‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆ, ಬರೆಯುವ ಮೊದಲು ಅಥವಾ ಬರೆಯುವಾಗ ಎಂದೂ ನನ್ನ ಮುಂದೆ ನಿಂತಿಲ್ಲ. ಬರೆದು ಮುಗಿಸಿದ ಮೇಲೆ ಅಥವಾ ಬರೆಯಲು ಹೆಣಗಿದರೂ ಬರೆಯಲಾಗದಿದ್ದಾಗ ಈ ಪ್ರಶ್ನೆ ಮನಸ್ಸಿನೊಳಗೆ ಇಣುಕಿದ್ದುಂಟು. ಹೀಗಾದಾಗಲೆಲ್ಲಾ ಈ ಪ್ರಶ್ನೆಯನ್ನು ಅನಪೇಕ್ಷಿತ ಅತಿಥಿಯನ್ನು ಆಚೆ ದಬ್ಬಿದ ಹಾಗೆ ದಬ್ಬಿ ಬಿಟ್ಟಿದ್ದೇನೆ.

ಆದರೆ ಈಗ ಈ ಪ್ರಶ್ನೆಯ ಬೆನ್ನ ಹತ್ತಿ ನನ್ನ ಭೂತದ ಮೂಲೆ ಮೂಲೆಗಳಿಗೆ ಹೊರಡು ತ್ತೇನೆ. ನೀವೂ ಬನ್ನಿ; ಅಲ್ಲಿ ಉತ್ತರ ಪೂರ್ತಿಯಾಗಿ ಅಲ್ಲದಿದ್ದರೂ, ಉತ್ತರದ ತುಣುಕುಗಳು ಸಿಕ್ಕಬಹುದು.

ಅದೊಂದು ಸಲ ತುಮಕೂರಿನಲ್ಲಿ, ನಾನಿನ್ನೂ ಆಗ ಸ್ಕೂಲು ಹುಡುಗ. ನಮ್ಮ ನಂಟರ ಮನೆಯಲ್ಲಿ ಸಂಭ್ರಮದ ಗೃಹಪ್ರವೇಶ. ಸಿಕ್ಕಾಪಟ್ಟೆ ನಂಟರಿಷ್ಟರು ಬಂದರು, ಹೋದರು. ಇವೆಲ್ಲಾ ಮುಗಿದ ಮೇಲೂ ಆ ವಿಶಾಲವಾದ ಮನೆಯ ಮೂಲಕ ಹಬ್ಬ ಹರಿದು ಹೋಗು ವಂತಿತ್ತು. ಮನೆ ಮಕ್ಕಳೆಲ್ಲಾ ಹೊಸಮನೆಯನ್ನು ಒಪ್ಪ ಮಾಡುವುದರಲ್ಲಿ ಮುಳುಗಿ ಹೋಗಿ ದ್ದರು. ತಮ್ಮನ್ನು ತಾವು ಮರೆತು ಹೋಗಿದ್ದರು. ಆದರೆ ನನಗೆ ನಾನು ನೆನಪಾದೆ. ಈ ಸಂಭ್ರಮದಲ್ಲಿ ನಾನು ಕಳೆದು ಹೋಗುತ್ತಿದ್ದೆನೆಂದು ಅಥವಾ ಕಳೆದೇ ಹೋಗಿದ್ದೇನೆಂದು ತಳಮಳ ಶುರುವಾಯ್ತು. ಆ ಮನೆಯ ಮಹಡಿ ಮೇಲೆ ನಿಂತು ವಿಶಾಲವಾಗಿ ತಾನು ಹರಡಿ ಕೊಂಡಿದ್ದ ನೀಲಿ ಆಕಾಶವನ್ನು, ಎತ್ತರವಾಗಿ ತನ್ನನ್ನು ನಿಲ್ಲಿಸಿಕೊಂಡಿದ್ದ ಕಂದು ಹಸಿರು ಬೆಟ್ಟವನ್ನು ನೋಡಿದೆ. ಅವು ಒಂದರೊಂದರ ಕನ್ನಡಿಯಂತೆ, ಎರಡೂ ನನ್ನ ಕನ್ನಡಿಗಳಂತೆ, ನಾನೇ ಅವೆರಡರ ಕನ್ನಡಿಯಂತೆ ಅನುಭವವಾಯಿತು. ನಮ್ಮೆಲ್ಲರಲ್ಲೂ ಅದೇ ಬೆಳಕು ಹಾದು ಹೋದಂತೆ ಅನುಭವವಾಯ್ತು. ಕಳೆದುಹೋಗಿದ್ದ ‘ನಾನು’ ಆ ಅನುಭವದಲ್ಲಿ ಪ್ರತ್ಯಕ್ಷವಾಯ್ತು. ಆಗ ನನ್ನಿಂದ ಬೇರೆಯಾಗಿದ್ದ ಜಗತ್ತಿನ ಜೊತೆ ಮತ್ತೆ ನನ್ನರಿವಿನ ಜೊತೆಗೆ ಒಂದುಗೂಡಿದ ಆ ಗಳಿಗೆಯನ್ನು ಅರ್ಧಂಬರ್ಧ ಕವಿತೆ ಸಾಲುಗಳಲ್ಲಿ ಹಿಡಿದಿಟ್ಟಿದ್ದುಂಟು.

ಇನ್ನೊಂದು ಸಲ ಮದುವೆ ಮನೆಯಲ್ಲಿ ಗಡದ್ದಾಗಿ ಊಟ ಹೊಡೆದು ನಂಟರಿಷ್ಟರು ಹೋಗುತ್ತಿದ್ದ – ಬರುತ್ತಿದ್ದ ಛತ್ರದ ಬಾಗಿಲಿನಲ್ಲಿ ನಾನೊಬ್ಬ ಹುಡುಗನಾಗಿ ನಿಂತಿದ್ದೆ. ಎಂಜಲು ಬಾಳೆ ಎಲೆಗಳನ್ನು ತೊಟ್ಟಿಯೊಳಕ್ಕೆ ಚಲ್ಲಿದರು. ಆಗ ಹರುಕು ಬಟ್ಟೆಯ ತಿರುಕರು, ನಾಯಿಗಳು ಒಬ್ಬರ ಮೇಲೊಬ್ಬರು ಬಿದ್ದು ಎಂಜಲನ್ನಕ್ಕಾಗಿ ಕಿತ್ತಾಡ ತೊಡಗಿದರು. ಅಗೆಯ ತೊಡಗಿದರು. ಯಾವುದೋ ಒಂದು ಅಳುಕು ನನ್ನಿಂದ ನನ್ನನ್ನು ಕಬಳಿಸಿಕೊಂಡಿತು. ಕಬಳಿಸಿಕೊಳ್ಳಲ್ಪಟ್ಟ ನನ್ನನ್ನು ಹುಡುಕುತ್ತಾ ಹೋದಾಗ ಎದುರಿಗಿದ್ದ ತೊಟ್ಟಿಯಾದೆ, ಎಂಜಲೆಲೆಯಾದೆ, ತಿರುಕರಾದೆ, ನಾಯಿಗಳಾದೆ ಮುಂದೆ ನಾನು ಬರೆದ ‘ಮರುಳ ಶಂಕರದೇವ’ ಕವಿತೆಯ ಮೂಲ ಲಯ ಮೂಡಿಬಂದಿದ್ದು ಆಗಲೇ; ಅಲ್ಲಿಯೇ. ಆಗಲೇ ಯಾವುದೋ ಸಾಲುಗಳು ನನ್ನ ಮನದಲ್ಲಿ ರೂಪುತಾಳತೊಡಗಿದ್ದು ನೆನಪಾಗುತ್ತಿದೆ.

ನನ್ನ ಎಲ್ಲಾ ಸೂಕ್ಷ್ಮಗಳ ತವರು ಮನೆಯಾಗಿದ್ದ ನನ್ನ ತಾಯಿ ಸತ್ತ ದಿನ ವಿಚಿತ್ರವೆಂದರೆ ನಾನು ಅಳಲೇ ಇಲ್ಲ. ನನ್ನ ತಾಯಿಯನ್ನು ಬದುಕಿದ್ದಾಗ ಇಷ್ಟಿಷ್ಟೇ ಕಿರುಕುಳ ಕೊಟ್ಟು ಕೊಟ್ಟು ಕೊಂದಿದ್ದವರೆಲ್ಲಾ ಬಿಕ್ಕಿ ಬಿಕ್ಕಿ ಅಳುತ್ತಿದ್ದರು. ತಾಯಿಯ ಸಾವು, ಅದರ ಸುತ್ತಾ ನಡೆದ ವಿಧಿಗಳು, ಭಾವಾಭಿನಯಗಳು ಒಂದು ನಾಟಕದಂತೆ ನನ್ನ ಬಗೆಗಣ್ಣಿನ ಮುಂದೆ ಹಾದುಹೋದವು. ಆ ಸಾವನ್ನು ಕುರಿತ ನಾಟಕದಿಂದ ನಾನು, ನನ್ನ ತಾಯಿ ಮದುವೆ ಮನೆಯಾಚೆಗಿನ ತಿರುಕರಂತೆ ಹೊರಗುಳಿದಿದ್ದೆವು. ಸಾವಿನಿಂದ, ಸಾವಿನಾಟಕದಿಂದ ಕಳೆದುಹೋದ ಮರುದಿನ ನನ್ನನ್ನು, ತಾಯಿಯನ್ನು ಜೀವಂತ ವ್ಯಕ್ತಿಗಳನ್ನು ಹುಡುಕುವಂತೆ ಹುಡುಕುತ್ತಾ ಹೋದೆ ಒಂದು ಕವಯೆ ಮೂಲಕ. ಅಲ್ಲಿ ಇನ್ನೂ ಬದುಕಿದ್ದ ನಾನು, ಸತ್ತ ಆಕೆ, ನಮ್ಮಾಚೆಗಿನ , ಈಚೆಗಿನ, ಹಗಲು ರಾತ್ರಿಯ ಚಕ್ರಗಳು, ಋತುಚಕ್ರಗಳು ಎಲ್ಲವೂ ಒಂದಕ್ಕೊಂದು ಸಿಕ್ಕಿದವು.

ಹೀಗೆ ನನ್ನನ್ನು ಕವಿತೆ ಬರೆಯುವಂತೆ ಕೆಣಕಿದ ಘಟನೆಗಳು ಸರಣಿ ಸರಣಿಯಾಗಿ ನೆನಪಾಗುತ್ತವೆ. ನೆನಪಾಗಿ ಹೋಗಿ ಈಗ ಕಥೆಯ ತುಣುಕುಗಳಾಗುತ್ತಿರುವ ಈ ಘಟನೆಗಳ ಅಂದರೆ ನನ್ನ ಕವಿತೆಗಳ ಹುಟ್ಟಿನ ಗುಟ್ಟೇನು? ಮದುವೆ, ಗೃಹಪ್ರವೇಶ, ಮೃತ್ಯುವಿಧಿಗಳು ಮುಂತಾದ ನಮ್ಮ ಕೂಡುಬಾಳಿನ ಸಂಕೇತಗಳು ನಮ್ಮ ಅಭಿವ್ಯಕ್ತಿಗಳು. ಇತರರ ಜೊತೆಗೆ, ಇದಿರಿನ ಜೊತೆಗೆ ನಮ್ಮ ಸಂಬಂಧವನ್ನು ಸ್ಥಿರೀಕರಿಸುವ ಸಾಧನಗಳು. ಆದರೆ ಈ ಘಟನೆಗಳು ಪೂರ್ತಿ ಸಾಂಕೇತಿಕವಾಗಿ ನಮ್ಮ ಆತ್ಮದ ಅತಿಸೂಕ್ಷ್ಮವಾದ ಅಂಗವನ್ನು ಹೊರಗೇ ಇಟ್ಟು ಬಿಡುತ್ತವೆ. ಈ ಹೊರಗುಳಿದ ಅಂಶವೇ ನಮ್ಮೆಲ್ಲರೊಳಗಿನ ಕ್ಯಾಮುವಿನ ಪರಕೀಯ. ಅದೇ ಕಲ್ಯಾಣದಾಚೆ ತಿಪ್ಪೆಯಲ್ಲಿ ಬಿದ್ದಿರುವ ಮಂಟೇಸ್ವಾಮಿ, ದಕ್ಷಯಜ್ಞದಿಂದ ಬಹಿಷ್ಕೃತನಾದ ಶಿವ. ಇಂಥ ಪರಕೀಯತೆಯ ಅನುಭವವೇ ನನ್ನ ಬರವಣಿಗೆಯ ಮೂಲ ತುಡಿತ. ಅದು ಇಲ್ಲಿಯೇ ಶುರುವಾಗುವುದು. ಆದರೆ ಅಲ್ಲಿಂದ ಹೊರಟು ಮತ್ತೆಲ್ಲಿಗೋ ಮುಟ್ಟುತ್ತದೆ. ಮುಟ್ಟಿದ ಜಾಗದಲ್ಲಿ ಮತ್ತೊಂದು ಹೊರಗುಳಿವ ಅನುಭವದಿಂದ ಮತ್ತೊಂದು ಪ್ರಯಾಣ, ಮತ್ತೊಂದು ಕವಿತೆ. ಹೀಗೆ ಸ್ವಾನುಭವ ಸಾಕ್ಷಿಯಾದ ಪರಕೀಯತೆಯಿಂದ ಇತರರಿಂದ, ಇದಿರಿನಿಂದ ಬಿರಿದು ಹೋಗಿ, ಈ ಸ್ಥಿತಿಯನ್ನು ಮೀರಿದ ಮತ್ತೊಂದು ನೆಲೆಯಿಂದ ಇತರರನ್ನು, ಇದಿರನ್ನು ಸಂಪರ್ಕಿಸುವ, ಸಂಧಿಸುವ, ಒಳಗೊಳ್ಳುವ ಕ್ರಿಯಾವಿಧಿಯೇ ಕವಿತೆಯಿರಬೇಕು ಎಂದು ನನಗನಿಸುತ್ತಿದೆ.

ಆದಿಮ ಜನಾಂಗದಲ್ಲಿ ಹುಟ್ಟುವ ಕಾವ್ಯ ಈ ರೀತಿಯದಲ್ಲ. ಅವರಲ್ಲಿ ಮದುವೆ, ಮುಂಜಿ, ಹಬ್ಬ, ಹರಿದಿನ, ಮೃತ್ಯುವಿಧಿಗಳು, ಆಚರಣೆಗಳು, ದೈನಿಕ ಕ್ರಮ ಇವುಗಳೇ ವ್ಯಕ್ತಿ ಮತ್ತು ಜಗತ್ತಿನ ಅವಿನಾ ಸಂಬಂಧದ ದ್ಯೋತಕಗಳು, ಈ ಅದಿಮ ಮುಗ್ಧತೆಯನ್ನು ದಾಟಿದ ಮೇಲೆ ಇಂಥಾ ಸಾಮಾಜಿಕ ಆಚೆ ಉಳಿಯುವ ವೈಯಕ್ತಿಕ ಪ್ರಜ್ಞಾವಲಯವೊಂದು ಹುಟ್ಟುತ್ತದೆ. ಇಂಥಾ ಘಟ್ಟಗಳಲ್ಲಿ ಕಾವ್ಯ ವ್ಯಕ್ತಿತ್ವದ ಬಾಯಾಗುತ್ತದೆ. ಉದಾಹರಣೆಗೆ ನನ್ನ ಪೂರ್ವಜರಾದ ಕನ್ನಡದ ‘ನವ್ಯ’ರ ಬಹುತೇಕ ಕಾವ್ಯ ಈ ಬಗೆಯದು.

ಸಾಮುದಾಯಿಕ ಬದುಕಿನ ಮುಗ್ಧ ಐಕ್ಯತೆಯನ್ನು ದಾಟಿದ, ವೈಯುಕ್ತಿಕ ಪ್ರಜ್ಞೆಯ ತಲ್ಲಣಗಳನ್ನು ದಾಟಿದ ಕಾವ್ಯ ನನ್ನ ಆದರ್ಶ. ಅದು ಬಸವ, ಅಕ್ಕ, ಅಲ್ಲಮ, ತುಕಾರಾಮ, ಕಬೀರರ ಕಾವ್ಯದ ಹಾಗಿರಬೇಕು. ಅದು ಏಕಕಾಲದಲ್ಲಿ ಕೂಡು ಬಾಳಿನ ನಿರಾಕರಣೆಯಾಗಿ, ಸ್ವೀಕಾರವೂ ಆಗಿ, ಎರಡು ಸ್ಥಿತಿಗಳನ್ನು ಮೀರಿದ ಇಂಥ ತುಡಿತಗಳೇ ನನ್ನನ್ನು ಮತ್ತೆ ಮತ್ತೆ ಬರವಣಿಗೆಯ ಕಡೆ ತಳ್ಳಿರುವುದು…… ಈ ಕಾರಣದಿಂದಲೇ ಇರಬೇಕು ಜೀವಿಗೆ ಪುನರ್ಜೀವ ನೀಡುವ ಯೌನಿಕ ಕ್ರಿಯೆಗಳು, ಸಮಾಜಕ್ಕೆ ಪುನರ್ಜೀವ ನೀಡುವ ಕ್ರಾಂತಿಕಾರಿ ಸಿದ್ಧಾಂತಗಳು ನನ್ನ ಕಾವ್ಯ ಕ್ರಿಯಾವಿಧಿಯ ಉಪಮೆಗಳಂತೆ ನನಗೆ ಕಂಡಿರುವವು.

‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಯ ಸುತ್ತಾಮುತ್ತ ನಾನು ನಡೆಸುತ್ತಿರುವ ಈ ಗಟ್ಟಿ ಧ್ಯಾನದಲ್ಲಿ ಇನ್ನೊಂದು ವಿಷಯ ನನಗೆ ಸ್ವಾರಸ್ಯಕರವಾಗಿ ಕಾಣುತ್ತದೆ. ನಾನು ಕವಿತೆಯನ್ನೋ ನಾಟಕವನ್ನೊ ಬರೆಯುವುದು ಎಷ್ಟು ನಿಜವೋ, ಅಷ್ಟೇ ನಿಜ ಕವಿತೆ ನಾಟಕಗಳು ನನ್ನನ್ನು ಬರೆಯುವುದು! ಸಾಂಘಿಕ ಅಗತ್ಯಗಳಿಂದ ಉಂಟಾಗುವ ಹಬ್ಬ, ಆಚರಣೆ ಗಳು, ಸಾಮಾಜಿಕ ಸಂಸ್ಥೆಗಳು ನನ್ನನ್ನು ಇಡಿಯಾಗಿ ಒಳಗೊಳ್ಳಲು ಪ್ರಯತ್ನಿಸುತ್ತವೋ, ಅದೇ ರೀತಿ ಅವುಗಳ ಹಿಡಿತದಿಂದ ಹೊರಬರಲು ಮಾಡಿದ ಬರವಣಿಗೆಯೂ ಹಾಗೆಯೇ ಮೂಡುತ್ತದೆ. ಅಂದರೆ ಹಬ್ಬ, ಆಚರಣೆ, ಪ್ರಭುತ್ವ, ಮನೆ, ಜಾತಿ, ವರ್ಗ ನಮ್ಮನ್ನು ಪೂರ್ತಿ ‘ಬರೆಯಲು’ ಪ್ರಯತ್ನಿಸುತ್ತವೆ. ‘ನಮ್ಮ’ ತೀವ್ರವಾದ ಅಂಶ ಅದರ ಹೊರಗುಳಿದ ಕಾರಣ ನಾವು ಬರೆಯತೊಡಗುತ್ತೇವೆ. ಆದರೆ ಆ ಬರವಣಿಗೆ ‘ನಮ್ಮ’ನ್ನು ಪೂರ್ತಿಯಾಗಿ ಹಿಡಿದಿಟ್ಟಿದೆಯೆಂಥಹ ತಪ್ಪು ಕಲ್ಪನೆ ವ್ಯಕ್ತಿಗಳಿಗೆ, ಪಂಥಗಳಿಗೆ, ಜನಾಂಗಗಳಿಗೆ ಮತ್ತೆ ಮತ್ತೆ ಬರುತ್ತದೆ. ಇದರಿಂದಲೇ ಸಾಹಿತ್ಯದಲ್ಲಿ, ಬದುಕಿನಲ್ಲಿ ಬದಲಾವಣೆ, ಬಂಡಾಯ, ಕ್ರಾಂತಿಗಳು ಅವಶ್ಯವಾಗುವುದು. ಸಧ್ಯದ ಕನ್ನಡ ಸಾಹಿತ್ಯದ ಪರಿಸ್ಥಿತಿಯನ್ನು ನೋಡಿ; ಒಂದು ರೀತಿಯ ಬರವಣಿಗೆಯ ನಮ್ಮನ್ನು ಪೂರ್ತಿ ಬರೆದುಬಿಟ್ಟಿದೆ ಎಂಬ ಭ್ರಮೆ ಹೆಚ್ಚಾಗುತ್ತಿದೆ. ಹೀಗೆ ‘ಬರೆಂiಲ್ಪಟ್ಟಿರುವ’ ಸ್ಥಿತಿಯನ್ನು ಒಪ್ಪದೆ, ಆದರಾಚೆಗಿರುವರಿಂದಲೇ ಇವೊತ್ತು ಜೀವಂತ ಬರವಣಿಗೆ ಸಾಧ್ಯ. ನಾನು ಸೂಚಿಸುತ್ತಿರುವ ಜಡಗಟ್ಟುವಿಕೆ, ಸ್ಥಾವರ ಸ್ಥಿತಿ ಸೃಜನಶೀಲತೆ ಗಿಂತಲೂ ಬೇಗ ವಿಮರ್ಶೆ, ಸಿದ್ಧಾಂತಗಳಿಗೆ ತಗುಲುತ್ತದೆ. ಆದ್ದರಿಂದಲೇ ಜೀವಂತಿಕೆ ಮತ್ತು ಅರಿವಿಂದ ಕೂಡಿದ ಸೃಜನಶೀಲ ಬರವಣಿಗೆ, ವಿಮರ್ಶೆಗಳು, ಸಿದ್ಧಾಂತಗಳು ಹಾಕುವ ಕಟ್ಟುಗಳನ್ನು ಮುರಿಯುತಿರುತ್ತದೆ. ನಾನು ಬರೆದದ್ದು, ಬರೆದ ಸನ್ನಿವೇಶ, ಅದರ ಪರಿಣಾಮ, ಅದರಿಂದ ಸಿಕ್ಕಿದ ಕೀರ್ತಿ, ಬೈಗುಳ, ಇವೆಲ್ಲವೂ ‘ನನ್ನ’ನ್ನು ಮೂರ್ತಿಯಾಗಿಸುತ್ತಿವೆ. ಸ್ಥಾವರಗೊಳಿಸುತ್ತಿವೆ. ಹೀಗೆ ‘ನಾನು’ ಬರೆಯಲ್ಪಟ್ಟಿರುವುದನ್ನು ಅಳಿಸಿ, ಹೊಸ ‘ನನ್ನ’ನ್ನು ಕಂಡುಕೊಳ್ಳಲೂ ಬರೆಯುತ್ತೇನೆ ಎಂಬುದು ‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಗೆ ಇನ್ನೊಂದು ಉತ್ತರ.

ಈ ಪ್ರಶ್ನೆಯನ್ನು ಕುರಿತ ಈ ಬರವಣಿಗೆಯೂ ‘ನನ್ನ’ನ್ನು ಬರೆದುಬಿಟ್ಟಿದೆ. ಆದ್ದರಿಂದ ಇದನ್ನೂ ಅಳಿಸಬೇಕೆನ್ನುತ್ತಿದ್ದು, ಇದರಾಚೆಗುಳಿದ ನನ್ನಲ್ಲಿನ ಆ ಮರುಳ ಶಂಕರದೇವ ಅಥವಾ ಮಂಟೇಸ್ವಾಮಿ ಅವರು ಮುಂದೆ ಯಾಕೆ ಬರೆಯುತ್ತಾರೊ ಅಥವಾ ಬರೆಯುವು ದಿಲ್ಲವೊ ಈಗಿನ ನನಗಿನ್ನೂ ಗೊತ್ತಿಲ್ಲ.

ಕಳೆದ ಯುಗಗಳಲ್ಲಿ ಕೂಡುಬಾಳಿಗೆ ಅನೇಕ ಕೊಂಡಿಗಳಿದ್ದವು. ಬಣ, ಬುಡಕಟ್ಟು, ಕುಲ, ಜಾತಿ. ಪಂಗಡ, ಧರ್ಮ, ವರ್ಣ ಮುಂತಾಗಿ ಆದರೆ, ಹೊಸಗಾಲಕ್ಕೆ ಅನಿವಾರ್ಯವಾದ ಕೈಗಾರಿಕೀಕರಣ ನಗರೀಕರಣಗಳ ನಿಷ್ಕರುಣೆ ತರ್ಕ ಕೂಡುಬಾಳಿನ ಕೊಂಡಿಗಳನ್ನು ಮುರಿದಿದೆ, ಮುರಿಯುತ್ತಿದೆ, ಮುರಿಯುತ್ತದೆ ಇನ್ನು ಲೋಕಕ್ಕುಳಿದ, ಉಳಿಯುವ ಕೂಡುಬಾಳಿನ ಕೊಂಡಿ ಭಾಷೆ ಒಂದೆ. ಆದರೆ, ವಿಜ್ಞಾನ ತಂತ್ರಜ್ಞಾನಗಳ ಹಲ್ಲೆಯಿಂದ ಭಾಷೆಯ ಗುಂಡಿಗೆಯಾದ ರೂಪಕಶಕ್ತಿ ಕುಗ್ಗ ತೊಡಗಿದೆ. ಇಂಥ ಕಾಲದಲ್ಲಿ ಭಾಷೆಗಿರುವ ಹಿಗ್ಗಿಸುವ ಶಕ್ತಿಯನ್ನೇ ಅನುಮಾನದಿಂದ ನೋಡುವ ಬಗೆ ಬೆಳೆಯುತ್ತಿದೆ.

ಆದರೆ ನನ್ನ ಅನುಭವದಲ್ಲಿ ಭಾಷೆ ಹೀಗಿರುವುದಲ್ಲ. ತನ್ನ ಜೀವ ಜೀವಾಳವಾದ ರೂಪಕಶಕ್ತಿಯ ಮೇಲೆ ಹಲ್ಲೆ ನಡೆಯುತ್ತಿರುವ ಈ ವಿಷಗಳಿಗೆಯಲ್ಲೇ ರೂಪಕಶಕ್ತಿ ಹಿಗ್ಗಬೇಕು, ಭಾಷೆಯ ಹಿಗ್ಗುವಿಕೆಯನ್ನು ಹಿಗ್ಗಿಸಬೇಕು.

ಹೀಗಾಗದಿದ್ದರೆ ಹಲವು ಸಲ ಆಧುನಿಕ ಸಾಹಿತ್ಯದಲ್ಲಾದಂತೆ ಮಾತು ಮೌನದ ಕಡೆಗೆ ಒಲೆದು ಕೊನೆಗೆ ಮೂಕನಾಗಿ ಹೋಗುತ್ತದೆ. ನಮ್ಮ ಕಟ್ಟಕಡೆ ಬುಡಕಟ್ಟು, ಬಣ ಬೆಡಗು, ಜಾತಿ, ಪಂಗಡ, ಪಂಥ, ಧರ್ಮ, ದೇಶವಾಗಿರುವ ಭಾಷೆಯ ಜೀವಶಕ್ತಿಯನ್ನು ಹಿಗ್ಗಿಸುವ ಮೂಲಕ ಯಾಂತ್ರಿಕವಾಗುತ್ತಿರುವ ಅಂತರಂಗಗಳನ್ನು ಹಿಗ್ಗಿಸುವ ಕಾವ್ಯದ ಕ್ರಿಯಾವಿಧಿ ಹಿಂದೆಂದಿಗಿಂತಲೂ ಇಂದು ಬೇಕಾಗಿದೆ.

ನಾನು ಯಾಕೆ ಬರೆಯುತ್ತೇನೆ ಎನ್ನುವುದಕ್ಕೆ ಇದೂ ಒಂದು ಉತ್ತರವೇ.