ಮೊದಲಿಗೆ ನನಗೆ ಅಕ್ಷರವಂತನಾಗಲು ಅವಕಾಶ ಮಾಡಿಕೊಟ್ಟ ಸಮಾಜಕ್ಕೆ, ಅಂತಹ ಸಮಾಜದ ಹಂಬಲಕ್ಕಾಗಿ ಹೋರಾಡಿದ ಮಹಾನುಭಾವರಿಗೆ ನಾನು ಕೃತಜ್ಞನಾಗಿ ದ್ದೇನೆ. ನಮಗೆ ಈ ಅವಕಾಶ ಸಿಗದಿದ್ದರೆ ಅಕ್ಷರಗಳೊಳಗೆ ಅಡಗಿ ಕುಳಿತಿದ್ದ ನಮ್ಮ ಸಾಂಸ್ಕೃತಿಕ ಲೋಕದ ಅರಿವೇ ನಮಗಾಗುತ್ತಿರಲಿಲ್ಲವೇನೊ ಅನಿಸುತ್ತದೆ. ಇದರಿಂದಾಗಿ ನಾನು ಹುಲುಸಾದ ಜೋಳದ ತೆನೆಯಂತೆ ತುಂಬಿಕೊಂಡಿರುವ ಸಾಂಸ್ಕೃತಿಕ ಲೋಕದಲ್ಲಿ ಒಂದು ಕಾಳಾದೆ. ಬಡಿದು ಕೇರಿ ತೂರುವಾಗ ಮೂಟೆಯೊಳಗೆ ಸೇರಿಬಿಟ್ಟಿದ್ದರೆ ಯಾರದೋ ಹೊಟ್ಟೆಯಲ್ಲಿ ಜೀರ್ಣವಾಗಿ ಹೋಗುತ್ತಿದ್ದೆ. ಆಗಾಗಲು ಬಿಡದ ನನ್ನಪ್ಪ ಅವ್ವ ಕಾಳನು ಕೋಳಿ ಕಣ್ಣಿಂದಲೂ ತಪ್ಪಿಸಿ ಗುಡಾಣದಲಿ ಕೂಡಿ ಪೈರು ಮಾಡಿದರು. ಅವರು ಬೇಡಿ ಇಬೊಗಸೆಯೊಡ್ಡಿ ಕುಡಿಯುತ್ತಿದ್ದ ನೀರನ್ನು ಬಟ್ಟೆಗೆ ಚಲ್ಲಿಕೊಂಡು ಆ ಬಟ್ಟೆಯ ನೀರನು ತಂದು ಪೈರಿನ ಬುಡಕೆ ಹಿಂಡಿ ಪೈರನು ಕಾಪಾಡಿದರು. ಮಗ ಅಕ್ಷರವಂತನಾಗಲಿ ಎಂದು ನಕ್ಷತ್ರಗಳ ಎಣಿಸದೆ ಸೂರ್ಯಚಂದ್ರ ಕಾಣದೆ ಮಣ್ಣಿಗೆ ಮುಖವೊಡ್ಡಿ ದುಡಿದರು. ಆ ತೆನೆ, ತೆನೆಯಲ್ಲಿ ಬಲಿತ ಕಾಳು ಮಳೆಯಲ್ಲಿ ನೆನೆದು ಬಿಸಿಲಲ್ಲಿ ಒಣಗಿ ನೆಲಕೊರಗಿದರೂ ಗೆದ್ದಲ್ಹಿಡಿಯಲು ಬಿಡದೆ ಕಾಪಾಡಿದವರು ನೆರೆಯ ‘ಮಾರ್ಕ್ಸ್‌ವಾದ’ ಮತ್ತು ‘ದಲಿತ ಸಂಘರ್ಷ ಸಮಿತಿ’. ಈಗ ಅವರು ಕೇರಿ ತೂರಿದ ಕಾಳು ‘ನಾನು ಮತ್ತು ನನ್ನ ಬರವಣಿಗೆ’. ಸಾಹಿತ್ಯದ ವಿದ್ಯಾರ್ಥಿಯಲ್ಲದ ನನಗೆ ಸಾಹಿತ್ಯದ ಆಳ ಅರಿವು ಕಡಿಮೆ. ಹುಲುಸಾಗಿ ಬೆಳೆದು ಹಬ್ಬುತ್ತಿರುವ ಸಾಹಿತ್ಯದ ಬಳ್ಳಿಯಲ್ಲಿನ ಕುಡಿಯಾಗಿ ನಾನು ಹಬ್ಬುತ್ತಿದ್ದೇನೆಯೋ; ಹಲುಬುತ್ತಿದ್ದೇನೆಯೋ ತಿಳಿಯೆ!

ನನ್ನಪ್ಪ ಅವ್ವಂದಿರ ಆಸೆಯಂತೆ ವಿದ್ಯಾವಂತ ಬುದ್ದಿವಂತನಾಗಲು ಓದುತ್ತಿದ್ದ ಕಾಲಕ್ಕೆ ಆಕಾಶದಲ್ಲಿನ ನಕ್ಷತ್ರ ಉರಿದು ಬಿದ್ದರೆ, ಬಿದ್ದಲ್ಲಿ ಸಾವು ಸಂಭವಿಸುತ್ತದೆ ಎಂದು ಎದುರಿ ರಾತ್ರಿಯ ವೇಳೆ ಆಕಾಶವನ್ನೇ ನೋಡುತ್ತಿರಲಿಲ್ಲ. ಅಳುವ ನಾಯಿಯನ್ನು ಕಿರುಚುವ ಕಾಗೆಯನ್ನು ಎದುರಿಸುತ್ತಾ, ಎದೆಗೆ ಹಿಟ್ಟೇರಿದರೆ ‘ಏನೊ ಕಾರಣವಲ್ಲ’ ಎಂದು ಆತಂಕ ಪಡುತ್ತಿದ್ದ ಅಪ್ಪ ಅವ್ವನ ಜೊತೆ ಪಲ್ಲಿ ಲೋಚಗುತ್ತಿದ್ದರೆ ನ್ಯಲ ಕುಟ್ಟುತ್ತಾ, ಬೇಸಿಗೆಯಲ್ಲಿ ಊರಿಗೆ ನುಗ್ಗುವ ಮಾರಿಯರಿಗೆ ಮುಖಾಮುಖಿಯಾಗುವ ನಮ್ಮೂರ ದೇವರ ಕಂಡಾಯಗಳ ಮೆರವಣಿಗೆಯಲ್ಲಿ, ರಾಮಮಂದಿರದ ಭಜನೆಯಲ್ಲಿ ಗರುಡಗಂಬವ ಹಿಡಿಯಲು ಓಡೋಡು ತ್ತಿದ್ದೆ. ಕೋಳಿಯ ಕತ್ತನು ಸರ ಸರನೆ ಕುಯ್ದು ಬಟ್ಟಲಿಗೆ ಹಿಂಡುವ ರಕ್ತ ರಸಕೆ ಉಪ್ಪನು ಬರೆಸಿ ರಕ್ತ ಹೆಪ್ಪುಗಟ್ಟಿಸಿ ಅದರಿಂದ ಅವ್ವ ಮಾಡುತ್ತಿದ್ದ ಲಾಕಿಗೆ ಜೊಲ್ಲು ಸುರಿಸುತ್ತಿದ್ದೆ. ತಂಗಾಳಿ ಬಿರುಗಾಳಿಗಳ ವ್ಯತ್ಯಾಸವರಿಯದ ನಾನು ಹಣೆಗೆ ದೂಳತವನ್ನು ಅಂಟಿಸಿಕೊಂಡು ನಮ್ಮೂರ ಸುಖ ದುಃಖಗಳಲ್ಲಿ ಲೀನವಾಗಿದ್ದ ಕಾಲ.

ಇಂತಹ ಮಾಗಿದ ಕಾಲಕ್ಕೆ ನಮ್ಮೂರಿಗೆ ಬಂದ ಅಪರಿಚತರು ಊರಿನ ಮೂಲೆಯಲ್ಲಿ ಜಾಗ ಹಿಡಿದು ಮಾರ್ಕ್ಸ್‌ವಾದಿ ಗ್ರಂಥಾಲಯ ಸ್ಥಾಪಿಸಿದರು. ಉಳ್ಳವರ ತಲೆಗಳಿಗೆ ಬಾಂಬಾ ಗುವ ಇಲ್ಲದವರ ತಲೆಗೆ ಹೂವಾಗುವ ಇದು ಮಾರ್ಕ್ಸ್‌ವಾದ ಎಂದರು. ಅದಾಗಲೇ ಅದೆಷ್ಟೋ ಕಾಡಿನ ನಾಡಿನ ಹೂಗಳನ್ನು ನೋಡಿದ್ದ ನಮಗೆ ಈ ಹೂವಿನ ಗಂಧ ಗಾಳಿ ತಿಳಿಯಲಿಲ್ಲ. ಅಷ್ಟಕ್ಕೆ ಅವರು ಬಿಡಲೂ ಇಲ್ಲ. ನಮ್ಮನ್ನೆಲ್ಲಾ ತಮ್ಮ ತೆಕ್ಕೆಯೊಳಗೆ ತೆಗೆದುಕೊಳ್ಳಲು ಆ ಹೂವಿನ ಪರಿಮಳವನ್ನು ನಮಗೆ ಪರಿಚಯಿಸಲು ಪ್ರಯಾಸಪಡು ತ್ತಿದ್ದರು. ನಮ್ಮನ್ನು ಮುಟ್ಟಿಸಿಕೊಳ್ಳಲೂ ಅಹಸ್ಯಪಡುತ್ತಿದ್ದ ಕಾಲದಲ್ಲಿ ಈ ನಯಸಾದ ಗಮ್ ಅನ್ನುವ ಜನ ನಮ್ಮನ್ನು ಮುಟ್ಟಿದರು. ‘ನಾವೂ ಮನಸ್ರು ಕಣ್ರಯ್ಯು’ ಅಂದರು! ಆಗ ನಾವೆಲ್ಲಾ ಮನಸ್ರೇ ಆಗ್ಬುಟ್ಟೊ. ಅವರ ಜೊತೆ ನಗುತಾ ನುಡಿತಾ ಮಾತಾಡಕ್ಕೆ ಶುರು ಮಾಡೇ ಬಿಟ್ಟೆ. ಅವರು ನಮ್ಮನ್ನು ಕೂರಿಸಿಕೊಂಡು ನಕ್ಷತ್ರ ಉದುರುವುದು ಸಹಜ. ಅದರಿಂದ ಅದು ನಾಶವಾಗುತ್ತದೆ. ಅದರಿಂದ ಮತ್ತೇನು ತೊಂದರೆ ಇಲ್ಲವೆಂದು ನಮ್ಮ ಪ್ರಶ್ನೆಗಳಿಗೆ ಉತ್ತರ ಹೇಳಿಕೊಟ್ಟರು. ವಿಜ್ಞಾನದಲ್ಲಿ ಇದಕ್ಕೆಲ್ಲಾ ಉತ್ತರವಿದೆ. ನೀವೆಲ್ಲಾ ವಿಜ್ಞಾನ ಓದಿ ವೈಜ್ಞಾನಿಕ ಮನೋಭಾವ ಬೆಳಸಿಕೊಳ್ಳಬೇಕು ಎಂದರು.

ಆಮೇಲೆ ಮೇಲುಕೀಳುಗಳನ್ನೆಲ್ಲಾ ಅಲ್ಲಗಳೆಯುತ್ತಾ ತಿಂಗಳಾನುಗಟ್ಟಲೆ ಮಾನವರ ವಿಕಾಸದ ಬಗ್ಗೆ ಪಾಠ ಮಾಡಿದರು. ವಿಜ್ಞಾನ ಒಂದೇ ಮನುಷ್ಯ ಮನುಷ್ಯರ ನಡುವೆ ಸಮಾನತೆ ತರುವ ಸಾಧನ ಎನ್ನುವ ವಿಶ್ವಾಸವನ್ನು ನಮ್ಮಲ್ಲಿ ಮೂಡಿಸಿದರು. ಈ ಜ್ಞಾನ ನಮ್ಮ ತಲೆಯೊಳಗೆ ಸೇರುವ ಮುಂಚೆ ದೇವರೇ ನಮ್ಮ ಬಾಳಿನ ಸರ್ವಸ್ವ, ಒಳ್ಳೆಯದನ್ನೂ ಕೆಟ್ಟದ್ದನ್ನೂ ನಿರ್ಧರಿಸುವ ಅವನು ಒಳ್ಳೆಯವನಿಗೆ ವರವನ್ನೂ, ತಪ್ಪು ಮಾಡಿದವರಿಗೆ ಶಿಕ್ಷೆಯನ್ನೂ ವಿಧಿಸುತ್ತಾರೆ ಎಂದು ನಂಬಿ ನಡೆಯುತ್ತಿದ್ದ ನಾವು, ಆ ಕ್ಷಣದಿಂದಲೇ ನಮ್ಮ ತಲೆಗಳಲ್ಲಿ ತುಂಬಿಕೊಂಡಿದ್ದ ದೇವರುಗಳನ್ನು ಆಚೆಗೆ ಹಾಕಿ, ಬಾಲ್ಯದಿಂದಲೇ ಬಾಗಲಲ್ಲಿ ನೇತಾಡಿಸುತ್ತಿದ್ದ ದೇವರ ಪೋಟೊಗಳನ್ನು ಕಳಚಿಬಿಟ್ಟೆವು. ಮಾರ್ಕ್ಸ್‌ನೇ ಮೈಮೇಲೆ ಬಂದಂತೆ ದೇವರುಗಳನ್ನೂ, ದೇವರುಗಳ ಪೂಜಿಸುವ ನಮ್ಮ ಮನೆಯವರನ್ನೂ, ಪ್ರಶ್ನೆ ಮಾಡಲು ಶುರು ಮಾಡಿದೆವು. ಆಗ ನನ್ನಪ್ಪ ಅವ್ವ ಇರುವ ಒಬ್ಬ ಮಗ ನಾವು ಸತ್ತು ಕೆಟ್ಟ ಮೇಲೆ ಅನ್ನ ನೀರು ಹಾಕುತ್ತಾನೊ ಇಲ್ಲವೋ ಎನ್ನುವ ಅನುಮಾನ ಇಟ್ಟುಕೊಂಡೇ ಇಹಲೋಕ ತ್ಯಜಿಸಿದರು.

ಅಷ್ಟಷ್ಟು ತಿಳುವಳಿಕಸ್ತನಾಗಿ ನಾವು ಮೂಢನಂಬಿಕೆಗಳ ವಿರುದ್ಧ ತಿರುಗಿ ಬೀಳುವ ಕಾಲಕ್ಕೆ ಈಗಲೂ ನಮಗೆ ಜ್ಞಾನ ದೀವಿಗೆಯಾದವರು, ಮಾದರಿಯಾದವರು ಡಾ. ರಾಮಲಿಂಗಮ್. ಇವರು ಶೋಷಣೆಗೆ ಮೂಢನಂಬಿಕೆಯೂ ಒಂದು ಮೂಲಕಾರಣ ಎಂದು, ಇದೂ ಜನರ ಮನಸ್ಸಿನಿಂದ ಹೋಗಲಾಡಿಸಲು ನಾನಾ ಸಾಂಸ್ಕೃತಿಕ ಮಾರ್ಗಗಳನ್ನು ಹುಡುಕು ತ್ತಿದ್ದರು. ಕಡೆಗೆ ನಮ್ಮನ್ನೆಲ್ಲಾ ಕೂಡಿಸಿಕೊಂಡು ಒಂದು ಸಾಂಸ್ಕೃತಿಕ ತಂಡ ಕಟ್ಟಿದರು.

ಆಗ ಅವರಿಗೆ ಕನ್ನಡ ಅಷ್ಟಾಗಿ ಬರದಿದ್ದರೂ ಕನ್ನಡದಲ್ಲೇ ಮಾತನಾಡುತ್ತಾ, ಕನ್ನಡ ಅಕ್ಷರಗಳನ್ನು ಕಲಿಯುತ್ತಾ, ಅಲ್ಲಲ್ಲೆ ಶೋಷಣೆಯ ವಿರುದ್ಧ ಹಾಡುಗಳನ್ನು ಕಟ್ಟುತಾ ಚೆಂದದ ಧ್ವನಿ ಇಲ್ಲದಿದ್ದರೂ ಹಾಡುತ್ತಾ, ನಾಚುತ್ತಿದ್ದ ನಮಗೂ ಹಾಡುವಂತೆ ಮಾಡಿದರು, ಬರೆಯುವಂತೆ ಪ್ರೇರೇಪಿಸಿದರು. ಅವರಿಗಿದ್ದ ಶ್ರದ್ಧೆ ಮಾನವೀಯ ಕಳಕಳಿ ನಮ್ಮಲ್ಲಿದ್ದ ಚೈತನ್ಯವನ್ನು ಇಮ್ಮಡಿಗೊಳಿಸಿತು. ಅವರೇ ಹೇಳುವಾಗ ನಾವ್ಯಾಕೆ ಬರಿಯಬಾರದು ಎಂದು ಶುರು ಮಾಡಿದೆವು. (ಅವುಗಳಿಗೆ ವಿಮರ್ಶೆ ಇಲ್ಲ) ಅವುಗಳನ್ನು ನಾವೇ ಕಲಿತು ಬೀದಿಗಳಲ್ಲಿ ಮೊಹಲ್ಲಾಗಳಲ್ಲಿ ಹಾಡಲು ಶುರು ಮಾಡಿದೆವು. ಆಗ ಭಿಕ್ಷುಕರು ಬಿಟ್ಟರೆ ನಾವೇ ಬೀದಿಯ ಹಾಡುಗಾರರು.

ಈ ಸಮಯಕ್ಕಾಗಲೇ ಕರ್ನಾಟಕದಲ್ಲೆಡೆ ದಲಿತ ಸಂಘರ್ಷ ಸಮಿತಿ ಒಡೆಯರಿಗೆ ಉರುಳಾಗಿ ದಲಿತರಿಗೆ ಬದುಕಾಗಿ ಜಾತಿಯ ಮೇಲು ಕೇಳುಗಳ ಅಂತರವನ್ನು ತಾಳಲಾರದೆ ತಲ್ಲಣಗೊಂಡು ಸ್ಫೋಟಿಸುತ್ತಿತ್ತು. ದಲಿತರ ಮೇಲೆ ನಡೆಯುತ್ತಿದ್ದ ದೌರ್ಜನ್ಯ, ದಬ್ಬಾಳಿಕೆ, ಅತ್ಯಾಚಾರ, ಅಸಮಾನತೆಗೆ, ಅಸೃಶ್ಯತೆಗೆ ಆಚರಣೆ ಇವೆಲ್ಲವೂ ಸಾಹಿತ್ಯದ ಪರಿಭಾಷೆಗಳಾಗ ಬಲ್ಲವು ಎಂದು ಸಾರುತ್ತಾ, ದಲಿತ ಸಾಹಿತಿಗಳು ಹುಟ್ಟಿ ದಲಿತರ ಪರವಾದ ಹೋರಾಟಕ್ಕೆ ಹಾಡುಗಳನ್ನು ಬರೆಯುತ್ತಿದ್ದರು. ಸಾಹಿತ್ಯ ರಚಿಸುತ್ತಿದ್ದರು. ದಲಿತ ಸಂಘರ್ಷ ಸಮಿತಿಯ ಕಾರ್ಯಕರ್ತರು ಕಾಲಿಗೆ ಗೆಜ್ಜೆ ಕಟ್ಟಿ ಈ ಹಾಡುಗಳನ್ನೂ ಹಾಡುತ್ತಾ ಬಂಡಾಯದ ಬಾವು ಬೀಸುತ್ತಿದ್ದರು. ಇದರಲ್ಲಿ ನಾನೂ ಲೀನನಾದೆ.

ಹೀಗೆ ಒಂದು ಕಡೆ ಮಾರ್ಕ್ಸ್‌ವಾದ, ಇನ್ನೊಂದು ಕಡೆ ದಲಿತ ಸಂಘರ್ಷ ಸಮಿತಿ ಇವು ನನ್ನೊಳಗಿದ್ದ ಚೈತನ್ಯವನ್ನು ಚಿಗುರಿಸಿದವು. ಇದು ನನ್ನ ಜೀವನದ ಮುಖ್ಯವಾದ ಕಾಲಘಟ್ಟ. ಇಷ್ಟೇ ಆಗಿದ್ದರೆ ಅಲ್ಲೆ ನಿಂತುಬಿಡುತ್ತಿದ್ದನೇನೊ? ಅದರೆ ಮಾರ್ಕ್ಸ್‌ವಾದಿಯಾಗದ್ದ ಪರಿಚಯ ವಾದ ರಾಮು ಎಂಬ ದೇವತಾ ಮನುಷ್ಯ ನಮ್ಮ ದಿಕ್ಕನ್ನೇ ಬದಲಿಸಿಬಿಟ್ಟ. ಅವನ ಮಾನವೀಯ ಅಂತಃಕರಣ, ಅದಕ್ಕಿಂತ ಹೆಚ್ಚಿಗೆ ಅವನಲ್ಲಿರುವ ತಾಯ್ತನ, ಅವನನ್ನು ಬಿಟ್ಟು ಕದಲದಂತೆ ಮಾಡಿತು. ಇವತ್ತಿಗೂ ಅಂಥ ದೈತ್ಯ ಅವನು.

ಅದಾಗಲೆ ದಲಿತ ಸಾಹಿತ್ಯ ಅದರಲ್ಲೂ ದೇವನೂರರ ಸಾಹಿತ್ಯದಿಂದ ಪ್ರಭವಾತನಾಗಿದ್ದ ರಾಮು, ನಮ್ಮೊಳಗೂ ಆ ಬೀಜ ಮೊಳೆಯಲು ಗೊಬ್ಬರ ನೀರು ಎರೆದವನು; ನಮ್ಮೊಳಗಿದ್ದ ಅಜಾಗೃತಚಿತ್ತ ವ್ಯಕ್ತಿಗತವಾಗಲು ಬಿಡದೆ ವ್ಯಕ್ತಾತೀತವಾಗಿ ಬೆಳೆಯಲು ಮಾರ್ಗ ತೋರಿಸಿ ದವನು. ‘ಅನ್ನ ತಟ್ಟೆಯಲ್ಲಿಟ್ಟರೆ ಅಹಾರ, ದೇವರ ಮುಂದಿಟ್ಟರೆ ಪ್ರಸಾದ’ ಎಂದು, ಹಸಿದಿದ್ದ ನಮಗೆ ಎರಡನ್ನೂ ನೀಡಿ; ಬರವಣಿಗೆಯ ರೂಪ ಪ್ರತಿರೂಪವಾಗಿದ್ದರೆ ಒಪ್ಪದೆ, ಅದನ್ನು ಮೀರುವ ಕ್ರಿಯೆಯಲ್ಲಿ ತೊಡಗುವ ಚಾಲೆಂಜನ್ನು ನನ್ನ ಮುಂದಿಟ್ಟು ಬರೆಯಲು ನಾನಾ ದಾರಿ ತೋರುತ್ತಿರುವವನು ರಾಮು.

ಹೀಗೆ ಎಲ್ಲೆಡೆಯಿಂದ ಜ್ಞಾನ ಪಡೆದ ನನಗೆ, ಬದುಕಿದ್ದಕ್ಕೆ ನನ್ನನ್ನು ನಾನು ಸಾರ್ಥಕಪಡಿಸ ಬೇಕಾಗಿಲ್ಲ ಅನಿಸಿತು. ಏನೂ ಕಲಿಯದಿದ್ದ ನನಗೆ ಅಲ್ಪಸ್ವಲ್ಪ ಬರೆಯಲು ಕಲಿತಿದ್ದೆ ದಾರಿ ಯಾಯಿತು. ನನ್ನೂರಲ್ಲೇ ನನ್ನ ಬರವಣಿಗೆಯ ಬೇರುಗಳು ಮೊಳೆತು ಕತೆಗಳು ಹುಟ್ಟಲು ಶುರುವಾದವು. ಬರದದ್ದೇನೊ ಬರೆದೆ. ತೋರಿಸುವುದು ಯಾರಿಗೆ? ಬೀನ್ಸ್ ಅನ್ನು ‘ಬೀನೀಸ್ ಕಾಯಿ’ ಅಂದದ್ದಕ್ಕೆ, ಕಾಲದಿಂದಲೂ ಬೀನ್ಸ್ ತಿಂದವರಿಂದ ‘ಹಣ್ಣು ಬ್ಯಾರೆ ಇದೀಯೋ?’ ಎಂದು ಚುಡಾಯಿಸಿ ಕೊಂಡಿದ್ದೆ. ಜೊತೆಗೆ ಶಿಷ್ಟವಲ್ಲದ ನನ್ನ ಭಾಷೆಯಲ್ಲಿ ಅಕ್ಷರ ಜೋಡಣೆ, ಪದಗಳ ಜೋಡಣೆ, ಕೊನೆಗೆ ಕಷ್ಟಪಟ್ಟು ಬರೆದರೂ ಅದು ಕತೆಯಾಗಿ ಬೆಳೆದಿಲ್ಲ, ಬೆಳೆಯುವ ರೀತಿ, ಇನ್ನೂ ದಕ್ಕಿಲ್ಲ ಎನ್ನುವ ಪದಪುಂಜಗಳು ಬೇರೆ ನೆನಪಿಗೆ ಬಂದು ಪಟ್ಟಾಡುತ್ತಿದ್ದೆ. ಕಡೆಗೆ ಧೈರ್ಯಮಾಡಿ ಬಲ್ಲವರಿಗೆ ಒಂದೆರಡು ಕತೆ ಕೊಟ್ಟೆ! ಅವರು ಪರವಾಯಿಲ್ಲ ಅಂದಾಗ, ನನಗಾದ ಸಂತೋಷ ಅಷ್ಟಿಷ್ಟಲ್ಲ! ಪರವಾಗಿಲ್ಲ ಎಂದದ್ದಕ್ಕಲ್ಲ! ನಾನೇ ನನಗೂ ಬರಿಯಕ್ಕೆ ಬರುತ್ತಲ್ಲ ಅಂದುಕೊಂಡದ್ದಕ್ಕೆ! ಕತೆಯ ಅಂದ ಚಂದ ಆಮೇಲಿನದು.

ನನ್ನ ಮೊದಲ ಕಥಾ ಸಂಕಲನದ ಕತೆಗಳನ್ನು ಕ್ರೈಸ್ಟ್ ಕಾಲೇಜು ಕನ್ನಡ ಸಂಘ, ಬೆಂಗಳೂರು ಇವರಿಗೆ ದೇವನೂರು ಪರಿಚಯಿಸಿಕೊಟ್ಟರು. ಸಂಘದ ಚಿ. ಶ್ರೀನಿವಾಸರಾಜು ರವರು ಮುತುವರ್ಜಿವಹಿಸಿ ನನ್ನ ‘ಮೊಕಾರ’ ಕಥಾ ಸಂಕಲನ ತಂದರು. ಕೃತಿಯನ್ನು ಗಮನಿಸಿದ ಕೆಲವರ ಒಳ್ಳೆಯ ಮಾತುಗಳನ್ನು ಕೇಳಿ ಖುಷಿಯಾಯಿತು. ತೆಗಳಿದವರ ಮಾತನ್ನೂ ಕೇಳಿ ಸದ್ಯ ನನ್ನ ಕೃತಿಯನ್ನು ಲೆಕ್ಕಕ್ಕಾದರೂ ತೆಗೆದುಕೊಂಡರಲ್ಲ ಎಂದು ಸಮಾಧಾನವಾಯಿತು.

ಈ ಕೃತಿ ಬಂದಮೇಲೆ ನಮ್ಮ ಕಾಲೇಜಿನಲ್ಲಿ ನನ್ನ ಸಹೋದ್ಯೋಗಿಗಳು ಸನ್ಮಾನ ಏರ್ಪಡಿಸಿದ್ದರು. ನನ್ನ ಕಥಾ ಸಂಕಲನ ಹೊರ ಬರುವವರೆಗೂ ನನ್ನ ವ್ಯಕ್ತಿತ್ವವನ್ನೇ ಗಮನಿಸಿದ ಜನ, ನೌಕರನಾಗಿ ನನಗೆ ಸಿಕ್ಕ ಜವಾಬ್ದಾರಿ ಸಮರ್ಥವಾಗಿ ನಡೆಸಿಕೊಟ್ಟರೂ ಕುರ್ಚಿ ಕೊಡದ ಅಥವಾ ಕುರ್ಚಿ ಕೊಡಬೇಕೆಂದು ತಿಳಿಯದ ಜನ, ನನ್ನನ್ನು ಸನ್ಮಾನಿಸಿ ಗೌರವಿಸಿದರು. ಇದು ಇತಿಹಾಸದ ವ್ಯಂಗ್ಯ. ಆದರೂ ಆ ಗೌರವ ನನ್ನನ್ನೂ ವಿನಯವಂತನ ನ್ನಾಗಿಸಿತು. ಆ ಗೌರವ ನನ್ನ ತಂದೆ ತಾಯಿಗಳಿಗೆ, ನನ್ನ ಕತೆಗಳ ಸಾಂಸ್ಕೃತಿಕ ಲೋಕದ ನಾಯಕರಿಗೆ ಸಂದ ಗೌರವ ಎಂದು ಸುಮ್ಮನಾದೆನು.

ಇಂದು ನಾವು ಬದುಕುತ್ತಿರುವ ರೀತಿಗೆ ನಾವು, ನಾನು ರೂಢಿಸಿಕೊಂಡಿರುವ ಅರ್ಥವ್ಯರ್ಥ ಜೊತೆಗೆ ದುರಾಸೆಯ ಅಪೇಕ್ಷೆಗಳಿಂದಲೋ ಅಥವಾ ನಮ್ಮ ಬದುಕಿನ ಕ್ರಮವನ್ನೂ ನನ್ನ ಕೈಯಿಂದ ತಪ್ಪಿಸಿ ತಾವೇ ನಿಯಂತ್ರಿಸಲು ಹುಟ್ಟಿರುವ ಉದಾರೀಕರಣ, ಜಾಗತೀಕರಣ ಮತ್ತು ಖಾಸಗೀಕರಣ ಎಂಬ ಅಂತಾರಾಷ್ಟ್ರೀಯ ಕೂಟಗಳೂ, ಮಾನವನ ಬದುಕಿಗೆ ಅರ್ಥಕೊಡಬಹುದಾದ ಗಂಭೀರ ಭಾವನೆಗಳು ಭ್ರಷ್ಟಗೊಳಿಸುತ್ತಾ ನಮ್ಮ ಸಾಮಾಜಿಕ ರಾಜಕೀಯ ಬದುಕಿನ ಮೇಲೆ ಕೆಟ್ಟ ಪರಿಣಾಮವನ್ನು ಬೀರುತ್ತಿವೆ. ಈ ಸಂದರ್ಭದಲ್ಲಿ ಮನುಷ್ಯನ ಈ ಮೂಲಭೂತವಾದ ಭಾವನೆಗಳಿಗೆ ಧಕ್ಕೆಯಾಗದಂತೆ ನಶಿಸದಂತೆ ಅವುಗಳನ್ನು ಕಾಪಾಡುವುದರಲ್ಲಿ ಸಾಹಿತ್ಯದ ಬಹುಮುಖ್ಯ ಪಾತ್ರವಿದೆ.

ಬರವಣಿಗೆಯಿಂದ ಅಂಥದ್ದನ್ನು ಸಾಧಿಸದಿರುವ ನಾನು ಸಾಹಿತ್ಯದಿಂದ ಕಲಿತದ್ದು, ಒಂದು ಸೃಜನಶೀಲ ಮನಸ್ಸು ಸುಪ್ತಸ್ಥಿತಿಯಿಂದ ಜಾಗೃತಗೊಂಡದ್ದು, ನನ್ನ ಬದುಕಿನ ಸಾರ್ಥಕತೆಯ ಬಗ್ಗೆ ನಾನಾ ಪ್ರಶ್ನೆ ಕೇಳುತಾ, ಅವಕ್ಕೆ ನಾನಾ ಉತ್ತರ ಹುಡುಕಿಕೊಂಡದ್ದು, ಅದರಿಂದಾಗಿ ನಾನು ಬೆಳೆದ ರೀತಿಯೇ ನಾನು ಸಾಹಿತ್ಯದಿಂದ ಪಡೆಯಬಹುದಾದ ಲಾಭ ಎನಿಸುತ್ತದೆ.

ಕಡೆಗೆ ನನ್ನ ಹುಟ್ಟೂರಾದ ನನ್ನ ಹಳ್ಳಿ ಇಂದಿಗೂ ನನ್ನ ಬರವಣಿಗೆಯ ಸೆಲೆ; ನೆಲೆ. ನನ್ನ ಮಾನಸಿಕ ಪ್ರಪಂಚದ ಭಾವನೆಗಳ ಮೂರ್ತಿಗಳನ್ನು ರೂಪಿಸಿದ ಕಥಾನಾಯಕ ಮಂಚಿ ಮಗನಂತಹ ನಾಯಕರು, ನನ್ನನ್ನೂ ಕಾಡಿ ಮಾನವೀಯವೂ ಸಹಜವೂ ಆದ ಬದುಕನ್ನೂ ಪ್ರೀತಿಸುವಂತೆ ಅಂತಹ ಸಾಹಿತ್ಯವನ್ನೂ ರಚಿಸುವಂತೆ ಪ್ರೇರೇಪಿಸಿದರು. ನಾನು ಅದಕೆ, ಅವರಿಗೆ, ಋಣಿ.