ ತನ್ನದೇ ಆದ ಸ್ಥಾನವನ್ನು ಪಡೆದಿತ್ತು. ಏಕೀಕರಣ ಚಳವಳಿಯಲ್ಲಿ ಹುತಾತ್ಮರಾದ ರಾಜ್ಯದ ಏಕೈಕ ವ್ಯಕ್ತಿ ಬಳ್ಳಾರಿಯ ರಂಜಾನ್‌ಸಾಬ್. ಸ್ವಾತಂತ್ಯ್ರ ಚಳವಳಿಯಲ್ಲಿ ಕೊಟ್ಟೂರು, ಹರಪನಹಳ್ಳಿ ಚಳವಳಿಯ ಕೇಂದ್ರಗಳಾಗಿದ್ದವು. ಏಕೀಕರಣ ಚಳವಳಿಯಲ್ಲಿ ವ್ಯಾಕರಣತೀರ್ಥ ಚಂದ್ರಶೇಖರ ಶಾಸ್ತ್ರೀಯವರು ರಾಜ್ಯಮಟ್ಟದ ನೇತಾರರಾಗಿದ್ದರು. ಸ್ವಾತಂತ್ಯ್ರ ಹೋರಾಟದಲ್ಲಿ ಟೀಕೊರ ಸುಬ್ರಹ್ಮಣಂ, ಬೂದಿಹಾಳ ಅನಂತಚಾರ್, ಬೆಲ್ಲದ ಚಿನ್ನಪ್ಪ, ಡಾ. ನಾಗನಗೌಡ್ರು ಮುಂಚೂಣಿಯಲ್ಲಿದ್ದರು. ಇವರೆಲ್ಲರ ಸಂಪರ್ಕದಲ್ಲಿ ಚಳವಳಿಯ ರೂಪರೇಷ ಸಿದ್ಧಪಡಿಸಿ ಹೋರಾಟ ನಡೆಸಿದವರು ಮುದೇನೂರ ಸಂಗಣ್ಣ.

ಹರಪನಹಳ್ಳಿಯ ಪ್ರೌಢಶಾಲೆಯಲ್ಲಿ `ಕರ್ನಾಟಕ ಏಕೀಕರಣ` ಎಂಬ ವಿಷಯದ ಬಗ್ಗೆ ಭಾಷಣ ಸ್ಪರ್ಧೆಯಲ್ಲಿ ಮಾತನಾಡಿ ಮೊದಲ ಬಹುಮಾನ ಪಡೆದ ಸಂಗಣ್ಣ, ಮುಂದೆ ಹರಪನಹಳ್ಳಿ ಭಾಗದಲ್ಲಿ ಏಕೀಕರಣ ಚಳವಳಿಯ ನಾಯಕತ್ವ ವಹಿಸಿಕೊಂಡು ಹೋರಾಡಿದ್ದವರು. ತೆಲುಗರನ್ನು ಹಿಮ್ಮೆಟ್ಟಿಸಬೇಕು ಎನ್ನುವ ಹರಪನಹಳ್ಳಿ ಹೋರಾಟದಲ್ಲಿ ಇವರದ್ದು ಪ್ರಮುಖ ಪಾತ್ರವಾಗಿತ್ತು. ಈ ಹೋರಾಟದ ಪರಿಣಾಮವಾಗಿಯೇ ಇವರನ್ನು ಬಂಧಿಸಿ ಒಂದು ತಿಂಗಳ ಕಾಲ ಸೆರೆಮನೆಯಲ್ಲಿ ಇರಿಸಲಾಗಿತ್ತು. ಕನ್ನಡದ ನಾಡು, ನುಡಿ, ಏಕೀಕರಣ ಚಳವಳಿಯಲ್ಲಿ ಸಕ್ರಿಯವಾಗಿ ಹೋರಾಡಿದ್ದರು. ಆದರೆ ಅವರು ಎಲ್ಲೂ ಕೂಡ ಹೇಳಿಕೊಳ್ಳದ ವ್ಯಕ್ತಿತ್ವದವರು.

ಬಳ್ಳಾರಿಯನ್ನು ಆಂಧ್ರಕ್ಕೆ ಸೇರಿಸಬೇಕೆಂದು ತೆಲುಗರ ಬೇಡಿಕೆ ವಿರುದ್ಧ ನಡೆದ ಹೋರಾಟಗಳಲ್ಲಿ ಮುದೇನೂರು ಸಂಗಣ್ಣನವರ ಪಾತ್ರ ಮಹತ್ವದ್ದಾಗಿದೆ. ಬಳ್ಳಾರಿಯನ್ನು ಕಬಳಿಸಲು ಹಾಕಿದ್ದ ಹೊಂಚನ್ನು ವಿಫಲಗೊಳಿಸುವಲ್ಲಿ ಇವರು ಭಾಗವಹಿಸಿದ್ದ ಹೋರಾಟಗಳು ಯಶಸ್ವಿಯಾಗಿದ್ದವು. ಇವರ ನಾಡು, ನುಡಿಯ ಸೇವೆಯನ್ನು ಗುರುತಿಸಿ ಸರ್ಕಾರ ರಾಜ್ಯೋತ್ಸವ, `ಏಕೀಕರಣ ಪ್ರಶಸ್ತಿ`ಯನ್ನು ನೀಡಿ ಗೌರವಿಸಿದೆ.

ಮಗ ರಾಜಕೀಯ ಮುಖಂಡನಾಗಬೇಕೆಂದು ಇವರ ತಂದೆ ಕೊಟ್ರುಗೌಡರ ಆಸೆಯಾಗಿತ್ತು. ಹೀಗಾಗಿಯೇ ಸಂಗಣ್ಣರನ್ನು ರಾಜಕೀಯಕ್ಕೆ ಪ್ರವೇಶ ಮಾಡಿಸಿದರು. ೧೯೫೭ರಲ್ಲಿ ಚಿಗಟೇರಿ ಗ್ರಾಮ ಪಂಚಾಯ್ತಿ ಚೇರಮನ್‌ರಾಗಿ ಆಯ್ಕೆಯಾಗಿದ್ದವರು. ಇವರ ಅವಧಿಯಲ್ಲಿ ಗ್ರಾಮಕ್ಕೆ ಹಲವಾರು ಜನಪರ ಕೆಲಸಗಳನ್ನು ಮಾಡಿದವರು. ತಾಲೂಕ ಬೋರ್ಡ್‌ ಸದಸ್ಯರಾಗಿಯೂ ಕೆಲಸ ಮಾಡಿದವರು. ಚಿಗಟೇರಿಯ ನಾರದ ಮುನಿಯ ಹೈಸ್ಕೂಲಿನ ಆಡಳಿತ ಮಂಡಳಿಯ ಅಧ್ಯಕ್ಷರಾಗಿದ್ದವರು.

ಚುನಾವಣಾ ರಾಜಕೀಯದ ಬಗ್ಗೆ ಅವರಿಗೆ ಆಸಕ್ತಿ ಇರಲಿಲ್ಲ. ಆದರೆ ತಂದೆ ಹಾಗೂ ಜನರ ಒತ್ತಡಕ್ಕೆ ಮಣಿದು ೧೯೬೨ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ ಪಕ್ಷದ (ಪಿ.ಸಿ.ಸಿ.) ಅಭ್ಯರ್ಥಿಯಾಗಿ ಹರಪನಹಳ್ಳಿಯ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದವರು. ಹರಪನಹಳ್ಳಿಯ ಪ್ರಭಾವಿಯಾಗಿದ್ದ ಕಾಂಗ್ರೆಸ್ಸಿನ ಇಜಾರಿ ಶಿರಸಪ್ಪನವರು ಸಹ ಸ್ಪರ್ಧಿಸಿದ್ದರು. ಇವರ ಇಬ್ಬರ ನಡುವೆ ಸ್ಪರ್ಧೆ ಏರ್ಪಟ್ಟಿತ್ತು. ಆದರೆ ಚುನಾವಣಾ ರಾಜಕೀಯ ಅರಿಯದ ಸಂಗಣ್ಣನವರು, ಜಾತಿ ರಾಜಕಾರಣ, ಅದರಲ್ಲೂ ವೀರಶೈವರ ಒಳಜಾತಿ ಕಾರಣದಿಂದ ಸೋತರು. ಸೋಲು ಹಾಗೂ ಚುನಾವಣಾ ರಾಜಕಾರಣದ ಕರಾಳ ಮುಖಗಳನ್ನು ಆ ಕಾಲಕ್ಕೆ ಕಂಡು ಆಶ್ಚರ್ಯಗೊಂಡರು. ಆವತ್ತಿನಿಂದಲೇ ರಾಜಕೀಯದಿಂದ ದೂರ ಉಳಿದರು.

ಸಂಗಣ್ಣನವರು ಚುನಾವಣೆಯಲ್ಲಿ ಸ್ಪರ್ಧಿಸಿ ಸೋತ ಅನುಭವವನ್ನು ಹೀಗೆ ಹಂಚಿಕೊಂಡಿದ್ದವರು. “೧೯೬೨ರಲ್ಲಿ ವಿಧಾನಸಭೆ ಚುನಾವಣೆಗೆ ನಾನು ಸ್ಪರ್ಧಿಸಿದಾಗ, ನಾನು, ನನ್ನ ಸಹೋದರ ಸೇರಿ ಮಾಡಿದ ವೆಚ್ಚ ಒಟ್ಟು ಏಳುಸಾವಿರ ರೂಪಾಯಿ. ಫಲಿತಾಂಶ ಬಂದಾಗ ನಾನು ಏಳುಸಾವಿರ ಮತಗಳ ಅಂತರದಿಂದ ಸೋತಿದ್ದೆ. ಅಂದು ಇಂದಿನ ಚುನಾವಣೆಗಳಿಗೆ ಬಹಳ ವ್ಯತ್ಯಾಸವಿದೆ. ಈಗಿನಷ್ಟು ಭ್ರಷ್ಟಾಚಾರ ಇರಲಿಲ್ಲ. ಈ ಹೆಂಡ, ಸೀರೆ ಕೊಡೋ ಪದ್ಧತಿ ತಿಳಿದಿರಲಿಲ್ಲ. ಜಾತಿ-ಮತ ಲೆಕ್ಕಾಚಾರ ಸ್ವಲ್ಪ ಇದ್ರೂ ಮೇಲ್ವರ್ಗಕ್ಕೆ ಸೀಮಿತವಾಗಿತ್ತು. ಜಾತಿ ಆಧಾರಿಸಿ ಟಿಕೆಟ್ ಕೊಡುವ ಈಗಿನ ಪದ್ಧತಿ ಆಗ ಇರಲಿಲ್ಲ. ಒಂದೇ ಒಂದು ಸಾವಿರ ರೂಪಾಯಿ ಹಂಚಿದ್ದರೆ ಚುನಾವಣೆಯಲ್ಲಿ ಗೆದ್ದು ಬಿಡುತ್ತಿದ್ದೇನೋ, ಆದರೆ ಮತ ಖರೀದಿಗೆ ಮನಸ್ಸು ಒಪ್ಪಲಿಲ್ಲ. ಆ ಜಾಯಮಾನವು ನನ್ನದಾಗಿರಲಿಲ್ಲ”.

ಹಣದ ಥೈಲಿ ಹಿಡಿದ ರಾಜಕಾರಣಿಗಳು ಈಗ ಲಕ್ಷ ಲಕ್ಷ ಸುರೀತಾ ಇದ್ದಾರೆ. ಒಂದು ವೇಳೆ ಮಹಾತ್ಮಾ ಗಾಂಧೀಜಿ ಈ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ರೆ, ಜನ ಅವರಿಂದಲೂ ಹೆಂಡ, ಹಣ ಬಯಸ್ತಿದ್ರು. ವ್ಯವಸ್ಥೆ ಅಷ್ಟು ಕೆಟ್ಟಿದೆ. ಆಗ ತ್ಯಾಗಕ್ಕೆ ಕಿಮ್ಮತ್ತಿತ್ತು. ಪ್ರಾಮಾಣಿಕತೆಗೆ ಬೆಲೆ ಇರ್ತಿತ್ತು. ಈಗ ರೊಕ್ಕಕ್ಕೆ ಬೆಲೆ ಇದೆ ಎಂದು ರಾಜಕಾರಣದ ಬಗ್ಗೆ ವಿಷಾದವ್ಯಕ್ತಪಡಿಸಿದ್ದರು.