ಹಿಂದಿನ ಬಳ್ಳಾರಿ ಜಿಲ್ಲೆಯ ಹಾಗೂ ಈಗಿನ ದಾವಣಗೆರೆ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಕ್ಕ ಗ್ರಾಮ `ಚಿಗಟೇರಿ`. ಹರಪನಹಳ್ಳಿ-ಕೊಟ್ಟೂರು ರಸ್ತೆಯ ಮಧ್ಯೆದಲ್ಲಿ ಗುಡ್ಡದ ಸಾಲು ಇದನ್ನು ನೋಡುತ್ತಾ ಒಂದಿಷ್ಟು ಹೋದರೆ ಸಿಗುವುದೇ ಚಿಗಟೇರಿ. ಇಲ್ಲಿಯ ನೂರಾರು ಎಕರೆ ಆಸ್ತಿ ಹಾಗೂ ಸಜ್ಜನಿಕೆ ಎರಡರಲ್ಲಿಯೂ ಶ್ರೀಮತಂವಾದ ಮನೆತನದಲ್ಲಿ ದಿನಾಂಕ ೧೭.೦೩.೧೯೨೭ರಲ್ಲಿ ಸಂಗಣ್ಣ ಜನಿಸಿದರು. ತಂದೆ ಮುದೇನೂರು ಕೊಟ್ರಬಸಷ್ಪ, ತಾಯಿ ಸಿದ್ದಮ್ಮ. ಇವರ ತಂದೆ ಕಟ್ಟಾ ರಾಷ್ಟ್ರೀಯವಾದಿಯಾಗಿದ್ದರು. ೧೯೨೪ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಪಾಲ್ಗೊಂಡಂಥವರು. ೭೦೦ ಎಕರೆ ಭೂಮಿಯ ಒಡೆಯರಾಗಿದ್ದರೂ ಶ್ರೀಮಂತಿಕೆಯ ಗತ್ತುಗಮ್ಮತ್ತು ಇರದ ಸರಳ ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು.

ಚಿಗಟೇರಿಯಲ್ಲಿಯೇ ಇವರ ಪ್ರಾಥಮಿಕ ಶಿಕ್ಷಣ ನಡೆಯಿತು. ಶ್ರೀಮಂತರ ಮನೆಯ ಹುಡಗನಾಗಿದ್ದರಿಂದ ಊರಿನ ಹುಡಗರು ಪ್ರೀತಿಯಿಂದ ಜೊತೆಗೆ ಆಟವಾಡುತ್ತಿದ್ದರು. ಮುಂದೆ ಹರಪನಹಳ್ಳಿಗೆ ಹೋದರು. ಅಲ್ಲಿ ಹುಡಗರ ಜೊತೆ ಯಾವುದೇ ಆಟಕ್ಕೂ ಹೋಗುತ್ತಿರಲಿಲ್ಲ. ಒಂದು ರೀತಿ ಏಕಾಂಗಿಯಂತೆ ಇದ್ದವರು. ೧೯೫೪ನೇ ಇಸ್ವಿ ಶಾಲಾ ವಾರ್ಷಿಕೋತ್ಸವದ ಸಂದರ್ಭ, ಭಾಷಣ ಸ್ಪರ್ಧೆಯಲಿ ಭಾಗವಹಿಸುವ ಸಲುವಾಗಿ ಹೆಡ್ ಮಾಸ್ಟರ್ ಹತ್ತಿರ ಹೆಸರು ಬರೆಸಲು ಹೋದಾಗ, ಸಂಗಣ್ಣನನ್ನು ಗಮನಿಸಿದ ಹೆಡ್ ಮಾಸ್ಟರ್, `ನೀನೇನ್ ಭಾಷ್ಣ ಮಾಡ್ತಿಯಾ? ನಾಳೆ ಬಂದು ಕರ್ನಾಟಕ ಏಕೀಕರಣದ ಬಗ್ಗೆ ಒಂದೈದ್ ನಿಮಿಷ ಮಾತಾಡು ಅಂದ್ರು`

ಹಾಗೇನೆ ಮರುದಿನ ಕರ್ನಾಟಕ ಏಕೀಕರಣದ ಬಗ್ಗೆ ಮಾತನಾಡಿದಾಗ, ಭಾಷಣ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಬಂತು. ಇದರಿಂದ ಸ್ಪೂರ್ತಿ ಪಡೆದ ಸಂಗಣ್ಣ ಕವಿತೆಗಳನ್ನು ಬರೆಯಲು ಆರಂಭಿಸಿದ. ಮಾಸ್ತಿ ಮೇಲೆ ಕವಿತೆ ಬರೆದರು. ಮೇಷ್ಟ್ರು ಅದನ್ನು ತಿದ್ದಿ, ಪ್ರಕಟಿಸಿದರು. ಅದನ್ನು ಓದಿಸಿ, ಸಂಗೀತ ಅಳವಡಿಸಿ ಹಾಡ್ಸಿದ್ದು. ಇದರಿಂದಾಗಿ ಸ್ಪೂರ್ತಿ ಪಡೆದು ಕವಿತೆಗಳನ್ನು ಬರೆಯುವುದನ್ನು ಮುಂದುವರಿಸಿದರು. ಕೀಳರಮೆಯಿಂದ ಹೊರ ಬಂದು ಕವಿತೆ, ಸಾಹಿತ್ಯದ ಕಡೆ ಗಮನ ಹರಿಸಿದರು.

ಹೈಸ್ಕೂಲಿನ ವಾರ್ಷಿಕೋತ್ಸವಗಳಿಗೆ ಬೇಂದ್ರೆ, ಬಿ.ಎಂ. ಶ್ರೀಕಂಠಯ್ಯ, ವಿ. ಸೀತಾರಾಮಯ್ಯ, ಅ.ನ. ಕೃಷ್ಣರಾಯರು, ಮಾಸ್ತಿ ಹೀಗೆ ಹೆಸರಾಂತ ಸಾಹಿತಿಗಳು ಬಂದು ಹೋಗುತ್ತಿದ್ದರು. ಇವರ ಭಾಷಣ ಹಾಗೂ ಅವರ ವ್ಯಕ್ತಿತ್ವಕ್ಕೆ ಆಕರ್ಷಿತರಾಗಿ ಸಾಹಿತ್ಯದ ಗುಂಗು ಹಿಡಿಯಿತು. ಶಾಲೆಗೆ ಬಂದು ಮಾರಾಟ ಮಾಡುತ್ತಿದ್ದ ಸಾಹಿತಿಗಳ ಪುಸ್ತಕಗಳಿಂದಲೂ ಆಕರ್ಷಿತರಾಗಿ ಕವಿತೆಗಳನ್ನು ಬರೆಯಲು ಪ್ರಾರಂಭಿಸಿದರು. ಹೈಸ್ಕೂಲಿನ ಸಕೆಂಡ್ ಇಯರ್ ಇದ್ದಾಗ ಇವರ ಕವಿತೆ `ಜಯಂತಿ` ಪತ್ರಿಕೆಯಲ್ಲಿ ಪ್ರಕಟವಾಯಿತು. ಆ ಕಾಲಕ್ಕೆ ಇದು ಪ್ರತಿಷ್ಠಿತ ಪತ್ರಿಕೆಯಾಗಿತ್ತು.

ಹೈಸ್ಕೂಲ್ ಮುಗಿಸಿ ಕಾಲೇಜ್ ವಿದ್ಯಾಭ್ಯಾಸಕ್ಕೆ ಇವರ ಗುರುಗಳಾಗಿದ್ದ ಆನಂದರಾಯರ ಶಿಫಾರಸ್ಸಿನ ಮೇರೆಗೆ ಮದನಪಲ್ಲಿಯ ಥಿಯಾಸಾಫಿಕಲ್ ಕಾಲೇಜಿಗೆ ಸೇರಿದರು. ಇಲ್ಲಿ ಉದಾತ್ತ ಜೀವನ ನಡೆಸುತ್ತಿದ್ದಂಥ ಅಧ್ಯಾಪಕರ ವರ್ಗ ಇತ್ತು. ಎಲ್ಲ ಕಡೆಯಲ್ಲಿಯು `ಆದರ್ಶ`ದ ಗಾಳಿ ಬೀಸುತ್ತಿತ್ತು. ಅರವಿಂದರ ಪ್ರಭಾವಕ್ಕೊಳಗಾಗಿ ಅಜನ್ಮ ಬ್ರಹ್ಮಚಾರಿಯಾಗಿರಲು ಬಯಸಿದ್ದರು. ಆದರೆ ತಂದೆ-ತಾಯಿಯರ ಒಪ್ಪಿಗೆ ದೊರೆಯದೆ ಹೋಯಿತು. ಇದರಿಂದಾಗಿ ಮದನಪಲ್ಲಿಯಿಂದ ಚಿಗಟೇರಿಗೆ ಬರಬೇಕಾಯಿತು. ಶಾರದಮ್ಮನವರೊಂದಿಗೆ ಇವರ ವಿವಾಹ ನಡೆಯಿತು. ಶಾರದಮ್ಮ ಮತ್ತು ಸಂಗಣ್ಣನವರದ್ದು ಅನೂನ್ಯವಾದ ಜೋಡಿ. ಒಂದು ಗಂಡು, ಮೂರು ಹೆಣ್ಣು ಮಕ್ಕಳ ಸುಖಿ ಸಂಸಾರ.

೭೦೦ ಎಕರೆ ಭೂಮಿಯ ಒಡೆಯರಾಗಿದ್ದ ಇವರ ತಂದೆ, ಮೂಲತಃ ಕೃಷಿಕರಾಗಿದ್ದರು. ಹೀಗಾಗಿ ಮದನಪಲ್ಲಿಯಿಂದ ಸೀದಾ ಚಿಗಟೇರಿಗೆ ಬಂದು ಮನೆತನದ ಬೇಸಾಯದ ಕಾರ್ಯವನ್ನು ನೋಡಿಕೊಳ್ಳಹತ್ತಿದರು. ಚಿಗಟೇರಿಯ ಸುತ್ತಮುತ್ತ ರೈತರು ತಂಬಾಕು ಬೆಳೆಯನ್ನು ಹೆಚ್ಚು ಹೆಚ್ಚು ಬೆಳೆಯುತ್ತಿದ್ದರು. ಇದರ ಖರೀದಿಗಾಗಿ ಒಂದು ದಲ್ಲಾಳಿ ಅಂಗಡಿ ಬೇಕಾಗಿತ್ತು. ಇದನ್ನು ಪೂರೈಸುವಂತೆ ಊರಿನ ಜನ ಇವರ ತಂದೆಯ ಮೇಲೆ ಒತ್ತಡ ಹೇರುತ್ತಿದ್ದರು. ಗಾಂಧಿವಾದಿಯಾಗಿದ್ದ ಇವರ ತಂದೆ ಈ ವೃತ್ತಿಯನ್ನು ಕೈಗೊಳ್ಳಲು ಇಷ್ಟಪಡುತ್ತಿರಲಿಲ್ಲ. ಆದರೆ ಜನರ ಒತ್ತಡಕ್ಕೆ ಮಣಿದು ರೈತರ ಅನುಕೂಲಕ್ಕಾಗಿ ದಲ್ಲಾಳಿ ಅಂಗಡಿಯನ್ನು ಪ್ರಾರಂಭಿಸಿದರು. ಇದನ್ನು ಸಂಗಣ್ಣನವರು ನೋಡಿಕೊಳ್ಳಬೇಕಾಯಿತು.

ಚಿಗಟೇರಿಯಲ್ಲಿ ೧೯೫೨ರಲ್ಲಿ ತಂಬಾಕಿನ ದಲ್ಲಾಳಿ ವ್ಯಾಪಾರದ ಅಂಗಡಿಯನ್ನು ಸಂಗಣ್ಣನವರು ಆರಂಭಿಸಿದರು. ಇವರ ಇನ್ನೊಬ್ಬ ಪಾಲುದಾರ ಈಶ್ವರಪ್ಪನವರು. ತಂಬಾಕಿನ ಗುಣಮಟ್ಟದ ಮೇಲೆ ವರ್ಗೀಕರಣ, ದರ ನಿಗದಿಪಡಿಸುವಲ್ಲಿ ಪರಿಣಿತರಾಗಿದ್ದರು. ಆದರೆ ಸಂಗಣ್ಣನವರು ದಲ್ಲಾಳಿ ಅಂಗಡಿಯ ಬಗ್ಗೆ ಅಷ್ಟೊಂದು ಆಸಕ್ತಿ ತೋರುತ್ತಿರಲಿಲ್ಲ. ಇವರು ಜಾನಪದ, ಸಾಹಿತ್ಯ, ಸಂಗೀತ, ನಾಟಕಗಳ ಬಗ್ಗೆ ಹೆಚ್ಚು ಆಕರ್ಷಿತರಾಗಿದ್ದರು. ಇದರಿಂದಾಗಿ ಅಂಗಡಿಯ ಪಾಲುದಾರ ಈಶ್ವರಪ್ಪನವರೇ ಅಂಗಡಿಯ ವ್ಯವಹಾರಗಳನ್ನು ಹೆಚ್ಚು ನೋಡಿಕೊಳ್ಳುತ್ತಿದ್ದರು.

ಇವರ ಅಂಗಡಿಯಲ್ಲಿ ಗ್ರಾಮದ ಹಿರಿಯರಾಗಿದ್ದ ಭರ್ಮಪ್ಪ ಬಂದು ಕುಳಿತುಕೊಳ್ಳುತ್ತಿದ್ದರು. ಗ್ರಾಮದ ಜನರು ಅವರಲ್ಲಿಗೆ ಬಂದು ತಮ್ಮ ಮನೆ, ಹೊಲದಲ್ಲಿ ಕಳವು ಆದ ವಸ್ತುಗಳ ಬಗ್ಗೆ, ಆಕಳು, ಎಮ್ಮೆ ಕಳೆದು ಹೋದ ಬಗ್ಗೆ, ಮದುವೆ, ಮುಂಜೆ, ನಾಮಕರಣಗಳನ್ನು ಮಾಡಲು ಶುಭಮುಹೂರ್ತದ ಬಗ್ಗೆ ಪ್ರಶ್ನೆ ಕೇಳುತ್ತಿದ್ದರು. (ಪ್ರಶ್ನೆ ಕೇಳುವುದೆಂದರೆ ಜ್ಯೋತಿಷ್ಯ ಕೇಳುವುದು) ಇವುಗಳ ಬಗ್ಗೆ ಸಂಗಣ್ಣರಿಗೆ ನಂಬಿಕೆ ಇರಲಿಲ್ಲ. ಆದರೆ ಎಂದೂ ಭರ್ಮಪ್ಪನವರ ಪ್ರಶ್ನೆ ಹೇಳುವ ಕಾರ್ಯಕ್ಕೆ ಅಡ್ಡಿ ಬರದೆ ಅವರನ್ನು ಗೌರವಿಸುತ್ತಿದ್ದರು. ಅಂದರೆ ಅವರ ವಿಚಾರವನ್ನು ಯಾರ ಮೇಲೆಯು ಬಲವಂತವಾಗಿ ಹೇರುತ್ತಿರಲಿಲ್ಲ. ದೀಪಾವಳಿ ಸಂದರ್ಭದಲ್ಲಿ ವ್ಯಾಪಾರಸ್ಥರು ತಮ್ಮ ಅಂಗಡಿಗಳಲ್ಲಿ ಲಕ್ಷ್ಮೀ ಪೂಜೆ ಮಾಡುತ್ತಿದ್ದರೆ, ಅಂಥ ನಂಬಿಕೆಯೇ ಇಲ್ಲದ ಸಂಗಣ್ಣನವರು ತಮ್ಮ ದಲ್ಲಾಳಿ ಅಂಗಡಿಯಲ್ಲಿ ಪೂಜೆಯ ಬದಲು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಿದ್ದರು.

ಇವರದ್ದು ತಂಬಾಕಿನ ವ್ಯಾಪಾರವಾಗಿದ್ದರಿಂದ ಇದನ್ನು ಖರೀದಿಸಲು ದೂರದ ಮಹಾರಾಷ್ಟ್ರ, ಆಂಧ್ರದಿಂದ ವ್ಯಾಪಾರಿಗಳು ಚಿಗಟೇರಿಗೆ ಬರುತ್ತಿದ್ದರು. ವ್ಯಾಪಾರ, ವ್ಯವಹಾರಗಳಿಂದ ಇವರು ದೂರದ ಕರ್ನಾಟಕದ ಗಡಿ ಭಾಗವಾದ ನಿಪ್ಪಾಣಿಗೆ ಹೋಗಿ ಬರುತ್ತಿದ್ದರು. ಸುಗ್ಗಿಯ ಸಂದರ್ಭದಲ್ಲಿ ಮಹಾರಾಷ್ಟ್ರದಿಂದ ಬಂದ ವ್ಯಾಪಾರಿಗಳು ತಿಂಗಳಗಟ್ಟಲೆ ಇವರಲ್ಲಿ ಉಳಿದುಕೊಂಡಿರುತ್ತಿದ್ದರು. ಆಗ ಉಳಿಯಲು ಹೊಟೇಲ್, ಲಾಡ್ಜಗಳ ವ್ಯವಸ್ಥೆ ಇಲ್ಲದ್ದರಿಂದ ಇವರ ಮನೆ, ಅಂಗಡಿಗಳಲ್ಲಿ ಉಳಿಯುತ್ತಿದ್ದರು. ಇವರ ಒಡನಾಟದಿಂದ ಮರಾಠಿಯನ್ನು ಕಲಿತರು. ಮರಾಠಿ ಕಲಿಕೆಯಿಂದ ಇವರ ತಂಬಾಕಿನ ವ್ಯಾಪಾರ ನಿಪ್ಪಾಣಿಯಲ್ಲಿನ ವ್ಯವಹಾರಕ್ಕೆ ಅನುಕೂಲವಾಯಿತು.

ಚಿಗಟೇರಿಯಲ್ಲಿ ಇದ್ದಾಗ ಇವರ ನಾಟಕ, ಸಾಹಿತ್ಯದ ಆಸಕ್ತಿಯನ್ನು ಕಂಡಿದ್ದ ಮರಾಠಿ ವ್ಯಾಪಾರಸ್ಥರು, ನಿಪ್ಪಾಣಿಗೆ ಹೋದಾಗ ಇವರನ್ನು ಮರಾಠಿಯ ಒಳ್ಳೊಳ್ಳೆ ನಾಟಕಗಳಿಗೆ ಕರೆದುಕೊಂಡು ಹೋಗುತ್ತಿದ್ದರು. ಅಲ್ಲದೆ ಕೊಲ್ಲಾಪುರ, ಸಾಂಗ್ಲಿ, ಮೀರಜ್‌ನಲ್ಲಿ ಕಂಪನಿಗಳ ನಾಟಕ ನಡೆಯುತ್ತಿದ್ದಾಗ ನಿಪ್ಪಾಣಿಯ ವ್ಯಾಪಾರಸ್ಥರು ಚಿಗಟೇರಿಯ ಸಂಗಣ್ಣನವರಿಗೆ ಟೆಲಿಗ್ರಾಂ ಕೊಟ್ಟು ನಾಟಕ ನೋಡಲು ಕರೆಯಿಸಿಕೊಳ್ಳುತ್ತಿದ್ದರು.

ಇವರಂಥೆ ಸಂಗೀತ, ಸಾಹಿತ್ಯದಲ್ಲಿ ಆಸಕ್ತಿ ಇದ್ದ ಮರಾಠಿ ವ್ಯಾಪಾರಸ್ಥರು ಸಂಗಣ್ಣನವರು ನಿಪ್ಪಾಣಿಗೆ ಹೋದಾಗ, ಕೆಲವು ಮರಾಠಿ ಸಾಹಿತಿಗಳನ್ನು ಕೊಲ್ಲಾಪುರದಿಂದ ಕರೆಯಿಸಿ ಪರಿಚಯ ಮಾಡಿಸುತ್ತಿದ್ದರು. ಹಾಗೇನೆ ಸಂಗೀತದ ಗೋಷ್ಠಿಯನ್ನು ಸಹ ಏರ್ಪಾಡು ಮಾಡುತ್ತಿದ್ದರು. ವ್ಯಾಪಾರ, ವ್ಯವಹಾರದಲ್ಲಿ ಕನ್ನಡ-ಮರಾಠಿ ಬಾಂಧವ್ಯ ಗಟ್ಟಿಗೊಳ್ಳುತ್ತಿತ್ತು. ಈ ಹೊತ್ತಿನ ಬೆಳಗಾವಿಯ ಎಂ.ಇ.ಎಸ್.ನವರಿಗೆ ಇದು ಆದರ್ಶವಾಗಬೇಕು.

ಸಂಗಣ್ಣನವರು ತಮ್ಮ ದಲ್ಲಾಳಿಯ ಅಂಗಡಿಯ ವ್ಯವಹಾರದ ಲಾಭ-ನಷ್ಟದ ಬದಲು ಸಾಹಿತ್ಯ, ಸಂಗೀತ, ಜಾನಪದ, ನಾಟಕಗಳ ಬಗ್ಗೆನೇ ಹೆಚ್ಚು ಹೆಚ್ಚು ಚಿಂತಿಸುತ್ತಿದ್ದರು. ಮರಾಠಿ ಗೆಳೆಯರ ಮೂಲಕ ಮರಾಠಿ ಸಾಹಿತ್ಯದ ಪರಿಚಯ, ಅಧ್ಯಯನ, ಅನುವಾದ ಸಾಧ್ಯವಾಯಿತು.