ಜಾನಪದ ಕ್ಷೇತ್ರದ ಪ್ರತಿಷ್ಠಿತ ಹೆಸರು ಮುದೇನೂರು ಸಂಗಣ್ಣ. ಜಾನಪದ ಮತ್ತು ಸಾಹಿತ್ಯವನ್ನು ಒಂದುಗೂಡಿಸಿದ `ಜಾನಪದ ರಂಗಭೂಮಿಯನ್ನು ಸೃಜನವಾಗಿ ಸೃಷ್ಟಿಸಿ ಸಮಕಾಲಿನ ಜಾನಪದ ರಂಗಭೂಮಿಯ ತಜ್ಞರಿಗಿಂತ ಭಿನ್ನವಾದ ಆಲೋಚನೆ, ಪ್ರಯೋಗಗಳನ್ನು ನಡೆಸಿ, ಜಾನಪದ ರಂಗಭೂಮಿಯನ್ನು ಪುನರುಜ್ಜೀವನಗೊಳಿಸಿದ ಧೀಮಂತ. ನಾಡಿನ ಸಮೃದ್ಧ ಜಾನಪದ ಪರಂಪರೆಯನ್ನು ವಿಸ್ತರಿಸಿದ ಸಾಂಸ್ಕೃತಿಕ ಹರಿಕಾರ. ಮಣ್ಣಿನ ಮಕ್ಕಳ ಪರಂಪರಾಗತ ಕಲೆಗಳ ಕುರಿತು ಅಧಿಕೃತವಾಗಿ ಮಾತನಾಡಬಲ್ಲವರಾಗಿದ್ದವರು.

ತಾವಿದ್ದ `ಚಿಗಟೇರಿ` ಊರನ್ನೇ ಕೇಂದ್ರವಾಗಿರಿಸಿಕೊಂಡು, ಕನ್ನಡ ನಾಡು, ನುಡಿ, ಸಂಸ್ಕೃತಿ, ಜಾನಪದ ಪರಂಪರೆ, ರಂಗಭೂಮಿ ಸಾಹಿತ್ಯ, ರಾಜಕಾರಣ ಹೀಗೆ ಹತ್ತು ಹಲವು ಕ್ಷೇತ್ರಗಳಲ್ಲಿ ಹೇಗೆ ಕೆಲಸ ಮಾಡಬಹುದೆಂಬುದನ್ನು ತೋರಿಸಿಕೊಟ್ಟವರು. ತಮ್ಮ ಹಳ್ಳಿ ಹಾಗೂ ಮನೆಯನ್ನೇ ಕೇಂದ್ರವಾಗಿರಿಸಿಕೊಂಡು ಜಾನಪದವನ್ನೇ ಉಸಿರಾಗಿಸಿಕೊಂಡು ಕೊನೆಯತನಕ ಹಳ್ಳಿಯಲ್ಲೇ ಉಳಿದವರು.

ಸಂಗಣ್ಣ ಜಾನಪದ ಸಂಗ್ರಹಕಾರರಾಗಿ, ನಾಟಕಕಾರರಾಗಿ, ಕವಿಯಾಗಿ, ಸಾಹಿತಿಯಾಗಿ, ಮರಾಠಿ-ಬಂಗಾಳಿ ಕೃತಿಗಳ ಅನುವಾದಕರಾಗಿ, ಭಾಷಾಕೋಶ ರಚನೆಕಾರರಾಗಿ ಕೆಲಸ ಮಾಡಿದವರು. ಹೆಸರು, ಅಧಿಕಾರ, ಹಣಕ್ಕಾಗಿ ಯಾವತ್ತು ಜಾನಪದವನ್ನು ಬಳಸಿಕೊಂಡವರಲ್ಲ. ಚಿಗಟೇರಿಯ ಪ್ರತಿಷ್ಠಿತ ಭೂಮಾಲಿಕರ ಕುಟುಂಬದಲ್ಲಿ ಜನಸಿ, ಬೆಳೆದ ಸಂಗಣ್ಣ ವೃತ್ತಿಯಿಂದ ತಂಬಾಕು ವ್ಯಾಪಾರಸ್ಥರಾಗಿದ್ದರೂ ಸಮಾಜಮುಖಿಯಾಗಿ ಜಾನಪದ ಕ್ಷೇತ್ರಕ್ಕೆ ತಮ್ಮನ್ನು ಸಮರ್ಪಿಸಿಕೊಂಡಿದ್ದು ಹಾಗೂ ಎಷ್ಟೊಂದು ಜ್ಞಾನ, ಕುತೂಹಲಗಳಿಗೆ ಈಡಾಗಿದ್ದರು ಎನ್ನುವುದೇ ಕುತೂಹಲ ಹಾಗೂ ಆಶ್ಚರ್ಯದ ಸಂಗತಿ.

ಅತ್ಯಂತ ಸರಳ, ಸಜ್ಜನಿಕೆಯ ವ್ಯಕ್ತಿತ್ವದವರಾಗಿದ್ದರು. ಬೇಂದ್ರೆ, ಮಧುರ ಚೆನ್ನ, ಸಿಂಪಿ ಲಿಂಗಣ್ಣರಂತೆ ದೇಶಿಯತೆ ಹಾಗೂ ಜಾನಪದ ಪರಂಪರೆಯನ್ನು ಮುಂದುವರಿಸಿದವರು. ಕುಟುಂಬ ಜೀವಿಯಾಗಿದ್ದ ಇವರು ಸ್ನೇಹಕ್ಕೆ, ವಿಶ್ವಾಸಕ್ಕೆ ಮಹತ್ವ ಕೊಟ್ಟಿದ್ದರು. ಯಾರನ್ನು ವಿನಾ ಕಾರಣ ಹೊಗಳದೆ, ಹಾಗೇನೆ ಯಾರಿಂದಲೂ ಹೊಗಳಿಸಿಕೊಳ್ಳಲು ಬಯಸದೆ ಕೊನೆಯವರಿಗೂ ತಮ್ಮ ತನವನ್ನು ಕಾಯ್ದುಕೊಂಡಿದ್ದವರು.

ರಾಷ್ಟ್ರೀಯ ಚಳವಳಿ, ಏಕೀಕರಣ ಚಳವಳಿ, ಕನ್ನಡ ನವೋದಯ ಸಂದರ್ಭ, ಗಾಂಧಿ-ಲೋಹಿಯಾ ಹಾಗೂ ಜೀವನವನ್ನು ಪರಿಭಾವಿಸಿಕೊಳ್ಳದ, ಸಾಕ್ಷಿ ಪ್ರಜ್ಞೆಯನ್ನು ಎತ್ತಿ ಹಿಡಿಯುವ ಸಕಲಕ್ಕೂ ಲೇಸನ್ನು ಬಯಸುವ ಶರಣರ ಚಿಂತನೆ ಇವರ ಮೇಲೆ ಗಾಢವಾದ ಪ್ರಭಾವವನ್ನು ಬೀರಿದ್ದವು. ಈ ಪ್ರಭಾವದಿಂದಾಗಿಯೇ ಅವರು ಶ್ರೀಮಂತಿಕೆಯಿದ್ದರೂ, ಗತ್ತುಗೈರತ್ತಿನಿಂದ ಹಾಗೂ ವ್ಯಾಪಾರ ವೃತ್ತಿಯಲ್ಲಿದ್ದರೂ ವ್ಯವಹಾರಿಕತೆಯಿಂದ ಹೊರಗುಳಿದು ಸಮಾಜಮುಖಿಯಾಗಿದ್ದರು.

ಗ್ರಾಮೀಣ ಪ್ರದೇಶದ ಕಲಾವಿದರೊಂದಿಗೆ ನಿರಂತರ ಸಂಪರ್ಕ, ಅವರ ಕಷ್ಟ-ನಷ್ಟಗಳಲ್ಲಿ ಪಾಲ್ಗೊಳ್ಳುತ್ತಿದ್ದರು. ತಮ್ಮಿಂದಾದ ನೆರವಿನ ಹಸ್ತ ನೀಡುತ್ತಿದ್ದರು. ಪ್ರತಿಭಾವಂತ ಆದರೆ ಜನಪ್ರಿಯರಲ್ಲದ ಅನೇಕ ಕಲಾವಿದರನ್ನು ಅವರು ಗುರುತಿಸುತ್ತಿದ್ದರು. ಅಂಥ ಪ್ರತಿಭಾವಂತ ಕಲಾವಿದರನ್ನು ತಮ್ಮ ಮನೆಗೆ ಬರಮಾಡಿಕೊಂಡು, ಆ ದಿನ ಸದಭಿರುಚಿಯ ಆಸಕ್ತ ಆತ್ಮೀಯರನ್ನೆಲ್ಲಾ ಸಹ ಕರೆದು ಮನೆಯಲ್ಲಿ ಕಾರ್ಯಕ್ರಮ ಏರ್ಪಡಿಸುತ್ತಿದ್ದರು. ಆ ಕಲಾವಿದರಿಂದ ಹಾಡಿಸಿ, ಕುಣಿಸಿ ಅವರ ಪ್ರತಿಭೆಯನ್ನು ಕಂಡು ಸಂಭ್ರಮ, ಸಂತೋಷ ಪಡುತ್ತಿದ್ದರು. ಕಲಾವಿದರಿಗೆ ಹೊಸ ಬಟ್ಟೆ, ಹಣ ಕೊಟ್ಟುಕಳುಹಿಸುತ್ತಿದ್ದರು. ಬಂದ ಒಡನಾಡಿಗಳಿಗೆಲ್ಲ ಪುಷ್ಕಳ ಊಟ ಉಣಬಡಿಸುತ್ತಿದ್ದರು.

ಇವರ ಆತ್ಮೀಯ ಸನ್ಮಿತ್ರ ಕೆ.ವಿ. ಸುಬ್ಬಣ್ಣನವರಿಗೆ `ಮ್ಯಾಗ್ಸೇಸೆ ಪ್ರಶಸ್ತಿ` ಬಂದಾಗ ಮನೆಯಲ್ಲಿ ಸಂಗೀತ ಕಾರ್ಯಕ್ರಮ ಏರ್ಪಡಿಸಿ ಆತ್ಮೀಯರನ್ನೆಲ್ಲ ಕರೆಯಿಸಿ ಹೊಳಿಗೆ ಊಟ ಉಣಬಡಿಸಿ ಸಂತೋಷ ಪಟ್ಟವರು. ಸ್ನೇಹಿತನಿಗೆ ಪ್ರಶಸ್ತಿ ಬಂದರೆ ತಮಗೆ ಬಂದಷ್ಟು ಸಂತೋಷ ಪಡುವ ವಿಶಾಲ ಮನಸ್ಸಿನ ವ್ಯಕ್ತಿತ್ವವನ್ನು ಸಂಗಣ್ಣನವರಲ್ಲಿ ಬಿಟ್ಟು ಬೇರೆ ಯಾರಲ್ಲೂ ಕಾಣಲು ಸಾಧ್ಯವಿಲ್ಲ. ಅದಕ್ಕೆಂದೆ ಶಿವರಾಮ ಕಾರಂತರು `ಸಂಗಣ್ಣ ಅಪ್ಪಟ ಚಿನ್ನ` ಎಂದು ಕರೆದಿದ್ದಾರೆ. ಇವರ ಮನೆಯೇ ಒಂದು ಸಾಂಸ್ಕೃತಿಕ ಕೇಂದ್ರ. ಮನೆಯ ತುಂಬಾ ಪುಸ್ತಕಗಳು. ಜಾನಪದ ಸಂಗ್ರಹದ ಧ್ವನಿಸುರಳಿಗಳು. ಕನ್ನಡ, ಹಿಂದಿ, ಮರಾಠಿ, ತೆಲಗು, ಬಂಗಾಳಿ, ಇಂಗ್ಲೀಶ್ ಭಾಷೆಯ ಕಾವ್ಯ, ನಾಟಕಗಳ ಪುಸ್ತಕಗಳು. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಅಪೂರ್ವ ಸಂಗ್ರಹ ಇವರ ಮನೆಯಲ್ಲಿದೆ. ಸತತವಾಗಿ ೧೦೦ಕ್ಕೂ ಹೆಚ್ಚು ಗಂಟೆಗಳ ಕಾಲ ಕೇಳಬಹುದಾದ ಜಾನಪದ ಸಂಗೀತದ ಸಂಗ್ರಹ ಇದೆ. ಅಪರೂಪದ ರಾಗಗಳು ಹಾಗೂ ಗಾಯಕರ ಸಂಗೀತವನ್ನು ಸಹ ಸಂಗ್ರಹಿಸಿಟ್ಟಿದ್ದಾರೆ.

ಹಳೆಯ ಕಾಲದ ಅಮೂಲ್ಯವಾದ ಪುಸ್ತಕ ಭಂಡಾರವಿದೆ. `ಜೀವನ`, ‘ಜಯ ಕರ್ನಾಟಕ`, ಎನ್ ಕೌಂಟರ್`, ಇಂಪ್ರಿಂಟ್` ಮೊದಲಾದ ಪತ್ರಿಕೆಗಳ ಸಂಗ್ರಹವಿದೆ. ತಮ್ಮ ಮನೆಯಲ್ಲೇ ಅಕಾಡೆಮಿಕ್ ವಾತಾವರಣನ್ನುಂಟು ಮಾಡಿದ್ದರು. ವಿದ್ವಾಂಸರನ್ನು ಆಹ್ವಾನಿಸಿ ಸಾಹಿತ್ಯ-ಸಂಗೀತ-ಸಾಂಸ್ಕೃತಿಕ ಚಿಂತನೆಗಳ ಗೋಷ್ಠಿಗಳನ್ನು ನಡೆಸುತ್ತಿದ್ದರು. ಮನೆಯ ಈ ಗೋಷ್ಠಿಗಳಲ್ಲಿ ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಕು.ಸಿ. ಹರಿದಾಸಭಟ್ಟ, ಚಂದ್ರಶೇಖರ ಕಂಬಾರ, ಎಂ.ಪಿ. ಪ್ರಕಾಶ್, ಶ್ರೀಮತಿ ಸುಭದ್ರಮ್ಮ ಮನ್ಸೂರು ಮೊದಲಾದ ಸಾಹಿತಿ, ಕಲಾವಿದರು ಭಾಗವಹಿಸಿದ್ದಿದೆ. ಕಡಲತೀರದ ಕಾರಂತರು, ಉತ್ತರ ಕರ್ನಾಟಕದ ಸಂಗಣ್ಣನರದ್ದು ಅವಿನಾವಭಾವ ಸಂಬಂಧ. ಹೀಗಾಗಿಯೇ ಈ ಭಾಗದ ಸುತ್ತಲಿನ ಯಾವುದಾದರು ಪ್ರದೇಶಕ್ಕೆ ಕಾರಂತರು ಬಂದರೆ ಅವರು ಚಿಗಟೇರಿಯ ಸಂಗಣ್ಣನವರನ್ನು ಹುಡಿಕಿಕೊಂಡು ಹೋಗುತ್ತಿದ್ದರು. ಸಂಗಣ್ಣನವರ ಆತಿಥ್ಯ ಸ್ವೀಕರಿಸುತ್ತಿದ್ದರು. ತಮ್ಮ ಗಹನವಾದ ವಿಷಯ ವಿನಿಮಯ ಚರ್ಚೆಗಳನ್ನು ನಡೆಸುತ್ತಿದ್ದರು. ಒಂದು ಕಾಲಕ್ಕೆ ಸಂಗಣ್ಣನವರ ಆಸಕ್ತಿಯಿಂದ ಊರಿನಲ್ಲಿ ಒಂದಿಲ್ಲೊಂದು ಜಾನಪದ ಕಾರ್ಯಕ್ರಮ, ಗೊಂಬೆಯಾಟ, ಜಾನಪದ ಪ್ರದರ್ಶನಗಳು ನಡೆಯುತ್ತಿದ್ದವು. ಇವುಗಳನ್ನು ನೋಡಲು ಅವರ ಆಸಕ್ತ ಸ್ನೇಹಿತರು, ಹಳ್ಳಿಯ ಜನರು ಬರುತ್ತಿದ್ದರು. ಇವುಗಳ ಖರ್ಚು-ವೆಚ್ಚಗಳನ್ನು ಸಂಗಣ್ಣರೊಬ್ಬರೇ ಭರಿಸುತ್ತಿದ್ದರು.

ಸಂಗಣ್ಣನವರ ಚಿಗಟೇರಿಗೆ ಶಿವರಾಮ ಕಾರಂತು ಮೊದಲು ಬಾರಿಗೆ ಬಂದಾಗ ಅವರು ಕಂಡದ್ದನ್ನು ಹೀಗೆ ದಾಖಲಿಸಿದ್ದಾರೆ. ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಚಿಗಟೇರಿ ಎಂಬ ಹಳ್ಳಿ. ಅಲ್ಲಿ ಹೊಗೆಸೊಪ್ಪಿನ ವ್ಯಾಪಾರನಿರತರಾದ ಮುದೇನೂರು ಸಂಗಣ್ಣ ಎಂಬ ಮಿತ್ರರಿದ್ದಾರೆ. ಕನ್ನಡ ನಾಡಿನ ಸುತ್ತಮುತ್ತ ನಡೆಯುತ್ತಿರುವ ಎಲ್ಲ ಸಾಂಸ್ಕೃತಿಕ ಚಟುವಟಿಕೆಗಳಿಗೂ ಸಾಕ್ಷಿಯಾಗುವವರು. ಅವರು ಕೆ.ವಿ. ಸುಬ್ಬಣ್ಣನವರು ನಡೆಸಿದ ಒಂದು ಸಮಾರಂಭದಲ್ಲಿ ನನಗೆ ಅವರ ಪರಿಚಯವಾಯಿತು. ಸಂಗಣ್ಣನವರು ನೋಟಕ್ಕೆ ಅಂಥ ಆಕರ್ಷಕ ವ್ಯಕ್ತಿಗಳಲ್ಲ. ಅವರದು ಉತ್ಸಾಹದ ಮಾತುಗಾರಿಕೆ: ಅನೇಕ ವಿಷಯಗಳನ್ನು ಕುರಿತು ಆಸಕ್ತಿಯನ್ನು ಬೆಳೆಸಿಕೊಂಡು ಬಂದಿದ್ದಾರೆ. ಮೊದಲನೇ ಭೇಟೆಯಲ್ಲೇ ಅವರು ನನ್ನೊಡನೆ `ನಮ್ಮ ಚಿಗಟೇರಿಗೆ ಒಮ್ಮೆ ಬನ್ನಿ` ಎಂದರು. ನಾನು ಕುತೂಹಲದಿಂದ ಒಮ್ಮೆ ಅವರ ಊರಿಗೆ ಹೋದೆ. ಆಗ ನನಗೆ ಅವರು ಏನೆಲ್ಲ ಬರೆದಿದ್ದಾರೆ, ಏನೆಲ್ಲ ಮಾಡಿಕೊಂಡಿದ್ದಾರೆ ಎಂಬ ಜ್ಞಾನ ಇರಲಿಲ್ಲ. ಆ ಕಾಲದಲ್ಲಿ ಅವರ ವಿಷಯದಲ್ಲಿ ನನಗಿದ್ದ ತಿಳಿವಳಿಕೆಯೆಂದರೆ ಅವರು ಒಬ್ಬರು ಹೊಗೆಸೊಪ್ಪಿನ ವ್ಯಾಪಾರಿಗಳು ಎಂದು.

ನಾನು ಹೋದ ಸಂಜೆ ಉಪನ್ಯಾಸ ಏರ್ಪಡಿಸುತ್ತೇನೆ ಎಂದಿದ್ದರು. ಮೊದಲು ಅವರ ಜತೆಗೆ ಊರನ್ನು ಹೊಕ್ಕು ಅವರ ಅಂಗಡಿಯ ಚಾವಡಿಯಲ್ಲಿ ಗಾದಿ, ದಿಂಬುಗಳ ಮೇಲೆ ನವಾಬನಂತೆ ಸ್ಥಾಪಿತನಾದೆ. ಅಲ್ಲಿಂದ ಮುಂದೆ ಸಂಜೆ ಉಪನ್ಯಾಸದ ಹೊತ್ತಿನತನಕ ದೂರದೂರದಿಂದ ಎಂದರೆ ಹರಪನಹಳ್ಳಿ, ಕೊಟ್ಟೂರು, ಹಡಗಲಿ ಮೊದಲಾದ ಕಡೆಗಳಿಂದ ಅನೇಕ ಅಪರಿಚಿತರು ಬಂದು ಕಲೆಯ ತೊಡಗಿದರು. ಅವರಲ್ಲಿ ವರ್ಗದಾರರಿದ್ದರು, ಶಿಕ್ಷಕರಿದ್ದರು, ವಕೀಲರಿದ್ದರು ನಾವು ಕಲೆತ ಆ ಸ್ಥಳ ಒಂದು ಹಳ್ಳಿ ಎಂಬುದನ್ನು ತೋರಿಸುವಂತೆ ಅವರೆಲ್ಲರೂ ಜನಸಾಮಾನ್ಯರಂತೆ ಕಾಣಿಸುತ್ತಿದ್ದರು. ಹಾಗೆ ಬಂದವರು ಒಬ್ಬೊಬ್ಬರಾಗಿ ಒಂದೊಂದು ಪ್ರಶ್ನೆಯನ್ನು ಕೇಳತೊಡಗಿದಾಗ ಅಲ್ಲಿಯ ಜನರಿಗೆ ಹುದಗಿದ ಆಸಕ್ತಿಯು ರಾಜಕೀಯ, ಸಂಸ್ಕೃತಿ, ಸಾಹಿತ್ಯ ನನ್ನ ಬರವಣಿಗೆಗಳು ನವ್ಯ ಕನ್ನಡ ಸಾಹಿತಿಗಳ ಕೃತಿಗಳು ಆರ್ಥಿಕ ಪ್ರಶ್ನೆಗಳು, ಸಾಲದ್ದಕ್ಕೆ ನಾನು ನನ್ನ `ಬಾಳ್ವೆಯೇ ಬೆಳಕು` ಎಂಬ ಕೃತಿಯಲ್ಲಿ ತೋಡಿಕೊಂಡ ಸಮಸ್ಯೆಗಳು, ಇಂಥವುಗಳಿಂದ ಆಯ್ದುಕೊಂಡ ಪ್ರಶ್ನಾ ರೂಪದ ಇಂಬುಗಳಾಗಿ ಕಾಣಿಸಿದವು.

ಆ ಸಂಜೆಯ ತನಕ ಹೊತ್ತು ಹೋದದ್ದೇ ನನಗೆ ತಿಳಿಯಲಿಲ್ಲ. ಅಲ್ಲಿಗೆ ಅತಿಥಿಗಳಾಗಿ ಬಂದ ಹಲವರಲ್ಲಿ ಕಾಣಿಸಿಕೊಂಡ ಬದುಕಿನ ಸಮಸ್ಯೆಗಳನ್ನು ಕುರಿತ ಆಸಕ್ತಿ ಮತ್ತು ಕುತೂಹಲ ನನಗೆ ಆಶ್ಚರ್ಯ ಹುಟ್ಟಿಸಿತು. ಆ ಮಧ್ಯಾಹ್ನ ಮತ್ತು ಸಂಜೆ ಹೊರಗಿನಿಂದ ಬಂದ ಎಲ್ಲ ಅತಿಥಿಗಳಿಗೂ ಸಂಗಣ್ಣನವರು ಅನ್ನ ಸಂತರ್ಪಣೆ ನಡೆಸಿದರು. ಆಗ ನನ್ನ ಬಳಿಯಲ್ಲಿ ಹರಿಹರಪುರದ ಶ್ರೀನಿವಾಸ ಜೋಯಿಸರು ಇರುತ್ತಿದ್ದರೆ `ಸ್ವಾಮಿ ಮಲೆನಾಡಿನ ನಿಮ್ಮನ್ನು ಬಯಲು ಸೀಮೆಯ ಈ ಸಂಗಣ್ಣನವರು ನಾಚಿಸುತ್ತಿದ್ದರಲ್ಲ` ಎಂದು ಹೇಳುತ್ತಿದ್ದೆ. ಅದೇ ರಾತ್ರಿ ಅವರು ನನ್ನ ಸಲುವಾಗಿ ಒಂದು ಗೊಂಬೆ ಆಟವನ್ನು ಏರ್ಪಡಿಸಿದ್ದರು. ಪ್ರಾಯಶಃ ಸುತ್ತಮುತ್ತಲಿನ ಹಳ್ಳಿಗಳಿಂದ ಮನೆಯಲ್ಲಿ ಯಾರೂ ಉಳಿಯದೆ ಗೊಂಬೆ ಆಟವನ್ನು ನೋಡಲು ಸಾವಿರಾರು ಜನರು ಬಂದಿದ್ದರು. ಒಂದು ಗೊಂಬೆಯ ಆಟವನ್ನು ನೋಡುವುದಕ್ಕೆ ಅಷ್ಟೊಂದು ದೊಡ್ಡ ಜನ ಸಂದಣಿ ಸೇರಬಹುದೇ ಎಂಬ ಆಶ್ಚರ್ಯ ನನಗೆ.

ಈ ಘಟನೆ ನಡೆದ ಮೇಲೆ ಬಳ್ಳಾರಿಯ ಕಡೆಗೆ ನಾನು ಹೋದಾಗ, ಮುದೇನೂರು ಸಂಗಣ್ಣನವರ ನೆನಪು ಅವರಲ್ಲಿ ನಾನು ಹೋಗುವಂತೆ ಮಾಡುತ್ತಿತ್ತು. ಯಾರನ್ನೂ ನಾವು ಜನಸಾಮಾನ್ಯರೆಂದು ತಿಳಿಯುತ್ತೇವೆಯೋ, ಅವರ ಬುದ್ಧಿಶಕ್ತಿಗೆ ಪ್ರಚೋದನೆ ದೊರೆತಲ್ಲಿ ಅದು ಬೆಳೆಯಲು ಅವಕಾಶ ದೊರೆತಲ್ಲಿ ಆ ಸಾಮಾನ್ಯ ಪರಿಸ್ಥಿತಿಯಿಂದಲೇ ಅಸಾಮಾನ್ಯ ವಿಚಾರಶೀಲತೆಯೂ ಹುಟ್ಟಿಕೊಳ್ಳಬಲ್ಲದು ಎಂಬುದು ಮನವರಿಕೆಯಾಯಿತು. (ಸ್ಮೃತಿ ಪಟಲದ ಪುಸ್ತಕದಲ್ಲಿ) ಹೀಗೆ ಸಂಗಣ್ಣನವರ ಅಭಿರುಚಿ, ಕಾರ್ಯ ವೈಖರಿಯ ಕುರಿತು ದಾಖಲಿಸಿದ್ದಾರೆ.

ಪ್ರಚಾರದಿಂದ ದೂರವೇ ಇದ್ದ ಇವರು ಸರ್ಕಾರದ ಯಾವುದೇ ಸಹಾಯ, ಸಹಕಾರ ನಿರೀಕ್ಷಿಸದೆ, ತಮ್ಮ ವೈಯಕ್ತಿಕ ಆಸಕ್ತಿ, ಹಣದಿಂದಲೇ ಜಾನಪದ ಕಾರ್ಯಗಳನ್ನು ನಿರ್ವಹಿಸಿದವರು. ತಾವೊಬ್ಬರೆ ನಿಂತು ವ್ಯಕ್ತಿಯಾಗಿ, ಶಕ್ತಿಯಾಗಿ ಒಂದು ವಿಶ್ವವಿದ್ಯಾಲಯದ ತರಹದಲ್ಲಿ ಕೆಲಸ ಮಾಡಿದ್ದಾರೆ. ಕನ್ನಡದ ಜಾನಪದ, ರಂಗಭೂಮಿ ಜಾನಪದಲ್ಲಿ ತಮ್ಮದೆ ಆದ ರೀತಿಯಲ್ಲಿ ಸಂಗ್ರಹ, ಸಂಪಾದನೆ, ರಚನೆಯನ್ನು ಮಾಡಿದ್ದಾರೆ. ಇವರ ಬಹುತೇಕ ಎಲ್ಲಾ ಜಾನಪದ ಸಂಗ್ರಹ ಅಧ್ಯಯನ, ಪ್ರಕಟಣೆಗಳೆಲ್ಲವೂ ಅವರಿದ್ದ ಪ್ರದೇಶದ್ದೆ ಆಗಿದೆ ಎನ್ನುವುದು ವಿಶೇಷವಾದದ್ದು.

ಸಂಗಣ್ಣನವರು ಬೆಂಗಳೂರು, ಮೈಸೂರಿನ ಸಾಹಿತಿಗಳ ಸ್ನೇಹಕ್ಕಿಂತ ಹೆಚ್ಚು ದಕ್ಷಿಣ ಕನ್ನಡದ ಡಾ. ಶಿವರಾಮ ಕಾರಂತ, ಕೆ.ವಿ. ಸುಬ್ಬಣ್ಣ, ಕು.ಶಿ. ಹರಿದಾಸಭಟ್ಟ ಇವರ ಒಡನಾಟ. ಉಡುಪಿಯ ಪ್ರಾದೇಶಿಕ ಜಾನಪದ ರಂಗಕಲೆಗಳ ಅಧ್ಯಯನ ಕೇಂದ್ರಕ್ಕೆ ಆರಂಭದಿಂದಲೂ ಸಲಹೆಗಾರರಾಗಿದ್ದವರು. ಬಳ್ಳಾರಿ ಜಿಲ್ಲೆಯ ಹಾಗೂ ಉತ್ತರ ಕರ್ನಾಟಕದ ಕೆಲ ಪ್ರದೇಶಗಳಲ್ಲಿ ಆರ್.ಆರ್.ಸಿ ಯವರು ಸಂಗ್ರಹಿಸಿದ ಜಾನಪದ, ಪ್ರಕಟಣೆಯ ಕಾರ್ಯದಲ್ಲಿ ಇವರು ಸಕ್ರಿಯವಾಗಿ ಪಾಲ್ಗೊಂಡಿದ್ದವರು.

ಇಂಟರ್ ಮೀಡಿಯಟ್ ಓದಿದ ಗ್ರಾಮೀಣ ಕೃಷಿಕ, ಹೊಗೆಸೊಪ್ಪಿನ ವ್ಯಾಪಾರಿ ಜಾನಪದ ಕ್ಷೇತ್ರದಲ್ಲಿ ಸಾಧನೆ ಮಾಡಿ ಈ ನಾಡಿಗೆ ಮಾದರಿಯಾದರು. ಜಾನಪದ ಸಂಗ್ರಹ, ಸಂಪಾದನೆಯ ಕಾರ್ಯದಲ್ಲಿ ನೂರಾರು, ಸಾವಿರಾರು ವಿದ್ವಾಂಸರು, ಅಕಾಡೆಮಿಕ್ ವಿದ್ವಾಂಸರು ಕೆಲಸ ಮಾಡುತ್ತಿದ್ದಾರೆ. ಆದರೆ ಇವರೆಲ್ಲರಿಗಿಂತ ಸಂಗಣ್ಣ ಜಾನಪದ ಕ್ಷೇತ್ರದಲ್ಲಿ ವಿಶಿಷ್ಟವಾಗಿ ನಿಲ್ಲುತ್ತಾರೆ. ಈ ಕಾರಣದಿಂದಾಗಿಯೇ ಅಧ್ಯಯನ ಹಾಗೂ ಸಂಶೋಧನೆ ಮೂಲದ ಕನ್ನಡ ವಿಶ್ವವಿದ್ಯಾಲಯವು, ನಾನ್ ಅಕಾಡೆಮಿಕ್ ವ್ಯಕ್ತಿಯಾಗಿದ್ದ ಸಂಗಣ್ಣರನ್ನು ಘಟಿಕೋತ್ಸವ ಭಾಷಣ (ನುಡಿಹಬ್ಬ ೧೦, ೨೦೦೧) ಮಾಡಲು ಆಹ್ವಾನಿಸಿದ್ದು ಹಾಗೂ ಸಂಗಣ್ಣನವರು ಘಟಿಕೋತ್ಸವ ಭಾಷಣ ಮಾಡಿದ್ದು ಐತಿಹಾಸಿಕ ಘಟನೆ ಎಂದೇ ನಾನು ಭಾವಿಸಿದ್ದೇನೆ. ಇವರಿಗೆ `ನಾಡೋಜ` ಪದವಿ ನೀಡಿ ಗೌರವಿಸಿದ್ದು ಸಂಗಣ್ಣರ ವಿದ್ವತ್ ಪರಂಪರೆಗೆ ಕೊಟ್ಟ ಗೌರವವಾಗಿದೆ. ಇವರು ಸಂಪಾದಿಸಿರುವ `ಗೊಂದಲಿಗರ ದೇವೇಂದ್ರಪ್ಪನ ಆಟಗಳು` ಪುಸ್ತಕವನ್ನು ಸಹ ಕನ್ನಡ ವಿಶ್ವವಿದ್ಯಾಲಯದ, ಪ್ರಸಾರಾಂಗ ಪ್ರಕಟಿಸಿದೆ.

ಕನ್ನಡ ವಿಶ್ವವಿದ್ಯಾಲಯದ ಮೊದಲ ಸೆನೆಟ್ ಸದಸ್ಯರಾಗಿ ಅಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿ ವಿಶ್ವವಿದ್ಯಾಲಯದ ಬೆಳವಣಿಗೆಗ ಸಹಕರಿಸಿದ್ದಾರೆ. ವಿದ್ಯಾರಣ್ಯ ಆವರಣದ ಕಟ್ಟಡಗಳ ನಿರ್ಮಾಣದ ಕಟ್ಟಡ ಸಲಹಾ ಸಮಿತಿ ಅಧ್ಯಕ್ಷರಾಗಿ ಕುಲಪತಿಗಳಾಗಿದ್ದ ಡಾ. ಚಂದ್ರಶೇಖರ ಕಂಬಾರರ ಕನಸುಗಳ ಕಟ್ಟಡಗಳನ್ನು ನಿರ್ಮಿಸಲು ಸಂಪೂರ್ಣ ಸಹಕಾರ, ಬೆಂಗಲ ನೀಡಿ ವಿಜಯನಗರದ ಶೈಲಿಯ ಕಟ್ಟಡಗಳು ನಿರ್ಮಾಣವಾಗುವಂತೆ ಮಾಡಿದ್ದವರು. ವಿಶ್ವವಿದ್ಯಾಲಯದ ಪ್ರಸಾರಾಂಗ ಮೊದಲ ಬಾರಿಗೆ ಪ್ರಕಟಿಸಿದ ಶ್ರೀತ್ವನಿಧಿ, ಕನ್ನಡ ವಾರ್ಷಿಕ-೯೧, ಬಯಲು ಆಲಯ, `ಮರೆತು ಹೋಗಿರುವ ಸಾಮ್ರಾಜ್ಯ`, ಸಂಶೋಧನ ಕರ್ನಾಟಕ ಗ್ರಂಥಗಳನ್ನು ಮುದೇನೂರು ಸಂಗಣ್ಣನವರು ನುಡಿಹಬ್ಬ-೯೨ ರಲ್ಲಿ ಬಿಡುಗಡೆ ಮಾಡಿದ್ದರು. ಹೀಗೆ ಕನ್ನಡ ವಿಶ್ವವಿದ್ಯಾಲಯಕ್ಕೂ ಸಂಗಣ್ಣನವರಿಗೂ ಅವಿನಾಭಾವ ಸಂಬಂಧ.

ಗಂಭೀರ ಮುಖ ಮುದ್ರೆಯ ಸಂಗಣ್ಣ ನೇರ ನುಡಿಯ ನಿಷ್ಟುರ ಮಾತಿನವರಾಗಿದ್ದರು. ತಮಗೆ ಸರಿ ಕಾಣದ್ದನ್ನು ಸ್ಪಷ್ಟವಾಗಿ ಟೀಕಿಸುತ್ತಿದ್ದರು. ಸ್ವಲ್ಪ ಸಿಡುಕಿನ ಸ್ವಭಾವವದವರಾಗಿದ್ದರಿಮದ ಬಹಳ ಜನ ಇವರ ಹತ್ತಿರಕ್ಕೆ ಬರಲು ಹಿಂಜರಿಯುತ್ತಿದ್ದರು. ಆದರೆ ಅವರ ನಿಷ್ಟುರ ಮಾತಿನ ಹಿಂದೆ ಯಾವುದೇ ದ್ವೇಷದ ಉದ್ದೇಶವಿರುತ್ತಿರಲಿಲ್ಲ. ಅವರದು ಮಾತೃ ಹೃದಯವಾಗಿತ್ತು. ಹೊಗೆಸೊಪ್ಪಿನ ವ್ಯಾಪಾರ, ಮನೆಯ ಯಜಮಾನಿಕೆ, ಸಹೃದಯತೆ, ಅಧ್ಯಯನ-ಬರವಿಗೆ, ಓಡಾಟ ಹೀಗೆ ಎಲ್ಲವನ್ನೂ ಒಳಗೊಂಡ ವ್ಯಕ್ತಿತ್ವದ ಸಂಗಣ್ಣರನ್ನು ಕುರಿತು ಬರೆಯುವುದು ಅಷ್ಟು ಸುಲಭದ ಕಾರ್ಯವಲ್ಲ. ಅಂತರ್‌ಮುಖಿಯಾಗಿದ್ದ ಇವರನ್ನು ಅರ್ಥಯಿಸಿದಷ್ಟು ವ್ಯಾಪಕತೆಯನ್ನು ಪಡೆಯುತ್ತಾರೆ. ಭೂ ಮಾಲೀಕತ್ವದ ಮನೆತನದ ಇವರು ಸಮಾಜವಾದದ ಮನಸ್ಸಿನಿಂದ ಬೆಳೆದು ಬಂದಿದ್ದು ಇವರ ವ್ಯಕ್ತಿತ್ವದ ವೈಶಿಷ್ಟ್ಯ. ಸ್ನೇಹಿತರಿಗೆ ಸಂಗಣ್ಣನಾಗಿ ಕಿರಿಯರಿಗೆ `ಸಂಗಜ್ಜ`ರಾಗಿದ್ದ ಇವರನ್ನು ಪುಟಗಳ ಮಿತಿಯಲ್ಲಿ ಸಂಕ್ಷಿಪ್ತವಾಗಿ ಪರಿಚಯಿಸುವ ಕಷ್ಟಸಾಧ್ಯದ ಪ್ರಯತ್ನ ಇಲ್ಲಿದೆ.