ನನ್ನ ಸಾಹಿತ್ಯದ ಬಗ್ಗೆ ನಾನೇ ಬರಯುವಂಥ ಸಂದರ್ಭಗಳು ಹೆಚ್ಚಾಗಿ ಮುಖಾಮುಖಿಯಾಗಿಲ್ಲವಾದರೂ ಆಗಾಗ ನಾನೇಕೆ ಬರೆಯುತ್ತೇನೆ? ಯಾರಿಗಾಗಿ ಬರೆಯುತ್ತೇನೆ? ಹೀಗೆ ಬರೆದುದರ ಪ್ರಯೋಜನವಾದರೂ ಏನು? ಅನ್ನುವ ಪ್ರಶ್ನೆಗಳು ನನ್ನ ಮನಸ್ಸಿನಲ್ಲಿ ಹೊಯ್ದಾಡುತ್ತಿರುತ್ತವೆ. ಹುಟ್ಟು ಪ್ರತಿಭಾವಂತರಂತೆ ಕೆಲವು ಚೆಂದದ ರೆಡಿಮೇಡ್ ಉತ್ತರಗಳನ್ನು ಕೊಟ್ಟು ಒಂದು ಆಕರ್ಷಕ ಪೋಜ್ ಕೊಡಲು ಮನಸ್ಸು ನಿರಾಕರಿಸುತ್ತದೆ. ಯಾಕೆ ಅರಳುತ್ತಿ ಅನ್ನುವ ಪ್ರಶ್ನೆಗೆ ಹೂವು ಕೊಡುವ ಉತ್ತರ ಯಾಕೆ ಉಲಿಯುತ್ತಿ ಅನ್ನುವ ಪ್ರಶ್ನೆಗೆ ಕೋಗಿಲೆ ಕೊಡುವ ವಿವರಣೆ, ಯಾಕೆ ಕುಣಿಯುತ್ತಿ ಅನ್ನುವ ಕೇಳಿಕೆಗೆ ನವಿಲು ನೀಡುವ ಸಮಜಾಯಿಸಿಗಳಂಥ ಚಾಲಾಕಿನ ಉತ್ತರ ನೀಡಿ ಓದುಗರನ್ನು ರಂಜಿಸಿ ಅವರ ಶಹಬ್ಬಾಶ್‌ಗಿರಿಯನ್ನು ಪಡೆದುಕೊಳ್ಳಬಹುದೇನೋ….. ಆದರೆ ಅದು ನಮ್ಮ ಆಂತರ್ಯದ ಖರೇ ಅನಿಸಿಕೆಯಂತೂ ಖಂಡಿತ ಆಗಿರುವುದಿಲ್ಲ. ಹೂವು, ಕೋಗಿಲೆ, ನವಿಲುಗಳು ಮಾತಾಡುವುದಿಲ್ಲ. ಅವುಗಳಿಗೆ ಮಾತು ಬರುತ್ತಿದ್ದರೆ ಖಂಡಿತ ಅವುಗಳ ಉತ್ತರ ನೀವು ಈಗ ಗ್ರಹಿಸಿರುವಂತೆ ಮಾತ್ರ ಇರುತ್ತಿರಲಿಲ್ಲ.

ನಾವು ಎಷ್ಟೇ ಸೃಜನಶೀಲತೆಯುಳ್ಳವರಾದರೂ ಕೂಡ, ಹೂವು ಅರಳುವಷ್ಟು ಸುಲಭ ವಾಗಿ, ಕೋಗಿಲೆ ಹಾಡುವಷ್ಟು ಸಹಜವಾಗಿ, ಕತೆ, ಕಾದಂಬರಿ ಬರೆಯಲು ಆಗುವುದೇ ಇಲ್ಲ! ಅನುಭವವನ್ನು ಅಭಿವ್ಯಕ್ತಿಸುವುದು ಅಷ್ಟು ಸುಲಭದ ಕೆಲಸವಲ್ಲ. ಒಂದು ಅನುಭವವನ್ನು ಕತೆಯಾಗಿಸಬೇಕಾದರೆ ಅದನ್ನು ಮನದಲ್ಲಿ ಮಿದ್ದಿ ಮಿದ್ದಿ, ಮೆದುಳಿನಲ್ಲಿ ತಿದ್ದಿ ತೀಡಿ, ಯೋಚಿಸಿ ಯೋಚಿಸಿ, ಅದರ ಸಾಧಕ ಬಾಧಕಗಳನ್ನು ಗಮನಿಸಿ ಅದಕ್ಕೊಂದು ‘ಕತೆ’ಯ ಚೌಕಟ್ಟನ್ನು ಕಟ್ಟಬೇಕಾಗುತ್ತದೆ. ಆದಿ ಅಂತ್ಯಗಳನ್ನು ಗುಣಿಸಿ, ಭಾಗಿಸಿ, ಒಂದು ಕೊನೆಯ ನಿರ್ಣಯಕ್ಕೆ ಬರಬೇಕಾಗುತ್ತದೆ. ಕತೆ ಬರೆಯುವ ಕ್ರಿಯೆ, ಬಳ್ಳಿಯಲ್ಲಿನ ಮೊಗ್ಗು ಪುಟು ಪುಟು ಅಂತ ಅರಳಿ ಹೂವಾಗುವಷ್ಟು ಸರಳವೂ ಅಲ್ಲ, ಸಹಜವೂ ಅಲ್ಲ. ಆದರೆ ಒಬ್ಬ ಕತೆಗಾರ ತನ್ನೊಳಗೆ ನೈಸರ್ಗಿಕವಾಗಿ ಬಂದ ಸೃಜನಶಕ್ತಿಯನ್ನು ತನ್ನ ಅನುಭವದ ಅಭಿವ್ಯಕ್ತಿಗಾಗಿ ಸಮರ್ಥವಾಗಿ ದುಡಿಸಿಕೊಳ್ಳುವುದು ಅನಿವಾರ್ಯ. ಅವನು ಇದನ್ನು ಎಷ್ಟು ಎಷ್ಟು ಸಮರ್ಥವಾಗಿ ದುಡಿಸಿಕೊಳ್ಳುತ್ತಾನೋ ಅಷ್ಟಷ್ಟು ಅವನ ‘ಕತೆ’ ಗಟ್ಟಿಯಾಗುತ್ತದೆ. ಸತ್ವಪೂರ್ಣವಾಗುತ್ತದೆ.

ನನ್ನದೇ ಖುಷಿಗಾಗಿ, ಸಂತೋಷಕ್ಕಾಗಿ ನಾನು ಬರೆಯುತ್ತೇನೆ ಅಂದರೆ ಅದು ಅರ್ಧಸತ್ಯ ಮಾತ್ರ ಆಗುತ್ತದೆ. ಹಾಗಾದರೆ ಪ್ರಕಟಿಸುವುದು ಯಾಕೆ? ನನ್ನ ಖುಷಿಗೆಂದು ನಾನೊಂದು “ಕತೆ” ಬರೆದು, ಅದನ್ನೊಮ್ಮೆ ಓದಿ, ಸಂತಸಪಟ್ಟು, ಫೈಲಿಗೆ ಸೇರಿಸಿ ಬಿಡಬಹುದಿತ್ತು. ಆದರೆ ನಾನು ಹಾಗೆ ಮಾಡುವುದಿಲ್ಲ. ಯಾವ ಬರಹಗಾರನೂ ಹಾಗೆ ಮಾಡುವುದಿಲ್ಲ. ಅದನ್ನು ನೀಟಾಗಿ ಬರೆದು, ಪತ್ರಿಕೆಗಳಿಗೆ ಕಳಿಸಿ, ಅದು ಪ್ರಕಟವಾದಾಗ ಹಿಗ್ಗಿ, ಓದುಗರ ಅಭಿಪ್ರಾಯಗಳಿಗಾಗಿ ಕಾತರಿಸಿ ಕಾಯುತ್ತಾನೆ. ಅಂದಾಗ ನಾನು ಬರೆಯುವುದು ಕೇವಲ ನನಗಾಗಿ ಅಲ್ಲ, ಅದು ಜನರಿಗಾಗಿ ಅನ್ನುವ ಸತ್ಯ ಗೋಚರಿಸುತ್ತದೆ. ನಾನು ಬರೆದದ್ದು ಪ್ರಕಟವಾಗಬೇಕು, ಜನರಿಗೆ ತಟ್ಟಬೇಕು, ಚುಚ್ಚಬೇಕು, ಅಳಿಸಬೇಕು, ನಗಿಸಬೇಕು, ಸಿಟ್ಟಿಗೆ ತರಿಸಬೇಕು, ಹಾಗೆಯೇ ಖುಷಿಯನ್ನೂ ಕೊಡಬೇಕು ಅನ್ನುವ ಅದಮ್ಯ ಬಯಕೆ ನನಗಂತೂ ಇದೆ. ಇದು ನನ್ನ ಸ್ವಾರ್ಥವೂ ಆಗಿರಬಹುದು. ಆದರೆ ಎಲ್ಲರಲ್ಲಿ ಅಷ್ಟಿಷ್ಟು ಸ್ವಾರ್ಥ ಇದ್ದೇ ಇರುತ್ತದಲ್ಲವೆ? ನಿಸ್ವಾರ್ಥ ಮನುಷ್ಯ ಸಿಗುವುದು ಬಲು ಕಷ್ಟ.

ಕಲೆಗಾಗಿ ಕಲೆ, ಸಾಹಿತ್ಯಕ್ಕಾಗಿ ಸಾಹಿತ್ಯ ಅನ್ನುವ ದಿನಗಳೂ ಇದ್ದುವು. ಲೇಖಕರಿಗೆ, ಕವಿಗಳಿಗೆ ಆ ಕಾಲದಲ್ಲಿ ರಾಜಾಶ್ರಯವಿರುತ್ತಿತ್ತು. ಅದರ ಜೀವನಕ್ಕೆ ಅರಸನೇ ಒಂದಿಷ್ಟು ಜಮೀನು, ಸಂಪತ್ತು ಅಂತ ಕೊಡುತ್ತಿದ್ದನು. ಹೀಗಾಗಿ ಅಂದಿನ ಲೇಖಕರು ಬದುಕಿನ ಯಾವ ಜವಾಬ್ದಾರಿಯೂ ಇಲ್ಲದೆ ಸಂಸಾರದ ಜಂಜಾಟವಿಲ್ಲದೆ, ಯಾವಾಗಲೂ ತುಂಬಿಯೇ ಇರುತ್ತಿದ್ದ ಹೊಟ್ಟೆಯ ಮೇಲೆ ಹಸ್ತ, ಆಡಿಸುತ್ತ, ರಾಜರ ಬಗ್ಗೆ, ದೇವರ ಬಗ್ಗೆ ಇಲ್ಲಸಲ್ಲ ದ್ದೆಲ್ಲ ಬರೆಯುತ್ತಿದ್ದರು. ಒಂದು ಮಹಾಕಾವ್ಯಕ್ಕೆ ಏನೇನು ಬೇಕೋ ಆ ಎಲ್ಲ ಶರತ್ತುಗಳಿಗನು ಗುಣವಾಗಿ, ಹದಿನೆಂಟು ವರ್ಣನೆಗಳು, ಒಂದೆರಡು ವೇಶ್ಯಾವಾಟಿಕೆಗಳು ಮೊದಲಾದವು, ಕಾವ್ಯಕ್ಕೆ ಸಂಬಂಧವಿಲ್ಲದಿದ್ದರೂ ತಂದು ತುರುಕುತ್ತಿದ್ದರು. ಶೃಂಗಾರಮಯ ಸನ್ನಿವೇಶಗಳನ್ನು ಸೃಷ್ಟಿಸಿ, ಅತಿರೇಕಗಳನ್ನು ಅಳವಡಿಸಿ, ಅದೊಂದು ಅಸಹಜ ಕೃತಿಯನ್ನಾಗಿಸುವಲ್ಲಿ ಹೆಣಗಾಡುತ್ತಿದ್ದರು.

ಆದರೆ ಇಂದಿನ ದಿನಗಳಲ್ಲಿ ಹಾಗೇನಿಲ್ಲ. ಮನುಷ್ಯನ ಬದುಕಿನ ಸ್ಥಿತಿಗತಿಗಳು ಬದಲಾ ದಂತೆ ಸಾಹಿತ್ಯದ ಗೊತ್ತು ಗುರಿಗಳೂ ಬದಲಾಗಿವೆ. ಈಗ ‘ಸಾಹಿತ್ಯ ಸಾಹಿತ್ಯಕ್ಕಾಗಿ ಅಲ್ಲ. ಅದು ಬದುಕಿಗಾಗಿ’ ಅನ್ನುವಂತಾಗಿದೆ. ಅದು ಬರೀ ರಾಜಮಹಾರಾಜರ, ದೇವತೆಗಳ ಸಾಹಿತ್ಯವಲ್ಲ, ಶ್ರೀ ಸಾಮಾನ್ಯರ ಸಾಹಿತ್ಯವಾಗಿದೆ. ಹೀಗಾಗಿ ಉಂಡುಟ್ಟು, ತಿಂದು ತೇಗಿದವರ ಬಗ್ಗೆ ಬರೆಯಲ್ಪಟ್ಟಿರುವ ಅಂದಿನ ಸಾಹಿತ್ಯಕ್ಕೆ ವಿರುದ್ಧವಾಗಿ ಈಗ ಹಸಿವು ಸಂಕಟಗಳ ಬಗ್ಗೆ, ನೋವು ಅವಮಾನಗಳ ಬಗ್ಗೆ, ದೌರ್ಜನ್ಯ ದಬ್ಬಾಳಿಕೆಗಳ ಬಗ್ಗೆ, ಶೋಷಣೆ ಪ್ರತಿಭಟನೆ ಗಳ ಬಗ್ಗೆ, ಯೋಚಿಸುವ ಮನಸ್ಸುಗಳು ಮತ್ತು ಬರೆಯುವ ಕೈಗಳು ಮುಂದೆ ಬಂದಿವೆ. ಇಂತಹ ಬರಹಗಳು ಈ ದಿನಗಳ ಜರೂರತ್ತು ಕೂಡ ಆಗಿದೆ.

\|ರ ಹಿಂದುಳಿದ, ಝೋಪಡಪಟ್ಟಿಯ ಅಮಾಯಕ ಮಹಿಳೆಯರ ಬದುಕಿನ ಕಥನ ನಮ್ಮ ಹಿಂದಿನ ಸಾಹಿತ್ಯದಲ್ಲೆಲ್ಲಿಯೂ ಚಿತ್ರಿಸಲ್ಪಟ್ಟಿಲ್ಲ. ದಲಿತ ಲೋಕದ ಹೆಂಗಸರ ಬಗ್ಗೆಇಲ್ಲಿಯವರೆಗಿನ ಯಾವ ಚರಿತ್ರೆಯಲ್ಲಿಯೂ ದಾಖಲಿಸಲ್ಪಟ್ಟಿಲ್ಲ. ಬರೀ ರಾಜರಾಣಿ ಯರ, ದೇವದಾಸಿಯರ, ಚೆಂದದ ಚೆಲುವಿನ ಅಂದಗಾತಿಯರನ್ನೇ ಸಾಹಿತ್ಯ ಮತ್ತು ಚರಿತ್ರೆ ಗಳಲ್ಲಿ ಚಿತ್ರಿಸುತ್ತ ಬಂದು, ಶೂದ್ರವರ್ಗದ ಸಾಮಾನ್ಯ ಹೆಣ್ಣಿನ ಬದುಕಿನ ಕಡೆಗೆ ನಮ್ಮ ಸಾಹಿತಿಗಳು, ಚರಿತ್ರೆಕಾರರು, ಕಲಾವಿದರು ದಿವ್ಯ ನಿರ್ಲಕ್ಷ್ಯ ತಾಳಿದರು. ಇಲ್ಲಿಯವರೆಗೆ ಬಂದ ಸಾಹಿತ್ಯವೆಲ್ಲ ಬರೇ ಉಳ್ಳವರ, ದವುಳ್ಳವರ ಬಗ್ಗೆಯೇ ಬರೆಯಲ್ಪಟ್ಟು ನಾಣ್ಯದ ಒಂದೇ ಮುಖಕ್ಕೆ ಬೆಳಕು ಬೀರುತ್ತ ಅರ್ಧಸತ್ಯವನ್ನು ಮಾತ್ರ ಹೇಳುತ್ತ ಬಂದಿದೆ. ಶೂದ್ರ ಗಂಡಸರ ಬಗ್ಗೆಯೇ ಎಲ್ಲಿಯೂ ಯಾರೂ ಚ ಕಾರ ಎತ್ತದಿರುವಾಗ ಪಾಪ ಆ ಹೆಂಗಸರ ಬಗ್ಗೆ ಬರೆಯುವವರಾರು? ಈವರೆಗೆ ಬಂದ ರಟ್ಟೆಗಾತ್ರದ ಗ್ರಂಥಗಳಲ್ಲಿ ಎಲ್ಲಿಯೂ, ದುಡಿದುಂಡು ಬದುಕುವ, ಕೂಲಿ ಕಬಟಿ ಮಾಡಿ ಹೊಟ್ಟೆ ತುಂಬಿಸಿಕೊಳ್ಳುವ, ಕಾರ್ಮಿಕರಾಗಿ ಜೀವಿಸುವ, ಶ್ರಮಜೀವಿಗಳಾದ ಶೂದ್ರ ಸಮುದಾಯದ ಚಿತ್ರಣ ಇಲ್ಲವೇ ಇಲ್ಲ! ಬದುಕಿನ ನುಣ್ಣನೆಯ ಒಂದೇ ರೂಪವನ್ನು ಪ್ರದರ್ಶಿಸಿ ಇದು ನಮ್ಮ ಭವ್ಯ ಇತಿಹಾಸವೆಂದು ಸಾರಿ, ಇಡೀ ದಲಿತಲೋಕದ ಆಗುಹೋಗುಗಳ ಬಗ್ಗೆ ತುಟಿ ಬಿಗಿದುಕೊಂಡೇ ಜಾನಪದ ಸಂಸ್ಕೃತಿಯ ಬಗ್ಗೆ ಬಾಯಿಮುಚ್ಚಿಕೊಂಡೇ, ಶಿಷ್ಠ ಸಂಸ್ಕೃತಿಯೊಂದನ್ನೇ ಹಾಡಿ, ಹೊಗಳಿ,ವೈಭವೀಕರಿಸುತ್ತ, ಮುಂಬರುವ ಪೀಳಿಗೆಯ ಕಣ್ಣಿಗೆ ಮಣ್ಣೆರಚುವ ಹುನ್ನಾರುಗಳು ಇತಿಹಾಸದುದ್ದಕ್ಕೂ ದಾಖಲಿಸ್ಪಟ್ಟಿರುವುದು ಶೋಚನೀಯ.

ನಾನು ನನ್ನ ಬರಹದಲ್ಲಿ ಈ ದಲಿತ ಜಗತ್ತಿನ, ಶೂದ್ರಲೋಕದ ಹೆಣ್ಣುಮಕ್ಕಳ ಬದುಕನ್ನು ಬಯಲಿಗಿಡುವ ಪ್ರಯತ್ನ ಮಾಡುತ್ತಿದ್ದೇನೆ. ಉದ್ದೇಶ ಪೂರ್ವಕವಾಗಿಯೇ ಇದನ್ನು ಕತೆ, ಕಾದಂಬರಿಯಾಗಿಸುತ್ತಿದ್ದೇನೆ. ಇಂಥ ಹೆಂಗಸರ ಜೀವನವನ್ನು ವಿವರವಾಗಿ ಬಿಚ್ಚಿಡುವುದರಲ್ಲಿ ನನಗೆ ಎಂಥದೋ ಒಂದು ವಿವರಿಸಲಾಗದ ಖುಷಿಯಾಗುತ್ತದೆ.

ನನ್ನ ಜನರ ಬಗ್ಗೆ ಬರೆಯುವ ಅದಮ್ಯ ಬಯಕೆ ನನಗೆ. ಬರೆದು ತೀರದ, ಹೇಳಿ ಮುಗಿಸದ ಗೋಳು ಇವರದು. ಈ ಹೆಂಗಸರ ನೋವು ಸಂಕಟಗಳನ್ನು ಅಕ್ಷರಗಳಲ್ಲಿ ನೇಯುವ, ಇವರ ಆಂತರ್ಯದ ವೇದನೆಗೆ ನಾಲಿಗೆಯಾಗುವ, ಇವರ ಮೂಕ ಸಹನೆಗೆ ದನಿಯಾಗುವ ಹಂಬಲ ನನಗೆ. ಇವರ ಮೇಲಿನ ದಬ್ಬಾಳಿಕೆ, ದೌರ್ಜನ್ಯಗಳ ಬಗ್ಗೆ, ಹಿಂಸೆ ಕ್ರೌರ್ಯಗಳ ಬಗ್ಗೆ, ರಾಜಿ ಬಂಡಾಯಗಳ ಬಗ್ಗೆ ಒಟ್ಟಿನಲ್ಲಿ ಇವರ ಇಡೀ ಬದುಕಿನ ಆಗು ಹೋಗುಗಳ ಬಗ್ಗೆ ಬರೆಯುವ ಹುಮ್ಮಸ್ಸು ನನಗೆ ಯಾಕೆ ಅಂತ ನನಗೂ ಗೊತ್ತಿಲ್ಲ. ಆದರೆ ಬರೆಲೇಬೇಕೆನ್ನುವ ನನ್ನೊಳಗಿನ ತೀವ್ರ ವತ್ತಡ ಮತ್ತು ಈ ನನ್ನ ಹುಚ್ಚಿನಿಂದಾಗಿ ಹಳ್ಳಿ ಹಳ್ಳಿ ಸುತ್ತುತ್ತಿರುತ್ತೇನೆ, ಗುಡಿಸಲಗೇರಿಗಳಲ್ಲಿ ಅಲೆದಾಡುತ್ತಿರುತ್ತೇನೆ ಆಗಾಗ. ನಗರದ ಝೋಪಡ ಪಟ್ಟಿಯ ಪತರಾದ ಖೊಲ್ಲಿಗಳ ಮಂದಿಯನ್ನು ಭೇಟಿಯಾಗಿ ಅವರ ಬದುಕನ್ನು ಕೆದಕುತ್ತಿರುತ್ತೇನೆ ಒಮ್ಮೊಮ್ಮೆ. ಕುದುರೆ ಮೋತಿಯ ಪ್ರಕರಣದಲ್ಲಿ ನಾನು ಅಲ್ಲಿಗೇ ಹೋಗಿ, ಶೋಷಣೆಗೊಳಪಟ್ಟು ಕಂಗಾಲಾಗಿದ್ದ ಹೆಂಗಸರಿಬ್ಬರನ್ನೂ ಕಂಡು ಅವರ ಸಂದರ್ಶನ ಮಾಡಿದ್ದು, ಅದು ‘ತರಂಗ’ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ನನ್ನೊಳಗಿನ ಇದೇ ಒತ್ತಡದಿಂದ ದೇಶದ ಯಾವುದೇ ಒಂದು ಮೂಲೆಯ ಸಣ್ಣದೊಂದು ಗುಡಸಲಿನ ಹೆಂಗಸಿನ ಮೇಲೆ ನಡೆದ ದೌರ್ಜನ್ಯ, ಹಿಂಸೆಗಳ ದೇಶದ ತುಂಬೆಲ್ಲ ಪ್ರಚಾರಕ್ಕೆ ಬಂದು ಜನತೆಯನ್ನು ಜಾಗೃತ ಗೊಳಿಸಬೇಕೆಂಬುದು ನನ್ನ ಆಶಯ.

ರಾಯಚೂರು ಜಿಲ್ಲೆಯ ಕುದುರೆಮೋತಿ ಪ್ರಕರಣ ನಡೆದ ಕೆಲವೇ ದಿನಗಳಲ್ಲಿ ಮಂಡ್ಯದಲ್ಲಿ ಮಹಿಳಾ ಸಾಹಿತ್ಯ ಸಮ್ಮೇಳನ ನಡೆದಿತ್ತು. ನನಗೂ ಒಂದು ಸನ್ಮಾನವಿತ್ತು ಅಲ್ಲಿಗೆ ಹೋಗಿದ್ದೆ. ಭಾಷಣಗಳು, ಗೋಷ್ಠಿಗಳು, ವಿಚಾರ ಸಂಕಿರಣಗಳು, ಚರ್ಚೆಗಳು, ಕವನ ವಾಚನ ಅಂತ ಏನೆಲ್ಲ ನಡೆದುವು. ಹಲವಾರು ಮಹಿಳಾ ಸಾಹಿತಿಗಳು ಏನೆಲ್ಲ ಮಾತಾಡಿ ದರು. ಆದರೆ ಶಶಿಕಲಾ ವೀರಯ್ಯಸ್ವಾಮಿಯವರ ಒಂದು ಕವನ ಬಿಟ್ಟರೆ ಬೇರೆ ಯಾವ ಬರಹಗಾರ್ತಿಯ ಬಾಯಿಯಿಂದಲೂ ಈ ಕುದುರೆಮೋತಿಯ ಪ್ರಕರಣದ ದುರ್ದೈವಿ ಹೆಂಗಸರ ಶೋಷಣೆಯ ಬಗ್ಗೆ, ಅವರ ಬೆತ್ತಲೆ ಮೆರವಣಿಗೆಯ ಬಗ್ಗೆ ಬಂಡಿವ ದನಿಯಂತೂ ದೂರ, ಒಂದು ಚ ಕಾರವೂ ಹೊರಬರಲಿಲ್ಲ! ಸಮಾರೋಪದಲ್ಲಿ ಕೆಲ ಲೇಖಕಿಯರಿಗೆ ಸನ್ಮಾನವಿತ್ತು. ಅದು ಅತಿಥಿಯಾಗಿದ್ದ ಖ್ಯಾತ ಸಾಹಿತಿ ‘ಚದುರಂಗ’ ಅವರಿಂದ. ಆಗ ಶಾಲಿನ ಬದಲಾಗಿ ಎಲ್ಲರಿಗೂ ಒಂದೊಂದು ರೇಶ್ಮೆ ಸೀರೆ, ರವಕೆ ಕೊಟ್ಟು, ಹೂವಿನ ಹಾರ ಹಾಕಿ ಸನ್ಮಾನಿಸುತ್ತಿದ್ದರು. ನನ್ನ ಸರದಿ ಬಂದಾಗ ಸೀರೆಯನ್ನು ತೆಗೆದುಕೊಳ್ಳುತ್ತಲೇ ನಾನು ‘ಚದುರಂಗ’ರನ್ನು ಮತ್ತು ಎಲ್ಲ ಗಂಡಸರನ್ನು ಉದ್ದೇಶಿಸಿ ಮಾತಾಡುತ್ತ “ಒಂದು ಕಡೆ ಕುದುರೆಮೋತಿಯಂಥ ಹಳ್ಳಿಯಲ್ಲಿ ನಮ್ಮ ಹೆಂಗಸರ ಮೈಮೇಲಿನ ಸೀರೆ ಕಳಚಿ ಬತ್ತಲೆ ಮೆರವಣಿಗೆ ಮಾಡ್ತೀರಿ. ಇನ್ನೊಂದು ಕಡೆ ಈ ಮಂಡ್ಯದಂಥ ನಗರದಲ್ಲಿ ನಮಗೆ ರೇಶ್ಮೆ ಸೀರೆ ಕೊಟ್ಟು ಸನ್ಮಾನ ಮಾಡ್ತೀರಿ. ಶಹಬ್ಬಾಶ್! ಇಂಥ ನಿಮ್ಮ ಇಬ್ಬಗೆಯ ನಡವಳಿಕೆಗೆ ಏನನ್ನಬೇಕೋ…” ಅಂತಲೇ ಮಾತು ಶುರುಮಾಡಿದಾಗ ಸಭೆಯೆಲ್ಲ ಗಪ್‌ಚಿಪ್ಪಾಯಿತು. ‘ಚದುರಂಗ’ರು ಕಂಗಾಲಾಲಿ “ನನಗಿದು ಗೊತ್ತಿರಲಿಲ್ಲಮ್ಮ. ಗೊತ್ತಿದ್ದರೆ ನಾನು ಖಂಡಿತ ಇಂಥ ಸನ್ಮಾನ ಮಾಡಲು ಒಪ್ಪುತ್ತಿರಲಿಲ್ಲ” ಅಂದರು. ಮೈಸೂರು, ಬೆಂಗಳೂರುಗಳಂಥ ಶಿಷ್ಟ ಜನರಿಗೆ ಜಾಸ್ತಿಯಾಗಿ ಹಳ್ಳಿಗಳ ಅಮಾಯಕ ಹೆಂಗಸರ ಶೋಷಣೆಗಳು ಕಾಣಿಸುವುದಿಲ್ಲ ವೆಂದರೆ ಏನರ್ಥ? ಪತ್ರಿಕೆಗಳನ್ನು ಇವರು ಓದುವುದಿಲ್ಲವೆ?.

ಹೊಟ್ಟೆ ತುಂಬಿದವರ್ಯಾರೂ ಹಸಿವೆಯ ಬಗ್ಗೆ ಬರೆಯುವುದಿಲ್ಲ. ಗಂಡ ತಂದು ಹಾಕಿದ್ದನ್ನು, ರುಚಿ ರುಚಿಯಾಗಿ ಮೃಷ್ಠಾನ್ನ ಮಾಡಿಕೊಂಡು ತಿಂದು, ಬಣ್ಣ ಬಣ್ಣದ ರೇಶ್ಮೆ ಸೀರೆ ಉಟ್ಟು, ಸುಖದ ಸುಪ್ಪತ್ತಿಗೆಯಲ್ಲಿರುವ, ವೈದಿಕ ಪರಂಪರೆಯಿಂದ ಬಂದ ನಮ್ಮ ಬಹುತೇಕ ಮಹಿಳಾ ಸಾಹಿತಿಗಳಿಗೆ ಪಾಪ ಕೆಳಸ್ತರದ ಶೂದ್ರ ಹೆಂಗಸರ ಶೋಷಣೆ, ಸಂಕಟಗಳು ಅರಿವಿಗೆ ಬರಬೇಕಾದರೂ ಹೇಗೆ? ಹೀಗಾಗಿ ನಮ್ಮಲ್ಲಿ ಮೊದಲು ಬಂದದ್ದೆಲ್ಲ ವಿಮರ್ಶಕ ಡಾ. ಗಿರಡ್ಡಿಯವರು ಹೇಳಿದಂತೆ, ಬರೇ ಅಡಿಗೆ ಮನೆಯ, ಉಪ್ಪಿಟ್ಟು ಬಾಳೆಹಣ್ಣಿನ ಸಾಹಿತ್ಯವಾದದ್ದು ನಿಜ.

ಆದರೆ ನನ್ನಂಥ ಕೆಲವು ಶೂದ್ರ ಬರಹಗಾರ್ತಿಯರಿಗಾದರೂ ಇಂಥ ನೋವು ತಟ್ಟಿ, ಅವರು ಧೈರ್ಯದಿಂದ ಬರೆಯಲು ಮುಂದಾಗಬೇಕೆಂಬುದು ನನ್ನ ಹಂಬಲ. ನಾನೇ ಯಾಕೆ ಇದನ್ನು ಪ್ರಾರಂಭಿಸಬಾರದು ಅನ್ನಿಸಿ ತುಸು ಧೈರ್ಯದಿಂದಲೇ ಝೋಪಡಪಟ್ಟಿಯ ಸಾಹಿತ್ಯಕ್ಕೆ ಕೈಯಿಟ್ಟೆ. ನನ್ನ ಗುಡಿಸಲಗೇರಿಯ ಮೂರ್ಖ, ಮುಗ್ಧ, ಅನಕ್ಷರಸ್ಥ, ಅಮಾಯಕ ಹೆಂಗಸರ ಸ್ಥಿತಿಗತಿಯ ಬಗ್ಗೆ, ಅವರಿಗೊಡ್ಡುವ ಆಸೆ ಆಮಿಷಗಳ ಬಗ್ಗೆ, ಅವರ ದಾರಿದ್ರ್ಯದ ಬಗ್ಗೆ, ಅವರ ರೀತಿ ರಿವಾಜುಗಳ ಬಗ್ಗೆ, ಕಾಮ ಪ್ರೇಮಗಳ ಬಗ್ಗೆ, ಅವರ ಪ್ರಣಯ ಹಾದರಗಳ ಬಗ್ಗೆ, ದಬ್ಬಾಳಿಕೆ ದೌರ್ಜನ್ಯಗಳನ್ನೊಳಗೊಂಡ ಲೈಂಗಿಕ ಶೋಷಣೆಯ ಬಗ್ಗ ಯಾವ ಮುಚ್ಚು ಮರೆಯಿಲ್ಲದೆ ಖುಲ್ಲಮ ಖುಲ್ಲಾ ಬರೆಯತೊಡಗಿದೆ. ಆರ್ಥಿಕವಾಗಿ, ಸಾಮಾಜಿಕವಾಗಿ ಮತ್ತು ಲೈಂಗಿಕವಾಗಿ ನಮ್ಮ ಈ ಕೊಳಗೇರಿಯ, ಹಳ್ಳಿಯ ಕೆಳಗೇರಿಯ ಹೆಂಗಸರು ಶೋಷಣೆ ಗೊಳಪಟ್ಟಷ್ಟು ಬೇರೆ ಯಾವ ಹೆಂಗಸರೂ ಒಳಪಟ್ಟಿಲ್ಲ. ಹಸಿವೆ ಹಿಂಗಿಸುವ ತುತ್ತು ಅನ್ನಕ್ಕಾಗಿ, ಮೈ ಮುಚ್ಚುವ ತುಂಡು ಬಟ್ಟೆಗಾಗಿ, ದವುಳ್ಳ ಗಂಡಸರು ಒಡ್ಡುವ ಆಸೆ ಆಮಿಷ ಗಳಿಗೆ ಬಳಗಾಗಿ ಹಾದರಕ್ಕಿಳಿಯುವ ಈ ನಿರ್ಗತಿಕ ಹೆಂಗಸರ ಅನಿವಾರ್ಯತೆ, ಅಸಹಾಯಕತೆ ಗಳನ್ನು ಬರಹದ ಮೂಲಕ ಬಯಲಿಗಿಡುವ ಉದ್ದೇಶ ನನ್ನದು.

ನನ್ನ ಸಾಹಿತ್ಯದ ಮೂಲಕ ಹೇಳ ಹೊರಟಿರುವ ‘ದರ್ಶನ’ ಎರಡು ಬಗೆಯದ್ದು. ಒಂದು, ನನ್ನ ಈ ಶೂದ್ರ ಜಗತ್ತಿನ ಮತ್ತು ದಲಿತ ಜಗತ್ತಿನ ಹೆಂಗಸರ ಬದುಕಿನ ಹಲವು ಹದಿನೆಂಟು ಬಗೆಯ ನೋವು, ಸಂಕಟಗಳನ್ನು ಬತ್ತಲೆಗೊಳಿಸಿ ಅವುಗಳನ್ನು ಇದ್ದಕ್ಕಿದ್ದಂತೆಯೇ ಜನತೆಯ ಮುಂದಿಡುವುದು. ಅವರ ಬದುಕಿನ ದಾರುಣತೆಯನ್ನು ಬಯಲಿಗೆಳೆಯುತ್ತ ಅದಕ್ಕೆ ಕಾರಣಗಳನ್ನು ಹುಡುಕಲು ಜನರ ಮನಸ್ಸನ್ನು ತಯಾರು ಮಾಡುವುದು.

ಶೋಷಿತ ಹೆಂಗಸರೆಲ್ಲರೂ ಪ್ರತಿಭಟನೆಗೆ ತೊಡಗುವುದಿಲ್ಲ. ಹಾಗೆ ಎದುರು ನಿಂತು ಎಲ್ಲ ಹೆಂಗಸರೂ ಬಂಡು ಸಾರಿದ್ದರೆ ಬಹುಶಃ ಈ ಶೋಷಣೆ ಈ ದಿನದ ವರೆಗೂ ಉಳಿದು ಬರುತ್ತಿರಲಿಲ್ಲ. ಸಬಲರನ್ನು ಎದುರು ಹಾಕಿಕೊಂಡು ಬಂಡೇಳುವ ಸಾಹಸ ಮಾಡದೆ ಒಳಗೊಳಗೇ ನೊಂದು, ಬೆಂದು, ಕೊರಗಿ, ತಮಗೆದುರಾದ ಸಮಸ್ಯೆಗಳೊಂದಿಗೆ ರಾಜಿ ಮಾಡಿಕೊಂಡವರೇ ಬಹಳ ಮಂದಿ. ಪ್ರವಾಹಕ್ಕೆ ಎದುರಾಗಿ ಈಜುವ ತಾಕತ್ತಿಲ್ಲದೆ ಒಳಗೊಳಗೇ ಬಳಲಿ ಬೆಂಡಾಗಿ, ತೊಳಲಾಡುವ ಇಂಥ ಹೆಂಗಸರೇ ಜಾಸ್ತಿ. ಪ್ರತಿಭಟಿಸಿ, ಸೆಟೆದು ನಿಲ್ಲುವ ದಿಟ್ಟ ಮಹಿಳೆಯರ ಸಂಖ್ಯೆ ತೀರ ಕಡಿಮೆಯೇ. ಆದ್ದರಿಂದ, ನನ್ನ ಬರಹ ದಿಂದ ಇಂಥವರಿಗೆ ಒಂದಿಷ್ಟು ಧೈರ್ಯ ಬಂದರೆ, ಅನ್ಯಾಯವನ್ನು ತುಳಿದು ನಿಲ್ಲುವ ಒಂದಿಷ್ಟು ತಾಕತ್ತು ದೊರೆತರೆ, ನನಗದೇ ದೊಡ್ಡ ಸಮಾಧಾನ, ಬರೆದದ್ದರ ಪ್ರಯೋಜನ.

ಇನ್ನೊಂದು ‘ದರ್ಶನ’, ನನ್ನ ಗುಲಬರ್ಗಾ ಜಿಲ್ಲೆಯ ಹಳ್ಳಿಗರ ಗಂಡುಭಾಷೆ. ಚಂದ್ರಶೇಖರ ಕಂಬಾರರ “ಸಿಂಗಾರೆವ್ವ ಮತ್ತು ಅರಮನೆ”, ದೇವನೂರು ಮಹಾದೇವರ ಕತೆಗಳನ್ನು ಓದಿದಾಗ ನನಗೂ ನನ್ನ ಹಳ್ಳಿಯ ‘ಪ್ರಾದೇಶಿಕ ಭಾಷೆಯನ್ನು’ ಜನರಿಗೆ ಪರಿಚಯಿಸಬೇಕೆಂಬ ಆಸೆ ಮೂಡಿತು. ನಮ್ಮ ಭಾಷೆ ಬೆಂಗಳೂರು, ಮೈಸೂರು ಕಡೆಯ ಮಂದಿಗೆ ಅರ್ಥವಾಗುತ್ತದೋ ಇಲ್ಲವೋ ಎಂಬ ಅಳುಕಿನಿಂದಲೇ ನಾನು ನನ್ನ ಕಾದಂಬರಿ ‘ನೀಲಗಾಂಗ’ಯನ್ನು ಲಂಕೇಶ್ ಪತ್ರಿಕೆಗೂ, ‘ಹಸಿ ಮಾಂಸ ಮತ್ತು ಹದ್ದುಗಳ’ನ್ನು ‘ತರಂಗ’ ಪತ್ರಿಕೆಗೂ ಕಳಿಸಿದ್ದೆ. ಅವೆರಡೂ ಕಾದಂಬರಿಗಳು ಧಾರಾವಾಹಿಯಾಗಿ ಪ್ರಕಟವಾಗಿ, ನನಗೆ ಓದುಗರಿಂದ, ವಿಮರ್ಶಕರಿಂದ, ಅಪಾರ ಮನ್ನಣೆ ಗಳಿಸಿಕೊಟ್ಟವು. ಭಾಷೆಯನ್ನು ಮೆಚ್ಚಿಕೊಂಡು, ವಸ್ತುವನ್ನು ಮೆಚ್ಚಿಕೊಂಡು ರಾಶಿ ರಾಶಿ ಪತ್ರಗಳು ನನ್ನ ಮತ್ತು ಪತ್ರಿಕೆಗಳ ಸಂಪಾದಕರ ಮುಂದೆ ಬಂದು ಬಿದ್ದುವು. ಹೀಗಾಗಿ ನನಗೆ, ನನ್ನೂರ, ನನ್ನ ಹಳ್ಳಿಗಳ ಜವಾರಿ ಭಾಷೆಯ ಗಂಡಸುತನದ ಬಗ್ಗೆ ಹೆಮ್ಮೆ ಎನಿಸಿತು. ಮುಂದೆಲ್ಲ ಇದೇ ಭಾಷೆಯಲ್ಲಿ ಬರೆಯ ತೊಡಗಿದೆ. ನನ್ನ ಕತೆ ಕಾದಂಬರಿಗಳ ‘ವಸ್ತು’ ಕೆಳಗೇರಿಯಿಂದಲೇ ಎದ್ದು ಬರುತ್ತವಾದ್ದರಿಂದ ಆ ಕೆಳಗೇರಿ ಮಂದಿಯ ಮಾತುಗಳನ್ನೇ ನಾನು ಆಡಬೇಕಾದುದು ಅನಿವಾರ್ಯವಾಗಿ, ಅದೇ ಮಾತುಗಳು ನನ್ನ ಕೃತಿಗಳಿಗೆ ಕಸುವು ತುಂಬಿದವು.

ಇಂಥ ನನ್ನ ಭಾಷಾ ಪ್ರಯೋಗದಿಂದ ನನ್ನ ಮೇಲೆ ಕೆಲವು ತಕರಾರುಗಳೂ ಹುಟ್ಟಿ ಕೊಂಡವು. “ಹೆಂಗಸಾಗಿ ಹಿಂತಾ ಅಶ್ಲೀಲ ಭಾಷೆ ಬರೀತಾಳಲ್ರೀ…. ಸ್ವಲ್ಪವೂ ನಾಚಿಕೆಯಿಲ್ಲ ಈ ಹೆಣ್ಣು ಮಗಳಿಗೆ” ಅನ್ನುವಂಥ ಮಾತುಗಳು ಕೆಲ ಮೂಲೆಗಳಿಂದ, ಮುಖ ಮರೆಸಿಕೊಂಡ ಮಂದಿಯಿಂದ ಕೇಳಿ ಬರತೊಡಗಿದವು. ಭಾಷೆಗೂ ‘ಶೀಲ’, ‘ಅಶ್ಲೀಲ’ ಕಲ್ಪಿಸುವ ಇಂಥ ಮಡಿವಂತಿಕೆಯ ಮನಸ್ಸುಗಳನ್ನು ಕಂಡು ನನಗೆ ಅಚ್ಚರಿಯಾಯಿತು. ತಮಾಶೆಯೆಂದರೆ ಮೇಲೆ ಹೀಗೆ ಮೂಗುಮುರಿಯುವ ಮಂದಿಯೂ ಕದ್ದು ಮುಚ್ಚಿ ನನ್ನ ಕಾದಂಬರಿಗಳನ್ನೋದಿ ಒಳಗೊಳಗೇ ಖುಷಿಪಟ್ಟು ಮೈಮೇಲೆ ಮುಳ್ಳೆಬ್ಬಿಸಿಕೊಂಡದ್ದು! ನನ್ನ ಬರಹದಲ್ಲಿ ಬರುವ ಭಾಷೆ, ಅದು ನಾನು ಸೃಷ್ಟಿಸಿಕೊಂಡದ್ದಂತೂ ಖಂಡಿತ ಅಲ್ಲ. ಅಸಲಿಗೆ ಆ ಭಾಷೆಯ ಸೃಷ್ಟಿ ಅದಕ್ಕೆ ಸಂಬಂಧಿಸಿದ ಆ ಹಳ್ಳಿಗಳ ಗಡಸು ಮಂದಿಯದೇ. ಅದನ್ನು ನಾನು ಧೈರ್ಯದಿಂದ ಬಳಸಿಕೊಂಡಿದ್ದೇನೆ ಅಷ್ಟೇ. ಅದಕ್ಕೆ ಈ ಕೆಲ ಮಡಿವಂತರು ಬೆಚ್ಚಿ ಬೀಳುವುದು ಯಾಕೋ…?

ನಾನು ಬರೆಯುವುದು ನನ್ನ ಆನಂದಕ್ಕಷ್ಟೇ ಅಲ್ಲ. ಓದುಗರ ಖುಷಿಗೂ ಸಹ. ನನ್ನ ಬರಹದಿಂದ ಸಮಾಜ ಸುಧಾರಿಸುತ್ತದೆ, ಕ್ರಾಂತಿಯಾಗುತ್ತದೆ ಎಂದು ನಾನಂತೂ ಭ್ರಮಿಸಿಲ್ಲ. ಆದರೂ ಈ ಕೆಳಸ್ತರದ ಹೆಣ್ಣುಮಕ್ಕಳ ನೋವು, ಸಂಕಟ, ಸಂಘರ್ಷಗಳನ್ನು ಜನತೆಯ ಮುಂದಿಡುವ ಹೆಬ್ಬಯಕೆ ನನಗೆ ಯಾಕೆ ಅಂತ ನನಗೇ ಗೊತ್ತಿಲ್ಲ ಅಂದೆನಲ್ಲ. ಒಂದೊಂದು ಸಲವಂತೂ ಕೆಲ ಸನ್ನಿವೇಶಗಳನ್ನು ಬರೆಯುವಾಗ, ಆಗಾಗ, ನನ್ನ ಮೇಲೆ ಯಾರೋ ಸವಾರಿ ಮಾಡಿದಂತಾಗಿ, ಮೈಮೇಲೆ ಬಂದವರಂತೆ ಹಿಂದು ಮುಂದುವಿಚಾರ ಮಾಡದೆ ವೇಗವಾಗಿ ಬರೆಯುತ್ತಲೇ ಹೋಗುತ್ತೇನೆ. ವೇಗದ ವತ್ತಡ ತಾಳದೆ ನನ್ನ ಪೆನ್ನು ಏಳುಬೀಳುವ ಖಬರಿಲ್ಲದೆ ಮುಗ್ಗರಿಸಿದ್ದುದಿದೆ. ಯಾಕೆ ಹೀಗಾಗುತ್ತದೋ ಗೊತ್ತಿಲ್ಲ. ಬಹುಶಃ ಭಾವನೆಗಳ ಒತ್ತಡವರಿಬಹುದೇನೋ ಅಥವಾ ಇದೂ ಒಂದು ನನ್ನ ದೌರ್ಬಲ್ಯವೋ ಕಾಣೆ.

ನನ್ನ ಅನುಭವವೇ ನನಗೆ ಆಸ್ತಿ. ಹಾಗೆಂದು ಎಲ್ಲ ಅನುಭವಗಳೂ ಕಾದಂಬರಿ ಗಳಾಗುವುದಿಲ್ಲ. ಆ ಮಾತು ಬೇರೆ. ನಾನು ಕಂಡುಂಡ ಸತ್ಯಗಳು, ಅನುಭವಗಳು ಬೇರೆಯವರಿ ಗಿಂತ ಭಿನ್ನವಾದವುಗಳು. ಕೆಲವು ಘಟನೆಗಳಿಗಂತೂ ನಾನು ಸಾಕ್ಷಿಯಾಗಿ ನಿಂತಿದ್ದೇನೆ. ಕೆಲವಂತೂ ನನಗೇ ಎದುರಾಗಿವೆ. ಅವುಗಳೊಂದಿಗೆ ಸಂಘರ್ಷಕ್ಕಿಳಿದು ಸೆಣಸಾಡಿ ಕೆಲವು ಸಲ ಗೆದ್ದರೂ ಬಹಳಷ್ಟು ಸಲ ಸೋತದ್ದೇ ಇದೆ. ಇಂಥ ಹಲವಾರು ಸೋಲುಗಳು ಕತೆ, ಕಾದಂಬರಿಯಾಗಿ ಮೂಡಿಬಂದಿವೆ. ಗೆಲುವಿಗಾಗಿ ತಡಕಾಡಿವೆ. ಅನುಭವ ಭಾಷೆಯ ತೆಕ್ಕೆಗೆ ಸಿಕ್ಕು ಕತೆಯೋ ಕಾದಂಬರಿಯೋ ಆಗಿ ಅಭಿವ್ಯಕ್ತಿಗೊಳ್ಳುವ ಮೊದಲಿನ ಬರಹಗಾರನ ಚಡಪಡಿಕೆಯಿದೆಯೆಲ್ಲ, ಅದೇ ಒಂದು ರೀತಿಯ ಸುಖ. ಬರೆದು ಮುಗಿಸಿದ ಮೇಲೆ ಇನ್ನೊಂದು ರೀತಿಯ ಸುಖ, ನೆಮ್ಮದಿ, ನಿರುಮ್ಮಳತೆ. ಹಾಗೆ ನೋಡಿದರೆ ನನ್ನದು ಬರಹ ಗಾರರ ವಂಶವೇನೂ ಅಲ್ಲ. ನನ್ನ ಕುಟುಂಬದಲ್ಲಿ ಯಾರಿಗೂ ವಿದ್ಯೆಯ ವಾಸನೆಯೇ ಗೊತ್ತಿಲ್ಲ. ನನ್ನ ಅವ್ವ, ಅಪ್ಪ ಇಬ್ಬರೂ ಹಳ್ಳಿಯ ಅನಕ್ಷರಸ್ಥರು. ಆದರೆ ನನಗೆ ಈ ಬರೆಯುವ ಹುಚ್ಚು ಹ್ಯಾಗೆ ಬಂತೋ ತಿಳಿಯದು.

ನನ್ನ ಕಾದಂಬರಿಗಳಲ್ಲಿ ತಂತ್ರ, ಶೈಲಿ ಮಣ್ಣು ಮಸಿ ಅಂತ ನಾನು ಯಾವ ಅಸಹಜ ಬಣ್ಣವನ್ನೂ ಬೆರೆಸುವುದಿಲ್ಲ. ಅವುಗಳಿಗೆ ನಕಲಿ ಪಾಲಿಶ್ ಹಾಕುವುದಿಲ್ಲ. ನನ್ನ ಕತೆಗಳೇನಿ ದ್ದರೂ ಕಪ್ಪು ಬಿಳುಪಿನವುಗಳೇ. ಕಪ್ಪು ಮಣ್ಣಿನ ಹಸಿರು ಮಡಿಲಿನಿಂದ ಹುಟ್ಟಿ ಬಂದ ಅಸಲಿ ಚೀಜುಗಳು. ಅವು ಯಾರ ಅಂಕೆಗೂ ಬಗ್ಗಿ ಕುಗ್ಗದೆ, ಬೇಕಾಬಿಟ್ಟಿಯಾಗಿ ಸೊಕ್ಕಿನಿಂದ ಬೆಳೆದು ನಿಂತ ಕಾಡಿನ ಗಿಡಬಳ್ಳಿಗಳೇ ಹೊರತು ನಗರದ ತೋಟಗಳಲ್ಲಿಯ ಮಾಲಿಯ ಕತ್ತರಿಗೆ ಸಿಕ್ಕು ಮೂಲ ಆಕಾರ ಕೆಡಿಸಿಕೊಂಡ ಕೃತಕ ಗಿಡಬಳ್ಳಿಗಳಲ್ಲ. ನಾನು ಹೇಳಬೇಕಾದುದನ್ನು ಸರಳವಾಗಿ, ತಣ್ಣಗಿನ ಸಂಯಮದಿಂದಲೇ ಹೇಳುತ್ತೇನೆ. ನಾನು ಬರೆಯುವುದು ಸಾಮಾನ್ಯ ಓದುಗರಿಗಾಗಿ. ಗ್ರಾಮೀಣ ಯುವಕ ಯುವಕರಿಗಾಗಿ, ನನ್ನ ಸಾಹಿತ್ಯದ ಮೂಲಕ ನಾನು ಹೇಳಹೊರಟಿರುವ ‘ದರ್ಶನ’ವನ್ನು ಅವರಿಗೆ ಸರಳವಾಗಿ ಅರ್ಥವಾಗುವಂತೆ ಮಾಡುವುದೇ ವಿನಃ ತಂತ್ರದ ಚಾಲೀಮಾಗಲಿ, ಶೈಲಿಯ ಸರ್ಕಸ್ಸಾಗಲೀ ಮಾಡಿ ನನ್ನ ಓದುಗ ಆತ್ಮೀಯರಿಗೆ ದಾರಿ ತಪ್ಪಿಸುವ ಚಮತ್ಕಾರಿಕ ‘ಜಾದು ಟೋನಾ’ ಮಾಡುವುದಿಲ್ಲ. ಝೋ ಪಡಪಟ್ಟಿಯ ಸಂದಿಗೊಂದಿಗಳಲ್ಲಿಯ ಹೊಲಸಿನ, ನೋವಿನ ದರ್ಶನ ವೂಡಿಸಿ, ಅದನ್ನು ಹಸನುಗೊಳಿಸಲು, ಅವರನ್ನು ಪ್ರಚೋದಿಸುವುದು ನನ್ನ ಉದ್ದೇಶ. ಹಿಂದಿನಿಂದ ಇಂದಿನ ವರೆಗೆ ಅವರು ಮೇಲ್ವರ್ಗದ ಮಂದಿಯ ಕೇರಿಗಳನ್ನು ಸ್ವಚ್ಛಮಾಡಿ ಅವರ ಮನೆ, ಅಂಗಳ ಗಳನ್ನು ಸಾರಿಸಿದ್ದೇ ಆಯಿತು. ಇನ್ನಾದರೂ ನಮ್ಮ ಈ ಕಪ್ಪು ಮಂದಿ ತಮ್ಮ ಕೇರಿಗಳ ನಡುವಿನ ಕೊಳೆಯನ್ನು ತೆಗೆದು ಸ್ವಚ್ಛಗೊಳಿಸಿ, ಕೇರಿಯ ಸುತ್ತಲೂ ತಂತಿಬೇಲಿ ಹಾಕಿ, ‘ಅಕ್ರಮ ಪ್ರವೇಶ ನಿಶೇಧಿಸಲಾಗಿದೆ’ ಅಂತ ಬೋರ್ಡು ಬರೆಸಿ ಹಾಕಿದರೆ, ರೊಕ್ಕಿಸ್ತರೆನ್ನಿಸಿ ಕೊಳ್ಳುವ ಬಹುತೇಕ ಕಚ್ಚೆಹರುಕ ಗಂಡಸರಿಗೆ ಎಚ್ಚರಿಕೆಯ ಗಂಟಿಯಂತಾಗಿ ಬುದ್ದಿ ಬಂದೀತು.

ಶೂದ್ರ ಲೋಕಕ್ಕೆ ತನ್ನದೇ ಆದ ಸಾಂಸ್ಕೃತಿಕ ನೆಲೆಯಿದೆ. ಅವರಿಗೆ ತಮ್ಮದೇ ಆದ ಸಾಮಾಜಿಕ ಮೌಲ್ಯಗಳಿವೆ. ಇಲ್ಲಿಯವರೆಗೂ ಮೆರವಣಿಗೆ ಮಾಡಿಸಿಕೊಳ್ಳುತ್ತ ಬಂದಿರುವ ಶಿಷ್ಠ ಸಂಸ್ಕೃತಿಯ ಎದುರು ಸೆಟೆದು ನಿಲ್ಲುವ ತಾಕತ್ತು ನಮ್ಮ ಜಾನಪದ ಸಂಸ್ಕೃತಿಗಿದೆ. ಹಿಂದೂ ಸಂಸ್ಕೃತಿಯೆಂದು ಕರೆಯಿಸಿಕೊಳ್ಳುತ್ತ ಬೀಗುವ ವೈದಿಕ ಸಂಸ್ಕೃತಿಯ ಸರಿಸಾಟಿಯಾಗಿ ನಿಲ್ಲುವ, ಕೆಲವು ಸಲ ಅದನ್ನು ಮೆಟ್ಟಿಯೂ ನಿಲ್ಲುವ ಅನೇಕ, ಒಳ್ಳೆಯ ರೀತಿ ರಿವಾಜುಗಳ, ರೂಢಿ ಸಂಪ್ರದಾಯಗಳ ಗಟ್ಟಿ ಸಂಸ್ಕೃತಿ ಈ ಕೆಳಸ್ತರದ ಮಂದಿಯ ಸಹಸಂಸ್ಕೃತಿಗಳಲ್ಲಿದೆ. ಈ ಅಂಶಗಳನ್ನು ನನ್ನ ಬರಹದ ಮೂಲಕ ಎತ್ತಿ ತೋರಿಸುವುದೂ ಕೂಡ ನನ್ನ ಬರಹದ ಉದ್ದೇಶ.

ಇಷ್ಟೆಲ್ಲ ಬರೆಯುವಾಗ ನನಗೆ ಅಡ್ಡಿ ಆತಂಕಗಳು, ಬೆದರಿಕೆಗಳು, ಸಮಸ್ಯೆಗಳು ಅಂತ ಬೇಕಾದಷ್ಟು ತೊಂದರೆಗಳು ಬಂದಿವೆ. ನಾನೇ ಆರಿಸಿಕೊಂಡ ದಾರಿ ಇದು. ಇಲ್ಲಿಯ ಕಲ್ಲು ಮುಳ್ಳು, ಕಂಟಕ ಮರಿಗಳೆಲ್ಲ ನನ್ನ ದಾರಿಗಡ್ಡ ಬಂದು ನನಗೆ ಘಾಸಿ ಮಾಡುತ್ತವೆ ಅಂತ ಅಂಜಿ, ಅಳುಕಿ ಹಿಂದೆ ಸರಿಯದೆ, ನೋವು ನುಂಗುತ್ತ ಹಂಗೇ ಮುಂದೆ ನಡೆದಿದ್ದೇನೆ. ಸಮುದ್ರದ ತಡಿಯಲ್ಲಿ ಮನೆ ಮಾಡಿ ಆಗಿದೆ. ನೊರೆ ತೆರೆಗಳಿಗೆ ಅಂಜಿದರೆ ಹೇಗೆ?

ನನ್ನ ಬರಹದಿಂದ ನನಗೆ ಬಂದಿಷ್ಟು ಹೆಸರು ಬಂದಿದೆ ಅಂತ ನಾನಂತೂ ತಿಳಿದು ಕೊಂಡಿದ್ದೇನೆ. ಜನಪ್ರಿಯತೆಯೂ ಸಿಗುತ್ತಿದೆ. ಜೊತೆಗೆ ಅಷ್ಟಿಷ್ಟು ಹಣವೂ ಸಿಗುತ್ತಿದೆ. ನಾನು ಸ್ವಲ್ಪ ಸ್ವಾರ್ಥಿ ಅಂತ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುತ್ತೇನೆ. ಮನುಷ್ಯ ಅಲ್ಲಲ್ಲಿ ಅಷ್ಟಿಷ್ಟು ಸ್ವಾರ್ಥಿಯಾಗದಿದ್ದರೆ ಬದುಕುವುದು ಕಷ್ಟ. ಸ್ವಾರ್ಥ ಇಲ್ಲದ ಮನುಷ್ಯರ‍್ಯಾರಿದ್ದಾರೆ? ಹೆಸರು, ಹಣ ಎರಡರ ಜೊತೆಗೆ ಬಣ್ಣದ ಮಂದಿಯ ಬೆಡಗಿನ ಟಿ.ವಿ., ಸಿನೆಮಾಗಳ ಬೆಳ್ಳಿ ಪರದೆಯ ಮೇಲೆ ನನ್ನ ಹೆಸರೂ ಮೂಡಿಬರುತ್ತಿದೆ ಎನ್ನುವಾಗ ನಾನು ಯಾಕೆ ಬರೆಯದೆ ಸುಮ್ಮನಿರಲಿ? ಬರೆಯಬೇಕೆನಿಸುತ್ತದೆ. ಬರೆಯುತ್ತೇನೆ ಅಷ್ಟೇ.