‘ನೀನು ಚೆನ್ನಾಗಿ ಚಿತ್ರ ಬರೆಯುವುದನ್ನು ಕಲಿ. ದೊಡ್ಡವನಾದ ಮೇಲೆ ಒಂದು ರಾತ್ರಿ ಮಲಗುವ ಮುಂಚೆ ಸರಿಯಾಗಿ ಅಮ್ಮನನ್ನು ಪ್ರಾರ್ಥಿಸಿಕೊಂಡು ಮಲಗು. ಆಗ ನಿನ್ನ ಕನಸಲ್ಲಿ ಅಮ್ಮ ಕಾಣಿಸಿಕೊಳ್ಳುತ್ತಾಳೆ. ಅದನ್ನೇ ನೆನಪಿಟ್ಟುಕೊಂಡು ಬೆಳಗ್ಗೆ ಅವಳ ಚಿತ್ರ ಬರೆದುಕೊಡು’. ತೀರಿಹೋದ ನನ್ನ ತಾಯಿಯ ಒಂದು ಪೋಟೋ ನಮ್ಮ ಮನೆಯಲ್ಲಿ ಇರಲಿಲ್ಲವಾದ್ದರಿಂದ, ನನ್ನಕ್ಕ ಚಿಕ್ಕವನಿದ್ದ ನನಗೆ ತಾಕೀತು ಮಾಡುತ್ತಿದ್ದುದು ಹೀಗೆ. ನನ್ನ ಬಾಲ್ಯದಲ್ಲಿ ನಾನೊಬ್ಬ ವಿಶೇಷ ವ್ಯಕ್ತಿ ಎನ್ನುವಂತೆ ನನ್ನನ್ನು ಕಂಡಿದ್ದು ಅವಳೆ. ಅವಳ ಮಾತಿನಿಂದಾಗಿ ನಾನು ಚಿತ್ರಕಾರನಾಗಲು ಪ್ರಯತ್ನಿಸಿದೆ. ಚಿತ್ರಗಳನ್ನು ಬರೆದೂ ಬರೆದೂ ಇಟ್ಟೆ. ಆದರೆ ಸ್ವಲ್ಪ ದೊಡ್ಡವನಾದ ಹೊತ್ತಿಗೆ ನನಗೆ ಗೊತ್ತಾಯಿತು. ನನಗೆ ಕಾಫಿ ಮಾಡಲು ಮಾತ್ರ ಬರುತ್ತದೋ ಹೊರತು ಸ್ವಂತ ಏನೂ ಬರೆಯಲು ಬರುತ್ತಿಲ್ಲ ಎಂಬುದು. ಆದರೆ ಭಾಷೆಯಲ್ಲಿ ಯಾವುದೇ ಭಾವನೆಯನ್ನಾಗಲೀ, ಚಿತ್ರವನ್ನಾಗಲೀ ನಾನು ಬರೆಯ ಬಲ್ಲೆ ಎಂಬುದೂ ತಿಳಿಯಿತು. ಇದರಿಂದಾಗಿಯೇ ಬಹುಶಃ ನನಗೆ ಪದ್ಯದ ಕಡೆ ಮನಸ್ಸಾಯಿತು.

ಹೈಸ್ಕೂಲಿನಲ್ಲಿ ಮುಗ್ಧವಾಗಿ ರಮ್ಯವಾಗಿ ಬರೆಯುತ್ತಿದ್ದುದೇನೋ ಸರಿ. ಕಾಲೇಜಿಗೆ ಬಂದಾಗ ನವ್ಯಕವಿತೆ ಎಂದು ನಾನು ಅಪಾರ್ಥ ಮಾಡಿಕೊಂಡಿದ್ದನ್ನು ಬರೆದು ಹಾಕಿದೆ. ಅಂಥದೇ ತುಂಬಿದ್ದ ಒಂದು ಬರಹದ ಪುಸ್ತಕವನ್ನು ತೆಗೆದುಕೊಂಡು ಹೋಗಿ ಅನಂತಮೂರ್ತಿ ಯವರನ್ನು ಮುಗ್ಧತೆಯ ಧಾರ್ಷ್ಟ್ಯದಿಂದ ಭೇಟಿಯಾದ್ದನ್ನು ನೆನೆದರೆ ಈಗ ನಗು ಬರುತ್ತದೆ. ಅದರಲ್ಲೂ ಒಂದು ಪದ್ಯ, ಒಂದೆರೆಡು ಸಾಲುಗಳನ್ನು ಅವರು ಗುರುತಿಸಿದರು. ‘ನೀನು ಲೇಖಕನಾಗಬೇಕಾದರೆ…..’ ಎಂದೇನೋ ಗೌರವ ಕೊಟ್ಟು ಮಾತಾಡಿದರು. ನಂತರ, ಬರೆದಿದ್ದೆಲ್ಲವನ್ನು ಅವರಿಗೆ ತೋರಿಸಲು ಶುರುಮಾಡದೆ. ಚೆನ್ನಾಗಿದೆ, ಚೆನ್ನಾಗಿಲ್ಲ ಎಂಬುದನ್ನಷ್ಟೇ ಅವರು ತೋರಿಸಿಕೊಡುತ್ತಿದ್ದುದು. ‘ಒಂದು ಪದ್ಯ ಯಾಕೆ ಚೆನ್ನಾಗಿದೆ ಎಂದು ಹೇಳಬಹುದು. ಚೆನ್ನಾಗಿಲ್ಲದಿರುವುದಕ್ಕೆ ಹೇಳಲಾರದಷ್ಟು ಕಾರಣಗಳಿರುತ್ತವೆ’ ಎಂಬ ಅವರ ಮಾತು ನೆನಪಿದೆ. ಅವರಿಂದ ಮುಖ್ಯವಾಗಿ ನಾನು ಕಲಿತಿದ್ದೇನೆಂದರೆ ‘ನಿನಗೆ ಹೇಗೆ ಕಾಣುತ್ತದೋ ಹಾಗೆ ಬರಿ’ ಎಂಬುದನ್ನು. ನನಗೇ ಹೇಗೆ ಕಾಣುತ್ತದೆ ಎಂದು ಗ್ರಹಿಸುವ ಯತ್ನದಲ್ಲಿ ವಿಕ್ಷಿಪ್ತವಾಗಿ ನೋಡಿದ್ದೂ ಆಯಿತು. ಆದರೆ, ಸ್ವಾನುಭವನಿಷ್ಠೆ ಎನ್ನುವುದು ಸಾಹಿತ್ಯಕನ ಪ್ರಥಮ ಧರ್ಮ ಎಂಬ ಪಾಠ ನನಗೆ ಸಿಕ್ಕಂತಾಯಿತು.

ಚಿತ್ರಕಾರನಾಗಲೂ ಆಸೆಯಿದ್ದುದಕ್ಕೋ ಏನೋ ನನ್ನ ಕವಿತೆಗಳು ಹೆಚ್ಚಾಗಿ ಕಣ್ಣಿಗೆ ಇರುತ್ತಿದ್ದವು. ಕವಿತೆಗಳಲ್ಲಿ ಮುಖ್ಯವಾಗಿ ಕಣ್ಣಿಗಾಗಿ ಇರುವುವು, ಕಿವಿಗಾಗಿ ಇರುವುವು ಎಂಬ ಎರಡು ಭೇದಗಳಿವೆ ಎಂದು ನನ್ನ ಭಾವನೆ. ಒಂದು ಅರ್ಥಗರ್ಭಿತ ಬಿಂದುವಿನಿಂದ ಶುರುವಾಗಿ ಗೆರೆ ಮೂಡುತ್ತ ಚಿತ್ರವಾಗುವುದನ್ನು ಕಣ್ಣರಳಿಸಿ ನೋಡುವುದು ನನ್ನ ಕವಿತೆಯ ನಿಲುವಾಯಿತು.

‘ಪೆನ್ನನ್ನು ಪರೀಕ್ಷಿಸಲು ಗೀಚುತ್ತಿರುವಾಗೊಮ್ಮೆ

ಎಲೆಲೆ ಗುಬ್ಬಚ್ಚಿ

ಮೂಡಿಬಿಡುತ್ತೆ’ (‘ಗುಬ್ಬಿ’ – ‘ಹಕ್ಕಿಪಟ್ಟಿ ಸಂಕಲನ’)

ಹಾಗೆ ತಕ್ಷಣವನ್ನು ಒಳಗೊಳ್ಳುವ ಹವಣಿಕೆ ಮೂಲತಃ ನನಗೆ ಕವಿತೆಯ ದಾರಿ ತೋರಿಸಿದಂಥದು. ಕ್ಷಣದೊಂದಿಗೆ ತೊಡಗಿದ ಈ ಗಂಟು ಮುಂದೆ ನನ್ನ ಕವಿತೆಯಲ್ಲಿ ಬಿಗಿಯುತ್ತ ಹೋಯಿತು. ಸದ್ಯದ ಕ್ಷಣವನ್ನು ಅನಾವರಣಗೊಳಿಸಿಕೊಳ್ಳುವುದು, ಸ್ವಾನುಭವ ನಿಷ್ಠೆ ಮತ್ತು ಅನುಭವ ಪ್ರಾಮಾಣಿಕ ಇವು ನನ್ನ ಕವಿತೆಯ ಸ್ವರೂಪವಾಗತೊಡಗಿತು. ಏನಾಗುತ್ತದೋ, ಎಷ್ಟಾಗುತ್ತದೋ ಅಷ್ಟನ್ನೇ ನುಡಿಗೊಳಿಸಬೇಕು ಎನ್ನುವುದು ಕವಿತೆಯ ಶೀಲ ಎಂಬಂತೆ ನಾನು ಭಾವಿಸಿದೆ. ‘ಆಗಾಗುವ ಮುನ್ನವೆ ತಾನಾದೆನೆಂಬುದರ ಬಳಿಗೆ ಅಡಿಯಿಡುವವನಲ್ಲ ನಮ್ಮ ಗುಹೇಶ್ವರ’ ಎನ್ನುತ್ತಾನೆ ಅಲ್ಲಮ. ಆ ಮಾತು ನನಗೆ ಒಂದು ರೀತಿಯ ಘೋಷವಾಕ್ಯದಂತಿತ್ತು. ಈ ರೀತಿಯ ನಿಯಮಗಳಿಂz ಗ್ರಹಿಕೆಯನ್ನು ರೂಢಿಸಿಕೊಳ್ಳುವುದರೊಂದಿಗೆ ನನ್ನ ಕವಿತೆ ತಿದ್ದಿಕೊಳ್ಳುತ್ತ ಹೋಯಿತು. ಹೀಗೆ ನಾನು, ಬರಹ ಎರಡೂ ಪರಸ್ಪರ, ಒಂದರಿಂದೊಂದು ಪಳಗುತ್ತ ವಿಕಾಸವಾಗುತ್ತ ಹೋಗುವಂಥ ವಾಗಿದ್ದವು.

ಅತಿಬಾಲ್ಯದಲ್ಲಿ ನಾನೊಬ್ಬ ವಿಶೇಷ ಜೀವಿ ಎನ್ನುವಂತೆ ಪುರಸ್ಕರಿಸಿದ ನನ್ನಕ್ಕ ನನ್ನಲ್ಲಿ ವಿಶೇಷವಾದ್ದೇನೋ ಒಂದನ್ನು ಬಿತ್ತಿದ್ದಳು. ಅವಳು ಬಿತ್ತಿದ್ದು ಬಹುಶಃ ಮನಸ್ಸನ್ನೇ. ಯಾಕೆಂದರೆ ಮನಸ್ಸು ಎಂಬುದೇ ಒಂದು ವಿಶೇಷ ಪರಿಮಳ ದ್ರವ್ಯ. ಪುನುಗು ಬೆಕ್ಕಿಗೆ ಬಹುಶಃ ಲೋಕವೆಲ್ಲ ಪುನುಗೇ. ಕಸ್ತೂರಿ ಮೃಗಕ್ಕೆ ಕಸ್ತೂರಿಯೇ. ಅವುಗಳ ಘ್ರಾಣೇಂದ್ರಿ ಯವೇ ಆ ಪರಿಮಳಗಳಿಂದ ಟಂಕಿತ. ತನ್ನೊಂದು ವಿಶೇಷ ಪರಿಮಳದ ಪರಿವೆಯುಂಟಾದವನು ಮೊದಲು ಹಾಗೆ ಇಡೀ ಲೋಕವನ್ನು ಗ್ರಹಿಸುತ್ತಾನೆ. ನನಗೂ ನನ್ನದೊಂದು ವಿಶಿಷ್ಟ ಮನಸ್ಸಿದೆ ಎಂದು ನಂಬಿಕೆ ಗಾಢವಾಗಿತ್ತು. ಆಗ ಅದಕ್ಕೆ ಸೂಕ್ತವಾದ ಮೌಲ್ಯಗಳನ್ನೇ ನಾವು ಆಯ್ದುಕೊಳ್ಳುವುದು. ಸ್ವಾನುಭವ ನಿಷ್ಠೇ ಎಂಬುದು ಹೀಗೆ ಒಂದು ವಿಶಿಷ್ಟವಾದ ಸಂವೇದನೆಗೇ ಒತ್ತಾಸೆಯಾಗಿ ನಿಂತಿತು. ಆದರೆ ನಂತರ ನನ್ನ ಮನಸ್ಸು ಮತ್ತೆ ಸ್ವಲ್ಪ ಬೇರೆಯಾಗತೊಡಗಿತು. ಇಲ್ಲಿ ತೀರ ಸ್ವಂತದ್ದು ಇದೆಯೇ? ಜೀವನವೇ ಎಲ್ಲರೂ ಹಂಚಿಕೊಂಡ ಅನುಭವವಲ್ಲವೇ? ಮಹತ್ತರವಾದುದೆಲ್ಲವೂ ಗಾಳಿ ಬೆಳಕು ಮಳೆ ಕತ್ತಲು ಹಸಿವು ವತನ ನಿದ್ರೆ ಇವುಗಳ ಹಾಗೆ ಎಲ್ಲರ ಮೇಲೂ ಸಮಾನವಾಗಿ ಸುರಿಯುವಂತೆ ತೋರುತ್ತದೆ. ನನ್ನ ಕಲ್ಪನೆ ಹೀಗಿತ್ತು. ಕೇಂದ್ರದಿಂದ ಪರಿಧಿಯ ಕಡೆ ಸರಿದಷ್ಟೂ ನಾವು ಹೆಚ್ಚೆಚ್ಚು ವಿಶಿಷ್ಟ ವ್ಯಕ್ತಿಗಳಾಗುತ್ತ ಹೋಗುತ್ತೇವೆ. ಪರಿಧಿಯಲ್ಲಿ ಅಸಂಖ್ಯ ಖಾಸಗೀ ಜನರಾಗಿರುತ್ತೇವೆ. ಕೇಂದ್ರದತ್ತ ಚಲಿಸಿದಂತೆ ಸಾಮ್ಯತೆ ಹೆಚ್ಚಾಗುತ್ತ ಕೇಂದ್ರದಲ್ಲಿ ಮನುಷ್ಯ ಮಾತ್ರವಾಗಿರುತ್ತೇವೆ. ಅಲ್ಲಿಂದ ನಾವೆಲ್ಲ ಒಬ್ಬ ಮನುಷ್ಯನ ಅಸಂಖ್ಯ ಮುಖಗಳ ಹಾಗೆ ಕಾಣುತ್ತೇವೆ. ಹಾಗಾಗಿ, ವಿಶಿಷ್ಟ ಸಂವೇದನೆಯ ಮೂಲಕ ಸಾಮಾನ್ಯತೆಯನ್ನು ಸಾಧಿಸುವುದೇ ಮುಖ್ಯವಿರಬೇಕೆನ್ನಿಸಿತು. ಸೋಜಿಗವೇನೆಂದರೆ ಬರೆದವನ ವ್ಯಕ್ತಿತ್ವ ಇಂಗಿ ಹೋದಷ್ಟೂ ಕವಿತೆಯ ಹಾಜರಿ ದಟ್ಟವಾಗುವುದು. ಈ ಅರಿವು ನನ್ನ ಕವಿತೆಯ ಅಭಿವ್ಯಕ್ತಿಯನ್ನು ಸಹಜತೆಯ ಕಡೆಗೆ ನಡೆಸತೊಡಗಿತು. ಅಂದರೆ, ಅನುಭವದ ಗ್ರಹಿಕೆಯನ್ನೂ ಬದಲಿಸಿತು.

ಈ ವೇಳೆಗೆ ನಾನು ತಾವೋ ಪದ್ಯಗಳನ್ನು ಅನುವಾದಿಸಿದೆ. ಕನ್ನಡದ ಅಲ್ಲಮ, ಕುಮಾರವ್ಯಾಸ, ಬೇಂದ್ರೆ, ಪುತಿನ ಇವರ ಸ್ಪರ್ಶ ಪಡೆದೆ. ಇವರುಗಳಿಂದ ಒಂದು ಹೊಸ ರೀತಿಯ ಅರಿವು ಉಂಟಾಗುವಂತೆ ತೋರಿತು. ಯಾವುದೂ ನಮ್ಮಿಂದ ಹೊಸದಾಗಿ ಸೃಷ್ಟಿಯಾಗುವುದಿಲ್ಲ. ಭಾವಗಳು, ಅರ್ಥಗಳು, ಲಯಗಳು ಎಲ್ಲವೂ ತಮ್ಮಷ್ಟಕ್ಕೇ ಇರುತ್ತವೆ. ನಾವು ಅವನ್ನು ಮುಟ್ಟುತ್ತೇವೆ ಅಥವಾ ಅವು ನಮ್ಮನ್ನು ಆಯ್ದುಕೊಳ್ಳುತ್ತೇವೆ, ನಮ್ಮ ಮನಸ್ಸನ್ನು ಬಾಡಿಗೆಗೆ ಪಡೆಯುತ್ತವೆ. ನಮ್ಮನ್ನು ಆಗಿಸುತ್ತವೆ ಹೋಗಿಸುತ್ತವೆ. ‘ಬಾಹುಬಲಿ’, ‘ನಂದಬಟ್ಟಲು’ ಸಂಕಲನಗಳಲ್ಲಿ ಕವಿತೆಗೆ ನಾನು ಹೀಗೆ ತೆರೆದುಕೊಳ್ಳ ತೊಡಗಿದೆ. ‘ಅದು’ ಯಾರಿಗಿಂತಲೂ ದೊಡ್ಡದು. ಅದು ಇದೆ ಹರಿಯುವ ನದಿಯ ಹಾಗೆ. ನಾನು ಅದನ್ನು ಮುಟ್ಟಿ ಮುಳುಗು ಹಾಕಬಹುದೋ ಹೊರತು ಅದನ್ನು ಸ್ವಾಮ್ಯ ಮಾಡಿಕೊಳ್ಳಲಾಗದು. ಹೀಗೆಲ್ಲ, ಮುಜುಗರವಾಗುವಂತೆ ಅನುಭವದ ಅಂಚಲ್ಲಿ ಹರಿಯುವ ಸೂಕ್ಷ್ಮ ಅಭಿಪ್ರಾಯಗಳು ನನ್ನಲ್ಲಿ ಬರತೊಡಗಿದವು.

ಆದರೆ, ಕವಿತೆ ಹೊರಳಿಕೊಳ್ಳುತ್ತಲೇ ಇರಬೇಕಾಗುತ್ತದೆ. ಅದೆಂದೂ ಒಂದು ನಿಶ್ಚಯದ ನಿಲುವಿಗೆ ಬರಲಾಗುವುದಿಲ್ಲ. ಆದರೆ ನನ್ನ ಮಟ್ಟಿಗೆ ಕವಿತೆ, ಲೋಕದೊಂದಿಗೆ ನನ್ನ ಅಹಂಕಾರವನ್ನು ಸರಿಯಾದ ಸಮತೋಲನದಲ್ಲಿರಿಸುವ ತಕ್ಕಡಿಯ ಸೂಚೀ ಕಡ್ಡಿಯಂತೆ ವರ್ತಿಸಿದೆ ಎನಿಸುತ್ತದೆ.

ನನ್ನ ಕವಿತೆಗೆ ಮೊದಲಿನಿಂದಲೂ ಇರುವ ಒಲವು ಏನೆಂದರೆ ‘ಏನೋ ಆಗುವುದಕ್ಕಿಂತಲು ಇರುವುದರ ಬಗ್ಗೆ ಹೆಚ್ಚು ಗಮನ’. ಕವಿತೆಯೇ ನನ್ನಲ್ಲಿ ರೂಢಿಸುತ್ತ ಬಂದ ಧೋರಣೆಯೆಂದರೆ ಬದುಕು ಎಲ್ಲೆಡೆಯೂ ಯಾವಾಗಲೂ ಸಂಪೂರ್ಣವಾದುದು ಎಂದು. ನೆನಪು ಕನಸುಗಳಲ್ಲ ಲ್ಲದೆ ಮನಸ್ಸನ್ನು ಕಣ್ಣೆದುರಿಗಿನ ಕ್ಷಣದಲ್ಲಿ ಕರಗಿಸುವುದು ನನ್ನ ಕವಿತೆಯ ಪ್ರಯತ್ನವಾಯಿತು. The immediate is my god ಎನ್ನುವ ಭಾವನೆಗೂ ಸದ್ಯದ ಕ್ಷಣಕ್ಕೆ ಅಂಟಿಕೊಳ್ಳುವ ನಿಷ್ಠೆಗೂ ಸಂಬಂಧವಿರಬಹುದು. ಹಾಗಾಗಿ ಕವಿತೆಯ ವಸ್ತುವಿನೊಂದಿಗೆ ಕವನ ಪ್ರಕ್ರಿಯೆ ಅನಾವರಣಗೊಳ್ಳುವುದು ನನಗೆ ಮುಖ್ಯವಾದ್ದೆನಿಸಿತು. ಅಂದರೆ ಕವಿತೆ ನನ್ನ ಮನಸ್ಸಿನ ಅನಾವರಣವೆಂದಾಯಿತು.

ನನ್ನ ಈಚಿನ ಸಂಕಲನ ‘ಮೌನದ ಮಣಿ’ ಎಂಬುದರ ಶುರುವಿನಲ್ಲಿ, ನಾನು ಅಲ್ಲಮನ ‘ಪರಿಣಾಮದೊಳಗೆ ಮನದ ಪರಿಣಾಮ ಅತಿ ಚೆಲುವು’ ಎನ್ನುವ ಸಾಲನ್ನು ಹಾಕಿಕೊಂಡಿ ದ್ದೇನೆ. ಮನದ ಪರಿಣಾಮವೆನೆಂದರೆ ಮನಸ್ಸಿನ ಮೇಲಾಗುವ ಪರಿಣಾಮವಲ್ಲ. ‘ಮನಸ್ಸು ಪರಿಣಮಿಸುವುದು’. ಮನಸ್ಸು ಉಂಟಾದ ಎಡೆಯಲ್ಲಿ ಒಂದು ಹಾಜರಿ ಸೃಷ್ಟಿಯಾಗುವುದು. ಎಲ್ಲದರ ಅರ್ಥಪೂರ್ಣತೆಯೂ ಅದೇ – ಶಬ್ದದ್ದೂ ಅರ್ಥದ್ದೂ. ಅಂಥ ಅರ್ಥಪೂರ್ಣದ ಇರುವು ಎಲ್ಲೆಲ್ಲೂ ಹರಡಿರುವಂಥದ್ದು. ಅದರ ಸುಳುಹಿನ ದಾಖಲೆ ನನಗೆ ಕವಿತೆಯೆನಿ ಸುತ್ತದೆ.

ಮಾತು ಮಂತ್ರ ಕವಿತೆ ಎಂಬೆಲ್ಲ ಕರಣಗಳಿಂದ
ನಿನ್ನಾಕೃತಿಯ ತಡವಲು ಹವಣಿಸುತ್ತಿರುವ
ಮೂಕಮಕ್ಕಳು ನಾವುನುಡಿಯೇ!
ನಿನ್ನ ಸುಳಿವೆಂತು ದೊರಕೀತು ನಮಗೆ

ಈ ರೀತಿಯ ನಂಬಿಕಯೊಂದಿಗೆ ನನ್ನ ಈಚಿನ ಕವಿತೆಗಳು ಬಂದಿವೆ. ಮುಂದೆ? ಈ ಬರಹದ ವಾಕ್ಯಗಳನ್ನು ಬರೆಯುವಾಗ ನನ್ನಲ್ಲಿ ಉಂಟಾಗುತ್ತಿರುವ ಅತೃಪ್ತಿ ನನ್ನನ್ನು ನಿರ್ದೇಶಿಸುತ್ತದೆ.