ನಾನಿಬಾಲಾ ದೇವಿಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ವೀರಮಹಿಳೆ. ಶಾಲೆಯ ಶಿಕ್ಷಣ ತೀರ ಸ್ವಲ್ಪ. ಆದರೆ ನಾಡಿಗಾಗಿ ಶ್ರಮಿಸುವುದರಲ್ಲಿ ಬಾಳಿನ ಸಾರ್ಥಕ್ಯವನ್ನು ಕಂಡುಕೊಂಡ ನಾನಿಬಾಲಾ ದೇಶಕ್ಕಾಗಿ ಸೆರೆಮನೆ ಸೇರಿದರು. ಅಂಗಾಂಗಗಳಿಗೆ ಮೆಣಸಿನಪುಡಿ ತುಂಬಿದರೂ ಕ್ರಾಂತಿವೀರರ ಗುಟ್ಟನ್ನು ಬಿಟ್ಟು ಕೊಡಲಿಲ್ಲ. ಭಾರತದ ಸ್ತ್ರೀಯರ ಆತ್ಮಗೌರವ, ದಿಟ್ಟತನಗಳ ಪ್ರತೀಕವಾದರು.

ನಾನಿಬಾಲಾ ದೇವಿ

‘‘ನಾವು ಭಾರತೀಯರು, ಅಂದಮಾತ್ರಕ್ಕೆ ನಮಗೆ ಆತ್ಮಗೌರವವಿಲ್ಲವೆಂದು ಭಾವಿಸಿರುವೆಯೇನು?’’ಈ ಮಾತುಗಳನ್ನು ಆಡಿದ ವ್ಯಕ್ತಿ ಒಬ್ಬ ಹೆಂಗಸು. ಆಕೆ ಹೀಗೆ ಹೇಳಿದುದು ಸೆರೆಮನೆಯ ಒಬ್ಬ ದೊಡ್ಡ ಅಧಿಕಾರಿಗೆ-ತಾನು ಸೆರೆಮನೆಯಲ್ಲಿದ್ದಾಗಲೇ.

ಇದು ನಡೆದದ್ದು ಸುಮಾರು ಅರವತ್ತು ವರ್ಷಗಳ ಕೆಳಗೆ. ಆಗಿನ್ನೂ ಭಾರತಕ್ಕೆ ಸ್ವಾತಂತ್ರ್ಯ ಬಂದಿರಲಿಲ್ಲ. ಇಂಗ್ಲಿಷರ ಆಡಳಿತದಲ್ಲಿ ಭಾರತೀಯರು ಇದ್ದ ಕಾಲ. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಬೇಕಾದರೆ ಅಹಿಂಸಾ ಮಾರ್ಗವೇ ಸರಿಯಾದದ್ದು ಎಂದು ಗಾಂಧೀಜಿಯವರು ಭಾವಿಸಿದ್ದರು. ಇಂಗ್ಲಿಷರಿಗೆ ಪ್ರಬಲ ಸಾಮ್ರಾಜ್ಯವಿದೆ, ಸೈನ್ಯವಿದೆ, ಆದುದರಿಂದ ಭಾರತೀಯರು ಅಹಿಂಸಾ ಮಾರ್ಗದಲ್ಲೇ ಮುಂದುವರೆದರೆ ಭಾರತಕ್ಕೆ ಸ್ವಾತಂತ್ರ್ಯ ಸಿಗುವುದು ಕನಸಾದೀತು. ಸ್ವಾತಂತ್ರ್ಯವು ಲಭ್ಯವಾಗುವುದು ಕ್ರಾಂತಿಯಿಂದಲೇ ಎನ್ನುವ ಪಂಥವೂ ಇದ್ದಿತು. ಈ ಪಂಥದವರೇ ಕ್ರಾಂತಿಕಾರಿಗಳು. ಇವರು ನಡೆದ ಮಾರ್ಗ ಸುಲಭವಾಗಿರಲಿಲ್ಲ. ಇವರೆಂದರೆ ಬ್ರಿಟಿಷ್ ಸರಕಾರಕ್ಕೆ ಬಹಳ ಕೋಪ. ಇವರನ್ನು ಸೆರೆಗೆ ದೂಡುವುದು, ಗುಂಡಿಟ್ಟು ಕೊಲ್ಲುವುದು, ನೇಣು ಹಾಕುವುದು ಹೀಗೆ ಮಾಡಿ ಇವರ ಹುಟ್ಟಡಗಿಸಬೇಕೆಂದು ಆ ಸರ್ಕಾರದ ಯೋಚನೆ. ಕ್ರಾಂತಿಕಾರಿಗಳಿಗೆ ಆಶ್ರಯ ನೀಡುವುದು ಎಂದರೆ ಇಂಗ್ಲಿಷರ ದೃಷ್ಟಿಯಲ್ಲಿ ಮಹಾಪರಾಧ. ಆಶ್ರಯ ಕೊಟ್ಟವರು ಚಿತ್ರಹಿಂಸೆ ಅನುಭವಿಸಬೇಕಾಗುತ್ತಿತ್ತು. ಆಶ್ರಯದಾತರನ್ನು ಅಮಾನುಷ ರೀತಿಯಲ್ಲಿ ಇಂಗ್ಲಿಷರು ಹಿಂಸಿಸುತ್ತಿದ್ದರು.

ಇದೆಲ್ಲದರ ಅರಿವಿದ್ದರೂ ಕ್ರಾಂತಿಕಾರಿಗಳಿಗೆ ಸಹಾಯ ಮಾಡಿ, ಆಶ್ರಯನೀಡಿ, ಅಮಾನುಷವಾದ ಚಿತ್ರಹಿಂಸೆಯನ್ನು ಎದುರಿಸಿ, ಕ್ರಾಂತಿಕಾರಿಗಳ ಗುಟ್ಟನ್ನು ಬಿಟ್ಟುಕೊಡದ ವೀರ ಮಹಿಳೆ ನಾನಿಬಾಲಾ ದೇವಿ.

ಬಾಲವಿಧವೆ

ನಾನಿಬಾಲಾ ಜನಿಸಿದ್ದು ೧೮೮೮ರಲ್ಲಿ. ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿರುವ ಬಳ್ಳಿ ಎಂಬ ಗ್ರಾಮದಲ್ಲಿ. ತಂದೆ ಸೂರ‍್ಯಕಾಂತ ಬ್ಯಾನರ್ಜಿ, ತಾಯಿ ಗಿರಿಬಾಲಾ ದೇವಿ. ಬ್ಯಾನರ್ಜಿಯವರದು ಮಧ್ಯಮ ವರ್ಗದ ಸಂಪ್ರದಾಯನಿಷ್ಠ ಮನೆತನ.

ಬಾಲ್ಯವಿವಾಹವು ಆಗಿನ ಸಮಾಜದಲ್ಲಿ ರೂಢಿಯಲ್ಲಿದ್ದ ಪದ್ಧತಿ. ಹೆಣ್ಣುಮಕ್ಕಳಿಗೆ ಆರು-ಏಳು ವಯಸ್ಸಿನಲ್ಲಿಯೇ ಮದುವೆ ನಡೆಸಬೇಕಾಗಿದ್ದಿತು. ಇಲ್ಲದಿದ್ದರೆ ಜನಗಳ ಸಮಾಜದ ಅವಹೇಳನಕ್ಕೆ ಗುರಿಯಾಗಬೇಕಾಗಿದ್ದಿತು. ಬ್ಯಾನರ್ಜಿಯವ ರಾದರೋ ಸಂಪ್ರದಾಯವಂತರ ಮನೆಯಿಂದ ಬಂದವರು. ಪರಿಣಾಮ, ನಾನಿಬಾಲಾ ತನ್ನ ಹನ್ನೊಂದನೆಯ ವಯಸ್ಸಿನಲ್ಲಿಯೇ ಮದುವೆಯಾಗಬೇಕಾಯಿತು, ಕೇವಲ ಐದು ವರ್ಷಗಳು ಕಳೆಯುವುದರಲ್ಲೇ ನಾನಿಬಾಲಾ ಗಂಡನನ್ನು ಕಳೆದುಕೊಂಡಳು. ಹದಿನಾರನೆಯ ವಯಸ್ಸಿನಲ್ಲಿಯೇ ನಾನಿಬಾಲಾಳ ಸಂಸಾರ ಜೀವನ ಮುಕ್ತಾಯವಾಯಿತು. ಪ್ರಪಂಚ ಎಂದರೆ ಏನು, ಸಂಸಾರ ಎಂದರೆ ಏನು ಎಂದು ತಿಳಿದುಕೊಳ್ಳುವ ವಯಸ್ಸಿನಲ್ಲೇ ವಿಧವೆಯಾದಳು.

ಗಂಡ ತೀರಿಹೋದ ಮೇಲೆ ನಾನಿಬಾಲಾ ಮತ್ತೆ ತಂದೆಯ ಮನೆಗೆ ಹಿಂತಿರುಗಿದಳು. ಅವಳ ದುರದೃಷ್ಟ,ಅನಂತರ ಕೆಲವೇ ದಿನಗಳಲ್ಲಿ ನಾನಿಬಾಲಾ ತಾಯಿಯನ್ನು ಕಳೆದುಕೊಂಡಳು.

ವಿದ್ಯಾಭ್ಯಾಸ ಮುಂದುವರಿಸಲು ಪ್ರಯತ್ನ

ಚಿಕ್ಕ ವಯಸ್ಸಿನಿಂದ ವಿದ್ಯೆಯನ್ನು ಕಲಿಯಬೇಕೆಂಬ ಆಸೆ ನಾನಿಬಾಲಾಳಿಗಿತ್ತು. ಮದುವೆಗೆ ಮೊದಲು ಪ್ರಥಮ ಅಕ್ಷರಾಭ್ಯಾಸ ಮನೆಯಲ್ಲಿಯೇ ಆಗಿದ್ದಿತು. ಮದುವೆಯಿಂದಾಗಿ ಅವಳ ವಿದ್ಯಾಭ್ಯಾಸ ಕನಸಾಯಿತು. ಸಂಸಾರ ಬಂಧನದಿಂದ ಮುಕ್ತಳಾದ ಕೂಡಲೇ ವಿದ್ಯಾಭ್ಯಾಸ ಮುಂದುವರಿಸುವ ಆಲೋಚನೆ ಪ್ರಾರಂಭವಾಯಿತು. ಆದರೆ ಆಗಿನ ಕಾಲದಲ್ಲಿ ಸ್ತ್ರೀಯರು ವಿದ್ಯಾಭ್ಯಾಸ ಮಾಡುವುದಕ್ಕೆ ಅವಕಾಶವೇ ಇರಲಿಲ್ಲ. ಇದರಿಂದ ಎದೆಗುಂದಲಿಲ್ಲ ನಾನಿಬಾಲಾ. ತಂದೆ ಬ್ಯಾನರ್ಜಿಯವರೇ ಅನುಮತಿಯಿತ್ತ ಮೇಲೆ ಇನ್ನೇನು?

ಅರಿಯದಾಹ ಎಂಬ ಸ್ಥಳದಲ್ಲಿ ಕ್ರಿಶ್ಚಿಯನ್ನರು ಒಂದು ಮಿಶನರಿ ಶಾಲೆಯನ್ನು ನಡೆಸುತ್ತಿದ್ದರು. ಬಳಿಯಲ್ಲಿಯೇ ಹರಿಯುತ್ತಿರುವ ಗಂಗಾನದಿಯ ಕಲಕಲ ನಿನಾದ. ಶಾಲೆಗೆ ತಕ್ಕ ಪ್ರಶಾಂತವಾದ ವಾತಾವರಣ. ಪ್ರಾಥಮಿಕ ಇಂಗ್ಲಿಷ್ ವಿದ್ಯಾಭ್ಯಾಸಕ್ಕೆ ಅಲ್ಲಿ ನಾನಿಬಾಲಾ ಸೇರಿದಳು. ಆದರೆ ಆ ಮಿಶನರಿ ಶಾಲೆಯ ಮುಖ್ಯಸ್ಥರ ನಡವಳಿಕೆ ನಾನಿಬಾಲಾಳಿಗೆ ಸರಿತೋರಲಿಲ್ಲ. ಆ ಶಾಲೆಯಲ್ಲಿ ಕ್ರಿಶ್ಚಿಯನ್ನರಲ್ಲದ ವಿದ್ಯಾರ್ಥಿಗಳಿಗೇ ಕೆಲವು ನಿಯಮಗಳು, ಕ್ರಿಶ್ಚಿಯನ್ನರಿಗೇ ಕೆಲವು ನಿಯಮಗಳು. ಶಾಲೆಯೆಂದ ಮೇಲೆ ಎಲ್ಲ ವಿದ್ಯಾರ್ಥಿಗಳೂ ಒಂದೇ. ನಾನಿಬಾಲಾಳಿಗೆ ಈ ತಾರತಮ್ಯ ಸರಿತೋರಲಿಲ್ಲ. ಎಲ್ಲರಿಗೂ ಒಂದೇ ನಿಯಮ, ಒಂದೇ ವಿಧವಾದ ನಿರ್ಬಂಧಗಳಿರಬೇಕೆಂದು ನಾನಿಬಾಲಾ ವಾದಿಸಿದಳು. ತಮ್ಮ ಶಾಲೆಯ ನಿಯಮಗಳನ್ನು ಪ್ರಶ್ನಿಸುವ ಹಕ್ಕು ಯಾರಿಗಿದೆ? ಅಂತಹುದರಲ್ಲಿ ನಾನಿಬಾಲಾ ಪ್ರತಿಭಟಿಸಿದುದು ತಪ್ಪೆಂದು ಶಾಲೆಯ ಮುಖ್ಯಸ್ಥರಿಗೆ ತೋರಿತು. ಇದರ ಫಲ-ನಾನಿಬಾಲಾ ಶಾಲೆಯನ್ನು ಬಿಡಬೇಕಾಯಿತು. ಶಾಲೆಯ ಅಧಿಕಾರಿಗಳು ಅವಳ ತಂದೆಯನ್ನು ಕರೆಸಿ ನಾನಿಬಾಲಾ ಶಾಲೆಯನ್ನು ಬಿಡಬೇಕೆಂದು ಹೇಳಿದರು. ಅಲ್ಲಿಗೆ ನಾನಿಬಾಲಾಳ ಶಾಲಾ ವಿದ್ಯಾಭ್ಯಾಸ ಮುಕ್ತಾಯವಾಯಿತು.

ಅಮರೇಂದ್ರನ ಪ್ರಭಾವ

ಮಿಶನರಿ ಶಾಲೆಯನ್ನು ಬಿಟ್ಟ ನಾನಿಬಾಲಾಳಿಗೆ ಈಗ  ಹೊರಗಿನ ಪ್ರಪಂಚದ ಅರಿವು ಸ್ವಲ್ಪಮಟ್ಟಿಗೆ ಆಗಿತ್ತು. ದೇಶಕ್ಕಾಗಿ ಏನನ್ನಾದರೂ ಮಾಡುವ ಹಂಬಲ ಅವಳಲ್ಲಿ ಉಂಟಾಗಿತ್ತು. ದೂರದ ನೆಂಟನಾದ ಅಮರೇಂದ್ರನಾಥ ಚಟ್ಟೋಪಾಧ್ಯಾಯನ ಬಳಿ ಆಶ್ರಯ ಬೇಡಿದಳು, ಆಶ್ರಯ ಸಿಕ್ಕಿತು.

ಅಮರೇಂದ್ರ ‘ಯುಗಾಂತರ’ ಪಕ್ಷದ ಕ್ರಾಂತಿಕಾರೀ ಮುಖಂಡರಲ್ಲೊಬ್ಬ. ನಾನಿಬಾಲಾಳಲ್ಲಿ ಚಿಗುರೊಡೆದಿದ್ದ ಆದರ್ಶಪ್ರಿಯತೆಗೆ ನೀರೆರೆದು ಪೋಷಿಸಿದವನು. ಅಮರೇಂದ್ರ ಸ್ವಾಮಿವಿವೇಕಾನಂದರ ಭಾಷಣಗಳ ಪ್ರತಿಯನ್ನು ಓದಲೆಂದು ನಾನಿಬಾಲಳಿಗೆ ಒದಗಿಸಿದ. ಇತರ ಹಲವು ಪುಸ್ತಕಗಳನ್ನೂ ತಂದುಕೊಟ್ಟ. ಒಂದು, ರಾಷ್ಟ್ರಪ್ರೇಮವನ್ನು ಉಕ್ಕಿಸುವ ಬಂಕಿಮಚಂದ್ರ ಚಟ್ಟೋಪಾಧ್ಯಾಯರ ಕಾದಂಬರಿಗಳು. ಇನ್ನೊಂದು, ಫ್ರಾನ್ಸ್ ದೇಶವನ್ನು ಇಂಗ್ಲಿಷರು ಆಕ್ರಮಿಸಿದಾಗ ಹಳ್ಳಿಯ ಹುಡುಗಿಯಾದರೂ ಸೈನ್ಯದ ನಾಯಕತ್ವವನ್ನು ವಹಿಸಿಕೊಂಡು ಇಂಗ್ಲಿಷರನ್ನು ಸೋಲಿಸಿ ಕಡೆಗೆ ಅವರ ಕೈಗೆ ಸಿಕ್ಕಿ ಅವರು ಜೀವಂತವಾಗಿ ಅವಳನ್ನು ಸುಟ್ಟಾಗ ಸಾವನ್ನಪ್ಪಿದ ಧೀರ ಫ್ರೆಂಚ್ ತರುಣಿ ಜೋನ್ ಆಫ್ ಆರ್ಕಳ ಜೀವನ ಚರಿತ್ರೆ. ಮತ್ತೊಂದು ರಾಣಿ ಝಾನ್ಸಿಬಾಯಿಯ ಸ್ವಾತಂತ್ರ್ಯ ಪ್ರಿಯತೆಯನ್ನು ಸಾರುವ ಚರಿತ್ರೆ. ಇಂತಹ ಹಲವು ಪುಸ್ತಕಗಳನ್ನು ನಾನಿಬಾಲಾ ಓದಿದಳು. ಓದಿದ್ದನ್ನು ಅರಗಿಸಿಕೊಳ್ಳಲು ಪ್ರಯತ್ನ ಪ್ರಾರಂಭವಾಯಿತು.

ಅರವಿಂದ ಘೋಷರು ಭಾರತದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರರು. ‘ವಂದೇ ಮಾತರಂ’ ಪತ್ರಿಕೆಯಲ್ಲಿ ಪ್ರಕಟವಾಗುತ್ತಿದ್ದ ಅವರ ಲೇಖನಗಳ ಸಾರಾಂಶವನ್ನು ಅಮರೇಂದ್ರ ನಾನಿಬಾಲಾಳಿಗೆ ವಿವರಿಸುತ್ತಿದ್ದ. ‘ಯುಗಾಂತರ’ ಪತ್ರಿಕೆಯ ಪರಿಚಯವೂ ನಾನಿಬಾಲಾಳಿಗೆ ಆಯಿತು. ಅಮರೇಂದ್ರನು ಆಕೆಗೆ ಇತರ ದೇಶಭಕ್ತರ ಸಾಹಸಮಯವಾದ ಜೀವನ ಪರಿಚಯ ಮಾಡಿಕೊಟ್ಟ. ದೇಶಕ್ಕಾಗಿ ಆತ್ಮಾರ್ಪಣೆ ಮಾಡಿದ ಚಾಪೇಕರ ಸಹೋದರರು, ಪ್ರಫುಲ್ಲಚಾಕಿ, ಖುದೀರಾಮಬೋಸ್, ಕನ್ಹೆ ಲಾಲ್‌ದತ್ತ, ಸತ್ಯೇನ್‌ಬೋಸ್, ಮದನಲಾಲ್ ಧಿಂಗ್ರ, ವಾಂಚಿಅಯ್ಯರ್‌ರವರ ಸಾಹಸಗಳನ್ನು ಅವರು ಕೈಗೊಂಡ ಕಾರ್ಯಗಳನ್ನು ನಾನಿಬಾಲಾ ಅಮರೇಂದ್ರನಿಂದ ತಿಳಿದುಕೊಂಡಳು.

ಎಲ್ಲಕ್ಕಿಂತ ಮುಖ್ಯವಾದದ್ದು ಎಂದರೆ ಅಮರೇಂದ್ರ ನಾನಿಬಾಲಾಳಿಗೆ ಭಗವದ್ಗೀತೆಯ ಸಾರವನ್ನು ವಿವರಿಸಿ ಹೇಳಿದ್ದು. ಭಗವದ್ಗೀತೆಯನ್ನು ಓದಿದುದರಿಂದ ನಾನಿಬಾಲಾಳು ಕಲಿತದ್ದು-ನಿರ್ಭಯತೆ, ನಿಸ್ವಾರ್ಥ ಮನೋಭಾವ, ದೀನ ದಲಿತರ ಸೇವೆ ಮಾಡುವುದು, ದೇಶಸೇವೆ ಮಾಡುವುದು. ರಾಮಾಯಣ, ಮಹಾಭಾರತಗಳನ್ನು ಓದಿ ಆತ್ಮತ್ಯಾಗದ ಮಹತ್ವವನ್ನು ಅರಿತಳು. ಹೀಗಾಗಿ ನಾನಿಬಾಲಾಳಲ್ಲಿ ಆದರ್ಶಪ್ರಿಯತೆ ಹೆಮ್ಮರವಾಗಿ ಬೆಳೆದುದರಲ್ಲಿ ಏನಾಶ್ಚರ್ಯ? ಅವಳ ವ್ಯಕ್ತಿತ್ವ ಅರಳಿದುದೂ ಸಹಜವಾಗಿಯೇ ಇತ್ತು!

ನಾನಿಬಾಲಾಳ ಕಾರ್ಯಾಚರಣೆಗೆ ತಕ್ಕ ವಾತಾವರಣವನ್ನು ಅಮರೇಂದ್ರ ನಿರ್ಮಿಸಿದ. ಕ್ರಾಂತಿಕಾರಿಗಳ ಧೈರ್ಯ ಮತ್ತು ಆದರ್ಶಗಳಿಂದ ನಾನಿಬಾಲಾ ಪ್ರಭಾವಿತಳಾದಳು.

ಈಗಾಗಲೆ ನಾನಿಬಾಲಾ ಸಂಸಾರ ಬಂಧನವನ್ನು ಹರಿದೊಗೆದಿದ್ದಳು. ಹೀಗೆ ಸುಮಾರು ಇಪ್ಪತ್ತೆರಡು ವರ್ಷ ವಯಸ್ಸಾಗುವ ಹೊತ್ತಿಗೆ, ನಾನಿಬಾಲಾಗೆ ಶಾಲೆಯಲ್ಲಿ ವಿದ್ಯಾಭ್ಯಾಸ ಹೆಚ್ಚು ಆಗಿಲ್ಲದಿದ್ದರೂ ಅವಳ ವ್ಯಕ್ತಿತ್ವ ಪರಿಪಕ್ವವಾಗಿತ್ತು. ತನ್ನ ಬಾಳನ್ನೆಲ್ಲ ಒಂದು ದೊಡ್ಡ ಗುರಿಗೆ ಸಮರ್ಪಿಸಿಕೊಳ್ಳಲು ಸಿದ್ಧಳಾಗಿದ್ದಳು. ಅಜ್ಞಾತರಾಗಿದ್ದ ಕ್ರಾಂತಿಕಾರಿಗಳ ಸೇವೆಗೆ ಕಂಕಣಬದ್ಧಳಾದಳು.

ಇಂತಹ ಅಜ್ಞಾತ ಕ್ರಾಂತಿಕಾರಿಗಳಲ್ಲಿ ಜತೀಂದ್ರನಾಥ ಮುಖರ್ಜಿ ಎನ್ನುವ ತರುಣನೊಬ್ಬ.

ಭಾರತದ ಕ್ರಾಂತಿಕಾರಿಗಳು

ಜತೀಂದ್ರನಾಥ ಮುಖರ್ಜಿ ಯುಗಾಂತರ ಪಕ್ಷದ ಮುಖಂಡ. ಕ್ರಾಂತಿಕಾರಿಗಳಿಗೆ ಮುಖ್ಯವಾಗಿ ಬೇಕಾಗಿದ್ದುದು ಶಸ್ತ್ರಾಸ್ತ್ರ ಹಾಗೂ ಹಣ. ದಾಸ್ಯದಲ್ಲಿದ್ದ ಭಾರತದಲ್ಲಿ ಇಂತಹ ಕೆಲಸಕ್ಕೆ ಹಣ ಸಿಕ್ಕುವುದು ಸುಲಭವಾಗಿರಲಿಲ್ಲ. ಬ್ರಿಟನ್ ಇಡೀ ಪ್ರಪಂಚದಲ್ಲೆಲ್ಲ ತನ್ನ ಪ್ರಭಾವವನ್ನು ಬೆಳೆಸಿಕೊಳ್ಳುತ್ತಿತ್ತು. ಆಗ ಬ್ರಿಟನ್‌ಗೆ ವಿರೋಧವಾಗಿ ಎದ್ದು ನಿಂತ ರಾಜ್ಯಗಳಲ್ಲೊಂದು ಜರ್ಮನಿ. ಜರ್ಮನರು ೧೯೧೧ರಲ್ಲಿ ಇಂಗ್ಲಿಷರೊಂದಿಗೆ ಯುದ್ಧ ಹೂಡಬಹುದೆಂಬ ವದಂತಿ ಹಬ್ಬಿತು.

ಬ್ರಿಟಿಷರ ಆಡಳಿತದಿಂದ ಮುಕ್ತರಾಗಲು ಭಾರತೀಯ ಕ್ರಾಂತಿಕಾರಿಗಳು ಜರ್ಮನರ ನೆರವು ಪಡೆಯಲು ಯೋಚಿಸಿದರು. ೧೯೧೪ರಲ್ಲಿ ಯುದ್ಧವು ಪ್ರಾರಂಭವಾಯಿತು. ಇದೇ ಪ್ರಪಂಚದ ಮೊದಲ ಮಹಾಯುದ್ಧ.

ಭಾರತದ ಕ್ರಾಂತಿಕಾರಿಗಳು ಈ ಸಂದರ್ಭವನ್ನು ಬಳಸಿಕೊಂಡು ತಮ್ಮ ಸ್ವಾತಂತ್ರ್ಯದ ಹೋರಾಟದಲ್ಲಿ ಜರ್ಮನಿಯ ಬೆಂಬಲ ಪಡೆಯಲು ಪ್ರಯತ್ನ ಮಾಡಿದರು. ಆಗಲೇ ಹಲವು ವರ್ಷಗಳಿಂದ ಭಾರತೀಯ ಸ್ವಾತಂತ್ರ್ಯವೀರರು ಜರ್ಮನಿಯಲ್ಲಿ ಕೆಲಸ ಮಾಡುತ್ತಿದ್ದರು. ಇವರ ಮೂಲಕ ಜತೀಂದ್ರನಾಥ ಮೊದಲಾದವರು ಜರ್ಮನಿಯ ಸರ್ಕಾರದೊಂದಿಗೆ ಸಂಪರ್ಕ ಬೆಳೆಸಿದರು. ಜರ್ಮನಿಯು ಭಾರತಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು ಹಾಗೂ ಹಣವನ್ನು ಒದಗಿಸಲು ಒಪ್ಪಿತು. ಗೆರಿಲ್ಲಾ ಕಾಳಗಕ್ಕಾಗಿ ತರಬೇತಿ ನೀಡಲು ಜರ್ಮನರು ಮುಂದೆ ಬಂದರು. ಭಾರತದ ಸ್ವಾತಂತ್ರ್ಯವೀರರಿಗೂ ಜರ್ಮನಿಗೂ  ಯುಗಾಂತರ ಪಕ್ಷದ ಮುಖಂಡನಾದ ಜತೀಂದ್ರನಾಥ ಮುಖರ್ಜಿಯ ನೇತೃತ್ವದಲ್ಲಿ ಒಪ್ಪಂದವಾಯಿತು.

ಬಾರದ ಶಸ್ತ್ರಾಸ್ತ್ರಗಳು

ಭಾರತೀಯರಿಗೆ ನೆರವಾಗಲು ಅನೇಕ ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಜರ್ಮನ್ ಹಡಗು ‘ಮಾವರಿಕ್’ ಅಮೆರಿಕದ ತೀರದಿಂದ ಹೊರಟಿತು. ಇದೇ ಸಮಯದಲ್ಲಿ ಅಮೆರಿಕವನ್ನು ತನ್ನ ಕಡೆಗೆ ಒಲಿಸಿಕೊಳ್ಳಲು ಬ್ರಿಟನ್ ಪ್ರಯತ್ನಿಸಿತು. ಪ್ರಯತ್ನದಲ್ಲಿ ಜಯ ದೊರೆಯಿತು. ಪರಿಣಾಮ, ‘ಮಾವರಿಕ್’ ಭಾರತವನ್ನು ತಲುಪಲೇ ಇಲ್ಲ. ಜಾವಾದಲ್ಲಿರುವ ಬಟಾವಿಯಾ ಎಂಬ ಸ್ಥಳದಲ್ಲಿ ಹಡಗನ್ನು ತಡೆದರು. ಜಾವಾದಲ್ಲಿ ವಾಸವಾಗಿದ್ದ ಡಚ್ ಜನಾಂಗದವರು ಯುದ್ಧಕ್ಕೆ ಸೇರದೆ ತಟಸ್ಥರಾಗಿದ್ದರು. ಅವರು ‘ಮಾವರಿಕ್’ ಹಡಗು ಭಾರತವನ್ನು ತಲುಪಲು ಅಗತ್ಯವಾದ ಸಹಾಯವನ್ನು ಮಾಡಲಿಲ್ಲ, ಕಾರಣ ಅವರಿಗೂ ಇಂಗ್ಲಿಷರ ಹೆದರಿಕೆಯಿದ್ದಿತು.

ಇಷ್ಟೇ ಅಲ್ಲದೆ ಅಮೆರಿಕದಲ್ಲಿ ಸಿಕ್ಕಿದ ಸೂಚನೆಗಳ ಫಲವಾಗಿ ಇಂಗ್ಲಿಷರು, ಭಾರತದಲ್ಲಿ ಅನೇಕ ಕ್ರಾಂತಿಕಾರಿಗಳನ್ನು ಬಂಧಿಸಿದರು. ಈ ರೀತಿ ಬಂಧನಕ್ಕೊಳಗಾದವರಲ್ಲಿ ಯುಗಾಂತರ ಪಕ್ಷದ ಪ್ರಮುಖರೂ ಇದ್ದರು. ಅನೇಕರು ಮುಂಜಾಗರೂಕತೆ ವಹಿಸಿ ತಲೆಮರೆಸಿಕೊಂಡರು.

‘ಮಾವರಿಕ್’  ಹಡಗು ಭಾರತವನ್ನು ತಲುಪದಿದ್ದಾಗ ಜತೀಂದ್ರನಾಥ ಮುಖರ್ಜಿಗೆ ನಿರಾಸೆಯಾಯಿತು. ಆದರೂ ಅವನು ಎದೆಗುಂದಲಿಲ್ಲ. ಅವನು ಹೇಳಿದ, ‘‘ನಮ್ಮ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಬೇಕಾದರೆ ಅದು ಹೊರಗಿನ ಸಹಾಯದಿಂದ ಸಿಕ್ಕುವುದಿಲ್ಲ. ನಾವೇ ಅದಕ್ಕಾಗಿ ಹೋರಾಡಬೇಕು, ಬಲಿದಾನಕ್ಕೆ ಸಿದ್ಧರಾಗಬೇಕು’’.

ಪೊಲೀಸರ ಬೇಟೆ

ಕ್ರಾಂತಿಕಾರಿಗಳಿಗೆ ಅಗತ್ಯವಾಗಿದ್ದ ಶಸ್ತ್ರಾಸ್ತ್ರಗಳು ಭಾರತದಲ್ಲೇ ಇದ್ದವು. ಅದನ್ನು ಇಂಗ್ಲಿಷರಿಂದ ಕಸಿದುಕೊಳ್ಳಲು ಗಂಡೆದೆಯವರು ಬೇಕಿತ್ತು!

ಅಮೆರಿಕದವರು ನೀಡಿದ ಸಹಾಯದಿಂದ ಬ್ರಿಟಿಷ್ ಸರ್ಕಾರಕ್ಕೆ ಕ್ರಾಂತಿಕಾರಿಗಳು ಕಲ್ಕತ್ತೆಯಲ್ಲಿ ವ್ಯವಸ್ಥೆ ಮಾಡಿದ್ದ ಕೇಂದ್ರಗಳ ಸುಳಿವು ಸಿಕ್ಕಿತು. ಕ್ರಾಂತಿಕಾರಿಗಳನ್ನು ಬಂಧಿಸುವುದೂ ಸುಲಭವಾಯಿತು. ಕಲ್ಕತ್ತೆಯಲ್ಲಿದ್ದ ಕೇಂದ್ರಗಳಲ್ಲಿ  ‘ಶ್ರಮಜೀವಿ ಸಮವಾಯ’ ಚಟುವಟಿಕೆಯ ಕೇಂದ್ರವಾಗಿತ್ತು. ಅದನ್ನು ನಡೆಸುತ್ತಿದ್ದವನು ನಾನಿಬಾಲಾಳ ನಂಟ ಅಮರೇಂದ್ರ. ಬ್ರಿಟಷ್ ಸರಕಾರದ ಪೊಲೀಸರು ಆ ಕಚೇರಿಯ ಮೇಲೆ ದಾಳಿ ಮಾಡಿದರು. ಪೊಲೀಸರು ಅಲ್ಲಿ ದಾಳಿ ನಡೆಸುವ ವೇಳೆಗೆ ಅಮರೇಂದ್ರ ತಲೆಮರೆಸಿಕೊಂಡಿದ್ದ. ಆದರೆ ಅವನ ಇಬ್ಬರು ಅನುಯಾಯಿಗಳು ಸಿಕ್ಕಿಬಿದ್ದರು.

‘ಹ್ಯಾರಿ ಅಂಡ್ ಸನ್ಸ್’ ಎನ್ನುವುದು ಇನ್ನೊಂದು ಚಟುವಟಿಕೆಯ ಕೇಂದ್ರ. ಜರ್ಮನಿಯಿಂದ ಸಿಕ್ಕಿದ್ದ ಧನಸಹಾಯದಿಂದ ಈ ಕೇಂದ್ರವು ನಡೆಯುತ್ತಿತ್ತು. ಬಾಲಸೋರ್ ಎಂಬ ಸ್ಥಳದಲ್ಲಿ ಈ ಕಂಪೆನಿಯ ಶಾಖೆಯೊಂದು ‘ಯೂನಿವರ್ಸಲ್ ಎಂಪೋರಿಯಂ’ ಎನ್ನುವ ಹೆಸರಿನಲ್ಲಿ ನಡೆಯುತ್ತಿತ್ತು. ಹೊರತೋರಿಕೆಗೆ ಇದೊಂದು ವ್ಯಾಪಾರ ಸ್ಥಳ. ನಿಜವಾಗಿ ಇದು ಕ್ರಾಂತಿಕಾರಿಗಳ ಚಟುವಟಿಕೆಯ ಕೇಂದ್ರ. ಈ ಶಾಖೆಯ ಮುಖಾಂತರ ಜತೀಂದ್ರನಾಥನು ಹೊರಗಿನ ಪ್ರಪಂಚದ ಸಂಪರ್ಕವನ್ನು ಇರಿಸಿಕೊಂಡಿದ್ದನು. ಹ್ಯಾರಿ ಅಂಡ್ ಸನ್ಸ್ ಮೇಲೆ ದಾಳಿ ಮಾಡಿದಾಗ ಸಿಕ್ಕ ಕಾಗದ ಪತ್ರಗಳಿಂದ ಪೊಲೀಸರಿಗೆ ಇದರ ವಿಷಯ ತಿಳಿಯಿತು.

ಒಂದಾದ ಮೇಲೊಂದು ಕೇಂದ್ರಗಳ ಮೇಲೆ ಬ್ರಿಟಿಷರ ದಾಳಿ ನಡೆಯಿತು. ಕ್ರಾಂತಿಕಾರಿಗಳಿಗಿದ್ದ ಅಲ್ಪಸ್ವಲ್ಪ ಸಹಾಯವನ್ನೂ ಕಸಿದುಕೊಂಡರು.

ಯುಗಾಂತರ ಪಕ್ಷದ ನಾಯಕರು ತಲೆಮರೆಸಿಕೊಂಡಿ ದ್ದರಷ್ಟೆ. ಅವರಲ್ಲಿ ಜತೀಂದ್ರನಾಥ, ಅಮರೇಂದ್ರ, ಜಾದೂಗೋಪಾಲ್, ಅತುಲಕೃಷ್ಣ ಮುಖ್ಯರಾದವರು. ಇವರನ್ನು ಹಿಡಿದುಕೊಟ್ಟವರಿಗೆ ಭಾರಿ ಮೊತ್ತದ ಬಹುಮಾನವನ್ನು ನೀಡಲಾಗುವುದೆಂದು ಬ್ರಿಟಿಷ್ ಸರಕಾರ ಪ್ರಕಟಿಸಿತು. ಕ್ರಾಂತಿಕಾರಿಗಳಿಗೆ ಸಹಾಯ ಮಾಡುವವರು, ಆಶ್ರಯ ನೀಡುವವರು ಬಹು ಎಚ್ಚರಿಕೆಯಿಂದ ಇರಬೇಕಾಗಿತ್ತು. ಆಶ್ರಯನೀಡಿದರೆಂದರೆ ಆಶ್ರಯದಾತರು ದೊಡ್ಡ ಗಂಡಾಂತರವನ್ನು ಎದುರಿಸಬೇಕಾಗುತ್ತಿತ್ತು.

ಆದರೂ ನಾನಿಬಾಲಾ ಕ್ರಾಂತಿಕಾರರಿಗೆ ರಕ್ಷಣೆ ನೀಡುವುದಕ್ಕೆ ಮುಂದೆ ಬಂದರು. ಅವರು ಬ್ರಿಟಿಷ್ ಸರಕಾರಕ್ಕೆ ಎಳ್ಳಷ್ಟೂ ಹೆದರಲಿಲ್ಲ. ನಾನಿಬಾಲಾ ಅವರಂತೆಯೇ ಇನ್ನೂ ಅನೇಕರು ಕ್ರಾಂತಿಕಾರಿಗಳ ವಿಷಯವಾಗಿ ಸಹಾನುಭೂತಿ ತೋರುವವರಿದ್ದರು. ಅಮರೇಂದ್ರನ ಶ್ರೀಮಂತ ಗೆಳೆಯನೊಬ್ಬನಿಗೆ ಕ್ರಾಂತಿಕಾರಿಗಳ ವಿಷಯದಲ್ಲಿ ಸಹಾನುಭೂತಿ ಇತ್ತು. ಅವರಿಗೆ ಸಹಾಯ ಮಾಡಲು ಅವನು ಸಿದ್ಧನಾಗಿದ್ದ.

ರಿಶ್ರಾದಲ್ಲಿ

ಈ ಶ್ರೀಮಂತ ಗೆಳೆಯನಿಗೆ ರಿಶ್ರಾ ಎಂಬ ಸ್ಥಳದಲ್ಲಿ ಸೊಗಸಾದ ಉದ್ಯಾನವನವೊಂದಿತ್ತು. ರಿಶ್ರಾ ಕಲ್ಕತ್ತೆಯಿಂದ ಇಪ್ಪತ್ತು ಕಿಲೋಮೀಟರ್‌ಗಳ ದೂರದಲ್ಲಿತ್ತು. ರಿಶ್ರಾದ ಉದ್ಯಾನದ ಮಧ್ಯೆ ಸೊಗಸಾದ ಒಂದು ಮನೆ. ಉದ್ಯಾನವನಕ್ಕೆ ಸಮೀಪದಲ್ಲಿಯೇ ಗಂಗಾನದಿಯು ಹರಿಯುತ್ತಿತ್ತು. ಉದ್ಯಾನವು ವಿಧವಿಧವಾದ ಹೂಗಿಡಗಳಿಂದ ತುಂಬಿ ಅದಕ್ಕೊಂದು ವಿಧವಾದ ಕಳೆ ಬಂದಿತ್ತು. ಅಲ್ಲಿಗೆ ಕಾಲಿಟ್ಟರೆ ತಪೋವನಕ್ಕೆ ಕಾಲಿಟ್ಟಂತಿರುತ್ತಿತ್ತು. ಅಷ್ಟು ಪ್ರಶಾಂತವಾದ ವಾತಾವರಣ. ಹೊರನೋಟಕ್ಕೆ ಅಲ್ಲಿ ಕ್ರಾಂತಿಕಾರಿಗಳಿರುವುದು ಅಸಾಧ್ಯ ಎನ್ನುವಂತೆ ಇತ್ತು. ಈ ಮನೆಯನ್ನು ಅಮರೇಂದ್ರನ ಕ್ರಾಂತಿಕಾರೀ ಚಟುವಟಿಕೆಗಳಿಗೆಂದು ಅವನ ಶ್ರೀಮಂತ ಗೆಳೆಯ ಬಿಟ್ಟುಕೊಟ್ಟ.

ಆದರೆ ಬ್ರಿಟಿಷ್ ಸರಕಾರದ ಎದುರಿನಲ್ಲಿ ಕ್ರಾಂತಿಕಾರಿ ತರುಣರು ನಾಟಕವನ್ನು ಆಡಬೇಕಾಗಿತ್ತು. ಗುಪ್ತ ಪೊಲೀಸರು ಎಡೆಬಿಡದೆ ಕ್ರಾಂತಿಕಾರಿಗಳ ಶೋಧ ನಡೆಸಿದ್ದರು. ದೂರದ ಉದ್ಯಾನದ ಮನೆಯಲ್ಲಿ ಒಬ್ಬ ತರುಣ ಮಾತ್ರ ವಾಸಿಸುತ್ತಿದ್ದರೆ ಪೊಲೀಸರಿಗೆ ಸಂಶಯಬರುತ್ತಿತ್ತು. ಆ ಮನೆಯಲ್ಲಿ ಸಂಸಾರವಿದ್ದರೆ! ಸಂಸಾರಿಗಳು ಇರುವಂತೆ ಹೊರಜಗತ್ತಿಗೆ ತೋರಿಸಲು ಅಮರೇಂದ್ರ ಒಂದು ಉಪಾಯ ಮಾಡಿದ. ನಾನಿಬಾಲಾ ಅವರಿಗೆ ವಿಷಯವನ್ನು ವಿವರಿಸಿದ. ತನ್ನೊಡನೆ ರಿಶ್ರಾದಲ್ಲಿ ಇರಲು ಕೇಳಿದ. ರಿಶ್ರಾಗೆ ಬರಲು ನಾನಿಬಾಲಾ ಸ್ವಲ್ಪವೂ ಹಿಂಜರಿಯದೇ ಒಪ್ಪಿದರು.

ಎಲ್ಲಿದೆ ಪಿಸ್ತೂಲು?

ಆ ಶ್ರಮಜೀವಿ ಸಮನಾಯವನ್ನು ಪೊಲೀಸರು ಶೋಧಿಸಿದಾಗ ಅಮರೇಂದ್ರನ ಅನುಯಾಯಿಗಳು ಸಿಕ್ಕಿಬಿದ್ದರಷ್ಟೆ. ಅವರಲ್ಲಿ ರಾಮಚಂದ್ರ ಮಜುಂದಾರನೂ ಒಬ್ಬ. ಅಮರೇಂದ್ರನು ಹೇಗೋ ತಪ್ಪಿಸಿಕೊಂಡಿದ್ದ. ಕ್ರಾಂತಿಕಾರಿಗಳು ಉಪಯೋಗಿಸುತ್ತಿದ್ದ ಪಿಸ್ತೂಲುಗಳನ್ನು ಸುರಕ್ಷಿತವಾದ ಸ್ಥಳದಲ್ಲಿಡುವುದು ರಾಮಚಂದ್ರನ ಕೆಲಸವಾಗಿತ್ತು. ವಿಪತ್ತಿನ ಸಮಯದಲ್ಲಿ ಹೊರತು ಬೇರೆ ಯಾವಾಗಲೂ ಪಿಸ್ತೂಲುಗಳು ರಾಮಚಂದ್ರನ ಉಸ್ತುವಾರಿಯಲ್ಲಿ ಸುರಕ್ಷಿತವಾಗಿ ಇರುತ್ತಿದ್ದುವು. ಆದರೆ ಅವನು ಒಂದು ಪಿಸ್ತೂಲನ್ನು ಎಲ್ಲಿ ಇಟ್ಟಿದ್ದನೆಂದು ಯಾರಿಗೂ ತಿಳಿದಿರಲಿಲ್ಲ. ರಾಮಚಂದ್ರನಾದರೋ ಈಗ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಪಿಸ್ತೂಲು ಯಾವ ಮನೆಯಲ್ಲಿ ಸಿಕ್ಕರೆ ಆ ಮನೆಯವರಿಗೆಲ್ಲ ವಿಪತ್ತು.

ಈಗ ಉಳಿದದ್ದು ಒಂದೇ ದಾರಿ. ಹೇಗಾದರೂ ಮಾಡಿ ರಾಮಚಂದ್ರನಿಂದ ಪಿಸ್ತೂಲನ್ನಿಟ್ಟಿದ್ದ ಸ್ಥಳವನ್ನು ತಿಳಿದುಕೊಳ್ಳಬೇಕು!

ಬೇರೆ ದಾರಿಯೇ ಇಲ್ಲ

ರಾಮಚಂದ್ರ ಮಜುಂದಾರನನ್ನು ಕಲ್ಕತ್ತದ ಪ್ರೆಸಿಡೆನ್ಸಿ ಜೈಲಿನಲ್ಲಿ ಬಂಧನದಲ್ಲಿ ಇರಿಸಿದ್ದರು. ಅವನ ಭೇಟಿಗೆ ತಂದೆ, ತಾಯಿ ಮತ್ತು ಪತ್ನಿಗೆ ಬಿಟ್ಟರೆ ಮತ್ತಾರಿಗೂ ಅವಕಾಶವೇ ಕೊಡುತ್ತಿರಲಿಲ್ಲ, ಜೈಲಿನ ಅಧಿಕಾರಿಗಳು ಅಷ್ಟು ಕಟ್ಟುನಿಟ್ಟಾಗಿದ್ದರು. ಸಹೋದರ ಅಥವಾ ಸಹೋದರಿಯೂ ಕೂಡ ಬಂಧಿಯನ್ನು ನೋಡುವಂತಿರಲಿಲ್ಲ.

ಅಮರೇಂದ್ರನು ರಾಮಚಂದ್ರನಿಂದ ಪಿಸ್ತೂಲಿನ ವಿಷಯವನ್ನು ತಿಳಿದುಕೊಳ್ಳಲು ಒಂದು ಹಂಚಿಕೆ ಹಾಕಿದ. ರಾಮಚಂದ್ರನ ಹೆಂಡತಿಗಾದರೆ ಭೇಟಿ ನೀಡುವರಷ್ಟೆ. ಈ ರೀತಿ ನಟಿಸಲು ನಾನಿಬಾಲಾ ಅವರೇ ತಕ್ಕವರು ಎಂದು ಅಮರೇಂದ್ರ ಭಾವಿಸಿದ. ಅವನು ನಾನಿಬಾಲಾಗೆ ಹೇಳಿದ: ‘‘ನೀವು ಜೈಲಿಗೆ ಹೋಗಿ ಅಲ್ಲಿನ ಅಧಿಕಾರಿಗಳಿಗೆ  ನೀವು ರಾಮಚಂದ್ರನ ಹೆಂಡತಿ ಎಂದು ಹೇಳಿಕೊಳ್ಳಬೇಕು. ಅವನನ್ನು ಭೇಟಿ ಮಾಡಲು ಅವಕಾಶ ಕೊಡಿ ಎಂದು ಕೇಳಿ ಒಪ್ಪಿಸಬೇಕು. ಅವನನ್ನು ಮಾತನಾಡಿಸುವಾಗ ಅವನಿಂದ ಪಿಸ್ತೂಲಿನ ವಿಷಯ ತಿಳಿದುಕೊಂಡು ಬರಬೇಕು. ಬೇರೆ ದಾರಿಯೇ ಇಲ್ಲ’’

ಅಮರೇಂದ್ರನ ಮಾತುಗಳನ್ನು ಕೇಳಿ ನಾನಿಬಾಲಾ ಚಕಿತರಾದರು. ಅವನು ಸೂಚಿಸಿದ ಉಪಾಯ ಸುಲಭವಾಗಿ ರಲಿಲ್ಲ. ಅವರು ಹಿಂದೂ ಮನೆತನದಲ್ಲಿ ಹುಟ್ಟಿದವರು. ಬಹು ಸಂಪ್ರದಾಯವಂತ ಮನೆತನ ಅವರದು, ಅದರಲ್ಲೂ ನಾನಿಬಾಲಾ ವಿಧವೆ. ಯಾರನ್ನೊ ತನ್ನ ಗಂಡ ಎಂದು ಕರೆಯುವುದೆ? ಆದರೆ ದೇಶಕ್ಕಾಗಿ ರಾಮಚಂದ್ರನಂತಹವರು ತಮ್ಮ ಪ್ರಾಣವನ್ನೆ ಕೊಡಲು ಸಿದ್ಧವಾಗಿದ್ದಾರಲ್ಲ! ಈ ಧರ್ಮಸಂಕಟದ ಗಳಿಗೆಯಲ್ಲಿ ನಾನಿಬಾಲಾ ಪಡೆದ ಶಿಕ್ಷಣ, ಅವರಲ್ಲಿದ್ದ ಕ್ರಾಂತಿಕಾರೀ ಮನೋಭಾವ ಇವೇ ಗೆದ್ದವು. ಈ ಕೆಲಸ ಮಾಡಲು ಪ್ರೇರೇಪಿಸಿದವು. ‘‘ಆಗಲಿ, ಜೈಲಿಗೆ ಹೋಗಿ ರಾಮಚಂದ್ರನನ್ನು ಭೇಟಿ ಮಾಡುತ್ತೇನೆ’’ ಎಂದರು.

ಹೆಂಡತಿ ಪಾತ್ರ ಯಶಸ್ವಿ

ಸರಿ, ಪೊಲೀಸರಿಗೆ ಕೂಡಲೆ ಕಾಗದ ಬರೆದರು, ‘‘ನಾನು ನನ್ನ ಗಂಡನಾದ ರಾಮಚಂದ್ರ ಮಜುಂದಾರನನ್ನು ಭೇಟಿ ಮಾಡಲು ಇಚ್ಛಿಸುತ್ತೇನೆ. ದಯವಿಟ್ಟು ಅವರನ್ನು ಸಂಧಿಸಲು ಅನುಮತಿ ನೀಡಿ.’

ಸಂಶಯ ಬರಲು ಪೊಲೀಸರಿಗೆ ಆಸ್ಪದವೇ ಇರಲಿಲ್ಲ. ಹೆಂಡತಿಯು ಗಂಡನನ್ನು ನೋಡಲು ಕೇಳುತ್ತಿದ್ದಾಳೆ. ಅವರು ಒಪ್ಪಿದರು. ನಾನಿಬಾಲಾ ಗೊತ್ತಾದ ದಿನ ಸೆರೆಮನೆಗೆ ಹೋದರು. ಸೆರೆಮನೆಯ ಅಧಿಕಾರಿಗಳನ್ನು ಕಂಡಾಗ ಇನ್ನೊಂದು ಕಷ್ಟ ಹುಟ್ಟಿಕೊಂಡಿತು. ಅವರು ತಮ್ಮ ಎದುರಿಗೇ ಈ ಭೇಟಿ ನಡೆಯಬೇಕೆಂದು ಪಟ್ಟು ಹಿಡಿದರು. ಹಾಗಾದರೆ ಕೆಲಸ ಕೆಟ್ಟು ಹೋಗುವುದಲ್ಲ! ‘‘ಛೆ, ಗಂಡ ಹೆಂಡತಿ ಮಾತನಾಡುವಾಗ ಪೊಲೀಸರು ಕೇಳಿಸಿಕೊಳ್ಳುವುದೆ? ನಾಚಿಕೆಗೇಡು’’ ಎಂದರು ನಾನಿಬಾಲಾ.

‘‘ಸರ್ಕಾರಕ್ಕೆ ತೊಂದರೆಯಾಗುವಂತಹ ವಿಷಯಗಳನ್ನು ನಾವೇನು ಚರ್ಚೆ ಮಾಡುತ್ತೇವೆ? ವಿದ್ಯಾಭ್ಯಾಸವಿಲ್ಲದ ಹೆಂಗಸು ನಾನು. ನನ್ನ ಗಂಡನನ್ನು ನೋಡಲು ಬಂದಿದ್ದೇನೆ, ಅಷ್ಟೆ’’ ಎಂದು ಕಣ್ಣೀರು ಹಾಕಿ, ಬಿಕ್ಕಿ ಬಿಕ್ಕಿ ಅತ್ತರು ನಾನಿಬಾಲಾ. ಅಧಿಕಾರಿಗಳಿಗೂ ‘‘ಅಯ್ಯೋ ಪಾಪ’ ಎನ್ನಿಸಿತು.

‘‘ನೀನು ಅವನಿಗೇನಾದರೂ ಹೊರಗಿನಿಂದ ತಂದು ಕೊಟ್ಟರೆ?’’ ಎಂದು ಕೇಳಿದರು ಅಧಿಕಾರಿಗಳು.

‘‘ಅಯ್ಯೋ ಅಷ್ಟೇ ತಾನೆ ನಿಮ್ಮ ಅನುಮಾನ? ನಿಮ್ಮವರೇ ದೂರ ನಿಂತು ನೋಡುತ್ತಿರಲಿ. ನಮ್ಮ ಮಾತು ಅವರಿಗೆ ಕೇಳಿಸಬಾರದು ಅಂತ ಅಷ್ಟೆ ನನಗೆ’’ ಎಂದರು ನಾನಿಬಾಲಾ.

ನಾನಿಬಾಲಾ ರಾಮಚಂದ್ರನಿಗೆ ಏನೂ ಕೊಡದಂತೆ  ನೋಡಿಕೊಳ್ಳಲು ಪೊಲೀಸರು ಅವರಿಬ್ಬರಿಂದ ಸ್ವಲ್ಪ ದೂರದಲ್ಲಿ ನಿಂತು ನೋಡುತ್ತಿರಬೇಕು ಎಂದು ತೀರ್ಮಾನವಾಯಿತು. ನಾನಿಬಾಲಾ ಅವರ ಮುಖ ಅರಳಿತು.

ಸೆರೆಮನೆಯ ಅಧಿಕಾರಿಗಳು ರಾಮಚಂದ್ರನಿಗೆ ‘ನಿನ್ನ ಹೆಂಡತಿ ನಿನ್ನನ್ನು ನೋಡಲು ಬಂದಿದ್ದಾಳೆ’ ಎಂದಾಗ ಅಚ್ಚರಿ. ‘ಯಾರು ಇವಳು ನನ್ನ ಹೆಂಡತಿ?’ ಎಂದು ಪ್ರಶ್ನಿಸಿಕೊಂಡ. ಆದರೆ ತನ್ನ ಗೆಳೆಯರು ಯಾವುದೋ ಉದ್ದೇಶದಿಂದ ಏರ್ಪಡಿಸಿರುವ ನಾಟಕ ಇದು ಎಂದು ಅವನಿಗೂ ಅರ್ಥವಾಯಿತು.

ನಾನಿಬಾಲಾ ಅವನನ್ನು ನೋಡುತ್ತಲೇ ‘ಅಯ್ಯೋ ಏನಿದು, ನಿಮಗೆ ಎಂತಹ ಸ್ಥಿತಿ ಬಂತು!’’ ಎಂದು ಅತ್ತರು. ಪ್ರೀತಿಯಿಂದ ಅವನನ್ನು ಮಾತನಾಡಿಸಿದರು. ದೂರ ನಿಂತು ನೋಡುತ್ತಿದ್ದ ಅಧಿಕಾರಿಗಳಿಗೆ ಒಂದಿಷ್ಟೂ ಅನುಮಾನ ಬರಲಿಲ್ಲ. ಮಾತಿನ ಮಧ್ಯೆ ನಾನಿಬಾಲಾ ಮೆಲ್ಲನೆ ಪಿಸ್ತೂಲಿನ ವಿಷಯ ಕೇಳಿದರು. ಅದನ್ನು ಅವನು ಎಲ್ಲಿಟ್ಟಿದ್ದಾನೆ ಎಂದು ತಿಳಿದುಕೊಂಡರು. ಭೇಟಿಗೆ ಕೊಟ್ಟಿದ್ದ ಅವಧಿ ಮುಗಿಯಿತು ಎಂದು ಪೊಲೀಸರು ಹೇಳಿದಾಗ ಕಣ್ಣೀರು ಸುರಿಸುತ್ತ ಹೊರಟರು.

‘‘ಒಬ್ಬ ಹೆಂಗಸು ಬೆಪ್ಪು ಮಾಡಿದಳೆ?’’

ಮಾಹಿತಿಯನ್ನು ಪಡೆದು ನಾನಿಬಾಲಾ ಸುರಕ್ಷಿತವಾಗಿ ಅಮರೇಂದ್ರನಿದ್ದ ಸ್ಥಳವನ್ನು ಸೇರಿದರು.

ಭೇಟಿಮುಗಿದ ಕೆಲವೇ ದಿನಗಳಲ್ಲಿ ಪೊಲೀಸರಿಗೆ ಗೊತ್ತಾಯಿತು-ರಾಮಚಂದ್ರ ಮಜುಂದಾರನನ್ನು ಭೇಟಿ ಮಾಡಿದವಳು ಅವನ ನಿಜವಾದ ಹೆಂಡತಿಯಲ್ಲ, ಬೇರೆ ಯಾರೋ ಅವನ ಹೆಂಡತಿಯಂತೆ ನಟಿಸಿದರು ಎಂದು. ತಮ್ಮನ್ನು ಒಬ್ಬ ಹೆಂಗಸು ಬೆಪ್ಪು ಮಾಡಿದಳು ಎಂದು ಅರ್ಥವಾಯಿತು.

ಸಂಗತಿ ತಿಳಿದು ಪೊಲೀಸರು ಹುಚ್ಚಾದರು. ಆದರೇನು? ಹಕ್ಕಿ ಪಂಜರದಿಂದ ಹಾರಿಬಿಟ್ಟಿತ್ತು. ಈ ಹೆಂಗಸು ಯಾರು? ಎಲ್ಲಿಂದ ಬಂದವಳು? ಎಲ್ಲಿಗೆ ಹೋಗಿದ್ದಾಳೆ? ಎನ್ನುವುದನ್ನು ತಿಳಿಯಲು ಎಲ್ಲೆಲ್ಲೂ ಪೊಲೀಸರು ಹುಡುಕಲು ತೊಡಗಿದರು. ರಾಮಚಂದ್ರನನ್ನು ಭೇಟಿಮಾಡಿರಬೇಕೆಂದರೆ ಆ ಹೆಂಗಸು ಕ್ರಾಂತಿಕಾರಿಗಳಿಗೆ ಸಹಾಯಕಳಾಗಿರಬೇಕು. ಮತ್ತೆ ಕ್ರಾಂತಿಕಾರಿಗಳ ಬೇಟೆ ಆರಂಭವಾಯಿತು.

ಕಡೆಗೆ ನಾನಿಬಾಲಾ ಅಮರೇಂದ್ರನ ಸಂಗಡ ವಾಸಿಸುತ್ತಿರುವ ವಿಷಯ ಪೊಲೀಸರಿಗೆ ತಿಳಿಯಿತು. ಇನ್ನು ನಾನಿಬಾಲಾ ರಿಶ್ರಾದ ಮನೆಯಲ್ಲಿರುವುದರಿಂದ ಅವರಿಗೂ ತೊಂದರೆ, ಅದರಿಂದ ಕ್ರಾಂತಿಕಾರಿಗಳ ಗುಟ್ಟು ಹೊರಬೀಳುವ ಸಂಭವವಿತ್ತು. ಪೊಲೀಸರು ರಿಶ್ರಾದ ಉದ್ಯಾನದ ಮನೆಗೆ ದಾಳಿಯಿಡುವಷ್ಟರಲ್ಲಿ ಅಮರೇಂದ್ರ ಮತ್ತು ನಾನಿಬಾಲಾ ತಪ್ಪಿಸಿಕೊಂಡಿದ್ದರು. ನಾನಿಬಾಲಾ ಅವರನ್ನು ಹುಡುಕುವ ಕೆಲಸವನ್ನು ಪೊಲೀಸರು ಚುರುಕಿನಿಂದ ಮುಂದುವರಿಸಿದರು. ಅವರ ವಿಷಯ ಆದಷ್ಟು ಮಾಹಿತಿ ಸಂಗ್ರಹಿಸತೊಡಗಿದರು. ಪೊಲೀಸರ ಪ್ರತಿಯೊಂದು ಕೆಲಸವೂ ಹೇಗೋ ಅಮರೇಂದ್ರನಿಗೆ ತಿಳಿಯುತ್ತಿತ್ತು. ರಿಶ್ರಾದ ಮನೆಯನ್ನು ಪೂರ್ತಿ ಖಾಲಿಮಾಡಲು ಅಮರೇಂದ್ರ ಯೋಚಿಸಿದ.

ಚಂದ್ರನಾಗೂರಿನಲ್ಲಿ ಚಿಕ್ಕಮ್ಮ

ಒಂದು ರಾತ್ರಿ ಅಮರೇಂದ್ರ ನಾನಿಬಾಲಾ ಅವರೊಂದಿಗೆ ಚಂದ್ರನಾಗೂರು ಎಂಬ ಸ್ಥಳಕ್ಕೆ ಹೊರಟ. ರಿಶ್ರಾಗೆ ಸಮೀಪದಲ್ಲಿಯೇ ಆ ಸ್ಥಳವಿತ್ತು. ಚಂದ್ರನಾಗೂರು ಫ್ರೆಂಚರ ಆಡಳಿತಕ್ಕೊಳಪಟ್ಟಿದ್ದುದರಿಂದ ಅಲ್ಲಿ ನಾನಿಬಾಲಾ, ಅಮರೇಂದ್ರರಿಗೆ ಇಂಗ್ಲಿಷರ ಯಾವ ಭಯವೂ ಇರಲಿಲ್ಲ. ನಾನಿಬಾಲಾ ಅವರಿಗಿಂತ ಮೊದಲೇ ಅನೇಕರು ಚಂದ್ರನಾಗೂರಿನಲ್ಲಿ ಅಡಗಿಕೊಂಡವರು ಇದ್ದರು. ಹೊರಜಗತ್ತಿಗೆ ಅನುಮಾನ ಬರದಂತೆ ಎಲ್ಲರೂ ಬೇರೆಬೇರೆ ಮನೆಗಳಲ್ಲಿ ಅಡಗಿಕೊಂಡಿದ್ದರು. ಕೆಲವರು ಮನೆಗಳನ್ನು ಬಾಡಿಗೆಗೆ ಪಡೆದಿದ್ದರು. ಇನ್ನು ಕೆಲವರಿಗೆ ಸಹಾನುಭೂತಿಯುಳ್ಳ ಗೃಹಸ್ಥರು ಆಶ್ರಯ ನೀಡಿದ್ದರು.

ಅಮರೇಂದ್ರ ಹಾಗೂ ನಾನಿಬಾಲಾ ಅವರು ಚಂದ್ರ ನಾಗೂರಿಗೆ ಬಂದು ನೆಲಸಿದರು. ತಲೆಮರೆಸಿಕೊಂಡಿದ್ದ ಕ್ರಾಂತಿಕಾರಿಗಳಿಗೆಲ್ಲ ನಾನಿಬಾಲಾ ‘‘ಚಿಕ್ಕಮ್ಮ’’ ನಾಗಿದ್ದರು. ಚಿಕ್ಕ ವಯಸ್ಸಿನವರಿಗೆಲ್ಲ ನಾನಿಬಾಲಾ ತಾಯಿಯಾಗಿದ್ದರು. ನಾನಿಬಾಲಾ ಈ ತರುಣರನ್ನು ತನ್ನ ಮಕ್ಕಳಂತೆ ಕಾಣುತ್ತಿದ್ದರು.

ಕ್ರಾಂತಿಕಾರಿಗಳಿಗೆ ಜೀವನ ನಡೆಸುವುದೇ ಕಷ್ಟವಾಗಿತ್ತು. ಅಷ್ಟು ಬಡತನ. ಉದಾರ ಹೃದಯಿಗಳು ಒಮ್ಮೊಮ್ಮೆ ಹಣ ಸಹಾಯ ಮಾಡುತ್ತಿದ್ದರು. ನಾನಿಬಾಲಾ ಹಣ್ಣು ತರಕಾರಿಗಳನ್ನು ಶೇಖರಿಸಿ, ಅವುಗಳಿಂದ ರುಚಿಕರವಾದ ಆಹಾರವನ್ನು ತಯಾರಿಸುತ್ತಿದ್ದರು. ತಯಾರಿಸಿದ್ದೆಲ್ಲವನ್ನೂ ನಿರ್ವಂಚನೆಯಿಂದ ಎಲ್ಲರಿಗೂ ಹಂಚಿಬಿಡುತ್ತಿದ್ದರು.

ಚಂದ್ರನಾಗೂರಿನಲ್ಲಿರುವ ‘ಗೊಂಡಾಲಪುರ’  ಎಂಬಲ್ಲಿ ಕ್ರಾಂತಿಕಾರಿಯೊಬ್ಬ ಬಾಡಿಗೆಗೆ ತೆಗೆದುಕೊಂಡಿದ್ದ ಮನೆಯಲ್ಲಿ ನಾನಿಬಾಲಾ ವಾಸಿಸತೊಡಗಿದರು. ಅಮರೇಂದ್ರನೂ ನಾನಿಬಾಲಾ ಅವರ ಜೊತೆಯಲ್ಲಿಯೇ ಇದ್ದ. ಕಾಲಕ್ರಮೇಣ ಈ ಮನೆಯ ಮೇಲೂ ಪೊಲೀಸರ ದೃಷ್ಟಿ ಬಿತ್ತು. ಫ್ರೆಂಚರ ಗುಪ್ತ ಪೊಲೀಸರಲ್ಲಿ ಕೆಲವರು ಗುಟ್ಟಾಗಿ ಬ್ರಿಟಿಷ್ ಪೊಲೀಸರಿಗೆ ಸಂದೇಶ ಕಳುಹಿಸಿ ನಾನಿಬಾಲಾ ಇರುವ ಸ್ಥಳವನ್ನು ತಿಳಿಸಿಬಿಟ್ಟರು. ಇದೇ ಸಮಯದಲ್ಲಿ ಗೊಂಡಾಲಪುರದ ಮನೆಯನ್ನು ಬಾಡಿಗೆಗೆ ತೆಗೆದುಕೊಂಡಿದ್ದವನು ಕ್ಷಯರೋಗಕ್ಕೆ ತುತ್ತಾಗಿ ಆಸ್ಪತ್ರೆ ಸೇರಿದ.

ಬೇಟೆ ನಿಲ್ಲಲಿಲ್ಲ

ಬ್ರಿಟಿಷ್ ಗುಪ್ತಪೊಲೀಸರಿಗೆ ಈಗ ನಾನಿಬಾಲಾ ಇರುವ ಸ್ಥಳ ಖಚಿತವಾಗಿ ತಿಳಿದಿತ್ತು. ಅವರು ಇನ್ನೇನು ಬರುವ ಸಂಭವವೂ ಇತ್ತು. ಇನ್ನು ನಾನಿಬಾಲಾ ಅಲ್ಲಿರುವುದು ಸಾಧ್ಯವಿರಲಿಲ್ಲ.

ನಾನಿಬಾಲಾ ಚಂದ್ರನಾಗೂರನ್ನು ಬಿಡಲು ನಿಶ್ಚಯಿಸಿದರು. ಅಮರೇಂದ್ರ ಮಾತ್ರ ಅಲ್ಲಿಯೇ ಉಳಿದ. ಇತರ ಕ್ರಾಂತಿಕಾರಿಗಳಾದ ಜಾದೂ ಗೋಪಾಲ್, ಅತುಲಕೃಷ್ಣ ಘೋಷ್ ಜೊತೆ ಇರತೊಡಗಿದ.

ಆದರೆ ನಾನಿಬಾಲಾ ಹೋಗುವುದೆಲ್ಲಿಗೆ?

ದೇವರೇ ನಾನಿಬಾಲಾ ಅವರಿಗೆ ಸಹಾಯ ಒದಗಿಸಿದ.

ನಾನಿಬಾಲಾ ಅವರ ಸ್ನೇಹಿತೆಯ ಸೋದರನೊಬ್ಬ ಪೇಷಾವರಕ್ಕೆ ಹೋಗುವುದರಲ್ಲಿದ್ದ. ಅಲ್ಲಿನ ಸ್ವತಂತ್ರವಾದ ಕಂಪೆನಿಯೊಂದರಲ್ಲಿ ಈ ಯುವಕನಿಗೆ ಕೆಲಸ. ತನ್ನನ್ನು ಅವನ ಜೊತೆ ಕರೆದೊಯ್ಯುವಂತೆ ಹೇಳಲು ಸ್ನೇಹಿತೆಯನ್ನು ನಾನಿಬಾಲಾ ಕೇಳಿದರು. ಕೆಲವು ದಿನಗಳವರೆಗಾದರೂ ಬೇರೊಬ್ಬರಿಂದ ರಕ್ಷಣೆಯ ಅಗತ್ಯವಿತ್ತು ಅವರಿಗೆ. ಯುವಕ ಒಪ್ಪಿದ. ಸರಿ, ನಾನಿಬಾಲಾ ಪೇಷಾವರಕ್ಕೆ ಹೊರಟರು.

ಆದರೆ ನಾನಿಬಾಲಾ ಅವರ ದುರದೃಷ್ಟ! ನಾನಿಬಾಲಾ ಪೇಷಾವರಕ್ಕೆ ಹೊರಡುವ ವಿಷಯ ಪೊಲೀಸರಿಗೆ ತಿಳಿದುಬಿಟ್ಟಿತ್ತು. ನಾನಿಬಾಲಾ ಅವರಿಗೆ ತಿಳಿಯದಂತೆ ಅವರನ್ನು ಪೊಲೀಸರು ಹಿಂಬಾಲಿಸಿದ್ದರು. ಯುವಕನಿಗೂ ಪೊಲೀಸರು ಹಿಂಬಾಲಿಸುತ್ತಿರುವ ವಿಷಯದಲ್ಲಿ ಸಂಶಯ ಬರಲಿಲ್ಲ. ನಾನಿಬಾಲಾ ಯುವಕನೊಂದಿಗೆ ಪೇಷಾವರ್ ತಲಪಿದರು.

ಸೆರೆಮನೆ

ಪೇಷಾವರ ತಲುಪಿದ ಕೂಡಲೆ ನಾನಿಬಾಲಾ ಅವರ ಬಂಧನವಾಯಿತು.

ಪೇಷಾವರದಲ್ಲಿ ನಾನಿಬಾಲಾ ಕಾಲರಾಗೆ ತುತ್ತಾದರು. ನಾನಿಬಾಲಾ ಅವರನ್ನು ಗೃಹಬಂಧನದಲ್ಲಿ ಇರಿಸಿದರು. ಅವರ ಮನೆಯ ಸುತ್ತ ಪೊಲೀಸರ ಸರ್ಪಕಾವಲು ಹಾಕಿದರು. ನಾನಿಬಾಲಾ ಅವರ ದೇಹಸ್ಥಿತಿ ಸ್ವಲ್ಪ ಹತೋಟಿಗೆ ಬಂದ ಮೇಲೆ ಬಲವಾದ ಪೊಲೀಸ್ ಕಾವಲಿನಲ್ಲಿ ಅವರನ್ನು ವಾರಣಾಸಿಗೆ ಕರೆದೊಯ್ದರು.

ನಾನಿಬಾಲಾ ಕೆಲವೇ ದಿನಗಳಲ್ಲಿ ಪೂರ್ಣ ಆರೋಗ್ಯ ವಂತರಾದರು. ಅವರನ್ನು ಪ್ರತಿನಿತ್ಯ ಸೆರೆಮನೆಯ ಕಚೇರಿಗೆ ಕರೆದೊಯ್ಯುತ್ತಿದ್ದರು. ಅಲ್ಲಿನ ಪೊಲೀಸ್ ಡೆಪ್ಯುಟಿ ಸೂಪರಿಂಟೆಂಡೆಂಟ್ ಜಿತೇನ್ ಬ್ಯಾನರ್ಜಿ. ಜಿತೇನ್ ಬಹಳ ಕ್ರೂರಿ, ನಿರ್ದಯಿ ಎಂದು ಹೆಸರು ಪಡೆದಿದ್ದ. ಕ್ರಾಂತಿಕಾರಿಗಳೆಂದರೆ ಅವನಿಗೆ ಅಲಕ್ಷ್ಯ. ‘ದೇಶಕ್ಕಾಗಿ ಹೋರಾಡುವವರಂತೆ ಇವರು!’ ಎಂಬ ತಿರಸ್ಕಾರ. ಕ್ರಾಂತಿ ಕಾರಿಗಳನ್ನು ಹಿಂಸಿಸುವುದೆಂದರೆ ಅವನಿಗೆ ಪರಮಾನಂದ.

ಪ್ರತಿದಿನ ನಾನಿಬಾಲಾ ಅವರನ್ನು ಕರೆಸಿ ವಿಚಾರಣೆ ನಡೆಸುತ್ತಿದ್ದ. ನೂರಾರು ಪ್ರಶ್ನೆಗಳನ್ನು ಹಾಕುತ್ತಿದ್ದ.

ನಾನಿಬಾಲಾ ಅವರ ಕಾರ್ಯಚಟುವಟಿಕೆಗಳು ಇವು ಎಂದು ಪ್ರತಿನಿತ್ಯ ಬ್ಯಾನರ್ಜಿ ಪಟ್ಟಿಮಾಡಿ ಹೇಳುತ್ತಿದ್ದ.

‘‘ನಾನು ಈ ಯಾವ ಕೆಲಸವನ್ನೂ ಮಾಡಿಲ್ಲ, ನನಗೆ ಏನೂ ಗೊತ್ತಿಲ್ಲ’’ ಎಂದೇ ನಾನಿಬಾಲಾ ವಾದಿಸಿದರು.

ನರಕಹಿಂಸೆ

ಪೊಲೀಸರು ನಾನಿಬಾಲಾಗೆ ಚಿತ್ರಹಿಂಸೆ ಕೊಡುತ್ತಿದ್ದರು. ಜೈಲಿನ ಮಹಿಳಾ ಮೇಲ್ವಿಚಾರಕರು ನಾನಿಬಾಲಾ ಅವರನ್ನು ಪ್ರತ್ಯೇಕವಾದ ಸಣ್ಣಕೊಠಡಿಗೆ ಕರೆದೊಯ್ಯುತ್ತಿದ್ದರು. ಅಲ್ಲಿ ಅವರ ಬಟ್ಟೆಗಳನ್ನು ಕಿತ್ತುಹಾಕಿ ಮೆಣಸಿನ ಪುಡಿಯನ್ನು ಅವರ ಅಂಗಾಂಗಗಳಲ್ಲಿ ತುಂಬಿಸುತ್ತಿದ್ದರು. ಈ ಶಿಕ್ಷೆಕೊಟ್ಟು ಅವರನ್ನು ಕಂಡು ಆನಂದಪಡುತ್ತಿದ್ದರು. ನಾನಿಬಾಲಾ ಎಷ್ಟು ಚಿತ್ರಹಿಂಸೆಯನ್ನು ಅನುಭವಿಸಿರಬೇಕು, ಎಷ್ಟು ಸಹಿಸಿರಬೇಕು! ಆದರೆ ಅವರು ಕ್ರಾಂತಿಕಾರರ ವಿಷಯ ಬಾಯಿ ಬಿಡಲಿಲ್ಲ. ಒಮ್ಮೆ ವಿಪರೀತ ಉರಿಯನ್ನು ತಾಳಲು ಸಾಧ್ಯವಾಗದೆ, ನಾನಿಬಾಲಾ ಇದ್ದ ಬಲವನ್ನೆಲ್ಲ ಉಪಯೋಗಿಸಿ, ಜೈಲಿನ ಮಹಿಳಾ ಅಧಿಕಾರಿಯನ್ನು ಕಾಲಿನಿಂದ ಒದ್ದರು. ಇಂತಹ ಹಿಂಸೆಯನ್ನು ಪ್ರತಿನಿತ್ಯ ನಾನಿಬಾಲಾ ಅನುಭವಿಸುತ್ತಿದ್ದರು. ಮತ್ತು ಗಂಟೆಗಟ್ಟಲೆ ನಾನಿಬಾಲಾ ಅವರನ್ನು ಈ ಸ್ಥಿತಿಯಲ್ಲಿ ಅಧಿಕಾರಿಗಳು ಬಿಟ್ಟಿರುತ್ತಿದ್ದರು. ಉರಿ ಸ್ವಲ್ಪ ತಗ್ಗಿದ ನಂತರ ಪುನಃ ನಾನಿಬಾಲಾ ಅವರ ವಿಚಾರಣೆಗೆ ಪ್ರಾರಂಭವಾಗುತ್ತಿತ್ತು. ಮತ್ತೆ ಅದೇ ವಿಚಾರಣೆ, ಮತ್ತೆ ಅದೇ ಪ್ರಶ್ನೆಗಳು.

ನಾನು ಹೇಳುವುದಿಲ್ಲ!

ಹಿಂಸೆಯನ್ನು ಅನುಭವಿಸಿದ ನಂತರ ನಾನಿಬಾಲಾ ತಪ್ಪನ್ನು ಒಪ್ಪಿಕೊಳ್ಳಬಹುದು ಎಂದು ಬ್ಯಾನರ್ಜಿ ಭಾವಿಸಿದ್ದ. ಆದರೆ ನಾನಿಬಾಲಾ ಅವರದು ಅದೇ ನಿಲುವು. ಅವರದು ಒಂದೇ ಮಾತು-‘ನನಗೆ ಏನೂ ಗೊತ್ತಿಲ್ಲ, ನಾನು ಏನೂ ಮಾಡಿಲ್ಲ.’

ಪುನಃ ಮೆಣಸಿನ ಪುಡಿಯ ಲೇಪನ. ಈ ಸ್ಥಿತಿಯಲ್ಲಿ ಗಂಟಗಟ್ಟಲೆ ಬಿಡುವುದು. ಮತ್ತೆ ಪ್ರಶ್ನೆಗಳ ಸರಪಳಿ.

‘‘ನಿನಗೆ ಏನೇನು ಗೊತ್ತಿದೆಯೋ, ನೀನು ಏನೇನು ಮಾಡಿರುವಿಯೋ ಈಗಲಾದರೂ ಹೇಳು,’’ ಬ್ಯಾನರ್ಜಿ ಎನ್ನುತ್ತಿದ್ದ.

‘‘ನಾನು ಒಂದು ಶಬ್ದವನ್ನೂ ಹೇಳುವುದಿಲ್ಲ,’’ ನಾನಿಬಾಲಾ ಅವರ ಕಣ್ಣುಗಳು ಕಿಡಿ ಕಾರುತ್ತಿದ್ದುವು.

ಬ್ಯಾನರ್ಜಿ ಹೇಳುತ್ತಿದ್ದ,‘‘ನೀನು ಇನ್ನೂ ಹೆಚ್ಚಿನ ಚಿತ್ರಹಿಂಸೆಗೆ ಒಳಗಾಗುವಿ’’.

‘‘ನಿನ್ನ ಮನಸ್ಸು ತೃಪ್ತಿಯಾಗುವಷ್ಟು ಹಿಂಸೆ ಮಾಡು, ನಾನು ಮಾತ್ರ ಏನನ್ನೂ ಹೇಳುವುದಿಲ್ಲ, ನನ್ನಿಂದ ಒಂದು ಪದವೂ ಹೊರಬರುವುದಿಲ್ಲ,’’ ನಾನಿಬಾಲಾ ಎನ್ನುತ್ತಿದ್ದರು.

‘‘ಈಗತಾನೆ ಅನುಭವಿಸಿದ ಶಿಕ್ಷೆ ಜ್ಞಾಪಕವಿದೆ ತಾನೆ? ಇದಕ್ಕಿಂತ ಕಠಿಣವಾದ ಶಿಕ್ಷೆ ನೀಡುತ್ತೇನೆ. ಈಗಲಾದರೂ ಹೇಳು, ಅಮರೇಂದ್ರನಾಥ ಚಟ್ಟೋಪಾಧ್ಯಾಯ ಎಲ್ಲಿ ಅಡಗಿದ್ದಾನೆ?’’ ಬ್ಯಾನರ್ಜಿ ಹೆದರಿಸುತ್ತಿದ್ದ.

ಅವನ ಬೆದರಿಕೆಗೆ ಜಗ್ಗದೆ ನಾನಿಬಾಲಾ ಹೇಳುತ್ತಿದ್ದರು, ‘‘ನಾನು ಏನನ್ನೂ ಹೇಳುವುದಿಲ್ಲ’’

ಪೊಲೀಸ್ ಅಧಿಕಾರಿ: ‘‘ಹೇಳುವುದಿಲ್ಲವೆ?’’

‘‘ನನಗೆ ಗೊತ್ತಿದ್ದರೂ ಹೇಳುವುದಿಲ್ಲ,’’ ಗುಡುಗಿನಂತೆ ಗರ್ಜಿಸಿದರು ನಾನಿಬಾಲಾ.

ಪೊಲೀಸರೇ ಸೋತರು

ನಾನಿಬಾಲಾರವರನ್ನು ಸೆರೆಮನೆಯ ತಳಭಾಗಕ್ಕೆ ಕರೆದುಕೊಂಡು ಹೋದರು. ಅಲ್ಲಿ ಒಂದು ಸಣ್ಣ ಕತ್ತಲು ಕೋಣೆ. ಆ ಕೋಣೆಗೆ ಒಂದೇ ಒಂದು ಮರದ ಬಾಗಿಲು . ಬೆಳಕು ಬರಲು ಒಂದೇ ಒಂದು ಕಿಟಕಿಯಾಗಲೀ,ಒಂದು ಕಂಡಿಯಾಗಲೀ ಇರಲಿಲ್ಲ. ಗಾಳಿಗಂತೂ ಸ್ಥಳ ಮೊದಲೇ ಇರಲಿಲ್ಲ. ನಾನಿಬಾಲಾ ಅವರನ್ನು ಈ ಕತ್ತಲ ಕೋಣೆಯಲ್ಲಿ ಕೂಡಿ ಹಾಕಿದರು. ಬಾಗಿಲಿಗೆ ಬೀಗ ಮುದ್ರೆ ಬಿತ್ತು. ಉಸಿರಾಡಲೂ ಸಹ ಕಷ್ಟವಾಗುತ್ತಿತ್ತು. ನಾನಿಬಾಲಾಗೆ ಹೀಗೆ ಅರ್ಧ ಗಂಟೆ ಕತ್ತಲ ಕೋಣೆಯ ವಾಸ.

ಕತ್ತಲ ಕೋಣೆಯ ವಾಸವನ್ನು ಹೀಗೆ ಮೂರು ದಿನ ಅನುಭವಿಸಿದರು. ನಾಲ್ಕನೆಯ ದಿನ ನಾನಿಬಾಲಾ ಅವರನ್ನು ೪೫ ನಿಮಿಷಗಳ ಕಾಲ ಕತ್ತಲಕೋಣೆಯಲ್ಲಿಟ್ಟಿದ್ದರು. ದೇಹ ಬಳಲಿ ನಾನಿಬಾಲಾ ಪ್ರಜ್ಞೆ ತಪ್ಪಿದರು. ಎಷ್ಟು ನರಕಯಾತನೆ ಅನುಭವಿಸಿದರೂ ನಾನಿಬಾಲಾ ಅವರಿಂದ ಯಾವ ವಿಷಯವೂ ಹೊರಬರಲಿಲ್ಲ. ಸಾಯಲು ಕೂಡ ಸಿದ್ಧರಾಗಿದ್ದರು ನಾನಿಬಾಲಾ. ಆದರೆ ಗುಟ್ಟನ್ನು ಬಿಟ್ಟುಕೊಡಲು ಇಚ್ಛಿಸಲಿಲ್ಲ. ಅಂತಹ ದೃಢ ಮನಸ್ಸು ಅವರದು.

ಪೊಲೀಸರು ನಾನಿಬಾಲಾ ಅವರ ಬಾಯಿ ಬಿಡಿಸುವ ಪ್ರಯತ್ನದಲ್ಲಿ ಸೋತರು. ಅದೂ ಒಬ್ಬ ಹೆಂಗಸಿನಿಂದ ಅವರಿಗೆ ಸೋಲಾಗಿತ್ತು!

ಗೋಲ್ಡಿಯ ಕಪಾಳಕ್ಕೆ ಏಟು

ನಾನಿಬಾಲಾ ಅವರನ್ನು ಕಲ್ಕತ್ತದ ಪ್ರೆಸಿಡೆನ್ಸಿ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ನಾನಿಬಾಲಾ ಆಹಾರವನ್ನು ತೆಗೆದುಕೊಳ್ಳಲು ನಿರಾಕರಿಸಿದರು. ಜೈಲಿನ ಅಧಿಕಾರಿಗಳು ಜಿಲ್ಲಾ ಮ್ಯಾಜಿಸ್ಟ್ರೇಟರು, ನಾನಿಬಾಲಾ ಮತ್ತೆ ಆಹಾರ ತೆಗೆದುಕೊಳ್ಳುವಂತೆ ಮಾಡಲು ಅನೇಕ ರೀತಿಯಲ್ಲಿ ಪ್ರಯತ್ನಿಸಿದರು. ನಾನಿಬಾಲಾ ಯಾರ ಮಾತಿಗೂ ಜಗ್ಗಲಿಲ್ಲ. ಅವರನ್ನು ತಮ್ಮ ಪಾಡಿಗೆ ಇರಲು ಅಲ್ಲಿಯೂ ಬಿಡಲಿಲ್ಲ. ಅಲ್ಲಿನ ವಿಶೇಷ ಅಧಿಕಾರಿಯಾಗಿದ್ದ ಗೋಲ್ಡಿ ನಾನಿಬಾಲಾ ಅವರ ವಿಚಾರಣೆ ನಡೆಸುತ್ತಿದ್ದ. ವಿಧವಿಧವಾದ ಪ್ರಶ್ನೆಗಳನ್ನು ಹಾಕುತ್ತಿದ್ದ. ಅವನು ಹೇಳುತ್ತಿದ್ದ:

‘‘ನೀನು ಜೈಲಿನಲ್ಲಿಯೇ ಇರಬೇಕಾಗುತ್ತದೆ. ಈಗ ಹೇಳು, ಏನು ಮಾಡಿದರೆ ನೀನು ಆಹಾರವನ್ನು ತೆಗೆದುಕೊಳ್ಳುತ್ತೀ?’’

‘‘ನಾನು ಕೇಳಿದುದನ್ನು ನೀನು ನಡೆಸಿಕೊಡುತ್ತೀಯೋ?’’ ನಾನಿಬಾಲಾ ಅವರ ಪ್ರಶ್ನೆ.

‘‘ನಡೆಸಿಕೊಡುತ್ತೇನೆ,’’ ಗೋಲ್ಡಿ ಮಾತುಕೊಟ್ಟ.

ನಾನಿಬಾಲಾ ಹೇಳಿದರು. ‘‘ಭಾಘಾ ಬಜಾರಿನಲ್ಲಿ ಒಬ್ಬಾಕೆ ಇದ್ದಾರೆ. ಅವರ ಹೆಸರು ಶಾರದಾದೇವಿ. ಅವರು ರಾಮಕೃಷ್ಣ ಪರಮಹಂಸರ ಪತ್ನಿ. ನಾನು ಶಾರದಾದೇವಿಯ ಸಂಗಡ ಇರಲು ಅನುಮತಿ ನೀಡು.’’

ಗೋಲ್ಡಿಗೆ ನಾನಿಬಾಲಾ ಅವರನ್ನು ಸ್ವಲ್ಪ ಆಟವಾಡಿಸಬೇಕೆನ್ನಿಸಿತು. ಅವನು ಹೇಳಿದ, ‘‘ಹಾಗಾದರೆ ನೀನು ಅದಕ್ಕಾಗಿ ಒಂದು ಅರ್ಜಿಯನ್ನು ಕೊಡಬೇಕು.’’

ನಾನಿಬಾಲಾ ತಕ್ಷಣ ಒಂದು ಅರ್ಜಿಯನ್ನು ಬರೆದರು. ಗೋಲ್ಡಿ ಅದನ್ನು ತೆಗೆದುಕೊಂಡ. ಅರ್ಜಿಯನ್ನು ನೋಡಿ, ಒಮ್ಮೆ ಗಹಗಹಿಸಿ ನಕ್ಕ. ಆ ಪತ್ರವನ್ನು ಹರಿದುಹಾಕಿ ಕಸದ ಬುಟ್ಟಿಗೆ ಎಸೆದ. ಮತ್ತೊಮ್ಮೆ ವಿಕೃತವಾಗಿ ನಕ್ಕ.

ನಾನಿಬಾಲಾ ಗಾಯಗೊಂಡ ಹೆಣ್ಣು ಹುಲಿಯಾದರು. ಗೋಲ್ಡಿಯತ್ತ ಛಂಗನೆ ಎಗರಿದರು. ಕ್ಷಣಮಾತ್ರದಲ್ಲಿ ಗೋಲ್ಡಿಯ ಕೆನ್ನೆಯ ಮೇಲೆ ಬೆರಳುಗಳು ಮೂಡುವಷ್ಟು ಜೋರಾಗಿ ಹೊಡೆದರು. ಗೋಲ್ಡಿಗೆ ಒಂದು ಕ್ಷಣ ದಿಗ್ಭ್ರಮೆಯಾಯಿತು. ಚೇತನವೊಂದು ಕಿಡಿಯಾಗಿ ಹರಿದು ಬಂದು ತನ್ನನ್ನು ಸುಟ್ಟಂತೆ ಅನ್ನಿಸಿತು ಗೋಲ್ಡಿಗೆ.

ನಾನಿಬಾಲಾ ಗರ್ಜಿಸಿದರು, ‘‘ಅರ್ಜಿಯನ್ನು ಬರೆಯಲು ನನಗೆ ಏತಕ್ಕೆ ಹೇಳಿದೆ? ನೀನು ವಂಚಕ, ಕೊಟ್ಟ ಮಾತನ್ನು ನಡೆಸಲು ಆಗದಂತಹ ಹೇಡಿ ನೀನು! ನಾವು ಭಾರತೀಯರು, ನಮಗೆ ಆತ್ಮಗೌರವವಿಲ್ಲವೆಂದು ಭಾವಿಸಿರುವೆಯೇನು?’’

ನಾನಿಬಾಲಾ ಅವರ ನುಡಿಗೆ ತತ್ತರಿಸಿ ತಲೆ ತಗ್ಗಿಸಿದ ಗೋಲ್ಡಿ.

ಮತ್ತೆ ಪ್ರೆಸಿಡೆನ್ಸಿ ಜೈಲಿಗೆ ನಾನಿಬಾಲಾ ಅವರನ್ನು ಕಳುಹಿಸಿದರು. ಬಂಗಾಳದ ‘ರೆಗ್ಯುಲೇಷನ್ ಆಕ್ಟ್’ ಕಾಯಿದೆಯ ಪ್ರಕಾರ ನಾನಿಬಾಲಾ ಅವರನ್ನು ರಾಜಕೀಯ ಖೈದಿಯಾಗಿ ಇಟ್ಟರು.

ದುಕಾರಿಬಾಲಾ ದೇವಿಯೊಂದಿಗೆ

ಜೈಲಿನಲ್ಲಿ ಕೆಲವು ದಿನಗಳು ಕಳೆದವು. ಅವರಂತೆಯೇ ಅದೇ ಜೈಲಿನಲ್ಲಿ ಮತ್ತೊಬ್ಬ ಸ್ತ್ರೀಕ್ರಾಂತಿಕಾರಿಯಿರುವುದು ನಾನಿಬಾಲಾಗೆ ತಿಳಿಯಿತು. ಅವಳ ಹೆಸರು ದುಕಾರಿ ಬಾಲಾದೇವಿ ಅವಳು ಸುರಿ ಎಂಬ ಸ್ಥಳದಿಂದ ಬಂದವಳು.

೧೯೧೪ರಲ್ಲಿ ರೊಡ್ಡ ಅಂಡ್ ಕಂಪೆನಿಯಿಂದ ಐವತ್ತು ಮೌಸರ್ ಪಿಸ್ತೂಲುಗಳನ್ನು ಬ್ರಿಟಿಷ್ ಸರಕಾರ ವಶಪಡಿಸಿಕೊಂಡಿತ್ತು. ಅವುಗಳಲ್ಲಿ ಏಳು ಪಿಸ್ತೂಲುಗಳು ಕ್ರಾಂತಿಕಾರಿಗಳ ಕೈವಶವಾಗಿದ್ದವು. ಕ್ರಾಂತಿಕಾರಿಗಳು ಅವನ್ನು ದುಕಾರಿಬಾಲಾಳ ಮನೆಯಲ್ಲಿ ಅಡಗಿಸಿಟ್ಟಿದ್ದರು. ಪಿಸ್ತೂಲುಗಳನ್ನು ಅಡಿಗಿಸಿಟ್ಟು ಕ್ರಾಂತಿಕಾರಿಗಳಿಗೆ ನೆರವಾದದ್ದೇ ದುಕಾರಿಬಾಲಾಳ ಮಹಾಪರಾಧವಾಗಿತ್ತು. ಸರಿ, ಅವಳಿಗೆ ಎರಡು ವರ್ಷಗಳ ಕಠಿಣ ಶಿಕ್ಷೆಯಾಯಿತು. ಅವಳನ್ನು ಪ್ರೆಸಿಡೆನ್ಸಿ ಜೈಲಿನಲ್ಲಿಯೇ ಇಟ್ಟರು.

ಈ ಮಧ್ಯೆ ನಾನಿಬಾಲಾ ಉಪವಾಸವನ್ನು ಮುಂದು ವರಿಸಿಯೇ ಇದ್ದರು. ಜೈಲಿನ ಅಧಿಕಾರಿಗಳು ನಾನಿಬಾಲಾ ಆಹಾರ ತೆಗೆದುಕೊಳ್ಳುವಂತೆ ಮಾಡಲು ಪ್ರಯತ್ನಿಸುತ್ತಲೇ ಇದ್ದರು. ಪಾಪ, ದುಕಾರಿಬಾಲಾಳ ಸ್ಥಿತಿಯಂತೂ ಶೋಚನೀಯವಾಗಿತ್ತು. ಅವಳಿಗೆ ಸರಿಯಾಗಿ ಆಹಾರವನ್ನೇ ಕೊಡುತ್ತಿರಲಿಲ್ಲ. ಅವಳು ಜೈಲಿನಲ್ಲಿ ಖೈದಿಗಳಾಗಿದ್ದ ಇತರ ಹೆಂಗಸರೊಡನೆ ಮಾತಾಡುವಂತಿರಲಿಲ್ಲ, ಸೇರುವಂತಿರ ಲಿಲ್ಲ. ಅವಳನ್ನಿಟ್ಟಿದ್ದ  ಸ್ಥಳವೂ ಕೊಳಕು, ತೀರ ಅನಾರೋಗ್ಯ ಕರ. ಈ ಸಂಗತಿ ಎಲ್ಲ ನಾನಿಬಾಲಾಗೆ ತಿಳಿಯಿತು.

ದುಕಾರಿಬಾಲಾ ತನ್ನ ಜೊತೆಗಿದ್ದರೆ ಒಳ್ಳೆಯದು ಎಂದು ನಾನಿಬಾಲಾ ಅವರಿಗನ್ನಿಸಿತು. ಅದಕ್ಕಾಗಿ ಅವರು ಒಂದು ಹಂಚಿಕೆಯನ್ನು ಹಾಕಿದರು.

ಜೈಲಿನ ಅಧಿಕಾರಿಗಳು ನಾನಿಬಾಲಾ ಆಹಾರ ತೆಗೆದುಕೊಳ್ಳಲು ಒತ್ತಾಯಿಸುತ್ತಿದ್ದರಷ್ಟೆ. ಅವರೆನ್ನುತ್ತಿದ್ದರು, ‘‘ನೀನು ಆಹಾರವನ್ನು ತೆಗೆದುಕೊಳ್ಳಲೇಬೇಕು. ಇಲ್ಲವಾದರೆ ಮತ್ತೂ ಚಿತ್ರಹಿಂಸೆಗೊಳಗಾಗುತ್ತಿ.’’ ಬೆದರಿಸಿ ತಮ್ಮ ಕಾರ್ಯ ಸಾಧಿಸಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದರು.

ನಾನಿಬಾಲಾ, ‘ನಾನಾದರೋ ಬ್ರಾಹ್ಮಣ ವಿಧವೆ. ಬೇರೆಯವರ ಕೈಯಲ್ಲಿ ಮಾಡಿದ ಅಡುಗೆಯನ್ನು ಉಣ್ಣಲಾರೆ’’ ಎಂದರು.

‘‘ಹಾಗಾದರೆ ಏನು ಮಾಡಬೇಕೀಗ?’’ ಜೈಲಿನ ಅಧಿಕಾರಿ ಪ್ರಶ್ನಿಸಿದ.

‘‘ಬ್ರಾಹ್ಮಣರು ಮಾಡಿದ ಅಡುಗೆಯಾದರೆ ಮಾತ್ರ ನಾನು ಆಹಾರ ತೆಗೆದುಕೊಳ್ಳುವೆ’’. ನಾನಿಬಾಲಾ ಅವರ ಬೇಡಿಕೆ ನ್ಯಾಯವಾಗಿ ಕಂಡಿತು ಅಧಿಕಾರಿಗೆ. ಅವರ ಬೇಡಿಕೆಗೆ ಜೈಲಿನ ಅಧಿಕಾರಿಗಳು ಒಪ್ಪಿದರು.

ಆದರೆ ಮಹಿಳಾ ಖೈದಿಗಳಿದ್ದ ಜೈಲಿನ ಕೊಠಡಿಗೆ ಅಡುಗೆ  ಮಾಡಲು ಗಂಡಸರನ್ನು ಬಿಡುವಂತಿರಲಿಲ್ಲ. ಇನ್ನು ಅಡುಗೆಗಾಗಿ ಬ್ರಾಹ್ಮಣ ಹೆಂಗಸಾದರೆ ಸರಿ. ಹೆಂಗಸನ್ನೆಲ್ಲಿಂದ ತರುವುದು? ಆ ಜೈಲಿನಲ್ಲಿ ದುಕಾರಿ ಬಾಲಾಳನ್ನು ಬಿಟ್ಟರೆ ಬೇರಾವ ಬ್ರಾಹ್ಮಣ ಹೆಂಗಸೂ ಇರಲಿಲ್ಲ. ದುಕಾರಿಬಾಲಾ, ನಾನಿಬಾಲಾ ಅವರಿಗಾಗಿ ಅಡುಗೆ ಮಾಡಲು ನೇಮಿಸಲ್ಪಟ್ಟಳು. ನಾನಿಬಾಲಾ ಅವರ ಹಂಚಿಕೆಯಿಂದಾಗಿ ದುಕಾರಿಬಾಲಾಳಿಗೆ ಜೊತೆ ಸಿಕ್ಕಿತು. ಅವರಿಬ್ಬರೂ ತಮ್ಮ ಆಹಾರವನ್ನು ಒಬ್ಬರಿಗೊಬ್ಬರಿಗೆ ಕೊಡುತ್ತಿದ್ದರು. ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದರು.

ಬಿಡುಗಡೆಯಾದರೂ ಕಾಟ ತಪ್ಪಲಿಲ್ಲ

ಅಂತೂ ಜೈಲಿನಲ್ಲಿ ಎರಡು ವರ್ಷಗಳನ್ನು ನಾನಿಬಾಲಾ ಕಳೆದರು. ಪ್ರಥಮ ಮಹಾಯುದ್ಧದಲ್ಲಿ ಜರ್ಮನಿಯನ್ನು ಇಂಗ್ಲೆಂಡ್ ಸೋಲಿಸಿತು. ತನಗುಂಟಾದ ಜಯದ ಸಂತೋಷದಲ್ಲಿ ಬ್ರಿಟನ್ ಭಾರತದಲ್ಲಿದ್ದ ರಾಜಕೀಯ ಬಂಧಿಗಳಿಗೆ ಕ್ಷಮಾಪಣೆ ನೀಡಿ ಎಲ್ಲರ ಬಿಡುಗಡೆಗೆ ಆಜ್ಞೆ ಹೊರಡಿಸಿತು. ಹೀಗೆ ಬಿಡುಗಡೆಯಾದವರಲ್ಲಿ ನಾನಿಬಾಲಾ ಒಬ್ಬರು. ೧೯೧೯ ರಲ್ಲಿ ನಾನಿಬಾಲಾ ಅವರ ಬಿಡುಗಡೆಯಾಯಿತು. ಆಗ ಅವರಿಗೆ ಮೂವತ್ತೊಂದು ವರ್ಷ.

ನಾನಿಬಾಲಾ ಅವರ ಬಿಡುಗಡೆಯೇನೋ ಆಯಿತು. ಆದರೂ ಗುಪ್ತ ಪೊಲೀಸರು ಅವರಿಗೆ ವಿಶ್ರಾಂತಿಯನ್ನು ನೀಡಲಿಲ್ಲ. ಅವರ ಮೇಲೆ ಸದಾ ಕಣ್ಣಿಟ್ಟೇ ಇದ್ದರು. ಅಮರೇಂದ್ರನಾಥ ಚಟ್ಟೋಪಾಧ್ಯಾಯ ಇನ್ನೂ ತಲೆ ಮರೆಸಿಕೊಂಡಿದ್ದನು. ನಾನಿಬಾಲಾ ಅವರ ಮೇಲೆ ಕಣ್ಣಿಟ್ಟರೆ ಅಮರೇಂದ್ರ ಎಲ್ಲಿದ್ದಾನೆ ಎಂದು ತಿಳಿಯಬಹುದು, ಅವನೇ ಅವರನ್ನು ಕಾಣಲೂ ಬರಬಹುದು ಎಂದು ಪೊಲೀಸರ ನಿರೀಕ್ಷಣೆ.

ಕಲ್ಕತ್ತದ ಭಾಘಾಬಜಾರ್‌ನಲ್ಲಿ ನಾನಿಬಾಲಾ ಅವರ ತಂದೆ ಒಂದು ಮನೆಯನ್ನು ಬಾಡಿಗೆಗೆ ಹಿಡಿದರು. ಅಲ್ಲಿ ತಂದೆಯೊಂದಿಗೆ ನಾನಿಬಾಲಾ ಇರತೊಡಗಿದರು. ಅವರ ಜೀವನ ಅಲ್ಲಿ ಬಹಳ ಕಷ್ಟಮಯವಾಗಿತ್ತು. ದೇಶಕ್ಕಾಗಿ ಇಷ್ಟೆಲ್ಲ ಹಿಂಸೆ ಅನುಭವಿಸಿ, ತ್ಯಾಗಮಾಡಿದ ಅವರಿಗೆ ಎರಡು ಹೊತ್ತು ಊಟ ಸಿಗುವುದೂ ಕಷ್ಟವಾಗಿತ್ತು. ಎಷ್ಟೋ ದಿನಗಳು ಉಪವಾಸದಿಂದ ಕಾಲ ಕಳೆಯಬೇಕಾಗುತ್ತಿತ್ತು. ಅನೇಕ ದಿನಗಳ ಉಪವಾಸ ದೇಹದ ಮೇಲೆ ಪ್ರಭಾವ ಬೀರಲಾರಂಭಿಸಿತು.

ಸಂನ್ಯಾಸಿನಿ ನಾನಿಬಾಲಾ

ನಾನಿಬಾಲಾ ಕಾಯಿಲೆ ಬಿದ್ದರು. ಸರಿಯಾದ ಶುಶ್ರೂಷೆ ಇಲ್ಲದೆ ರೋಗ ಉಲ್ಬಣವಾಯಿತು. ಅವರ ದೇಹಸ್ಥಿತಿ ತೀರ ಶೋಚನೀಯವಾದಾಗ ಅವರಿಗೆ ಬಂದಿರುವುದು ಕ್ಷಯವೆಂದು ತಿಳಿಯಿತು. ಕ್ಷಯರೋಗಕ್ಕೆ ಚಿಕಿತ್ಸೆ ಪಡೆಯಲು ನಾನಿಬಾಲಾ ಅವರಲ್ಲಿ ಹಣವಿರಲಿಲ್ಲ.

ಹೀಗಿರುವಾಗ ನಾನಿಬಾಲಾ ಅವರಿಗೆ ಸಾಧುವೊಬ್ಬರ ಪರಿಚಯವಾಯಿತು. ಸಾಧುವಿನ ಚಿಕಿತ್ಸೆಯಿಂದ ನಾನಿಬಾಲಾ ಅವರ ದೇಹಸ್ಥಿತಿ ಒಂದು ಹತೋಟಿಗೆ ಬಂದಿತು. ಸಾಧುವಿನ ಜೀವನ ರೀತಿ, ಉಪದೇಶ ನಾನಿಬಾಲಾ ಅವರ ಮೇಲೆ ಅಪಾರ ಪರಿಣಾಮವನ್ನುಂಟುಮಾಡಿದವು. ಸ್ವಇಚ್ಛೆಯಿಂದ ನಾನಿಬಾಲಾ ಸಂನ್ಯಾಸಿಯಾದರು. ಪ್ರಾಪಂಚಿಕ ವ್ಯವಹಾರ ಗಳಿಂದ ದೂರವಾಗಿ ದೇವರ ಧ್ಯಾನದಲ್ಲಿ ಹಲವು ವರ್ಷಗಳನ್ನು ಕಳೆದರು.

ಭಾರತಕ್ಕೆ ೧೯೪೭ರಲ್ಲಿ ಸ್ವಾತಂತ್ರ್ಯ ಬಂದಿತು. ಸ್ವಾತಂತ್ರ್ಯಕ್ಕಾಗಿ ಹೋರಾಡಿದವರನ್ನು ದೇಶ ಕೃತಜ್ಞತೆಯಿಂದ ಸ್ಮರಿಸಿತು. ಪಶ್ಚಿಮಬಂಗಾಳದ ಸರಕಾರವು ನಾನಿಬಾಲಾ ಅವರಿಗೆ ೧೯೫೦ರಲ್ಲಿ ರಾಜಕೀಯ ವಿಶ್ರಾಂತಿ ವೇತನವನ್ನು ನೀಡಿತು.

೧೯೬೭ರ ಮೇ ತಿಂಗಳಲ್ಲಿ ವೀರ ಮಹಿಳೆ ನಾನಿಬಾಲಾ ನಿಧನರಾದರು. ಆಗ ಅವರಿಗೆ ಎಪ್ಪತ್ತೊಂಬತ್ತು ವರ್ಷ ವಯಸ್ಸು.

ಅಮರ ಚೇತನ

ನಾನಿಬಾಲಾ ಅವರನ್ನು ಭಾರತೀಯರಾದ ನಾವು ಮರೆಯಲು ಸಾಧ್ಯವೆ? ಅವರು ಭಾರತದ ಸ್ವಾತಂತ್ರ್ಯದ ಹೋರಾಟದ ದೀವಿಗೆಯನ್ನು ಬೆಳಗಿದವರಲ್ಲಿ ಒಬ್ಬರು. ಗಂಡನನ್ನು ಅತಿ ಚಿಕ್ಕವಯಸ್ಸಿನಲ್ಲಿಯೇ ಕಳೆದುಕೊಂಡರೂ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಕ್ರಾಂತಿಕಾರಿಗಳಿಗೆ ನೆರವಾದರು. ಮುಂದೆ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸ್ತ್ರೀಯರಿಗೆಲ್ಲ ದಾರಿದೀಪವಾದವರು, ದಾರಿ ತೋರಿದವರು, ನಾನಿಬಾಲಾ. ದೇಶಕ್ಕಾಗಿ ತನ್ನನ್ನೇ ಅರ್ಪಿಸಿಕೊಂಡ ಮಹಿಳೆ ನಾನಿಬಾಲಾ. ತಿಳಿವಳಿಕೆ ಬಂದಾಗಿನಿಂದ ಅವರು ಅತಿ ಹುಮ್ಮಸ್ಸಿನಿಂದ ದೇಶಸೇವೆ ಮಾಡಿದರು. ಅವರದು ಬಲಿಷ್ಠವಾದ ಮೈಕಟ್ಟು. ಸ್ಫೂರ್ತಿಯ ಚಿಲುಮೆಯಾಗಿದ್ದವರು ಅವರು. ಮನಸ್ಸಾದರೋ ಅತಿಮೃದು. ಯಾವಾಗಲೂ ಜನರ ಸೇವೆಯನ್ನು ಮಾಡುವ ಆಸೆ ಹೊತ್ತಿದ್ದವರು, ಅಮಾನುಷವಾದ ಹಿಂಸೆಗಳನ್ನು ಅನುಭವಿಸಿ, ಜೀವನದುದ್ದಕ್ಕೂ ಅನೇಕ ರೀತಿಗಳಲ್ಲಿ ಕಷ್ಟ ಸಹಿಸಿದ ವೀರಮಹಿಳೆ ನಾನಿಬಾಲಾ ಅವರು ಇಂದಿನ ಸ್ತ್ರೀಯರಿಗೆಲ್ಲ ಸ್ಫೂರ್ತಿ.