ಕಿಶೋರದ ನೂರೆಂಟು ಹವ್ಯಾಸಗಳಲ್ಲಿ ನಾನು ಉಳಿಸಿಕೊಂಡು ಬೆಳೆಸಿಕೊಂಡು ಬಂದಿರುವುದು ಬರಹವನ್ನು ಮಾತ್ರ. ಬದುಕಿನ ಈ ಘಟ್ಟದಲ್ಲಿ ಹಿಂತಿರುಗಿ ನೋಡಿದಾಗ, ಏನೆಲ್ಲ ಆಸಕ್ತಿ ಮತ್ತು ಹವ್ಯಾಸಗಳಲ್ಲಿ ತೊಡಗಿದ್ದೆ ಎಂದು ಅಚ್ಚರಿಯಾಗುತ್ತದೆ. ಚಿತ್ರಕಲೆ, ಛಾಯಾಚಿತ್ರ, ನಾಟಕ ಎಲ್ಲದರಲ್ಲೂ ಸಕ್ರಿಯವಾಗಿ ತೊಡಗಿಕೊಂಡ ದಿನಗಳಿದ್ದವು. ಆದರೆ ಇಂಜಿನಿಯರಿಂಗ್ ರಂಗವನ್ನು ಆಯ್ದು ಕಾರ್ಖಾನೆಯ ವೃತ್ತಿಯಲ್ಲಿ ಮುಂದುವರೆದಂತೆ, ಜವಾಬ್ದಾರಿಗಳು ಹೆಚ್ಚಿದಂತೆ, ಬೆಳಗ್ಗೆ ಆರಕ್ಕೆ ಮನೆ ಬಿಟ್ಟು ರಾತ್ರಿ ತಡವಾಗಿ ತಲುಪುವ ಈ ಹಂತ ತಲುಪಿದಂತೆ, ನನ್ನಲ್ಲಿ ಉಳಿಸಿಕೊಳ್ಳಲು ಸಾಧ್ಯವಾಗಿರುವುದು ಬರಹವನ್ನು ಮಾತ್ರ. ಕಾರಣ, ರಾತ್ರಿ ರಾತ್ರಿಗಳ ನಿದ್ರೆ ಕೆಟ್ಟಾದರೂ ನಾನು ಬರೆಯಬಲ್ಲೆ. ಬರಹವಿಲ್ಲದ ಬದುಕನ್ನು ಊಹಿಸುವುದೂ ಅಸಾಧ್ಯವೆನಿಸುತ್ತದೆ.

ನನ್ನ ಬಾಲ್ಯ ನೆನಪಾಗುತ್ತದೆ. ಹಳ್ಳಿಯ ಹಿನ್ನೆಲೆಯಿಂದ ಬಂದ ತಂದೆ – ತಾಯಿಯರದು ಸರಳ ಬದುಕು. ನನಗೀಗಲೂ ನೆನಪಿದೆ, ಸೊಸೈಟಿಯಲ್ಲಿ ಬರುತ್ತಿದ್ದ ಕೋರಾ ಬಟ್ಟೆಯನ್ನೆ ಹರಿಸಿ ಹೊಲಿಸುತ್ತಿದ್ದ ಲಂಗ – ರವಿಕೆ. ನನ್ನ ಲಂಗದ ಬಟ್ಟೆ, ಗೆಳತಿಯ ಮನೆಯ ಕಿಟಕಿಯ ಕರ್ಟನ್ ಎರಡೂ ಒಂದೇ ಇರುತ್ತಿದ್ದ ಕಾಲ. ಆದರೆ ಬಟ್ಟೆಬರೆಗೆ ಹಣ ವ್ಯರ್ಥ ಎಂದು ಭಾವಿಸಿದ್ದ ಅಪ್ಪ, ಮನೆಯ ತುಂಬಾ ಪುಸ್ತಕಗಳನ್ನು ಕೊಂಡು ತುಂಬಿದ್ದರು. ಕುವೆಂಪು, ಬೇಂದ್ರೆ, ಬಿ.ಎಂ.ಶ್ರೀ ಅವರ ಕವನಗಳನ್ನು ಕೇಳುತ್ತಾ ನಾನು ಬೆಳೆದೆ. ಇಂತಹ ಪರಿಸರದಲ್ಲಿ ಬರೆಯದಿರಲು ಸಾಧ್ಯವೇ ಇರಲಿಲ್ಲ.

ನಾನು ಯಾವಾಗ ಬರೆಯಲು ಆರಂಭಿಸಿದೆನೆಂದು ನೆನಪಿಲ್ಲ. ಹೈಸ್ಕೂಲು – ಪಿಯುಸಿ ಹಂತದಲ್ಲಿ ಅವು ಪ್ರಕಟವಾಗಲು ಪ್ರಾರಂಭಿಸಿದವು. ಹೇರಿದ್ದ ಮಡಿವಂತಿಕೆಯನ್ನು ಬಾಲ್ಯ ದಲ್ಲೇ ಹೊತ್ತವಳು ಅಂಜುತ್ತಾ ಅಳುಕುತ್ತಾ ಬರೆದೆ. ಅಪ್ಪಟ ಆದರ್ಶಗಳನ್ನೇ ಬೋಧಿಸುವ ಅಪ್ಪನ ಮಗಳಾಗಿ ನನಗೆ ಹೀಗೆಲ್ಲ ಅನಿಸುವುದಲ್ಲ ಎಂದೇ ಭಯವಾಗುತ್ತಿತ್ತು. ಹೀಗಿದ್ದೂ ಸಂಪ್ರದಾಯದ ಕಟ್ಟುಪಾಡುಗಳು ನನ್ನೊಳಗಿನ ಭಾವನೆಗಳ ಕತ್ತು ಹಿಸುಕಲಾರದಾಗಿದ್ದವು. ನನ್ನೊಳಗಿನ ಬುದ್ಬುದಗಳಿಗೆ ಬಾಯಿ ಕೊಡಬೇಕಿತ್ತು. ಸರಿ ಹುಡುಗಿಯನ್ನು ಉದ್ದೇಶಿಸಿದ ಕವನ ಬರೆಯಲು ಆರಂಭಿಸಿದೆ. ಆ ದಿನಗಳಲ್ಲಿ ಪ್ರಕಟವಾದ ನನ್ನ ಒಂದು ಕವನ ಹೀಗಿತ್ತು –

ಸರಿತಾ
ನೆಲದ ಹಸಿರು
ಮುಗಿಲ ನೀಲಿ
ದೂರದಲ್ಲೆಲ್ಲೋ
ದಿಗಂತದ ಅಂಚಿನಲ್ಲಿ
ದೀರ್ಘ ಚುಂಬನದಲ್ಲಿ….

ಇಲ್ಲಿ ಸರಿತಾ ಏಕೆ ಬಂದಳು, ಸತೀಶನೋ ರಮೇಶನೋ ಉಮೇಶನೋ ಆಗದೆ ಎಂದು ಅಚ್ಚರಿ ಪಡಬೇಕಿಲ್ಲ, ಉತ್ತರ ಸ್ಪಷ್ಟವಿದೆ. ಇಂಥಾ ‘ಹೆಣ್ತನ’ಕ್ಕೆ ಅಂಟಿಸಿದ ಆತಂಕಗಳು ಬಹುಶಃ ನಮ್ಮ ಲೇಖಕರನ್ನು ಕಾಡಿರಲಿಕ್ಕಿಲ್ಲ. ಇದೇ ಕಾರಣಕ್ಕಿರಬೇಕು ನಾವು ಸ್ತ್ರೀಯರು ನಮ್ಮ ಅನುಭವಗಳನ್ನು ತೆರೆದುಕೊಂಡದ್ದು ತೀರಾ ಕಡಿಮೆ. ಆಳಕ್ಕಿಳಿದು ನಮ್ಮ ನಿಜವಾದ ಅನಿಸಿಕೆಗಳನ್ನು ಮುಟ್ಟಲು ಬೆಚ್ಚಿದ್ದೇವೆ. ಸೀತೆ – ಸಾವಿತ್ರಿಯರ ನಾಡಿನಲ್ಲಿ ನಮಗೆ ಹೀಗೆನಿಸು ವುದಲ್ಲ ಎಂಬ ಭಯಕ್ಕೆ. ಬಹುಶಃ ಸೀತೆ – ಸಾವಿತ್ರಿಯರಿಗೂ ಹೀಗೇ ಅನಿಸಿರಬಾರದೇಕೆ ಎಂದು ಪ್ರಶ್ನಿಸಿದ್ದು ಎಚ್.ವಿ. ಸಾವಿತ್ರಮ್ಮನಂಥಾ ಅಲ್ಲೊಬ್ಬ ಇಲ್ಲೊಬ್ಬ ಲೇಖಕಿಯರು ಮಾತ್ರ. ನಮ್ಮ ಅನುಭವಗಳನ್ನು ಮುಟ್ಟಿದಾಗಲೂ ಮೆಟ್ಟಿಬಿದ್ದಿದ್ದೇವೆ. ತೆರೆದಿಡಲು ಹಿಂಜರಿ ದಿದ್ದೇವೆ. ಮೊದಮೊದಲು ಅಪ್ಪನ ಭಯ, ನಂತರ ಗಂಡನ ಭಯ, ಯಾರಾದರೂ ‘ಇದು ನಿಮ್ಮದೇ ಅನುಭವವಾ?’ ಕೇಳಿಬಿಟ್ಟರೆ ಎಂಬ ಭಯ. ಇಂಥಾ ಸಂಕೋಚ ಮುಜುಗರಗಳಲ್ಲಿ ಸರ್ವಕಾಲಕ್ಕೂ ಹೇಳಿಕೊಂಡು ಬಂದದ್ದನ್ನೇ, ಅನಿಸದಿದ್ದರೂ ಅನಿಸಬೇಕೆಂದದ್ದನ್ನೇ, ಜನ ನಿರೀಕ್ಷಿಸಿದ್ದನ್ನೇ, ಸಮಾಜ ಅಂಗೀಕರಿಸಿದ್ದನ್ನೇ ಹೇಳುತ್ತಾ ಬಂದೆವು. ಈ ಎಲ್ಲ ಭಯ ಮುಜುಗರ ಸಂಕೋಚಗಳನ್ನು ಬದಿಗಿಟ್ಟು ನನಗನಿಸಿದ್ದನ್ನು ಅನಿಸಿದಂತೆ ಬರೆಯ ಹೊರಟದ್ದು, ಬಿ.ಇ. ಮುಗಿಸಿ ಸಂಶೋಧನೆಗೆಂದು ಬೆಂಗಳೂರಿಗೆ, ಟಾಟಾ ಇನ್‌ಸ್ಟಿಟ್ಯೂಟಿಗೆ ಬಂದಾಗ. ಆಗ ಅವಲಂಬನೆಯ ಅಧ್ಯಾಯ ಮುಗಿದಿತ್ತು. ಸ್ವತಂತ್ರ ವಾತಾವರಣ, ಆರ್ಥಿಕ ಸ್ವಾವಲಂಬನೆಯಲ್ಲಿ ನನ್ನ ಭಾವನೆಗಳು ಹೊರಬಿದ್ದವು. ‘ಪ್ರೀತಿ’ ಎಂಬ ಪದವನ್ನು ಬಳಸಲೂ ಹಿಂಜರಿದ ಹುಡುಗಿ, ಪ್ರೀತಿಯ ಸುತ್ತ ಕಥೆ ಹೆಣೆದಳು. ‘ನಮ್ಮ ಕನಸುಗಳಲ್ಲಿ ನೀವಿದ್ದಿರಿ’, ನನ್ನ ಮೊದಲ ಕಥಾ ಸಂಕಲನದಲ್ಲಿ ಈ ಎರಡೂ ಹಂತದ, ಎರಡೂ ವಿಪರೀತದ ಕತೆಗಳಿವೆ.

ನನ್ನ ಬರಹದ ತುಡಿತವನ್ನು ಹಂಚಿಕೊಂಡವಳು, ಗೆಳತಿ ‘ರಾಜಿ’ (ನಿಜ ನಾಮಧೇಯ ವಲ್ಲ). ತನ್ನ ಬದುಕು – ಸಾವಿನಲ್ಲಿ ನನ್ನನ್ನು ಬರಹಕ್ಕೆ ಹಚ್ಚಿದ್ದಳು. ನನ್ನ ಬಾಲ್ಯಕ್ಕೆ ಭೀತಿಯ ನೆರಳಿತ್ತು. ಅಪ್ಪ – ಅಣ್ಣನ ಕುರುಕ್ಷೇತ್ರದಲ್ಲಿ ಮನೆ ನರಕವಾಗಿತ್ತು. ಪರೀಕ್ಷೆಗೇ ಕೂರದೆ ಅಧ್ಯಾತ್ಮದ ಹಾದಿ ಹಿಡಿದು ತಮ್ಮ ಪಾಂಡಿಚೇರಿಗೆ ನಡೆದಿದ್ದ. ಇಡೀ ಮನೆಯ ಜವಾಬ್ದಾರಿ ಯನ್ನು ಹೊತ್ತು ಅವಿವಾಹಿತಳಾಗಿ ಉಳಿದ ಅಕ್ಕ. ಬದುಕು ಹೋರಾಟವಾದಾಗ, ಹೋರಾಡಿ ಬದುಕುವುದನ್ನು ಈ ಅಕ್ಕನಿಂದಲೇ ಕಲಿತ ನಾನು ಸ್ತ್ರೀವಾದಿಯಾದದ್ದು ತೀರಾ ಸಹಜ ಎನಿಸುತ್ತದೆ.

ಸುತ್ತ ನೋಡಿದಾಗ ಎಲ್ಲ ಸ್ವಸ್ಥವಿರುವ ಕುಟುಂಬಗಳು ಕಾಣುತ್ತಿತ್ತು. ನನ್ನ ಕುಟುಂಬದ ಬಗ್ಗೆ ನಾಚಿಕೆಯಾಗುತ್ತಿತ್ತು. ಹೇಳಿಕೊಳ್ಳಲು ಅಂಜಿಕೆಯಾಗುತ್ತಿತ್ತು. ಆಪ್ತ ಗೆಳತಿ ‘ರಾಜಿ’ ಯೊಡನೆ ಮಾತ್ರ ಎಲ್ಲಾ ತೆರೆದಿತ್ತು. ಕಾರಣ ಅವಳ ಮನೆಯ ವಾತಾವರಣ ನಮ್ಮದಕ್ಕಿಂತ ಅಧ್ವಾನವಿತ್ತು. ಸಾಹಿತ್ಯ, ಚಿತ್ರಕಲೆ, ಛಾಯಾಚಿತ್ರಣ, ಕತೆ ಕವನ, ವಿಜ್ಞಾನ ಅಲೆದಾಟ ಎಲ್ಲವನ್ನೂ ಹಂಚಿಕೊಂಡ ನಮ್ಮ ಸ್ನೇಹ ಗಾಢವಾಗಿತ್ತು. ಆದರೆ ಹಂಚಿಕೊಳ್ಳದೆ ಉಳಿದದ್ದು ಅಗಾಧವಿತ್ತು. ಒಂದು ಮುಂಜಾನೆ ಫೋನ್ ಬಂತು. ರಾಜಿ ಆತ್ಮಹತ್ಯೆ ಮಾಡಿ ಕೊಂಡಿದ್ದಳು. ಹತ್ತಿರದವರ ಯಾವ ಸಾವನ್ನೂ ನೋಡದ ನಾನು ವಿಕ್ಟೋರಿಯಾ ಆಸ್ಪತ್ರೆಗೆ ಓಡಿದಾಗ, ಶವಾಗಾರದ ಕಲ್ಲುಬೆಂಚಿನ ಮೇಲೆ ರಕ್ತ ಒಸರುತ್ತಾ ಒರಗಿದ್ದ ‘ರಾಜಿ’ ಅನಾಥ ಹೆಣವಾಗಿ ದ್ದಳು. ಅವಳು ನನ್ನ ಕತೆಗಳಿಗೆ ವಸ್ತುವಾಗ ಬಯಸಿರಲಿಲ್ಲ. ಆದರೆ ಪ್ರತಿ ಕತೆಯ ಹಿನ್ನೆಲೆ ಯಾಗಿ ಉಳಿದಳು. ಅವಳನ್ನು ಹಿಡಿದು ಜಗ್ಗಿ ಕೇಳಬೇಕೆನ್ನಿಸಿತು. ‘ಏಕೆ ಹೀಗೆ ಮಾಡಿದೆ?’ ಎಲ್ಲಿ ಹೋಯ್ತು ನಿನ್ನ ದಿಟ್ಟತನ? ಸಾಲು ಸಾಲು ಡಿಗ್ರಿಗಳು, ಅಷ್ಟೆಲ್ಲ ಪ್ರತಿಭೆ? – ಇವು ಯಾವುವೂ ಈ ಹುಡುಗಿಯನ್ನು ಉಳಿಸಲಿಲ್ಲ. ತನ್ನಾಳದ ನೋವನ್ನು ಅತ್ಯಂತ ಆಪ್ತರಲ್ಲೂ ಹಂಚಿಕೊಳ್ಳದೆ ಮರೆಯಾದಳು. ಹೆಣ್ಣ ಕತೆಗಳು ಕೊಂಡಿಯಾಗದೆ, ಕಣ್ಣ ಕಂಬನಿಯಾಗಿ ಮುಸುಕಿನಡಿಯ ಪಿಸುಮಾತಿನಲ್ಲಿ ಹಿಂಗುವುದೇಕೆ ಅನಿಸಿತು. ಮೆಲ್ಲನೆ ನನ್ನೊಳಗಿನ ಅಳುಕು ಆತಂಕ ಆತ್ಮವಂಚನೆಯ ಪಂಜರದೊಳಗಿಂದ ಹೊರಗೆ ಬಂದೆ. ಹಂಚಿಕೊಂಡಂತೆ ನನ್ನ ಸ್ನೇಹರಂಗ ಹಿಗ್ಗಿತು, ವಿಸ್ತಾರವಾಯಿತು. ನನ್ನ ಬಗ್ಗೆ ನಾ ಹೇಳಿಕೊಂಡಂತೆ, ಸುತ್ತಲಿದ್ದ ಎಲ್ಲಾ ಸಂಸಾರಗಳೂ ಹೊರಗೆ ಕಂಡಷ್ಟೇ ಸರಳವಿಲ್ಲ ಎಂಬ ಸತ್ಯ ಅರಿವಾಯಿತು. ಒಬ್ಬೊಬ್ಬ ರಿಗೂ ಅವರದೇ ನೋವು, ನಲಿವುಗಳಿದ್ದವು. ನನ್ನ ಕತೆಗಳು ಬದುಕಿಗೆ ಹತ್ತಿರವಾದವು.

೧೯೯೨ರಲ್ಲಿ ನನ್ನ ಎರಡನೇ ಕಥಾಸಂಕಲನ ‘ಮತ್ತೆ ಬರೆದ ಕತೆಗಳು’ ಹೊರ ತಂದಾಗ ಅದನ್ನು ರಾಜಿಗೆ ಅರ್ಪಿಸಿ ಹೀಗೆ ಬರೆದಿದ್ದೆ :

ಬೆಳೆವ ನೋವಿನಲ್ಲಿ ಕಣ್ಮರೆಯಾದವಳು ನೀನು. ನರಕ್ಕೆ ಬ್ಲೇಡು ತೀಡಿ, ನೀ ಬದುಕು ಮುಗಿಸಿ ಇಂದಿಗೆ ಆರು ವರ್ಷ! ಅರೆ ಕ್ಷಣದಲ್ಲಿ ಬದುಕಿನಾಚೆಗೆ ದಾಪುಗಾಲು ಹಾಕಿ ನಡೆದೇ ಬಿಟ್ಟೆ. ಒಮ್ಮೆ ಹಿಂತಿರುಗಿ ನೋಡಬಹುದಿತ್ತು ಬದುಕಿನ ಅನಂತ ಸಾಧ್ಯತೆಗಳತ್ತ, ನಮ್ಮತ್ತ. ಎಷ್ಟೆಲ್ಲ ಹಂಚಿಕೊಂಡೆವು – ಬಾಲ್ಯವನ್ನು, ಕಿಶೋರವನ್ನು, ಚಾಮುಂಡಿ ಬೆಟ್ಟವನ್ನು, ಕ್ಯಾಮರಾ ಹೆಗಲಿಗೇರಿಸಿ ಸುತ್ತಿದ ಶ್ರೀರಂಗಪಟ್ಟಣವನ್ನು, ದಂಡಿ ಪತ್ರಮಿತ್ರರನ್ನು, ಬದುಕಿನ ಒಂದಿಷ್ಟು ಸೊಗಸನ್ನು. ನನಗೆ ಪ್ರೀತಿ ಕೊಟ್ಟು ನಿನಗೆ ಮೃತ್ಯುವಾದ ಬೆಂಗಳೂರನ್ನು ಹಂಚಿಕೊಳ್ಳದೆ ಉಳಿದದ್ದೂ ಬಹಳವಿತ್ತು. ನಮ್ಮೊಳಗಿನ ಪುಳಕವನ್ನು, ಆತ್ಮ ವಂಚನೆಯನ್ನು, ಬೆಳೆಯುವ ಅನಿವಾರ್ಯ ನೋವನ್ನು ಕಕ್ಕಲಾರದ ಭಾವನೆಗಳನ್ನು. ಉರಿಯುವಾಗಲೂ ನೋವನ್ನೆಲ್ಲ ನಿನ್ನೊಳಗೇ ಅಡಗಿಸಿಕೊಂಡೆ. ಈ ಬದುಕನ್ನು ಜಗತ್ತನ್ನು ಬಿಟ್ಟು ಹೋಗುತ್ತಾ ಕುಳಿತಿದ್ದ ಆ ಕ್ಷಣದಲ್ಲಿ…ಜೀವರಸ ಹನಿಹನಿಯಾಗಿ ವಿಷಭರಿತವಾದ ಕ್ಷಣದಲ್ಲಿ…ಬದುಕು ತೊಟ್ಟಿಕ್ಕಿ ಸೋರಿ ಹೋಗುತ್ತಿದ್ದ ಸಮಯದಲ್ಲಿ…ಅದೆಷ್ಟು ನೋವು ಅನುಭವಿಸಿದೆಯೆ ಹುಡುಗಿ? ಸಾಲು ಸಾಲು ಡಿಗ್ರಿಗಳನ್ನು, ಹೊರೆ ಹೊರೆ ಪ್ರತಿಭೆಯನ್ನು ಹೊತ್ತು ಇಲ್ಲವಾದೆ. ನನ್ನ ಬದುಕು – ಬರಹವೆಲ್ಲ, ನನ್ನ – ನಿನ್ನ ಸ್ನೇಹದ ವಿಚಿತ್ರ ತಿರುವುಗಳಲ್ಲಿ ಗಸ್ತು ಹೊಡೆದು ಹೊಸ ಹೊಸ ಅರ್ಥಗಳನ್ನು ಆಯಾಮಗಳನ್ನು ಪಡೆಯುತ್ತದೆ. ಮುಚ್ಚಿಟ್ಟ ನನ್ನೊಳಗನ್ನು, ಬರಹ ದಲ್ಲಾದರೂ ಬಿಚ್ಚಿ ಬೆತ್ತಲಾಗಲು ಪ್ರೇರೇಪಿಸುತ್ತದೆ. ಜೀವ ಬೇಸರವಾದ ಕ್ಷಣದಲ್ಲಿ ನಿನ್ನ ನೆನಪಾಗುತ್ತದೆ. ಶವಾಗಾರದಲ್ಲಿ ಉಸಿರು ಕಟ್ಟಿಸಿದ ಸಾವಿನ ಚಿತ್ರ ಕಣ್ಣೆದುರು ನಿಲ್ಲುತ್ತದೆ. ಮರುಕ್ಷಣ ಜಿಗಿಯುತ್ತೇನೆ ಸಾವಿನೀಬದಿಗೆ – ಬದುಕು ನಿನ್ನಲ್ಲೆಂಥಾ ಮುನಿಸು – ಎಂದು, ಇನ್ನಿಲ್ಲದ ಪ್ರೀತಿಯಲ್ಲಿ ಮತ್ತೆ ಬರೆದ ಕತೆಗಳಿವು. ಇವು ನಿನಗೆ, ಜಗತ್ತಿನ ಪ್ರತಿಭೆಯನ್ನೆಲ್ಲ ಹೊತ್ತು ಹುಟ್ಟಿದ ನಿನ್ನಂಥಾ ಹುಡುಗಿಯರಿಗೆ. ಆದರೆ ಸತ್ತು ಮುಗಿಯದೆ, ಇದ್ದು ಬದುಕುವ ದಿಟ್ಟೆಯರಿಗೆ, ಮತ್ತೆ ಮತ್ತೆ ಪ್ರಾರಂಭಿಸಬಲ್ಲ ಛಲಗಾತಿಯರಿಗೆ.

ಕತೆ ಬರೆಯುವ ಅನಿವಾರ್ಯತೆ ನನಗಿದೆ. ನನ್ನೊಳಗೇ ಕಾಡಿದ, ಅದೆಷ್ಟೋ ದಿನ, ತಿಂಗಳು, ವರ್ಷಗಳು ಕಾಡಿದ ವಿಷಯಗಳ ಸ್ಪಷ್ಟತೆಗೆ, ಒಳಗೊಳಗೆ ಗಸ್ತು ಹೊಡೆದು ಕದಡಿದ ವಿಚಾರಗಳ ಉಚ್ಛಾಟನೆಗೆ ನಾ ಕತೆ ಬರೆಯಲು ತೊಡಗುತ್ತೇನೆ. ಬರೆದಂತೆ ನನ್ನನ್ನು ನಾನು ಕಂಡುಕೊಳ್ಳುವುದು ಸಾಧ್ಯವಾಗಿದೆ. ಬರೆದಂತೆ ನನ್ನ ವಿಚಾರಗಳು ನನಗೇ ಸ್ಪಷ್ಟವಾಗಿವೆ. ಬರಹ ಸ್ವ – ಅನ್ವೇಷಣೆಯ ಮಾಧ್ಯಮವಾಗಿದೆ. ವೈಯಕ್ತಿಕ ತುರ್ತಿನಲ್ಲಿ ಹೊರಬಿದ್ದ ಕತೆಯನ್ನು ಸಾರ್ವಜನಿಕಗೊಳಿಸುವಾಗ ತಿದ್ದಿ ತೀಡಿ ಕಸೂತಿ ಹೆಣೆದು ಹೊರಬಿಡುತ್ತೇನೆ. ನನ್ನನ್ನು ಕಾಡಿದ ಅನೇಕ ವಿಷಯಗಳೇ ಕತೆಗೆ ವಸ್ತುವಾದವು.

ಮಗಳಾದರೂ ಮಡದಿಯಾದರೂ ಮಾತೆಯಾದರೂ ‘ಹೆಣ್ಣಾಗದ’ ಸಮಸ್ಯೆಯ ಸೂಕ್ಷ್ಮ ಗಳು ಕಾಡಿದಾಗ ‘ಮತ್ತೆ ಬರೆದ ಕವನಗಳು’ ಕತೆ ಹೊರಬಿತ್ತು. ‘ತಾಯ್ತನ’ದ ಇಚ್ಛೆ ಹೆಣ್ಣಿಗೆ ಸಹಜವೆ ಎಂಬ ಪ್ರಶ್ನೆ ‘ಹೊಸ ಹುಟ್ಟು’ ಕತೆಗೆ ಹಿನ್ನೆಲೆಯಾಯಿತು. ಬೌದ್ದಿಕವಾಗಿ ಬಂಜೆಯ ರಾದ ಸಹಸ್ರ ಸಹಸ್ರ ಜನರನ್ನು ಕಾಡದ, ದೈಹಿಕ ಬಂಜೆತನದ ವಿಷಯ ಬರೆಯಲು ಪ್ರಚೋದಿಸಿತು.

ಕತೆ ನನ್ನ ಮನಸ್ಸಿನ ಹೊಯ್ದಾಟವನ್ನು ಸೀಮಿತಕ್ಕೆ ತಂದ ಸಾಧನವೂ ಆಗಿದೆ. ನನಗೆ ನೆನಪಿದೆ. ಎಂಟು ವರ್ಷಗಳ ಹಿಂದೆ, ದಿಲ್ಲಿಯಲ್ಲಿ ಅತ್ತೆಯ ಮನೆಯಲ್ಲಿ ನಡೆದ ಘಟನೆ. ಅಮೇರಿಕದಲ್ಲಿ ನೆಲೆಸಿದ ನನ್ನವರ ಅಕ್ಕನ ಒತ್ತಾಯ – ಅಮೇರಿಕೆಗೆ ಬರುವಂತೆ, ಡಾಲರ್ ಎಣಿಸುವಂತೆ, ‘ಕಾಮಯಾಬ್’ ಆಗುವಂತೆ. ಹೇರಳವಾಗಿ ಹಣ ಗಳಿಸದ, ಒಂದು ಗಾಡಿಯೂ ಇಲ್ಲದ ನಮ್ಮ ‘ಅಲ್ಪ – ತೃಪ್ತ’ ಬದುಕಿನ ಬಗ್ಗೆ ಬಹಳಷ್ಟು ಹೀನಾಯವಾಗಿ ಮಾತನಾಡಿದಾಗ, ನನ್ನೊಳಗೆ ಮಥಿಸಿದ ಅನೇಕ ಪ್ರಶ್ನೆಗಳು ಕತೆಯಾದವು – ‘ಬದುಕು ಕಾಯುವುದಿಲ್ಲ’ ರೂಪು ಗೊಂಡಿತು. ಈ ಕತೆಯನ್ನು ಬರೆಯುವಷ್ಟು ತಿಂಗಳುಗಳು ನನಗೆ ನಮ್ಮ ಬಗ್ಗೆ, ನಾವು ಆಯ್ದ ಬದುಕಿನ ಬಗ್ಗೆ ಪುರಸತ್ತಾಗಿ ಚಿಂತಿಸಲು, ಕೇಂದ್ರೀಕರಿಸಲು ಸಾಧ್ಯವಾಯಿತು. ನಮ್ಮ ಬದುಕನ್ನು ನಮ್ಮಂತೆ, ನಮ್ಮ ಆಯ್ಕೆಯಂತೆ ಬದುಕುವ ಆತ್ಮವಿಶ್ವಾಸವನ್ನು ಕೊಟ್ಟಿತ್ತು. ನನ್ನ ಕತೆಗಳ ಸೋಲು – ಗೆಲುವುಗಳೇನೇ ಇರಲಿ, ಈ ಕತೆಗಳನ್ನು ಬರೆದು ನಾ ಬಹಳಷ್ಟು ಹಗುರಾಗಿದ್ದೇನೆ.

ಕತೆಗಳಾಚೆ ನಾನು ಹೆಚ್ಚು ಬರೆದಿರುವುದು ಜೀವನ ಚಿತ್ರಗಳನ್ನು, ಮಹಿಳಾ ಪರಂಪರೆ ಯನ್ನು ಪುನರ್‌ಪರಿಚಯಿಸುವ ಸಣ್ಣ ಪ್ರಯತ್ನ ನನ್ನ ಅನೇಕ ಬರಹಗಳದ್ದಾಗಿದೆ. ನನಗೆ ನೆನಪಿದೆ, ಮೈಸೂರಿನಲ್ಲಿ ಪಿ.ಯು.ಸಿ. ಮುಗಿಸಿ ಬಿ.ಇ.ಗೆ ಸೇರಿದ್ದೆ. ನನ್ನ ಎದುರು ಪ್ರತ್ಯಕ್ಷ ಮಾದರಿಗಳಿರಲಿಲ್ಲ. ಬಹುಶಃ ನಾ ಓದಿದ ಪುಸ್ತಕಗಳೇ ನನಗೆ ನನ್ನ ಆಯ್ಕೆಯ ರಂಗಕ್ಕೆ ನುಗ್ಗುವ ಧೈರ್ಯ ಕೊಟ್ಟಿದ್ದವು. ‘ಕಾರ್ಪೆಂಟ್ರಿ ಇರುತ್ತೆ, ಮಷಿನ್‌ಶಾಪ್ ಇರುತ್ತೆ, ಇದೆಲ್ಲ ಹೆಂಗಸರಿಗಲ್ಲ’ ಎಂದು ಹೆದರಿಸಿದವರು ಇದ್ದರು. ಅಳುಕುತ್ತಲೇ ಒಳ ಹೊಕ್ಕ ನಾನು ಮತ್ತು ನನ್ನ ಸ್ನೇಹಿತೆ ರ‍್ಯಾಂಕ್ ಪಡೆದು ಹೊರಬಂದಾಗ, ಅಲ್ಲಿ ಮಹಿಳೆಯರಿಗೆ ಅಸಾಧ್ಯವಾದ ಅದ್ಭುತವೇನೂ ಇರಲಿಲ್ಲ ಎಂದು ಅರಿವಾಗಿತ್ತು. ಇಂದು ವಿಜ್ಞಾನ ರಂಗದ ಮಹಿಳೆಯರನ್ನು, ವೈಮಾಸಿಕ ರಂಗದ ಮಹಿಳೆಯರ ಬಗ್ಗೆ ರಾಶಿ ರಾಶಿ ಮಾಹಿತಿ ಸಂಗ್ರಹಿಸಿ ಪುಸ್ತಕ ಬರೆಯುತ್ತಿ ರುವ ಸಂದರ್ಭದಲ್ಲಿ, ಅಂದು ನನಗೆ ‘ಮೇರಿಕ್ಯೂರಿ’ ಒಂದು ಹೆಸರು ಬಿಟ್ಟರೆ ಮತ್ಯಾರೂ ಏಕೆ ಗೊತ್ತಿರಲಿಲ್ಲ? ಪ್ರಶ್ನೆ ಕಾಡುತ್ತದೆ. ಇತಿಹಾಸದಾಳದಲ್ಲಿಯ ಅದ್ಭುತ ಮಹಿಳಾ ವಿಜ್ಞಾನಿಗಳ ವೈಮಾನಿಕೆಯರ ಕತೆಗಳೇಕೆ ನಮ್ಮ ಮಕ್ಕಳಿಗಿನ್ನೂ ದಕ್ಕಿಲ್ಲ? ಸಾಹಿತ್ಯರಂಗವಾಗಲೀ ವಿಜ್ಞಾನ ರಂಗವಾಗಲೀ ವೈಮಾನಿಸಿಕ ರಂಗವಾಗಲಿ – ಯಾವುದೇ ವಲಯದಲ್ಲೂ ಮಹಿಳೆಯರು ಚರಿತ್ರೆಯಲ್ಲಿ ಬಿಟ್ಟು ಹೋಗಿರುವುದು ಆಕಸ್ಮಿಕವಲ್ಲ ಎನಿಸಿತು. ಇತಿಹಾಸದಲ್ಲಿ ಕಳೆದು ಹೋದ ಮಹಿಳಾ ವಿಜ್ಞಾನಿಗಳನ್ನು, ವೈಮಾನಿಕೆಯರನ್ನು ಅಗೆದು ತೆಗೆದು ನಮ್ಮ ಸ್ತ್ರೀ ಪರಂಪರೆಯನ್ನು ಪರಿಚಯಿಸುವ ಯತ್ನ ನನ್ನ ಗೀಳಾಯಿತು, ನನ್ನ ಅಧ್ಯಯನ ಮತ್ತು ಬರಹದ ವಸ್ತುವಾಯಿತು. ಮಹಿಳಾ ಸಾಧಕಿಯರ ಚರಿತ್ರೆಯನ್ನು ಹುಡುಕಿ ಹೊರಟೆ. ಮಹಿಳಾ ವಿಜ್ಞಾನಿಗಳು, ಮಹಿಳಾ ವೈದ್ಯರು, ಮಹಿಳಾ ವೈಮಾನಿಕರು, ನೊಬೆಲ್ ಪ್ರಶಸ್ತಿ ಪಡೆದ ಮಹಿಳಾ ವಿಜ್ಞಾನಿಗಳು, ನೊಬೆಲ್ ಪ್ರಶಸ್ತಿ ವಂಚಿತ ಮಹಿಳಾ ವಿಜ್ಞಾನಿಗಳು – ಈ ಎಲ್ಲ ಲೇಖನಗಳು. ‘ಮಹಿಳಾ ಅಧ್ಯಯನ’ದ ಪುಸ್ತಕ ಹೊರಬಂದದ್ದು ಈ ಹಿನ್ನೆಲೆಯಲ್ಲಿ.

ನನ್ನ ಮೊದಲ ಬರಹಗಳು ಕವಿತೆಗಳಾಗಿದ್ದವು. ಎಲ್ಲಿಯೋ ಈ ಬರಹದ ಹಾದಿಯಲ್ಲಿ ನನ್ನ ಅಭಿವ್ಯಕ್ತಿಯ ಮಾಧ್ಯಮ ಸಣ್ಣಕತೆ ಎನಿಸಿ ಅತ್ತ ಹೊರಳಿದ್ದೆ. ಆದರೆ ಹಾಡು ಕಟ್ಟುವು ದನ್ನು ನಾನೆಂದೂ ಬಿಡಲಿಲ್ಲ. ಎದೆಯ ತೇವದ ಭಾವಗಳೆಲ್ಲ ಹೊರಬೀಳುವುದು ಹಾಡಾಗಿ. ಆದರೆ ಅವೆಲ್ಲವೂ ಅತಿ ವೈಯಕ್ತಿಕವಾದ ನನ್ನ ಡೈರಿಯಲ್ಲಿ ಬಂಧಿಯಾದ ಕವಿತೆಗಳು. ಅವನ್ನೆಂದೂ ನಾನು ಪ್ರಕಟಣೆಗೆ ಕಳುಹಿಸಲಿಲ್ಲ. ಆದರೆ ಮತ್ತೊಂದು ಬಗೆಯ ಹಾಡು ಕಟ್ಟುವುದುಂಟು. ಸಾಕ್ಷರತಾ ಗೀತೆ, ಭಾಂವ್ರಿದೇವಿಯ ಕುರಿತು ಲಾವಣಿ, ಕೋಮು ಸೌಹಾರ್ದ ಗೀತೆ, ಬಾಗೂರು ನವಿಲೆಯ ಹೋರಾಟ – ಇವೆಲ್ಲವೂ ನಿಖರ ಉದ್ದೆಶದಿಂದ ಹುಟ್ಟಿಕೊಂಡ ಹಾಡುಗಳು. ಈ ಗೀತೆಗಳಲ್ಲಿ ಕಾವ್ಯದ ಯಾವ ಗುಣಲಕ್ಷಣ ಇಲ್ಲದಿದ್ದರೂ, ಅವು ತಮ್ಮ ಸೀಮಿತ ಉದ್ದೇಶವನ್ನು ಸಾಧಿಸಿವೆ ಎಂಬ ನಂಬುಗೆ ನನಗೆ. ಇವೆಲ್ಲವೂ ಹೋರಾಟದ ಭಾಗವಾಗಿ ಮೂಡಿ ಬಂದವು. ಅವನ್ನು ನಾನು ಕವಿತೆ ಎನ್ನಲೂ ಸಂಕೋಚ ಪಡುತ್ತೇನೆ. ಆದರೆ ಈ ಹಾಡುಗಳು ಎದೆಯ ಆಳದಿಂದ ಮೂಡಿಬಂದವು. ಈ ವಿಷಯದ ಬಗ್ಗೆ ನನಗಿದ್ದ ತೀವ್ರ ಕಾಳಜಿಯ ಕಾರಣವಾಗಿ ಮೂಡಿ ಬಂದ ಈ ಗೀತೆಗಳು ನಿರಾಯಾಸವಾಗಿ ಹೊರ ಬಿದ್ದವು. ‘ನ್ಯಾಯಕ್ಕಾಗಿ ಕಾದ ಭಾಂವ್ರಿದೇವಿ’ ಸಣ್ಣ ಹೊತ್ತಿಗೆ ಬರೆದಿದ್ದೆ. ಮನಸ್ಸಿಗೆ ತೃಪ್ತಿ ಇರಲಿಲ್ಲ. ಆಕೆಯ ಕತೆಯನ್ನು ಹಾಡಾಗಿ ಹಾಡುವ ವಿಚಾರ ನಮ್ಮ ‘ಜಾಗೃತಿ ಮಹಿಳಾ ಅಧ್ಯಯನ ಸಂಸ್ಥೆ’ಯ ಗೆಳತಿಯರು ಮುಂದಿಟ್ಟಾಗ, ಭಾಂವ್ರಿಯ ಕತೆಯನ್ನು ಹಾಡಾಗಿಸಿದೆ –

ರಾಜಾಸ್ತಾನದ ಭತೇರಿ ಗ್ರಾಮದ
ಭಾಂವ್ರಿದೇವಿಯ ಕತೆ ಇದು
ಬಡವರ ಬಾಳಿನ ಮಾಯದ ನೋವಿನ
ಮುಗಿಯದ ವ್ಯಥೆಯ ಕತೆ ಇದು
ಮಣ್ಣಲಿ ಮಡಕೆಯ ಮಾಡುವ ಬಡವರ
ಗುಡಿಲಲಿ ಭಾಂವ್ರಿ ಜನಿಸಿದಳು
ನಾಲ್ಕು ವರುಷಕ್ಕೆ ಕೂಸಿನ ಕೊರಳಿಗೆ
ತಾಳಿಯ ಬಿಗಿದರು ಹಿರಿಯರು

– ಎಂದು ಆರಂಭವಾದ ಹಾಡು ಅವಳ ಬದುಕನ್ನು ತೆರೆದಿಟ್ಟಿತು.

ಬೆಳೆದಳು ಭಾಂವ್ರಿ ಬದುಕಿನ ಕಹಿ ನುಂಗಿ
ತುಳಿತವ ಸಹಿಸಿದ ನೆಲದಂತೆ
ಬಾಲ್ಯವಿವಾಹದ ಪಿಡುಗಿದು ನಿಲ್ಲಲಿ
ಅಳಿಯಲಿ ಧರೆಯಲಿ ಇಲ್ಲದಂತೆ

– ಎಂದು ಹೊರಟು ಹಾಡು, ಭಾಂವ್ರಿಯ ಹೋರಾಟದ ಕತೆಯನ್ನು ಹೇಳಿತು. ಮೊನ್ನೆ ಗುಜರಾತಿನ ಗಲಭೆಯ ಹಿನ್ನೆಲೆಯಲ್ಲಿ ಕೋಮು ಸೌಹಾರ್ದ ಸಮಾರಂಭ ಏರ್ಪಡಿಸಿದಾಗ, ಭಾಷಣ ಬೇಡ, ಹಾಡು ಹಾಡೋಣ ಎಂದು ನಿರ್ಧರಿಸಿದ್ದೇವೆ. ರಾತ್ರಿ ಬರೆಯಲು ಕುಳಿತೆ –

ಇಟ್ಟಿಗೆ ಮೇಲೆ ಇಟ್ಟಿಗೆ ಇಟ್ಟು
ಎಣಿಸಿದರಲ್ಲಿ ಹೆಣಗಳನು
ಜನಗಳ ನಡುವೆ, ಮನಗಳ ನಡುವೆ
ದ್ವೇಷದ ಗೋಡೆಯ ಕಟ್ಟಿದರು

– ಪದಗಳು ಹರಿದು ಬಂದವು

ಕಾಶ್ಮೀರದಲ್ಲಿ ಸಾಯುವ ಹಿಂದು
ಗುಜರಾತಲ್ಲಿ ಮುಸಲ್ಮಾನ್
ಸತ್ತರು ಇಸಾಯಿ ಒರಿಯಾದಲ್ಲಿ
ಸಿಕ್ಕರು ಮಡಿದರು ದಿಲ್ಲಿಯಲಿ
ದೇವರ ಹೆಸರಲಿ, ಧರ್ಮದ ಹೆಸರಲಿ
ಜಾತಿವಾದವ ಬಿತ್ತುವರು
ಹೆಣಗಳ ಬಣವೆಯ ಮೇಲ್ಗಡೆ ಕುಳಿತು
ಮತಗಳ ಎಣಿಸುವ ಹದ್ದುಗಳು
ನಡುವೆ ಎಳೆದಿಹ ಗೆರೆಗಳ ಅಳಿಸಿ
ಕದನವಿರಾಮಕೆ ಕರೆ ನೀಡಿ
ಸಾವಿನ ತಾಂಡವ ನೃತ್ಯವ ನಿಲ್ಲಿಸಿ
ಒಂದಾಗುವ ನಾವ್ ಒಗ್ಗೂಡಿ

ನಿರಾಯಾಸವಾಗಿ ಹರಿದಿತ್ತು ಸುಮಾರು ೭೦ ಸಾಲುಗಳುದ್ದದ ಗೀತೆ. ಆಗೆಲ್ಲ ಬರೆದದ್ದು ನಾನು ಅನಿಸುವುದಿಲ್ಲ. ಇವು ನನ್ನ ಗೀತೆಗಳು ಎಂದೂ ಅನಿಸುವುದಿಲ್ಲ. ನಮ್ಮೆಲ್ಲರ ಒಟ್ಟು ಕಳಕಳಿ, ಆಕ್ರೋಶ, ಮಡುಗಟ್ಟಿದ ಭಾವಗಳು, ಹೋರಾಟದ ಚೈತನ್ಯ ಹೊರಹಾಕಿದ ಗೀತೆಗಳಿವು ಎನಿಸುತ್ತದೆ. ಸಾಹಿತ್ಯದ ದೃಷ್ಟಿಯಲ್ಲಿ ಇವಕ್ಕೆ ಬೆಲೆ ಇಲ್ಲದಿದ್ದರೂ, ನನಗೆ ಅತ್ಯಂತ ತೃಪ್ತಿ ಮತ್ತು ಸಮಾಧಾನ ನೀಡಿದ ಬರಹಗಳಿವು.

ನನಗೆ ಋಷಿ ಕೊಟ್ಟ ಬರಹದ ಮತ್ತೊಂದು ಪ್ರಕಾರ ‘ಪ್ರವಾಸ ಕಥನ’. ನನ್ನ ಬರಹಗಳಿ ಗಾಗಿ ನಾನು ಬಹಳಷ್ಟು ಅಲೆದಾಡಿದ್ದೇನೆ. ಭಾರತದ ಮಹಿಳೆಯರಿಗೆ ವೈದ್ಯರಂಗದ ಬಾಗಿಲು ತೆರೆಸಿದ ಮೇರಿ ಶರ್ಲಿ ಹುಡುಕಿ ಮೂರು ಬಾರಿ ಮದ್ರಾಸಿಗೆ ಹೋಗಿದ್ದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡದಲ್ಲಿ ಹುತಾತ್ಮನಾದ ಪತಿಯ ಹೆಣಕ್ಕೆ ಹೆಗಲು ಕೊಟ್ಟು ಹೊತ್ತು ತಂದ ಸ್ವಾಭಿಮಾನಿ ಹೆಣ್ಣು ಅತ್ತರ ಕೌರ್ ಹುಡುಕಿ ಅಮೃತಸರ ತಲುಪಿದ್ದೆ. ಕೌಟುಂಬಿಕ ಕ್ರೌರ್ಯದಿಂದ ಜಿಗಿದು ಹೊರಬಂದ ಫ್ಲೇವಿಯಾರನ್ನು ಭೇಟಿಯಾಗಲು ಮೂರ್ನಾಲ್ಕು ಬಾರಿ ಮುಂಬೈಗೆ ಹೋದದ್ದುಂಟು. ಈ ಅಲೆದಾಟ ನನಗೆ ಬಲು ಪ್ರಿಯವಾಗಿದೆ. ಮಹಿಳಾ ವಿಜ್ಞಾನಿಗಳ, ಮಹಿಳಾ ವೈಮಾನಿಕೆಯರ ಶತಶತಮಾನಗಳ ಚರಿತ್ರೆಯನ್ನು ಸಂಗ್ರಹಿಸುವ ಬಯಕೆ ನನ್ನನ್ನು ದೇಶ ವಿದೇಶಗಳ ಮೂಲೆ ಮೂಲೆಗೆ ಕೊಂಡೊಯ್ಯಿತು. ಮಹಿಳಾ ಸಾಧಕಿಯರ ಪರಂಪರೆಯನ್ನು ಹುಡುಕಿ ಹೊರಟ ನನ್ನ ವೈಯಕ್ತಿಕ ಪ್ರವಾಸಗಳ ಅನುಭವ ‘ಪ್ರವಾಸ ಸಾಹಿತ್ಯ’ವಾಗಿಯೂ ಹೊರಬಂದಿತು. ವರ್ಷ ವರ್ಷಗಳು ಕೂಡಿಟ್ಟ ಕುಡಿಕೆ ಹಣದಲ್ಲಿ ಕನಸಿನ ಪಯಣದ ತಯಾರಿ ಮಾಡಿದೆ. ಮೇರಿ ಕ್ಯೂರಿಯ ಪ್ರಯೋಗಶಾಲೆಯನ್ನು ಹುಡುಕಿ ಹೋದೆ, ಬ್ರಾಂಟೆಯ ‘ಮೂರ್’ಗಳಲ್ಲಿ ಅಲೆದು ಬಂದೆ. ಪ್ರಥಮ ಸ್ತ್ರೀವಾದಿ ಲೇಖಕಿ ಆಫ್ರಾಬೆನ್‌ಳ ಹಳ್ಳಿಯನ್ನು ಶೋಧಿಸಿದೆ. ಆನ್ ಫ್ರಾಂಕಳ ಗುಪ್ತಗೃಹವನ್ನು ಕಂಡು ಬಂದೆ. ಶತಶತಮಾನಗಳ ಹಿಂದಿನ ಮಹಿಳಾ ವಿಜ್ಞಾನಿಗಳ ಬಹಳಷ್ಟು ತಾಣಗಳನ್ನು ಹುಡುಕಿ ಇಂಗ್ಲೆಂಡ್, ಯುರೋಪು, ಅಮೇರಿಕಗಳನ್ನು ಅಲೆದು ಬಂದೆ. ತನ್ನ ಬದುಕಿನ ನಲವತ್ತು ವರ್ಷಗಳನ್ನು ಪೆರುವಿನ ಅದ್ಭುತ ನಾಸ್ಕಾ ಚಿತ್ರಗಳ ಅಧ್ಯಯನದಲ್ಲಿ ಕಳೆದ ವಿಜ್ಞಾನಿ ಮರಿಯಾ ರೇಕಿಯನ್ನು ಹುಡುಕಿ, ದಕ್ಷಿಣ ಅಮೇರಿಕದ ಪೆರುವಿನ ಸಣ್ಣ ಹಳ್ಳಿಯನ್ನೂ ತಲುಪಿದೆ. ಕನಸುಗಳು ಹಿಗ್ಗಿದವು. ಮಹಿಳಾ ವಿಜ್ಞಾನಿಗಳ, ವೈಮಾನಿಕೆಯರ ವಿಷಯ ಸಂಗ್ರಹಕ್ಕೆಂದು ಹೊರಟ ಆರಂಭದ ಮೂಲ ಉದ್ದೇಶದಾಚೆಗೆ ನನ್ನ ಪ್ರವಾಸ ಹರಡಿ ವಿಸ್ತರಿಸಿತು. ಆಂಡೀಸ್ ಪರ್ವತ ಶಿಖರಗಳಲ್ಲಿ ಅಲೆದು, ಪೆರುವಿನ ಪವಿತ್ರ ಕಣಿವೆಗಳಲ್ಲಿ ಇಳಿದು, ‘ಮಾಚು ಪಿಚು’ವಿನ ಎತ್ತರದಲ್ಲಿ ನಿಂತು, ಅಮೆಜಾನ್ ಕಾಡುಗಳಲ್ಲಿ ರಾತ್ರಿ ಕಳೆದು, ಅಮೆಜಾನ್ ನದಿಯ ಮೇಲೆ ೨೮ ಗಂಟೆಗಳ ಕಾಲ ತೇಲಿ ಹೋದ ಅದ್ಭುತ ಅನುಭವಗಳನ್ನು ಹೊತ್ತು ತಂದೆ. ಈ ಎಲ್ಲ ಅನುಭವಗಳು ಪ್ರವಾಸ ಸಾಹಿತ್ಯವಾಗಿ ಹೊರಬರುತ್ತಿವೆ. ಸಂಗ್ರಹಿಸಿ ತಂದ ಮಾಹಿತಿ, ಮಹಿಳಾ ಸಾಧಕಿಯರ ಅದ್ಭುತ ಪರಂಪರೆಯನ್ನು ತೆರೆದಿಡುವ ನನ್ನ ಬಯಕೆ, ನನ್ನ ಮುಂದಿನ ಬದುಕನ್ನೆಲ್ಲ ಆವರಿಸಿ ನಿಲ್ಲಲಿದೆ. ಇಂದು ನಾನು ಬರೆಯಬೇಕೆಂದಿರುವುದು ನಿಜಕ್ಕೂ ಸಾವಿರವಿದೆ. ಹೇಳಬೇಕೆಂಬ ಒಳ ಒತ್ತಡವಿದೆ. ನನ್ನ ತಂದೆಯವರಂತೆಯೇ ಬದುಕಿನ ಕೊನೆಯ ದಿನದವರೆಗೂ ನಾ ಬರಹಗಾರ್ತಿಯಾಗಿ ಉಳಿಯ ಬಯಸುತ್ತೇನೆ.