ಕೆಲವು ವರ್ಷಗಳ ಹಿಂದೆ ವಿಚಿತ್ರವೆನಿಸಬಹುದಾಗಿದ್ದ ಈ ಪ್ರಶ್ನೆಯಿಂದು ಅಪ್ರಸ್ತುತವೆನಿಸಿದ ಪ್ರಶ್ನೆ. ‘ಕವಿತೆಯೊಳಾಸೆಗೆಯ್ವ ಫಲವಾವುದೊ’ ಎಂದು ತನಗೆ ತಾನೇ ಕೇಳಿಕೊಂಡು, ‘ಪೂಜೆನೆಗೞ, ಲಾಭಮೆಂಬಿವೆ’ ಎಂದು ಉತ್ತರವಿತ್ತುಕೊಂಡು, ‘ಇಂದ್ರಪೂಜೆ, ಭುವನಸ್ತುಮಪ್ಪ ನೆಗೞ, ಮುಕ್ತಿ ಸಂಭವಿಸುವ ಲಾಭ’ ಇವೆಲ್ಲ ಜಿನೇಂದ್ರ ಗುಣಸ್ತುತಿಯಿಂದ ಸಿಕ್ಕವುವೆಂದು ಪಂಪ ತನಗೇ ತಾನೇ ಸಾಂತ್ವನ ನೀಡಿಕೊಂಡಂತೆ ಇಂದಿನ ಬರಹಗಾರ, ನನ್ನಂಥ ಬರಹಗಾರ ನೀಡಿಕೊಳ್ಳುವಂತಿಲ್ಲ. ಯಾಕೆಂದರೆ ಮೂಢ ಭಕ್ತರಿಗೆ ಮಂಕುಬೂದಿಯನ್ನು ಕೊಡುವುದನ್ನು ಕಲಿತ ಬುರುಡೆ ಬಾಬಾಗಳಿಗೂ, ಅಜ್ಞ ಮತದಾರರಿಗೆ ಈಡೇರಿಸಲು ಸಾಧ್ಯವಲ್ಲದ ಸುಳ್ಳು ಆಶ್ವಾಸನಗಳನ್ನು ಕೊಡಬಲ್ಲ ರಾಜಕಾರಣಿಗಳಿಗೂ, ಸ್ವಲ್ಪದರಲ್ಲಿಯೇ ಸ್ವಾರಸ್ಯ ನೀಡುವ ಅವರವರ ಅಭಿರುಚಿಗಳಿಗೆ ತಕ್ಕ ಸ್ವಾರಸ್ಯ ನೀಡುವ ಸಿನಿಮಾ ತಾರೆಗಳಿಗೂ ಸುಲಭವಾಗಿ ದೊರೆಯುವ ಪೂಜೆ, ನೆಗಳ್ತೆ, ಲಾಭಗಳು ಇಂದು ಬರಹಗಾರನೊಬ್ಬನಿಗೆ ಸಿಕ್ಕುವುವೆಂದು ಹೇಳುವುದು ಎಂಟೆರ್ದೆಯ ಮಾತಾದೀತು. ಇದು ಹೋಮರ್, ಷೇಕ್ಸ್‌ಪಿಯರ್, ವ್ಯಾಸ, ವಾಲ್ಮೀಕಿ, ಕಾಳಿದಾಸ, ಪಂಪ, ಕುವೆಂಪು, ಮಾಸ್ತಿ, ಕಾರಂತ, ಬೇಂದ್ರೆಯಂಥವರಿಗೆ ಅನ್ವಯಿಸುವ ತೀರ್ಪಾಗಲಾರದಾದರೂ ಸಾಮೂಹಿಕ ಮಾಧ್ಯಮಗಳು ವಿಜೃಂಭಿಸುತ್ತಿರುವ ಈ ದಿನಗಳಲ್ಲಿ, ವಿಜ್ಞಾನ ಸಿಂಹಾಸನಾರೂಢವಾಗಿರುವ ಈ ದಿನಗಳಲ್ಲಿ, ಮೌಲ್ಯ ಜಗತ್ತಿನಲ್ಲಿ ಬೃಹದ್ ಭೂಕಂಪವಾಗಿರುವ ಈ ದಿನಗಳಲ್ಲಿ, ಬರೆಯುತ್ತಿರುವುದು ಬರೆಯುತ್ತಿದ್ದಂತೆಯೇ ಹಳೆಯದಾಗುತ್ತಿರುವ ಈ ಪ್ರಚಂಡ ಪೈಪೋಟಿಯ ದಿನಗಳಲ್ಲಿ ಒಬ್ಬ ನಿಷ್ಠಾವಂತ ಬರಹಗಾರ ಬರಹಗಾರನಾಗಿಯೇ ಇಂದ್ರಪೂಜೆ ಹೋಗಲಿ, ಭುವನಸ್ತುತಮಪ್ಪ ನೆಗಳ್ತೆ ಹೋಗಲಿ, ಲಾಭ ಹಾಳಾಗಿ ಹೋಗಲಿ ಈ ದೇಶದ ಸಂಘಟಿತ ರಂಗದ ಅಕುಶಲ ಕಾರ್ಮಿಕ ಪಡೆಯುವಷ್ಟು ಆದಾಯವನ್ನಾದರೂ ಪಡೆಬಲ್ಲ ನೆಂದು ಯಾರು ಯಾವ ಬಾಯಿಂದ ಹೇಳಬಲ್ಲರು? ಚಲಚ್ಚಿತ್ರವಾಗಲ್ಲ ಕಾದಂಬರಿಗಳನ್ನೋ, ಪಠ್ಯಪುಸ್ತಕಗಳನ್ನೋ, ವಾಚನಾಲಯ ಇಲಾಖೆಗೆ ಒಪ್ಪಿಗೆಯಾಗಬಹುದಾದ ಪುಸ್ತಕಗಳನ್ನೋ ಬರೆಯುವವರು ಅಸಂಘಟಿತ ಕ್ಷೇತ್ರದ ಕಾರ್ಮಿಕರಿಗೆ ನಿಗದಿಯಾಗುವ ಕನಿಷ್ಠವೇತನ ವನ್ನಾದರೂ ಪಡೆಯಬಲ್ಲರೆಂಬುದು ನಿಜವಾದರೂ ಒಬ್ಬ ಸಾಮಾನ್ಯ ಬರಹಗಾರನ ಸ್ಥಿತಿ ವರಮಾನದ ದೃಷ್ಟಿಯಿಂದ ದುಃಸ್ಥಿತಿಯೇ ಸರಿ! ಬರೆಯುವವನು ಬರೆಯುವಾಗ ಪಡುವ ಶ್ರಮವೆಷ್ಟು, ಅವನು ಬರೆದುದು ಅಚ್ಚಾಗಿ, ಮುದ್ರಕ ಪ್ರಕಾಶನ ಪುಸ್ತಕ ವ್ಯಾಪಾರಿಗಳ ಪಾಲು ಮುಟ್ಟಿ, ಕೇಂದ್ರ ವಾಚನಾಲಯಗಳಿಗೆ ಪುಕ್ಕಟೆ ಪ್ರತಿಗಳು ಮುಟ್ಟಿ, ಪತ್ರಿಕೆಗಳ ಸಾದರ ಸ್ವೀಕಾರಕ್ಕಾಗಿಯೋ, ಮುಖ ನೋಡಿ ಮಣೆ ಹಾಕುವವರ ವಿಮರ್ಶೆಗಾಗಿಯೋ ಧರ್ಮಾರ್ಥ ಪ್ರತಿಗಳು ಹೋಗಿ, ಉಳಿದ ಪ್ರತಿಗಳು ಹಲವು ವರ್ಷಗಳಲ್ಲಿ ಮಾರಾಟವಾಗಿ, ಅವನ ಪಾಲಿನ ಹಣ ಪ್ರಕಾಶಕ ಪ್ರಾಮಾಣಿಕನಿದ್ದರೆ ಮಾತ್ರ ಅವನ ಕೈಗೆ ಮುಟ್ಟಿದಾಗ ಅದರ ಮೊತ್ತವೆಷ್ಟು ಎಂಬುದನ್ನು ಗಮನಿಸಿದಾಗ; “ಹೋಮರನಂಥ ವಿಶ್ವಕವಿಗಳು ಭಿಕ್ಷೆ ಬೇಡಬೇಕು, ಹೆಂಡ ಮಾರುವವರು ಲಕ್ಷಾಧೀಶರಾಗಬೇಕು – ಇದೇ ನಿನ್ನ ಸಾಮಾಜಿಕ ನ್ಯಾಯವೇನಯ್ಯಾ?” ಎಂದು ಪ್ರಶ್ನಿಸುವುದು ಅನಿವಾರ್ಯವಾಗುತ್ತದೆ.

ವಸ್ತುಸ್ಥಿತಿ ಹೀಗಿದ್ದೂ ಬರೆಯುವವರು ಬರೆದೇ ಬರೆಯುತ್ತಾನೆ; ಯಾಕೆ? ಕೀರ್ತಿ, ಪ್ರಸಿದ್ದಿ, ನೆಗಳ್ತೆಗಳಿಗಾಗಿಯೆ ಬರಹಗಾರನಿಗೆ ಬರುವ ಪ್ರಸಿದ್ದಿ ಓದುಬರೆಹ ಬಲ್ಲವರಲ್ಲಿ ಮಾತ್ರ. ನೂರಕ್ಕೆ ಎಪ್ಪತ್ತರಷ್ಟು ನಿರಕ್ಷರಿಗಳಿರುವ ನಮ್ಮ ನಾಡಿನಲ್ಲಿ ಉಳಿದ ೩೦ ಪ್ರತಿಶತ ಜನರಲ್ಲಿಯೇ ಬರಹಗಾರನಿಗೆ ಓದುಗರು ಸಿಕ್ಕಬೇಕು. ಅವರೆಲ್ಲರೂ ಓದುಗರೆಂಬುದು ಭ್ರಾಂತಿ. ಓದುಬರಹ ಬಲ್ಲವರಲ್ಲಿ ನೂರಕ್ಕೆ ಎಷ್ಟು ಜನರು ಬರಹಗಾರ ಬರೆದುದನ್ನು, ಅದೂ ಕನ್ನಡದಲ್ಲಿ ಬರೆದುದನ್ನು, ಕೊಂಡೋ, ಇನ್ನೊಬ್ಬರ ಪುಸ್ತಕ ಎರವಲು ಪಡೆದೋ ಓದುತ್ತಾರೆಂಬುದು ಖಚಿತವಾಗಿ ತಿಳಿದಿಲ್ಲ. ಇದು ಅಂಕಿ ಅಂಶಗಳಿಂದ ಸ್ಪಷ್ಟಪಟ್ಟಿರದಿದ್ದರೂ ಇಂಥವರ ಸಂಖ್ಯೆ ಬಹಳ ಸಣ್ಣದೆಂಬುದರಲ್ಲಿ ಸಂದೇಹವಿಲ್ಲ. ಈ ಅಲ್ಪಸಂಖ್ಯಾತರೂ ಬರೆದವನ ಜಾತಿ, ಕುಲ, ಪ್ರದೇಶ, ಸ್ಥಾನಮಾನಗಳನ್ನು ಗಣನೆಗೆ ತೆಗೆದುಕೊಳ್ಳದೆ ಕೇವಲ ಗುಣೈಕ ಪಕ್ಷಪಾತದಿಂದ ಓದುವರೆಂದು ಎದೆತಟ್ಟಿ ಹೇಳುವಂತಿಲ್ಲ. ಹೀಗಾಗಿ, ಬರಹಗಾರನ ಪ್ರಸಿದ್ದಿ ಸಾಪೇಕ್ಷತೆಯ ವಲಯದಲ್ಲಿಯೇ ಸುತ್ತಾಡುವ, ಸ್ವಷ್ಟ ರೂಪ ಪಡೆಯದ, ಈಗಲೋ ಆಗಲೋ ಏರಿಳಿತಗಳ ಆವರ್ತನ ಪ್ರತ್ಯಾವರ್ತನಗಳಿಗೆ ಒಳಗಾಗುವ ಪ್ರಸಿದ್ದಿಯಾಗಿದೆ. ಎಲ್ಲಿಯೋ ಒಬ್ಬರು ತಾನು ಬರೆದುದನ್ನು ಓದಿರುವುದನ್ನು ಅರಿತಾಗ ಅವನಿಗೆ ಆಗುವ ಆನಂದಕ್ಕಿಂತ ಅವನ ಕೃತಿ ವಾಚನಾಲಯಗಳಲ್ಲಿಯೋ, ಪುಸ್ತಕದ ಅಂಗಡಿಗಳಲ್ಲಿಯೋ ಧೂಳು ತಿನ್ನುತ್ತಿರುವುದನ್ನು ನೋಡಿದಾಗಿನ ನೋವು ನೂರ್ಮಡಿಯಾದುದು. ಕದಾಚಿತ್ ಅವನ ಕೃತಿ ಪಠ್ಯಪುಸ್ತಕವಾದರೂ ಅದನ್ನು ಓದುವ ವಿದ್ಯಾರ್ಥಿಗಳು ಪರೀಕ್ಷೆ ಕೊಟ್ಟ ಮೇಲೆ ಅದನ್ನು ನೆನಪಿನಲ್ಲಿ ಉಳಿಸಿಕೊಳ್ಳುವರೆಂದು ನಮ್ಮುವಂತಿಲ್ಲ. ಅಕಸ್ಮಾತ್ ಅವನ ಕೃತಿ ಚಲಚ್ಚಿತ್ರವಾದರೂ ನಿರ್ದೇಶಕ ನಿರ್ಮಾಪಕರಿಗೆ, ತಾರಾಗಣಕ್ಕೆ ದೊರೆವ ಪ್ರಸಿದ್ದಿ ಕೃತಿಕಾರನಿಗೆ ದೊರೆಯುವವೆಂದು ಧೈರ್ಯವಾಗಿ ಹೇಳುವಂತಿಲ್ಲ. ಅಷ್ಟೇಕೆ, ಅವನ ಬಳಗದವರೇ ಅವನು ಬರೆದುದನ್ನು ಓದುವರೆಂಬ, ಓದಿ ಮೆಚ್ಚುವರೆಂಬ ಖಾತರಿ ಎಲ್ಲಿದೆ?.

ಓದುಗರನ್ನು ಗಳಿಸಿಕೊಂಡು, ಓದುಗರ ಓಲಗದಲ್ಲಿ ತನ್ನ ವಿಚಾರ ವೈಭವವನ್ನೋ, ಅನುಭವ ಸಂಪತ್ತನ್ನೋ ಮರೆಯಬೇಕೆಂಬ ಬರಹಗಾರನ ಬಯಕೆಗೆ ಪರಿಮಿತಿಗಳೆ ಷ್ಟೆಂಬುದೀಗ ಸ್ಪಷ್ಟ. ಹೀಗಿದ್ದೂ ಬರೆಯುವರಲ್ಲ! ಏಕೆ? ಅಲೆಮಾರಿಗಿರುವ ಅಲೆಯುವ ತೀಟೆಯಂತೆ, ವಾಚಾಳಿಗಿರುವ ‘ನಾಲಗೆದೀಂಟೆ’ಯಂತೆ, ತಿನಿಸು ಬಕ್ಕನಿಗಿರುವ ತಿನ್ನುವ ತೀಟೆಯಂತೆ ಬರೆಯುವವನಿಗೆ ಬರವಣಿಗೆಯ ತೀಟೆಯಿರುವುದೆ? ಇದು ವೈದ್ಯಶಾಸ್ತ್ರವೂ ಉತ್ತರಿಸಲಾಗದ ಪ್ರಶ್ನೆ. ಉಳಿದವರಿಗೆ ಇರದಿರುವ ಒಂದು ವಿಶೇಷವಾದ ಗುಂಗೋ, ಗೀಳೋ ಎಲ್ಲ ಕಲಾವಿದರಿಗೂ ಇರುವಂತೆ ಬರಹಗಾರನಿಗೂ ಇರುತ್ತದೆಂಬುದು ಎಲ್ಲರಿಗೂ ತಿಳಿದಿರುವ ವಿಷಯ. ಈ ಗುಂಗಿನ ಈ ಗೀಳಿನ ಸೆಲೆಗಳಾವುವು ಎಂಬ ಪ್ರಶ್ನೆಗೆ ಎಲ್ಲರಿಗೂ ಒಂದೇ ಬಗೆಯ ಉತ್ತರ ಸಿಕ್ಕದೆಂಬುದೂ ಸ್ಪಷ್ಟ. ಲೌಕಿಕವನ್ನೂ ಜಿನಾಗಮವನ್ನೂ ಬೆಳಗುವ ಬಯಕೆಯಾಗಿರಬಹುದು, ನರಸ್ತುತಿ ಮಾಡದೆ ಹರಸ್ತುತಿ ಮಾಡಿ ಮುಕ್ತಿ ಪಡೆಯ ಹಂಬಲ ವಾಗಿರಬಹುದು, ಜನ ಬದುಕಬೇಕೆಂದು ಅನಪೇಕ್ಷೆಯಿಂದ ಹರನೆಂಬುದೇ ಸತ್ಯ ಸತ್ಯ ವೆಂಬುದು ಹರನೆಂಬ ತತ್ತ್ವವನ್ನು ಬಿತ್ತರಿಸುವ ಹಾರೈಕೆಯಾಗಿರಬಹುದು. ಧಾರ್ಮಿಕ ಸಾಮಾಜಿಕ, ಆರ್ಥಿಕ, ಸಾಹಿತ್ಯಿಕ ಕ್ರಾಂತಿಯ ಅದಮ್ಯ ಆಕಾಂಕ್ಷೆಯಾಗಿರಬಹುದು, ಭಕ್ತಿಯ ಉದ್ರೇಕವಾಗಿರಬಹುದು, ತನ್ನನ್ನು ತಾನರಿವ ಆತುರ ಕಾತರಗಳಾಗಿರಬಹುದು, ಮಾನವರಿಗೆ ದೇವರ ದಾರಿಯನ್ನು ಸಮರ್ಥಿಸಿ ತೋರಿಸುವ ತವಕವಾಗಿರಬಹುದು, ತನ್ನ ದೇಶದ ಗತವೈಭವವನ್ನು ವರ್ಣಿಸುವ ದೇಶಾಭಿಮಾನವಾಗಿರಬಹುದು, ಸ್ವಾತಂತ್ರ್ಯ ಲಾಲಸೆ ಬಂಧ ವಿಮೋಚನೆಯ ಪಿಪಾಸೆಯಾಗಿರಬಹುದು, ಆತ್ಯಂತಿಕ ಸತ್ಯದ ಶೋಧನೆ ಸಾಧನೆ ಬೋಧನೆ ಗಳಾಗಿರಬಹುದು, ಜೀವನದ ವಿಮರ್ಶೆ ವಿಶ್ಲೇಷಣೆಯ ಆಸಕ್ತಿಯಾಗಿರಬಹುದು, ಅನುಭವದ ಅಭ್ರಕದ ಪದರು ಪದರುಗಳನ್ನು ಬಿಡಿಸಿ ನೋಡುವ ಆಸ್ಥೆಯಾಗಿರಬಹುದು, ಶೋಷಕ ಶಕ್ತಿಗಳ ವಿರುದ್ಧ ಸಂಘರ್ಷಿಸುವ ಕೆಚ್ಚಾಗಿರಬಹುದು, ವಿಷಮತೆಗಳಿಂದ ಕೂಡಿದ ಸ್ಥಾಪಿತ ವ್ಯವಸ್ಥೆಯ ವಿರುದ್ಧ ಬಂಡೇಳುವ ಗಂಡುತನವಾಗಿರಬಹುದು, ತಾಯ್ನುಡಿಯ ಸೇವೆಯ ಸದಿಚ್ಛೆಯಾಗಿರಬಹುದು ಇನ್ನೂ ಏನೇನೋ ಆಗಿರಬಹುದು ಇದರ ಸೆಲೆ, ಇದರ ಮೂಲ.

ಇವುಗಳಲ್ಲಿ ನಾನು ಬರೆಯಲು ಕಾರಣವಾದುದು ಕನ್ನಡದ ಕೆರೆ. ಆಗಿನ್ನೂ ನಾನು ಹದಿನಾಲ್ಕರ ಹುಡುಗ. ಕಲಬುರಗಿಯಲ್ಲಿ ಎಂಟನೆಯ ತರಗತಿಯಲ್ಲಿ ಓದುತ್ತಿದ್ದೆ. ಆಗ ತಾನೆ ಕನ್ನಡ ಚಳುವಳಿ ಅಲ್ಲಿ ಮೆಲ್ಲಮೆಲ್ಲನೆ ಚೆಲ್ಲವರಿಯತೊಡಗಿದ್ದಿತು. ಎಲ್ಲಿಯಾದರೂ ಕನ್ನಡದ ಸಭೆ ಸೇರಿದರೆ ಬಿಟ್ಟ ಬಾಣದಂತೆ ಅಲ್ಲಿಗೆ ಓಡುತ್ತಿದ್ದೆ. ಕುಕ್ಕನೂರಿನ ‘ವಿದ್ಯಾನಂದ ಗುರುಕುಲ’ದಲ್ಲಿ ದಿವಂಗತ ಡಾ. ಪಾ.ಭೀ.ದೇಸಾಯಿ ಪಡೆದಿದ್ದ ನನಗೆ ಅದಾಗಲೇ ತನುಕನ್ನಡ, ಮನಕನ್ನಡ, ಜೀವನ ಕನ್ನಡವೆನ್ನುವಂತಹ ಸ್ಥಿತಿಯೊದಗಿದ್ದಿತು. ಆದುದರಿಂದ ಕನ್ನಡದ ಕರೆ ಅತ್ಯಂತ ರೋಮಾಂಚಕ ಸ್ವರವಾಗಿ ನನಗೆ ಆಗ ಕೇಳಿಸುತ್ತಿತ್ತು, ಈಗಲೂ ಕೇಳಿಸುತ್ತಿದೆ.

ಒಂದು ಸಭೆಯಲ್ಲಿ ಅಲ್ಲಿಯ ಕನ್ನಡ ಯುವಕರೊಬ್ಬರು ನೊಂದು ನುಡಿದರು. “ಮೊದಲ ಸಲ ಕನ್ನಡ ಕವನ ಸ್ಪರ್ಧೆಯನ್ನು ಏರ್ಪಡಿಸಿದ್ದೇವೆ. ಆದರೆ ಎಷ್ಟು ಪ್ರಯತ್ನಿಸಿದರೂ ಒಂದೇ ಒಂದು ಕವಿತೆ ಮಾತ್ರ ಸ್ಪರ್ಧೆಗಾಗಿ ಬಂದಿದೆ. ಸ್ಪರ್ಧೆಯೆಂದ ಮೇಲೆ ಎರಡು ಕವಿತೆಗಳಾದರೂ ಇರಬೇಕಲ್ಲವೆ? ಇನ್ನೊಂದು ಕವಿತೆ ಬರದಿದ್ದರೆ ಸ್ಪರ್ಧೆಯನ್ನೇ ರದ್ದು ಗೊಳಿಸಬೇಕಾಗುತ್ತದೆ. ಅದುದರಿಂದ ಇಲ್ಲಿ ನೆರೆದ ಕನ್ನಡಿಗರಲ್ಲಿ ಯಾರಾದರೂ ಇನ್ನೊಂದು ಕವಿತೆ ಕಳಿಸಿ ಸ್ಪರ್ಧೆ ನಡೆಯುವಂತೆ ಮಾಡಬೇಕಾಗಿ ಕೋರುತ್ತೇನೆ”.

ನನಗೆ ಇನ್ನೊಂದು ಕವಿತೆಯಿಲ್ಲದುದಕ್ಕೆ ಕನ್ನಡ ಕವನ ಸ್ಪರ್ಧೆಯೇ ನಿಂತು ಹೋಗುವಂಥ ಪರಿಸ್ಥಿತಿಯನ್ನು ನೆನೆದು ಕಳವಳ, ತಳಮಳ! “ಆದರೆ ನಾನು ಕವಿತೆ ಬರೆಯಲು ಊರ ಹೊರಗೆ ದೂರದವರೆಗೆ ಸುತ್ತಾಡಿ ಬಂದೆ. ಬರೆಯಲು ಕುಳಿತೆ, ‘ಬೆಳಗು’ ಎಂಬ ಕವಿತೆ ಕಾಗದದ ಮೇಲೆ ಮೂಡಿದ್ದಿತು! ನನಗೆ ವಿಸ್ಮಯಾಂಚಿತ ಹರ್ಷ, ಹಿಗ್ಗು ಬುಗ್ಗೆಯಾಗಿ ಪುಟಿಯಿತು. ಕವನವನ್ನೊಯ್ದ ಕವನ ಸ್ಪರ್ಧೆಯ ಕಾರ್ಯದರ್ಶಿಗಳಿಗೆ ನೀಡಿದೆ. ಫಲಿತಾಂಶ ಪ್ರಕಟವಾಯಿತು. ನನ್ನ ಮೊದಲ ಕವಿತೆಗೇ ಬಹುಮಾನ ಬಂದಿದ್ದಿತು. ಹಿಗ್ಗಿ ಹೀರೇಕಾಯಿ ಯಾದೆ. ಅಂದಿನಿಂದ ಅಂಟಿತು ನನಗೆ ಕನ್ನಡದಲ್ಲಿ ಬರೆವ ಗೀಳು. ನನ್ನ ಕನ್ನಡ ಪ್ರೇಮವನ್ನು ಪ್ರಕಟಿಸಲು ಕನ್ನಡಕ್ಕಾಗಿ ದುಡಿಯುವುದರ ಜೊತೆಗೆ ಕನ್ನಡದಲ್ಲಿ ಬರೆಯುವುದೂ ಅಗತ್ಯ ವಾದುದೆಂಬ ಭಾವನೆ ನನ್ನಲ್ಲಿ ಉದಿಸಿತು. ಹಣಕ್ಕಾಗಿ ಬರೆವ ಮಾತನ್ನು ನಾನೇಕೆ, ಎಂಥೆಂಥ ವರೂ ಆಡುವ ಹಾಗಿರಲಿಲ್ಲ. ಆಗ ಬರೆದುದು ಎಲ್ಲಿಯೋ ಒಂದೆಡೆ ಅಚ್ಚಾದರೆ ಅದೇ ಪರಮ ಭಾಗ್ಯವೆನಿಸಿದ್ದ ಕಾಲವದು. ಪ್ರಸಿದ್ದಿ ಬೇಕಿದ್ದರೆ ಕನ್ನಡದಲ್ಲಿ ಬರೆವುದಕ್ಕಿಂತ ಇಂಗ್ಲೀಷಿನಲ್ಲಿಯೋ, ಉರ್ದು ಭಾಷೆಯಲ್ಲಿಯೋ ಬರೆಯಬೇಕಾಗಿದ್ದ ಕಾಲವದು. ಪ್ರಯತ್ನಿಸಿದರೆ ಈ ಎರಡೂ ಭಾಷೆಗಳಲ್ಲಿಯೂ ಬರೆಯಬಹುದಾಗಿತ್ತು ನಾನು. ಆದರೂ “ಕನ್ನಡವೆನೆ ಕುಣಿದಾಡುವ, ಎದೆಯನ್ನು ನಾನು ಪಡೆದಿದ್ದೆನಾಗಿ, ಎನಿತು ಇನಿದು ಈ ಕನ್ನಡ ನುಡಿಯು” ಎಂದು ನಾನೂ ಅದರ ‘ಮನವನು ತಣಿಸುವ ಮೋಹನ ಸುಧೆ’ಗೆ ಒಲಿದಿದ್ದೆನಾಗಿ ಕನ್ನಡದಲ್ಲಿಯೇ ಬರೆಯುತ್ತ ಬಂದಿದ್ದೇನೆ.

ಕಲಬುರಗಿಯ ಕಾಲೇಜು ಕನ್ನಡ ಸಂಘದ ಕಾರ್ಯದರ್ಶಿತ್ವದಿಂದ ಉಸ್ಮಾನಿಯಾ ವಿಶ್ವವಿದ್ಯಾಲಯದ ಕರ್ನಾಟಕ ಸಂಘದ ಉಪಾಧ್ಯಕ್ಷತೆಯವರೆಗೆ, ಹೈದರಾಬಾದಿನ ಕರ್ನಾಟಕ ಸಾಹಿತ್ಯ ಮಂದಿರದ ಕಾರ್ಯದರ್ಶಿತ್ವ ಹಾಗೂ ಉಪಾಧ್ಯಕ್ಷತೆಗಳಿಂದ ಹೈದರಾಬಾದು ಪ್ರದೇಶ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿತ್ವ ಮತ್ತು ಅಧ್ಯಕ್ಷತೆಗಳವರೆಗೆ ನನ್ನ ಕನ್ನಡ ಕೈಂಕರ್ಯದ ಕ್ಷಿತಿಜ ವಿಸ್ತರಿಸಿದಂತೆಲ್ಲ ನನ್ನ ಕನ್ನಡ ಸಾಹಿತ್ಯದ ಅಧ್ಯಯನ, ಲೇಖನ ವ್ಯವಸಾಯಗಳೂ ಬೆಳೆಯುತ್ತ ಹೋದುವು. ಈ ನಡುವೆ ಲಿಂ. ಹರ್ಡೇಕರ್ ಮಂಜಪ್ಪನವರ ಪಾವನ ಪ್ರಭಾವದಿಂದ ಬಸವ ವ್ಯಕ್ತಿತ್ವ ದರ್ಶನವೂ ನನಗಾಯಿತು. ‘ಕನ್ನಡ – ಬಸವ’ ಇದು ನನ್ನ ಷಡಕ್ಷರೀ ಮಂತ್ರವಾಯಿತು. ಕಲಬುರಗಿಯ ಕನ್ನಡ ಉತ್ಸವಗಳಿಗೆ ಆಗಮಿಸಿದ ಪ್ರೊ. ರಂ.ಶ್ರೀ. ಮುಗಳಿ, ಪ್ರೊ. ವಿ.ಕೃ. ಗೋಕಾಕ, ಶ್ರೀ ಟಿ.ಕೆ. ತುಕೋಳ, ನಾಡಕವಿ ದ.ರಾ. ಬೇಂದ್ರೆ, ಆಚಾರ್ಯ ಬಿ.ಎಂ.ಶ್ರೀ, ಹೈದರಾಬಾದಿಗೆ ಆಗಮಿಸಿದ ಮಾನ್ಯಶ್ರೀ ಮಾಸ್ತಿ, ಆಚಾರ್ಯರಾದ ಎ.ಆರ್.ಕೃ., ತೀ.ನಂ.ಶ್ರೀ., ಡಿ.ಎಲ್.ಎನ್ ಮೊದಲಾದವರ ಮಾರ್ಗದರ್ಶನವಲ್ಲದೆ ದಿ.ಮಾನ್ವಿ ನರಸಿಂಗರಾಯ, ಡಿ.ಕೆ. ಭೀಮಶೇನರಾವ್ ಅವರ ಶಿಷ್ಯನಾಗಿ ವ್ಯಾಸಂಗ ಮಾಡುವ ಭಾಗ್ಯ ದೊರೆಯಿತು. ಹೀಗೆ ‘ಬಿಟ್ಟೆನೆಂದರೂ ಬಿಡದ ಮಾಯೆಯಲ್ಲ’ ಮೋಡಿಯಾಗಿ ನನ್ನ ಕನ್ನಡದ ನಚ್ಚು ಹೆಚ್ಚುತ್ತ ಹೋಯಿತು. ಕನ್ನಡದಲ್ಲಿ ಬರೆವ ಹುಚ್ಚು ಹೆಚ್ಚುತ್ತ ಹೋಯಿತು.

ಸುದೈವದಿಂದ ಸರಕಾರದ ಸೇವೆ ನನಗೆ ಗೋದಾವರಿಯಿಂದ ಕಾವೇರಿಯವರೆಗಿನ ಸಮಗ್ರ ಕರ್ನಾಟಕವನ್ನು ನೋಡುವ ಸದವಕಾಶವನ್ನು ಒದಗಿಕೊಟ್ಟಿತು. ಕರ್ನಾಟಕದ ಕಲೆಯ ನೆಲೆಗಳನ್ನೂ, ಚೆಲುವಿನ ತಾಣಗಳನ್ನೂ, ಸಾವಿರಾರು ಹಳ್ಳಿಗಳನ್ನೂ, ಬೇರೆ ಬೇರೆ ಭಾಗಗಳ ಕನ್ನಡಿಗರ ಶೀಲ ಸೌಂದರ್ಯವನ್ನೂ ಕಣ್ಣಾರೆ ಕಾಣುವ ಸಂಯೋಗವನ್ನು ನೀಡಿತು. ಇದರಿಂದಾಗಿ ಕನ್ನಡ, ಕರ್ನಾಟಕಗಳ ಮೇಲಿನ ನನ್ನ ಮಮತೆ ಇನ್ನೂ ಆಳ ಆಗಲಗಳನ್ನು ಪಡೆಯಲು ಅನುವು ದೊರೆಯಿತು.

ಭಾರತವು ಸಂಕ್ಷಿಪ್ತ ಬ್ರಹ್ಮಾಂಡವಾದರೆ ಕರ್ನಾಟಕ ಸಂಕ್ಷಿಪ್ತ ಭಾರತ ನೋಡಾ!
ಇಲ್ಲಿ ಇಲ್ಲದುದು ಇನ್ನೆಲ್ಲಿದೆ ತೋರಾ!
ಕನ್ನಡ ನಾಡಿನಲ್ಲಿ ಜನ್ಮವ ಬೇಡಿಕೊಂಡರೆ ಎಲ್ಲವನ್ನು ಬೇಡಿಕೊಂಡಂತೆ!
ಕನ್ನಡ ಸಂಸ್ಕೃತಿಯ ಮೈಗೂಡಿಸಿಕೊಂಡರೆ ಎಲ್ಲವನ್ನೂ ಪಡೆದುಕೊಂಡಂತೆ!”
ಎಂದು ಉದ್ಗರಿಸುವ ಮಟ್ಟಕ್ಕೆ ಮುಟ್ಟಿತು.

‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಗೆ ಬಹುಶಃ ಇದೇ ಉತ್ತರ ಸರಿಯೆಂದು ತೋರುತ್ತದೆ. ನಾನು ಕನ್ನಡವನ್ನು, ಕನ್ನಡನಾಡನ್ನು, ಕನ್ನಡ ಜನವನ್ನು ಬಹುವಾಗಿ ಪ್ರೀತಿಸುತ್ತೇನೆ. ಅಂತೆಯೇ ಕನ್ನಡದಲ್ಲಿ ನನಗೆ ತಿಳಿದುದನ್ನು, ಹೊಳೆದುದನ್ನು, ತೋರಿದು ದನ್ನು ಬರೆಯುತ್ತೇನೆ. ಉದ್ದಕ್ಕೂ ಕನ್ನಡನಾಡು ನುಡಿಗಳ ಪ್ರೇಮವೇ ಮೂಲಪ್ರೇರಣೆಯಾಗಿ ಮುಂದುವರಿದುಕೊಂಡು ಬಂದಿದ್ದರೂ ಬೇರೆ ಪ್ರೇರಣೆಗಳು ನನ್ನನ್ನು ಪ್ರಚೋದಿಸಿಲ್ಲ ವೆನ್ನಲಾಗದು. ನನ್ನ ತಲೆಮಾರಿನ ಉಳಿದ ಬರಹಗಾರರಂತೆ ನಾನೂ ಭಾರತದ ಬಿಡುಗಡೆಯ ಹೋರಾಟದ, ಅದರ ಮಹಾನಾಯಕರ ಪ್ರಭಾವ ಪ್ರೇರಣೆಗಳಿಗೆ ಒಳಗಾಗಿದ್ದೇನೆ; ಕರ್ನಾಟಕ ಏಕೀಕರಣ ಚಳುವಳಿಯ ಎಳೆತ ಸೆಳೆತಗಳಿಗೆ ಸಿಕ್ಕಿದ್ದೇನೆ; ರವೀಂದ್ರ, ಅರವಿಂದ, ಪರಮಹಂಸ, ವಿವೇಕಾನಂದರ ವಿಚಾರಧಾರೆಯಿಂದ ಪ್ರಪುಲ್ಲನಾಗಿದ್ದೇನೆ, ಸಾಹಿತ್ಯರಂಗದಲ್ಲಿಯೇ ನಡೆದ ವಿವಿಧ ಆಂದೋಲನಗಳಿಂದ ಆಂದೋಲಿತನಾಗಿದ್ದೇನೆ; ಸ್ವಾತಂತ್ರ್ಯೋತ್ತರ ಭಾರತದಲ್ಲಿ ಸ್ವಾತಂತ್ರ್ಯ ಪೂರ್ವ ಭಾರತದ ಮೌಲ್ಯಗಳೆಲ್ಲ ಭಸ್ಮವಾಗಿ ಭ್ರಷ್ಟಾಚಾರದ ನಗ್ನನಾಟ್ಯ ನಡೆದಿರುವುದನ್ನು ನೋಡಿ ನೊಂದಿದ್ದೇನೆ. ಜಾಗತಿಕ ವಲಯದಲ್ಲಿ ನಡೆದಿರುವ ಚಿಂತನ ಮಂಥನ ಸಫಲತೆ ವಿಫಲತೆ ಸಂಘರ್ಷ ಸಂಕಷ್ಟಗಳನ್ನು ಗಮನಿಸಿದ್ದೇನೆ; ವ್ಯಕ್ತಿ ವ್ಯಕ್ತಿಯ ಒಳಗೆ, ಅಂತರಾಳದಲ್ಲಿ ಉದಿಸಿರುವ ದ್ವಂದ್ವಗಳ ದ್ವೈಧೀಕರಣದ, ಅನಾಥತೆಯ, ನಿರಾಶೆಯ, ಸಂದಿಗ್ಧತೆಯ ಧರ್ಮಸಂಕಟಗಳ ಚಕ್ರತೀರ್ಥವನ್ನೂ, ಗಣನೆಗೆ ತೆಗೆದುಕೊಂಡಿದ್ದೇನೆ. ಇಷ್ಟೆಲ್ಲ ಇದ್ದು ಕನ್ನಡದ ಕರಗ ನನ್ನ ಕಿವಿ ಕಿವುಡಾಗಿದ್ದರೆ ನಾನು ಬರವಣಿಗೆಯನ್ನು ಮುಂದುವರಿಸಿ ಕೊಂಡು ಬರೆಯುತ್ತಿದ್ದೆನೆಂದು ನಾನು ಹೇಳಲಾರೆ.

ಬರೆಯುವ ಹುಚ್ಚಿಗೆ ಬೇರೆ ಕಾರಣಗಳನ್ನು ಕೊಡುವವರಿದ್ದಾರೆ : ಆತ್ಮಾಭಿವ್ಯಕ್ತಿ, ಆತ್ಮಸಂತೃಪ್ತಿ, ವ್ಯಕ್ತಿತ್ವ ಸಾಧನ, ವ್ಯಕ್ತಿತ್ವ ವಿಲಯನ, ಆತ್ಮ ಸ್ಪಷ್ಟೀಕರಣ, ಸ್ವಾನುಭವ ವಿತರಣ, ಅನುಭವದ ವಿಶ್ಲೇಷಣ ಮನದ ಪೃಥಕ್ಕರಣ, ಆತ್ಮಪರೀಕ್ಷಣ ಅಂತರಂಗ ಶೋಧನ ಇನ್ನೂ ಏನೇನೋ.ಇವೆಲ್ಲ ತಂತಮ್ಮ ರೀತಿಯಲ್ಲಿ ನನ್ನ ಬರವಣಿಗೆಯ ಮೇಲೆ ಪ್ರಭಾವ ಬೀರಿರಬಹುದಾದರೂ ಅದಕ್ಕೆ ಪ್ರೇರಕಶಕ್ತಿಯಾಗಿ ಪರಿಣಮಿಸಿಲ್ಲವೆಂದೇ ಹೇಳಬೇಕು. ಸ್ವಾರಾಧನೆಯ ಪ್ರವೃತ್ತಿಯಾಗಲಿ, ನೈಚ್ಯಾನು ಸಂಧಾನವಾಗಲಿ, ಸಿದ್ಧಾಂತಗಳ ರಾದ್ಧಾಂತಗಳಾಗಲಿ, ಮೂರ್ತಿಭಂಜಕತೆಯಾಗಲಿ, ಆತ್ಮಸ್ತುತಿ ಪರನಿಂದೆಗಳಾಗಲಿ, ಪ್ರಸಿದ್ದಿಯ ಹಂಬಲಗಳಾಗಲಿ ನನ್ನ ಮೇಲೆ ಸವಾರಿ ಮಾಡಿದುದನ್ನು ಕಾಣೆ. “ನಾನು ನೆಯ್ದ ಬಲೆಯಲ್ಲಿ ನಾನೇ ಸಿಲುಕುವುದಾದರೆ ಆ ಬಲೆಯ ನೆಯ್ಯದಿರುವುದೇ ಮೇಲಯ್ಯ; ನಾನು ನಿರ್ಮಿಸಿದ ಸಿದ್ಧಾಂತ ಪಂಜರದಲ್ಲಿ ನಾನೇ ಬಂಧಿತನಾಗುವುದಾದರೆ ಆ ಪಂಜರವ ನಿರ್ಮಿಸದಿರುವುದೇ ಲೇಸಯ್ಯ” ಎಂಬುದೆನ್ನ ನಂಬಿಕೆ. ಈ ನಂಬಿಕೆಗನುಗುಣವಾಗಿ ಬರೆಯುವುದು ಅನಿವಾರ್ಯವೆನಿಸಿದಾಗ ಮಾತ್ರ. ಬರೆಯದೆ ಇರುವುದು ಸಾಧ್ಯವೆನಿಸದಿದ್ದಾಗ ಮಾತ್ರ ಬರೆಯುತ್ತ ಬಂದಿದ್ದೇನೆ. ಇಂದಿಗೂ ಬರೆಯುತ್ತಲಿದ್ದೇನೆ. ಇದನ್ನು,

ಮಾತಿನ ಬಸಿರೆ ಭಾವ ಶಿಶುವಿನ ಭಾರದಿಂದ ಬಸವಳಿದಿದ್ದಾಳೆ!
ಬೇನೆ ಪ್ರಾರಂಭವಾಗಿ ಬಹಳ ದಿನಗಳುರುಳಿವೆ
ಹೆರಿಗೆಯೇಕೆ ಅಗದವ್ವಾ ಇನ್ನೂ?
ಮದ್ದುಗಿದ್ದು ಕುಡಿಸೋಣವೆ?
ಬೇಡ, ಹೆರಿಗೆಗೆ ಬದಲು ಹಳಿವುಳಿಕೆಯಾದೀತು!
ಶಸ್ತ್ರ ಶಲಾಕೆ ಬೇಡ, ಗಿಡ ಮೂಲಿಕೆ ಬೇಡ
ಒಳಗೇ ತಿಣುಕುವ ಶಕ್ತಿ ವಿಕಸಿಸಲಿ!
ಮಗುವಿನ ಮೊಗ ನೋಡಬೇಕೆಂಬ
ತಾಯ್ತನದ ತವಕ ಪ್ರಬಲಿಸಲಿ!
ಸ್ವತಂತ್ರಧೀರ ಸಿದ್ದೇಶ್ವರನ ದಯದಿಂದ
ಸಹಜ ಸುಖ ಪ್ರಸವವೇ ಆದೀತು!”

ಎಂಬ ವಚನದಲ್ಲಿ ವ್ಯಕ್ತಗೊಳಿಸಿದ್ದೇನೆ. ಅಂತೆಯೇ, ಬರೆದಾಗಲೆಲ್ಲ ನನಗಾಗುವ ಅನುಭವ ಬಸಿರೆಗೆ ಸಹಜ ಸುಖ ಪ್ರಸವವಾದಾಗ ಆಗುವ ಅನುಭವ. ಇದಕ್ಕೆ ಕನ್ನಡದ ಕೈಂಕರ್ಯ ನೀಡುವ ಸಂತೃಪ್ತಿಯನ್ನು ಸೇರಿಸಿದಾಗ “ನಾನೇಕೆ ಬರೆಯುತ್ತೇನೆ?” ಎಂಬ ಪ್ರಶ್ನೆಗೆ ಉತ್ತರ ದೊರೆಯುತ್ತದೆ.

ಇನ್ನೊಂದು ಅನುಷಂಗಿಕ ಕಾರಣವನ್ನೂ ಉಲ್ಲೇಖಿಸಬಹುದೆಂದು ತೋರುತ್ತಿದೆ. ಸರಕಾರದ ಸೇವೆಗೆ ಸೇರಿದ ನಾನು ವಿರಾಮದ ವೇಳೆಯಲ್ಲಿ ಉಲ್ಲಾಸಗೊಳ್ಳಲು ಹವ್ಯಾಸ ವೊಂದನ್ನು ಆಯ್ದುಕೊಳ್ಳಬೇಕಿತ್ತು. ಬಡವನಾಗಿದ್ದ ನನಗೆ ಕ್ಲಬ್ಬು, ಕ್ರೀಡೆ, ಕುದುರೆ ಜೂಜು ಮೊದಲಾದುವು ಆಗ ಗಗನಕುಸುಮಗಳಾಗಿದ್ದುವು. ಪ್ರವೃತ್ತಿಯ ಅನಿವಾರ್ಯತೆ, ಪರಿಸ್ಥಿತಿಯ ಅಪರಿಹಾರ್ಯತೆಗಳಿಂದಾಗಿ ನಾನು ಓದು ಬರಹವನ್ನೇ ನನ್ನ ಹವ್ಯಾಸವನ್ನಾಗಿ ಮುಂದುವರಿಸಿ ಕೊಂಡು ಬಂದೆ. ಇದರಿಂದ ನನಗಾದ ಲಾಭ ಅಷ್ಟಿಷ್ಟಲ್ಲ. ಹಿರಿಯ ಸಾಹಿತಿಗಳೊಡನೆ, ಹಿರಿಯ ಸಾಹಿತ್ಯ ಕೃತಿಗಳೊಡನೆ ಸಂಪರ್ಕ ಬಲಿಯಿತು; ಸಹೃದಯ ಸಂಪತ್ತು ಬೆಳೆಯಿತು: ದುರ್ವ್ಯಸನ ದುಶ್ಚಟಗಳಿಂದ ದೂರ ಉಳಿದೆ, ಅಲ್ಪಸ್ವಲ್ಪ ಆದಾಯವನ್ನೂ ಪಡೆದೆ; ನಿವೃತ್ತ ನಾದ ಮೇಲೂ ಏಕಾಕಿಯಾಗದೆ ಸಂಘಜೀವಿಯಾಗಿ ಮುನ್ನಡೆದೆ. ಸಮಾಜದ ಅನುತ್ಪಾದಕ ವರ್ಗಕ್ಕೆ ಸೇರಿಹೋಗದೆ ಸಮಾಜಕ್ಕೆ ಒಂದಿಲ್ಲೊಂದು ಸೇವೆಯನ್ನು ಸಲ್ಲಿಸಬಲ್ಲ ವ್ಯಕ್ತಿಯಾಗಿ ಮುಂದುವರಿದೆ; ನಡೆಯದ ನಾಣ್ಯವಾಗದೆ ನಡೆಯುವ ನಾಣ್ಯವಾಗಿ ಚಲಾವಣೆಯಲ್ಲಿರುವ ಭಾಗ್ಯವನ್ನು ಪಡೆದೆ.

ಇದೆಲ್ಲವನ್ನೂ ನೆನೆದಾಗ ನನ್ನನ್ನು ಬರವಣಿಗೆಯತ್ತ ಎಳೆದು ತಂದ ಕನ್ನಡಕ್ಕೆ, ಕನ್ನಡ ನಾಡಿಗೆ ನಾನೆಷ್ಟು ಋಣಿಯೆಂಬುದನ್ನು ವರ್ಣಿಸುವುದು ನನಗೆ ಅಸಾಧ್ಯವಾಗುತ್ತದೆ. ಆದರೂ ಈ ಕೋರಿಕೆಯಲ್ಲಿ ಕಿಂಚಿತ್ತಾದರೂ ಋಣಸ್ಮರಣೆ ಪ್ರಕಟವಾಗಿದೆಯೆಂದು ಕೊಂಡಿದ್ದೇನೆ.

ಮತ್ತೆ ಹುಟ್ಟಿಸುವುದಾದರೆ ನನ್ನ ಕನ್ನಡ ನಾಡಿನಲ್ಲಿಯೇ ಹುಟ್ಟಿಸು ತಂದೆ!
ನರನಾಗಿ ಅಲ್ಲ ಸುರಭಿಯಾಗಿ ಹುಟ್ಟಿಸು;
ಇಟ್ಟರೆ ಸಗಣಿಯಾಗಿ, ತಟ್ಟಿದರೆ ಬೆರಣಿಯಾಗಿ
ತಟ್ಟದೆ ಹಾಕಿದರೆ ಗೊಬ್ಬರವಾಗಿ
ನಾಡಿನ ಕೃಷಿ ಋಷಿಯ ಸೇವಿಸುವಾಸೆ ನನಗೆ
ಸುಟ್ಟರೆ ಶ್ರೀ ವಿಭೂತಿಯಾಗಿ
ನಾಡಿನ ಹರಭಕ್ತರ ಹಣೆಗಳಲ್ಲಿ ಶೋಭಿಸುವಾಸೆ ನನಗೆ!
ಸುರಭಿಯಾಗಿಸದಿರೆ ಗಂಧವ ಮರವಾಗಿ ಹುಟ್ಟಿಸು;
ಅದನ್ನು ಬೆಳೆಸಿ ತುಂಡರಿಸು ಮನೆಗೊಂದು ತುಂಡು ಮುಟ್ಟಿಸು;
ನಾಡಿನ ಹರಿಭಕ್ತರ ಹಣೆಗಳಲ್ಲಿ ವಿರಾಜಿಸುವಾಸೆ ನನಗೆ;
ಇದಾಗದಿರೆ, ಬಿದಿರ ಮೆಳೆಯಾಗಿ ಹುಟ್ಟಿಸಿ
ಬಡವರ ಗುಡಿಸಲುಗಳಿಗೆ ಒದಗಿಸು
ಮಕ್ಕಳ ಆಟಿಗೆಗಳಾಗಿ ಮಾರ್ಪಡಿಸು
ಮುರಲೀ ಪ್ರಿಯರಿಗೆ ಕೊಳಲು ಮಾಡಿಕೊಡು
ಸ್ವತಂತ್ರಧೀರ ಸಿದ್ದೇಶ್ವರಾ!”