ನಾನೊಂದು ಕತ್ತಲೆಯ ಕೇಂದ್ರ
ಇದರೊಳಗಿಂದ ಬೆಳಕಿನ ಹಾಡ
ಪ್ರಸಾರ ಮಾಡುವನು ಯಾವನೋ
ನಾನು ಕಾಣದ ಚಂದ್ರ.

ಈ ಹಾಡು ಮುಟ್ಟಿದಲ್ಲೆಲ್ಲ, ತಟ್ಟನೆ ಬೆಳಕಿನ ದೊಂದಿ,
ತಡವರಿಸುತ್ತ ನಡೆದ ಹೆಜ್ಜೆಯ ಮುಂದೆ
ದಾರಿಯ ತೆರೆದು, ನಡೆಸುವುದೆಂದು
ಹೊಗಳಿದವರೆಷ್ಟೋ ಮಂದಿ.

ಆದರೂ ನನಗಿಲ್ಲ ಬೆಳಕು,
ನಾನೋ ಬರೀ ಪ್ರಸಾರಕೇಂದ್ರ ;
ನಾನು ಕಾಣದ ಚಂದ್ರ
ಈ ಮುಖಾಂತರ ತೂರುವನು ಹಾಡಿನ ಕಿರಣ,
ನಾನು, ಕವಿದ ಕತ್ತಲಿನಲ್ಲಿ ಒಮ್ಮೊಮ್ಮೆ
ಕೇಳಿದ್ದುಂಟು ಅದರ ಅನುರಣನ !