ಸರ್ವಜ್ಞ ತದಹಂ ವಂದೇ | ಪರಂಜ್ಯೋತಿಸ್ತಮೋಪಹಂ |

ಪ್ರವೃತ್ತಾಯನ್ಮುಖಾದ್ದೇವೀ | ಸರ್ವಭಾಷಾಸರಸ್ವತೀ ||
(ನಾಗವರ್ಮನ ಕರ್ಣಾಟಕ ಭಾಷಾಭೂಷಣಂ ೧ – ೧)

ಸರ್ವಭಾಷಾ ಸರಸ್ವತಿಯ ಪರಿವಾರದವರಾದ ನಿಮಗೆ ನಮಸ್ಕಾರ.

ಸ್ನೇಹಿತರೇ, ನಾನು ಕನ್ನಡ ಭಾಷಾ ಸರಸ್ವರತಿಯನ್ನು ಇಲ್ಲಿ ಪ್ರತಿನಿಧಿಸುತ್ತಿದ್ದೇನೆ. ನನ್ನ ಕನ್ನಡ ಸರಸ್ವತಿಯ ದೇಶ ವಿಸ್ತಾರವಾದುದು, ಭಾಷೆ ಪ್ರಾಚೀನವಾದುದು, ಸಾಹಿತ್ಯ ಸಮೃದ್ಧ ವಾದುದು. ಇನ್ನಷ್ಟು ಸ್ಪಷ್ಟಪಡಿಸುವುದಾದರೆ, ಸಂಸ್ಕೃತ – ಪ್ರಾಕೃತಗಳನ್ನು ಬಿಟ್ಟರೆ ಸಮಗ್ರ ಭಾರತದಲ್ಲಿಯೇ ಭಾಷೆಯ ಪ್ರಾಚೀನತೆ, ಸಾಹಿತ್ಯದ ಅನನ್ಯತೆ ದೃಷ್ಟಿಯಿಂದ ನನ್ನ ಕನ್ನಡದ ಸ್ಥಾನ ಪ್ರಥಮ ಪಂಕ್ತಿಯದಾಗಿದೆ.

ಎಲ್ಲ ರಾಜ್ಯಗಳಂತೆ ಕನ್ನಡದ ಮೇಲೆಯೂ ಪ್ರಾಚೀನಕಾಲದಲ್ಲಿ ಸಂಸ್ಕೃತ, ಆಧುನಿಕ ಕಾಲದಲ್ಲಿ ಇಂಗ್ಲಿಷ್ ಭಾಷೆ – ಸಾಹಿತ್ಯಗಳು ತಮ್ಮ ತಮ್ಮ ಪ್ರಭಾವ ಬೀರಿವೆ. ಹೀಗಿದ್ದೂ ಕನ್ನಡ ಈ ಪ್ರಭಾವಗಳನ್ನು ಜೀರ್ಣಿಸಿಕೊಳ್ಳುತ್ತ, ಕೆಲವೊಮ್ಮೆ ಪ್ರತಿಭಟಿಸುತ್ತ, ಉದ್ದಕ್ಕೂ ತನ್ನತನವನ್ನು ಮೆರೆದಿದೆ. ಈ ‘ತನ್ನತನ’ದಿಂದಾಗಿಯೇ ಸಾಮಾನ್ಯವಾಗಿ ಪ್ರತಿವರ್ಷವೂ ಕನ್ನಡ ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾದಮಿ ಪ್ರಶಸ್ತಿ ಗೌರವ ಗಳಿಸುತ್ತ ಬಂದಿದ್ದಾರೆ. ಈ ವರ್ಷ ಸಂಶೋಧನ ಸಾಹಿತ್ಯ ಪ್ರಕಾರದ ಮೂಲಕ ಈ ಗೌರವವನ್ನು ಮುಂದುವರಿಸಿದ ಭಾಗ್ಯ ನನ್ನದಾಗಿದೆ.

ಭಾರತದ ಆತ್ಮ ಹಳ್ಳಿಗಳಲ್ಲಿದೆ. ನಾನು ಅಂಥ ಹಳ್ಳಿ ಮೂಲದ ವ್ಯಕ್ತಿ. ನನ್ನ ತಂದೆ ತಾಯಿಗಳು ಬುದ್ದಿವಂತರಲ್ಲ, ಶ್ರದ್ಧಾವಂತರು. ೨ ಜನ ಸದಸ್ಯರನ್ನೊಳಗೊಂಡ ನನ್ನ ಕುಟುಂಬದ ಮುಖ್ಯ ಲಕ್ಷಣ ಅವಿಭಕ್ತ ಪ್ರಜ್ಞೆ ಮತ್ತು ಶ್ರಮಸಂಸ್ಕೃತಿ. ಇವುಗಳನ್ನು ಮೈಗೂಡಿಸಿಕೊಂಡು ಬೆಳೆದ ನಾನು ವೈಯಕ್ತಿಕವಾಗಿ ಪ್ರೀತಿಸುತ್ತ ಬಂದ ವಿಷಯಗಳು ಎರಡು – ಕನ್ನಡ ಮತ್ತು ಬಸವೇಶ್ವರ. ಇವೆಲ್ಲ ನನ್ನ ವ್ಯಕ್ತಿತ್ವವನ್ನು, ನನ್ನ ಸಾಹಿತ್ಯ ವ್ಯಕ್ತಿತ್ವವನ್ನು ರೂಪಿಸಿವೆ.

ಅವಿಭಕ್ತ ಕುಟುಂಬದ ವ್ಯಕ್ತಿಗೆ ಪರಿವಾರ ಮತ್ತು ಪರಂಪರೆಗಳ ಬಗೆಗೆ ಅಗಾಧ ಪ್ರೀತಿ, ಕೌಟುಂಬಿಕ ಪ್ರತಿಷ್ಠೆಯ ಬಗೆಗೆ ಸದಾ ಎಚ್ಚರ ಇವು ಕಾರಣವಾಗಿಯೇ ನನ್ನ ದೇಶವನ್ನು ಪ್ರೀತಿಸುವ, ನನ್ನ ಪರಂಪರೆಯನ್ನು ಹುಡುಕುವ ಸಂಶೋಧಕನಾಗಿ ನಾನು ರೂಪಗೊಂಡೆನೆಂದು ತೋರುತ್ತದೆ.

ನನ್ನ ಪ್ರಾಥಮಿಕ ಶಿಕ್ಷಣ ಜರುಗಿದುದು ಹಳ್ಳಿಯಲ್ಲಿ, ಪ್ರೌಢ ಶಿಕ್ಷಣ ಜರುಗಿದುದು ಹಳ್ಳಿ ಮನಸ್ಸಿನ ನಗರದಲ್ಲಿ. ಹೀಗಾಗಿ ನಾನು ನಗರ ಭಾಷೆಗಳಿಗೆ ವಿಸ್ತರಿಸಿಕೊಳ್ಳದೆ ನನ್ನ ಕನ್ನಡಕ್ಕೆ ಸೀಮಿತಗೊಂಡೆನು. ಇದು ನನ್ನನ್ನು ಕುಬ್ಜನನ್ನಾಗಿಸಲಿಲ್ಲ, ನನ್ನ ಮೂಲಕ ನನ್ನನ್ನು ನೋಡುವ ದೃಷ್ಟಿಕೋನವನ್ನು ದಯಪಾಲಿಸಿತು. ಇದರಿಂದಾಗಿಯೇ ನಾನು ಕೇವಲ ಚರಿತ್ರೆಯ ಸಂಶೋಧಕನಾಗಿ ಉಳಿಯದೆ, ಸಂಸ್ಕೃತಿ ಚಿಂತಕನಾಗಿಯೂ ಬೆಳೆಯಲು ಸಾಧ್ಯವಾಗಿರ ಬಹುದು.

ಸಂಶೋಧನ ಬರೆವಣಿಗೆ ಸಂದರ್ಭದಲ್ಲಿ ನನಗೆ ಯಾವತ್ತೂ ಮಾರ್ಗದರ್ಶಿಯಾದುದು “ನಿನಗೆ ಕೇಡಿಲ್ಲವಾಗಿ ಆನು ಒಲಿದಂತೆ ಹಾಡುವೆ” ಎಂಬ ಬಸವಣ್ಣನ ಮಾತು. ಸಾಮಾಜಿಕ ನ್ಯಾಯಕ್ಕೆ, ಅದೇ ವೇಳೆಗೆ ವೈಯಕ್ತಿಕ ಸ್ವಾತಂತ್ರ್ಯಕ್ಕೆ ಚ್ಯುತಿ ಬರದಂತೆ ಬರೆಯಬೇಕೆಂಬುದು ಇದರ ಅರ್ಥ. ಹೀಗಾಗಿ ಸಮಾಜವನ್ನು ನಾಶ ಮಾಡಲು ಅನೇಕ ಸಾಧನಗಳಿರುವಾಗ, ಹೆಚ್ಚಿನದಾಗಿ ಸಾಹಿತ್ಯವೂ ಇನ್ನೊಂದು ಸಾಧನವಾಗಬಾರದೆಂದು ನಾನು ಎಚ್ಚರವಹಿಸುತ್ತ ಬಂದಿದ್ದೇನೆ.

ನನ್ನದು ಮೂಲತಃ ಸೃಜನಶೀಲ ಮನಸ್ಸು. ಕವಿಯಾಗಬೇಕಿದ್ದವನು ಸಂದರ್ಭದ ಒತ್ತಡದಿಂದಾಗಿ ಸಂಶೋಧಕನಾದೆನೆಂದು ತೋರುತ್ತದೆ. ಬಹುಶಃ ಈ ಕಾರಣಕ್ಕಾಗಿಯೇ ನನ್ನ ಸಂಶೋಧನೆಯ ಸಂಗೀತದಲ್ಲಿ ಸೃಜನಶೀಲತೆಯ ಶ್ರುತಿ ಆಗಾಗ ಕೇಳಿಸುತ್ತದೆ.

ಮೂಲತಃ ನಾನು ಶಿಕ್ಷಕ, ಆಮೇಲೆ ಸಂಶೋಧಕ. ನನ್ನ ಸಂಶೋಧನೆಗೆ ಸುಮಾರು ೪೦ ವರ್ಷಗಳ ಇತಿಹಾಸವಿದೆ. ಈ ಅವಧಿಯಲ್ಲಿ ನಾನು ಸಾಮಾನ್ಯವಾಗಿ ಬರೆಯಬಹು ದಾದುದಕ್ಕಿಂತ ಸ್ವಲ್ಪ ಹೆಚ್ಚು ಬರೆದೆನೆಂದು ತೋರುತ್ತದೆ. ಇದಕ್ಕೆ ಕಾರಣ, ನನಗೆ ಉದ್ದಕ್ಕೂ ಒದಗಿ ಬಂದ ಸಾಂಸ್ಥಿಕ ಮತ್ತು ಸಾಮಾಜಿಕ ಕಿರಿಕಿರಿಗಳು. ನಾನು ಸಂಸ್ಥೆಗಳನ್ನು, ಸಮಾಜವನ್ನು ಪ್ರಾಮಾಣಿಕವಾಗಿ ಪ್ರೀತಿಸಿದ್ದೇ ಇದಕ್ಕೆ ಕಾರಣ. ದಿನನಿತ್ಯದ ಈ ಕಿರಿಕಿರಿಗಳನ್ನು ಮರೆಯಲು ನನಗೆ ಬರವಣಿಗೆಯೇ ಅನಿವಾರ್ಯ ದಾರಿಯಾಗಿ ಪರಿಣಮಿಸಿತು. ಇದಲ್ಲದೆ, ಹೊತ್ತು ಕಳೆಯಲು ನನಗೆ ಬೇರೆ ಹವ್ಯಾಸಗಳಿಲ್ಲವಾಗಿ, ಈ ಬರವಣಿಗೆಯಲ್ಲಿಯೇ ವಿಷಯ ವೈವಿಧ್ಯದ ಇನ್ನೊಂದು ದಾರಿಯನ್ನು ಹುಡುಕಿಕೊಂಡೆನು. ಇದರ ಫಲವಾಗಿ ವ್ಯಾಕರಣ, ಅಲಂಕಾರ, ಛಂದಸ್ಸು, ನಿಘಂಟು, ಹಸ್ತಪ್ರತಿ, ಗ್ರಂಥಸಂಪಾದನೆ, ಜಾನಪದ, ನಾಮವಿಜ್ಞಾನ ಇತ್ಯಾದಿ ಕ್ಷೇತ್ರಗಳು ನನ್ನ ತೆಕ್ಕೆಗೆ ಬಂದವು. ಇವುಗಳಿಗಿಂತ ಭಾಷೆ – ಸಾಹಿತ್ಯ – ಸಮಾಜ – ಧರ್ಮ ಇತಿಹಾಸ ಕ್ಷೇತ್ರಗಳ ಅಂತರಶಿಸ್ತೀಯದಲ್ಲಿ ರೂಪಗೊಳ್ಳುವ ‘ಸಂಸ್ಕೃತಿಯ ಶೋಧ’ದಲ್ಲಿ ಹೆಚ್ಚು ಆಸಕ್ತಿ ಬೆಳೆಸಿಕೊಂಡೆನು.

ಎಂ.ಎ. ಮುಗಿಯುತ್ತಲೇ (೧೯೬೨) ನಾನು ಸಂಶೋಧನೆ ಆರಂಭ ಮಾಡಿದ್ದು, ಪಿಎಚ್.ಡಿ. ಅಧ್ಯಯನಕ್ಕೆ ತೊಡಗುವ ಮೂಲಕ (೧೯೬೩). ಈ ಅಧ್ಯಯನದ ವಿಷಯ ಕಳೆದು ಹೋದ ಕನ್ನಡ ಸಾಹಿತ್ಯದ ಮೊದಲ ಘಟ್ಟವಾಗಿದೆ. ಕಳೆದು ಹೋದ ಈ ಘಟ್ಟದಲ್ಲಿ ಉಳಿದುನಿಂತ ಏಕೈಕ ಅನರ್ಘ್ಯರತ್ನವಾಗಿದೆ, ೯ನೆಯ ಶತಮಾನದ ‘ಕವಿರಾಜಮಾರ್ಗ’. ಅಮೆರಿಕೆಯ ಚಿಕ್ಯಾಗೋ ವಿಶ್ವವಿದ್ಯಾಲಯದ ಸಂಸ್ಕೃತ ಮತ್ತು ಭಾರತ ಅಧ್ಯಯನದ ಪ್ರಾಧ್ಯಾಪಕ ಡಾ. ಷೆಲ್ಡನ್ ಪೋಲಾಕ್ ಹೇಳುವಂತೆ “ಪ್ರಾಯಶಃ ಜಗತ್ತಿನ ಸಂಸ್ಕೃತಿ ಗಳಲ್ಲಿಯೇ ದೇಶಭಾಷಾ ಮೀಮಾಂಸೆಯನ್ನು ಸಿದ್ಧಾಂತೀಕರಿಸಿದ ಮೊದಲ ಪಠ್ಯ”ವೆಂಬ ಖ್ಯಾತಿ ಈ ಕೃತಿಗಿದೆ. ಇದನ್ನು ಒಳಗುಮಾಡಿಗೊಂಡು ಈ ಪೂರ್ವದಲ್ಲಿದ್ದ, ಇರಬಹುದಾದ ಕನ್ನಡ ಸಾಹಿತ್ಯದ ಆಶಯ – ಆಕೃತಿಗಳನ್ನು ಕುರಿತು ಈ ಅಧ್ಯಯನದಲ್ಲಿ ಚರ್ಚಿಸಲಾಗಿದೆ. ಇಲ್ಲಿಂದ ಮುಂದೆ ನನ್ನ ಸಂಶೋಧನ ವ್ಯವಸಾಯ ವೇಗ ಮತ್ತು ಗುಣಮಟ್ಟಗಳನ್ನು ಗುರಿ ಯಿಟ್ಟು ನಡೆದು ಬಂದಿದೆ.

ಸಂಶೋಧನೆಗೆ ಮೂಲ ಮತ್ತು ಮುಖ್ಯದ್ರವ್ಯ ಆಕರಸಾಮಗ್ರಿ. ಹೀಗಾಗಿ ಮೊದಲ ಹಂತದಲ್ಲಿ ಕರ್ನಲ್ ಮೆಕೆಂಝಿ ಮೊದಲಾದವರಿಂದ “ಆಕರಮುಖಿ ಶೋಧ” ಇಲ್ಲಿ ಜರುಗಿತು. ಬಳಿಕ ಇಂಥ ಆಕರಗಳ ಮೂಲಕ “ವಿಶ್ಲೇಷಣಮುಖಿ” ಶೋಧ ನಡೆಸಿ, ಚರಿತ್ರೆ ಬರೆಯುವುದು ಆರಂಭವಾಯಿತು. ಇತ್ತೀಚೆಗೆ ಈ ಚರಿತ್ರೆಯನ್ನು “ವ್ಯಾಖ್ಯಾನ ಮುಖಿ” ಶೋಧಕ್ಕೆ ಗುರಿಪಡಿಸಿ, ಆ ಚರಿತ್ರೆಯ ಒಳದನಿಗಳನ್ನು ಅರ್ಥಮಾಡಿಕೊಳ್ಳುವ ಕೆಲಸ ಮುನ್ನಡೆದಿದೆ. ಇದರಿಂದಾಗಿ ಸಂಶೋಧನೆಯು ಕೇವಲ ಪಠ್ಯಕೇಂದ್ರಿತವಾಗಿ ಉಳಿಯದೆ ಪರಿಸರ ಕೇಂದ್ರಿತವಾಗಿ ಬೆಳೆಯುತ್ತಲಿದೆ. ಈ ಪರಿಸರ ಶೋಧವು ಸಹಜವಾಗಿಯೇ ಸಂಸ್ಕೃತಿ ಅಧ್ಯಯನಕ್ಕೆ ಹೊರಳಿ, ಅಂತರಶಿಸ್ತೀಯತೆಯನ್ನು ಅಳವಡಿಸಿಕೊಳ್ಳತೊಡಗಿದೆ. ಇದರ ಪರಿಣಾಮವಾಗಿ ಉಪೇಕ್ಷಿತ ವಿಷಯಗಳು ಇಲ್ಲಿ ಮಹತ್ವ ಪಡೆಯುತ್ತಲಿವೆ.

“ವಿಶ್ಲೇಷಣಮುಖಿ” ಸಂಶೋಧನೆಯ ಮೂಲಕ ಚರಿತ್ರೆಯ ಶೋಧ (Fact finding) ಪೂರೈಸಿದ ಬಳಿಕ, ಅದನ್ನು “ವ್ಯಾಖ್ಯಾನಮುಖಿ” ಸಂಶೋಧನೆಗೆ ಗುರಿಪಡಿಸಿ, ಅದರ ಹಿಂದಿರುವ ಸತ್ಯಶೋಧ (Truth finding) ಕೆಲಸ ಮಾಡುವಲ್ಲಿ ಸಂಶೋಧನೆಯು ವಿಮರ್ಶೆಯ ಹಾದಿ ಹಿಡಿಯುತ್ತದೆ. ಅದಕ್ಕಾಗಿಯೇ “ಸಂಶೋಧನೆಯೆನ್ನುವುದು ವಿಶ್ಲೇಷಣಾತ್ಮಕ ವಿಮರ್ಶೆ, ವಿಮರ್ಶೆಯೆನ್ನುವುದು ವ್ಯಾಖ್ಯಾನಾತ್ಮಕ ಸಂಶೋಧನೆ”ಯೆನ್ನು ವುದು. ಅಂದರೆ ಇವೆರಡೂ ಒಂದೇ ಮೂಲದಲ್ಲಿ ಹುಟ್ಟುತ್ತಿದ್ದರೂ ಸಂಶೋಧನೆಯು ಒಂದು ಹಂತದಲ್ಲಿ ನಿಂತುಬಿಟ್ಟರೆ, ವಿಮರ್ಶೆಯು ನಿಲ್ಲದೆ ಮುನ್ನಡೆಯುತ್ತದೆ. ಏಕೆಂದರೆ ವಿಮರ್ಶಕರ ವಿಭಿನ್ನ ಅಭ್ಯಾಸ, ಧೋರಣೆಗಳಿಗೆ ತಕ್ಕಂತೆ ಅದು ಹೊಸ ಹೊಸ ನೆಲೆಗಳಲ್ಲಿ ಬಿಚ್ಚುತ್ತಲೇ ಹೋಗುತ್ತದೆ. ನನ್ನ ಅನೇಕ ಲೇಖನಗಳು ಸಂಶೋಧನೆಯಾಗುತ್ತಲೇ ವಿಮರ್ಶೆ ಯಾಗಿ ಬೆಳೆದುದನ್ನು ಇಲ್ಲಿ ನೆನೆಯಬಹುದಾಗಿದೆ.

ಶೋಧವೆನ್ನುವುದು ಆಕರಮುಖಿಯೇ ಇರಲಿ, ವಿಶ್ಲೇಷಣಮುಖಿಯೇ ಇರಲಿ, ವ್ಯಾಖ್ಯಾನಮುಖಿಯೇ ಇರಲಿ, ಭೂತಕಾಲಕ್ಕೆ ಸ್ಥಗಿತಗೊಳ್ಳದೆ ವರ್ತಮಾನವನ್ನು ಪ್ರಭಾವಿಸು ವಲ್ಲಿ ಅದರ ಸಾರ್ಥಕತೆಯಿದೆ. ಇದನ್ನು “ಸಮಾಜಮುಖಿ” ಶೋಧವೆಂದು ಕರೆಯಬಹುದು. ಈ ಪ್ರಭಾವಿಸುವಿಕೆಯನ್ನು ಸೃಜನ ಸಾಹಿತಿ ಕಲ್ಪಿತ ಮಾದರಿಗಳಿಂದ ಪೂರೈಸುತ್ತಿದ್ದರೆ, ಸಂಶೋಧನ ಸಾಹಿತಿ ಘಟಿತ ಮಾದರಿಗಳಿಂದ ಪೂರೈಸಬೇಕಾಗುತ್ತದೆ. ಈ ಪೂರೈಕೆಗಾಗಿ, ತನ್ನ ಪರಿಸರದ ಅನ್ಯಾಯಗಳನ್ನು ಗುರುತಿಸಿ, ಅವುಗಳನ್ನು ಸಂಶೋಧನೆಯಿಂದ ನಿವಾರಿಸಲು ಪ್ರಯತ್ನಿಸುವ ಸಂಶೋಧಕನು ಮಾತ್ರ ಪರಿಸರಕ್ಕೆ ಪ್ರಸ್ತುತನಾಗುತ್ತಾನೆ. ಇಲ್ಲದಿದ್ದರೆ ಕೇವಲ ಪುಸ್ತಕದ ಪಂಡಿತನಾಗಿ ಉಳಿಯುತ್ತಾನೆ. ಇತ್ತೀಚೆಗೆ ಕನ್ನಡದಲ್ಲಿ ಸಂಶೋಧನೆ ಪುಸ್ತಕದ ಪಾಂಡಿತ್ಯದಿಂದ ಪರಿಸರದ ವಿಮರ್ಶೆಯತ್ತ ಹೊರಳುತ್ತಲಿರುವುದು, ಕೇವಲ ವಿದ್ವಾಂಸರ ವಾದವಾಗಿ ಉಳಿಯದೆ ಸಾಮಾಜಿಕ ಸಂವಾದವಾಗಿಯೂ ಬೆಳೆಯುತ್ತಲಿರುವುದು ಆರೋಗ್ಯ ಕರ ಬೆಳವಣಿಗೆಯಾಗಿದೆ.

ಸಾಹಿತ್ಯದಲ್ಲಿಯಂತೆ ಸಂಶೋಧನೆಯಲ್ಲಿಯೂ ಕಾಲಕಾಲಕ್ಕೆ ಹೊಸ ಹೊಸ ಒಲವುಗಳು ಕಾಣಿಸಿಕೊಳ್ಳುವುದು ಸಹಜ. ಕನ್ನಡ ಸಂಶೋಧನೆಯೆನ್ನುವುದು ನವೋದಯ ಕಾಲದಲ್ಲಿ ಅಂಕುರಿಸಿದ ಜ್ಞಾನಶಿಸ್ತು. ರಾಷ್ಟ್ರೀಯ ಆಂದೋಲನದ ಆ ಸಂದರ್ಭದಲ್ಲಿ ಪರಂಪರೆಯನ್ನು ವೈಭವೀಕರಿಸುವುದು ಮತ್ತು ಲಿಖಿತ ಸಾಮಗ್ರಿಗೆ ಮಾತ್ರ ಒತ್ತು ಕೊಡುವುದು ಮುಖ್ಯ ವಾಗಿದ್ದವು. ಮೇಲಾಗಿ ಈ ಕ್ಷೇತ್ರದಲ್ಲಿ ಅಧಿಕ ಸಂಖ್ಯೆಯಲ್ಲಿದ್ದ ಬ್ರಾಹ್ಮಣರ ವಿದ್ವಾಂಸರು ಅಂದು ಸಹವಾಗಿಯೇ ವೈದಿಕ ದೃಷ್ಟಿಕೋನದಿಂದ ಇತಿಹಾಸ ಬರೆದರು. ಇಂದು ವೈಭವೀ ಕರಣಕ್ಕೆ ಬದಲು ಸಾಮಾಜಿಕ ನ್ಯಾಯವನ್ನು ಹುಡುಕುವ, ಲಿಖಿತದಂತೆ ಮೌಖಿಕ ಸಾಮಗ್ರಿ ಯನ್ನೂ ಬಳಸುವ ಪ್ರವೃತ್ತಿ ಬೆಳೆದಿದೆ. ಬ್ರಾಹ್ಮಣೇತರ ವಿದ್ವಾಂಸರೂ ಈ ಕ್ಷೇತ್ರವನ್ನು ಪ್ರವೇಶಿಸಿದ್ದಾರೆ. ಹೀಗಾಗಿ ಈವರೆಗಿನ ಸಂಶೋಧನೆಯ ಮರುಪರಿಶೀಲನೆ ಇಂದು ನಡೆಯ ಬೇಕಾಗಿದೆ, ನಡೆದಿದೆ.

ಆಕರಗಳನ್ನು ಬಳಸಿಕೊಂಡು ವಿಶ್ಲೇಷಣಾತ್ಮಕ ಸಂಶೋಧನೆಯನ್ನೋ, ವ್ಯಾಖ್ಯಾನಾತ್ಮಕ ಸಂಶೋಧನೆಯನ್ನೋ ಕೈಕೊಳ್ಳುವ ಸಂಶೋಧಕ ಕೆಲವೊಮ್ಮೆ ವಿದ್ವಾಂಸರ ಪ್ರತಿಕ್ರಿಯೆ ಇಲ್ಲವೆ ಸಮಾಜದ ಪ್ರತಿಭಟನೆ ಎದುರಿಸಬೇಕಾಗುತ್ತದೆ. ಏಕೆಂದರೆ ಸುಳ್ಳು ಇತಿಹಾಸವನ್ನು ಮುಂದು ಮಾಡಿಕೊಂಡು ವರ್ತಮಾನವನ್ನು ಶೋಷಿಸುವವರಿಗೆ ಸಂಶೋಧಕ ಮಂಡಿಸುವ ನಿಜ ಇತಿಹಾಸದಿಂದ ಕಿರಿಕಿರಿಯಾಗಿ, ಅವರು ಪ್ರತಿಭಟನೆಯ ದಾರಿ ಹಿಡಿಯುತ್ತಾರೆ. ಅಂಥ ಸಂದರ್ಭದಲ್ಲಿ ಸಂಶೋಧನೆಯು ಸಾಮಾಜಿಕ ಹೋರಾಟವಾಗಿ ಪರಿಣಮಿಸುತ್ತದೆ. ಈ ಬಗೆಯ ಪಂಡಿತರ ಪ್ರತಿಕ್ರಿಯೆ, ಸಮಾಜದ ಪ್ರತಿಭಟನೆಗಳನ್ನು ಎದುರಿಸಿದ ಕಹಿ ಅನುಭವ ನನ್ನದಾಗಿದೆ.

ಸಾಮಾನ್ಯವಾಗಿ ಸಂಶೋಧಕರು ಇನ್ನೊಬ್ಬರು ಪ್ರಕಟಿಸಿದ ಆಕರಗಳನ್ನು ಬಳಸಿಕೊಂಡು ಸಂಶೋಧನೆಯನ್ನು ಪೂರೈಸುತ್ತಾರೆ. ಹೀಗೆ ಮಾಡುವುದರೊಂದಿಗೆ ನಾನು ಹೆಚ್ಚಿನದಾಗಿ ಆಕರಗಳ ಶೋಧ – ಪ್ರಕಟನ ಕಾರ್ಯವನ್ನೂ ಮಾಡಿದ್ದೇನೆ. ಇವುಗಳಲ್ಲಿ ಪ್ರಾಚೀನ – ಆಧುನಿಕ ಹಸ್ತಪ್ರತಿಗಳ ಶೋಧ – ಸಂಪಾದನೆ – ಪ್ರಕಟನೆ ಮುಖ್ಯವಾದುವು. ಪ್ರಾಚೀನ ಹಸ್ತಪ್ರತಿಗಳನ್ನೇ ಕುರಿತು ಹೇಳುವುದಾದರೆ ಕರ್ನಾಟಕದಲ್ಲಿ ಈವರೆಗೆ ಸಂಗ್ರಹವಾಗಿರುವ ಸುಮಾರು ೨೫ ಸಾವಿರ ಕಟ್ಟುಗಳಲ್ಲಿ ಹಂಪಿ, ಧಾರವಾಡ ವಿಶ್ವವಿದ್ಯಾಲಯಗಳು ಸೇರಿ ಸುಮಾರು ೫ ಸಾವಿರ ಕಟ್ಟುಗಳ ಸಂಗ್ರಹ ನನ್ನ ಪ್ರತ್ಯಕ್ಷ – ಪರೋಕ್ಷ ಪ್ರಯತ್ನದ ಫಲವೆನಿಸಿದೆ. ಇದಲ್ಲದೆ ಸಮಗ್ರ ವಚನಸಾಹಿತ್ಯ, ಸಮಗ್ರ ಹಳಕಟ್ಟಿ ಸಾಹಿತ್ಯ ಪ್ರಕಟನ ಯೋಜನೆಗಳು ನನ್ನ ಪ್ರಧಾನ ಸಂಪಾದಕತ್ವದಲ್ಲಿ ಪೂರ್ಣಗೊಂಡಿವೆ. ಸಮಗ್ರ ಕೀರ್ತಿನ ಸಾಹಿತ್ಯ, ಸಮಗ್ರ ತೋಂಟದಾರ್ಯ ಸಾಹಿತ್ಯ ಪ್ರಕಟನ ಯೋಜನೆಗಳ ರೂವಾರಿ – ಯೋಜಕನಾಗಿದ್ದೇನೆ. ಹೆಚ್ಚಿನದಾಗಿ ಅನೇಕ ಹಸ್ತಪ್ರತಿ ಸೂಚಿಗಳೂ ನನ್ನ ನೇತೃತ್ವದಲ್ಲಿ ಬೆಳಕು ಕಂಡಿವೆ.

ಸಾಹಿತ್ಯದ ವಿದ್ಯಾರ್ಥಿಯಾಗಿರುವ ನನಗೆ, ಇತಿಹಾಸದ ಬಗೆಗೂ ವಿಶೇಷ ಒಲವು. ಆದುದರಿಂದ ಪ್ರಾಚೀನ ಇತಿಹಾಸ ಕೃತಿಗಳಾದ ಇಮ್ಮಡಿ ಚಿಕ್ಕಭೂಪಾಲನ ಸಾಂಗತ್ಯ, ನಿಂಬ ಸಾಮಂತ ಚರಿತೆ, ಸಿದ್ಧಮಂಕ ಚರಿತೆ, ತಗರ ಪವಾಡ, ಸಿರುಮಭೂಪಾಲನನ್ನು ಕುರಿತು ೩ ಕೃತಿಗಳು, ಕುಮಾರರಾಮನನ್ನು ಕುರಿತ ೪ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ್ದೇನೆ. ದಾಖಲೆಗೆ ಸಂಬಂಧಿಸಿದಂತೆ ‘ಕರ್ನಾಟಕ ಕೈಫಿಯತ್ತುಗಳು’ ನನ್ನ ವಿಶೇಷ ಪ್ರಕಟನೆಯೆನಿಸಿದೆ. ವಿಜಾಪುರ ಜಿಲ್ಲೆ, ಧಾರವಾಡ ಜಿಲ್ಲೆಗಳ ಶಾಸನಸೂಚಿ, ಧಾರವಾಡ ತಾಲೂಕಿನ ಶಾಸನಗಳು ನನ್ನ ಶ್ರಮದಲ್ಲಿ ಮೂಡಿಬಂದಿವೆ. ಒಟ್ಟಾರೆ, ಸಾಹಿತ್ಯ – ಇತಿಹಾಸ ಕ್ಷೇತ್ರಗಳಿಗೆ ಸಂಬಂಧಿಸಿದ ಆಕರಗಳ ಶೋಧ – ಪ್ರಕಟನ ಕೆಲಸ ನನ್ನ ಸಮಕಾಲೀನ ಸಂಶೋಧಕರಿಗಿಂತ ಒಂದಿಷ್ಟು ಅಧಿಕ ಪ್ರಮಾಣದಲ್ಲಿ ನನ್ನಿಂದ ಜರುಗಿದೆಯೆಂದೇ ಹೇಳಬೇಕು.

ನಮ್ಮ ಸಂಶೋಧಕರು ಆಕರಗಳನ್ನು ಬಳಸಿಕೊಂಡು ವಿಶ್ಲೇಷಣಾತ್ಮಕ ಸಂಶೋಧನೆಯ ಮೂಲಕ ಚರಿತ್ರೆಯನ್ನು ಸ್ಪಷ್ಟಪಡಿಸಿದುದೇ ಹೆಚ್ಚು. ಇದಕ್ಕೆ ಕಾರಣ, ನಮ್ಮ ಪೂರ್ವಜರು ಚರಿತ್ರೆ ಬರೆಯಲಿಲ್ಲವಾಗಿ ಪ್ರಾಚೀನ ಕೆಲವು ಮುಖ್ಯ ಘಟನೆಗಳು ಕಳೆದು ಹೋಗಿದ್ದವು. ಕೆಲವು ಹಿಂದುಮುಂದಾಗಿದ್ದವು. ಹೀಗಾಗಿ ಸಹಜವಾಗಿಯೇ ನಮ್ಮ ಓರಿಯಂಟಾಲಿಷ್ಟರು ಇವುಗಳನ್ನು ಶೋಧಿಸುವ, ಜೋಡಿಸುವ ಕೆಲಸಕ್ಕೆ ಆದ್ಯ ಗಮನ ಕೊಡುತ್ತ ಬಂದರು. ಈ ದಿಸೆಯಲ್ಲಿ ನಾನೂ ದುಡಿದು, ಕಳೆದುಹೋದ ಘಟನೆ, ಆಚರಣೆಗಳನ್ನು ಸ್ಪಷ್ಟಪಡಿಸುವ ಕೆಲಸ ಮಾಡಿದ್ದೇನೆ. ಶಾಸನಗಳಲ್ಲಿ ಶಿವಶರಣರು, ಸಮಾಧಿ ಬಲಿದಾನ ವೀರಮರಣ ಸ್ಮಾರಕ ಗಳು, ಮಹಾರಾಷ್ಟ್ರದ ಕನ್ನಡ ಶಾಸನಗಳು ಈ ಕ್ಷೇತ್ರದ ನನ್ನ ಮಹತ್ವದ ಕೃತಿಗಳೆನಿಸಿವೆ.

ನನ್ನ ಸಂಶೋಧನ ಕೃಷಿಯನ್ನು ಗ್ರಂಥ ಮತ್ತು ಪ್ರಬಂಧಗಳೆಂದು ವರ್ಗೀಕರಿಸಬಹು ದಾಗಿದ್ದು, ಗ್ರಂಥಗಳನ್ನು ಸಂಪಾದನ ಸಾಹಿತ್ಯ, ಸಂಶೋಧನ ಸಾಹಿತ್ಯ, ಶಾಸ್ತ್ರ ಸಾಹಿತ್ಯವೆಂದು ವಿಂಗಡಿಸಬಹುದಾಗಿದೆ. ಸಂಪಾದನ ಸಾಹಿತ್ಯದಲ್ಲಿ ‘ಹರಿಹರನ ರಗಳೆ’ಗಳಂಥ ಸಾಹಿತ್ಯ ಕೃತಿಗಳೂ, ‘ಕಿತ್ತೂರು ಸಂಸ್ಥಾನ ಸಾಹಿತ್ಯ’ದಂಥ ಚಾರಿತ್ರಿಕ ಕೃತಿಗಳೂ, ‘ಬಸವಣ್ಣನವರ ಟೀಕಿನ ವಚನ’ಗಳಂಥ ವಚನ ಕೃತಿಗಳೂ, ‘ಕರ್ನಾಟಕದ ಕೈಫಿಯತ್ತು’ಗಳಂಥ ದಾಖಲು ಸಾಹಿತ್ಯ ಕೃತಿಗಳೂ, ‘ಅರಟಾಳ ರುದ್ರಗೌಡರ ಚರಿತ್ರೆ’ಯಂಥ ಜೀವನ ಚರಿತ್ರೆಗಳೂ, ‘ರಾಷ್ಟ್ರಧರ್ಮದ್ರಷ್ಟಾರ ಹರ್ಡೇಕರ ಮಂಜಪ್ಪ ಸಂಪುಟ’ದಂಥ ಸಂಕಲನ ಗ್ರಂಥಗಳೂ, ‘ಸಾರಂಗಶ್ರೀ’ಯಂಥ ವಿಚಾರಸಂಕಿರಣ ಸಂಪುಟಗಳೂ ಮುಖ್ಯವೆನಿಸಿವೆ. ಸಂಶೋಧನ ಗ್ರಂಥಗಳಲ್ಲಿ ‘ಕವಿರಾಜಮಾರ್ಗ ಪರಿಸರದ ಕನ್ನಡ ಸಾಹಿತ್ಯ’ದಂಥ ಕೃತಿಗಳು ಸಮಾವೇಶ ಗೊಳ್ಳುತ್ತವೆ. ಶಾಸ್ತ್ರ ಸಾಹಿತ್ಯದಲ್ಲಿ ‘ಹಸ್ತಪ್ರತಿಶಾಸ್ತ್ರ’, ‘ಗ್ರಂಥಸಂಪಾದನಶಾಸ್ತ್ರ’, ‘ಸಂಶೋಧನಶಾಸ್ತ್ರ’, ‘ನಾಮವಿಜ್ಞಾನ’ ಕೃತಿಗಳನ್ನು ಹೆಸರಿಸಬಹುದಾಗಿದೆ.

ಗ್ರಂಥಗಳಿಗಿಂತ ಪ್ರಬಂಧ ರಚನೆ ನನಗೆ ತುಂಬ ಇಷ್ಟ. ಸಣ್ಣಕೀಲಿಗಳಂತಿರುವ ಇವು ದೊಡ್ಡ ಬಾಗಿಲನ್ನು ತೆರೆಯುತ್ತಿರುವುದರಿಂದ, ಈವರೆಗೆ ನಾನು ಸುಮಾರು ೪೦೦ ಪ್ರಬಂಧಗಳನ್ನು ಬರೆದಿದ್ದು, ಅವು ‘ಮಾರ್ಗ’ ಹೆಸರಿನ ನಾಲ್ಕು ಸಂಪುಟಗಳಲ್ಲಿ ಪ್ರಕಟವಾಗಿವೆ. ನನ್ನನ್ನು ಸಂಶೋದನಕ್ಷೇತ್ರದಲ್ಲಿ ಗಟ್ಟಿಯಾಗಿ ನಿಲ್ಲಿಸಿದ ಇವುಗಳಲ್ಲಿ ೨ನೆಯ ಸಂಪುಟಕ್ಕೆ ರಾಜ್ಯಸಾಹಿತ್ಯ ಅಕಾದಮಿಯ ಪ್ರಶಸ್ತಿ ಪ್ರಾಪ್ತವಾಗಿದ್ದರೆ, ಈಗ ೪ನೆಯ ಸಂಪುಟಕ್ಕೆ ಕೇಂದ್ರ ಸಾಹಿತ್ಯ ಅಕಾದಮಿಯ ಪ್ರಶಸ್ತಿ ಲಭಿಸಿದೆ.

ಕನ್ನಡ ಸಂಶೋಧನ ಕ್ಷೇತ್ರದಲ್ಲಿ ಮೊದಮೊದಲು ಧಾರವಾಡದ ಸಾಂಸ್ಕೃತಿಕ ಮಾದರಿ, ಮೈಸೂರಿನ ಚಾರಿತ್ರಿಕ ಮಾದರಿಯೆಂಬ ಎರಡು ಕವಲುಗಳು ಕಾಣಿಸಿಕೊಂಡವು. ಈಗ ಎರಡೂ ಮಾದರಿಗಳ ಎರಡೂ ಪ್ರದೇಶಗಳಲ್ಲಿ ಪ್ರಚಾರಕ್ಕೆ ಬರುತ್ತಲಿವೆ. ಪ್ರಸ್ತುತ ‘ಮಾರ್ಗ – ೪’ರಲ್ಲಿ ಈ ಎರಡೂ ಮಾದರಿಯ ಪ್ರಬಂಧಗಳಿವೆ. ಸಂಶೋಧನೆ ಕೇವಲ ಗತಕಾಲಕ್ಕೆ ಸೀಮಿತವಾಗದೆ ವರ್ತಮಾನವನ್ನೂ ಪ್ರಭಾವಿಸಬೇಕೆಂಬ ನನ್ನ ಇತ್ತೀಚಿನ ತಹತಹಕ್ಕೆ ಅನುಗುಣವಾಗಿ ಇಲ್ಲಿ ಅಂಥ ಬಹಳಷ್ಟು ಲೇಖನಗಳು ಎಡೆಪಡೆದಿವೆ. ಉಪೇಕ್ಷಿತ ವಿಷಯ ಗಳಿಗೆ ಇಲ್ಲಿ ಅವಕಾಶ ಮಾಡಿಕೊಡಲಾಗಿದೆ. ಪಠ್ಯಕೇಂದ್ರಿತವಾಗುತ್ತಲೇ ಪರಿಸರ ಕೇಂದ್ರಿತ ವಾಗುವ ಮೂಲಕ ಇಲ್ಲಿಯ ಬಹಳಷ್ಟು ಲೇಖನಗಳು ಅಂತರಶಿಸ್ತೀಯ ಆಯಾಮವನ್ನೊಳ ಗೊಂಡಿವೆ. ಹೊಸ ಸಂಶೋಧದಷ್ಟೇ ಹಳೆಯ ಶೋಧಗಳ ಮರುಪರಿಶೀಲನೆಯೂ ಅವಶ್ಯ ವೆಂಬ ಭಾವನೆಯಿಂದ ಬರೆದ ಲೇಖನಗಳೂ ಇಲ್ಲಿವೆ. ಈ ಲಕ್ಷಣಗಳಿಂದಾಗಿ ಪ್ರಸ್ತುತ ಕೃತಿ ನನ್ನ ಮೊದಲಿನ ‘ಮಾರ್ಗ’ ಸಂಪುಟಗಳಿಗಿಂತ ಹೆಚ್ಚು ಮಹತ್ವದ್ದೆಂದು ಭಾವಿಸುತ್ತೇನೆ ಮತ್ತು ಇದಕ್ಕೆ ರಾಷ್ಟ್ರೀಯ ಗೌರವ ಪ್ರಾಪ್ತವಾಗಲು ಕಾರಣರಾದ ಎಲ್ಲ ಮಾನ್ಯರಿಗೆ ಕೃತಜ್ಞ ನಾಗಿದ್ದೇನೆ.

ಮಾತು ಮುಗಿಸುವ ಮುನ್ನ ಒಂದೆರಡು ಮಾತು : ೧. ಸ್ಥಿರ ಸಮಾಜದ ಸೃಷ್ಟಿಯಾಗಿರುವ ಹಳೆಯ “ಮಾತೃಭಾಷಾ ಪರಿಕಲ್ಪನೆ” ಇಂದು ಬದಲಾದ ಚರಸಮಾಜದಲ್ಲಿ ಅರ್ಥ ಕಳೆದು ಕೊಳ್ಳತೊಡಗಿರುವುದರಿಂದ ಅದರ ಮರುವ್ಯಾಖ್ಯಾನ ತೀರ ಅಗತ್ಯವೆನಿಸಿದೆ. ಭಾಷಾವಾರ ಪ್ರಾಂತ ರಚನೆಯಿಂದಾಗಿ ಕೆಲವೆಡೆ ಭಾಷಾ ಸಂಘರ್ಷಗಳು ಹುಟ್ಟಿಕೊಂಡಿವೆ. ಜಾಗತೀಕರಣ ದಿಂದಾಗಿ ರಾಜ್ಯ ಭಾಷೆಗಳಿಗೆ ಅಳಿಯುವ ಭಯ ಕಾಡುತ್ತಲಿದೆ. ಭಾಷಿಕವಾದ ಈ ಮೂರು ಸಮಸ್ಯೆಗಳ ನಿವಾರಣೆಗಾಗಿ ಹೊಸ “ರಾಷ್ಟ್ರೀಯ ಭಾಷಾ ನೀತಿ”ಯನ್ನು ಭಾರತದಲ್ಲಿ ಅಸ್ತಿತ್ವಕ್ಕೆ ತರುವುದು ಅವಶ್ಯವಿದೆ. ಈ ಕೆಲಸವನ್ನು ಕೇಂದ್ರ ಸಾಹಿತ್ಯ ಅಕಾಡೆಮಿ ಕೈಕೊಳ್ಳಬೇಕು. ಇದು ಅದರ ಕರ್ತವ್ಯವೂ ಆಗಿದೆ. ೨. ಕೇಂದ್ರ ಸಾಹಿತ್ಯ ಅಕಾದಮಿ ರಾಷ್ಟ್ರದ ಸಾರ್ವಭೌಮ ಸಾಹಿತ್ಯ ಸಂಸ್ಥೆ. ಸರಕಾರ ಅಂಥ ಅಧಿಕಾರವನ್ನು ಈ ಸಂಸ್ಥೆಗೆ ನೀಡಿದೆ. ಹೀಗಾಗಿ ಭಾಷೆ – ಸಾಹಿತ್ಯದ ವಿಷಯವಾಗಿ ಮಹತ್ವದ ನಿರ್ಣಯ ತೆಗೆದುಕೊಳ್ಳುವಾಗ ಸರಕಾರ ಈ ಸಂಸ್ಥೆಯ ಸಲಹೆ ಪಡೆಯುವುದು, ಸಲಹೆ ಪಡೆಯದೆ ನಿರ್ಣಯ ತೆಗೆದುಕೊಂಡರೆ, ಈ ಸಂಸ್ಥೆ ಸರಕಾರವನ್ನು ಪ್ರಶ್ನಿಸುವುದು ಅಪೇಕ್ಷಣೀಯವೆನಿಸುತ್ತದೆ. ಆದರೆ, ಸರಕಾರ ಇತ್ತೀಚೆ ಶಾಸ್ತ್ರ ಭಾಷೆಯ (ಕ್ಲಾಸಿಕಲ್ ಲ್ಯಾಂಗ್ವೆಜ್) ವಿಷಯವಾಗಿ ತೆಗೆದುಕೊಂಡ ಏಕಪಕ್ಷೀಯ ನಿರ್ಣಯ ವನ್ನು ಗಮನಿಸಿದರೆ, ಅದು ಈ ಸಂಸ್ಥೆಯನ್ನು ಉಪೇಕ್ಷಿಸುತ್ತದೆಯೆಂಬ ಸಂದೇಹ ಮೂಡು ತ್ತದೆ. ಇಂಥ ಸಂದರ್ಭದಲ್ಲಿ ಎಚ್ಚರವಹಿಸದಿದ್ದರೆ ಅಕಾದಮಿ ಕ್ರಮೇಣ ಹೆಸರಿಗೆ ಮಾತ್ರ ಸೌರ್ವಭೌಮ ಸಂಸ್ಥೆಯಾಗಬಹುದಾಗಿದೆ. ಹಾಗಾಗದಂತೆ ಈ ಸಂಸ್ಥೆ ಎಚ್ಚರವಹಿಸ ಬೇಕೆಂದೂ, ಇದಕ್ಕೆ ಸರ್ವಭಾಷಾಸರಸ್ವತೀ ಪರಿವಾರದವರಾದ ನಾವೆಲ್ಲ ಬೆಂಬಲವಾಗಿ ನಿಲ್ಲಬೇಕೆಂದೂ ಆಶಿಸುತ್ತೇನೆ.