ಮೇಲಿನ ಪ್ರಶ್ನೆ ಎಲ್ಲ ಲೇಖಕರಿಗೂ ಅಪ್ಯಾಯಮಾನವಾದ್ದು. ನಮ್ಮ ಬಗ್ಗೆ ನಾವೇ ಬರೆದು ಕೊಳ್ಳಲು ಒಂದು ರೀತಿಯ ಬೇಡಿಕೆ ಇರುವಂತೆ ಭಾಸವಾಗುತ್ತದೆ. ಆದರೆ ಈ ಪ್ರಶ್ನೆಗೆ ಪ್ರಾಮಾಣಿಕವಾಗಿ ಉತ್ತರ ಕೊಡುವುದು ಕಷ್ಟ. ಏಕೆಂದರೆ ಉತ್ತರ ಪೂರ್ತಿಯಾಗಿ ಗೊತ್ತಿರುವುದಿಲ್ಲ. ಮೇಲಾಗಿ ಲೇಖಕರು ತಮ್ಮ ಬಗ್ಗೆ ತಾವೇ ಬರೆದುಕೊಳ್ಳುವಾಗ ಆತ್ಮಾನು ಕಂಪ, ಸ್ವಪ್ರೇಮ, ಆತ್ಮಚರಿತ್ರೆಯ ಗೀಳು ಸೇರಿಕೊಂಡು ಬಿಡುತ್ತದೆ. ‘ಸ್ವ’ದ ಪ್ರಜ್ಞೆ ಹೆಚ್ಚಾಗಿರುವ ಆಧುನಿಕ ಕಾಲದ ಲೇಖಕರಲ್ಲಂತೂ ಇದೆಲ್ಲ ಇನ್ನೂ ಹೆಚ್ಚು.

ನಾನು ಬರೆಯುವುದು ನಿಜ, ನನ್ನಲ್ಲಿ ಸೃಜನಶೀಲ ತುಡಿತವಿರುವುದು ನಿಜ. ಆದರೆ ಅಷ್ಟಕ್ಕೇ ಒಬ್ಬ ಲೇಖಕ ಎಂದು ಕರೆದು ಕೊಳ್ಳಬಹುದೆ? ನನ್ನ ಬಹುಪಾಲು ಸಮಯ, ದುಡಿಮೆಯೆಲ್ಲ ಸಾಮಾಜಿಕ, ಕೌಟುಂಬಿಕ, ಔದ್ಯೋಗಿಕ ಸ್ತರದಲ್ಲೆ ಕಳೆದು ಹೋಗುತ್ತದೆ. ನಾನು ಆಸೆ ಪಟ್ಟಷ್ಟು ಸಮಯ – ವ್ಯವಧಾನವನ್ನು ನನಗೇ ಉಳಿಸಿಕೊಳ್ಳಲು ಕಷ್ಟವಾಗುತ್ತಿದೆ. ವಯಸ್ಸಾದಂತೆಲ್ಲ ಈ ಕಷ್ಟ ಹೆಚ್ಚಾಗುತ್ತಿದೆ. ನನ್ನ ಬಗ್ಗೆಯು, ಬರೆಯದೆ ಉಳಿದು ಹೋಗುವ ಸಂಗತಿಗಳ ಬಗ್ಗೆಯು ಭಯವಾಗುತ್ತದೆ.

ನಾನು ಬರಹವನ್ನು ಗಂಭೀರವಾಗಿ ತೆಗೆದುಕೊಂಡದ್ದು ಮೂವತ್ತು ವರ್ಷ ದಾಟಿದ ಮೇಲೆ. ಅಲ್ಲಿಯ ತನಕ ಮುಖ್ಯ ಆಸಕ್ತಿ ಓದುವುದೇ ಆಗಿತ್ತು. ಹಾಗೆ ಓದಿದ್ದರಲ್ಲೂ ಸಾಹಿತ್ಯದ ಪಾಲು ತುಂಬಾ ದೊಡ್ಡದೇನಲ್ಲ. ಓದುವುದರಿಂದ ನನಗೆ ದೊರಕಿದ ದೊಡ್ಡ ಲಾಭವೆಂದರೆ, ಸುತ್ತಮುತ್ತಲ ಬದುಕನ್ನು ಬೇರೆ ರೀತಿಯಲ್ಲಿ ನೋಡುವುದನ್ನು ಅನಾಯಾಸ ವಾಗಿ ಕಲಿತದ್ದು. ನಮ್ಮದು ಗ್ರಾಮೀಣ ಸಣ್ಣ ಪಟ್ಟಣಗಳ ಹಿನ್ನೆಲೆಯ, ಯಾವ ರೀತಿಯ ಅನುಕೂಲ ಸವಲತ್ತುಗಳು ಇಲ್ಲದ ಕೆಳಮಧ್ಯಮ ವರ್ಗದ ಬ್ರಾಹ್ಮಣ ಕುಟುಂಬ. ಓದಿನಿಂದ ಪಡೆದ ಅನುಭವದ ಬೆಳಕಿನಲ್ಲಿ ನನ್ನ ನಮ್ಮ ಜೀವನದ ಕೊರತೆಗಳು ತುಂಬಾ ಚೆನ್ನಾಗಿ ಕಾಣುತ್ತಿದ್ದವು. ಬದುಕಿನಿಂದ ನಾವು ಪಡೆಯಬಹುದಾದ್ದು ಇನ್ನೂ ತುಂಬಾ ಇದೆ, ಇನ್ನೂ ವೈವಿಧ್ಯಮಯವಾಗಿದೆ ಅನಿಸುತ್ತಿತ್ತು. ಇಂತಹ ಅನಿಸಿಕೆಗಳಲ್ಲೆ ನಮ್ಮ ಸಾಮಾಜಿಕ – ಆರ್ಥಿಕ ಮೇಲುಚಲನೆಯ ಬೀಜಗಳು ಅಡಗಿರುತ್ತವೆ ಎನಿಸುತ್ತದೆ.

ಹಾಗೆ ಅಂದು ಓದುತ್ತಿದುದ್ದಕ್ಕೂ, ಈಗ ಬರೆಯುತ್ತಿರುವುದಕ್ಕೂ ಇರುವ ಕಾರಣ ಗಳಲ್ಲಿನ ಸಾಮ್ಯ ಅಚ್ಚರಿ ಹುಟ್ಟಿಸುತ್ತದೆ. ಬಾಲ್ಯದ ಒಂಟಿತನ, ಹಿಂಜರಿಕೆ, ಕೀಳರಿಮೆ, ಭಯ ಗೆಲ್ಲಲು ಅಂದು ಓದುತ್ತಿದ್ದೆ. ಹೀಗೆ ಓದುವುದರಿಂದ ದೊರಕುತ್ತಿದ್ದ ವಿಶಿಷ್ಟ ಅನುಭವ ಒಂದು ರೀತಿಯ ಆತ್ಮವಿಶ್ವಾಸ ಕೊಡುತ್ತಿತ್ತು. ಈಗಲೂ ನನ್ನನ್ನು ಖಿನ್ನತೆ, ಒಂಟಿತನ, ಭಯ ಬಿಟ್ಟಿಲ್ಲ. ಆದರೆ ಅದೆಲ್ಲ ನನ್ನಲ್ಲಿ ಇಲ್ಲ ಎಂದು ತೋರಿಸಿಕೊಳ್ಳುವ ಕಲೆ ಕರಗತವಾಗಿದೆ. ಉದ್ಯೋಗ, ಆಸ್ತಿ – ಸಂಸಾರದ ಪ್ರಗತಿ ಎಲ್ಲದರಲ್ಲೂ ನನಗಿಂತ ಹೆಚ್ಚಿನವರು ಇದ್ದಾರೆ, ಕಡಿಮೆಯವರು ಇದ್ದಾರೆ, ಬಂಧುಗಳಲ್ಲಿ ಮಿತ್ರರಲ್ಲಿ. ಆದರೆ ಇವರಲ್ಲಿ ಯಾರಲ್ಲೂ ಇಲ್ಲದ ಬರವಣಿಗೆಯ ಶಕ್ತಿ ನನ್ನಲ್ಲಿದೆಯೆಂಬುದು, ನನಗೊಂದು ರೀತಿಯ ಆತ್ಮವಿಶ್ವಾಸವನ್ನು ಕೊಟ್ಟಿದೆ. ತುಂಬಾ ದಿನ ಬರೆಯದೆ ಇದ್ದಾಗ, ನಾನಾ ಕಾರಣ ಗಳಿಗಾಗಿ ಬರೆಯಲು ಸಾಧ್ಯವಾಗದೆ ಹೋದಾಗ ಜಾಗೃತವಾಗುವ ಚಡಪಡಿಕೆಯ ಹಿಂದೆ, ಬದುಕಲು ಅನಿವಾರ್ಯವಾಗಿ ಮಾಡಲೇಬೇಕಾದ ಕೆಲಸವೊಂದನ್ನು ಮಾಡದೇ ಹೋದಾಗ ಉಂಟಾಗುವ ಅಪರಾಧಭಾವದ ಹಿಂದೆ, ಮತ್ತೆಮತ್ತೆ ಆತ್ಮವಿಶ್ವಾಸವನ್ನು ಚಿಗರಿಸಿಕೊಳ್ಳುವ ಆಸೆಯು ಇರುತ್ತದೇನೋ.

ಮತ್ತೆ ಬರವಣಿಗೆಯಿಂದ ಸಿಗುವ ಸುಖ ಇನ್ನು ಯಾವ ಚಟುವಟಿಕೆಯಿಂದಲೂ ಸಿಗ ಲಾರದು. ಪ್ರಸಿದ್ದಿ, ಹಣ, ಲೈಂಗಿಕತೆಯೆಲ್ಲ ನಮ್ಮಲ್ಲಿ ಮೂಡಿಸುವ ಉತ್ಸಾಹ ತೀರಾ ತಾತ್ಕಾಲಿಕವಾದ್ದು. ವಯಸ್ಸಾದಂತೆ ಈ ಸಂಗತಿಗಳ ಬಗ್ಗೆ ನಮ್ಮ ಒಲವು, ಆದ್ಯತೆಯೆಲ್ಲ ಬದಲಾಗುತ್ತದೆ. ಬರವಣಿಗೆಗೆ ಕುಳಿತಾಗ ನಮ್ಮ ವ್ಯಕ್ತಿತ್ವದ ಎಲ್ಲ ಸ್ತರಗಳು ತೊಡಗಿಕೊಳ್ಳುವ ರೀತಿ, ಮೈ ಮರೆಯುವ ರೀತಿಂದ ಸಿಗುವ ಸುಖದ ಮುಂದೆ ಮತ್ತೆಲ್ಲವೂ ಗೌಣವೇ. ಬರವಣಿಗೆಗೆ ಸಂವೇದನಾಶೀಲ ಓದುಗರು ಸ್ಪಂದಿಸಿದಾಗ ಸುಖವೂ ಈ ರೀತಿಯದೇ. ನಿಮ್ಮ ನಿಜವನ್ನು, ನಿಮ್ಮ ಒಳಗನ್ನು ಯಾರೋ ಮುಟ್ಟಿ ಮಾತಾಡಿಸಿದ ಹಾಗಾಗುತ್ತದೆ. ಇಂತಹ ಸುಖ ಅಪರೂಪ. ಆದರೆ ಮನಸ್ಸು ಅಪ್ರಜ್ಞಾಪೂರ್ವಕವಾಗಿ ಅದನ್ನು ಸದಾಕಾಲ ಬಯಸುತ್ತದೆ. ಅದಕ್ಕಾಗಿ ಹೊಂಚು ಹಾಕುತ್ತದೆ.

ಬರವಣಿಗೆಯಿಂದ ಸಿಗುವ ಸುಖದಲ್ಲಿ ಪ್ರತಿಯೊಂದು ಕೃತಿ ಹೊರಬಂದಾಗಲೂ ನಮ್ಮ ಒಳ ವ್ಯಕ್ತಿತ್ವಕ್ಕೆ ಸಿಗುವ, ವಿಸ್ತಾರಗೊಳ್ಳುತ್ತಲೇ ಹೋಗುವ ಸ್ನೇಹವಲಯವು ಒಂದು. ನಾವೆಲ್ಲರೂ ನಮ್ಮ ನಮ್ಮ ಆಫಿಸುಗಳಲ್ಲಿ, ಕಾರ್ಖಾನೆಗಳಲ್ಲಿ, ಸಮಾಜದಲ್ಲಿ ನಾನಾ ರೀತಿಯ ಸಂಬಂಧಗಳನ್ನು ಪಡೆಯುತ್ತೇವೆ. ಇವೆಲ್ಲ ಯಾವುದೂ ನಮ್ಮ ಒಳಗನ್ನು, ಭಾವನಾತ್ಮಕ ವ್ಯಕ್ತಿತ್ವವನ್ನು ಮಾತಾಡಿಸುವುದಿಲ್ಲ. ನನ್ನ ಮಟ್ಟಿಗಂತೂ ಬರವಣಿಗೆಯಿಂದಾ ಗಿರುವ ದೊಡ್ಡ ಲಾಭವೆಂದರೆ ನನ್ನ ಅಂತರಂಗದ ಬದುಕಿನ ಬಗ್ಗೆ ಪ್ರೀತಿ – ವಿಶ್ವಾಸವಿರುವ ಸಾಕಷ್ಟು ಮಿತ್ರರು ಸಿಕ್ಕಿರುವುದು. ಇಂತಹ ಮಿತ್ರರ ಪ್ರೀತಿ – ವಿಶ್ವಾಸಗಳನ್ನು ಸದಾಕಾಲ ಉಳಿಸಿಕೊಳ್ಳಲು ಬರೆಯುವುದನ್ನು ಬಿಟ್ಟರೆ ಇನ್ನೇನು ಮಾಡಲು ಸಾಧ್ಯ? ಒಳ್ಳೆಯ ಬರವಣಿಗೆ ಮಾತ್ರ ಇಂತಹ ಮಿತ್ರ ಋಣವನ್ನು ತೀರಿಸಬಹುದೇನೋ.

ಇಷ್ಟು ಪ್ರೇರಣೆಗಳಿಂದಲೇ ನಾನು ಲೇಖಕನಾದೆನೇ ? ನನ್ನ ಪ್ರೇರಣೆಯನ್ನು ಸರಿಯಾಗಿ ವಿವರಿಸಬಲ್ಲಂತಹ ಪರಿಕಲ್ಪನೆಯೊಂದನ್ನು ಈಚೆಗೆ ಎ.ಎನ್. ವಿಲ್ಸ್‌ನ್ ಎಂಬ ಲೇಖಕರ ಟಾಲ್‌ಸ್ಟಾಯ್ ಜೀವನ ಚರಿತ್ರೆಯಲ್ಲಿ ಓದಿದೆ. ಯಾವುದೇ ಕಾಲದಲ್ಲಾಗಲೀ ಬಹುಪಾಲು ಜನರ ಬದುಕಿಗೆ ಯಾವುದೇ ಉದ್ದೇಶವೂ ಇರುವುದಿಲ್ಲವಂತೆ. ಹುಟ್ಟಿದ ಕಾರಣಕ್ಕಾಗಿ ಮನುಷ್ಯರು ಬದುಕುತ್ತಾರೆ, ಸಾಯುತ್ತಾರೆ. ಅದರಲ್ಲಿ ದಾಖಲೆಗೆ ಸೇರುವಂತದ್ದು, ಮತ್ತೊಂದು, ನಾನೂ ಇರುವುದಿಲ್ಲ. ಬದುಕಿರುವುದೇ ಹಾಗಂತೆ. ಆದರೆ ಇಂತವರ ಬಗ್ಗೆ ಕತೆ ಬರೆಯಲು ಹೊರಟಾಗ ಬರೆದಾಗ, ಅವರ ಜೀವನ ವಾಸನೆ – ವಿವರಗಳೆಲ್ಲ ಅಸ್ತಿತ್ವಕ್ಕೆ ಬರುತ್ತವೆ. ಶೂನ್ಯದೊಳಗೆ ಸೇರಿ ಹೋಗಬಹುದಾಗಿದ್ದ ಬದುಕಿನ ನಿಗೂಢಗಳು ಪ್ರಕಟ ಗೊಳ್ಳುತ್ತವೆ. ನಮ್ಮ ನಮ್ಮ ಕೈಗೆ, ಅನುಭವಕ್ಕೆ ದಕ್ಕಿದ ಬದುಕಿನ ಎಷ್ಟೇ ಮಟ್ಟದಾದರೂ ಭಾಗವನ್ನಾದರೂ ಸರಿಯೇ, ಅದು ಶೂನ್ಯದಲ್ಲಿ ಕರಗಿಹೋಗದಂತೆ, ಅನಂತತೆಯಲ್ಲಿ ನಿರಾಕಾರವಾಗದೆ ಹೋಗದಂತೆ ಮಾಡಲು ಬರವಣಿಗೆ ಬಿಟ್ಟರೆ ನನ್ನಂತಹ ಸಾಮಾನ್ಯರಿಗೆ ಬೇರೆ ಯಾವ ಸಾಧ್ಯವಿದೆ. ನಾವು ಯಾರಾದರೊಬ್ಬರು ಬರೆಯದೆ ಹೋದರೆ ಕನ್ನಡ ಸಾಹಿತ್ಯದೇವಿಯೇನು ಬಡವಾಗುವುದಿಲ್ಲ. ಆದರೆ ನಾವು ಮಾತ್ರ ಬಲ್ಲ ಬದುಕಿನ ಸ್ತರಕ್ಕೆ ಮೋಸ ಮಾಡಿದಂತಾಗುತ್ತದೆ, ಬರೆಯುವ ಶಕ್ತಿಯಿದ್ದು ಬರೆಯದೆ ಹೋದರೆ.

ನಾನು ಕಥಾ ಸಾಹಿತ್ಯವನ್ನು ತೀವ್ರವಾಗಿ ರಚಿಸಲು ಪ್ರಾರಂಭಿಸಿದ ದಿನಗಳೆಂದರೆ, ನವ್ಯ – ಬಂಡಾಯ ದಲಿತ ಚಳುವಳಿಗಳೆಲ್ಲ ತಮ್ಮ ಕಾವು, ತೀವ್ರತೆಯನ್ನು ಕಳೆದುಕೊಂಡ ದಿನಗಳು. ಈವತ್ತಿಗೂ ನನ್ನ ಬರವಣಿಗೆಯ ಹಿಂದೆ ಯಾವುದೇ ಚಳುವಳಿಗಳು, ಗುಂಪುಗಳು ವಿಶೇಷ ಒತ್ತಾಸೆಯಿದೆಯೆನಿಸುವದಿಲ್ಲ. ಈಗ ಬರೆಯುತ್ತಿರುವ ಹೆಚ್ಚಿನ ಲೇಖಕರಿಗೂ ಹೀಗೇ ಅನಿಸುತ್ತಿರಬೇಕು. ಬಂಡಾಯ ದಲಿತ ಚಳುವಳಿಗಳ ಪ್ರಭಾವದಿಂದಾಗಿ ಈವತ್ತಿನ ವಿಮರ್ಶ ಕರು ಸಾಹಿತ್ಯ ವಲಯದ ಓದುಗರು ಬಯಸುವ ಪಾತ್ರ ಪ್ರಪಂಚ, ಸಾಮಾಜಿಕ ಬದುಕನ್ನು ನಾನು ಸೃಷ್ಟಿಸಲಾರೆ. ಇದಕ್ಕೆ ನನ್ನ ಸಾಮಾಜಿಕ ಆರ್ಥಿಕ ಹಿನ್ನೆಲೆ ಕಾರಣ. ಹಾಗಾದರೆ ನನ್ನಂತಹವನು ಬರೆಯುವುದು ಬೇಡವೇ ಎಂಬ ಅನುಮಾನ ನನಗೆ ಮೊದಮೊದಲು ತುಂಬಾ ಕಾಡುತ್ತಿತ್ತು. ಈ ಅನುಮಾನ, ಭಯದಿಂದಾಗಿಯು ನಾನು ನನಗೇ ವಿಶಿಷ್ಟವಾದ ಕಥಾಗಾರಿಕೆಯನ್ನು ಹುಡುಕಿಕೊಂಡಿರಬಹುದು. ಏನೇ ಇರಲಿ, ನಾನು ಕಂಡುಂಡ ಬದುಕನ್ನು, ಅಷ್ಟಿಷ್ಟಾದರೂ ಅಕ್ಷರ ರೂಪಕ್ಕೆ ಇಳಿಸಿದ ಸಮಾಧಾನವಿದೆ. ಈಗ ನನ್ನ ಭಯ – ಅನುಮಾನ ಗಳೆಲ್ಲ ಸ್ವಯಂ ಕಲ್ಪಿತವೆನಿಸುತ್ತದೆ. ಸಾಹಿತ್ಯ ವಲಯದ ಮಂದಿ ಏನೆಂದಾರು, ಏನೆಂದು ಕೊಂಡಾರು ಎಂಬ ಗೀಳಿನ ಭಯದಿಂದ ಅಂತಹ ಚಿಂತನೆಗಳು ಮೂಡಿರಬೇಕು. ಈಗ ನನಗೇ ನಾನು ಬರೆಯುವ ಕಥಾವಸ್ತು, ಪಾತ್ರ ಪ್ರಪಂಚದ ಬಗ್ಗೆ ಸಂಕೋಚವಿಲ್ಲ. ಹೀಗೆಲ್ಲ ಸಮಾಧಾನದಿಂದ ಬರೆಯುವುದರ ಹಿಂದೆ ನಾನು ಓದುಗರಿಂದ, ಬೇರೆ ಬೇರೆ ಮಾರ್ಗಗಳಿಗೆ, ಚಳುವಳಿಗೆ ಸೇರಿದ ಬರಹಗಾರರಿಂದ ಪಡೆದ ಪ್ರೋತ್ಸಾಹವು ಇದೆ ಎಂಬುದನ್ನು ಕೃತಜ್ಞತೆ ಯಿಂದ ಸ್ಮರಿಸುತ್ತೇನೆ.

ಬರೆಯುವುದರ ಹಿಂದೆ ಸ್ವಾಭಿಮಾನದ, ಅಹಂನ, ವ್ಯಕ್ತಿ ವೈಶಿಷ್ಟ್ಯದ ಪ್ರೇರಣೆಗಳಿ ರುವುದನ್ನು ಮನಶಾಸ್ತ್ರಜ್ಞರು ಗುರುತಿಸಿದ್ದಾರೆ. ಈ ಪ್ರೇರಣೆ ಬರವಣಿಗೆಯ ಮೊದ ಮೊದಲ ಹಂತಗಳ ಬಗ್ಗೆ ಮಾತ್ರ ನಿಜವೆನಿಸುತ್ತದೆ. ಬರೆಯುವ ಮೂಲಕ ನಾನು ಬದುಕಿನ ಆಳದೊಡನೆ ಮಾತನಾಡ ಬಲ್ಲೆ, ಬದುಕಿನ ನಿಗೂಢಗಳನ್ನು ಕೆದಕಬಲ್ಲೆ ಎಂಬ ಅಹಂಕಾರ ಕಾಲಕ್ರಮೇಣ ಕರಗುತ್ತದೆ. ಬದುಕಿನ ನಿಗೂಢದಲ್ಲಿ ನಮ್ಮ ನಮ್ಮ ಪುಟ್ಟ ಕೈಗಳಿಗೆ, ಅಂಗೈ ಅಗಲಕ್ಕೆ ಸಿಗುವುದು ತುಂಬಾ ತುಂಬಾ ಕಡಿಮೆ ಎಂಬ ಅರಿವು ಮೂಡುತ್ತದೆ. ಹೀಗೆ ಸಿಕ್ಕಿದ್ದರಲ್ಲಿ ನಿಜವಾದ್ದಷ್ಟು, ಭ್ರಮೆಯೆಷ್ಟು ಎಂಬ ಅನುಮಾನವು ಮೂಡುತ್ತದೆ. ನಮಗೆ ದಕ್ಕಿದಷ್ಟು ಮಾತ್ರವೇ ನಿಜ, ಸರ್ವಸ್ವವೇರು ಹಠಹಿಡಿಯುವ ನಮ್ಮ ಮೊಂಡುತನ – ಅಹಂಕಾರ ನಮಗೇ ಬೇಸರ ಉಂಟು ಮಾಡುತ್ತದೆ. ಹೀಗಾಗಿ ಬರಹಗಾರನಾಗಿರುವುದೆಂದರೆ ಪ್ರಬುದ್ಧನಾಗುವುದು ಮಾತ್ರವಲ್ಲ, ನಮ್ಮ ಸೃಜನಶೀಲತೆ ಬಗ್ಗೆ ವಿನಯವನ್ನು ರೂಢಿಸಿಕೊಳ್ಳುವುದು ಕೂಡ ಆಗಿರುತ್ತದೆ. ನಿಜಕ್ಕೂ ಸೃಜನಶೀಲನಾದವನು ಇನ್ನೊಬ್ಬರಲ್ಲೂ ಸೃಜನಶೀಲತೆಯನ್ನು ಗುರುತಿಸುತ್ತಾನೆ, ಪ್ರೋತ್ಸಾಹಿಸುತ್ತಾನೆ. ಬದುಕಿನ ನಿಗೂಢತೆ, ಅನಿಶ್ಚಯತೆಯೊಡನೆ ವಾಗ್ವಾದ ನಡೆಸಲು ಎಷ್ಟೊಂದು ಜನರ, ಎಷ್ಟೊಂದು ರೀತಿಯ ಸೃಜನಶೀಲತೆಯ ಅಗತ್ಯವಿದೆ ಯೆಂಬುದರ ಅರಿವು, ಈ ವಿನಯದ ಹಿಂದಿರುತ್ತದೆ. ಈಚೀಚೆಗಂತು ನಾನು ಪ್ರಾರ್ಥಿಸುವುದು ಇಂತಹ ವಿನಯಕ್ಕಾಗಿಯೇ.

ನಾನು ನನ್ನ ಸ್ವಂತ ಪ್ರೇರಣೆಗಳು – ಆಸಕ್ತಿಗನುಗುಣವಾಗಿಯೇ ಬರೆಯುತ್ತಿದ್ದರೆ – ಅದರ ಸಾಮಾಜಿಕ ಪ್ರಸ್ತುತತೆಯಾದರೂ ಏನು ಎಂಬ ಅನುಮಾನ ಆಗಾಗ್ಗೆ ಬರುತ್ತದೆ. ಮೊದಲೇ ಹೇಳಿದ ಹಾಗೆ ಚರಿತ್ರೆ ಮತ್ತು ಅನಂತತೆ ಎರಡರ ಪ್ರವಾಹಗಳು ಬೇಕಾಗದೆ ನಮ್ಮಗಳ ಸಣ್ಣ ಪುಟ್ಟ ಬದುಕಿನ ವ್ಯಸನ – ವಾಸನೆ ವಿವರಗಳನ್ನು ಹಿಡಿಯುವುದು ಪ್ರಸ್ತುತತೆಯ ಒಂದು ಭಾಗ. ಇದನ್ನು ತಾತ್ವಿಕ ಆಯಾಮವೆನ್ನಬಹುದೇನೋ? ನನ್ನ ಕತೆಗಳ, ಉಳಿದ ಬರವಣಿಗೆಗಳ ಪ್ರಸ್ತುತತೆ ಹುಟ್ಟುವುದು ಮಾತ್ರ ನನಗೆ ಇತರರ ಬದುಕು, ಕತೆ, ಅದೃಷ್ಟಗಳ ಬಗ್ಗೆ ಇರುವ ಆಸ್ತಿಯಿಂದ ನನ್ನ ಬಗ್ಗೆ, ನನ್ನ ಕುಟುಂಬದ ಬಗ್ಗೆ ನಾನು ಬರೆದುಕೊಂಡಿರುವುದು ಅಥವಾ ಹಾಗೆ ಬರೆಯುವಂತೆ ಒಳಗಿನಿಂದ ಒತ್ತಾಯ ಬಂದಿರುವುದು ತೀರಾ ಕಡಿಮೆ. ಇನ್ನೊಬ್ಬರ ಕತೆಯನ್ನು, ಬದುಕನ್ನು, ಕಷ್ಟ ಸುಖವನ್ನು ನಮ್ಮದರಂತೆಯೇ ಹೇಗೆ ಪರಿಭಾವಿಸುವುದು ಎಂಬುದೇ ನನ್ನ ಕತೆಗಾರಿಕೆಯ ಹಿಂದಿರುವ ಮುಖ್ಯ ಪ್ರೇರಣೆ. ಇಲ್ಲಿ ಇನ್ನೊಬ್ಬರು ಅಂದರೆ ನನ್ನ ವಯೋಮಾನದಲ್ಲಿಲ್ಲದೆ ಇರುವವರು, ನನ್ನ ಹಿನ್ನೆಲೆಗೆ ಸೇರದವರು, ಹೆಂಗಸರು, ಮುದುಕರು ಎಲ್ಲರೂ ಸೇರಿಕೊಳ್ಳುತ್ತಾರೆ. ನಿಜ ಹೇಳಬೇಕೆಂದರೆ ಹೀಗೆ ಉಳಿದವರ ಬಗ್ಗೆ ಬರೆಯಲು ಹೊರಟದ್ದು, ಬರೆದದ್ದು ಕೊನೆಗೆ ನನ್ನ ಬಗ್ಗೆಯೋ, ನನ್ನ ಆಪ್ತರ ಬಗ್ಗೆಯೋ ಆಗಿರುತ್ತದೆ. ಅಂದರೆ ಒಂದು ಕಾಲದಲ್ಲಿ ಬದುಕುತ್ತಿರುವವರ ಎಲ್ಲರ ವ್ಯಕ್ತಿತ್ವದಲ್ಲಿ ನಾನು ಹರಿದು ಹಂಚಿ ಹೋಗಿರುತ್ತೇನೆ. ಇದರ ವಿರುದ್ಧ ಸ್ಥಿತಿಯೂ ಕೂಡ ಇಷ್ಟೇ ನಿಜ.

ಇನ್ನೊಬ್ಬರ ಕತೆ, ಅದೃಷ್ಟವನ್ನು ನನ್ನದು ಮಾಡಿಕೊಂಡು ಬರೆಯುವಾಗ ನನಗೊಂದು ರೀತಿಯ ಭಯವೂ ಕಾಡಿದೆ. ಇನ್ನೊಬ್ಬರ ವೈಯುಕ್ತಿಕ ಬದುಕಿನ ವಿವರಗಳನ್ನು ವಾಸ್ತವ ಮಾರ್ಗದಲ್ಲಿ ಚಿತ್ರಿಸುವುದು ಅವರ ವೈಯುಕ್ತಿಕ ಘನತೆ, ಖಾಸಗಿ ಬದುಕಿಗೆ ಧಕ್ಕೆ ತಂದ ಹಾಗಲ್ಲವೇ? ಈ ಪ್ರಶ್ನೆಗೆ ಉತ್ತರ ಗೊತ್ತಿಲ್ಲ. ಇನ್ನೊಬ್ಬರ ಬದುಕಿನ ವಾಸನೆ – ವಿವರಗಳನ್ನು ಅವಹೇಳನ, ಗೇಲಿ ಮಾಡಲು ಉಪಯೋಗಿಸಿಕೊಂಡಿಲ್ಲ ಎಂಬ ಸಮಾಧಾನ ಮಾತ್ರವಿದೆ. “ಬ್ರಾಹ್ಮಣ ಬೀದಿಯ ಆತ್ಮಚರಿತ್ರೆ” ಎಂಬ ನನ್ನ ಆತ್ಮಚರಿತ್ರೆಯ ಕೆಲಪುಟಗಳನ್ನು ನಾನು ಬರೆದಿಟ್ಟುಕೊಂಡಿದ್ದೇನೆ. ಇದನ್ನು ಬರೆಯಬಾರದೆಂದು, ಸುಮ್ಮ ಸುಮ್ಮನೆ ಅನಗತ್ಯವಾಗಿ ಉಳಿದವರಿಗೆ ನೋಯಿಸಬಾರದೆಂದು ನನ್ನ ಕುಟುಂಬದ ಅನೇಕರು ಹೇಳಿದ್ದಾರೆ. ಇಲ್ಲಿ ಉಳಿದವರೆಂದರೆ ನಾವೇ ಎಂಬುದನ್ನು ಬಿಡಿಸಿ ಹೇಳಬೇಕಾಗಿಲ್ಲ.

ಇಲ್ಲಿಯ ತನಕ ನಾನು ನನ್ನ ಬರವಣಿಗೆಯ ಪ್ರೇರಣೆಗಳನ್ನು ಪರಿಕಲ್ಪನೆಗಳ ಮಟ್ಟದಲ್ಲೇ ವಿವರಿಸಲು, ವಿವರಿಸಿಕೊಳ್ಳಲು ಪ್ರಯತ್ನಿಸಿದ್ದೇನೆ. ಮೇಲಿನ ಮಾತುಗಳೆಲ್ಲವೂ ಬಹುತೇಕ ಬರಹಗಾರರ ಮಟ್ಟಿಗೆ ಸ್ಥೂಲವಾಗಿ ನಿಜವಾಗಿರುತ್ತವೆ. ಸ್ವಂತ ಪ್ರೇರಣೆ, ಚರಿತ್ರೆ ಬಗ್ಗೆ ಬರೆದುಕೊಳ್ಳದೆ ಸತ್ಯಕ್ಕೆ ಹತ್ತಿರವಾಗುವುದು ಕಷ್ಟವಾಗುತ್ತದೆ.

ನನ್ನ ಬಾಲ್ಯದ ನೆನಪುಗಳು ನನ್ನ ಆರು – ಏಳನೇ ವರ್ಷಗಳಿಂದ ಪ್ರಾರಂಭವಾಗುವಂತಿದೆ. ಈ ನೆನಪುಗಳು ನನ್ನ ಸುತ್ತ ಮಾತ್ರವಲ್ಲದೆ, ಇತರರ ಬಗ್ಗೆಯೂ ಇರುವುದರಿಂದ ಬದುಕನ್ನು ಗಮನಿಸುವ, ಹೊರಗಿನಿಂದ ನೋಡುವುದೆಲ್ಲ ಆವಾಗಲೇ ಆರಂಭವಾಗಿರಬೇಕು. ಬಾಲ್ಯದಲ್ಲಿ ಓದಿದ ಕಥೆ – ಕಾದಂಬರಿಗಳ ತುಂಬಾ ಬ್ರಾಹ್ಮಣ ಸಮಾಜದ ಚಿತ್ರವೇ ತುಂಬಿರುತ್ತಿದ್ದುದರಿಂದ ಇತರರನ್ನು ನೋಡುವ, ಗಮನಿಸುವ ಕ್ರಿಯೆ ಅಪ್ರಯತ್ನ ಪೂರ್ವಕವಾಗಿ ನಡೆದಿರಬೇಕು. ಹೈಸ್ಕೂಲು ದಿನಗಳ ಸುತ್ತಮುತ್ತವೇ ನಮ್ಮ ಮನೆಯ ಪಕ್ಕದಲ್ಲಿದ್ದ ಅರ್ಧ ಕನ್ನಡ, ಅರ್ಧ ಮಲಯಾಳಿ ಕುಟುಂಬವೊಂದರ ಬಗ್ಗೆ ಒಂದೆರಡು ಪ್ಯಾರಾ ಬರೆದಿದ್ದುದು. ಸಣ್ಣ ಪುಸ್ತಕವೊಂದರಲ್ಲಿ ದಿನಚರಿ ಬರೆಯಲು ಹೋಗಿ ನಮ್ಮ ಕುಟುಂಬದವರೆಲ್ಲ ಗೇಲಿ ಮಾಡಿದ್ದುದು, ಪಿಯುಸಿ ಓದುವಾಗ ದುಂಬಾಲು ಬಿದ್ದು ಗೆಳೆಯನೊಬ್ಬನ ದಿನಚರಿ ಪಡೆದು ಓದಿದ್ದು. ಆ ದಿನಚರಿಯಲ್ಲಿ ಆತ ನನ್ನ ಬಗ್ಗೆ ಬರೆದದ್ದನ್ನು ಓದಿದಾಗ ಅನುಭವಿಸಿದ ಪುಳಕ – ಇಲ್ಲಿಂದ ಎಲ್ಲಿಂದಲೋ ನನ್ನಲ್ಲಿನ ಬರಹಗಾರ ತಯಾರಾಗಿರಬೇಕು.

ಸುಮಾರು ಹದಿನೆಂಟು ಇಪ್ಪತ್ತರ ತನಕ ನಾನು ವಾಸಿಸುತ್ತಿದ್ದ ಮಂಡ್ಯ ಮದ್ದೂರು ತಾಲ್ಲೂಕಿನ ಹಳ್ಳಿಗಳು, ಸಣ್ಣಪಟ್ಟಣಗಳು ಇದ್ದ ರೀತಿ ನನ್ನ ಬರವಣಿಗೆಯನ್ನು ತುಂಬಾ ಪ್ರಭಾವಿಸಿವೆ. ಮಲೆನಾಡು ಅಥವಾ ದಕ್ಷಿಣ ಕನ್ನಡದ ಕಡೆ ಇರುವ ಹಾಗೆ ನಮ್ಮ ಹಳ್ಳಿಗಳ ಸಮಾಜ ಅಷ್ಟೊಂದು ಶ್ರೇಣೀಕೃತವಾಗಿರಲಿಲ್ಲ. ಎಲ್ಲವೂ ಒಕ್ಕಲಿಗರ ಹಳ್ಳಿಗಳೇ. ಇತರೆ ಜಾತಿಗಳವರು – ಮೇಲಿನವರಿರಲಿ ಕೆಳಗಿನವರಿರಲಿ, ಅವರ ಆಸರೆಯಲ್ಲೇ ಬದುಕಬೇಕು. ಹೀಗಿದ್ದರೂ ಧರ್ಮ, ಮಠಮಾನ್ಯ, ಸಂಪ್ರದಾಯ, ಮಡಿ, ಮೈಲಿಗೆಯೆಲ್ಲ ಇಲ್ಲವೆನ್ನುವಷ್ಟು ಕಡಿಮೆ. ಧರ್ಮ, ಸಂಸ್ಕೃತಿ, ಆಚರಣೆಯೆಲ್ಲ ಹೆಚ್ಚಾಗಿ ಜಾನಪದ ಶೈಲಿಯದು. ಹಳ್ಳಿಗಳಲ್ಲಿ ಸಾಮುದಾಯಿಕ ಬದುಕು. ಒಟ್ಟಾರೆ, ಜೀವನ ಇನ್ನೂ ಚಾಲ್ತಿಯಿದ್ದ ಕಾಲವದು. ಹೀಗಾಗಿ ನನಗೊಬ್ಬನಿಗೆ ಮಾತ್ರವಲ್ಲ ಊರಿನ ಪ್ರತಿಯೊಬ್ಬರಿಗೂ ಪ್ರತಿಯೊಂದು ಮನೆಯ ಎರಡು – ಮೂರು ತಲೆಮಾರುಗಳ ಕಥೆಗಳು, ವಿವರಗಳು ಗೊತ್ತಿರುತ್ತಿತ್ತು. ಈ ಸಂಗತಿ ನನ್ನ ಕಥಾ ಪ್ರಪಂಚದ ವೈವಿಧ್ಯವನ್ನು ಹೆಚ್ಚಿಸಿದೆಯೆಂದು ಕೊಂಡಿದ್ದೆ. ಈ ಕಾರಣಕ್ಕಾಗಿಯೇ ನನಗೆ ಸಾಹಿತ್ಯದಲ್ಲಿ ಬ್ರಾಹ್ಮಣ – ಶೂದ್ರದಂತಹ ಪರಿಕಲ್ಪನೆಗಳನ್ನು ಒಪ್ಪುವುದಕ್ಕೆ ಬಲು ಕಷ್ಟ ವಾಯಿತು. ಈಗಲೂ ನನಗೆ ಅಂತಹ ಪರಿಕಲ್ಪನೆಗಳಲ್ಲಿ ಅಷ್ಟು ನಂಬಿಕೆಯಿಲ್ಲ. ಇನ್ನೊಬ್ಬರ ಕಥೆ ಬದುಕು ನಮ್ಮದಾಗಲಿಲ್ಲವೆಂದರೆ, ನಮ್ಮ ಪ್ರತಿಭೆ ಕಲ್ಪನೆ ಸೃಜನಶೀಲತೆಯಲ್ಲೇ ಏನೋ ಎಡವಟ್ಟಾಗಿದೆಯೆಂದೇ ನನ್ನ ನಂಬಿಕೆ. ಅದೂ ಅಲ್ಲದೆ ಇಂತಹ ಪರಿಕಲ್ಪನೆಗಳಲ್ಲಿ ನಮ್ಮನ್ನು ಬಾಧಿಸುವುದು ಕಥಾ ಸಾಹಿತ್ಯಕ್ಕೆ ಬಂದಾಗ ಮಾತ್ರ. ಕಾವ್ಯ – ನಾಟಕಕ್ಕೆ ಬಂದರೆ ಇಂತಹ ಪರಿಕಲ್ಪನೆಗಳೆಲ್ಲ ಸಾಕಷ್ಟು ಹಿಂದೆ ಸರಿಯುತ್ತವೆ.

ನಮ್ಮ ಕಡೆ ಅಥವಾ ಎಲ್ಲ ಕಡೆಯೂ ಹಾಗೆಯೇ ಇರಬೇಕು. ಸಾರ್ವಜನಿಕ ವ್ಯಕ್ತಿಗಳೆಂದರೆ ರಾಜಕಾರಣಿಗಳು ಮತ್ತು ಸಾಹಿತಿಗಳು. ಸಾಹಿತಿಗಳ ಬಗ್ಗೆ ಮಾತ್ರ ವಿಶೇಷ ಗೌರವ. ಹೈಸ್ಕೂಲು ಕಾಲೇಜುಗಳಲ್ಲಿ ಸಿಕ್ಕಿದ್ದ ಸಾಹಿತ್ಯದ ಮೇಷ್ಟ್ರರುಗಳ ವಿಶಿಷ್ಟ ವ್ಯಕ್ತಿತ್ವ, ಅವರು ಪಾಠ ಮಾಡುತ್ತಿದ್ದ ರೀತಿ ಕೂಡ ಸಾಹಿತ್ಯದ ಬಗ್ಗೆ ಆಕರ್ಷಣೆ ಹುಟ್ಟಿಸಿರಬೇಕು. ಹೈಸ್ಕೂಲಿನ ಎನ್.ಆರ್. ಅಥವಾ ನಾಗರಾಜಯ್ಯ ಮೇಷ್ಟ್ರು ಸಾಹಿತಿಯ ಶೈಲಿಯಲ್ಲೇ ಬದುಕುತ್ತಿದ್ದಾರೆ ಎಂದು ಅನ್ನಿಸುತ್ತಿತ್ತು. ಅವರ ಮನೆಯ ಮುಂದಿನ ಪುಟ್ಟ ತೋಟ, ವಿದ್ಯಾವಂತ ಪತ್ನಿ, ಕಷ್ಟ – ಸುಖಗಳನ್ನು ನಮ್ಮಂಥ ಬಾಲಕರೊಡನೆ ಹೇಳಿಕೊಳ್ಳುತ್ತಿದ್ದ ರೀತಿ, ನಮ್ಮನ್ನು ಸೆಳೆಯು ತ್ತಿತ್ತು. ಹುಡುಗರಿಗೆ ಬೇರೆ ಬೇರೆ ಪುಸ್ತಕಗಳನ್ನು ಕೊಟ್ಟು ಓದಿಸುತ್ತಿದ್ದರು. ಬಂಕಿಮ್‌ಚಂದ್ರರ ಸಮಗ್ರ ಸಂಪುಟವನ್ನು ಓದಿಸಿದ್ದು ಅವರೇ. ಅವರಿಗೆ ನಾನು ತುಂಬಾ ಹೊಂದಿಕೊಂಡು ಬಿಟ್ಟಿದ್ದೆ. ಮುಂದೆ ಸಿಕ್ಕ ಕೆ.ವಿ. ನಾರಾಯಣ ಎಲ್ಲ ದೃಷ್ಟಿಯಿಂದಲೂ ಅವರ ತರಹವೇ ಇದ್ದಿದ್ದು ಬದುಕಿನ ಆಶ್ಚರ್ಯಗಳಲ್ಲೊಂದು. ಕೆಳ ಮಧ್ಯಮವರ್ಗದ ಜೀವನ ನಡೆಯಿಸಲು ತುಂಬ ಕುಟುಂಬದೊಡನೆ ಹೆಣಗಾಡುತ್ತಾ, ಕದ್ದುಮುಚ್ಚಿ ಮನೆ ಪಾಠ ಹೇಳುತ್ತಿದ್ದ ಸುಬ್ಬರಾವ್ ಹಳೆಯ ಕಸ್ತೂರಿ ಸಂಚಿಕೆಗಳನ್ನೆಲ್ಲ ತರಗತಿಯಲ್ಲಿ ಹಂಚಿ ಓದಿಸುತ್ತಿದ್ದರು. ಹೈದರಾಬಾದಿನ ಅನುಕೂಲಸ್ಥ ಮುಸ್ಲಿಂ ಹಿನ್ನೆಲೆಯಿಂದ ಬಂದು ಇಂಗ್ಲೀಷ್ ಕಲಿಸುತ್ತಿದ್ದ ಸೈಯದ್ ಖಾದ್ರಿ, ಕಾಲೇಜಿಗೆ ಬಂದರೆ ಎಸ್. ಶ್ರೀನಿವಾಸನ್, ಎಂ.ಎ. ಜಯಚಂದ್ರ, ಪ್ರೊಫೆಸರ್ ಬಿ.ಸಿ. ವೆಸ್ಲಿ ಇವರೆಲ್ಲರೂ ಸಾಹಿತ್ಯ – ಸಾಹಿತಿಗಳ ಒಲವನ್ನು ಹೆಚ್ಚಿಸಿದವರೆ. ತೀರಾ ಕುವೆಂಪು, ಬೇಂದ್ರೆ ಬಿಟ್ಟರೆ ಹೆಚ್ಚು ಕಡಿಮೆ ಉಳಿದ ಎಲ್ಲ ಗಣ್ಯ ಸಾಹಿತಿಗಳು – ಕಾರಂತರು ಸೇರಿದಂತೆ, ಮಂಡ್ಯಕ್ಕೆ ಪದೇ ಪದೇ ಬರೋದು. ಆಗಿನ ಕಾಲಕ್ಕೆ ತರುಣ ಸಾಹಿತಿಯಾಗಿದ್ದ ಲಂಕೇಶರು ಒಕ್ಕಲಿಗರ ಹಾಸ್ಟಲ್‌ಗೆ ಬಂದಿದ್ದಾಗ ಸೇರಿದ್ದೇ ಹತ್ತೋ – ಹದಿನೈದು ಜನ. ಇಂಗೀಷ್ ಅಧ್ಯಾಪಕರಾಗಿದ್ದ ಲಂಕೇಶ್ ಇಂಗ್ಲಿಷ್‌ನ್ನು ವಿರೋಧಿಸಿ ವಿಕ್ಷಿಪ್ತ ಶೈಲಿಯಲ್ಲಿ ಮಾತನಾಡಲು ಹೋ, ಆ ಪುಟ್ಟ ಸಭೆಯಲ್ಲೇ ಗೊಂದಲವಾಗಿ ಎಲ್ಲರನ್ನೂ ಅಂದು – ಆಡಿ, ಎಲ್ಲರಿಂದಲೂ ಅಂದು – ಆಡಿಸಿಕೊಂಡು ಹೊರಟು ಹೋದರು. ನಮ್ಮಲ್ಲಿ ಕೆಲವರಿಗಾದರೂ ಅವರ ಧೈರ್ಯ ಹಠ ಮೆಚ್ಚುಗೆಯಾಗಿತ್ತು. ‘ಸಂಸ್ಕಾರ’ ಚಿತ್ರ ಊರ ಹೊರಗಿನ ಚಿತ್ರಮಂದಿರದಲ್ಲಿ ಬಂದಿತ್ತು. ನನ್ನ ತಮ್ಮನ ಜೊತೆ ನೋಡಿದಾಗ ಅಸ್ಪಷ್ಟವಾಗಿ ಏನೋ ಭಿನ್ನವಾಗಿದೆಯೆನಿಸಿದರು, ಊರವರೆಲ್ಲರ ಪ್ರತಿಕ್ರಿಯೆಯೆಂದರೆ ಕಥಾವಸ್ತುವಿನಲ್ಲಿ ವಿಶೇಷವಾದ್ದೇನು ಇಲ್ಲ ಅನ್ನುವುದು. ಅನಂತಮೂರ್ತಿ ದಂಪತಿಗಳು ನಮ್ಮ ಕಾಲೇಜಿಗೆ ಬಂದಿದ್ದಾಗ – ಅವರ ಜೊತೆ ಇತರ ಸಾಹಿತಿಗಳು ಬಂದಿದ್ದರೂ ಆ ಕಾಲಕ್ಕೆ ಅವರ ಬಗ್ಗೆ ದಂತ ಕಥೆಗಿರುವಷ್ಟು ಕುತೂಹಲ – ಆಸಕ್ತಿಯಿತ್ತು. ಅವರೂ ಕೂಡ ಇಂಗ್ಲಿಷ್ ವಿರೋಧಿಸಿ ಮಾತನಾಡಿದರು. ಲಂಕೇಶರ ಸಭೆಯಂತೆ ತೊಂದರೆಯಾಗಲಿಲ್ಲ ಅಷ್ಟೆ. ಇವರೆಲ್ಲರೂ ಮುಂದೆ ಪರಿಚಯವಾದ ರೀತಿ, ಅವರ ಬರವಣಿಗೆಗಳು ಪ್ರಭಾವ ಬೀರಿದ ರೀತಿ ನೆನಸಿಕೊಂಡರೆ ಅವರನ್ನೆಲ್ಲ ಆ ದಿನಗಳಲ್ಲೇ ನೋಡಿದ್ದು ತೀರಾ ಆಕಸ್ಮಿಕವಲ್ಲ ವೆನಿಸುತ್ತದೆ. ಹದಿನೈದು – ಹದಿನಾರು ವರ್ಷವಾಗಿದ್ದಾಗ ಮದ್ದೂರಿನಲ್ಲಿ ನಡೆದ ಎರಡು ದಿನದ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಹೋಗಿ ಎಲ್ಲ ಭಾಷಣಗಳನ್ನು ಕೇಳಿಸಿಕೊಂಡಿದ್ದು ನೆನಪಾಗುತ್ತದೆ. ಈ ಸಮ್ಮೇಳನದಲ್ಲಿ ಎಸ್.ಎಂ. ಕೃಷ್ಣರವರು ಬಿ.ಎಂ.ಶ್ರೀ ಬಗ್ಗೆ ಕಾಲೇಜು ಅಧ್ಯಾಪಕರ ಶೈಲಿಯಲ್ಲಿ ಪುಸ್ತಕಗಳನ್ನು ಓದಿಕೊಂಡು ಟಿಪ್ಪಣಿ ಮಾಡಿಕೊಂಡು ಬಂದು ನಿರರ್ಗಳವಾಗಿ ಮಾತನಾಡಿದ್ದರು.

ಈ ನೆನಪುಗಳ ಸುತ್ತ ವಿಷಾದವಾದ ನೆನಪು ಒಂದಿದೆ. ನಂತರದ ದಿನಗಳಲ್ಲಿ ನನಗೆ ಮೈಸೂರಿಗೆ – ಬೆಂಗಳೂರಿಗೆ ಬರುವ, ನಿಜವಾದ ಸಾಹಿತ್ಯ – ಸಾಹಿತಿಗಳೆಂದರೆ ಏನು ಎಂದು ತಿಳಿಯುವ ಅದೃಷ್ಟವಿತ್ತು. ಅದೂ ಅಲ್ಲದೆ ನಾನು ಬರೆಯಬೇಕೆಂದು ನಿರ್ಧಾರ ಮಾಡಿದ್ದೇ ತುಂಬಾ ತಡವಾಗಿ. ಆದರೆ ಮೇಲೆ ಹೇಳಿದ ಸಾಹಿತಿಗಳ ಭೇಟಿ, ಸಮ್ಮೇಳನಗಳ ಪ್ರಭಾವ ದಿಂದಾಗಿ ತುಂಬಾ ಜನ ಆವಾಗಲೇ ಬರೆಯಲು ಪ್ರಾರಂಭಿಸಿದ್ದುದು. ಅದನ್ನೆಲ್ಲ ಪ್ರಕಟಿಸುವ ಪತ್ರಿಕೆಗಳೂ ಇದ್ದವು. ಕೆಲವರಂತೂ ತಾವೇ ಪತ್ರಿಕೆಗಳನ್ನು ಹೊರಡಿಸಿದರು. ಈಗ ನೆನಸಿಕೊಂಡರೆ ಅವರಲ್ಲಿ ಕೆಲವರಿಗಾದರೂ ಬರೆಯುವ ಶಕ್ತಿಯಿತ್ತು ಅನಿಸುತ್ತದೆ. ಸರಿಯಾದ ಸಮಯದಲ್ಲಿ ಸಂಯಮ ಮತ್ತು ಮಾರ್ಗದರ್ಶನವಿಲ್ಲದೆ ಅವರ ಶಕ್ತಿ ಸೊರಗಿತ್ತು. ಹೀಗಾಗಿ ನನ್ನ ಸಹಪಾಠಿಗಳಲ್ಲಿ ಮಾಜಿ ಶಾಸಕರು, ಮಂತ್ರಿಗಳು ಇರುವಂತೆ ಮಾಜಿ ಜಿಲ್ಲಾ – ತಾಲ್ಲೂಕು ಸಾಹಿತ್ಯ ಪರಿಷತ್ ಅಧ್ಯಕ್ಷರಗಳು ಸೇರಿದ್ದಾರೆ. ಈಗ ಅವರೆಲ್ಲ ಸಾಹಿತ್ಯದಿಂದ ಸಾವಿರ ಮೈಲಿ ದೂರ.

ಇದೆಲ್ಲವೂ ಈಗ ಜೋಡಿಸಿಕೊಂಡು ಹೇಳುವ ನೆನಪುಗಳು. ನೆನಪುಗಳನ್ನು ನೆನಸಿಕೊಂಡು ಇನ್ನೊಬ್ಬರಿಗೆ ಹೇಳುವಾಗ ನಾವು ಪ್ರಾಮಾಣಿಕರಾಗಿರುವ ಬಗ್ಗೆಯೇ ನನಗೆ ಯಾವತ್ತೂ ಅನುಮಾನ. ತೀರಾ ಖಚಿತವಾದ ಸಂಗತಿಯೊಂದನ್ನು ಮಾತ್ರ ಹೇಳಿ ಈ ಬರಹ ಮುಗಿಸು ತ್ತೇನೆ.

೧೯೮೮ರ ಮಧ್ಯಭಾಗ. ನಾನು ಬೆಂಗಳೂರಿನ ಚಾಮರಾಜಪೇಟೆಯಲ್ಲಿದ್ದೆ. ಮುನಿಧರ್ಮ ಯ್ಯನವರ ಪ್ರೆಸ್ ನಮ್ಮ ಮನೆಯ ಹತ್ತಿರವೇ ಇತ್ತು. ಅವರೊಬ್ಬ ಗಣ್ಯ ಮುದ್ರಕರು, ನಮ್ಮ ಮನೆಗೆ ಬೇಕಾದವರು. ಅವರ ಪ್ರೆಸ್ಸಿನಲ್ಲಿ ಮೂರ್ತಿರಾಯರ ಸಮಗ್ರ ಪ್ರಬಂಧಗಳು ಪ್ರಕಟವಾಗುತ್ತಿತ್ತು. ಅವರ ಪ್ರಬಂಧಗಳನ್ನೆಲ್ಲ ಒಟ್ಟಿಗೆ ಓದಿದಾಗ ನಾನೂ ಬರೆಯಬಹು ದಲ್ಲವೇ ಅನಿಸಿ ಬರೆದ ಪ್ರಬಂಧಗಳೇ ‘ನಮ್ಮ ಪ್ರೀತಿಯ ಕ್ರಿಕೆಟ್’ ಪ್ರಬಂಧ ಸಂಕಲನ ವಾಯಿತು. ಅದೇ ಸಮಯದಲ್ಲಿ ರುಜವಾತು ಪ್ರಕಾಶನಕ್ಕೆಂದು ಟಿ.ಜಿ. ರಾಘವರ ‘ವಿಕೃತಿ’ ಕಾದಂಬರಿ ಪ್ರಕಟವಾಗುತ್ತಿತ್ತು. ಎನ್. ವಿದ್ಯಾಶಂಕರ ಮತ್ತು ನಾನು ಇದರ ಪ್ರೂಫ್ ನೋಡುತ್ತಿದ್ದೆವು. ರಾಘವರ ಕೃತಿ ಓದುತ್ತಾ, ಓದುತ್ತಾ ಇಲ್ಲ ಇಲ್ಲ ನಾನು ಕಾದಂಬರಿ ಬರೆದು ಪ್ರಕಟಿಸಬೇಕು ಎಂಬ ಆಸೆಯಲ್ಲಿ ಬರೆದದ್ದು ‘ಒಂದು ಕಥಾನಕದ ಮೂಲಕ’.

ಕಳೆದ ಹತ್ತು ವರ್ಷಗಳನ್ನು ನಾನು ಕರ್ನಾಟಕ – ಬೆಂಗಳೂರಿನ ಹೊರಗೆ ಕಳೆದಿದ್ದೇನೆ. ಮೊದಮೊದಲು ಇದೇನು ವಿಶೇಷವೆನಿಸುತ್ತಿರಲಿಲ್ಲ. ಪತ್ರಿಕೆಗಳು, ಪತ್ರಸಂಪರ್ಕ, ಟೆಲಿವಿಶನ್, ಪದೇ ಪದೇ ಬೆಂಗಳೂರಿಗೆ ಹೋಗಿ ಬರುವುದರಿಂದ ಏನೂ ಕಳೆದುಕೊಂಡಿಲ್ಲ ಅನಿಸುತ್ತಿತ್ತು. ಈಚೆಗೆ ಹಾಗನಿಸುವುದಿಲ್ಲ. ಪ್ರಾದೇಶಿಕ ಭಾಷೆಗಳಲ್ಲಿ ಬರೆಯುವವರು ತಮ್ಮ ತಮ್ಮ ರಾಜ್ಯಗಳಲ್ಲಿದ್ದರೇ ಸರಿಯೆನಿಸುತ್ತದೆ. ನಾವು ಬರೆಯುವ ಭಾಷೆಯನ್ನು ಪ್ರತಿದಿನ ಕೇಳಿಸಿಕೊಳ್ಳುವುದು ಉಸಿರಾಟದಷ್ಟೇ ಅಗತ್ಯ. ಅಲ್ಲದೆ ನಮ್ಮ ಜೊತೆ ಬರಹಗಾರ ರೊಡನೆ ನಡೆಸುವ ವಾಗ್ವಾದ, ಆಗಾಗಲಾದರೂ ಉಂಟಾಗುವ ಭಿನ್ನಾಭಿಪ್ರಾಯಗಳು, ಜಗಳ, ಮುನಿಸು ಅನಗತ್ಯ ಪ್ರೀತಿ, ದ್ವೇಷಗಳು ಕೂಡ ಬರವಣಿಗೆ ತೀವ್ರವಾಗಲು ಅವಶ್ಯ ವೆನಿಸುತ್ತವೆ. ನೀವಿರುವ ವಾತಾವರಣದಲ್ಲಿ ನಿಮ್ಮನ್ನು ಬರಹಗಾರನೆಂದು ಗುರುತಿಸುವ ಒಬ್ಬನೂ ಇಲ್ಲದಿದ್ದರೆ ಬರೆಯುವುದು ಹೇಗೆ? ಕರ್ನಾಟಕದ ಹೊರಗಡೆಯಿದ್ದು ತುಂಬಾ ಕ್ರಿಯಾಶೀಲರಾಗಿ ಬರೆದಿರುವವರು ತುಂಬಾ ಜನ ಇದ್ದಾರೆ. ನಿಜ. ಆದರೆ ಶಾಂತಿನಾಥ ದೇಸಾಯಿ, ಯಶವಂತ ಚಿತ್ತಾಲ, ಎ.ಕೆ. ರಾಮಾನುಜನ್, ಜಿ.ಎಸ್. ಆಮೂರ, ಕುರ್ತಕೋಟಿ ಅಂತಹವರೆಲ್ಲ ಕರ್ನಾಟಕದಲ್ಲೇ ಇದ್ದು ಬರೆದಿದ್ದರೆ ಎಂದು ಒಮ್ಮೊಮ್ಮೆ ಯೋಚಿಸುತ್ತೇನೆ. ಇವೆಲ್ಲ ಕೇವಲ ಯೋಚನೆಗಳು. ನಾವು ಎಲ್ಲೆಲ್ಲಿ ಇರಬೇಕು, ಹೇಗೆ ಬದುಕಬೇಕೆಂಬುದು ಕೇವಲ ನಮ್ಮ ವೈಯುಕ್ತಿಕ ನಿರ್ಧಾರ ಮಾತ್ರವಲ್ಲ. ತಕ್ಷಣಕ್ಕೆ ನಮ್ಮ ನಮ್ಮ ವೃತ್ತಿ, ಕುಟುಂಬ ಜೀವನ ಇದನ್ನೆಲ್ಲ ನಿರ್ಧರಿಸುತ್ತದೆ ಅನಿಸಿದರೂ, ನಮಗೆ ಗೊತ್ತಿಲ್ಲದೇ ನಾವು ಗಳೆಲ್ಲರೂ ಕೂಡ ಚರಿತ್ರೆಯ ಒತ್ತಡಕ್ಕೆ ಸಣ್ಣಪುಟ್ಟ ಪ್ರಮಾಣದಲ್ಲಾದರೂ ಸಿಕ್ಕಿ ಹಾಕಿಕೊಂಡಿ ರುತ್ತೇವೆ. ಅಂತಹ ಒತ್ತಡಗಳ ಪರಿಶೀಲನೆ ಕೂಡ ಎಂದಾದರೂ ಸಾಧ್ಯವಾಗಬಹುದು ಎಂಬುದೇ ಕರ್ನಾಟಕದಿಂದ ಹೊರಗಡೆ ಇದ್ದು ಕನ್ನಡದಲ್ಲಿ ಬರೆಯುವವರ ಆಸೆ – ಕನಸು.

ಬರವಣಿಗೆಯ ಮೂಲಕ ನಾನೇನು ಹುಡುಕುತ್ತಿದ್ದೇನೆ ಮತ್ತು ಈ ವಿಶಾಲ ಜಗತ್ತಿನಲ್ಲಿ ಏನನ್ನು ನನ್ನದನ್ನಾಗಿ ಮಾಡಿಕೊಳ್ಳಲು ಪ್ರಯತ್ನಸುತ್ತಿದ್ದೇನೆ ಎಂಬ ಪ್ರಶ್ನೆಯನ್ನು ಎದುರಿಸು ವುದು ಕೂಡ ಮುಖ್ಯ. ನಮ್ಮ ಲೌಕಿಕ – ಸಾಮಾಜಿಕ ವ್ಯಕ್ತಿತ್ವಕ್ಕೆ ಸೇರದ ಯಾವುದೋ ಒಂದು ಅಪೇಕ್ಷೆ – ಆಸೆ ಬರವಣಿಗೆಯಿಂದ ಪೂರೈಸಲ್ಪಡಬಹುದು, ನಿಜವಾಗಬಹುದು. ನನ್ನ ಬಾಲ್ಯದ ಜಗತ್ತು ಅರೆಕೊರೆಗಳ ಜಗತ್ತು. ಸಣ್ಣಪುಟ್ಟ ಆಸೆಗಳನ್ನು ಕೂಡ ಪೂರೈಸಿಕೊಳ್ಳಲಾಗ ದವರ ಜಗತ್ತು, ಮದುವೆ, ಕಾಮ, ರೋಗ, ರುಜನಗಳಿಂದಾಚೆಗೆ ಏನನ್ನು ಬಯಸದವರ ಜಗತ್ತು. ಧರ್ಮವನ್ನು ದೇವರನ್ನು ಯಾಂತ್ರಿಕವಾಗಿ, ಜಡವಾಗಿ ಪರಿಭಾವಿಸಿದವರ ಜಗತ್ತು. ಇವರೆಲ್ಲರನ್ನು ಕುರಿತು ನಾನು ಈಗ ಬರೆಯುವದರ ಮೂಲಕ ಈ ಜಗತ್ತಿನಲ್ಲಿ ಅವರಿಗೆ ದೂರಕದೆ ಹೋದ ಪ್ರೀತಿ ಒತ್ತಾಸೆ ಮಾನ್ಯತೆಗಳನ್ನು ದೊರಕಿಸಿಕೊಡುತ್ತಿರಬಹುದೆ? ಅಥವಾ ಇವರೆಲ್ಲರಲ್ಲಿ ಅಂದು ಮತ್ತು ಇಂದು ನಾನು ಕಾಣುವ ಅಪೂರ್ಣತೆ ಅವರುಗಳ ಮೇಲ್ಪದರದ ವ್ಯಕ್ತಿತ್ವವಾಗಿರಬಹುದು. ನನ್ನ – ನನ್ನ ಕಾಲದ ವೈಯಕ್ತಿಕ – ಸಾಂಸ್ಕೃತಿಕ ಐಡಿಯಾಲಜಿಯಿಂದಾಗಿ ಅವರು ಹಾಗೆ ಅಪೂರ್ಣರಾಗಿ ಕಂಡಿರಬಹುದು. ಅವರು ಕೂಡ ಪೂರ್ಣತೆಯ ಹಾದಿಯಲ್ಲೆ ಹೊರಟ ಪಯಣಿಗರಾಗಿರ ಬಹುದು. ಅಂದರೆ ಅವರನ್ನು ನೋಡುವ ನನ್ನ ಸಾಮಾಜಿಕ ವ್ಯಕ್ತಿತ್ವದಲ್ಲೆ ಏನೋ ದೋಷವಿರ ಬೇಕು. ನನ್ನ ಆ ಸಾಮಾಜಿಕ ವ್ಯಕ್ತಿತ್ವಕ್ಕೆ ಮಾತ್ರ ಇವರುಗಳನ್ನು ಆಳದಲ್ಲಿ ಗ್ರಹಿಸುವುದು ಸಾಧ್ಯವಾಗುತ್ತಿರಬೇಕು. ಹೀಗಾಗಿ ಇವರೆಲ್ಲರನ್ನು ನಾನು ಮತ್ತೆ ಬರವಣಿಗೆಯಲ್ಲಿ ಪುನಃ ಪಡೆದು, ಇವರಿಗಾಗಿ ಮತ್ತೆ ಜಗತ್ತನ್ನು ಪುನರ್‌ನಿರ್ಮಿ ಸುತ್ತಿರಬೇಕು. ಹೀಗೆ ನಿರ್ಮಿಸುತ್ತಿರುವ ಜಗತ್ತಿನಲ್ಲಿ ಪ್ರೀತಿ ಅಂತಃಕರಣಗಳ ಮುಖ್ಯವಾಗಿದೆ. ಈ ಪ್ರೀತಿ ಅಂತಃಕರಣ – ಇದೆಲ್ಲ ಅವರುಗಳು ನಿಜವಾದ ಜಗತ್ತಿನಲ್ಲಿ ಪಡೆಯದೆ ಹೋದದ್ದು. ಅವರು ಅದನ್ನು ನಿಜ ಜಗತ್ತಿನಲ್ಲಿ ಪಡೆದಿದ್ದರೆ ನನ್ನ ಬಾಲ್ಯದ ಜಗತ್ತು ಒಂಟಿತನದ, ಭಿನ್ನತೆಯ, ಸಣ್ಣಪುಟ್ಟ ಅವಮಾನಗಳ ಜಗತ್ತಾಗಿರುತ್ತಿರಲಿಲ್ಲ. ಅವರೆಲ್ಲರ ಮೂರ್ತಿಗಳ ನಿರ್ಮಾಣದಲ್ಲಿ ನನ್ನ ಬರವಣಿಗೆ ಆವತ್ತು ಮತ್ತು ಈವತ್ತು ಕೂಡ ನಿಜಜಗತ್ತಿನಲ್ಲಿ ಕಡಮೆಯಾಗಿರುವ ಪ್ರೀತಿ – ಅಂತಃಕರಣಗಳನ್ನು ಸದಾ ಹುಡುಕುತ್ತಿರುತ್ತದೆ.

ನನಗೆ/ನಮಗೆ ಇತರರ ಬಗ್ಗೆ, ಇತರರಿಗೆ ನನ್ನ/ನಮ್ಮ ಬಗ್ಗೆ ಯಾಕೆ ಪ್ರೀತಿ ತೀರಿಹೋಗು ತ್ತದೆ, ಆರಿಹೋಗುತ್ತದೆ ಎಂಬ ಸಂಗತಿ ಮನಸ್ಸನ್ನು ಸದಾ ಕೊರೆಯುತ್ತದೆ. ವಯಸ್ಸಾಗುತ್ತಾ, ವಯಸ್ಸಾಗುತ್ತಾ ಮನುಷ್ಯ ಯಾರ ಪ್ರೀತಿಯ ಆಸರೆಯೂ ಇಲ್ಲದೆ ಬದುಕುವ ಸಾಮರ್ಥ್ಯ ವನ್ನು, ಕೆಟ್ಟತನವನ್ನು ರೂಢಿಸಿಕೊಳ್ಳುತ್ತಾನೆ. ಯಾರೊಬ್ಬರ ಬಗ್ಗೆಯಾಗಲಿ ಪ್ರೀತಿ ತೀರಿ ಹೋದಾಗ, ಕ್ಷೀಣವಾದಾಗ ಮೊದಮೊದಲು ನನಗೆ ತುಂಬಾ ಭಯವಾಗುತ್ತಿತ್ತು. ಆತಂಕ ವಾಗುತ್ತಿತ್ತು. ಈಗಲೂ ಭಯವಾಗುತ್ತದೆ, ಆತಂಕವಾಗುತ್ತದೆ. ಪ್ರೀತಿ, ತೀರಿಹೋಗುವು ದಕ್ಕಲ್ಲ, ಕ್ಷೀಣವಾಗುವುದಕ್ಕಲ್ಲ. ಹೀಗೆ ಪ್ರೀತಿ ತೀರಿಹೋಗುವುದು, ಕ್ಷೀಣವಾಗುವುದು ಸಹಜ ಎಂದು ನನಗೆ ಅನಿಸುತ್ತದಲ್ಲ, ಆ ಅನಿಸಿಕೆಯ ಬಗ್ಗೆಯೇ ನನಗೆ ಈಗ ಭಯ, ಆತಂಕ. ಈ ಭಯ – ಆಂತಕ ಗೆಲ್ಲಲು, ಪ್ರೀತಿಸುವ ಶಕ್ತಿ ಉಳಿಸಿಕೊಳ್ಳಲು ಬರೆಯಬೇಕಾಗು ತ್ತದೆ. ನನ್ನ ಬರವಣಿಗೆಯ ತುಂಬಾ ಹೀಗೆ ನನ್ನ ಪ್ರೀತಿಯನ್ನು, ಔದಾರ್ಯವನ್ನು ಕಳೆದುಕೊಂಡ ವರನ್ನು ಮತ್ತೆ ಮತ್ತೆ ಪ್ರೀತಿಸಲು ಪ್ರಯತ್ನಿಸುತ್ತೇನೆ, ಕಷ್ಟಪಡುತ್ತೇನೆ. ಅವರನ್ನೆಲ್ಲ ಒಲಿಸಿ ಕೊಳ್ಳುವ, ನಾನು ಅವರ ಅಂತಃಕರಣದ ಗೆಳೆಯನಾಗುವ ತವಕ ತೋರುತ್ತೇನೆ.

ನನ್ನ ಪ್ರತಿ ಬರವಣಿಗೆಯ ಹಿಂದೆಯು ಸಾವಿನ ಎಚ್ಚರವಿರುತ್ತದೆ. ಈ ಎಚ್ಚರ ಸಾವಿನ ಬಗ್ಗೆ ಇರುವ ಭಯ ಮಾತ್ರವಲ್ಲ. ಸಾವಿನ ಬಗ್ಗೆ ತಿಳಿದಿದ್ದು ಕೂಡ ನಮ್ಮ ಬದುಕುವ ಕ್ರಮ ಕಿಂಚಿತ್ತೂ ಬದಲಾಗದೆ ಇರುವುದು ಆಶ್ಚರ್ಯ ಹುಟ್ಟಿಸುತ್ತದೆ. ಹೀಗಾಗಿ ಪ್ರತಿಯೊಂದು ಸಾವು ಕೂಡ ಸತ್ತವನ ಬದುಕಿಗೆ ಒಂದು ಚೌಕಟ್ಟನ್ನು ನಿರ್ಮಿಸುತ್ತದೆ. ಈ ಚೌಕಟ್ಟು ಎಷ್ಟೇ ಚಿಕ್ಕದಾದರೂ, ಎಷ್ಟೇ ಮಿತಿಯುಳ್ಳದ್ದಾದರೂ ವ್ಯಕ್ತಿಯ ದೃಷ್ಟಿಯಿಂದ ಅನನ್ಯವಾದ್ದು. ಅದೇ ಅವನ ಬದುಕಿಗೆ ಘನತೆಯನ್ನು ತಂದು ಕೊಡುವಂತದ್ದು. ಇಂತಹ ಚೌಕಟ್ಟಿನೆಡೆಗೆ ಪ್ರತಿಯೊಬ್ಬನು ನಡೆಸುವ ಪ್ರಜ್ಞಾಪೂರ್ವಕ ಮತ್ತು ಅಪ್ರಜ್ಞಾಪೂರ್ವಕ ಪಯಣ, ಪ್ರಯತ್ನಗಳನ್ನು ಬರವಣಿಗೆಯಲ್ಲಿ ಹಿಡಿಯಲು ನನಗೆ ತುಂಬಾ ಇಷ್ಟ. ಸಾವನ್ನು ಹೀಗೆ ನೋಡುವ ನನ್ನ ಕ್ರಮ ಅದನ್ನು ಅಸಂಗತವೆಂದು ಭಾವಿಸುವ ಚಿಂತನ ಕ್ರಮಕ್ಕಿಂತ ಭಿನ್ನ ವಾದದ್ದು.

‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಗೆ ನನಗೆ ಪೂರ್ತಿಯಾಗಿ, ನಿಖರವಾಗಿ ಉತ್ತರ ಗೊತ್ತಿಲ್ಲ. ಬದುಕಿನ ರೀತಿಯಲ್ಲೇ ಈ ಉತ್ತರವು ಕೂಡ ಸಿಕ್ಕರೂ ಸಿಕ್ಕದ ಮಾಯೆಯಂತಿರ ಬೇಕು. ‘ನಾನೇಕೆ ಬರೆಯುತ್ತೇನೆ’ ಎಂಬ ಪ್ರಶ್ನೆಗೆ ಉತ್ತರ ಗೊತ್ತಾಗೇ ಆಗಿ ಬಿಟ್ಟರೆ ಬರೆಯುವ ಅವಶ್ಯಕತೆಯೂ ಇರುವುದಿಲ್ಲ. ಈ ಪ್ರಶ್ನೆಗೆ ಉತ್ತರ ಹುಡುಕುವುದರಲ್ಲೇ, ಹುಡುಕುತ್ತಲೇ ಬರವಣಿಗೆಯ ಪಯಣ. ನಾನೇಕೆ ಬರೆಯುತ್ತೇನೆ ಎಂಬ ಪ್ರಶ್ನೆಗೆ ಉತ್ತರ ಪ್ರತಿಯೊಬ್ಬ ಲೇಖಕನ ಸಾವಿನಲ್ಲಿ ಇರಬಹುದು. ಅಥವಾ ಅವನ ನಂತರ ಅವನ ಒಟ್ಟು ಬರವಣಿಗೆ ನಿರ್ಮಿಸಿಕೊಟ್ಟ ಜಗತ್ತಿನ ಆಳ – ­ಅಗಲಗಳನ್ನು ಇತರರು ವಿಶ್ಲೇಷಿಸಿ ಕಟ್ಟಿಕೊಟ್ಟಾಗ ತಿಳಿಯಬಹುದು. ಹೀಗಾಗಿ ಈ ಪ್ರಶ್ನೆ ಬರೆಯುವವರನ್ನೆಲ್ಲ ಮೀರಿದ್ದು ಕೂಡ.