ನಾನಿತ್ತೆಳೆದರೆ ತಾನೆತ್ತಲೆಳೆವುದು
ಇನ್ನೇನು ಇನ್ನೇನು ಜ್ಞಾನವಿಲ್ಲದ ಕೋಣ
ಸಾಧನವಾಗದ ಇನ್ನೇನು ಇನ್ನೇನು || ನಾನಿತ್ತ ||

ಹಸಿರು ಹುಲ್ಲನು ಕಂಡು ಬಿಸಿಯೊಳು
ಮೇಯುವುದು ಇನ್ನೇನು ಇನ್ನೇನು
ಹಸವಲ್ಲ ಈ ಕೋಣ ಕೊಸರಿ ಕೊಂಡು
ಹೋಡಿತು ಇನ್ನೇನು ಇನ್ನೇನು || ನಾನಿತ್ತ ||

ಮುಪ್ಪುರಿಯನು ಕೂಡಿ ಮುಗುದಾರ ಹಾಕಿದ
ಮೇಲು ಇನ್ನೇನು ಇನ್ನೇನು
ದಕ್ಕದೆ ಎನಗಿದು ತಪ್ಪಿಸಿಕೊಂಡು
ಒಡಿತು ಇನ್ನೇನು ಇನ್ನೇನು || ನಾನಿತ್ತ ||

ನೂರಾರು ಕೋಣದೊಳು ಮೀರಿದ
ಈ ಕೋಣ ಇನ್ನೇನು ಇನ್ನೇನು
ನಮ್ಮ ಧೀರ ಮಂಟೇಶಗೆ
ಮಾರಿ ಬಿಟ್ಟೇನು ಕೋಣ ಇನ್ನೇನು ಇನ್ನೇನು || ನಾನಿತ್ತ ||

ನನ್ನೊಳಗೆ ನಾ ತಿಳಿದು ಕೊಂಡೆ
ನನಗೆ ಬೇಕಾದ ಗಂಡನ ಮಾಡಿಕೊಂಡೆ
ಆಜ್ಞೆ ಪ್ರಕಾರ ನಡೆದುಕೊಂಡೆ ನಾ
ಎಲ್ಲಾರ ಹಂಗೊರಿದ ಅರಿತುಕೊಂಡೆ || ನನ್ನ ||

ಆರು ಮಕ್ಕಳ ನಾ ಅಡವಿಗಟ್ಟಿದೆ
ಈ ಮೂರು ಮಕ್ಕಳ ನಾ ಬಿಟ್ಟು ಕೊಂಡೆ
ಇವನಾ ಮೇಲೆ ನಾ ಮನಸ್ಸಿಟ್ಟೆ ನನ್ನ
ಬದುಕು ಬಾಳೆಲ್ಲಾ ಸೂರೆ ಕೊಟ್ಟೆ || ನನ್ನೊಳಗೆ ||

ಒಂದಾನಾಡಿದರೆ ಕಡಿಮೆ ಎಂದೇ
ಎರಡನಾಡಿದರೆ ಹೆಚ್ಚೆಂದೆ
ಬೆಡಗು ಮೂತಿಗೆ ಸುಖವುಂಟೆ
ಅಜ್ಞಾನಿಗಳಿಗಿದು ತಿಳಿದುಂಟೆ || ನನ್ನೊಳಗೆ ||

ಶಿವನಾ ಹಾದಿಯ ನಾ ಹಿಡಿದುಕೊಂಡೆ
ಗುರು ಉಪದೇಶವನ್ನೇ ಪಡೆದುಕೊಂಡೆ
ಭವಕ್ಕೆ ಬಾರದಂಗೆ ಮಾಡಿಕೊಂಡೆ
ಗುರು ಗೋವಿಂದನ ಪಾದವ ಸೇರಿಕೊಂಡೆ || ನನ್ನ ||

ನುಡಿ ನುಡಿ ನುಡಿ ನುಡಿ ನುಡಿಯಣ್ಣ
ನೀನು ಶಿವಗುರು ಎನ್ನುತ ನಡೆಯಣ್ಣ
ತಾರಕ ಭೇರಿಯ ಹೊಡೆಯಣ್ಣ ನಿನ್ನ
ಭವದ ಬೇರು ಮೊದಲು ಕಡಿಯಣ್ಣ || ನುಡಿ ||

ಪರ್ವತಕ ಹೋಗಲು ಏಕಣ್ಣ ನೀನು
ಪರಸತಿಗಳಿ ಪ್ರೌಢರಲ್ಲವಣ್ಣ
ಪರಮಪ್ರಸಾದದ ಮಹಿಮೆಯ ತಿಳಿದೊಡೆ
ಪಾರ್ವತಿ ರಮಣನು ನೀನಣ್ಣ || ನುಡಿ ||

ತಿರುಪತಿಗು ಹೋಗಲು ಏಕಣ್ಣ ನೀನು
ತಿರುಗಿ ತಿರುಗಿ ಬರಬೇಕಣ್ಣ
ತೀರ್ಥ ಪ್ರಸಾದದ ಮಹಿಮೆಯ ತಿಳಿದೊಡೆ
ತಿರುಗತಿ ಬಾರದು ಕಾಣಣ್ಣ || ನುಡಿ ||

ಅಂದವ ಕಾಣದೆ ಲಿಂಗವನರಿಯದೆ
ಮಂಗನಂತೆ ನೀನು ತಿರುಗಣ್ಣ
ಗುರು ಮುಖದಿಂದರ ಅರ್ಥವ ತಿಳಿದೊಡೆ
ಶಂಕರನಾಗುವೆ ಕಾಣಣ್ಣ || ನುಡಿ ||

ಕಂಡಿದ್ದ ಮಾಡುವುದೇಕಣ್ಣಾ ಇದ
ಕಂಡವರಾರಿಲ್ಲ ಕಾಣಣ್ಣ
ಖಂಡಿತ ಮಾಡುವ ಮರ್ಮವ ತಿಳಿದೊಡೆ
ಅಖಂಡ ರೂಪನು ನೀನಣ್ಣ || ನುಡಿ ||

ಹುಟ್ಟಿದ ರೂಪನು ತಾವೊಂದು ಅರಿಯಣ್ಣಾ ಇದು
ಮುಟ್ಟಿನ ದೇಹವು ಕಾಣಣ್ಣಾ
ಮುಟ್ಟು ಮುಟ್ಟೆಂಬುವ ಮೊದಲ ತಿಳಿದೊಡೆ
ಹುಟ್ಟಲೇಬಾರದು ಕಾಣಣ್ಣ || ನುಡಿ ||