ಶಹಜಾದೆಗೆ ತನಗಿಂತ ಮುಂಚೆ ಶಙಾನನ್ನ ಮದುವೆಯಾದ ಹೆಣ್ಣುಗಳ ಕೊಲೆಯಾದದ್ದು ಗೊತ್ತಿತ್ತೆ? ಶಹಾನಿಗೆ ಹೆಣ್ಣುಗಳ ಬಗ್ಗೆ ಇದ್ದ ತಾತ್ಸಾರ, ದ್ವೇಷ ಆಕೆಗೆ ಗೊತ್ತಿತ್ತೆ? ಗೊತ್ತಿದ್ದೂ ಸುಖದ ಆಶೆಗಾಗಿ ಆತನನ್ನು ಮದುವೆಯಾದಳೆ? ಅಥವಾ ಹೆಣ್ಣು ಕುಲದ ಬಗ್ಗೆ ಶಹಾನಲ್ಲಿ ವಿಶ್ವಾಸ ಮೂಡಿಸುವುದಕ್ಕೆ ಮದುವೆಯಾಗಿರಬಹುದೆ?

ಅರೇಬಿಯನ್ ನೈಟ್ಸ್ ಕತೆಗಳ ಹುಟ್ಟು ನನಗೆ ರೋಮಾಂಚಕಾರಿ. ಒಂದೇ ಒಂದು ರಾತ್ರಿ ಬಳಸಿ ಹೆಣ್ಣನ್ನು ಕೊಂದು ಹಾಕುತ್ತಿದ್ದ ದೊರೆಗೆ ಸಮ್ಮೋಹಕ ಕುತೂಹಲಕರ ಕತೆ ಹೇಳುತ್ತ ಸಾವಿರದೊಂದು ರಾತ್ರಿಗಳನ್ನು ಗೆದ್ದುಕೊಂಡು ಆ ಮೂಲಕ ಇಡೀ ಬದುಕನ್ನು ತನ್ನದಾಗಿಸಿಕೊಂಡ ಶಹಜಾದೆ ಮಹಾ ಕಲಾವಿದೆ. ನಮ್ಮ ಬಾಗಿಲ ಬಳಿ ಸದಾ ಕಾವಲು ಕೂತ ಯಮನನ್ನು ದಿಕ್ಕುಗೆಡಿಸಿದ ಹೆಣ್ಣು ಅವಳು. ಬರೆಯುವ ಕಲೆಗೆ ಸೋತ ನನಗೆ ಎಲ್ಲೋ ಆಳದಲ್ಲಿ ಸಾವಿನ ಹೆದರಿಕೆ ಸದಾ ಇದೆ. ನಿದ್ರೆಯಂತೆ ನಮ್ಮನ್ನು ಆವರಿಸಿ ಸಂಪೂರ್ಣ ಇಲ್ಲವಾಗಿಸುವ ಸಾವಿನ ಬಗ್ಗೆ ಮಾತ್ರ ನಾನು ಹೇಳುತ್ತಿಲ್ಲ, ನಮ್ಮ ನೋವು, ವ್ಯಸನ, ಬಿಳಿಗೂದಲು, ನಿಶ್ವಾಸದೊಂದಿಗೆ ನಮ್ಮತ್ತ ತೆವಳುವ ಸಾವನ್ನು ಕುರಿತು ಚಿಂತಿಸುತ್ತಿದ್ದೇನೆ. ನಮ್ಮನ್ನು ಜೀವಿಸುವಂತೆ, ಆದಷ್ಟೂ ತೀವ್ರವಾಗಿ ಜೀವಿಸುವಂತೆ ಒತ್ತಾಯಪಡಿಸುವ ಅನಿವಾರ್ಯಗಳಿಗೆಗಳ ಬಗ್ಗೆ ಹೇಳುತ್ತಿದ್ದೇನೆ. ಈ ಜೀವಿತವನ್ನು ಖರೆಯೆನ್ನಿಸುವಂತೆ ಮಾಡುವ ಸೃಷ್ಟಿ ಕಾರ್ಯದ ಬಗ್ಗೆ ಹೇಳುತ್ತಿದ್ದೇನೆ.

ಶಹಜಾದೆಯ ಕತೆ ಇಲ್ಲಿಗೆ ಮುಗಿಯಲಿಲ್ಲ. ಸಾವಿರದೊಂದು ಕತೆ ಹೇಳಿದ ಶಹಜಾದೆ ಆ ಅವಧಿಯಲ್ಲಿ ಮೂರು ಜನ ಗಂಡು ಮಕ್ಕಳನ್ನು ಹಡೆದಳಂತೆ. ಅವಳು ಹೇಳಿದ ಕತೆಗಾಗಿ ದೊರೆ ಅವಳನ್ನು ಕ್ಷಮಿಸಿದನೋ, ಅವಳು ಹೆತ್ತ ಗಂಡು ಮಕ್ಕಳಿಂದ ಖುಷಿಗೊಂಡು ಕ್ಷಮಿಸಿದನೋ? ಸುಮಾರು ಮೂರು ವರ್ಷದ ಈ ಅವಧಿಯಲ್ಲಿ ಆಕೆ ಮೂರು ಮಕ್ಕಳು ಹೆರುವ ಕೆಲಸ ಮಾಡುತ್ತಲೇ ಕತೆ ಹೇಳಿದಳಲ್ಲ ಪ್ರೇಮ, ಕಾಮ, ಹೆರುವ ನೋವು, ತಹತಹ ಇದರಿಂದ ಆಕೆಗೆ ಸುಖ ದೊರೆಯಿತೆ, ಕತೆ ಹೇಳಿದ್ದರಿಂದಲೋ? ಇಂಥ ಪ್ರಶ್ನೆಗಳಿಗೆ ಉತ್ತರ ಅಖಂಡ ಮೌನವೇ ಸರಿ. ಗತಕಾಲ ನಮ್ಮನ್ನು ಕಾಡುವ ರೀತಿಗಳಲ್ಲಿ ಇದೂ ಒಂದು. ದೊರೆಯ ಸುಖ ಒಂದು ಬಗೆಯಾದರೆ, ಶಹಜಾದೆಯ ಸುಖ ಇನ್ನೊಂದು ಬಗೆಯದು. ಶಹಜಾದೆ ಕಲಾವಿದನ ದಟ್ಟ ಗೋಪ್ಯಕ್ಕೆ ಸಾಕ್ಷಿಯಾಗಿದ್ದಾಳೆ.

ದೊರೆಯನ್ನು ವರಿಸಿದ ದೇಹದ ಮಟ್ಟದಿಂದ ಹಿಡಿದು ಮನಸ್ಸಿನ ಮಟ್ಟದವರೆಗೆ ಸ್ಪಂದಿಸುವ, ಹೆರುವ, ಜೀವನದ ಬಳ್ಳಿಯನ್ನು ದಾಂಗುಡಿಯಿಡಿಸುವ, ಸದಾ ಸಾವಿಗೆ ಹೆದರಿ ಅಖಂಡ ಹರ್ಷದ ಕತೆ ಬೆಳೆಸುವ ಈ ಎಲ್ಲವೂ ಇಲ್ಲದಿದ್ದರೆ ಶಹಜಾದೆ ಕಲಾವಿದೆಯಾ ಗುತ್ತಿರಲಿಲ್ಲ. ಮತ್ತು ಬದುಕಿನ ಕಹಿಯನ್ನು ಉಳಿಸಿಕೊಂಡು ಕತೆ ಬರಿಯ ಕತೆಯೆಂದು ದೊರೆ ತಿಳಿದಿದ್ದರೆ ಶಹಜಾದೆಯ ಜೀವವನ್ನು ಉಳಿಸುತ್ತಿರಲಿಲ್ಲ. ಕತೆ ಅವನಿಗೆ ಬೇಕಾಯಿತು; ಅದು ಅವನನ್ನು ಆವರಿಸಿತು; ಕತೆಯೊಂದಿಗೆ ಅವನ ಮನೆತನದ ಮರ ಕೂಡ ಬೆಳೆದದ್ದು ಸಾಂಕೇತಿಕ ಮಾತ್ರ. ಅವಳನ್ನು ಕಾಪಾಡಿದ ಕತೆ ಅವನನ್ನೂ ವಿಚಿತ್ರ ಬಗೆಯ ಸಾವಿನಿಂದ ಉಳಿಸಿತು.

ನಾನು ಅರೇಬಿಯನ್ ರಾತ್ರಿಗಳ ಕತೆಯ ಉದಾಹರಣೆ ಕೊಡುತ್ತಿರುವುದು ಕೆಲವರ ವ್ಯಂಗ್ಯಕ್ಕೆ ಕಾರಣವಾಗಬಹುದು, ಆ ಕತೆಗಳೆಲ್ಲ ಮಾಯಾಮಂತ್ರದ ಜಾಲಗಳೆಂದು ಜರೆಯ ಬಹುದು; ಆದರೆ ಮಾಯಾ ಮಂತ್ರಗಳಲ್ಲಿ ಕೊಂಚವೂ ನಂಬಿಕೆಯಿಲ್ಲದವ ದೊಡ್ಡ ಕಲಾವಿದ ನಾಗುವುದಿಲ್ಲ. ಬರೆಯುವುದೇ ಈ ಮಾಂತ್ರಿಕತೆಯ ಹುಡುಕಾಟ ಜೀವಿಸುವುದರ ಹಾಗೆಯೇ

ನಮ್ಮ ವಂಶದಲ್ಲಿ ಯಾವೊಬ್ಬನೂ ಬರಹಗಾರ ಇದ್ದಂತಿಲ್ಲ; ನನ್ನ ಅಜ್ಜ ನಾಲ್ಕೈದು ಎಕರೆ ನೆಲ ಉಳುತ್ತ ಪೋಲಿ ಕೆಲಸ ಮಾಡಿಕೊಂಡು ಅಡ್ಡಾಡಿದವನು; ನನ್ನ ಅಪ್ಪ ಜಗಳಗಂಟಿ ಹೆಣ್ಣನ್ನು ಮದುವೆಯಾಗಿ ವಂಶಪಾರಂಪರ್ಯದ ತುಡುಗು ಮುಂದುವರಿಸಿದವನು. ನಾನು ಬಲ್ಲ ಅತ್ಯಂತ ನೋವಿನ, ದಿಗ್ರ್ಭಮೆಯ ನೆನಪುಗಳು ಈ ಅಪ್ಪ ಅವ್ವ ನಡೆಸುತ್ತಿದ್ದ ಜಗಳ ಗಳದ್ದು. ಹೇಳುತ್ತಾ ಹೋದರೆ ಅತಿಯಾಗುವ ಸಂದರ್ಭವಿರುವುದರಿಂದ ಸಂಗ್ರಹವಾಗಿ ಕಾಣಿಸುತ್ತೇನೆ. ಅವ್ವ ನನ್ನ ಸೋದರ ಮಾವನನ್ನು ಕರೆಸಿ ನನ್ನ ಅಪ್ಪನನ್ನು ಬಲೆಗೆ ಬೀಳಿಸಿದ ಹೆಣ್ಣಿಗೆ ಬರೆಹಾಕುವ ಮಾತಾಡುತ್ತಿದ್ದಳು. ನಾನು ಇದೆಲ್ಲ ಏಕೆಂದು ಕೇಳಿಕೊಳ್ಳುತ್ತಲೇ ಇದೆಲ್ಲ ಇದೇ ಎಂದು ಅರ್ಥಮಾಡಿಕೊಳ್ಳುತ್ತಿದ್ದ ಸಮಯ ಅದು. ನನ್ನನ್ನು ಚಿಂತೆಗೆ ಗುರಿಮಾಡಿದ ಈ ಕೆಲವು ಸಂಗತಿಗಳಿಂದ ನಾನು ಪ್ರೇಮ ಕಾಮದ ತರಲೆಗಳೇ ಇಲ್ಲದಂತಿದ್ದ ನಮ್ಮ ನೆರೆಹೊರೆಯ ಸಂಸಾರಗಳ ಬಗ್ಗೆ ಯೋಚಿಸುತ್ತಿದ್ದೆ; ಅಸೂಯೆಪಡುತ್ತಿದ್ದೆ. ನಮ್ಮ ಮನೆತನವೊಂದನ್ನು ಬಿಟ್ಟು ಮಿಕ್ಕವೆಲ್ಲ ಸುಖ ಸಂಸಾರಗಳಂತೆ ನನಗೆ ಕಾಣುತ್ತಿದ್ದವು. ಇದು ಎಷ್ಟು ಸುಳ್ಳೆಂಬುದು ಬರುಬರುತ್ತಾ ನನಗೆ ಗೊತ್ತಾಯಿತು. ಹಗಲು ರಾತ್ರಿಗಳಿರುವವರೆಗೆ ಪ್ರತಿಯೊಂದು ಸಂಸಾರದಲ್ಲೂ ಪ್ರೇಮದ ಅಥವಾ ಪ್ರೇಮರಾಹಿತ್ಯದ ದುರಂತಗಳಿದ್ದೇ ಇರುತ್ತವೆ. ಆದರೆ ಹಾಗೆ ಗೊತ್ತಾಗುವಷ್ಟರಲ್ಲೇ ನಾನು ಅಂತರ್ಮುಖಿಯಾಗಿದ್ದೆ; ನಮ್ಮ ಮನೆಯಲ್ಲಿ ಸಿಕ್ಕ ವಚನ, ಜೈಮಿನಿ ಭಾರತ, ವೀರಶೈವರನ್ನು ಕುರಿತ ಪುಸ್ತಕಗಳು ಇತ್ಯಾದಿಗಳಲ್ಲಿ ತಲೆತಪ್ಪಿಸಿಕೊಳ್ಳುತ್ತಿದ್ದೆ; ಅದೇ ಸಮಯಕ್ಕೆ ನಮ್ಮೂರಿಗೆ ವಯಸ್ಕರ ಶಿಕ್ಷಣ ಸಮಿತಿಯ ನೂರು ಪುಸ್ತಕಗಳ ಲೈಬ್ರರಿ ಬಂತು. ಅದರಲ್ಲಿದ್ದ ‘ಆರೋಗ್ಯ ದರ್ಪಣ’ ಎಂಬ ಪುಸ್ತಕದಿಂದ ಹಿಡಿದು ಸರಳಗೊಳಿಸಿದ ಟಾಲ್‌ಸ್ಟಾಯ್ ಕತೆಗಳವರೆಗೆ ಎಲ್ಲವನ್ನೂ ಓದಿದೆ.

ಇದರ ಜೊತೆಗೆ ಲೈಂಗಿಕ, ಸಾಮಾಜಿಕ ವಿಷಯಗಳಲ್ಲಿ ಕೆಲವನ್ನು ಕಾಣಿಸಬೇಕು. ಹುಡುಗ ನೊಬ್ಬನಿಗೆ ಲೈಂಗಿಕ ಆಸಕ್ತಿ ಎಷ್ಟು ಚಿಕ್ಕಂದಿನಿಂದ ಆರಂಭವಾಗುತ್ತದೆ ಎಂದು ನೆನೆಸಿಕೊಂಡರೆ ನನಗೆ ಆಶ್ಚರ್ಯವಾಗುತ್ತದೆ. ಹುಡುಗಿಯೊಬ್ಬಳು ನನಗೆ ಹುಚ್ಚು ಹಿಡಿಸಿದ್ದು ಸುಮಾರು ಏಳು ವರ್ಷಕ್ಕೆ ಮುಂಚೆಯೇ; ಈ ಹುಚ್ಚಿನ ಸ್ಫೋಟ ಮುಷ್ಟಿ ಮೈಥುನದಲ್ಲಿ ನೋವಿನ ಬೆಳವಣಿಗೆಯಲ್ಲಿ, ಅಸ್ವಸ್ಥತೆ ಎಂಬಷ್ಟು ಮಟ್ಟಿನ ಅಂತರ್ಮುಖತೆಯಲ್ಲಿ ವ್ಯಕ್ತವಾಯಿತು. ಮಹಾ ಕುಡುಮಿಯಾಗಿದ್ದು ಜನರಿಂದ ಪ್ರತ್ಯೇಕವಾಗಿದ್ದು ಆಗಲೇ. ಈ ಎಲ್ಲದರ ಹಿಂದಿನ ಅಸಹಾಯಕತೆ, ಎಲ್ಲವನ್ನೂ ಒಡೆದು ಹೋಗುವ ಶಕ್ತಿ ಇಲ್ಲದಿದ್ದರೂ ಹಾಗೆ ಸೀಳಿಕೊಂಡು ಮುನ್ನುಗ್ಗುವ ಆಶೆ ಇದರ ಪರಿಣಾಮವೆಂದರೆ ಬರವಣಿಗೆ. ಮಾಡಲಾಗದವನು ಬರೆಯುತ್ತಾನೆ ಎಂದು ನಿಮಗೆ ಅನ್ನಿಸಿದರೂ ಚಿಂತೆಯಿಲ್ಲ. ಒಂದು ಬಗೆಯ ಅಪೂರ್ಣತೆ ನನ್ನನ್ನು ಬರವಣಿಗೆಗೆ ಹಚ್ಚಿತು; ಬದುಕಿನಲ್ಲಿ ದೊರೆತ ಎಲ್ಲ ನೋವು ಅನುಮಾನಗಳನ್ನು ಮೀರಿ ಅದನ್ನು ನನ್ನಿಂದ ಮತ್ತು ಜನರಿಂದ ಮರೆಸಲು ನಾನು ಬರೆಯಲೇಬೇಕಾಗಿತ್ತು.

ನಾನು ಮಹಾ ಸುಸಂಸ್ಕೃತ, ನನ್ನ ಜನಾಂಗದ ಅತ್ಯುತ್ತಮ ಕುಸುಮ, ಆದ್ದರಿಂದಲೇ ಬರೆಯುತ್ತೇನೆ ಎಂದು ಹೇಳಿಕೊಳ್ಳಲು ಸಾಧ್ಯವಿದ್ದಿದ್ದರೆ! ಬದುಕಿನ ದೊಡ್ಡ ಕಷ್ಟವೆಂದರೆ ಅಸಂಸ್ಕೃತನಿಗೆ ಇರುವಷ್ಟೇ ತೊಂದರೆಗಳು ಸುಸಂಸ್ಕೃತನಿಗಿವೆ; ಒಂದು ರೀತಿಯಲ್ಲಿ ಹೆಚ್ಚಾಗಿಯೇ ಇವೆ. ಉದಾಹರಣೆಗೆ ಒಂದು ಗುಂಪು ಏನೂ ಗೊತ್ತಿಲ್ಲದ ಅಪಾರ ಅನುಭವ ಗಳ ಸ್ಥಿತಿಯಿಂದ, ಎಲ್ಲ ಗೊತ್ತಿರುವ ಅನುಭಗಳ ಕಡೆಗೆ ನಡೆಯುವುದು ಸ್ವಾಭಾವಿಕ; ಆದರೆ ಎಲ್ಲ ಗೊತ್ತಿರುವ ಸ್ಥಿತಿಯಿಂದ ಎಂಥದೂ ಗೊತ್ತಿರದ ಸ್ಥಿತಿಯತ್ತ ನಡೆಯುವುದು ಅಸ್ವಾಭಾವಿಕ ಮತ್ತು ಕಷ್ಟ. ಬೌದ್ದಿಕವಾಗಿ ಎಂಥದೂ ಗೊತ್ತಿರದ ಸ್ಥಿತಿ ಸ್ಪಂದನಗಳ ದೃಷ್ಟಿಯಿಂದ ಅಪಾರ ಗಣಿ. ನಮ್ಮ ನಾಡಿನ ವೈದಿಕರ ಕಷ್ಟಗಳೆಲ್ಲ ಇಲ್ಲಿವೆ; ಶೂದ್ರನ ಕಷ್ಟ ಅರಿಯುತ್ತ ಹೋಗುವುದರಲ್ಲಿದೆ. ಈ ಅರಿವು! ಹೆಣ್ಣೊಂದು ಪರಪುರುಷನೊಂದಿಗೆ ಮಲಗುವುದು, ಆ ಅಕೃತ್ಯದಿಂದ ಅವಳ ಪರಿಸರದ ಮೇಲಾಗುವ ಪರಿಣಾಮ ಈ ಬಗ್ಗೆ ನಾನು ಚಿಕ್ಕಂದಿನಲ್ಲಿ ಪಡೆಯುತ್ತಿದ್ದ ಅನುಭವಕ್ಕೂ ಈಗ ಪಡೆಯುವುದಕ್ಕೂ ವ್ಯತ್ಯಾಸವಿದೆ. ಪ್ರಬುದ್ಧತೆ ನಮಗೆ ಕಲಿಸುವ ಪಾಠ ನೈತಿಕವಾಗಿ ದೊಡ್ಡದಾಗುವುದು, ಧೈರ್ಯಶಾಲಿಯಾಗು ವುದು; ನಾನು ನನ್ನ ಚಿಕ್ಕಂದಿನ ಅನುಭವಗಳನ್ನು ಹೇಳುವಾಗ ಹಾಗೆ ಧೈರ್ಯಶಾಲಿಯಾಗು ತ್ತೇನೆ. ಆದರೆ ಅದರಲ್ಲಿ ತೋರಿಕೆ ಎಷ್ಟು, ನಿಜವಾದ ಧೈರ್ಯವೆಷ್ಟು? ಇದನ್ನು ನಿರ್ಧರಿಸು ವುದು ಕೃತಿಯ ಸಾಫಲ್ಯ; ಕೃತಿ ಕೊಡುವ ಸೃಷ್ಟಿ ಸಮಯದ ಖುಷಿಯ ಜೊತೆಗೆ ಅದರಿಂದ ಬರುವ ಖ್ಯಾತಿ ಕೂಡ ಲೇಖಕನನ್ನು ಹೆಚ್ಚು ಮುಕ್ತನನ್ನಾಗಿ ಮಾಡುತ್ತದೆ. ನಾನೆಷ್ಟೇ ಖ್ಯಾತಿಯ ಬಗ್ಗೆ ಅಲಕ್ಷ್ಯ ತೋರಲು ಬಯಸಿದರೂ ಒಳಗೆಲ್ಲೋ ನನ್ನ ಅಪೂರ್ಣತೆ ಈ ಖ್ಯಾತಿಗಾಗಿ ಹಂಬಲಿಸುತ್ತದೆ. ನಾನು ಅದಕ್ಕೇ ಶೂದ್ರ ಲೇಖಕರನ್ನು ಸದಾ ಎಚ್ಚರಿಸುವುದು ಖ್ಯಾತಿ ಪಡೆಯಿರಿ, ಆದರೆ ಆ ಬಗ್ಗೆ ಸಂಶಯ ಬೆಳೆಸಿಕೊಳ್ಳಿ. ಶೂದ್ರರನ್ನು ಈ ವಲಯದಲ್ಲಿ ಮೋಸ ಗೊಳಿಸುವುದು ಬಹು ಸುಲಭ. ಕನ್ನಡ ಸಾಹಿತ್ಯದ ಹಲವಾರು ಉನ್ನತ ಯಶಸ್ಸುಗಳಿಗೆ ಕಾರಣರಾದ ಕುವೆಂಪು ಅವರ ದೌರ್ಬಲ್ಯಗಳನ್ನೂ ಈ ದೃಷ್ಟಿಯಿಂದ ನೋಡಬಹುದು.

ನನ್ನನ್ನು ಆಳವಾಗಿ ಅಲ್ಲಾಡಿಸಿದ ಮೂರು ಪ್ರೇಮ, ಜೂಜು ಮತ್ತು ಕದನ. ನಾನು ಈಗಾಗಲೇ ಬೇರೊಂದು ಕಡೆ ಈ ಬಗ್ಗೆ ಬರೆಯುತ್ತಿರುವುದರಿಂದ ಇಲ್ಲಿ ಇದನ್ನು ಆರಂಭದ ಘಟ್ಟವಾಗಿ ಮಾತ್ರ ಇಟ್ಟುಕೊಳ್ಳಬಹುದು. ಅಧಿಕಾರ, ಮಧ್ಯ, ಧರ್ಮ ನನಗೆ ಅಷ್ಟಾಗಿ ಗೊತ್ತಿಲ್ಲದಿರುವುದರಿಂದ ಈ ಮೂರರ ಪ್ರಭಾವದ ಬಗ್ಗೆ ಹೇಳುವುದಿಲ್ಲ. ಪ್ರೇಮ, ಜೂಜು, ಕದನ ವಿವಿಧ ಮಟ್ಟದಲ್ಲಿ ನನ್ನನ್ನು ತೊಡಗಿಸಿವೆ; ಈ ಮೂರು Chancy ಆಗಿರುವುದರಿಂದ. ಈ ಮೂರರಲ್ಲೂ ಅದೃಷ್ಟ ಮತ್ತು ಸ್ವಂತ ಪ್ರಯತ್ನ ಎರಡೂ ಸೇರಿರುವುದರಿಂದ ಹೀಗೆ ನನ್ನನ್ನು ತೊಡಗಿಸಿರಬಹುದು. ಆದರೆ ಅನುಭವ ಲೇಖಕನೊಬ್ಬನಿಗೆ ಬರುವ ರೀತಿ ಲೇಖಕನಲ್ಲದವನಿಗೆ ಬರುವ ರೀತಿಯಿಂದ ಬೇರೆ ರೀತಿಯಾಗಿರುತ್ತದೆ ಎಂದು ನನಗನ್ನಿ ಸುತ್ತದೆ. ಲೇಖಕನಾದವನು ಅನುಭವಿಸುತ್ತಲೇ ತನ್ನ ಅನುಭವ ನೋಡಿಕೊಳ್ಳುತ್ತಾನೆ; ಆ ಬಗ್ಗೆ ಸ್ವಾರ್ಥಿಯಾಗಿರುತ್ತಾನೆ. ಆದ್ದರಿಂದಲೇ ಲೇಖಕ ತನ್ನನ್ನು ತಾನು ಸಂಪೂರ್ಣ ಕೊಟ್ಟು ಕೊಳ್ಳಲಾಗದೆ ಅಪೂರ್ಣ ಜೀವಿಯಾಗುತ್ತಾನೆ. ಅನೇಕ ಸಲ ನಾನು, ಹಳ್ಳಿಯವನಾದ ನಾನು ಲೇಖಕನೇ ಅಲ್ಲದಿರಬಹುದು, ಇದೊಂದು ಬಗೆಯ ಅನುಕರಣೆಯ ಚಟವಿರಬಹುದು ಎಂದು ನನ್ನನ್ನು ನಾನೇ ನಂಬಿಸಿಕೊಂಡು ಬದುಕಲು, ನನ್ನನ್ನು ನಾನು ಕೊಟ್ಟುಕೊಳ್ಳಲು ಯತ್ನಿಸಿದ್ದೇನೆ. ಆದರೆ, ಎಷ್ಟು ಕಷ್ಟ! ನಾನು ಅತ್ಯಂತ ತೀವ್ರವಾಗಿ ಪ್ರೀತಿಸುತ್ತಿದ್ದ ಹೆಣ್ಣೊಂದು ಅತ್ಯಂತ ಸಂತೋಷದ ಗಳಿಗೆಯಲ್ಲಿ ಹೇಳಿದಳು : “ಇದನ್ನೆಲ್ಲ ಮೀರಿ”. “ಇಲ್ಲ. ಅದೆಲ್ಲ ಈಗ ಮಾತಾಡಬೇಡ” ಅಂದೆ. “Be a good boy, write out” ಅಂದಳು. ನಾನು ಬರೆಯಲಿಲ್ಲ (ಇಲ್ಲಿಯವರೆಗೆ!), ಯಾಕೆಂದರೆ, ನನ್ನ ಪ್ರೀತಿಯೆಲ್ಲ ಹಾಳಾಗುವುದು ಬೇಕಿರಲಿಲ್ಲ. ನಾನು ಕತೆ ನಾಯಕನಂತೆ ಅವಳೊಂದಿಗೆ ವರ್ತಿಸುವುದು ಬೇಕಿರಲಿಲ್ಲ. ನಿಸ್ವಾರ್ಥ ವಾಗಿ, ಅವಳಿಗಾಗಿ, ನನಗಾಗಿ ಪ್ರೀತಿಸುವುದು ಮಾತ್ರ ನನಗೆ ಬೇಕಾಗಿತ್ತು. ಹಾಗೆ ಪ್ರೀತಿಸುವುದು ಸಾಧ್ಯವಾದರೆ ಹಾಗೇ ಸಾಯುವುದು ಸಾಧ್ಯ. ಎಲ್ಲ ಗೆಲುವು, ಎಲ್ಲ ಸೋಲು ಮುತ್ತಿಕೊಂಡು ಕಾಡುತ್ತಿರುವ ಮನುಷ್ಯ ಸಾಯುವ ಗಳಿಗೆಯಲ್ಲಿ ಅಸುಖ ಹರಡಿ ಸಾಯುತ್ತಾನೆ. ನರಕವನ್ನು ಇಲ್ಲೇ ಕಾಣುತ್ತಾನೆ.

ಬರಹಗಾರನ ಆತ್ಮವಿಶ್ವಾಸ ಅಖಂಡ. ನನಗೆ ಇಲ್ಲಿಯವರೆಗೆ ಇದ್ದ ಗೀಳುಗಳನ್ನು ನೆನೆದರೆ ನನಗೇ ನಗೆ ಬರುತ್ತದೆ. ವ್ಯಾಪಾರದಲ್ಲಿ ಬೇಸಾಯದಲ್ಲಿ, ಪತ್ರಿಕೋದ್ಯಮದಲ್ಲಿ, ಸಿನಿಮಾ ನಿರ್ದೇಶನದಲ್ಲಿ ಎಲ್ಲೆಲ್ಲೂ ನಾನು ಯಶಸ್ವಿಯಾಗಬಹುದೆಂಬ ವಿಶ್ವಾಸ, ಕಲ್ಪನೆ ನನಗಿತ್ತು. ಆದರೆ ದಿನಗಳೆದಂತೆ ಭ್ರಮೆಗಳು ಕಡಿಮೆಯಾಗುತ್ತವೆ. ನಮ್ಮ ಶಕ್ತಿ ನಮಗೆ ಗೊತ್ತಾಗುತ್ತಿದ್ದಂತೆ ನಮ್ಮ ದೌರ್ಬಲ್ಯ ಕೂಡ ಹೊಳೆಯುತ್ತ ಹೋಗುತ್ತವೆ. ಇದು ಸಹಜ ಕೂಡ. ನಾನು ಲೇಖಕನಾಗಿ, ಅದಕ್ಕೆ ಹೊಂದಿಕೊಂಡಂತೆ ಎಂದಾದರೊಮ್ಮೆ ಒಂದು ಚಿತ್ರ ತಯಾರಿಸಲು ಸಾಧ್ಯವಾದರೆ ಎಂದು ಮಾತ್ರ ನನಗೆನ್ನಿಸುತ್ತಿದೆ. ಇದಕ್ಕೆ ಒಂದು ಕಾರಣವಿದೆ. ಲೇಖನ ಮೂಲಪ್ರವೃತ್ತಿ ಇರಬಹುದು, ಇನ್ನೊಂದು ಅನುಭವ ತೆಗೆದುಕೊಳ್ಳಲು ಬಾಗಿಲಿರ ಬಹುದು. ಒಂದು ಕೂತು ಮಾಡಬಹುದಾದ್ದು, ಇನ್ನೊಂದು ಎಲ್ಲರೊಂದಿಗೆ ತೊಡಗಿದಾಗ ಮಾತ್ರ ಸಾಧ್ಯ. ಈ ಇನ್ನೊಂದರ ಬಗ್ಗೆ ಅಷ್ಟು ಪರದಾಡಬೇಕಾದ್ದೇನಿಲ್ಲ. ಯಾಕೆಂದರೆ ನಾನು ಹೇಳಿದ ಮೂರು ಯಾವಾಗಲೂ ನನಗೆ ಬಾಗಿಲುಗಳಾಗಿಯೇ ಇರಬಹುದು. ಅನುಭವ ನಾನು ಪ್ರಯತ್ನಿಸದೇ ಬರಬಹುದು. ಬರೆಯುವುದು ಮಾತ್ರ ಅಷ್ಟು ಸಲೀಸಲ್ಲ.

ಆದ್ದರಿಂದಲೇ ಬರೆಯುವುದು, ಶೂನ್ಯದಿಂದ ಆಕಾರಗಳನ್ನು ಹೊರಡಿಸುವುದು, ನಿಶ್ಯಬ್ಧದಿಂದ ಸದ್ದುಗಳನ್ನು ಏಳಿಸುವುದು ಲೇಖಕನಿಗೆ ಅಂಟದ ಶಾಪ. ಬರೆಯದವರನ್ನು ಕಂಡು ಹಲವು ಸಲ ಅಸೂಯೆಪಟ್ಟಿದ್ದೇನೆ. ಅಸೂಯೆಗೆ ಕಾರಣವಿರಲಾರದು ಎಂದು ಹೇಳಿಕೊಂಡಿದ್ದೇನೆ. ಯಾಕೆಂದರೆ ಅನುಭವಗಳನ್ನು ಹೇಳುವುದು, ಅದನ್ನು ಹೇಳುವ ಮೂಲಕ ಕಾಣುವುದು. ಅದರಿಂದ ಬಿಡುಗಡೆ ಪಡೆಯುವುದು ಇದನ್ನು ತಾನೆ ಶಹಜಾದೆ ಮಾಡಿದ್ದು? ಕಾಣುವ ಮತ್ತು ವ್ಯಕ್ತಪಡಿಸುವ ಕಲೆ ಇಲ್ಲದಿದ್ದರೆ ಅವಳನ್ನು ಸಾವು ನುಂಗುತ್ತಿತ್ತು. ಸಾವು ಹರೆಯದ ಅವಳನ್ನು ನುಂಗಿದ್ದರೆ ಪರಿಪಕ್ವತೆಯಿಂದ ಆಕೆ ವಂಚಿತಳಾಗುತ್ತಿದ್ದಳು. ಇಲ್ಲೊಂದು ಹೋಲಿಕೆ ತಲೆಹಾಕುತ್ತಿದೆ. ಚಿಕ್ಕವನಾಗಿದ್ದಾಗ ನಾನು ಕಲ್ಲು ಹೊಡೆದು ಮಾವಿನಕಾಯಿ ಉದುರಿಸಿದಾಗ ಸೊನೆ ಚೀರೆಂದು ಸುರಿಯುತ್ತಿತ್ತು. ನನ್ನ ಅವಸರಕ್ಕೆ ನಾನು ಬೇಸರಪಟ್ಟು ಕೊಳ್ಳುತ್ತಿದ್ದಂತೆ ಮಾವಿನಕಾಯಿಯ ನೋವು ಕೂಡ ನನಗೆ ತಾಗುತ್ತಿದ್ದಂತಿತ್ತು. ಆದರೆ ಗದ್ದೆಯ ಮೇಲೆ ಸುಳಿದ ಗಾಳಿಗೇ ಮಾವಿನಹಣ್ಣು ಉದುರುತ್ತಿತ್ತು. ಇದರಿಂದ ಪಕ್ವವಾಗಲು ದೈಹಿಕವಾಗಿ, ಮಾನಸಿಕವಾಗಿ ಪಕ್ವವಾಗಲು ಕಾರಣ ದೊರೆಯಬಹುದೆ? ಶಹಜಾದೆಯ ಗೂಢದಲ್ಲಿ? ಅರೇಬಿಯನ್ ನೈಟ್ಸ್ ಕತೆಗಳ ಬಣ್ಣ ಬಣ್ಣದ ಸಜೀವ ಜಗತ್ತಿನಲ್ಲಿ? ಏಟ್ಸ್ ಹೇಳುವ ಬೈಜಾಂಟೈನ್ ಹಕ್ಕಿಯಲ್ಲಿ?