‘ನಾನೇಕೆ ಬರೆಯುತ್ತೇನೆ?’ ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಮೊದಲು ‘ನಾನೇಕೆ ಓದುತ್ತೇನೆ? ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವದು ಸಮಂಜಸವಾದೀತೇನೋ. ಯಾಕೆಂದರೆ ಮೂಲತಃ ಈ ಪ್ರಶ್ನೆ ಸಾಹಿತ್ಯದಲ್ಲಿ ನನಗಿದ್ದ ನಂಬಿಕೆಗಳಿಗೆ ಸಂಬಂಧಪಟ್ಟದ್ದು.

ಜೀವಕೋಟಿಯ ವಿಕಾಸದಲ್ಲಿ ‘ಬದುಕಬೇಕು’ ಎಂಬ ಅಭೀಪ್ಸೆಯ ಹಿಂದೆ ಕೋಟಿ ವರ್ಷಗಳ ಇತಿಹಾಸವಿದ್ದರೆ, ‘ಯಾಕೆ ಬದುಕಬೇಕು?’ ಎಂದು ಕೇಳಿಕೊಳ್ಳುವ ಮಾನವೀಯ ವಿವೇಕ – ಪ್ರಜ್ಞೆ ತೀರ ಸದ್ಯದ್ದು. ಬದುಕುವುದರಲ್ಲೇ ಅದಮ್ಯ ಉತ್ಸಾಹವಿದ್ದ ಜೀವಕ್ಕೆ ಯಾಕೆ ಬದುಕಬೇಕು ಎಂಬ ಪ್ರಶ್ನೆಗಿಂತ ‘ಹೇಗೆ ಬದುಕಬೇಕು’ ಎಂಬ ಪ್ರಶ್ನೆಯೇ ಹೆಚ್ಚು ಸಹಜ ವಾದದ್ದು. ಈ ಪ್ರಶ್ನೆಯ ಉಗಮದಲ್ಲೇ ಮಾನವೀಯ ಮೌಲ್ಯಗಳ ಉಗಮವೂ ಆಯಿತು : ‘ನೀವೇಕೆ ಬದುಕಿದ್ದೀರಾ?’ ಎಂಬ ಪ್ರಶ್ನೆಗೆ ಬದುಕಿನಲ್ಲಿ ವಿಶ್ವಾಸವಿದ್ದ ಜೀವಿಯಿಂದ ಉತ್ತರವಿಲ್ಲ. ಆದರೆ, ನೀವು ನಂಬಿಕೆ ಇಟ್ಟುಕೊಂಡ ಜೀವನಮೌಲ್ಯಗಳಾವುವು? ಯಾವ ಸಂಗತಿಗಳಿಂದಾಗಿ ನಿಮಗೆ ಬದುಕು ಅರ್ಥಪೂರ್ಣವೆನ್ನಿಸಿದೆ? ಬದುಕಲರ್ಹವೆನ್ನಿಸಿದೆ? ಎಂಬ ಪ್ರಶ್ನೆಗಳಿಗೆ ಉತ್ತರ ಸಿಗಬಹುದು.

ಮಾನವನಿಗೆ ತನ್ನ ಇರಿವಿನ ಅರ್ಥದ ಬಗ್ಗೆ, ಅರ್ಥಪೂರ್ಣತೆಯ ಬಗ್ಗೆ ಇರುವ ಪ್ರಜ್ಞೆಯ ಹುಟ್ಟು ಹಾಗೂ ವಿಕಾಸ ಇವನ್ನೇ ನಾನು ಮಾನವ ಸಂಸ್ಕೃತಿಯ ಇತಿಹಾಸವೆಂದು ಕರೆಯು ತ್ತೇನೆ. ನಮ್ಮ ಯುಗದ ಅತ್ಯಂತ ಶ್ರೇಷ್ಠ ಮನೋವಿಜ್ಞಾನಿಗಳಲ್ಲೊಬ್ಬರಾದ ಕಾರ್ಲ ಯುಂಗರ ಪ್ರಕಾರ ಮಾನವನ ಎಲ್ಲ ಚಟುವಟಿಕೆಗಳ ಉಗಮಸ್ಥಾನವೇ ಮಾನವ ಮನಸ್ಸು. ನಮ್ಮ ಸಂಸ್ಕೃತಿಯ ಇತಿಹಾಸವೆಂದರೆ ಮಾನವ ಮನಸ್ಸು ತನ್ನ ಅಜಾಗೃತ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ವಿಕಾಸಗೊಂಡದ್ದರ ಇತಿಹಾಸ. ಪುರಾಣ, ವಿಧಿಕಾಂಡಗಳು, ಧರ್ಮ, ವಿಜ್ಞಾನ, ಕಲೆ, ಸಾಹಿತ್ಯ ಇವೆಲ್ಲವುಗಳ ಮುಖಾಂತರ ಈ ವಿಕಸನ ಕ್ರಿಯೆ ನಡೆಯುತ್ತದೆ; ಅಜಾಗೃತ ಚಿತ್ತ ಜಾಗೃತ ಪ್ರಜ್ಞೆಯಾಗಿ ಪ್ರಕಟವಾಗುತ್ತದೆ.

ಈ ಅರ್ಥದಲ್ಲಿ, ಸಾಹಿತ್ಯ ಮುಖ್ಯವಾಗಿ ದಾಖಲೆಗೊಳಿಸುವದು ಒಂದು ಸೃಜನಶೀಲ ಮನಸ್ಸು ಅಜಾಗೃತ ಸ್ಥಿತಿಯಿಂದ ಜಾಗೃತ ಸ್ಥಿತಿಗೆ ಹೋದ ರೀತಿ: ತನ್ನ ಇರವಿನ ಬಗ್ಗೆ ಪ್ರಶ್ನೆ ಕೇಳುತ್ತ, ತಾನೇ ಅವುಗಳಿಗೆ ಉತ್ತರ ಹುಡುಕುತ್ತ ಈ ಮನಸ್ಸು ಅರಳಿದ ರೀತಿ: ಬೆಳೆದ ರೀತಿ. ಸಾಹಿತ್ಯವನ್ನು ಹುಟ್ಟಿಸಿದ ಈ ಮನಸ್ಸಿನ ಸಂಪರ್ಕವೇ ಸಾಹಿತ್ಯದಿಂದ ನಾವು ಪಡೆಯಬಹುದಾದ ಬಹುದೊಡ್ಡ ಲಾಭವೆಂದು ತೋರುತ್ತದೆ. ನಮ್ಮ ಪುಸ್ತಕ ಕಪಾಟುಗಳಲ್ಲಿ ಹೇರಿದ ಗ್ರಂಥಗಳು ಬರಿಯ ನಿಜೀವ ಜ್ಞಾನಭಂಡಾರಗಳಲ್ಲ; ಹತ್ತಿರದ ಜೊತೆಗಾರರು ಎಂಬುದು ಇದೇ ಅರ್ಥದಲ್ಲೆಂದು ನಾನು ತಿಳಿಯುತ್ತೇನೆ.

ಇತಿಹಾಸದಲ್ಲಿ ಹೆಸರನ್ನು ಬಿಟ್ಟು ಹೋಗುವ ದುಷ್ಟ ಅವಸರದಲ್ಲಿ ಬರಿಯೆ ಸತ್ತೆಯ ಬಲವೊಂದರ ಮೇಲಿಂದಲೇ ತಮ್ಮ ಕನಸುಗಳನ್ನು ಉಳಿದವರ ಮೇಲೆ ಹೇರಬೇಕೆನ್ನುವ; ಸಾವಿಗೆ ಹೆದರಿ ಸಾವನ್ನೇ ಬಿತ್ತುವ ರಾಜಕಾರಣಿಯ ಅಹಂಕಾರಕ್ಕಿಂತ, ಸೃಷ್ಟಿಸುವುದರ ಮೂಲಕವೇ ಭೌತಿಕ, ಐತಿಹಾಸಿಕ, ಸಾಮಾಜಿಕ ನಿರ್ಬಂಧನೆಗಳಿಂದ ಅನಿರ್ಬಂಧನಾಗುತ್ತ; ತನ್ನ ಪ್ರೀತಿಯಿಂದ ಸಾವನ್ನು ಗೆಲ್ಲುತ್ತ ನಿರಹಂಕಾರಿಯಾದ ಸಾಹಿತಿಯ ಸತ್ಯದ ಹುಡುಕಾಟ ನನಗೆ ತುಂಬ ಪ್ರಿಯವಾದದ್ದು. ಅಂತೆಯೇ ವಿಜ್ಞಾನ. ಅಂತೆಯೇ ಕಲೆ.

ನನ್ನ ವೈಯಕ್ತಿಕ ಇತಿಹಾಸದಲ್ಲಿ ಕೂಡ ‘ಬರೆಯಬೇಕು’ ಎಂಬ ಅಭೀಪ್ಸೆಯೇ ‘ಯಾಕೆ ಬರೆಯಬೇಕು?’ ಎಂದು ಕೇಳಿಕೊಳ್ಳುವ ವಿವೇಕಕ್ಕಿಂತ ತೀರ ಹಳೆಯದು. ಎಷ್ಟು ಹಳೆಯದೆಂದರೆ ಆಗಿನ್ನೂ ಮೀಸೆಯ ಗೆರೆಯೂ ಮೂಡಿರಲಿಲ್ಲ. ಬರೆಯುವ ಹುಮ್ಮಸ್ಸು ಇನ್ನೂ ಗಟ್ಟಿಯಾಗೇ ಉಳಿದ, ಒಂದರ್ಥದಲ್ಲಿ ನನ್ನ ನಿಜವಾದ ಬರವಣಿಗೆ ಇನ್ನು ಮುಂದೆಯೇ ಆರಂಭವಾಗಲಿದೆ ಎಂದನ್ನಿಸುವ ನನ್ನಿಂದ ‘ನೀವೇಕೆ ಬರೆಯುತ್ತೀರಾ?’ ಎಂಬ ಪ್ರಶ್ನೆಗೆ ನೇರವಾದ ಉತ್ತರವಿಲ್ಲ. ಇಷ್ಟೇ, ಬರೆದನಂತರ – ಬರೆಯುವ ಅನುಭವ, ಸೃಷ್ಟಿಸುವ ಅನುಭವ ನನ್ನ ಬದುಕಿಗೆ ಅರ್ಥಪೂರ್ಣತೆಯನ್ನು ತಂದುಕೊಟ್ಟ ಅನುಭವಗಳಲ್ಲೇ ಅತ್ಯಂತ ಮಹತ್ವದ್ದೆಂದು ಅನ್ನಿಸಿದ್ದುಂಟು. ನನ್ನ ಹುಟ್ಟನ್ನು, ಅಸ್ತಿತ್ವವನ್ನು ಅಲ್ಲಗಳೆಯುವಷ್ಟರ ಮಟ್ಟಿಗೆ ಅವುಗಳಿಗೆ ನಿರಾಸಕ್ತವಾದ ಈ ವಿಶಾಲ ವಿಶ್ವಕ್ರಮದಲ್ಲಿ, ಅಮೂರ್ತವಾದ ಸಮಾಜದಲ್ಲಿ ನನ್ನ ವೈಯಕ್ತಿಕ ಇರವಿನ ಪ್ರಸ್ತುತತೆಯನ್ನು ಕಂಡುಕೊಳ್ಳುವ ಹಾಗೂ ಆ ಮೂಲಕ ನನ್ನ ಸಮಾಜವನ್ನು, ಈ ವಿಶ್ವವನ್ನು ನನಗೆ ಜೀವಂತವಾಗಿಸುವ, ಅರ್ಥಪೂರ್ಣ ವಾಗಿಸುವ ಕ್ರಿಯೆಯಲ್ಲಿ ನನ್ನ ಸೃಷ್ಟಿಕಾರ್ಯ ಮಹತ್ವಪೂರ್ಣವಾದ ಭಾಗ ವಹಿಸಿದೆ ಎಂದು ನನಗನ್ನಿಸುತ್ತದೆ. ಸೃಷ್ಟಿಕಾರ್ಯದ ಹಿಂದಿನ ಪ್ರೇರಣೆಯ ನೆಲೆಯಿಂದ ನೋಡಿದಾಗ ಮಾತ್ರ ಹೊಳೆಯುವ ಈ ಅರ್ಥದಲ್ಲಿ ಸಾಹಿತ್ಯ ನನಗೊಂದು ಗುರಿಯಲ್ಲ; ಸಾಧನ ಮಾತ್ರ; ನನ್ನ ಬರವಣಿಗೆಯ ಆದ್ಯಂತ ನನಗೇ ಗೊತ್ತಾಗದಂತೆ ಕಾಡಿದಂತಿದ್ದ ಪ್ರಶ್ನೆ, ನಡೆದಂತಿದ್ದ ಹುಡುಕಾಟ ನನ್ನ ಸಾಹಿತ್ಯದ ಸಾಮಾಜಿಕ ಪ್ರಸ್ತುತತೆಗಿಂತ ಹೆಚ್ಚಾಗಿ ನನ್ನ ಸಮಾಜದಲ್ಲಿಯ ನನ್ನ ಪ್ರಸ್ತುತತೆಯನ್ನು ಕುರಿತವುಗಳು ಎಂದು ನನ್ನ ಅನ್ನಿಸಿಕೆ. ಒಟ್ಟಿನಲ್ಲಿ, ನಾನು ಬರೆಯು ತ್ತಿದ್ದದ್ದು ನಾನು ನಾನೇ ಆಗಲು, ನಾನು ನಾನೇ ಆಗಿಯೇ ಉಳಿದು ಉಳಿದವರೊಂದಿಗೆ ಬೆರೆಯಲು, ಪ್ರೀತಿಸಲು, ಪ್ರೀತಿಸುವುದನ್ನು ಕಲಿಯಲು, ಪ್ರೀತಿಸುವುದರ ಮೂಲಕ ಜೀವಂತ ಸಂಬಂಧಗಳನ್ನು ಹುಟ್ಟಿಸಿಕೊಳ್ಳಲು. ಉಳಿದವರನ್ನು ತಿದ್ದುವುದಕ್ಕಲ್ಲ ಆ ಯೋಗ್ಯತೆಯಾಲೀ ಅಧಿಕಾರವಾಗಲೀ ನನಗಿಲ್ಲ.

ನನಗನ್ನಿಸುತ್ತದೆ : ನಾವು ಸಾಹಿತ್ಯವನ್ನು ಉಳಿದೆಲ್ಲ ಸೃಷ್ಟಿಕಾರ್ಯಗಳಂತೆ ಎರಡು ವಿಭಿನ್ನ ದೃಷ್ಟಿಗಳಿಂದ ಅಭ್ಯಾಸ ಮಾಡಬಹುದು ಎಂದು. ಒಂದು – ಹುಟ್ಟಿಬಂದ ಸಾಹಿತ್ಯ ಕೃತಿಗಳನ್ನು ಹೊರಗಿನಿಂದ ನೋಡುವ ವ್ಯಕ್ತಿ ನಿರಪೇಕ್ಷವಾದ ವಿಮರ್ಶಕ ದೃಷ್ಟಿ. ಇನ್ನೊಂದು – ಕೃತಿಯನ್ನು ಹುಟ್ಟಿಸಿದವನೇ ನನ್ನ ಸೃಷ್ಟಿಕಾರ್ಯವನ್ನು ಒಳಗಿನಿಂದ ನೋಡುವ ವೈಯಕ್ತಿಕವಾದ ಆತ್ಮಪರೀಕ್ಷೆಯ ದೃಷ್ಟಿ. ಸಾಹಿತ್ಯದ ಬಗ್ಗೆ ಏಳುವ ಅನೇಕ ತೊಡಕಿನ ಪ್ರಶ್ನೆಗಳಿಗೆ ಈ ಎರಡು ದೃಷ್ಟಿಕೋನಗಳ ಕಲಬೆರಕೆಯೇ ಕಾರಣವೆಂದು ನನ್ನ ಅನ್ನಿಸಿಕೆ. ಉದಾಹರಣೆಗೆ, ಜೀವವಿಕಾಸದಲ್ಲಿ ಕಾಮದ ಸ್ಥಾನವನ್ನು ಅರಿಯುವ ನಿಸರ್ಗ ವಿಜ್ಞಾನಿಯ ದೃಷ್ಟಿಯನ್ನೇ ನೋಡಿರಿ. ಕಾಮ – ಇದು ನಿಸರ್ಗ ತನ್ನ ಸಾತತ್ಯಕ್ಕಾಗಿ, ಸಂತತಿಯ ನಿರಂತರತೆಗಾಗಿ ಸೃಷ್ಟಿಸಿ ಕೊಂಡ ಒಂದು ಸಾಧನ ಎನ್ನುವ ವಿವರಣೆಯನ್ನು ಕೊಡುವಾಗಿನ ದಾಟಿಯಲ್ಲಿ ಬರುವ ನೈಜತೆ, ಯಥಾರ್ಥತೆ ಇವು ಈ ಕಾಮಕ್ಕೆ ಅಧಿಕಾರಿಯಾದ ವ್ಯಕ್ತಿಯೇ “ನಾನು ನಿಸರ್ಗದ ಈ ಉದ್ದೇಶವನ್ನು ಸಫಲಗೊಳಿಸುವುದಕ್ಕಾಗಿಯೇ ಮಕ್ಕಳನ್ನು ಹುಟ್ಟಿಸುತ್ತೇನೆ; ಹಾಗೆ ಮಕ್ಕಳನ್ನು ಹುಟ್ಟಿಸುವುದು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಒಬ್ಬ ಹುಡುಗಿಯನ್ನು ಮದುವೆಯಾಗುತ್ತೇನೆ. ಹಾಗೆ ಮದುವೆಯಾಗುವದು ಸಾಧ್ಯವಾಗಲಿ ಎಂಬ ಉದ್ದೇಶದಿಂದ ಒಬ್ಬ ಹುಡುಗಿಯನ್ನು ನಾನು ಪ್ರೀತಿಸುತ್ತೇನೆ” ಎನ್ನುವಾಗಿನ ದಾಟಿಯಲ್ಲಿ ಬರಲು ಸಾಧ್ಯವೇ? ಸಾಹಿತ್ಯದಂತಹ ಸೃಷ್ಟಿ ಕರ್ಮದ ಉದ್ದೇಶಗಳನ್ನು ಉಪಯುಕ್ತತೆಯನ್ನು ಕುರಿತು ನಾವು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಸಿಗದೇ ಇರುವುದಕ್ಕೆ ಕಾರಣ ಕೇಳಿದ ಪ್ರಶ್ನೆಯೇ ಮೂಲದಲ್ಲಿ ಸರಿಯಾಗದೇ ಇದ್ದದ್ದಿರಬಹುದಲ್ಲವೆ? ಯಾಕೆಂದರೆ, ವ್ಯಕ್ತಿ ನಿರಪೇಕ್ಷವಾದ ವಿಮರ್ಶಕ ದೃಷ್ಟಿಗೆ ‘ಉದ್ದೇಶ’ವಾಗಿ ಕಂಡದ್ದೇ ಸ್ವತಃ ಸೃಷ್ಟಿಸಿದವನ ದೃಷ್ಟಿಯಿಂದ ಅವನ ಅರಿವಿನಾಚೆಯ ಅಂತಃ ಪ್ರೇರಣೆಯಾಗಿರುತ್ತದೆ. ಸಾಹಿತ್ಯದ ಬಗ್ಗೆ ನಾವು ಆಡುವ ಅನೇಕ ಮಾತುಗಳಂತೆ ಕೇಳುವ ಪ್ರಶ್ನೆಗಳೂ ಕ್ಲೀಷೆಯಾಗುವ ಭಯವಿದೆ ಎಂಬುದನ್ನು ಮರೆಯಬಾರದು.

ಆದ್ದರಿಂದಲೇ ‘ನಾನು ಬರೆಯುವದು ನನ್ನ ಮನಸ್ಸಿನ ಸ್ವಾಸ್ಥ್ಯಕ್ಕಾಗಿಯೇ’ ಎಂದು ಹೇಳಿದರೆ ತಪ್ಪು ತಿಳಿಯುವ ಕಾರಣವಿಲ್ಲ. ಯಾಕಂದರೆ, ಹೀಗೆ ಹೇಳುವದೇ ವೈಯಕ್ತಿಕ ನೆಲೆಯಲ್ಲಿ ಮಾಡಬಹುದಾದ ನೈಜವಾದ, ಪ್ರಾಮಣಿಕವಾದ ಧಾಟಿಯುಳ್ಳ ಹೇಳಿಕೆಯಾಗಿ ನನಗೆ ತೋರುತ್ತದೆ. ನನ್ನ ಭಾವ ಪ್ರಪಂಚದ, ಮಾನಸಿಕ ಪ್ರಪಂಚದ Gustaltನ್ನು – ಬಾಹ್ಯ ಪ್ರಚೋದನೆಗಳಿಂದಾಗಿ ಮನಸ್ಸಿನಲ್ಲಿ ಪ್ರತಿಮೆಗಳಾಗಿ ಮೂಡಿ ನಿಲ್ಲುತ್ತಿದ್ದ ಅನುಭವ ಪ್ರಪಂಚದ ರಚನಾ ವಿನ್ಯಾಸವನ್ನು, ಭಾವನೆಗಳ ಶಿಲ್ಪವನ್ನು ಕಾಯ್ದುಕೊಳ್ಳುವ ಅವಶ್ಯಕತೆ ಪ್ರತಿಯೊಂದು ಮಾನವ ವ್ಯಕ್ತಿಗೆ ಇದ್ದೇ ಇದೆ. ಹಾಗೂ ಅದನ್ನು ಕಾಯ್ದುಕೊಳ್ಳಲು ನಾವು ಆಯ್ಕೆಮಾಡಿಕೊಂಡ ಹಾದಿ ವ್ಯಕ್ತಿವ್ಯಕ್ತಿಯಿಂದ ಭಿನ್ನವಾದದ್ದು – ಹಿಟ್ಲರ್, ಜಂಗೀಜ್‌ಖಾನ್, ಸ್ಟೆಲಿನ್, ಮಾವೋ, ಕ್ರೈಸ್ತ್, ಬುದ್ಧ, ಗಾಂಧಿ ಇವರನ್ನು ಹಿಡಿದು ಈ ಯಶವಂತ ಚಿತ್ತಾಲ ನವರೆಗೆ. ಇದುವೇ ನಮ್ಮೆಲ್ಲ ಚಟುವಟಿಕೆಗಳ ಸ್ವರೂಪವನ್ನೂ ನಿಶ್ಚಯಿಸುತ್ತದೆ. ನನ್ನ ಸಾಹಿತ್ಯ ನನ್ನ ಮಾನಸಿಕ ಪ್ರಪಂಚದ Gestaltನ ಅಭಿವ್ಯಕ್ತಿಯ ಪ್ರಮುಖ ಮಾಧ್ಯಮವಾಗಿ ಬೆಳೆದುಬಂದಿದೆ ಎಂಬುದು ನನ್ನ ತಿಳಿವಳಿಕೆ. ಆದರೆ, ಹೀಗೆ ‘ವೈಯಕ್ತಿಕ ಗರಜಿ’ನಲ್ಲಿ ಜನ್ಮಪಡೆದ ಕೃತಿ ವೈಯಕ್ತಿಕವಾಗಿಯೇ ಉಳಿಯದೆ ಉಳಿದವರಿಗೂ ಮುಟ್ಟುವಷ್ಟು ಚೈತನ್ಯಶಾಲಿಯಾಗುವುದು ‘ಅಸ್ವಾಸ್ಥ್ಯ’ಕ್ಕೆ ಕಾರಣವಾದ ಮೂಲ ಅನುಭವ ಯಾವ ಸ್ವರೂಪದ್ದು : ಅದರ ಚೈತನ್ಯ ಎಷ್ಟೊಂದು ವ್ಯಾಪಕವಾದ ವಾಸ್ತವ ಜಗತ್ತನ್ನು ತನ್ನ ಪ್ರಭಾವ ವಲಯಕ್ಕೆ ಒಳಗೊಳ್ಳುವ ಬಲವುಳ್ಳದ್ದೆನ್ನುವುದನ್ನು ಅವಲಂಬಿಸಿದೆ : ಈ ಕೇಂದ್ರ ಅನುಭವಕ್ಕೆ ಆಕಾರ ಕೊಡುವುದರಲ್ಲಿ ಕಾರ್ಯ ಪ್ರವೃತ್ತವಾದ ಕಲಾವಿದ ಪ್ರಜ್ಞೆ ವಾಸ್ತವಕ್ಕೆ ಜಗತ್ತಿನ ಎಷ್ಟೊಂದಕ್ಕೆ ಸ್ಪಂದಿಸಬಲ್ಲುದು ಎಂಬುದನ್ನು ಆಧರಿಸಿದೆ, ಎಂಬುದನ್ನು ನಾನು ಒಪ್ಪುತ್ತೇನೆ.

ಸಾಹಿತ್ಯದಿಂದ ಸಮಾಜಕ್ಕೆ ಏನು ಉಪಯೋಗ ಎಂದು ಕೇಳುವ ಜನಕ್ಕೆ ನಾವು ಮರುಸವಾಲೊಂದನ್ನು ಕೇಳಬೇಕಾಗುತ್ತದೆ. ಅದೇನೆಂದರೆ, ಸಮಾಜವನ್ನು ಕುರಿತು, ಅಂತಹ ಸಮಾಜದ ಜೀವಂತ ಘಟಕವಾದ ಮಾನವನನ್ನು ಕುರಿತು ಇವರು ಮಾಡಿಕೊಂಡ ಕಲ್ಪನೆ ಯಾದರೂ ಏನು ಎಂದು. ತನ್ನ ಅನ್ನವನ್ನು ಗಳಿಸುವುದರಲ್ಲಿ, ನಗ್ನತೆಯನ್ನು ಮುಚ್ಚಿಕೊಳ್ಳು ವುದರಲ್ಲಿ, ಗಾಳಿ ಮಳೆ ಬಿಸಿಲುಗಳಿಂದ ರಕ್ಷಿಸಿಕೊಳ್ಳುವುದರಲ್ಲಿ, ದೇಹದ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿ, ವೈರಿಗಳನ್ನು ಕೊಲ್ಲುವುದರಲ್ಲಿ, ಸರೀಕರನ್ನೇ ಕೆಳಗೆ ಮೆಟ್ಟುವ ಸತ್ತೆಯ ಗಳಿಕೆಯ ಮೇಲಾಟದಲ್ಲಿ ಮನುಷ್ಯ ತನ್ನ ನಾಲ್ಕು ಕಾಲಿನ ಪೂರ್ವಜರಿಗಿಂತ ತುಂಬ ಮುಂದುವರಿದಿದ್ದಾನೆ ಎನ್ನುವುದರಲ್ಲಿ ಎಳ್ಳಷ್ಟೂ ಸಂಶಯವಿಲ್ಲ. ಮಾನವ ಪ್ರಾಣಿ ತನ್ನ ಈ ಸಾಧ್ಯತೆಗಳ ಕ್ಷೇತ್ರದಲ್ಲಿ ಮಾಡಿದ ಪ್ರಗತಿಯನ್ನು ಅಳೆಯುವ ಮಾನದಂಡಗಳನ್ನೇ ನಾಗರಿಕ ಜಗತ್ತು ‘Standards of living’ ಎಂದು ಕರೆಯುತ್ತ ಬಂದಿದೆ ಆದರೆ, ಮಾನವ ಮನಸ್ಸು ಆವಿಷ್ಕಾರಗೊಂಡ ಕ್ಷೇತ್ರಗಳಲ್ಲಿ ಈ ಮಾನದಂಡಗಳ ಅಳವಿನಾಚೆಯವೂ ಕೆಲವಿವೆ ಎಂಬುದನ್ನು ನೆನೆಯಬೇಕು : ಸಾಹಿತ್ಯ, ವಿಜ್ಞಾನ, ಧರ್ಮ, ದರ್ಶನ, ಕಲೆ ಇವೇ ಮೊದಲಾದ ಮಾನವ – ಪ್ರಾಣಿಯ ಮಾನವೀಯ ಸಾಧ್ಯತೆಗಳನ್ನು ನಿಜಗೊಳಿಸುವ, ಕೇವಲ ಮಾನವ ಮನಸ್ಸಿಗೇ ವಿಶಿಷ್ಟವಾದ ಅವಶ್ಯಕತೆಗಳನ್ನು ಪೂರೆಯಿಸಿ ಅದರ ಆರೋಗ್ಯವನ್ನು ಕಾಪಾಡುವ ಕ್ಷೇತ್ರದಲ್ಲಿ ನಾವು ಮಾಡಿದ ಪ್ರಗತಿಯನ್ನು ಅಳೆಯುವ ಮಾನದಂಡಗಳು ಬೇರೆಯೇ ಆಗಿವೆ. ಇವುಗಳನ್ನು ‘Standards of thinking’, ‘Standards of felling’, Standards of seeing’ ಎಂದು ಕರೆಯಬಹುದೇನೋ. ನಾನಾ ವಿಚಾರ ಮಾಡುವ, ಭಾವಿಸುವ, ಹಾಗೂ ನೋಡುವ ಮಟ್ಟಗಳು ಎತ್ತರಗೊಂಡು ನಾವು ಮಾನವರಾಗಿ ಅರಳುವ ಸಾಧ್ಯತೆಯೇ ಸಾಹಿತ್ಯ ಸಮಾಜಕ್ಕೆ ನೀಡುವ ದೊಡ್ಡ ಕೊಡುಗೆಯೆಂದು ನಾನು ನಂಬುತ್ತೇನೆ. ಬದುಕಿನ ಬಗ್ಗೆ ನಾವು ಬೆಳೆಯಿಸಿಕೊಂಡ ತಪ್ಪು ಅಪೇಕ್ಷೆಗಳಿಂದಾಗಿ ಮನುಷ್ಯ ಜೀನವಕ್ಕೆ ಅರ್ಥ ತಂದುಕೊಡಬಹು ದಾದಂಥ ಗಂಭೀರ ಭಾವನೆಗಳೇ ಭ್ರಷ್ಟವಾಗುತ್ತ, ನಮ್ಮ ಸಾಮಾಜಿಕ ಜೀವನದ ಮೇಲೆ, ರಾಜಕೀಯ ನಡವಳಿಕೆಯ ಮೇಲೆ ಅತ್ಯಂತ ದುಷ್ಟವಾದ, ಅನಾರೋಗ್ಯಕರವಾದ ಪರಿಣಾಮ ಉಂಟಾಗುತ್ತಿರುವ ಇಂದಿನ ಕಾಲದಲ್ಲಿ. ಮಾನವನ ಮೂಲಭೂತವಾದ ಭಾವನೆಗಳು ಕೆಡದಂತೆ, ಸಾಯದಂತೆ ಅವುಗಳನ್ನು ಕಾಪಾಡಿಕೊಳ್ಳುವುದರಲ್ಲಿ ಕಲೆಗಳು, ಬಹುಮುಖ್ಯವಾಗಿ ಸಾಹಿತ್ಯ ವಹಿಸಬಹುದಾದ ಪಾತ್ರವನ್ನು ಒತ್ತಿ ಹೇಳಿದಷ್ಟೂ ಕಡಿಮೆಯೆನಿಸುತ್ತದೆ. ಸಾಹಿತ್ಯ Commit ಆಗಬೇಕಾದದ್ದು ಈ ದಿಕ್ಕಿನಲ್ಲೆಂದು ನಾನು ಭಾವಿಸುತ್ತೇನೆ.