ಇವೊತ್ತಿನ ನನ್ನ ಬದುಕು ಮಾಗಿಯೆನ್ನಿಸುತ್ತಿದೆ. ದಿನಗಳು ಎಲೆ ಕಳೆದುಕೊಂಡು ಅಸಹಾಯಕವಾಗಿ ನಿಂತು ಚಳಿಗೆ ನಡುಗುವ ಗಿಡಗಳಂತೆನ್ನಿಸುತ್ತಿವೆ. ಮುಸ್ಸಂಜೆಯ ಹೊತ್ತಲ್ಲಿ ಒಂದು ಕಡೆ ಎಂದೋ ಪ್ರಖರವಾಗಿದ್ದ ಬಿಸಿಲಿನ ಉಕ್ಕುಕ್ಕಿ ಬರುವ ನೆನಪಾದರೆ, ಇನ್ನೊಂದು ಕಡೆ ಕವಿಯಲಿರುವ ಕತ್ತಲಿನ ಅಸ್ಪಷ್ಟ ಚಿತ್ರ. ನನ್ನ ಕವನದ ಸಾಲುಗಳನ್ನೇ ಬಳಸಿಕೊಂಡು ನಾನು ನನ್ನ ಇವೊತ್ತನ್ನು ಹೇಳಬಹುದೇನೋ.

ಇನ್ನೇನು
ಬೂದು ಕಪ್ಪಾಗಿ ಕಪ್ಪು ಹೆಪ್ಪಾಗುವುದು ಖಾತ್ರಿ
ಎರಗುವುದು ರಾತ್ರಿ
ಹಕ್ಕಿ ಚಂದ್ರ ನಕ್ಷತ್ರಗಳ ಕಬಳಿಸುವ
ಮೋಡಗಳ ರಾತ್ರಿ
ಅಂಗಾತ ಮಲಗಿ ಅಂಗಲಾಚುವ ನೆಲದ
ಬಸಿರ ಬಗೆಯುವ ರಾತ್ರಿ

ಇಂಥ ಹೊತ್ತಲ್ಲಿ ನಾನೇಕೆ ಬರೆಯುತ್ತೇನೆ ಎನ್ನುವ ಪ್ರಶ್ನೆ! ಬುದ್ದಿ ಬಂದಾಗಿನಿಂದಲೂ ಒಂದಲ್ಲ ಒಂದು ತರಹದ ಬರಹವನ್ನು ನಡೆಸಿಕೊಂಡು ಬಂದಿರುವ ನನಗೆ ಈ ಪ್ರಶ್ನೆ ಬರೀ ಬರಹದ ಬಗ್ಗೆ ಕೇಳಿದ ಪ್ರಶ್ನೆಯಲ್ಲ. ನನ್ನ ಬದುಕಿನ ಬಗ್ಗೆ ಕೇಳಿದ ಪ್ರಶ್ನೆಯೇ ಸರಿ ಅಂತನ್ನಿಸಿದರೆ ಆಶ್ಚರ್ಯವಿಲ್ಲ. ಹಾಗಂದುಕೊಂಡೇ ಇವೊತ್ತಿನ ಮಾತುಗಳು ಈಗಿರುವ ರೂಪ ಪಡೆದುಕೊಂಡಿವೆ.

ಮುಸ್ಸಂಜೆಯ ತಂಪು ಹೊತ್ತಲ್ಲಿ ಕಣ್ಣು, ಕಳೆದು ಹೋದ ಹಗಲಿನ ನೆನಪುಗಳಷ್ಟನ್ನೂ ತನ್ನೊಳಗೆ ಗಿಡಿಚಿಕೊಳ್ಳುವ ಪ್ರಯತ್ನ ಮಾಡುವುದು ಅತಿ ಸಹಜವಾದೊಂದು ವ್ಯಾಪಾರ. ನನಗೂ ಈ ಹೊತ್ತಿಗೂ ಇರುವ ಬಿಡಿಸಲಾರದ ನಂಟನ್ನು ಅರ್ಥಮಾಡಿಕೊಳ್ಳುವುದು ಅನಿವಾರ್ಯವಷ್ಟೇ ಅಲ್ಲ, ಅಗತ್ಯ ಕೂಡಾ ಅನ್ನಿಸಿದಾಗ ಅದಲ್ಲದ ಬೇರೊಂದು ಮಾರ್ಗವಿಲ್ಲ ಅನ್ನುವುದು ನನ್ನ ನಂಬಿಕೆಗಳಲ್ಲಿ ಒಂದು. ನೆನ್ನೆಗಳ ಬೆಳಕಲ್ಲಿಯೇ ಇವೊತ್ತಿಗೆ ಅಸ್ತಿತ್ವ. ನಡೆದು ಬಂದ ದಾರಿ ಕಡೆಗೆ ಕಣ್ಣ ಹೊರಳಿಸಬೇಡ ಅನ್ನುವ ಕವಿಯ ಮಾತನ್ನು ನಾನು ನಿರ್ಲಕ್ಷಿಸುವುದಕ್ಕೆ ಬಹುಶಃ ಇನ್ನೊಂದು ವೈಯಕ್ತಿಕವಾದ ಕಾರಣವಿದೆ. ದೈವದಲ್ಲಿ ಪ್ರಶ್ನೆ ಕೇಳದಂತಹ ಪರಿಶುದ್ಧ ನಚ್ಚನ್ನು ಇಟ್ಟುಕೊಂಡಿರುವವರು ಅದೃಷ್ಟವಂತರು. ಚಿಕ್ಕಂದಿನಲ್ಲೇ ನನ್ನ ಬದುಕಿನ ಕೆಲವು ಘಟನೆಗಳು ಮೂಲ ಕಾರಣವಾಗಿ ಇದ್ದಬದ್ದ ನಂಬಿಕೆಯನ್ನು ಕಳಕೊಂಡು ಇವೊತ್ತಿಗೂ ಆ ನಂಬಿಕೆಗಳ ಅಗತ್ಯ ಕಾಣದೇ ಬದುಕುತ್ತಿರುವ ಪ್ರಾಣಿ ನಾನು. ದೈವಶ್ರದ್ಧೆ ಇರುವವರ ನಾಳಿನ ಚಿಂತೆಗೆ ಒಂದು ಕೆಂಪಂಚಿರುತ್ತದೆ. ನಾಳಿನ ನನ್ನ ಚಿಂತೆಗೆ ಇರುವುದು ಕೇವಲ ಕಪ್ಪಂಚು. ಆದ್ದರಿಂದಲೇ ನನ್ನಂಥವನಿಗೆ ಇವೊತ್ತು ಮುಖ್ಯ. ಇವೊತ್ತಿಗೆ ಅಷ್ಟಿಷ್ಟು ಅರ್ಥ ಹಚ್ಚುವ ನೆನ್ನೆಗಳು, ಅವು ತರುವ ನೆನಪುಗಳು ಮುಖ್ಯ. ದೇವರ ಅಸ್ತಿತ್ವದ ಬಗ್ಗೆ ನಾನು ಬರೆದಿರುವ ಸಾಲುಗಳು

ಮನೆ ಖಾಲಿ ಮಾಡಿ ಜಯಮಾನ
ದೇಶಾಂತರ ಹೋಗಿ ಯುಗವಾದರೂ
ನಿಮ್ಮ ನಂಬಿಕೆ ಅಚಲ ಅವನ ಮನೆ ನಂಬರಿಗೆ
ದಿನಕ್ಕೆ ಹತ್ತಾರು ಬಾರಿ ಪೋನು.
ಸ್ವರ್ಗಕ್ಕೆ ಸೋಪಾನ ಕಟ್ಟುವುದಿರಲಿ
ಮೊದಲು, ನೆಲ ಗುಡಿಸಿ ಸಾರಿಸಿ ರಂಗೋಲಿಯಿಟ್ಟು
ಸಂಜೆ ಹಾಯಾಗಿ ಜಗುಲಿಯ ಮೇಲೆ ಕೂತು
ಕಟ್ಟು ಬೀಡಿಯ ಸೇದಿ ಮುಗಿಸೋಣವೆನ್ನುವ ನಾನು
ನಿಮ್ಮಂತೆಯೇ, ಹೇಳಿ, ನಿಮ್ಮಂತೆಯೇ?’

ನನ್ನ ಕಾವ್ಯ ಹೇಳಿಕೇಳಿ Personal ಅನ್ನಬಹುದಾದದ್ದು ಎಂದು ನನಗೆ ಮನವರಿಕೆಯಾಗಿದೆ. ಸುತ್ತಣ ಜಗತ್ತಿಲ್ಲದೇ ನಾನಿಲ್ಲ ಅನ್ನುವುದು ದಿಟವಾದರೂ, ನನ್ನೊಳಗಿನ ನನ್ನನ್ನು ರೂಢಿಸಿರುವುದೇ ನನ್ನ ಸುತ್ತಣ ಲೋಕವಾದರೂ, ನನ್ನ ಕಾವ್ಯದ ವಸ್ತು ನಾನು. ನನ್ನೊಳಗಿನ ಜಗತ್ತು, ಅಲ್ಲಿಯ ನೋವು, ನಲಿವು, ಗೊಂದಲ, ನೆನಪು ಹಾಗೂ ಕನಸು. ಇಂಗ್ಲೀಷ್ ಕವಿ ಡಿಲನ್ ಥಾಮಸ್ ಸಾಯುವ ಮೊದಲು ಹೇಳಿದ ಒಂದು ಮಾತು ನನಗೆ ಪ್ರಿಯವಾದದ್ದು. ತೊಟ್ಟಿಲಿಂದ ಚಟ್ಟದವರೆಗೂ ಕಂಡಿದ್ದಕ್ಕೆ ಸಾಕ್ಷಿಯಾಗುವುದೇ ಕವಿ ಮಾಡಬೇಕಾದ ಕೆಲಸ ವೆನ್ನುವುದೇ ನನ್ನ ಹೇಳಿದ ಮಾತು. ನಾನು ನನ್ನ ಕಾವ್ಯದಲ್ಲಿ ಮಾಡುತ್ತ ಬಂದಿರುವುದು ಪ್ರಧಾನವಾಗಿ ಇದೇ ಅಂತನ್ನಿಸಿದೆ.

ದೈವದಲ್ಲಿ ನಂಬಿಕೆಯನ್ನು ಇಟ್ಟುಕೊಂಡವರು ಅದೃಷ್ಟವಂತರೆಂದೆ. ಅವರ ಜಗತ್ತಲ್ಲಿ ಪ್ರಶ್ನೆಗಳಿಲ್ಲವೆಂದಲ್ಲ. ಎದ್ದ ಪ್ರಶ್ನೆಗಳಿಗೆ ಅವರು ನಂಬಿರುವ ದೈವ, ಕರ್ಮ, ಪುನರ್ಜನ್ಮ ದಂತಹ ಪರಿಕಲ್ಪನೆಗಳ ಆಧಾರದ ಮೇಲೆ ಉತ್ತರ ಸಿಗಬಹುದಾದ ಸಾಧ್ಯತೆ ಇರುವುದೇ ಅವರ ಪ್ರಪಂಚಕ್ಕೂ ನನ್ನ ಪ್ರಪಂಚಕ್ಕೂ ಇರುವ ಬಹುಮುಖ್ಯ ವ್ಯತ್ಯಾಸ. ನನ್ನ ಪ್ರಪಂಚದಲ್ಲಿ ಅನುಮಾನವೇ ಗಾಳಿ. ಆ ಗಾಳಿಯಲ್ಲಿ ನೆಲೆ ತಪ್ಪಿದ ಬೇತಾಳಗಳ ಹಾಗೆ ಒಂದು ಇನ್ನೊಂದಕ್ಕೆ ಢಿಕ್ಕಿ ಹೊಡೆಯುತ್ತ ಅಲೆದಾಡುವ ಪ್ರಶ್ನೆಗಳಿಗೆ ಮಾತಿನ ರೂಪ ಕೊಡುವುದೇ ನನ್ನ ಕಾವ್ಯ ಮಾಡಲೆಳಸುವ ಕೆಲಸ. ಎಂದೇ ನನ್ನ ಕಾವ್ಯ ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಕಾಣ ಬಯಸುವವರಿಗೆ ಕಷ್ಟವೆನ್ನಿಸುತ್ತದೆ ಅನ್ನುವುದು ನನ್ನ ತಿಳಿವಳಿಕೆ ಪ್ರಶ್ನೆಗಳ, ಅನುಮಾನಗಳ ನನ್ನ ಜಗತ್ತಿಗೆ ಬರದೇ ಹೊರಗಿನಿಂದ ಇಣುಕಿನೋಡುವವರಿಗೆ ನಾನು ದಕ್ಕದೇ ಹೋದರೆ ಆಶ್ಚರ್ಯವಿಲ್ಲ.

ನನ್ನ ಇವೊತ್ತಿನ ಈ ಬಗೆಯ ಕಾವ್ಯ ಸುರುವಾದದ್ದಾದರೂ ಹೇಗೆ ಅನ್ನುವುದು ನನ್ನಲ್ಲಿಯೂ ಕುತೂಹಲವನ್ನು ಹುಟ್ಟಿಸಿದಾಗ ಬರೆದ ಕೆಲವು ಸಾಲುಗಳು

ಯಾರೂ ಗೆಲ್ಲದೆ ಯಾರೂ ಸೋಲದೆ ನಿಲ್ಲದ
ಹಾಗೆ ನಡೆದು ಬಂದಿದೆ ಅಘೋಷಿತ ಯುದ್ಧ
ನಾಲ್ಕು ದಶಕದ ಹಿಂದೆ ತುಟಿ ಕಪಾಳ ಗಲ್ಲದ
ಮೇಲೆ ತೆಳ್ಳಗೆ ಕಂಡ ರೋಮ ತುಸು ಕಪ್ಪಾದ
ಅವಸರಕ್ಕೆ ಸುರುವಾದದ್ದು ಅಂದಿನ ಕಹಳೆ
ಕೊಂಬು ತುಪಾಕಿ ಬಾಂಬು ಕಿರಿಕಿರಿಯ ನೆನಪಾಗಿ
ತುರಿಕೆ ಅತಿಯಾದಾಗ ಸಲ್ಲದ ಪೋಸು ಹಳೇ
ನಾಟಕದ ಮಾತುಗಳ ಕವಚದೊಳಗೇ ಹಿಗ್ಗಿ
ಮುನ್ನುಗ್ಗಿ ಅದೃಶ್ಯವಾದ ಎದುರಾಳಿಗಳ
ತಂಡತಂಡವನ್ನೇ ಸೆರೆಹಿಡಿದು ಜೀತಕ್ಕೆ
ಹಚ್ಚುವ ಹುಚ್ಚು. ಒಂದು ಚದುರಡಿಯ ಗೊಡ್ಡು ನೆಲ
ಸಿಕ್ಕಿದರೆ ಸಾಕು. ಕೈಗೆಟುಕಿದಂತೆ ಚಿಕ್ಕೆ

ಒಂದು ಹೆಜ್ಜೆ ಮುಂದೆ ಹೋಗಿ ನನ್ನ ಈಚಿನ ಕಾವ್ಯಕರ್ಮ ಕೇವಲ ಕಿತಾಪತಿಯಾಗಿದೆ ಅಂದಿದ್ದೇನೆ. ಕಿತಾಪತಿ ಅವರಿವರ ಜೊತೆಗಲ್ಲ. ನನ್ನ ಜೊತೆಗೇ.

ಅನುಭವವನ್ನು ಮಾತಲ್ಲಿ ಗಿಡಿಚುವುದಲ್ಲ ಕಾವ್ಯದ ಕೆಲಸ. ಅನುಭವದ Significanceನ್ನು ಕವಿಯ ಅನುಭವ ಪ್ರಪಂಚದ ಸಂದರ್ಭದಲ್ಲಿ ಹುಡುಕುವುದು ಎಂದು ನಂಬಿರುವ ನಾನು ಕಾರಣಾಂತರಗಳಿಂದ ದೇಶವನ್ನು ಬಿಟ್ಟು ಹೋಗಬೇಕಾಯಿತು. ಎರಡು ಅಥವಾ ಮೂರು ವರ್ಷಗಳವರೆಗೆ ಹೋಗಿಬರುತ್ತೇನೆ ಅಂದುಕೊಂಡವನು ಇಪ್ಪತ್ತನಾಲ್ಕು ವರ್ಷಗಳ ವರೆಗೆ ಪರದೇಶವಾಸಿಯಾಗಿರಬೇಕಾಯಿತು. ಇಂಗ್ಲಿಷಿನಲ್ಲಿ ಬರೆಯುವ ಮೋಹ ಆಗ ಈಗ ಕಾಡಿತ್ತಾದರೂ ಕನ್ನಡದಲ್ಲೇ ಬರೆಯುತ್ತ ಹೋದೆ. ಯೂರೋಪಿನ ಅಥವಾ ಆಫ್ರಿಕದ ಅನುಭವಗಳನ್ನು, ಚಿತ್ರಗಳನ್ನು ಕನ್ನಡದಲ್ಲಿ ಹಿಡಿಯುವ ಪ್ರಯತ್ನಕ್ಕೆ ಎಷ್ಟರಮಟ್ಟಿನ ಯಶಸ್ಸು ದೊರಕಬಹುದು ಅನ್ನುವ ಸಹಜ ಕುತೂಹಲದ ಜೊತೆಗೆ ಕಲಿತ ಭಾಷೆ ಇಂಗ್ಲಿಶಿನಲ್ಲಲ್ಲ, ಮೊಲೆ ಕೊಟ್ಟ ಕನ್ನಡದಲ್ಲಿ ನನ್ನ ವಿಶಿಷ್ಟ ಅನುಭವಗಳನ್ನು ಅರ್ಥೈಸುವುದು Personal ಅನ್ನುವಂತಹ ಕಾವ್ಯ ರಚಿಸುವ ನನಗೆ ಸಾಧ್ಯ ಅನ್ನಿಸಿದ್ದೂ ನೆನಪಿದೆ.

ಆಗ ಬರೆದ ಜಿಪ್ಸಿ ಅನ್ನುವ ಕವನದ ಕೆಲವು ಸಾಲುಗಳು :

ನೆನಪು ಹುಳಿ ಹಿಂಡಿ ಒಡೆದ ಹಗಲಲ್ಲಿ
ಕಲಿತ ಮಾತೋ ಸಂಜೆ ಪಬ್ಬಿಗೆ ಸಾಕು,
ಸತ್ತವರ ಜೊತೆ ಸರಸಕ್ಕೆ, ಬೆಳೆದು ಭುಜಕ್ಕೆ
ಬಂದ ಮಕ್ಕಳ ಜೊತೆ ವಿರಸಕ್ಕೆ ಸಾಕು,
ಕನಸು ಕನವರಿಕೆ ಕಾಮಕ್ಕೆ ಬೇಕೇಬೇಕು
ಅರೆಮರೆತ ಜೋಗುಳದ ಮಾತು.’

ಈಗಲೂ ಬರೆಯುತ್ತಿದ್ದೇನೆ. Poetry makes nothing happen ಅನ್ನುವ ಆಡೆನ್ನಿನ ಮಾತು ದಿಟವೆಂದು ಮನವರಿಕೆಯಾದ ಮೇಲೂ, ನನ್ನ ಮನೋಧರ್ಮ ನನ್ನನ್ನು ಎಂದೆಂದಿಗೂ ಕನ್ನಡದ ಸಂಪ್ರದಾಯದಿಂದ ಹೊರಗಿಡುವಂತಹದು ಎಂದು ತಿಳಿದೂ, ಬರೆಯುತ್ತಿದ್ದೇನೆ. ನನ್ನ ಚಿಂತನೆಯ, ನನ್ನ ಅನುಭವಗಳ ಮೊತ್ತ ಬಹುಮಟ್ಟಿಗೆ ಪರಕೀಯ ವೆನ್ನಿಸಿಯೂ ಬರೆಯುತ್ತಿದ್ದೇನೆ. ಆದರೂ ಒಳಹೊಕ್ಕು ಆಸೆ ಭಯಗಳ ಕ್ಯಾಕ್ಟಸಿನ ಕುಡಿ ನೆಟ್ಟು ಫಲಕ್ಕೆ ಕಾಯುವವನಾಗಿ ಬರೆಯುತ್ತಿದ್ದೇನೆ.

ನನ್ನ ದೃಷ್ಟಿಯಲ್ಲಿ ಒಳ್ಳೆಯ ಕವನವೆನ್ನುವುದು ದಿನವಹೀ ಸಂಭವಿಸುವ ಸಾಮಾನ್ಯ ಘಟನೆಯಲ್ಲ. ಅಪರೂಪಕ್ಕೆ ಅವತಾರದ ಹಾಗೆ. ಚಿಪ್ಪಲ್ಲಿ ಮೂಡುವ ಮುತ್ತಿನ ಹಾಗೆ ಕಾಣಿಸಿಕೊಳ್ಳುವಂತಹದು. ಈ ನನ್ನ ಅನ್ನಿಸಿಕೆಗೆ ಸಂಬಂಧಿಸಿದ ಹಾಗೆ ನಾನು ಈಚೆಗೆ ಬರೆದ ಒಂದು ಕವನವನ್ನು ಓದಿ ಈ ಮಾತು ಮುಗಿಸುತ್ತೇನೆ.

ಮಾತಷ್ಟನ್ನು ಕಬಳಿಸಿ ನಿರಂಬಳ ಮಲಗಿದ
ಸಮುದ್ರಮೌನಕ್ಕೆ ದಾಳಿ
ಹೂಡಲೇಬೇಕು ಎದೆ ಚಾಚಿ ತಣ್ಣನೆ ಗಾಳಿ
ಚೀಲಕ್ಕಿಡಿದು ಇರಚೂರಿ ಕಚ್ಚು ಹೊಳೆಹೊಳೆದ
ನೀರಿಗೆ ಬಿದ್ದು ತಳಕ್ಕೆ ತಳಮಳದ ನೆಲಕ್ಕೆ
ಮುಳುಗು ಸಿಂಪಿದಂಡೆಗೆ ನೇರ ಧಾವಿಸಿ ಕಿತ್ತು
ಎತ್ತಿ ನೆಚ್ಚಿ ಇರಿದು ತರಿದ ನೂರಾರು ಚಿಪ್ಪು
ಲೆಕ್ಕಕ್ಕಿರಲಿ ನೀರಿಗೆ ಬಿಸಾಡು. ಯಾವುದೊ
ಒಂದರಲ್ಲಿ ಸಮುದ್ರ ಸೋಸಿ ಕೇವಲ ನೀಲಿ
ಘನಿಸಿದ ಹಾಗೆ, ಅಥವಾ, ರೆಕ್ಕೆ ಸುಟ್ಟ ಚಿಕ್ಕೆ
ತಲೆಮರೆಸಿಕೊಂಡಿಲ್ಲಿ ನೆಲೆಸಿದ ಹಾಗೆ. ಅದೋ,
ಕಣಕ್ಕೆ ಕಣ ಕೂಡಿ ರೂಢಿಸಿದ ಆಣಿಮುತ್ತು.
ಒಂದೊಂದು ಕವನವೂ ಭರವಸೆಯ ವ್ಯವಸಾಯ
ಅಜ್ಞಾತದ ತಳಕ್ಕಿಳಿದು ಬಂದವನ ಭಾಗ್ಯ.’

ನಾನೇಕೆ ಬರೆಯುತ್ತೇನೆ ಎಂಬುದು ನಮಗೀಗ ಅರ್ಥವಾಗಿರಬಹುದು!