ವರಹಾಡವೇ ಪ್ರಥಮ ಮಹಾರಾಷ್ಟ್ರವೆಂದು ಡಾ. ಭಂಡಾರಕರ ಮೊದಲಾದವರು ಬರೆದುದನ್ನು ನಾನು ಓದಿದ್ದೆ. ಕವಿರಾಜಮಾರ್ಗದೊಳಗಿನ ‘ಕಾವೇರಿಯಿಂದಮಾ ಗೋದಾವರಿ ವರಂ ಇರ್ದ ನಾಡದಾ ಕನ್ನಡದೊಳ್ ಭಾವಿಸಿದ ಜನಪದಂ’ ಎಂಬ ಸುಪ್ರಸಿದ್ಧ ಉಲ್ಲೇಖ ವನ್ನು ಕುರಿತು ವಿಚಾರ ಮಾಡುವಾಗ ನನಗೆ ಆಗಾಗ ಒಂದು ಸಂದೇಹವು ತಲೆದೋರುತ್ತಿತ್ತು: ದಕ್ಷಿಣಾ ಪಥವು ನರ್ಮದೆಯಿಂದ ಆರಂಭವಾಗುತ್ತದೆ. ‘ಆರಿಯರು’ ಎನಿಸಿಕೊಳ್ಳುವ ಮರ್ಹಾಟರಂತೂ ದಕ್ಷಿಣಾ ಪಥದವರಾಗಿರಲಾರರು. ಹಾಗಾದರೆ, ನರ್ಮದೆಯ ದಕ್ಷಿಣಕ್ಕೆ, ವಿದರ್ಭದೇಶದಲ್ಲಿ ಮಹಾರಾಷ್ಟ್ರವು ಬೇರು ಹಿಡಿಯುವ ಮೊದಲು ಅದು ಯಾರ ನಾಡಾಗಿರ ಬೇಕು? ಗೋದೆಯಿಂದ ನರ್ಮದೆಯವರೆಗಿನ ಈ ಪ್ರದೇಶವೂ ಒಂದು ಕಾಲಕ್ಕೆ – ಎಂದರೆ ಅಲ್ಲಿ ಮರ‍್ಹಾಟರ ವಸಾಹತು ವ್ಯಾಪಿಸಿಕೊಳ್ಳುವವರೆಗೂ…. ಕರ್ಣಾಟಕರದೇ ಆಗಿರುವ ಸಂಭವವಿಲ್ಲವೆ?

ಈ ದಿಕ್ಕಿನಲ್ಲಿ ನಡೆಸಿದ ಅಭ್ಯಾಸವೆ ನನ್ನ ಮುಂದಿನ ಲೇಖನದ ಮಹತ್ವದ ಭಾಗವನ್ನು ಆವರಿಸಿಕೊಂಡಿದೆ. ‘ಇದನ್ನು ಬರೆಯುವುದರ ಮುಖ್ಯೋದ್ದೇಶವು ಯಾವ ನನ್ನದೊಂದು ಸಿದ್ಧಾಂತ – ಸ್ಥಾಪನೆಯಲ್ಲ; ಕೇವಲ ಸತ್ಯಸಂಶೋಧನೆ’ ‘ಸಂಶೋಧಕನೆಂದು ನಾನಿದನ್ನು ಕೈಕೊಂಡವನಲ್ಲ; ಏಕೆಂದರೆ ನನಗೆ ಆ ಅಧಿಕಾರವಿಲ್ಲ. ಅಲ್ಲದೆ ಇತಿಹಾಸ ಸಂಶೋಧನವು ನನ್ನ ಕ್ಷೇತ್ರವೂ ಅಲ್ಲ;’ ಎಂದು ಈ ವಿಷಯಕವಾದ ಮೊದಲ ಪ್ರಕಟನೆಯಲ್ಲಿಯೇ (‘ಕಣ್ಮರೆಯಾದ ಕನ್ನಡ’ದ ಮುನ್ನುಡಿಯಲ್ಲಿ) ನಾನು ಬರೆದುದುಂಟು (೧೯೯೩).

ನಾಡಿಗಾಗಿ ಏನಾದರೂ ಮಾಡಬೇಕು; ನಿಜವನರಿತು ಬಾಳಬೇಕು ಎಂಬುದೇ ನನ್ನ ಜೀವನದ ಮೂಲ ಸಂಕಲ್ಪ. ಬಹಳ ಚಿಕ್ಕಂದಿನಲ್ಲಿಯೆ ತಂದೆಯನ್ನು ಕಳೆದುಕೊಂಡು ಅನಾಥನ ದೈನ್ಯಾವಸ್ಥೆಯ ಬವಣಿಗಳನ್ನೆಲ್ಲ ಅನುಭವಿಸುತ್ತ ಅಲೆಯುವುದರಲ್ಲಿಯೆ ವಯಸ್ಸಿನ ೧೫ ವರುಷಗಳು ಕಳೆದು ಹೋದುವು. ಬಡತನದ ಬೇಗೆಯಲ್ಲಿ ನನ್ನ ಪೂರ್ವ ವಯಸ್ಸಿನ ಭಾವನೆಗಳಲ್ಲ ಕಮರಿ, ಪರಗೃಹವಾಸದ ದಾರುಣಯಾತನೆಯಲ್ಲಿ ನಾನು ಅದೆಷ್ಟೋ ಬಾರಿ, ಸೀತೆಗೆ ಭೂದೇವಿಯು ತನ್ನ ಒಡಲಲ್ಲಿ ಎಡೆಗೊಟ್ಟ ಕತೆಯನ್ನು (ಆದನ್ನು ಶಬ್ದಶಃ ಸತ್ಯವೆಂದು ನಂಬುತ್ತಿದ್ದೆನಾದ್ದರಿಂದ) ನೆನೆನೆನೆದು ಕಣ್ಣೀರು ಮಿಡಿದಿದ್ದೇನೆ. ಆದರೆ ಭೂದೇವಿ ಹಾಗೆ ನನ್ನನ್ನು ತನ್ನಲ್ಲಿ ಸ್ವೀಕರಿಸುತ್ತಿದ್ದಿಲ್ಲವೆಂಬುದಕ್ಕೆ ದುಃಖಿಸಿದ್ದೇನೆ. ಈ ಕಾಲದಲ್ಲಿ ಮನೆಯಲ್ಲಿ ನಾನು ಬೆಪ್ಪ; ಅವರಾಡಿದ ಮಾತುಗಳ ಅರ್ಥವೂ ತಿಳಿಯದಷ್ಟು ನಾನು ಮೊದ್ದನಾಗಿ ಕಂಗೆಟ್ಟು ನಿಂತ ನೆನಪುಗಳಿವೆ. ಆದರೆ ಶಾಲೆಯಲ್ಲಿ ಪ್ರಾಥಮಿಕ ೨ನೆಯ ಇಯತ್ತೆಯಲ್ಲಿ ಇದ್ದಾಗ ಆ ಇಯತ್ತೆಗೆ ಒಬ್ಬ ಅಯ್ಯನವರು ಶಿಕ್ಷಕರಾಗಿದ್ದರು. ಅವರು ನನಗೆ ಮೆಚ್ಚಿ ಮಾತನಾಡಿ, ಬುದ್ದಿವಂತ ಹುಡುಗರಲ್ಲಿ ಎಣಿಸುತ್ತಿದ್ದರು. ನನ್ನ ಆತ್ಮವಿಶ್ವಾಸವು ಅಂಕುರಿಸಿ ದುದು ಅದೇ ಮೊದಲು. ಕಮರುತ್ತಿದ್ದ ನನ್ನ ಜೀವನಕ್ಕೆ ಮೊದಲ ನವಜೀವನವನ್ನೆರೆದ ಅವರನ್ನು ನನ್ನ ಅಂತರಾಳದಲ್ಲಿ ಈಗಲೂ ಆದರದಿಂದ ನಮಸ್ಕರಿಸುತ್ತಿರುತ್ತೇನೆ. ಮುಂದೆ ಕೆಲ ವರುಷ ಇದೇ ಹಾಡು.

ಮನೆತನದ ಆರ್ಥಿಕ ಪರಿಸ್ಥಿತಿಯು ಅನುಕೂಲವಿಲ್ಲದುದರಿಂದ ವಿದ್ಯಾಲಯದಲ್ಲಿ ಗುರುಮುಖದಿಂದ ಹೆಚ್ಚಿನ ವಿದ್ಯೆಗಳಿಸುವ ಭಾಗ್ಯವು ನನ್ನ ಹಣೆಯ ಬರೆಹದಲ್ಲಿ ಇಲ್ಲವೆಂದು ತಿಳಿದ ಬಳಿಕ, ಪ್ರಾಥಮಿಕ ಶಿಕ್ಷಕರ ಶಿಕ್ಷಣಾಲಯವನ್ನು ಸೇರುವುದರ ಹೊರತು ಬೇರೆ ದಾರಿಯೆ ಇದ್ದಿಲ್ಲ. ಆದರೂ ಲೋಕಮಾನ್ಯ ಟಿಳಕರ ಚರಿತೆಯಿಂದ, ಆಯುಷ್ಯವನ್ನು ದೇಶಕ್ಕಾಗಿ ಮೀಸಲಾಗಿರಿಸುವುದರಲ್ಲಿಯೆ ಜೀವನ ಸಾರ್ಥಕ್ಯವಿದೆಯೆಂಬ ಒಂದು ಸ್ಥೂಲವಾದ ಮಾತು, ‘ನನ್ನಂತಹ ಕಿರುಕುಳರು ಬದುಕಿ ಏನು ಪ್ರಯೋಜನ? ಕೂಳಿಗೆ ಕಾಳರು;’ ಎಂಬ ಒಳಗಣ ನೋವಿಗೆ ಶಾಂತಿಯನ್ನು ಕೊಡುತ್ತಲಿತ್ತು. ಟ್ರೇನಿಂಗ ಕಾಲೇಜಿನಲ್ಲಿ, ನನ್ನ ಸಂಗಡಿ ಗರಲ್ಲಿ ದೇಶಾಭಿಮಾನವನ್ನು ತುಂಬುವುದು ಆಗಿನ ನನ್ನ ಒಂದು ಹುಚ್ಚು. ನಾನು ಆಗ ಈ ಬಗೆಯ ಒಂದು ಭಾವನೆಯ ಮಬ್ಬಿನಲ್ಲಿ ಇಲ್ಲವಾಗಿದ್ದರೆ, ಮತ್ತೆ ಹಿಂದಿನ ‘ಆ ಭೂಮಾತೆಯೆ! ಒಡಲಲ್ಲಿ ಎಡೆಕೊಡು’ ಎಂಬ ಒಳಗಿನ ಮಿಡಿತವು ತಲೆಯೆತ್ತಿ ಆತ್ಮಹತ್ಯೆಯು ನನ್ನಿಂದ ಸಂಭವಿಸಬಹುದಾಗಿದ್ದಿತೇನೊ ಎಂದು ಈಗ ಹೆದರಿಕೆಯಾಗುತ್ತದೆ.

ಶ್ರೀ ಅಗರಕರಂತಹ ತಿರಿದು ತಿನ್ನಬೇಕಾಗಿದ್ದ ಮನೆತನದ ತರುಣರ ಉದಾಹರಣವು ನನ್ನಲ್ಲಿ ಬಡತನ ಭೀತಿಯನ್ನು ದೂರಮಾಡೀತು. ಬಡತನವನ್ನು ಆ ಜನ್ಮ ಸ್ವೀಕರಿಸಲು ಮನಸು ಸಿದ್ಧವಾಯ್ತು; ಆದರೆ ‘ದೇಶಸೇವೆ ಮಾಡುವುದು ಎಂದರೇನು?’ ಎಂಬುದೆ ಬಗೆಹರಿಯದ ಸಮಸ್ಯೆಯಾಗಿದ್ದಿತು. ಅದಕ್ಕಾಗಿ ಹೆಚ್ಚಿನ ಜ್ಞಾನವು ಅವಶ್ಯಕವೆಂದು ನನಗೆ ತಿಳಿದ ಬಳಿಕ ಪುಸ್ತಕ ಪಿಶಾಚ ಬಡಿದುಕೊಂಡಿತು. ವಯಸ್ಸಿನ ೧೮ ವರುಷಗಳು ಹೇಗೋ ಹೋಗಿವೆ. ೧೯೨೦ನೆಯ ವರುಷಕ್ಕೆ ಇಂಗ್ರೇಜಿ ಎ, ಬಿ, ಸಿ, ಆರಂಭಿಸಿದೆ. ನನ್ನ ಈ ನಿಶ್ಚಯದ ಸಾಧನೆಯ ಉಗ್ರತೆಯಲ್ಲಿ ಮೊದಲೆ ಸರಿಯಾದ ಪೋಷಣೆಲ್ಲವ ದೇಹ ಇನ್ನೂ ತೊಂದರೆಗೆ ಈಡಾಗಬೇಕಾಯಿತು. ‘ಮುದಿ ವಿದ್ಯಾರ್ಥಿ’ಯಾದ ನಾನು ಯಾರಿಂದ ಏನು ಕಲಿಯಲು ದೊರೆತರೂ ಕಲಿಯಲು ಮನಸ್ಸು ಅಣಿಮಾಡಿದೆ. ಈ ಅವಧಿಯಲ್ಲಿ ದೈಹಿಕ ಸುಖದ ಅಪೇಕ್ಷೆಯಂತೆ ಮಾನ ಮರ್ಯಾದೆಯ ಕಲ್ಪನೆಗಳ ಗಂಟನ್ನೂ ಕಟ್ಟಿ ಒಂದು ಮೂಲೆಯಲ್ಲಿ ತೂಗ ಹಾಗಿದೆ. ನನ್ನಲ್ಲಿ ಅವಶ್ಯಕತೆಯಷ್ಟು ಹೆಮ್ಮೆ ಈಗ ಸಹ ಒಮ್ಮೊಮ್ಮೆ ಕಾಣಿಸಿಕೊಳ್ಳದೆ ಇರಲು ಇದೇ ಕಾರಣ. ಇದರಿಂದ ಕೆಲವೊಂದು ಹಾನಿಯಾಗಿರುವಂತೆ ಲಾಭವೂ ಇಲ್ಲದೆ ಇಲ್ಲ. ಒಳ್ಳೆಯದೆಂದು ಮನವರಿಕೆಯಾದ ಯಾವುದೇ ಒಂದು ಕೆಲಸವನ್ನು ಕೈಕೊಂಡಾಗ ಅದರ ಸಲುವಾಗಿ ಮಾನಾಪಮಾನಗಳ ಎಣಿಕೆ, ಎಗ್ಗು ಇಲ್ಲದೆ ನಾನು ದುಡಿಯಬಲ್ಲೆ. ದುಡಿದಿದ್ದೇನೆ. ಆದರೆ ಇದರ ಲಾಭ ಪಡೆದು ಯಾರಾದರೂ ಬುದ್ದಿಪೂರ್ವಕ ವಾಗಿ ನನ್ನನ್ನು ಹತ್ತಿಕ್ಕಿ, ಹಿಂದಿಡುತ್ತಿರುವರೆಂದು ತಿಳಿದಾಗ ಅದನ್ನು ಸಹಿಸದೆ ವಿರೋಧಿಸು ವುದನ್ನೂ ಎಷ್ಟೋ ಕಟು ಅನುಭವಗಳ ನಂತರ ಕಲಿತಿದ್ದೇನೆ.

೧೯೨೦ರಲ್ಲಿ ಅಸಹಕಾರದ ಆಂದೋಲನವು ಬಂದಿತು. ನನ್ನ ಗೆಳೆಯರಾದ ಶ್ರೀ ಬುರ್ಲಿ ಯವರು ನಾಗಪುರ ಕಾಂಗ್ರೆಸ್ಸಿನ ಸಂದೇಶವನ್ನು ಹರಡಲು ತಮ್ಮ ನೌಕರಿಯನ್ನು ತೊರೆದು ವಿಜಾಪುರ ಜಿಲ್ಲೆಯಲ್ಲಿ ಬಿರುಗಾಳಿಯಂತೆ ಸಂಚರಿಸಲಾರಂಭಿಸಿದರು. ಅವರು ಧಾರವಾಡಕ್ಕೆ ಬಂದು ‘ಇನ್ನೂ ನೀನು ಮಾತೃಭೂಮಿಯ ಕರೆಗೆ ಓಗುಡುವುದು ಎಂದು? ದೇಶದಲ್ಲಿ ಇಂತಹ ಕ್ರಾಂತಿ ಹಬ್ಬಿರಲು ಈಗಲೂ ಮೀನ – ಮೇಷವೆ?’ ಎಂದು ನನಗೆ ಚಿಕ್ಕೋಡಿಗೆ ಕಾಗದ ಬರೆದರು. ಅಷ್ಟರಲ್ಲಿ ಚಿಕ್ಕೋಡಿಯೊಳಗಣ ನನ್ನ ಚಟುವಟಿಕೆಗಳಿಗಾಗಿ ಪೋಲೀಸರ ಉಪಟಳಕ್ಕೆ ಆರಂಭವಾಗಿದ್ದಿತು. ದೇಶದ ಸಲುವಾಗಿ ತಾನು ಯಾವ ಬಗೆಯ ಅಳಿಲು ಸೇವೆಯನ್ನು ಸಲ್ಲಿಸಬಲ್ಲೆ ಎಂಬ ಬಗೆಗೆ ಎಡೆಬಿಡದೆ ನನ್ನನ್ನು ನಾನು ತೂಗಿ ನೋಡಿಕೊಳ್ಳುತ್ತ ಲಿದ್ದೆ. ಧಾರವಾಡಕ್ಕೆ ೪ – ೬ ಬಾರಿ ಬಂದು ಇಲ್ಲಿ ಎಲ್ಲಿಯಾದರೂ ನಿಲ್ಲಲ್ಲು ಒಂದಡಿ ನೆಲ ದೊರೆಯಬಲ್ಲುದೆ? ಎಂದು ವಿಚಾರಿಸಿಯೂ ಹೋಗಿದ್ದೆ. ನಾನೂ ಶ್ರೀ ಬುರ್ಲಿಯವರೂ ಅಂದಿನ ತರುಣರ ಮುಂದಾಳುಗಳಾದ ದೇ. ಭ. ದಿವಾಕರ ರಂಗರಾಯರನ್ನು ಕೋಟೆಯಲ್ಲಿ ಅವರು ನಡೆಸಿದ್ದ ರಾಷ್ಟ್ರೀಯ ವಿದ್ಯಾಲಯದಲ್ಲಿ ಒಮ್ಮೆ ಕಂಡು ಅವರಿಂದ ಏನಾದರೂ ನೆರವು ದೊರೆಯಬಹುದೆ ಎಂದು ಮಾತನಾಡಿಸಿದ್ದಾಯಿತು. ಮಹಾತ್ಮಾಜೀಯವರ ಉಪದೇಶ ದಿಂದ ಸ್ಫೂರ್ತಿಗೊಂಡು ನಾಡಿನ ನಾಲ್ಕು ಮೂಲೆಗಳಿಂದ ಸಾವಿರಾರು ತರುಣರು ಮುನ್ನುಗ್ಗಿ ದೇಶಕ್ಕಾಗಿ ದುಡಿಯಲು ಬರುತ್ತಿರುವಾಗ ಮುಂದಾಳುಗಳು ಯಾರಿಗೆ, ಎಷ್ಟೆಂದು ಸಹಾಯ ಕೊಡುವುದು ಸಾಧ್ಯ? ಸಹಾನುಭೂತಿಯನ್ನು ತೋರಿದರು. ಅದಕ್ಕಾಗಿ ನಮ್ಮ ಕೃತಜ್ಞತೆ ಸೂಚಿಸಿ ಮರಳಿದೆವು.

ತಮ್ಮ ನಾಡಿನ ಬಂಧವಿಮೋಚನಕ್ಕಾಗಿ ದುಡಿದ ದೇಶವಿದೇಶದ ಹಲವು ಮಹಾವಿಭೂತಿ ಗಳ ಚರಿತೆಗಳನ್ನು ಓದಿದ್ದೆ. ಲೋಕಮಾನ್ಯ ತಿಲಕರಿಂದ ಪಡೆದ ಸ್ಫೂರ್ತಿಯಂತೂ ಸರಿ. ನನ್ನ ಓದಿನಲ್ಲಿ ಮ್ಯಾಝಿನಿ ಮತ್ತು ಅರವಿಂದ ಘೋಷರು ನನಗೆ ಹೆಚ್ಚು ಮೆಚ್ಚಿಕೆಯವ ರಾದರು. ಶ್ರೀ ಅರವಿಂದ ಚರಿತ್ರೆ ಲೇಖಕನೆಂದೇ ಧಾರವಾಡದಲ್ಲಿ ನಾನು ಮೊದಲು ಕಾಲಿಟ್ಟೆ. ಮ್ಯಾಝಿನಿ ಮಹಾಪುರುಷರ ಮೊದಲಾದ ಚರಿತೆಗಳನ್ನು ಬರೆದು ಪ್ರಕಟಿಸಬೇಕೆಂಬುದೂ ಅಂದಿನ ಒಂದು ನಿಶ್ಚಯವಾಗಿತ್ತು ಮತ್ತು ಈ ಪ್ರಕಟನೆಗಳ ಮೂಲಕ ಉಪ ಜೀವನವು ಸಾಗಲು ಸಾಧ್ಯವೇ ನೋಡಬೇಕೆಂದು ನಿರ್ಧರಿಸಿ ಧಾgಡಕ್ಕೆ ಅಂದು ಬಂದುದಾಯಿತು.

ಮನುಷ್ಯ ಸ್ವಭಾವದ ಪ್ರತ್ಯಕ್ಷ ಪರಿಚಯವು ಅಷ್ಟಕಷ್ಟೇ. ಲೋಕವನ್ನು ಕಂಡುದೆಲ್ಲ ಹೆಚ್ಚಾಗಿ ಪುಸ್ತಕಗಳ ಮುಖಾಂತರವಾಗಿಯೆ. ದೇಶದ ಸ್ವಾತಂತ್ರ್ಯಕ್ಕಾಗಿ ಒಂದು ಮಹಾಕಾರ್ಯವು ಆರಂಭವಾಗಿದೆ; ಅದರಲ್ಲಿ ತಾನೂ ಅಂಶತಃ ಪಾಲುಗಾರನಾಗಿ ಕೃತಾರ್ಥನಾಗಬೇಕೆಂಬ ಒಂದು ಹಂಬಲವಲ್ಲದೆ ಬೇರೆ ಭಾವನೆಗಳ ಅರಿವಿಲ್ಲ. ಹೊಟ್ಟೆಯ ಮಟ್ಟಿಗೆ ಎಲ್ಲಿಯಾದರೂ ಒಂದು ಅನುಕೂಲ ದೊರೆತರಾಯಿತು. ಮುಂದಿನ ಕಾರ್ಯಗಳೆಲ್ಲ ಸುಸೂತ್ರವಾಗಿ ತನ್ನ ತಾನೆ ನಡೆಯುವುವು ಎಂಬ ನಂಬುಗೆಯು ನನ್ನನ್ನು ಮುನ್ನೂಕುತ್ತಲಿತ್ತು. ಧಾರವಾಡಕ್ಕೆ ಬಂದ ಬಳಿಕ ದೇಶಸೇವೆಯ ವಿವಿಧ ಕ್ಷೇತ್ರಗಳ ಸ್ಪಷ್ಟವಾದ ಕಲ್ಪನೆಯು ಬರಲಾರಂಭಿಸಿತು. ಇನ್ನು, ಆ ಹಲವು ಕ್ಷೇತ್ರಗಳಲ್ಲಿ ನಾನು ಯಾವುದರಲ್ಲಿ ಸರಿಯಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಬಲ್ಲೆನೆಂಬ ಬಗೆಗೆ ಮನಸಿನಲ್ಲಿ ಬೇಗನೆ ಯಾವ ನಿರ್ಣಯವೂ ಆಗದಾಯಿತು.

ಆದರ್ಶವಾದಿಗಳಾದ ಹಲವು ಹಿರಿಯರ, ತರುಣರ ಪರಿಚಯವಾಯಿತು. ಸಾಧ್ಯವಾದರೆ ಪತ್ರಿಕಾ ವ್ಯವಸಾಯದಲ್ಲಿ ಸೇರಬೇಕೆಂಬುದು ನನ್ನ ಬಲವಾದ ಆಕಾಂಕ್ಷೆ. ಧಾರವಾಡದ ಗೋಳೀಬಾರಿನ ಗಲಾಟೆಯ ಕಾಲವದು. ಶ್ರೀ ಮುದವೀಡು ಕೃಷ್ಣರಾಯರು, ಶ್ರೀ ದಿವಾಕರ ರಂಗರಾಯರು ಮೊದಲಾದ ಮುಂದಾಳುಗಳೆಲ್ಲ ದೊಂಬಿ, ಲೂಟಿಗಳ ಆರೋಪಿತರಾಗಿ ಸೆರೆಮನೆಯಲ್ಲಿ ಸಿಕ್ಕು ಬಿದ್ದಿದ್ದರು. ಶ್ರೀ ಮುದವೀಡರು ನಡೆಸುತ್ತಿದ್ದ ‘ಕರ್ನಾಟಕ ವೃತ್ತ’ ಮತ್ತು ‘ಧನಂಜಯ’ವೆಂಬ ವಾರಪತ್ರಿಕೆಯು ಬರೆಯುವವರಿಲ್ಲದುದಕ್ಕೆ ನಿಲ್ಲುತ್ತವೆಂದು ತಿಳಿಯಿತು. ನನ್ನ ಮಿತ್ರರಾದ ಶ್ರೀ ಬುರ್ಲಿಯವರೂ ನಾನೂ ಅದರಲ್ಲಿ ತೀರ ಹುಮ್ಮಸದಿಂದ ಆವೇಶಯುಕ್ತ ಲೇಖನಗಳನ್ನು ಬರೆಯುತ್ತಿದ್ದೆವು. ಏನು ಬರೆಯುತ್ತಿದ್ದೆನೊ ನಾನರಿಯೆ. ಇಂದು ಅವನ್ನೋದಿ ನನಗೇ ಏನು ಎನಿಸಬಹುದೊ ಹೇಳಲಾರೆ. ಆ ಎಲ್ಲ ಬರೆಹಗಳ ಪಲ್ಲವಿಯೊಂದು ಮಾತ್ರ ನೆನಪಿದೆ. ‘ಏಳಿರಿ; ನಾಡಿಗಾಗಿ ಮಡಿಯಲು ಸಿದ್ಧರಾಗಿರಿ’. ‘ಏನು ಮಾಡುತ್ತ ಮಡಿಯ ಬೇಕು, ಎಂದರೆ ದೇಶಕ್ಕೆ ಸಹಾಯ ಮಾಡಿದಂತಾಗುವುದು?’ ಎಂದು ಅಂದು ಯಾರಾದರೂ ಕೇಳಿದ್ದರೆ ಮಹಾತ್ಮಾಜೀಯವರು ಕಲಿಸಿದ್ದ ‘ಖಾದೀ, ಅಸ್ಪೃಶೋ ದ್ಧಾರ, ಗ್ರಾಮೋದ್ಧಾರ….’ ಎಂಬ ಈ ಪಾಠವನ್ನೆ ನಾನು ಒಪ್ಪಿಸಿ ಬಿಡಬಹುದಾಗಿತ್ತು.

‘ಕರ್ನಾಟಕವೃತ್ತ’ದ ಆರ್ಥಿಕ ಸ್ಥಿತಿಯು ತೀರ ಅಸಮಾಧಾನಕರವಾಗಿದ್ದಿತೆಂದು ಗೊತ್ತು. ಮುಖ್ಯ ಸಂಪಾದಕರಾದ ಶ್ರೀ ಮುದವೀಡರು ಸೆರೆ ಮನೆಯಲ್ಲಿ ಬೇರೆ. ನನ್ನ ಅವರ ಪರಿಚಯ ಕೂಡ ಇರಲಿಲ್ಲ. ಶ್ರೀ ಬುರ್ಲಿಯವರಿಗೂ ಆ ಪತ್ರಿಕೆಯ ಆಗಿನ ವ್ಯವಸ್ಥಾಪಕರಿಗೂ ಆಪ್ತಬಾಂಧವ್ಯ. ಅಲ್ಲಿ ನಾನು ಹೋಗುತ್ತಿದ್ದುದು ಶ್ರೀ ಬುರ್ಲಿಯವರ ಸ್ನೇಹದ ಮೂಲಕ. ಎಲ್ಲಿಯೋ ನಾಲ್ಕು ತುತ್ತು ತಿಂದು, ಈ ವಾರಪತ್ರಿಕೆಗೆ ಹೀಗೆಯೆ ಬರೆಯುತ್ತ, ದೇಶಸೇವೆ ಮಾಡುತ್ತಲಿದ್ದೇನೆಂಬ ಭ್ರಾಂತಿಯಲ್ಲಿರುವುದಕ್ಕೆ ನನ್ನ ಇನ್ನೊಂದು ಮನಸು ಒಪ್ಪದಾಯಿತು.

ಈ ಅವಧಿಯಲ್ಲಿ ಶ್ರೀ ಸತ್ಯವಂತರಾವ್ ಮಳೆಬೆನ್ನೂರೆಂಬ ತೀವ್ರ ವಿಚಾರಿ ತರುಣರ ಭೆಟ್ಟಿಯಾಯಿತು. ನಮ್ಮ ನಾಡಿನಲ್ಲಿ ರಾಜಕೀಯ ಕ್ರಾಂತಿಯೊಡನೆ ಸಾಮಾಜಿಕ ಕ್ರಾಂತಿಯೂ ಆಗಲೇ ಬೇಕೆಂಬ ತೀವ್ರ ಆ ವೇಗದ ಉದ್ವೇಗದ ವಿಚಾರಗಳನ್ನು ಅವರು ಸಂದೊರೆತಾಗಲೆಲ್ಲ ಪ್ರತಿಪಾದಿಸುತ್ತಲಿದ್ದರು. ಅವರ ಆ ತಳಮಳ – ಕಳವಳವು ನನ್ನನ್ನು ಅವರತ್ತ ಸೆಳೆದಿತು. ಸಾಮಾಜಿಕ ಕ್ರಾಂತಿ, ಅದರಲ್ಲೂ ಸ್ತ್ರೀಯರ ಆಚಾರ ವಿಚಾರಗಳಲ್ಲಿ ಕ್ರಾಂತಿಯನ್ನು ಮಾಡ ಬೇಕೆಂದು ಅವರು ತಮ್ಮ ಜೀವನದ ನಿಶ್ಚಿತವಾದ ಗುರಿಯನ್ನಿಟ್ಟುಕೊಂಡಿದ್ದರು. ಮಹಿಳಾ ವಿದ್ಯಾಲಯವನ್ನು ಸ್ಥಾಪಿಸಿ ಅದರ ಮುಖಾಂತರವಾಗಿ ಅವರು ತಮ್ಮ ಅಣ್ಣಂದಿರೊಡನೆ ಈ ಕೆಲಸಕ್ಕೆ ಆರಂಭಿಸಿಯೂ ಆಗಿತ್ತು.

ಶ್ರೀ ಸತ್ಯವಂತರಾಯರ ವಿಚಾರಗಳೊಳಗಿನ ಎಷ್ಟೋ ಭಾಗವು ನನಗೂ ಇಷ್ಟವಾದುದೇ ಆಗಿತ್ತು. ತಮ್ಮ ಮಹಿಳಾ ವಿದ್ಯಾಲಯದಲ್ಲಿ ಕೆಲಸಕ್ಕೆ ಕರೆದರು. ನಾನೂ ಒಪ್ಪಿದೆ. ಆದರೆ ಒಂದು ವರ್ಷದ ಒಳಗಾಗಿಯೆ ಶ್ರೀ ಮಳೆಬೆನ್ನೂರ ಬಂಧುಗಳ ತತ್ವಜ್ಞಾನವೆಲ್ಲ ನನಗೆ ಪಚನವಾಗುವುದು ಸಾಧ್ಯವಿಲ್ಲವೆಂದು ಕಂಡುಬಂದಿತು.

ಉಪಜೀವನಕ್ಕೆ ಸ್ವಲ್ಪ ಅನುಕೂಲತೆ ದೊರೆತಿತೆಂದು ಹೆಂಡತಿಯನ್ನು ಕರೆಯಿಸಿದ್ದೆ. ಮದುವೆಯಾಗಿ ಎರಡು ವರುಷಗಳಾಗುತ್ತ ಬಂದಿದ್ದರೂ ಇನ್ನೂ ಒಂದೆಡೆಗೆ ನೆಲೆಯಾಗಿ ನಿಲ್ಲಲು ಆಗಿರಲಿಲ್ಲ. ಸಂಸಾರಿಗನ ಹೊಣೆಗಾರಿಕೆ ಏನೆಂಬುದರ ಸರಿಯಾದ ಕಲ್ಪನೆಯೂ ಇದ್ದಿಲ್ಲ. ನಾವೇನೊ ಗಂಡಸರು ತತ್ವ, ಆದರ್ಶಗಳೆಂದು ಹೊರಟರೂ ಮನೆಯವರು ಅದಕ್ಕೆ ಸಹಕಾರಿಗಳಾಗಿ ಸಂತೋಷದಿಂದ ತಮ್ಮ ಸಮ್ಮತಿಯನ್ನು ಕೊಡದೆ ಇದ್ದರೆ ಜೀವನ ವೆಲ್ಲ ಆಭಾಸ, ದುಃಖಮಯವಾಗುವುದೆಂಬ ಮಾತು ಸ್ಪಷ್ಟವಾಗಿ ಕಾಣಿಸತೊಡಗಿತು. ಅದಕ್ಕಾಗಿ ನಾನೂ ಹೆಂಡತಿಯೂ ಕೂಡಿಯೆ ಜ್ಞಾನ ಜಿಜ್ಞಾಸೆಗಳಿಗಾಗಿ ಕೆಲವೊಂದು ಅಭ್ಯಾಸ, ವಿಚಾರವಿನಿಯಮಕ್ಕೆ ತೊಡಗಿದೆವು. ಎಷ್ಟೋ ಸಂಗತಿಗಳಲ್ಲಿ ‘ಹೇಳದೆ ವಿದ್ಯೆವ ಕಲಿಸುವ ಗುರುವೂ’ ಅವಳು ನನಗೆ. ಅಭ್ಯಾಸ, ವಿಚಾರ, ಅನುಭವಗಳ ತಿಳಿಬೆಳಕಿನಲ್ಲಿ ರೂಢಿ, ಸಂಪ್ರದಾಯಗಳೊಳಗಿನ ಒಳ್ಳೆಯ ಭಾಗವು ಯಾವುದೊ ಅದನ್ನು ಅರಿತು ಆಚರಿಸಿ, ನಮ್ಮ ಸಂಸ್ಕೃತಿಯ ಮಟ್ಟವನ್ನು ಇನ್ನೂ ಹೆಚ್ಚಿಸಿಕೊಳ್ಳಬೇಕೆಂಬ ದೃಷ್ಟಿಯಿಂದ ನಾವಿಬ್ಬರೂ ನಮ್ಮ ಇರುವನ್ನು ರೂಪಿಸಿಕೊಳ್ಳಲಾರಂಭಿಸಿದೆವು. ಇದರಲ್ಲಿ ನಾನು ಬಹುಮಟ್ಟಿಗೆ ಯಶಸ್ವಿಯಾಗಿ ದ್ದೇವೆಂದು ಹೇಳಲು ನನಗೆ ಸಂತೋಷವಾಗುತ್ತಿದೆ. ತಿಳಿವಿನ ಬೆಳಕಿನಲ್ಲಿ ನಿತ್ಯಜೀವನವನ್ನು ನಡೆಸಿದಾಗ ಮುಂದೆ ಸಾಗುವಾಗ ಯಾವ ಅಡೆತಡೆ, ನಾಚಿಕೆ, ಸಂಕೋಚಗಳಿಗೂ ಜಗ್ಗದೆ ನಮ್ಮ ಹಾದಿಯಲ್ಲಿ ನಾವು ನಡೆಯಬೇಕೆಂಬ ನಿಶ್ಚಯಕ್ಕೆ ಅವುಗಳಿಂದ ವಿಶೇಷವಾದ ಆತಂಕ ವುಂಟಾದ ಪ್ರಸಂಗವೇ ನನಗೆ ಗೊತ್ತಿಲ್ಲ. ತೊಂದರೆಗಳು ಬೇಕಾದಷ್ಟು ಬಂದಿವೆ. ಆದರೆ ಇಬ್ಬರೂ ವಿಚಾರದಿಂದ ಬಗೆ ಹರಿಸಿಕೊಂಡಿದ್ದೆವೆ. ನಮ್ಮ ಗುರಿಯಿಂದ ಕದಲಲಿಲ್ಲ.

ಬಡತನವನ್ನು ಎದುರಿಸಲು ಅವಳು ಎಂದೂ ಹಿಂಜರಿಯಲಿಲ್ಲ. ಮಹಿಳಾ ವಿದ್ಯಾಲಯದ ಕೆಲಸ ಬಿಟ್ಟು, ನಾಳೆ ಏನು? ಎಂಬ ಮಧ್ಯಾಹ್ನದ ಚಿಂತೆ ಎದುರು ನಿಂತು ಹೆದರಿಸುತ್ತಿದ್ದರೂ ಇದ್ದುದನ್ನು ಒಪ್ಪತ್ತು ತಿಂದೇ ಸಮಾಧಾನದಿಂದ ಇರುವ ಎದೆಗಾರಿಕೆಯನ್ನು ತೋರಿದ್ದಾಳೆ. ಮಕ್ಕಳಿಗೆ ಕಂನುಡಿಯನ್ನು ಕಲಿಸುವುದನ್ನು ಕಂಡು ಬಳಗದವರು ಹೀಯಾಳಿಸಿ ಕುಚೇಷ್ಟೆ ಮಾಡಿದರೂ ಅವಳು ತನ್ನ ಮನಸ್ಸನ್ನು ತಿದ್ದಿಕೊಂಡು ನನಗೇ ಬೆಂಬಲವಾಗಿ ನಿಂತಿದ್ದಾಳೆ. ಅತಿಥಿ ಸತ್ಕಾರದಲ್ಲಿ ನಮಗೆ ಇಬ್ಬರಿಗೂ ಒಂದು ಬಗೆಯ ಸಂತೋಷ. ಆರ್ಥಿಕ ಸ್ಥಿತಿಯನ್ನು ನೆನೆದು ಜಿಪುಣರಂತೆ ಲೆಕ್ಕ ಹಾಕುವುದು ನಮ್ಮ ಪಾಲಿಗೆ ಬಂದಿದ್ದಿಲ್ಲವಾದರೆ, ನಾವು ಈ ಆನಂದವನ್ನು ಇನ್ನೂ ಎಷ್ಟೋ ಅನುಭವಿಸಬಹುದಾಗಿದ್ದಿತಲ್ಲ, ಎಂದುಕೊಂಡು ನಾವು ಮಿಡುಕುತ್ತಿರುತ್ತೇವೆ. ಗುಣವಂತರು, ಧೀಮಂತರು, ಸಾಧುಜೀವಿಗಳು, ಸಜ್ಜನರು ಮನೆಗೆ ಬರಬೇಕು; ಅವರನ್ನು ಉಪಚರಿಸುವ ಸುಸಂಧಿ ನಮಗೆ ದೊರೆಯಬೇಕು – ಎಂದು ಯಾವಾಗಲೂ ನಮ್ಮ ಹಾರಯಿಕೆ. ನಮ್ಮ ಜೀವನದೊಳಗಿನ ರಸನಿಮಿಷಗಳಿವು. ಬಂದ ಅತಿಥಿಗಳು ಯಾವ ಬಗೆಯವರಿರಲಿ, ನಮ್ಮಲ್ಲಿ ಭಿನ್ನಪಂಕ್ತಿಯಿಲ್ಲ. ನನ್ನ ಸಂಗಾತಿಯ ಒಪ್ಪಿಗೆಯೂ ಕ್ರಮವಾಗಿ ದೊರೆತುದು ಒಂದು ವಿಶೇಷ ಸಮಾಧಾನದ ಸಂಗತಿ. ಈ ವಿಷಯದಲ್ಲಿ ನಾನು ತುಂಬಾ ಸುದೈವಿ. ಸುಶೀಲೆಯಾದ ಹೆಂಡತಿ, ಸುವಿಚಾರಿಗಳಾದ ಮಕ್ಕಳನ್ನು ಪಡೆದ ಭಾಗ್ಯಶಾಲಿ.

ಬಂದವರನ್ನು ಸರಸ ವಿನೋದದ ಹಾಸ್ಯ ಲಹರಿಗಳಲ್ಲಿ ಓಲಾಡಿಸಿ ಆನಂದಗೊಳಿಸುವ ಕಲೆಗೆ, ನನ್ನ ಪೂರ್ವ ಸಂಸ್ಕಾರಗಳ ಮೂಲಕ ನಾನು ಆಜನ್ಮ ಎರವಾಗಿದ್ದುದಕ್ಕಾಗಿ ನನಗೆ ಇಂತಹ ಸಂದರ್ಭಗಳಲ್ಲಿ ಬಹಳ ಬೇಸರವಾಗುತ್ತದೆ. ಈ ವಿಷಯದಲ್ಲಿ ಶ್ರೀ ಬೇಂದ್ರೆಯವರ ಚಾತುರ್ಯವು ತುಂಬ ಕೊಂಡಾಡುವಂತಹದು. ಅವರ ಈ ಆಕರ್ಷಕ ಗುಣವೇ ನನ್ನ ಅವರ ಸ್ನೇಹಕ್ಕೆ ಕಾರಣವಾಯಿತು. ಅಲ್ಲದೆ ಅವರಲ್ಲಿರುವ ಜ್ಞಾನಜಿಜ್ಞಾಸೆ ಬಹಳ ಸ್ವಲ್ಪ ಜನರಲ್ಲಿ ಕಾಣಲಿಕ್ಕೆ ಸಿಗುತ್ತದೆ. ಈ ವಿಷಯದಲ್ಲಿ ನನಗೊಬ್ಬ ಸಮಾನ ಧರ್ಮನು ದೊರೆತ ಸಂತೋಷ ಬೇರೆ. ನನ್ನ ಮಾತು ಯಾವಾಗಲೂ ವೇದಾಭ್ಯಾಸ ಜಡರಂತಹ ವರ್ಗಕ್ಕೆ ಸೇರಿದ ಭಾರವಾದ ಬಗೆಯದು. ನೀರಸ. ಆದುದರಿಂದ ಆಡುವುದಕ್ಕಿಂತ ಕೇಳುವುದರಲ್ಲಿಯೆ ನನಗೆ ಹೆಚ್ಚು ಆನಂದ. ನನ್ನದು ವಾಗ್ಮಿಯ ವೈಖರಿಯಲ್ಲದ ಅಥವಾ ವಾದಿಯ ಸಂಭಾಷಣ ಚಾತುರ್ಯವೂ ಅಲ್ಲದ ಒಂದು ವಿಷಯವನ್ನು ಕುರಿತು ನನ್ನಲ್ಲಿ ಉಂಟಾದ ಭಾವನೆಯ ಕಳವಳದ ಉಸಿರು. ಮಿಗಿಲಾದ ಶ್ರದ್ಧೆಯ ಬೆಂಬಲವಿರುವವರೆಗೂ ಅದು ನಿಟ್ಟುಸುರಾಗಲಾರದೆಂದು ನನ್ನ ನಂಬುಗೆ.

ಮಹಿಳಾ ವಿದ್ಯಾಲಯವನ್ನು ಬಿಟ್ಟ ಬಳಿಕ ಕೆಲದಿನಗಳ ತರುವಾಯ ‘ಕರ್ಮವೀರ’ ವಾರಪತ್ರಿಕೆಯಲ್ಲಿ ಕೆಲಸಕ್ಕೆ ನಿಂತೆ. ದೇ. ಭ. ದಿವಾಕರರು ಸೆರೆಮನೆಯಲ್ಲಿದ್ದರು. ಅವರು ಮರಳಿ ಬರುವವರೆಗೆ ಅದನ್ನು ನಡೆಸಿಕೊಂಡು ಹೋಗುವ ಹೊಣೆಯನ್ನು ಶ್ರೀ ಆಲೂರ ವೆಂಕಟರಾಯರು ವಹಿಸಿಕೊಂಡಿದ್ದರು. ಅವರ ನೆರವಿಗನಾಗಿ ನಾನು ಕೆಲಸ ಮಾಡುತ್ತಿದ್ದೆ. ಆಗ ಕರ್ಮವೀರದಲ್ಲಿ ಬಂದ ಒಂದು ಲೇಖನವನ್ನೋದಿ ಶ್ರೀ ಗಳಗನಾಥರು ಶ್ರೀ ಆಲೂರ ವರಿಗೆ ಬಹಳ ಹೊಗಳಿ ಕಾಗದ ಬರೆದಿದ್ದರು. ಆ ಲೇಖನವು ನನ್ನದಾಗಿದ್ದುದರಿಂದ ಶ್ರೀ ಆಲೂರವರಿಗೆ ನನ್ನ ವಿಷಯದಲ್ಲಿ ಅನುಕೂಲ ಅಭಿಪ್ರಾಯವಾಗಲು, ಸಹಾಯಕವಾಯಿ ತೆಂದು ನಾನು ಬಗೆದಿದ್ದೇನೆ. ಉಡುಪಿಯಲ್ಲಿ ಆಗ ‘ಸತ್ಯಾಗ್ರಹಿ’ ಎಂಬ ವಾರಪತ್ರಿಕೆ ಹೊರಡುತ್ತಿತ್ತು. ಶ್ರೀ ವಿ.ಎಸ್. ಕುಡ್ವರು ಕೆಲದಿನ ಅದರ ಸಂಪಾದಕರಿದ್ದರು. ‘ಬೆಂಕಿಯು ಆರಿತೆ?’ ಎಂಬಿವೆ ಮೊದಲಾದ ನನ್ನ ಕೆಲವು ಬಿಡಿಬರಹಗಳನ್ನು ಎತ್ತಿ ತಮ್ಮ ಪತ್ರಿಕೆಯಲ್ಲಿ ಮುದ್ರಿಸುತ್ತಿದ್ದುದು ನನ್ನ ಲೇಖನ ವ್ಯವಸಾಯಕ್ಕೆ ಉತ್ತೇಜನವನ್ನಿತ್ತಿತ್ತು. ಹೊರಗಿನ ಜಗತ್ತಿಗೆ ನನ್ನ ಪರಿಚಯವು ಸ್ವಲ್ಪವೂ ಇದ್ದಿಲ್ಲ. ಆದರೂ ನನ್ನ ಬರೆವಣಿಗೆಯೊಳಗಿನ ಯಾವುದೋ ಒಂದು ಅಂಶವು ಜನರನ್ನು ಹೋಗಿ ಮುಟ್ಟುತ್ತದೆ; ತಟ್ಟುತ್ತದೆ ಎಂಬುದು ನನಗೆ ಆಗ ಕಂಡುಬಂದಿತು.

ಶ್ರೀ ದಿವಾಕರ ರಂಗರಾಯರು ಸೆರೆಮನೆಯಿಂದ ಮರಳಿ ಬಂದರು. ಅವರ ಸಹಕಾರಿಯಾಗಿ ಕೆಲಸ ಮಾಡುವ ಯೋಗವು ನನಗೆ ಇನ್ನು ದೊರೆತಿತೆಂದು ಸಂತೋಷಪಡುವಷ್ಟರಲ್ಲಿಯೆ ಮತ್ತೊಮ್ಮೆ ಅವರನ್ನು ಪೋಲೀಸರು ಸೆರೆಮನೆಗೆ ಅಟ್ಟಿದರು. ಕರ್ಮವೀರದ ಸಂಪಾದಕೀಯ ಎಲ್ಲ ಕೆಲಸವೂ ನನ್ನ ಪಾಲಿಗೆ ಬಂದಿತು. ಅದನ್ನು ನನಗೆ ತಿಳಿದ ರೀತಿಯಲ್ಲಿ ನಾನು ನಡೆಸಿ ಕೊಂಡು ಹೋದೆ. ಶ್ರೀ ದಿವಾಕರರ ಸಹಕಾರಿಗಳಾದ ಶ್ರೀಮಾನ್ ಹುಕ್ಕೇರಿಕರ ರಾಮರಾಯರು ಸೆರೆಮನೆಯಿಂದ ಮರಳಿ ಬಂದ ಬಳಿಕ ಕರ್ಮವೀರದ ಸಂಚಾಲಕರಾಗಿದ್ದರು. ಸಂಪಾದಕತ್ವವು ಶ್ರೀ ಮಿರ್ಜಿ ವೆಂಕಟರಾಯರ ಕಡೆಗೆ ಹೋಯಿತು. ಕರ್ಮವೀರದಿಂದ ಬಿಡುಗಡೆ ಹೊಂದ ಬೇಕಾಯಿತು. ಮತ್ತೆ ಮಧ್ಯಾಹ್ನದ ಚಿಂತೆ ಬೆಂಬತ್ತಿತ್ತು.

ನನಗೆ ಲೇಖನದ ವ್ಯವಸಾಯದಲ್ಲಿ ಕೃಷಿ ಮಾಡಲು ಮೊದಲು ಇಂಬು ದೊರೆತ ‘ಕರ್ಮವೀರ’ ಪತ್ರಿಕೆಯ ವಿಷಯದಲ್ಲಿ ನನ್ನ ಆತ್ಮೀಯತೆಯು ಎಂದೂ ಕಡಿಮೆಯಾಗಲಿಲ್ಲ. ಶ್ರೀ ದಿವಾಕರರು ಬಂದಿವಾಸದಿಂದ ಮರಳಿ ಕಾರ್ಯರಂಗಕ್ಕೆ ಬಂದ ಬಳಿಕ ನನ್ನನ್ನು ತಮ್ಮೊಡನೆ ಕೆಲಸಕ್ಕೆ ಬರಲು ಕೇಳಿದ್ದರು. ಎಂದಿನಿಂದಲೂ ನಾನು ಅದರ ಲೇಖಕರ ಬಳಗದಲ್ಲಿ ಒಬ್ಬನಾಗಿರುವೆನು.

ಮೊದಲನೆಯ ಮಹಾಯುದ್ಧ ಕಾಲದಲ್ಲಾಯ್ತು; ಮತ್ತು ಮುಂದೆ ನಾಡಿನ ನಿಃಶಸ್ತ್ರ – ಪ್ರತಿಕಾರದ ಹೋರಾಟ ಕಾಲದಲ್ಲಾಯ್ತು ‘ಸತ್ಯಕ್ಕೆ ಸಾವಿಲ್ಲ;’ ಸತ್ಯಮೇವ ಜಯತೇ’ ಎಂಬ ಮಾತು ಅಡಿಗಡಿಗೆ ಕೇಳಬರುತ್ತಲಿತ್ತು. ಆದರೆ ನಾನು ಆ ಮಾತನ್ನು ಹೇಳುವಾಗ ನನಗೆ ಒಳಗಣಿಂದ ತಡೆಯುಂಟಾಗಿ ನೀನಿದರಲ್ಲಿ ನಿಜವಾಗಿ ನಂಬುವೆಯಾ?’ ಎಂಬ ಪ್ರಶ್ನೆಯು ಕೇಳಿಬರುತ್ತಲಿತ್ತು. ಅಂದಿನಿಂದಲೂ ಸತ್ಯವೆಂದರೇನು? ಸತ್ಯಕ್ಕೆ ಜಯವೆಂದರೇನು? ಎಂಬುದನ್ನು ಸರಿಯಾಗಿ ಅರಿತುಕೊಳ್ಳುವ ಕುತೂಹಲ ನನಗೆ.

ರಾಜಕೀಯ ರಂಗದೊಳಗಿನ ದಿನಕೊಂದು ಬಗೆಯಾಗಿ ಬದಲಾಗುವ ವಾತಾವರಣಕ್ಕೆ ಮನಸ್ಸನ್ನು ಕೂಡಲೆ ಸರಿ ಹೊಂದಿಸಿಕೊಳ್ಳುವ ಮನಸ್ಥಿತಿಯು ನನ್ನಲ್ಲಿ ಇಲ್ಲದುದರಿಂದ, ಈ ಮೊದಲು ಹಲವು ಬಾರಿ ನಾನು ನನ್ನೊಡನೆಯೆ ತೀವ್ರವಾದ ಹೋರಾಟವನ್ನು ನಡೆಸಬೇಕಾ ದುದರ ಅನುಭವವು ಈಗ ಮತ್ತೆ ವೃತ್ತಪತ್ರಿಕೆಯೇ ಮುಖ್ಯವಾದ ನನ್ನ ವ್ಯವಸಾಯವಾಗು ವುದಕ್ಕೆ ಅಡ್ಡ ಬಂದಿತು. ಆದರೆ ನಾಡಿನ ಬಿಡುಗಡೆಗಾಗಿ ನಡೆದ ಆಂದೋಲನದಿಂದ ಅಲಿಪ್ತನಾಗಿ ದೂರವಿರುವುದೂ ನನ್ನಿಂದ ಸಾಧ್ಯವಿಲ್ಲ. ನನಗೆ ನೀಗಿದಷ್ಟು ಕೆಲಸವನ್ನು ಮಾಡುತ್ತ ಬಂದಿದ್ದೇನೆ. ಅದಕ್ಕಾಗಿ ಪೋಲೀಸರ ಪೀಡೆಗೂ ಗುರಿಯಾಗಿದ್ದೇನೆ. ಸೆರೆಮನೆಯ ಹೊಸತಿಲವರೆಗೂ ಹೋಗಿ ಬಂದಿದ್ದೇನೆ. ಅವರು ಏಕೊ ಒಳಗೆ ಬೀಗ ಹಾಕಿಡಲಿಲ್ಲ; ಹೊರಗೆಯೆ ದಿಗ್ಬಂಧನದಲ್ಲಿರಿಸಿದ್ದರು.

ಗೆಳೆಯರು ಹಲವರು ಸೇರಿ ಆದರ್ಶ ಸಾಮೂಹಿಕ ಜೀವನದ ಒಂದು ಪ್ರಯೋಗ ನಡೆಸಬೇಕು, ಅದಕ್ಕಾಗಿ ಒಂದೆಡೆಗೆ ಎಲ್ಲರೂ ಸೇರಿ ಇರುವುದಕ್ಕೆ ಭೂಮಿಯನ್ನು ಕೊಳ್ಳಬೇಕು; ತಮ್ಮದೆ ಆದ ಒಂದು ಮಾಸಪತ್ರಿಕೆ, ಒಂದು ಶಿಕ್ಷಣ ಸಂಸ್ಥೆ ಅದಕ್ಕೆ ಅವಶ್ಯ; ಎಂಬಿವೇ ಮೊದಲಾದ ಹೊಂಗನಸಿನ ಕನವರಿಕೆಯಲ್ಲಿ ಈ ಮಧ್ಯೆ ಕೆಲದಿನಗಳು ಉರುಳಿದವು. ಆ ದಿಕ್ಕಿನಲ್ಲಿ ಒಂದೆರಡು ಹೆಜ್ಜೆ ನಡೆದುದೂ ಆಯಿತು. ಆದರೆ ಆದರ್ಶ ಮತ್ತು ವ್ಯವಹಾರಗಳನ್ನು ಜೊತೆಗೂಡಿಸುವುದಕ್ಕೆ ಅವಶ್ಯಕವಾದ ವಾತಾವರಣವನ್ನು ನಿರ್ಮಿಸುವುದು ನನ್ನಿಂದಾಗಲಿ, ಇನ್ನುಳಿದವರಿಂದಾಗಲಿ ಅಸಾಧ್ಯವೆಂದು ಮನವರಿಕೆಯಾದೊಡನೆ ನಾನು ಅಂದಿನಿಂದ ನನಗೆ ನೀಗಬಹುದಾದ – ನನ್ನ ಅಂತಃಕರಣಕ್ಕೆ ಪ್ರಿಯವಾದ ಕೆಲಸಗಳಲ್ಲಿ ತೊಡಗಿದೆ (೧೯೩೦). ಮುಂದೆ ಎರಡು ಮೂರು ವರುಷಗಳಲ್ಲಿ ಉಳಿದವರಿಗೂ ಇದೇ ಅನುಭವವು ಬಂದುದು ಕಂಡು ಬಂದಿತು.

ನಾನೊಬ್ಬ ಸಂಸ್ಕೃತಿಯ ಅಭ್ಯಾಸಿ. ಸಂಸ್ಕೃತಿಯ ಉಗಮ, ವಿಕಾಸದ ಇತಿಹಾಸವನ್ನರಿತು ಕೊಂಡು ಅದರ ಬೆಳಕಿನಲ್ಲಿ ನಮ್ಮ ನಾಡಿನ ಇಂದಿನ ಜೀವನವು ಬೆಳೆಯಬೇಕೆಂಬ ಹಂಬಲ ನನಗೆ. ಅದಕ್ಕಾಗಿ ಅವಶ್ಯಕವಾದ ಅಭ್ಯಾಸ, ಆಚಾರಗಳು ನನಗೆ ಇಷ್ಟ.

ಈ ದೃಷ್ಟಿಯಿಂದಲೇ ಕರ್ಮವೀರದಲ್ಲಿ ನಾನು ಹಲವು ಲೇಖನಗಳನ್ನು ಬರೆದಿದ್ದೇನೆ. ಕಂನಾಡಿನ ಜನಗಳ ನಡೆ – ನುಡಿಗಳ ಅಭ್ಯಾಸದಲ್ಲಿ ನನಗೆ ಕಂಡ ಕೆಲವು ಮಾತುಗಳನ್ನು ಅಲ್ಲಿ ವಿಮರ್ಶಿಸಿದ್ದೇನೆ. ೧೯೨೪ರ ಬೆಳಗಾವಿ ಕಾಂಗ್ರೇಸ್ಸಿನಲ್ಲಿ ಕಂನಾಡ ವೈಶಿಷ್ಟ್ಯಕ್ಕೆ ಪ್ರಾಶಸ್ತ್ಯವಿರಬೇಕೆಂಬ ಚಳವಳಿಯನ್ನು ಯಶಸ್ವಿಯಾಗಿಸಲು ಕರ್ಮವೀರವು ಆಗ ತುಂಬ ನೆರವಾಗಿದೆ. ಕರ್ಣಾಟಕದ ಏಕೀಕರಣವಾಗದೆ ನಮ್ಮ ಸಂಸ್ಕೃತಿಯು ಉಳಿಯಲಾರದೆಂಬ ಮನವರಿಕೆಯಾಗಿ, ಬೆಳಗಾವಿಯ ಕಾಂಗ್ರೆಸ್ಸಿನ ಕಾಲಕ್ಕೇ ಕರ್ಣಾಟಕ ಏಕೀಕರಣ ಸಮ್ಮೇಳನ ವನ್ನೂ ನೆರವೇರಿಸಬೇಕೆಂದು ಆಗಿನ ಇಲ್ಲಿಯ ಮುಖಂಡರಾದ ಶ್ರೀ ಕಡಪಾ ರಾಘವೇಂದ್ರ ರಾಯರು, ಶ್ರೀ ಆಲೂರ ವೆಂಕಟರಾಯರು, ಶ್ರೀ ನರುಗಂದ ರಾಮರಾಯರುಗಳೊಡನೆ ಚರ್ಚಿಸಿ ನಿರ್ಧರಿಸುವಲ್ಲಿ ಆ ಸಭೆಗಳ ಆಮಂತ್ರಕನ ಹೊಣೆಯನ್ನು ನಾನು ಹೊತ್ತುಕೊಂಡಿದ್ದೆ. ಮುಂದೆ ಬೆಳಗಾವಿಯಲ್ಲಿ ಜರುಗಿದ ಮೊದಲನೆಯ ಕರ್ಣಾಟಕ ಏಕೀಕರಣ ಸಮ್ಮೇಲನಕ್ಕೆ ನಾನೂ ಶ್ರೀ ಮಂಗಳವೀಡು ಶ್ರೀನಿವಾಸರಾಯರೂ ಕಾರ್ಯದರ್ಶಿಗಳಾಗಿದ್ದೆವು. ಬೆಳಗಾವಿಯಲ್ಲಿ ಈ ಸಮ್ಮೇಲನಕ್ಕೆ ಬೇಕಾದ ಜನ ಸಹಾಯವನ್ನು ದೊರಕಿಸುವಲ್ಲಿ ಶ್ರೀ ಮಂಗಳವೀಡರು ತುಂಬ ಪರಿಶ್ರಮಪಟ್ಟರು. ಏಕೀಕರಣದಲ್ಲಿ ವಿಶ್ವಾಸವಿಲ್ಲದಿದ್ದರೂ ಸಮಾಜದಲ್ಲಿ ಉಳಿದ ದೃಷ್ಟಿಯಿಂದ ಗಣ್ಯರಾದ ಕೆಲವರನ್ನು ಸಮ್ಮೇಲನಕ್ಕೆ ಬರಲು, ಅದರಲ್ಲಿ ಕೆಲವು ಅಧಿಕಾರ ಸ್ಥಾನಗಳಿಗೆ ಹೆಸರು ಕೊಡಲು ಪ್ರಾರ್ಥಿಸಿಕೊಳ್ಳುವಲ್ಲಿಯೆ ನಮ್ಮ ಉತ್ಸಾಹ – ಶಕ್ತಿಗಳು ಎಷ್ಟು ಸುಮ್ಮನೆ ವೆಚ್ಚವಾಗುವುವೆಂದು ಮನವರಿಕೆಯಾಗಿ ನನಗೆ ಈ ಬಗೆಯ ಸಾರ್ವಜನಿಕ ಕಾರ್ಯ ದಲ್ಲಿ ಮೊದಲಿನಷ್ಟು ಹುರುಪು ಉಳಿಯಲಿಲ್ಲ.

ಆದರೂ, ಬೆಳಗಾವಿಯಲ್ಲಿ ೧೯೨೮ರಲ್ಲಿ ಮಹಾರಾಷ್ಟ್ರ ಸಾಹಿತ್ಯ ಸಮ್ಮೇಲನವು ಸೇರುವ ನಿರ್ಣಯವಾದಾಗ ಅಲ್ಲಿ ಕರ್ಣಾಟಕ ಸಂಸ್ಕೃತಿಯ ಪ್ರಭಾವವನ್ನು ಬೆಳಗಿ ತೋರಿಸಬೇಕೆಂದು ಹಲವು ಸಮ್ಮೇಲನಗಳನ್ನು ಹೂಡುವುದಕ್ಕೆ ಮತ್ತೆ ಅಣಿಯಾದೆ. ಶ್ರೀಮಾನ ಕೌಜಲಗಿ ಹನುಮಂತರಾಯರ ಸಹಾನುಭೂತಿ, ಬೆಂಬಲದಿಂದಲೂ ಶ್ರೀ ಅರವಿಂದ ಜೋಶಿಯವರ ಅವಿಶ್ರಾಂತ ಪರಿಶ್ರಮದಿಂದಲೂ ಆ ಮಹಾಕಾರ್ಯವು ಅತ್ಯಂತ ವಿಜೃಂಭಣೆಯಿಂದ ನೆರವೇರಿತು. ಇದರಲ್ಲಿ ಮೊದಲಿನಿಂದ ಕೊನೆಯವರೆಗೆ ಎಲ್ಲವನ್ನೂ ಮುಖ್ಯವಾಗಿ ದುಡಿದವರು ನಾವೇ ಆಗಿದ್ದರೂ ನಮ್ಮ ಹೆಸರುಗಳನ್ನು ಹೊರಗೆ ಅರಿತವರು ವಿರಳ.

ಯಾವುದೆ ಪವಿತ್ರ ಕೆಲಸವಿರಲಿ; ಅದು ಒಂದು ದಂದುಗ (ಧಂದೆ) ಆದರೆ ಅದರ ಬೆಲೆ ೫೦%ರಷ್ಟೂ ಕಡಿಮೆಯಾಗುವುದೆಂದು ನನ್ನ ಮತ. ಹೆಣ ಹೊರುವುದರಿಂದ ಖಾದೀ ಮಾರುವವರೆಗಿನ ಎಲ್ಲ ಕೆಲಸಗಳನ್ನೂ ಸಾರ್ವಜನಿಕ ಸೇವೆಯೆಂದು ಮಾಡುವುದರಲ್ಲಿ ನಾನು ಆನಂದಪಟ್ಟಿದ್ದೇನೆ. ಆದರೆ ಅದು ದಿನದ ಉದ್ಯೋಗವಾದರೆ ಅದರೊಳಗಿನ ಸಾತ್ವಿಕ ಆನಂದದ ಭಾಗವು ಬಹುಮಟ್ಟಿಗೆ ನಷ್ಟವಾಗುವುದೆಂದು ನನ್ನ ಅನುಭವ. ಈಗ ನಾನು ಖಾಸಗಿ ಹೈಸ್ಕೂಲಿನಲ್ಲಿ ಶಿಕ್ಷಕನು. ಶಿಕ್ಷಕನ ಕೆಲಸ ಪವಿತ್ರವೆಂದು ಹೇಳಿಕೊಂಡು ಆತ್ಮವಂದನೆ ಮಾಡಿಕೊಳ್ಳಲು ನಾನಂತೂ ಸಿದ್ಧನಿಲ್ಲ. ಅದು ಪವಿತ್ರವಲ್ಲವೆಂತಲ್ಲ. ಆದರೆ ನಮ್ಮ ಇಂದಿನ ಶಿಕ್ಷಣ ಸಂಸ್ಥೆಗಳಲ್ಲಿ ಇರುವ ವಾತಾವರಣವನ್ನು ನೆನೆದರೆ ಪ್ರಾಮಾಣಿಕವಾಗಿ ಹಾಗೆ ಹೇಳಲು ನನಗೆ ನಾಲಗೆ ಏಳದು. ನನ್ನ ಯಥಾಶಕ್ತಿ ಹಲ ಕೆಲವರಿಗೆ ಕೆಲವೊಂದು ವಿಧದಲ್ಲಿ ನೆರವಾಗಿದ್ದೇನೆ. ಅದರ ಪಟ್ಟಿಯನ್ನಿಲ್ಲಿ ಬಿಚ್ಚಲಾರೆ. ಉಣಿಸುವ ಕೈಗೆ ಕಚ್ಚಿಸಿಕೊಳ್ಳಬೇಕಾದುದೂ ಉಂಟು. ಆಗ ನಾನು ತಾಯಂದಿರನ್ನು ನೆನೆದುಕೊಳ್ಳುತ್ತೇನೆ. ಆದರೆ ಆ ಮಾರ್ಗದಿಂದ ಪರಾವೃತ್ತನಾಗಲಿಚ್ಛಿಸುವುದಿಲ್ಲ.

ನಾನು ಗಳಿಸಿದುದು, ಗಳಿಸಬೇಕೆಂದುದು. ಅನುಭವ; – ತನ್ಮೂಲಕ ಜ್ಞಾನ. ತಿಳಿಯಬೇಕು; ಬಾಳು ತಿಳಿಯಾಗಬೇಕೆಂದು ನನ್ನ ಹೆಬ್ಬಯಕೆ. ಇದರಲ್ಲಿ ನಾನು ಸಿರಿವಂತ; ನವಕೋಟಿ ‘ನಾರಾಯಣ’ನಲ್ಲದಿದ್ದರೂ ಲಕ್ಷವನ್ನಿಟ್ಟ ಲಕ್ಷಾಧೀಶನರನು. ನಾನು ಗಳಿಸಿದುದನ್ನು ಉಳಿದವರಿಗೂ ಹಂಚಿ ಕೊಡುವುದರಲ್ಲಿಯೆ ನನಗೆ ಆನಂದ. ನನ್ನ ಕಂಡಿತವನ್ನು ಹೇಳುವಾಗ ಎಲ್ಲರೂ ಅದನ್ನು ಸತ್ಯ ಸಿದ್ಧಾಂತವೆಂದೇ ಸ್ವೀಕರಿಸಬೇಕೆಂಬ ಹಟವಿಲ್ಲ. ‘ಅದು ನಾನು ಕಂಡುದು; ತಮಗೂ ಹೀಗೆಯೆ ಕಾಣುತ್ತಿದೆಯೆ? ನಿಮ್ಮ ಅನುಭವ, ವಿಚಾರಗಳು, ಬೇರೆಯಿ ದ್ದರೆ ತಿಳಿಸಿರಿ; ನನಗೆ ಇನ್ನೂ ಒಮ್ಮೆ ಬಗೆದು ಭಾವಿಸಲು ನೆರವಾಗಿರಿ;’ ಎಂದು ಕೇಳಿಕೊಳ್ಳುವು ದಕ್ಕಾಗಿ ನಾಡಿನ ಬಲ್ಲಿದವರ ಮುಂದೆ ನನ್ನ ವಿಚಾರದ ವರದಿಯನ್ನು ಒಪ್ಪಿಸುತ್ತಿರುತ್ತೇನಲ್ಲದೆ, ಬೇರೆ ಯಾವ ಲೋಕೋಪಕಾರದ ಇಲ್ಲದ ಹೆಮ್ಮೆ – ಬಿಂಕಗಳು ನನಗೆ ಸೋಂಕಿಲ್ಲ. ಮನುಷ್ಯನೆಂದ ಬಳಿಕ, ನನಗೆ ದೊರೆತ ಸಂಪತ್ತಿನ ಸಲುವಾಗಿ ನನಗೆ ಒಂದು ಬಗೆಯ ತೃಪ್ತಿಯ ಹಿರಿಮೆಯೆನಿಸುತ್ತಿದ್ದರೆ ಸೋಜಿಗವಲ್ಲ.

‘ಕಣ್ಮರೆಯಾದ ಕನ್ನಡವು’ ನನಗೆ ಕಂಡಿತು. ನಾನದನ್ನು ಹೇಳವಲ್ಲಿ ಬಳಸಿದ ಭಾಷೆ ಅಂದಿನ ನನ್ನ ಆವೇಶ, ಉತ್ಸಾಹದ ದ್ಯೋತಕವಾಗಿದೆ. ಕನ್ನಡರಲ್ಲದವರಿಗೆ ಈ ಪ್ರಬಂಧ ದೊಳಗಿನ ಕೆಲವು ಮಾತುಗಳು ಸರಿದೋರಲಿಕ್ಕಿಲ್ಲ; ಕೆಲವು ಕಠೋರವೆಂದೂ ಎನಿಸಬಹುದು. ಆದರೆ ಅಂತಹ ಕಡೆಗಳಲ್ಲಿ ಕೆಲವರಿಗೆ ಅಪ್ರಿಯವಾದರೂ ಸತ್ಯವಿದ್ದುದನ್ನು ಆಡದೆ ಇರುವುದು ಅಪರಾಧವೆನಿಸಿ ಅದನ್ನು ಬರೆಯದೆ ಇರುವುದಾಗಲಿಲ್ಲ;’ ಎಂದು ಕ್ಷಮಾಪಣೆಯನ್ನು ಕೇಳಿದ್ದೇನೆ. ಆದರೂ ಇನ್ನೊಬ್ಬರನ್ನೂ ಕೆಣಕಿ ಆಡುವ ಮಾತು ಅಷ್ಟು ಸರಿಯಲ್ಲವೆಂದು ನಾನಿಂದು ಒಪ್ಪಿಕೊಳ್ಳಲೇಬೇಕು. ಸ್ಪಷ್ಟಸತ್ಯವಾದಿತ್ವದ ಭರದಲ್ಲಿ ಆಡಿದ ಮಾತಿನಿಂದ ಹಲವರನ್ನು ನೋಯಿಸುವಾಗ ಅನ್ಯಾಯವು ನನ್ನಿಂದ ಆಗಿದೆ. ಅದರಲ್ಲಿ ಕೆಲವು ಅಸಮರ್ಪಕ ವಿವೇಚನೆಯೂ ಬಂದಿದ್ದು ಈಗ ನನಗೆ ಕಂಡು ಬಂದಿದೆ. ಆದರೆ ಖಾನ ದೇಶವು ಕನ್ನ ದೇಶವೆಂಬ ಬಗೆಗೆ ನನ್ನ ಮಾತು ಸ್ಥಿರವಾಗಿ ಉಳಿದಿದೆ. ಇಷ್ಟೆ ಅಲ್ಲದೆ ಇನ್ನೂ ಹೆಚ್ಚಿನ ಪ್ರಮಾಣಗಳೂ ದೊರೆತವು. ಅವನ್ನು ‘ಕರ್ಣಾಟಕದ ವೀರಕ್ಷತ್ರಿಯರು’ ಮತ್ತು ‘ಕನ್ನಡದ ನೆಲೆ’ ಎಂಬ ಪುಸ್ತಕಗಳಲ್ಲಿ ವಿವರಿಸಿದ್ದೇನೆ.

\ಷಷ್ಠಿ ಪುರಾತನರ ಉಗಮವೇನೆಂಬುದು ವೀರಶೈವರಿಗೂ ಅರಿಯದ ಮಾತಾಗಿದ್ದಿತು. ಅದನ್ನು ಕುರಿತು ನನಗೆ ದೊರೆತ ಹೊಸ ಬೆಳಕನ್ನು ‘ಶಿವರಹಸ್ಯ’ದಲ್ಲಿ ಕಾಣಿಸಿದ್ದೇನೆ. ನನ್ನ ತಿಳುವಳಿಕೆಯಂತೆ ಶಿವನ ನಿಜ ಸ್ವರೂಪದ ಕೆಲವೊಂದು ವಿಚಾರಗಳನ್ನು ವಿವರಿಸಿದ್ದೇನೆ. ನನಗೆ ತಿಳಿದ ಈ ಸಂಗತಿಗಳ ಬಲದಿಂದ ಕರ್ಣಾಟಕ – ಮಹಾರಾಷ್ಟ್ರದ ಸಂಸ್ಕೃತಿಗಳೊಳಗಿನ ತೊಡಕಿನ ಸಮಸ್ಯೆಗಳಿಗೆ ಬಹಳ ಸಮರ್ಪಕವಾಗಿ ಉತ್ತರವು ದೊರೆಯುತ್ತಿದೆ. ಕಂನಾಡು ನುಡಿಗಳ ಐತಿಹಾಸಿಕ ಬೆಳಕು ಇಲ್ಲದೆ ‘ಮಹಾರಾಷ್ಟ್ರದ ಮೂಲವು’ ಸರಿಯಾಗಿ ತಿಳಿಯಲಾರ ದೆಂಬ ಮಾತು ಈಗ ಅಲ್ಲಿಯ ವಿದ್ವಾಂಸರಿಗೂ ಒಪ್ಪಿಗೆಯಾಗತೊಡಗಿದೆ.

ಸಂಸ್ಕೃತಿಯ ಅಂಗೋಪಾಂಗಗಳಲ್ಲಿ ಭಾಷೆಯೂ ಒಂದು ಮಹತ್ವದ ವಿಷಯ. ನಾಡಿನ ಸಂಸ್ಕೃತಿಯ ಮಟ್ಟವನ್ನು ಅಲ್ಲಿಯ ಭಾಷೆಯಲ್ಲಿ ಚೆನ್ನಾಗಿ ಕಂಡು ಹಿಡಿಯಬಹುದು. ಸಾಂಸ್ಕೃತಿಕ ಅಭ್ಯಾಸಕ್ಕಾಗಿ ಕಂ.ನುಡಿಯ ಆಳದಲ್ಲಿ ನಾನು ಸೇರಿದ್ದುದು. ಭಾಷಾಶಾಸ್ತ್ರವಾಗಲಿ, ವ್ಯಾಕರಣವಾಗಲಿ ನನ್ನ ಮುಖ್ಯ ಗುರಿಯಲ್ಲ. ಆ ಅಭ್ಯಾಸದಲ್ಲಿ ಆನುಷಂಗಿಕವಾಗಿ ‘ಕಂನುಡಿಯ ಹುಟ್ಟು’ ಮತ್ತು ‘ಕಂ.ನುಡಿಯ ಜೀವಾಳ’ಗಳನ್ನು ಬರೆದುದಾಯ್ತು.

ಸತ್ಯವು ಅವ್ಯಕ್ತ; ಅಲೌಕಿಕ; ಸೂಕ್ಷ್ಮ; ಮತ್ತು ಗಹನವಾದ ಮಹತ್ತ್ವ. ಅಲೌಕಿಕ ಸತ್ಯವು ಲೌಕಿಕ ರೂಪವನ್ನು ತಾಳಿದಾಗ ಅದು ‘ನಿಜ’ವೆನಿಸುವುದು. ನಿಜವಾದುದೇ ವಾಸ್ತವ. ವಾಸ್ತವವು ವಸ್ತುಗತ; ವ್ಯಕ್ತ. ಸತ್ಯವು ದೇಶ – ಕಾಲ – ಪರಿಸ್ಥಿತಿಗಳ ಮೇರೆಯಲ್ಲಿ ವ್ಯಕ್ತವಾದಾಗ ಅದು ವ್ಯವಹಾರ್ಯವಾಗುವುದು. ಇತಿಹಾಸದ ಜ್ಞಾನವಿಲ್ಲದೆ ಯಾವ ನಿಜದ – ವ್ಯವಹಾರದ ಜ್ಞಾನವೂ ಆಗಲಾರದು. ಏಕೆಂದರೆ ದೇಶ – ಕಾಲ – ಪರಿಸ್ಥಿತಿಗಳ ಭೂಮಿಕೆಯಲ್ಲಿ ಅವತರಿಸಿದ ಸತ್ಯವೆ ಇತಿಹಾಸ. ಇತಿಹಾಸವೆಂದರೆ ನಡೆ. ‘ನಡೆ’ಗೇ ‘ಜಗತ್’ ಎಂಬ ಸಂಸ್ಕೃತ ಹೆಸರು. (ಗಚ್ಛತಿ ಇತಿ ಜಗತ್.) ಆದಕಾರಣ ನಡೆಯ ನಿಜವನ್ನರಿಯಲು ಇತಿಹಾಸದ ಅಭ್ಯಾಸವು ಬೇಕು. ಸಂಸ್ಕೃತಿಯೆಂಬುದು ನಡೆವಳಿಯ ಫಲ. ಈ ದೃಷ್ಟಿಯಿಂದಲೆ ನಾನು ಇತಿಹಾಸದ ಕಡೆಗೆ ಒಲೆದುದು.

ಸಾಹಿತ್ಯವೂ ಇತಿಹಾಸದ ಒಂದು ರೂಪ. ಏಕೆಂದರೆ ದೇಶ – ಕಾಲ ಪರಿಸ್ಥಿತಿಯ ಸನ್ನಿವೇಶ ಗಳಲ್ಲಿ ಅಡಕವಾದ ಸತ್ಯವನ್ನೇ ಸಾಹಿತ್ಯವೂ ವರ್ಣಿಸುವುದು. ಕತೆ, ಕಾದಂಬರಿ, ನಾಟಕ ಇಲ್ಲವೆ ಯಾವ ಮಹಾಕಾವ್ಯವಿರಲಿ, ಅದು ಆದ, ಆಗಬಹುದಾದ ಇಲ್ಲವೆ ಆಗಬಲ್ಲ ಘಟನೆಯ ವರ್ಣನೆಯೆ ಆಗಿರುತ್ತದೆ. ಇದಕ್ಕೆ ಹೊರಗಿನ ಸಂಗತಿಯು ಸಾಹಿತ್ಯ ಸೃಷ್ಟಿಯ ವಿಷಯವೆ ಆಗಲಾರದು. ಇತಿಹಾಸಕ್ಕೂ ಸಾಹಿತ್ಯಕ್ಕೂ ಇರುವ ವ್ಯತ್ಯಾಸವು ಅದನ್ನು ಬರೆವ ರೀತಿಯಲ್ಲಿ ಮುಖ್ಯವಾಗಿ ಇದೆ. ಆದಕಾರಣ ನಿಜವನ್ನು ಅರಿಯಬೇಕೆಂಬವನು ಸಾಹಿತಿಯಾಗಿ ರಬೇಕಾಗಿಲ್ಲವಾದರೂ ಸಾಹಿತ್ಯದ ಬೆಂಬಲವನ್ನು ಪಡೆಯಲೇ ಬೇಕು.

ಇದೊಂದು ಸಣ್ಣ ಜೀವದ ಒಂದು ಸಣ್ಣ ಕತೆ. ಇಲ್ಲಿಗೆ ನನ್ನ ಕತೆ ಮುಗಿಯುತ್ತ ಬಂದಿದೆ. ಕತೆ ಹೇಳುವ ಬುದ್ದಿ ತಲೆದೋರುವುದು, ಕತೆ ಮುಗಿಯ ಬಂದ ಕಾಲದ ಲಕ್ಷಣ ವಂತೆ. ಆದರೆ ನಾನಿನ್ನೂ ನಾಲ್ಕೊಪ್ಪತ್ತು ಬಾಳಬೇಕೆಂದುದರಿಂದ ಇದನ್ನು ಬರೆಯುವ ಇಚ್ಚೆಯಿರಲಿಲ್ಲ. ಆದರೆ ಸಂಪಾದಕರ ಒತ್ತಾಯಕ್ಕೆ ಬರೆಯಲೇಬೇಕಾಯಿತು.

ನಾನಿಂದು ಸಾಹಿತಿ. ಏಕೆಂದರೆ ಎಂತಹದೆ ಆಗಲಿ, ಒಂದು ಕತೆಯನ್ನು ಬರೆದಿದ್ದೇನೆ. ಬಾಳುವೆಯೆ ನನ್ನದೊಂದು ಭಾವಗೀತ. ಈ ಅಲ್ಪ ‘ಕೃತಿಯನ್ನು ಕಂನಾಡಿಗರ ಅಡಿಯಲ್ಲಿ ಮುಡಿಸಿದ್ದೇನೆ. ನನ್ನ ಪ್ರಚೋದಕ ಶಕ್ತಿ ನಾನು ಪಾಠ ಮಾಡಿದ ‘ಗೋವಿನಕತೆ’ ‘…..ನೀನಾರಿಗಾದೆ ಎಲೆ ಮಾನವಾ’ ಎಂಬುದು. ನನ್ನ ಮಾರ್ಗದಲ್ಲಿ ನಾನು ಸಾಧಿಸ ಬೇಕೆಂದುದು ಶಬ್ದಕೂ ಅರ್ಥಕ್ಕೂ (ಎಂದರೆ ಇರುವಿಗೂ) ಅಂತರವು ಉಳಿಯಬಾರ ದೆಂಬುದು. ‘ನಿಮ್ಮ ಗ್ರಂಥಗಳು ನಿಮ್ಮ ಗುರಿಯನ್ನು ಎಷ್ಟರಮಟ್ಟಿಗೆ ಸಾಧಿಸಿವೆ?’ ಎಂದು ಇನ್ನೂ ಒಂದು ಸಂಪಾದಕರ ಪ್ರಶ್ನೆ. ನನ್ನ ‘ಕೃತಿ’ಯಲ್ಲಿಯ ಇದು ಬಹುಮಟ್ಟಿಗೆ ಕೈಗೂಡಿದೆ. ‘ಇದರ ಕ್ರಿಯೆ ಪ್ರತಿಕ್ರಿಯೆ ಏನಾಗಿದೆ?’ ಎಂಬ ಪ್ರಶ್ನೆಗೆ, ನನಗೆ ಇದು ಕಲ್ಯಾಣವನ್ನು ಮಾಡಿದೆ; ಆತ್ಮಶಾಂತಿಯನ್ನಿತ್ತಿದೆ’ ಎಂದು ಉತ್ತರ. ‘ನಿಮ್ಮ ಜೀವನದ ಫಲಶ್ರುತಿಯೇನು?’ ಎಂದರೆ ಸಮಾಜದ ಹಿನ್ನೆಲೆಯಿಲ್ಲದೆ ವ್ಯಕ್ತಿಯು ಅರ್ಥವಿಹೀನ. ಅದು ಸಾರ್ಥವಾಗಬೇಕಾದರೆ ಸಮಾಜಕ್ಕಾಗಿ ತನ್ನನ್ನು ಯಾವ ಬಗೆಯಿಂದಲಾದರೂ ಉಪಯುಕ್ತನನ್ನಾಗಿ ಮಾಡಿಕೊಳ್ಳ ಬೇಕು: ‘ಸರ್ವಭೂತೇಷು ಆತ್ಮಾನಂ; ಸರ್ವಭೂತಾನಿ ಆತ್ಮನಿ’ ಎಂಬುದನ್ನು ಆಚರಿಸಿ ಅರಿತುಕೊಳ್ಳಬೇಕು; ಎಂಬುದು.

‘ಸಾಹಿತ್ಯವು ಯಾವ ದೃಷ್ಟಿಯಿಂದ ಸಾಗಬೇಕು?’ ಎಂಬ ಪ್ರಶ್ನೆಗೆ ಅದು ‘ಕೃತಿ’ಯಾಗ ಬೇಕೆಂದೇ ನಿನ್ನ ಉತ್ತರ. ಅದೊಂದು ರಾಮ, ಕೃಷ್ಮ, ಗಾಂಧೀಜಿ ಮೊದಲಾದವರಂತಹ ಮಹಾ – ಕೃತಿ – ಕಾವ್ಯವಾಗಬೇಕೆಂಬ ಮಹತ್ವಾಕಾಂಕ್ಷೆಯು ಪ್ರತಿಯೊಬ್ಬರದಾಗಿರಬೇಕು. ಕೊನೆಗೆ ಅದೊಂದು ಸಣ್ಣ ಭಾವಪೂರ್ಣವಾದ (ಜೀವನ) ಗೀತವಾದರೂ ಆಗಲೇಬೇಕು. ಆದರೆ ‘ನಾಟಕ’ವಾಗಕೂಡದು. ಇರುತ್ತ ಬರೆಯಬೇಕು; ಆಡಬೇಕು. ಬರೆ ಮಾಡುವುದಾಗಲಿ, ಗೀಚುವುದಾಗಲಿ ಹುಸಿ, ಟೊಳ್ಳು ಶಬ್ದ. ಇರುತ್ತ ಬರೆಯದೆ ಬರೆಯುವುದಕ್ಕಾಗಿ ಇರುವುದು ತನಗೂ ಲೋಕಕ್ಕೂ ಕೂಡಿಯೇ ಮೋಸ. ಎರಡಿಲ್ಲದ ಬಾಳು ಗುರಿಯಾದರೇನೇ ನಾಡಿನ ಏಳ್ಗೆಯಾಗುವುದು ಎಂಬುದು ನನ್ನ ನಂಬುಗೆ.

ಇದರ ಸಿದ್ದಿಗೆ ಅಭಯ ವೃತ್ತಿಯ ಸಾಧನೆಯು ಆವಶ್ಯಕ. ಭೀತಿಯು ದೂರವಾದ ಪ್ರಮಾಣದಲ್ಲಿ ನಮಗೆ ಸತ್ಯದರ್ಶನವಾಗಬಲ್ಲುದು. ಅಭಯವೃತ್ತಿಯೆಂದರೆ ಉದ್ದಾಮತನ ವಲ್ಲ. ಧೀರರು ಎಂದರೆ ತಿಳುವಳಿಕೆಯಳ್ಳವರು. ಅಲ್ಲದವರು ಭಯದಿಂದ ಮುಕ್ತರಾಗ ಲಾರದು. ಉದ್ಧಾಮತನದಿಂದ ಬಾಯಿಗೆ ಬಂದುದನ್ನು ಮಾತಾಡುವುದೂ ಲೆಕ್ಕಣಿಕೆ ಓಡಿದಂತೆ ಗೀಚುವುದು ಈಗ ಪ್ರಗತಿಯ ಲಕ್ಷಣವೆಂದು ತಿಳುವಳಿಕೆಯಾಗಿದೆ. ವಿಚಾರಿಯೇ (ವಿ+ಚರ) ಪ್ರಗತಿಶೀಲನಾಗಿರಬಲ್ಲನು. ಇದ್ದಲ್ಲಿಯೆ ನಿಲ್ಲಬೇಕೆಂಬವನು ಅವಿಚಾರಿ. ಅಭ್ಯಾಸ, ವಿಚಾರ, ವಿಮರ್ಶೆಗಳ ನೆರವನ್ನು ಪಡೆಯದೆ ‘ಕೃತಿ’ ಬೆಲೆಯುಳ್ಳದ್ದೂ ಆಗಲಾರದು. ಅದು ಬಹಳ ದಿನ ಬಾಳಲಾರದು.