೧೯೪೨ – ೪೩ನೆಯ ಇಸವಿ. ಆಗ ನಾನು ತುಮಕೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿದ್ಯಾರ್ಥಿ. ನನಗೆ ಆಗ ಹದಿನಾರು ವರ್ಷ ವಯಸ್ಸು. ಆ ಹೊತ್ತಿಗಾಗಲೇ ನನ್ನ ಹೈಸ್ಕೂಲಿನ ದಿನಗಳಲ್ಲಿ ಅಂದಿನ ಕಥಾ ಸಾಹಿತ್ಯ, ಮುಖ್ಯವಾಗಿ ಬಿ. ವೆಂಕಟಾಚಾರ್ಯರು ಕನ್ನಡಕ್ಕೆ ತಂದ ಬಂಕಿಂಚಂದ್ರನ ಕಾದಂಬರಿಗಳು, ಗಳಗನಾಥ, ಅ.ನ.ಕೃ., ಶಿವರಾಯ ಕಾರಂತ ಇವರ ಬರಹಗಳು, ಕುವೆಂಪು ಅವರ ಕಾವ್ಯ ಹಾಗೂ ನಾಟಕಗಳು ಸಾಹಿತ್ಯದ ಬಗ್ಗೆ ನನ್ನಲ್ಲಿ ಒಂದು ಬಗೆಯ ಪ್ರೀತಿಯನ್ನೂ, ರುಚಿಯನ್ನೂ, ಆಕರ್ಷಣೆಯನ್ನೂ ಹುಟ್ಟಿಸಿದ್ದವು.

ಅದೊಂದು ದಿನ ಕಾಲೇಜಿನಲ್ಲಿ ಇಂಗ್ಲಿಷ್ ಭಾಷೆಯ ಕವಿತೆಯೊಂದರ ಪಾಠ ನಡೆದಿತ್ತು. ಆ ಕವಿತೆಯ ಹೆಸರು ‘An Elegy written on a country church yard’. ಅದನ್ನು ಬರೆದವನು ಥಾಮಸ್ ಗ್ರೇ ಎಂಬ ಕವಿ. ಸಾಕಷ್ಟು ಸುದೀರ್ಘವಾದ ಈ ಕವಿತೆಯೊಳಗಿನ ಒಂದು ಪದ್ಯವನ್ನು ಅಂದು ಅಧ್ಯಾಪಕರು ತರಗತಿಯಲ್ಲಿ ವ್ಯಾಖ್ಯಾನಿಸುತ್ತಿದ್ದರು. ಆ ಪದ್ಯ ಹೀಗಿದೆ.

Full many a gem of purest ray serene
The dark unfathom’d caves of the ocean bear
Full many a flower is born to blush unseen
And waste its sweetness on the desert air

ಈ ಪದ್ಯದ ಧಾಟಿ. ಭಾಷೆಯ ಬೀಸು, ಅರ್ಥದ ಸೊಗಸು, ಅದ್ಭುತವಾದ ರೀತಿಯಲ್ಲಿ ನನ್ನ ಮನಸ್ಸಿನ ಮೇಲೆ ಗಾಢವಾದ ಪರಿಣಾಮವನ್ನುಂಟುಮಾಡಿತು. ನಿದ್ದೆ ಎಚ್ಚರಗಳಲ್ಲಿ ಈ ಕವಿತೆಯ ವಿಷಾದಭಾವ ನನ್ನನ್ನು ಕಾಡಿತು. ಒಂದೆರಡು ದಿನಗಳ ನಂತರ, ರಾತ್ರಿ ನನ್ನ ವಿದ್ಯಾರ್ಥಿ ನಿಲಯದ ಕೊಠಡಿಯಲ್ಲಿ ಕೂತು ಈ ಪದ್ಯದ ಭಾವವನ್ನು ಕನ್ನಡ ಸಾಹಿತ್ಯ ಸಂದರ್ಭಕ್ಕೆ ಹೊಂದಿಸಿ ಒಂದು ಕವಿತೆಯನ್ನು ಬರೆಯಲು ಪ್ರಾರಂಭಿಸಿದೆ.

ಕಡಲಿನ ಕತ್ತಲು ಗವಿಯಲ್ಲಿ
ಅಡಗಿಹವೆಷ್ಟೋ ರತ್ನಗಳು
ಘೋರಾರಣ್ಯದ ತರುಗಳಲಿ
ತುಂಬಿಹವೆಷ್ಟೋ ಕುಸುಮಗಳು
ಎಸೆಯುವ ರನ್ನವ ಧರಿಸುವರಾರು
ಕಡಲಿನ ಗವಿಯಿಂ ಹೊರತೆಗೆದು ?
ಕುಸುಮದ ಕಂಪನು ಸೇವಿಪರಾರು
ತುಂಬಿದ ಕಾನನ ಮಧ್ಯದಲಿ
ಕನ್ನಡ ಸಾಹಿತ್ಯಾಬ್ಧಿಯಲಿ
ಅಡಗಿಹವೆಷ್ಟೋ ರತ್ನಗಳು
ಕನ್ನಡ ಭಾಷೆಯ ಕಾನನದಿ
ತುಂಬಿವೆ ಕಬ್ಬಿಗ ಕುಸುಮಗಳು

ಹೀಗೆ ಆ ಕವಿತೆ ಮುಕ್ತಾಯವಾಯಿತು. ಇಡೀ ಕವಿತೆ, ಥಾಮಸ್ ಗ್ರೇ ತನ್ನ ಕವಿತೆಯಲ್ಲಿ ಬಳಸಿದ ಶಬ್ದ ಚಿತ್ರಗಳನ್ನೇ ಉಪಯೋಗಿಸಿಕೊಂಡು ಬರೆದ ಅನುಕರಣವಾದರೂ, ಅದರ ಭಾಷೆ, ಬಂಧ ಹಾಗೂ ಕವಿತೆ ಮೂಲಕ್ಕಿಂತ ಬೇರೆಯೆ ಆದ ಅರ್ಥಾಂತರವನ್ನು ಪಡೆದುಕೊಂಡ ಕ್ರಮ ನನ್ನದೇ. ಈ ಕವಿತೆ ಈ ಮೊದಲ ನನ್ನ ಹೈಸ್ಕೂಲಿನ ದಿನಗಳಲ್ಲಿ ನಾನು ಬರೆದ ಕೆಲವು ಹರುಕು – ಮುರುಕು ಕವನಗಳಿಗೆ ಹೋಲಿಸಿದರೆ ಅವಕ್ಕಿಂತ ಚೆನ್ನಾಗಿಯೆ ಇದೆ ಎಂದು ತೋರಿತು. ಮರದಿನ ಕಾಲೇಜಿನಲ್ಲಿ ನನ್ನ ಪ್ರೀತಿಯ ಕನ್ನಡ ಅಧ್ಯಾಪಕರಾದ ಶ್ರೀ ಜಿ.ಪಿ. ರಾಜರತ್ನಂ ಅವರಿಗೆ ಈ ಕವಿತೆಯನ್ನು ತೋರಿಸಿದೆ. ಅದನ್ನೋದಿ ಅವರು ‘ಪರವಾಗಿಲ್ಲ ಕಣಯ್ಯ, ಚೆನ್ನಾಗಿಯೆ ಇದೆಯಲ್ಲ ಪದ್ಯ’ ಎಂದರು. ‘ಇನ್ನೇನೇನು ಬರೆದಿದ್ದೀಯ ತಂದು ತೋರಿಸು’ ಎಂದರು ‘ಈ ಪದ್ಯವನ್ನು ಎಲ್ಲಾದರೂ ಪ್ರಕಟಿಸೋಣ, ಕಾಫಿ ಮಾಡಿ ತಂದು ಕೊಡು’ ಎಂದರು. ಅವರ ಮೆಚ್ಚುಗೆಯ ಮಾತಿನಿಂದ ನನಗೆ ತುಂಬ ಖುಷಿಯಾಯಿತು. ‘ಸಾಹಿತ್ಯ ನಿಧಿ’ ಎಂದು ಹೆಸರು ಕೊಟ್ಟು, ಈ ಪದ್ಯವನ್ನು ಕಾಫಿ ಮಾಡಿ ಅವರ ಕೈಗೆ ಕೊಟ್ಟೆ. ಕೆಲವೇ ತಿಂಗಳಲ್ಲಿ ಅದು ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರು ಬೆಂಗಳೂರಿ ನಿಂದ ಸಂಪಾದಿಸಿ ಪ್ರಕಟಿಸುತ್ತಿದ್ದ ‘ಜೀವನ’ ಮಾಸ ಪತ್ರಿಕೆಯಲ್ಲಿ ಅಚ್ಚಾಗಿ, ಅದರದೊಂದು ಗೌರವ ಪ್ರತಿ ನನ್ನ ಕೈಸೇರಿತು. ಮೊಟ್ಟ ಮೊದಲ ಬಾರಿಗೆ ಪ್ರಕಟವಾದ ಈ ನನ್ನ ಕವಿತೆಯನ್ನು ಕಂಡು ನನಗಾದ ಹಿಗ್ಗನ್ನು ವರ್ಣಿಸಲಾರೆ. ರೀಡಿಂಗ್ ರೂಂನಲ್ಲಿದ್ದ ಆ ಪತ್ರಿಕೆಯೊಳಗಿನ ನನ್ನ ಪದ್ಯವನ್ನೋದಿ ನನ್ನ ಸಹಪಾಠಿಗಳನೇಕರು ಆಶ್ಚರ್ಯಪಟ್ಟರು. ‘ಅದು ಹೇಗಯ್ಯ ಬರೆದೇ’? ಎಂದರು ‘ನನಗೆ ಗೊತ್ತಿಲ್ಲ’ ಎಂದೆ. ‘ನಾನೇಕೆ ಬರೆಯುತ್ತೇನೆ’ ಎನ್ನುವುದಕ್ಕೆ ಬಹುಶಃ ಇದೇ ಸರಿಯಾದ ಉತ್ತರವಿರಬಹುದೇನೋ, ಆದರೆ ಇದು ತೃಪ್ತಿಕರವಾದ ಉತ್ತರ ವಲ್ಲವೆಂದು ನನಗೆ ಗೊತ್ತು. ಆದರೂ ಒಂದು ಕವಿತೆಯ ಹುಟ್ಟಿನ ಹಿಂದೆ ಅನೇಕ ಕಾರಣ ಗಳೂ, ಪ್ರೇರಣೆಗಳೂ, ಪ್ರಭಾವಗಳೂ ಇರುತ್ತವೆ ಎಂಬುದಂತೂ ನಿಜ. ನಿದರ್ಶನಕ್ಕೆ ಹೇಳುವುದಾದರೆ ಈಗ ಪ್ರಸ್ತಾಪಿಸಿದ ‘ಸಾಹಿತ್ಯ ನಿಧಿ’ ಎಂಬ ಈ ನನ್ನ ಕವಿತೆ ನೇರವಾಗಿ ನನ್ನ ಅನುಭವದಿಂದ ಹುಟ್ಟಿದ್ದಲ್ಲ. ಅದರೊಳಗಿನ ಅನುಭವ ದ್ರವ್ಯ ಥಾಮಸ್ ಗ್ರೇ ಕವಿಯದು. ಅಲ್ಲದೆ ಅದು ಅನ್ಯಭಾಷಾ ಪರಂಪರೆಯೊಳಗಿನದು. ಆದರೆ ನಾನು ಬರೆದ ಕವಿತೆಗೆ ಇಂಗ್ಲೀಷ್ ಕವಿತೆಯ ಆ ಸೊಗಸೇ ಮುಖ್ಯವಾದ ಪ್ರೇರಣೆಯಾಯಿತು. ಈ ಪ್ರೇರಣೆಯಿಂದ ನಾನು ಬರೆದ ಕವಿತೆ ಅದರ ಅನುಕರಣದಂತೆ ತೋರಿಸಿದರೂ, ಅದು ನನ್ನಲ್ಲಿ ಹಾಗೂ ನನ್ನ ಭಾಷೆಯ ಸಂದರ್ಭದಲ್ಲಿ ಪಡೆದುಕೊಂಡ ಅರ್ಥಾಂತರ ನನ್ನದೇ. ಅಂದರೆ, ಒಂದು ಭಾಷೆ ಹಾಗೂ ಸಾಹಿತ್ಯದ ರುಚಿ ಹಾಗೂ ಪರಿಚಯದ ಪೂರ್ವಸಿದ್ಧತೆಯಿದ್ದ ನನ್ನಲ್ಲಿ, ಬೇರೊಂದು ಭಾಷಾ ಸಾಹಿತ್ಯದೊಳಗಿನ ಕವಿತೆಯ ಪ್ರೇರಣೆ, ನಾನೂ ಒಂದು ಕವಿತೆಯನ್ನು ಬರೆಯುವಂತೆ ಮಾಡಿತು. ಅಷ್ಟೆ ಅಲ್ಲ ನಾನೂ ಒಬ್ಬ ಕವಿ ಎನ್ನುವುದನ್ನು ನನತೆ ತೋರಿಸಿಕೊಟ್ಟಿತು. ಆ ಕವಿತೆಗೆ ದೊರೆತ ಮೆಚ್ಚಿಗೆ, ಪ್ರೋತ್ಸಾಹ, ಅದು ಪ್ರಕಟವಾಗು ವುದರ ಮೂಲಕ ಹಲವರ ಕಣ್ಣಿಗೆ ಬಿದ್ದು ಅದರಿಂದ ಬಂದ ಪ್ರಶಂಸೆ ಇತ್ಯಾದಿಗಳೆಲ್ಲ ಹದಿನಾರರ ಹರೆಯದ ನನಗೆ, ಅಂದು ದೊರೆತ ಕಾರಣದಿಂದ ಈ ಕವಿತೆಯೆ ಹಾದಿಯಲ್ಲಿ, ನಾನು ಇಷ್ಟುದೂರ ಮುಂದುವರಿಯಲು ಸಾಧ್ಯವಾಗಿದೆ ಎಂದು ನನ್ನ ತಿಳಿವಳಿಕೆ. ಈ ಕೆಲವು ಮಾತುಗಳ ಮೂಲಕ ‘ನಾನೇಕೆ ಬರೆಯುತ್ತೇನೆ’ ಎನ್ನುವುದಕ್ಕೆ ಕೆಲವು ತರ್ಕಬದ್ಧವಾದ ಕಾರಣಗಳನ್ನು ಕಂಡುಕೊಂಡಂತಾಯಿತು.

ಈಗ ಪ್ರಸ್ತಾಪಿಸಿದ್ದು, ನಲವತ್ತರ ದಶಕದ ನನ್ನ ಕವಿತೆಯ ಮೊದಲ ದಿನಗಳ ಸಂಗತಿಗಳನ್ನು ಐವತ್ತರ ದಶಕದ ಒಂದು ಸಂದರ್ಭ. ಬಹುಶಃ ೧೯೫೨ರ ಕಾಲ ಎಂದು ತೋರುತ್ತದೆ. ನಾನು ಮಹಾರಾಜ ಕಾಲೇಜಿನ ಅಧ್ಯಾಪಕ. ಆ ವೇಳೆಗೆ ನನ್ನ ಮೊದಲ ಕವನ ಸಂಗ್ರಹ ‘ಸಾಮಗಾನ’ ಪ್ರಕಟವಾಗಿತ್ತು. ಮೈಸೂರಿನ ಕೃಷ್ಣಮೂರ್ತಿಪುರದ ಬಾಡಿಗೆ ಮನೆಯ ವಿಸ್ತಾರವಾದ ಹಿತ್ತಲಿನಲ್ಲಿ ಒಂದು ಏಳುಸುತ್ತಿನ ಮಲ್ಲಿಗೆ ಹೂವಿನ ಗಿಡವಿತ್ತು. ಅದರಲ್ಲಿ ಒಂದು ಬೆಳಿಗ್ಗೆ ದುಂಡಗೆ ದಪ್ಪಗೆ ಬೆಳ್ಳಗೆ ದಳತೆರೆದು ಅರಳಿದ ಒಂದೇ ಒಂದು ಹೂವು ಕಾಣಿಸಿಕೊಂಡಿತು. ಆ ಹೂವಿನ ಸೊಗಸು ನನ್ನ ಮನಸ್ಸಿನಲ್ಲಿ ತಂಗಿತು. ನಾನು ಹೋದಲ್ಲಿ, ಬಂದಲ್ಲಿ ಆ ಹೂವಿನ ಸೊಗಸು ಹಾಗೂ ಕಂಪು ನನ್ನನ್ನು ಕಾಡಿತು. ಕಡೆಗೊಂದು ದಿನ

ನೋಡು ಇದೊ ಇಲ್ಲರಳಿ ನಗುತಿದೆ
ಏಳುಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸುರಗಿಡದಿಂ
ದೆಂತು ಮೂಡಿತೊ ಬೆಳ್ಳಗೆ

ಎಂದು ಪ್ರಾರಂಭವಾಗುವ ಕವಿತೆಯೊಂದು ಹುಟ್ಟಿಕೊಂಡಿತು. ಬರೆದಾದ ಮೇಲೆ ಏನೋ ಒಂದು ಬಗೆಯ ಬಿಡುಗಡೆಯ ನಲವು ಹಾಗೂ ವಿಸ್ಮಯ ನನ್ನ ಪಾಲಿಗೆ ಉಳಿಯಿತು. ಇದೇ ದಿನಗಳಲ್ಲಿ ನಾನು ಕಾಲೇಜಿನಿಂದ ಮನೆಗೆ ಬರುತ್ತಿದ್ದೆ. ನನ್ನ ಮುಂದೆ ಅತ್ತ ಇತ್ತ ಹೊಯ್ದಾಡುವ ಉದ್ದನೆಯ ಹಾಗೂ ಕಪ್ಪಗಿನ ಜಡೆ ನನ್ನನ್ನು ಗಾಢವಾಗಿ ಆಕರ್ಷಿಸಿತು. ಆಕೆ ರಸ್ತೆಯ ಮುಂದಿನ ತಿರುವಿನಲ್ಲಿ ಹಾದು ಕಾಣೆಯಾದಳು. ನಾನು ಮನೆ ತಲುಪುವುದರ ಒಳಗೆ ‘ಲಲನೆಯ ಬೆನ್ನಿನೆಡೆ, ಹಾವಿನೊಲು ಜೋಲ್ವ ಜಡೆ’ ಎಂಬ ಎರಡು ಸಾಲುಗಳು ಮನಸ್ಸಿನಲ್ಲಿ ರೂಪುಗೊಂಡವು. ಮನೆ ತಲುಪಿ, ಕಾಫಿ ಕುಡಿದು, ನನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡು ಬರೆಯಲು ಶುರುಮಾಡಿದೆ. ‘ಜಡೆ’ ಎಂಬ ಹೆಸರಿನಿಂದ ಈಗ ಎಲ್ಲರಿಗೂ ಗೊತ್ತಿರುವ ಇಡೀ ಕವಿತೆ ಲಿಖಿತ ರೂಪವನ್ನು ತಾಳಿತು. ಕವಿತೆಯ ಮೊದಲ ಸಾಲುಗಳೆ, ಇಡೀ ಕವಿತೆಯ ರೂಪವನ್ನು ನಿರ್ಧರಿಸುತ್ತವೆ ಎಂಬ ರಹಸ್ಯವೂ, ಮತ್ತು ಕವಿತೆಯೊಂದು ತತ್‌ಕ್ಷಣದ ಪ್ರತಿಕ್ರಿಯೆಯೆಂಬಂತೆ ಮೇಲುನೋಟಕ್ಕೆ ತೋರಿದರೂ, ಅದು ಆ ಕ್ಷಣದ್ದು ಮಾತ್ರವಲ್ಲ, ಎಂದೆಂದೋ ಪಟ್ಟ ಅನುಭವಗಳೆಲ್ಲ ಸ್ಮೃತಿ ರೂಪದಲ್ಲಿ ಬಂದು ಒತ್ತಡದಂತೆ ವರ್ತಿಸುತ್ತವೆ ಎಂಬ ಸಂಗತಿಯೂ ನನ್ನ ಗಮನಕ್ಕೆ ಬಂದಂತಾಯಿತು. ಮತ್ತೊಂದು ದಿನ, ಒಂದು ಕಾಲಕ್ಕೆ ಚೆಲುವೆಯಾಗಿದ್ದು, ತಾರುಣ್ಯವನ್ನು ದಾಟಿದ ಹೆಣ್ಣೊ ಬ್ಬಳು, ತಾನು ತನ್ನ ವಯಸ್ಸಿಗಿಂತ ಚಿಕ್ಕವಳಾಗಿ ಕಾಣಬೇಕೆಂದು ಮಾಡಿಕೊಂಡ ಅತಿಯಾದ ಪ್ರಸಾಧನಗಳನ್ನು ಕಂಡು ನನಗೆ ಈ ಮನುಷ್ಯನಿಗೆ ಕಾಲವನ್ನು ಕುರಿತ ಭಯ, ಹಾಗೂ ಕಾಲದ ಉಪಹತಿಯಿಂದ ಆತ ತಪ್ಪಿಸಿಕೊಳ್ಳಲು ನಡೆಸುವ ವ್ಯರ್ಥ ಪ್ರಯತ್ನಗಳ ಹಿಂದಿರುವ ವಿಷಾದ ಒಂದು ಚಿಂತನೆಯಾಗಿ ಮನಸನ್ನು ತುಂಬಿಕೊಂಡಿತು. ಈ ಕುರಿತು ನಾನು ಬರೆದ ‘ಭಗ್ನ ಚೆಲುವೆ’ ಎಂಬ ಕವಿತೆಯ ಮುಕ್ತಾಯದ ಪಂಕ್ತಿಗಳು ಹೀಗಿವೆ.

ಭಗ್ನ ಚೆಲುವೆ
ನಿನ್ನನು ಕಂಡು ಮುರುಗಿ ನಿಲುವೆ
ಯುಗ ಯುಗದ ಸಂಸ್ಕೃತಿಯ ನಾಗರಿಕತೆಯ
ಪುನರುಜ್ಜೀವನದ ವ್ಯಥೆಯ ಕಥೆಯನು ನೆನೆದು
ನಿಡುಸುಯ್ಯುವೆ

ಈ ಕವಿತೆಯ ಮೂಲಕ ಪ್ರಾರಂಭವಾದ ‘ಕಾಲ ಮತ್ತು ಮನುಷ್ಯ’ ಇವರ ಸಂಬಂಧವನ್ನು ಕುರಿತ ಚಿಂತನೆ, ಮುಂದೆ ನಾನು ಬರೆದ ‘ಗಡಿಯಾರದಂಗಡಿಲ್ಲಿ’ ‘ಮಬ್ಬಿನಿಂದ ಮಬ್ಬಿಗೆ’ ಎಂಬ ಕೆಲವು ಮುಖ್ಯ ಕವಿತೆಗಳಿಗೆ ಪ್ರೇರಣೆಯಾಯಿತು. ಈ ಕಾಲದ ಕನ್ನಡ ಕಾವ್ಯ ಸಂದರ್ಭದಲ್ಲಿ ‘ಕಾಲ ಮತ್ತು ಮನುಷ್ಯ’ ಇನ್ನೂ ಹಲವು ಕವಿಗಳ ವಸ್ತುವಾಗಿ ನಿರ್ವಹಣೆ ಗೊಂಡಿದೆ ಎನ್ನುವುದನ್ನು ನಮ್ಮ ಓದುಗರು ಗಮನಕ್ಕೆ ತೆಗೆದುಕೊಳ್ಳಬಹುದು. ಅರುವತ್ತರ ದಶಕದಲ್ಲಿ ನಾನು ಬರೆದ ‘ಕನಸಿನಿಂದ ನನಸಿಗೆ’ ಎಂಬ ಕವಿತೆಯೊಂದು, ಕವಿಯಲ್ಲಿ ಕಾವ್ಯ ರೂಪುಗೊಳ್ಳುವ ವಿಸ್ಮಯವನ್ನು ಕುರಿತದ್ದು. ಇದನ್ನು ನಾನು ಬರೆದ ರೀತಿಯೆ ವಿಲಕ್ಷಣ ವಾಗಿದೆ. ೧೯೫೫ನೆಯ ಇಸವಿ ಮೇ ತಿಂಗಳ ರಾತ್ರಿ, ನಾನು ಚಿತ್ರದುರ್ಗದಲ್ಲಿ ಬಂಧು ಗಳೊಬ್ಬರ ಮನೆಯಲ್ಲಿ ಮಲಗಿದ್ದಾಗ ನಾನೊಂದು ಪದ್ಯವನ್ನು ಬರೆದಂತೆ ಕನಸು ಕಂಡೆ. ಆದರೆ ಬೆಳಿಗ್ಗೆ ಎದ್ದು, ಆ ಕವಿತೆಯನ್ನು ಬರೆಹದಲ್ಲಿ ಹಿಡಿದಿಡಲು ಪ್ರಯತ್ನಿಸಿದಾಗ, ಕನಸಿ ನಲ್ಲಿ ಸ್ಪಷ್ಟವಾಗಿ ಕಂಡ ಆ ಇಡೀ ಕವಿತೆ ತಪ್ವಿಸಿಕೊಂಡು, ಆ ಕವಿತೆಯ ಮೊದಲ ಪಂಕ್ತಿ ಯೊಂದನ್ನು ಮಾತ್ರ ಬರೆದಿರಿಸಿಕೊಳ್ಳಲು ಸಾಧ್ಯವಾಯಿತು. ‘ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಳ ನೂಲಿನಲಿ’ ಎಂಬ ಆ ಒಂದು ಪಂಕ್ತಿಯನ್ನೇ ಸಣ್ಣ ಡೈರಿಯಲ್ಲಿ ಗುರುತು ಹಾಕಿಕೊಂಡೆ. ಮುಂದೆ ಎಷ್ಟೇ ಪ್ರಯತ್ನಪಟ್ಟರೂ, ಈ ಪಂಕ್ತಿಯ ಜತೆಗೆ ಕನಸಿನಲ್ಲಿ ನಾನು ಕಂಡ ಉಳಿದ ಪಂಕ್ತಿಗಳು ನೆನಪಿಗೇ ಬರಲಿಲ್ಲ. ಕೆಲವು ವರ್ಷಗಳೇ ಉರುಳಿದವು. ೧೯೬೧ನೇ ಮೇ ತಿಂಗಳು ಒಂದು ದಿನ, ನನ್ನ ಹಳೆಯ ಪುಸ್ತಕಗಳ ನಡುವೆ ಏನನ್ನೋ ಹುಡುಕುತ್ತಿದ್ದಾಗ, ಐದು ವರ್ಷಗಳ ಹಿಂದಿನ ಡೈರಿ ಸಿಕ್ಕಿತು. ಅದನ್ನು ತೆಗೆದು ನೋಡಿದಾಗ ‘ಚಂದ್ರ ಜೇಡ ಬಲೆ ನೇಯುತಿತ್ತು ಬೆಳುದಿಂಗಲ ನೂಲಿನಲಿ’ ಎಂಬ ಪಂಕ್ತಿ ಕಣ್ಣಿಗೆ ಬಿದ್ದಿತು. ಐದು ವರ್ಷಗಳ ಸ್ಫುರಿಸಿತ್ತೆಂಬುದನ್ನು ನೆನಪು ಮಾಡಿಕೊಳ್ಳುತ್ತ ಕೂತೆ, ಅದೇನು ಮೋಡಿಯೋ, ಹಠಾತ್ತನೆ, ಕೇವಲ ಒಂದರ್ಧ ಘಂಟೆಯೊಳಗಾಗಿ, ಈ ಕವಿತೆಯ ಮೊದಲ ಪಂಕ್ತಿ ತನ್ನ ಇತರ ಚರಣಗಳನ್ನು ಬರಮಾಡಿಕೊಂಡು ಪೂರ್ಣರೂಪವನ್ನು ತಾಳಿತು.

ಇದುವರೆಗೆ ಪ್ರಸ್ತಾಪಿಸಿದ ಈ ಕೆಲವು ಸಂಗತಿಗಳನ್ನು ಗಮನಿಸಿದರೆ, ಕವಿತೆ ಎನ್ನುವುದು ಕೆಲವು ವೇಳೆ ಅನ್ಯಸಾಹಿತ್ಯಕ ಪ್ರೇರಣೆಯಿಂದ, ಕೆಲವು ವೇಳೆ ಲೋಕ ಘಟನೆಗಳಿಗೆ ತೋರುವ ತತ್‌ಕ್ಷಣದ ಪ್ರತಿಕ್ರಿಯೆಗಳಿಂದ, ಕೆಲವು ವೇಳೆ ಗಾಢವಾದ ಚಿಂತನೆಯಿಂದ, ಕೆಲವು ವೇಳೆ ಬಹುಕಾಲದ ಪರಿಭಾವನೆಯಿಂದ, ಕೆಲವು ವೇಳೆ ನಮ್ಮ ಎಚ್ಚರದಾಚೆಯ ನಿಗೂಢ ನೆಲೆಗಳಿಂದ ಹುಟ್ಟಿಕೊಳ್ಳುವ ಒಂದು ವಿಸ್ಮಯವಾಗಿದೆ. ಒಟ್ಟಿನಲ್ಲಿ ‘ನಾನೇಕೆ ಬರೆಯುತ್ತೇನೆ’ ಎನ್ನುವು ದಾಗಲೀ, ನಾನು ಹೇಗೆ ಬರೆಯುತ್ತೇನೆ ಎನ್ನುವುದನ್ನಾಗಲೀ ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಆದರೆ ಇಷ್ಟು ಮಾತ್ರ ನಿಜ. ಅದು ಹೇಗೊ ನನ್ನ ಅನುಭವಗಳನ್ನು, ಭಾವನೆಗಳನ್ನು, ಚಿಂತನೆಗಳನ್ನು, ಕವಿತೆಯ ಮಾಧ್ಯಮದಲ್ಲಿ ಅಭಿವ್ಯಕ್ತಪಡಿಸುವ ಸಾಮರ್ಥ್ಯವೊಂದು ನನಗೆ ದತ್ತವಾಗಿದೆ. ಇದರ ಪರಿಣಾಮವಾಗಿ ನನ್ನದೇ ಆದ ಅನುಭವ ವಿಶೇಷವನ್ನು ನನ್ನ ಸುತ್ತಣ ಸಮಾಜದೊಂದಿಗೆ ನಾನು ಹಂಚಿಕೊಳ್ಳಲು ಸಾಧ್ಯವಾಗಿದೆ. ಹೀಗೆ ನನ್ನ ಅನುಭವದೊಂದಿಗೆ ಇತರರೂ ಪಾಲುಗೊಳ್ಳುವಂತಾಗುವುದು ನನಗೆ ಅತ್ಯಂತ ಪ್ರಿಯವಾದ ಸಂಗತಿಯಾಗಿದೆ. ಕಾವ್ಯ ಮೂಲತಃ ಒಂದು ಸಂವಾದ. ಮೊದಲು ಜಗತ್ತಿನೊಂದಿಗೆ; ಅನಂತರ ಸಹೃದಯ ರೊಂದಿಗೆ. ‘ನಾನೇಕೆ ಬರೆಯುತ್ತೇನೆ’ ಎನ್ನುವುದಕ್ಕೆ ನಾನು ನೀಡಿದ ಈ ವಿವರಣೆ ಬಹುಶಃ ಹೆಚ್ಚು ಸಮಂಜಸವಾಗಿದೆ ಎಂದು ತಿಳಿಯುತ್ತೇನೆ.

‘ನಾನೇಕೆ ಬರೆಯುತ್ತೇನೆ’ ಎಂಬುದನ್ನೆ ಕುರಿತ ಕವಿತೆಯೊಂದು ನನಗೆ ನಾನೇ ಹುಡುಕಿಕೊಂಡು ಉತ್ತರವಾಗಿದೆ. ಆ ಕವಿತೆ ಹೀಗಿದೆ :

ನಾನು ಬರೆಯುತ್ತೇನೆ
ಸುಮ್ಮನೆ ಇರಲಾರದ್ದಕ್ಕೆ
ನನ್ನ ವೇದನೆ ಸಂವೇದನೆಗಳನ್ನು
ಕ್ರಿಯೆ ಪ್ರತಿಕ್ರಿಯೆಗಳನ್ನು
ದಾಖಲು ಮಾಡುವುದಕ್ಕೆ
ನಿಂತ ನೀರಾಗದೆ ಮುಂದಕ್ಕೆ
ಹರಿಯುವುದಕ್ಕೆ
ಎಲ್ಲದರ ಜತೆ ಬೆರೆಯುವುದಕ್ಕೆ
ನಾನು ಬರೆಯುತ್ತೇನೆ

ನನ್ನನ್ನು ನಾನು ಕಂಡುಕೊಳ್ಳುವುದಕ್ಕೆ
ಮತ್ತೆ ಕಾಣಿಸುವುದಕ್ಕೆ
ನಿಮ್ಮೊಂದಿಗೆ ಸಂವಾದಿಸುವುದಕ್ಕೆ
ನಾನು ಬರೆಯುತ್ತೇನೆ
ಖುಷಿಗೆ, ನೋವಿಗೆ
ರೊಚ್ಚಿಗೆ ಮತ್ತು ಹುಚ್ಚಿಗೆ
ಅಥವಾ ನಂದಿಸಲಾರದ ಕಿಚ್ಚಿಗೆ