ಆಧುನಿಕ ಕನ್ನಡ ಸಾಹಿತ್ಯಕ್ಕೆ ಈಗ ನೂರು ವರ್ಷಗಳು. ಸಾಹಿತ್ಯ ಅಧ್ಯಯನವು ಶೈಕ್ಷಣಿಕ ಚಟುವಟಿಕೆಗಳ ಭಾಗವಾಗಿ ಸಾಗಿ ಬಂದಿದೆ. ಆಧುನಿಕ ಪೂರ್ವ ಸಾಹಿತ್ಯ ಮತ್ತು ಆಧುನಿಕ ಸಾಹಿತ್ಯವನ್ನು ಕುರಿತು ಅಧ್ಯಯನ ನಡೆದಿರುವುದು ಸಾಮಾನ್ಯವಾಗಿ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳ ಹಿನ್ನೆಲೆಯಲ್ಲಿ ಮತ್ತು ಪಾಶ್ಚಾತ್ಯ ಸಾಹಿತ್ಯ ತತ್ವಗಳ ನೆರವಿನಿಂದ. ಭಾರತೀಯ ಕಾವ್ಯ ಮೀಮಾಂಸೆಯ ಮುಖೇನ ಕನ್ನಡ ಸಾಹಿತ್ಯವನ್ನು ಅರ್ಥ ಮಾಡಿಕೊಳ್ಳುತ್ತ ಬರಲಾಗಿದೆ. ಅದಿನ್ನೂ ಮುಂದುವರಿದಿದೆ. ಮುಂದುವರಿಯಬೇಕೆ? ಭಾರತೀಯ ಕಾವ್ಯ ಮೀಮಾಂಸೆ ಅಂದರೆ ಅದು ಸಂಸ್ಕೃತ ಕಾವ್ಯ ಮೀಮಾಂಸೆ ಎಂದೇ ಅರ್ಥ. ಸಂಸ್ಕೃತ ಸಾಹಿತ್ಯ ಪರಿಸರದಲ್ಲಿ ರೂಪಗೊಂಡ ಕಾವ್ಯ ತತ್ವಗಳನ್ನು (ಅದೂ ನಾಟಕ ಅನುಲಕ್ಷಿಸಿ) ಕನ್ನಡ ಸಾಹಿತ್ಯಕ್ಕೆ ಅನ್ವಯಿಸಿ ನೋಡುವ ಪರಂಪರೆ ಆರಂಭವಾದದ್ದನ್ನು ಇನ್ನೂ ಮುಂದುವರೆಸಲಾಗಿದೆ. ಇದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ನಮ್ಮ ವಿಸ್ತಾರಗೊಳ್ಳುತ್ತಿರುವ ಕನ್ನಡ ಸಾಹಿತ್ಯವೇ ಒತ್ತಾಯ ಮಾಡುತ್ತಿದೆ.

ಯಾಕೆಂದರೆ, ಯಾವುದೇ ಭಾಷೆ ತನ್ನದೇ ಆದ ಸಾಂಸ್ಕೃತಿಕ ಅನನ್ಯತೆಯನ್ನು ಕಟ್ಟಿಕೊಂಡಿ ರುತ್ತದೆ. ಆ ಭಾಷೆಯ ಅಕ್ಷರ ಮಾಲೆ, ವ್ಯಾಕರಣ, ಛಂದಸ್ಸು, ಅಲಂಕಾರ, ಲಯ ಎಲ್ಲವೂ ಆ ಭಾಷೆಯನ್ನಾಡುವ ಜನಸಮುದಾಯದಿಂದ ರೂಪುಗೊಂಡಿರುತ್ತದೆ. ಜನ ಸಮುದಾಯವು ತನ್ನ ಪರಿಸರ, ಕಾಲದ ಅನ್ಯ ಆಕ್ರಮಣಗಳನ್ನು ಎದುರಿಸಿ ಪರಿವರ್ತನೆ ಪಡೆದಂತೆ ಬದುಕು ಬದಲಾವಣೆಗೆ ಒಳಗಾಗುತ್ತದೆ. ಬದುಕು ಬದಲಾದಂತೆ ಭಾಷೆ, ಸಾಹಿತ್ಯ ಎಲ್ಲವೂ ಪರಿವರ್ತನೆ ಗೊಳ್ಳುತ್ತವೆ. ಅಂದಾಗ ಈ ಬಗೆಯ ಅನನ್ಯತೆಯನ್ನು ಪಡೆಯುತ್ತಲೇ ಇರುವ ಯಾವುದೇ ಭಾಷೆಗೆ, ಸಾಹಿತ್ಯಕ್ಕೆ ಅದರದೇ ಆದ ಸಾಹಿತ್ಯ ಚಿಂತನೆ ಇರಬೇಕಾದದ್ದು ಸಹಜ. ಆದರೆ ಸಾಹಿತ್ಯ ಚಿಂತನೆ ಎಂಬುದು ಆಯಾ ಭಾಷೆಗೆ ಅದರದೇ ಅದದ್ದು ಇರಬೇಕು. ಬಹುತೇಕ ಭಾಷೆಗಳ ಸಾಹಿತ್ಯಕ್ಕೆ ಅದರದೇ ಆದ ಸಾಹಿತ್ಯ ಚಿಂತನೆ ರೂಪುಗೊಳ್ಳುವ ಆಗತ್ಯವಿದೆ. ಇಲ್ಲದಿದ್ದರೆ ಭಾರತೀಯ ಕಾವ್ಯ ತತ್ವಗಳನ್ನೇ ಅನೇಕ ಪ್ರಾದೇಶಿಕ ಭಾಷಾ ಸಾಹಿತ್ಯಕ್ಕೆ ಅನ್ವಯಿಸಿ ನೋಡುವುದು ಅಸಹಜವಾಗಿ ಕಾಣುತ್ತದೆ. ಹೀಗೆಂದಾಗ ಯಾವುದೇ ಭಾಷೆಯಲ್ಲಿ ಅನ್ಯ ಪ್ರಭಾವಗಳು ಇರುವುದಿಲ್ಲ, ಇರಬಾರದು ಎಂದಲ್ಲ. ಒಂದು ಭಾಷೆಯ ಅಕ್ಷರಮಾಲೆ, ವ್ಯಾಕರಣ, ನುಡಿಗಟ್ಟುಗಳು, ಗಾದೆಗಳು ಎಷ್ಟೇ ವಿಶಿಷ್ಟವಾಗಿದ್ದರೂ ಅದು ಕಾಲಾಂತರದಲ್ಲಿ ಅನ್ಯವನ್ನು ಸ್ವೀಕರಿಸುತ್ತ ಬಂದಿದೆ. ಹೀಗೆ ಅನ್ಯವನ್ನು ಸ್ವೀಕರಿಸುವಾಗ ಅದು ಅನಿವಾರ್ಯ ವಾಗಿ ಸ್ವೀಕರಿಸುವುದು ಮತ್ತು ಅದನ್ನು ತನ್ನದಾಗಿ ಮಾಡಿಕೊಳ್ಳುವುದು ಆಯಾ ಭಾಷೆಯ ಸಹಜ ಕ್ರಿಯೆಯಾಗಿರುತ್ತದೆ. ಆದರೆ ಅನೇಕ ಸಲ ಒಂದು ಭಾಷೆಯ ಮೇಲೆ ಅನ್ಯದ ಪ್ರಭಾವ ವನ್ನು ಹೊರಿಸಲಾಗಿರುತ್ತದೆ. ಹೀಗೆ ಹೊರಿಸಲಾಗುವ ಸಂಗತಿಗಳು ಒಂದು ಭಾಷೆಗೆ ಭಾರವೆನಿ ಸುತ್ತವೆ.

ಪ್ರಾಚೀನ ಕನ್ನಡ ಸಾಹಿತ್ಯಕ್ಕೆ ಸಂಸ್ಕೃತ ಸಾಹಿತ್ಯವೇ ಆಧಾರವಾಗಿದೆ. ಆದರೆ ಕನ್ನಡ ಪ್ರತಿಭಾವಂತ ಕವಿಗಳು ಸಂಸ್ಕೃತ ಭಾಷೆ, ಸಾಹಿತ್ಯದಿಂದ ಪ್ರೇರಣೆ ಪಡೆದಾಗಲೂ ಅದನ್ನು ಕನ್ನಡ ಭಾಷೆ ಸಂಸ್ಕೃತಿಗೆ ಒಗ್ಗುವ ಹಾಗೆ ಪರಿವರ್ತಿಸಿಕೊಂಡಿರುವುದು ಗಮನಾರ್ಹವಾದದ್ದು. ಕನ್ನಡ ಭಾಷೆ, ಆ ಭಾಷೆಯನ್ನಾಡುವ ಸಮುದಾಯ, ಅದರ ಪರಿಸರ, ಚರಿತ್ರೆ, ಸಾಂಸ್ಕೃತಿಕ ಸಂಗತಿಗಳಿಗೆ ಅನುಗುಣವಾಗಿ ಸ್ವೀಕರಿಸಿ ವಿಶಿಷ್ಟವಾಗಿ ರೂಪಿಸಲು ಪ್ರಯತ್ನಿಸಲಾಗಿದೆ.ಇಂಥ ಪ್ರಯತ್ನಗಳು ಅನನ್ಯವೆನಿಸಿವೆ. ಕನ್ನಡ ಭಾರತ (ಪಂಪ) ಗದುಗಿನ ಭಾರತ (ಕುಮಾರವ್ಯಾಸ) ಅನ್ಯವನ್ನು ಸ್ವೀಕರಿಸಿಯೂ ದೇಶಿಯಾಗಿ ರೂಪಗೊಂಡಿರುವುದು ಮಹತ್ವ ಸಂಗತಿ.

ಇದನ್ನು ವಿಸ್ತರಿಸಿ ಹೇಳುವುದಾದರೆ, ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿಯೂ ಕಾಣುತ್ತೇವೆ. ಬಿ.ಎಂ.ಶ್ರೀ ಅವರು ‘ಇಂಗ್ಲೀಷ್ ಗೀತ’ಗಳನ್ನು ಕನ್ನಡಕ್ಕೆ ತಂದರು. ಅದು ಪ್ರಯೋಗವಾಗಿತ್ತು. ಕಾವ್ಯ ಪ್ರಕಾರ ಸೇರಿದಂತೆ ಅನೇಕ ಸಾಹಿತ್ಯ ಪ್ರಕಾರಗಳು ಅನ್ಯವಾದರೂ ಕನ್ನಡಕ್ಕೆ ಬಂದು ಅವು ಪಡೆದ ರೀತಿಯಿಂದ ಈಗ ನಮ್ಮವೇ ಆಗಿವೆ. ಹೊರಗಿನಿಂದ ಕನ್ನಡಕ್ಕೆ ಬಂದು, ಇಲ್ಲಿಯ ಮಣ್ಣಿನೊಂದಿಗೆ ಬೆಳೆದು ನಿಂತಿವೆ. ಅವು ಭಾರವಾಗಿ ಪರಿಣಮಿಸಿಲ್ಲ. ಆದರೆ ಕನ್ನಡ ಸಾಹಿತ್ಯ ಮೀಮಾಂಸೆ ಅಥವಾ ಚಿಂತನೆ ಮಾತ್ರ ಯಾಕೆ ಬೆಳೆಯಲಿಲ್ಲ?.

ಕನ್ನಡ ಸಾಹಿತ್ಯ ಮೀಮಾಂಸೆ ಬೇಕೆಂದು ಹೇಳುವಾಗ, ನಮ್ಮದು ಅಥವಾ ದೇಶಿವಾದ ಒಂದನ್ನು ಹುಟ್ಟುಹಾಕಲು ಪ್ರಯತ್ನಿಸಲಾಗುತ್ತಿದೆಯೇ? ಎಂದು ಅನುಮಾನ ಬರುವುದು ಸಹಜ. ಆದರೆ ದೇಶಿವಾದ ಕೂಡ ಒಂದು ಅಪಾಯ ಎಂದು ಗಮನದಲ್ಲಿರಬೇಕು. ನಮ್ಮದು ಎಂದು ಹೇಳುವಾಗ ಹೊರಗಿನದು ಅನ್ಯವಾದದ್ದು ಎಲ್ಲವೂ ತಿರಸ್ಕಾರಕ್ಕೆ ಒಳಗಾಗಬೇಕು ಎಂದು ಕೇಳಿದರೆ ಅದೂ ಅಲ್ಲ. ಅನ್ಯವಾದದ್ದು ತಿರಸ್ಕರಿಸುವ ಕೆಲಸ ಆಗಬಾರದು. ಸೇರ್ಪಡೆ ಯಾಗಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯನ್ನು ಶ್ರೀಮಂತ ಗೊಳಿಸುವ ಕೆಲಸ ನಡೆದರೆ ಅದು ಪ್ರಯೋಜನವೇ. ಇದು ಆಗಿದೆ. ಕನ್ನಡ ಪ್ರಾಚೀನ ಸಾಹಿತ್ಯಕ್ಕೆ ಸಂಸ್ಕೃತದಿಂದ ಬೇಕಾದದ್ದು ಬಂದಿದೆ; ಸೇರ್ಪಡೆಯಾಗಿದೆ; ಕನ್ನಡ ಸಾಹಿತ್ಯ ಬೆಳೆದಿದೆ. ಹಾಗೆ ಇಂಗ್ಲಿಶ್ ಭಾಷೆಯಿಂದಲೂ ಬೇಕಾದ್ದು ಬಂದಿದೆ. ಆಧುನಿಕ ಕನ್ನಡ ಸಾಹಿತ್ಯ ಅದನ್ನು ಅರಗಿಸಿಕೊಂಡಿದೆ. ಹೀಗಿರುವಾಗ ಅನ್ಯವಾದದ್ದು ಹೊರಗಿನದನ್ನು ತಿರಸ್ಕರಿಸಿ ನಮ್ಮದನ್ನು ಮುಂದುಮಾಡಿ ವಾದಿಸುವುದು ದೇಶಿವಾದದ ಅಪಾಯವಾಗುತ್ತದೆ. ಅರಗಿಸಿಕೊಂಡು ರೂಪಾಂತರಗೊಳ್ಳು ವುದು, ಪುನರ್ ಸೃಷ್ಟಿಗೊಳ್ಳುವುದು ಯಾವುದೇ ಸಂಸ್ಕೃತಿಯ ಜೀವಂತಿಕೆಯ ಲಕ್ಷಣ. ಅಂಥದ್ದನ್ನು ಸ್ವೀಕರಿಸಲಾಗಿದೆ. ದೇಶಿವಾದವು ಹೊರಗಿನದನ್ನು, ಅನ್ಯವಾದದನ್ನು ತರಿಸ್ಕರಿಸಿ ದರೆ ಅದು ಮೂಲಭೂತವಾದವಾಗುವ ಅಪಾಯವೇ ಹೆಚ್ಚು. ಕನ್ನಡದ ಪಂಪನ ಆದಿಯಾಗಿ ಪ್ರಾಚೀನ ಕವಿಗಳು ಸಂಸ್ಕೃತ ಭಾಷೆ – ಸಾಹಿತ್ಯದಿಂದ ಬೇಕಾದಷ್ಟು, ಬೇಕಾದದ್ದನ್ನು ಕನ್ನಡಕ್ಕೆ ಪುಷ್ಠಿಕೊಡುವ ರೀತಿಯಲ್ಲಿ ಸ್ವೀಕರಿಸಿದ್ದಾರೆ. ಆದರೆ ‘ನಮ್ಮದು’ ಎಂದು ಹಠ ಹಿಡಿದ ಅಂಡಯ್ಯ ಸಾಧಿಸಿದ್ದು ಒಂದು ಪ್ರಯತ್ನವಾಗಿದೆಯಷ್ಟೆ. ಒಂದು ಭಾಷೆ ಇನ್ನೊಂದರ ಜತೆ ಕೊಡು – ಕೊಳೆ ನಡೆಸಬೇಕೇ ಹೊರತು ದ್ವೀಪವಾಗಿ ಉಳಿಯಬಾರದು. ಹೀಗೆ ಉಳಿಯಲು ಸಾಧ್ಯವಿಲ್ಲ. ಆದರೆ ಸಂಸ್ಕೃತ ಭಾಷೆ ಮತ್ತು ಸಾಹಿತ್ಯ ಅನ್ಯವನ್ನು ಸ್ವೀಕರಿಸುವಲ್ಲಿ ಮಡಿತನ ಮೆರೆದು ಇಂದು ದ್ವೀಪವಾಗಿಯೇ ಉಳಿದಿದೆ. ಆದರೆ ಸಂಸ್ಕೃತವನ್ನು ತನಗೆ ಬೇಕಾದ ರೀತಿ ಯಲ್ಲಿ ಸ್ವೀಕರಿಸಿದ ದೇಶಿ ಭಾಷೆಗಳು ಬೆಳೆದಿವೆ. ಅದಕ್ಕಾಗಿ ದೇಶಿವಾದ ಮೂಲಭೂತವಾಗುವ ಅಪಾಯಕ್ಕೆ ಹೋಗಬಾರದು. ಅಂದರೆ ಕನ್ನಡ ಸಾಹಿತ್ಯ ಚಿಂತನೆ ಶೋಧಿಸುವುದು ಅಂದರೆ ದೇಶಿವಾದದ ಶೋಧ ಎಂದಾಗಬಾರದು.

ಶುದ್ಧವಾದ ಕನ್ನಡದ್ದೇ ಒಂದು ಬದುಕು, ಪರಿಸರ ಇರಲು ಸಾಧ್ಯವಿಲ್ಲ. ಹಾಗೆಯೇ ಕನ್ನಡದ್ದೇ ಆದ ಒಂದು ಶುದ್ಧ ಸಾಹಿತ್ಯ ಎಂಬುದಿಲ್ಲ. ಭಾಷೆ, ಆ ಭಾಷೆಯನ್ನಾಡುವ ಜನಸಮುದಾಯ ನೆರೆಯ ಭಾಷೆ, ಆ ಭಾಷೆಯನ್ನಾಡುವ ಜನಸಮುದಾಯದ ಸಂಸ್ಕೃತಿಯ ಜತೆ ಕೊಡು ಕೊಳೆ ನಡೆಸಿರುತ್ತದೆ. ಕೊಡು ಕೊಳೆ ನಡೆಸುವ ಮೂಲಕವಾಗಿ ಒಂದು ಭಾಷೆ ಅಭಿವೃದ್ದಿ ಹೊಂದಲು ಸಾಧ್ಯ. ಇದು ಯಾವುದೇ ಒಂದು ಜೀವಂತ ಭಾಷೆಯ ಪ್ರಧಾನ ಗುಣವಾಗಿರುತ್ತದೆ. ಕನ್ನಡ ಭಾಷೆ ನೆರೆಯ ರಾಜ್ಯಗಳ ಭಾಷೆಯಿಂದ ಬಲಗೊಂಡಿದೆ. ಮಧ್ಯಕಾಲದಿಂದ ಕರ್ನಾಟಕದಲ್ಲಿ ನೆಲೆಯೂರಿದ ಫಾರಶಿ, ಉರ್ದು, ಅರೇಬಿಕ್ ಭಾಷೆಯ ಜತೆ, ಧರ್ಮಗಳ ಜತೆ ಸಂಪರ್ಕ ಸಂವಹನ ನಡೆಸಿದೆ. ಬ್ರಿಟಿಶ್ ವಸಾಹತು ಕಾಲದಿಂದ ಇಂಗ್ಲಿಶ್ ಜತೆ ವ್ಯವಹರಿಸಿದೆ. ಹೀಗೆ ಅನೇಕ ಭಾಷೆಗಳಿಂದ ಅನೇಕ ಶಬ್ದಗಳನ್ನು, ನುಡಿಗಟ್ಟು ಗಳನ್ನು, ಗಾದೆಗಳನ್ನು ಪಡೆದುಕೊಂಡಿದೆ ಮತ್ತು ರವಾನಿಸಿದೆ. ಈ ಪ್ರಕ್ರಿಯೆಯಿಂದ ಕನ್ನಡ ಭಾಷೆ ಸಮೃದ್ಧಗೊಂಡಿದೆ. ಸಾಹಿತ್ಯವೂ ಸಮೃದ್ಧಗೊಂಡಿದೆ.

ಇದರಿಂದಾಗಿಯೇ ನಮ್ಮ ಪ್ರಾಚೀನ ಕವಿಗಳು ಕೂಡ ಅನ್ಯ ಸಾಹಿತ್ಯದಿಂದ ಪಡೆದು ತಮ್ಮ ಸಾಂಸ್ಕೃತಿಕ ಪರಿಸರಕ್ಕೆ ಒಗ್ಗಿಸಿಕೊಂಡ ಬಗ್ಗೆ ಮುಜುಗರವಿಲ್ಲದೆ ಸ್ಮರಿಸಿಕೊಂಡಿದ್ದಾರೆ. ಪಂಪ ‘ವ್ಯಾಸಮುನೀಂದ್ರ ರುಂದ್ರ ವಚನಾಮೃತ ವಾರ್ಧಿಯನೀಸುವೆಂ’ ಎಂದು ಹೇಳಿಕೊಂಡಿ ದ್ದಾನೆ. ಕುಮಾರವ್ಯಾಸನೂ ಹೇಳಿಕೊಂಡಿದ್ದಾನೆ. ಬಿ.ಎಂ.ಶ್ರೀ ‘ಇವಳ ಸೊಬಗನವಳು ತೊಟ್ಟು ನೋಡಬಯಸಿದೆ. ಅವಳ ತೊಡಿಗೆ ಇವಳಿಗಿಟ್ಟು ಹಾಡ ಬಯಸಿದೆ’ ಎಂಬ ಮಾತಿನಲ್ಲಿ ಎರಡು ಭಾಷೆ ಸಂಸ್ಕೃತಿಗಳ ನಡುವೆ ಏರ್ಪಡುವ ಮಧುರ ಬಾಂಧವ್ಯವನ್ನು ಕಾಣುತ್ತೇವೆ. ಆಧುನಿಕ ಸಾಹಿತ್ಯವು ಇಂಗ್ಲಿಶ್ ಭಾಷೆಯಿಂದ ಪ್ರಭಾವಿತಗೊಂಡು ಬೆಳೆಯುವಾಗ ಬಿ.ಎಂ.ಶ್ರೀ. ಅನೇಕ ರೀತಿಯಲ್ಲಿ ಆತಂಕವನ್ನೂ ಸಂಭ್ರಮವನ್ನು ಅನುಭವಿಸಿರುವುದು ಎಲ್ಲರಿಗೂ ತಿಳಿದಿರುವ ಸಂಗತಿ.

ಕುವೆಂಪು ತಮ್ಮ ‘ಶ್ರೀ ರಾಮಾಯಣ ದರ್ಶನಂ’ ಮಹಾಕಾವ್ಯಕ್ಕೆ ಎಲ್ಲೆಲ್ಲಿಯಿಂದ, ಯಾರು ಯಾರಿಂದ ಪ್ರೇರಣೆ ಪಡೆದರು? ಸಂಸ್ಕೃತದ ಕವಿಗಳಿಂದ, ಕನ್ನಡ ಕವಿಗಳಿಂದ, ಹೋಮರ, ಶೇಕ್ಸಪೀಯರ್, ಡಾಂಟೆ, ವರ್ಜಿಲ್, ಮಿಲ್ಟನ್‌ರಿಂದ ಪ್ರೇರಣೆ ಪಡೆದಿದ್ದಾರೆ. ಕಾದಂಬರಿಗಳಿಗೆ ಟಾಲ್‌ಸ್ಟಾಯ್ ಅವರಿಂದ ಪ್ರೇರಣೆ ಪಡೆದಿದ್ದಾರೆ. ನವ್ಯ ಸಾಹಿತಿಗಳು ಟಿ.ಎಸ್. ಇಲಿಯಟ್, ಕಮು, ಕಾಫ್ಕ ಮುಂತಾದವರಿಂದ ಪ್ರಭಾವಿತರಾಗಿ ಕನ್ನಡಕ್ಕೆ ಹೊಸ ಆಯಾಮ ಸೇರಿಸಿದರು. ದೇವನೂರು ಮಹಾದೇವರಿಗೆ ಮೈಸೂರು ಸೀಮೆಯ ಮಲೆಮಹಾ ದೇಶ್ವರನೂ, ದೂರದ ಮಾರ್ಕ್ವೇಜ್‌ನು ಪ್ರಭಾವ ಬೀರಿದ್ದಾರೆ. ಹೀಗಿರುವಾಗ ಶುದ್ಧ ಕನ್ನಡ ಬದುಕು, ಭಾಷೆ, ಸಂಸ್ಕೃತಿ, ಸಾಹಿತ್ಯ ಇರಲು ಸಾಧ್ಯವಿಲ್ಲ. ದೇಶಿವಾದ ಶುದ್ಧದ ಹುಟುಕಾಟವಾಗಬಾರದು. ಬೆರೆಕೆಯಿಂದ ಸಂಕರ ಸಾಹಿತ್ಯ ಸೃಷ್ಠಿಯಾಗಿರುವಾಗ ಇಂಥಹ ಕನ್ನಡ ಸಾಹಿತ್ಯಕ್ಕೆ ಅದರದೇ ಆದ ಸಾಹಿತ್ಯ ತತ್ವಗಳು ಇರಬೇಕಾದದ್ದು ಸಹಜ. ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಕನ್ನಡ ಸಾಹಿತ್ಯಕ್ಕೆ ಅನ್ವಯಿಸುವುದು ಉಚಿತವೇ? ಕನ್ನಡ ಸಾಹಿತ್ಯವು ಚಾರಿತ್ರಿಕ ಪರಿವರ್ತನೆಗಳಲ್ಲಿ ಬೆಳೆದು ಬಂದದ್ದರಿಂದ ಅದಕ್ಕೆ ಅವರದೇ ಆದ ಸಾಹಿತ್ಯ ಮೀಮಾಂಸೆ ಚಿಂತನೆ ರೂಪುಗೊಳ್ಳಬೇಕಿದೆ.

ಕನ್ನಡದ ಪ್ರತಿಭಾವಂತ ಕವಿಗಳು ಪ್ರಾಚೀನ ಕಾಲದಿಂದ ಅನ್ಯವನ್ನು ಜಾಣತನದಿಂದ ಸ್ವೀಕರಿಸಿದ್ದಾರೆ. ಹಾಗೆ ಸ್ವೀಕರಿಸುವಾಗ, ಒಳಗೆ ತರುವುದರ ಬಗ್ಗೆ ಎಚ್ಚರವನ್ನು, ಸೆಣಸಾಟ ವನ್ನು ಮಾಡಿದ್ದಾರೆ. ಕವಿರಾಜಮಾರ್ಗಕಾರ ‘ದೋಸಮನೆ ಗುಣದ ವೊಲು ಉದ್ಭಾಸಿಸಿ, ಕನ್ನಡದೊಳೊಲ್ದು ಪೂರ್ವಾಚಾರ್ಯರ್, ದೇಶಿಯೆನೆ ನಿರಿಸಿ, ಖಂಡ ಪ್ರಾಸಮನತಿಶಯ ಮಿದೆಂದು ಯತಿಯಂ ಮಿಕ್ಕರ್’ ಎಂಬ ಆತಂಕವನ್ನು ವ್ಯಕ್ತಮಾಡಿದ್ದಾನೆ. ಕೇಶಿರಾಜ ಕನ್ನಡದ ಶುದ್ಧಗೆಗಳು ಎಷ್ಟಿರಬೇಕೆಂದು ಚರ್ಚೆ ನಡೆಸಿದ್ದಾನೆ. ಹರಿಹರ ಅನೇಕ ಸಮಸ್ಯೆಗಳನ್ನು ಎದುರುಸಿ ಹೊಸ ದಾರಿ ಕಂಡುಕೊಂಡಿದ್ದಾನೆ. ಆಧುನಿಕ ಕಾಲದಲ್ಲಿಯೂ ಸೆಣಸಾಟವನ್ನು ನೋಡಬಹುದು. ಇನ್ನು ಕನ್ನಡಿಗಳು ಸಾಕು (ಕೆ.ವಿ.ಎನ್.), ಕನ್ನಡಕ್ಕೆ ಬೇಕು ಕನ್ನಡ ವ್ಯಾಕರಣ (ಶಂಕರಭಟ್ಟ), ಈಚೆಗೆ ನಡೆದ ‘ಋ’ ಕಾರ ಬೇಕೋ ಬೇಡವೋ ಎಂಬ ಚರ್ಚೆಗಳೆಲ್ಲ ಅನ್ಯವನ್ನು ಕನ್ನಡಕ್ಕೆ ತಂದು ಸೇರಿಸುವಾಗ ಅದು ಭಾರವಾಗುವ ಸಂದರ್ಭ ಕಂಡಾಗಲೆಲ್ಲ ಕನ್ನಡ ಚಿಂತಕರು ಆತಂಕದಿಂದ ಚರ್ಚೆ ನಡೆಸಿದ್ದಾರೆ. ಈ ಆತಂಕಗಳಿಗೂ ಕನ್ನಡ ಸಾಹಿತ್ಯ ಮೀಮಾಂಸೆಯ ಅಗತ್ಯಕ್ಕೂ ಸಂಬಧವಿದೆಯೆಂದು ತೋರುತ್ತದೆ.

ಆದರೂ ತರಗತಿಗಳಲ್ಲಿ ಕನ್ನಡ ಸಾಹಿತ್ಯ ಅಧ್ಯಯನ ಮಾಡುವಾಗ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಅನ್ವಯಿಸಿಯೇ ಕಲಿಸುವ ಪರಂಪರೆ ಮುಂದುವರೆದಿದೆ. ನಮ್ಮ ಸಾಹಿತ್ಯ ಪರಿಸರಕ್ಕೂ, ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳು ರೂಪುಗೊಂಡ ಪರಿಸರಕ್ಕೂ ಸಂಬಂಧವಿದೆಯೇ? ಕನ್ನಡ ಭಾಷೆ, ಸಾಹಿತ್ಯ ಪರಿವರ್ತನಶೀಲವಾಗಿದೆ. ಕಲಿಸುವ ಸಮಾಜಶಾಸ್ತ್ರ ಪರಿವರ್ತನಶೀಲವಾಗಿದೆಯೇ? ಈ ಪ್ರಶ್ನೆಗಳನ್ನು ಕಲಿಸುವವರು ಗಂಭೀರವಾಗಿ ಯೋಚಿಸಿದಂತೆ ಕಾಣುವುದಿಲ್ಲ. ಇದು ಕೇವಲ ಅಕಡೆಮಿಕ್ ಚಟುವಟಿಕೆಯಾಗಿ ಉಳಿಯ ಬಾರದೆಂದು ಎಚ್ಚರಿಕೆ ಇರಬೇಕಾದುದ್ದೇ ಕನ್ನಡ ಸಾಹಿತ್ಯ ಮೀಮಾಂಸೆಯ ಹುಡುಕಾಟಕ್ಕೆ ದಾರಿಯಾಗಬೇಕೆಂದು ತೋರುತ್ತದೆ.

ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳಾದ ರಸ, ಧ್ವನಿಗಳಿಂದ ಪ್ರಾಚೀನ ಸಾಹಿತ್ಯ ವನ್ನು, ಆಧುನಿಕ ಸಾಹಿತ್ಯವನ್ನು ಚರ್ಚಿಸುವ ಪರಿಪಾಠ ನಡೆಯುತ್ತಲೇ ಇದೆ. ಕನ್ನಡ ಸಾಹಿತ್ಯ ಹುಟ್ಟಿದ ಪರಿಸರ, ಒತ್ತಡಗಳು, ಸಾಂಸ್ಕೃತಿಕ ಅಗತ್ಯಗಳು ಇವುಗಳನ್ನು ಗಮನದಲ್ಲಿರಿಸಿ ಕೊಂಡು ಅಧ್ಯಯನ ನಡೆಯಬೇಕಾಗಿದೆ. ಪಂಪ, ರನ್ನರ ಕಾವ್ಯವನ್ನು ರಸ ಚರ್ಚೆಯಲ್ಲಿಟ್ಟು ವಿವರಿಸುವುದು, ಕಲ್ಕಿ ಕವನವನ್ನು ಧ್ವನಿಯಲ್ಲಿಟ್ಟು ವಿವರಿಸುವುದು ನಡೆಯುತ್ತಲೇ ಇದೆ. ಇದನ್ನು ಹೊರತು ಪಡಿಸಿ ಕಾವ್ಯವನ್ನು ವಿವರಿಸುವ ಅಗತ್ಯವನ್ನು ಕಂಡುಕೊಳ್ಳಬೇಕಾಗಿದೆ. ಆದರೆ ಕನ್ನಡ ಸಾಹಿತ್ಯಿಕ ಸಂದರ್ಭದಲ್ಲಿ ಭಾರತೀಯ ಕಾವ್ಯ ಮೀಮಾಂಸೆಯನ್ನು ಇನ್ನೂ ಅರ್ಥಪೂರ್ಣ ಮಾಡಲು ಅಧ್ಯಯನಗಳು ನಡೆದಿವೆ. ಕಾವ್ಯಾರ್ಥ ಚಿಂತನ (ಜಿ.ಎಸ್. ಶಿವರುದ್ರಪ್ಪ) ಭಾರತೀಯ ಕಾವ್ಯಶಾಸ್ತ್ರ ಪರಿಭಾಷೆ (ಮಲ್ಲೇಪುರಂ ಜಿ. ವೆಂಕಟೇಶ್) ಇವು ಸಂಸ್ಕೃತ ಕಾವ್ಯ ಮೀಮಾಂಸೆಯನ್ನು ಆಧುನಿಕ ಕಾಲದಲ್ಲಿಯೂ ಬೆಳೆಸಲು ನೆಡೆಸಿದ ಪ್ರಯತ್ನ ಗಳು ಎಂದು ತೋರುತ್ತದೆ. ಭಾರತೀಯ ರಸ, ಧ್ವನಿ, ತತ್ವಗಳನ್ನು ಇಂಗ್ಲಿಶ್ ಸಾಹಿತ್ಯಕ್ಕೂ ಅನ್ವಯಿಸಿ ನೋಡುವ ಸಾಹಸವನ್ನು ಇಂಗ್ಲಿಶ್ ಅಧ್ಯಾಪಕರು ಮಾಡಿರುವುದೂ ಇದೆ. ಈ ಎಲ್ಲ ಪ್ರಯತ್ನಗಳು ಕನ್ನಡ ಸಾಹಿತ್ಯ ಮೀಮಾಂಸೆಯೊಂದನ್ನು ಕಂಡುಕೊಳ್ಳುವ ಬದಲು ಸಂಸ್ಕೃತ ಕಾವ್ಯ ಮೀಮಾಂಸೆಯನ್ನು ಇನ್ನಷ್ಟು ಬಲಪಡಿಸುವತ್ತ ನಡೆದಿರುವುದು ವಿಚಿತ್ರವಾಗಿ ತೋರುತ್ತದೆ.

ಆಧುನಿಕ ಸಾಹಿತ್ಯ ಪ್ರಕಾರಗಳಾದ ಕವಿತೆ, ಕಥೆ, ಕಾದಂಬರಿ, ನಾಟಕ, ಲಲಿತಪ್ರಬಂಧ, ವಿಮರ್ಶೆ ಮುಂತಾದವು ಹೊರಗಿನಿಂದ ಕನ್ನಡಕ್ಕೆ ಬಂದಿವೆ. ಹೀಗೆ ಹೇಳುವುದು ಪೂರ್ಣ ಸತ್ಯವಲ್ಲ. ಪ್ರಾಚೀನ ಕನ್ನಡ ಸಾಹಿತ್ಯ ಎಂದು ಕರೆಯುವ ಸಾಹಿತ್ಯದಲ್ಲಿ ಇವುಗಳ ಹಾಜರಾತಿ ಇದೆ. ಆದರೆ ಅವುಗಳಿಗೆ ಪ್ರತ್ಯೇಕ ಅಸ್ತಿತ್ವ ಇರಲಿಲ್ಲ ಎಂಬುದನ್ನು ಒಪ್ಪಬಹುದು. ಆಧುನಿಕ ಕನ್ನಡ ಸಾಹಿತ್ಯವು ಆರಂಭದಲ್ಲಿ ಈ ಎಲ್ಲ ಪ್ರಕಾರಗಳಲ್ಲಿ ಅಭಿವ್ಯಕ್ತವಾಗತೊಡಗಿತು. ಈ ನೂರು ವರ್ಷಗಳಲ್ಲಿ ಈ ಎಲ್ಲ ಪ್ರಕಾರಗಳು ಹಲವಾರು ಆಯಾಮಗಳನ್ನು ಪಡೆದು ಸಮೃದ್ಧ ವಾಗಿ ಬೆಳೆದಿವೆ. ಸಮೃದ್ಧವಾಗಿ ಬೆಳೆಯಲು ಹೇಗೆ ಸಾಧ್ಯವಾಯಿತು? ಕನ್ನಡದ ಬರಹಗಾರರು ತಮ್ಮ ಪರಿಸರ, ಭಾಷೆ ಮತ್ತು ಸಾಂಸ್ಕೃತಿಕ ಒತ್ತಡಗಳಿಗೆ ಅನುಗುಣವಾಗಿ ಸಾಹಿತ್ಯವನ್ನು ಸೃಷ್ಟಿಮಾಡಿದ್ದಾರೆ. ಮಾಸ್ತಿಯ ಕಥೆಗಳಿಗೂ, ಲಂಕೇಶರ ಕಥೆಗಳಿಗೂ, ದೇವನೂರರ ಕಥೆ ಗಳಿಗೂ ವ್ಯತ್ಯಾಗಳಿಲ್ಲವೇ? ಇದ್ದರೆ ಈ ವ್ಯತ್ಯಾಸಕ್ಕೆ ಕಾರಣಗಳೇನು? ಕಥೆಗಾರರ ಸಾಂಸ್ಕೃತಿಕ ಒತ್ತಡಗಳು, ಧೋರಣೆಗಳು ಭಿನ್ನವಾಗಿರುವುದರಿಂದ ವೈವಿಧ್ಯತೆ ಬರಲು ಸಾಧ್ಯವಾಗಿದೆ. ಇದನ್ನು ಯಾಕೆ ಹೇಳಬೇಕಾಯಿತೆಂದರೆ ಈ ಹೊತ್ತಿಗೂ ತರಗತಿಗಳಲ್ಲಿ ಪಾಠ ಮಾಡುವಾಗ ಈ ಸಾಹಿತ್ಯ ಪ್ರಕಾರಗಳ ಲಕ್ಷಣ, ಸ್ವರೂಪ ಮತ್ತು ಸಾಹಿತ್ಯ ಪ್ರಕಾರಗಳ ಗುಣಲಕ್ಷಣಗಳನ್ನ ಹಡ್ಸನ್ ಹೇಳಿರುವ ರೀತಿಯಲ್ಲಿಯೇ ಕನ್ನಡ ಸಾಹಿತ್ಯದ ಪ್ರಕಾರಗಳನ್ನು ಅರ್ಥಮಾಡಿ ಕೊಳ್ಳುವ ಸಂಪ್ರದಾಯ ಇನ್ನು ತರಗತಿಗಳಲ್ಲಿದೆ. ಕನ್ನಡದ ಕಥೆ, ಕಾದಂಬರಿ, ಕವಿತೆ, ನಾಟಕಗಳು ಬೆಳೆದ ರೀತಿ ಅನನ್ಯವಾಗಿದೆ. ಸಿದ್ಧಲಿಂಗಯ್ಯ ನವರ ಕವಿತೆಗಳನ್ನು, ಮಹಾದೇವರ ಕಥೆಗಳನ್ನು, ಕುಂವೀ ಕಾದಂಬರಿಗಳನ್ನು, ಅಬ್ದುಲ್ ರಶೀದರ ಕಥೆಗಳನ್ನು ಹಡ್ಸನ್ ಹೇಳುವ ರೀತಿಯಲ್ಲಿ ಅರ್ಥಮಾಡಿಕೊಳ್ಳಲು ಅಥವಾ ಅನ್ವಯಿಸಲು ಸಾಧ್ಯವಿದೆಯೇ? ನಮ್ಮ ಸಾಂಸ್ಕೃತಿಕ ಒತ್ತಡಗಳಿಗೆ ಅನುಗುಣವಾಗಿ ಬೆಳೆದ ಸಾಹಿತ್ಯಕ್ಕೆ ಕನ್ನಡ ಸಾಹಿತ್ಯ ತತ್ವಗಳು ರೂಪುಗೊಳ್ಳಬೇಕು ಅಂದಾಗ ಕನ್ನಡ ಸಾಹಿತ್ಯ ಚಿಂತನೆಗಳು ಸೃಷ್ಟಿಯಾಗಲು ಸಾಧ್ಯವಿದೆ.

ಹೀಗೆ ಹೇಳುವಾಗ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು, ಹಡ್ಸನ್ ಮುಂತಾ ದವರ ತತ್ವಗಳನ್ನು ಸಂಪೂರ್ಣವಾಗಿ ತಿರಸ್ಕರಿಸಬೇಕು ಎಂದಲ್ಲ. ಅವೇ ಅಂತಿಮ ವಾಗಬಾರದು. ಬೇಕಾದಷ್ಟನ್ನು ಮಾತ್ರ ಬಳಸಬೇಕು. ಆದರೆ ಈ ಹೊತ್ತಿಗೂ ತರಗತಿಯಲ್ಲಿ ಇವೇ ಅಂತಿಮ ಸತ್ಯಗಳಾಗಿ ಬೋಧಕರನ್ನು, ವಿದ್ಯಾರ್ಥಿಗಳನ್ನು ಕಾಡುತ್ತಿವೆ. ಇದರಿಂದಾಗಿ ವಿದ್ಯಾರ್ಥಿಗಳು ಭಾರತೀಯ ಸಾಹಿತ್ಯ ಮೀಮಾಂಸೆಯ ತತ್ವಗಳನ್ನು, ಕೇಶಿರಾಜನ ಶಬ್ದಮಣಿ ದರ್ಪಣವನ್ನು ಹಡ್ಸನ್‌ನ ಸಾಹಿತ್ಯ ಪ್ರವೇಶಿಕೆಯ ವಿಚಾರಗಳನ್ನು ಬಾಯಿಪಾಠ ಮಾಡುವ ಒತ್ತಡಕ್ಕೆ ಸಿಲುಕಿದ್ದಾರೆ. ಸಾಹಿತ್ಯವನ್ನು ಅರ್ಥಮಾಡಿಕೊಳ್ಳುವುದಕ್ಕೆ ಸರಳ ಮಾರ್ಗಗಳನ್ನು ಕಂಡುಕೊಳ್ಳುವ ಪ್ರಯತ್ನವಾಗಿ ಕನ್ನಡ ಸಾಹಿತ್ಯ ಚಿಂತನೆಯನ್ನು ರೂಪುಗೊಳಿಸಬೇಕಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ರಚನೆಯ ಸಂದರ್ಭದಲ್ಲಿ ಅನೇಕ ವಿಚಾರ ಧಾರೆಗಳು ಹುಟ್ಟಿ ಕೊಂಡು ಲೇಖಕರನ್ನು ಪ್ರಭಾವಿಸಿವೆ. ಪ್ರಭಾವಗಳು ಕೆಲವು ಹೊಂದಿಕೊಂಡಿವೆ. ಕೆಲವು ಹೊಂದಿಕೊಳ್ಳದೇ ಪ್ರಯೋಗಗಳಾಗಿ ಪರಿಣಮಿಸಿವೆ. ಪಾಶ್ಚಾತ್ಯ ವಾದಗಳು, ಸಿದ್ಧಾಂತಗಳ ಮೂಲಕ ಕನ್ನಡ ಸಾಹಿತ್ಯ ಕೃತಿಗಳನ್ನು ವಿಮರ್ಶಿಸುವ ಪ್ರಯೋಗಗಳು ನಡೆದಿವೆಯಾದರೂ ಅವು ಪ್ರಯೋಜನಕಾರಿಯಾಗಿಲ್ಲ ಎಂಬುದು ಅರಿವಿಗೆ ಬರುತ್ತಿದೆ. ಅನೇಕ ಪಾಶ್ಚಾತ್ಯವಾದ ಗಳನ್ನು ಅನ್ವಯಿಸಿ ಕನ್ನಡದ ಕೃತಿಯನ್ನು ಪ್ರತ್ಯೇಕವಾಗಿ ವಿಮರ್ಶಿಸಿದಾಗಲೂ ಕೆಲವು ಸಮಾನ ಅಂಶಗಳು ವ್ಯಕ್ತವಾಗಿವೆ. ಅಂದಾಗ ಹೀಗೆ ಸಮಾನ ಅಂಶಗಳು ಯಾಕೆ ವ್ಯಕ್ತವಾದವು? ಕನ್ನಡದ ಪರಿಸರದಲ್ಲಿ, ಸಾಂಸ್ಕೃತಿಕ ಒತ್ತಡದಲ್ಲಿ ಹುಟ್ಟಿದ ಒಂದು ಕನ್ನಡ ಕೃತಿಯನ್ನು ಅದರ ಸಾಂಸ್ಕೃತಿಕ ಸಂದರ್ಭದಲ್ಲಿಟ್ಟು ನೋಡುವುದು, ಸಮಕಾಲೀನ ಸಂದರ್ಭದಲ್ಲಿಟ್ಟು ನೋಡುವುದರಿಂದ ಕೃತಿಗೆ ಹೆಚ್ಚು ನ್ಯಾಯ ಸಿಗಬಲ್ಲದು. ಆದ್ದರಿಂದ ಭಾರತೀಯ ಕಾವ್ಯ ಮಿಮಾಂಸೆ, ಪಾಶ್ಚಾತ್ಯ ಕಾವ್ಯ ಮಿಮಾಂಸೆಯ ತತ್ವಗಳನ್ನು ಪ್ರಶ್ನಾರ್ಹವಾಗಿ ನೋಡಬೇಕು. ಉಪಯುಕ್ತವಾಗುವ ನೆಲೆಯಲ್ಲಿ ಅಂಗೀಕರಿಸಬೇಕು. ಇಂಗ್ಲಿಶ್ ಭಾಷೆಯನ್ನು ಯಾಕೆ ತಿರಸ್ಕರಿಸಬೇಕು? ದೇಶಿ ಭಾಷೆಯಲ್ಲೇ ಯಾಕೆ ಬರೆಯಬೇಕು ಎಂಬುದನ್ನು ಗೂಗಿ ಹೇಳು ವಾಗ, ಅವನು ಕೊಡುವ ವಿವರಗಳಿಂದ ಅವು ಕನ್ನಡ ಲೇಖಕರಿಗೆ ಪ್ರಿಯವಾಗುತ್ತಿದೆ. ಕನ್ನಡದ ಸಂದರ್ಭದಲ್ಲೂ ಅವು ಹೊಂದುವದರಿಂದ ಗೂಗಿ ಚಿಂತನೆಗಳನ್ನು ಸ್ವೀಕರಿಸಬೇಕೆನಿಸುತ್ತದೆ. ಕನ್ನಡ ಸಾಹಿತ್ಯ ವಿಚಾರಗಳಲ್ಲಿ ಶೋಯೆಂಕಾ ವಿಚಾರಗಳು, ಅಚಿಬೆ ವಿಚಾರಗಳು ಸೇರಿ ಕೊಂಡಿವೆ. ಮಾರ್ಕ್ಸ್‌ವಾದವನ್ನು ಕನ್ನಡ ಚಿಂತಕರು ನಿರಂತರವಾಗಿ ಪಡೆಯುತ್ತಲೇ ಬಂದಿ ದ್ದಾರೆ. ಕನ್ನಡ ಸಾಹಿತ್ಯ ಚಿಂತನೆಯನ್ನು ರೂಪಿಸುವಾಗ ಅನ್ಯರ ವಿಚಾರಗಳು ಸಹಾಯಕ ವಾಗುತ್ತಿವೆ. ‘ಅನ್ಯ’ ಅನ್ನಿಸುವುದಿಲ್ಲ. ಯಾಕೆಂದರೆ ಸಾಹಿತ್ಯ ಸೃಷ್ಟಿಸುವ ಲೇಖಕರ ಮೇಲೆಯೂ ಈ ಅನ್ಯರ ಚಿಂತನೆಗಳು ಪ್ರಭಾವ ಮಾಡಿರುತ್ತವೆ.

‘ಭಾರತೀಯ ಕಾವ್ಯ ಮೀಮಾಂಸೆ’ಯ ಜಾಗದಲ್ಲಿ ‘ಕನ್ನಡ ಕಾವ್ಯ ಮೀಮಾಂಸೆ’ ತರುವ ಪ್ರಯತ್ನಗಳು ನಡೆಯುತ್ತಿವೆ. ಕನ್ನಡ ಸಾಹಿತ್ಯದ ಅಧ್ಯಯನವು ತರಗತಿಗಳಲ್ಲಿ ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳ ಹಿನ್ನೆಲೆಯಲ್ಲಿ ನಡೆಯುತ್ತಿದ್ದರೂ, ತರಗತಿಯಿಂದ ಹೊರಗೆ ವಿದ್ವಾಂಸರು, ವಿಮರ್ಶಕರು, ಚಿಂತಕರು ಕನ್ನಡ ಸಾಹಿತ್ಯ ಅಧ್ಯಯನವನ್ನು ಕನ್ನಡ ಸಾಂಸ್ಕೃತಿಕ ಪರಿಸರದ ಹಿನ್ನೆಲೆಯಲ್ಲಿ ಗ್ರಹಿಸುವ ಪ್ರಯತ್ನ ಮಾಡುತ್ತಲೇ ಇದ್ದಾರೆ. ‘ಕನ್ನಡ ಸಾಹಿತ್ಯ ಮೀಮಾಂಸೆ’ ಅಥವಾ ‘ಕನ್ನಡ ಸಾಹಿತ್ಯ ಚಿಂತನೆ’ ಎಂದೇ ರೂಪಿಸುವುದು ಉಚಿತವೆಂದು ತೋರುತ್ತದೆ. ‘ಕಾವ್ಯದ’ ಬದಲು ‘ಸಾಹಿತ್ಯ’ ಎಂದು ಕರೆಯುವುದೇ ಸಹಜವಾಗಿ ಕಾಣುತ್ತದೆ. ‘ಮೀಮಾಂಸೆ’ ಬದಲು ‘ಚಿಂತನೆ’ ಎಂಬ ಶಬ್ದ ಸರಳವಾಗಿ ಕಾಣುತ್ತಿದೆ.

ಇದನ್ನು ಹೇಗೆ ರೂಪಿಸುವುದು? ಇದು ನಮ್ಮ ಮುಂದಿರುವ ದೊಡ್ಡ ಸವಾಲಾಗಿ ನಿಲ್ಲ ಬಹುದು. ಸಾಹಿತ್ಯ ಕೃತಿಯಲ್ಲಿ ಅಂತರ್ಗತವಾಗಿರುವ ಸಾಹಿತ್ಯ ಚಿಂತನೆಯನ್ನು ಗ್ರಹಿಸುವುದು ಮೊದಲ ಪ್ರಯತ್ನವಾಗಬಹುದು. ‘ಕನ್ನಡ ಕವಿಗಳ ಕಾವ್ಯ ಕಲ್ಪನೆ’ ಎಂಬ ಹೆಸರಿನಿಂದ ಚರ್ಚಿಸುವ ಪ್ರಯತ್ನಗಳ ನಡೆದಿವೆ. ಪಂಪ ಹೇಳುವ ‘ದೇಶಿಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ವುದು. ತತ್ತೊಡೆ ಕಾವ್ಯಬಂಧಂ ಒಪ್ಪುಗಂ’ ಎಂಬ ಮಾತಿನಲ್ಲಿ ಕನ್ನಡ ಸಾಹಿತ್ಯ ಚಿಂತನೆ ಇದೆ. ಹೀಗೆ ಹೇಳುವಾಗ ಪಂಪನು ಎದುರಿಸಿದ ಸಮಸ್ಯೆ ಮತ್ತು ತಳೆದ ನಿಲುವು ವ್ಯಕ್ತವಾಗುತ್ತದೆ. ತಳೆದ ನಿಲುವು ಅವನ ಸಾಂಸ್ಕೃತಿಕ ಸಂದರ್ಭಕ್ಕೆ ಸಂಬಂಧಿಸಿರುತ್ತದೆ. ಪಂಪನ ಮುಂದೆ ಅವನ ಕಾಲ, ಪ್ರಭುತ್ವ, ಸಹೃದಯರು ಮತ್ತು ಪರಿಸರ ಎಲ್ಲವೂ ಅವನನ್ನು ಪ್ರಭಾವಿಸಿರುತ್ತದೆ. ಹನ್ನೆರಡನೇ ಶತಮಾನಕ್ಕೆ ಬಂದರೆ ಬಸವಣ್ಣ ‘ತಾಳಮಾನಸರಿಸವನರಿಯೆ, ಓಜೆಬಜಾವಣೆ ಲೆಕ್ಕವನರಿಯೆ, ಕೂಡಲ ಸಂಗಮದೇವಾ, ನಿಮಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ’ ಎಂದು ತನ್ನ ಸಾಹಿತ್ಯ ಧೋರಣೆಯನ್ನು ಹೇಳಿದ್ದಾನೆ. ಹೀಗೆ ಹೇಳುವಾಗ ಬಸವಣ್ಣನ ಎದುರಿಗಿರುವ ಸವಾಲುಗಳು ಕಣ್ಣ ಮುಂದೆ ನಿಲ್ಲುತ್ತವೆ. ಸಂಸ್ಕೃತ ವ್ಯಾಕರಣವಿರ ಬಹುದು, ಕಾವ್ಯ ರೂಪಗಳಿರಬಹುದು. ಕಾವ್ಯ ವಸ್ತುಗಳಿರಬಹುದು. ಪಂಡಿತ ಮಂಡಳಿ ಇರಬಹುದು. ಭಾಷೆ, ಛಂದಸ್ಸು ಮುಂತಾಗಿ ಏನೇನೋ ಇವೆ. ಇವುಗಳನ್ನು ಬದಿಗಿರಿಸಿ ‘ತಾನು ಒಲಿದಂತೆ ಹಾಡುವಾಗ’ ಬಸವಣ್ಣನ ಸಾಹಿತ್ಯ, ಅದರ ರಚನೆ, ಚಿಂತನೆ ಬೇರೊಂದು ದಾರಿ ಹಿಡಿದಿರುವುದನ್ನು ಇಲ್ಲಿ ವಿವರಿಸುವ ಅಗತ್ಯವಿಲ್ಲ. ವಚನಗಳ ಮೂಲಕ ಕನ್ನಡ ಸಾಹಿತ್ಯ ಚಿಂತನೆಯೊಂದು ರೂಪುಗೊಂಡಿರುವುದು ಕಂಡುಬರುತ್ತದೆ. ಹರಿಹರ ‘ಸಾವವರ ಮೇಲೆ ಮನುಜರ ಮೇಲೆ, ಕನಿಷ್ಠರ ಮೇಲೆ’ ಕಾವ್ಯ ಬರೆಯುವುದಿಲ್ಲ ಎಂದು ತಳೆದ ನಿಲುವು ಆಗಿರಬಹುದು. ಚಾಮರಸನ ‘ಸತ್ತವರ ಕಥೆಯಲ್ಲ…..’ ಮುದ್ದಣನ ‘ಪದ್ಯ ವದ್ಯಂ, ಗದ್ಯಂ ಹೃದ್ಯಂ….’ ಇಂಥ ನಿಲುವುಗಳನ್ನು ಈ ಕವಿಗಳು ತಳೆಯುವಾಗ ಅವರು ಎದುರಿಸಿದ ಸಮಸ್ಯೆಗಳು, ನಡೆಸಿದ ಚಿಂತನೆಗಳು ವ್ಯಕ್ತವಾಗುತ್ತವೆ.

ಕುಮಾರವ್ಯಾಸ ತನ್ನ ಕಾವ್ಯದ ಹೆಗ್ಗಳಿಕೆ ಹೇಳುವಾಗ, ಅವು ಹೆಗ್ಗಳಿಕೆಗಳೋ ಆತಂಕಗಳೋ ಎಂಬ ಅನುಮಾನ ಬರುತ್ತದೆ. ಹಲಗೆ, ಬಳಪ ಹಿಡಿಯದ ಒಂದು ಅಗ್ಗಳಿಕೆ, ಇಟ್ಟ ಪದ ಅಳಿಸಲಾರದ ಒಂದು ಅಗ್ಗಳಿಕೆ, ಇನ್ನೊಬ್ಬರು ಮಾಡಿದ್ದನ್ನು ಮಾಡದ ಒಂದು ಅಗ್ಗಳಿಕೆ, ಕೈ ಕಿತ್ತದೆ ಬರೆಯುವ ಒಂದು ಅಗ್ಗಳಿಕೆ ಕುಮಾರವ್ಯಾಸನದು. ಇವು ಯಾಕೆ ಆತಂಕವೂ ಆಗಿವೆ ಎಂದರೆ, ಕುಮಾರವ್ಯಾಸ ಪಂಡಿತರಿಗಾಗಿ ಮಾತ್ರ ಬರೆಯುವುದಿಲ್ಲ. ಓದು ಬರಹ ಬಾರದ ಜನಪದರಿಗಾಗಿ ಕಾವ್ಯವನ್ನು ಹಾಡಬೇಕಾಗಿದೆ. ಇದು ಅವನ ಕಾಲದ ಸಾಂಸ್ಕೃತಿಕ ಒತ್ತಡವಾಗಿದೆ. ಪಂಡಿತರಿಗೆ ಓದುವಂತಿರಬೇಕು. ಜನಪದರಿಗೆ ಹಾಡುವಂತಿರಬೇಕು. ಅಂಥ ಕಾವ್ಯ ಬರೆಯುವ ಒತ್ತಡಕ್ಕೆ ಸಿಲುಕಿದ್ದಾನೆ. ಆ ಕಾರಣದಿಂದ ಹಾಡುವ ಕಾವ್ಯದಲ್ಲಿ ಇಟ್ಟ ಪದ ಬದಲಿಸುವ ಮಾತೇ ಇಲ್ಲ. ಹಿಂದಿನವರು ಅನುಸರಿಸಿದ್ದನ್ನು ಅನುಸರಿಸುವ ಗುಣವಿಲ್ಲ. ಮೊದಲ ಹೆಗ್ಗಳಿಕೆಗೂ ಕೊನೆಯ ಹೆಗ್ಗಳಿಕೆಗೂ ವೈರುಧ್ಯವಿದೆ. ಮೊದಲಲ್ಲಿ ಬರೆಯುವ ಪ್ರಶ್ನೆಯಿಲ್ಲ. ಕೊನೆಯದರಲ್ಲಿ ಬರೆಯುವ ಕ್ರಿಯೆ ಇದೆ. ಆ ಕ್ರಿಯೆಯ ವೈಶಿಷ್ಟ್ಯವೆಂದರೆ ಜನಪದರು ಹಾಡುವಂತೆ ಕುಮಾರವ್ಯಾಸ ಬರೆಯುವ ಸಾಮರ್ಥ್ಯ ಹೊಂದಿದ್ದ. ಏಕಕಾಲಕ್ಕೆ ಎರಡು ಕ್ರಿಯೆಗಳನ್ನು ಅವನು ಮಾಡಬೇಕಾಗಿ ಬಂದದ್ದು ಯಾಕೆ? ಅಂದರೆ ಓದುವ ಪಂಡಿತರಿಗೂ, ಕೇಳುವ ಜನಪದರಿಗೂ ಏಕಕಾಲದಲ್ಲಿ ಪ್ರಿಯವಾಗುವಂಥ ಕಾವ್ಯವನ್ನು ಬರೆಯುವ ಒತ್ತಡಕ್ಕೆ ಕುಮಾರವ್ಯಾಸ ಯಾಕೆ ತುಡಿದ? ಕಾವ್ಯ ಮೀಮಾಂಸೆ ಹೇಳುವ ಸಹೃದಯನಿಗೆ ಇರಬೇಕಾದ ಗುಣಗಳು ಕುಮಾರವ್ಯಾಸ ತನ್ನ ಕಾವ್ಯವನ್ನು ತಲುಪಿಸಲು ಬಯಸುವ ಜನಪದರಲ್ಲಿ ಇಲ್ಲವೇ? ಅಥವಾ ಈ ಕೇಳುವ ಗುಣವನ್ನು ಸೇರಿಕೊಳ್ಳು ತ್ತಾನೆಯೇ?

ಕಾವ್ಯ ರಚನೆಗೆ ಮುನ್ನ ಮುದ್ದಣನಿಗಿರುವ ಆತಂಕಗಳು ಯಾಕೆ? ಈ ಆತಂಕಗಳಿಗೆಲ್ಲ ಅರ್ಥವಿದೆ. ಕವಿಗಳ ಹುಡುಕಾಟದ ಕೆಲಸವೇ ಹೊಸದನ್ನು ಕಟ್ಟಲು ಬಯಸಿದಂತೆ ಕಾಣುತ್ತದೆ. ಈ ಹೊಸದನ್ನು ಕಟ್ಟುವ ಒತ್ತಡಕ್ಕೆ ಕಾರಣಗಳು ಕವಿಯ ಕಾಲದ ಸಾಂಸ್ಕೃತಿಕ ಒತ್ತಡಗಳೇ ಆಗಿರುತ್ತವೆ. ಈ ಒತ್ತಡಗಳನ್ನು ಹುಡುಕುವ ಹಂಬಲದ ಹಿಂದೆ ಸಾಹಿತ್ಯ ಚಿಂತನೆಯೊಂದನ್ನು ರೂಪಿಸುವುದಾಗಿದೆ.

ಆಧುನಿಕ ಕನ್ನಡ ಸಾಹಿತ್ಯ ಸಂದರ್ಭದಲ್ಲಿ ಅದರಲ್ಲೂ ಸ್ವಾತಂತ್ರ್ಯಾನಂತರದ ಕಾಲದಲ್ಲಿ ಪ್ರಗತಿಶೀಲರು ಮಧ್ಯಮ ವರ್ಗದವರನ್ನು ಕುರಿತು ಸಾಹಿತ್ಯ ರಚಿಸಿದರು. ಸಮಾನತೆಗಾಗಿ ಹಂಬಲಿಸಿದರು. ಈ ಪಂಥದ ಲೇಖಕರು ಮಾರ್ಕ್ಸ್, ಲೆಲಿನ್, ಗಾರ್ಗಿ ಅವರಿಂದ ಪ್ರೇರಣೆ ಪಡೆದಿದ್ದರು. ವಿಚಿತ್ರವೆಂದರೆ ಪ್ರಗತಿಶೀಲರು ಎಲ್ಲರೂ ವೃತ್ತಿ ಬರಹಗಾರರಾಗಿ ಇದ್ದಿದ್ದರಿಂದ ಅವರ ವೇಗದ ಬರವಣಿಗೆಯಿಂದ ಅನೇಕ ಸಮಸ್ಯೆಗಳನ್ನು ಬಿಂಬಿಸುವಲ್ಲಿ ಎಡವಿದರು. ಈ ತೊಡಕನ್ನು ಪರಿಗಣಿಸಬೇಕಾಗುತ್ತದೆ. ಸಿದ್ಧಲಿಂಗಯ್ಯನವರ ಕಾವ್ಯ ಒಂದು ಕಡೆ ಇದೆ, ‘ಎಲ್ಲ ಕೇಳಲಿ ಎಂದು ನಾನು ಹಾಡುವುದಿಲ್ಲ’ ಎಂಬ ಜಿ.ಎಸ್.ಎಸ್ ಅವರ ಕವಿತೆಯನ್ನು ಜತೆಗಿಟ್ಟು ಗಮನಿಸಿದರೆ ಹೇಗೆ ಅನ್ನಿಸಬಹುದು? ‘ಎನ್ನ ಪಾಡೆನಗಿರಲಿ ಅದರ ಹಾಡನ್ನಷ್ಟೇ ನೀಡುವೆನು ರಸಿಕ ನಿನಗೆ’ ಎನ್ನುವ ಬೇಂದ್ರೆ ಕವಿತೆಯನ್ನು ಗಮನಿಸಬಹುದು. ಬಂಡಾಯ ಸಾಹಿತ್ಯ ಚಳುವಳಿಯ ಸಂದರ್ಭದಲ್ಲಿ ಹೂವಿನ ಬಗ್ಗೆ, ಹೆಣ್ಣಿನ ಬಗ್ಗೆ, ತಾರೆಯ ಬಗ್ಗೆ, ಕವಿತೆಯನ್ನು ಬರೆಯಬೇಕೋ, ಬರೆಯಬಾರದೋ ಎಂದು ನಡೆದ ವಾಗ್ವಾದವನ್ನು ಗಮನಿಸಬೇಕು. ಕವಿಗಳ ಈ ಬಗೆಯ ನಿಲುವುಗಳಿಗೆ ಸಾಂಸ್ಕೃತಿಕವಾಗಿ ಯಾವ ಬಗೆಯ ಒತ್ತಡಗಳಿರಬಹುದು ಎಂಬುದನ್ನು ಹುಡುಕಾಟುವುದೇ ಹೊಸ ಸಾಹಿತ್ಯ ಚಿಂತನೆಗೆ ದಾರಿ ಯಾಗಬಹುದು.

ಇದನ್ನು ವಿಸ್ತರಿಸಿ ಹೇಳುವುದಾದರೆ ಆಧುನಿಕ ಕನ್ನಡ ಸಾಹಿತ್ಯಿಕ ಸಂದರ್ಭದಲ್ಲಿ ಕುವೆಂಪು ಅವರಿಗೂ ಮಾಸ್ತಿ ಅವರಿಗೂ ನಡೆದ ವಾಗ್ವಾದವಿದೆ. ನಂತರದ ತಲೆಮಾರಿನಲ್ಲಿ ಅನಂತಮೂರ್ತಿ ಅವರಿಗೂ, ತೇಜಸ್ವಿ ಅವರಿಗೂ ನಡೆದ ವಾಗ್ವಾದವಿದೆ. ಈ ವಾಗ್ವಾದ ಸುಮ್ಮನೆ ಹುಟ್ಟಿದ್ದಲ್ಲ. ಇದು ವೈಯಕ್ತಿಕವಾದ ಜಗಳವಲ್ಲ. ಸಾಂಸ್ಕೃತಿಕವಾಗಿಯೇ ಬಹಳ ಮುಖ್ಯವಾದದ್ದು. ಈ ವಾಗ್ವಾದಗಳಿಂದ ಹೊಸ ಸಾಹಿತ್ಯ ರಚನೆಗೆ ದಾರಿಯಾಗಿದೆ. ಭಿನ್ನಾಭಿ ಪ್ರಾಯಗಳು ತಲೆದೋರುವುದಕ್ಕೆ ಲೇಖಕರ ಸಾಂಸ್ಕೃತಿಕ ಹಿನ್ನೆಲೆ, ಕಾಲದ ಪರಿಸರ, ಸಾಮಾಜಿಕ ನಿಲುವುಗಳನ್ನು ಕುರಿತು ವಿಮರ್ಶೆ ಮಾಡುವಾಗ ಈ ಎಲ್ಲ ಅಂಶಗಳು ಗಮನಕ್ಕೆ ಬರುತ್ತವೆ. ಗಮನಿಸದೇ ಸಾಹಿತ್ಯವನ್ನು ವಿಮರ್ಶಿಸುವುದು ಸಾಧ್ಯವಾಗುವುದಿಲ್ಲ. ಇಂಥ ಶೋಧದಿಂದಲೇ ಕನ್ನಡ ಸಾಹಿತ್ಯ ಚಿಂತನೆ ರೂಪುಗೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಇಂಥ ಪ್ರಯತ್ನಗಳು ನಡೆಯುತ್ತಿರುವುದು ಕಂಡುಬರುತ್ತಿದೆ.

‘ಕನ್ನಡ ಸಾಹಿತ್ಯ ಚಿಂತನೆ’ ರೂಪಿಸುವುದು ಎಂದರೆ, ಕನ್ನಡ ಸಾಹಿತ್ಯದ ಜತೆ ಅರ್ಥ ಪೂರ್ಣವಾಗಿ ಅನುಸಂಧಾನ ಮಾಡುವುದು. ಕನ್ನಡ ಸಾಹಿತ್ಯ ಸೃಷ್ಟಿಯಲ್ಲಿ ಕನ್ನಡ ಮನಸ್ಸನ್ನು ಕಾಣುವುದು, ಅನ್ಯ ಪ್ರಭಾವಗಳಿಂದ ಅರ್ಥಪೂರ್ಣ ಸಾಹಿತ್ಯವನ್ನು ರಚಿಸುವುದು ಆಗಬೇಕೇ ಹೊರತು ಅನ್ಯ ಪ್ರಭಾವಗಳಿಂದ ಕನ್ನಡ ಮನಸ್ಸು ಕಳೆದು ಹೋಗಬಾರದು. ಅಂತಿಮವಾಗಿ ಕನ್ನಡ ಸಾಹಿತ್ಯ ಚಿಂತನೆ ಎಂದರೆ ಅದೊಂದು ಲೋಕದೃಷ್ಟಿಯನ್ನು ವ್ಯಕ್ತಮಾಡುವುದೇ ಆಗಿರಬೇಕು. ಈ ಎಲ್ಲ ಹಿನ್ನೆಲೆಯಲ್ಲಿ, ಪ್ರಸಿದ್ಧ ಕನ್ನಡ ಲೇಖಕರು ಸಾಹಿತ್ಯ ರಚಿಸುತ್ತಿದ್ದಂತೆ ತಾವು ‘ಯಾಕೆ ಬರೆಯುತ್ತಿದ್ದೇವೆ’ ಎಂಬ ಪ್ರಶ್ನೆಯನ್ನು ಮುಂದಿಟ್ಟುಕೊಂಡು ವಿವರಿಸಲು ಪ್ರಯತ್ನಿಸಿದ್ದಾರೆ. ಸಾಹಿತಿಗಳು ತಾವೇ ಈ ಪ್ರಶ್ನೆಗೆ ಉತ್ತರವಾಗಿ ವಿವರಣೆ ಕೊಟ್ಟುಕೊಂಡಿ ದ್ದಾರೆ. ಕೆಲವರಿಗೆ ಈ ಪ್ರಶ್ನೆಗಳು ಮಾಧ್ಯಮಗಳಿಂದಲೂ ಬಂದಿವೆ. ಆಗ ಯೋಚಿಸಿ ಉತ್ತರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ. ‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಲೇಖಕರು ಉತ್ತರಿಸುವಾಗ ಅವರ ಜೀವನಾನುಭವದಿಂದ ಕಂಡುಕೊಂಡ ಜೀವನ ದೃಷ್ಟಿಕೋನ, ಲೋಕದೃಷ್ಠಿಕೋನವನ್ನೇ ಹೇಳಲು ಪ್ರಯತ್ನಿಸಿದ್ದಾರೆ. ಇವರ ‘ದರ್ಶನ’ದ ಮೂಲಕ ಕನ್ನಡ ಸಾಹಿತ್ಯ ಚಿಂತನೆ ರೂಪಿಸಲು ಸಾಧ್ಯವಾಗಬಹುದೆಂಬ ಪ್ರಯತ್ನವನ್ನು ಇಲ್ಲಿ ಮಾಡಲಾಗಿದೆ.