ನಾನು ಬಿ.ಎ. ಓದುತ್ತಿದ್ದಾಗ ನನಗೆ ಪದ್ಯ ಬರೆವ ಗೀಳು ಹಿಡಿಯಿತು. ಆಗ ನನಗೆ ಪ್ರಭಾವ ಬೀರಿದ್ದ ಕವಿ ಕುವೆಂಪು. ಅವರ ನಾಟಕ, ಕವನಗಳನ್ನ ಓದಿ ತುಂಬಾ ಪ್ರಭಾವಿತನಾಗಿದ್ದೆ. ಅದರಲ್ಲೂ ಅವರ ‘ನೇಗಿಲಯೋಗಿ’ ಕವನ ತುಂಬಾ ಇಷ್ಟವಾಗಿತ್ತು. ಅದಕ್ಕೆ ಕಾರಣ ನಾನು ಬಂದ ಹಿನ್ನೆಲೆ. ನಾನು ಹಳ್ಳಿಯಿಂದ ಬಂದೋನು. ಅದರಲ್ಲೂ ಚೂರುಪಾರು ಭೂಮಿಕಾಣಿ ಇದ್ದ ಬಂಗಬಡತನದ ರೈತಾಪಿ ಕುಟುಂಬ. ನಾನು ಹೈಸ್ಕೂಲಿಗೆ ಬರೋಹೊತ್ತಿಗೆ ಬ್ಯಾಸಾಯ ವೊಡಿಯಾದ ವೈನಾಗೇ ಕಲ್ತಿದ್ದೆ. ಬ್ಯಾಸಾಯದ ಕಾಲದಾಗೆ ಮಟಕ್ಕೋಗಕೆ ಮುಂಚೆ, ಸಗಣಿ ಗುಡಿಸಿ ನಾಕುಬಳುಸಾಲು ಉಕ್ಕೆವೊಡದು, ಆಮ್ಯಾಲೆ ನಮ್ಮಪ್ಪ ಬಾಸಾಯತಕೆ ಬಂದಾಗ ನಮ್ಮಪ್ಪನ ಕೈಗೆ ನೇಗಿಲು ಕೊಟ್ಟು, ಇಸ್ಕೂಲಿಗೆ ವೊಡೋಗ್ಬೇಕಾಗಿತ್ತು. ಪ್ರಾರ್ತನೆ ವೊತ್ತಿಗೆ ಹೋಗಲಿಲ್ಲಾಂದ್ರೆ ಹತ್ತು ನಿಮಿಷ ಬಿಸಲಲ್ಲಿ ನಿಲ್ಲೋದು, ಇಲ್ಲ ಪಾನಬಗ್ಗೋದು ಈ ಶಿಕ್ಷೆ ಅನುಭವಿಸಬೇಕಾಗಿತ್ತು. ಅದೆಷ್ಟು ದಿವಸ ಪಾನಬಗ್ಗಿದ್ದೆನೋ! ನನಗೆ ಓದೋದಕ್ಕಿಂತ ಬ್ಯಾಸಾಯ ಮಾಡೋದೂಂದ್ರೆ ಬಲೇ ಖುಷಿ. ಮೇಣಿ ಹಿಡಿದು ನೇಗಿಲ ಹೋಡೀತಿದ್ರೆ ಅಕ್ಕಪಕ್ಕದೋರೆಲ್ಲ ‘ನೋಡೋ, ಗುರುಬತ್ತಣ್ಣನ ಮಗ ಉಕ್ಕೆಗೆರೆ ಎಂಗ್ ವೊಡಿತಾನೆ, ಎಲೆಕವಳಿಗೆ ಜೋಡಿಸಿದಂತೆ ಉಕ್ಕೆಸಾಲು’ ಅಂತಿದ್ರು. ನಾನು ಹಿಗ್ಗಿ ಹೀರೇಕಾಯಾಗ್ತಿದ್ದೆ. ಇಷ್ಟಾದರೂ ನನಗೆ ಬಹಳ ಹಿಂಸೆ ಕೊಡ್ತಿದ್ದ ಕೆಲಸಾಂದ್ರೆ, ಬೇಸಾಯ ಬಿಟ್ಟಮೇಲೆ ದನ ಮೇಯಿಸೋದು. ನೇಗಿಲ ಹಿಂದೆ ಉಕ್ಕೆ ಹೊಲದೊಳಗೆ ಸುತ್ತಿದ ಆಯಾಸ ಅಂತದರಾಗೆ ಮತ್ತೆ ಉರಿಬಿಸಿಲಿನಾಗೆ ಹೊಲದ ಒಬ್ಬೇಲಿ ದನ ಹಿಡಕೊಂಡು ಮೇಯಿಸೋದೂಂದ್ರೆ ಜುಗುರ್ಕೆ ಬರ್ತಿತ್ತು. ಕೆಲವೊಂದು ದಿನಗಳಲ್ಲಿ ಹೊತ್ತಿಗೆ ಮುಂಚೆ ಬೇಸಾಯಬಿಟ್ರೆ, ದನ ಹೊಡ್ಕಂಡು ಗುಡ್ಡಕ್ಕೆ ಮೇಯಿಸೋಕೆ ಹೋಗಬೇಕಾಗಿತ್ತು. ಆಗೆಲ್ಲ ಬಲೇ ಖುಷಿಯಾಗೋದು. ಕರಿನ್‌ಕಲ್ಲುಗುಡ್ಡ. ಕರಡಿ ಕಿರುಬಗಳ ಕಾಟ. ಒಂಟಿಯಾಗಿ ದನ ಹೊಡಕಂಡು ಹೋಗ್ತಿರಲಿಲ್ಲ. ಜೊತೆ ದನಿನೋರು ಮೂರುನಾಲ್ಕು ಜನ ಇದ್ದೇ ಇರೋರು. ಅವರ ಜೋತೇಲಿ ಹೋಗಿ ಗುಡ್ಡದ ಬಾದೆ ಹುಲ್ಲು ಮೇಯಿಸಿಕೊಂಡು, ದೊಣೇಲಿ, ನೀರು ಕುಡಿಸಿಕೊಂಡು ಬರೋದೂಂದ್ರೆ ಬಲೇ ಉತ್ಸಾಹ.

ಈ ಎಲ್ಲಅನುಭವಗಳ ಮೂಲದಿಂದ ಬಂದ ನನಗೆ ಕುವೆಂಪು ಅವರ ‘ನೇಗಿಲ ಯೋಗಿ’ ಪದ್ಯ ತುಂಬಾ ಇಷ್ಟವಾಯಿತು. ಕಾರಣ ಬೇಸಾಯದ ಕಸುಬನ್ನು ತಪಸ್ಸಿಗೆ ಹೋಲಿಸಿ ಬೇಸಾಯಗಾರರನ್ನು ಯೋಗಿ ಅಂತ ಕರೆದಿರೋದು ನನಗೆ ಒಂಥರಾ ಅಭಿಮಾನ ಮೂಡಿಸ್ತು. ಎಂ.ಎ ಗೆ ಬಂದ ಮೇಲೆ ‘ನೇಗಿಲಯೋಗಿ’ ಪದ್ಯದ ಬಗ್ಗೆ, ನವ್ಯದವರು ‘ರೈತನನ್ನು ವೈಭವೀಕರಿಸಿದ ಪದ್ಯ, ಅವನ ಕಸ್ಟಕ್ಕೆ ವಸ್ತುಸ್ಥಿತಿಗೆ ಕುರುಡಾಗಿ ಬರೆದ ಪದ್ಯ ಇದು’ ಅಂತ ವ್ಯಾಖ್ಯಾನಿಸೋದನ್ನ ಕೇಳಿದಾಗ, ಈ ವ್ಯಾಖ್ಯಾನ ಅದೇಕೋ ಅಷ್ಟಾಗಿ ಇಷ್ಟವಾಗಲಿಲ್ಲ. ಈಗಲೂ ನನಗೆ ನನ್ನ ಮೊದಲಿನ ಅನುಭವವೇ ಸರಿ ಅನ್ನಿಸುತ್ತೆ. ಹೀಗಾಗಿ ನನ್ನ ಪ್ರಾರಂಭಿಕ ರಚನೆಗಳಿಗೆ ಆದರ್ಶವಾಗಿದ್ದವರು, ಅನುಕರಣೀಯ ಆಗಿದ್ದವರು ಕುವೆಂಪು ಅವರೇ.

ಒಂದಿನ ನಡೆದ ಸಂಗತಿ ಈಗಲೂ ಕಣ್ಣಿಗೆ ಕಟ್ಟಿದಂಗೆ ನೆನಪೈತೆ. ನಾನು ತುಮಕೂರಿನ ಕಾಳಿದಾಸ ಹಾಸ್ಟೆಲಿನಲ್ಲಿ ಒಬ್ಬನೇ ಇದ್ದೆ. ರಸ್ತೇಲಿ ಒಬ್ಬಳು ಹೆಂಗಸು ತಟ್ಟಿತುಂಬ ಹೂವಿಟ್ಟು ಕೊಂಡು “ಹೂ ಬೇಕೆನಮ್ಮ ಹೂವ” ಅಂತಾ ಕೂಗಿಕೊಂಡು ಹೋಗ್ತಾ ಇದ್ದಳು. ಅವಳ ದನಿ ಕೇಳಿದ್ದೇ ಒಂದು ಸಾಲು ಬಾಯಿಗೆ ಬಂತು “ಹೂವು ಮಾರುವ ಹುಡುಗಿ ಹೆಸರು ಹೊಂಬಾಳೆ, ಹೂವು ಬೇಕೇ ಹೂವು ದನಿಯಲ್ಲಿ ಕೋಗಿಲೆ” ಪದ್ಯ ಬರದೇ ಬಿಟ್ಟೆ. ಹೀಗೆ ಬರೆದ ಪದ್ಯಾನ ಹತ್ತಾರು ಸಾರಿ ಮತ್ತೆಮತ್ತೆ ದುಂಡಗೆ ಬರೆದದ್ದೇ ಬರೆದದ್ದು. ಎಷ್ಟು ಸಾರಿ ಬರೆದರೂ ಸಾಕು ಅನ್ನಿಸ್ತಿರ್ಲಿಲ್ಲ. ಆ ಪದ್ಯಾನ ಹಲವು ಮಿತ್ರರು ಓದಿ ಕವಿ ಬಿರುದು ಕೊಟ್ಟೇ ಬಿಟ್ಟರು. ಆ ನಂತರದಲ್ಲಿ ಅದು ಇದು ಯಾವುದಾದರೂ ಸರಿ ವಿಷಯ ತಗೊಳ್ಳೋದು, ಅದರ ಬಗ್ಗೆ ಸಾಲು ಸಾಲುಗಳಲ್ಲಿ ಪ್ರಾಸ ಜೋಡಿಸಿ ಗೀಚೋದು. ಎಲ್ಲರಿಗೂ ತೋರಿಸಿ ಭಲೆ ಭಲೆ ಅನ್ನಿಸಿಕೊಳ್ಳೋದು. ಇದು ನಿತ್ಯದ ರೂಢಿಯಾಯಿತು.

ಅದೇ ದಿನಗಳಲ್ಲಿ ನಮ್ಮ ಹಾಸ್ಟಲಿಗೆ ಹಿರಿಯ ಕವಿಯೊಬ್ಬರು ಆಗಾಗ ಬರತಾ ಇದ್ರು. ನಾನು ಅತಿ ಉತ್ಸಾಹದಲ್ಲಿ ಒಂದು ದಿನ ಅವರನ್ನು ಪ್ರತ್ಯೇಕವಾಗಿ ಭೇಟಿಮಾಡಿ ನನ್ನ ಕವನಗಳನ್ನು ಕೈಗಿಟ್ಟೆ. ಅವರು ‘ಇದೇನಪ್ಪ! ಆ ಪುಟ್ಟಪ್ಪನ್ನ ಅನುಕರಣೆ ಮಾಡ್ತಾ ಇದೀಯಾ? ಪುಟ್ಟಪ್ಪ ಯಾವ ಕವೀಂತ ನೀನ್ ಅವರನ್ನ ಅನುಕರಿಸ್ತಿಯಾ? ಬರೀ ಸಂಸ್ಕೃತ ಶಬ್ದಗಳ ದೊಂಬರಾಟ. ಅಡಿಗರನ್ನ ಬೇಂದ್ರೆಯವರನ್ನ ಓದಬೇಕು. ಅವರ ಕಾವ್ಯ ಓದಿದೀಯಾ? ಮೊದಲು ಹೆಚ್ಚು ಓದಬೇಕು. ನಿನ್ನದೇ ಆದ ಹಳ್ಳಿಭಾಷೇಲಿ ಬರಿಬೇಕು’ ಅಂದ್ರು. ಇವರು ಕುವೆಂಪು ಅವರನ್ನ ಕವೀನೆ ಅಲ್ಲ ಅಂತಾರಲ್ಲ ಅಂತ ನನಗೆ ಬಹಳ ಬೇಜಾರಾತು. ನಮಗೆ ಆಗ ಕುವೆಂಪು ಅವರ ‘ರಕ್ತಾಕ್ಷಿ’ ನಾಟಕ ಟೆಕ್ಸ್ಟ್ ಆಗಿತ್ತು. ಆ ನಾಟಕದ ಸಾಲು ಸಾಲುಗಳು ಬಾಯಿಗೆ ಬರ್ತಿದ್ದವು. ಅವುಗಳ್ನು ಚಪ್ಪರಿಸುತ್ತಾ ‘ಅಹಾ, ಇಂಥ ಒಂದು ಸಾಲು ಬರೀಲಿ ಇವ್ರು?’ ಅಂತ ಸ್ನೇಹಿತರ ಹತ್ತರ ನನ್ನ ಅಸಮಾಧಾನ ತೋಡಿಕೊಂಡೆ. ಕುವೆಂಪು ಬಗ್ಗೆ ಒಂಥರಾ ಗುಪ್ತಭಕ್ತಿ ನನ್ನದು. ನಾನು ಕುವೆಂಪು ತರ ಕವಿಯಾಗಬೇಕು ಅನ್ನೋದು ಆಸೆ. ರಜದಲ್ಲಿ ಊರಿಗೆ ಹೋದಾಗ ದಿನಾ ಬೆಳಗಿನ ಜಾವಕ್ಕೆ ಎದ್ದು ತೋಟಕ್ಕೆ ಹೋಗೋದು, ಇರೋದು ಒಂದು ಕೆಲಸ. ರಾತ್ರಿ ಬಿದ್ದ ಕಾಯನ ಆರಿಸಿಕೊಂಡು ಬರಬೇಕು. ಈ ಸಾರಿ ಹೋದೋನು ಕಾಯನ್ನೆಲ್ಲ ಆರಿಸಿ ದೊಡ್ಡ ಮಾವಿನಮರದ ಬುಡದಲ್ಲಿ ಜಿಟ್ಟಿಹಾಕಿಟ್ಟು, ಮೂಡಗಡೆ ಬಯಲಿಗೆ ಹೋಗ್ತಿದ್ದೆ, ಸೂರ್ಯ ಹುಟ್ಟೋದನ್ನ ನೋಡೋಕೆ. ಸೂರ್ಯೋ ದಯದ ಅನುಭವ ಪಡೆದು ನಾನೂ ಪದ್ಯ ಬರೀಬೇಕು ಅನ್ನೋ ಹಂಬಲ. ಎಷ್ಟು ತಿಣಿಕಿದರೂ ಪದ್ಯ ಪ್ರಸವವಾಗ್ತಿರಲಿಲ್ಲ. ಪದಗಳನ್ನ ಪೋಣಿಸಿ ಕೊನೆಗೆ ಒಂದೆರಡು ಸಾಲು ಬರೆದರೆ, ಅವು ಕುವೆಂಪು ಅವರ ಮಾರ್ಪಾಟು ಹೊಂದಿದ ಸಾಲುಗಳೇ ಆಗಿರುತ್ತಿದ್ದವು. ಆದರೂ ಸೂರ್ಯೋದಯ ನೋಡೋದು ಮಾತ್ರ ಬಿಡಲಿಲ್ಲ. ಅದರಿಂದ ಆದ ಉಪಯೋಗ ಅಂದ್ರೆ, ತೆಂಗಿನತೋಟದ ಕಾಯಿಗಳನ್ನ ಅಕ್ಕಪಕ್ಕದೋರು ಕದಿಯೋಕು ಮುಂಚೆ, ಕುರಂಬಳೆ ಗರಿ ಸಮೇತ ಗುಡ್ಡೆ ಹಾಕ್ತಿದ್ದದ್ದು. ಹಂಗಾದ್ರು ನನ್ನ ತಿಣುಕಾಟ ಮುಂದುವರಿದೇ ಇತ್ತು. ನಮ್ಮ ದನದ ಮನೇಲಿ ಕೂತು ಓದಕೆ ಬರೆಯಕೇಂತ ಒಂದು ಮಂಚ ಮಾಡಿಕೊಂಡೆ. ಮಂಚ ಅಂದ್ರೆ ನಾಲ್ಕು ಕವುರ ತಂದು ನಾಲ್ಕು ಪರದ ಈಚೆ ಹಾಕಿ ಅಡ್ಡಡ್ಡ ಗಾಡಿ ಹಲಗೆ ಹಾಕಿ ತಯಾರಿಸಿಕೊಂಡ ಮಂಚ. ಅದರ ಮೇಲೆ ಕುಂತು ಪೆನ್ನು ಪುಸ್ತಕ ಹಿಡಿದು ಏನು ಕಲ್ಪಿಸಿಕೊಂಡ್ರೂ ನನ್ನ ಕಲ್ಪನಾ ದಾರಿದ್ರ್ಯದಲ್ಲಿ ಒಂದು ಕವನವೂ ಹುಟ್ಟಲಿಲ್ಲ. ಬರದದ್ದೆಲ್ಲ ಪದ ಪ್ರಾಸಗಳ ಸಾಲುಗಳು.

ಈ ಮಧ್ಯ ನಮ್ಮ ಎಚ್.ಜಿ. ಸಣ್ಣಗುಡ್ಡಯ್ಯನೋರು ನಮ್ಮ ಕಾಲೇಜಿನ ಕನ್ನಡ ಮೇಜರ್ ಹುಡುಗರಿಗೆ ಗೌರವದ ಮೇಸ್ಟ್ರು. ನಾನು ಕನ್ನಡ ಮೇಜರ್ ವಿದ್ಯಾರ್ಥಿ ಅಲ್ಲದೆ ಹೋದರೂ ಅವರ ಬಗ್ಗೆ ತುಂಬಾ ಪ್ರೀತಿ ಗೌರವ. ಅವರ ಒಂದು ಪದ್ಯಾನ ನಮ್ಮ ಕ್ಲಾಸಿನ ರಾಮಲಿಂಗಪ್ಪ, ಸಣ್ಣಗುಡ್ಡಯ್ಯನವರ್ದೊಂದು ಕವನ ಕೊಟ್ಟು ‘ಓದು’ ಅಂದ. ಲಂಗಕ್ಕೆ ಪುಟ್ಟಂಪುರ್ಲೆ ಮೆತ್ತಿಸಿಕೊಂಡ ಹುಡುಗಿಯ ಬಗೆಗಿನ ಆ ಪದ್ಯ ನನ್ನೂರಿನ ಯಾರ‍್ಯಾರೊ ಹುಡುಗೀರ್ನ ನೆನಪಿಸಿಕೊಂಡು ಜನಪದ ತ್ರಿಪದಿ ಶೈಲೀಲಿ ಬರೆಯೋಕೆ ತೊಡಗಿದೆ. ಹಂಗೆ ಬರೆದ ಕೆಲವು ತ್ರಿಪದಿಗಳನ್ನು ತೆಗೆದುಕೆಂಡು ಹೋಗಿ ಸಣ್ಣಗುಡ್ಡಯ್ಯನೋರಿಗೆ ತೋರಿಸಿದೆ. ಅವರು ಆ ಪದ್ಯಗಳನ್ನು ಅಲ್ಲಿ ಇಲ್ಲಿ ತಿದ್ದಿ ತೀಡಿ ಒಂದು ರೂಪಕ್ಕೆ ತಂದರು. ಅಷ್ಟೇ ಅಲ್ಲ ಆ ವರ್ಷದ ಕಾಲೇಜಿನ ಮ್ಯಾಗಜೀನ್‌ನಲ್ಲಿ ಅವನ್ನ ಪ್ರಕಟಿಸಿಯೂ ಬಿಟ್ಟರು. ಮೊಟ್ಟ ಮೊದಲಿಗೆ ಪ್ರಿಂಟ್ ರೂಪದಲ್ಲಿ ಬಂದ ನನ್ನ ಪದ್ಯಗಳ ಬಗ್ಗೆ ನನಗೆ ಅದೇನು ಮೋಹ ಅಂದ್ರೆ ಎಲ್ಲ ಗೆಳೆಯರಿಗೆ ತೋರಿಸಿ ಓದಿಸಿದೆ. ಸ್ಕೂಲ್ ಬಿಟ್ಟು ಮನೇಲಿದ್ದೋರಿಗೆ ಆ ಪದ್ಯಗಳನ್ನ ತೋರಿಸಿ ಖುಷಿಪಟ್ಟೆ.

ನಾನು ಬಿ.ಎ.ನಲ್ಲಿ ಓದಿದ್ದು ಇತಿಹಾಸ ಅರ್ಥಶಾಸ್ತ್ರ ರಾಜ್ಯಶಾಸ್ತ್ರ. ಇವುಗಳಲ್ಲಿ ಯಾವಕ್ಕೂ ನನಗೆ ಎಂ.ಎ ಓದಲು ಪ್ರವೇಶ ಸಿಕ್ಕಲಿಲ್ಲ. ಗೆಳೆಯನೊಬ್ಬನ ಸೂಚನೆಯಂತೆ ಬೆಂಗಳೂರಿಗೆ ಬಂದೆ. ಸೆಂಟ್ರಲ್ ಕಾಲೇಜಿನ ಕನ್ನಡ ಅಧ್ಯಯನ ಕೇಂದ್ರಕ್ಕೆ ಹೋದೆ. ಆ ದಿನ, ಮುಖ್ಯಸ್ಥರಾಗಿದ್ದ ಪ್ರೊ. ರಂ.ಶ್ರೀ ಮುಗಳಿಯವರು ರಜಾ ಹೋಗಿದ್ದರು. ಪ್ರೊ. ಜಿ.ಎಸ್. ಶಿವರುದ್ರಪ್ಪನವರು ಛಾರ್ಜಿನಲ್ಲಿದ್ದರು. ಅವರು ‘ಎಂಎಗೆ ಸೀಟಿಲ್ಲ. ಆನರ್ಸ್ ಓದು. ಆಮೇಲೆ ಎಂಎಗೆ ಸೇರಿವಂತೆ’ ಅಂದ್ರು. ನಾನು ಹಿಂದುಮುಂದು ಯೋಚನೆ ಮಾಡ್ಲಿಲ್ಲ. ಸೇರಿಬಿಟ್ಟೆ.

ಆಗ ಸೆಂಟ್ರಲ್ ಕಾಲೇಜಿನ ವಾತಾವರಣ ಅಂದರೆ ಬಣ್ಣದ ಲೋಕ. ಪ್ಯಾರಡೈಸ್. ನಾನೋ ತಲೆಗೆ ಹರಳೆಣ್ಣೇ ಹಾಕಿಕೊಂಡು ಕ್ರಾಪ್ ತೆಗೆದು ಗುಪ್ಪೆ ಮಾಡಿಕೊಂಡು ಕೂದಲನ್ನ ನೀವಿ ತಿದ್ದಿ ತೀಡಿಕೊಂಡು ಬಾಚೋದನ್ನ ಬಿಟ್ಟಿರಲಿಲ್ಲ. ನಮ್ಮ ತರಗತಿಯ ಹುಡುಗೀರಿಗೆ ಒಳ್ಳೆ ಅಡಿಕೆಯ ವಸ್ತುವಾಗಿದ್ದೆ. ಇದರ ಜೊತೆಗೆ ಸಾಹಿತ್ಯದ ಚರ್ಚೆ ಮಾಡೋ ಗುಂಪುಗಳು, ಅಲ್ಲಿ ನಡೀತಿದ್ದ ವಿಚಾರ ಸಂಕಿರಣಗಳು, ನನ್ನನ್ನ ಕೀಳರಿಮೆಗೆ ನೂಕಿದವು. ಇವ್ರೆಲ್ಲರಜತೆ ನಾನು ಮಾತನಾಡಬೇಕು ಅಂದ್ರೆ, ನಾನು ಇವರು ಓದಿರೋವ್ನೆಲ್ಲ ಓದಿಕೊಳ್ಳಲೇ ಬೇಕು ಅನ್ನೋದು ನನ್ನ ಅರಿವಿಗೆ ಬಂತು. ಓದೋದು ಓದೋದು ಇದೇ ಬದುಕು ಮಾಡಿದೆ. ಓದಿದ್ದರೆ ಬಗ್ಗೆ ದಿನಕಳದಂಗೆ ಅಳುಕಿನಲ್ಲೇ ಅವರಿವರ ಹತ್ತಿರ ಮಾತಾಡೋಕೆ ಸುರುಮಾಡಿದೆ. ಕೀಳರಿಮೆ ಕಳೆದು ಮಾತು ನಡೆ ಸಲೀಸಾದವು.

ಆಗಿನ ಬೆಂಗಳೂರಿನ ಸಾಹಿತ್ಯಿಕ ವಾತಾವರಣ ಹೇಗಿತ್ತೂಂದ್ರೆ ನವೋದಯದ ಬಗ್ಗೆ ಕಟು ತಿರಸ್ಕಾರ, ಪ್ರಗತಿಶೀಲರ ಬಗ್ಗೆ ಅಸಡ್ಡೆ, ನವ್ಯರ ಬಗ್ಗೆ ವಿಜೃಂಭಣೆ. ನವ್ಯ ಅಂದರೆ ಸಾಕು, ಅದರ ಮಾತಾಡೋನು, ಆ ಪಂಥದಲ್ಲಿ ಬರೆಯೋನು ಅಂದ್ರೆ, ಅವನು ತುಂಬಾ ಇಂಟಿಲೆಕ್ಚುಯಲ್. ಯಾವುದರ ಬಗ್ಗೆಯೂ ಅವನು ಹೇಳಿದ್ದೇ ಸರಿ ಅನ್ನುವ ಧೋರಣೆ. ಇವರ ನಡುವೆ ನನಗೆ ಏನು ಬರೆಯೋಕು ಭಯವಾಗಿ ಬರೆಯೋದ್ನೆ ಬಿಟ್ಟು ಬಿಟ್ಟೆ. ಆದರೆ ಈ ವಾತಾವರಣ ನನ್ನಲ್ಲಿ ಒಂದು ಎಚ್ಚರ ಮೂಡಿಸಿತು. ಬರವಣಿಗೆ ಎಂದರೆ ಭ್ರಮೆಯ ಬೊಬ್ಬೆಯಲ್ಲ. ಕಲ್ಪನೆಯ ಗಾಳಿಗೀಳಲ್ಲ. ಅದೊಂದು ಅನುಭವ ಶೋಧ. ಸಾಹಿತಿ ಅಂತಮುರ್ಖಿಯಾಗದ ಹೊರತು ಏನನ್ನೂ ಶೋಧಿಸಲಾರ. ನಾನೂ ನವ್ಯದ ಆರಾಧಕನೇ ಆದೆ. ನನ್ನ ಮಾತು ನಡವಳಿಕೆ ಎಲ್ಲ ನವ್ಯದವರ ಶೈಲಿಯೇ ಆಯಿತು. ಎಂ.ಎ ಮುಗಿಸಿ ಕನ್ನಡ ಮೇಸ್ಟ್ರಾಗಿ ಕೆಲಸಕ್ಕೆ ಸೇರಿಕೊಂಡ ಮೇಲೂ ನನ್ನ ಆಲೋಚನೆ ದೃಷ್ಟಿಕೋನ ಎಲ್ಲ ನವ್ಯಮಾರ್ಗದ ಸೈದ್ಧಾಂತಿಕ ನೆಲಗಟ್ಟಿನ ಮೇಲೆ ರೂಪುಗೊಂಡು ಹರಿದದ್ದೇ ಆಯಿತು. ಪ್ರಾರಂಭಿಕ ವರ್ಷಗಳಲ್ಲಿ ನನ್ನ ನವ್ಯದ ಕೊರೆತಕ್ಕೆ ನನ್ನ ವಿದ್ಯಾರ್ಥಿಗಳೂ ತಲೆಕೊಡಬೇಕಾ ಯಿತು.

ಇಷ್ಟೆಲ್ಲ ಆದ ಮೇಲೆ ನನಗೆ ಕವನ ಬರೆಯುವ ಒತ್ತಾಸೆ ಮೂಡಿದ್ದು ನಾನು ಮಡಿಕೇರಿಗೆ ಮೇಸ್ಟ್ರಾಗಿ ಹೋದಮೇಲೆ. ೧೯೭೮ರ ನಂತರ ನಾನು ಮತ್ತೆ ಪದ್ಯ ಬರೆಯಲು ಪ್ರಾರಂಭಿಸಿದೆ. ಅಷ್ಟು ಹೊತ್ತಿಗೆ ಕನ್ನಡದ ಮಣ್ಣಿನಲ್ಲಿ ಸಾಕಷ್ಟು ನೀರು ಹರಿದು ಹೋಕಿತ್ತು. ಹೊಲದ ಒಬ್ಬೇಲಿ ದನ ಮೇಯಿಸುತ್ತಾ ಉರಿಬಿಸಿಲಲ್ಲಿ ನೆತ್ತಿ ಕಾಯಿಸಿಕೊಂಡು ಭವಿಷ್ಯದ ಬಗ್ಗೆ ಯಾತರ ಯೋಚನೇನು ಮಾಡದೆ ಇದ್ದ ಹುಡುಗ, ಇಡೀ ಜಗತ್ತಿನ ವಿದ್ಯಮಾನಗಳ ಬಗ್ಗೆ ಕಿವಿ ಮನಸ್ಸನ್ನ ತೆರೆದವನಾಗಿ ಬೆಳೀತಿದ್ದ. ವೈಯಕ್ತಿಕ ಆಸೆ ಅತೃಪ್ತಿಗಳ ಜತೆಗೆ ಸಮುದಾಯದ ರೌರವ ಹಿಂಸಾದಳ್ಳುರಿಗಳ ಕ್ಷೋಭೆ ಕೂಡ ಒಳಗನ್ನ ಬೇಯಿಸುತ್ತಿದ್ದ ವಾಸ್ತವವಾಗಿತ್ತು. ನಮ್ಮ ಕನ್ನಡದ ಸಾಂಸ್ಕೃತಿಕ ಪರಿಸರದಲ್ಲಿ ಬರಹಗಾರರ ಒಕ್ಕೂಟ ಹುಟ್ಟಿ ಒಡೆದು ಹೋದದ್ದರ ಹಿನ್ನೆಲೆ ಮುನ್ನೆಲೆಯಲ್ಲಿ ಹಲವು ಸಾಹಿತ್ಯಿಕ ರಾಜಕೀಯ ಬೆಳವಣಿಗೆಗಳಾಗಿದ್ದವು. ಅರಸು ಸರ್ಕಾರದ ರಾಜಕೀಯ ನತಿಗಳು, ತುರ್ತುಪರಿಸ್ಥಿಯ ಪರಿಣಾಮ, ಜೆ.ಪಿ. ಚಳವಳಿ, ಈ ಎಲ್ಲವುಗಳ ನಡುವೆ ‘ಕಟ್ಟುವೆವು ನಾವು ಹೊಸನಾಡೊಂದನು ರಸದ ಬೀಡೊಂದನು’ ಎಂದ ಕವಿಯ ಜನಸಂಘದ ಉಮೇದುವಾರಿಕೆ ಇತ್ಯಾದಿ ಕಣ್ಣೆದುರಿನ ವಿದ್ಯಮಾನಗಳು ನನ್ನನ್ನ ನಿಶ್ಶಬ್ದದ ಬಯಲಿಗೆ ತಳ್ಳಿದವು. ೧೯೭೮ರ ನಂತರ ಪ್ರಾರಂಭವಾದ ನನ್ನ ಕಾವ್ಯದ ವ್ಯವಸಾಯ ನಿಲ್ಲಲಿಲ್ಲ. ನನ್ನ ಕವನಗಳನ್ನ ಓದಿದವರು ಏನು ಹೇಳಿದರೂ ಯಾರ ಮಾತಿಗೂ ಕಿವಿಗೋಡದ ಸ್ಥಿತಿಯೊಳಗೆ ಕಾವ್ಯ ನನಗೆ ಅನಿವಾರ್ಯವಾದ ಅಭಿವ್ಯಕ್ತಿ ಮಾಧ್ಯಮವಾಯಿತು. ನನ್ನ ಅಂತರಂಗದ ಅಭೀಪ್ಸೆಗಳನ್ನ ಒಳಸಂಕಟಗಳನ್ನ ಹೇಳಿಕೊಳ್ಳಲು ಬೇರೆ ದಾರಿಯೇ ಇಲ್ಲ ಎನ್ನುವಷ್ಟರ ಮಟ್ಟಿನ ಅನಿವಾರ್ಯತೆ ಇದಾಯಿತು. ಮೊದಮೊದಲು ನನ್ನ ಕಾವ್ಯದಲ್ಲಿ ನಿರಾಶೆಯ ದಟ್ಟದನಿ ಕೇಳಿಸದ್ದರಲ್ಲಿ ಆಶ್ಚರ್ಯವೇನಿಲ್ಲ.

ಮಡಿಕೇರಿಯಲ್ಲಿದ್ದಾಗ ಒಂದು ರಾತ್ರಿ ನನಗೆ ಒಂದು ಕನಸು ಬಿತ್ತು. ಆ ಕನಸಿನಲ್ಲಿ ಪ್ರೈಮರಿ ಶಾಲೆಯ ನನ್ನ ಸಹಪಾಠಿ ರಾಮಲಿಂಗಯ್ಯ ಕಾಣಿಸಿಕೊಂಡಿದ್ದ. ನಾನು ಊರಿಗೆ ಹೋಗೋದೆ ಅಪರೂಪವಾಗಿತ್ತು. ಅದಕ್ಕೆ ಕಾರಣ ವೈಯಕ್ತಿಕ ಬದುಕಿನ ಹಲವು ಒಳತೋಟಿಗಳು. ಹೀಗಿರುವಾಗ ಈ ಕನಸು ಬಿದ್ದಿತು. ಆ ಕನಸಿನಲ್ಲಿ ನನ್ನ ಸಹಪಾಠಿ ಸತ್ತುಹೋಗಿದ್ದ. ಅವನ ಸಂಬಂಧಿಕರೆಲ್ಲ ಶವಯಾತ್ರೆಯಲ್ಲಿ ಭಾಗವಹಿಸಿದ್ದಾರೆ. ಆಗ ಆ ಗುಂಪಿನ ನಡುವೆ ನಮ್ಮೂರಿನ ಚಿಕ್ಕದೇವಮ್ಮ ನನ್ನೆದುರಿಗೆ ಬಂದಳು. ಅವಳ ಯಥಾಶೈಲಿಯಲ್ಲಿ ‘ನೋಡೋ ಸಿದ್ರಾಮಪ್ಪ…’ ಅಂತ ಆ ಸಾವಿನ ಪ್ರವರ ಹೇಳಲು ತೊಡಗಿದಳು. ನನಗೆ ಧಿಗ್ಗನೆ ಎಚ್ಚರವಾಯಿತು. ಸತ್ತ ಸಹಪಠಿ ಪ್ರವರ ಹೇಳುತ್ತಿದ್ದ ಚಿಕ್ಕದೇವಮ್ಮ ಒಂದೇ ಸಮನೆ ಕಾಡಿಸಿದರು. ಆ ನಡುರಾತ್ರಿಯಲ್ಲಿ ಎದ್ದು ಲೈಟು ಹಾಕಿ ಹಾಗೇ ಧೇನಿಸುತ್ತಾ ಕುಳಿತೆ. ಬಾಲ್ಯದ ಗೆಳೆಯ ರಾಮಲಿಂಗಯ್ಯನನ್ನು ನೋಡಿ ಎಷ್ಟು ವರ್ಷಗಳಾಗಿವೆ? ಮೂರನೇ ತರಗತಿಯಲ್ಲಿದ್ದಾಗ ಒಮ್ಮೆ, ಕ್ಲಾಸ್ ಮಾನಿಟರ್ ಪರಣ್ಣ ಉಕ್ತಲೇಖನ ಬರೆಸುತ್ತಿದ್ದ. ನಡುವೆ ಇವನು ಪರಣ್ಣ ಪರಣ್ಣ ಅಂತ ಎರಡು ಬೆರಳೆತ್ತಿದ್ದ. ಪರಣ್ಣ ‘ಕುಕ್ಕರಿಸಿಕೊಂಡು ಬರಿಯೊ’ ಅಂತ ಗದರಿಸಿದ್ದ. ಆದರೆ ರಾಮಲಿಂಗಯ್ಯನಿಗೆ ತಡಕಣಕಾಗಲಿಲ್ಲ. ಕುಂತಿತ್ತವಲೆ ಚಡ್ಡಿವೊಳಗೆ ತೊಪ್ಪೆ ಇಕ್ಕಿದ್ದ. ವಾಸ್ನೆ ಇಡೀ ರೂಮ್ನೆಲ್ಲ ತುಂಬಿ ಗುಂಡಪ್ಪ ಮೇಸ್ಟ್ರು ಮೂಗು ಮುಚ್ಚಿಕೊಂಡು ಹೊರಕ್ಕೋಡಿ ನಮ್ಮನ್ನೆಲ್ಲ ಒಂದಕ್ಕೆ ಬಿಟ್ಟಿದ್ದರು. ರಾಮಲಿಂಗನ ಅವ್ವನ್ನ ಕರೆಸಿ ತೊಪ್ಪೆ ಬಾಚಾಕ್ಸಿದ್ರು. ನನ್ನ ಕನಸಿಗೆ ಬಂದ ರಾಮಲಿಂಗ ಧುತ್ತನೆ ಈ ಉಕ್ತಲೇಖನದ ನೆನಪಾಗಿ ಕಾಡಿದ. ಬೇಲಿಯ ಓತಿಕ್ಯಾತ, ಬುಗುರಿಮರದ ಬೇರು, ಬಸ್ಸಾರಿಗೆ ಹಟಮಾಡಿದ ತಮ್ಮ ಒಂದಕ್ಕೊಂದು ಒಳಸಂಬಂಧವುಳ್ಳ ನೆನಪಿನ ಸರಪಳಿಬಿಚ್ಚಿ ಕನಸಿನ ಅವನ ಸಾವು ಕಾಡಿಸಿದಂತೆ ‘ಕೇಡು ಲೇಸಿನಾ ಗಡಿಯಾಚೆ ನಿಂತವನು’ ಕವನ ಹುಟ್ಟಿತು. ಮೊಟ್ಟಮೊದಲಿಗೆ ನನ್ನ ಹಳ್ಳಿಯ ಭಾಷೆ ಆ ನೆಲದ ಎಲ್ಲ ಅನುಭವ ವಿವರಗಳು ಮೈತುಂಬಿಕೊಂಡು ಜೀವತಳೆದು ಮಾತಾಡ ತೊಡಗಿದುವು. ನಿರಾಯಾಸವಾಗಿ ಬರವಣಿಗೆ ಹರಿದದ್ದೊಂದೆ. ಈ ಮುಂಚೆ ಬರೆಯುತ್ತಿದ್ದಾಗಲೆಲ್ಲ ಸಾಕಷ್ಟು ಸಾರಿ ತಿದ್ದುವುದು ಮಾಡುತ್ತಿದ್ದೆ. ಈ ಕವನ ತಿದ್ದಿಸಿಕೊಳ್ಳುವ ಪ್ರಮೇಯಕ್ಕೇ ಹೋಗಲಿಲ್ಲ. ಸಲೀಸಾಗಿ ಹರಿಯಿತು, ಹೇಗೆಂದರೆ ಅಮಾವಸೆಯ ಕತ್ತಲೆಯಲ್ಲೂ ನನ್ನೂರಿನ ಹಾದಿಬೀದಿ ಗಳಲ್ಲಿ ಗುಂಡಿಗೊಟರು ಕೊಳೆಕಲ್ಲು ಕುರುವುಗಲ್ಲು ಬುಗುರಿ ಬೇರು ಯಾವುದು ಎಲ್ಲಿದೆ ಎಂಬುದು ಗೊತ್ತಿದ್ದು ನಡೆಯುವ ಹಾಗೆ. ಈ ಪದ್ಯ ಓದುಗರ ಮೆಚ್ಚುಗೆ ಪಡೆಯಿತು.

೧೯೮೯ರ ನಂತರದ ನನ್ನ ಕಾವ್ಯದಲ್ಲಿ ನಿರಾಶೆ ಕರಗಿ ಪ್ರೀತಿ ಉತ್ಸಾಹಿತವಾಗಿದೆ ಅಂತ ಕೆಲವು ಓದುಗರ ಅಂಬೋಣ. ಅದು ನಿಜವಿರಲೂಬಹುದು. ಈ ರೀತಿ ಬದುಕಿನ ಪ್ರೀತಿ ಬೆಳೆಯಲು ಕಾರಣ ನನ್ನೊಳಗೆ ಕುಡಿವರಿದ ಜೋಗಿಪ್ರಜ್ಞೆ, ಈ ಜೋಗಿ ನನ್ನ ಅಪ್ಪ. ನನ್ನ ಅಪ್ಪ ಎಷ್ಟು ಸಿಟ್ಟಿನವನೋ ಅಷ್ಟೇ ಅಂತಃಕರಣ ತುಂಬಿದ ಹೆಂಗರುಳಿನ ಜೀವ. ಊರಲ್ಲಿ ನಿಂತು ಏನಾದರೂ ಕೆಲಸ ಮಾಡಿದರೆ ಎಲ್ಲರೂ ಅಸೂಯೆ ಪಡುವಷ್ಟು ಮುತುವರ್ಜಿಯಿಂದ ದುಡಿಯುತ್ತಿದ್ದ ಚೇತನ. ಊರು ಬಿಟ್ಟು ಹೋದರೆ ತಿರುಗಲು ತಿಪ್ಪ. ಎಲ್ಲಿಗೆ ಹೋದ ಎಂಬುದು ಗೊತ್ತಾಗುತ್ತಲೇ ಇರಲಿಲ್ಲ. ಎಷ್ಟೋ ಬಾರಿ ನಮ್ಮವ್ವನ ಹತ್ತಿರ ಜಗಳಾಡಿಕೊಂಡು ತಿಂಗಳುಗಟ್ಟಲೆ ಮನೆಬಿಟ್ಟು ಹೋದದ್ದುಂಟು. ಅವನಿಗೆ ಆತ್ಮಸಂಗಾತಿಯೊಬ್ಬಳಿದ್ದಳು. ಅದು ನಮ್ಮೂರಲ್ಲಲ್ಲ. ಒಮ್ಮೊಮ್ಮೆ ಅಪರೂಪಕ್ಕೆ ಅವಳನ್ನು ಮನೆಗೆ ಕರೆದುಕೊಂಡು ಬಂದುಬಿಡುತ್ತಿದ್ದ. ನನ್ನವ್ವ ಅಷ್ಟೇ ಆದರದಿಂದ ಉಪಚರಿಸಿದ ನೆನಪು ಮಾಸಿಲ್ಲ. ಆದರೆ ಆಗಾಗ ಏಕಾಂತದಲ್ಲಿ ಅವಳಿಗೆ ಶಾಪಹಾಕುತ್ತ ಅತ್ತಿದ್ದೂ ತೀವ್ರವಾಗಿ ಕಾಡುವ ನೆನಪು.

ಇಂಥ ನನ್ನ ಅಪ್ಪ ‘ಎಲ್ಲೋ ಜೋಗಪ್ಪ ನಿನ್ನ ತಳಮನೆ’ ಎಂಬ ನೆಲೆಯವನು. ಕಟ್ಟಿಕೊಂಡ ಸಂಸಾರವನ್ನು ಕಡೆಗಣಿಸಿದಂತೆ ಹೋದರೂ ಕರುಳಾಳದ ಪ್ರೀತಿಯಲ್ಲಿ ಇಡೀ ಕುಟುಂಬವನ್ನು ಕಾಪಿಟ್ಟಿದ್ದವನು. ಮಹಾ ಹಟಮಾರಿ, ಈ ಹಟ ವಿಶ್ವಾಮಿತ್ರನ ಹಟವೆಂದರೂ ಸರಿಯೇ. ಸಿಟ್ಟು ಬಂದಾಗ ಹಿಂದು ಮುಂದು ನೋಡದೆ ಝಾಡಿಸುತ್ತಿದ್ದ ನನ್ನಪ್ಪ ಸಿಟ್ಟಿಳಿದ ತರುವಾಯದ ಪ್ರೀತಿಯ ಸಾಗರವಾಗುತ್ತಿದ್ದ. ಸಿಟ್ಟಿನಲ್ಲಿ ಹೊಡೆದರೂ ಸಾಂತ್ವನದಲ್ಲಿ ಅಕ್ಕರೆಯ ಮಹಾಪೂರವನ್ನು ಹರಿಸಿದ್ದವನು. ಕಷ್ಟಾಂದ್ರೆ ಕೈಲಿದ್ದದ್ದನ್ನು ಹಿಂದುಮುಂದು ಯೋಚಿಸದೆ ದಾನಮಾಡುತ್ತಿದ್ದವನು. ಊರೊಟ್ಟಿನ ಕೆಲಸಕ್ಕೆ ಮುಂದಾಗಿ ನಿಂತು ಎದೆಗೊಡುತ್ತಿದ್ದವನು. ಕಷ್ಟಧಾರಿ ಹೊಣೆಗೇಡಿ ಕೋಪಿಷ್ಠ ದಾನಶೂರ ಪ್ರೀತಿಯ ಚುಂಬಕ ಹೀಗೆ ಏನೆಲ್ಲ ವೈರುಧ್ಯಗಳ ಅನುಭವವಾಗಿ ನನ್ನೊಳಗೆ ಬೆಳಗಿರುವ ನನ್ನಪ್ಪ, ನನ್ನ ಜೋಗಿ ಪ್ರಜ್ಞೆ, ನನ್ನ ಕವನಗಳ ಜೀವಧಾತುವಾಗಿ ಆ ಪ್ರಜ್ಞೆ ಬೆಳೆದು ಬಂದದ್ದೇ ನನ್ನ ಕಾವ್ಯದ ವಿಶಿಷ್ಟತೆಗೆ ಕಾರಣವಾಗಿದೆ. ಇಂಥ ಅಪ್ಪನ ಸಾವು ಕೂಡ ಶ್ರೀಶೈಲದ ಕದಳಿಯ ಕಣ್ಮರೆಯ ನಿಗೂಢ. ಈ ನಿಗೂಢ ನನ್ನನ್ನು ಬಹಳ ತೀವ್ರವಾಗಿ ಬಾಧಿಸಿತು. ಈ ಬಾಧೆ ನನ್ನನ್ನು ಹೆಚ್ಚು ಅಂತಮುರ್ಖಿಯಾಗಿಸಿತು. ಬದುಕಿನ ಬಗ್ಗೆ ಹೆಚ್ಚು ಮೃದುವಾಗಿಸಿತು. ಆ ಸಂದರ್ಭ ದಲ್ಲಿ ಘಟಿಸಿದ ಕೆಲವು ತರ್ಕಾತೀತವಾದ ಸಂಗತಿಗಳು ನನ್ನನ್ನು ಹೆಚ್ಚು ಚಿಂತನೆಗೆ ಹಚ್ಚಿದವು, ಶೋಧನೆಗೆ ಒಳಗು ಮಾಡಿದವು. ಪರಿಣಾಮ ನನ್ನ ಅರಿವಿನ ಗುರುವಿನ ಹುಡುಕಾಟ. ನನ್ನ ಕಳ್ಳುಬಳ್ಳಿಯ ಬಗೆಗೆ ನನ್ನ ಹಂಬಲ, ಬಾಲ್ಯದಲ್ಲಿ ನನ್ನ ಜೀವಾನುಭವ ಸಂಬಂಧಿಗಳಾಗಿದ್ದ ಎತ್ತು ಎಮ್ಮೆ ನಾಯಿ ಗೊಯ್ಗ ಬುಗುರಿಮರ ದೊಡ್ಡಮಾವಿನ ಮರ ಕರಿಕಲ್ಲು ದೊಣೆಸಾಲು ಎಲ್ಲವೂ ನನ್ನನ್ನು ಕಾಡಿಸಿದವು, ಜೀವ ತಳೆದು ಛೇಡಿಸಿದವು. ಆಗಿನಿಂದ ನನ್ನ ಊರನ್ನು ಹೆಚ್ಚು ಹಚ್ಚಿಕೊಂಡೆ. ನನ್ನಪ್ಪನ ಹೆಜ್ಜೆಗುರುತುಗಳನ್ನು ಹುಡುಕುತ್ತಾ ಊರನ್ನು ಬಾಳ ತೊಡಗಿದೆ. ಇದರ ಪರಿಣಾಮ ನನ್ನ ‘ಅವಳೆದೆಯ ಜಂಗಮ’, ‘ಸೊಲ್ಲುಫಲವಾಗಿ’ ಬಂದು ಕೈತುತ್ತುಗಳು.

ಈಗ ಗ್ಯಾಟ್ ಒಪ್ಪಂದಕ್ಕೆ ಸಹಿ ಹಾಕಿದ ಹಿನ್ನೆಲೆಯಲ್ಲಿ ನನ್ನೂರಿನ ರೈತಾಪಿ ಬದುಕು ಬೀದಿಗೆ ಬಿದ್ದಿದೆ. ಜಾಗತೀಕರಣ ಅನಿವಾರ್ಯವೆನ್ನುವ ಮುಠ್ಠಾಳರಿಗೆ ಗಾಂಧೀಜಿಯವರ ಗ್ರಾಮಸ್ವರಾಜ್ಯದ ಕಲ್ಪನೆ ಅರಿವಿಗೆ ಬರುವುದಿಲ್ಲ. ದನಕರು ಎಮ್ಮೆ ಕುರಿಕೋಳಿ ಮೇಕೆಗಳಿಂದ ಸಮೃದ್ಧವಾಗಿದ್ದ ನನ್ನೂರಿನ ಸುತ್ತ ಇಪ್ಪೆ ಮಾವು ಹುಣಸೆ ಹೊಂಗೆ ತೋಪುಗಳಿದ್ದವು. ಈಗ ನನ್ನೂರಿನಲ್ಲಿ ಎರಡು ಇಟ್ಟಿಗೆ ಫ್ಯಾಕ್ಟರಿಗಳಿವೆ. ಹತ್ತಾರು ಟ್ರ್ಯಾಕ್ಟರ್‌ಗಳಿವೆ. ನನ್ನೂರಿನ ಕೆರೆಯಂಗಳದ ಮೆಕ್ಕಲು ಮಣ್ಣೆಲ್ಲ ಇಟ್ಟಿಗೆ ರೂಪತಾಳಿ ನಗರಕ್ಕೆ ರವಾನೆಯಾಗುತ್ತಿದೆ. ತೋಪಿನಲ್ಲಿದ್ದ ಮರಗಳೆಲ್ಲ ಇಟ್ಟಿಗೆ ಗೂಡುಗಳಲ್ಲಿ ಬೂದಿಯಾಗಿವೆ. ಊರಲ್ಲಿ ಹುಡುಕಿದರೆ ನೊಣ ಕುಂತರೆ ಜಾರುವ ನುಣುಪಿನ ನಾಲ್ಕು ಜೋಡಿ ಹೋರಿಗಳಿಲ್ಲ. ಮರದ ನೇಗಿಲುಗಳು ಮಾಯವಾಗಿವೆ. ಎತ್ತಿನ ಗಾಡಿಗಳು ಮೂರೊ ನಾಲ್ಕೋ ಎನ್ನುವಷ್ಟು ಕಾಣಸಿಗುತ್ತವೆ. ನಮ್ಮೂರ ಹದಿಹರೆಯದ ಹುಡುಗರು ತಿಂಗಳಿಗೆ ಎಂಟುನೂರು ರೂಪಾಯಿಯ ದುಡಿಮೆಗಾಗಿ ಬೆಂಗಳೂರಿನ ಫ್ಯಾಕ್ಟರಿಗಳಿಗೆ ಮುಗಿಬಿದ್ದಿದ್ದಾರೆ. ಊರೊಳಗಿನ ಹಾದಿ ಬೀದಿಗಳಲ್ಲಿ ತಿಪ್ಪೆಮಾಳಗಳಲ್ಲಿ ಗುಟುಕಾ ಹಾಗೂ ಕಳ್ಳಭಟ್ಟಿಯ ಪ್ಲಾಸ್ಟಿಕ್ ಪ್ಯಾಕೆಟ್‌ಗಳು ಚೆಲ್ಲಾಡಿವೆ. ನುಸಿರೋಗಕ್ಕೆ ತತ್ತರಿಸಿ ಹೋಗಿರುವ ತೆಂಗಿನ ಮರಗಳು ರೈತರ ಗೋಣು ಕೆಳಗೆ ಹಾಕಿಸಿವೆ. ಊರ ಹೊಲಮಾಳದ ತುಂಬ ಪಾರ್ಥೇನಿಯಂ, ಜಾಗತೀಕರಣದ ಕಣಿ ಹೇಳುವ ಅಮೆರಿಕಾ ನನ್ನೂರಿಗೆ ಕೊಟ್ಟಿರುವ ಬಹುದೊಡ್ಡ ಕೊಡುಗೆಗಳೆಂದರೆ ೧೯೬೪ರಲ್ಲಿ ಕೇರ್ ಗೋಧಿಯ ಮೂಲಕ ಕಳಿಸಿದ ಪಾರ್ಥೇನಿಯಂ ಕಳೆ, ಹಾಗೂ ಪೆಪ್ಸಿಕೋಲಾದ ಯಾಪುಲ್ಲಿಗಾಗಿ ನಮ್ಮೂರಿನ ತೆಂಗಿನ ಮರಗಳಿಗೆ ಹತ್ತಿಸಿರುವ ನುಸಿರೋಗ. ಈಗ ಅದೇ ಅಮೆರಿಕಾ ಬೆಳೆಸಿದ ಬಿನ್ ಲ್ಯಾಡೆನ್ ಎಂಬ ಯುದ್ಧವ್ಯಸನಿ ಅಮೆರಿಕಾದ ವಿಶ್ವ ಯೂಪುಲ್ಲಿಯ ವೀರ ಸೌಧವನ್ನು ಧ್ವಂಸ ಮಾಡಿದ್ದಾನೆ. ಪೆಂಟಗಾನನ್ನು ನುಡುಗಿಸಿದ್ದಾನೆ. ಮೂರನೇ ವಿಶ್ವಸಮರಕ್ಕೆ ಸಿದ್ಧವಾದಂತೆ ಇಡೀ ಜಗತ್ತು ಸುಡುಮದ್ದಿನ ಉಗ್ರಾಣಗಳಿಂದ ತುಂಬಿದ ಅರಗಿನ ಮನೆಯಾಗಿದೆ. ಈ ಯುದ್ಧಮಾರಿ ನನ್ನೂರಿನ ಬದುಕನ್ನು ಇನ್ನೂ ಯಾವರೀತಿಯ ದುರ್ಭರಕ್ಕೆ ಎಸೆದೀತೋ? ಈ ತಲ್ಲಣ ನಿದ್ದೆಗೆಡಿಸಿದೆ.

ಸೋಜಿಗವೆಂದರೆ ಊರಿನ ಮನೆಯಲ್ಲಿ ನಿನ್ನೆ ಬಿದ್ದ ಕನಸು. ಈ ಕನಸಿನಲ್ಲಿ ನನ್ನ ಪ್ರೀತಿಯ ಗುರು ಜಿಎಸ್‌ಎಸ್ ಅವರು ಒಂದು ಕವಿಗೋಷ್ಠಿ ನಡೆಸಿಕೊಟ್ಟರು. ಆ ಕವಿಗೋಷ್ಠಿ ಯಲ್ಲಿ ಜಿ.ವಿ. ಆನಂದಮೂರ್ತಿ, ಸವಿತಾ ನಾಗಭೂಷಣ, ಡಿ.ಎಸ್. ನಾಗಭೂಷಣ, ಅಮರೇಶ ನುಗುಡೋಣಿ, ಚೆನ್ನಣ್ಣ ವಾಲೀಕಾರ ಮುಂತಾಗಿ ಹಲವರು ಭಾಗವಹಿಸಿದ್ದರು. ಅವರ ಕವನ ವಾಚನಕ್ಕಿಂತ ಅವರ ಗದ್ದಲ ಅದರ ನಡುವೆ ನನ್ನ ಗುರು ಎದ್ದುನಿಂತು ಹೇಳಿದ ಏನೋ ಮಾತು ಧುತ್ತನೆ ನನ್ನನ್ನು ಎಚ್ಚರಗೊಳಿಸಿತು. ಎದ್ದು ಕೂತವನು ಇಡೀ ಕನಸನ್ನು ಧೇನಿಸಿದೆ. ಅದು ಹೀಗಿದೆ :

ವ್ಯಕ್ತಮಧ್ಯದ ಗುರುವು
ಅದೊಂದು ನಡುಹಗಲು ಅಡ್ಡದಾರಿಯ ಹಿಡಿದು
ನಡೆದಿದ್ದೆ ಊರಮಧ್ಯದ ತೇರಬೀದಿಯಗುಂಟ
ಸಾಲಿಟ್ಟಜನ ಎಲ್ಲ ಪರಿಚಿತರೆ ಹರ ಕರೆದಂತೆ ಪರ
ತೆರೆದಂತೆ ಪಾಪಪುಣ್ಯದ ಬಯಲು
ಮಳೆಯಲ್ಲಿ ಮಿಂದಂತೆ ಅಚ್ಚರಿಯ ದೀವಟಿಗೆ
ಹತ್ತಿ ಉರಿದಂತೆ ಎಚ್ಚರದ ಹೆಜ್ಜೆಗತಿ
ನೋಡನೋಡುತ್ತ ಕೂಡಿದ ಕೊನೆ ಗುರು
ಭಕ್ತ ಮನೆ ಗುರುವಲ್ಲಿ ಮಧ್ಯಬಿಂದು.
ಆನಂದ ಬದಿಯಲ್ಲಿ ನುಗಡೋಣಿ ನಡುವಲ್ಲಿ
ನಾಗಭೂಷಣನಿದ್ದ ಸವಿತಾಳ ಬಲದಲ್ಲಿ
ಬಿಂದು ಮಧ್ಯದ ಗುರುಗೆ ಅಂದು ಹರುಷವದೇನೋ
ಹಿಡಿಕೆಯಲಿ ಒಡೆದಿದ್ದ ಕಲ್ಲುಸಕ್ಕರೆ ಚೂರು
ಮಡಿಕೆಯಲಿ ಹಿಡಿದಿದ್ದ ಕವನಗಳ ಸಾಲುಸಾಲು
ಛಂಗನೆದ್ದನು ನುಗಡೋಣಿ ಸಂಗಬೇಡದ ರೀತಿ
ಭಂಗಬಿತ್ತುತ ಹರಿದ ಅಭಂಗಗಳ ಪಾಡಹಾಡಿ
ವಾಲಿಕಾರನ ಕೂಗು ಕೆಂಪಿನೋಕುಳಿಯಾಗೆ,
ನಾಗಭೂಷಣನೆದ್ದ ನಾಗಬೆತ್ತವ ಹಿಡಿದು
ಪತ್ರೆ ದಾಸೋಹದಲಿ ನಿತ್ಯ ಜಂಗಮವೆಂದು
ಉಳುವ ರೈತನ ಗುಳದ ಗೆರೆಯಲಿ ಪಾರಿವಾಳ
ಹೆಡ್ಡೆಯರಸುತ ವ್ಯಕ್ತಮಧ್ಯದ ಗುರುವು.

ಈ ರೀತಿ ನನ್ನ ಕಾವ್ಯ ಶೋಧದ ಹಾದಿ ನಡೆದಿದೆ. ಶಬ್ದದೊಳಗಣ ನಿಶ್ಶಬ್ದದಲ್ಲಿ ಜೀವನಾನುಭವವನ್ನು ಕಟ್ಟಿಕೊಡುವ ಕಾವ್ಯಪ್ರಪಂಚ ನನಗೊಂದು ವಿಸ್ಮಯ, ಒಂದು ಸವಾಲು, ನನ್ನನ್ನು ನಾನು ಕಂಡುಕೊಳ್ಳುವ ಉಪಾಯ. ಬರೆಯುವಾಗ ತನ್ನೊಳಗಿನಾಳಕ್ಕೆ ನನ್ನನ್ನು ನಿಮಗ್ನವಾಗಿಸಿಕೊಂಡು ಬೀಜದೊಳಗಣ ವೃಕ್ಷವನ್ನು ಕಾಣಿಸುವ ಈ ಧ್ಯಾನ ಪ್ರಪಂಚಕ್ಕೆ ನನ್ನ ಅಪಾರ ನಮನ.