ನನ್ನ ಸಾಹಿತ್ಯಕ್ಕೂ ನನಗೂ ಇರುವ ಸಂಬಂಧವನ್ನು ವಿವರಿಸುವುದು ಕಷ್ಟ. ಒಬ್ಬ ಮನುಷ್ಯ ಹಾಡು, ಕವಿತೆ, ಕತೆ, ನಾಟಕಗಳನ್ನು ಹೇಗೆ ಬರೆಯಲು ಮನಸ್ಸು ಮಾಡುತ್ತಾನೆ ಮತ್ತು ಆ ಕೆಲಸದಲ್ಲಿ ತೊಡಗುತ್ತಾನೆ. ಈ ಪ್ರೇರಣೆಗಳು ಆತನಿಗೆ ಯಾವ ಗಳಿಗೆಯಲ್ಲಿ ಒದಗುತ್ತವೆ, ಯಾವ ಸಂದರ್ಭಗಳಲ್ಲಿ? ಇದು ಮೂಲಭೂತವಾದ ಪ್ರಶ್ನೆ. ಪ್ರಾಯಶಃ ಪರಿಚಿತ ವಸ್ತುಗಳೂ ಸಂಭೂತಿಗಳು ವಿಚಿತ್ರವಾಗಿಯೂ ಅಸಾಧಾರಣವಾಗಿಯೂ ಆತನಿಗೆ ಯಾವುದೋ ಒಂದು ಮುರ್ಹೂತದಲ್ಲಿ ಕಂಡು ಬಂದು, ಅವುಗಳ ವಿಷಯದಲ್ಲಿ ಆತನು ಪಡುವ ಅನುಭವ ದಿನ ಬಳಕೆಯದಾಗಿ ತೋರಿದಾಗ ಆತ ಕವಿತೆಗೋ ಗೀತೆಗೋ ಆಕರವಾಗ ಬಹುದಾದ ಜಾಗರದಲ್ಲಿದ್ದಾನೆ ಎಂದು ಹೇಳಬಹುದು. ಇದನ್ನು ‘ರಸಜಾಗರ’ ಎಂದು ಕರೆಯೋಣ. ಈ ರಸಜಾಗರದಲ್ಲಿ ಆತನು ಪಡುವ ಲೋಕಾನುಭೂತಿಗಳು, ಅದರಿಂದ ಉಂಟಾಗುವ ವಿಚಾರ ಸರಣಿಗಳು, ತಾತ್ವಿಕ ಚಿಂತನೆಗಳು, ಸೂಕ್ಷ್ಮಸಂವೇದನೆಗಳು ಇವು ಆತ ಅಂದೆಯೋ ಮುಂದೆಯೋ ರಚಿಸುವ ಕಾವ್ಯದ ಮೂಲ ಸಾಮಗ್ರಿಯಾಗುತ್ತವೆ. ತನ್ನ ನಿತ್ಯದ ಜಾಗರಿಕೆಯಲ್ಲಿ ತಾನು ಪಡಕೊಂಡ ಅನುಭವಗಳೆಲ್ಲವೂ ಈ ರಸಜಾಗರದಲ್ಲಿ ಸಂಪಾದಿಸಿ ಮೂಲ ಸಾಮಗ್ರಿಯೊಂದಿಗೆ ಮಿಳಿತವಾಗಿ, ಜೀರ್ಣಹೊಂದಿ ಅದರ ಕಾರಚಕ ಸಾಮಗ್ರಿಯಾಗಿ ಪರಿಣಮಿಸುತ್ತದೆ. ಮಹಾ ಕಲಾಕೃತಿಗಳು ಈ ರೀತಿಯಾಗಿ ವಿಕಸಿಸುತ್ತವೆ. ಹೀಗೆ ಸಾಮಾನ್ಯ ಲೌಕಿಕಾನುಭವವನ್ನು ಉಂಡು ಬೆಳೆದ ರಸಜಾಗರಿಕೆ ಮಹಾನುಭವ ಕಲಾಕೃತಿಗಳಲ್ಲೂ ರೂಪುತಾಳಿದಾಗ ಜಗತ್ತು ಅದನ್ನು ತನ್ನ ಅಮೂಲ್ಯ ಆಧ್ಯಾತ್ಮಿಕ ಸಂಪತ್ತನ್ನಾಗಿ ಕಾಪಾಡಿಕೊಂಡು ಬರುತ್ತದೆ.

ಈ ತೆರದಲ್ಲಿ ಕಲೆಯ ಮೂಲದಲ್ಲಿ ರಸಜಾಗರ ಹೊಂದಿದ ಕವಿಯ, ಕಲೆಗಾರನ ಮನಸ್ಸಿದೆ. ಆ ಜಾಗರದಲ್ಲಿ ಆತನ ಜೀವ ಉಚ್ಛ್ರಾಯ ಸ್ಥಿತಿಯನ್ನು ಮುಟ್ಟಿ ನಿಂತಿದೆ. ಆತನ ಸ್ವಭಾವದಿಂದ ಆಗ ಅದು ಮುಕ್ತವಾಗಿ ಯೋಗಕ್ಷೇಮ ಚಿಂತೆಯಿಂದ ದೂರವಾಗಿದೆ. ಅಲ್ಲಿ ವ್ಯಕ್ತಿ ಬಿಡುವಿನಲ್ಲಿದ್ದಾನೆ, ಸುಖಿಯಾಗಿದ್ದಾನೆ. ಯಾವ ಸೋಗೂ ಆತನಿಗೆ ಆಗ ಇಲ್ಲ. ಇಲ್ಲಿ ಆಗ ಆತ ಶಾಂತ ಮತ್ತು ವಿಶ್ರಾಂತ. ಆತನ ದೃಷ್ಠಿ ವಿಶುದ್ಧ, ಸೂಕ್ಷ್ಮ ಮತ್ತು ಆತನ ಸಂವೇದನೆ ಗಾಢ. ತಾನು ಹುಟ್ಟಿದ ಮನೆ, ತನ್ನನ್ನು ಬಾಳಗೊಡುವ ಸಮಾಜ, ತಾನು ಪ್ರಜೆಯಾಗಿರುವ ರಾಷ್ಟ್ರ, ತನ್ನ ಭಾವನಾಸರಣಿಯನ್ನು ಶ್ರೇಣಿಯನ್ನೂ ನಿಯಂತ್ರಿಸುವ ಹೊರಡುವ ಅಂದಿನ ಕಾಲಸ್ರೋತ ಇವುಗಳ ಹಿಡಿತ ಆತನ ಮೇಲೆ ಸಡಿಲವಾಗುತ್ತದೆ. ಗೀತೆ ಇದನ್ನು ಗುಣಾತೀತನ ಜಾಗರ ಎನ್ನುತ್ತದೆ. ಹೀಗೆ ಅನಿರ್ಬದ್ಧನಾಗಿ ಸುಖಿಯಾಗಿ ಪ್ರಾಣಪೂರ್ಣವಾಗಿ ಪಡುವಾಗಿರುವ ಕರಣಗಳಿಂದಲೂ ಅಂತಃಕರಣದಿಂದಲೂ ಕೂಡಿರುವ ಅನುಭವ ಯಾವಾಗಲೂ ಒಂದೊಂದು ವೇಳೆ ಪ್ರತಿಯೊಬ್ಬನಿಗೂ ಒದಗಿ ಬರುತ್ತದೆ. ಈ ಅನುಭವದಿಂದ ಯಾವನೂ ವಂಚಿತನಾಗಿಲ್ಲ. ಆದರೆ ಇಂಥ ರಸಜಾಗರ ಕ್ಷಣಗಳನ್ನು ಆತ ತನ್ನಿಚ್ಛಾಧೀನವಾಗಿ ನೆನೆದ ವೇಳೆಯಲ್ಲಿ ಒದಗಿ ಬರುವಂತೆ ತನ್ನನ್ನು ತಾನು ಪಳಗಿಸಿಕೊಂಡಿಲ್ಲ. ಹೀಗೆ ಪಳಗಿಸಿಕೊಳ್ಳುವುದೂ ಸಾಮಾನ್ಯರಿಗೆ ದುಃಸ್ಸಾಧ್ಯ. ಇಂಥ ಸುಖ ಗಳಿಗೆಗಳನ್ನು ಮನುಷ್ಯ ಎಷ್ಟೆಷ್ಟು ಪ್ರಮಾಣದಲ್ಲಿ ಪಡೆದುಕೊಂಡು ಅಲ್ಲಿ ವಿಹರಿಸುತ್ತಿರುತ್ತಾನೋ ಅಷ್ಟು ಪ್ರಮಾಣದಲ್ಲಿ ಆತ ಆಧ್ಯಾತ್ಮ ಸಂಪನ್ನ ಕವಿಗಳೂ ಕಲೆಗಾರರೂ ಈ ರಸಜಾಗರ ಕ್ಷಣಗಳನ್ನು ಮಿಕ್ಕವರಿಗಿಂತಲೂ ಹೆಚ್ಚಾಗಿ ಪಡೆಯಬಲ್ಲವರಾಗಿದ್ದು ಅದರಲ್ಲಿ ಹೆಚ್ಚುಕಾಲ ನಿಲ್ಲಬಲ್ಲ ವರೂ ಆಗಿದ್ದಾರೆ. ಈ ವಿಶಿಷ್ಟ ಮನಸ್ಥಿತಿಯನ್ನು ಗುರುವಿನ ಶಿಕ್ಷೆಯಿಂದಲೂ ಅಭ್ಯಾಸ ದಿಂದಲೂ ಪಡೆಯಬಹುದೆನ್ನುವ ಯೋಗಮತವುಂಟು. ಆದರೆ ನನಗನ್ನಿಸುತ್ತದೆ. ಹೀಗೆ ತನ್ನ ಸ್ವಭಾವದಿಂದ ಮುಕ್ತನಾದ ಮೇಲೂ ಜೀವೋತ್ಸಾಹವನ್ನು ಕಳೆದುಕೊಳ್ಳದೆ ಇತೋಪ್ಯಶ ಯವಾಗಿ ಇದನ್ನು ಪಡೆಯಬಲ್ಲ ಸಾಮರ್ಥ್ಯ ಮನುಷ್ಯನಿಗೆ ಗರ್ಭತಃ ಪ್ರಾಪ್ತವಾಗುತ್ತದೆ ಎಂದು ಇಂಥವನಿಗೆ ಮಾತ್ರ ಭಾವವನ್ನೇ ವಿಷಯೀಕರಿಸಿ ತೋರುವ ಅಸಾಧಾರಣ ಶಕ್ತಿ ಒಲಿದು ಬರುತ್ತದೆ. ಇದರ ಲಕ್ಷಣ, ತನ್ನಿಂದ ತಾನು ಬಿಡುಗಡೆ ಹೊಂದುವುದು, ಎಲ್ಲಾ ಕಾಮಾದಿ ಅರಿಷಡ್ವರ್ಗದಿಂದಲೂ ದೂರ ಸರಿದು ನಿಲ್ಲುವುದು, ಎಲ್ಲ ರೂಢಿಗಳನ್ನೂ ಸಂಪ್ರದಾಯಗಳನ್ನೂ ದೂರೀಕರಿಸುವುದು, ಎಂದರೆ ಪ್ರವ್ರಜನ ಅನುಪೇತತ್ವ ಅಪೇತಕೃತ್ಯತ್ವ. ಇವು ಮೂರು ಸರ್ವಹೃದಯಂಗಮತ್ವಕ್ಕೆ ಅತ್ಯವಶ್ಯಕವಾಗಿ ಬೇಕಾಗುವ ಶೀಲಗಳು ಉನ್ನತ ಶ್ರೇಣಿಯನ್ನು ಮುಟ್ಟಲೆಳಸುವ ಕವಿಗೂ ಕಲೆಗಾರನಿಗೂ ತನ್ನ ಕಲಾಕಾವ್ಯ ನಿರ್ಮಾಣ ಕಾಲದಲ್ಲಾದರೂ ಈ ಗುಣಶೀಲಗಳು ಕೂಡಿರಲೇಬೇಕು.

ಅರಿತೋ ಅರಿಯದೆಯೋ ನಾನು ನನ್ನ ಕಾವ್ಯಕರ್ಮದಲ್ಲಿ ಈ ವಿಚಾರ ಸರಣಿಯ ಮಾರ್ಗದಲ್ಲಿ ನಡೆದಿರುವಂತೆ ತೋರುತ್ತದೆ. ಸಾಮಾನ್ಯವಾಗಿ ನನ್ನ ಕವಿತೆಗಳು ನನ್ನ ಭಾವೋದ್ರೇಕವನ್ನು ತೋರಿಸವು; ಅವುಗಳು ನನ್ನ ಸ್ವಂತ ಇಷ್ಟ ಅನಿಷ್ಟಗಳನ್ನು ರಾಗ ದ್ವೇಷಗಳನ್ನು, ನನ್ನ ದ್ಯೇಯ ಹಾಗೂ ಆಕಾಂಕ್ಷೆಗಳನ್ನು ಸಹ ಅಷ್ಟಾಗಿ ರೇಖಿಸವು ತನ್ನಿಂದ ತಾನು ಆದಷ್ಟು ಬಿಡಿಸಿಕೊಂಡು ನಿರ್ಯೋಗ ಕ್ಷೇಮಕಾತರನಾಗಿ ಹಾಯಾಗಿದ್ದ ವೇಳೆಗಳಲ್ಲಿ ನನಗೊದಗಿಬರುವ ಈ ಲೋಕದ ಚಿತ್ತಾನುಭೂತಿಗಳ ಹೊರೆಯನ್ನು ಕಳೆದುಕೊಳ್ಳುವುದ ಕ್ಕಾಗಿಯೇ ನಾನು ಕವಿತಾ ಪ್ರವೃತ್ತನಾಗುವುದು ವಿಚಿತ್ತಾನುಭೂತಿಗಳ ಗಾಢ ಸಂವೇದನೆ ಇವುಗಳನ್ನು ಆದಷ್ಟೂ ಎಚ್ಚರಿಕೆಯಿಂದ ಶಬ್ದಗಳ ಮೂಲಕ ಹೊರಗೆಡಹುವ ಲವಲವಿಕೆ. ಇವು ನನ್ನ ಕಾವ್ಗಳ ಉತ್ಪತ್ತಿಗೆ ಮೂಲಪ್ರೇರಣೆಗಳು ನನ್ನ ಈ ವೈಲಕ್ಷಣ್ಯವನ್ನು ಗುರುತಿಸಿ ನನ್ನನ್ನು ಕಾವ್ಯರಚನೆಗೆ ಕೈ ಹಚ್ಚೆಂದು ಪ್ರೋತ್ಸಾಹಿಸಿದವರು ಪ್ರಾಜ್ಞರಾದ ಗುರುಗಳು, ಸ್ನೇಹಿತರು. ಇಂಥ ಮನೀಷಿಗಳಾದ ಹಿತೈಷಿಗಳನ್ನೂ ಪಡೆದುದು ನನ್ನ ಅದೃಷ್ಟ. ದೈನಂದಿನ ಜೀವನ ಕ್ರಮದಲ್ಲೂ ಪಾಠ್ಯಜ್ಞಾನ ಸಂಪಾದನೆಯಲ್ಲೂ ಅಸಡ್ಡೆಯನ್ನು ತೋರಿ, ಏಕಾಂತ ಪ್ರಿಯನೂ ಅನಾಸಕ್ತನೂ ಆದ ನನ್ನಲ್ಲಿ ಈ ಸೂಕ್ಷ್ಮಮತಿಗಳು ರಸಜಾಗರಾನುಭೂತಿಗಳನ್ನು ತೀವ್ರವಾಗಿ ಪಡುವ ಲಕ್ಷಣವನ್ನು ಹೇಗೋ ಅರಿತುಕೊಂಡರು. ಇದನ್ನೇ ನಾನು ದೈವಕೃಪೆ ಎನ್ನುವುದು. ಯಾವ ದೈವ ತೇಜಸ್ಸನ್ನು ನಿರ್ಮಿಸಿತೋ ಅದು ಕಣ್ಣನ್ನೂ ಕೊಡುತ್ತದೆ. ಕವಿಯ ಕಾವ್ಯಕ್ಕೂ ಹಾಗೇ. ಅದೇ ಪ್ರೇರಕ ಶಕ್ತಿ ಸಹೃದಯರನ್ನೂ ನಿರ್ಮಿಸುತ್ತದೆ. ಅದಕ್ಕೆ ಶರಣು ಹೊಂದಿದರೆ. ನಾವು ಮಿಕ್ಕಾವ ವಿಷಯಕ್ಕೆ ಕಾತರಗೊಳ್ಳಬೇಕು?

ಕವಿತೆಗಳು ನನ್ನಿಂದ ನಿರರ್ಗಳವಾಗಿ ಧುಮ್ಮಿಕ್ಕುವುದಿಲ್ಲ. ಅವುಗಳ ವಸ್ತುಗಳೂ ಸರಳ ವಲ್ಲ. ತನ್ನಿಂದ ಹೊರಹೊರಟು ದಿಕ್ಕು ದಿವಾಣಗಳಿಲ್ಲದ ಆಧ್ಯಾತ್ಮ ಕ್ಷೇತ್ರದಲ್ಲಿ ಏಕಾಂಗಿ ಯಾಗಿ ಪರ್ಯಾಟನಕ್ಕೆ ಹೊರಟ ಸಾಹಸಿಗೆ ಸಾಮಾನ್ಯವಾದ ರೂಢಿಯ ವಸ್ತುಗಳೂ ಸಂಗತಿ ಗಳೂ ಅಪರಿಚಿತಗಳೆಂಬಂತೆ ಅಸಾಮಾನ್ಯವಾಗಿ ಕಾಣಬರುತ್ತದೆ. ತಮ್ಮ ಸರಳತೆಯನ್ನು ಅವು ಕಳೆದುಕೊಂಡು ಬಹು ಸಂಕೀರ್ಣವಾಗುತ್ತದೆ. ದಿನಬಳಕೆಯ ನಿರಲಂಕಾರವಾದ ಮಾತುಗಳಲ್ಲಿ ಈ ವಿಚಿತ್ರ ಸಂಕೀರ್ಣಾನುಭವಗಳನ್ನು ಹೇಳಲು ಅಸಾಧ್ಯ. ಮೇಲುನೋಟಕ್ಕೆ ಸರಳವೆಂದು ತೋರುವ ಒಂದು ನೈಜಕವಿತೆ ನಿಜವಾಗಿ ಅಷ್ಟು ಸರಳವಲ್ಲ ಅದರ ತೋರಿಕೆಯ ಸಾರಳ್ಯಕ್ಕೆ ಮೋಸಹೋಗಬಾರದು. ವಿವರಣೆ, ವ್ಯಾಖ್ಯಾನಗಳಿಂದ ಅದರ ಅರ್ಥವನ್ನು ಸಂಪೂರ್ಣವಾಗಿ ಬಗ್ಗಿಸಿಕೊಡುವುದೂ ಆಗದ ಮಾತು ತರ್ಕಬದ್ಧವಾದ ಒಂದು ವಿಚಾರ ಸರಣಿಯನ್ನು ಅರ್ಥಮಾಡಿಕೊಳ್ಳುವಷ್ಟು ಸುಲಭವಲ್ಲ. ಒಂದು ಪದ್ಯದ ಸ್ವಾರಸ್ಯವನ್ನು ಗ್ರಹಿಸುವುದು. ಒಂದು ಕವಿತೆಯನ್ನು ಗ್ರಹಿಸುವ ಅಂತಃಕರಣದ ಪ್ರಕ್ರಿಯೆಯೇ ಬೇರೆ! ಕಲಾತ್ಮಕವಾದ ವಿಚಾರಕ್ಕೆ ದಕ್ಕುವಂಥದ್ದಲ್ಲ ಕವಿತಾ ರಸಾಗ್ರಸಣದ ವಿಚಾರವನ್ನು ಕುರಿತೇ ನಮ್ಮ ಅಲಂಕಾರಿಕರೆಲ್ಲ ತಮ್ಮ ತಮ್ಮ ಸಿದ್ಧಾಂತಗಳ ನಿಲುವಿನಲ್ಲಿ ಈ ಗ್ರಹಣವನ್ನು ಪರೀಕ್ಷಿಸಿದ್ದಾರೆ. ಕವಿತೆ ಒಂದು ಹುಚ್ಚು ಮನಸ್ಸಿನ ಮಾಟ. ಈ ಹುಚ್ಚಿನ ತುಸು ಅಂಶವಿಲ್ಲದೆ ಸಹೃದಯನೂ ಅದನ್ನು ಅರಿತುಕೊಳ್ಳಲಾರ. ಬೌದ್ದಿಕ ವಿಚಾರದ ಯಜಮಾನಿಕೆಯಿಂದ ತಪ್ಪಿಸಿಕೊಂಡು ಸ್ವಲ್ಪ ಹೊತ್ತು ಹಾಯಾಗಿರೋಣ ಎಂಬುವರಿಗೀಗ ಕವಿತೆ ಹಾಗು ಕಲೆಯ ರಸಾಸ್ವಾದ ಲಭ್ಯವಾದೀತು.

ಕಾವ್ಯವೆನ್ನುವುದು ಅದರ ಶಾಬ್ದೀಕರಣವೂ ಬೇರೆ ಬೇರೆಯೆಂದೇ ನನ್ನ ಭಾವನೆ. ಮೊದಲನೆಯದಕ್ಕೆ ಯಾವ ಕಾಲಿಕ ಇತಿಹಾಸವೂ ಇಲ್ಲ. ಏಕೆಂದರೆ ಅದು ಹಿಂದಿನ ಯಾವುದ ರಿಂದಲೂ ಜನ್ಯವಲ್ಲ. ಸತ್ಯವಿದೆ. ಎಲ್ಲವನ್ನು ಅಯೋನಿಜವೆಂದೇ ಹೇಳಬಹುದು. ಎಲ್ಲವೂ ಆದ್ಯತನಿಯವೇ; ಸಮಕಾಲೀನವೇ ಪ್ರತಿಯೊಂದಕ್ಕೂ ಅದರದರ ವೈಶಿಷ್ಟ್ಯವುಂಟು ಮತ್ತು ಅದು ಅನನ್ಯ, ಅದಕ್ಕೆ ಎರಡನೆಯದಲ್ಲ. ಇದನ್ನು ಪಡೆಯಲು ಯಾವ ನಿಯಮ ವಾಗಲೀ ಸಂಪ್ರದಾಯವಾಗಲಿ ಶಾಸ್ತ್ರವಾಗಲಿ ಇಲ್ಲ. ಅದು ಆತ್ಮಕ್ಷೇತ್ರಕ್ಕೆ ಸಂಬಂಧ ಪಟ್ಟದ್ದು. ಕಾಲದ ಕಟ್ಟನ್ನು ಕಳೆದದ್ದು. ಯಾವ ನಿರ್ಬಂಧವೂ ಇಲ್ಲದ್ದು. ಯಾವ ಉಪಾಧಿಗೂ ಒಳಪಡುವಷ್ಟು ಪ್ರಾಣ ತ್ರಾಣ ಅದಕ್ಕಿದೆ. ಯಾವ ಕವಿಯೂ ಹೀಗೆ ಪಟ್ಟಿರಲಾರ, ಇದು ಇವನಿಗೇ ಮೀಸಲಾದದ್ದು, ಈ ರಸಜಾಗರಕ್ಕೇ ವಿಶಿಷ್ಟವಾದ ಸ್ವತ್ತು ಎನಿಸುವಂತಿದೆ ಅದು. ಸ್ಪೋಪಜ್ಞತೆ ಸತ್ಕವಿತೆಯ ಹೆಚ್ಚಳಿಕೆ. ಹೀಗೆ ಈ ಕಾವ್ಯವಸ್ತುವನ್ನು ಏತತ್‌ಕಾಲದ್ದೇಂದು ನಿರ್ದೇಶಿಸಲರಿದು. ಆದರೆ ಶಾಬ್ದೀಕರಣಕ್ಕೆ ಈ ಮತ್ತು ಮಾತು ಅನ್ವಯಿಸುವುದಿಲ್ಲ. ಅದು ಕಾವ್ಯ ಕಲಾತಂತ್ರಕ್ಕೆ ಸೇರಿದ ವಿಷಯ. ಅದಕ್ಕೊಂದು ಇತಿಹಾಸವುಂಟು, ನಿರ್ದಿಷ್ಟ ಕಾಲವುಂಟು. ಅದನ್ನು ಶಿಕ್ಷಣದ ಮೂಲಕ ಗುರು ಮತ್ತು ಶಿಷ್ಯನಿಗೆ ಹೇಳಿಕೊಡಬಹುದು. ವ್ಯುತ್ಪತ್ತಿ ಮತ್ತು ಅಭ್ಯಾಸಗಳಿಂದ ಕರಗತಮಾಡಿಕೊಳ್ಳಬಹುದು. ಕಾವ್ಯದ ಹುರುಳು ಯಾವಾಗಲೂ ನವ್ಯ, ನವೋದಯ, ಸರ್ವದಾದ್ಯತನೀಯ; ಆದರೆ ಶಾಬ್ಧಿಕ ಕಲೆಗೆ ಬೆಳವಣಿಗೆ ಯುಂಟು. ಅದು ಒಂದು ಸಂಪ್ರದಾಯವನ್ನು ನಿರ್ಮಿಸಿಕೊಳ್ಳುತ್ತದೆ; ಅದಕ್ಕೆ ವೃದ್ದಿ, ಹ್ರಾಸಗಳ, ನಾಶ, ಪುನರುತ್ಥಾನ ಪುನಃ ಸೃಷ್ಟಿಗಳ ಅವಧಿಗಳೂ ಉಂಟು. ಕವಿ ತನ್ನ ಶಬ್ದ ಮಾಧ್ಯಮದ ಕಲಾತಂತ್ರದಲ್ಲಿ ಕೌಶಲ್ಯವನ್ನು ಪಡೆಯಬಲ್ಲ ಹಾಗು ಅದನ್ನು ಕಾವ್ಯ ವಿಷಯಕ್ಕೆ ಒಳ್ಳೆ ಮೈಯಾಗುವಂತೆ ಒಗ್ಗಿಸಿಕೊಳ್ಳಲೂ ಬಲ್ಲ. ಹಾಗೆ ಒಗ್ಗಿಸಿಕೊಳ್ಳುವುದು ಅತ್ಯವಶ್ಯ. ಆದರೆ ಇದೂ ನಿಶ್ಚಯ, ರಸಜಾಗರದಲ್ಲಿ ಪಡೆದುಕೊಂಡ ಕಾವ್ಯವಸ್ತುವನ್ನು ಸಮಗ್ರವಾಗಿ ಶಬ್ದಕಾಯದಲ್ಲಿ ಪ್ರಕಾಶಗೊಳಿಸುವುದೂ ದುಸ್ಸಾಧ್ಯ. ಎಷ್ಟು ಸೃಷ್ಟಿಸಿದರೂ ಜೀವ ಪ್ರಕೃತಿ ಯಾವೊಂದು ತಲೆಮಾರಿನಲ್ಲೂ ಅವಧಿಯಲ್ಲೂ ತಮ್ಮ ಸಂಪೂರ್ಣ ಸತ್ವವನ್ನು ಪ್ರಕಾಶ ಗೊಳಿಸದೆ ಅಂತಮಾತ್ರವನ್ನು ಪ್ರಕಟಿಸುತ್ತದೆಯೋ, ಹಾಗೆ ಎಂಥ ಕುಶಲ ಕವಿಯೂ ತಾನು ಪಟ್ಟ ರಸಾನುಭೂತಿಗಳೆಲ್ಲವನ್ನೂ ತಾನೆಷ್ಟು ಕಾವ್ಯಗಳನ್ನು ಬರೆದರೂ ಸರಿಯೆ, ಬರಿದು ಮಾಡಲಾರ. ವಾಗರ್ಥಗಳಲ್ಲಿ ನವ್ಯರು ಪಡುವ ಅತೃಪ್ತಿ ನನ್ನದೂ ಸಹ. ಪ್ರತಿಭೆಗೂ ಸಂಪೂರ್ಣವಾಗಿ ರಸಜಾಗರಾನುಭೂತಿಗಳು ಸಿಕ್ಕವು. ಅದು ತಾನು ಆ ದಿಸೆಯಲ್ಲಿ ಚಾಚಿದ ತೋಳಿನ ಉದ್ದವನ್ನು ಮಾತ್ರ ತೋರುತ್ತದೆ. ಹೀಗೆ ನನ್ನ ಕಾವ್ಯಕರ್ಮವು ತೃಪ್ತಿ ಅತೃಪ್ತಿಗಳ ತೂಗುಯ್ಯಾಲೆಯಲ್ಲಿ ತೂಗಾಡುತ್ತಾ ಈವರೆಗೆ ಸಾಗಿ ಬಂದಿದೆ. ಆಗಾಗ ಒದಗುವ ರಸಜಾಗರದ ಸ್ವಭಾವಾತಿಗ ಸ್ತರದಲ್ಲಿನ ವಿಹಾರಗಳಲ್ಲಿ ನಾನು ಪಡುವ ವಿಚಿತ್ರ ಅನುಭೂತಿ ಗಳಿಂದ ಸಂತುಷ್ಟಿ. ಆ ಅನುಭವಗಳನ್ನು ಶಬ್ದಗಳಲ್ಲಿ ಇಳಿಸುವ ಕಾವ್ಯತಂತ್ರ ಪರಿಣಿತಿಯಲ್ಲಿ ಅತೃಪ್ತಿ ಒಂದು ಸ್ವಭಾವಾತಿಗ ಸ್ತರದಲ್ಲಿ ಲಭ್ಯವಾದಷ್ಟು; ಮತ್ತೊಂದು ಸ್ವಭಾವಕ್ಕೆ ಒಳಪಟ್ಟ ವ್ಯುತ್ಪತ್ತಿ ಅಭ್ಯಾಸ, ಪರಿಶ್ರಮ ಇವುಗಳಿಗೆ ಸಂಬಂಧಿಸಿದ್ದು ವಾಸುದೇವ ವ್ಯೂಹದಿಂದ ಭಗವದವತಾರಗಳು ಆಗುವಂತೆ, ಕವಿಯ ರಸಜಾಗರಾನುಭವದಿಂದ ಕೃತಿಗಳು ಆತನ ವ್ಯುತ್ಪತ್ತಿ, ಅಭ್ಯಾಸ, ಪರಿಶ್ರಮಗಳು ಪ್ರತಿಭಾಸಹಾಯದಿಂದ ನಿರ್ಮಿಸುವ ಕಾವ್ಯಶರೀರದಲ್ಲಿ ಅವತರಿಸುತ್ತವೆ. ಪ್ರತಿಭೆಯನ್ನು ಭಗವಾನ್ ಮಾಯೆಗೆ ಹೋಲಿಸಬಹುದು. ಕಾವ್ಯಾನು ಭವವನ್ನು ಕಾವ್ಯಕಾಯದಲ್ಲಿ ಲಯಿಸುವಂತೆ ಮಾಡುವ ಶಕ್ತಿ, ಪ್ರತಿಭೆ. ಇದರ ಹಸ್ತಾವಲಂಬನ ದಿಂದ ಕಾವ್ಯವಸ್ತು ಕೃತಿಗಿಳಿದು ತನ್ನ ಭವವನ್ನು ನಿರ್ವಹಿಸುತ್ತದೆ. ಆದರೆ ಕಾವ್ಯವಸ್ತು ಈ ಕಾವ್ಯಶರೀರದಲ್ಲಿ ನಿರ್ವಾಧವಾಗಿರುತ್ತದೆ ಎನ್ನುವ ಹಾಗಿಲ್ಲ. ಎಷ್ಟಾದರೂ ಶರೀರ ಕ್ಲೇಶ ಕಾರಿಯೇ ಆನಂದಪ್ರದವೂ ಹೌದ. ಸಹೃದಯನಿಗೆ ಆಪ್ಯಾಯನಕಾರಿಯಾದುದೂ ಅದೇ. ಆದರೆ ರಸಾನುಭೂತಿಯನ್ನು ಪಡೆದ ಕವಿಯ ದೃಷ್ಟಿಯಿಂದ ಇದು ಅಸಮರ್ಪಕ. ಪ್ರಾಯಶಃ ಮಾತಿಗೆ ಹಿಂಜರಿಯುತ್ತದೆ ಕಾವ್ಯಭಾವ. ಕವಿ ರಸಜಾಗರದಲ್ಲಿರುವಾಗ ವಿಶ್ವ ತನ್ನ ರಹಸ್ಯ ಗಳನ್ನೆಲ್ಲಾ ಭಾವರೂಪದಲ್ಲಿ ಆತನ ಅರಿವಿಗೆ ತುಂಬಿದಂತೆ ತೋರುತ್ತದೆ. ಆದರೆ ಅದನ್ನು ಶಬ್ದದಲ್ಲೋ ಸ್ವರದಲ್ಲೋ ಹಿಡಿದಿಟ್ಟುಕೊಳ್ಳೋಣ ಅನ್ನುವಾಗ ಕೈತಪ್ಪಿಸಿಕೊಂಡು ಜಾರಿ ಹೋಗಿಬಿಡುತ್ತದೆ. ಈ ಅನುಭವವನ್ನು ಕೆಲವು ಸಾಲುಗಳಲ್ಲಿ ಶೇಖರಿಲು ನಾನು ಯತ್ನಿಸಿ ದ್ದೇನೆ

ಎಂತೀ ಎಂತೀ ವಿಶ್ವ ವಿಶಾಲ
ಬಂತೀ ಹೃದಯದ ಚಿಕ್ಕ ಹಕ್ಕೆಗೆ
ಇಂತೇ? ಇಂತೇ?’ ಎನ್ನುತ ಚಿಂತೆ
ನಿಂತೇ ಹರಡಿರೆಮಾತಿನ ಜಾಲ

ಎಂಬ ಹಾಡಿನಲ್ಲಿ (‘ಹೃದಯ ವಿಹಾರಿ’ ಎಂಬ ಕವನ ಸಂಕಲದಿಂದ) ಮತ್ತು ‘ಮಲೆ ದೇಗುಲ’ದಲ್ಲಿ ಬರುವ

ಚೇತನ ಪ್ರತ್ಯೇಕ ಚಿದ್ಭೂತಿಯ ನಲವೆ
ನಿನ್ನ ಹಸಿರಾರುವುದು ನುಡಿತೇರು ಹರಿಯೆ

ಎಂಬ ಸಾಲುಗಳಲ್ಲಿ ಹಾಗೂ

ಮನ ತನ್ನದೆಲ್ಲ ತೆತ್ತು ಪಡೆದನುಭವವ ಫಲವೆ
ವರಿಸಲು ಬಹ ನುಡಿಗೆ ಮೊಗಗೊಡದಿರೆ ತರವೆ

ಎಂಬ ‘ಹೃದಯ ವಿಹಾರಿ’ಯಲ್ಲಿನ ಗೀತದಲ್ಲಿ ಒಂದೊಂದು ವೇಳೆ ನನಗನ್ನಿಸುತ್ತದೆ. ಅನುನಯವಿಲ್ಲದೆ ಪ್ರಣಯಿಗೂ ಮೊಗಗೊಡದ ಮನಸ್ವಿನಿಯಂತಿವೆ ನನ್ನ ಕೃತಿಗಳೆಂದು. ನನ್ನ ಕಾವ್ಯ ಕಲಾತಂತ್ರದಲ್ಲಿ ಬಿಗುವು ಹೆಚ್ಚು ಅವಿಗಳ ‘ರೀತಿ’ ನವ್ಯವಲ್ಲ. ಸಹೃದಯರ ಉತ್ಸಾಹವನ್ನು ತಮ್ಮತ್ತಣಿಂದ ಅತ್ತ ನಯವಾಗಿ ಜಾರಿಸಿಬಿಡುವಂತಿವೆಯೊ ಏನೋ ಅವು. ಆದರೆ ಸೂಕ್ಷ್ಮಸಂವೇದನೆಯುಳ್ಳ ಸಹೃದಯ ರಸಿಕರು ಇವುಗಳಿಗೆ ಇಲ್ಲದಿಲ್ಲ. ಅದು ಅವುಗಳ ಮತ್ತು ನನ್ನ ಸುಯೋಗ. ಅದಕ್ಕೇ ನಾನೆಂದುದು, ಯಾವ ದೈವೀ ಶಕ್ತಿ ಕಾವ್ಯವನ್ನು ಪ್ರೇರಿಸುತ್ತದೋ ಆ ಶಕ್ತಿಯೇ ತಕ್ಕ ಸಹೃದಯರನ್ನೂ ನಿರ್ಮಿಸಿಕೊಡುತ್ತದೆ ಎಂದು.

—-
* ಕಾವ್ಯ ಕುತೂಹಲದಿಂದ ಆರಿಸಿಕೊಳ್ಳಲಾಗಿದೆ. ಪುಟ. ೧೫೬ ರಿಂದ ೧೬೧, ಪ್ರಕಟಣೆ. ಡಿ.ವಿ.ಕೆ. ಮೂರ್ತಿ, ಮೈಸೂರು., ೧೯೮೦