“ನಾನೇಕೆ ಬರೆಯುತ್ತೇನೆ?” ಎಂಬ ಪ್ರಶ್ನೆಯನ್ನು ಲೇಖಕನಾದವ ಆಗಾಗ್ಗೆ ಹಾಕಿಕೊಂಡು ಚಿಂತನೆ ನಡೆಸುವುದು ಲಾಭದಾಯಕ. ಈ ಪ್ರಶ್ನೆ ಅವನಿಗೆ ಅಷ್ಟು ಸುಲಭವಾಗಿ ಸ್ಪಷ್ಟವಾಗದಂಥ ಜಾಯಮಾನದ್ದು. ಇದರಿಂದ ಬರಹಗಾರನ ಇಷ್ಟಾನಿಷ್ಟಗಳ ವಿವೇಚನೆಯಾ ದೀತೆಂದು ಮೇಲ್ನೋಟಕ್ಕೆ ತೋರಿದರೂ ಅದಕ್ಕೂ ಮಿಗಿಲಾದ, ಸಂಕೀರ್ಣವಾದ ಸುಪ್ತಾಂತರ ಗಳಾದ ಸೃಜನ ಪ್ರಕ್ರಿಯೆಯನ್ನು ಒಳಗೊಳ್ಳುತ್ತದೆ. ಈ ನಿಗೂಢ ಪ್ರಕ್ರಿಯೆಯು ಕಿಂಚಿತ್ ತಿಳಿವನ್ನಾದರೂ ನಮ್ಮ ಬುದ್ದಿ ದಕ್ಕಿಸಿಕೊಂಡರೆ “ನಾನೇಕೆ ಬರೆಯುತ್ತೇನೆ?” ಎಂಬುದಕ್ಕೆ ಪರಿಹಾರದ ದಾರಿ ಕಂಡೀತು. ಈ ಪ್ರಶ್ನೆಯ ತಲೆಬರಹ ತುಂಬ ಸರಳ ಹಾಗೂ ಮಾಮೂಲಿ ನಂತೆ ತೋರಬಹುದಾದರೂ, ಮೊದಲಿಗೇ ಪ್ರತ್ಯಕ್ಷವಾಗುವ ‘ನಾನು’ ಎಂಬುದೇ ಈ ಜಟಿಲ ಸ್ವರೂಪದ ಪ್ರಶ್ನೆಗೆ ಒಂದು ತಾತ್ವಿಕ ಅರ್ಥ ನೀಡಿತು. ಮಿಕ್ಕೆಲ್ಲ ಲೌಕಿಕ ಚಟುವಟಿಕೆ ಕ್ರಿಯೆಗಳಂತೆ ಸಾಹಿತ್ಯ ಸೃಜನ ಕಾರ್ಯ ಸಹ, ಒಂದು ಮಾತಿನಲ್ಲಿ ಲಕ್ಷಣೀಕರಿಸಬಹುದಾದರೆ, “ನಾನು” ಎನ್ನುವುದನ್ನು ತಣಿಸುವುದು ಅಥವಾ ಅಹಂತೃಪ್ತಿ.

ಸಾಹಿತ್ಯ ರಚನೆಯಲ್ಲಿ ತೊಡಗುವಾಗಲೆಲ್ಲ ತಾನು ಬರೆಯುವ ಕಾರಣವನ್ನು ಮನದಟ್ಟು ಮಾಡಿಕೊಂಡೇ ಲೇಖಕ ಕಾರ್ಯಪ್ರವೃತ್ತನಾಗುವುದಿಲ್ಲ. ತನ್ನ ಜಾಗೃತ ಅರಿವಿಗೆ ಎಟುಕದ ಯಾವುದೋ ರಹಸ್ಯ ತನ್ನ ಲೇಖನ ಕ್ರಿಯೆಯನ್ನು ನಿಯಂತ್ರಿಸುತ್ತದೆ; ಲೇಖಕನ ಆಶಯ, ಪ್ರೇರಣೆಗಳನ್ನು ತನ್ನ ತಹಬಂದಿಯಲ್ಲಿಟ್ಟುಕೊಂಡು ಕಾರ್ಯಶೀಲವಾಗುತ್ತದೆ ಎನ್ನುವ ಗ್ರಹಿಕೆ ಹಲವು ಸಲ ಅವನಿಗಾಗುತ್ತದೆ. ಆದರೆ ಆ ರಹಸ್ಯದ ಒಳಹೊರಗಿನ ಬಗೆಗೆ ಅವನದು ಅರೆಕೊರೆಯ ತಿಳಿವು ಮಾತ್ರ. ಹೀಗಿದ್ದರೂ, ಬರಹಗಾರನ ಜಾಯಮಾನ, ಸ್ವಭಾವ, ಸಮಾಜ ದಲ್ಲಿನ ಸ್ಥಾನಮಾನ, ನಂಬಿಕೆ, ಆದರ್ಶ, ಅಭಿರುಚಿಗಳಿಗೆ ಅನುಗುಣವಾಗಿ ಅವನ ಬರವಣಿಗೆಗೆ ರೂಪ ದಕ್ಕುತ್ತದೆ. ಅಥವಾ ಅವುಗಳ ಕಿಂಚಿದಂಶವಾದರೂ ದೀರ್ಘಕಾಲದ ಒಟ್ಟಾರೆ ಬರಹದಲ್ಲಿ ನಿಕ್ಷಿಪ್ತಗೊಂಡಿರುತ್ತದೆ.

ನಾನು ಸಾಹಿತ್ಯ ರಚನೆಯತ್ತ ಮನಸ್ಸು ಮಾಡಿದ್ದು ಇತರ ಅನೇಕರಂತೆ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ; ಸುಮಾರು ನಲವತ್ತೆರಡು ವರ್ಷಗಳ ಹಿಂದೆ. ಆಗ ನನ್ನ ಬರವಣಿಗೆಗೆ ಯಾವುದೇ ಘನೋದ್ದೇಶವಿರಲಿಲ್ಲ. ಆಗಿನ ನನ್ನ ಗುರಿಗೂ ಈಗಿನದಕ್ಕೂ ಸಹಜವಾಗಿಯೇ ಮಹದಂತರವಿದೆ. ನಾನು ಕಾಲದಲ್ಲಿ ಬೆಳೆದಂತೆ, ಮುಂದುವರಿದಂತೆ ನನ್ನ ಗುರಿ ಗಂತವ್ಯಗಳೂ ವಿಕಸಿಸುತ್ತ ವಿಸ್ತರಿಸುತ್ತ ಹೋಗಿವೆ.

ನನ್ನ ಎಳೆಯ ವಯಸ್ಸಿನಲ್ಲಿ ಯಾವುದಾದರೂ ಪತ್ರಿಕೆಯಲ್ಲಿ ನನ್ನ ಚುಟುಕ, ಪದ್ಯದ ತಲೆಬರಹದ ಪದಾಲಾಪ ಇಲ್ಲವೆ ಪ್ರಶ್ನೆಗೆ ಸಂಪಾದಕರ ಉತ್ತರ ಪ್ರಕಟಗೊಂಡರೆ ಅಲ್ಲಿಗೆ ನನ್ನ ಬದುಕು ಸಾರ್ಥಕವಾದ ಕೃತಕೃತ್ಯತೆಯ ಭಾವನೆ ನನಗಾಗುತ್ತಿತ್ತು. ಬರೆಯಲೇಬೇಕೆಂಬ ಆಂತರಿಕ ತುರ್ತಿಗಿಂತ, ಮನಸ್ಸಿನಲ್ಲಿ ಜಮೆಯಾದ ಭಾರ ಒತ್ತಡಗಳನ್ನು ಹಗುರಿಸಿಕೊಳ್ಳ ಬೇಕಂಬ ಹಂಬಲಕ್ಕಿಂತ ನನ್ನ ಬರಹ ಹತ್ತು ಜನರ ಕಣ್ಣಿಗೆ ಬೀಳಬೇಕು, ಅವರಿಂದ ಬೆನ್ನು ತಟ್ಟಿಸಿಕೊಳ್ಳಬೇಕು ಎಂಬ ಅಭಿಲಾಷೆ ಮಾತ್ರ ನನ್ನ ಕಾವ್ಯಾರಂಭ ಕಾಲದ ಮುಖ್ಯ ಪ್ರೇರಣೆ ಯಾಗಿತ್ತು; ಜನ ಮನ್ನಣೆ ಗಳಿಸುವ ಬಯಕೆ ಮೂಲ ಚಾಲನ ಶಕ್ತಿಯಾಗಿತ್ತು. ಅಲ್ಲದೆ, ಹದಿಹರಯದ ಮಿಕ್ಕೆಲ್ಲ ಬರವಣಿಗೆಗಾರರಂತೆ ನಾನೂ ಸಹ ಬರೆಯುವುದು ಏತಕ್ಕೆ, ಯಾರಿಗಾಗಿ, ಆತ್ಮ ಸಂತೋಷಕ್ಕೊ ಇತರರ ಮೆಚ್ಚುಗೆ, ಪ್ರಯೋಜನಕ್ಕೊ ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿಕೊಂಡಿರಲಿಲ್ಲ. ಅಷ್ಟೆಲ್ಲ ಪ್ರಬುದ್ಧವಾಗಿ ಯೋಚಿಸುವುದಕ್ಕೆ ಆ ವಯೋ ಮಾನ ಹೇಳಿ ಮಾಡಿಸಿದ್ದಲ್ಲ.

ಆದರೆ ಈಗ ಆ ಜನಮನ್ನಣೆಯ, ಇತರರು ನನ್ನ ಬರವಣಿಗೆಯಿಂದ ಸುಖಪಟ್ಟಾಗ ವ್ಯಕ್ತಪಡಿಸುವ ತಾರೀಫಿನ ಆಸೆ ನನಗಿಲ್ಲವೆಂದು ಧೈರ್ಯವಾಗಿ ನುಡಿಯಲಾರೆ. ನಾನೇ ಏನು, ಯಾವ ನಿಸ್ಪೃಹ ಲೇಖಕನೂ ಹಾಗೆಂದು ಬರೆಯಲಾರ. ಮನುಷ್ಯ ಸಮಾಜಜೀವಿ ಎನ್ನಿಸಿ ಕೊಂಡಿರುವ ತನಕ, ತನ್ನ ಸುತ್ತ ಉಸಿರಾಡುವ ಸಹಮಾನವರಿಂದ ಮೆಚ್ಚುಗೆ, ಪ್ರಶಂಸೆಗಳನ್ನು ಪಡೆಯುವ ಅಭೀಪ್ಸೆಯನ್ನು ಹತ್ತಿಕ್ಕಲಾರ. ಅದು ಅಸ್ವಾಭಾವಿಕವೂ ಅಲ್ಲ. ಸಾಹಿತ್ಯಕಾರನ ಮಾತಿರಲಿ, ಯಾವುದೇ ಕಸುಬಿಗೆ ಸೇರಿದವನಾದರೂ, ಬದುಕಿನ ಯಾವುದೇ ಕ್ಷೇತ್ರದಲ್ಲಿ ದುಡಿಯುತ್ತಿರುವವನಾದರೂ ತಾನು ಆಸ್ಥೆಯಿಟ್ಟು ಮಾಡಿದ, ತನಗೆ ಚೆನ್ನೆಂದು ತೋರಿದ ಕೆಲಸವನ್ನು ಇತರರು ಕಾಣಬೇಕು; ಅಷ್ಟೇ ಅಲ್ಲ, ಕಂಡದ್ದನ್ನು ಮನಗಾಣಬೇಕು; ಮನಗಂಡಿ ದ್ದನ್ನು ಹೊಗಳಬೇಕು ಎಂಬ ಅಪೇಕ್ಷೆಯನ್ನು ತಾಳಿದ್ದರೆ ತಪ್ಪೇನಿಲ್ಲ. ಈ ನಿಟ್ಟಿನಲ್ಲಿ ನಾವೆಷ್ಟೇ ನಿರ್ಲಿಪ್ತರೆಂದು ಭಾವಿಸಿಕೊಂಡರೂ, ನಮ್ಮ ಮನಸ್ಸಿನ ಆಳದಲ್ಲಿ ನೆಲಸಿರುವ ಮಮಕಾರ ಸಂತೃಪ್ತಿಗಾಗಿ ಸಹಜೀವಿಗಳ ಮನಸ್ಸೊಪ್ಪಿಗೆ, ಸ್ತುತಿಗಳನ್ನು ಆಶಿಸಬೇಕಾಗುತ್ತದೆ. ಅಂಥ ಅನಿವಾರ್ಯವನ್ನು ಸಾಮಾಜಿಕ ಜೀವನ ಸೃಷ್ಟಿಸಿರುತ್ತದೆ. ಈ ಹಂಬಲಿಕೆ ಮಗುತನ, ಮುದಿತನವೆನ್ನದೆ ಮನುಷ್ಯ ಜೀವಿತದ ಸರ್ವಾವಸ್ಥೆಯಲ್ಲೂ ಒಂದಲ್ಲ ಒಂದು ರೂಪದಲ್ಲಿ, ಒಂದಲ್ಲ ಒಂದು ಕ್ರಿಯೆಯ ದ್ವಾರಾ ವ್ಯಕ್ತವಾಗುತ್ತಲೇ ಇರುತ್ತದೆ. ಅಲ್ಲದೆ ಪರಾದರಣೀಯತೆ ಅವನ ಮುಂದಿನ ಕಾರ್ಯಗಳಿಗೆ ಮತ್ತಷ್ಟು ಉಮೇದು, ಹುರುಪನ್ನು ಎರೆಯಬಲ್ಲದು.

ಆದರೆ ಲೋಕಾದರಣೆಯ, ಪರಪ್ರಶಂಸಾಭಿಪ್ರಾಯದ ತುಡಿತವೇ ಲೇಖನ ವ್ಯವಸಾಯದ ಸರ್ವ ಬಂಡವಾಳವಾಗಿ ಸದಾ ಕಾಲಕ್ಕೂ ಹೂಡಲು ಸಾಧ್ಯವಿಲ್ಲ. ಅದು ತಾರುಣ್ಯ ಮತ್ತು ತಾರುಣ್ಯ ಪೂರ್ವದ ಕಾಲಕ್ಕೆ ಸಹಜವಾದದ್ದು. ಜೀವನದಲ್ಲಿ ಮೇಲೇರಿದಂತೆ, ಅವನ ಅನುಭವ ವಿಸ್ತರಿಸಿದಂತೆ ಸಾವಕಾಶವಾಗಿ ಸತ್ಯ ದರ್ಶನವಾಗುತ್ತದೆ. ಜನಪ್ರಿಯತೆಯ ಇತಿಮಿತಿ, ಸಾಧಕ ಬಾಧಕಗಳನ್ನು ಚಿಂತಿಸುವಂತೆ ಒತ್ತಾಯಿಸುವ ಕೆಲ ಸಂದರ್ಭಗಳನ್ನು ಬದುಕು ಎದುರೊಡ್ಡುತ್ತದೆ. ಆಗೆಲ್ಲ ಲೋಕಾದರಣೆಯ ಬಗ್ಗೆ ನಾವು ಅತ್ಯುತ್ಸಾಹಿಗಳಾಗ ಬೇಕಾದ್ದಿಲ್ಲ ಎಂಬ ಅರಿವು ಅಂಕುರಿಸುತ್ತದೆ. ದರೆ ಅದನ್ನು ಧಿಕ್ಕರಿಸುವಷ್ಟು ಆತ್ಮಪ್ರತ್ಯ ನಮ್ಮದಲ್ಲ. ‘ಜನಸ್ತುತಿಯನ್ನು ಕಟ್ಟಿಕೊಂಡು ನನಗೆ ಆಗಬೇಕಾದದ್ದೇನು? ನನ್ನ ಯೋಗ್ಯತೆ, ಮೇಧಾಶಕ್ತಿಗಳನ್ನು ಅರಿಯುವ ಸಾಮರ್ಥ್ಯ ಅವರಿಗಿದೆಯೆ?’ ಎಂಬ ಕಠೋರ ವ್ರತವನ್ನು ತಾಳಿ, ಪ್ರಶಂಸಾ ವಿಮುಖಿಗಳಾಗಿ ನಮ್ಮ ಕಾಯಕದಲ್ಲಿ ಮುಂದುವರೆಯಬೇಕಾದರೆ ಅಸಾಮಾನ್ಯ ಛಾತಿವಂತಿಕೆ, ವಜ್ರಮನಸ್ಕತೆ ಬೇಕಾಗುತ್ತದೆ. ಇಂಥ ಅವಸ್ಥೆಯನ್ನು ತಲಪುವ ಮನೋದೃಢತೆ, ಸ್ಥಿತಪ್ರಜ್ಞತ್ವ ವಿರಳಾತಿ ವಿರಳರಿಗೆ ಮಾತ್ರ ಸಾಧ್ಯ. ಜನಗಳ ನಡುವೆ ಉಸಿರಾಡಿಯೂ ಅವರ ಅನ್ನಿಸಿಕೆ ಪ್ರತಿಕ್ರಿಯೆಗಳಿಗೆ ಒಳಪಡದ, ಜಗತ್ತನ್ನು ಕೇರ್ ಮಾಡದ ಅಂತಃಸ್ಥಿತಿ ಪ್ರಾಪ್ತವಾಗಬೇಕಾದರೆ ಅಂಥ ವ್ಯಕ್ತಿ ಯೋಗಿಯಾಗಿರಬೇಕು ಇಲ್ಲವೆ ಭಗ್ನಮನೋರಥಿಯಾದ ವಿಕ್ಷಿಪ್ತನಿರಬೇಕು. ಮೊದಲನೆಯವ ನಮ್ಮ ಲಕ್ಷಣ ವಿವರಣೆಗಳಿಗೆ ಮೀರಿದಾತ. ಅಳವಿಗೆ ದಕ್ಕದಾತ. ಎರಡನೆಯವ ಮನೋವಿಜ್ಞಾನಿಯ ‘ಕೇಸ್’.

ನನ್ನ ಪದ್ಯಾರಂಭದ ಉಷಃಕಾಲದಲ್ಲಿ ಜನರ, ಅದರಲ್ಲೂ ಪರಿಚಯಸ್ಥರ ಬೆನ್ ಚಪ್ಪರಿಕೆ ನನ್ನ ಕರ್ತೃತ್ವ ಕ್ರಿಯೆಗೆ ಹೊಯ್ನೀರಾಗಿತ್ತಷ್ಟೇ? ಬರವಣಿಗೆಯ ಚಟುವಟಿಕೆಯಲ್ಲಿ ತೊಡಗಿ ಕೊಂಡಾಗ ನನಗೆ ಮೈಮರೆತ, ಮುದಗಳು ದಕ್ಕುತ್ತಿರಲಿಲ್ಲವೆಂದಲ್ಲ. ಇವೊತ್ತು ನಾನು ಯಾವುದಾದರೂ ಪದ್ಯವನ್ನೊ, ವೈಚಾರಿಕ ಅಥವಾ ವಿಮರ್ಶಾ ಲೇಖನವನನೋ ಬರೆಯುತ್ತಿ ರುವಾಗ ನನಗಾಗುವ ಒತ್ತಡ ಟೆನ್ಷನ್ ಜೊತೆಯಲ್ಲೇ ತಲ್ಲೀನತೆ, ಚಿತ್ತೈಕಾಗ್ರತೆಗಳು; ಬರೆದಾದ ಮೇಲೆ ದಕ್ಕುವ ಮನೋಲಾಘವ, ಭಾವ ದೀಪಕತೆ ಹೆಚ್ಚಿನ ಪ್ರಮಾಣದವು, ಆರಂಭದ ದಿನಗಳಲ್ಲಿ ಇಷ್ಟು ಧಾರಾಳವಾಗಿ ನನಗೆ ಈ ಭಾವಗಳು ಲಭ್ಯವಾಗುತ್ತಿರಲಿಲ್ಲ. ಅದಕ್ಕೆ ಕಾರಣ, ನನಗೆ ಬರಹದ ಅಂತಿಮ ಲಕ್ಷ್ಯದ, ಜನಮನ್ನಣೆಯ ಪರಿಣಾಮದ ಕಡೆಗೆ ಅಪಾರ ಒಲವಿದ್ದದ್ದು. ಹೀಗಾಗಿ, ಸೃಜನ ಪ್ರಕ್ರಿಯೆಯ ಸಮಯದ ಸಂಕಟ, ಬಿಗಿ, ತಹತಹ, ದೀಪ್ತತೆ ಗಳೆಲ್ಲ ಎರವಾಗಿದ್ದವು. ಇಂಥ ಮನೋವಸ್ಥೆಯಿಂದ ನನ್ನ ಚೇತನ ಪುಷ್ಟಗೊಳ್ಳುತ್ತದೆ, ರಹಸ್ಯಂದಿಯಾಗುತ್ತದೆ ಎಂಬ ಕ್ವಿಚಿತ್ ಅರವೂ ಆಗ ನನಗಿರಲಿಲ್ಲ. ಅಲ್ಲದೆ ‘ಹೇಳಿದರೆ ಹಾಳಾಗುವುದೊ ಅನುಭವದ ಸವಿಯು, ಹೇಳದಿದ್ದರೆ ತಾಳಲಾರನೊ ಕವಿಯು’ ಎಂಬ ಉತ್ಕಟ ದ್ವಂದ್ವಭಾವದ ಒಳತುಡಿತವೂ ಇರಲಿಲ್ಲ. ಯಾವುದೇ ಲೌಕಿಕ, ವ್ಯಾವಹಾರಿಕ ಚಟುವಟಿಕೆಗಿಂತ ಮಿಗಿಲಾದ ತೃಪ್ತಿ, ಆಹ್ಲಾದ, ಕೃತಾರ್ಥಭಾವ ನನಗೆ ಸಾಹಿತ್ಯ ಸೃಷ್ಟಿಯಿಂದ ಆಗಿರುವುದಕ್ಕೆ ಅದು ನನಗೆ ಒದಗಿಸಿರುವ ಅಪೂರ್ವ ಭಾವಾವಸ್ಥೆ ಕಾರಣ. ಇವೊತ್ತು ಕೆಲ ಸಹೃದಯರು ನನ್ನ ಕೃತಿಯನ್ನು ಓದುತ್ತಾರೆಂದು ಭಾವಿಸಿಕೊಂಡಾಗ, ಹಾಗೆ ಓದಿದವರಲ್ಲಿ ಒಂದಿಬ್ಬರು ತಮ್ಮ ಸಂತಸವನ್ನೂ ತೋಡಿಕೊಂಡಾಗ ನನ್ನ ಮನಸ್ಸು ಮಲರುತ್ತದೆ. ಇದು ಮುಖ್ಯವೇ ಆದರೂ, ಸೃಜನಶೀಲ ಕ್ರಿಯೆಯ ವೇಳೆಯ ಶುದ್ಧ ಉಲ್ಲಾಸ, ನಿರಾಳಗಳೆದರು ಗೌಣಪ್ರಾಯವೆನ್ನಿಸುತ್ತದೆ. ಅಲ್ಲದೆ ಕಾಲ ಕಲಿಸಿದ ಮತ್ತೊಂದು ಪಾಠವೂ ಈ ಅಭಿಪ್ರಾಯವನ್ನು ಸಮರ್ಥಿಸುತ್ತದೆ. ಹೆರರ ಕೀರ್ತಿ ಪ್ರಶಂಸೆಗಳು ಸದಾ ಕಾಲಕ್ಕೂ ಸಮಾನ ತೀವ್ರತೆಯವಲ್ಲ; ಜೊತೆಗೆ ಅವು ಪರಿವರ್ತನಶೀಲ ಕೂಡ. ಅನ್ಯಾಭಿಪ್ರಾಯ ಅಲ್ಪಾಯು ವುಳ್ಳದ್ದು; ಅಲ್ಪಕಾಲ ಸ್ಮೃತವಾದದ್ದು. Public memory is short ಎನ್ನುವ ನಾಣ್ಣುಡಿಯೇ ಇಲ್ಲವೆ ?

ವೃಕ್ಷ ತನ್ನ ಬುಡದಿಂದ ಕಾಂಡಭಾಗದ ಕಡೆ ಕೊಂಚದೂರ ನೇರವಾಗಿ ಬೆಳೆದು ಆಮೇಲೆ ನಾಲ್ದೆಸೆಗಳಲ್ಲಿ ಕವಲಿಸಿ ಹಬ್ಬುವಂತೆ ಬರಹಗಾರನ ಜೀವಿತದ ಮುಂಚಿನ ದಿನಗಳ ಸರಳ, ಮುಗ್ಧ ಆಶಯ, ಮುನ್‌ಸಾಗಿದಂತೆ ವಿವಿಧೋದ್ದೇಶಗಳ ಜಟಿಲ ಹಾಸುಹೊಕ್ಕಾಗಿ ಮಾರ್ಪಡು ವುದು ಅಪರೂಪವಲ್ಲ. ಮನುಷ್ಯ ಮುನ್ನಡೆದಂತೆ ಹಲವಾರು ಸನ್ನಿವೇಶ ಘಟನೆಗಳ ತೊರೆಗಳು ಕೂಡಿಕೊಂಡು ಜೀವನವಾಹಿನಿ ಸಂಕೀರ್ಣಗೊಳ್ಳುತ್ತದೆ. ಇದರ ದೆಸೆಯಿಂದ ಲೇಖಕನ ಧ್ಯೇಯಾಶಯಗಳೂ ಹಲವು ಮಗ್ಗಲನ್ನು ಪಡೆಯುತ್ತವೆ. ಹೀಗಾಗಿ ಯಾವುದೇ ಒಂದು ಅಂಶವನ್ನು ಅವನು ತನ್ನ ಬರವಣಿಗೆಗೆ ಮೂಲನಿಮಿತ್ತವೆಂದೂ, ಇಂಧನವೆಂದೂ ಘೋಷಿಸುವುದರ ಮೂಲಕ ತಾನೇಕೆ ಬರೆಯುತ್ತಿದ್ದೇ ಎಂಬ ಪ್ರಶ್ನೆಯನ್ನು ಪರಿಹರಿಸಲಾರ.

ನನ್ನ ಮಟ್ಟಿಗೆ ಹೇಳುವುದಾದರೆ ನನ್ನ ಸ್ವಂತಜೀವನದ ಏರುಪೇರುಗಳು, ಕಾಲಾನುಸಾರಿ ಯಾದ ಸಾಮಾಜಿಕ ಸ್ಥಿತ್ಯಂತರ, ರಾಜಕೀಯ ಮತ್ತು ಮತೀಯ ವಿದ್ಯಮಾನಗಳು, ಸಾಹಿತ್ಯ ಕ್ಷೇತ್ರದ ಹಾದಿ ಹೊರಳುಗಳು, ನನ್ನ ಒಲವು ಓಲುವೆಗಳ ಬದಲಾವಣೆ ಮತ್ತಿತರ ಸಂಗತಿಗಳು ನನ್ನ ಬರವಣಿಗೆಯ ಮೂಲೋದ್ದೇಶವನ್ನು, ಸ್ವರೂಪವನ್ನು ಮಾರ್ಪಡಿಸುತ್ತ ಬಂದಿವೆ; ನನ್ನ ಕೆಲವು ಗತ ನಿಲುವುಗಳನ್ನು ಹಂದಾಡಿಸಿಬಿಟ್ಟಿವೆ. ನಾನು ಬರೆಯುತ್ತಿರುವಾದರೂ ಯಾಕೆ? ಯಾರಿಗೋಸ್ಕರ? ಸ್ವಂತ ಸುಖದುಃಖಗಳ ತೋಡಿಕೆಗೆ ನನ್ನ ಗದ್ಯ ಮತ್ತು ಪದ್ಯ ರಚನೆಗಳು ಒದಗೆಗಳಾಗಬೇಕೆ? ಅವುಗಳನ್ನು ಉತ್ತರಿಸಿ ಸಾರ್ವಜನಿಕ, ಸಾರ್ವತ್ರಿಕ ಸಂಗತಿಗಳ ರಸ ನಿರೂಪಣೆಗೆ ಪ್ರಣಾಲಿಗಳಾಗಬೇಕೆ? ಇವನ್ನೆಸಗುವಾಗ ಮಾತಿನ, ಅಲಂಕಾರಾದಿ ತಂತ್ರಗಳ ಜವಾಬ್ದಾರಿ ಯಾವ ತೀರಿನದು? ವಸ್ತು ದೃಷ್ಟಿ ಧೋರಣೆಗಳ ಪಾತ್ರವೆಷ್ಟರದು? ಮುಂತಾದ ಅನೇಕ ವಿಷಯಗಳು ನನ್ನ ಚಿಂತನೆಯನ್ನು ಕ್ಲಿಷ್ಟಗೊಳಿಸಿವೆ. ಯಾವೊಂದು ಸುರಳೀತ ನಿರ್ಧಾರ ವನ್ನೂ ನಾನು ತಳೆಯದಂತೆ ನನ್ನನ್ನು ನಿರ್ಬಂಧಿಸಿವೆ. ಮಬ್ಬು ಬೆಳಕಿನ ತಡಕಾಟ ಇದು. ಗೋಜಲನ್ನು ಬಿಡಿಸಲು ಪ್ರಯತ್ನಿಸಿದಂತೆ ಗೊಂದಲಗೆಡಿಸುವಂಥದು. ಇಂಥ ಜಟಿಲ ಆಲೋಚನಾಲಹರಿ ಶುರುವಿನಲ್ಲಿ ತಬ್ಬಿಬ್ಬಾಗಿಸಿದರೂ ಮುಂದೆ ಯಾವುದಾದರೂ ಒಂದು ಹಂತದಲ್ಲಿ ಸತ್ಯ ಸಾಕ್ಷಾತ್ಕಾರ ಮಾಡಿಸೀತು ಎಂಬ ಆಶಾಭಾವನೆ ಲೇಖಕನಿಗಿರಬೇಕಾಗುತ್ತದೆ. ನನ್ನ ಸಾಹಿತ್ಯ ಸಂದರ್ಭದಲ್ಲಿ ಬರೆಯುತ್ತಿರುವ ಅನೇಕರ ಅನುಭವವೂ ಇದೇ ತೆರನಾಗಿರ ಬೇಕೆಂದು ನನ್ನ ನಂಬಿಕೆ.

ನನ್ನ ವಿದ್ಯಾಭ್ಯಾಸದ ದೆಸೆಯಲ್ಲಿ ಪ್ರಗತಿಶೀಲ ಸಾಹಿತ್ಯ ಉರಬು ಉಬ್ಬರಗಳು ಇಳಿಮುಖ ವಾಗುತ್ತಾ ಬಂದಿದ್ದವು. ಆ ಸಾಹಿತ್ಯ ಸಂಪರ್ಕದ ದೆಸೆಯಿಂದ, ಸಮಾಜ ಸುಧಾರಣೆ, ಬದುಕಿನ ಸ್ಥಿತಿಗತಿಗಳ ಸಮೂಲ ಮಾರ್ಪಾಟು ಸಾಹಿತಿಯಂದ ಆಗಬಲ್ಲುದೆಂಬ ಭಾವನೆ ನನ್ನಲ್ಲಿ ಬೇರೂರಿತ್ತು. ಇದು ನನ್ನ ಓದಿನ, ಪತ್ರಿಕೆ ಹಾಗೂ ಭಾಷಣಗಳಲ್ಲಿ ಹಿರಿಯ ಸಾಹಿತಿಗಳು ಪ್ರಸ್ತಾಪಿಸುತ್ತಿದ್ದ ಅಭಿಪ್ರಾಯಗಳ ಅವಿಚಾರಿತ ಅಂಗೀಕಾರಾದ ಫಲ; ತದ್ವತ್ ಗ್ರಹಿಕೆಯ ಪರಿಣಾಮ. ರಷ್ಯಾದ ಮಹಾಕ್ರಾಂತಿಯಂತೆ ನಮ್ಮ ನಾಡಿನಲ್ಲೂ ಸಾಮಾಜಿಕ, ಆರ್ಥಿಕ ರೂಪದ ಒಂದು ಬೃಹತ್ಪರಿವರ್ತನೆ, ಉತ್ಪಾತ ಘಟಿಸಬಹುದೆಂದು ನಿರೀಕ್ಷಿಸಿದ್ದ ನಮ್ಮ ಕೆಲ ವಯಸ್ಸಾದ ಲೇಖಕರ ಮಾತುಗಳನ್ನು ಆಲಿಸಿ, ನನ್ನ ಮುಗ್ಧ ಮನಸ್ಸು ಭಾವಾವೇಶಿ ಯಾದದ್ದುಂಟು. ಆದರೆ, ಕಾಲ ಉರುಳಿದಂತೆ, ಈ ಆದರ್ಶದ ರಂಗಿನ ಬಲೂನು ಒಡೆದು ಕರ್ಕಶ ವಾಸ್ತವತೆ ಗಹಗಹಿಸತೊಡಗಿದಾಗ, ಭ್ರಮನಿರಸನದ ಮೋಡ ದಟ್ಟೈಸಿದಾಗ, ಸಾಹಿತ್ಯದ ಸಾಮರ್ಥ್ಯ, ಅಳವಿನ ಬಗ್ಗೆ ನನ್ನ ಮನಸ್ಸು ಡೋಲಾಯಮಾನವಾಗತೊಡಗಿತು. ಹಾಗೆ ಒಂದು ವೇಳೆ, ವಾಙ್ಮಯ ಲೋಕಬಾಳ್ವೆಯ ಸರ್ವಾಂಗೀಣ ಸುಧಾರಣೆಗೆ ಶ್ರಮಿಸಿ, ಕೃತಕೃತ್ಯವಾದರೆ ವಿಜ್ಞಾನ ತಂತ್ರಜ್ಞಾನ, ಆರ್ಥಿಕ ಸಾಮಾಜಿಕ ಚಿಂತನೆಗಳಿಗೆ ನಮ್ಮ ಜೀವನ ದಲ್ಲಿ ತಾವಾದರೂ ಎಲ್ಲಿ? ಸಾಹಿತ್ಯ ನಾನು ಭಾವಿಸಿದ್ದ ಹಾಗೆ ಸರ್ವರೋಗಾಪಹಾರಿಯಲ್ಲ; ಸಿದ್ಧೌಷಧಿಯಲ್ಲ. ಅದಕ್ಕೂ ಮೇರೆಮಿತಿಗಳಿವೆ. ಮನುಷ್ಯನ ಅಸ್ತಿತ್ವದಲ್ಲಿ ರಸವಾಙ್ಮಯಕ್ಕೆ ಒಂದು ಪಾತ್ರವಿರುವಂತೆ ಜ್ಞಾನಾಕರಗಳಿಗೂ ಒಂದು ಗಣನೀಯ ಕಾಯಕವಿದೆ. ಅಂತರಂಗ ಬಹಿರಂಗಗಳೆರಡರ ಸಮಾನೋತ್ಕರ್ಷ ಮತ್ತು ಮೇಲ್ಮೆಗಳಿಂದ ಮಾತ್ರ ಜೀವನ ಪರಿಪೂರ್ಣತೆ ಸಾಧ್ಯ ಎನ್ನುವ ಈ ಸಾರ್ವತ್ರಿಕ ತಥ್ಯವನ್ನು ವಿಜ್ಞಾನದ ವಿದ್ಯಾರ್ಥಿಯಾಗಿ, ಅನಂತರ ಅಧ್ಯಾಪಕ ನಾಗಿ ಮುಂದುವರಿದ ನಾನು ಸ್ವಾನುಭವಕ್ಕೆ ತಂದುಕೊಂಡೆ. ಬದುಕಿನ, ಸಾಹಿತ್ಯ ಕಲೆಗಳ ಸಂಬಂಧವಾಗಿ ಹಲವು ಒಳನೋಟಗಳು ನನಗೆ ಪ್ರಾಪ್ತವಾದವು. ‘ನಾನೇಕೆ ಬರೆಯುತ್ತೇನೆ?’ ಎಂದು ಪ್ರಶ್ನಿಸಿಕೊಂಡಾಗ ಈ ವಿಕಾಸರೂಪದ ಪರಿಕ್ರಮ ತಕ್ಕಷ್ಟು ಬೆಳಕು ಚೆಲ್ಲುವುದೆಂದು ಭಾವಿಸುತ್ತೇನೆ.

ಮೇಲಿನ ವಿಚಾರಗಳಿಂದ ಒಂದು ಸಂಗತಿ ರುಜುವಾತಾಗುತ್ತದೆ. ಸಾಹಿತ್ಯ ರಚನೆಯ ಮೂಲಕ ಸಮಾಜದ ಸಾಮಾನ್ಯ ಜನತೆಯ ಮಾತಿರಲಿ, ಧೀಮಂತ ವರ್ಗವನ್ನೂ ಸಹ ಕ್ರಾಂತಿವೀರರನ್ನಾಗಿ ಪರಿವರ್ತಿಸುವ ಆದರ್ಶ ಭೋಳೆ ಮನಸ್ಸಿಗೆ ಮಾತ್ರ ಹೊಳೆದೀತು. ಸಾವಕಾಶವಾದ, ಪರೋಕ್ಷ ಸಮುದಾಯ ಪರಿವರ್ತನೆಗೆ ಸಾಹಿತ್ಯ ಅಪರೂಪಕ್ಕೆ ಸಹಕಾರಿ ಯಾಗಿರಬಹುದು. ಆದರೆ ನೇರವಾಗಿ ದಿqsರನೆ ಅದು ಬಂಡಾಯ ಸ್ವರೂಪಿಯಾಗಿ ರಾಷ್ಟ್ರದ ಪ್ರಚಲಿತ ಪೂರ್ವಾಚಾರಗಳನ್ನೊ, ದುಸ್ಸಹ ವ್ಯವಸ್ಥೆಯನ್ನೋ ಉಧ್ವಸ್ತಗೊಳಿಸಿರು ವುದಕ್ಕೆ ಇತಿಹಾಸದಲ್ಲಿ ಉದಾಹರಣೆಗಳಿಲ್ಲ. ಕೂಲಂಕಷ ಮತ್ತು ಸರ್ವತೋಮುಖಿಯಾದ ಮಾರ್ಪಾಡುಗಳನ್ನು ಚಾಲ್ತಿಗೆ ತರುವಲ್ಲಿ ವಿಜ್ಞಾನ ತಂತ್ರಜ್ಞಾನಾದಿಗಳು, ಆರ್ಥಿಕ, ಸಾಮಾಜಿಕ ಮತ್ತು ಧರ್ಮ ಸಂಬಂಧಿ ವಿದ್ಯಮಾನಗಳು ಶಕ್ತಿಯುತವಾಗಿ, ಪ್ರತ್ಯಕ್ಷವಾಗಿ ಶ್ರಮಿಸಿ ಕೃತಾರ್ಥ ವಾಗುವಂತೆ ಸಾಹಿತ್ಯ ಎಸಗಲಾರದು. ಮನುಷ್ಯನ ಬಾಹ್ಯ ಸಮೃದ್ದಿಗೆ, ಐಹಿಕ ಪುರೋಭಿ ವೃದ್ದಿಗೆ ಮತ್ತು ಪ್ರಜಾ ಸಮಷ್ಟಿಯ ಪ್ರಗತಿಪರ ಮೇಲೇರುವೆಗೆ ವಿಜ್ಞಾನಾದಿ ಶಾಸ್ತ್ರಾತ್ಮಕ ಚಿಂತನೆಗಳು ಸಹಾಯಕವಾಗುವ ರೀತಿಯಲ್ಲಿ ಸಾಹಿತ್ಯಕ್ಕೆ ಸಾಧ್ಯವಾಗದು. ಅದರ ಪರಿಣಾಮ ಮೂಲತಃ ಮನುಷ್ಯನ ವ್ಯಷ್ಟಿ ಜೀವನದ, ಸ್ವಕೀಯ ವಲಯದ ಅಂತರ್ಭೂಮಿಕೆಗೆ ಸಂಬಂಧಿ ಸಿದ್ದು; ಸೀಮಿತವಾದದ್ದು.

ಮನುಷ್ಯನ ಒಳಗನ್ನು ಮಾಗಿಸುವತ್ತ, ಅಂತಃಸಂಪನ್ನತೆಯನ್ನು ವರ್ಧಿಸುವತ್ತ; ದುಶ್ಯೀಲ ಸಚ್ಚಾರಿತ್ರ್ಯಗಳ, ವಿಸ್ಮೃತಿ ಜಾಗೃತಿಗಳ, ಧರ್ಮಾಧರ್ಮಗಳ ಸಾರಾಸಾರ ವಿವೇಕವನ್ನು ಸಾಂದ್ರ ವಾಗಿಸುವತ್ತ ಸಾಹಿತ್ಯ ಕಾರ್ಯಪ್ರವೃತ್ತಗೊಳ್ಳುತ್ತದೆ. ಹೀಗಾಗಿ ಅದು ಅಂತರಂಗ ಪರಿಪೋಷಕ; ಚೇತನೋತ್ತಾರಕ. ಶಾಸ್ತ್ರ ವಿಜ್ಞಾನಗಳು ಸ್ವಭಾವತಃ ಬುದ್ದಿ ಪ್ರಧಾನವಷ್ಟೇ? ಸಾಹಿತ್ಯ ತನ್ನ ಅಂತಃಸತ್ವದಲ್ಲಿ ಭಾವ ಪ್ರಮುಖ. ಇದೊಂದು ವರವೂ ಹೌದು, ಶಾಪವೂ ಹೌದು. ಭಾವಾತ್ಮಕ ಸಂವಹನದ ಮುಖೇನ ವ್ಯಕ್ತಿ ಹೃದಯವನ್ನು ಸಲೀಸಾಗಿ ಓಲೈಸಬಹುದು, ಕರುಣಾರ್ದ್ರಗೊಳಿಸಬಹುದು; ಮಾನವೀಯವಾಗಿ ರಾಷ್ಟ್ರ ಸೌಹಾರ್ದದತ್ತ ಹಾಯಿಸ ಬಹುದು. ತದ್ವಿರುದ್ಧವಾಗಿ ಭಾವಾತಿರೇಕದ ಅಭಿವ್ಯಕ್ತಿಯ ದ್ವಾರಾ ದೇಶಭಾಷೆ ಸಂಸ್ಕೃತಿ ಜಾತಿ ಮತ ದೇವರು ಇತ್ಯಾದಿ ವಿನಾಶಕೋರ ಅಮಲನ್ನು ಸಾಮೂಹಿಕವಾಗಿ ಬರಿಸಿ ಮನಸ್ಸನ್ನು ಹಗೆಯ ಹುತ್ತವಾಗಿಸಬಹುದು; ಸೆಡೆಸಿ ಹೆಪ್ಪುಗಟ್ಟಿಸಬಹುದು; ರಾಕ್ಷಸೀಯವಾಗಿ ಗೊಂದಣಗುಣಿಸಿ ನಾಡಿನ ಸಮಗ್ರತೆ ಏಕತೆಗಳನ್ನೂ ಧೂಳೀಪಟವೆಬ್ಬಿಸಬಹುದು. ಈ ಎಚ್ಚರ ನನ್ನ ಲೇಖನ ಕರ್ಮದ ನೇಪಥ್ಯದಲ್ಲಿ ಕೆಲಸಕ್ಕೆ ತೊಡಗಿದೆ.

ವಿಭಿನ್ನ ಸಂಸ್ಕೃತಿ ಧರ್ಮಗಳ ಪರಿಮಂಡಲದಲ್ಲಿ ಉಸಿರಾಡಿ, ಏಗಾಡಿ ಸಾಹಿತ್ಯ ರಚಿಸ ಬೇಕಾಗಿರುವ ನನ್ನಂಥವನ ಇಕ್ಕಟ್ಟು; ಅಡಿಗಡಿಗೆ ಅಲ್ಪಸಂಖ್ಯಾತತೆಯ ಅಸಹಾಯ ಅರಿವನ್ನೂ ಹೊತ್ತು ಹುಷಾರಿಯಿಂದ ಹೆಜ್ಜೆಯಿಡಬೇಕಾದ ಅನಿವಾರ್ಯ; ಪರಿಸರದ ಅಪನಂಬಿಕೆ ಗುಮಾನಿಗಳ ಸುಳಿಗಳಲ್ಲಿ ಮುಳುಗೇಳುತ್ತ ಕೈ ಬಡಿಯುತ್ತ ಸ್ವಶ್ರದ್ಧೆಯ ಸುದೂರ ತೀರವನ್ನೂ ಸೇರಬೇಕಾದ ಅಗಾಧತರ ಮನಸ್ಸಂಕಲ್ಪ ನನ್ನ ವ್ಯಕ್ತಿತ್ವವನ್ನು ಬಳಲಿಸಿ ಬೆಂಡಾಗಿಸಿವೆ ನಿಜ. ಜೊತೆಗೇ ಸಮತ್ವ, ಸಂಯಮ, ಸಾವಧಾನತೆಗಳ ವಿದ್ಯಾಭ್ಯಾಸವನ್ನು ನನ್ನ ಚೇತನಕ್ಕೆ ಮಾಡಿಸಿವೆ. “ನಾನೇಕೆ ಬರೆಯುತ್ತೇನೆ?” ಎಂಬುದರ ಮೂಲ ಚೂಲಗಳನ್ನು ವಿಶ್ಲೇಷಿಸುವಾಗ ಈ ಪರಿಸರ ಭಿನ್ನತೆಯ ಪ್ರಭಾವವನ್ನು ನಾನು ಮರೆಯಲಾರೆ. ನನ್ನ ಜೊತೆಗಾರ ಸಾಹಿತ್ಯ ಕರ್ತೃಗಳಿಗಿರದ, ನನಗಷ್ಟೇ ಸೀಮಿತವಾದ ಈ ಅಂಶ, ನಾನು ರಚಿಸಿದ ಸಾಹಿತ್ಯದ ಮೌಲ್ಯಾಂಕನ ಮಾಡುವಾಗ ಮಹತ್ವ ಪಡೆಯಬಲ್ಲದು.

ವಿಷಯ ವಸ್ತು ಯಾವುದೇ ಇರಲಿ, ಅದಕ್ಕೊಂದು ಮೌಲ್ಯ ನಿಷ್ಕರ್ಷೆಯ ಕಲ್ಪನೆ ಸಾಹಿತಿಗೆ ಯಾವಜ್ಜೀವವೂ ಇರಬೇಕೆಂದು ನಾನು ದೃಢವಾಗಿ ನಂಬಿದವ. ಸಾಹಿತ್ಯ ಬಳಸಿಕೊಳ್ಳುವ ವಿಷಯ ತಂತಾನೆ ಉದಾತ್ತವಾಗಲಿ, ಕನಿಷ್ಠವಾಗಲಿ ಆಗಿರುವುದಿಲ್ಲ. ಅದೊಂದು ಜೇಡಿ ಮಣ್ಣು. ಅದರ ಬಗೆಗಿನ ಲೇಖನ ನಿಲವು, ದೃಷ್ಟಿಕೋನ ಮುಖ್ಯವಾಗುತ್ತದೆ. ಅದನ್ನು ಸುರೂಪವಾಗಿಯೊ ಕುರೂಪವಾಗಿಯೊ ಮಾಡುವುದು ಅವನ ಮನೋದೃಷ್ಟಿ. ಅವನ ದೃಷ್ಟಿ ನಿರಭ್ರವೂ ಪಾರದರ್ಶಿಯೂ ಆಗಿದ್ದರೆ, ಅವನ ನಿಲುಮೆ ಉನ್ನತವೂ ನೀತಿಯುತವೂ ಆಗಿದ್ದರೆ ಸಾಮಾನ್ಯ ವಿಷಯಕ್ಕೂ ಅನೂಹ್ಯ ಆಯಾಮ, ಹೆಚ್ಚಳ ಒದಗುತ್ತವೆ. ಕಾಮದ ವಿಷಯ ತೆಗೆದುಕೊಳ್ಳಿ. ಅದರಷ್ಟು ದುರುಪಯೋಗಕ್ಕೆ ಬಳಕೆಯಾಗಿರುವ ವಸ್ತು ಮತ್ತೊಂ ದಿಲ್ಲ. ಅತ್ಯಂತ ಬಾಲಿಶವಾಗಿ, ಮನೋರಂಜನಾರ್ಥವಾಗಿ, ನಿರುದ್ದಿಶ್ಯವಾಗಿ ಪ್ರಯೋಗ ವಾಗಿರುವ ಸಾಹಿತ್ಯ ವಸ್ತುವೆಂದರೆ ಕಾಮ. ಘನೋದ್ದೇಶವುಳ್ಳ ಕವಿಯ ಕೈಯಲ್ಲಿ ಅದಕ್ಕೊಂದು ಅತಿಶಯಾರ್ಥ ದೊರಕೊಳ್ಳುತ್ತದೆ. ಉದಾಹರಣೆಗೆ ಜನ್ನನ ‘ಯಶೋಧರ ಚರಿತೆ’. ಅದರಲ್ಲಿ ಕವಿ, ಅಮೃತಮತಿ ಅಷ್ಟಾವಂಕರ ನಡುವಣ ಅನೈತಿಕ ಬಾಂಧವ್ಯ, ಕಾಮದ ವಿಕೃತತೆ ವೈಪರೀತ್ಯಗಳನ್ನು ಮನಮಿಡಿಯುವಂತೆ ಬಣ್ಣಿಸುತ್ತಾನೆ. ಅವರ ಕಾಮವಿಲಾಸಗಳನ್ನು ಸವಿವರವಾಗಿ ಚಿತ್ರಿಸಿ ನಮ್ಮನ್ನು ಉದ್ರೇಕಿಸುವ ಹುಲು ಆಶಯವನ್ನು ಉಳಿದು, ಅದು ನಮ್ಮಲ್ಲಿ ಬೀಭತ್ಸ ಕರುಣೆಗಳನ್ನು ಮೂಡಿಸುವಂತೆ ರೇಖಿಸುತ್ತಾನೆ. ಕವಿ ಎಚ್ಚರ ತಪ್ಪಿದ್ದರೆ, ಅವನ ದೃಷ್ಟಿ ದೋಷಪೂರ್ಣವಾಗಿದ್ದರೆ ನಮ್ಮ ಅನೇಕ ಆಧುನಿಕ ಲೈಂಗಿಕ ಕತೆಗಳ ಕೀಳು ಅಭಿರುಚಿಯ ಅಧೋಗತಿಗಿಳಿಯುತ್ತಿತ್ತು. ಆ ಪ್ರಾಚೀನ ಕಾವ್ಯದ ಕಾಮವರ್ಣನೆಗೆ ಒಂದು ಉತ್ತರದ ಉದ್ದೇಶವಿದೆ, ಜನ್ಮಾಂತರ ಪ್ರಾಪ್ತಿಯ ತೊಳಲಿಕೆಗಳ ಧ್ವನ್ಯರ್ಥದ ವ್ಯಾಪಕತೆ ಯಿದೆ.

ಮನುಷ್ಯನ ಜೀವನ ಕೇವಲ ಅವನ ಶಾರೀರಿಕ ಕ್ರಿಯೆಗಳ, ಜೈವಿಕ ಸ್ವರೂಪದ ಚಯಾ ಪಚಯ ಪ್ರಕ್ರಿಯೆಗಳಿಗೆ ಪರಿಮಿತವಲ್ಲ. ಅಸ್ತಿತ್ವವೆಂದರೆ ಬರೀ ಉಸಿರಾಟವಷ್ಟೇ ಅಲ್ಲ. ಉದ್ದಾಮ ಸಾಧನೆಗಳು, ಅಸಾದೃಶ ವೈಚಾರಿಕ ಸಾಹಸಗಳು ಬದುಕಿಗೆ ಗರಿಮೆ ಗುರುತ್ವಗಳನ್ನು ನೀಡುತ್ತವೆ. ಇವುಗಳ ನೀತಿಮೂಲವೂ, ಶ್ರೇಯಸ್ಕರವೂ ಆದ ವಿವೇಚನೆ ಮೌಲ್ಯವೆನ್ನಿಸಿ ಕೊಳ್ಳುತ್ತದೆ. ಇವುಗಳಲ್ಲಿ ಕೆಲವು ತಾತ್ಕಾಲಿಕ, ಕೆಲವು ನಿತ್ಯ, ಕೆಲವಕ್ಕೆ ಕಾಲದೇಶಗಳ ಚೌಕಟ್ಟಿನ ಸೀಮಿತ ಹಸೆಯಿದ್ದರೆ, ಮತ್ತೆ ಕೆಲವು ಸಾರ್ವಕಾಲೀನ, ಸಾರ್ವದೇಶಿಕವಾದ ವಿಸ್ತೃತ ವ್ಯಾಪ್ತಿಯುಳ್ಳವು. ಮನುಷ್ಯ ಕೆಲವು ಮೌಲ್ಯಗಳನ್ನು ತನ್ನ ಯುಗಧರ್ಮದ ಫಲವಾಗಿ ಸೃಷ್ಟಿಸಿಕೊಳ್ಳುತ್ತಾನೆ. ಆದರೆ ಹಲವಾರು ಮೌಲ್ಯಗಳು ಅವನಿಗೆ ಪರಂಪರೆಯಿಂದ, ಗತಕಾಲದ ಜೀವನ ರೀತಿಯಿಂದ ದಕ್ಕಿರುತ್ತವೆ. ಮನುಷ್ಯನ ಮನೋಲೋಕದ ಸರ್ವಸೃಷ್ಟಿಗಳೂ ಸಾಹಿತ್ಯ ಕಲೆ, ವಿಜ್ಞಾನ, ತತ್ವಶಾಸ್ತ್ರ, ಧರ್ಮ ಇತ್ಯಾದಿಗಳು ಈ ಮೌಲ್ಯಗಳನ್ನು ಲಾಗಾಯ್ತಿನಿಂದ ಕಾಪಾಡಿಕೊಂಡು ಬಂದಿರುವ ಆಕರಗಳು. ಅವು ಹಿಂದಿನ ಕಾಲಕ್ಕೆ ಹೇಗೋ ಇಂದಿಗೂ ಮುಂದಿಗೂ ಪ್ರಸ್ತುತವೆನ್ನಿಸುವಂಥವು. ಈ ದೃಷ್ಟಿಯಿಂದ ಶಾಸ್ತ್ರ ವಿಜ್ಞಾನಗಳಿಗೆ ಹೇಗೋ ಹಾಗೆ ಸಾಹಿತ್ಯಕ್ಕೆ ಹಿರಿಯ ಜವಾಬ್ದಾರಿಯಿದೆ. ಇದರ ಗಾಢವಾದ ಅರಿವು ಸಾಹಿತ್ಯ ರಚನಕಾರನಿಗೆ ಜ್ವಲಂತವಾಗಿ ಇರಬೇಕಾಗುತ್ತದೆ. ತಾನು ಬಳಸುವ ವಿಷಯ, ವಸ್ತುಗಳ ಬೆಲೆಗಾಣ್ಕೆಯ ಬಗ್ಗೆ ಲೇಖಕನಿಗೆ ನಿಷ್ಕೃಷ್ಟವಾದ ತಿಳಿವಳಿಕೆ ಇರಬೇಕಾದದ್ದು ಅನಿವಾರ್ಯ ವೆನ್ನಿಸುತ್ತದೆ. ಮೌಲ್ಯ ತಾರತಮ್ಯ ಪರಿಜ್ಞಾನವಿರದೆ ಕೇವಲ ಭಾವೋದ್ದೀಪನದ ಸಲು ವಾಗಿಯೊ, ಉಪಮೆ ರೂಪಕ ಪ್ರತಿಮೆ ಘಟನೆ ಕೌತುಕ ಸನ್ನಿವೇಶಗಳ ರಸಪೂರ್ಣ ಚಪ್ಪರಿಕೆ ಚರ್ವಣಗಳ ಗೀಳಿಗಾಗಿಯೊ ರಚಿತವಾದ ಬರಹ ಅಲ್ಪಕಾಲಿಕ ಸಾಫಲ್ಯದಲ್ಲಿ ಕೊನೆಗಾಣು ತ್ತದೆ. ಅದು ಆತ್ಮವುಳಿದ ಒಡಲಿನಂತೆ ಅರ್ಥಶೂನ್ಯ ಎನ್ನಿಸುತ್ತದೆ. ಅಂಥ ಬರವಣಿಗೆಗೆ ಉತ್ಕತಿಯ ಅಭಿಜಾತತೆಯ ಅಂತಸ್ತು ಲಭಿಸಲಾರದು. ‘ವಾರ್ ಅಂಡ್ ಪೀಸ್’, ‘ರಾಮಾಯಣ ದರ್ಶನಂ’ನಂಥ ಮಹದ್ರ್ಗಂಥಗಳಲ್ಲಿ ಮೌಲ್ಯಪರಿಣತ ಸುಶಿಕ್ಷಿತ ಮನಸ್ಸು ಕೆಲಸಕ್ಕೆ ತೊಡಗಿರುವುದನ್ನು ಪ್ರಾಜ್ಞ ಪರಿಶೀಲನಕಾರ ಗುರುತಿಸದೆ ಇರಲಾರ.

ನನ್ನ ಈ ತನಕದ ಒಟ್ಟಾರೆ ಗದ್ಯ ಬರವಣಿಗೆಯಲ್ಲಾಗಲಿ, ಪದ್ಯರಚನೆಯಲ್ಲಾಗಲಿ, ಪರಂಪರೆಯಿಂದ ಅಂಗೀಕೃತವಾಗಿ, ಕಾಲಧರ್ಮದಿಂದ ಪರೀಕ್ಷಿತವಾಗಿ ಸುದೃಢವಾಗಿರುವ ಉಚ್ಚಮೌಲ್ಯ ಪ್ರಜ್ಞೆಯೊಂದು, ಶಿಲಾ ಖಂಡದೊಳಗಿನ ಸ್ವರ್ಣಲೇಖೆಯಂತೆ ಲಕಲಕಿಸಿದೆ ಎಂದು ನಾನು ಭಾವಿಸಿದ್ದೇನೆ. ‘ನಾನೇಕೆ ಬರೆಯುತ್ತೇನೆ?’ ಎಂದು ಪ್ರಶ್ನಿಸಿಕೊಳ್ಳುವವನಿಗೆ ಮೌಲ್ಯ ವಿವೇಚಕ ಪ್ರಜ್ಞೆ ತಕ್ಕಮಟ್ಟಿನ ಸಮಾಧಾನ ನೀಡಬಹುದೆಂದು ಬಗೆದಿದ್ದೇನೆ.

ಬರಹಕ್ಕೆ ಸ್ಫೂರ್ತಿ ಬಾಹ್ಯಾವರಣದಿಂದ ದೊರಕಿದರೂ, ನನ್ನ ಪರಿಸರ ಕಲಿಕೆ ಲೋಕ ಪರಿಜ್ಞಾನಗಳು ನನ್ನ ಕಾವ್ಯಕ್ಕೆ ಗ್ರಾಸವನ್ನು ಸಹ ತನ್ನ ರಚನೆಗಳಲ್ಲಿ ಪಡಿಮೂಡಿಸಲಾರೆ. ಅವು ನನ್ನ ಚಿಂತನ, ಮನಸ್ಸಿನ ಉತ್ಕಟತೆಯ ಕಾವಿನಲ್ಲಿ ತಮ್ಮ ಮೂಲಸ್ವರೂಪವನ್ನು ನೀಗಿಕೊಂಡು ಬೇರೆಯೇ ಪರಿಮಾಣ ಪಡೆಯುತ್ತವೆ. ಬಹಿರನುಭವವೊಂದು ಭಾವವಾಗಿ, ಕಲಾನುಭೂತಿಯಾಗಿ ಶುದ್ದಿಗೊಂಡು ಮಾರ್ಪಡವ ಸೃಜನ ಕ್ರಿಯೆಯಲ್ಲಿ ಆ ಅನುಭವ ತಾತ್ಕಾಲಿಕತೆಯ ಶಾಪವನ್ನು ಕಳೆದುಕೊಂಡು ಕಾಲ ದೇಶ ಮನಸ್ಸುಗಳಲ್ಲಿ ಸಂಚರಿಸುವ ಮಹದ್ವಾರವನ್ನು ಪಡೆಯುತ್ತದೆ, ನೀರಿನ ಹನಿ ಮುತ್ತಾಗಿ ಪರಿವರ್ತಿತವಾಗಿ ಸುರಕ್ಷಿತ ಗೊಳ್ಳುವಂತೆ.

ನಮ್ಮ ಭೌತಿಕ ಜಗತ್ತಿನ ನಿಯಮಗಳಿಗಿಂತ ಸಾಹಿತ್ಯ, ಕಾಲ ಧರ್ಮದ ನಿಯತಿಗಳು ಭಿನ್ನ, ಕೆಲವೊಮ್ಮೆ ವಿರುದ್ಧ ಕೂಡ. ನಾಲ್ಕು ಪ್ಲಸ್ ನಾಲ್ಕು ಎಂಟಾಗುವ ಬದಲು ಸಾಹಿತ್ಯ ಜಗತ್ತಿನಲ್ಲಿ ಒಂಬತ್ತಾಗಬಹುದು, ಏಳಾಗಬಹುದು ಇಲ್ಲವೆ ಇನ್ನಾವುದೇ ಸಂಖ್ಯೆಯಾಗ ಬಹುದು. ಕಾವ್ಯರಚನೆಯಲ್ಲಂತೂ ಇಂಥ ಅಘಟಿತ ಘಟನೆಗಳು ಮೇಲಿಂದ ಮೇಲೆ ಎದುರಾಗುತ್ತವೆ. ಬರವಣಿಗೆಯ ಶುರು ಮಾಡುವುದಕ್ಕಿಂತ ಮುಂಚೆ ಮನಸ್ಸಿನಲ್ಲಿ ಇದ್ದದ್ದೇ ಒಂದು, ಆಮೇಲೆ ಕೃತಿಯಲ್ಲಿ ಮೈ ತಳೆದದ್ದೇ ಇನ್ನೊಂದು ಎನ್ನಿಸುವ ಅಪ್ರಜ್ಞಾವಲಯದ ಕ್ರಿಯೆ ಸೋಜಿಗ ಬರಿಸುತ್ತದೆ. ಆಲೋಚನೆಯ ನೀಲಿನಕಾಶೆಗೂ ಪರಿಣಾಮ ಸ್ವರೂಪಿಯಾದ ಸಾಹಿತ್ಯ ಕೃತಿಯ ರಮ್ಯಾದ್ಭುತ ನಿರ್ಮಿತಿಗೂ, ಬಹುಜನ ಆದರಣೀಯವಾಗಿ ಉಳಿಸಲು ಕಾರಣವಾಗಿದೆ. ಎಂದೇ “ನಾನೇಕೆ ಬರೆಯುತ್ತೇನೆ?” ಎಂಬುದನ್ನು ಕೇವಲ ಜಾಗ್ರತ ಚಿತ್ತದ ಬೌದ್ದಿಕ ವಿವೇಚನೆಯ ಹಂತದಲ್ಲಿ ವಿವರಿಸಲು ಸಾಧ್ಯವಾಗದು. ಅದು ಸತ್ಯದ ಒಂದು ಮಗ್ಗಲನ್ನು ಮಾತ್ರ ಕಾಣಸೀತು. ಸುಪ್ತ ಪ್ರಜ್ಞೆಯ ವೈಚಿತ್ರ್ಯ ವೈಲಕ್ಷಣ್ಯಗಳ ಅರಿವಿನಿಂದ ಈ ಪ್ರಶ್ನೆಗೆ ಗಣನೀಯ ಪರಿಹಾರ ದೊರೆತೀತು.